ಬಿಹಾರವು ಬದಲಾವಣೆ ಬಯಸುತ್ತಿದೆ. ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಉದ್ಯೋಗಕ್ಕಾಗಿ ಎದುರು ನೋಡುತ್ತಿದೆ. ಆದರೆ, ‘ಎಕ್ಸಿಟ್ ಪೋಲ್’ಗಳು ಎನ್‌ಡಿಎ ಮತ್ತೆ ಸರ್ಕಾರ ರಚಿಸುತ್ತದೆ ಎನ್ನುತ್ತಿವೆ. ಆದಾಗ್ಯೂ, ಶುಕ್ರವಾರ ಪ್ರಕಟವಾಗುವ ಫಲಿತಾಂಶವು ಎನ್‌ಡಿಎಗೆ ನಿರಾಳತೆ ನೀಡಬಹುದು ಅಥವಾ ಬದಲಾವಣೆಯನ್ನು ತರಬಹುದು, ಮಹಾಘಟಬಂಧನ್‌ಗೆ ಅಧಿಕಾರ ನೀಡಬಹುದು.
ಮತಎಣಿಕೆಗೆ ಕೆಲವೇ ಗಂಟೆಗಳು ಮಾತ್ರವೇ ಬಾಕಿ ಇವೆ. ನಾಳೆ (ನ.14) ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ. ಸದ್ಯ, ಬಿಹಾರದಲ್ಲಿ ಅನಿಶ್ಚಿತತೆ ಮತ್ತು ಮೌನ ಆವರಿಸಿದೆ. ಫಲಿತಾಂಶಕ್ಕಾಗಿ ಬಿಹಾರವೂ ಸೇರಿದಂತೆ ಇಡೀ ದೇಶ ಎದುರು ನೋಡುತ್ತಿದೆ.
“ಈ ಬಾರಿ, ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಅನಿಶ್ಚಿತತೆ ಉಂಟಾಗಿದೆ. ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವಿನ ಸೋಲು-ಗೆಲುವಿನ ಅಂತರವು ತೀರಾ ಕಡಿಮೆ ಇದೆ ಎಂಬುದನ್ನು ಎಕ್ಸಿಟ್ ಪೋಲ್‌ನಲ್ಲಿ ಗಮನಿಸಬಹುದು. ಫಲಿತಾಂಶಕ್ಕೂ ಮುನ್ನ ಸಂಭ್ರಮಿಸುವ ಪರಿಸ್ಥಿತಿ ಇದ್ದಂತೆ ಕಾಣುತ್ತಿಲ್ಲ” ಎಂದು ಹೆಸರು ಹೇಳಲಿಚ್ಚಿಸದ ಎನ್‌ಡಿಎ ನಾಯಕರೊಬ್ಬರು ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.
ಬಿಹಾರ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ 68% ಮತದಾನವಾಗಿದೆ. 2020ಕ್ಕೆ (57.29%) ಹೋಲಿಸಿದರೆ, 9.62%ರಷ್ಟು ಹೆಚ್ಚು ಮತದಾನವಾಗಿದೆ. ಈ ದಾಖಲೆಯ ಮತದಾನವು ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಯಿಂದ ಸಂಭವಿಸಿದೆ ಎಂದು ಮಹಾಘಟಬಂಧನ್ ನಾಯಕರು ಹೇಳುತ್ತಿದ್ದಾರೆ, ಮಹಿಳೆಯರು ಹಾಲಿ ಸರ್ಕಾರದ ಪರವಾಗಿ ಮತದಾನ ಮಾಡಿದ್ದಾರೆಂದು ಎನ್‌ಡಿಎ ಭಾವಿಸಿದೆ.
ದಾಖಲೆಯ ಪ್ರಕಾರ, ಬಿಹಾರವು ಮೂರು ಬಾರಿ ಅಧಿಕಾರ ಬದಲಾವಣೆಯನ್ನು ಕಂಡಿದೆ. ಆ ಮೂರೂ ಸಂದರ್ಭಗಳಲ್ಲಿಯೂ ಮತದಾರರ ಮತದಾನವು ಸರಾಸರಿ 5% ರಷ್ಟು ಹೆಚ್ಚಾಗಿತ್ತು ಎಂಬುದು ಗಮನಾರ್ಹ. ಉದಾಹರಣೆಗೆ, 1962ರ ವಿಧಾನಸಭಾ ಚುನಾವಣೆಯಲ್ಲಿ 44.5% ಮತದಾನವಾಗಿದ್ದರೆ, ನಂತರದ 1967ರಲ್ಲಿ 51.5%ಗೆ ಏರಿಕೆ ಕಂಡಿತ್ತು. ಈ 7% ಅಧಿಕ ಮತದಾನದೊಂದಿಗೆ ಸರ್ಕಾರವು ಪದಚ್ಯುತಿಗೊಂಡಿತು.
ಅದೇ ರೀತಿ,1977ರಲ್ಲಿ 50.5% ಇದ್ದ ಮತದಾನವು 1980ರಲ್ಲಿ 57.3%ಗೆ ಏರಿಕೆಯಾಗಿತ್ತು. ಆಗಲೂ, ಸರ್ಕಾರದ ಬದಲಾಯಿತು. ಆ ನಂತರ, 1990ರಲ್ಲಿ ಮತದಾನವು 62%ಗೆ ಏರಿಕೆಯಾಗುವ ಜೊತೆಗೆ ಮತ್ತೊಮ್ಮೆ ಅಧಿಕಾರದಲ್ಲಿ ಬದಲಾವಣೆ ಸಂಭವಿಸಿತು. ಆಗಲೂ, 1985ರ 56.3% ಮತದಾನಕ್ಕಿಂತ 5.7%ರಷ್ಟು ಮತಪ್ರಮಾಣ ಏರಿಕೆಯಾಗಿತ್ತು.
ಈ ಲೇಖನ ಓದಿದ್ದೀರಾ?: ರಾಷ್ಟ್ರಗೀತೆ, ರಾಷ್ಟ್ರಧ್ವಜ ಒಪ್ಪದವರು ದೇಶದ್ರೋಹಿಗಳಲ್ಲವೇ?
ಅಂದಿನಿಂದ ಈವರೆಗೆ ಬಿಹಾರದಲ್ಲಿ ಮತದಾನ ಪ್ರಮಾಣವು ಏರಿಳಿತಗಳನ್ನು ಕಂಡಿದೆ. ಈ ಬಾರಿಯೂ ಬರೋಬ್ಬರಿ 9.62%ರಷ್ಟು ಮತದಾನ ಹೆಚ್ಚಾಗಿದೆ. ಅಧಿಕಾರ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ.
ಆದಾಗ್ಯೂ, ಬಿಹಾರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಎನ್‌ಡಿಎ ವಿಶೇಷವಾಗಿ ಮಹಿಳಾ ಮತದಾರರನ್ನು ಅವಲಂಬಿಸಿದೆ ಎನ್ನಲಾಗಿದೆ. ದತ್ತಾಂಶದ ಪ್ರಕಾರ, 3.51 ಕೋಟಿ ನೋಂದಾಯಿತ ಮಹಿಳಾ ಮತದಾರರ ಪೈಕಿ, 2.52 ಕೋಟಿ ಮಹಿಳೆಯರು (71.60%) ಮತ ಚಲಾಯಿಸಿದ್ದಾರೆ. ಆದಾಗ್ಯೂ, ಒಟ್ಟು ನೋಂದಾಯಿತ ಮತ್ತು ಅರ್ಹ ಪುರುಷ ಮತದಾರರಲ್ಲಿ ಕೇವಲ 62.80% ಅಂದರೆ, ಸುಮಾರು 2.47 ಕೋಟಿ ಪುರುಷರು ಮತ ಚಲಾಯಿಸಿದ್ದಾರೆ. ಇದು, ಫಲಿತಾಂಶದ ಕುರಿತು ಅನಿಶ್ಚಿತತೆಯನ್ನು ಸೃಷ್ಟಿಸಿದೆ.




