ಮೀಡಿಯಾದ ಸಿಬ್ಬಂದಿಯ ಸಾಮಾಜಿಕ ಹಿನ್ನೆಲೆಯು ಸುದ್ದಿಯ ಆಯ್ಕೆ ಮತ್ತು ಮಂಡನೆ-ನಿರೂಪಣೆಗಳನ್ನು ಅಗಾಧವಾಗಿ ಪ್ರಭಾವಿಸುತ್ತದೆ. ಸಮಾಜದ ಎಲ್ಲ ವರ್ಗವೂ ಮೀಡಿಯಾದಲ್ಲಿ ಎಲ್ಲಿಯವರೆಗೆ ಪ್ರಾತಿನಿಧ್ಯ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಅದರ ಮಾಹಿತಿ ಬಿತ್ತರ ಏಕಮುಖಿಯೂ, ಸಮತೂಕರಹಿತವೂ ಆಗಿರುತ್ತದೆ. ಈ ಸಮತೂಕವನ್ನು ಸಾಧಿಸಲೆಂದೇ ದಲಿತರು ತಮ್ಮದೇ ಮೀಡಿಯಾ ಹೊಂದಬೇಕೆಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಪಾದಿಸಿದ್ದರು. ದಲಿತರು ಎದುರಿಸುವ ಅನ್ಯಾಯಗಳನ್ನು ವಿರೋಧಿಸಿ ಹೋರಾಡುವುದು ದಲಿತ ಪತ್ರಿಕೋದ್ಯಮದಿಂದ ಮಾತ್ರವೇ ಸಾಧ್ಯ ಎಂದು ಅವರು ನಂಬಿದ್ದರು.
ನೂರು ವರ್ಷಗಳ ಹಿಂದೆ ಅವರು ಬರೆದ ಮಾತುಗಳು ಇಂದಿಗೂ ಕಹಿ ಸತ್ಯವಾಗಿ ಉಳಿದುಬಿಟ್ಟಿವೆ. ಮೀಡಿಯಾ ಒಂದು ಸಂಸ್ಥೆಯಾಗಿ ಜಾತೀಯ ಪೂರ್ವಗ್ರಹಗಳನ್ನೇ ಉಸಿರಾಡುತ್ತಿದೆ. ಮೀಡಿಯಾದ ಉನ್ನತ ಹಂತಗಳನ್ನು ಇಂದಿಗೂ ಸವರ್ಣೀಯರೇ ನಿಯಂತ್ರಿಸುತ್ತಿದ್ದಾರೆ.
ಜಾತಿ, ವರ್ಣ, ವರ್ಗ, ಲಿಂಗ ಹಾಗೂ ಪ್ರಾದೇಶಿಕ ವಿಭಜನೆಗಳ ಶೋಷಣೆಯ ಗುಣವನ್ನು ಸಮಾಜಕ್ಕೆ ತಿಳಿಸಿ ಹೇಳುವುದೇ ಅಲ್ಲದೆ ಅವುಗಳು ಹುಟ್ಟಿಸಿ ಹಬ್ಬಿಸುವ ಪೂರ್ವಗ್ರಹಗಳಿಂದ ಸಮಾಜವನ್ನು ಮುಕ್ತಗೊಳಿಸಬೇಕು ಎಂಬುದನ್ನು ಪ್ರತಿಪಾದಿಸುತ್ತದೆ. ಅಂಬೇಡ್ಕರ್ ಅವರ ಪತ್ರಿಕೋದ್ಯಮದ ನಡುನಡುವೆ ಅಂತರಗಳಿದ್ದರೂ ತಮ್ಮ ಜೀವಿತಾವಧಿಯ 65 ವರ್ಷಗಳಲ್ಲಿ 35 ವರ್ಷಗಳ ಕಾಲ (1920ರಿಂದ 1956) ಅವರು ಪತ್ರಿಕಾವೃತ್ತಿ ನಡೆಸಿದರು. ಪತ್ರಿಕೆಗಳನ್ನು ತಮ್ಮ ಹೋರಾಟದ ಅಸ್ತ್ರಗಳನ್ನಾಗಿ ಬಳಸಿದರು. ಅದು ಒಂದು ರೀತಿಯಲ್ಲಿ ಭಾರತೀಯ ಮೀಡಿಯಾವನ್ನು ಬ್ರಾಹ್ಮಣ ಹಿಡಿತದಿಂದ ಬಿಡಿಸುವ ಪ್ರಯತ್ನವೂ ಆಗಿತ್ತು.
ಸಮಾಜವನ್ನು ಜನ ಪಯಣಿಸುವ ನಾವೆಗೆ ಬಾಬಾಸಾಹೇಬರು ಹೋಲಿಸಿದ್ದರು. ಜಾತಿವಾದಿ ಪತ್ರಿಕೆಗಳಿಗೆ ಅವರು ನೀಡಿದ್ದ ಎಚ್ಚರಿಕೆ ಹೀಗಿದೆ- ‘ಯಾವುದೇ ಒಂದು ಜಾತಿಯನ್ನು ಕೆಳದರ್ಜೆಗೆ ನೂಕಿದರೂ ಅದರ ಪರಿಣಾಮ ಇತರೆ ಜಾತಿಗಳ ಮೇಲೆ ಆಗುತ್ತದೆ. ಸಮಾಜ ಎಂಬುದು ಒಂದು ನಾವೆ. ನಾವಿಕನು ಇತರೆ ನಾವಿಕರ ಮೇಲಿನ ಹಗೆಯಿಂದ ಅವರ ಕಂಪಾರ್ಟ್ಮೆಂಟಿನಲ್ಲಿ ಛೇದ ಕೊರೆದೆರೆ ಎಲ್ಲ ನಾವಿಕರೂ ಮುಳುಗುವುದು ನಿಶ್ಚಿತ. ಜಾತಿಗಳು ಮತ್ತು ವೃತ್ತಪತ್ರಿಕೆಗಳಿಗೂ ಈ ಮಾತು ಅನ್ವಯಿಸುತ್ತದೆ. ಯಾವುದೇ ಜಾತಿಯ ಹಿತಗಳನ್ನು ಬಾಧಿಸುವುದು ತಮ್ಮ ಪತ್ರಿಕೆಯ ಉದ್ದೇಶವಲ್ಲ. ಬದಲಿಗೆ ಒಬ್ಬರು ಮತ್ತೊಬ್ಬರಿಗೆ ಕೇಡು ಮಾಡದೆ ಪರಸ್ಪರರ ಹಿತವನ್ನು ರಕ್ಷಿಸುವಂತಹ ಸಮಾಜವೊಂದರ ನಿರ್ಮಾಣವೇ ತಮ್ಮ ಪತ್ರಿಕೆಯ ಗುರಿ’ ಎಂದು ಅವರು ಸಾರಿದ್ದರು.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
‘ಪತ್ರಿಕಾವೃತ್ತಿಯು ಇಂಡಿಯಾದಲ್ಲಿ ಒಂದು ಕಾಲಕ್ಕೆ ಕಸುಬಾಗಿತ್ತು. ಈಗ ಅದು ವ್ಯಾಪಾರ ಆಗಿ ಹೋಗಿದೆ. ಸಾಬೂನಿನ ತಯಾರಿಕೆಯಲ್ಲಿ ಎಷ್ಟು ನೈತಿಕತೆ ಇರಬಹುದೋ ಅದಕ್ಕಿಂತ ಹೆಚ್ಚಿನದು ಪತ್ರಿಕೋದ್ಯಮದಲ್ಲಿ ಇಲ್ಲ. ಸಾರ್ವಜನಿಕರ ಜವಾಬ್ದಾರಿಯುತ ಸಲಹೆಗಾರ ತಾನು ಎಂಬ ಪಾತ್ರವನ್ನು ಅದು ತೊರೆದಿದೆ’ ಎಂದಿದ್ದರು.
‘ತುಳಿಸಿಕೊಂಡ ಜನ ಸಮುದಾಯಗಳಿಗೆ ಪತ್ರಿಕೆಗಳ ನೌಕರಿಗಳಲ್ಲಿ ಪ್ರಾತಿನಿಧ್ಯ ಇಲ್ಲ. ನನ್ನ ಮತ್ತು ನನ್ನ ಜನರ ದನಿಯನ್ನು ಅವರ ದೃಷ್ಟಿಕೋನಗಳನ್ನು ಪತ್ರಿಕೆಗಳು ಅದುಮಿಟ್ಟಿವೆ’ ಎಂದು ಅಂಬೇಡ್ಕರ್ ದೂರಿದ್ದರು. ಪತ್ರಿಕೆಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ ನೀಡದಿರುವುದು ಈ ಚರ್ಯೆಯ ಹಿಂದಿನ ಮುಖ್ಯ ಕಾರಣಗಳಲ್ಲೊಂದು ಎಂದು ವಿಶ್ಲೇಷಿಸಿದ್ದರು.
ಭಾರತದ ಮಾಧ್ಯಮದ ಸಾಮಾಜಿಕ ಸಂರಚನೆಯು ಅಂಬೇಡ್ಕರ್ ಕಾಲಕ್ಕಿಂತ ಹೆಚ್ಚು ಬದಲಾಗಿಲ್ಲ. ಭಾರತದ ರಾಷ್ಟ್ರೀಯ ಮಾಧ್ಯಮವು ಸಾಮಾಜಿಕ ವೈವಿಧ್ಯತೆಯನ್ನು ಬಿಂಬಿಸುವುದಿಲ್ಲ. ನೀತಿ ನಿರ್ಧಾರ ತೆಗೆದುಕೊಳ್ಳುವ ಹುದ್ದೆಗಳಲ್ಲಿ ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿ ಕಾಣಬರುವುದಿಲ್ಲ ಎಂಬುದು ಪ್ರೊ. ಯೋಗೇಂದ್ರ ಯಾದವ್, ಅನಿಲ್ ಚಮಾಡಿಯ ಹಾಗೂ ಜಿತೇಂದ್ರಕುಮಾರ್ ಅವರು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿರುವ ಕಟು ವಾಸ್ತವ.
‘ಅಸ್ಪೃಶ್ಯರಿಗೆ ತಮ್ಮದೇ ಆದ ‘ಪ್ರೆಸ್’ ಇಲ್ಲ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಇಲ್ಲದಿರುವುದು ದುಃಖದ ಸಂಗತಿ. ತಾರತಮ್ಯದಡಿ ತುಳಿಸಿಕೊಳ್ಳುತ್ತಿರುವ ನಮ್ಮ ಜನರ ನಿತ್ಯ ತೊಳಲಾಟವನ್ನು ಪತ್ರಿಕೆಗಳು ವರದಿ ಮಾಡುತ್ತಿಲ್ಲ. ಸಾಮಾಜಿಕ-ರಾಜಕೀಯ ಸಮಸ್ಯೆಗಳ ಕುರಿತು ನಮ್ಮ ವಿಚಾರಗಳ ಕತ್ತು ಹಿಸುಕಿ ತೆಪ್ಪಗಾಗಿಸುವ ಯೋಜನಾಬದ್ಧ ಮಸಲತ್ತು ನಡೆದಿದೆ. ಕಾಂಗ್ರೆಸ್ ಪತ್ರಿಕಾ ವಲಯಗಳ ಬಾಗಿಲುಗಳು ಅಸ್ಪೃಶ್ಯರ ಪಾಲಿಗೆ ಮುಚ್ಚಿ ಹೋಗಿವೆ. ಲವಲೇಶದಷ್ಟು ಪ್ರಚಾರವನ್ನೂ ನಿರಾಕರಿಸಿವೆ. ಅಸ್ಪೃಶ್ಯರಿಗೆ ಪತ್ರಿಕೆಗಳು ಯಾಕೆ ಇಲ್ಲ ಎಂಬುದು ನಿಚ್ಚಳ. ಜಾಹೀರಾತು ಆದಾಯ ಇಲ್ಲದೆ ಯಾವ ಪತ್ರಿಕೆಯೂ ಉಳಿದು ಬಾಳುವುದು ಸಾಧ್ಯವಿಲ್ಲ. ಜಾಹೀರಾತು ಆದಾಯ ವಾಣಿಜ್ಯೋದ್ಯಮದಿಂದಲೇ ಬರಬೇಕು. ಇಂಡಿಯಾದ ಎಲ್ಲ ವಾಣಿಜ್ಯೋದ್ಯಮ ಕಾಂಗ್ರೆಸ್ ತೆಕ್ಕೆಯಲ್ಲೇ ಇದೆ. ಇಂಡಿಯಾದ ಬಹುಮುಖ್ಯ ಸುದ್ದಿ ವಿತರಕ ಸಂಸ್ಥೆಯಾದ ‘ಅಸೋಸಿಯೇಟೆಡ್ ಪ್ರೆಸ್’ ಎಂಬ ಸುದ್ದಿ ಸಂಸ್ಥೆ ಮದ್ರಾಸಿನ ಬ್ರಾಹ್ಮಣರಿಂದ ತುಂಬಿ ಹೋಗಿದೆ. ಅವರೆಲ್ಲ ಕಾಂಗ್ರೆಸ್ ಪರವಾಗಿರುವವರು. ಕಾಂಗ್ರೆಸ್‌ಗೆ ಪ್ರತಿಕೂಲ ಎನಿಸುವ ಯಾವ ಸುದ್ದಿಯನ್ನೂ ಅವರು ಹೊರ ಹೋಗ ಬಿಡುವುದಿಲ್ಲ’ ಎಂದು ಜೀವಂತ ಉದಾಹರಣೆಯನ್ನು ಅವರು ನೀಡಿದ್ದರು.
ಪತ್ರಿಕೋದ್ಯಮವು ಕಣ್ಣು ಮುಚ್ಚಿಕೊಂಡು ಜನರಿಗೆ ಬೇಕಾದದ್ದನ್ನಷ್ಟೇ ಕೊಡುವುದು ತಪ್ಪು ಎಂದೂ ಜನತಾಂತ್ರಿಕ ಸಂಗತಿಗಳನ್ನು ನೆಲೆ ನಿಲ್ಲಿಸುವುದು ಪತ್ರಿಕೋದ್ಯಮದ ಕರ್ತವ್ಯ ಎಂದೂ ಅವರು ನಂಬಿದ್ದರು.
ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!
ಅಂಬೇಡ್ಕರ್ ಆರಂಭಿಸಿದ್ದ ಪತ್ರಿಕೆಗಳಿಗೆ ಹಣಬಲವಿರಲಿಲ್ಲ. ‘ಮೂಕನಾಯಕ’ ಮತ್ತು ‘ಬಹಿಷ್ಕೃತ ಭಾರತ’ ಮುಚ್ಚಲು ಹಣದ ಕೊರತೆಯೇ ನೇರ ಕಾರಣ. ಜಾಹೀರಾತು ಕುರಿತ ಅವರ ಬಿಗಿ ನಿಲುವೂ ಈ ಬಿಕ್ಕಟ್ಟಿಗೆ ಕಾರಣವಾಗಿತ್ತು. ಅಸಮಾನತೆ ಮತ್ತು ಸಂಪ್ರದಾಯವಾದವನ್ನು ಎತ್ತಿ ಹಿಡಿದು ಮುಂದುವರೆಸುವ ಹೊಣೆಗೇಡಿ ಜಾಹೀರಾತುಗಳನ್ನು ಅವರು ತಮ್ಮ ಸಂಪಾದಕೀಯಗಳಲ್ಲಿ ತೀವ್ರವಾಗಿ ಖಂಡಿಸಿದ್ದರು. ಸಾಮಾಜಿಕವಾಗಿ ಅನೈತಿಕ ಮತ್ತು ಅಸಭ್ಯ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಿಂತ ಜಾಹೀರಾತುಗಳ ಪ್ರಕಟಣೆಯನ್ನು ನಿಲ್ಲಿಸುವುದೇ ಲೇಸು ಎಂದಿದ್ದರು. ಆದರೆ ‘ಬಾಂಬೇ ಕ್ರಾನಿಕಲ್’ ಮತ್ತು ‘ಕೇಸರಿ’ ಸೇರಿದಂತೆ ಹಲವಾರು ರಾಷ್ಟ್ರವಾದಿ ಪತ್ರಿಕೆಗಳು ಬ್ರಾಹ್ಮಣವಾದಿ ಧಾರ್ಮಿಕ ಸಾಹಿತ್ಯವನ್ನು, ಬ್ರಾಹ್ಮಣವಾದವನ್ನು ಎತ್ತಿ ಹಿಡಿಯುವ ಚಟುವಟಿಕೆಗಳು, ಘಟನಾವಳಿಗಳು ಹಾಗೂ ಗಂಡಾಳಿಕೆಯನ್ನು ಸಮರ್ಥಿಸುವ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದವು.

ಮಹಾರಾಷ್ಟ್ರದಲ್ಲಿ ದಲಿತ ಪತ್ರಿಕೆಗಳು ಮಹಾತ್ಮಾ ಜ್ಯೋತಿಬಾ ಫುಲೆ ಅವರ ಸತ್ಯಶೋಧಕ ಆಂದೋಲನದ ಕೊಡುಗೆಗಳು. ಹತ್ತೊಂಬತ್ತನೆಯ ಶತಮಾನದ ಕಡೆಯ ಭಾಗದಲ್ಲಿ ಫುಲೆ ಅವರು ದೀನಬಂಧುವನ್ನು ಸ್ಥಾಪಿಸಿದರು. ಆನಂತರ ದಲಿತ ಪತ್ರಿಕೆಗಳು ಹೊರಬಿದ್ದವು. ಶಿವರಾಮ್ ಜನಬಾ ಕಾಂಬ್ಳೆ, ಕಿಸನ್ ಫಾಗೂಜಿ, ಬನಸೋಡೆ ಅಸ್ಪೃಶ್ಯತೆ ನಿವಾರಣೆಗೆಂದೇ ಮೀಸಲಿರಿಸಿದ ಪತ್ರಿಕೆಗಳನ್ನು ಹೊರತಂದರು. ಆದರೆ ಈ ಪತ್ರಿಕೆಗಳು ಬಹುಕಾಲ ಬಾಳಲಿಲ್ಲ.
ಅಂಬೇಡ್ಕರ್ ಅವರ ಕುರಿತು ಆಳ ಅಧ್ಯಯನ ಮಾಡಿರುವ ಗೇಲ್ ಓಮ್ವೆಡ್ಟ್ ಹೇಳುವಂತೆ ಅಂಬೇಡ್ಕರ್ ಅವರ ಸ್ವಾತಂತ್ರ‍್ಯ ಹೋರಾಟ ಭಿನ್ನ ಬಗೆಯದಾಗಿತ್ತು. ಭಾರತೀಯ ಸಮಾಜದ ಅತ್ಯಂತ ದೀನ ದುಃಖಿತರ ಬಿಡುಗಡೆಗಾಗಿ ನಡೆಸಿದ ಹೋರಾಟ ಅದು. ವಸಾಹತುಶಾಹಿ ಆಡಳಿತದ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ‍್ಯ ಹೋರಾಟಕ್ಕಿಂತಲೂ ಹೆಚ್ಚು ಆಳ-ಅಗಲದ ಸ್ವಾತಂತ್ರ‍್ಯ ಹೋರಾಟ ಅಂಬೇಡ್ಕರ್ ಅವರದಾಗಿತ್ತು. ಅವರು ಹೊಸ ದೇಶವನ್ನು ಕಟ್ಟಲು ಬಯಸಿದ್ದರು.

1927ರ ಮಹಾಡ್ ಸತ್ಯಾಗ್ರಹವು ಪಶ್ಚಿಮ ಭಾರತದಲ್ಲಿ ದಲಿತ ಸಾಮೂಹಿಕ ರಾಜಕಾರಣ ಮತ್ತು ಹೋರಾಟಗಳು ತಲೆಯೆತ್ತಲು ನಾಂದಿ ಹಾಡಿತು. ಮಹಾಡ್ ಸತ್ಯಾಗ್ರಹ ನಡೆದಿದ್ದಾಗ ಜರುಗಿದ ಸವರ್ಣೀಯರ ಹಿಂಸಾಚಾರದ ಕಾರಣ ದಲಿತರನ್ನು ಹಿಂದೂ ಸಮುದಾಯದಿಂದ ಬೇರೆಯಾಗಿ ಗುರುತಿಸಬೇಕು ಎಂಬ ವಾದವನ್ನು ಬಾಬಾಸಾಹೇಬರು ಮುಂದಿಟ್ಟರು. ಆನಂತರ ಬಂದ ‘ಜನತಾ’ ಮತ್ತು ‘ಪ್ರಬುದ್ಧ ಭಾರತ’ ಪತ್ರಿಕೆಗಳೂ ದಲಿತರ ಮೇಲಿನ ಹಿಂಸಾಚಾರದ ಪ್ರಶ್ನೆಯನ್ನು ಪ್ರಮುಖವಾಗಿ ಮಂಡಿಸಿದವು. ಬಾಬಾಸಾಹೇಬರು ಬರೆದ ಸಂಪಾದಕೀಯಗಳನ್ನು ಸಾರ್ವಜನಿಕವಾಗಿ ದಲಿತ ಸಭೆಗಳಲ್ಲಿ ಓದಲಾಗುತ್ತಿತ್ತು. ಈ ಪತ್ರಿಕೆಗಳು ಮತ್ತು ಪ್ರಭಾವೀ ಸಂಪಾದಕೀಯಗಳು ಪಶ್ಚಿಮ ಭಾರತದಲ್ಲಿ ದಲಿತರನ್ನು ಒಗ್ಗೂಡಿಸಲು ಸಹಾಯಕವಾದವು.
1927ರಲ್ಲಿ ಮರಾಠಿ ಸಾರ್ವಜನಿಕ ವಲಯದಲ್ಲಿ ಬಹುಚರ್ಚೆಗೆ ಈಡಾದ ಸಂಗತಿಗಳಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕನ ನಡುವಣ ಅಂತರಧರ್ಮೀಯ ವಿವಾಹವೂ ಒಂದು. ಹಿಂದೂ ಯುವತಿ ಪ್ರಖ್ಯಾತ ವಿದ್ವಾಂಸ ಆರ್.ಜಿ. ಭಂಡಾರ್ಕರ್ ಅವರ ಮೊಮ್ಮಗಳು. ಮರಾಠಿ ಪತ್ರಿಕೆಗಳು ಈ ವಿವಾಹವನ್ನು ಬಲವಾಗಿ ವಿರೋಧಿಸಿದ್ದವು. ಈ ವಿರೋಧಕ್ಕೆ ಪ್ರತಿಕ್ರಿಯೆಯಾಗಿ ವಿವಾಹವನ್ನು ಬೆಂಬಲಿಸಿ ‘ಬಹಿಷ್ಕೃತ ಭಾರತ’ದಲ್ಲಿ ಭಾವತೀವ್ರ ಸಂಪಾದಕೀಯವೊಂದನ್ನು ಬರೆದರು. ಹಿಂದೂ-ಮುಸ್ಲಿಮರ ನಡುವೆ ವಿಶ್ವಾಸದ ಮರುಸ್ಥಾಪನೆಗೆ ನೆರವಾಗುವ ಕಾರಣ ನಮ್ಮ ಸಮಾಜ ಅಂತರಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂಬುದು ಅವರ ವಾದವಾಗಿತ್ತು. ಈ ವಿವಾಹದ ವಿರೋಧಿಗಳನ್ನು ಟೀಕಿಸಿದ ಅವರು ಮದುವೆಯೆಂಬುದು ವ್ಯಕ್ತಿಗತ ಸಂಗತಿಯಾಗಿದ್ದು, ಹೊರಗಿನವರು ತಲೆ ಹಾಕಲು ಅವಕಾಶವಿಲ್ಲ ಎಂದರು.
1920ರ ದಶಕದಲ್ಲಿ ಹಿಂದೂ-ಮುಸ್ಲಿಮ್ ಘರ್ಷಣೆಗಳು ಅಂದಿನ ಭಾರತದ, ಅದರಲ್ಲೂ ವಿಶೇಷವಾಗಿ ಬಾಂಬೆ ಪ್ರೆಸಿಡೆನ್ಸಿಯ ರಾಜಕಾರಣದ ಸ್ವರೂಪವನ್ನು ಪ್ರಭಾವಿಸಿದ್ದವು. ವಿನಾಯಕ ದಾಮೋದರ ಸಾವರ್ಕರ್ ನೇತೃತ್ವದಲ್ಲಿ ಹಿಂದೂ ರಾಷ್ಟ್ರೀಯತೆಯ ಪ್ರಚಾರ, ಪ್ರತಿಪಾದನೆ ನಡೆದಿತ್ತು. ಬ್ರಿಟಿಷ್ ಇಂಡಿಯಾದ ಸರಹದ್ದುಗಳ ಒಳಗಿನ ಪ್ರದೇಶವನ್ನು ತನ್ನ ಪುಣ್ಯಭೂಮಿ ಮತ್ತು ಪಿತೃಭೂಮಿ ಎಂದು ಆರಾಧಿಸುವ ವ್ಯಕ್ತಿಗಳು ಮಾತ್ರವೇ ಈ ನೆಲವನ್ನು ತನ್ನ ಪಿತೃಗಳದು ಎಂದು ಹೇಳಿಕೊಳ್ಳಬಹುದು ಎಂಬುದಾಗಿ ಸಾವರ್ಕರ್ ಸಾರಿದ್ದರು. ಮುಸಲ್ಮಾನರು, ಕ್ರೈಸ್ತರು ಹಾಗೂ ಕಮ್ಯುನಿಸ್ಟರಿಗೆ ವಿದೇಶಿಗಳೆಂಬ ಹಣೆಪಟ್ಟಿ ಹಚ್ಚಲಾಯಿತು. ಮತ್ತೊಂದೆಡೆ ಸಾವರ್ಕರ್ ಮತ್ತು ಬಿ.ಎಸ್. ಮೂಂಜೆ ಅವರು ಡಾ. ಹೆಡಗೇವಾರ್ ಅವರ ಆರೆಸ್ಸೆಸ್ ಸ್ಥಾಪನೆಗೆ ಬೆಂಬಲವಾಗಿ ನಿಂತಿದ್ದರು. ರಾಷ್ಟ್ರವಾದಿ ಪತ್ರಿಕೆಗಳೂ ಸೇರಿದಂತೆ ಮರಾಠಿ ಪತ್ರಿಕೆಗಳು ಮುಸ್ಲಿಮ್ ವಿರೋಧಿ ನಿಲುವು ತಳೆದಿದ್ದವು.
ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 1)
ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಜಲಗಾಂವ್‌ನ ಐದು ಸಾವಿರ ಮಂದಿ ದಲಿತರು, 1929ರಲ್ಲಿ ಹಾಕಿದ ಸಾಮೂಹಿಕ ಬೆದರಿಕೆಯು ಮತಾಂತರ ಕುರಿತ ಚರ್ಚೆಯನ್ನು ಕೆದಕಿತ್ತು. ದಲಿತರ ನಿಲುವನ್ನು ಅಂಬೇಡ್ಕರ್ ‘ಬಹಿಷ್ಕೃತ ಭಾರತ’ದಲ್ಲಿ 1929ರ ಮಾರ್ಚ್ 15ರ ಸಂಚಿಕೆಯ ಸಂಪಾದಕೀಯದಲ್ಲಿ ಬೆಂಬಲಿಸಿದರು. ‘ನೋಟಿಸ್ ಟು ಹಿಂದೂಯಿಸಂ’ ಶೀರ್ಷಿಕೆಯ ಈ ಸಂಪಾದಕೀಯದಲ್ಲಿ ಇಸ್ಲಾಮ್‌ಗೆ ಮತಾಂತರ ಹೊಂದುವಂತೆಯೂ ಸೂಚಿಸಿದರು. ‘ನೀವು ಮತಾಂತರ ಹೊಂದಬೇಕೆಂದಿದ್ದರೆ ಮುಸಲ್ಮಾನರಾಗಿ’ ಎಂದು ಅಸ್ಪೃಶ್ಯರನ್ನು ಹುರಿದುಂಬಿಸಿದ್ದರು. ಇಸ್ಲಾಮ್ ಸಮಾನತೆಯನ್ನು ಆಚರಿಸುವುದೇ ಅಲ್ಲದೆ ಪ್ರೋತ್ಸಾಹಿಸುತ್ತದೆ ಎಂಬುದು ಅವರ ವಾದವಾಗಿತ್ತು. ಇಸ್ಲಾಮ್‌ನ ನಾನಾ ಮಗ್ಗುಲುಗಳ ಕುರಿತು ಮಾಹಿತಿ ನೀಡುವ ಲೇಖನಮಾಲೆಯನ್ನು ಅವರು ‘ಬಹಿಷ್ಕೃತ ಭಾರತ’ದಲ್ಲಿ ಆರಂಭಿಸಿದರು. ಹಿಂದೂ ದಮನವನ್ನು ಹಿಮ್ಮೆಟ್ಟಿಸಲು ದಲಿತರು ಮತಾಂತರಗೊಳ್ಳುವುದೇ ಸರಿಯಾದ ದಾರಿ ಎಂಬುದು ಅವರ ನಿಲುವಾಗಿತ್ತು.
‘ಮೂಕನಾಯಕ’ದ ಸಂಪಾದಕೀಯಗಳು ಬ್ರಾಹ್ಮಣ ಸಂಪ್ರದಾಯವಾದದ ವಿರುದ್ಧ ದನಿಯೆತ್ತಿದ ಗಾಂಧೀಜಿಯ ದಿಟ್ಟತನವನ್ನು, ಅವರ ಪ್ರಾಮಾಣಿಕತೆ ಮತ್ತು ಮಿತವ್ಯಯವನ್ನು ಪ್ರಶಂಸಿಸಿದವು. ‘ಬಹಿಷ್ಕೃತ ಭಾರತ’ದ ಸಂಪಾದಕೀಯಗಳು ವರ್ಣಾಶ್ರಮ ವ್ಯವಸ್ಥೆ ಕುರಿತು ಗಾಂಧೀಜಿಯವರ ವಿಚಾರಗಳನ್ನು ಖಂಡಿಸಿದವು. ಜಾತಿ ಮತ್ತು ಅಸ್ಪೃಶ್ಯತೆಯ ವಿರುದ್ಧ ತಮ್ಮ ವರ್ಚಸ್ಸನ್ನು ಬಳಸುವಂತೆ ಗಾಂಧೀಜಿಯನ್ನು ಆಗ್ರಹಿಸಿ ಅಂಬೇಡ್ಕರ್ ಸಂಪಾದಕೀಯ ಬರೆದಿದ್ದರು.
ಸ್ವಾತಂತ್ರ‍್ಯ ಹೋರಾಟದ ದಿನಗಳಲ್ಲಿ ತುಳಿದಿಟ್ಟ ಜನರ ಪರವಾಗಿ, ಅಸ್ಪೃಶ್ಯತೆಯ ವಿರುದ್ಧವಾಗಿ ದನಿಯೆತ್ತಿದ್ದ ಅಂಬೇಡ್ಕರ್ ಅವರನ್ನು ಅಂದಿನ ಹಿಂದೂವಾದಿ ಮಾಲೀಕತ್ವದ ಪತ್ರಿಕೆಗಳು ಭೀಮಾಸುರ, ರಾಕ್ಷಸ, ದ್ರೋಹಿ, ಬಾಡಿಗೆಯ ಬಂಟ, ಬ್ರಹ್ಮದ್ವೇಷಿ, ರಾಷ್ಟ್ರೀಯತೆಯ ವಿರೋಧಿ ಎಂದೆಲ್ಲ ಹೀಯಾಳಿಸಿದ್ದವು. ಗಾಂಧೀಜಿಯ ದಂಡಿ ಯಾತ್ರೆಯನ್ನು ಸತ್ಯಾಗ್ರಹ ಎಂದು ಕರೆಯುತ್ತಿದ್ದ ಅದೇ ಪತ್ರಿಕೆಗಳು ಅಂಬೇಡ್ಕರ್ ಅವರ ಮಹಾಡ್ ಆಂದೋಲನವನ್ನು ದ್ರೋಹ ಎಂದು ಜರೆದವು!
ದಲಿತರನ್ನು ಎಚ್ಚರಿಸಿ ಸಬಲರನ್ನಾಗಿ ಮಾಡಬೇಕಿದ್ದರೆ ಅವರದೇ ಆದ ಪ್ರಕಟಣೆಗಳಿರಬೇಕು ಎಂದಿದ್ದರು ಡಾ. ಬಾಬಾಸಾಹೇಬ ಅಂಬೇಡ್ಕರ್. ಇದೇ ಉದ್ದೇಶದಿಂದ 1920ರ ಜನವರಿ 31ರಂದು ಮೂಕನಾಯಕ ಎಂಬ ಮರಾಠಿ ಪಾಕ್ಷಿಕವೊಂದನ್ನು ಆರಂಭಿಸಿದರು. ಆಗ ಅವರಿಗೆ 29ರ ಉಕ್ಕುಪ್ರಾಯ.
ಹದಿನೈದು ದಿನಗಳಿಗೊಮ್ಮೆ ಶನಿವಾರಗಳಂದು ಬಾಂಬೆಯಿಂದ ಹೊರಬೀಳುತ್ತಿತ್ತು ಮೂಕನಾಯಕ. ಅದರ ಕಚೇರಿ ಪರೇಲ್‌ನ ಶ್ರಮಿಕವರ್ಗದ ನೆರೆಹೊರೆಯಲ್ಲಿತ್ತು. ಸಂತ ತುಕಾರಾಮನ ಚತುಷ್ಪದಿಯೊಂದರ ಸ್ಫೂರ್ತಿಯೇ ಮೂಕನಾಯಕ ಶೀರ್ಷಿಕೆಗೆ ಕಾರಣವಾಗಿತ್ತು. ಕೊಲ್ಹಾಪುರದ ಶಾಹು ಮಹಾರಾಜರು ಅಂಬೇಡ್ಕರ್ ಅವರನ್ನು ಅರಸಿಕೊಂಡು ಬಂದು ನೀಡಿದ್ದ 2,500 ರುಪಾಯಿಗಳ ದೇಣಿಗೆಯೇ ಪತ್ರಿಕೆಗೆ ದೊರೆತಿದ್ದ ಆರಂಭಿಕ ಚಾಲನೆ. ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವನ್ನು ವಹಿಸಿತ್ತು ಮೂಕನಾಯಕ.
ಈ ಪ್ರಕಟಣೆಯ ಹಿಂದಿನ ತರ್ಕವನ್ನು ವಿವರಿಸಿ ಮೂಕನಾಯಕದ ಉದ್ಘಾಟನಾ ಸಂಚಿಕೆಯ ಸಂಪಾದಕೀಯದಲ್ಲಿ ಅವರು ಬರೆದರು- ‘ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ನಮ್ಮ ಜನರ ಮೇಲೆ ನಡೆಯುವ ಅನ್ಯಾಯದ ವಿರುದ್ಧ ಪರಿಹಾರ ಸೂಚಿಸಲು ಮತ್ತು ಭವಿಷ್ಯತ್ತಿನಲ್ಲಿ ನಮ್ಮ ಪ್ರಗತಿ ಕುರಿತು ಮಾರ್ಗೋಪಾಯಗಳ ಕುರಿತು ಚರ್ಚಿಸಲು ಪತ್ರಿಕೆಗಿಂತ ಉತ್ತಮ ಸಂಪನ್ಮೂಲ ಮತ್ತೊಂದಿಲ್ಲ.’
ಮುಂದುವರೆದು ಅವರು ಬರೆಯುತ್ತಾರೆ- `ಹಿಂದೂ ಸಮಾಜವು ಏಣಿ ಅಥವಾ ಪ್ರವೇಶ ದ್ವಾರವೇ ಇಲ್ಲದ ಹಲವು ಅಂತಸ್ತುಗಳ ಗೋಪುರವಿದ್ದಂತೆ. ಕೆಳ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಯೋಗ್ಯನಾದರೂ ಮೇಲಿನ ಅಂತಸ್ತನ್ನು ಪ್ರವೇಶಿಸಲಾರ. ಮೇಲಿನ ಅಂತಸ್ತಿನಲ್ಲಿ ಹುಟ್ಟಿದ ವ್ಯಕ್ತಿ ಅದೆಷ್ಟೇ ಅಯೋಗ್ಯನಾದರೂ ಅವನನ್ನು ಕೆಳ ಅಂತಸ್ತಿಗೆ ಓಡಿಸುವುದು ಸಾಧ್ಯವಿಲ್ಲ. ಅಂತರ್ಜಾತೀಯ ಸಹಭೋಜನ ಮತ್ತು ಅಂತರ್ಜಾತೀಯ ವಿವಾಹಗಳಿಗೆ ಅವಕಾಶವಿಲ್ಲದೆ ಏರ್ಪಟ್ಟಿರುವ ಪರಕೀಯಪ್ರಜ್ಞೆಯು ಸ್ಪೃಶ್ಯ ಮತ್ತು ಅಸ್ಪೃಶ್ಯ ಭಾವನೆಗಳನ್ನು ಅದೆಷ್ಟು ಪೋಷಿಸಿಬಿಟ್ಟಿದೆಯೆಂದರೆ ಈ ಸ್ಪೃಶ್ಯ ಮತ್ತು ಅಸ್ಪೃಶ್ಯ ಜಾತಿಗಳು ಹಿಂದೂ ಸಮಾಜದ ಭಾಗವೇ ಆಗಿದ್ದರೂ, ವಾಸ್ತವದಲ್ಲಿ ಬೇರೆ ಬೇರೆಯೇ ಜಗತ್ತುಗಳಾಗಿ ಜೀವಿಸುತ್ತಿವೆ.’
‘ಬೆಕ್ಕುಗಳು ನಾಯಿಗಳು ಅಸ್ಪೃಶ್ಯರ ಎಂಜಲು ತಿನ್ನುತ್ತವೆ. ಮಕ್ಕಳ ಮಲವನ್ನೂ ತಿನ್ನುತ್ತವೆ. ಇದೇ ನಾಯಿ ಬೆಕ್ಕುಗಳು ಸ್ಪೃಶ್ಯರ ಮನೆಯನ್ನು ಪ್ರವೇಶಿಸಬಹುದು. ಹಾಗೆ ಪ್ರವೇಶಿಸಿದರೆ ಮೈಲಿಗೆಯಿಲ್ಲ. ಈ ಪ್ರಾಣಿಗಳನ್ನು ಸ್ಪೃಶ್ಯರು ಮುಟ್ಟುತ್ತಾರೆ, ಅಪ್ಪಿ ಮುದ್ದಾಡುತ್ತಾರೆ. ಅವು ಉಣ್ಣುವ ತಟ್ಟೆಗೆ ಬಾಯಿ ಹಾಕಿದರೂ ಅವರಿಗೆ ತಕರಾರಿಲ್ಲ. ಯಾವುದೋ ಚಾಕರಿಗೆಂದು ಮನೆಯ ಹೊರಗೆ ನಿಲ್ಲುವ ಅಸ್ಪೃಶ್ಯನನ್ನು ಕಂಡ ಸವರ್ಣೀಯ ಗದರುತ್ತಾನೆ- ದೂರ ನಿಲ್ಲು, ಮಗುವಿನ ಮಲವನ್ನು ಬಾಚಿ ಎಸೆಯುವ ಬೋಕಿ ಬಿಲ್ಲೆಯನ್ನು ಅಲ್ಲಿ ಇಡಲಾಗಿದೆ. ಅದನ್ನೂ ಮುಟ್ಟಿ ಮೈಲಿಗೆ ಮಾಡುತ್ತೀಯೇನು?’ ಎಂಬ ಹೃದಯವಿದ್ರಾವಕ ಸಾಲುಗಳನ್ನು ಬಾಬಾಸಾಹೇಬರು ಮೂಕನಾಯಕದ 1920ರ ಆಗಸ್ಟ್ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ.
ಇದನ್ನೂ ಓದಿರಿ: ಕಾರ್ಮಿಕರ ಸ್ಥಿತಿ: ಎಲ್ಲಿಂದ ಎಲ್ಲಿಗೆ? (ಭಾಗ- 2)
ಲಂಡನ್ ಸ್ಕೂಲ್ ಅಫ್ ಎಕನಾಮಿಕ್ಸ್‌ನಲ್ಲಿ ಅರ್ಧದಲ್ಲಿಯೇ ತೊರೆದು ಬಂದಿದ್ದ ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರೆಸಲು ಬಾಬಾಸಾಹೇಬರು ಹಠಾತ್ತನೆ ಲಂಡನ್‌ಗೆ ತೆರಳಬೇಕಾಗುತ್ತದೆ. ಮೂಕನಾಯಕನ ಉಸ್ತುವಾರಿಯನ್ನು ಅಲ್ಲಿಂದಲೇ ನೋಡಿಕೊಳ್ಳುತ್ತಾರೆ. ಪತ್ರಿಕೆಯ ಹಿಂದಿನ ಚಾಲಕಶಕ್ತಿ ತಾವೇ ಆದರೂ ಸಂಪಾದಕ ಹುದ್ದೆಯಲ್ಲಿ ಅಂಬೇಡ್ಕರ್ ಇರುವುದಿಲ್ಲ. ಪಾಂಡುರಂಗ ಭಾಟ್ಕರ್ ಈ ಪತ್ರಿಕೆಯ ಮೊದಲ ಸಂಪಾದಕರು. ಧ್ಯಾನದೇವ ಘೋಲಪ್ ಎರಡನೆಯ ಸಂಪಾದಕರು. ಆರ್ಥಿಕ ಸಂಕಟ ಈ ಪತ್ರಿಕೆಯನ್ನು ನೆರಳಿನಂತೆ ಹಿಂಬಾಲಿಸಿತ್ತು. ಘೋಲಪ್ ಅವರೊಂದಿಗೆ ಭಿನ್ನಾಭಿಪ್ರಾಯದ ಕಾರಣ ಅಂಬೇಡ್ಕರ್ 1923ರಲ್ಲಿ ಈ ಪತ್ರಿಕೆಯಿಂದ ದೂರವಾದರು.

ಬಾಬಾಸಾಹೇಬರು 1920ರಲ್ಲಿ ಆರಂಭಿಸಿದ ಮೊದಲ ಪತ್ರಿಕೆ ‘ಮೂಕನಾಯಕ’ವಾದರೆ ಕಡೆಯ ಪತ್ರಿಕೆ ‘ಪ್ರಬುದ್ಧ ಭಾರತ’ (1956ರ ಫೆಬ್ರವರಿ ನಾಲ್ಕು). ಈ ನಡುವಿನ ಅವಧಿಯಲ್ಲಿ ‘ಬಹಿಷ್ಕೃತ ಭಾರತ’ (1927ರ ಏಪ್ರಿಲ್ ಮೂರು), ‘ಸಮತಾ’ (1928ರ ಜೂನ್ 29), ‘ಜನತಾ’ (1930ರ ನವೆಂಬರ್ 25) ಪತ್ರಿಕೆಗಳನ್ನು ಹೊರತಂದರು.
ಅಂಬೇಡ್ಕರ್ ಆರಂಭಿಸಿದ್ದ ಪತ್ರಿಕೆಗಳಿಗೆ ಹಣಬಲವಿರಲಿಲ್ಲ. ಮೂಕನಾಯಕ ಮತ್ತು ಬಹಿಷ್ಕೃತ ಭಾರತ ಮುಚ್ಚಲು ಹಣದ ಕೊರತೆಯೇ ನೇರ ಕಾರಣ. ಜಾಹೀರಾತು ಕುರಿತು ಬಾಬಾಸಾಹೇಬರು ತಳೆದಿದ್ದ ನಿಷ್ಠುರ ನಿಲುವೂ ಪತ್ರಿಕೆಗಳ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಅಸಮಾನತೆ ಮತ್ತು ಸಂಪ್ರದಾಯವಾದವನ್ನು ಎತ್ತಿ ಹಿಡಿದು ಮುಂದುವರೆಸುವ ಹೊಣೆಗೇಡಿ ಜಾಹೀರಾತುಗಳನ್ನು ಅವರು ತಮ್ಮ ಸಂಪಾದಕೀಯಗಳಲ್ಲಿ ತೀವ್ರವಾಗಿ ಖಂಡಿಸಿದ್ದರು. ಬಾಂಬೇ ಕ್ರಾನಿಕಲ್ ಮತ್ತು ಬಾಲ ಗಂಗಾಧರ ತಿಲಕ್ ಅವರ ಕೇಸರಿ ಸೇರಿದಂತೆ ಹಲವಾರು ರಾಷ್ಟ್ರವಾದಿ ಪತ್ರಿಕೆಗಳು ಬ್ರಾಹ್ಮಣವಾದಿ ಧಾರ್ಮಿಕ ಸಾಹಿತ್ಯವನ್ನು, ಬ್ರಾಹ್ಮಣವಾದವನ್ನು ಎತ್ತಿ ಹಿಡಿಯುವ ಚಟುವಟಿಕೆಗಳು, ಘಟನಾವಳಿಗಳು ಹಾಗೂ ಗಂಡಾಳಿಕೆಯನ್ನು ಸಮರ್ಥಿಸುವ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದವು. ಸಾಮಾಜಿಕವಾಗಿ ಅನೈತಿಕ ಮತ್ತು ಅಸಭ್ಯ ಜಾಹೀರಾತುಗಳನ್ನು ಪ್ರಕಟಣೆಗಿಂತ ಜಾಹೀರಾತುಗಳ ಪ್ರಕಟಣೆಯನ್ನು ನಿಲ್ಲಿಸುವುದೇ ಲೇಸು ಎಂಬುದು ಬಾಬಾಸಾಹೇಬರ ನಿಲುವಾಗಿತ್ತು.
ಸವರ್ಣೀಯ ಪತ್ರಿಕೆಗಳು ಅಸ್ಪೃಶ್ಯತೆ ಆಚರಿಸುತ್ತಿದ್ದವು. ದಲಿತರ ಕುರಿತ ಸುದ್ದಿಯಿರಲಿ, ಜಾಹೀರಾತನ್ನೂ ಪ್ರಕಟಿಸುತ್ತಿರಲಿಲ್ಲ. ಬಾಲಗಂಗಾಧರ ತಿಲಕ್ ಅವರ ‘ಕೇಸರಿ’ ಪತ್ರಿಕೆಯು ‘ಮೂಕನಾಯಕ’ ಆರಂಭವಾಗುವ ಕುರಿತ ಸುದ್ದಿಯನ್ನು ಹಾಕಲಿಲ್ಲ. ಈ ಕುರಿತ ಜಾಹೀರಾತನ್ನು ಕೂಡ ತಿರಸ್ಕರಿಸಿತು. ತಿಲಕರು ಜೀವಂತವಿದ್ದಾಗಲೇ ಈ ಘಟನೆ ಜರುಗಿತ್ತು ಎಂದು ಧನಂಜಯ ಕೀರ್ ಬರೆದ ಬಾಬಾಸಾಹೇಬರ ಜೀವನಚರಿತ್ರೆಯಲ್ಲಿ ದಾಖಲಾಗಿದೆ.
‘ತುಳಿಸಿಕೊಂಡ ಜನ ಸಮುದಾಯಗಳಿಗೆ ಪತ್ರಿಕೆಗಳ ನೌಕರಿಗಳಲ್ಲಿ ಪ್ರಾತಿನಿಧ್ಯ ಇಲ್ಲ. ನನ್ನ ಮತ್ತು ನನ್ನ ಜನರ ದನಿಯನ್ನು ಅವರ ದೃಷ್ಟಿಕೋನಗಳನ್ನು ಪತ್ರಿಕೆಗಳು ಅದುಮಿಟ್ಟಿವೆ’ ಎಂಬ ಅಂಬೇಡ್ಕರ್ ಅವರ ಅಂದಿನ ವ್ಯಥೆ ಇಂದಿಗೂ ವಾಸ್ತವ. ಅಲ್ಲಲ್ಲಿ ಕೆಲ ಅಪವಾದಗಳು ಇದ್ದಾವು.
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಿ ಉಮಾಪತಿ
ಹಿರಿಯ ಪತ್ರಕರ್ತರು




