ಕನ್ನಡ ಸಾಹಿತ್ಯಾಭಿವ್ಯಕ್ತಿ ಪ್ರಧಾನವಾಗಿ ಪುರುಷ ಪ್ರಧಾನದ ರೀತಿ ಕಾಣುತ್ತದೆ. ಆದರೆ, ಅದು ಮಹಿಳಾ ಪರವಾದುದು. ಪುರುಷಾಭಿವ್ಯಕ್ತಿಯಲ್ಲಿಯೂ ಅಪರೂಪದ ಹೆಣ್ಣಿನ ವಿವಿಧ ಮುಖಗಳನ್ನು ಚಿತ್ರಿಸಿದ್ದಾರಾದರೂ, ಸ್ತ್ರೀದೃಷ್ಟಿ ಎಂಬುದು ಪುರುಷನಿಗೆ ಎಂದಿದ್ದರೂ ಕಡತಂದದ್ದೇ ಹೊರತು ಸಾಚಾತನದ್ದಲ್ಲ. ಹೆಣ್ಣು ತನ್ನನ್ನು ತಾನು ಅಭಿವ್ಯಕ್ತಿಸಿಕೊಂಡ ಅಸಂಖ್ಯಾತ ಅಭಿವ್ಯಕ್ತಿ ಕ್ರಮಗಳಲ್ಲಿ ಅಕ್ಷರ ಕೂಡ ಒಂದು. ಹೆಣ್ಣು ತನ್ನನ್ನು ತಾನು ನಿರ್ವಚಿಸಿಕೊಂಡ ರೀತಿ ಬಹುಮುಖಿಯಾದುದಾಗಿದೆ. ಇದು ಎಲ್ಲ ಕಾಲದ ಸತ್ಯವಾದರೂ ಕಳೆದ ಐದು ದಶಕಗಳಲ್ಲಿ ಆದ ಬದಲಾವಣೆಗಳಲ್ಲಿ ಬಹು ಮುಖ್ಯವಾದುದು ಸ್ತ್ರೀ ಶಿಕ್ಷಣ. ಶಿಕ್ಷಣವು ಆಮೂಲಾಗ್ರ ಭಾರತದ ಬದಲಾವಣೆಗೆ ಕಾರಣವಾದ ಪ್ರಮುಖ ಸಾಧನವಾಗಿದೆ. ಐದು ದಶಕಗಳ ಹಿಂದೆ ಐದು-ಹತ್ತು ಶೇಕಡಾ ಇದ್ದ ಸ್ತ್ರೀ ಶಿಕ್ಷಣದ ಪ್ರಮಾಣವು ಈಗ ಐವತ್ತೆಪ್ಪತ್ತು ಶೇಕಡಾ ದಾಟಿರುವುದು ಸಂತಸದ ವಿಷಯವಾಗಿದೆ. ಎಲ್ಲಿ ನೋಡಿದರಲ್ಲಿ ಗಂಡುಮಕ್ಕಳೇ ಇರುತ್ತಿದ್ದ ಕಾಲ, ಶಾಲಾ ಕಾಲೇಜುಗಳ ಮುಂದೆ ಇಂದು ಬದಲಾಗಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಘೋಷಣೆಯು ನಿಜವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣವು ಹೆಣ್ಣನ್ನು ಹೊಸ ಲೋಕಕ್ಕೆ ಹೊಸ ಜ್ಞಾನದ ಮೂಲಕ, ಹೊಸ ಆಲೋಚನೆಗೆ ಮುಖಾಮುಖಿಯನ್ನಾಗಿಸಿತು. ಕಲಿತ ಅಕ್ಷರ ಅರಿಯದ ಲೋಕವನ್ನು ಅನಾವರಣಗೊಳಿಸಿತು. ತನ್ನ ಸುತ್ತಲ ಕಂಡುಂಡ, ಕೇಳಿ ತಿಳಿದ ಕಥನಗಳನ್ನು ಸೃಜಿಸುವ ಮೂಲಕ ಬರಹದ ಜತೆ ಬಂದವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ಹೊಸ ಕಥನಗಳನ್ನು ಕಣಜಕ್ಕೆ ದವಸ ತುಂಬಿದಂತೆ ತುಂಬಿಸಿದರು.
ಮೊದಲ ತಲೆಮಾರಿನ ಲೇಖಕಿಯರ ಅಭಿವ್ಯಕ್ತಿಯ ಕ್ರಮವೇ ಕ್ರಾಂತಿಕಾರಕ. ಪಾಶ್ಚಾತ್ಯ ಚಿಂತನೆಗೆ ತೊಡಗಿದ ಸ್ತ್ರೀಯರು ಹೊಸತನಕ್ಕೆ ತೆರೆದುಕೊಂಡಂತೆಯೆ ತಮ್ಮ ಧರ್ಮದ ಚೌಕಟ್ಟಿನೊಳಗೂ ಹೆಣ್ಣನ್ನು ಗಂಡು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಹಾಗೆ ನಡೆಸಿಕೊಳ್ಳಬೇಕೆಂಬ ನಿಲುವುಗಳು ಸ್ತ್ರೀ ಸ್ವಾತಂತ್ರ್ಯದ ಅತ್ಯುನ್ನತ ಪಾಠಗಳೇ ಆಗಿವೆ. ಅಮೆರಿಕಾದ ಹೆಣ್ಣು ತನ್ನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ಎಲ್ಲರಿಗೂ ಮಾದರಿಯಾಯಿತು. ಸಮ್ಮೇಳನ, ವಿಚಾರ ಸಂಕಿರಣ, ಗುಂಪುಚರ್ಚೆ, ಕಮ್ಮಟಗಳು ಹೆಣ್ಣಿನ ಸರಿಯಾದ ಇರುವಿಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದವು. ಸೃಜನಶೀಲತೆಗೆ ಮೂಲ ಮಾದರಿಯಾದುದೇ ವೈಚಾರಿಕ ಆಕೃತಿ. ಸೃಜನಶೀಲತೆಗೆ ವೈಚಾರಿಕ ಆಕೃತಿ ಪ್ರೇರಕವಾದಂತೆಯೇ ವೈಚಾರಿಕತೆಗೆ ಸೃಜನಶೀಲತೆ ಪ್ರೇರಕವಾಗಿರುತ್ತದೆ. ಪಾಶ್ಚಾತ್ಯ ಸ್ತ್ರೀವಾದವನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿ ತಂದವರು ಡಾ. ಎಚ್.ಎಸ್. ಶ್ರೀಮತಿಯವರು. ಅವರ ಸಾಹಿತ್ಯವನ್ನು ಓದುವ ಮೂಲಕ ಹೆಣ್ಣಿನ ಆಲೋಚನೆಗಳು ಭಿನ್ನವೂ ಮುಖ್ಯವೂ ಆದವು. ಆಗ ‘ಸೃಜನೆಯ ಮೂಡು’ (ಡಾಕ್ಟರ್ ಪ್ರೀತಿ ಶ್ರೀಮಂದರಕುಮಾರ್ ಅವರ ಕೃತಿಯ ಹೆಸರು) ಬೇರೆಯ ದಾರಿ ತುಳಿಯಲು ಸಾಧ್ಯ. ಕಥನವೊಂದನ್ನು ನಿರೂಪಿಸುವಲ್ಲಿ ಲೇಖಕಿಯ ವೈಚಾರಿಕತೆಗೆ ವ್ಯಾಪಕತೆ ಇದ್ದಂತೆಲ್ಲ ಕೃತಿಯ ರೂಪಕ ಶಕ್ತಿ ಹೆಚ್ಚುತ್ತದೆ. ಡಾ. ಚ. ಸರ್ವಮಂಗಳ ಅವರ ‘ಕಮಲ-ಬಸವ’ದಂಥ ಪದ್ಯ ಕೊಡುವ ಅರ್ಥವಿನ್ಯಾಸ ಅನನ್ಯವಾದುದಾಗಿದೆ.
ವೈದೇಹಿಯವರ ‘ಗುಲಾಬಿ ಟಾಕೀಸು’ ಮತ್ತು ‘ಚಹಾ ಕಪ್ಪಿನ ಅಲೆಗಳು’ ಒಂದು ಅನನ್ಯಕಥೆ. ಅದು ಸಿನಿಮಾ ಆಗಿ, ಉಮಾಶ್ರೀ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಸೈದ್ಧಾಂತಿಕತೆಯನ್ನು ಅರ್ಥಮಾಡಿಕೊಳ್ಳತೊಡಗಿದಂತೆ ಸೃಜನಶೀಲತೆಗೆ ವೈವಿಧ್ಯತೆಯ ಗರಿ ಮೂಡತೊಡಗುತ್ತವೆ. ಕೆಲವರು ಇಂಥ ಸೈದ್ಧಾಂತಿಕತೆಯನ್ನು ಒಂದು ತಲೆಬಿಸಿ ಎಂದು ಭಾವಿಸಿಬಿಡಬಹುದು. ಮತ್ತೆ ಕೆಲವರು ಸಿದ್ಧಾಂತದಿಂದ ಪ್ರೇರಣೆಯನ್ನು ಪಡೆದು ಹೊಸ ಕಥನಗಳನ್ನು ಸೃಜಿಸಬಹುದು. ಹೆಣ್ಣಿಗೆ ಸೃಜನಶೀಲತೆ ಎರಡನೇ ಅನುಭವವಲ್ಲ; ಮೊದಲ ಅನುಭವವೇ ಆಗಿರುತ್ತದೆ. ಅದರಲ್ಲೂ ನೆರೆಟಿವ್ ಆಕೆಯ ಸಹಜ ಗುಣವಾಗಿರುತ್ತದೆ. ವಿಸ್ತೃತವಾಗಿ ಅಥವಾ ಎಳೆಎಳೆಯಾದ ನಿರೂಪಣೆ ಆಕೆಗೆ ಜೈವಿಕವಾಗಿಯೇ ಇರುವ ಒಂದು ಗುಣವಾಗಿರುತ್ತದೆ. ಇದು ವಾಚಾಳಿತನ ಎನಿಸುವಷ್ಟರ ಮಟ್ಟಿಗೆ ಇರುತ್ತದೆ. ಪ್ರತಿ ಅನುಭವವನ್ನು ಆಕೆ ನಿರೂಪಿಸುತ್ತಾ ಹೋದಂತೆಯೇ ಅಭಿವ್ಯಕ್ತಿಸದ ಅಸಂಖ್ಯಾತ ಕಥೆಗಳು ಅವಳ ಮನದಾಳದಲ್ಲಿರಲು ಸಾಧ್ಯ. ಆದ್ದರಿಂದಲೇ ಬರಹವನ್ನು ತುಂಬಾ ಕುಶಲತೆಯ ಕೆಲಸ ಎಂದು ತಪ್ಪಾಗಿ ಭಾವಿಸಿದವರು, ಹೆಣ್ಣು ಬರಹವನ್ನು ಅಡುಗೆಮನೆ ಸಾಹಿತ್ಯ ಎಂದು ಸಣ್ಣ ಮಾತಾಡಿ, ದೊಡ್ಡ ಪ್ರತಿಕ್ರಿಯೆಗಳನ್ನು ಎದುರಿಸಬೇಕಾದ ಸ್ಥಿತಿಯನ್ನು ನಾವು ಕಲ್ಯಾಣಮ್ಮನವರ ಕಾಲಕ್ಕೆ ಕಾಣುತ್ತೇವೆ.

ಎಷ್ಟೊಂದು ಬರಹಗಾರ್ತಿಯರು ವೈವಿಧ್ಯಮಯವಾಗಿ ತಮ್ಮ ಅನುಭವಗಳನ್ನು ಅಪಾರ ಪ್ರಮಾಣದಲ್ಲಿ ಕನ್ನಡದಲ್ಲಿ ಬರೆದಿದ್ದಾರೆ. ಕವಿತೆ, ಕಥೆ, ಕಾದಂಬರಿ, ಪ್ರಬಂಧ, ವಿಮರ್ಶೆ, ಸಂಶೋಧನೆ, ಪತ್ರಿಕಾ ಬರಹ ಮುಂತಾಗಿ. ಇಲ್ಲಿ ಮೇಲ್ನೋಟಕ್ಕೆ ಎರಡು ಮುಖ್ಯ ಕೆಲಸಗಳು ಇದರಿಂದ ಸಾಧ್ಯವಾಗಿವೆ. ಒಂದು, ಹೆಣ್ಣು ತನ್ನನ್ನು ನಿರ್ವಚಿಸಿಕೊಂಡ ಬಗೆ, ಇನ್ನೊಂದು, ಗಂಡನ್ನು ನಿರ್ವಚಿಸಿದ ಬಗೆ. ಬರಹ ತನ್ನ ಅಸ್ತಿತ್ವದ ಬಹುದೊಡ್ಡ ಅಭಿವ್ಯಕ್ತಿ ಆಯಿತು. ಅದೇ ಕಾಲಕ್ಕೆ ಗಂಡು ತನ್ನನ್ನು ನೋಡುವ ನೋಟದ ಸ್ವರೂಪವನ್ನು ವ್ಯಾಖ್ಯಾನಿಸತೊಡಗಿತ್ತು. ಅಸಮಾನತೆಯ ಎಳೆಗಳನ್ನು ಸಮಾನತೆಯ ನೇಯ್ಗೆಗೆ ಬಳಸಿದ ದೊಡ್ಡ ಅಸ್ತ್ರ ಬರಹವಾಯಿತು. ಹೆಣ್ಣಿನ ಪಾತ್ರ ಯಾವ ಬಗೆಯದೆಂಬ ಅರಿವನ್ನೂ ಗಂಡಿಗೆ ಮೂಡಿಸುತ್ತ ಬರಲಾಯಿತಾದರೂ, ಅತಿ ಹೆಚ್ಚು ಗಂಡಿನ ವಾಚಾಳಿತನ ಕೇವಲ ತಾಯಿಯ ಬಗ್ಗೆ ಆರಾಧನೆಯ ಮನೋಭಾವದಲ್ಲಿ ಕಾಣುತ್ತಿದ್ದೇವೆ. ಹೆಣ್ಣಿನ ಬೇರೆ ಪಾತ್ರಗಳ ಬಗೆಗೆ ಬರಹವೂ ಕಡಿಮೆ. ನಂತರದ ಸ್ಥಾನವನ್ನು ಹಿಂದಿನಿಂದಲೂ ಪ್ರೇಮಿಯಾಗಿ ಹೆಚ್ಚು ಬರಹಗಳನ್ನು ಕಾಣುತ್ತೇವೆ. ಎಲ್ಲ ಬರಹಗಾರರ ಮೊದಲ ಬರಹ ಹೆಣ್ಣಿನ ಮೋಹಕತೆಯ ವರ್ಣನೆಯೇ ಆಗಿರುತ್ತದೆ. ಗಂಡಿನ ಆರಾಧನೆಯ ವಸ್ತುವಾದಾಗಲೆಲ್ಲ ಹೆಣ್ಣಿನ ಚಿತ್ರಣಗಳು ಯಶಸ್ವಿಯಾಗುವುದನ್ನು ಕಾಣಬಹುದು. ಆದರೆ ಅದು ಸಮಾನತೆಯ ವಿಷಯವಾದಾಗ ವಿಲನ್ ಆಗುವುದನ್ನು ಕಾಣುತ್ತೇವೆ.
ಇದನ್ನೂ ಓದಿರಿ: ಸಂಕ್ರಮಣಕ್ಕಾಗಿ ‘ಬಲಿ’ ಕೇಳುತ್ತಿರುವ ಕಾಲ (ಭಾಗ-1)
ಶಿಕ್ಷಣ, ಮೀಸಲಾತಿ, ಉದ್ಯೋಗ, ಕೆಲಸದ ಹಂಚಿಕೆ, ಮನೆಕೆಲಸದ ಹಂಚಿಕೆ, ಕೌಟುಂಬಿಕ ಜವಾಬ್ದಾರಿಗಳು ಇಲ್ಲೆಲ್ಲ ಗಂಡು ಹೆಣ್ಣಿನ ಅವಕಾಶಗಳನ್ನು ತಪ್ಪಿಸುವ, ವಂಚಿಸುವ ಸಂದರ್ಭದಲ್ಲೂ, ಹೆಣ್ಣು ದಿಟ್ಟವಾಗಿ ತನ್ನ ಅವಕಾಶಗಳನ್ನು ತಾನು ಪಡೆಯುತ್ತಿರುವ ಪ್ರಕ್ರಿಯೆಯನ್ನು ನಾವು ಸ್ವಾಗತಿಸಲೇಬೇಕು. ಇಟ್ಟಿಗೆ ಹೊತ್ತು ಕಟ್ಟಡ ಕಟ್ಟಲು ಪೂರಕವಾದ ಹೆಣ್ಣು ಒಂದು ಕಡೆ, ಉಳ್ಳವರ ಮನೆ ಕಸ ಮುಸುರೆ ಸ್ವಚ್ಛ ಮಾಡುವ, ಇಲ್ಲವೇ ಬೀದಿ ಕಸ ಗುಡಿಸುವ ಹೆಣ್ಣಿನ (`ಕಕೂಸ್’ ಒಂದು ಅದ್ಭುತವಾದ ಚಿತ್ರ. ತಮಿಳಿನ ದಿವ್ಯ ಭಾರತಿ ಅವರ ಡಾಕ್ಯುಮೆಂಟರಿ ಚಿತ್ರ, 2017) ಜೊತೆಗೆ ಸಾಫ್ಟವೇರ್ ಕೆಲಸದಲ್ಲಿರುವ ಹೆಣ್ಣಿನ ಲೀಡರ್‌ಶಿಪ್ ಅಥವಾ ಇತರೆ ಕ್ಷೇತ್ರಗಳಲ್ಲಿರುವ ಹೆಣ್ಣಿನ ಲೀಡರ್‌ಶಿಪ್‌ಅನ್ನು ಗಂಡು ಜೀರ್ಣಿಸಿಕೊಳ್ಳಲಾಗದಿರುವ ಅಸಂಖ್ಯಾತ ನಿರ್ವಚನಗಳು ನಮ್ಮೆದುರಿಗೆ ಇವೆ. ಮುಖ್ಯವಾಗಿ ಅಂತಹವುಗಳ ಉದಾಹರಿತ ವಿಚ್ಛೇದಿತ ಪ್ರಕರಣಗಳು, ಕೌಟುಂಬಿಕ ಕೋರ್ಟುಗಳ ಹೆಚ್ಚಳವೇ ಸಂಕೇತದಂತಿವೆ. ಇವೆಲ್ಲ ಮುಖ್ಯವಾಗಿ ಸಮಾನತೆಯ ಪೈಪೋಟಿಯೇ ಆಗಿವೆ. ಅಭಿಪ್ರಾಯ ಭಿನ್ನಾಭಿಪ್ರಾಯಗಳನ್ನು ಜೀರ್ಣಿಸಿಕೊಳ್ಳಲಾಗದ ವೈಯಕ್ತಿಕ ವಿಷಮತೆಗಳು ಇಂದು ಅಧಿಕ ಪ್ರಮಾಣದಲ್ಲಿ ಕಣ್ಣಿಗೆ ರಾಚುತ್ತಿರುವುದು ಗಂಡಿನ ಆಲೋಚನೆಯ ಕೌಟುಂಬಿಕ ದಾಸ್ಯದ ಬೇಡಿಕೆಯೇ ಆಗಿರುತ್ತದೆ. ವೀಣಾ ಶಾಂತೇಶ್ವರರ ‘ಗಂಡಸರು’ ಕಿರುಕಾದಂಬರಿ ನಿರೂಪಿಸುವ ಗಂಡು ಹೆಣ್ಣುಬಾಕನಾಗಿ ಅವತರಿಸುತ್ತಾನೆ. ಮನಸ್ಸು ಮತ್ತು ಮೈಗಳ ನಿರ್ವಚನವನ್ನು ಕಳೆದ 50 ವರ್ಷಗಳಲ್ಲಿ ನಮ್ಮ ಸಾಹಿತ್ಯ ವೈವಿಧ್ಯಮಯವಾಗಿ ಚಿತ್ರಿಸಿದೆ. ನಾನು-ನೀನು ಎಂಬ ಎರಡು ಸರ್ವನಾಮಗಳು ಸಾಹಿತ್ಯದ ತುಂಬೆಲ್ಲ ವೈವಿಧ್ಯಮಯ ಕಥೆಗಳನ್ನು ನಿರೂಪಿಸಿದಂತೆ, ಅವನು-ಅವಳು ನಿರೂಪಣೆಗಳು ಸಹ ಅಸ್ತಿತ್ವವಾದದ ಪ್ರಮುಖ ಅಭಿವ್ಯಕ್ತಿಯಾಗಿವೆ.

ಈ ಎರಡು ದಶಕಗಳಲ್ಲಿ ಹೆಚ್ಚು ಚರ್ಚೆಯಾದ ಹೆಣ್ಣಿನ ಅಸ್ಮಿತೆಯ ನೆಲೆಗಳು, ಧಾರ್ಮಿಕ ಕ್ಷೇತ್ರದಲ್ಲಿ ಹೆಣ್ಣಿನ ದೇವಾಲಯ ಪ್ರವೇಶದ ನಿರಾಕರಣೆಯು, 100 ವರ್ಷಗಳ ದಲಿತರ ದೇವಾಲಯ ನಿರಾಕರಣೆಗಳ ಮತ್ತೊಂದು ಮುಖವಾಗಿದೆ. ಹಿಂದೂ ಕೋಡ್ ಬಿಲ್‌ನಲ್ಲಿ ಡಾ. ಅಂಬೇಡ್ಕರ್ ಯಾರ ಪರವಹಿಸಿದರೋ, ಉಳಿದವರು ಯಾವುದನ್ನು ನಿರಾಕರಿಸಿದರೋ ಆ ಪ್ರಶ್ನೆಗಳು ಇಂದು ಬೃಹದಾಕಾರವಾಗಿ ಬೆಳೆದಿವೆ. ಹೆಣ್ಣನ್ನು ಕೌಟುಂಬಿಕ ಚೌಕಟ್ಟಿನೊಳಗೆ ಬಂಧಿಸಿದಾಗ ಎದುರಾಗುವ ಪ್ರಶ್ನೆಗಳು ಗೌಣವಾಗುತ್ತವೆ. ಸಾಮಾಜಿಕ ಚೌಕಟ್ಟಿಲ್ಲದ ಆವರಣದಲ್ಲಿಟ್ಟಾಗ ಭಿನ್ನವಾಗುತ್ತವೆ. ಅಂದರೆ ಎರಡು ಕಡೆಯಲ್ಲೂ ಹೇಗಾದರೂ ಮಾಡಿ ಹೆಣ್ಣನ್ನು ಅಪ್ರಸ್ತುತಗೊಳಿಸುವ ನೆಲೆಗಳ ಬಗ್ಗೆ ಗಂಡಸು ನಿರಂತರ ಸಂಶೋಧಕನಾಗಿರುವುದನ್ನು ಕಾಣಬಹುದಾಗಿದೆ.
ಚಿತ್ರನಟಿ ಜಯಮಾಲಾ ಅವರ ಪ್ರಕರಣವು ಎತ್ತಿದ ಪ್ರಶ್ನೆಗಳು, ಮುಂದೆ ಕನ್ನಡದಲ್ಲಿ ‘ಮುಟ್ಟು’ ಕುರಿತು ಎರಡು ಬಹುಮುಖ್ಯ ಕೃತಿಗಳು ಪ್ರಕಟವಾಗಲು ಕಾರಣವಾದಂತೆಯೇ, ಹೆಣ್ಣಿನ ಅಸ್ಮಿತೆಯನ್ನು ಸಹ ಖಚಿತವಾಗಿ ಅವು ಪ್ರತಿಪಾದಿಸಿದವು. ‘ನ್ಯಾಯಕ್ಕಾಗಿ ಕಾದಿರುವ ಭಾಂವ್ರಿ’ಯಂಥ ಬೀದಿ ನಾಟಕವು ನಮ್ಮ ಮುಂದೆ ಮಂಡಿಸಿದ ಸಾಮಾಜಿಕ ಮುಖ, ಖೈರ್ಲಾಂಜಿಯಲ್ಲಿ ಮತ್ತೊಂದು ರೀತಿ ಅವತರಿಸುತ್ತದೆ. ಕಾಡುಗೊಲ್ಲರ ಹೆಣ್ಣುಮಕ್ಕಳನ್ನು `ಹೊರಗಿಡುವ’ ಪ್ರಕರಣಗಳು ಪ್ರಭುತ್ವಕ್ಕೆ ದೊಡ್ಡ ತಲೆನೋವಾದ ಹಿನ್ನೆಲೆಯಲ್ಲಿ, ಕೇಂದ್ರ ಮಂತ್ರಿಯನ್ನೂ ತಮ್ಮ ಹಟ್ಟಿಗೆ ಬಿಟ್ಟುಕೊಳ್ಳದ ಪ್ರಕರಣ ಮತ್ತೊಂದು ಬಗೆಯ ಅಸಮಾನತೆಯನ್ನು ಪ್ರತಿಪಾದಿಸುತ್ತದೆ.
ಇದನ್ನೂ ಓದಿರಿ: ‘ಟ್ರಾನ್ಸ್ ಸಮುದಾಯ’; ಗ್ರಹಿಕೆಯ ತೊಡಕುಗಳೇನು? (ಭಾಗ-1)
ಇಂತಹ ಅಸಂಖ್ಯಾತ ಪ್ರಕರಣಗಳ ಹಿನ್ನೆಲೆಯಲ್ಲಿ ಸೃಷ್ಟಿಯಾಗುವ ಚರ್ಚೆ, ಸಂವಾದ, ಹೋರಾಟ, ಸಾಂಘಿಕ ಪ್ರತಿಕ್ರಿಯೆ ಹಾಗೂ ಆ ಮುಖೇನ ಪ್ರೇರಣೆ ಪಡೆದು ಸೃಷ್ಟಿಯಾಗುವ ಸಾಹಿತ್ಯ ಒಂದು ಸಮಸ್ಯೆಯ ಬಗೆಗೆ ಹೊಸ ಸಾಹಿತ್ಯವನ್ನೇ ಸೃಷ್ಟಿಸುತ್ತದೆ. ‘ಮುಟ್ಟು’ ಸಮಸ್ಯೆ ಕುರಿತು ಮರಾಠಿಯಲ್ಲಿ ಬಂದ ಕಾದಂಬರಿ ‘ಕೊಯಿತ’ (ಉತ್ತಮ ಕಾಂಬಳೆ) ಅತ್ಯುತ್ತಮ ಅಭಿವ್ಯಕ್ತಿ. ಸ್ತ್ರೀ ಅಭಿವ್ಯಕ್ತಿಯನ್ನು ಕೇವಲ ಸಾಹಿತ್ಯಿಕವಾಗಿ ನೋಡಬೇಕೇ ಅಥವಾ ಸಾಮಾಜಿಕವಾಗಿ ನೋಡಬೇಕೆ ಎಂಬ ಜಿಜ್ಞಾಸೆಯೊಂದು ನಿರಂತರವಾದ ಚರ್ಚೆಯೇ ಆಗಿದೆ. ಸಾಮಾಜಿಕತೆಯ ಹೆಣ್ಣಿನ ಅಸ್ಮಿತೆಯನ್ನು ಹೊರತುಪಡಿಸಿ, ಕೇವಲ ಸಾಹಿತ್ಯಕವಾಗಿ ನೋಡುವ ನೋಟ ಈಗ ಅಪ್ರಸ್ತುತ. ಏಕೆಂದರೆ ಸಾಹಿತ್ಯದ ಹೆಣ್ಣು ನೋಟವಾಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಬಾಲ್ಟ್ರನ್’ ಓದುಮಾಲಿಕೆಯ `ಹೆಣ್ಣು ನೋಟ’ ಅಂಥ ಒಂದು ಒಳ್ಳೆಯ ಪ್ರಯತ್ನವೇ ಆಗಿದೆ. ಸಾಮಾಜಿಕ ಮುಖವಿಲ್ಲದ ಸ್ತ್ರೀ ಸಂವೇದನೆಯು ಮತ್ತೊಂದು ದಂತಗೋಪುರದ ಬರಹವಷ್ಟೇ! ಹೆಣ್ಣನ್ನು ದಂತಕತೆ ಮಾಡಿ ವಾಸ್ತವದ ಮುಸುಕನ್ನು ಹಾಕಲಾಯಿತು. ಗಂಡು ಹೆಣ್ಣಿನ ತಾರತಮ್ಯದಲ್ಲಿ ಹೆಣ್ಣಿಗಿಂತ ಗಂಡಿಗೆ ಹೆಚ್ಚು ನಷ್ಟವಾಗಿರುವುದನ್ನು ಗಮನಿಸಬಹುದು. ತಾಯಿ-ಮಗ, ಗಂಡ-ಹೆಂಡತಿ ಇಂತಹ ಸಂಬಂಧಗಳಲ್ಲಿ ಗಂಡು ಹೆಣ್ಣನ್ನು ಅರ್ಥೈಸಿಕೊಳ್ಳಲು ಸಾಮಾಜಿಕವಾಗಿ ಸೋತಿರುವ ಉದಾಹರಣೆಗಳೇ ಹೆಚ್ಚು.
ಬಹುಶಃ ‘ಸೆಕೆಂಡ್ ಸೆಕ್ಸ್’ನಂತಹ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ, ಸುಂದರವಾಗಿ ಮುದ್ರಿಸಿದ್ದೇವೆ. ಆದರೆ, ಅದನ್ನು ಓದಿದವರ ಸಂಖ್ಯೆ ತೀರ ಕಡಿಮೆ. 20 ವರ್ಷಗಳ ಹಿಂದಿನ ಒಂದು ಘಟನೆ ಪ್ರಸ್ತಾಪಿಸಿದರೆ ಅದು ಅಪ್ರಸ್ತುತ ಆಗಲಾರದು. ವಿಶ್ವವಿದ್ಯಾಲಯದಲ್ಲಿ ಓರಿಯೆಂಟೇಶನ್ ರಿಫ್ರೆಷರ್ ಕೋರ್ಸ್ ಅಂತ ಅಧ್ಯಾಪಕರಿಗೆ ಪುನರ್ಚೇತನ ಕಾರ್ಯಕ್ರಮ ಇರುತ್ತದೆ. ಅಂತಹ ಒಂದು ರಿಫ್ರೆಷರ್ ಕೋರ್ಸಿಗೆ ಪಾಠ ಹೇಳಲು ನಾನು ಆಯ್ಕೆ ಮಾಡಿಕೊಂಡದ್ದು ‘ಉಚಲ್ಯಾ’ ಮತ್ತು ‘ದಿ ಸೆಕೆಂಡ್ ಸೆಕ್ಸ್’. ವಿಶೇಷವೆಂದರೆ ಪದವಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಅಧ್ಯಾಪಕರು ಅಲ್ಲಿದ್ದರು. ಕೆಲವರು ‘ಉಚಲ್ಯಾ’ ಓದಿದ್ದರು. ಯಾರೊಬ್ಬರೂ ‘ದಿ ಸೆಕೆಂಡ್ ಸೆಕ್ಸ್’ ಪುಸ್ತಕ ಓದಿದವರು ಇರಲಿಲ್ಲ. ಬಹುಶಃ ಅವರ್ಯಾರಿಗೂ ಅದರ ಅಗತ್ಯವಿದ್ದಂತೆ ಕಾಣಲಿಲ್ಲ. ಅವರಲ್ಲಿ ಸ್ತ್ರೀವಾದ ಅಂತ ಮಾತನಾಡುತ್ತಿದ್ದವರು ಕೆಲವರಿದ್ದರು. ಆ ಕೃತಿ ಹೆಣ್ಣು ಹೇಗೆ ಹೆಣ್ಣು? ಗಂಡು ಹೇಗೆ ಗಂಡು? ಎಂದು ತಿಳಿಯಲು ಅಗತ್ಯವಾದ ದಿಕ್ಸೂಚಿ ಕೃತಿಯಾಗಿದೆ. ಪಾಶ್ಚಾತ್ಯ ಸ್ತ್ರೀವಾದವನ್ನು ಓದದೆ ನಾವು ಹೊಸದೇನನ್ನೂ ಚಿಂತಿಸಲಾರೆವು. ಏಕೆಂದರೆ, ಹೆಣ್ಣು ತನ್ನ ಸ್ವಾತಂತ್ರ್ಯಪರತೆಗೆ ಅತಿ ದೊಡ್ಡ ಹೋರಾಟ ರೂಪಿಸಿದ್ದು, ಪಾಶ್ಚಾತ್ಯ ದೇಶಗಳಲ್ಲಿ. ಮನು ಚಿಂತನೆಯ ಚೌಕಟ್ಟನ್ನು ಮುರಿದು ಹೊರ ಬರಲು ಪಾಶ್ಚಾತ್ಯ ಸ್ತ್ರೀವಾದದ ಅನೇಕ ಕೃತಿಗಳು ನಮಗೆ ಸಹಾಯಕವಾಗಿವೆ ಮತ್ತು ಸ್ಫೂರ್ತಿದಾಯಕವಾಗಿವೆ. ಹೊಸದು ಬೇಡ ಎನ್ನುವವರಿಗೆ ನಮ್ಮ ತಕರಾರು ಏನೂ ಇಲ್ಲ. ಹೊಸ ಚಿಂತನೆ ಮಾತ್ರವೇ ಹೊಸ ಸಂಕಥನಗಳಿಗೆ ಕಾರಣವಾಗುತ್ತದೆ.

ವಿಚಾರವಿಲ್ಲದೆ ಸ್ತ್ರೀ ಬರಹ ಸೊರಗುವ ದಿನಗಳನ್ನೂ ನೋಡಿದ್ದೇವೆ. ಸಮಾಜವನ್ನೇ ನಾವು ಸರಿಯಾಗಿ ಅರ್ಥೈಸಿಕೊಳ್ಳದಿದ್ದರೆ ನಮ್ಮ ಸಮಸ್ಯೆಗಳೂ ನಮಗೆ ಅರ್ಥವಾಗುವುದಿಲ್ಲ. ಉದಾಹರಣೆಗೆ ತಂದೆ ತಾಯಿಗಳ ಬಗ್ಗೆ ಭಾವುಕರಾಗಿರುವ ನಮಗೆ ಅವರು ಮಾಡುವ ಗಂಡು ಹೆಣ್ಣಿನ ತಾರತಮ್ಯವನ್ನು ನಾವು ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಏಕೆಂದರೆ, ಅವರನ್ನು ನಾವು ಭಾವನಾತ್ಮಕವಾಗಿ ಮಾತ್ರ ನೋಡುತ್ತಿರುತ್ತೇವೆ. ಹೆಣ್ಣು ಹೀಗೆ ಇರಬೇಕೆಂಬ ಮಾಡೆಲ್ಲನ್ನು ನಿರ್ಮಿಸಿದವರು ಯಾರು? ಒಬ್ಬರೇ ಇಬ್ಬರೇ ಅಲ್ಲ. ಅದು ಅಸಂಖ್ಯಾತ ಮನಸ್ಸುಗಳ ರಚನೆ. ಆದರೆ, ಅದು ಸರಿಯಿಲ್ಲ ಎಂದು ಹೇಳುವವರು ಒಬ್ಬರೋ ಇಬ್ಬರೋ. ಪ್ರತಿಭಾ ನಂದಕುಮಾರರ ಪದ್ಯ ‘ನಾವು ಹುಡುಗಿಯರೇ ಹೀಗೆ’ ಎಂಬ ಪದ್ಯದ ನಾಯಕಿಯಂತೆ ಅಸಂಖ್ಯಾತರ ಜೀವನ ಇರಲಿಕ್ಕೆ ಸಾಧ್ಯ. ಆದರೆ ಕೆಲವರ ಬದುಕಾದರೂ ಅವರ ಆಯ್ಕೆಯಂತೆಯೇ ಇದೆಯಲ್ಲ ಎಂಬುದೇ ಸಮಾಧಾನ. ಹೆಣ್ಣು ಕೇವಲ ತೊಗಲುಗೊಂಬೆಯಲ್ಲ. ಸ. ಉಷಾ ಅವರ ‘ತೊಗಲುಗೊಂಬೆಯ ಆತ್ಮಕಥೆ’ ಅದನ್ನು ನಿರೂಪಿಸುತ್ತದೆ. ‘ನಾಳಿನ ಚಿಂತ್ಯಾಕ’ ಆತ್ಮಕಥೆಯಲ್ಲಿ ಶಾಂತಾ ಹುಬಳೀಕರ್ ತನ್ನ ಗಂಡ ಮತ್ತು ಮಗನ ನಿರ್ಧಾರಗಳಿಂದ ನಿರ್ಗತಿಕಗಳಾಗಿ ಮೇರುನಟಿ ಅಬಲಾಶ್ರಮದಲ್ಲಿ ಆಶ್ರಯ ಪಡೆಯಬೇಕಾದ ಸ್ಥಿತಿಗೆ ಬರುತ್ತಾಳೆ. ‘ಕುಣಿಯೇ ಘುಮಾ’ದ ಮಾಧವಿ ದೇಸಾಯಿ ಪ್ರಸಿದ್ಧ ಕಾದಂಬರಿಕಾರನೊಬ್ಬನ ವೈಯಕ್ತಿಕ ಬದುಕಿನ ಗಂಡಾಳಿಕೆಯ ದುರಹಂಕಾರವನ್ನು ಅನಾವರಣ ಮಾಡುತ್ತಾರೆ.
ಗಂಡು ಹೆಣ್ಣುಗಳ ಅನ್ಯೋನ್ಯತೆ ಮತ್ತು ಸಂಘರ್ಷ ಇವೆರಡೂ ನಮ್ಮ ಸಾಹಿತ್ಯದ ಮುಖ್ಯ ಆಲೋಚನಾ ಕ್ರಮಗಳು. ಬರೀ ಅನ್ಯೋನ್ಯತೆಯಾಗಲಿ, ಬರೀ ಸಂಘರ್ಷವಾಗಲಿ ಮಾತ್ರವೇ ಬದುಕಿನಲ್ಲಿರಲು ಸಾಧ್ಯವಿಲ್ಲ. ಒಬ್ಬರನ್ನು ಇನ್ನೊಬ್ಬರು ವಿಲನ್ ಮಾಡುವುದರಿಂದಷ್ಟೇ ಏನೂ ಸಾಧಿಸದಂತೆಯೂ ಆಗುವುದಿಲ್ಲ. ಆದರೆ ರೋಮಿಲಾ ಥಾಪರ್ ಹೇಳಿದಂತೆ ‘ಕಲ್ಪಿತ ಶತ್ರು’ ಇಲ್ಲದೆ ನಾವು ಸೃಜನಶೀಲರೇ ಆಗಲಾರದ ಸ್ಥಿತಿ ಇದೆ. ಈ ಇಮ್ಯಾಜಿನೇಟಿವ್ ಎನಿಮಿಯು ನಮ್ಮನ್ನು ನಿರಂತರವಾಗಿ ಸೃಜನಶೀಲರನ್ನಾಗಿ ಮಾಡುವ ಸ್ಥಿತಿಯೊಂದು ನಮ್ಮ ಭಾರತೀಯ ಮನಸ್ಸಿನ ಜತೆ ಸಹಜವೆನಿಸುವಂತಿದೆ. ಅದು ಹೆಣ್ಣು-ಗಂಡು, ಹಿಂದೂ-ಮುಸ್ಲಿಂ ಮುಂತಾದ ಹೊಸ ಹೊಸ ಬೈನರಿ ಅಪೋಸಿಟ್‌ಗಳನ್ನು ಸೃಜಿಸಿಕೊಳ್ಳುತ್ತಿರುತ್ತದೆ. ಎನಿಮಿಯ ಬಗೆಗೆ ಅನಗತ್ಯವಾದ ಪೂರ್ವಗ್ರಹಗಳು ಸೃಜನೆಗೊಳ್ಳುತ್ತವೆ. ಇವು ನಿಜವೆಂದು ನಂಬುವಂತೆ ಕೂಡ ಇರುತ್ತವೆ. ನಂತರ ಇವೇ ಐತಿಹ್ಯಗಳಂತೆ ಜನಮಾನಸದಲ್ಲಿ ಜನಜನಿತವಾಗುತ್ತವೆ. ವಾಸ್ತವವಾಗಿ ಬೈನರಿ ಅಪೋಸಿಟ್‌ಗಳಲ್ಲಿ ಒಂದು ದೊಡ್ಡದು ಮತ್ತೊಂದು ಸಣ್ಣದು ಎಂಬ ಅಪಕಲ್ಪನೆ ಇರುತ್ತದೆ. ಆದರೆ ಅದು ಶುದ್ಧ ತಪ್ಪಾದದ್ದು. ಏಕೆಂದರೆ ದೊಡ್ಡದಕ್ಕೆ ಅಸ್ತಿತ್ವವಿದ್ದಂತೆ ಅಥವಾ ರಚನೆ ಇದ್ದಂತೆ ಸಣ್ಣದಕ್ಕೂ ಅದರದೇ ಆದ ಅಸ್ತಿತ್ವ ಮತ್ತು ರಚನೆ ಇರುತ್ತದೆ. ಇದು ಅದರ ವಿರುದ್ಧ ಖಂಡಿತ ಅಲ್ಲ. ಆದರೆ ನಮ್ಮ ಗ್ರಹಿಕೆಯು ವಿರುದ್ಧ ಮಾಡದೆ ಲೋಕಗ್ರಹಿಕೆಯೇ ಸಾಧ್ಯವಿಲ್ಲವೆಂಬಂತಹ ಸ್ಥಿತಿಯಲ್ಲಿದೆ. ಯಾವುದೇ ವಿರುದ್ಧ ಎಂದು ಕಲ್ಪಿಸುವ ಎರಡು ರಚನೆಗಳ ಗ್ರಹಿಕೆ ವಿರುದ್ಧತೆಯಿಂದ ಮಾತ್ರವೇ ಸಿದ್ಧಿಸುತ್ತದೆಂದು ಭಾವಿಸಿದ ಜಗತ್ ಚಿಂತನೆಯನ್ನು ಜೆ. ಡೆರಿಡಾ ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿಯೇ ನೋಡಿದ. ಇದು ಮೂಲತಃ ಮಾರ್ಕ್ಸ್‌ವಾದಿ ಚಿಂತನೆ. ಸ್ತ್ರೀವಾದವು ಅದರ ಒಂದು ಟಿಸಿಲು. ಮೂರನೇ ಅಮೆರಿಕ ಮಹಿಳಾ ಸಮಾವೇಶದ ತಿರುಳೆಂದರೆ “ಗಂಡಸು ತನ್ನೆಲ್ಲ ಶಕ್ತಿಯನ್ನು ಹೆಣ್ಣನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಬಳಸಿದ್ದಾನೆಯಷ್ಟೇ’’ ಎಂಬುದಾಗಿತ್ತು.
(ಮುಂದುವರಿಯುತ್ತದೆ..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಪ್ರೊ. ರಾಜಪ್ಪ ದಳವಾಯಿ
ಕನ್ನಡ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದಿದ್ದಾರೆ. 'ಕವಿರಾಜ ಮಾಗ౯: ಬಹುಶಿಸ್ತೀಯ ಅಧ್ಯಯನ' ವಿಷಯದ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ.




