ಭಾರತದ ಮೇಲೆ ಟ್ರಂಪ್ ಹೇರಿರುವ 50% ಸುಂಕವು ಆಗಸ್ಟ್ 27ರಂದು ಜಾರಿಗೆ ಬಂದಿದೆ. ಅದೇ ದಿನ, ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ಬಾರಿ ಕರೆ ಮಾಡಿದ್ದು, ಅವರ ಕರೆಯನ್ನು ಸ್ವೀಕರಿಸಲು ಮೋದಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಟ್ರಂಪ್ ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಮೋದಿ, ಇದ್ದಕ್ಕಿದ್ದಂತೆ ಟ್ರಂಪ್ ಕರೆಯನ್ನು ನಿರಾಕರಿಸುವ ನಿರ್ಧಾರ ಮಾಡಿದ್ದ ಅಚ್ಚರಿಯಂತೆ ಕಾಣುತ್ತಿದೆ. ಮಾತ್ರವಲ್ಲದೆ, ಈ ನಿರಾಕರಣೆಗೆ ಕಾರಣವೇನಿರಬಹುದು ಎಂಬ ಚರ್ಚೆ, ಪ್ರಶ್ನೆಗಳೂ ಮುನ್ನೆಲೆಯಲ್ಲಿವೆ. ಟ್ರಂಪ್ ಅವರ ದಾಷ್ಟ್ಯತನವನ್ನು ನಿಭಾಯಿಸಲು ಮತ್ತು ಅವರ ಧೋರಣೆಗೆ ಪೆಟ್ಟು ಕೊಡಲು ಅವರ ಕರೆಗಳನ್ನು ಸ್ವೀಕರಿದೆ ಮೋದಿ ಅವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆಯೇ ಎಂದೂ ಹೇಳಲಾಗುತ್ತಿದೆ.
ಇತ್ತೀಚಿನ ವಾರಗಳಲ್ಲಿ ಟ್ರಂಪ್ ಅವರು ಮೋದಿಗೆ ಹಲವಾರು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಉತ್ತರಿಸಿಲ್ಲ ಎಂದು ಜರ್ಮನ್ ಪತ್ರಿಕೆ ಮೊದಲಿಗೆ ವರದಿ ಮಾಡಿತ್ತು. ಆ ವರದಿಯನ್ನು ಮತ್ತಷ್ಟು ಬಲಪಡಿಸುವಂತೆ ನ್ಯೂಯಾರ್ಕ್ ಟೈಮ್ಸ್ (NYT) ಕೂಡ ಹೊಸ ವರದಿಯನ್ನು ಪ್ರಕಟಿಸಿದೆ. ಇದು, ಅಮೆರಿಕ ಅಧ್ಯಕ್ಷರ ಕರೆಯನ್ನು ನಿರ್ಲಕ್ಷ್ಯಿಸಿದ್ದಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಪಟ್ಟಿ ಮಾಡಿದೆ.
ಅಧಿಕೃತವಾಗಿ, ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಕೊನೆಯ ಫೋನ್ ಸಂಭಾಷಣೆಯು ಜೂನ್ 17 ರಂದು ನಡೆಯಿತು. ಟ್ರಂಪ್ ಕೆನಡಾದಲ್ಲಿ ನಡೆದ G7 ಶೃಂಗಸಭೆಯಲ್ಲಿದ್ದಾಗ, ಹಠಾತ್ತನೆ ಹೊರಟು ವಾಷಿಂಗ್ಟನ್‌ಗೆ ಹಿಂತಿರುಗಿದರು. ಆ ಸಮಯದಲ್ಲಿ, ಮೋದಿಗೆ ಟ್ರಂಪ್ ಕರೆ ಮಾಡಿದ್ದರು. ಆಗ, ವಾಷಿಂಗ್ಟನ್‌ನಲ್ಲಿ ಭೇಟಿ ಮಾಡುವಂತೆ ಮೋದಿ ಅವರನ್ನು ಟ್ರಂಪ್ ಕೇಳಿದ್ದರು. ಆದರೆ, ಕ್ರೊಯೇಷಿಯಾಗೆ ಭೇಟಿ ನಿಡುವ ಪೂರ್ವ ಯೋಜನೆಯ ಕಾರಣದಿಂದಾಗಿ, ಟ್ರಂಪ್ ವಿನಂತಿಯನ್ನು ಮೋದಿ ನಿರಾಕರಿಸಿದ್ದರು.
ಅಂದಿನ ಕರೆಯು, ಪ್ರಧಾನಿ ಮೋದಿ ಮೇಲೆ ಟ್ರಂಪ್ ಒತ್ತಡ ಹೇರಲು ಪ್ರಯತ್ನಿಸಬಹುದು ಎಂಬ ಕಾರಣಕ್ಕಾಗಿಯೇ ಮೋದಿ ಭೇಟಿಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಯಾಕೆಂದರೆ, ಅದೇ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸಲಾಗಿತ್ತು. ಆಗ, ಮೋದಿ ಅವರನ್ನು ಭೇಟಿಗೆ ಕರೆದದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಚರ್ಚೆಯನ್ನು ಅಮೆರಿಕ ನೆಲದಲ್ಲಿ ನಡೆಸುವ ಉದ್ದೇಶ ಟ್ರಂಪ್ ಅವರದ್ದಾಗಿತ್ತು ಎನ್ನಲಾಗಿದೆ.
ಈ ಲೇಖನ ಓದಿದ್ದೀರಾ?: ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?
ಅಂದಿನಿಂದ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ದಿನ ಕಳೆದಂತೆ ಹದಗೆಡುತ್ತಿದೆ. ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದರು. ಜೊತೆಗೆ, ಅಮೆರಿಕದಲ್ಲಿ ಕೃಷಿ ಮತ್ತು ಡೈರಿ ಕ್ಷೇತ್ರಗಳ ಮಾರುಕಟ್ಟೆಯನ್ನು ವಿಸ್ತರಿಸುವ ಕುರಿತಾದ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸಿದರು.
ದೀರ್ಘಕಾಲದ ದೋಸ್ತಿಗಳಾದ ಅಮೆರಿಕ-ಭಾರತ (ಟ್ರಂಪ್-ಮೋದಿ) ನಡುವಿನ ವಿಶ್ವಾಸ ಕುಸಿದಿದೆ. ಆದಾಗ್ಯೂ, ಕೆಲವು ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಮೋದಿ ಅವರಿಗೆ ಟ್ರಂಪ್ ಪದೆ-ಪದೇ ಕರೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಟ್ರಂಪ್ ಅವರ ಅತಿಶಯೋಕ್ತಿ ಮತ್ತು ಏಕಪಕ್ಷೀಯ ಧೋರಣೆಯು ಮಾತುಕತೆಯ ಫಲಿತಾಂಶವನ್ನು ಯಾವ ರೀತಿಯಲ್ಲಿ ರೂಪಿಸಬಹುದು ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ, ಟ್ರಂಪ್ ಕರೆಗೆ ಮೋದಿ ಉತ್ತರಿಸುತ್ತಿಲ್ಲ ಎಂದು ವರದಿಯಾಗಿದೆ.




