ಪೆಟ್ರೋಲ್ ಜೊತೆ ಎಥೆನಾಲ್ ಮಿಕ್ಸ್ ಮಾಡುವುದರಿಂದ ವಾಹನಗಳು ಕೆಡುತ್ತಿವೆ, ಮೈಲೇಜ್ ಕಡಿಮೆಯಾಗುತ್ತದೆ. ಆದರೆ ಈ ವ್ಯವಹಾರದಿಂದ ವರ್ಷಕ್ಕೆ 50 ಸಾವಿರ ಕೋಟಿ ರೂ.ಗಳನ್ನು ಲೂಟಿ ಹೊಡೆಯಲಾಗುತ್ತಿದೆ. ಅದನ್ನು ಸರ್ಕಾರ ಮತ್ತು ಸರ್ಕಾರದ ಪಾಲುದಾರರಾಗಿರುವವರು ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ.
ಪೆಟ್ರೋಲ್ ಜೊತೆ ಎಥೆನಾಲ್ ಮಿಕ್ಸ್ ಮಾಡುತ್ತಿರುವುದು ನಿಮಗೆಲ್ಲ ಗೊತ್ತೆ ಇದೆ. ಅದನ್ನು ಇ20 ಎಂದು ಕರೆಯಲಾಗುತ್ತದೆ ಅಂದರೆ 80% ಪೆಟ್ರೋಲ್ ಮತ್ತು 20% ಎಥೆನಾಲ್ ಎಂದರ್ಥ. ಕೇಂದ್ರ ಸರ್ಕಾರ ಇದು ನಮ್ಮ ಸಾಧನೆ, ಇದರಿಂದ ಪೆಟ್ರೋಲ್ ಆಮದು ಕಡಿಮೆಯಾಗುತ್ತದೆ, ವಾಯುಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ರೈತರಿಗೆ ಆದಾಯವಾಗುತ್ತದೆ ಎಂದು ಹೇಳಿಕೊಂಡಿದೆ. ಇನ್ನೊಂದೆಡೆ ಬಹಳಷ್ಟು ಜನರು ಇದರಿಂದ ವಾಹನಗಳು ಕೆಡುತ್ತಿವೆ, ಮೈಲೇಜ್ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಈ ಬರೆಹದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
ಮೊದಲಿಗೆ ಶುಗರ್ ಫ್ಯಾಕ್ಟರಿಗಳಲ್ಲಿ ಉಪ ಉತ್ಪನ್ನವಾಗಿ ತಯಾರಾಗುವ ಎಥೆನಾಲ್ ಅನ್ನು ಪೆಟ್ರೋಲ್ ಜೊತೆ ಮಿಕ್ಸ್ ಮಾಡುವುದನ್ನು ಭಾರತದಲ್ಲಿ 2003ರಲ್ಲಿ ಆರಂಭಿಸಲಾಯಿತು. ಆಗ 5% ಅಷ್ಟೇ ಮಿಕ್ಸ್ ಮಾಡುವುದಾಗಿ ಹೇಳಿದರೂ ಸಹ 2013ರವರೆಗೆ ಕೇವಲ 1.5% ಅಷ್ಟೇ ಮಿಕ್ಸ್ ಮಾಡಲು ಸಾಧ್ಯವಾಗಿತ್ತು. ಆನಂತರ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಟಾರ್ಗೆಟ್ ಅನ್ನು 10% ಹೆಚ್ಚಿಸಲಾಯಿತು. 2018ರಲ್ಲಿ 2030ರ ವೇಳೆಗೆ 20%ಗೆ ಹೆಚ್ಚಿಸುವ ಟಾರ್ಗೆಟ್ ಹಾಕಿಕೊಳ್ಳಲಾಯಿತು. ಆದರೆ ಈಗ ಏಕಾಏಕಿ 2025ರಲ್ಲಿಯೇ 20%ಗೆ ಹೆಚ್ಚಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಪಂಚದ ಯಾವ ರಾಷ್ಟ್ರವೂ ಇಷ್ಟು ಕಡಿಮೆ ಅವಧಿಯಲ್ಲಿ 10% ರಿಂದ 20%ಕ್ಕೆ ಏಕಾಏಕಿ ಏರಿಸಿಲ್ಲ ಎಂಬುದು.
ಸರ್ಕಾರ ಹೇಳುತ್ತಿರುವುದುದು ಈ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವುದರಿಂದ ಮಾಮೂಲಿ ಪೆಟ್ರೋಲ್‌ಗೆ ಹೋಲಿಸಿದರೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಶೇ. 65ರಷ್ಟು ಕಡಿಮೆ ಮಾಡುತ್ತದೆ. ರೈತರಿಗೆ ಇದರಿಂದ ಲಾಭವಾಗುತ್ತಿದೆ ಮತ್ತು ಪೆಟ್ರೋಲ್ ಆಮದು ಕಡಿಮೆಯಾಗುತ್ತದೆ ಎಂದು.
ಇದನ್ನು ಓದಿದ್ದೀರಾ?: ಪ್ರಧಾನಿ ನರೇಂದ್ರ ಮೋದಿಯ ಮಣಿಪುರ ಭೇಟಿ ಕೇವಲ ಪ್ರಹಸನ: ಮಲ್ಲಿಕಾರ್ಜುನ ಖರ್ಗೆ
ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಇದನ್ನು ಎಲ್ಲಾ ಪೆಟ್ರೋಲ್ ವಾಹನಗಳಿಗೂ ಕಡ್ಡಾಯ ಮಾಡಿರುವುದು. ನಮಗೆ ಎಥೆನಾಲ್ ಮಿಕ್ಸ್ ಮಾಡಿದ ಪೆಟ್ರೋಲ್ ಬೇಡ ಅನ್ನುವ ಅವಕಾಶವೇ ಇಲ್ಲ. ಕಡ್ಡಾಯವಾಗಿ ಎಲ್ಲರೂ ಹಾಕಿಸಿಕೊಳ್ಳಬೇಕು. ಇದು ತಪ್ಪಲ್ಲವೇ?
ಇನ್ನು 2023ರ ನಂತರ ತಯಾರಾಗುತ್ತಿರುವ ವಾಹನಗಳು ಈ ಇ20 ಪೆಟ್ರೋಲ್‌ಗೆ ಒಗ್ಗಿಕೊಳ್ಳುತ್ತವೆ ಎನ್ನುವ ವಾದವಿದೆ. ಅದು ಸರಿ. ಆದರೆ ಅದಕ್ಕೂ ಮುಂಚಿನ ವಾಹನಗಳ ಕಥೆಯೇನು? ಆ ವಾಹನಗಳಿಗೆ ಈ ಪೆಟ್ರೋಲ್ ಒಗ್ಗದೇ ಇದ್ದು ಇಂಜಿನ್ ಸೇರಿದಂತೆ ಇತರ ಸಮಸ್ಯೆಗಳಾದರೆ ಅದಕ್ಕೆ ಹೊಣೆ ಯಾರು? ವಾಹನ ತಯಾರಕರು ಮತ್ತು ಇನ್ಶೂರೆನ್ಸ್ ಕಂಪನಿಗಳು ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಘೋಷಿಸಿದ್ದವು. ಆದರೆ ಮೊದಿ ಸರ್ಕಾರದ ಬೆದರಿಕೆಗೆ ಮಣಿದು ಆ ಟ್ವೀಟ್‌ಗಳನ್ನು ಡಿಲಿಟ್ ಮಾಡಿವೆ. ಆದರೆ ನಾವೇ ಜವಾಬ್ದಾರರು ಎಂದು ಯಾರೂ ಘೋಷಿಸಿಲ್ಲ. ಹಾಗಾಗಿ ಇದು ಹಳೆಯ ಗಾಡಿ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಲಿದೆ.
ಎರಡನೇಯದು ಮೈಲೇಜ್ ಕಡಿಮೆಯಾಗುತ್ತಿರುವುದು. ನೀತಿ ಆಯೋಗ ಹೇಳಿದ್ದು 2023ರ ನಂತರದ ವಾಹನಗಳಲ್ಲಿ 1-2% ಮತ್ತು ಹಿಂದಿನ ವಾಹನಗಳಲ್ಲಿ 3-4% ಮೈಲೇಜ್ ಕಡಿಮೆಯಾಗುತ್ತದೆ ಎಂದು. ಆದರೆ ಬಹಳಷ್ಟು ಜನರು ಇ20 ಪೆಟ್ರೋಲ್ ಬಳಕೆಯ ನಂತರ ಗಣನೀಯವಾಗಿ ತಮ್ಮ ವಾಹನಗಳ ಮೈಲೇಜ್ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಖುದ್ದು ನನ್ನ ಸುಜುಕಿ ಅಕ್ಸೆಸ್ ಗಾಡಿಗೆ ಪ್ರತಿ 6 ದಿನಕ್ಕೆ 350 ರೂ.ಗಳ ಪೆಟ್ರೋಲ್ ಹಾಕಿಸುತ್ತಿದ್ದೆ. ಆದರೆ ಕಳೆದ ಎರಡು ತಿಂಗಳುಗಳಿಂದ ಪ್ರತಿ 5 ದಿನಕ್ಕೊಮ್ಮೆ ಹಾಕಿಸಬೇಕಾದ ಪರಿಸ್ಥಿತಿ ಬಂದಿದೆ.
ಹೋಂಡಾ ಕಾರು ಮಾಲೀಕರೊಬ್ಬರ ವಾಹನದ ಮೈಲೇಜ್ 12 ಕಿ.ಮೀ.ನಿಂದ ಕೇವಲ 8 ಕಿ.ಮೀ.ಗೆ ಇಳಿದಿದೆ. “ಮೆಕ್ಯಾನಿಕಲ್ ಇಂಜಿನಿಯರ್ ಆಗಿ, ಎಥೆನಾಲ್ ಮಿಶ್ರಿತ ಇಂಧನದಿಂದಲೇ ಈ ಕುಸಿತ ಸಂಭವಿಸಿದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ” ಎಂದು ಆರೋಪಿಸಿದ್ದಾರೆ. ವೋಕ್ಸ್‌ವ್ಯಾಗನ್ ವೆಂಟೊ ಕಾರಿನ ಮಾಲೀಕರಾದ ಪ್ರಮೋದ್ ಜೋಶಿ, ”ಎಚ್‌ಪಿ ಬಂಕ್‌ನಲ್ಲಿ ಇಂಧನ ತುಂಬಿಸಿದ ನಂತರ ತಮ್ಮ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ 10 ಕಿ.ಮೀ.ನಿಂದ ಕೇವಲ 6 ಕಿ.ಮೀ.ಗೆ ಕುಸಿದಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟಿಸದಂತೆ ತಡೆ ಕೋರಿದ್ದ ಪ್ರತಾಪ್ ಸಿಂಹ ಅರ್ಜಿ ವಜಾ
ಆದರೆ ಈ ಎಥೆನಾಲ್ ಮಿಶ್ರಣವಾಗಬೇಕೆಂದು ಹಿಂದಿನಿಂದಲೂ ವಾದ ಮಾಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 2018ರಲ್ಲಿ ”ಎಥೆನಾಲ್ ಮಿಶ್ರಣ ಮಾಡುವುದರಿಂದ ಪೆಟ್ರೋಲ್ 55 ರೂ., ಡೀಸೆಲ್ ಬೆಲೆ 50 ರೂ. ಆಗುತ್ತದೆ” ಎಂದು ಹೇಳಿದ್ದರು.

2023ರಲ್ಲಿ ಮತ್ತೊಮ್ಮೆ ಭಾಷಣದಲ್ಲಿ” ಎಲೆಕ್ಟ್ರಿಕ್ ಮತ್ತು ಎಥೆನಾಲ್ ಮಿಶ್ರಣದ ವಾಹನಗಳನ್ನು ಬಳಸಿದರೆ ಪೆಟ್ರೋಲ್ ಬೆಲೆ ಲೀಟರ್ 15 ರೂ. ಆಗುತ್ತದೆ” ಎಂದಿದ್ದರು. ಆದರೆ ಈಗ ಎಷ್ಟಾಗಿದೆ? ಎಷ್ಟಾಗಿದೆ ಎಂದರೆ ಮುಂಚೆ ಎಷ್ಟಿತ್ತೋ ಅಷ್ಟೇ ಇದೆ. ಅಂದರೆ 102 ರೂ. ಭಾರತದ ಸರಾಸರಿ 100 ರೂ. ಲೀಟರ್‌ಗೆ!
ಇದರಿಂದ ಲಾಭ ಯಾರಿಗೆ?
ಪೂರ್ತಿ ಗ್ರೂಪ್- ನಿತಿನ್ ಗಡ್ಕರಿ 2014ರಲ್ಲಿ ಎಥೆನಾಲ್ ಪ್ಲಾಂಟ್ ಆರಂಭಿಸಿದರು. ಇವರ ಮಾಲೀಕತ್ವದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳೂ ಇವೆ.
ಆನಂತರ ಮಾನಸ್- ಸಾರಂಗ್ ಗಡ್ಕರಿ ಮತ್ತು ಸಿಐಎಎನ್ ನಿಖಿಲ್ ಗಡ್ಕರಿ ಕಂಪನಿ ಶುರು ಮಾಡಿದರು.
ಇವು ಪಬ್ಲಿಕ್ ಲಿಸ್ಟೆಡ್ ಕಂಪನಿಗಳಾಗಿದ್ದು, ಕಳೆದ 5 ವರ್ಷಗಳಲ್ಲಿ 37% ಗ್ರೋಥ್ ಸಾಧಿಸಿವೆ. ಆದರೆ ಇಂಡಸ್ಟ್ರೀ ಬೆಳವಣಿಗೆ ಕೇವಲ 7% ಮಾತ್ರ ಇದೆ. ಅದಕ್ಕೂ ಐದು ಪಟ್ಟು ಹೆಚ್ಚು ಇವರು ಲಾಭ ಮಾಡಿದ್ದಾರೆ.
ಜೊತೆಗೆ ಅವರ ವಾರ್ಷಿಕ ಆದಾಯ 62% ನಷ್ಟಿದೆ. ಆದರೆ ಒಟ್ಟಾರೆ ಇಂಡಸ್ಟ್ರಿಯದ್ದು ಕೇವಲ 14% ಮಾತ್ರ ಇದೆ. ಇದು ಹೇಗೆ ಸಾಧ್ಯಾವಾಯಿತು?
ಹೇಗೆಂದರೆ ಇವರಿಗೆ ಮೊದಲೇ ಗೊತ್ತಿತ್ತು. 20% ಎಥೆನಾಲ್ ಮಿಶ್ರ ಮಾಡುತ್ತಾರೆ ಎಂದು. ಅದಕ್ಕೆ ಕಂಪನಿ ಆರಂಭಿಸಿ ಹೆಚ್ಚು ಪ್ರೊಡಕ್ಷನ್ ಮಾಡಿ ಮಾರಿಕೊಂಡು ಲಾಭ ಮಾಡಿಕೊಂಡರು. ಅವರ ಷೇರ್‌ಗಳ ಬೆಲೆ ಗಗನಕ್ಕೇರಿವೆ. 1028% ಪಟ್ಟು ಜಿಗಿತ ಕಂಡಿವೆ. ಇದಕ್ಕೆ ಕಾರಣ ಅವರ ತಂದೆ ಎಥೆನಾಲ್ ಪರವಾಗಿ ಲಾಬಿ ಮಾಡಿದ್ದು, ಸರ್ಕಾರ ಒಪ್ಪಿಕೊಂಡಿದ್ದು.
ಇದು ಸರ್ಕಾರದ ಭಾಗವಾಗಿರುವ ಗಡ್ಕರಿ ಮತ್ತು ಅವರ ಮಕ್ಕಳಿದ ಆದ ಲಾಭ. ಇದರಿಂದ ದೇಶದ ಜನತೆಗಾದ ನಷ್ಟ ಎಷ್ಟು ಗೊತ್ತೆ?
ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂ. ಎಂದಿಟ್ಟುಕೊಳ್ಳಿ. ಈಗ 80% ಹಾಕಿದರೆ 80 ರೂ. ಅಷ್ಟೇ ಬೀಳುತ್ತದೆ. ಇನ್ನು ಎಥೆನಾಲ್ ಒಂದು ಲೀಟರ್ 60 ರೂ. ಇದೆ. 20% ಹಾಕಿದರೆ 12 ರೂ. ಬೀಳುತ್ತದೆ. ಅಲ್ಲಿಗೆ ಒಂದು ಲೀಟರ್ ಇ20 ಪೆಟ್ರೋಲ್ ಬೆಲೆ 92 ರೂ. ಆಗಬೇಕು. ಆದರೆ 100 ರೂ.ನೇ ಪಡೆಯುತ್ತಿದ್ದಾರೆ ಅಂದರೆ ಒಂದು ಲೀಟರ್ ಮೇಲೆ 8 ರೂ. ಲೂಟಿ ಹೊಡೆಯುತ್ತಿದ್ದಾರೆ. ಒಂದು ವರ್ಷಕ್ಕೆ ಇದು ಸರಾಸರಿ 50 ಸಾವಿರ ಕೋಟಿ ರೂ.ಗಳನ್ನು ಮೀರುತ್ತದೆ. ಅಂದರೆ ನಮ್ಮಿಂದ ಲೂಟಿ ಹೊಡೆದು ಸರ್ಕಾರ ಮತ್ತು ಸರ್ಕಾರದ ಪಾಲುದಾರರಾಗಿರುವವರು ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ಅಮಿತ್ ಶಾ ಮಗ ಜಯ್ ಶಾ ಕತೆ ಕೂಡ ಅಷ್ಟೇ. ಯಾವುದೇ ಅನುಭವ, ಸಾಮರ್ಥ್ಯ ಇಲ್ಲದಿದ್ದರೂ ಬಿಸಿಸಿಐ ಸೆಕ್ರಟರಿಯಿಂದ ಹಿಡಿದು ಸದ್ಯ ಐಸಿಸಿ ಅಧ್ಯಕ್ಷನಾಗಿ ಮೆರೆಯುತ್ತಿದ್ದಾನೆ. ಆತನ ಕಂಪನಿ ಕುಸುಮ್ ಫಿನ್‌ಸರ್ವ್ 2013ರಲ್ಲಿ ಶುರು ಮಾಡಿದರು. ಅಂದರೆ, ಕೇಂದ್ರದಲ್ಲಿ ಮೋದಿ ಸರ್ಕಾರ ಬರುವ ಮೊದಲು, ಈಗ ಅದು 14925% ಬೆಳವಣಿಗೆ ಕಂಡಿದೆ. ಇವರ ಬಳಿ ಯಾವ ಟ್ಯಾಲೆಂಟ್ ಇತ್ತು?
ಇದನ್ನು ಓದಿದ್ದೀರಾ?: 2025ರ ವಕ್ಫ್ ತಿದ್ದುಪಡಿ ಕಾಯ್ದೆ | ಎರಡು ಪ್ರಮುಖ ನಿಬಂಧನೆಗಳ ಜಾರಿಗೆ ಸುಪ್ರೀಂ ಕೋರ್ಟ್ ತಡೆ
ಇನ್ನು ಸರ್ಕಾರ ನಾವು ಮಾತ್ರ ಅಲ್ಲ ಬ್ರೆಜಿಲ್ 27% ಎಥೆನಾಲ್ ಮಿಕ್ಸ್ ಮಾಡುತ್ತಿದೆ, ಹಾಗಾಗಿ ನಾವು 27% ಮಿಕ್ಸ್ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ 1970ರಿಂದಲೇ ಬ್ರೆಜಿಲ್ ನಿಧಾನಕ್ಕೆ ಎಥೆನಾಲ್ ಮಿಕ್ಸ್ ಮಾಡುತ್ತಿದೆಯೇ ಹೊರತು ನಿಮ್ಮಂತೆ ಕೇವಲ ಮೂರು ವರ್ಷದಲ್ಲಿ ಡಬಲ್ ಮಾಡಿದಂತೆ ಅಲ್ಲ. 27% ಎಥೆನಾಲ್ ಮಿಕ್ಸ್ ಮಾಡಲು ಬ್ರೆಜಿಲ್ 50 ವರ್ಷ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಕೇವಲ 3 ವರ್ಷದ ತರಾತುರಿಯಲ್ಲಿ 20% ಮಿಕ್ಸ್ ಮಾಡಲಾಗಿದೆ. ಈಗ 27% ಮಾಡಲು ಹೊರಟಿದೆ. ಒಟ್ಟಾರೆಯಾಗಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಗಡ್ಕರಿ, ಅಮಿತ್ ಶಾ, ಅದಾನಿ, ಅಂಬಾನಿಗಳ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ.

ಹೀಗೆ ಪ್ರತಿನಿತ್ಯ ನಮ್ಮ ಜೇಬಿನಿಂದ ಹಣ ಕಿತ್ತುಕೊಳ್ಳುತ್ತಿದ್ದೂ ಅದೆಲ್ಲವನ್ನು ಮರೆತು ಹಿಂದೂ ಮುಸ್ಲಿಂ ಅಂತ ಪರಸ್ಪರ ಹೊಡೆದಾಡುತ್ತಿದ್ದರೆ ಸರ್ಕಾರ ಇನ್ನೇನ್ ತಾನೇ ಮಾಡುತ್ತೇ ಹೇಳಿ?
ನಾವು ಎಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಲೂಟಿ ನಿಲ್ಲುವುದಿಲ್ಲ. ಆಯ್ಕೆ ನಿಮ್ಮದು.

ಮುತ್ತುರಾಜು
ಪತ್ರಕರ್ತ, ಲೇಖಕ




