ಬಿಹಾರದಲ್ಲಿ ಈಗಾಗಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ನಡೆದಿದ್ದು ಸುಮಾರು 65 ಲಕ್ಷ ಮಂದಿಯ ಹೆಸರನ್ನು ಪಟ್ಟಿಯಿಂದ ಅಳಿಸಲಾಗಿದೆ. ಈಗ ಹನ್ನೆರಡು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂನಲ್ಲಿ ಮಾತ್ರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗುತ್ತಿಲ್ಲ. ಭಾರತದ ಚುನಾವಣಾ ಆಯೋಗದ (ECI) ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಮೃಣಾಲ್ ಕುಮಾರ್ ಚೌಧರಿ ಅವರು ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನು ಓದಿದ್ದೀರಾ? ಬದುಕುವ ಹಕ್ಕು ಎಲ್ಲರಿಗೂ ಇದೆ: ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ತಪರಾಕಿ
“ಚುನಾವಣಾ ಆಯೋಗವು ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ ಮತ್ತು ಪುದುಚೇರಿಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸುತ್ತಿದೆ. ಆದರೆ ಅಸ್ಸಾಂನಲ್ಲಿ ಮಾತ್ರ ಬರೀ ಮತದಾರರ ಪಟ್ಟಿ ಪರಿಷ್ಕರಣೆ ನಿರ್ದೇಶಿಸಲಾಗಿದೆ. ಈ ಮೂಲಕ ಚುನಾವಣಾ ಆಯೋಗ ತಾರತಮ್ಯದ ರೀತಿಯಲ್ಲಿ ವರ್ತಿಸಿದೆ” ಎಂದು ಅರ್ಜಿ ಹೇಳಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ ಎಸ್‌ಐಆರ್‌ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ದೇಶಾದ್ಯಂತ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗುವುದು ಎಂದು ಪ್ರಮಾಣವಚನದಲ್ಲಿ ಹೇಳಿತ್ತು. ಆದರೆ ಇದೀಗ ತನ್ನದೇ ಆದ ನಿಲುವಿನ ವಿರುದ್ಧವಾಗಿದೆ ಎಂದು ಅರ್ಜಿ ಉಲ್ಲೇಖಿಸಿದೆ.
ಇನ್ನು ಈ ಅರ್ಜಿಯು ಅಸ್ಸಾಂನ ಮಾಜಿ ಗವರ್ನರ್ ಲೆಫ್ಟಿನೆಂಟ್ ಜನರಲ್ ಎಸ್‌ಕೆ ಸಿನ್ಹಾ ಅವರ ವರದಿ ಮತ್ತು ಅಂದಿನ ಕೇಂದ್ರ ಗೃಹ ಸಚಿವ ಇಂದ್ರಜಿತ್ ಗುಪ್ತಾ ಅವರ ಹೇಳಿಕೆಗಳನ್ನೂ ಉಲ್ಲೇಖಿಸಿದೆ. 1997ರ ಹಿಂದೆಯೇ ಅಸ್ಸಾಂನಲ್ಲಿ 40 ರಿಂದ 50 ಲಕ್ಷ ಅಕ್ರಮ ವಲಸಿಗರು ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಯಾಕೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಎಂದು ಪ್ರಶ್ನಿಸಲಾಗಿದೆ.
ಇದನ್ನು ಓದಿದ್ದೀರಾ? ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ: ಸೆಕ್ಷನ್ 6A ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಲಕ್ಷಾಂತರ ಅಕ್ರಮ ವಲಸಿಗರು ಪ್ರಸ್ತುತ ಅಸ್ಸಾಂನಲ್ಲಿ ವಾಸಿಸುತ್ತಿದ್ದಾರೆ. ಅವರ ಹೆಸರುಗಳನ್ನು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆ ನಡೆಸದಿದ್ದರೆ, ಈ ವ್ಯಕ್ತಿಗಳು ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮತದಾನದ ಹಕ್ಕನ್ನು ಪಡೆದುಕೊಳ್ಳುತ್ತಾರೆ. ಇದು ರಾಜ್ಯದ ಸಾಮಾಜಿಕ-ರಾಜಕೀಯ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇನ್ನು ಅರ್ಜಿದಾರರು ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆ ನಡೆಸುವ ಇಸಿಐ ನಿರ್ಧಾರವನ್ನು ರದ್ದುಗೊಳಿಸುವಂತೆ ಮತ್ತು ಇತರ ರಾಜ್ಯಗಳಂತೆ ಎಸ್‌ಐಆರ್ ನಡೆಸಲು ನಿರ್ದೇಶನವನ್ನು ಕೋರಿದ್ದಾರೆ. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಆಧಾರ್ ಅನ್ನು ಮಾನ್ಯ ದಾಖಲೆಯಾಗಿ ಪರಿಗಣಿಸಬಾರದು ಎಂದು ನಿರ್ದೇಶಿಸುವಂತೆಯೂ ಅರ್ಜಿದಾರರು ಕೋರಿದ್ದಾರೆ.





