ಫೆಬ್ರವರಿ 6ರಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಅವರು ಚೆನ್ನೈನ ಎಗ್ಮೋರ್‌ನಲ್ಲಿರುವ ಕನ್ನಿಮೆರಾ ಸಾರ್ವಜನಿಕ ಗ್ರಂಥಾಲಯ (Connemara Public Library) ಸಂಕೀರ್ಣದಲ್ಲಿ ಜರ್ಮನ್ ತತ್ವಜ್ಞಾನಿ, ರಾಜಕೀಯ ಸಿದ್ಧಾಂತಿ, ಅರ್ಥಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಕಾರ್ಲ್ ಮಾರ್ಕ್ಸ್ ಪ್ರತಿಮೆ ಅನಾವರಣಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈ ನಡುವೆ ಚೆನ್ನೈನಲ್ಲೇ ಕಾರ್ಲ್ ಮಾರ್ಕ್ಸ್ ಪ್ರತಿಮೆ ನಿರ್ಮಾಣ ಮಾಡಿದ್ದೇಕೆ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತಮಿಳುನಾಡಿನ ಬಗ್ಗೆ ಮಾರ್ಕ್ಸ್ ಬರವಣಿಗೆಗಳನ್ನು ಮತ್ತೆ ಮೆಲುಕು ಹಾಕುವಂತಾಗಿದೆ.
ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್, “ಕಾರ್ಲ್ ಮಾರ್ಕ್ಸ್ ಅವರ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ. ಕಮ್ಯುನಿಸ್ಟರು ಸಹ ಅವರನ್ನು ಮರೆತಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರಿಗೆ ತಮಿಳುನಾಡಿನೊಂದಿಗೆ ಯಾವ ಸಂಬಂಧವಿದೆ? ಅವರು ಎಂದಾದರೂ ಇಲ್ಲಿಗೆ ಬಂದಿದ್ದಾರೆಯೇ” ಎಂದು ಪ್ರಶ್ನಿಸಿದ್ದಾರೆ. ಭಾರತೀಯ ನೆಲದಲ್ಲಿ ವಿದೇಶಿ ದಾರ್ಶನಿಕನಿಗಿಂತ ಸ್ಥಳೀಯ ಮಹನೀಯರಿಗೆ ಆದ್ಯತೆ ನೀಡಬೇಕು. ಕಮ್ಯುನಿಸಂ ಸಿದ್ಧಾಂತವು ಭಾರತದ ಸಾಂಸ್ಕೃತಿಕ ಬೇರುಗಳಿಗೆ ವಿರುದ್ಧ ಎಂಬುದು ಬಿಜೆಪಿ ಪ್ರತಿಪಾದನೆ. ಆದರೆ ಕೋಮು ಆಧಾರದಲ್ಲಿ ಜನರನ್ನು ವಿಭಜಿಸುವುದು ಸರಿಯೇ ಎಂಬ ಪ್ರಶ್ನೆ ನೆಟ್ಟಿಗರದ್ದು! ಅಷ್ಟಕ್ಕೂ ಸಂವಿಧಾನದ ಸಾಮಾಜಿಕ-ಆರ್ಥಿಕ ತತ್ವಗಳು ಮಾರ್ಕ್ಸ್‌ವಾದದ ಸಮಾನತೆ ಮತ್ತು ಶೋಷಣೆ ರಹಿತ ಸಮಾಜದ ವಿಚಾರಗಳಿಂದ ಪ್ರಭಾವಿತವಾಗಿರುವುದಲ್ಲವೇ?
ಇದನ್ನು ಓದಿದ್ದೀರಾ? ಮನುಸ್ಮೃತಿಯ ವಿರೋಧಿಸಿದ ಜ್ಯೋತಿಬಾ ಫುಲೆ ಸ್ಮರಣೆ: ದಲಿತ ಚಿಂತನೆಗಳ ಮೆಲುಕು
ಕಾರ್ಲ್ ಮಾರ್ಕ್ಸ್ ಮತ್ತು ತಮಿಳುನಾಡು
ಇಪ್ಪತ್ತನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಕಾರ್ಲ್ ಮಾರ್ಕ್ಸ್ ಅವರ ಆಲೋಚನೆಗಳಿಂದ ಪ್ರೇರಿತವಾದ ಕ್ರಾಂತಿಗಳು ನಡೆದಿವೆ. ಈ ಕ್ರಾಂತಿಗಳು ಲಕ್ಷಾಂತರ ಜನರನ್ನು ದೌರ್ಜನ್ಯದಿಂದ ವಿಮೋಚನೆಗೊಳಿಸಿದೆ. ಮಾನವಕುಲದ ಪ್ರಗತಿಗೆ ಆರ್ಥಿಕ ಸಮಾನತೆ ಎಷ್ಟು ಅಗತ್ಯ ಎಂಬುದನ್ನು ವೈಜ್ಞಾನಿಕವಾಗಿ ತೋರಿಸಿದವರು ಕಾರ್ಲ್ ಮಾರ್ಕ್ಸ್.
ಇನ್ನು ಕಾರ್ಲ್ ಮಾರ್ಕ್ಸ್ ಮತ್ತು ತಮಿಳುನಾಡಿನ ನಡುವಿನ ಸಂಬಂಧವೇನು ಎಂಬ ತಮಿಳಿಸೈ ಅವರ ಪ್ರಶ್ನೆಯು ಟೀಕೆಗೆ ಗುರಿಯಾಗಿದೆ. ಮಾರ್ಕ್ಸ್ ಭಾರತದ ಬಗ್ಗೆ, ವಿಶೇಷವಾಗಿ ತಮಿಳುನಾಡಿನ ಬಗ್ಗೆ ಹಲವು ಬಾರಿ ಬರೆದಿದ್ದಾರೆ. 1853 ಮತ್ತು 1858ರ ನಡುವೆ, ಕಾರ್ಲ್ ಮಾರ್ಕ್ಸ್ ‘ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್’ನಲ್ಲಿ ಭಾರತದ ಬಗ್ಗೆ ಮೂವತ್ತಮೂರು ಲೇಖನಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಸಂಕಲಿಸಿ “ಕಾರ್ಲ್ ಮಾರ್ಕ್ಸ್: ನೋಟ್ಸ್ ಆನ್ ಇಂಡಿಯನ್ ಹಿಸ್ಟರಿ” ಎಂಬ ಪುಸ್ತಕವಾಗಿ ಪ್ರಕಟಿಸಲಾಗಿದೆ.
ಈ ಈ ಟಿಪ್ಪಣಿಗಳಲ್ಲಿ, ಮಾರ್ಕ್ಸ್ ಕ್ರಿ.ಶ. 664 ರಿಂದ 1858 ರವರೆಗಿನ ಭಾರತೀಯ ಇತಿಹಾಸದ ಬಗ್ಗೆ ಬರೆದಿದ್ದಾರೆ. ಇದರಲ್ಲಿ ಮೊಘಲ್ ಆಳ್ವಿಕೆ, ಬ್ರಿಟಿಷರು ಮತ್ತು ಫ್ರೆಂಚ್ ನಡುವಿನ ಯುದ್ಧಗಳು ಮತ್ತು ಈಸ್ಟ್ ಇಂಡಿಯಾ ಕಂಪನಿ ನಡೆಸಿದ ಶೋಷಣೆಯ ಬಗ್ಗೆ ಉಲ್ಲೇಖವಿದೆ. ಈ ಬರಹಗಳು ಇಂದಿಗೂ ಭಾರತೀಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಉಪಯುಕ್ತವಾಗಿದೆ. ತಮಿಳುನಾಡಿನ ಬಗ್ಗೆ ಅವರ ಅವಲೋಕನಗಳೂ ಈ ಬರಹಗಳಲ್ಲಿದೆ.
ಸಿಪಾಯಿ ದಂಗೆಯ ಕುರಿತಾದ ಅವರ ಲೇಖನಗಳಲ್ಲಿ, (ರಾಷ್ಟ್ರೀಯ ಮತ್ತು ವಸಾಹತುಶಾಹಿ ಪ್ರಶ್ನೆಗಳ ಕುರಿತು ಮಾರ್ಕ್ಸ್ ಮತ್ತು ಎಂಗೆಲ್ಸ್ – ಆಯ್ದ ಬರಹಗಳು, ಐಜಾಜ್ ಅಹ್ಮಂಡ್ ಸಂಪಾದಿಸಿದ್ದಾರೆ) ಮಾರ್ಕ್ಸ್ ಬ್ರಿಟಿಷ್ ಸರ್ಕಾರದ ಮದ್ರಾಸ್ ಚಿತ್ರಹಿಂಸೆ ಆಯೋಗ (Torture Commission)ದ ಸಂಶೋಧನೆಗಳನ್ನು ಚರ್ಚಿಸಿದ್ದರು. ಬ್ರಿಟಿಷ್ ಕಂಪನಿಯು 1855ರಲ್ಲಿ ನೇಮಿಸಿದ ಈ ಸಮಿತಿಯು ಕಂದಾಯ ವಸೂಲಿ ವೇಳೆ ಭಾರತೀಯ ಅಧಿಕಾರಿಗಳು ನಡೆಸುತ್ತಿದ್ದ ಅಮಾನವೀಯ ಚಿತ್ರಹಿಂಸೆಗಳನ್ನು ಬಯಲಿಗೆಳೆದಿದೆ. ಕಾರ್ಲ್ ಮಾರ್ಕ್ಸ್ ವಿವರಿಸಿದ ಘಟನೆಗಳಲ್ಲಿ ಒಂದು ತಮಿಳುನಾಡಿನಲ್ಲಿ ನಡೆದಿರುವುದು. 1854ರಲ್ಲಿ ಅಧಿಕಾರಿಗಳು ಕಂದಾಯ ವಸೂಲಿ ವೇಳೆ ಚಿತ್ರಹಿಂಸೆ ನೀಡಿದ ಬಗ್ಗೆ ಮಾರ್ಕ್ಸ್ ಬರೆದಿದ್ದು, ಶೀಘ್ರದಲ್ಲೇ ಬ್ರಿಟಿಷ್ ಪತ್ರಿಕೆಗಳು ಅದನ್ನು ಪ್ರಕಟಿಸಿದ್ದವು. ಟೈಮ್ಸ್, ಪಂಚ್ ಈ ಬಗ್ಗೆ ವಿಡಂಬನಾತ್ಮಕ ಲೇಖನವನ್ನು ಪ್ರಕಟಿಸಿತು. ಈ ವೇಳೆ ಕೋರ್ಟ್ ತಕ್ಷಣವೇ ಮದ್ರಾಸ್ ಸರ್ಕಾರಕ್ಕೆ ವಿಚಾರಣೆ ನಡೆಸಿ ಪೂರ್ಣ ವರದಿ ನೀಡುವಂತೆ ನಿರ್ದೇಶಿಸಿತ್ತು. Torture Commission ಎಂದು ಕರೆಯಲ್ಪಡುವ ಈ ಸಂಸ್ಥೆಯು 1855ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.
ಇದನ್ನು ಓದಿದ್ದೀರಾ? ಬಾಬಾಸಾಹೇಬರ ಸಂಧ್ಯಾರಾಗ; ಕೊನೆಯ ರಾತ್ರಿಯ ಕಾಯಕ
1857ರ ಸೆಪ್ಟೆಂಬರ್ 17ರಂದು ಕಾರ್ಲ್ ಮಾರ್ಕ್ಸ್ ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್‌ನಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯರ ಮೇಲೆ ನಡೆಯುವ ಚಿತ್ರಹಿಂಸೆಯ ಬಗ್ಗೆ ಒಂದು ಲೇಖನವನ್ನು ಬರೆದಿದ್ದಾರೆ. Torture Commissionನ ವರದಿಯಲ್ಲಿದ್ದ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದರು. ತಮಿಳುನಾಡಿನ ಕೊಲೆರೂನ್ (ಕೊಲ್ಲಿಡಮ್) ನದಿಯ ಮೇಲೆ ರೈಲ್ವೆ ಸೇತುವೆಯ ನಿರ್ಮಾಣದ ಬಗ್ಗೆಯೂ ಬರೆದವರು ಮಾರ್ಕ್ಸ್. ಕೊಲೆರೂನ್‌ನ ಬ್ರಾಹ್ಮಣನೊಬ್ಬ ಕೊಲೆರೂನ್ ಸೇತುವೆಯ ಕೆಲಸವನ್ನು ಮುಂದುವರಿಸಲು ತಹಶೀಲ್ದಾರ್ ಹಲಗೆಗಳು, ಇದ್ದಿಲು, ಉರುವಲು ಇತ್ಯಾದಿಗಳನ್ನು ಉಚಿತವಾಗಿ ಕೇಳಿದ್ದಾರೆ, ನಿರಾಕರಿಸಿದಾಗ ಬಂಧಿಸಿದ್ದಾರೆ ಎಂದು ದೂರಿದ್ದರು. ಭಾರತದಲ್ಲಿ ಚಿತ್ರಹಿಂಸೆ ಎಂಬುದು ಬ್ರಿಟಿಷ್ ಆಳ್ವಿಕೆಯ ದಿನನಿತ್ಯದ ಅಭ್ಯಾಸವಾಗಿತ್ತು ಎಂದು ಮಾರ್ಕ್ಸ್ ಬರೆದಿದ್ದಾರೆ.
ಮದ್ರಾಸ್‌ನಲ್ಲಿ ಬ್ರಿಟಿಷರು ಪರಿಚಯಿಸಿದ ರಿಯೋಟ್ವಾರಿ ವ್ಯವಸ್ಥೆ ಎಂಬ ಭೂಕಂದಾಯ ವ್ಯವಸ್ಥೆ ಬಗ್ಗೆಯೂ ಮಾರ್ಕ್ಸ್ ಬರೆದಿದ್ದಾರೆ. ಸರ್ಕಾರವು ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರೊಂದಿಗೆ (ರೈಯೋಟ್) ಕಂದಾಯ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಮಾರ್ಕ್ಸ್ ಇದನ್ನು ಕಾರ್ಮಿಕರ ಮೇಲಿನ ಶೋಷಣೆಯನ್ನು ಇನ್ನಷ್ಟು ತೀವ್ರಗೊಳಿಸುವ, ಆತ್ಮೀಯ ಒತ್ತಡವನ್ನು ಹೆಚ್ಚಿಸುವ ವ್ಯವಸ್ಥೆ ಎಂದು ವಿಮರ್ಶಿಸಿದ್ದಾರೆ. ಕಾರ್ಮಿಕರು ತಮ್ಮನ್ನು ತಾವೇ ಒತ್ತಡಕ್ಕೆ ನೂಕಿ ಹೆಚ್ಚು ಶ್ರಮಿಸುವಂತಾಗುತ್ತದೆ, ಆದರೆ ನಿಜವಾದ ಲಾಭ ಉಲ್ಲವರಿಗೆ ಸೇರುತ್ತದೆ ಎಂದು ಮಾರ್ಕ್ಸ್ ಹೇಳಿದ್ದರು.
ತಮಿಳುನಾಡಿನ ಕುರಿತಾದ ಕಾರ್ಲ್ ಮಾರ್ಕ್ಸ್ ಅವರ ಬರಹಗಳು ಇತಿಹಾಸ, ಅರ್ಥಶಾಸ್ತ್ರ, ಸಂಸ್ಕೃತಿ ಮತ್ತು ರಾಜಕೀಯವನ್ನು ವ್ಯಾಪಿಸಿವೆ. ವರು ತಮಿಳು ಭಾಷೆಯ ಪ್ರಾಚೀನತೆ ಮತ್ತು ತಮಿಳು ಸಾಮ್ರಾಜ್ಯಗಳ ಮಹತ್ವವನ್ನು ಒಪ್ಪಿಕೊಂಡವರು. ಆದ್ದರಿಂದ, ತಮಿಳುನಾಡಿನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವುದರಲ್ಲಿ ತಪ್ಪು ಕಾಣದು ಎಂಬುದು ತಮಿಳುನಾಡಿನ ಕಮ್ಯೂನಿಸ್ಟ್ ನಾಯಕರ ಮಾತು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




