ತನ್ನ ಎಲ್ಲ ಸಂಸದರಿಗೂ ಕಾಂಗ್ರೆಸ್ ವಿಪ್ ಜಾರಿ ಮಾಡಿದೆ. ಬುಧವಾರದಿಂದ ಮೂರು ದಿನ ಸಂಸತ್ತಿನಲ್ಲಿ ಕಲಾಪಗಳಲ್ಲಿ ಕಡ್ಡಾಯ ಹಾಜರಿರಬೇಕು ಎಂದು ಸೂಚಿಸಿದೆ.
ಕೇಂದ್ರ ಸರ್ಕಾರವು ಮನಗೇರಾವನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸುವ ಮತ್ತು ಯೋಜನೆಯಲ್ಲಿ ಹಲವು ಜನವಿರೋಧಿ ಬದಲಾವಣೆಗಳನ್ನು ತರುವ ಮಸೂದೆ, ಭಾರತದ ನಾಗರಿಕ ಪರಮಾಣು ವಲಯ ನಿಯಂತ್ರಿಸುವ ಕಾನೂನುಗಳನ್ನು ಪರಿಶೀಲಿಸುವ ಹೊಸ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಗಳ ವಿರುದ್ಧ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟವಾಗಿ ಸಂಸತ್ತಿನಲ್ಲಿ ಮಂಡಿಸಿ, ತೀವ್ರ ವಿರೋಧ ವ್ಯಕ್ತಪಡಿಸಲು ಮುಂದಾಗಿದೆ. ಆದ್ದರಿಂದ, ತನ್ನ ಸಂಸದರು ಕಡ್ಡಾಯವಾಗಿ ಮುಂದಿನ ಮೂರು ದಿನ ಸದನದಲ್ಲಿ ಇರಬೇಕೆಂದು ವಿಪ್ ಜಾರಿಮಾಡಿದೆ.
ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಮತ್ತು ಪ್ರಗತಿ (ಶಾಂತಿ) ಮಸೂದೆ ರೂಪಿಸಿರುವ ಸರ್ಕಾರ, ನಾಗರಿಕ ಪರಮಾಣು ಶಕ್ತಿ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆಯು ಪರಮಾಣು ಶಕ್ತಿ ಕಾಯ್ದೆ-1962 ಮತ್ತು ಪರಮಾಣು ಹಾನಿಯ ನಾಗರಿಕ ಹೊಣೆಗಾರಿಕೆ ಕಾಯ್ದೆ-2010 ಅನ್ನು ರದ್ದುಗೊಳಿಸುತ್ತದೆ. ಮಸೂದೆಯು ಬುಧವಾರ ಚರ್ಚೆಗೆ ಬರಲಿದೆ.
ಅಂತೆಯೇ, ಮನರೇಗಾ ಯೋಜನೆಯನ್ನು ‘ವಿಕಸಿತ್ ಭಾರತ್ ರೋಜ್ ಗಾರ್ ಆ್ಯಂಡ್ ಅಜೀವಿಕಾ ಮಿಷನ್- ಗ್ರಾಮೀಣ ಯೋಜನೆ (ವಿಬಿ ಜಿ ರಾಮ್ ಜಿ) ಎಂದು ಬದಲಿಸಿ, ಯೋಜನೆಗೆ ನಾನಾ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಈ ಬದಲಾವಣೆಗಳು ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ ಹೇರುವುದರ ಜೊತೆಗೆ, ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತದೆ.
ಈ ಎರಡೂ ಮಸೂದೆಗಳ ವಿರುದ್ಧ ಸದನದಲ್ಲಿ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.




