ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದೆ. ಇದೇ ಸಮಯದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಹೊಂಚಿಕೊಂಡಿದ್ದಾರೆ. ಅವರ ಸಂದೇಶವು ನಡೆಯುತ್ತಿರುವ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ತಮ್ಮ ಚಿತ್ರವನ್ನು ಒಳಗೊಂಡಿರುವ ಇಂಗ್ಲಿಷ್ ಪೋಸ್ಟರ್‌ಅನ್ನು ಡಿ.ಕೆ ಶಿವಕುಮಾರ್ ಹಂಚಿಕೊಂಡಿದ್ದಾರೆ. ಅದರಲ್ಲಿ; “ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕು” ಎಂದು ಬರೆಯಲಾಗಿದೆ. ಜೊತೆಗೆ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಕನ್ನಡದಲ್ಲಿ ಬರೆದಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! pic.twitter.com/klregNRUtv
— DK Shivakumar (@DKShivakumar) November 27, 2025
ಇತ್ತೀಚೆಗಷ್ಟೇ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಡಿ.ಕೆ ಶಿವಕುಮಾರ್ ಜೊತೆ ಮಾತನಾಡಿದ್ದು, ‘ಪ್ಲೀಸ್ ವೇಯ್ಟ್’ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ತಮ್ಮ ಮತ್ತು ರಾಹುಲ್ ಗಾಂಧಿ ನಡುವಿನ ಮಾತುಕತೆಯ ಗುಟ್ಟು ಬಿಟ್ಟುಕೊಡದ ಶಿವಕುಮಾರ್, “ನಮ್ಮ ನಡುವಿನ ಮಾತುಕತೆ ಏನು ಎಂಬುದು ಮಾಧ್ಯಮದಲ್ಲಿ ಮಾತನಾಡುವ ವಿಚಾರವಲ್ಲ. ಮಾತುಕತೆಯ ಸಾರವನ್ನು ಹೇಳುವ ಅವಶ್ಯಕತೆಯೂ ಇಲ್ಲ” ಎಂದು ಹೇಳಿದ್ದಾರೆ.
ಮುಂದುವರೆದು, “ನಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಸ್ಥಾನಗಳಲ್ಲಿಯೂ ಕಾಂಗ್ರೆಸ್‌ಅನ್ನು ಗೆಲ್ಲಿಸುವುದು. ದೇಶದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡುವುದು” ಎಂದಿದ್ದಾರೆ.
ಸದ್ಯಕ್ಕೆ, ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದರೂ, ಈಗ ಅಂತಹ ಬದಲಾವಣೆಗಳು ನಡೆಯುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಆದಾಗ್ಯೂ, ಸಚಿವ ಸಂಪುಟ ಪುನರ್‌ರಚನೆ ಆಗಲಿದೆ ಎಂಬುದು ವಿಶ್ವಾಸಾರ್ಹ ಮೂಲಗಳಿಂದ ಈದಿನ.ಕಾಮ್‌ಗೆ ಮಾಹಿತಿ ದೊರೆತಿದೆ.




