ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಯಾಕೆ ಇಡಿ ನೋಟಿಸ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷಕ್ಕೆ ಯಾಕೆ ನೋಟಿಸ್ ಕೊಡಲಾಗಿದೆ. ಕೇಜ್ರಿವಾಲ್ ಮೇಲೆ ಯಾವ ಆರೋಪವಿಲ್ಲ. ಕೆಲವು ವಿಟ್ನೆಸ್ ಬಳಸಿಕೊಂಡು ಅರೆಸ್ಟ್ ಮಾಡಲಾಗಿದೆ” ಎಂದು ಕಿಡಿಕಾರಿದರು.
“350 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿರುವ ಶೋಭಾ ಕರಂದ್ಲಾಜೆ ಮೇಲೆ 48 ಕೋಟಿ ಹಣ ವರ್ಗಾವಣೆ ಆರೋಪ ಇದೆ. ಇದು 2010ರಲ್ಲಿ ನಡೆದಿರುವ ಹಗರಣ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಶೋಭಾ ಮೇಲೆ 24 ಗಂಭೀರ ಆರೋಪಗಳು ಇವೆ. ಇಷ್ಟಿದ್ದರೂ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿದ್ದಾರೆ. ಹೇಗೆ ಅವರನ್ನು ಮಂತ್ರಿ ಮಾಡಲಾಗಿದೆ?” ಎಂದು ರಮೇಶ್ ಬಾಬು ಪ್ರಶ್ನಿಸಿದರು.
“ಕಳಂಕಿತರನ್ನ ಸಂಪುಟದಲ್ಲಿ ಮುಂದುವರೆಸಬಾರದು. ಪ್ರತಿಪಕ್ಷಗಳಲ್ಲಿದ್ದರೆ ತಕ್ಷಣ ಬಂಧಿಸ್ತೀರಾ? ಬಿಜೆಪಿ ನಾಯಕರಿಗೆ ಮಾತ್ರ ಯಾವುದೂ ಇಲ್ಲ. ಶೋಭಾ ಕರಂದ್ಲಾಜೆ ಮೇಲೆ 10 ವರ್ಷ ಕೇಸ್ ಇದೆ. ಅವರಿಂದ 70 ಲಕ್ಷ ಹಣ ಸೀಝ್ ಮಾಡಿದ್ದಾರೆ. ಇಷ್ಟಾದ್ರೂ ಯಾಕೆ ಬಂಧಿಸಿಲ್ಲ. ನಮಗೆ ಇಡಿ ಮೇಲೆ ಅನುಮಾನವಿದೆ” ಎಂದರು.
“ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು. ಕೂಡಲೇ ಸಂಪುಟದಿಂದ ಅವರನ್ನ ಕೈಬಿಡಬೇಕು. ಸುಪ್ರೀಂ ಜಡ್ಜ್ ಮೆಂಟ್‌ನಲ್ಲಿ ಹಲವು ದಾಖಲೆ ಇವೆ. ಗುರುತರ ಆರೋಪ ಮುಚ್ಚಿಡುವಂತಿಲ್ಲ. ಆದರೆ ಇವರು ಆರೋಪ ಮುಚ್ಚಿಟ್ಟಿದ್ದಾರೆ. ಈಗ ಮತ್ತೆ ಶೋಭಾ ಅವರನ್ನು ಬೆಂಗಳೂರು ಉತ್ತರಕ್ಕೆ ನಿಲ್ಲಿಸಲಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಪ್ರೊ.ರಾಜೀವ್ ಗೌಡ ಮಾತನಾಡಿ, “ಉಡುಪಿ ಚಿಕ್ಕಮಗಳೂರು ಸಂಸದೆಯಾಗಿದ್ದರು. ಈಗ ಬೆಂಗಳೂರು ಉತ್ತರಕ್ಕೆ ಬಂದಿದ್ದಾರೆ. ಇಡಿ ಪ್ರಕರಣದಲ್ಲಿ 24ನೇ ಆರೋಪಿ ಅವರಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಇವರ ಮೇಲೆ ಕ್ರಮ ಜರುಗಿಸಬೇಕು. ದೇಶದ ಕಾನೂನು ಎಲ್ಲಿಗೆ ಹೋಗಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಧಾನಿ ನಾ ಕಾವೂಂಗಾ ಕಾನೇದೂಂಗಾ ಅಂತಾರೆ. ಅಕ್ರಮ ಹಣ ವರ್ಗಾವಣೆ ಆರೋಪ ಇದ್ರೂ ಯಾಕೆ ಕ್ರಮವಿಲ್ಲ? ಡಿಕೆಶಿಗೆ ಪದೇ ಪದೇ ನೋಟಿಸ್ ಕೊಟ್ಟಿದ್ದರು. ತಿಹಾರ್ ಜೈಲಿಗೂ ಕಳಿಸಲಾಗಿತ್ತು. ಜಾರ್ಖಂಡ್ ಸಿಎಂ, ದೆಹಲಿ ಸಿಎಂ ಅನ್ನು ಜೈಲಿಗೆ ಹಾಕಿದ್ದಾರೆ. ಬಿಜೆಪಿ ನಾಯಕರಿಗೆ ಒಂದು ಕಾನೂನು. ಇತರರಿಗೆ ಇನ್ನೊಂದು ಕಾನೂನಾ?” ಎಂದು ಕಿಡಿಕಾರಿದರು.





