(ಮುಂದುವರಿದ ಭಾಗ..) ಅಂದಹಾಗೆ ಬಾಬಾಸಾಹೇಬರ ಈ ಆರೋಪದ ಬಗ್ಗೆ ಕೆಲವರು ಆಕ್ಷೇಪ ಎತ್ತಬಹುದು. ಆದರೆ ಅದಕ್ಕೂ ಅಂಬೇಡ್ಕರರು ಸೂಕ್ತ ಕಾರಣ ಸಮೇತ ಹಿಂದೂ ಸಾಮಾಜಿಕ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹಾಕುತ್ತಾರೆ. “ಹತ್ತಿರ ಸೇರಿಸಲು ಬಾರದಂತಹ, ನೆರಳು ಸಹ ಸೋಕಬಾರದಂತಹ, ನೋಡಲು ಸಹ ಅರ್ಹವಲ್ಲದಂತಹ ಸಮುದಾಯಗಳನ್ನು ಹೊಂದಿರುವ ಸಮಾಜವೊಂದು ಪ್ರಪಂಚದಲ್ಲಿ ಎಲ್ಲಾದರೂ ಇರಲು ಸಾಧ್ಯವೇ? ಅಪರಾಧಿ ಬುಡಕಟ್ಟುಗಳನ್ನು ಹೊಂದಿರುವಂಥ ಸಮಾಜವೊಂದು ಪ್ರಪಂಚದಲ್ಲಿ ಎಲ್ಲಾದರೂ ಇರಲು ಸಾಧ್ಯವೇ? ಹಿಂದೂ ಸಮಾಜದಲ್ಲಿ ಕಂಡುಬರುವ ಇವರೆಲ್ಲರೂ ಅದೆಷ್ಟು ಸಂಖ್ಯೆಯಲ್ಲಿದ್ದಾರೆ? ಕೆಲವು ನೂರುಗಳು ಅಥವಾ ಕೆಲವು ಸಾವಿರಗಳು? ನಾನು ತೀರಾ ಕಡಿಮೆ ಇರಬೇಕು ಎಂದು ಆಶಿಸುತ್ತೇನೆ. ಆದರೆ ದುರಂತವೆಂದರೆ ಅವರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ! ದಶಲಕ್ಷ ಅಸ್ಪೃಶ್ಯರು! ದಶಲಕ್ಷ ಅಪರಾಧಿ ಬುಡಕಟ್ಟುಗಳು! ದಶಲಕ್ಷ ಆದಿವಾಸಿ ಬುಡಕಟ್ಟುಗಳು! ಯಾರಿಗಾದರೂ ಇದನ್ನು ನೋಡಿದಾಗ ಹಿಂದೂ ನಾಗರಿಕತೆ ಅದು ನಾಗರಿಕತೆಯೋ ಅಥವಾ ಅಪಖ್ಯಾತಿಯೋ ಎಂದೆನಿಸದಿರದು” ಎಂದು ವಿಷಾದಿಸುತ್ತಾರೆ.
ಹಾಗಿದ್ದರೆ ಹಿಂದೂ ಧರ್ಮದಲ್ಲಿ ಬುದ್ಧಿಜೀವಿ ವರ್ಗ ಇರಲಿಲ್ಲವೇ ಎಂದು ಯಾರಿಗಾದರೂ ಅನಿಸಬಹುದು. ಇದರ ಬಗ್ಗೆ ಕೂಡ ಡಾ.ಅಂಬೇಡ್ಕರ್ ಮುಂದೆ ಮಾತನಾಡುತ್ತಾರೆ: “ಮುಂದುವರಿದು ನಾನು ಬುದ್ಧಿ ಜೀವಿ ವರ್ಗದ ಬಗ್ಗೆ ಹೇಳುತ್ತೇನೆ. ಯಾವುದೇ ನಾಗರಿಕತೆ ಬೆಳವಣಿಗೆ ಕಾಣಬೇಕಾದರೆ, ಮಾರ್ಗದರ್ಶನ ಹೊಂದಬೇಕಾದರೆ ಅದು ತನ್ನ ಬುದ್ಧಿಜೀವಿ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ. ನೇರವಾಗಿ (ಹಿಂದೂ ಸಮಾಜದ ಮಟ್ಟಿಗೆ) ಹೇಳುವುದಾದರೆ ಅದು ಬ್ರಾಹ್ಮಣರ ಮೇಲೆ ಅವಲಂಬಿತವಾಗಿತ್ತು. ಹಳೆಯ ಹಿಂದೂ ಕಾನೂನಿನ ಪ್ರಕಾರ ಬ್ರಾಹ್ಮಣರು ಪೌರೋಹಿತ್ಯ ವರ್ಗದ ಅನುಕೂಲಗಳನ್ನು ಅನುಭವಿಸುತ್ತಿದ್ದರು. ಕೊಲೆಯಂತಹ ಅಪರಾಧ ಮಾಡಿದರೂ ಅವರನ್ನು ನೇಣಿಗೇರಿಸುತ್ತಿರಲಿಲ್ಲ. ತೀರಾ ಇತ್ತೀಚಿನವರೆಗೆ ಅಂದರೆ 1817ರವರೆಗೆ ಈಸ್ಟ್ ಇಂಡಿಯಾ ಕಂಪನಿ(ಬ್ರಿಟಿಷರು) ಕೂಡ ಅವರಿಗೆ ಅಂತಹ ಅನುಕೂಲ ನೀಡಿತ್ತು. ಪ್ರಶ್ನೆ ಎಂದರೆ ಹೀಗಿದ್ದರೂ ಬ್ರಾಹ್ಮಣರಲ್ಲಿ ಅಂತಹ ಒಂದು ಯಾವುದಾದರು ರುಚಿ(ಯೋಗ್ಯತೆ) ಉಳಿದಿದೆಯೇ? ನೇರ ಹೇಳುವುದಾದರೆ, ಅವರ ವೃತ್ತಿ(ಪೌರೋಹಿತ್ಯ) ಈಗ ತನ್ನ ಎಲ್ಲ ಶ್ರೇಷ್ಠತೆಗಳನ್ನು ಕಳೆದುಕೊಂಡಿದೆ. ಅವರು ಈಗ ಒಂದು ಕೀಟವಾಗಿದ್ದಾರೆ. ವ್ಯವಸ್ಥಿತವಾಗಿ ಸಮಾಜದ ಮೇಲೆ ದಾಳಿ ನಡೆಸುತ್ತ ಧರ್ಮದ ಹೆಸರಿನಲ್ಲಿ ಅವರು ಲಾಭ ಪಡೆದಿದ್ದಾರೆ. ಟನ್‌ಗಟ್ಟಲೆ ಅವರು ಬರೆದ ಶಾಸ್ತ್ರಗಳು, ಪುರಾಣಗಳು ತೀಕ್ಷ್ಣ ಆಚರಣೆಯ ಭಂಡಾರಗಳಾಗಿದ್ದವು. ಅದನ್ನು ಬ್ರಾಹ್ಮಣರು ಬಡ ಅಶಿಕ್ಷಿತ ಮೂಢನಂಬಿಕೆಯ ಹಿಂದೂ ಜನಸಾಮಾನ್ಯರನ್ನು ಮೂರ್ಖರನ್ನಾಗಿಸಲು, ವಂಚಿಸಲು, ಮೋಸಗೊಳಿಸಲು ಬಳಸಿಕೊಂಡರು”.

ಇಷ್ಟೆಲ್ಲ ನಡೆಯುತ್ತಿರಬೇಕಾದರೆ ಅಲ್ಲಿ ಇದು ತಪ್ಪು ಎಂದು ಹೇಳುವ ಸಾರ್ವಜನಿಕ ಆತ್ಮಸಾಕ್ಷಿ ಇರಲಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಡಾ.ಅಂಬೇಡ್ಕರ್, “ಖಂಡಿತ, ಅಲ್ಲಿ ಸಾರ್ವಜನಿಕ ಆತ್ಮ ಸಾಕ್ಷಿ ಇರಲಿಲ್ಲ. ಆತ್ಮಸಾಕ್ಷಿಯ ಕೊರತೆಯ ಕಾರಣದಿಂದ ತತ್ಸಂಬಂಧ ನಡೆಯುತ್ತಿದ್ದ ಸಾಮಾಜಿಕ ತಪ್ಪುಗಳ ವಿರುದ್ಧ ನೈತಿಕ ಆಕ್ರೋಶವನ್ನು ಅಪೇಕ್ಷಿಸುವುದು ಅಲ್ಲಿ ಅದು ಅಕ್ಷರಶಃ ವ್ಯರ್ಥವಾಗಿತ್ತು” ಎನ್ನುತ್ತಾರೆ.
ಇದನ್ನೂ ಓದಿರಿ: ವರ್ತಮಾನಕ್ಕೆ ಕನ್ನಡಿ ಹಿಡಿಯುವ ‘ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿ (ಭಾಗ-1)
ಈ ಕೃತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾನಡೆಯವರನ್ನು ಕೇಂದ್ರವಾಗಿಟ್ಟುಕೊಂಡು ಪ್ರಜಾಪ್ರಭುತ್ವ ಕುರಿತ ತಮ್ಮ ವ್ಯಾಖ್ಯಾನವನ್ನು ನೀಡುತ್ತಾರೆ. “ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲವೆಂದರೆ ಪ್ರಜಾಪ್ರಭುತ್ವದ ಮಾಮೂಲಿ ಚೌಕಟ್ಟಿಗೆ ಅಂತ ಯಾವುದೇ ಬೆಲೆ ಇರುವುದಿಲ್ಲ. ಅದು ಸರಿಯಾಗಿ ಹೊಂದಿಕೊಳ್ಳದ ವ್ಯವಸ್ಥೆಯಾಗುತ್ತದೆ. ಆದರೆ ಪ್ರಜಾಪ್ರಭುತ್ವ ಎಂಬುದು ಸರ್ಕಾರದ ರೂಪವಲ್ಲ, ಬದಲಿಗೆ ಅತ್ಯಗತ್ಯವಾಗಿ ಅದೊಂದು ಸಮಾಜದ ಒಂದು ರೂಪ ಎಂಬುದನ್ನು ರಾಜಕೀಯವಾದಿಗಳು ಎಂದಿಗೂ ಒಪ್ಪಿಕೊಳ್ಳಲೇ ಇಲ್ಲ. ಮತ್ತೊಂದು ವಿಚಾರ, ಪ್ರಜಾಪ್ರಭುತ್ವವಾದಿ ಸಮಾಜ ಎಂಬುದಕ್ಕೆ ಈ ಕೆಳಗಿನ ಅಂಶಗಳು ಇರಲೇಬೇಕು ಎಂದಲ್ಲ; ಅಂದರೆ ಐಕ್ಯತೆಯಿಂದ ಇರಬೇಕು, ಉದ್ದೇಶ ಹೊಂದಿರುವ ಸಮುದಾಯಗಳಾಗಿರಬೇಕು, ಸಾರ್ವಜನಿಕ ಅಗತ್ಯತೆಗಳಾಗಿ ವಿಧೇಯತೆ ಹೊಂದಿರಬೇಕು ಮತ್ತು ಪರಸ್ಪರ ಅನುಕಂಪ ಹೊಂದಿರಬೇಕು ಎಂದಲ್ಲ. ಬದಲಿಗೆ ಪ್ರಜಾಪ್ರಭುತ್ವ ಯಾವುದೇ ಚ್ಯುತಿಯಿರದ ರೀತಿ ಎರಡು ಅಂಶಗಳನ್ನು ಹೊಂದಿರಲೇಬೇಕು. ಒಂದನೆಯದು ಮನಸ್ಸುಗಳ ಮನೋಭಾವ, ಸಹಜೀವಿಗಳಿಗೆ ಸಮಾನತೆ ಮತ್ತು ಗೌರವವನ್ನು ನೀಡುವ ಮನೋಭಾವ. ಎರಡನೆಯದು ಕಠಿಣ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತವಾದ ಸಾಮಾಜಿಕ ಒಂದುಗೂಡುವಿಕೆ”. ಹೀಗೆ ಹೇಳುತ್ತ ಡಾ.ಅಂಬೇಡ್ಕರ್ ಅವರು, “ರಾನಡೆಯವರು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪಿಸಲು ಯತ್ನಿಸಿದರು. ಅದರ ಹೊರತಾಗಿ ಸುಸ್ಥಿರ ರಾಜಕಾರಣ ಅಸಾಧ್ಯ ಎಂಬುದನ್ನು ಪ್ರತಿಪಾದಿಸಿದರು” ಎಂದು ಹೇಳುತ್ತಾರೆ.
ಮುಂದುವರಿದು ಡಾ. ಅಂಬೇಡ್ಕರ್ ಅವರು, “ತಪ್ಪು ಸಾಮಾಜಿಕ ವ್ಯವಸ್ಥೆಯೆಂದರೆ, ಅದು ತೀವ್ರ ಅಪ್ರಜಾಪ್ರಭುತ್ವವಾದಿ ಆಗಿರುವುದು, ತೀರಾ ನಿರ್ದಿಷ್ಟ ವರ್ಗಗಳ ಪರ ಇರುವುದು ಮತ್ತು ಜನಸಾಮಾನ್ಯರ ವಿರುದ್ಧ ಇರುವುದು. ಹಾಗೆ ತೀವ್ರ ಕೋಮುವಾದಿ ಮನಸ್ಥಿತಿ ಇರುವುದು, ತೀವ್ರ ವರ್ಗ ಮನೋಭಾವ ಇರುವುದು. ಈ ನಿಟ್ಟಿನಲ್ಲಿ ಇಂಥವುಗಳ ಆಧಾರದ ಮೇಲೆ ರಾಜಕೀಯ ಪ್ರಜಾಪ್ರಭುತ್ವ ಕಟ್ಟಲ್ಪಟ್ಟರೆ ಅದು ಸಂಪೂರ್ಣ ನಗೆ ಪಾಟಲಿನದಾಗುತ್ತದೆ, ಅಸಗಂತವಾಗುತ್ತದೆ” ಎಂದು ಅಭಿಪ್ರಾಯಪಡುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳುವ ಈ ಮಾತುಗಳು ಪ್ರಸ್ತುತ ಮೋದಿ ಕಾಲದ ವಾತಾವರಣಕ್ಕೆ ಕನ್ನಡಿ ಹಿಡಿಯುವುದನ್ನು ಯಾರಾದರೂ ಗಮನಿಸಬಹುದು. ಡಾ.ಅಂಬೇಡ್ಕರ್ ಅವರು ಹೇಳುವ ಈ ಮಾದರಿಯಲ್ಲಿ ಜಸ್ಟಿಸ್ ರಾನಡೆಯವರು ಆ ಕಾಲದಲ್ಲಿ ಸಾಮಾಜಿಕ ಸುಧಾರಣೆಗೆ ಮುಂದಾಗಿದ್ದರು. ರಾನಡೆಯವರಿಗೆ ತೊಂದರೆ ಕೊಡಲು ಯಾರು ಮುಂದು ಬರಲಿಲ್ಲವೇ? ಅದಕ್ಕೆ ಅಂಬೇಡ್ಕರರು ಉದಾಹರಣೆ ಸಹಿತ ಮಾತು ಮುಂದುವರಿಸುತ್ತಾರೆ. “ಒಂದು ಬುದ್ಧಿವಂತ ಆದರೆ ಬದ್ಧತೆ ಇರುವ ಅಪ್ರಾಮಾಣಿಕ ಬುದ್ಧಿಜೀವಿ ವರ್ಗ ಸಾಂಪ್ರದಾಯಿಕತೆಯನ್ನು ರಕ್ಷಿಸಿಕೊಳ್ಳಲು ಮುಂದೆ ಬಂದಿತು ಮತ್ತು ಅದು ರಾನಡೆಯವರ ವಿರುದ್ಧ ಯುದ್ಧಕ್ಕಿಳಿಯಿತು”. ಅಂದರೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸಾಮಾಜಿಕ ಸುಧಾರಕ ರಾನಡೆಯವರ ವಿರುದ್ಧ ಅದೇ ಸಮುದಾಯದ ಸಂಪ್ರದಾಯವಾದಿಗಳು ಆ ಕಾಲದಲ್ಲೂ ಯುದ್ಧಕ್ಕಿಳಿದಿದ್ದನ್ನು ಗಮನಿಸಬಹುದು. ರಾನಡೆಯವರನ್ನು ನಿಂದಿಸಿದ್ದನ್ನು ಉಲ್ಲೇಖಿಸುತ್ತಾ ಅಂಬೇಡ್ಕರ್ ಅವರು, “ಸಾಮಾಜಿಕ ಸುಧಾರಣಾವಾದಿಗಳ ವಿರುದ್ಧ ಸಂಪ್ರದಾಯವಾದಿಗಳು ಬಳಸಿದ ತಂತ್ರ- ಬೈಗುಳಗಳ ಮೂಲಕ ನಿಂದಿಸುವುದು. ಖಂಡಿತ ಸಭ್ಯರು ಅಂಥವರ ವಿರುದ್ಧ ಹೋರಾಡುವುದು ಅಸಾಧ್ಯವಾಯಿತು” ಎಂದು ಕುಟುಕುತ್ತಾರೆ. ಅಂಬೇಡ್ಕರ್ ಅವರ ಈ ಮಾತನ್ನು ಸದ್ಯದ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಪರಿವಾರವಾದಿ ಅಂಧ ಭಕ್ತರ ವರ್ತನೆ ಮತ್ತು ಅವರು ನಡೆಸುವ ಸಂವಾದದ ಮಾದರಿಗೂ ನಾವು ಹೋಲಿಸಿಕೊಳ್ಳಬಹುದು.
ಇದನ್ನೂಓದಿರಿ: ‘ಭಾರತದಲ್ಲಿ ಜಾತಿಗಳು’: ಅವುಗಳ ಹುಟ್ಟು, ವಿಕಾಸವನ್ನು ಬಾಬಾಸಾಹೇಬರು ನೋಡಿದ್ದು ಹೇಗೆ?
ಈ ಕೃತಿಯ ಮತ್ತೊಂದು ಪ್ರಮುಖ ಅಂಶ ‘ಗಾಂಧಿ ಮತ್ತು ಜಿನ್ನಾ’ ಅವರ ಬಗ್ಗೆ ಕುರಿತದ್ದು. ಗಾಂಧಿ ಮತ್ತು ಜಿನ್ನಾ ಅವರ ಹೆಸರು ಈ ಕೃತಿಯಲ್ಲಿ ಏಕೆ ಬರುತ್ತದೆ? ಅದು 1942ರ ಕಾಲಘಟ್ಟ. ಭಾರತದ ವಿಭಜನೆಯ ಸದ್ದು ಕೇಳಿ ಬರುತ್ತಿದ್ದ ಕಾಲಘಟ್ಟ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1942ರಲ್ಲಿ ತಾವು ಮಾಡಿದ ಈ ಭಾಷಣದಲ್ಲಿ ರಾನಡೆಯವರ ರಾಜಕೀಯ ನಿಲುವುಗಳನ್ನು ಗಾಂಧಿ ಮತ್ತು ಜಿನ್ನಾ ಅವರ ರಾಜಕೀಯ ನಿಲುವುಗಳ ಜೊತೆ ಹೋಲಿಸುತ್ತ ಅವರುಗಳನ್ನು ತಮ್ಮ ಈ ಕೃತಿಯಲ್ಲಿ ಪ್ರಸ್ತಾಪಿಸುತ್ತಾರೆ. ಮುಖ್ಯವಾಗಿ ಗಾಂಧಿ ಮತ್ತು ಜಿನ್ನಾರವರು ತಮ್ಮ ವ್ಯಕ್ತಿತ್ವವನ್ನು ಕಡೆದು ರೂಪಿಸಿಕೊಂಡದ್ದು, ಯಾರೂ ಪ್ರಶ್ನಿಸದಂತೆ ಮಾಡಿಕೊಂಡಿದ್ದನ್ನು ಅಂಬೇಡ್ಕರ್‌ರವರು ವಿಶ್ಲೇಷಿಸುತ್ತಾ ವಿಮರ್ಶೆಗೆ ಒಡ್ಡುತ್ತಾರೆ. ಗಾಂಧಿ ಮತ್ತು ಜಿನ್ನಾರವರ ಇಂತಹ ವ್ಯಕ್ತಿತ್ವ ರೂಪಿಗೊಳ್ಳುವಿಕೆಗೆ ಕಾರಣವಾದದ್ದು ಅಂದಿನ ಪತ್ರಿಕೋದ್ಯಮ (ಅಂತಹದ್ದೇ ಪತ್ರಿಕೋದ್ಯಮ ಅಥವಾ ಮಾಧ್ಯಮ ಕ್ಷೇತ್ರ ಇಂದು ಮೋದಿಯವರನ್ನು ಅದೇ ರೀತಿ ಎತ್ತಿಹಿಡಿದಿರುವುದನ್ನು ನಾವು ಗಮನಿಸಬಹುದು). ಇದನ್ನು ವಿವರಿಸುತ್ತಾ ಅಂಬೇಡ್ಕರ್ ಅವರು, “ಗಾಂಧಿ ಮತ್ತು ಜಿನ್ನಾ ಅವರು ರೂಪಿಸಿಕೊಂಡಿರುವ ಇಂತಹ ಪಾರಮ್ಯ ಮತ್ತು ಪ್ರಶ್ನಿಸಲು ಸಾಧ್ಯವಾಗದಂತಹ ವ್ಯಕ್ತಿತ್ವ, ಅದಕ್ಕೆ ಕಾರಣ ಭಾರತದ ಈಗಿನ ಪತ್ರಿಕೋದ್ಯಮ. ಪತ್ರಿಕೋದ್ಯಮ ಹಿಂದೆ ಭಾರತದಲ್ಲಿ ಒಂದು ವೃತ್ತಿಯಾಗಿತ್ತು. ಈಗ ಅದು ಒಂದು ವ್ಯಾಪಾರವಾಗಿದೆ. ಸೋಪು ತಯಾರಿಕೆಗಿಂತ ಹೆಚ್ಚಿನ ನೈತಿಕ ಗುಣವನ್ನು ಈಗ ಅದು ಉಳಿಸಿಕೊಂಡಿಲ್ಲ. ಸಾರ್ವಜನಿಕರ ಪ್ರಾಮಾಣಿಕ ಸಲಹೆಗಾರನಾಗಿ ಅದು ತನ್ನನ್ನು ತಾನು ಪರಿಗಣಿಸುತ್ತಿಲ್ಲ. ಯಾವುದೇ ದುರುದ್ದೇಶ ಇಲ್ಲದೆ ಸುದ್ದಿಗೆ ಬಣ್ಣ ಕಟ್ಟದೆ ಸುದ್ದಿ ಕೊಡುವ, ಸಮುದಾಯದ ಹಿತಕ್ಕೆ ಒಳ್ಳೆಯದಾಗಲಿ ಎಂಬ ಕಾರಣ ಇಟ್ಟುಕೊಂಡು ಸಾರ್ವಜನಿಕ ನೀತಿಗಳನ್ನು ಪ್ರಸ್ತುತ ಪಡಿಸಬೇಕೆನ್ನುವ, ಯಾರು ಎಷ್ಟೇ ಎತ್ತರ ಇದ್ದರೂ ತಪ್ಪು ಮತ್ತು ಅಡ್ಡದಾರಿ ಹಿಡಿದವರನ್ನು ಯಾವುದೇ ಭಯವಿಲ್ಲದೆ ತಿದ್ದುವುದು ಖಂಡಿಸುವುದನ್ನು ತನ್ನ ಪ್ರಥಮ ಕರ್ತವ್ಯ ಎಂದು ಪತ್ರಿಕೋದ್ಯಮ ಅಂದುಕೊಳ್ಳುತ್ತಿಲ್ಲ. ವ್ಯಕ್ತಿಯೊಬ್ಬನನ್ನು ಒಪ್ಪಿಕೊಂಡು ಆತನನ್ನು ಪೂಜಿಸುವುದೇ ತಮ್ಮ ಪ್ರಮುಖ ಕರ್ತವ್ಯವೆಂದು ಇಂದು ಅವು ಪರಿಗಣಿಸಿವೆ” ಎಂದು ಟೀಕಾಪ್ರಹಾರ ನಡೆಸುತ್ತಾರೆ.

“ಇಂತಹ ಮಾದರಿಯ ಪತ್ರಿಕೋದ್ಯಮದ ಅಡಿಯಲ್ಲಿ ಸಹಜ ಸುದ್ದಿಯ ಸ್ಥಾನವನ್ನು ರೋಚಕತೆ ಆಕ್ರಮಿಸಿದೆ. ವೈಚಾರಿಕತೆಯಿಂದ ಒಡಮೂಡಬೇಕಾಗಿದ್ದ ಅಭಿಪ್ರಾಯದ ಸ್ಥಾನವನ್ನು ಅವೈಚಾರಿಕ ಮನೋವಿಕಾರ ಆಕ್ರಮಿಸಿದೆ. ಜವಾಬ್ದಾರಿಯುತ ಜನರ ಮನಸ್ಸುಗಳಿಗೆ ಕರೆ ಕೊಡಬೇಕಾಗಿದ್ದ ವಿಷಯಗಳ ಸ್ಥಾನವನ್ನು ಬೇಜವಾಬ್ದಾರಿಯುತ ಜನರ ಭಾವನೆಗಳಿಗೆ ಕರೆ ಕೊಡುವುದು ಆಕ್ರಮಿಸಿದೆ. ಪತ್ರಿಕೋದ್ಯಮ ಇಂದು ಆಫೀಸ್ ಬಾಯ್‌ಗಳಿಂದ ಆಫೀಸ್ ಬಾಯ್‌ಗಳಿಗೆ ಎಂಬಂತಾಗಿದೆ. ಡ್ರಮ್ ಬಾಯ್‌ಗಳಿಂದ ತಮ್ಮ ಹೀರೋಗಳನ್ನು ಹೊಗಳಲು ಬರೆಸಲ್ಪಟ್ಟ ರೀತಿಯಂತಿದೆ. ವ್ಯಕ್ತಿ ಪೂಜೆಗಾಗಿ ದೇಶದ ಹಿತಾಸಕ್ತಿಯನ್ನು ಇಷ್ಟೊಂದು ದಯನೀಯವಾಗಿ ಬಲಿ ಕೊಟ್ಟದ್ದು ಹಿಂದೆಂದೂ ನಡೆದಿಲ್ಲ. ಈ ಮಟ್ಟದ ಅಂಧಭಕ್ತಿಯ ರೂಪ ಪಡೆದಿದ್ದು ಭಾರತದಲ್ಲಿ ಹಿಂದೆಂದೂ ನಡೆದಿಲ್ಲ. ಈ ನಡುವೆ ಪತ್ರಿಕೋದ್ಯಮದ ಗೌರವವನ್ನು ಉಳಿಸಿಕೊಂಡಿರುವ ಒಂದಷ್ಟು ಜನರು ಇದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆಯಿದೆ. ಅವರ ದನಿ ತೀರ ಕ್ಷೀಣವಾಗಿದೆ…” ಎಂದು ತಿಳಿಸುತ್ತಾರೆ.
ಹೀಗೆ ರಾನಡೆಯವರನ್ನು ಗಾಂಧಿ ಮತ್ತು ಜಿನ್ನಾರವರಿಗೆ ಹೋಲಿಸುತ್ತ, ಅಂದಿನ ಪತ್ರಿಕೋದ್ಯಮವನ್ನು ಜೊತೆಗೆ ವಿಶ್ಲೇಷಿಸುತ್ತ ಬಾಬಾಸಾಹೇಬರು ಮಾಧ್ಯಮ ಕ್ಷೇತ್ರ ಅಂದು ತಲುಪಿದ್ದ ಸ್ಥಿತಿಯನ್ನು ತಮ್ಮ ಈ ಕೃತಿಯಲ್ಲಿ ಹೊರಗೆಡವುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರರ ಆ ಮಾತುಗಳು ಇಂದಿನ ಮಾಧ್ಯಮ ಕ್ಷೇತ್ರಕ್ಕೆ ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ಅನ್ವಯಿಸುತ್ತಿವೆ ಎಂಬುದನ್ನು ಓದುಗರು ಗಮನಿಸಬಹುದು.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಒಟ್ಟಾರೆ ಹೇಳುವುದಾದರೆ, ಡಾ.ಅಂಬೇಡ್ಕರ್‌ರವರ ಈ ಕಿರು ಕೃತಿ ಜಸ್ಟೀಸ್ ಮಹಾದೇವ ಗೋವಿಂದ ರಾನಡೆಯವರ ವ್ಯಕ್ತಿತ್ವವನ್ನು ವಿಮರ್ಶಿಸುತ್ತ ಅಂದಿನ ಭಾರತದ ಚಿತ್ರಣವನ್ನು, ವಿಶೇಷವಾಗಿ ಹಿಂದೂ ಧರ್ಮ, ಅಂದಿನ ಪತ್ರಿಕೋದ್ಯಮ, ಸಾಮಾಜಿಕ ಸ್ಥಿತಿಗತಿಯನ್ನು ತೆರೆದಿಡುತ್ತದೆ. ಮುಖ್ಯವಾಗಿ ಇಲ್ಲಿಯ ಈ ಎಲ್ಲ ವಿಚಾರಗಳು ಯಾವ ರೀತಿ ಈಗಲೂ ಪ್ರಸ್ತುತ, ಅದರಲ್ಲೂ ಸಂಘಪರಿವಾರ, ಕೋಮುವಾದ, ಅದರ ಪತ್ರಿಕೋದ್ಯಮದ ರೀತಿ, ವ್ಯಕ್ತಿ ಪೂಜೆ, ಸಾಮಾಜಿಕ ಮಾಧ್ಯಮಗಳಲ್ಲಿನ ಅಂಧಭಕ್ತಿ- ಹೀಗೆ ಎಲ್ಲದಕ್ಕೂ ಈ ಕೃತಿ ಕನ್ನಡಿ ಹಿಡಿಯುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೃತಿಗಳು ಮತ್ತು ಬರಹಗಳು ಸಾರ್ವಕಾಲಿಕ. ಭವಿಷ್ಯಕ್ಕೂ ವರ್ತಮಾನಕ್ಕೂ ಅವು ಪೀನ ಮಸೂರ ನಿಮ್ನ ಮಸೂರಗಳನ್ನು ಹಿಡಿಯುತ್ತವೆ. ವೈಚಾರಿಕತೆಯ ಧಿಕ್ಕಾಗುತ್ತವೆ, ಬೆಳಕಾಗುತ್ತವೆ.
(ಮುಗಿಯಿತು…)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ರಘೋತ್ತಮ ಹೊ.ಬ
ಲೇಖಕ




