ಆರ್‌ಎಸ್‌ಎಸ್ ಇಲ್ಲದೇ ಇದ್ದರೆ ಬಿಜೆಪಿ ಶೂನ್ಯ. ಆರ್‌ಎಸ್‌ಎಸ್‌ನಿಂದಲೇ ಬಿಜೆಪಿ ಬದುಕಿದೆ. ಆರ್‌ಎಸ್‌ಎಸ್ ಅಲ್ಲದೆ, ಬೇರಾವುದೇ ಅಸ್ತ್ರ ಬಿಜೆಪಿ ಬಳಿ ಇಲ್ಲ. ಬಿಜೆಪಿಯಲ್ಲಿ 20% ಜನರನ್ನು ಬಿಟ್ಟರೆ, ಉಳಿದವರೆಲ್ಲರೂ ಭ್ರಷ್ಟರು-ಕಲುಷಿತರೆ. ಬಿಜೆಪಿ ಇತರ ಎಲ್ಲ ಪಕ್ಷಗಳಿಂದ ಜನರನ್ನು ಕರೆದೊಯ್ದು, ಸೇರಿಸಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಟನಲ್ ರಸ್ತೆ ಯೋಜನೆ ಬಗ್ಗೆ ಬಿಜೆಪಿ ನಾಯಕರು ಟೀಕೆ ಬಿಟ್ಟು ಸಲಹೆಗಳನ್ನು ಕೊಡಬೇಕು. ಈ ಯೋಜನೆ ನನ್ನ ಆಸ್ತಿಯಲ್ಲ. ಸಾರ್ವಜನಿಕರಿಗಾಗಿ ಮಾಡುತ್ತಿರುವ ಯೋಜನೆ. ಯಾವುದೇ ಪರಿಹಾರ ಹೇಳದೆ ಟೀಕೆ ಮಾಡಿದರೆ ಏನು ಪ್ರಯೋಜನ” ಎಂದಿದ್ದಾರೆ.
“ಮೆಟ್ರೋ ಮಾರ್ಗ ಹೋಗುವುದು ಟನಲ್ ಮೂಲಕವೇ ಅಲ್ಲವೇ? ಈ ಯೋಜನೆ ತಂದವರು ಯಾರು? ಎಸ್.ಎಂ.ಕೃಷ್ಣ ಕಾಲದಲ್ಲಿ ಹತ್ತು ದೇಶಗಳನ್ನು ತಿರುಗಿ ಅಧ್ಯಯನ ಮಾಡಿ, ವರದಿ ಕೊಟ್ಟಿದೆ. ಆ ವರದಿ ಮೂಲಕ ಯೋಜನೆ ಆರಂಭವಾಯಿತು” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಜೆಮಿಮಾ ರಾಡ್ರಿಗ್ಸ್ | ಭಾರತದ ಹೆಮ್ಮೆ; ಕಣ್ಣೀರಿನೊಳಗೆ ಕಂಗೊಳಿಸಿದ ಗೆಲುವು
“ತೇಜಸ್ವಿ ಸೂರ್ಯ ಮತ್ತು ಬಿಜೆಪಿ ನಾಯಕರು ಕಾರಲ್ಲಿ ಓಡಾಡುವುದು ಬಿಟ್ಟು ಮೆಟ್ರೋ, ಸಾರ್ವಜನಿಕ ಸಾರಿಗೆ ಬಳಸಲಿ. ಇವರ ನಾಟಕಗಳನ್ನು ಕೇಳುವವರು ಯಾರು? ಆತನಿಗೆ ಮದುವೆಗೆ ಮುಂಚಿತವಾಗಿ ಹೊಸ ಕಾರು ಏಕೆ ಬೇಕಿತ್ತು? ಕಾರಲ್ಲಿ ಓಡಾಡುವುದು ಪ್ರತಿಷ್ಠೆಯೇ? ಸಾಮಾಜಿಕ ಅನಿವಾರ್ಯತೆ ಅವನಿಗೆ ಎದುರಾಯಿತೇ? ರೈಲು, ಮೆಟ್ರೋದಲ್ಲಿ ಓಡಾಡಲು ಬೇಡ ಎಂದವರಾರು” ಎಂದಿದ್ದಾರೆ.
“ನಾನು ಎಲ್ಲ ರೀತಿಯ ಅಧ್ಯಯನ ನಡೆಸಿದ್ದೇನೆ. ಲಾಲ್ ಬಾಗ್ ಹಾಳು ಮಾಡಲು ನಾನೇನು ಮೂರ್ಖನಲ್ಲ. ಇದರ ಇತಿಹಾಸವೂ ನನಗೆ ಗೊತ್ತಿದೆ. ಉದ್ಯಾನದಲ್ಲಿ ಎಷ್ಟು ಭಾಗ ಉಪಯೋಗವಾಗುತ್ತಿದೆ, ಉಪಯೋಗವಾಗುತ್ತಿಲ್ಲ ಎಂಬುದು ನನಗೆ ಗೊತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡರೂ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಾರೆ” ಎಂದು ಕಿಡಿಕಾರಿದ್ದಾರೆ.




