ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 1)

Date:

ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಸ್ಥಾಪಿತ ಆಗಿದೆಯೋ, ಅಂತಹ ಧಾರ್ಮಿಕ ಭಾವನೆಗಳನ್ನು ನಾಶ ಮಾಡುವ ತನಕ ಜಾತಿ ವ್ಯವಸ್ಥೆಯನ್ನು ಒಡೆಯುವುದು ಸಾಧ್ಯವಿಲ್ಲ ಎಂಬುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದನೆಯಾಗಿತ್ತು. ಈ ಪ್ರತಿಪಾದನೆಯನ್ನು 1936ರ ಲಾಹೋರ್‌ನ ವಾರ್ಷಿಕ ಸಮ್ಮೇಳನವೊಂದರಲ್ಲಿ ವಿವರವಾಗಿ ಮಂಡಿಸುವಂತೆ ಕೋರಲಾಗಿತ್ತು.

‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು’ ಎಂಬ ಸಿದ್ಧೌಷಧವನ್ನು ಬಾಬಾಸಾಹೇಬರು ನೀಡಿದ್ದರು.

ವೇದಗಳು ಮತ್ತು ಹಿಂದೂ ಧಾರ್ಮಿಕ ಶಾಸ್ತ್ರಗಳು- ಗ್ರಂಥಗಳನ್ನು ಕಠೋರ ಪ್ರಶ್ನೆಗಳಿಗೆ ಗುರಿ ಮಾಡಿದ್ದ ಅಂಬೇಡ್ಕರ್ ಅವರ ಭಾಷಣದ ವಿಚಾರಗಳು ಈ ಸಮ್ಮೇಳನವನ್ನು ಏರ್ಪಡಿಸಿದ್ದ ‘ಜಾತ್ ಪಾತ್ ತೋಡಕ್ ಮಂಡಲ್’ಗೆ ಹಿಡಿಸಲಿಲ್ಲ. ಸಮ್ಮೇಳನವನ್ನು ‘ಅನಿರ್ದಿಷ್ಟ ಕಾಲ ಮುಂದೂಡಿತು’ ಅರ್ಥಾತ್ ರದ್ದು ಮಾಡಿತು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾಷಣದಲ್ಲಿನ ಕೆಲ ಸಂಗತಿಗಳನ್ನು ಬದಲಾಯಿಸುವಂತೆ ಮತ್ತು ಕೈ ಬಿಡುವಂತೆ ಷರತ್ತು ಹಾಕಲಾಗುತ್ತದೆ. ಆದರೆ, ಭಾಷಣದಲ್ಲಿನ ಒಂದೇ ಒಂದು ಅಲ್ಪವಿರಾಮ ಚಿಹ್ನೆಯನ್ನು ಕೂಡ ಬದಲಾಯಿಸುವುದಿಲ್ಲ ಎಂದ ಅಂಬೇಡ್ಕರ್, ಭಾಷಣವನ್ನು ತಾವೇ ಪುಸ್ತಕ ರೂಪದಲ್ಲಿ ಅಚ್ಚು ಹಾಕಿಸಿದರು. ಮಾಡಲಾಗದೆ ಉಳಿದ ಈ ಭಾಷಣ- ‘ಅನಾಇಲೇಷನ್ ಆಫ್ ಕಾಸ್ಟ್’ (ಜಾತಿವಿನಾಶ) ಅಂಬೇಡ್ಕರ್ ಅವರ ಮಹಾನ್ ಕೃತಿ ಎನಿಸಿಕೊಂಡಿತು. ಸಾಮಾಜಿಕ ವಿಮೋಚನೆಯ ಪ್ರಣಾಳಿಕೆ ಎಂದೇ ಹೆಸರಾಯಿತು.

anhilation 1
‘ಅನಾಇಲೇಷನ್ ಆಫ್ ಕಾಸ್ಟ್’ ಕೃತಿಯ ಹಳೆಯ ಪ್ರತಿ

‘ಜಾತ್ ಪಾತ್ ತೋಡಕ್ ಮಂಡಲ್’ (ಜಾತಿಗೀತಿಯನ್ನು ಅಳಿಸಿ ಹಾಕುವ ವೇದಿಕೆ) ಎಂಬುದು ಹಿಂದೂ ಸುಧಾರಣವಾದಿ ಸಂಘಟನೆಯಾದ ಆರ್ಯಸಮಾಜದಿಂದ ಟಿಸಿಲೊಡೆದ ‘ತೀವ್ರವಾದಿ’ ಬಣ. ‘ಉಚ್ಚ’ ಜಾತಿಗಳವರೇ ತುಂಬಿದ್ದ ಸಂಸ್ಥೆ. 1922ರಲ್ಲಿ ಹುಟ್ಟಿದ್ದ ಈ ಮಂಡಲ ವಾರ್ಷಿಕ ಸಮ್ಮೇಳನಗಳನ್ನು ನಡೆಸುತ್ತಿತ್ತು. ಈ ಸಮ್ಮೇಳನಗಳನ್ನು ಉದ್ದೇಶಿಸಿ ಮಾತಾಡಿದ್ದವರೆಲ್ಲ ‘ಉಚ್ಚ’ ಕುಲದವರು. ಸ್ವಾಮಿ ಶ್ರದ್ಧಾನಂದ, ಮೋತಿಲಾಲ್ ನೆಹರೂ, ಭಾಯಿ ಪರಮಾನಂದ, ರಾಮೇಶ್ವರಿ ನೆಹರೂ, ರಮಾನಂದ ಚಟರ್ಜಿ, ಸತ್ಯಾನಂದ ಸ್ಟೋಕ್ಸ್ ಇತ್ಯಾದಿ.

ಮೊದಲ ಸಲ ದಲಿತ ಅಂಬೇಡ್ಕರ್ ಅವರನ್ನು 1936ರ ಲಾಹೋರ್ ಸಮ್ಮೇಳನದ ಅಧ್ಯಕ್ಷ ಭಾಷಣಕ್ಕೆ ಆಹ್ವಾನಿಸಲಾಗುತ್ತದೆ. ಆ ವೇಳೆಗಾಗಲೇ ಬಾಬಾಸಾಹೇಬರು ಹಿಂದೂ ಧರ್ಮದ ವಿರುದ್ಧ ಆಧ್ಯಾತ್ಮಿಕ ಯುದ್ಧವನ್ನೇ ಸಾರಿದ್ದರು. ‘ಅಸ್ಪೃಶ್ಯನೆಂಬ ಕಳಂಕ ಹೊತ್ತು ಹುಟ್ಟಿದ್ದೇನೆ, ಅದು ನನ್ನ ತಪ್ಪಲ್ಲ, ಆದರೆ ನಾನು ಹಿಂದುವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದರು. ಈ ಹೇಳಿಕೆ ಸವರ್ಣೀಯ ಸಮಾಜದಲ್ಲಿ ಕೋಲಾಹಲವನ್ನೇ ಎಬ್ಬಿಸಿರುತ್ತದೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಲು ಬಾಬಾಸಾಹೇಬರು ಆರಂಭದಲ್ಲಿ ಒಪ್ಪುವುದಿಲ್ಲ. ಆನಂತರದ ಒತ್ತಾಯಕ್ಕೆ ಮಣಿಯುತ್ತಾರೆ.

ಸಮ್ಮೇಳನದ ಅಧ್ಯಕ್ಷತೆಗೆ ದಲಿತರೂ, ಜಾತಿ-ವರ್ಣವಿರೋಧಿ ಬಾಬಾಸಾಹೇಬರಿಗೆ ಆಹ್ವಾನ ನೀಡಿದ್ದನ್ನು ಪ್ರತಿಭಟಿಸಿ ಬಹುತೇಕ ಹಿಂದೂ ನಾಯಕರು ‘ಜಾತ್ ಪಾತ್ ತೋಡಕ್ ಮಂಡಲ’ದಿಂದ ದೂರಾಗುತ್ತಾರೆ. ಪಂಜಾಬಿನ (ಲಾಹೋರನ್ನು ಹೊಂದಿದ್ದ ಅಂದಿನ ಅವಿಭಜಿತ ಪಂಜಾಬ್) ಬಹುತೇಕ ಹಿಂದೂಗಳು ಈ ಸಂಘಟನೆಯನ್ನು ಕಟುವಾಗಿ ಟೀಕಿಸುತ್ತಾರೆ. ಅಚ್ಚು ಹಾಕಲು ಬಾರದಷ್ಟು ಕೆಟ್ಟ ಬೈಗುಳಗಳನ್ನು ಬೈಯುತ್ತಾರೆ. ‘ಮಂಡಲಕ್ಕೆ ಕೆಟ್ಟ ಹೆಸರು ಬಂದಿದೆ. ಆದರೂ ನಿಮ್ಮ ಅಧ್ಯಕ್ಷತೆಯ ಸಮ್ಮೇಳನದಿಂದ ನಾವು ಹಿಂತೆಗೆಯುತ್ತಿಲ್ಲ’ ಎಂದು ಮಂಡಲ್ ಬಾಬಾಸಾಹೇಬರಿಗೆ ಪತ್ರ ಬರೆಯುತ್ತದೆ.

ಒಂದೆಡೆ ಜಾತಿ ವ್ಯವಸ್ಥೆ ಮತ್ತು ವರ್ಣವ್ಯವಸ್ಥೆಗಳನ್ನು ಭದ್ರವಾಗಿ ಜೋಪಾನ ಮಾಡಿಕೊಂಡು ಮತ್ತೊಂದೆಡೆ ‘ಹಿಂದೂ ನಾವೆಲ್ಲ ಒಂದು’ ಎನ್ನುವ ಬೊಗಳೆಯನ್ನು ಬಾಬಾಸಾಹೇಬರು 1936ರಲ್ಲಿಯೇ ‘ಅನಾಇಲೇಷನ್ ಆಫ್ ಕಾಸ್ಟ್’ನಲ್ಲಿ ತಲೆ ಮೇಲೆ ಹೊಡೆದಂತೆ ಬಯಲು ಮಾಡಿದ್ದಾರೆ.

‘ಅನಾಇಲೇಷನ್ ಆಫ್ ಕಾಸ್ಟ್’ನಂತಹ ಮಹತ್ತರ ಕೃತಿಯು ಹೊರಬರಲು ಕಾರಣವಾದ ‘ಜಾತ್ ಪಾತ್ ತೋಡಕ್ ಮಂಡಲ್’ ಜೊತೆ ಬಾಬಾಸಾಹೇಬರು ನಡೆಸಿದ ಪತ್ರ ವ್ಯವಹಾರ ಅಂದಿನ ಹಿಂದೂ ಮನಸ್ಥಿತಿಗೆ ಮಾತ್ರವಲ್ಲದೆ ಸುಧಾರಣಾವಾದಿ ಹಿಂದೂ ಮನಸ್ಸುಗಳ ಆಷಾಢಭೂತಿತನಕ್ಕೂ ಹಿಡಿದ ಕನ್ನಡಿಯಾಗಿರುತ್ತದೆ.

1936ರ ಮೇ 15ರಂದು ಈ ಭಾಷಣ ಪುಸ್ತಕರೂಪದಲ್ಲಿ ಹೊರಬರುತ್ತದೆ. 1,500 ಪ್ರತಿಗಳು ಎರಡೇ ತಿಂಗಳಲ್ಲಿ ಮಾರಾಟವಾಗುತ್ತವೆ. ಹಲವು ಭಾಷೆಗಳಿಗೆ ಅನುವಾದಗೊಂಡರೂ ಇಂಗ್ಲಿಷ್ ಆವೃತ್ತಿಯ ಬೇಡಿಕೆ ತಗ್ಗುತ್ತಿಲ್ಲ ಎಂಬ ಸಂಗತಿಯನ್ನು ಬಾಬಾಸಾಹೇಬರು ಎರಡನೆಯ ಆವೃತ್ತಿಗೆ ಬರೆದ ಮುನ್ನುಡಿಯಲ್ಲಿ ಹೇಳುತ್ತಾರೆ. ಈ ಕೃತಿಯ ಕುರಿತು ‘ಹರಿಜನ್’ ಪತ್ರಿಕೆಯಲ್ಲಿ ಗಾಂಧೀಜಿ ವಿಮರ್ಶೆ ಬರೆದಿರುತ್ತಾರೆ, ಜಾತ್ ಪಾತ್ ತೋಡಕ್ ಮಂಡಲ್‌ನ ಸ್ಥಾಪಕ ಸಂತರಾಮ್ ಅವರನ್ನು ಉದ್ದೇಶಿಸಿದ ಪತ್ರವೊಂದನ್ನು ಕೂಡ ಬರೆದಿರುತ್ತಾರೆ. ವಿಮರ್ಶೆ ಮತ್ತು ಪತ್ರವನ್ನು ಬಾಬಾಸಾಹೇಬರು ಎರಡನೆಯ ಆವೃತ್ತಿಯಲ್ಲಿ ಸೇರಿಸುತ್ತಾರೆ. ಗಾಂಧಿ ವಿಮರ್ಶೆಗೆ ತಮ್ಮ ನೇರ ನಿಷ್ಠುರ ಕಟು ಉತ್ತರವನ್ನೂ ಬರೆಯುತ್ತಾರೆ.

jat pat
ಜಾತ್ ಪಾತ್ ತೋಡಕ್ ಮಂಡಲ್

‘ಹಿಂದೂಗಳು ಈ ದೇಶದ ರೋಗಗ್ರಸ್ತರು, ಅವರ ಈ ವ್ಯಾಧಿಯು ಇತರೆ ಭಾರತೀಯರ ಆರೋಗ್ಯ ಮತ್ತು ಸಂತೋಷಗಳಿಗೆ ಅಪಾಯ ಒಡ್ಡುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿದರೆ ಅದುವೇ ನನ್ನ ಸಂತೃಪ್ತಿ’ ಎಂಬ ಮಾತನ್ನೂ ಅವರು ಮುನ್ನುಡಿಯಲ್ಲಿ ಆಡಿದ್ದಾರೆ.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

ತಾವು ಗಾಂಧಿ ಅವರಿಗೆ ಉತ್ತರ ನೀಡಿರುವುದು ‘ಅವರು ತೂಕದ ವ್ಯಕ್ತಿತ್ವ ಉಳ್ಳವರಾಗಿದ್ದು ನನ್ನ ಉತ್ತರ ಪಡೆಯಲು ಅರ್ಹರು ಎಂದೇನೂ ಅಲ್ಲ, ಬದಲಾಗಿ ಬಹಳಷ್ಟು ಹಿಂದೂಗಳ ಪಾಲಿಗೆ ಅವರೊಂದು ದಿವ್ಯವಾಣಿ. ಎಷ್ಟು ದೊಡ್ಡವರೆಂದರೆ ಅವರು ತುಟಿ ಬಿಚ್ಚಿದ ಆ ಕ್ಷಣದಲ್ಲಿ ಅವರದೇ ಕಡೆಯ ಮಾತಾಗಬೇಕು, ಚರ್ಚೆಗಳು ವಾದಗಳು ಮುಗಿದೇ ಹೋಗಬೇಕು, ಯಾವ ನಾಯಿ ಕೂಡ ಬೊಗಳುವಂತಿಲ್ಲ, ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು’ ಎಂದು ಕಟುವಾಗಿ ವಿವರಿಸುತ್ತಾರೆ.

ಎರಡನೆಯ ಆವೃತ್ತಿಯನ್ನೇ ಯಾವ ಬದಲಾವಣೆಯೂ ಇಲ್ಲದೆ ಮೂರನೆಯ ಆವೃತ್ತಿಯನ್ನಾಗಿ 1944ರ ಡಿಸೆಂಬರ್‌ನಲ್ಲಿ ಹೊರತರುತ್ತಾರೆ.

ಜಾತ್ ಪಾತ್ ತೋಡಕ್ ಮಂಡಲ್ ಕೋರಿಕೆಯಂತೆ ಬಾಬಾಸಾಹೇಬರು ಸಮ್ಮೇಳನಕ್ಕಾಗಿ ತಾವು ಸಿದ್ಧಪಡಿಸಿದ್ದ ಭಾಷಣವನ್ನು ಮುಂದಾಗಿಯೇ ಒಪ್ಪಿಸುತ್ತಾರೆ. ಭಾಷಣದ ಹಲವು ಭಾಗಗಳು ಜಾತ್ ಪಾತ್ ತೋಡಕ್ ಮಂಡಲಕ್ಕೆ ಹಿಡಿಸುವುದಿಲ್ಲ. ‘ವೇದಗಳು ಮತ್ತಿತರೆ ಹಿಂದೂ ಧಾರ್ಮಿಕ ಗ್ರಂಥಗಳ ನೈತಿಕತೆ ಮತ್ತು ವಿವೇಕದ ಮೇಲೆ ಅನಗತ್ಯ ದಾಳಿ ನಡೆಸಿದ್ದೀರಿ. ವೇದ ಪದವನ್ನು ನಿಮ್ಮ ಭಾಷಣದಿಂದ ಕೈಬಿಡಬೇಕು’ ಎಂದು ಮಂಡಲ್ ಸಲಹೆ ನೀಡಿತು. ‘ಹಿಂದೂವಾಗಿ ಪ್ರಾಯಶಃ ಇದೇ ನನ್ನ ಕಡೆಯ ಭಾಷಣ’ ಎಂಬುದಾಗಿ ಅವರು ಭಾಷಣದಲ್ಲಿ ಬರೆದಿದ್ದಕ್ಕೂ ‘ಜಾತ್ ಪಾತ್ ತೋಡಕ್ ಮಂಡಲ್’ ತಕರಾರು ಎತ್ತುತ್ತದೆ. ‘ಹಿಂದೂ ಧರ್ಮದ ಮೂಲ ಅಚ್ಚನ್ನು ಉಳಿಸಿಕೊಂಡು ಜಾತಿವಿನಾಶದಂತಹ ಸುಧಾರಣೆಗಳನ್ನು ತರುವುದೇ ಸರಿ, ಭಾಷಣದ ಅಪ್ರಸ್ತುತ ಭಾಗಗಳನ್ನು ಕೈಬಿಡಬೇಕಾಗುತ್ತದೆ. ಪೂರ್ಣಭಾಷಣವನ್ನು ಉಳಿಸಿಕೊಳ್ಳಬೇಕೆಂದು ನೀವು ಒತ್ತಾಯಿಸಿದರೆ ಸಮ್ಮೇಳನವನ್ನು ರದ್ದು ಮಾಡದೆ ವಿಧಿಯಿಲ್ಲ’ ಎನ್ನುತ್ತದೆ.

ಇಂತಹ ಪ್ರತಿಕ್ರಿಯೆ ಬಾಬಾಸಾಹೇಬರಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಅವರ ಕಡು ನಿಷ್ಠುರ ಮಾರುತ್ತರ ಹೀಗಿತ್ತು-…. ‘ಒಂದೇ ಒಂದು ಅಲ್ಪವಿರಾಮವನ್ನು ಕೂಡ ಬದಲಾಯಿಸುವುದಿಲ್ಲ, ನನ್ನ ಭಾಷಣದ ಯಾವುದೇ ಸೆನ್ಸಾರ್ಶಿಪ್‌ಗೆ ಅವಕಾಶ ಕೊಡಲಾರೆ. ನಾನು ಕಳಿಸಿರುವ ಭಾಷಣವನ್ನು ಯಥಾವತ್ ಒಪ್ಪಿಕೊಳ್ಳಬೇಕು. ಭಾಷಣದಲ್ಲಿ ವ್ಯಕ್ತಪಡಿಸಿರುವ ಎಲ್ಲ ಅನಿಸಿಕೆಗಳು ಸಂಪೂರ್ಣವಾಗಿ ನನ್ನವೇ ಎಂಬ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುವೆ. ಈ ಮಾತನ್ನು ಈಗಾಗಲೆ ನಿಮಗೆ ತಿಳಿಸಿದ್ದೆ. ನನ್ನ ಭಾಷಣ ಹಿಡಿಸದೆ ಹೋದರೆ, ಸಮ್ಮೇಳನ ಅದನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದರೂ ತೊಂದರೆಯಿಲ್ಲ…(ಆದರೆ ಹೊಸದಾಗಿ ಉದ್ಭವಿಸಿರುವ ಈ ಸನ್ನಿವೇಶದಲ್ಲಿ) ಸಮ್ಮೇಳನವನ್ನು ರದ್ದು ಮಾಡುವುದೇ ಸೂಕ್ತ ಎಂಬುದು ನನ್ನ ನಿಲುವೂ ಆಗಿದೆ.’

‘ಜಾತ್ ಪಾತ್ ತೋಡಕ್ ಮಂಡಲ್’ ಜೊತೆಗೆ ಆರಂಭದಿಂದ ನಡೆದ ಪತ್ರ ವ್ಯವಹಾರದ ಎಲ್ಲ ವಿವರಗಳನ್ನು ಬಾಬಾಸಾಹೇಬರು ‘ಜಾತಿವಿನಾಶ’ ಕೃತಿಯಲ್ಲಿ ಬಹಿರಂಗಪಡಿಸಿದರು. ‘ಜಾತಿವಿನಾಶ ಆಗಬೇಕಿದ್ದರೆ ಹಿಂದೂ ಧರ್ಮದ ನಾಶವೇ ಆಗಬೇಕೆಂಬ ನನ್ನ ನಿಲುವು ಮಂಡಲ್‌ಗೆ ಇಷ್ಟೊಂದು ಅಸಮಾಧಾನ ಉಂಟು ಮಾಡುತ್ತದೆಂದು ನಿರೀಕ್ಷಿಸಿರಲಿಲ್ಲ. ಮೂರ್ಖರು ಮಾತ್ರವೇ ಶಬ್ದಗಳಿಗೆ ಅಂಜುತ್ತಾರೆಂದು ಭಾವಿಸಿದ್ದೆ. ಧರ್ಮ ಎಂದರೇನು ಮತ್ತು ಧರ್ಮದ ನಾಶ ಎಂದರೇನು ಎಂಬುದನ್ನು ಬಹಳ ಶ್ರಮಪಟ್ಟು ಇಲ್ಲಿ ವಿವರಿಸಿದ್ದೇನೆ. ಈ ವಿವರಣೆಯಿದ್ದಾಗ್ಯೂ, ಧರ್ಮದ ನಾಶ ಎಂಬ ಪದಗಳಿಗೇ ಈ ಪರಿ ಹೆದರುವ ಮಂಡಲ್ ಕುರಿತು ನನಗೆ ಹೆಚ್ಚು ಗೌರವ ಉಳಿದಿಲ್ಲ… ಮಂಡಲ್ ನನ್ನ ಭಾಷಣವನ್ನು ಈಗ ಒಂದು ವೇಳೆ ಇಡಿಯಾಗಿ ಒಪ್ಪಿದರೂ, ಸಮ್ಮೇಳನದ ಅಧ್ಯಕ್ಷತೆ ವಹಿಸಲು ನಾನು ಒಪ್ಪಲಾರೆ’ ಎಂದು ಬಾಬಾಸಾಹೇಬರು ಈ ವಿದ್ಯಮಾನವನ್ನು ಅಂತ್ಯಗಾಣಿಸುತ್ತಾರೆ.

ಹಿಂದೂ ಸಮ್ಮೇಳನವೊಂದರ ಅಧ್ಯಕ್ಷತೆ ವಹಿಸಲು ಮೊದಲ ಬಾರಿಗೆ ನನ್ನನ್ನು ಆಹ್ವಾನಿಸಲಾಯಿತು. ಆದರೆ ಈ ಆಹ್ವಾನವು ದುರಂತದಲ್ಲಿ ಕೊನೆಯಾಗಿದೆ ಎಂದು ಹೇಳಲು ವ್ಯಥೆಯೆನಿಸುತ್ತದೆ. ಸವರ್ಣೀಯ ಹಿಂದೂಗಳ ಸುಧಾರಣಾವಾದಿ ಪಂಥ ಮತ್ತು ಅಸ್ಪೃಶ್ಯರ ಸ್ವಾಭಿಮಾನಿ ಪಂಥದ ನಡುವಿನ ದುರಂತಮಯ ಸಂಬಂಧವಿದು ಎನ್ನುತ್ತಾರೆ.

ಈ ಪತ್ರವ್ಯವಹಾರ ಕೇವಲ ಒಂದು ಸಾಧಾರಣ ಪತ್ರವ್ಯವಹಾರಕ್ಕಿಂತ ಮಹತ್ತರವಾದದ್ದನ್ನು ಮತ್ತು ‘ಜಾತಿ ವಿನಾಶ’ ಕೃತಿಯ ಗಾಢ ಅಂತಸ್ಸತ್ವವನ್ನು ಪ್ರತಿಫಲಿಸುತ್ತದೆ.

ಇದನ್ನೂ ಓದಿರಿ: ವಿಜಯ ಮಲ್ಯ ಮಾತುಗಳಿಗೆ ಮರುಗುವ ಅಗತ್ಯವಿದೆಯೇ?

‘ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು. ಬುದ್ಧ ತೆಗೆದುಕೊಂಡ ನಿಲುವನ್ನು ತಳೆಯಬೇಕು ಮತ್ತು ನಾನಕ ತೆಗೆದುಕೊಂಡ ನಿಲುವು ತೆಗೆದುಕೊಳ್ಳಬೇಕು. ಬುದ್ಧ ಮತ್ತು ನಾನಕರಂತೆ ಶಾಸ್ತ್ರಗಳ ಅಧಿಕಾರವನ್ನು ತಿರಸ್ಕರಿಸಬೇಕು. ವೇದಗಳು ಶಾಸ್ತ್ರಗಳ ಅಧಿಕಾರವನ್ನು ನಾಶಗೊಳಿಸದೆ ಜಾತಿ ನಾಶವಾಗುವುದಿಲ್ಲ’ ಎಂಬುದು ಬಾಬಾ ಸಾಹೇಬರ ಪ್ರತಿಪಾದನೆಯಾಗಿರುತ್ತದೆ.

‘ಚಾತುರ್ವರ್ಣ್ಯಕ್ಕಿಂತ ಅವಮಾನಕರ ನೀತಿಭ್ರಷ್ಟ ಸಾಮಾಜಿಕ ವ್ಯವಸ್ಥೆ ಮತ್ತೊಂದಿಲ್ಲ. ಜನರನ್ನು ಪರಸ್ಪರರ ನೆರವಿಗೆ ಧಾವಿಸದಂತೆ ನಿಶ್ಚೇಷ್ಟಗೊಳಿಸುತ್ತದೆ, ಲಕ್ವ ಬಡಿಸುತ್ತದೆ, ಊನಗೊಳಿಸುತ್ತದೆ’ ಎಂದು ಅವರು ಚಾತುರ್ವರ್ಣ್ಯದ ಮನುಷ್ಯವಿರೋಧಿ ಸಂಚನ್ನು ಹೊರಗೆಡವಿದ್ದಾರೆ.

‘ಚಾತುರ್ವರ್ಣ್ಯದ ಉಲ್ಲಂಘನೆಗೆ ತಲೆದಂಡವೇ ಶಿಕ್ಷೆಯಾಗಿತ್ತು. ರಾಮಾಯಣದಲ್ಲಿ ಬರುವ ಶಂಬೂಕ ವಧೆ ಈ ಮಾತನ್ನು ರುಜುವಾತು ಮಾಡುತ್ತದೆ. ಶಂಬೂಕ ಸಂಹಾರಕ್ಕೆ ಕೆಲವರು ರಾಮನನ್ನು ದೂಷಿಸುತ್ತಾರೆ. ಶ್ರೀರಾಮ ಕಾರ್ಯಕಾರಣವೇ ಇಲ್ಲದೆ ಸ್ವೇಚ್ಛಾನುಸಾರ ಶಂಬೂಕನನ್ನು ಕೊಂದನೆನ್ನುತ್ತಾರೆ. ಆದರೆ ರಾಮನನ್ನು ದೂಷಿಸುವುದು ಇಡಿ ಸನ್ನಿವೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತೆ ಆಗುತ್ತದೆ. ರಾಮರಾಜ್ಯವು ಚಾತುರ್ವರ್ಣ್ಯವನ್ನು ಆಧರಿಸಿದ್ದಾಗಿರುತ್ತದೆ. ರಾಜನಾಗಿ ರಾಮನು ಚಾತುರ್ವರ್ಣ್ಯವನ್ನು ಪರಿಪಾಲಿಸಲೇಬೇಕಾಗಿರುತ್ತದೆ, ಹೀಗಾಗಿ ತನ್ನ ಶೂದ್ರ ವರ್ಗದ ಸೀಮಾರೇಖೆಯನ್ನು ಉಲ್ಲಂಘಿಸಿ ಬ್ರಾಹ್ಮಣನಾಗಲು ಬಯಸಿದ ಶಂಬೂಕ ಚಾತುರ್ವರ್ಣ್ಯ ವ್ಯವಸ್ಥೆಯನ್ನು ಉಲ್ಲಂಘಿಸಿರುತ್ತಾನೆ. ಹೀಗಾಗಿ ಅವನನ್ನು ಕೊಲ್ಲುವುದು ರಾಮನ ಕರ್ತವ್ಯವೇ ಆಗಿರುತ್ತದೆ. ಕೊಂದಾದರೂ ಚಾತುರ್ವರ್ಣ್ಯ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕಾಗಿರುವ ಅಗತ್ಯವನ್ನು ಈ ಪ್ರಸಂಗವು ತೋರುತ್ತದೆ. ಹೀಗಾಗಿಯೇ ಮನುಸ್ಮೃತಿಯು ವೇದಗಳನ್ನು ಓದುವ ಶೂದ್ರನ ನಾಲಗೆಯನ್ನು ಕತ್ತರಿಸುವ ಮತ್ತು ವೇದಗಳನ್ನು ಆಲಿಸುವ ಶೂದ್ರನ ಕಿವಿಗಳಿಗೆ ಕುದಿಯುವ ಸೀಸವನ್ನು ಸುರಿಯುವ ಶಿಕ್ಷೆಯನ್ನು ವಿಧಿಸಿದೆ’ ಎಂದು ವಿಶದೀಕರಿಸಿದ್ದಾರೆ.

(ಮುಂದುವರಿಯುತ್ತದೆ..)

(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...