ಕೇಂದ್ರ ಸರ್ಕಾರ ಕಾಡುಗಳಲ್ಲಿ ನಕ್ಸಲರು ಇಲ್ಲದಂತೆ ಮಾಡಿ ಗಣಿಗಾರಿಕೆಗೆ ಅವಕಾಶ ನೀಡುತ್ತದೆ ಎಂಬ ಸಾಮಾಜಿಕ ಹೋರಾಟಗಾರರ ಆರೋಪ ಬರೀ ಆರೋಪವಾಗಿ ಉಳಿದಿಲ್ಲ, ನಿಜವಾಗುತ್ತಿದೆ. 'ನಕ್ಸಲ್ ಮುಕ್ತ ಕಾಡು' ನೆಪದಲ್ಲಿ ಇದೀಗ ದೇಶದ ಅಮೂಲ್ಯ ಖನಿಜಗಳನ್ನು ಕಾರ್ಪೊರೇಟ್ ಸಂಸ್ಥೆಗಳು, ಗಣಿ ದೊರೆಗಳು ಕೊಳ್ಳೆಹೊಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ಎನ್‌ಕೌಂಟರ್, ಬಂಧನ ಹೀಗೆ ಕೇಂದ್ರ ಸರ್ಕಾರದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಬಳಿಕ ದೇಶದಲ್ಲಿ ಇದೀಗ ಮಾವೋವಾದಿ ನಾಯಕರುಗಳ ಹೋರಾಟದ ಶೈಲಿ ಬದಲಾಗುತ್ತಿದೆ. ನೂರಾರು ಮಾವೋವಾದಿಗಳು ಮುಖ್ಯವಾಹಿನಿಗೆ ಬಂದಿದ್ದಾರೆ. ಅಹಿಂಸೆಯ ಹೋರಾಟಕ್ಕೆ ಇಳಿಯುವ ನಿರ್ಧಾರವನ್ನು ಕೆಲ ನಾಯಕರುಗಳು ತೆಗೆದುಕೊಂಡಿದ್ದಾರೆ. ದೇಶವನ್ನು, ದೇಶದ ಕಾಡುಗಳನ್ನು ನಕ್ಸಲ್ ಮುಕ್ತಗೊಳಿಸುವುದಾಗಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರಂತರವಾಗಿ ಹೇಳುತ್ತಲೇ ಬರುತ್ತಿದೆ. ಆದರೆ ಇತ್ತೀಚೆಗೆ ಕೆಲವು ಬೆಳವಣಿಗೆಗಳು ಮೋದಿ ಸರ್ಕಾರದ ನಿಜವಾದ ಉದ್ದೇಶವೇನು ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ನಕ್ಸಲ್ ಮುಕ್ತ ಕಾಡುಗಳ ನೈಜ ಅರ್ಥವೇನು ಎಂಬುದಕ್ಕೆ ಕೇಂದ್ರ ಉತ್ತರಿಸಲಾಗದ ಸ್ಥಿತಿಗೆ ತಲುಪಿದೆ.
1967ರಲ್ಲಿ ದೇಶದಲ್ಲಿ ಪಶ್ಚಿಮ ಬಂಗಾಳದ ನಕ್ಸಲ್ಬರಿ ಗ್ರಾಮದಲ್ಲಿ ರೈತರ ದಂಗೆಯೊಂದಿಗೆ ನಕ್ಸಲ್ ಹೋರಾಟವು ಆರಂಭವಾಯಿತು. ಮಾವೋವಾದಿ ಸಿದ್ಧಾಂತದಿಂದ ಪ್ರೇರಿತವಾದ ಈ ಹೋರಾಟವನ್ನು ಚಾರು ಮಜುಂದಾರ್, ಜಂಗಲ್ ಸಂತಹಾಲ್ ಮತ್ತು ಕನು ಸನ್ಯಾಲ್ ಮುನ್ನಡೆಸಿದರು. ಬಳಿಕ ದೇಶಾದ್ಯಂತ ಹರಡಿತು. ಅದರಲ್ಲೂ ಮುಖ್ಯವಾಗಿ ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ಹಿಂದುಳಿದ ಗ್ರಾಮೀಣ ಪ್ರದೇಶಗಳಿಗೆ ಹರಡಿತು. ಭೂಮಿಯ ಶೋಷಣೆ, ಬಡತನದಂತಹ ಸಮಸ್ಯೆಗಳ ವಿರುದ್ಧವಾಗಿ ಸಶಸ್ತ್ರ ಬಂಡಾಯದ ರೂಪದಲ್ಲಿ ನಡೆಯುವ ಹಿಂಸಾತ್ಮಕ ಹೋರಾಟಕ್ಕೆ ಬೆಂಬಲ ಕ್ಷೀಣಿಸುತ್ತಿದ್ದಂತೆ 1980ರ ದಶಕಗಳಲ್ಲಿ ನಕ್ಸಲ್ ನಾಯಕರು ಆದಿವಾಸಿಗಳಿರುವ ಕಾಡು ಸೇರಿಕೊಂಡರು.
ಇದನ್ನು ಓದಿದ್ದೀರಾ? ಅರಾವಳಿ ಮಾತ್ರವಲ್ಲ ಈ ಹಿಂದೆಯೂ ತನ್ನ ಆದೇಶಕ್ಕೆ ತಾನೇ ತಡೆ ನೀಡಿದೆ ಸುಪ್ರೀಂ ಕೋರ್ಟ್: ಪ್ರಕರಣಗಳ ವಿವರ
ಈ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು ಎರಡು ಅಭಿಪ್ರಾಯಗಳು. ಒಂದು ನಕ್ಸಲ್ ನಾಯಕರು ಕಾಡು ಸೇರಿದ್ದರಿಂದ ಆದಿವಾಸಿಗಳ ಸಬಲೀಕರಣವಾಗಿದೆ. ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿದ್ದು ಖಾಸಗಿ ಕಂಪನಿಗಳನ್ನು ಕಾಡಿನಿಂದ ದೂರವಿರುವಂತೆ ಮಾಡಿದೆ ಎಂಬುದು. ಇನ್ನೊಂದು ನಕ್ಸಲ್ ನಾಯಕರು ಆದಿವಾಸಿಗಳಿಗೆ ರೈಫಲ್‌ಗಳನ್ನು ನೀಡಿ ಹಿಂಸಾತ್ಮಾಕ ಹೋರಾಟಕ್ಕೆ ಎಳೆದಿದ್ದಾರೆ. ದೇಶದ ವಿರುದ್ಧ ಯುದ್ಧಕ್ಕೆ ಆದಿವಾಸಿಗಳನ್ನು ಬಳಸುತ್ತಿದ್ದಾರೆ. ಆದಿವಾಸಿಗಳಿಗೆ ಹಿಂಸೆ ನೀಡುತ್ತಿದ್ದಾರೆ ಎಂಬುದು.
ಈ ಚರ್ಚೆಗಳು ಇನ್ನೂ ಮುಂದುವರೆದಿದೆ. ಇವೆಲ್ಲವುದರ ನಡುವೆ ನಕ್ಸಲರು ದೇಶಕ್ಕೆ ಆಪತ್ತು ಎಂದು ಹೇಳಿಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ನಕ್ಸಲರ ಹತ್ಯೆಗಾಗಿಯೇ ಕಾರ್ಯಾಚರಣೆಗಳಿಗೆ ಅವಕಾಶ ನೀಡಿದ್ದಾರೆ. ದೇಶವನ್ನು ಸಂಪೂರ್ಣವಾಗಿ ‘ನಕ್ಸಲ್ ಮುಕ್ತ’ ಮಾಡುವ ಗುರಿಯೊಂದಿಗೆ ನಡೆದ ಕಾರ್ಯಾಚರಣೆಯ ಭಾಗವಾಗಿಯೇ ಸಾವಿರಾರು ಮಾವೋವಾದಿ ನಾಯಕರುಗಳ ಹತ್ಯೆ ಮಾಡಲಾಗಿದೆ. ದಕ್ಷಿಣ ಏಷ್ಯಾ ಭಯೋತ್ಪಾದನಾ ಪೋರ್ಟಲ್ (SATP) ದತ್ತಾಂಶದ ಪ್ರಕಾರ, 2000ರಿಂದ 2025ರವರೆಗೆ ಒಟ್ಟು ಸುಮಾರು 4,994 ನಕ್ಸಲರು ಹತರಾಗಿದ್ದಾರೆ. ಆದರೆ ಮಾವೋವಾದಿಗಳು ಮತ್ತು ಪೊಲೀಸರು ಹೇಳುವಂತೆ 2000ರಿಂದ 2024ರವರೆಗೆ 6,160 ಮಾವೋವಾದಿ ನಾಯಕರುಗಳನ್ನು ಹತ್ಯೆ ಮಾಡಲಾಗಿದೆ.
ಇವೆಲ್ಲವುದರ ನಡುವೆಯೇ ಕಾಡುಗಳು ಈ ನಕ್ಸಲ್ ಮುಕ್ತವಾಗುತ್ತಿದೆ. ಆದರೆ ನೂರಾರು ವರ್ಷಗಳಿಂದ ಕಾಡುಗಳ ಅಮೂಲ್ಯ ಸಂಪತ್ತನ್ನು, ಗಣಿಗಳನ್ನು ರಕ್ಷಣೆ ಮಾಡುತ್ತಿದ್ದ ಆದಿವಾಸಿಗಳ ರಕ್ಷಣೆಯಲ್ಲೂ ಕಾಡು ಇಲ್ಲದಂತಾಗುತ್ತಿದೆ. ಕೇಂದ್ರ ಸರ್ಕಾರ ಕಾಡುಗಳಲ್ಲಿ ನಕ್ಸಲರು ಇಲ್ಲದಂತೆ ಮಾಡಿ ಗಣಿಗಾರಿಕೆಗೆ ಅವಕಾಶ ನೀಡುತ್ತದೆ ಎಂಬ ಸಾಮಾಜಿಕ ಹೋರಾಟಗಾರರ ಆರೋಪ ಬರೀ ಆರೋಪವಾಗಿ ಉಳಿದಿಲ್ಲ, ನಿಜವಾಗುತ್ತಿದೆ. ‘ನಕ್ಸಲ್ ಮುಕ್ತ ಕಾಡು’ ನೆಪದಲ್ಲಿ ಇದೀಗ ದೇಶದ ಅಮೂಲ್ಯ ಖನಿಜಗಳನ್ನು ಕಾರ್ಪೊರೇಟ್ ಸಂಸ್ಥೆಗಳು, ಗಣಿ ದೊರೆಗಳು ಕೊಳ್ಳೆಹೊಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ನಕ್ಸಲ್ ಮುಕ್ತ ಕಾಡುಗಳಲ್ಲಿ ಗಣಿಗಾರಿಕೆ!
ಕಾಡುಗಳೆಂದರೆ ಬರೀ ಮರವಲ್ಲ. ಇದು ಒಂದು ಜೀವ ಸಂಕುಲ. ಪ್ರಾಣಿ ಪಕ್ಷಿಗಳ ಆವಾಸಸ್ಥಾನ. ಸಾವಿರಾರು ವರ್ಷಗಳಿಂದ ಕಾಡಿನ ರಕ್ಷಣೆ ಮಾಡಿಕೊಂಡು ಬಂದವರು, ಅಮೂಲ್ಯ ಸಂಪತ್ತುಗಳನ್ನೇ ಪವಿತ್ರವಾದುದ್ದು ಎಂದು ನಂಬಿಕೊಂಡು ಬಂದವರು ಆದಿವಾಸಿಗಳ ನೆಲೆ. ನಕ್ಸಲರೂ ಕಾಡು ಸೇರಿದ ಮೇಲೆ ಒಂದೆಡೆ ತಮ್ಮ ಉಳಿವಿಗಾಗಿ ಕಾಡು ರಕ್ಷಿಸಿದರೆ, ಮತ್ತೊಂದೆಡೆ ಕಾಡುಗಳನ್ನು ಉಳಿಸುವ ನಿಜ ಉದ್ದೇಶವನ್ನೂ ಹೊಂದಿದ್ದರು. ಆದಿವಾಸಿಗಳ ಕಾಡು ರಕ್ಷಣೆಯ ಹೋರಾಟಕ್ಕೆ ನಕ್ಸಲ್ ನಾಯಕರೂ ಪರೋಕ್ಷವಾಗಿ ಧೈರ್ಯ ನೀಡಿದ್ದರು. ಆದರೆ ಇದೀಗ ದೇಶದಲ್ಲಿ ಬಹುತೇಕ ಕಡೆಗಳಲ್ಲಿ ಕೇಂದ್ರ ಸರ್ಕಾರ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿ ಹಲವು ನಾಯಕರುಗಳನ್ನು ಹತ್ಯೆಗೈದಿದೆ ಅಥವಾ ಬಂಧಿಸಿದೆ. ಇವೆಲ್ಲವು ನಡೆಯುತ್ತಿದ್ದಂತೆ ಈ ಕಾರ್ಯಾಚರಣೆಯ ಹಿಂದಿರುವ ಕೇಂದ್ರ ಸರ್ಕಾರದ ನಿಜ ಉದ್ದೇಶ ಬಯಲಾಗುತ್ತಿದೆ. ಕಾಡುಗಳನ್ನು ನಕ್ಸಲ್ ಮುಕ್ತಗೊಳಿಸಿ ಅಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದೇ ಈ ಕಾರ್ಯಾಚರಣೆ ಉದ್ದೇಶ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಛತ್ತೀಸ್‌ಗಢದ ಅಬೂಜ್‌ಮಡ್ ಮತ್ತು ಮಹಾರಾಷ್ಟ್ರದ ಮಹಾರಾಷ್ಟ್ರದ ಗಡ್‌ಚಿರೋಲಿ. ನಕ್ಸಲ್ ಮುಕ್ತವಾದ, ಮೂಲಸೌಕರ್ಯಗಳು ಇಲ್ಲದ ಪ್ರದೇಶಗಳಿಗೆ ರಸ್ತೆ, ಸಾರಿಗೆ ವ್ಯವಸ್ಥೆ ಕಲ್ಪಿಸುವ ನೆಪವನ್ನು ಸರ್ಕಾರ ಮುಂದಿಟ್ಟಿದೆ.
ಇದನ್ನು ಓದಿದ್ದೀರಾ? ದೇವದಾರಿ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡ: ಕೇಂದ್ರ ಸಚಿವ ಕುಮಾರಸ್ವಾಮಿ
ಗಣಿಗಾರಿಕೆಯಿಂದಾಗಿ ಜೀವವೈವಿಧ್ಯಕ್ಕೆ ಹಾನಿಯಾಗುತ್ತದೆ, ಕಾಡು-ಬೆಟ್ಟಗಳ ನಾಶವಾಗುತ್ತದೆ. ಇದು ಈಗಾಗಲೇ ಸಮತೋಲನ ತಪ್ಪಿರುವ ಪರಿಸರ ವ್ಯವಸ್ಥೆಗೆ ಅಪಾಯಕಾರಿ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕಾಡುಗಳಲ್ಲಿ ಗಣಿಗಾರಿಕೆಗೆ ನಕ್ಸಲರು ಅವಕಾಶ ನೀಡುತ್ತಿರಲಿಲ್ಲ. ಇದೀಗ ನಕ್ಸಲರಿಂದ ಮುಕ್ತಗೊಳಿಸಿದ ಛತ್ತೀಸ್‌ಗಢದ ಅಬೂಜ್‌ಮಡ್ ಪ್ರದೇಶಗಳಲ್ಲಿ ಗಣಿಗಾರಿಕೆಗಾಗಿ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಬಸ್ತಾರ್‌ನ ಬೈಲಡಿಲಾ ಬೆಟ್ಟಗಳಲ್ಲಿ ಗಣಿಗಾರಿಕೆಯನ್ನು ವಿಸ್ತರಿಸುವ ಪ್ರಸ್ತಾವನೆಗಳಿವೆ.
ಛತ್ತೀಸ್‌ಗಢದ ಅಬೂಜ್‌ಮಡ್ ಗಣಿಗಾರಿಕೆ
ಛತ್ತೀಸ್‌ಗಢದ ಬಸ್ತಾರ್ ವಿಭಾಗದಲ್ಲಿರುವ ಅಬೂಜ್‌ಮಡ್ ಅತ್ಯಂತ ಶ್ರೀಮಂತ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶ. ವಿಶ್ವದರ್ಜೆಯ ಕಬ್ಬಿಣದ ಅದಿರಿನ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ಕಬ್ಬಿಣ ಮಾತ್ರವಲ್ಲದೆ ತವರ (Tin), ಅಲ್ಯೂಮಿನಿಯಂ ತಯಾರಿಕೆಗೆ ಬೇಕಾದ ಬಾಕ್ಸೈಟ್ (Bauxite) ನಿಕ್ಷೇಪಗಳು ಇಲ್ಲಿವೆ. ಕೋರಂಡಂ (Corundum) ಮತ್ತು ಆಲೆಕ್ಸಾಂಡ್ರೈಟ್‌ನಂತಹ ಅಪರೂಪದ ರತ್ನಗಳು ಕಂಡುಬರುತ್ತವೆ. ಸುಣ್ಣದ ಕಲ್ಲು ಮತ್ತು ಕ್ವಾರ್ಟ್ಜೈಟ್ ನಿಕ್ಷೇಪಗಳೂ ಇವೆ. ಇಲ್ಲಿ ಪ್ರಮುಖವಾಗಿ ಜೈಸ್ವಾಲ್ ನೆಕೊ ಇಂಡಸ್ಟ್ರೀಸ್ ಲಿಮಿಟೆಡ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಮೊದಲಾದವುಗಳು ಗಣಿಗಾರಿಕೆ ನಡೆಸುತ್ತಿದೆ.
ಈ ಗಣಿಗಾರಿಕೆಗಾಗಿ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದಾಗಿ ಸ್ಥಳೀಯ ಪರಿಸರ ವ್ಯವಸ್ಥೆಯು ಏರುಪೇರಾಗುತ್ತಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವುದಲ್ಲದೆ, ಹಲವು ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲ ಅಳಿವಿನಂಚಿಗೆ ತಲುಪುತ್ತಿದೆ. ಅಷ್ಟು ಮಾತ್ರವಲ್ಲದೆ ಕಬ್ಬಿಣದ ಅದಿರು ಗಣಿಗಾರಿಕೆಯಿಂದ ಹೊರಬರುವ ತ್ಯಾಜ್ಯಗಳಿಂದಾಗಿ ಹತ್ತಿರದ ನದಿಗಳು ಮತ್ತು ಅಂತರ್ಜಲ ಕಲುಷಿತವಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ಮಾತ್ರವಲ್ಲದೆ ಕೃಷಿ ಭೂಮಿಯು ಫಲವತ್ತತೆಯನ್ನೂ ಕಳೆದುಕೊಳ್ಳುತ್ತದೆ.

ಇವೆಲ್ಲವುದರ ನಡುವೆ ಕಾಡನ್ನು ತಮ್ಮ ದೇವತೆಯೆಂದು ನಂಬಿ ಕಾಯುತ್ತಾ ಬಂದಿದ್ದ ಆದಿವಾಸಿಗಳ ನೆಲೆಯೇ ನಾಶವಾಗುತ್ತಿದೆ. ಅವರ ವಿಶಿಷ್ಟ ಸಂಸ್ಕೃತಿ, ಭಾಷೆ ಮತ್ತು ಜೀವನಪದ್ಧತಿ ಶಾಶ್ವತವಾಗಿ ನಾಶವಾಗುವ ಅಪಾಯವಿದೆ. ಈ ಗಣಿಗಾರಿಕೆಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ಉಸಿರಾಟದ ತೊಂದರೆಗಳು, ಚರ್ಮದ ಕಾಯಿಲೆಗಳು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವ ಅಪಾಯವೂ ಇದೆ. ಈಗಾಗಲೇ ಗಣಿಗಾರಿಕೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರ ಗಣಿ ದೊರೆಗಳ ಪರವಾಗಿ ನಿಂತಿದೆ.
ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಗಣಿಗಾರಿಕೆ
ಈಗಾಗಲೇ ಮಹಾರಾಷ್ಟ್ರದ ಉತ್ತರ ಗಡ್‌ಚಿರೋಲಿ ಭಾಗವು ಬಹುತೇಕ ನಕ್ಸಲ್ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ. ಗಣಿಗಾರಿಕೆಯು ಬಿರುಸಾಗಿ ಸಾಗುತ್ತಿದೆ, ಪರಿಸರ ನಾಶವಾಗುತ್ತಿದೆ. ಗಡ್‌ಚಿರೋಲಿ 178 ಮಿಲಿಯನ್ ಟನ್ ಕಬ್ಬಿಣದ ಅದಿರು ನಿಕ್ಷೇಪವನ್ನು ಹೊಂದಿರುವ ಜಿಲ್ಲೆ. ಇಲ್ಲಿನ ಸೂರಜಗಡ ಮತ್ತು ಭಾಮರಗಡ ಪ್ರದೇಶಗಳಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರುಗಳಿವೆ. ಇದಲ್ಲದೆ ಸುಣ್ಣದ ಕಲ್ಲು (ದೇವಲಮಲಿ) ಮತ್ತು ವೈರಗಡದಲ್ಲಿ ವಜ್ರದ ನಿಕ್ಷೇಪಗಳೂ ಇವೆ. ಈ ಬೃಹತ್ ಗಣಿಗಾರಿಕೆ ಆರ್ಥಿಕವಾಗಿ ಲಾಭ ಎನಿಸಿದರೂ, ಕಾಡುಗಳ ನಾಶವಾಗುತ್ತಿದೆ.
ಈಗಾಗಲೇ ಗಣಿಗಾರಿಕೆಗಾಗಿ ಸುಮಾರು 1.23 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲು ಸರ್ಕಾರ ಅನುಮೋದನೆ ನೀಡಿದ್ದು, ದಟ್ಟ ಅರಣ್ಯ ಪ್ರದೇಶ ನಾಶವಾಗುತ್ತಿದೆ. ಈ ಜಿಲ್ಲೆಯ ಸುಮಾರು 937 ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಬಳಸಿಕೊಳ್ಳಲಾಗುತ್ತಿದ್ದು, ಜೀವವೈವಿಧ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಷ್ಟು ಮಾತ್ರವಲ್ಲದೆ ಈ ಪ್ರದೇಶವು ತಾಡೋಬಾ ಮತ್ತು ಇಂದ್ರಾವತಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಅರಣ್ಯ ಮಾರ್ಗವಾಗಿದೆ. ಆದರೆ ಈಗ ಗಣಿಗಾರಿಕೆಯಿಂದಾಗಿ ಹುಲಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯುಂಟಾಗಿ, ಮಾನವ-ವನ್ಯಜೀವಿ ಸಂಘರ್ಷ ಅಧಿಕವಾಗುವ ಅಪಾಯವಿದೆ.
ಈಗಾಗಲೇ ಜಲ ಮಾಲಿನ್ಯವೂ ಆಗಿದೆ. ಕಬ್ಬಿಣದ ಅದಿರು ಸಂಸ್ಕರಣೆಯಿಂದ ಹೊರಬರುವ ಕೆಂಪು ಆಕ್ಸೈಡ್ ಮತ್ತು ರಾಸಾಯನಿಕ ತ್ಯಾಜ್ಯಗಳು ಸ್ಥಳೀಯವಾಗಿ ನದಿ ಮತ್ತು ಹಳ್ಳಗಳನ್ನು ಸೇರುತ್ತಿದೆ. ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ಧೂಳು, ರಾಸಾಯನಿಕಗಳಿಂದ ಸ್ಥಳೀಯರಲ್ಲಿ ಸಿಲಿಕೋಸಿಸ್ (Silicosis) ಎಂಬ ಗಂಭೀರ ಶ್ವಾಸಕೋಶದ ಕಾಯಿಲೆ, ಉಸಿರಾಟದ ತೊಂದರೆಗಳು, ಚರ್ಮವ್ಯಾಧಿಗಳು ಕಾಣಿಸಿಕೊಳ್ಳುತ್ತಿವೆ. ಇನ್ನೊಂದೆಡೆ ಗಣಿಗಾರಿಕೆ ಪ್ರದೇಶದಿಂದ ಹರಿದು ಬರುವ ತ್ಯಾಜ್ಯಗಳು ಗದ್ದೆಗಳಿಗೆ ನುಗ್ಗಿ ಕೃಷಿ ಭೂಮಿ ಹಾಳಾಗುತ್ತಿದೆ. ರೈತರ ಆದಾಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಗಣಿಗಾರಿಕೆ ವಿರುದ್ಧ ಹೋರಾಟ ಹಿಂಸಾತ್ಮಾಕ ರೂಪಕ್ಕೆ ತಿರುಗುವ ಸಾಧ್ಯತೆಯೂ ಇದೆ.
ಇವಿಷ್ಟು ನಕ್ಸಲ್ ಮುಕ್ತ ಎನಿಸಿಕೊಂಡ ಎರಡು ಪ್ರದೇಶಗಳಲ್ಲಿ ಸರ್ಕಾರ ಗಣಿ ಸಂಸ್ಥೆಗಳ ಮೂಲಕ ನಡೆಸುತ್ತಿರುವ ಲೂಟಿ. ಆದರೆ ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಸರ್ಕಾರ ಅಂಬಾನಿ-ಅದಾನಿಯಂತಹ ಬಂಡವಾಳಶಾಹಿಗಳ ಲಾಭಕ್ಕಾಗಿ ಕಾಡುಗಳ ನಾಶ ನಡೆಸುತ್ತಿದೆ. ಮೂಲಸೌಕರ್ಯ ಅಭಿವೃದ್ದಿ ನೆಪದಲ್ಲಿ ಕಳಪೆ ಕಾಮಗಾರಿ ನಡೆಸುವ ಸಂಸ್ಥೆಗಳಿಗೆ ಲಾಭ ಮಾಡಿಕೊಡುತ್ತಿದೆ. ಗಣಿಗಾರಿಕೆ ನಡೆಸುವ ಸಂಸ್ಥೆಗಳಿಗೆ ಸರಕು ಸಾಗಾಟಕ್ಕೆ ಸಹಾಯವಾಗಲೆಂದೇ ರಸ್ತೆ ಸಂಪರ್ಕ ಕಲ್ಪಿಸುತ್ತಿದೆ. ಹೀಗಿರುವಾಗ ಈ ಬಿಜೆಪಿ ಸರ್ಕಾರವು ವಂದೇ ಮಾತರಂ ಹಾಡಿಗೆ ಗೌರವ ನೀಡುತ್ತಿದೆಯೇ? ಗಣಿಗಾರಿಕೆಗೆ ಅವಕಾಶ ನೀಡುವ ಈ ಬಿಜೆಪಿ ಸರ್ಕಾರದ ನಾಯಕರುಗಳು ಉತ್ತಮವಾದ ಅಥವಾ ಶುದ್ಧವಾದ ನೀರಿನಿಂದ ಕೂಡಿದವಳು ಅಂದರೆ ‘ಸುಜಲಾಂ’, ಉತ್ತಮವಾದ ಹಣ್ಣು-ಹಂಪಲುಗಳಿಂದ ಅಥವಾ ಆಹಾರ ಧಾನ್ಯಗಳಿಂದ ಕೂಡಿದವಳು ಅಂದರೆ ‘ಸುಫಲಾಂ’, ಹಸಿರು ಸಸ್ಯಗಳಿಂದ ಕಂಗೊಳಿಸುತ್ತಿರುವವಳು ಅಥವಾ ಹಸಿರು ಪೈರುಗಳಿಂದ ದಟ್ಟವಾಗಿ ಕಾಣುವವಳು ಅಂದರೆ ‘ಸಸ್ಯಶಾಮಲಾಂ’ ಎಂದು ಹಾಡುವುದು ಶೋಭಿಸುವುದೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




