ಕರ್ನಾಟಕದಲ್ಲಿ ಜನವರಿ 22ರಿಂದ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಯುತ್ತಿದೆ. ಕೇಂದ್ರ ಸರ್ಕಾರವು ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ (ಮನರೇಗಾ) ರದ್ದುಪಡಿಸಿ, ‘ವಿಕ್ಸಿತ್ ಭಾರತ್ – ಗ್ಯಾರಂಟಿ ಫಾರ್ ರೊಜ್ಗಾರ್ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ’ (ವಿಬಿ ಜಿ ರಾಮ್ ಜಿ) ಕಾಯ್ದೆಯನ್ನು ಜಾರಿಗೆ ತಂದಿರುವ ವಿಚಾರ, ಈ ವಿಶೇಷ ಅಧಿವೇಶನದ ಮುಖ್ಯ ಅಜೆಂಡಾ.
‘ವಿಬಿ ಜಿ ರಾಮ್ ಜಿ’ ಕಾಯ್ದೆ ಮೂಲಕ ಕೇಂದ್ರವು ಗ್ರಾಮೀಣ ಜನರ ಉದ್ಯೋಗದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ, ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೇರುತ್ತಿದೆ, ಉದ್ಯೋಗ ಖಾತರಿ ಅನುಷ್ಠಾನದಲ್ಲಿ ಕೇಂದ್ರ ಸರ್ವಾಧಿಕಾರಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಆರೋಪಿಸಿದೆ. ಹೊಸ ಕಾಯ್ದೆಯನ್ನು ಹಿಂಪಡೆಯಬೇಕು, ಹಿಂದಿನ ಮನರೇಗಾವನ್ನೇ ಮರು ಅನುಷ್ಠಾನಗೊಳಿಸಿ, ಮುಂದುವರೆಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಲು, ಆ ಕುರಿತು ನಿರ್ಣಯ ಅಂಗೀಕರಿಸಲು, ಹೆಚ್ಚು ಚರ್ಚೆ ನಡೆಸಲು ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಆದರೆ, ಅಧಿವೇಶನದಲ್ಲಿ ಈವರೆಗೂ ಮನರೇಗಾ ಮತ್ತು ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಚರ್ಚೆಗಳು ಆರಂಭವಾಗಿಯೇ ಇಲ್ಲ.
ಜನವರಿ 22ರಂದು ಅಧಿವೇಶನ ಆರಂಭವಾದಾಗ, ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಬೇಕಿತ್ತು. ರಾಜ್ಯ ಸರ್ಕಾರವು ಸಿದ್ದಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಆರೋಪಗಳಿದ್ದ ಕಾರಣ ಆ ಭಾಷಣವನ್ನು ಓದಲು ನಿರಾಕರಿಸಿದ ರಾಜ್ಯಪಾಲರು, ಎರಡು ಸಾಲಿನ ಭಾಷಣ ಮಾಡಿ, ರಾಷ್ಟ್ರಗೀತೆಯೇ ಆಸ್ಪದ ಕೊಡದೆ ಹೊರನಡೆದರು. ರಾಜ್ಯಪಾಲರ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಂವಿಧಾನ ಉಲ್ಲಂಘನೆ’ ಎಂದು ಟೀಕಿಸಿದರು ಮತ್ತು ರಾಜ್ಯಪಾಲರು ಕೇಂದ್ರದ ‘ಕೈಗೊಂಬೆ’ಯಾಗಿದ್ದಾರೆ ಎಂದು ಆರೋಪಿಸಿದರು.
ರಾಜಪಾಲರ ನಡೆಯನ್ನು ಕಾಂಗ್ರೆಸ್ ಶಾಸಕರು ವಿರೋಧಿಸಿದರು. ಪರಿಣಾಮ, ಗದ್ದಲ ಉಂಟಾಯಿತು. ಅಂದಿನ ಇಡೀ ದಿನ ಗದ್ದಲ, ಕಾಂಗ್ರೆಸ್-ಬಿಜೆಪಿ ನಡುವಿನ ರಾಜಕೀಯ ಘರ್ಷಣೆಯಲ್ಲೇ ಮುಗಿದು ಹೋಯಿತು. ಮರುದಿನ (ಜ23) ಇತ್ತೀಚಿಗೆ ಮೃತರಾದ ಪ್ರಭಾವಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರ ಅಡ್ಡಿಪಡಿಸಿದ್ದ ಬಗ್ಗೆ ಬಿಜೆಪಿಗರು ನಡೆಸಿದ ಗದ್ದಲದಲ್ಲಿ ದಿನ ಕಳೆಯಿತು.
ಜನವರಿ 24-25 (ಶನಿವಾರ-ಭಾನುವಾರ) ಸದನ ಇರಲಿಲ್ಲ. ಸೋಮವಾರ (ಜ.26) ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮಂಗಳವಾರ (ಜ.27) ಕಲಾಪ ನಡೆಯಿತಾದರೂ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಲೋಕಭವನ ಚಲೋ’ ಪ್ರತಿಭಟನೆ ನಡೆಸಿತು. ಮನರೇಗಾ ಮರು ಜಾರಿಗೆ ಆಗ್ರಹಿಸಿ ಫೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕೊತ್ತಾಯ ಪತ್ರ ಸಲ್ಲಿಸಿತು.
ಅಂದು, ನಡೆದ ಅಧಿವೇಶನದಲ್ಲಿ, ಸಚಿವ ಬೈರತಿ ಸುರೇಶ್ ಕುರಿತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾಡಿದ ಅವಹೇಳನಾಕಾರಿ ಟೀಕೆ ಮತ್ತು ಸುರೇಶ್ ಕುಮಾರ್ ನಿವಾಸಕ್ಕೆ ಪೋಸ್ಟರ್ ಅಂಟಿಸಿದ ವಿಚಾರವೇ ಹೆಚ್ಚು ಚರ್ಚೆಯಾಯಿತು.
ಇಂದು, ಜನವರಿ 28 (ಬುಧವಾರ), ಇನ್ವೆಸ್ಟ್ ಕರ್ನಾಟಕ, ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಸ್ಥಾನಮಾನ, ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಐಪಿಡಿ ಚಿಕಿತ್ಸೆ ನೀಡುವ ವಿಚಾರಗಳು ಚರ್ಚೆಯಾಗಿವೆ. ಗುರುವಾರ (ಜ.29), ಮುಖ್ಯಮಂತ್ರಿ ಖುರ್ಚಿ, ಟೆಲಿಫೋನ್ ಕದ್ದಾಲಿಕೆ ವಿಚಾರಗಳು ಚರ್ಚೆಯಾಗುತ್ತಿವೆ. ಈವರೆಗೆ ಅಧಿವೇಶನದಲ್ಲಿ ಮನರೇಗಾ ವಿಚಾರವು ಚರ್ಚೆಗೆ ಬಂದಿಯೇ ಇಲ್ಲ. ಜನವರಿ 30ರಂದು ಅಧಿವೇಶನ ಕೊನೆಗೊಳ್ಳಲಿದೆ. ಆದಾಗ್ಯೂ, ಸರ್ಕಾರವು ಫೆಬ್ರವರಿ 3ರವರೆಗೆ ಅಧಿವೇಶವನ್ನು ವಿಸ್ತರಿಸಲು ಚಿಂತಿಸುತ್ತಿದೆ.
ಅದೇನೇ ಇರಲಿ, ಸರ್ಕಾರದ ಉದ್ದೇಶವು ಮನರೇಗಾ/ವಿಬಿ ಜಿ ರಾಮ್ ಜಿ ಕಾಯ್ದೆ ಕುರಿತು ಗಂಭೀರ ಚರ್ಚೆ ನಡೆಸಿ, ಕೇಂದ್ರದ ಧೋರಣೆಯನ್ನು ಜನರ ಮುಂದಿಟ್ಟು, ಮನರೇಗಾ ಮರು ಅನುಷ್ಠಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರುವ ನಿರ್ಣಯ ಅಂಗೀಕರಿಸುವುದಾಗಿತ್ತು. ಆದರೆ ರಾಜ್ಯಪಾಲ ಭಾಷಣದಿಂದ ಉಂಟಾದ ವಿವಾದದಿಂದಾಗಿ ಅಧಿವೇಶನದ ದಿಕ್ಕೇ ಬದಲಾಗಿದೆ. ಮನರೇಗಾ ಕುರಿತು ಆಳವಾದ ಚರ್ಚೆಗೆ ಪೂರ್ಣ ಅವಕಾಶ ಸಿಗುತ್ತಿಲ್ಲ.
ಉದ್ದೇಶಿತ ಅಜೆಂಡಾದ ಚರ್ಚೆಯಿಲ್ಲದೆ, ಅನಗತ್ಯ ವಿಚಾರಗಳ ಚರ್ಚೆಯಿಂದ ಸಾರ್ವಜನಿಕ ಹಣದ ದುರುಪಯೋಗವಾಗುತ್ತಿದೆ ಎಂಬ ಟೀಕೆ ರಾಜ್ಯಾದ್ಯಂತ ಕೇಳಿಬರುತ್ತಿದೆ. ವಿಶೇಷ ಅಧಿವೇಶನಕ್ಕಾಗಿ (ಸದನ ನಡೆಸುವಿಕೆ, ಭದ್ರತೆ, ಸಿಬ್ಬಂದಿ, ಪ್ರಸಾರ ಇತ್ಯಾದಿ) ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಈ ಪ್ರಮಾಣದ ಹಣವನ್ನು ದುಂದು ವೆಚ್ಚ ಮಾಡುತ್ತಿರುವ ಆಡಳಿತ ಮತ್ತು ವಿಪಕ್ಷಗಳು ಉದ್ದೇಶಿತ ಮನರೇಗಾ ಚರ್ಚೆಗಿಂತ ರಾಜ್ಯಪಾಲರ ವಿವಾದ, ಆರೋಪ-ಪ್ರತ್ಯಾರೋಪಗಳು ಹಾಗೂ ರಾಜಕೀಯ ಜಟಾಪಟಿಗೆ ಬಿದ್ದಿವೆ. ಅಧಿವೇಶನವನ್ನು ಹಾಳುಗೆಡವಿವೆ.




