ಸ್ಥಳೀಯ ಚುನಾವಣೆಗಳ ಪ್ರಚಾರದ ವೇಳೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮತದಾರರಿಗೆ ಬೆದರಿಕೆ ಹಾಕಿದ್ದು, ‘ತಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮಾತ್ರ ನಿಧಿ ಬಿಡುಗಡೆ ಮಾಡುವುದಾಗಿ’ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಗರ ಪಾಲಿಕೆ ಮತ್ತು ನಗರ ಪಂಚಾಯತಿ ಚುನಾವಣೆಗಳು ಡಿಸೆಂಬರ್ 2ರಂದು ನಡೆಯಲಿವೆ. ಚುನಾವಣೆಗಳ ಹಿನ್ನೆಲೆ ಮಾಲೆಗಾಂವ್ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಹಣಕಾಸು ಸಚಿವ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಚಾರ ನಡೆಸಿದ್ದಾರೆ. ತಮ್ಮ ಎನ್‌ಸಿಪಿ (ಅಜಿತ್ ಬಣ)ದ 18 ಅಭ್ಯರ್ಥಿಗಳು ಮಾಲೆಗಾಂವ್ ಪಂಚಾಯತಿಯಲ್ಲಿ ಸ್ಪರ್ಧಿಸಿದ್ದು, ಅವರು ಗೆಲುವು ಸಾಧಿಸಿದರೆ ಮಾತ್ರವೇ, ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದಾಗಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ.
“ಕೇಂದ್ರ ಮತ್ತು ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಇಬ್ಬರು ಉಪಮುಖ್ಯಮಂತ್ರಿಗಳು ಒಟ್ಟಾಗಿ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಈ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ, ಮಾಲೆಗಾಂವ್ ಅಭಿವೃದ್ಧಿ ಹೊಂದಲು ಸಾಧ್ಯ” ಎಂದು ಹೇಳಿದ್ದಾರೆ.
“ನೀವು ಎಲ್ಲ 18 ಎನ್‌ಸಿಪಿ (ಅಜಿತ್ ಬಣ) ಅಭ್ಯರ್ಥಿಗಳನ್ನು ಗೆಲ್ಲಿಸಿದರೆ, ಯೋಜನೆಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ. ಆದರೆ ನೀವು ನನ್ನ ಅಭ್ಯರ್ಥಿಗಳನ್ನು ‘ಕಡಿತ’ (ಸೋಲಿಸಿದರೆ) ಮಾಡಿದರೆ, ನಾನು (ನಿಧಿಗಳನ್ನು) ‘ಕಡಿತ’ ಮಾಡುತ್ತೇನೆ. ನಿಮಗೆ ಮತ ಚಲಾಯಿಸುವ ಅಧಿಕಾರವಿದೆ. ನನಗೆ ಹಣ ಬಿಡುಗಡೆ ಮಾಡುವ ಅಧಿಕಾರವಿದೆ. ಈಗ ನೀವು ಏನು ಮಾಡಬೇಕೆಂದು ನಿರ್ಧರಿಸಿ” ಎಂದು ಬಹಿರಂಗ ಬೆದರಿಕೆವೊಡ್ಡಿದ್ದಾರೆ.
ವಿರೋಧ ಪಕ್ಷಗಳ ‘ಎಂವಿಎ’ ಮೈತ್ರಿಕೂಟವು ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸಿದೆ. ಚುನಾವಣಾ ಆಯೋಗವು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಪ್ರಶ್ನಿಸಿದೆ. “ಯೋಜನೆಗಳಿಗೆ ಹಣವನ್ನು ಸಾಮಾನ್ಯ ಜನರು ಪಾವತಿಸುವ ತೆರಿಗೆಯಿಂದ ಬಿಡುಗಡೆ ಮಾಡಲಾಗುತ್ತದೆಯೇ ಹೊರತು, ಅಜಿತ್ ಪವಾರ್ ಅವರ ತಮ್ಮ ಮನೆಯಿಂದಲ್ಲ. ಪವಾರ್ ಅವರಂತಹ ನಾಯಕರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದರೆ, ಚುನಾವಣಾ ಆಯೋಗ ಏನು ಮಾಡುತ್ತಿದೆ?” ಶಿವಸೇನೆ (ಉದ್ಧವ್ ಬಣ) ನಾಯಕ ಅಂಬಾದಾಸ್ ದಾನ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.




