ಕರ್ನಾಟಕದಲ್ಲಿ ಕೋಮುವಾದಕ್ಕೆ ಬಲಿಯಾಗದ ರಂಗಭೂಮಿ

Date:

ಭಾರತದ ಸಾಂಸ್ಕೃತಿಕ ವಲಯದಲ್ಲಿ 70ರ ದಶಕ ಬಹಳ ಕ್ರಿಯಾಶೀಲವಾದ ಕಾಲ. ಅದು ರಂಗಭೂಮಿ ಮಾತ್ರವಲ್ಲ ಜನಜೀವನದ ಎಲ್ಲ ವಿಭಾಗಗಳಿಗೂ ಅನ್ವಯಿಸುವ ಮಾತು, ಯಾಕೆಂದರೆ ರಾಜಕೀಯ, ಚಳವಳಿ, ಹೋರಾಟ, ಸಾಹಿತ್ಯ, ಕಲೆ, ಮಾತ್ರವಲ್ಲ ಕೃಷಿವಲಯಕ್ಕೂ ಅನ್ವಯಿಸುವಂತೆ ಸೃಜನಾತ್ಮಕ ಶಕ್ತಿ ಹಲವು ಧಾರೆಗಳಾಗಿ ಪ್ರವಹಿಸಿದ ಕಾಲವದು.

ಸಮಾಜದಲ್ಲಿನ ಎಲ್ಲ ವಿದ್ಯಮಾನಗಳಿಗೆ ಮೊದಲು ಸ್ಪಂದಿಸುವಾತ ಕವಿ ಎಂಬ ಮಾತಿದೆ. ಹಾಗೆಯೇ ಎಲ್ಲ ವಿದ್ಯಮಾನಗಳಿಗೂ ಮೊದಲು ಪ್ರತಿಕ್ರಿಯಿಸುವುದು ರಂಗಭೂಮಿ ಎನ್ನುವುದಕ್ಕೆ ಸಾಕ್ಷಿ ಎಂಬಂತೆ 70ರ ದಶಕದ ರಂಗಭೂಮಿ ಕ್ರಿಯಾಶೀಲವಾಗಿತ್ತು ಎನ್ನುವುದನ್ನು ಬಹುಶಃ ನಾವೆಲ್ಲರೂ ಕಂಡಿದ್ದೇವೆ.

ಅದಕ್ಕೆ ಇಂದು ಹಲವು ಕಾರಣಗಳನ್ನು ಗುರುತಿಸಬಹುದು. ದೇಶ ಸ್ವಾತಂತ್ರ್ಯ ಗಳಿಸಿದ ನಂತರ ಪ್ರಾರಂಭದಲ್ಲಿದ್ದ ಹುಮ್ಮಸ್ಸು ಮರೆಯಾಗಿ ಆದರ್ಶವಾದದ ಕಲ್ಪನೆಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಭ್ರಮನಿರಸನಗಳು ಆರಂಭವಾಗಿದ್ದವು. ಎಲ್ಲ ವಲಯಗಳಲ್ಲಿ ಹೊಸ ಚಿಂತನೆಗಳು ಪ್ರಾರಂಭವಾಗಿ ಹೊಸ ವ್ಯವಸ್ಥೆಯೊಂದರ ಹುಟ್ಟಿಗೆ, ಕಾರಣವಾಗಬಲ್ಲ ವೈಚಾರಿಕತೆಯತ್ತ ಸಾಗಲು ಜನರು ಪ್ರಯತ್ನಿಸುತ್ತಿದ್ದ ಕಾಲ ಅದಾಗಿತ್ತೆಂದು ಸ್ಥೂಲವಾಗಿ ಹೇಳಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಂಗಭೂಮಿ ಎನ್ನುವುದು ಸಮುದಾಯದಿಂದ ಹುಟ್ಟಿದ್ದು ಸಮುದಾಯದ್ದೇ ಆಗಿ ಮುಂದುವರಿಯುವಂಥದ್ದು. ಇದು ಬೇರೆ ಕಲೆಗಳ ಹಾಗಲ್ಲ. ಇತರ ಕಲಾಪ್ರಕಾರಗಳು ಮುಖ್ಯವಾಗಿ ಸಂಗೀತ, ಸಾಹಿತ್ಯ, ಚಿತ್ರಕಲೆಯಂಥವು ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಏಕಾಂತದಲ್ಲಿ ಇದ್ದು ನಂತರ ಸಮುದಾಯದತ್ತ ಚಲಿಸಬಲ್ಲವು. ಆದರೆ ರಂಗಭೂಮಿ ಹಾಗಲ್ಲ, ಅದು ಘಟಿಸುವುದೇ ಜನರ ಕೂಡುವಿಕೆಯಿಂದ. ಸೈದ್ಧಾಂತಿಕವಾಗಿ ಕೂಡಾ ಒಂದು ರಂಗಕ್ರಿಯೆ ಹುಟ್ಟುವುದಕ್ಕೆ ಒಬ್ಬ ನಟ/ನಟಿ ಮತ್ತು ಒಬ್ಬ ಪ್ರೇಕ್ಷಕ ಬೇಕು. ಅವರಿಬ್ಬರ ನಡುವಿನ ಅನುಸಂಧಾನವೇ ರಂಗಭೂಮಿ. ಈ ಇಬ್ಬರ ಕೂಡುವಿಕೆ ರಂಗಭೂಮಿಯ ಅನಿವಾರ್ಯ ಅಂಶ. ಹಾಗಾಗಿ ರಂಗಭೂಮಿ ಎಂದರೆ ಒಗ್ಗೂಡುವಿಕೆ. ನಂತರ ಅದು ಅನೇಕದತ್ತ ಚಲಿಸುತ್ತದೆ. ಅದು ಎಲ್ಲರೊಳಗೊಂದಾಗುವ ಬಹುತ್ವ. ಆದ್ದರಿಂದ ಪ್ರತಿಕ್ಷಣವೂ ರಂಗಭೂಮಿ ಸಮಾಜವನ್ನು ಗಮನಿಸಬೇಕು, ಗ್ರಹಿಸಬೇಕು. ಅದರಿಂದ ಸ್ವೀಕರಿಸಬೇಕು ಮತ್ತು ಎಲ್ಲವನ್ನು ಒಳಗೊಂಡ ಪ್ರಕ್ರಿಯೆ ಹಾಗೂ ಪ್ರತಿಕ್ರಿಯೆಗಳ ಕಲಾತ್ಮಕ ಅಭಿವ್ಯಕ್ತಿಯ ಪ್ರಯತ್ನ ಮಾಡಬೇಕು. ಹಾಗಾದಾಗ ಅದು ಖಂಡಿತ ಜೀವಪರ ಅಭಿವ್ಯಕ್ತಿಯಾಗಿರುತ್ತದೆ. ಇದು ಯಾವುದೇ ರಂಗಭೂಮಿಯ ಜೀವಂತಿಕೆಯ ಲಕ್ಷಣ ಎಂದು ನನ್ನ ನಂಬಿಕೆ.

70ರ ದಶಕದ ನಂತರದ ಈ ದಿನಗಳಲ್ಲಿ ಬಹಳವಾಗಿ ಕೇಳಿಬರುತ್ತಿರುವ ಮಾತೆಂದರೆ ಹವ್ಯಾಸಿಗಳು ಮತ್ತು ವೃತ್ತಿನಿರತರು ಎಂಬ ಎರಡು ಪದಗಳು. ಇದು ಕಂಪೆನಿ ನಾಟಕಗಳ ಕಾಲದ ಮಟ್ಟಿಗೆ ಹೇಳುವುದಾದರೆ ನಿಜವಾಗಿತ್ತು. ಆಗ ವೃತ್ತಿ ಕಂಪೆನಿಗಳು ಇದ್ದವು, ಈಗಲೂ ಇವೆ. ಅವುಗಳು ಅದನ್ನೊಂದು ಉದ್ಯಮದ ಶಿಸ್ತಿನಿಂದ ನಡೆಸುತ್ತವೆ. ಆ ಕಾಲದಲ್ಲಿ ಉಳಿದ ರಂಗಚಟುವಟಿಕೆಗಳು ಶುದ್ಧ ಹವ್ಯಾಸಿ ನೆಲೆಯಲ್ಲಿ ನಡೆಯುತ್ತಿದ್ದವು.

ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

ಆದರೆ ಈಗ ಆಧುನಿಕ ರಂಗಭೂಮಿಯ ಹುಟ್ಟಿನ ನಂತರ ಪರಿಸ್ಥಿತಿ ಹಾಗಿಲ್ಲ. ವೃತ್ತಿ ಮತ್ತು ಹವ್ಯಾಸಿ ಎಂಬ ಪದಗಳು ಮೊದಲಿನ ಅರ್ಥವನ್ನು ಕಳೆದುಕೊಂಡಿವೆ. ಹೌದು ನಮ್ಮಲ್ಲಿ ರಂಗಭೂಮಿ ಇದೆ. ಅದು ಹೋಲಿಕೆಯ ದೃಷ್ಟಿಯಿಂದ ಮೊದಲಿಗಿಂತ ಹೆಚ್ಚು ವಿಶಾಲವಾಗಿ ಕನ್ನಡದ ಮಟ್ಟಿಗಂತೂ ದೊಡ್ಡದಾಗಿ ಕಾಣುವಷ್ಟು ಬೆಳೆದಿದೆ. ನಮ್ಮಲ್ಲಿ ವೃತ್ತಿನಿರತ ನಟ, ನಟಿ, ನಿರ್ದೇಶಕ, ತಂತ್ರಜ್ಞರು ಎಲ್ಲರೂ ಇದ್ದಾರೆ. ಇವರು ತಮ್ಮ ಉಪಜೀವನದ ಆದಾಯಕ್ಕೆ ರಂಗಕಾಯಕವನ್ನೇ ಅವಲಂಬಿಸಿದ್ದಾರೆ. ಹಾಗೆಯೇ ಬೇರೆ ಹಲವು ಉದ್ಯೋಗಗಳನ್ನು ಮಾಡುತ್ತ ನಿರಂತರ ರಂಗಕಾಯಕವನ್ನು ಮಾಡುವವರೂ ಇದ್ದಾರೆ. ಇವರೆಲ್ಲರಲ್ಲಿ ಹವ್ಯಾಸಿ ಮತ್ತು ವೃತ್ತಿಪರರು ಎಂಬ ವಿಭಜನೆ ಸರಿಯಾದದ್ದಲ್ಲವೆಂದೇ ನನ್ನ ಸ್ಪಷ್ಟ ಅಭಿಪ್ರಾಯ. ಈ ಎರಡೂ ತರದ ಜನರಲ್ಲಿ ನಮ್ಮಲ್ಲಿನ ಅನೇಕ ರಂಗ ಶಾಲೆಗಳಿಂದ ಶಿಕ್ಷಣ ಪಡೆದವರಿದ್ದಾರೆ. ಹಾಗೆಯೇ ಅಧಿಕೃತ ರಂಗ ಶಿಕ್ಷಣ ಪಡೆಯದವರೂ ಇದ್ದಾರೆ. ಆದರೆ ಈಗ ಕೆಲವು ಸಲ ಹವ್ಯಾಸಿ ರಂಗಕರ್ಮಿಗಳು ಎಂದರೆ ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸದಿರುವವರು ಅಥವಾ ಇನ್ನೂ ರೂಢಿಯಲ್ಲಿರುವಂತೆ ಹೇಳುವುದಾದರೆ ಅಡ್ಡ ಕಸುಬಿಗಳು ಎಂಬ ಭಾವನೆಯಿಂದ ಉಲ್ಲೇಖಿಸುತ್ತಾರೆ; ಇದು ಸರಿಯಾದುದಲ್ಲ. ಜೀವನದ ಎಲ್ಲ ರಂಗಗಳಲ್ಲಿ ಇರುವಂತೆ ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸಿ ದುಡಿಯುವವರು ಮತ್ತು ಆ ರೀತಿ ಇಲ್ಲದವರು ಎಲ್ಲ ಕಡೆಗಳಲ್ಲೂ ಸಿಗುತ್ತಾರೆ. ಆದ್ದರಿಂದ ಇಂದಿನ ನಾವು ಆಧುನಿಕ ರಂಗಭೂಮಿಯೆಂದು ಕರೆಯುವ ಈ ರಂಗ ಕಾಯಕಕ್ಕೆ ಹವ್ಯಾಸಿ ಮತ್ತು ವೃತ್ತಿಪರ ಎಂಬ ವಿಭಜನೆ ಸರಿಯಾದುದಲ್ಲ.

ಸಮಾಜದ ಎಲ್ಲ ವಿಭಾಗಗಳಿಗೂ ಶಿಕ್ಷಣ ಎನ್ನುವುದು ಅಗತ್ಯದ ಅಂಶ, ವೃತ್ತಿಗಳಿಗಂತೂ ಇದು ಅನಿವಾರ್ಯ. ಒಂದು ಸಮಾಜ ತನ್ನ ಅನುಭವವನ್ನು ಮುಂದಿನ ಪೀಳಿಗೆಗೆ ಅಥವಾ ಆಸಕ್ತರಿಗೆ ದಾಟಿಸುವುದೇ ಶಿಕ್ಷಣದ ಮೂಲಕ. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಬೇರೆ ಎಲ್ಲ ವೃತ್ತಿಗಳಿಗೆ ಒಂದು ಉತ್ಪನ್ನವಿದೆ. ಅಂದರೆ ಒಂದು ಪ್ರಾಡಕ್ಟ್ ಇದೆ. ಉದಾಹರಣೆಗೆ ಸಿನಿಮಾ, ಟಿ.ವಿ. ಮಾಧ್ಯಮಗಳು. ಇನ್ನು ಚಿತ್ರಕಲೆ, ಶಿಲ್ಪಕಲೆ ಹಾಗೂ ಇಂದಿನ ದಿನಗಳಲ್ಲಿ ಸಂಗೀತ ಕೂಡಾ ಒಂದು ಉತ್ಪನ್ನವಾಗಬಲ್ಲದು. ಇನ್ನುಳಿದ ಹಲವು ಪ್ರಕಾರಗಳು ಸೇವೆ (ಸರ್ವೀಸ್) ಯೆಂದು ಪರಿಗಣಿತವಾಗುತ್ತವೆ. ಆದರೆ ರಂಗಭೂಮಿಗೆ ಆ ಸೌಲಭ್ಯ ಇಲ್ಲ. ಅದು ರಂಗದಲ್ಲಿ ಹುಟ್ಟಿ ಅಲ್ಲೇ ಮುಗಿಯುವಂಥದ್ದು. ಆದರೆ ಆ ಕ್ಷಣದಲ್ಲಿಯೇ ಒಂದು ಅನುಭವವನ್ನು ಕಾಣ್ಕೆಯನ್ನು ಪ್ರೇಕ್ಷಕನಿಗೆ ದಾಟಿಸುವಂಥದ್ದು. ಪ್ರತಿ ಪ್ರದರ್ಶನವೂ ಒಂದು ಪ್ರೊಡಕ್ಷನ್ ಪ್ರೊಸೆಸ್, ಅದೇ ಉತ್ಪನ್ನವಲ್ಲ. ಬದಲಿಗೆ ಪ್ರೇಕ್ಷಕನೇ ಅದರ ಉತ್ಪನ್ನ.

ಆ ವಿಚಾರದಲ್ಲಿ ರಂಗಭೂಮಿಯನ್ನು ಹೋಲಿಸಬಹುದಾದದ್ದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ. ಅಲ್ಲಿ ಶಿಕ್ಷಕ ಒಂದು ಸಮಾಜದ ಸಂಚಿತ ಅನುಭವವನ್ನು ತನ್ನ ಅನುಭವಗಳ ಮತ್ತು ಕಾಣ್ಕೆಯ ಮೂಲಕ ಮತ್ತೆ ಸಮಾಜಕ್ಕೆ ತಲುಪಿಸುತ್ತಿರುತ್ತಾನೆ. ಅಲ್ಲಿ ಶಿಕ್ಷಣ ಪಡೆದ ಸಮಾಜವೇ ಪ್ರಾಡಕ್ಟ್. ಶಿಕ್ಷಣ ಕ್ಷೇತ್ರ ಹಾಗೂ ರಂಗಭೂಮಿಗಳ ನಿಜವಾದ ಶಕ್ತಿ ಇರುವುದು ಈ ವಿಚಾರದಲ್ಲಿ. ಆದ್ದರಿಂದಲೇ ಇವು ಜನಪರ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳ ಕೈಯಲ್ಲಿರುವುದು ಬಹಳ ಮುಖ್ಯ.

ನಮ್ಮ ರಂಗ ಶಿಕ್ಷಣ ಕೇಂದ್ರಗಳಿಂದ ಶಿಕ್ಷಿತರಾಗಿ ಬರುತ್ತಿರುವವರ ಸ್ಥಿತಿ ಹೇಗಿದೆ? ಈಗ ನಮ್ಮಲ್ಲಿ ಅದೂ ಕನ್ನಡದ ಮಟ್ಟಿಗೆ ರಂಗಚಟುವಟಿಕೆಗಳು ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿರುವುದು ನಿಜ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಕೊಡುತ್ತಿರುವ ಅನುದಾನಗಳು ಹಾಗೂ ಸ್ವಲ್ಪ ಮಟ್ಟಿಗೆ ಕಾರ್ಪೊರೇಟ್ ಸಂಸ್ಥೆಗಳು ಹಣ ನೀಡುತ್ತಿರುವುದು. ಸರ್ಕಾರದ ಅನುದಾನ ಕಡಿಮೆಯಾಯಿತೆಂದರೆ ಅಥವಾ ನಿಂತು ಹೋದರೆ ನಮ್ಮ ಆಧುನಿಕ ರಂಗಭೂಮಿ ಎನ್ನುವುದು ನಾಮಾವಶೇಷವಾಗುವ ಸ್ಥಿತಿಯಲ್ಲಿ ನಾವಿದ್ದೇವೆ.

Yashvanth
ಯಕ್ಷಗಾನ (ಸಾಂದರ್ಭಿಕ ಚಿತ್ರ)

ಇಷ್ಟೊಂದು ಸುದೀರ್ಘವಾದ ಪೀಠಿಕೆಯ ನಂತರ ಯೋಚಿಸಬೇಕಾದ ಸಂಗತಿಯೆಂದರೆ ನಮ್ಮ ಪಾರಂಪರಿಕ ರಂಗಭೂಮಿಯಾದ ಯಕ್ಷಗಾನ, ದೊಡ್ಡಾಟ, ಸಣ್ಣಾಟ, ಹರಿಕತೆ, ತಾಳಮದ್ದಲೆಯಂತಹ ಪ್ರಕಾರಗಳಾಗಲೀ, ನಂತರ ಬಂದಂತಹ ಕಂಪನಿ ಶೈಲಿಯ ವೃತ್ತಿ ರಂಗಭೂಮಿಯಾಗಲೀ ಆಯಾ ಕಾಲಘಟ್ಟದಲ್ಲಿನ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಯೇ ನಡೆದುಕೊಳ್ಳುತ್ತಿದ್ದವು. ಹೆಚ್ಚಿನವು ರಾಜಾಶ್ರಯದಲ್ಲಿ ಉಳಿದು ಬೆಳೆದವುಗಳಾದ್ದರಿಂದ ಅರಸೊತ್ತಿಗೆಯನ್ನಾಗಲೀ, ಊಳಿಗಮಾನ್ಯ ವ್ಯವಸ್ಥೆಯ ಆಧಾರಸ್ತಂಭವಾದ ಜಾತಿವ್ಯವಸ್ಥೆಯನ್ನಾಗಲೀ ವಿರೋಧಿಸಿರುವುದು ಹೋಗಲಿ ಪ್ರಶ್ನಿಸಿದ್ದೇ ಬಹಳ ಕಡಿಮೆ. ಕಾವ್ಯಗಳಲ್ಲಿ ಅಥವಾ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಇಂತಹ ಪ್ರತಿರೋಧದ ವಿಚಾರಗಳನ್ನು ನಾವು ಕಾಣಬಹುದಾದರೂ ರಂಗಭೂಮಿಯೆನ್ನುವುದು ಹೆಚ್ಚು ವ್ಯವಸ್ಥೆಯ ಪರವಾಗಿಯೇ ಇತ್ತು.

ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 1)

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ವೃತ್ತಿ ಕಂಪನಿಗಳು ಮಾತ್ರವಲ್ಲ ನಮ್ಮ ಪಾರಂಪರಿಕ ಕಲಾಪ್ರಕಾರಗಳೂ ಅದರಲ್ಲಿ ಭಾಗವಹಿಸಿವೆ ಮತ್ತು ದೇಶ ಭಕ್ತಿಯ ಪ್ರದರ್ಶನಗಳನ್ನೂ ಮಾಡಿವೆ. ಅವುಗಳಲ್ಲಿ ಹೆಚ್ಚಿನವು ಗಾಂಧೀವಾದದ ಹಿನ್ನೆಲೆಯಲ್ಲಿದ್ದವು ಮಾತ್ರವಲ್ಲ, ಸಮಾಜದ ಎಲ್ಲ ಸಮಸ್ಯೆಗಳಿಗೂ ಗಾಂಧೀಜಿಯ ಟ್ರಸ್ಟೀಶಿಪ್ ಸಮಾಜವಾದದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದವು.

ರಂಗಭೂಮಿಗೆ ಪ್ರತಿರೋಧದ, ಪ್ರತಿಭಟನೆಯ ಜೀವಪರ ಆಯಾಮ ಬಂದದ್ದು ಈಗ ನಾವು ಆಧುನಿಕ ರಂಗಭೂಮಿ ಎಂದು ಕರೆಯುತ್ತಿರುವ ರಂಗಪ್ರಯೋಗಗಳು ಪ್ರಾರಂಭವಾದ ನಂತರವೇ. ಇದು ಹೆಚ್ಚಾಗಿ ಇಂಗ್ಲಿಷ್ ಭಾಷೆಯ ಮೂಲಕ ಬಂದ ಪಾಶ್ಚಿಮಾತ್ಯ ಚಿಂತನೆಗಳಿಂದ, ಎಡಪಂಥೀಯ ವಿಚಾರಧಾರೆಯಿಂದ ಹುಟ್ಟಿದ ಹೊಸ ವೈಚಾರಿಕತೆಯ ಪ್ರಭಾವಕ್ಕೊಳಗಾದ ರಂಗಭೂಮಿಯಾಗಿತ್ತು. ಜೊತೆಗೆ ಈ ಆಧುನಿಕ ರಂಗಭೂಮಿಯವರು ನಮ್ಮ ಭಾರತೀಯ ಪರಂಪರೆಯಲ್ಲಿದ್ದ ಸಂಸ್ಕೃತ ನಾಟಕಗಳನ್ನು ಹಾಗೂ ಪುರಾಣ ಇತಿಹಾಸಗಳನ್ನು ಹೊಸ ಚಿಂತನೆಗಳ ಶಿಸ್ತಿಗೊಳಪಡಿಸಿ ರಂಗಕ್ಕೆ ತರತೊಡಗಿದರು.

ಆದ್ದರಿಂದಲೇ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಲ್ಲೇ ಸಾಹಿತ್ಯದಲ್ಲಿ ಮಾತ್ರವಲ್ಲ ರಂಗಭೂಮಿಯಲ್ಲಿ ಎಡಪಂಥೀಯ ವಿಚಾರಧಾರೆ ಪ್ರಧಾನ ನೆಲೆಯಾಗಿ ಮುಂದುವರಿಯಿತು.

ಇದಕ್ಕೆ ವಿರೋಧವೂ ವ್ಯಕ್ತವಾಯಿತು. ಮೊದಲ ವಿರೋಧ ಬಂದಿದ್ದು ಊಳಿಗಮಾನ್ಯ ಶಕ್ತಿಗಳಿಂದ ಮತ್ತು ಇವರಿಂದಲೇ ತುಂಬಿಕೊಂಡಿದ್ದ ರಾಜಕೀಯ ಪಕ್ಷಗಳಿಂದ. ಎಡಪಂಥೀಯ ರಂಗ ಕಲಾವಿದರು ಹಲ್ಲೆಗೊಳಗಾದರು, ಕೆಲವರು ಜೀವವನ್ನೂ ತೆತ್ತರು. ಜನ ನಾಟ್ಯಮಂಚದ ಸಫ್ದರ್ ಹಶ್ಮಿಯಂಥವರ ಉದಾಹರಣೆ ನಮ್ಮ ಮುಂದೆ ಇದೆ. ಆದರೆ ಇದೆಲ್ಲವನ್ನೂ ಎದುರಿಸಿ ಆಧುನಿಕ ರಂಗಭೂಮಿ ಬೆಳೆದು ನಿಂತಿತು. ಅನಿವಾರ್ಯವಾಗಿಯಾದರೂ ಸರ್ಕಾರಗಳು ಇದರ ನೆರವಿಗೆ ಬರಬೇಕಾಯಿತು. ರಾಷ್ಟ್ರೀಯ ನಾಟಕ ಶಾಲೆ ಬಂತು. ಅಲ್ಲಲ್ಲಿ ರಂಗಶಾಲೆಗಳು ಪ್ರಾರಂಭವಾದವು.

ಮತ್ತೆ 70 ದಶಕದ ವಿಷಯಕ್ಕೆ ಬರುತ್ತೇನೆ. ಆಗ ಸರ್ಕಾರಗಳ ಅನುದಾನ ಇರಲಿಲ್ಲ, ಇದ್ದರೂ ಕನಿಷ್ಟವಾಗಿತ್ತು ಮತ್ತು ರಂಗಭೂಮಿ ಸ್ವತಂತ್ರವಾಗಿತ್ತು. ಅಂದಿನ ಹಲವು ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲಲು ಹೆಚ್ಚು ಶಕ್ತವಾಗಿತ್ತು. ಈಗ ಆ ಪರಿಸ್ಥಿತಿ ಕಡಿಮೆಯಾಗಿದೆ. ಎಲ್ಲಕಡೆಯೂ ಒಂದು ರೀತಿಯ ರಾಜೀ ಮನೋಭಾವ ಹೆಚ್ಚಿದೆ. ಇದಕ್ಕೆ ಸರ್ಕಾರದ ಅನುದಾನಗಳು ಒಂದು ಕಾರಣವಾದರೆ, ಜಾಗತೀಕರಣದ ನಂತರದ ಹಬ್ಬಿದ ವ್ಯಾಪಾರೀ ಮನೋಭಾವವೂ ಸಾಕಷ್ಟು ಕಾರಣವಾಗಿದೆ. ರಂಗಭೂಮಿಯೂ ಒಂದು `ಮಾರ್ಕೆಟೆಬಲ್ ಕಮೋಡಿಟಿ’ಯನ್ನು ತಯಾರಿಸುವ ಸಂಸ್ಥೆಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಇದರಲ್ಲಿ ನಮ್ಮ ರಾಷ್ಟ್ರೀಯ ನಾಟಕ ಶಾಲೆಗಳ ಪಾಲು ಕೂಡಾ ಇಲ್ಲವೇ?

ಇವೆಲ್ಲದರಿಂದ ರಂಗಕರ್ಮಿಗಳು ರಿಸ್ಕ್ ತೆಗದುಕೊಳ್ಳುತ್ತಿಲ್ಲವೆಂದು ನನ್ನ ಅನಿಸಿಕೆ. ಅಂದಿನ ಹಲ್ಲಾಬೋಲ್, ಬೆಲ್ಚಿಯಂತಹ ನಾಟಕವಿರಲಿ, ನಂತರ ಕನ್ನಡದಲ್ಲೇ ಬಂದ ಚೂರಿ ಕಟ್ಟೆ, ಎತ್ತ ಹಾರಿದೆ ಹಂಸ, ಅಪರೂಪಕ್ಕೊಮ್ಮೆ ಆಗುವ ಉಚಲ್ಯಾ, ಬದುಕು ಬಯಲು, ಗುಲಾಬಿ ಗ್ಯಾಂಗ್, ಇತ್ತೀಚಿನ ಬಾಬ್ ಮಾರ್ಲೆ ಫ್ರಂ ಕೋಡಿಹಳ್ಳಿ ಇಂತಹ ಕೆಲವು ನಾಟಕಗಳನ್ನು ಬಿಟ್ಟರೆ ರೂಪಕಗಳ ಮೂಲಕ ಸಮಕಾಲೀನ ಸಮಾಜದ ವಿಡಂಬನೆ, ವಿಮರ್ಶೆ ಎಂದು ಕರೆದುಕೊಳ್ಳುವ ಪೌರಾಣಿಕ, ಮಹಾಕಾವ್ಯಗಳ ಇತಿಹಾಸದ ಸಂದರ್ಭಗಳ ಕಥೆಗಳೇ ಮತ್ತೆ ಮತ್ತೆ ಪ್ರದರ್ಶನವಾಗಲು ಕಾರಣವೇನು?

tejasvi
ಪೂರ್ಣಚಂದ್ರ ತೇಜಸ್ವಿ

ಒಮ್ಮೆ ನಾಟಕ ಪ್ರದರ್ಶನವೊಂದರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಹೇಳಿದ ಮಾತು ನೆನಪಾಗುತ್ತದೆ. “ನಿಮಗೆ ನಾಟಕದವರಿಗೆ ಎಲ್ಲವನ್ನೂ ಚರಿತ್ರೆ, ಪುರಾಣಗಳ ಮೂಲಕವೇ ಹೇಳಬೇಕೆಂಬ ಚಟ ಯಾಕೆ? ನೇರವಾಗಿ ವರ್ತಮಾನಕ್ಕೆ ಮುಖಾಮುಖಿಯಾಗೋಕ್ಕೇ ಆಗಲ್ವ?’’ ಎಂದಿದ್ದರು. ಇದು ಇಂದಿನ ಸಂದರ್ಭದಲ್ಲಿ ಹೆಚ್ಚು ಅನ್ವಯವಾಗುವಂತಿದೆ.

ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 2)

ಸುಸ್ಥಿರ ರಂಗಭೂಮಿಯ ಬಗ್ಗೆ ಮಾತನಾಡುವ ನಾವು ರಂಗಭೂಮಿಯ ಆರ್ಥಿಕತೆಯ ಬಗ್ಗೆ ಗಂಭೀರವಾಗಿ ಯೋಚಿಸುವ ಮತ್ತು ಯೋಜಿಸುವ ಕಾಲ ಬಂದಿದೆ. ಅದು ಇಂದಿನ ತುರ್ತು ಕೂಡಾ.

ಇಷ್ಟೆಲ್ಲ ವಿದ್ಯಮಾನಗಳು ನಡೆದರೂ ನಮ್ಮ ವೃತ್ತಿ ಕಂಪೆನಿಗಳಿಗಾಗಲೀ, ಯಕ್ಷಗಾನವೂ ಸೇರಿದಂತೆ ಉಳಿದ ಜಾನಪದ ಕಲಾಪ್ರಕಾರಗಳಿಗಾಗಲೀ ಈ ಸಮಸ್ಯೆ ಬರಲೇ ಇಲ್ಲ. ಯಾಕೆಂದರೆ ಅವು ಊಳಿಗಮಾನ್ಯ ವ್ಯವಸ್ಥೆಯನ್ನು ವಿರೋಧಿಸುವುದು ಇರಲಿ ಪ್ರಶ್ನಿಸಿದ್ದೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಕೋಮುವಾದಿಗಳು ಶೈಕ್ಷಣಿಕ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಪಡುತ್ತಲೇ ಇದ್ದಾರೆ. ಅದರಂತೆಯೇ ಎಷ್ಟೇ ಸಮಸ್ಯೆಗಳಿದ್ದರೂ ಸಾಂಸ್ಕೃತಿಕ ವಲಯದಲ್ಲಿ ಶಿಕ್ಷಣ ಕ್ಷೇತ್ರದಷ್ಟೇ ಶಕ್ತಿಶಾಲಿಯಾದ ರಂಗಭೂಮಿಯನ್ನೂ ಆವರಿಸಿಕೊಳ್ಳುವ ಅವರ ಪ್ರಯತ್ನಕ್ಕೂ ಒಂದು ಹಿನ್ನೆಲೆಯಿದೆ.

90ರ ದಶಕದ ನಂತರ ಭಾರತದ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆ ಕಂಡು ಬರತೊಡಗಿತು. ಜಾಗತಿಕಮಟ್ಟದಲ್ಲಿಯೂ ಎಡಪಂಥ ಹಿಂದೆ ಸರಿದು ಬಲಪಂಥೀಯ ಆರ್ಥಿಕ ವ್ಯವಸ್ಥೆ ಮೇಲುಗೈ ಪಡೆಯುತ್ತಾ ಬಂದಿತು. ಅದರ ಉಗ್ರ ರೂಪವಾದ ಕಾರ್ಪೋರೇಟ್ ಆರ್ಥಿಕ ವ್ಯವಸ್ಥೆ ಎಲ್ಲ ದೇಶಗಳನ್ನು ಆವರಿಸತೊಡಗಿತು. ತನಗೆ ಎದುರಾದ ಬೇರೆ ಎಲ್ಲ ವ್ಯವಸ್ಥೆಗಳನ್ನು, ಸರ್ಕಾರಗಳನ್ನು ಅದು ನಿರ್ಮೂಲನಗೊಳಿಸತೊಡಗಿತು. ಮೊದಲಿನ ಹಂತದಲ್ಲಿ ಈ ಕಾರ್ಪೊರೇಟ್ ಆರ್ಥಿಕ ವ್ಯವಸ್ಥೆಯು ಸೌಮ್ಯವಾದಿ ಸರ್ಕಾರಗಳನ್ನು ಹಾಗೂ ಮಧ್ಯಮಪಂಥೀಯ ಸರ್ಕಾರಗಳನ್ನು ಅದು ಸಹಿಸಿಕೊಂಡಿತ್ತು, ಆದರೆ ಬಹಳ ಬೇಗ ಅದಕ್ಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಇಡೀ ಪ್ರಪಂಚದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಉಗ್ರಗಾಮಿ ಸರ್ಕಾರಗಳನ್ನೂ ಬೆಂಬಲಿಸತೊಡಗಿತು.

ಭಾರತದಲ್ಲಿ ಬಹಳ ಹಿಂದೆಯೇ ಅಂದರೆ ಸ್ವಾತಂತ್ರ್ಯಪೂರ್ವದಲ್ಲೇ ರಾಷ್ಟ್ರೀಯವಾದದ ಹೆಸರಿನಲ್ಲಿ ಕೋಮುವಾದಿ ಸಂಘಟನೆಗಳು ಕಾರ್ಯಾಚರಣೆಗೆ ಇಳಿದಿದ್ದವಾದರೂ, ದೇಶದ ಜನ ಅವುಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಆದರೆ ಅವುಗಳು ತಮ್ಮ ಉದ್ದೇಶವನ್ನು ಒಂದಿಷ್ಟೂ ಬಿಟ್ಟುಕೊಡದೆ ನಿರಂತರ ಕಾರ್ಯಾಚರಣೆಯಲ್ಲಿದ್ದವು. ಈ ಎಲ್ಲ ಸಂಘಟನೆಗಳು ದೇಶದ ಆಡಳಿತದಲ್ಲಿ ಬಲಪಂಥೀಯ ಆರ್ಥಿಕತೆಯನ್ನು ಸಮರ್ಥಿಸುತ್ತಿದ್ದವು. ಆರ್.ಎಸ್.ಎಸ್ ಮತ್ತು ಹಿಂದೂ ಮಹಾಸಭಾದಂತಹ ಸಂಘಟನೆಗಳಲ್ಲಿಯೂ ಪ್ರಾರಂಭದ ದಿನಗಳಲ್ಲಿ ರಾಷ್ಟ್ರೀಯವಾದದ ಜೊತೆಯಲ್ಲೇ ಎಡಪಂಥೀಯ ಆರ್ಥಿಕ ಸಿದ್ಧಾಂತದ ಒಲವುಳ್ಳವರೂ, ನಾಸ್ತಿಕರೂ ಇದ್ದರಾದರೂ ನಂತರದ ದಿನಗಳಲ್ಲಿ ಅದಕ್ಕೆ ಮನ್ನಣೆ ಇಲ್ಲವಾಯಿತು.

ಈ ಎಲ್ಲ ಕಾರಣಗಳಿಂದ ಭಾರತದಲ್ಲಿ ಬಲಪಂಥೀಯ ಕಾರ್ಪೊರೇಟ್ ಆರ್ಥಿಕತೆ ಮುನ್ನೆಲೆಗೆ ಬರತೊಡಗಿದ ನಂತರ ಮಿಶ್ರ ಆರ್ಥಿಕತೆಯನ್ನು ಪ್ರತಿಪಾದಿಸುತ್ತಿದ್ದ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳಿಗಿಂತ ಹೆಚ್ಚು ಪ್ರಖರವಾಗಿ ಬಲಪಂಥೀಯ ಆರ್ಥಿಕತೆಯನ್ನು ಪ್ರತಿಪಾದಿಸುವ ಬಿಜೆಪಿಯಂತಹ ಪಕ್ಷಗಳು ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಹತ್ತಿರದವಾದವು. ಆದರೆ ಈ ದೇಶದ ಜನ ಸೌಮ್ಯ ಅಥವಾ ಮಿಶ್ರ ಆರ್ಥಿಕತೆಯ ರಾಜಕಾರಣವನ್ನು ಅಷ್ಟುಬೇಗ ಬಿಟ್ಟು ಕೊಡಲು ಸಿದ್ಧರಿರಲಿಲ್ಲ.

ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

ಅದಕ್ಕೆ ಹಲವು ಕಾರಣಗಳಿವೆ. ಸ್ವಾತಂತ್ರ್ಯ ಬಂದ ನಂತರವೂ ಈ ದೇಶದಲ್ಲಿ ನಿರಂತರವಾಗಿ ಅನೇಕ ಚಳವಳಿಗಳಿದ್ದವು. ಎಡಪಂಥೀಯ ಕಮ್ಯುನಿಷ್ಟರು, ಸೋಷಲಿಸ್ಟರು, ರೈತ ಹೋರಾಟಗಳು, ದಲಿತ ಹೋರಾಟಗಳು ನಡೆದವು. ಭಾರತದಲ್ಲಿ ನಿಜವಾದ ಅರ್ಥದಲ್ಲಿ ಬಲಪಂಥೀಯ ರಾಜಕೀಯ ಪಕ್ಷವಾಗಿದ್ದ ಸ್ವತಂತ್ರ ಪಾರ್ಟಿ ಕೂಡಾ ರೈತ ಹೋರಾಟದಲ್ಲಿ ತೊಡಗಿತ್ತು. ಅವರೂ ಒಂದು ರೀತಿಯಲ್ಲಿ ಗಾಂಧೀ ಪ್ರಣೀತ ಟ್ರಸ್ಟೀಶಿಪ್ ಸಮಾಜವಾದವನ್ನು ಹೋಲುವ ಸಿದ್ಧಾಂತವನ್ನು ಹೊಂದಿದ್ದು ಮಾತ್ರವಲ್ಲ ಚುನಾವಣಾ ಹೊಂದಾಣಿಕೆಯನ್ನು ಸೋಷಲಿಸ್ಟ್ ಪಕ್ಷದೊಂದಿಗೆ ಮಾಡಿಕೊಂಡಿದ್ದರು. ಈ ಚಳವಳಿಗಳಲ್ಲಿ ಹಲವು ಊಳಿಗಮಾನ್ಯ ಪದ್ಧತಿಯ ಪರವಾಗಿಯೇ ಇದ್ದರೆ, ಇನ್ನುಳಿದವು ಊಳಿಗಮಾನ್ಯ ವ್ಯವಸ್ಥೆಯ ವಿರೋಧವಾಗಿದ್ದವು. ಆದರೆ ಇವರು ಯಾರೂ ಕೋಮುವಾದದ ಪರವಾಗಿ ಇರಲಿಲ್ಲ.

ಆದ್ದರಿಂದ ಬಲಪಂಥೀಯ ಕಾರ್ಪೊರೇಟ್ ವಲಯದವರು ಆಯ್ದುಕೊಂಡು ಬೆಂಬಲಿಸಿದ ಕೋಮುವಾದದ ಸಿದ್ಧಾಂತವನ್ನು ಹಿಡಿದು ಕುಳಿತಿದ್ದ ಬಿಜೆಪಿಯಂಥ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಈ ಪಕ್ಷಗಳಿಗೆ ಅಡ್ಡಿಯಾದವರು ಮತ್ತದೇ ದೇಶದ ಇಬ್ಬರು ಮಹಾನ್ ವ್ಯಕ್ತಿಗಳಾದ ಗಾಂಧಿ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳು ಹಾಗೂ ಅವರಿಗಿದ್ದಂತಹ ಅಪಾರವಾದ ಅನುಯಾಯಿಗಳು.

ಇಂದಿನ ಪರಿಸ್ಥಿತಿ ಅಂಬೇಡ್ಕರ್ ಅವರನ್ನು ಬದಿಗೆ ಸರಿಸುವುದು ಅಷ್ಟು ಸುಲಭ ಸಾಧ್ಯವಿರಲಿಲ್ಲ. ಹಾಗಾಗಿ ಅವರ ಮೊದಲ ಗುರಿ ಗಾಂಧಿ. ಹತ್ಯೆಯಾದ ಇಷ್ಟು ವರ್ಷಗಳ ನಂತರವೂ ಭಾರತೀಯರ ಎದೆಯಲ್ಲಿ ಗಟ್ಟಿಯಾಗಿ ಉಳಿದುಬಿಟ್ಟಿರುವ ಗಾಂಧಿ.

ಅದನ್ನವರು ಬಹಳ ವ್ಯವಸ್ಥಿತವಾಗಿ ಮಾಡತೊಡಗಿದರು. ಗಾಂಧಿಯ ಬಗ್ಗೆ ನಾನಾ ಕಥೆಗಳನ್ನು ಹೆಣೆಯಲಾಯಿತು, ಅಂಬೇಡ್ಕರ್ ಮತ್ತು ಗಾಂಧಿಯಲ್ಲಿ ಇದ್ದ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಮುಂದೊಡ್ಡಿ ಅವರಿಬ್ಬರೂ ಆಜನ್ಮ ಶತ್ರುಗಳೆಂಬಂತೆ ಪ್ರಚಾರ ಮಾಡಲಾಯಿತು.

ಇದೆಲ್ಲದರ ಫಲವಾಗಿ ಹಿನ್ನೆಲೆಯಲ್ಲಿದ್ದ ಗೋಡ್ಸೆ ಪ್ರಧಾನ ವೇದಿಕೆಯಲ್ಲಿ ಬಂದು ಕುಳಿತ. ನಿರಂತರ ನಾನಾ ರೀತಿಯ ಕಥೆಗಳನ್ನು ಹೆಣೆದು ಬಿಡಲಾರಂಭವಾಯಿತು. ಇವೆಲ್ಲದಕ್ಕೂ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಅರಿಯದ ಯುವ ಜನರನ್ನು ಬಹಳ ಯೋಜನಾಬದ್ಧವಾಗಿ ಬಳಸಿಕೊಳ್ಳಲಾರಂಭಿಸಿದರು. ಈ ಕೆಲಸಕ್ಕೆ ದೊಡ್ಡ ಪ್ರಮಾಣದ ಹಣ ಸಹಾಯ ಹರಿದು ಬಂತು.

ಇದೆಲ್ಲದರ ಪರಿಣಾಮ ನಮ್ಮ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಆಗತೊಡಗಿತು.

ಕರ್ನಾಟಕದಲ್ಲಿ ಯಕ್ಷಗಾನ, ಹರಿಕತೆ ಮುಂತಾದ ಪ್ರಕಾರಗಳು ಹೇಗೂ ಹೆಚ್ಚಿನಪಾಲು ಊಳಿಗಮಾನ್ಯ ವ್ಯವಸ್ಥೆಯನ್ನು ಮತ್ತು ಜಾತಿ ವ್ಯವಸ್ಥೆಯನ್ನು, ಹೆಚ್ಚಿನ ಸಂದರ್ಭಗಳಲ್ಲಿ ನಾಜೂಕಾಗಿ ಕೆಲವೊಮ್ಮೆ ತೀರಾ ಒರಟಾಗಿಯೇ ಸಮರ್ಥನೆಯಲ್ಲಿ ತೊಡಗಿದ್ದವುಗಳೇ ಆಗಿದ್ದವು. ಈಗ ನೇರವಾಗಿ ಕೋಮುವಾದದ ಹಾಗೂ ಜನಾಂಗೀಯ ದ್ವೇಷದ ಪ್ರಚಾರಕ್ಕೇ ನಿಂತವು. ಅದಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲವೂ ದೊರಕತೊಡಗಿತು. ವೃತ್ತಿಪರ ಕಂಪೆನಿಗಳೂ ಇದರ ಜೊತೆಗೂಡಿದವು.

ಇದನ್ನೂ ಓದಿರಿ: ರಾಜ್ಯಪಾಲ ಹುದ್ದೆಯ ರಾಜಕಾರಣ; ತಿಳಿಯಲೇಬೇಕಾದ ಐತಿಹಾಸಿಕ ಸಂಗತಿಗಳಿವು!

ಭಾರತದ ಇತಿಹಾಸದ ಇಬ್ಬರು ರಾಜರುಗಳಾದ ಶಿವಾಜಿ ಮತ್ತು ಟಿಪ್ಪು ಸುಲ್ತಾನ್ ಅದುವರೆಗೆ ವೀರರೂ ಶೂರರೂ, ಉದಾರಿಗಳೂ ಆಗಿದ್ದವರು, ಈಗ ಶಿವಾಜಿ ಹಿಂದೂ ಹೃದಯ ಸಾಮ್ರಾಟನಾದರೆ ಟಿಪ್ಪು ಮತಾಂಧ, ಕ್ರೂರಿಯಾಗಿ ಚಿತ್ರಿತನಾಗತೊಡಗಿದ. ಹಿಂದೂ ಮುಸ್ಲಿಂ ಸಾಮರಸ್ಯದ ಸಂಕೇತವಾಗಿದ್ದ ಬಪ್ಪಬ್ಯಾರಿ, ಮುಸ್ಲಿಮರು ಈ ದೇಶದಲ್ಲಿ ಈ ರೀತಿಯಲ್ಲೇ ಬದುಕಬೇಕೆಂಬುದಕ್ಕೆ ಉದಾಹರಣೆಯಾಗಿ ಬಳಕೆಯಾಗತೊಡಗಿದ. ಇದು ಮುಂದುವರಿದು ಇವರಲ್ಲಿ ಹೆಚ್ಚಿನವರು ಹಿಂದುತ್ವದ ನೇರ ಪ್ರಚಾರಕ್ಕೇ ಇಳಿದರು.

ಆದರೆ ರಂಗಭೂಮಿಗೆ ಇರುವ ನೇರ ಜನಸಂಪರ್ಕ ಹಾಗೂ ಸಂವಹನ ಸಾಮರ್ಥ್ಯದ ಅರಿವಿರುವ ಆಳುವವರು ಎಲ್ಲ ಕಾಲದಲ್ಲಿಯೂ ರಂಗಭೂಮಿಯನ್ನು ತಮ್ಮ ಹಿಡಿತಲ್ಲಿಡಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಇದೇ ರೀತಿ ಇಂದಿನ ಬಲಪಂಥೀಯ ಹಾಗೂ ಕೋಮುವಾದಿ ಶಕ್ತಿಗಳು ಕೂಡಾ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಇವೆ.

ಆದರೆ ನಮ್ಮ ಆಧುನಿಕ ರಂಗಭೂಮಿಯಲ್ಲಿ ಕೂಡಾ ಇದರ ಪ್ರಯತ್ನ ತೊಂಬತ್ತರ ದಶಕದ ಮೊದಲಿಗೇ ಹುಟ್ಟಿಕೊಂಡಿತು. ಅದು ‘ಮಿ ನಾಥೂರಾಂ ಗೋಡ್ಸೆ ಬೋಲ್ತೋಯ್’ ಎನ್ನುವ ಮರಾಠಿ ನಾಟಕದ ಮೂಲಕ. ಇದಕ್ಕೆ ದೊಡ್ಡ ವಿರೋಧವೂ ವ್ಯಕ್ತವಾಯಿತು, ಅಂದಿನ ಸರ್ಕಾರಗಳು ಇದನ್ನು ನಿಷೇಧಿಸಿದ್ದವು. ಆದರೆ ಎರಡುಸಾವಿರ ಇಸವಿಯ ಹೊತ್ತಿಗೆ ನ್ಯಾಯಾಲಯ ಈ ನಾಟಕದ ಪ್ರದರ್ಶನಕ್ಕೆ ಅವಕಾಶ ಕೊಟ್ಟಿತು. ಆ ನಂತರ ದೇಶಾದ್ಯಂತ ಈ ನಾಟಕದ ನೂರಾರು ಪ್ರದರ್ಶನಗಳು ನಡೆದವು, ಇದು ಅನೇಕ ಯುವ ರಂಗಕರ್ಮಿಗಳನ್ನು ಗಾಂಧಿ ವಿರೋಧ ಮತ್ತು ಕೋಮುವಾದದ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಯಿತು.

ಹಾಗೆ ನೋಡಿದರೆ ಈ ನಾಟಕಕ್ಕೆ ಯುವಕರು ಮುಗಿಬಿದ್ದ ರೀತಿಯನ್ನು ಗಮನಿಸಿದರೆ, ಇಂತಹ ನಾಟಕಗಳ ಸರಣಿಯೇ ಪ್ರಾರಂಭವಾಗಬೇಕಿತ್ತು. ಆದರೆ ಹಾಗೇನೂ ಆಗಲಿಲ್ಲ.

ಕೋಮುವಾದಿಗಳು ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ದಾಳಿ ಮಾಡುವುದೂ ಅವುಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವುದೂ ಹೊಸತೇನಲ್ಲ. ಎಂಬತ್ತರ ದಶಕದಲ್ಲಿಯೇ ಇದು ನಡೆಯಿತು. ಬಿ.ವಿ.ಕಾರಂತರು ಭೋಪಾಲ್‌ನಲ್ಲಿ ಕಟ್ಟಿದ್ದ ಭಾರತ್ ಭವನ್ ಸಾಂಸ್ಕೃತಿಕ ಕೇಂದ್ರವನ್ನು ಕುತಂತ್ರದ ಮೂಲಕ ಹಾಳುಗೆಡವಲಾಯಿತು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಎಲ್ಲ ಸಾಂಸ್ಕೃತಿಕ ಸಂಘಟನೆಗಳನ್ನೂ ತನ್ನ ಅಧೀನಕ್ಕೆ ತೆಗೆದುಕೊಳ್ಳತೊಡಗಿ ಕೋಮುವಾದದ ಪ್ರಚಾರಕ್ಕೆ ಬಳಸುವ ಪ್ರಯತ್ನ ಮಾಡಿದಾಗಲೂ ರಂಗಭೂಮಿ ವಿಚಾರದಲ್ಲಿ ಅದಕ್ಕೆ ಹೆಚ್ಚಿನ ಸಾಧನೆ ಸಾಧ್ಯಾವಾಗಿಲ್ಲ.

ಇದನ್ನೂ ಓದಿರಿ: ಲಂಡನ್ ಪ್ರೊಫೆಸರ್ ಕಣ್ಣಲ್ಲಿ ಅರಸು ಕಾಲ ಮತ್ತು ಭವಿಷ್ಯದ ಕರ್ನಾಟಕ ರಾಜಕಾರಣ

ಕನ್ನಡ ರಂಗಭೂಮಿಯ ವಿಚಾರದಲ್ಲಿ ಹೇಳುವುದಾದರೆ ಇಲ್ಲಿ ಕೋಮುಸೌಹಾರ್ದದ ಬಗ್ಗೆ ಅನೇಕ ನಾಟಕಗಳಿದ್ದವು ಮತ್ತು ಕೋಮುವಾದ ಜೀವ ವಿರೋಧಿಯೆಂದು ಕಲಾತ್ಮಕವಾಗಿ ಹೇಳುವ ರಾವಿನದಿಯ ದಂಡೆಯಲ್ಲಿ, ಜತೆಗಿರುವನು ಚಂದಿರದಂತಹ ನಾಟಕಗಳು ಇಂದೂ ಪ್ರದರ್ಶನವಾಗುತ್ತ ಇವೆ. ಇಂತಹ ಹಲವು ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಇವೆ.

ಬಲಪಂಥೀಯ ಧೋರಣೆಯುಳ್ಳ ಕೆಲವು ರಂಗನಿರ್ದೇಶಕರು ಕೂಡಾ ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಆಧಾರಿತ ನಾಟಕಗಳನ್ನೂ ಮಾಡಿಸಿದಾಗಲೂ ಅವು ರಂಗದ ಮೇಲೆ ಜೀವವಿರೋಧಿಯಾಗಿರಲಿಲ್ಲ.

parva
ಎಸ್.ಎಲ್. ಭೈರಪ್ಪನವರ ‘ಪರ್ವ’ ಕಾದಂಬರಿಯನ್ನು ಮೈಸೂರು ರಂಗಾಯಣದವರು ರಂಗರೂಪಕ್ಕೆ ತಂದಿದ್ದ ಸಂದರ್ಭ

ಕೋಮುವಾದವನ್ನು ನೇರವಾಗಿ ವಿರೋಧಿಸುವ ನಾಟಕಗಳು ನಮ್ಮಲ್ಲಿದ್ದವು. ಸುಮಾರಾಗಿ ಒಂದೇ ಕಾಲಘಟ್ಟದಲ್ಲಿ ಕನ್ನಡದಲ್ಲಿ ಎರಡು ನಾಟಕಗಳು ರಂಗಕ್ಕೆ ಬಂದಿದ್ದವು, ಒಂದು ಕೆ.ವಿ.ಅಕ್ಷರ ಅವರ ಚೂರಿ ಕಟ್ಟೆ. ಇನ್ನೊಂದು ಇದೇ ಲೇಖಕನ ಇಂಡಿಯಾ 1991 ಎಂಬ ನಾಟಕ. ಆದರೆ ಈ ನಾಟಕಗಳನ್ನು ಇಂದಿನ ರಾಜಕೀಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮತ್ತೆ ರಂಗಕ್ಕೆ ತರುವುದು ಕಷ್ಟವಾಗಬಹುದು.

ಕೋಮುವಾದಿ ರಾಜಕಾರಣವನ್ನು ಮುಂದೊಡ್ಡಿ ಬಿಜೆಪಿಯಂತಹ ಪಕ್ಷ ಅಧಿಕಾರ ಗಳಿಸಿದೆ. ಇಂದು ಜಗತ್ತಿನಲ್ಲಿ ಹಲವಾರು ದೇಶಗಳಲ್ಲಿ ಕೋಮುವಾದ, ಜನಾಂಗ ದ್ವೇಷ ಇತ್ಯಾದಿಗಳ ಆಧಾರದ ಮೇಲೆಯೇ ರಾಜಕೀಯ ಪಕ್ಷ ಇಲ್ಲವೇ ಗುಂಪುಗಳು ಅಧಿಕಾರ ಹಿಡಿಯುತ್ತಿವೆ. ಒಂದು ಹಂತದ ನಂತರ ಕಾರ್ಪೊರೇಟ್ ವ್ಯವಸ್ಥೆಗೂ ಕೋಮುವಾದ ಅಷ್ಟೇನೂ ಹಿತವಲ್ಲ. ವ್ಯಾಪಾರೀ ಉದ್ದೇಶಗಳಿಗೆ ಅದು ತೊಡಕಾಗಬಲ್ಲದು. ಆದರೆ ಫ್ಯಾಸಿಸ್ಟ್ ಶಕ್ತಿಗಳಿಗೆ ವ್ಯಾಪಾರೀ ಉದ್ದೇಶವನ್ನು ಮೀರಿದ ಹಿತಾಸಕ್ತಿ ಮತ್ತು ಗುಪ್ತ ಯೋಜನೆಗಳಿರುತ್ತವೆ. ಅದು ಸುಮ್ಮನೇ ಕೂರಲಾರದು.

ನಾನಾ ರೀತಿಯಲ್ಲಿ ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಇರುತ್ತದೆ. ಅದಕ್ಕಾಗಿಯಾದರೂ ಅವರು ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ಮಾಡುತ್ತಲೇ ಇರುತ್ತಾರೆ. ಭಾರತದಲ್ಲಿ ಧಾರ್ಮಿಕ ವಲಯವನ್ನು ದೊಡ್ಡ ರೀತಿಯಲ್ಲಿಯೇ ತಮ್ಮ ಹಿಡಿತಕ್ಕೆ ತಂದುಕೊಂಡಿದ್ದಾರೆ. ಆದರೆ ಸಾಂಸ್ಕೃತಿಕ ವಲಯ ಅಷ್ಟು ಸುಲಭವಾಗಿ ಅವರಿಗೆ ದಕ್ಕುತ್ತಿಲ್ಲ. ರಂಗಭೂಮಿಯಲ್ಲಿ ಈಗಾಗಲೇ ಹಲವಾರು ರಂಗಕರ್ಮಿಗಳು, ಬಲಪಂಥೀಯರೆಂದು ಬಹಿರಂಗವಾಗಿ ಗುರುತಿಸಿಕೊಂಡರೂ ರಂಗದಮೇಲೆ ಅದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ ಕಳೆದ ಅವಧಿಯಲ್ಲಿ ಕರ್ನಾಟಕದ ರಂಗಾಯಣಗಳಲ್ಲಿ ಬಲಪಂಥೀಯ ಧೋರಣೆಯ ನಿರ್ದೇಶಕರು ಇದ್ದರು. ಆದರೆ ಮೈಸೂರು ರಂಗಾಯಣವನ್ನು ಬಿಟ್ಟು ಉಳಿದ ರಂಗಾಯಣಗಳ ನಿರ್ದೇಶಕರು ಯಾವುದೇ ಜೀವ ವಿರೋಧಿ ಎನಿಸಬಲ್ಲ ಅಥವಾ ವಿವಾದಾತ್ಮಕ ರಂಗಪ್ರಯೋಗಗಳನ್ನು ಮಾಡಲಿಲ್ಲ. ಮೈಸೂರು ರಂಗಾಯಣ ತನ್ನ ರಂಗ ಪ್ರಯೋಗಗಳಿಗಿಂತ ಹೆಚ್ಚಾಗಿ ಅಂದಿನ ನಿರ್ದೇಶಕರ ವಿವಾದಾತ್ಮಕ ಮಾತು ಮತ್ತು ಕೃತಿಗಳಿಂದ ಸುದ್ದಿ ಮಾಡಿತ್ತು, ಸಾರ್ವಜನಿಕರ ವಿರೋಧಕ್ಕೆ ಗುರಿಯಾಗಬೇಕಾಯಿತು.

ಇದನ್ನೂ ಓದಿರಿ: ಸಾಮಾಜಿಕ ಮಾಧ್ಯಮ ಮತ್ತು ಕನ್ನಡ

ಮೈಸೂರು ರಂಗಾಯಣದ ಈ ಹಿಂದಿನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಡಿದ `ಟಿಪ್ಪು ನಿಜ ಕನಸುಗಳು’ ನಾಟಕ ಹಲವು ವೀಕ್ಷಕರು ತಿಳಿಸಿದಂತೆ ಒಂದು ರಂಗಕೃತಿಯಾಗಿ ಚೆನ್ನಾಗಿಯೇ ಇತ್ತು. ಉರಿಗೌಡ ನಂಜೇಗೌಡರ ಪ್ರಸಂಗದ ಎರಡು ದೃಶ್ಯಗಳನ್ನು ಬಿಟ್ಟಿದ್ದರೆ ಒಳ್ಳೆಯ ನಾಟಕ ಆಗಬಹುದಾಗಿತ್ತು. ನಿರ್ದೇಶಕರೇ ಆ ದೃಶ್ಯಗಳನ್ನು ಉದ್ದೇಶ ಪೂರ್ವಕಾಗಿ ತುರುಕಿ ನಾಟಕವನ್ನು ಕೆಡಿಸಿದ್ದರು. ಈಗ ಮತ್ತೊಮ್ಮೆ ಅವರ `ಕರಿನೀರ ವೀರ ನಾಟಕ’ ಬಂದಿದೆ. ಅದರಲ್ಲೂ ಗಾಂಧಿಯನ್ನು ಲೇವಡಿ ಮಾಡಿ ಹೀನಾಯಿಸುವ ಪ್ರಯತ್ನ ಮಾಡಿದಂತೆ ತೋರುತ್ತದೆ. ಆದರೆ ಇದು ಯಾವುದೂ ಯಶಸ್ಸು ಗಳಿಸುವುದು ಕಷ್ಟ. ಅಷ್ಟರಮಟ್ಟಿಗೆ ಆಧುನಿಕ ರಂಗಭೂಮಿ ಅದರಲ್ಲೂ ಕನ್ನಡದ ರಂಗಭೂಮಿ ಮತ್ತು ಪ್ರೇಕ್ಷಕರು ಪ್ರಬುದ್ಧತೆಯನ್ನು ಗಳಿಸಿದ್ದಾರೆ ಎನ್ನಬಹುದು. ಆದರೆ ಸಾಂಸ್ಕೃತಿಕ ವಲಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕೋಮುವಾದಿ ಶಕ್ತಿಗಳ ಪ್ರಯತ್ನ ಖಂಡಿತ ಇನ್ನಷ್ಟು ಮುಂದುವರೆಯಲಿದೆ. ಇದರ ವಿರುದ್ಧ ಮೈಮರೆಯದ ನಿರಂತರ ಎಚ್ಚರವಂತೂ ಅಗತ್ಯ.

(‘ಈದಿನ ಡಾಟ್ ಕಾಮ್‌’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು..’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

prasad rakshidi
ಪ್ರಸಾದ್ ರಕ್ಷಿದಿ
+ posts

ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರಸಾದ್ ರಕ್ಷಿದಿ ಅವರು ಖ್ಯಾತ ರಂಗಕರ್ಮಿ. ಅವರು ನಾಟಕ ರಚನೆ, ನಟನೆ, ರಂಗ ಸಂಘಟನೆ, ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದ ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಮತ್ತು ಪ್ರಕೃತಿ ರಂಗ ಮಂಚ ಸಂಸ್ಥೆಗಳ ಸ್ಥಾಪಕ ಸದಸ್ಯರು. ಕನ್ನಡ ಸಾಹಿತ್ಯ ಪರಿಷತ್ತಿನ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಅವರು ಸಾವಯವ ಕೃಷಿ, ರೈತ ಚಳವಳಿ, ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪ್ರಸಾದ್ ರಕ್ಷಿದಿ
ಪ್ರಸಾದ್ ರಕ್ಷಿದಿ
ಹಾಸನ ಜಿಲ್ಲೆಯ ಸಕಲೇಶಪುರದವರಾದ ಪ್ರಸಾದ್ ರಕ್ಷಿದಿ ಅವರು ಖ್ಯಾತ ರಂಗಕರ್ಮಿ. ಅವರು ನಾಟಕ ರಚನೆ, ನಟನೆ, ರಂಗ ಸಂಘಟನೆ, ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಂದ ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಮತ್ತು ಪ್ರಕೃತಿ ರಂಗ ಮಂಚ ಸಂಸ್ಥೆಗಳ ಸ್ಥಾಪಕ ಸದಸ್ಯರು. ಕನ್ನಡ ಸಾಹಿತ್ಯ ಪರಿಷತ್ತಿನ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಅವರು ಸಾವಯವ ಕೃಷಿ, ರೈತ ಚಳವಳಿ, ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...