(ಮುಂದುವರಿದ ಭಾಗ..) ವಿರೋಧಿಯನ್ನು ಕಲ್ಪಿಸಿಕೊಳ್ಳದ ಅಸ್ತಿತ್ವ ಇರಲು ಸಾಧ್ಯವಿಲ್ಲ. ಅದರಲ್ಲೂ ಗುಲಾಮಗಿರಿಯ ಮೊದಲ ಪಾಠವೇ ತನ್ನ ಎನಿಮಿಯನ್ನು ಗುರುತಿಸಿಕೊಳ್ಳುವುದು, ಅದರ ಬಗ್ಗೆ ಎಚ್ಚರದಿಂದ ಇರುವುದು, ಪ್ರತಿರೋಧಕ್ಕೆ ತಂತ್ರವನ್ನು ರೂಪಿಸಿಕೊಳ್ಳುವುದು ಹಾಗೂ ಅದಕ್ಕಾಗಿ ನಿರಂತರ ಶ್ರಮವಹಿಸುವುದು. ನಂತರವೇ ಉತ್ತಮ ಫಲಿತಾಂಶ. ಇದನ್ನು ಡಿ.ಆರ್. ನಾಗರಾಜ ಅವರು ‘ಬಯಲು-ಬಿಲʼ ಪರಿಕಲ್ಪನೆಯನ್ನಾಗಿ ರೂಪಿಸುತ್ತಾರೆ. ಅವರು ಭಾರತೀಯ ಸ್ತ್ರೀವಾದವನ್ನು ಕುರಿತು ಬರೆಯುತ್ತಾ ಮುಖ್ಯವಾಗಿ ಮಹಾಶ್ವೇತಾದೇವಿಯವರ ‘ಸ್ತನದಾಯಿನಿʼ, ವೈದೇಹಿಯವರ ‘ಅಕ್ಕುʼ ಮುಂತಾದ ಬರಹಗಳನ್ನು ಚರ್ಚಿಸುತ್ತಾ ‘ಹುಲಿ ಇಲಿಗೆ ಸೋತ ಕಥೆʼಯನ್ನು ನಿರೂಪಿಸುವ ಸಂಕೇತಗಳಾಗಿ ‘ಬಯಲು ಬಿಲʼ ಪರಿಕಲ್ಪನೆಗಳನ್ನು ಚರ್ಚೆ ಮಾಡುತ್ತಾರೆ. ಹುಲಿಯ ಬಾಯಿಂದ ತಪ್ಪಿಸಿಕೊಂಡ ಇಲಿ ತನ್ನ ಉಳಿವಿಗಾಗಿ ನಿರಂತರವಾಗಿ ಬಿಲಕೊರೆದು ತನ್ನ ಜೀವವನ್ನು ಉಳಿಸಿಕೊಳ್ಳಲು, ಹುಲಿ ತನ್ನನ್ನು ಹಿಡಿಯಲಾರದೆ ತನ್ನ ಒಂದೊಂದೇ ಅಂಗಾಂಗಗಳನ್ನು ಕಳೆದುಕೊಳ್ಳುವ ಸ್ಥಿತಿಯನ್ನು ಇಲಿ ನಿರ್ಮಾಣ ಮಾಡುವ ಒಂದು ಜನಪದ ಕಥೆಯ ವ್ಯಾಖ್ಯಾನ ಇದಾಗಿದೆ. ಶತ್ರುವನ್ನು ಮಣಿಸಿದ ಈ ಕಥೆಯಲ್ಲಿ ಇಲಿಯ ಮೂಲಕ ಹುಲಿಯನ್ನು ಎದುರಿಸುವ ಮನುಷ್ಯ ಕೂಡ ಇದ್ದಾನೆ.
ಈಗ ಮತ್ತೆ ಹಿಂದಿನ ಚರ್ಚೆಗೆ ಬರೋಣ. ವೈಚಾರಿಕತೆಯನ್ನು ಗ್ರಹಿಸದೆ ಅಥವಾ ಸಿದ್ಧಾಂತವನ್ನು ಗ್ರಹಿಸದೆ ಸೃಜನಶೀಲತೆ ಸಾಧ್ಯವಾಗದು. ಹೇಳಿದ ಕೇಳಿದ ಕಥೆಯ ಒಳಗೂ ಒಂದು ಜೀವನ ಪ್ರಣಾಳಿಕೆ ಇದ್ದಿರಬಹುದು. ಆದರೆ, ಜೀವನವನ್ನು ಪ್ರತಿನಿಧಿಸುವ ಮ್ಯಾನಿಫೆಸ್ಟೋ ಒಂದು ಪೂರ್ವಭಾವಿಯಾಗಿದ್ದರೆ ವಿಷಯದ ಪೂರ್ವಗ್ರಹದಿಂದ ಹೊರಬರಲು ಸಾಧ್ಯವಿದೆ. ಕೆಲವರು ಸಿದ್ಧಾಂತದ ಹಂಗು ತೊರೆದವರಂತೆ ಪೋಜು ಕೊಡಬಹುದು. ಅವರೊಳಗೂ ಒಂದು ಹಿಡನ್ ಸಿದ್ಧಾಂತ ಇದ್ದೇ ಇರುತ್ತದೆ. ಸಿದ್ಧಾಂತವೆಂದರೆ ಪಾಶ್ಚಾತ್ಯರದ್ದು, ಅದು ಅಪಾಯಕಾರಿಯಾದದ್ದು, ಅದು ಮಾರ್ಕ್ಸ್‌ವಾದವೇ ಆಗಿದೆ ಎಂದು ತಿಳಿಯುವುದೂ ಶುದ್ಧ ಪೂರ್ವಗ್ರಹಿಕೆ. ಪಾಶ್ಚಾತ್ಯದ ಎಲ್ಲದೂ ಬೇಕು ಆದರೆ, ಚಿಂತನೆ ಬೇಡ ಎಂಬ ಎಡಬಿಡಂಗಿತನವೂ ನಮ್ಮ ಅನೇಕ ಬರಹಗಾರರಲ್ಲಿ, ಚಿಂತಕರಲಿ ಇರುವುದನ್ನು ಕಾಣಬಹುದು. ಆದ್ದರಿಂದಲೇ ಸೈದ್ಧಾಂತಿಕ ವಿಷಯ ಮಂಡನೆ ಮಾಡುವವರನ್ನು ಪಾಶ್ಚಾತ್ಯ ಚಿಂತಕಿಯರು ಹೀಗೆ ಹೇಳುತ್ತಾರೆ ಎಂದ ತಕ್ಷಣವೇ ಮೂಗು ಮುರಿಯುವವರೇ ಅಧಿಕವಾಗಿದ್ದಾರೆ. ಯಾರೂ ಕೂಡ ಸಿದ್ಧಾಂತಾಧಾರಿತ ಸೃಜನಶೀಲ ಕೃತಿಯನ್ನು ನಿರ್ಮಾಣ ಮಾಡಲಾರರಾದರೂ ಸಿದ್ಧಾಂತವನ್ನೇ ತಿಳಿಯದೆ ಹೊಸದನ್ನು ಸೃಜಿಸಲು ಸಾಧ್ಯವೇ ಇಲ್ಲ. ಚಿಂತನೆಯ ಚಾರಿತ್ರಿಕ ವಿಧಾನವೇ ಸೈದ್ಧಾಂತಿಕತೆ. ಅದೊಂದು ಪ್ರಣಾಳಿ, ಅದೊಂದು ಚಿಂತನೆಯ ಸಾರಸಂಗ್ರಹವಾಗಿರುತ್ತದೆ. ಅದರ ಆಧಾರದ ಮೇಲೆ ಬದುಕನ್ನು ಕಟ್ಟಿಕೊಳ್ಳಲು ತೊಡಗಿದವರ ಚಿಂತನ ರೂಪವಾಗಿರುತ್ತದೆ.
ಪುರುಷರು ಸ್ತ್ರೀ ಅನುಭವಗಳನ್ನು ಚಿತ್ರಿಸುವುದು ಎರಡನೇ ಕೈ ಅನುಭವ. ಸ್ತ್ರೀ ತನ್ನ ಬಗ್ಗೆ ತಾನೇ ಬರೆದುಕೊಂಡ ಬಗೆ, ಅನಾವರಣ ಮಾಡಿದ ಬದುಕಿನ ಕಠೋರ ಅನುಭವಗಳು, ಹೆಣ್ಣನ್ನು ಹೆಚ್ಚು ಎಚ್ಚರದಿಂದಿರುವಂತೆ ಮಾಡಿತು. ಸಾಮಾನ್ಯವಾಗಿ ಗುಲಾಮಗಿರಿಯು ಮನುಷ್ಯನನ್ನು ಹೆಚ್ಚು ಎಚ್ಚರದಿಂದ ಇರುವಂತೆ ಮಾಡಿರುತ್ತದೆ. ಗಂಡು ಹೆಣ್ಣಿನ ತಾರತಮ್ಯವನ್ನು ತೊಡೆದು ಹಾಕುವುದು ಯಾವಾಗ? ಇದು ದಿನ ಬೆಳಗಾಗುವುದರಲ್ಲಿ ಆಗುವ ಕೆಲಸವಲ್ಲ. ಸಾಮಾಜಿಕ ಸಂರಚನೆಯೊಳಗೆ ಕಡ್ಡಾಯವಾಗಿ ಬದಲಾಗಬೇಕಾಗಿರುವ ನಿಧಾನಗತಿಯ ಒಂದು ಸಾಮಾಜಿಕ ಪರಿವರ್ತನೆ ಆಗಿರುತ್ತದೆ. ಗಂಡಿನ ಪೂರ್ವಗ್ರಹಿಕೆಗಳು ಇದನ್ನು ಆಗದಂತೆ ನೋಡಿಕೊಳ್ಳುವ ಪ್ರಯತ್ನ ಕೂಡ ಪರ್ಯಾಯವಾಗಿ ನಡೆಯಬಹುದು. ಆದ್ದರಿಂದ ಸಾಮಾಜಿಕ ಸಂರಚನೆಯ ಬದಲಾವಣೆಯ ಸಣ್ಣ ಸಣ್ಣ ತುಣುಕುಗಳೇ ಮಹಿಳಾ ಅಭಿವ್ಯಕ್ತಿಯ ವಿಭಿನ್ನ ನೆಲೆಗಳಾಗಿರುತ್ತವೆ. ದು. ಸರಸ್ವತಿಯವರ ‘ಸಣ್ತಿಮ್ಮಿ ರಾಮಾಯಣʼ ಅಂಥ ಒಂದು ಭಿನ್ನ ಪ್ರಯತ್ನವಾಗಿದೆ. ಪ್ರೀತಿಯ ಸ್ಥಳೀಯತೆಯನ್ನು ಅಲ್ಲಿ ಕಾಣುತ್ತಾ ಹೋಗುತ್ತೇವೆ. ಭಾಷೆ ಮತ್ತು ಭಾವದ ಭಿನ್ನ ಅಭಿವ್ಯಕ್ತಿಯಾಗಿರುವ ಆ ನಾಟಕವು ಪ್ರಧಾನವಾಗಿ ಸ್ತ್ರೀ ನಿರೂಪಣೆಯಲ್ಲಿ ಹೆಚ್ಚು ಯಶಸ್ಸು ಕಂಡ ರಂಗಭೂಮಿಯ ಪ್ರಯೋಗ. ಮಂಟೇಸ್ವಾಮಿ ಮಹಾಕಾವ್ಯದ ‘ಕಲ್ಯಾಣ ಪಟ್ಟಣದ ಸಾಲು’ ಭಾಗವನ್ನು ನಿರ್ದಿಗಂತ ತಂಡ(ಪ್ರಕಾಶ್ ರಾಜ್ ಅವರ ತಂಡ)ವು ಪ್ರದರ್ಶಿಸಿದೆ. ಇದು (ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ) ಸ್ತ್ರೀ ಪ್ರಧಾನ ಅಭಿವ್ಯಕ್ತಿಯಲ್ಲಿ ಅತಿ ಯಶಸ್ಸು ಪಡೆದುದಾಗಿದೆ. ಮೂಲತಃ ಪುರುಷ ಪ್ರಧಾನ ಅಭಿವ್ಯಕ್ತಿಯಾದ ಮಂಟೇಸ್ವಾಮಿ ಕಾವ್ಯದ ಪ್ರಸ್ತುತಿಯನ್ನು ಹೆಣ್ಣು ಪ್ರಸ್ತುತಿ ಮಾಡಿದ ರೀತಿಯು ಬೇರೆಯದೇ ರೀತಿಯಲ್ಲಿತ್ತು. ಗಂಡಸರೇ ಹಾಡುತ್ತಿದ್ದರೂ ಆಂತರ್ಯದಲ್ಲಿ ಎಂಥ ಹೆಣ್ತನವನ್ನು ಆ ಮಹಾ ಕಾವ್ಯ ಇಟ್ಟುಕೊಂಡಿದೆ ಎಂಬುದು ಅರ್ಥವಾಗತೊಡಗಿತು.

ಇದನ್ನೂ ಓದಿರಿ: ‘ಟ್ರಾನ್ಸ್ ಸಮುದಾಯ’; ಗ್ರಹಿಕೆಯ ತೊಡಕುಗಳೇನು? (ಭಾಗ-1)
ಹೊಸ ತಲೆಮಾರಿನ ರಂಗನಿರ್ದೇಶಕಿಯರು ಮತ್ತು ನಟಿಯರು ಅಭಿವ್ಯಕ್ತಿಸುತ್ತಿರುವ ನರೆಟಿವ್‌ಗಳು ಭಿನ್ನ ಅನುಭವವನ್ನು ರಂಗಭೂಮಿಯಲ್ಲಿ ನೀಡುತ್ತಿವೆ. ನೃತ್ಯ, ಸಂಗೀತ, ಅಭಿನಯ ಮುಂತಾದ ಲಲಿತ ಕಲೆಗಳಲ್ಲಿ ಸ್ತ್ರೀ ತನ್ನ ಭಿನ್ನಲೋಕವನ್ನು ಅನಾವರಣ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಸಾಹಿತ್ಯ ಕೃತಿಯೊಂದನ್ನು ನಾಟ್ಯ ಮಾಡಿದಾಗ, ಉದಾಹರಣೆಗೆ ಪಂಪನ ‘ನೀಲಾಂಜನೇಯ ನೃತ್ಯʼ ಪಂಪನನ್ನು ಮರು ಸೃಜಿಸುವ ಕೆಲಸ, ಆ ನೃತ್ಯದಿಂದ ಸಾಧ್ಯ. ನಾಟ್ಯದ ಚರಿತ್ರೆಯೇ ಕನ್ನಡ ನಾಡಿನ ಶಿಲ್ಪ ವೈಭವ. ವಿವಿಧ ಭಾವ-ಭಂಗಿಗಳ ರೂಪಕವಾಗಿರುವ ಶಿಲ್ಪ ಭಿನ್ನ ಅಭಿವ್ಯಕ್ತಿಯ ನೆಲೆಯದಾಗಿರುತ್ತದೆ. ಸಾಹಿತ್ಯದ ಆಲಾಪ ಸಂಗೀತದಲ್ಲಿ ಬೆಳೆಯುತ್ತದೆ. ಶೇರ್ಗಿಲ್ಲಳ ಚಿತ್ರಗಳು ಬೇರೊಂದು ಸ್ತ್ರೀ ಜಗತ್ತನ್ನು ಅನಾವರಣಗೊಳಿಸುತ್ತವೆ.
ಕಮಲಾದೇವಿ ಚಟ್ಟೋಪಾಧ್ಯಾಯರಿಂದ ಆರಂಭವಾದ ಎನ್‌ಎಸ್‌ಡಿ (ರಾಷ್ಟ್ರೀಯ ನಾಟಕ ಶಾಲೆ)ಯಿಂದ ಕಲಿತು ಬಂದ ಅಸಂಖ್ಯಾತ ನಟಿ ಮತ್ತು ನಿರ್ದೇಶಕಿಯರು ಸ್ತ್ರೀ ಅಭಿವ್ಯಕ್ತಿಯನ್ನು ಭಿನ್ನವಾಗಿ ಪ್ರಸ್ತುತ ಪಡಿಸುವ ಮೂಲಕ ಕೇವಲ ಓದುಪಠ್ಯ ಆಗಿದ್ದ ಕೃತಿಗಳಿಗೆ ನೋಡುಪಠ್ಯದ ಸ್ವರೂಪವನ್ನು ನೀಡಿ ಜೀವಂತಗೊಳಿಸಿದ್ದಾರೆ. ಅಲ್ಲದೆ ಗಂಡಸೇ ಅಭಿನಯಿಸುತ್ತಿದ್ದ ಸ್ತ್ರೀ ಪಾತ್ರದ ಮನರಂಜನೆ ಮಾಯವಾಗಿ, ಸ್ತ್ರೀ ತನ್ನ ಪಾತ್ರ ತಾನೇ ಮಾಡುವ ಮೂಲಕ ಒಂದು ಹೊಸ ಮನೋಜ್ಞತೆಯನ್ನು ನಟಿಯರು ತಮ್ಮ ಜೀವನದಲ್ಲಿ ಮಾಡುತ್ತಾ ಬಂದರು. ಸಾಹಿತ್ಯಮುಖೇನ ಭಿನ್ನ ಅಭಿವ್ಯಕ್ತಿಗಳ ಅನಾವರಣವು ಮತ್ತೆ ಹೊಸ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿರುವುದನ್ನು ಗಮನಿಸಬಹುದು.
ಮಹಾಶ್ವೇತಾದೇವಿಯವರ ‘ದೋಪ್ದಿ’ ನಾಟಕವಾದಾಗ ಅದರ ಸ್ವರೂಪ ಬೇರೆ. ಅದೇ ಕಥೆ ನೃತ್ಯವಾದಾಗ ಅದರ ಸ್ವರೂಪ ಬೇರೆ. ಆದರೆ, ಹೆಣ್ಣಿನ ಮೇಲಾದ ಗಂಡಿನ ದೌರ್ಜನ್ಯ ಮತ್ತು ಅದಕ್ಕೆ ಹೆಣ್ಣಿನ ಪ್ರತಿಭಟನೆ, ಅಸಹಾಯಕತೆ, ಗಂಡಸುತನಕ್ಕೆ ಮಾಡುವ ಪ್ರಶ್ನೆ, ನಮ್ಮ ಮನಸ್ಸಿನಲ್ಲಿ ಹೊಸ ಅರ್ಥಗಳ ಹುಡುಕಾಟಕ್ಕೆ ತೊಡಗಿಸುತ್ತವೆ. ಸ್ತ್ರೀ ಸಂರಚನೆಯು ಒಟ್ಟು ಸಮಾಜ ಸಂರಚನೆಯ ಭಾಗವಾಗಿರುವುದರಿಂದ ನಾವು ಹೆಣ್ಣುಪಠ್ಯಗಳನ್ನು ಓದಲು ಮಾನದಂಡಗಳು ಬೇರೆಯವೇ ಆಗಬೇಕಾಗಿವೆ. ಗಂಡುಪಠ್ಯಗಳ ಅರ್ಥದ ಮೂಲಕ ಅವನ್ನು ನೋಡಿದ ಅಪಾಯಗಳೇ ಹೆಚ್ಚಾಗಿವೆ. ಆದರೆ, ‘ಸಾರ್ವತ್ರಿಕದೆಡೆಗೆʼ (ಡಾ. ಬಿ ಎನ್ ಸುಮಿತ್ರಾಬಾಯಿ), ‘ಸ್ತ್ರೀಮತವನುತ್ತರಿಸಲಾಗದೆʼ (ಡಾ. ಎಂ.ಎಸ್. ಆಶಾದೇವಿ) ಎರಡು ತುದಿಗಳ ಎರಡು ಕೃತಿಗಳು ಎಂದಿಟ್ಟುಕೊಂಡಾಗ ಕನ್ನಡದಲ್ಲಿ ಸ್ತ್ರೀವಾದಿ ವಿಮರ್ಶೆ ವ್ಯಾಪಕವಾಗಿ ಬೆಳೆದಿರುವುದನ್ನು ಮನಗಾಣಬಹುದಾಗಿದೆ. ವಿಚಾರ ವಿಮರ್ಶೆ ಸಮೃದ್ಧವಾಗಿ ಬೆಳೆದಿರುವುದೇ ಹೊಸಹೊಸ ಸೃಜನಶೀಲತೆಗೆ ಕಾರಣವಾಗಿರುವುದನ್ನು ಮನಗಾಣಬಹುದು.

ಇದನ್ನೂ ಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಹುಟ್ಟು, ವಿಕಾಸವನ್ನು ಬಾಬಾಸಾಹೇಬರು ನೋಡಿದ್ದು ಹೇಗೆ?
‘ಸ್ತ್ರೀ ಎಂದರೆ ಅಷ್ಟೇ ಸಾಕೆʼ ಇಲ್ಲ ಸಾಕಾಗುವುದಿಲ್ಲ. ಸ್ತ್ರೀ ನಿರ್ವಚನಗಳು ಅಸಂಖ್ಯಾತವಾದವು. ಒಬ್ಬ ಬರಹಗಾರ ಅಥವಾ ಬರಹಗಾರ್ತಿ ಒಂದು ಸಾಹಿತ್ಯ ಪರಿಸರದಲ್ಲಿ ತನ್ನ ಪ್ರದೇಶ, ಭಾಷೆ, ಉಪಭಾಷೆ, ಕುಟುಂಬ ಮತ್ತು ತಾನು ಕೇಳಿಸಿಕೊಂಡ, ನೋಡಿದ ಬದುಕಿಗೆ, ಅಕ್ಷರ ರೂಪ ಕೊಡುವಲ್ಲಿ ಎಲ್ಲವೂ ಒಂದು ಹದವಾದ ಮಿದಿತವನ್ನು ಒಳಗೊಂಡಿರುತ್ತದೆ. ‘ಗಾಂಧಿ ಬಂದ’ದಂಥ ಕಾದಂಬರಿಯೂ ಉಂಟುಮಾಡಿದ ಪರಿಣಾಮ ಅಭೂತಪೂರ್ವವಾದದ್ದು. ಅದರ ಸಮೀಪ ಓದುಪಠ್ಯವಾಗಿದ್ದ ಆ ಕೃತಿಯನ್ನು ವಿವಾದ ಮಾಡಲಾಯಿತು. ರಂಗಕೃತಿಯಾಗಿಯೂ ಆ ಕೃತಿ ನೂರಾರು ಪ್ರಯೋಗಗಳನ್ನು ಕಂಡು ಸಾಹಿತ್ಯ- ರಂಗಭೂಮಿ ಎರಡರಲ್ಲೂ ಪ್ರಸಿದ್ಧವಾದ ಕೃತಿಯಾಯಿತು.
‘ಅವಳ ಕಥೆಗಳುʼ ಕೃತಿಯ ಅನುಭವಕ್ಕಿಂತ (ಸಂಪಾದಕರು: ಜಿ.ಎಸ್. ಅಮೂರ) `ಕರಾವಳಿಯ ಕಥೆಗಳುʼ (ಸಂಪಾದಕರು: ಸಬಿಹಾ ಭೂಮಿಗೌಡ) ಭಿನ್ನ ಅನುಭವಗಳನ್ನು ನೀಡುತ್ತದೆ. ಅವಳನ್ನು ಅವನನ್ನು ಏಕಕಾಲಕ್ಕೆ ಅರ್ಥಮಾಡಿಕೊಳ್ಳಬೇಕಾದ ನಮ್ಮ ಗ್ರಹಿಕೆಗಳು ಅನಂತವಾಗಿರಲೇಬೇಕು. ಒಬ್ಬ ಲಲಿತಾ ನಾಯಕ್ ಬರದಿದ್ದರೆ “ ….. ಟೋಕ್ಲ ಮಾಡಿದ್ದುʼ ಎಂಥ ಬಗೆ ಅಂತ ಗೊತ್ತಾಗುತ್ತಿರಲಿಲ್ಲ. ಹಬ್ಬ ಮಾಡಲಿಕ್ಕೆ ಬದುಕನ್ನೇ ಬಲಿಯನ್ನು ಕೊಡುವ ಬಗೆ ಗೊತ್ತಾಗುತ್ತಿರಲಿಲ್ಲ. ಸಾರಾ ‘ಚಪ್ಪಲಿಗಳು’ ಬರೆಯದಿದ್ದರೆ ಹೆಣ್ಣಿನ ಸ್ಥಿತಿಗೆ ತಂದೆಯ ಮನೋಧರ್ಮ ಗೊತ್ತಾಗುತ್ತಿರಲಿಲ್ಲ. ಅಲಕ್ಷಿತ ಸಮುದಾಯಗಳ ಹೆಣ್ಣುಮಕ್ಕಳು ಬರೆಯತೊಡಗಿದ ಮೇಲೆ ಆದ ವ್ಯಾಪಕತೆ ಅವರವರ ಬದುಕಿನ ನೆಲೆಗಳ ಪಠ್ಯಗಳನ್ನು ಕನ್ನಡಕ್ಕೆ ಧಾರೆ ಎರೆಯಲಾಯಿತು. ‘ಬದುಕು’ ಮೂಲಕ ಗೀತಾ ನಾಗಭೂಷಣ್ ಅವರು ಕಟ್ಟಿಕೊಟ್ಟ ವ್ಯಾಪಕ ಬದುಕಿನ ಕೋಟಲೆಗಳು ಗುಲ್ಬರ್ಗಾ ಜನಜೀವನಕ್ಕೆ ಹೊಸ ಕನ್ನಡಿಯನ್ನಿಡಿದವು. ಕರಾವಳಿ, ಮಲೆನಾಡು, ಹೈದರಾಬಾದ್ ಕರ್ನಾಟಕ ಎಲ್ಲಾ ಬಗೆಯ ಜೀವನದ ಕಷ್ಟಕೋಟಲೆಗಳನ್ನು ನಾವು ಸಾಹಿತ್ಯದಲ್ಲಿ ಮಾತ್ರ ಕಾಣಬಹುದಾಗಿದೆ. ಅದರಲ್ಲೂ ಸ್ತ್ರೀ ನಿರ್ವಚನಗಳ ಮೂಲಕ ಅಧೋಲೋಕದ ಅನುಭವಗಳು ಧುತ್ತನೇ ಮೇಲೆದ್ದು ಬಂದ ರೀತಿ ಅನನ್ಯವಾದದ್ದು. ಹಳ್ಳಿ-ಶಹರ ಎಲ್ಲ ಅನುಭವಗಳಿಗೂ ಹೆಣ್ಣುನೋಟದ ಕಥನಗಳು ವಿವಿಧ ಅಭಿವ್ಯಕ್ತಿಗೆ ಕಾರಣವಾಗಿವೆ. ಅವುಗಳ ಓದು ನಮ್ಮ ದೃಷ್ಟಿಕೋನಕ್ಕೆ ಹೊಸ ಗರಿ ಮೂಡಿಸುತ್ತದೆ.
ಕಳೆದ 50 ವರ್ಷಗಳಲ್ಲಿ ಆಮೂಲಾಗ್ರ ಜಾಗತಿಕ ಬದಲಾವಣೆಯ ಜೊತೆ ಹೆಜ್ಜೆ ಹಾಕುತ್ತಾ ಬಂದಿರುವ ಹೆಣ್ಣು, ವಿದ್ಯೆಯನ್ನು ತನ್ನ ಹೊಸ ಅಸ್ತ್ರವನ್ನಾಗಿಸಿಕೊಂಡದ್ದು ಮೊದಲ ಹೆಜ್ಜೆ. ಆ ಮುಖೇನ ತಾನು ಎಲ್ಲಾ ಕ್ಷೇತ್ರಗಳಿಗೂ ವ್ಯಾಪಕವಾಗಿ ಆವರಿಸಿಕೊಳ್ಳಲು ಸಾಧ್ಯವಾಯಿತು. ಅಕ್ಷರವೂ ಒಳಗೊಂಡಂತೆ ವಿವಿಧಾಭಿವ್ಯಕ್ತಿಗಳಲ್ಲಿ ತನ್ನನ್ನು ತಾನು ಭಿನ್ನ-ಭಿನ್ನವಾಗಿ ಅರ್ಥೈಸಿಕೊಳ್ಳತೊಡಗಿದ್ದು ಬಹು ವಿಶೇಷವಾದ ವಿಷಯವಾಗಿದೆ. ವಿದ್ಯೆ, ಔದ್ಯೋಗಿಕಕ್ಕಷ್ಟೇ ಸೀಮಿತವಾಗದ ಬದುಕು, ಹೊಸದನ್ನು ಸೃಷ್ಟಿಸಲು ಸಾಧ್ಯವಾಯಿತು. ಗಾಂಧಿ ಬಗ್ಗೆ ಅಪಾರ ಸಾಹಿತ್ಯವಿದ್ದರೂ ಕಸ್ತೂರಬಾ ಬಗ್ಗೆ ಒಂದು ನಾಟಕ ಬರಲು ಎಷ್ಟೋ ದಿನ ಕಾಯಬೇಕಾಯಿತು. ‘ಗಾಂಧಿ ವರ್ಸಸ್ ಗಾಂಧಿʼ 20 ವರ್ಷಗಳ ಹಿಂದೆ ಪ್ರಯೋಗವಾಗಿತ್ತು. ಕಸ್ತೂರ ಬಾ ಕುರಿತ ‘ನಾನು ಕಸ್ತೂರ್’ (ಡಾ. ಎಚ್.ಎಸ್. ಅನುಪಮಾ) ‘ತಾಯಿ ಕಸ್ತೂರ ಬಾʼ (ಕಾದಂಬರಿ ಮತ್ತು ಸಿನಿಮಾ ಬರಗೂರು ರಾಮಚಂದ್ರಪ್ಪ), ರಮಾಬಾಯಿ ಅಂಬೇಡ್ಕರ್ ಕುರಿತ ಅನೇಕ ಪುಸ್ತಕಗಳು, ಸಾವಿತ್ರಿಬಾಯಿ ಪುಲೆ ಕುರಿತ ಪುಸ್ತಕಗಳು, ನಾಟಕಗಳು ನಮ್ಮ ಸಮಾಜದ ಸಮಾನತೆ ಮತ್ತು ಆರೋಗ್ಯಕರವಾದ ಬದುಕನ್ನು ಪ್ರತಿನಿಧಿಸುತ್ತವೆ ಎಂದು ಗ್ರಹಿಸಬಹುದಾಗಿದೆ.
ಇದನ್ನೂ ಓದಿರಿ: 50 ವರ್ಷಗಳ ಸೃಜನಶೀಲ ಸಾಹಿತ್ಯ: ‘ಮಹಿಳಾ ಅಭಿವ್ಯಕ್ತಿ’ಯ ನೆಲೆಗಳೇನು? (ಭಾಗ-1)
ಸ್ತ್ರೀ ಅಭಿವ್ಯಕ್ತಿಯ ವೈವಿಧ್ಯತೆ ನಮ್ಮ ಸಾಹಿತ್ಯದಲ್ಲಿ ಸೃಷ್ಟಿ ಆಗದಿದ್ದರೆ ತೇಜಸ್ವಿಯವರ ‘ಅವನತಿ’ ಕಥೆಯಂತೆ ನಮ್ಮ ಸಾಹಿತ್ಯದ ಅವನತಿಯೇ ಆಗುತ್ತದೆ. ಸ್ತ್ರೀವಾದದ ಬಗ್ಗೆ ಅಭಿಪ್ರಾಯ ರೂಪಿಸಿದ ತೇಜಸ್ವಿನಿ ನಿರಂಜನ್, ಸೀಮಂತಿನಿ ನಿರಂಜನರಂಥವರಿಂದ ಹಿಡಿದು, ಆ ಮೊದಲ ತಲೆಮಾರಿನ ಲೇಖಕಿಯರು ವಿಜಯ ದಬ್ಬೆ, ಎನ್. ಗಾಯತ್ರಿ, ಎಚ್.ಎಸ್. ಶ್ರೀಮತಿ, ಸ. ಉಷಾ, ಸರ್ವಮಂಗಳಾ ಚ, ಸವಿತಾ ಭೂಷಣ್, ಕೆ. ನೀಲಾ, ಬಾ.ಹ. ರಮಾಕುಮಾರಿ, ಬಾನು ಮುಷ್ತಾಕ್, ಹೆಚ್. ಎಲ್. ಪುಷ್ಪ, ಸುಕನ್ಯಾ ಮಾರುತಿ, ಮಲ್ಲಿಕಾ ಘಂಟಿ, ಅನಸೂಯ ಕಾಂಬಳೆ, ಲಲಿತಾ ಸಿದ್ದಬಸವಯ್ಯ, ಅಯ್ಯೋ ಅಯ್ಯೋ ಎಷ್ಟೊಂದು ಹೊಸ ಹೊಸ ಅಭಿವ್ಯಕ್ತಿಯ ವಲಯಗಳ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿದ್ದಾರೆ. ಇವರನ್ನು ಓದುವ, ಅರ್ಥ ಮಾಡಿಕೊಂಡು ಹೊಸ ಲೋಕ ತಿಳಿಯುವ ಅನುಭವ, ಒಂದು ಹೊಸ ಲೋಕವನ್ನು ಖಂಡಿತ ಕಾಣಿಸಬಲ್ಲದು.
(ಮುಗಿಯಿತು..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಪ್ರೊ. ರಾಜಪ್ಪ ದಳವಾಯಿ
ಕನ್ನಡ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದಿದ್ದಾರೆ. 'ಕವಿರಾಜ ಮಾಗ౯: ಬಹುಶಿಸ್ತೀಯ ಅಧ್ಯಯನ' ವಿಷಯದ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ.




