ಹಿಂದುತ್ವವಾದಿ ದಿನೇಶ್ ಅಮೀನ್-ಪ್ರೇಮನಾಥ್ ಕೋಟ್ಯಾನ್ ಕೊಲೆಗಾರರು ಯಾರು?

Date:

ಎ ಜೆ ಆಸ್ಪತ್ರೆಯಲ್ಲಿ ಎಸ್ಪಿ ಬಿ ದಯಾನಂದ ಅವರ ಜೊತೆ ವಾಗ್ವಾದ ಮಾಡಿ ಹಲ್ಲೆಗೆ ಮುಂದಾಗಿದ್ದ ಪ್ರೇಮನಾಥ್ ಕೋಟ್ಯಾನ್ ಮತ್ತು ದಿನೇಶ್ ಅಮಿನ್ ಮತ್ತೆ ಮೂಲ್ಕಿಯಲ್ಲೂ ಹಲ್ಲೆಗೆ ಮುಂದಾದರು‌. ಅಲ್ಲಿಯೇ ಮಂತ್ರಿ ಬಿ ನಾಗರಾಜ ಶೆಟ್ಟಿಯವರಿದ್ದರು.‌ ಎಸ್ಪಿಯವರ ಸೂಚನೆಯ ಮೇರೆಗೆ ಅವರ ಗನ್ ಮ್ಯಾನ್ ರಿವಾಲ್ವರ್ ತೆಗೆದು ಪ್ರೇಮನಾಥ್ ಕೋಟ್ಯಾನ್, ದಿನೇಶ್ ಅಮೀನ್ ಮೇಲೆ ಶೂಟ್ ಮಾಡಿದರು.

ಇಂದಿಗೆ ಬರೋಬ್ಬರಿ 19 ವರ್ಷಗಳ ಹಿಂದೆ ಹಿಂದುತ್ವವಾದದ ಪ್ರಖರ ಕಾರ್ಯಕರ್ತರಾಗಿದ್ದ ದಿನೇಶ್ ಅಮೀನ್ ಮತ್ತು ಪ್ರೇಮನಾಥ ಕೋಟ್ಯಾನ್ ಅವರನ್ನು ಕೊಲೆ ಮಾಡಲಾಗಿತ್ತು. ಇಂದು ಮಂಗಳೂರಿನ ಬಿಜೆಪಿಯ ಬಹುತೇಕ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರನ್ನು ನೆನಪಿಸಿಕೊಂಡಿದ್ದಾರೆ. ಹಲವೆಡೆ ಪುಷ್ಪಾರ್ಚನೆ ಮಾಡಿದ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಂಗಳೂರು ದಕ್ಷಿಣದ ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ “2006ನೇ ಇಸವಿಯ ಇದೇ ದಿನ ಸಮಾಜಘಾತುಕ ಮತಾಂಧ ಶಕ್ತಿಗಳ ಕುತಂತ್ರದಿಂದ ಮೂಲ್ಕಿ ಸುಖಾನಂದ ಶೆಟ್ಟಿಯಂತಹ ಧೀಮಂತ ನಾಯಕನನ್ನು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಸಮಾಜ ಕಳೆದುಕೊಂಡಿತು. ನಂತರ ನಡೆದ ಗೋಲಿಬಾರ್‌ನಲ್ಲಿ ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಅವರಂತಹ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಬಲಿಯಾಗಿದ್ದು ಅನ್ಯಾಯದ ಪರಮಾವಧಿ” ಎಂದು ಬರೆದುಕೊಂಡಿದ್ದಾರೆ.

ಈ ಅನ್ಯಾಯ ಮಾಡಿದವರು ಯಾರು? ದಿನೇಶ್ ಅಮೀನ್ ಮತ್ತು ಪ್ರೇಮನಾಥ್ ಕೋಟ್ಯಾನ್ ಅವರಂತಹ ನಿಷ್ಠಾವಂತ ಕಾರ್ಯಕರ್ತ ಬಂಧುಗಳನ್ನು ಬಲಿ ಪಡೆದಿದ್ದು ಯಾರು? ಈ ರೀತಿಯ ಅನ್ಯಾಯದ ಪರಮಾಧಿಕೋರರನವನ್ನು ಮಾಡಿದ್ದು ಯಾರು? ಎಂದು ಅವರು ಬರೆದಿಲ್ಲ. ಹಾಗಾಗಿ ಘಟನೆಯನ್ನು ಒಮ್ಮೆ ಮತ್ತೆ ನೆನಪಿಸಿಕೊಳ್ಳಬೇಕಿದೆ‌.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಹೊಸ ಪುಸ್ತಕ | ʼಕೊರಗರು; ತುಳುನಾಡಿನ ಮಾತೃ ಸಮುದಾಯʼ- ನವೀನ್‌ ಸೂರಿಂಜೆ

ನಾನು ಆಗ ಕರಾವಳಿ ಅಲೆ ಪತ್ರಿಕೆಯ ವರದಿಗಾರನಾಗಿದ್ದೆ. 2006 ಡಿಸೆಂಬರ್ 01 ರಂದು ಬೆಳಿಗ್ಗೆ ಬಿಜೆಪಿಯ ಕಾರ್ಯಕರ್ತ ಸುಖಾನಂದ ಶೆಟ್ಟಿಯವರನ್ನು ಕುಳಾಯಿಯ ಮಾರ್ಬಲ್ ಅಂಗಡಿ ಬಳಿ ಕೊಲೆ ಮಾಡಿದ್ದರು. ತಕ್ಷಣ ಅವರನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ವೈದ್ಯರು ‘ಮೃತರಾಗಿದ್ದಾರೆ’ ಎಂದು ಘೋಷಿಸಿದ್ದರು. ಇಡೀ ಮಂಗಳೂರಿನಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಯಿತು. ಆಗಿನ್ನೂ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಕರಾವಳಿ ಅಲೆ ಸಂಜೆ ಪತ್ರಿಕೆಯ ಕಾರಣಕ್ಕಾಗಿ ವಿಷಯ ಕಾಡ್ಗಿಚ್ಚಿನಂತೆ ಹರಡಿತ್ತು. ಎಜೆ ಆಸ್ಪತ್ರೆಗೆ ಹಿಂದುತ್ವದ ಕಾರ್ಯಕರ್ತರು ಬರಲಾರಂಭಿಸಿದರು. ಆಗ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಪ್ರಖರ ಹಿಂದುತ್ವವಾದಿ ಬಿ ನಾಗರಾಜ ಶೆಟ್ಟರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಬಿಜೆಪಿ ಸರ್ಕಾರದ ಉಸ್ತುವಾರಿ ಸಚಿವ ನಾಗರಾಜ ಶೆಟ್ಟಿಯವರು ಎಜೆ ಆಸ್ಪತ್ರೆಗೆ ಬಂದರು. ಕುಂಟಿಕಾನದಲ್ಲಿರುವ ಎಜೆ ಆಸ್ಪತ್ರೆಯಿಂದ ಸುಖಾನಂದ ಶೆಟ್ಟಿಯವರ ಮನೆ ಇರುವ ಮೂಲ್ಕಿಯವರೆಗೆ ‘ಶವಯಾತ್ರೆ’ ನಡೆಸುವುದು ಎಂದು ನಾಗರಾಜ ಶೆಟ್ಟರು ಮತ್ತು ಹಿಂದುತ್ವವಾದಿಗಳು ನಿರ್ಧರಿಸಿದರು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ ದಯಾನಂದ ಅವರು ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದರು. ಐಪಿಎಸ್ ಬಿ ದಯಾನಂದ ಅವರು ಎಜೆ ಆಸ್ಪತ್ರೆಗೆ ಬರುತ್ತಲೇ ಹಿಂದುತ್ವ ಕಾರ್ಯಕರ್ತರ ಮಧ್ಯೆ ನಿಂತಿದ್ದ ಬಿ ನಾಗರಾಜ ಶೆಟ್ಟಿಯವರನ್ನು ಭೇಟಿಯಾಗಿ ‘ಶವಯಾತ್ರೆ ಮಾಡಲು ನಾನು ಅನುಮತಿ ಕೊಡಲ್ಲ‌. ಎಜೆ ಆಸ್ಪತ್ರೆಯಿಂದ ಮೂಲ್ಕಿ ಅಂದರೆ ಸುಮಾರು 20 ರಿಂದ 25 ಕಿಮೀ ಅಗುತ್ತದೆ.‌ ಇಷ್ಟು ಧೀರ್ಘ ಶವಯಾತ್ರೆ ರಿಸ್ಕ್ ಆಗುತ್ತದೆ.‌ ಹಾಗಾಗಿ ನಾವು ಪೊಲೀಸರು ಅನುಮತಿ ಕೊಡಲ್ಲ’ ಎಂದರು. ‘ನಾನು ಮಾಡಿಯೇ ಮಾಡುತ್ತೇವೆ’ ಎಂದು ಉಸ್ತುವಾರಿ ಸಚಿವ ಬಿ ನಾಗರಾಜ ಶೆಟ್ಟಿ ಹೇಳಿದರು. ‘ಅದು ನಿಮ್ಮ ರಿಸ್ಕ್ ಸರ್. ಮುಂದೆ ನಡೆಯುವ ಎಲ್ಲದಕ್ಕೂ ನೀವೇ ಜವಾಬ್ದಾರಿ. ನಾವು ಪೊಲೀಸರು ಅನುಮತಿ ಕೊಡಲ್ಲ’ ಎಂದು ಪೊಲೀಸ್ ಎಸ್ಪಿ ಬಿ ದಯಾನಂದ ಖಡಕ್ಕಾಗಿ ಹೇಳಿದರು‌. ನಾಗರಾಜ್ ಶೆಟ್ಟಿಯವರ ಪಕ್ಕದಲ್ಲೇ ಇದ್ದ ದಿನೇಶ್ ಅಮೀನ್ ಮತ್ತು ಪ್ರೇಮನಾಥ್ ಕೋಟ್ಯಾನ್ ಎಂಬ ಬಿಸಿರಕ್ತದ ಹುಡುಗರು ಐಪಿಎಸ್ ಬಿ ದಯಾನಂದ ಅವರ ಮೇಲೇರಿ ಹೋದರು. ‘ನಮ್ಮದೇ ಸರ್ಕಾರ, ನಮಗೇ ಶವಯಾತ್ರೆ ಅನುಮತಿ ಕೊಡಲ್ವಾ?’ ಎಂದು ಪ್ರಶ್ನಿಸುತ್ತಾ ಇನ್ನೇನು ಬಿ ದಯಾನಂದ ಅವರನ್ನು ತಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಮುಂದೆ ಬಂದರು.

ಶವಯಾತ್ರೆ ಎ ಜೆ ಆಸ್ಪತ್ರೆಯಿಂದ ಹೊರಟಿತು. ನಿಧಾನಕ್ಕೆ ಕೊಟ್ಟಾರ ದಾಟಿ, ಪಣಂಬೂರು, ಬೈಕಂಪಾಡಿ ಹೆದ್ದಾರಿ ದಾಟಿ ಕುಳಾಯಿಗೆ ಶವಯಾತ್ರೆ ಬಂತು. ಕುಳಾಯಿಯಲ್ಲೇ ಸುಖಾನಂದ ಶೆಟ್ಟಿಯವರನ್ನು ಕೊಲೆ ಮಾಡಿದ್ದರಿಂದ ಅಲ್ಲಿ ಇನ್ನಷ್ಟೂ ಜನ ಶವಯಾತ್ರೆಯಲ್ಲಿ ಸೇರಿಕೊಂಡರು. ಈಗ ಶವಯಾತ್ರೆಯಲ್ಲಿದ್ದ ಹಿಂದುತ್ವವಾದಿಗಳು ಇನ್ನಷ್ಟು ವ್ಯಗ್ರವಾಗಿದ್ದರು. ಶವಯಾತ್ರೆ ಸುರತ್ಕಲ್ ಬರುತ್ತಿದ್ದಂತೆ, ಅದು ಕೋಮುವಾದದ ಪ್ರಯೋಗಶಾಲೆ ಆಗಿದ್ದರಿಂದ ಜನ ಇನ್ನಷ್ಟು ಸೇರ್ಪಡೆಗೊಂಡು ಯಾತ್ರೆ ಕುಲುಮೆಯಂತಾಗಿತ್ತು. ಶವಯಾತ್ರೆ ಮೂಲ್ಕಿ ಸಮೀಪಿಸಿದಾಗ ಸೂರ್ಯ ಮುಳುಗುವ ಹೊತ್ತಾಗಿತ್ತು.

ಮೂಲ್ಕಿಯಲ್ಲಿ ರಾತ್ರಿ ಕರೆಂಟ್ ತೆಗೆಯಲಾಗಿತ್ತು. ಬಿಜೆಪಿ ಸರ್ಕಾರ ಇದ್ದರೂ ಶವಯಾತ್ರೆ ಊರಿಗೆ ಬರುವಾಗ ಕರೆಂಟ್ ಇಲ್ಲ ಎಂದರೆ ಏನೋ ಸಂಚಿದೆ ಎಂದು ನಿರೀಕ್ಷಿಸಿದ ಎಸ್ಪಿ ಬಿ ದಯಾನಂದ ಅವರು ಮತ್ತೆ ಶವಯಾತ್ರೆಯನ್ನು ಮುನ್ನಡೆಸುತ್ತಿದ್ದ ಉಸ್ತುವಾರಿ ಸಚಿವ ನಾಗರಾಜ ಶೆಟ್ಟಿಯವರನ್ನು ಭೇಟಿಯಾಗಿ ಮನವಿ ಮಾಡಿದರು. ‘ಮೂಲ್ಕಿಯ ಪ್ರವೇಶ ಮಾಡಿ ಇಲ್ಲಿಗೇ ಯಾತ್ರೆ ಮುಗಿಸಿ ಸಂಬಂಧಪಟ್ಟವರು ಮಾತ್ರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿ. ಸಾವಿರಾರು ಜನ ಯಾತ್ರೆಯಲ್ಲಿ ಮೂಲ್ಕಿಯೊಳಗೆ ಪ್ರವೇಶಿಸುವುದು ಬೇಡ’ ಎಂದು ಮನವಿ ಮಾಡಿದರು. ಎಸ್ಪಿಯವರ ಮನವಿಯನ್ನು ತಳ್ಳಿ ಹಾಕಿದ ಬಿಜೆಪಿಯ ಉಸ್ತುವಾರಿ ಸಚಿವರು ಶವಯಾತ್ರೆಯನ್ನು ಮೂಲ್ಕಿಯೊಳಗೆ ಕೊಂಡೊಯ್ದರು‌.

ಮೂಲ್ಕಿಯಲ್ಲಿ ಪೊಲೀಸರ ಜೊತೆ ಹಿಂದುತ್ವವಾದಿಗಳು ವಿನಾಕಾರಣ ತಗಾದೆ ತೆಗೆದರು. ‘ನಮ್ಮದೇ ಸರ್ಕಾರ, ನಮ್ಮದೇ ಮಂತ್ರಿಗಳ ನೇತೃತ್ವದ ಶವಯಾತ್ರೆ’ ಎಂಬ ಅಹಂಕಾರ ಆ ತಗಾದೆಯಲ್ಲಿ ಎದ್ದು ಕಾಣುತ್ತಿತ್ತು. ಎ ಜೆ ಆಸ್ಪತ್ರೆಯಲ್ಲಿ ಎಸ್ಪಿ ಬಿ ದಯಾನಂದ ಅವರ ಜೊತೆ ವಾಗ್ವಾದ ಮಾಡಿ ಹಲ್ಲೆಗೆ ಮುಂದಾಗಿದ್ದ ಪ್ರೇಮನಾಥ್ ಕೋಟ್ಯಾನ್ ಮತ್ತು ದಿನೇಶ್ ಅಮಿನ್ ಮತ್ತೆ ಮೂಲ್ಕಿಯಲ್ಲೂ ಮುಂದೆ ಬಂದರು. ನೇರ ಎಸ್ಪಿ ಬಿ ದಯಾನಂದ್ ಅವರ ಮೇಲೆ ಹಲ್ಲೆಗೆ ಮುಂದಾದರು‌. ಎಸ್ಪಿ ಬಿ ದಯಾನಂದ ಅವರ ಬಳಿಯೇ ಬಿಜೆಪಿ ಮಂತ್ರಿ ಬಿ ನಾಗರಾಜ ಶೆಟ್ಟಿಯವರಿದ್ದರು.‌ ಎಸ್ಪಿಯವರ ಸೂಚನೆಯ ಮೇರೆಗೆ ಅವರ ಗನ್ ಮ್ಯಾನ್ ರಿವಾಲ್ವರ್ ತೆಗೆದು ಪ್ರೇಮನಾಥ್ ಕೋಟ್ಯಾನ್, ದಿನೇಶ್ ಅಮೀನ್ ಮೇಲೆ ಶೂಟ್ ಮಾಡಿದರು. ನಮ್ಮ ಕಣ್ಣೆದುರೇ ಇಬ್ಬರು ಹಿಂದುತ್ವವಾದಿ ಕಾರ್ಯಕರ್ತರು ಹತ್ಯೆಯಾದರು.

ಇದು ಬಿಜೆಪಿ ಸರ್ಕಾರವೇ, ಅವರ ಮಂತ್ರಿಯ ಸಮ್ಮುಖದಲ್ಲೇ, ಬಿಜೆಪಿಯ ಪೊಲೀಸರೇ ನಡೆಸಿದ ಹಿಂದುತ್ವವಾದಿ ಯುವಕರಿಬ್ಬರ ಕೊಲೆ! ಶೂಟ್ ಮಾಡುವ ಅಗತ್ಯವೇ ಇರದಿದ್ದರೂ ಶೂಟ್ ಮಾಡಿದ ಬಗ್ಗೆ ಯಾವ ಬಿಜೆಪಿ ನಾಯಕರೂ ಪ್ರಶ್ನಿಸುವುದಿಲ್ಲ. ಶೂಟ್ ಮಾಡಿದ ಎಸ್ಪಿಯವರ ಗನ್ ಮ್ಯಾನ್ ಅನ್ನು ಮುಂದಿನ ಬಿಜೆಪಿ ಪೂರ್ಣಪ್ರಮಾಣದ ಸರ್ಕಾರದ ವೇಳೆ ಸಚಿವರ ಗನ್ ಮ್ಯಾನ್ ಆಗಿ ನೇಮಿಸಲಾಗುತ್ತದೆ. ಆ ಗನ್ ಮ್ಯಾನ್ ಗೆ ಬಿಜೆಪಿ ಸರ್ಕಾರದಲ್ಲೇ ಪೊಲೀಸ್ ಸಹಾಯಕ ಉಪನಿರೀಕ್ಷಕರಾಗಿ ಬಡ್ತಿ ನೀಡಲಾಗುತ್ತದೆ! ಎಸ್ಪಿ ದಯಾನಂದ ಅವರು ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಯಿಯವರು ಮುಖ್ಯಮಂತ್ರಿಗಳಾಗಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದರು. ಸರ್ಕಾರಕ್ಕೆ ಆಪ್ತರಾಗಿರುವ, ನಂಬಿಕಸ್ಥರನ್ನು ಮಾತ್ರ ಗುಪ್ತಚರ ಮುಖ್ಯಸ್ಥರಾಗಿ ನೇಮಿಸುವುದು ಸರ್ಕಾರಗಳ ಅಲಿಖಿತ ನಿಯಮವಾಗಿದೆ.

ಇದನ್ನು ಓದಿದ್ದೀರಾ? ನಿರಂಜನರ ಕೃತಿಗಳು ಇಂದಿಗೂ ಪ್ರಸ್ತುತ: ಪ್ರೊ. ರಾಜೇಂದ್ರ ಚೆನ್ನಿ

ತನ್ನ ಸಮ್ಮುಖದಲ್ಲೇ, ತನ್ನ ಉಸ್ತುವಾರಿಯಲ್ಲೇ ಹಿಂದುತ್ವ ಕಾರ್ಯಕರ್ತರು ತನ್ನದೇ ಪೊಲೀಸರಿಂದ ಹತ್ಯೆಯಾದರೂ ಮಂತ್ರಿ ನಾಗರಾಜ ಶೆಟ್ಟಿಯವರು ರಾಜೀನಾಮೆ ನೀಡಲಿಲ್ಲ. ಹಿಂದುತ್ವ ಕಾರ್ಯಕರ್ತರನ್ನು ಹತ್ಯೆ ಮಾಡಿದ ಪೊಲೀಸರಿಗೆ ಪದೋನ್ನತಿ ನೀಡಲಾಯಿತು‌‌. ಆದರೆ ಪ್ರೇಮನಾಥ ಕೋಟ್ಯಾನ್ ಮತ್ತು ದಿನೇಶ್ ಅಮಿನ್ ಎಂಬವರ ಹತ್ಯೆಯನ್ನು ಪ್ರತಿಭಟಿಸಿ ‘ನ್ಯಾಯಾಂಗ ತನಿಖೆಗೆ ಆಗ್ರಹ’ ಮಾಡಿದ್ದು ನನ್ನ ಪತ್ರಿಕೋದ್ಯಮದ ಗುರುಗಳಾದ ಎಡಪಂಥೀಯ ನಿಲುವಿನ ಬಿ ವಿ ಸೀತಾರಾಮ್ ಅವರು!

ನನ್ನ ಮತ್ತು ಇತರ ವರದಿಗಾರರ ಗ್ರೌಂಡ್ ರಿಪೋರ್ಟ್ ಆಧಾರದಲ್ಲಿ ಪ್ರೇಮನಾಥ್ ಕೋಟ್ಯಾನ್ ಮತ್ತು ದಿನೇಶ್ ಅಮೀನ್ ಶೂಟೌಟ್ ಪ್ರಕರಣವನ್ನು ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ಗ್ರಹಿಸಿಕೊಂಡ ಕರಾವಳಿ ಅಲೆ ಸಂಪಾದಕರಾದ ಬಿ ವಿ ಸೀತಾರಾಮರು ಸಿಐಡಿ, ಮಾನವ ಹಕ್ಕು ಆಯೋಗಕ್ಕೆ ಅರ್ಜಿಯ ಮೇಲೆ ಅರ್ಜಿಗಳನ್ನು ಬರೆದರು. ತನ್ನದೇ ಖರ್ಚಿನಲ್ಲಿ ಬೆಂಗಳೂರಿಗೆ ಹತ್ತಾರು ಬಾರಿ ಓಡಾಡಿ ಕೇಸ್ ಫಾಲೋಅಪ್ ಮಾಡಿ, ಶೂಟೌಟ್ ಮಾಡಿದ ಪೊಲೀಸರಿಗೆ ಶಿಕ್ಷೆಯಾಗಬೇಕು ಎಂದು ಯತ್ನಿಸಿದರು! ಆದರೆ ಬಿಜೆಪಿ ಸರ್ಕಾರ ಇಡೀ ಪ್ರಕರಣವನ್ನು ಮುಚ್ಚಿ ಹಾಕಿತ್ತು!

ವಿಪರ್ಯಾಸ ಎಂದರೆ ಅದೇ ಬಿಜೆಪಿಗರು ಇಂದು ‘ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಅವರಂತಹ ನಿಷ್ಠಾವಂತ ಕಾರ್ಯಕರ್ತ ಬಂಧುಗಳು ಬಲಿಯಾಗಿದ್ದು ಅನ್ಯಾಯದ ಪರಮಾವಧಿ. ಈ ಅನ್ಯಾಯಕ್ಕೆ ಇಂದಿಗೆ 19 ವರ್ಷಗಳು..!’ ಎಂದು ಇಬ್ಬರ ಫೋಟೋಗೆ ಹೂಮಾಲೆ ಹಾಕಿ ಅಳುತ್ತಿದ್ದಾರೆ.

Naveen suringe
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...