ಆರ್‌ಎಸ್‌ಎಸ್, ಬಿಜೆಪಿ ಮೊದಲಾದ ಸಂಘಪರಿವಾರ ಮತ್ತು ಎಡಪಂಥೀಯ (ಕಮ್ಯುನಿಸ್ಟ್/ಮಾರ್ಕ್ಸ್‌ವಾದಿ) ವಿಚಾರಧಾರೆಗಳ ನಡುವಿನ ಸಂಘರ್ಷವು ನಿನ್ನೆ ಮೊನ್ನೆಯದಲ್ಲ. ಈ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಇವೆರಡೂ ಪರಸ್ಪರ ವಿರುದ್ಧ ಧ್ರುವಗಳಂತೆ. ಬಿಜೆಪಿಯದ್ದು ಇತರೆ ಧರ್ಮಗಳ ವಿರುದ್ಧ ಎತ್ತಿಕಟ್ಟುತ್ತಾ ರಾಜಕೀಯ. ಎಡಪಂಥೀಯರದ್ದು ವರ್ಗ ಸಂಘರ್ಷ.
“2026ರ ಮಾರ್ಚ್ 31ರ ವೇಳೆಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸಲಾಗುವುದು” – ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ. 2025ರ ಫೆಬ್ರವರಿ 9ರಂದು ಛತ್ತೀಸ್‌ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳು 31 ಮಾವೋವಾದಿ ನಾಯಕರುಗಳ ಹತ್ಯೆ ಮಾಡಿತ್ತು. ಅಂದಿನಿಂದ ಅಮಿತ್ ಶಾ ವಿವಿಧ ಸಂದರ್ಭಗಳಲ್ಲಿ ದೇಶವನ್ನು ‘ನಕ್ಸಲ್ ಮುಕ್ತ’ಗೊಳಿಸುವುದಾಗಿ ಪುನರುಚ್ಚರಿಸುತ್ತಾ ಬಂದಿದ್ದಾರೆ. ಭಾರತವನ್ನು ‘ಕಡು ಬಡತನ ಮುಕ್ತ’ ದೇಶವನ್ನಾಗಿಸುವತ್ತ ಕೇಂದ್ರ ಸರ್ಕಾರ ಗಮನಹರಿಸುವ ಗೋಜಿಗೆ ಬೀಳದೆ ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳ ನಾಶಕ್ಕಾಗಿ ಪಣತೊಟ್ಟಿದೆ. ಮಾವೋವಾದಿಗಳ ಮನವೊಲಿಸಿ ಮುಖ್ಯವಾಹಿನಿಗೆ ತರುವ ಬದಲಾಗಿ, ಕಂಡಲ್ಲಿ ಗುಂಡಿಟ್ಟು ಕೊಂದೇ ನಾಶ ಸಾಧ್ಯ ಎಂಬ ತರ್ಕಕ್ಕೆ ಇಳಿದಿದೆ.
ಇಲ್ಲಿ ನಾವು ನಕ್ಸಲರ ಹಿಂಸಾಚಾರ ಮಾರ್ಗವನ್ನು ಒಪ್ಪಲಾಗದು. ಮಾವೋವಾದ ಸಿದ್ಧಾಂತ ಜನಪರ, ಆದರೆ ಹೋರಾಟದ ಮಾರ್ಗ ಸರಿಯಿದೆಯೇ ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ಹಿಂಸಾತ್ಮಕ ಮಾರ್ಗವನ್ನು ವಿರೋಧಿಸುತ್ತಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮಾವೋವಾದಿ ನಾಯಕರು ಮುಖ್ಯವಾಹಿನಿಗೆ ಬರಬೇಕೆಂದು ಶ್ರಮಿಸಿದರು. ಆದರೆ ಮಾವೋವಾದಿಗಳನ್ನು ಹತ್ತಿಕ್ಕುವ ನೆಪದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವುದೇನು? ಹಲವು ವರದಿಗಳು ಹೇಳುವಂತೆ, ಭದ್ರತಾ ಪಡೆಗಳು ನಕ್ಸಲರೆಂದು ಭಾವಿಸಿ ಹಲವು ಸಾಮಾನ್ಯ ನಾಗರಿಕರನ್ನು ಗುಂಡಿಕ್ಕಿ ಕೊಂದಿದೆ. ಹಿಂಸೆಯನ್ನು ಒಪ್ಪಲಾಗದು ಎಂದು ಹೇಳಿ ಹಿಂಸೆಯನ್ನೇ ಮಾರ್ಗವನ್ನಾಗಿಸಿದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ | ಮುಖ್ಯವಾಹಿನಿಗೆ ಬಂದ 208 ಮಾವೋವಾದಿ ನಾಯಕರು
2000ರಿಂದ 2025ರವರೆಗಿನ ಅವಧಿಯಲ್ಲಿ ಒಟ್ಟು 5,052 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. 7,311 ಮಾವೋವಾದಿಗಳನ್ನು ಬಂಧಿಸಲಾಗಿದೆ. ಕೇಂದ್ರದಿಂದ ಹತ್ಯೆಗೆ ಒಳಗಾಗುವುದಕ್ಕಿಂತ ಜೀವಂತವಾಗಿದ್ದು, ಅನ್ಯಾಯದ ವಿರುದ್ದ ತಮ್ಮ ಹೋರಾಟವನ್ನು ಮುಂದುವರೆಸುವುದೇ ಉತ್ತಮವೆಂದು ನಿರ್ಧರಿಸಿ 5,571 ಮಂದಿ ಮಾವೋವಾದಿ ನಾಯಕರು ಮುಖ್ಯವಾಹಿನಿಗೆ ಬಂದಿದ್ದಾರೆ. ಈ ಮೂಲಕ ನಕ್ಸಲರನ್ನೇ ನಾವು ನಾಶ ಮಾಡಿದ್ದೇವೆ ಎಂಬುದು ಮೋದಿ ಸರ್ಕಾರದ ವಾದ.
ಭಾರತದಲ್ಲಿ ಮಾವೋವಾದ ಅಳಿಯಿತೇ?
ಆದರೆ ನೈಜವಾಗಿಯೂ ಕೇಂದ್ರದ ಈ ಹಿಂಸಾತ್ಮಕ ಮಾರ್ಗದಿಂದಾಗಿ ಭಾರತದಲ್ಲಿ ಮಾವೋವಾದ ಸಂಪೂರ್ಣವಾಗಿ ಅಳಿದಿದೆಯೇ? ಈ ಪ್ರಶ್ನೆಗೆ ಉತ್ತರ ಸರಳವಲ್ಲ. ಇನ್ನೂ ಸಶಸ್ತ್ರ ಗುಂಪುಗಳು ಅಸ್ತಿತ್ವದಲ್ಲಿದೆ. 2010ರ ವೇಳೆಗೆ ಸುಮಾರು 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಕ್ಸಲ್ ಪ್ರಭಾವವಿತ್ತು. ಆದರೆ ಇಂದು ಕೇವಲ 70-80 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಅದರಲ್ಲಿಯೂ ಕೇವಲ 25 ಜಿಲ್ಲೆಗಳಲ್ಲಿ ಮಾತ್ರ ‘ಅತ್ಯಂತ ಪ್ರಭಾವ’ ಇದೆ ಎಂದು ಗುರುತಿಸಲಾಗಿದೆ. ಈ ರೀತಿಯಾಗಿ ಅಂಕಿಅಂಶಗಳ ಪ್ರಕಾರ ಪ್ರದೇಶವಾರು ಮಾವೋವಾದಿಗಳ ಪ್ರಭಾವ ಕುಗ್ಗಿದ್ದರೂ, ಸೈದ್ಧಾಂತಿಕವಾಗಿ ನಾಶವಾಗಿಲ್ಲ, ಯಾವುದೇ ಸಿದ್ಧಾಂತವನ್ನು ನಾಶಪಡಿಸಲೂ ಸಾಧ್ಯವಿಲ್ಲ. ಸಿಪಿಐ (ಮಾವೋವಾದಿ) ವಕ್ತಾರ ಮತ್ತು ಪಾಲಿಟ್‌ಬ್ಯೂರೋ ಸದಸ್ಯ, ಬರಹಗಾರ, ವಿಚಾರವಾದಿ, ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ ಮಾವೋವಾದಿ ನಾಯಕ ಮಲ್ಲೋಜುಲ ವೇಣುಗೋಪಾಲ್ ರಾವ್ ಅಲಿಯಾಸ್ ಭೂಪತಿ ಹೇಳುವಂತೆ, ಮಾವೋವಾದಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆಯೇ ಹೊರತು ಸಿದ್ಧಾಂತವನ್ನಲ್ಲ.
ಅಷ್ಟಕ್ಕೂ ಮಾವೋವಾದಿಗಳ ಪ್ರಭಾವ ಕಡಿಮೆಯಾಗಲು ಅಮಿತ್ ಶಾ ಹೇಳುವಂತೆ ಮೋದಿ ಸರ್ಕಾರದ ಕ್ರಮಗಳಷ್ಟೇ ಕಾರಣವಲ್ಲ. ನಾವು ಈ ಸಂದರ್ಭದಲ್ಲಿ ಮಾವೋವಾದಿ ಹೋರಾಟ ಆರಂಭ, ನಕ್ಸಲರ ಹುಟ್ಟು, ಅಂದಿಗೂ ಇಂದಿಗೂ ಇರುವ ನಾಯಕತ್ವದ ಬಗ್ಗೆಯೂ ಗಮನಹರಿಸಿದರೆ ಸಂಪೂರ್ಣ ಚಿತ್ರಣ ಲಭಿಸಬಲ್ಲದು.
‘ನಕ್ಸಲ್’ ಎಂಬ ಪದವು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ‘ನಕ್ಸಲ್ಬರಿ’ಯಿಂದಾಗಿ ಬಂದಿರುವುದು. ಈ ಗ್ರಾಮವು 1967ರಲ್ಲಿ ನಡೆದ ಒಂದು ಸಶಸ್ತ್ರ ರೈತ ದಂಗೆಯ ಕೇಂದ್ರಬಿಂದುವಾಗಿತ್ತು. 1960ರ ದಶಕದಲ್ಲಿ ಭಾರತದ ಗ್ರಾಮೀಣ ಭಾಗಗಳಲ್ಲಿ ಭೂಮಾಲೀಕರು ಮತ್ತು ಬಡ ಗೇಣಿದಾರರ ನಡುವೆ ತೀವ್ರ ಸಂಘರ್ಷ ಉಂಟಾಗಿತ್ತು. ಸ್ಥಳೀಯ ಬುಡಕಟ್ಟು ರೈತರು ತಮಗೆ ಸೇರಬೇಕಾದ ಭೂಮಿಯ ಹಕ್ಕಿಗಾಗಿ ಧ್ವನಿ ಎತ್ತಿ ಹೋರಾಡಿದ್ದರು. 1967ರ ಮೇ 25ರಂದು ನಕ್ಸಲ್ಬರಿ ಗ್ರಾಮದಲ್ಲಿ ಭೂಮಿಗಾಗಿ ನಡೆದ ಹೋರಾಟವು ಹಿಂಸಾತ್ಮಕ ರೂಪ ತಾಳಿತ್ತು. ಪೊಲೀಸ್ ಗುಂಡಿನ ದಾಳಿಯಲ್ಲಿ ಒಂಬತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಹಲವರು ಸಾವನ್ನಪ್ಪಿದ್ದರು. ಇದು ದೇಶವ್ಯಾಪಿ ದೊಡ್ಡ ಆಂದೋಲನಕ್ಕೆ ಕಿಚ್ಚು ಹಚ್ಚಿತು. ನಕ್ಸಲ್ಬರಿ ಗ್ರಾಮದಲ್ಲಿ ಆರಂಭವಾದ ಕಾರಣ ನಕ್ಸಲೀಯ ಹೋರಾಟವಾಗಿ ಬದಲಾಯಿತು.

ಮಾವೋವಾದ ಅಥವಾ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋ ತ್ಸೆ ತುಂಗ್ ಅವರ ಸಿದ್ಧಾಂತದಿಂದ ಪ್ರೇರಿತವಾದ ಈ ಚಳುವಳಿಯ ಸೈದ್ಧಾಂತಿಕ ಪಿತಾಮಹ ಎಂದು ಕರೆಯಲಾಗುವ ಚಾರು ಮಜುಂದಾರ್. ಇವರ ‘ಎಂಟು ದಾಖಲೆಗಳು’ (Eight Documents) ನಕ್ಸಲೀಯ ಸಿದ್ಧಾಂತದ ಆಧಾರಸ್ತಂಭಗಳಾದವು. ಕಾನು ಸನ್ಯಾಲ್ ಎಂಬ ನಾಯಕರು ಮೈದಾನದಲ್ಲಿ ರೈತರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ನಾಯಕರುಗಳು ‘ಸಶಸ್ತ್ರ ಕ್ರಾಂತಿ’ಯ ಮೂಲಕವೇ ಅಧಿಕಾರ ಹಿಡಿಯಲು ಮತ್ತು ಸಾಮಾಜಿಕ ಬದಲಾವಣೆ ತರಲು ಸಾಧ್ಯ ಎಂದು ನಂಬಿದ್ದರು. ನಿಧಾನವಾಗಿ ಈ ಹೋರಾಟ ದೇಶದಾದ್ಯಂತ ಹರಡಿತು. ಅಲ್ಲಲ್ಲಿ ಚದುರಿದ ಗುಂಪುಗಳು ಕಾಣಿಸಿಕೊಂಡಿತು. ಇದೀಗ ನಕ್ಸಲೀಯ’ ಎಂಬ ಪದವು ಕೇವಲ ಒಂದು ಗ್ರಾಮದ ಹೆಸರಾಗಿ ಉಳಿದಿಲ್ಲ. ಬದಲಾಗಿ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತ, ಬಂಡಾಯ ಮತ್ತು ಸಶಸ್ತ್ರ ಹೋರಾಟದ ಸಂಕೇತವಾಗಿದೆ.
ಇದನ್ನು ಓದಿದ್ದೀರಾ? ಮುಖ್ಯವಾಹಿನಿಗೆ ನಕ್ಸಲರು | ನಿರುದ್ಯೋಗ, ಮಹಿಳಾ ದೌರ್ಜನ್ಯ ತಡೆ; 18 ಹಕ್ಕೊತ್ತಾಯಗಳ ಪತ್ರ ಬರೆದ ಮಾವೋವಾದಿ ಹೋರಾಟಗಾರರು!
ಹೀಗೆ ಆರಂಭಗೊಂಡ ಸಶಸ್ತ್ರ ಹೋರಾಟಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಹಿಂಸಾ ಮಾರ್ಗ ಬಿಟ್ಟು ಅಹಿಂಸೆಯ ಹೋರಾಟದ ಮಾರ್ಗ ಹಿಡಿಯುವುದು ಒಳಿತು ಎಂಬ ಅಭಿಪ್ರಾಯ ಇತರೆ ಎಡಪಂಥೀಯ ವಿಚಾರಧಾರೆಯ ಹೋರಾಟಗಾರರದ್ದು. ಹೀಗೆ ಹೋರಾಟದ ಹಾದಿಯಲ್ಲಿ ಹಲವು ನಾಯಕರುಗಳನ್ನು ಮಾವೋವಾದಿಗಳು ಕಳೆದುಕೊಂಡರು. ಈ ಚಳವಳಿಯ ಮೊದಲ ತಲೆಮಾರಿನ ನಾಯಕರುಗಳಾದ ಗಣಪತಿ, ಕಿಸನ್‌ಜಿ ಮೊದಲಾದವರು ವಯೋಸಹಜ ಕಾಯಿಲೆ, ಬಂಧನ ಅಥವಾ ಎನ್‌ಕೌಂಟರ್‌ನಲ್ಲಿ ಮೃತರಾಗಿದ್ದಾರೆ. ಸದ್ಯ ಹೊಸ ತಲೆಮಾರಿನ ನಾಯಕತ್ವಕ್ಕೆ ಮೊದಲಿನಷ್ಟು ಸೈದ್ಧಾಂತಿಕ ಸ್ಪಷ್ಟತೆಯಿಲ್ಲದಿರುವುದೂ ಮಾವೋವಾದಿಗಳ ಪ್ರಭಾವ ಕೊಂಚ ಕಡಿಮೆಯಾಗಲು ಕಾರಣ. ಜತೆಗೆ ಈ ಹಿಂಸೆ ಮಾರ್ಗ ಬಿಟ್ಟು ಮುಖ್ಯವಾಹಿನಿಯಲ್ಲಿ ಹೋರಾಟ ನಡೆಸುವ ಕಿಚ್ಚು ಹಲವು ನಾಯಕರುಗಳಲ್ಲಿ ಹುಟ್ಟಿಕೊಂಡಿದೆ.
ಅಷ್ಟಕ್ಕೂ ಕಮ್ಯೂನಿಸ್ಟ್ ವಿಚಾರಧಾರೆಗೆ ಸಂಘಪರಿವಾರ ಭಯಪಡುವುದೇಕೆ?
ಇವೆಲ್ಲವುದನ್ನು ನಾವು ಗ್ರಹಿಸಿದ ಬಳಿಕ ಹುಟ್ಟುವ ಪ್ರಶ್ನೆ ಕಮ್ಯೂನಿಸ್ಟ್ ವಿಚಾರಧಾರೆಗೆ ಸಂಘಪರಿವಾರ ಭಯಪಡುವುದೇಕೆ ಎಂಬುದು. ಇಲ್ಲಿ ಭಯ ಮಾತ್ರವಲ್ಲ ದ್ವೇಷವೂ ಇದೆ. ಆರ್‌ಎಸ್‌ಎಸ್, ಬಿಜೆಪಿ ಮೊದಲಾದ ಸಂಘಪರಿವಾರ ಮತ್ತು ಎಡಪಂಥೀಯ (ಕಮ್ಯುನಿಸ್ಟ್/ಮಾರ್ಕ್ಸ್‌ವಾದಿ) ವಿಚಾರಧಾರೆಗಳ ನಡುವಿನ ಸಂಘರ್ಷವು ನಿನ್ನೆ ಮೊನ್ನೆಯದಲ್ಲ. ಈ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಇವೆರಡೂ ಪರಸ್ಪರ ವಿರುದ್ಧ ಧ್ರುವಗಳಂತೆ. ಸಂಘಪರಿವಾರ ಧರ್ಮದ ಆಧಾರದಲ್ಲಿ ಜನರನ್ನು ಸಂಘಟಿಸಿ, ಇತರೆ ಧರ್ಮಗಳ ವಿರುದ್ಧ ಎತ್ತಿಕಟ್ಟುತ್ತಾ ರಾಜಕೀಯ ನಡೆಸಿದರೆ, ಎಡಪಂಥೀಯರದ್ದು ವರ್ಗ ಸಂಘರ್ಷ. ಸಮಾಜವು ‘ಶೋಷಕ’ (ಶ್ರೀಮಂತ) ಮತ್ತು ‘ಶೋಷಿತ’ (ಬಡವ) ಎಂಬ ಎರಡು ವರ್ಗಗಳ ನಡುವಿನ ಹೋರಾಟ. ಸಮಾನತೆಯೇ ಎಡಪಂಥೀಯರ ಪ್ರಾಮುಖ್ಯತೆ.
ಸಂಘ ಪರಿವಾರದ ರಾಜಕಾರಣವು ‘ಹಿಂದೂ ಒಗ್ಗಟ್ಟು’ ಅಥವಾ ಕೋಮು ವಿಭಜನೆಯ ಮೇಲೆಯೇ ನಿಂತಿದೆ. ಧಾರ್ಮಿಕ ಧ್ರುವೀಕರಣದಿಂದಲೇ ಸಂಘಪರಿವಾರದ ರಾಜಕೀಯ ವಿಸ್ತರಿಸುತ್ತಿದೆ, ಅಧಿಕಾರ ಉಳಿಯುತ್ತಿದೆ. ಹೀಗಿರುವಾಗ ಕಮ್ಯೂನಿಸ್ಟ್ ಸಿದ್ಧಾಂತದೆಡೆಗೆ ಜನರು ವಾಲಿದರೆ ಹಿಂದೂ-ಮುಸ್ಲಿಂ ಎಂಬ ಕಚ್ಚಾಟವನ್ನು ಬಿಟ್ಟು ನಾವು ಕಾರ್ಮಿಕರು, ರೈತರು, ದುಡಿಯುವ ವರ್ಗ ಎಂದು ಒಂದಾಗುತ್ತಾರೆ. ಇದರಿಂದಾಗಿ ನಮ್ಮ ರಾಜಕೀಯದಾಟ ನಡೆಯದು ಎಂಬುದು ಸಂಘಪರಿವಾರದ ಆತಂಕ. ಅದಕ್ಕಾಗಿಯೇ ನಿರಂತರವಾಗಿ ಎಡ ವಿಚಾರಧಾರೆ ಹರಡದಂತೆ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲ ಕಾರ್ಯವನ್ನು ಮಾಡುತ್ತಿದೆ. ಆ ಕ್ರಮಗಳಲ್ಲಿ ದೇಶದ್ರೋಹ ಆರೋಪದಲ್ಲಿ ಬಂಧನ ಮಾಡುವುದೂ ಒಂದು.
ಇನ್ನು ಕಮ್ಯುನಿಸ್ಟ್ ಸಿದ್ಧಾಂತವು ‘ವೈಜ್ಞಾನಿಕ ಸಮಾಜವಾದ’ದ ಮೇಲೆ ನಿಂತಿದೆ. ಇದು ಪ್ರತಿಯೊಂದನ್ನೂ ತರ್ಕ ಮತ್ತು ಪುರಾವೆಗಳ ಆಧಾರದಲ್ಲಿ ಪ್ರಶ್ನಿಸುತ್ತದೆ. ಜೆಎನ್‌ಯುನಂತಹ ವಿಶ್ವವಿದ್ಯಾಲಯಗಳಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಸಂಘ ಪರಿವಾರದ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯನ್ನು ತರ್ಕಬದ್ಧವಾಗಿ ವಿರೋಧಿಸುತ್ತದೆ. ಅದರಿಂದಾಗಿಯೇ ಸಂಘ ಪರಿವಾರಕ್ಕೆ ಈ ವಿಚಾರಧಾರೆ ದೊಡ್ಡ ತಲೆನೋವಾಗಿದೆ. ಜತೆಗೆ ಬಿಜೆಪಿಗೆ ಕೋಮುದ್ವೇಷವೇ ಮತಬ್ಯಾಂಕ್. ಕೇರಳದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಭಾವ ಭಾರತದ ಉಳಿದ ರಾಜ್ಯಗಳಿಗಿಂತ ಕಡಿಮೆ ಇರಲು ಅಲ್ಲಿನ ಪ್ರಬಲ ಎಡಪಂಥೀಯ ಬೇರುಗಳೇ ಕಾರಣ. ಈ ಬೇರುಗಳು ದೇಶಾದ್ಯಂತ ಹರಡಿದರೆ ಬಿಜೆಪಿಗೆ ಸಂಚಕಾರ. ಬಿಜೆಪಿಯ ಮತ ಬ್ಯಾಂಕ್ ಕೋಟೆಯನ್ನೇ ಒಡೆದುಹಾಕಿದರೆ ಬಿಜೆಪಿ ಉಳಿಯುವುದು ಹೇಗೆ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




