ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

Date:

ಬಾಬಾ ಸಾಹೇಬರು ಕಾನೂನು, ರಾಜಕಾರಣ, ಆರ್ಥಿಕತೆ ಮತ್ತು ಸಮಾಜ ಕ್ಷೇತ್ರಗಳ ಮೇಲೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಭಾರತೀಯ ಸಮಾಜವನ್ನು ಕುರಿತ ಅವರ ವಿಶ್ಲೇಷಣೆಯಿರುವ ಪುಸ್ತಕಗಳು, ಸಣ್ಣಮಟ್ಟದ ಸಂಶೋಧಕನಾಗಿರುವ ನನ್ನ ಪಾಲಿಗೆ ಹೆಚ್ಚು ಮಹತ್ವದವಾಗಿ ಕಾಣುತ್ತವೆ. ಅದರಲ್ಲೂ ನನ್ನ ತಿಳಿವಳಿಕೆ ಮತ್ತು ಪ್ರಜ್ಞೆಗಳನ್ನು ಬದಲಾಯಿಸಿದ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’, ‘ಅಸ್ಪೃಶ್ಯರು ಯಾರು?’, ‘ಜಾತಿ ನಿರ್ಮೂಲನೆ’ಗಳನ್ನು ನಾನು ಮತ್ತೆಮತ್ತೆ ಓದುತ್ತೇನೆ. ಈ ಮೂರೂ ಪುಸ್ತಕಗಳು, ಭಾರತದ ಸಾಮಾಜಿಕ ಚರಿತ್ರೆಯನ್ನು ಕ್ರಾಂತಿಕಾರಕ ಪ್ರಜ್ಞೆಯಿಂದ ಬರೆಯಲ್ಪಟ್ಟಿವೆ. ಅಂಬೇಡ್ಕರರ ಪ್ರಖರ ಚಿಂತನೆ, ವ್ಯಾಪಕ ಅಧ್ಯಯನ ಹಾಗೂ ವರ್ತಮಾನದ ಸಮಾಜವನ್ನು ಬದಲಿಸಬೇಕೆಂಬ ಆಕ್ಟಿವಿಸ್ಟ್ ಬದ್ಧತೆಗಳನ್ನು ಇವು ಒಳಗೊಂಡಿವೆ. ಇವು ಮೂಲತಃ ಸಮಾಜವಿಜ್ಞಾನಕ್ಕೆ ಸೇರಿದರೂ, ಇಲ್ಲಿ ಚರಿತ್ರೆ, ರಾಜಕಾರಣ, ಆರ್ಥಿಕತೆಯ ಬುನಾದಿಯಿದೆ. ಈ ಅರ್ಥದಲ್ಲಿ ಇವು ಬಹುಶಿಸ್ತೀಯ ಅಧ್ಯಯನದ ಉತ್ಪನ್ನಗಳು. ಒಮ್ಮೊಮ್ಮೆ ಅನಿಸುತ್ತದೆ: ಅಂಬೇಡ್ಕರ್ ಅವರನ್ನು ಚಳವಳಿಗಾರ, ಕಾನೂನುಮಂತ್ರಿ, ಸಂವಿಧಾನಕರ್ತೃ ಎಂದು ಬಿಂಬಿಸುವ ಭರದಲ್ಲಿ, ನಾವು ಅವರ ವಿದ್ವತ್ತನ್ನು ಮರೆಮಾಚಿದ್ದೇವೊ ಏನೊ ಎಂದು. ಬಾಬಾಸಾಹೇಬರನ್ನು ಸಮಾಜವಿಜ್ಞಾನಿ, ಇತಿಹಾಸಕಾರ, ರಾಜಕೀಯ ಮೀಮಾಂಸಕ, ತತ್ವಶಾಸ್ತ್ರಜ್ಞ ಎಂಬ ಅಂಶಕ್ಕೆ ನಾವೀಗ ಹೆಚ್ಚು ಒತ್ತುಕೊಡುವ ಅಗತ್ಯವಿದೆ. ಹಾಗೆ ಕಂಡರೆ, ಮೇಲ್ಕಾಣಿಸಿದ ಬಾಬಾಸಾಹೇಬರ ಎರಡು ಆಯಾಮಗಳು, ಅರ್ಥಾತ್ ಅವರ ಆಕ್ಟಿವಿಸಂ ಮತ್ತು ವಿದ್ವತ್ತುಗಳು ಬೇರೆಬೇರೆಯಲ್ಲ. ಅವು ಒಂದಕ್ಕೊಂದು ಪೂರಕವಾಗಿ ಬರುವ ಅಭಿನ್ನವಾದ ಆಯಾಮಗಳು. ಈ ಹಿನ್ನೆಲೆಯಲ್ಲಿ `ಕ್ರಾಂತಿ ಮತ್ತು ಪ್ರತಿಕ್ರಾಂತಿ’ (Revolution And Counter-Revolution In Ancient India) ಕೃತಿಯ ಓದಿನ ನನ್ನ ಅನುಭವವನ್ನು ಪರಿಚಯಾತ್ಮಕವಾಗಿ ಹಂಚಿಕೊಳ್ಳಲು ಯತ್ನಿಸುವೆ.

ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯು ಬಾಬಾಸಾಹೇಬರ ನಿಧನಾನಂತರ ಬೆಳಕು ಕಂಡಿತು. ಇದರಲ್ಲಿರುವ ಲೇಖನಗಳನ್ನು ಅವರ ಅಪ್ರಕಟಿತ ಹಸ್ತಪ್ರತಿಗಳಿಂದ ಹೆಕ್ಕಿ ಜೋಡಿಸಿ ಪ್ರಕಟಿಸಲಾಗಿದೆ. ಈ ಲೇಖನಗಳು, ಗತವನ್ನು ವರ್ತಮಾನವು ಯಾಕೆ ಮತ್ತು ಹೇಗೆ ನೋಡಬೇಕು ಎಂಬ ಚಾರಿತ್ರಿಕ ಪ್ರಜ್ಞೆಯನ್ನು ಹಿಡಿದುಕೊಡುತ್ತವೆ. ಈ ಹಿನ್ನೆಲೆಯಲ್ಲಿ ಅವರು ಭಾರತದ ಮೇಲೆ ದಂಡೆತ್ತಿ ಹೊರಗಿನಿಂದ ಬಂದ ‘ಮುಸ್ಲಿಂ’ ಆಳರಸರ ಮತ್ತು ಬೌದ್ಧಧರ್ಮದ ಮೇಲೆ ದಂಡೆತ್ತಿ ಹೋದ ಒಳಗಿನ ಬ್ರಾಹ್ಮಣವಾದದ ನಡುವಿನ ವ್ಯತ್ಯಾಸವನ್ನು ಕುರಿತು ಮಾಡುವ ಟಿಪ್ಪಣಿಗಳನ್ನು ವಿಶ್ಲೇಷಿಸಬಹುದು.

ದಾಳಿಕೋರರ ಯಾವುದೇ ಯುದ್ಧಗಳು ಭೌತಿಕ ಸ್ಮಾರಕವನ್ನು ಮಾಡುತ್ತವೆ. ಬಾಬಾಸಾಹೇಬರ ಪ್ರಕಾರ, ಭೌತಿಕ ನಾಶಕ್ಕಿಂತಲೂ ಘೋರವಾದ್ದು, ಜನರ ಆಲೋಚನಾ ಕ್ರಮವನ್ನು ಜೀವನ ಪದ್ಧತಿಯನ್ನು ನಾಶಮಾಡುವ ಸಾಂಸ್ಕೃತಿಕ ಯುದ್ಧಗಳು. ಇಂತಹ ಸಾಂಸ್ಕೃತಿಕ ಯುದ್ಧಗಳ ಪರಿಣಾಮ ದೀರ್ಘಕಾಲೀನ ಮತ್ತು ಆಳವಾಗಿರುತ್ತವೆ. ತಮ್ಮ ಈ ಹೇಳಿಕೆಗೆ ಬಾಬಾಸಾಹೇಬರು, ಮೌರ್ಯ ದೊರೆಯನ್ನು ಕೊಂದು ಪುಷ್ಯಮಿತ್ರ ಶೃಂಗನು ಅಧಿಕಾರಕ್ಕೆ ಬಂದ ರಾಜಕೀಯ ಚರಿತ್ರೆಯನ್ನು ಎತ್ತಿಕೊಳ್ಳುತ್ತಾರೆ. ಶುಂಗನು ಬ್ರಾಹ್ಮಣರನ್ನು ಸಮಾಜದ ಮೇಲಂತಸ್ತಿನಲ್ಲಿ ಪ್ರತಿಷ್ಠಾಪಿಸಲು ಮತ್ತು ಶೂದ್ರರನ್ನು, ದಲಿತರನ್ನು ಸಮಾಜದ ಅಂಚಿಗೆ ತಳ್ಳಲು ಮನುಸ್ಮೃತಿಯನ್ನು ರಚನೆ ಮಾಡಿಸಿದ್ದನ್ನೂ, ತರತಮದ ಸಮಾಜ ವ್ಯವಸ್ಥೆಗೆ ಕಾನೂನುಬದ್ಧ ಚೌಕಟ್ಟನ್ನು ಕೊಟ್ಟಿದ್ದನ್ನೂ ವಿಶ್ಲೇಷಿಸುತ್ತಾರೆ. ಈ ವಿಶ್ಲೇಷಣೆಯ ಭಾಗವಾಗಿಯೇ ಅವರ ಪ್ರಸಿದ್ಧ ಹೇಳಿಕೆ “ಭಾರತದ ಚರಿತ್ರೆಯಲ್ಲಿ ಧರ್ಮ ವಹಿಸಿದಂತಹ ಮಹತ್ತರ ಪಾತ್ರ ಇನ್ನಾವ ದೇಶದ ಧರ್ಮವೂ ವಹಿಸಿಲ್ಲ. ಭಾರತದ ಚರಿತ್ರೆಯೆಂದರೆ, ಬೌದ್ಧಧರ್ಮ ಹಾಗೂ ಬ್ರಾಹ್ಮಣ ಧರ್ಮಗಳ ನಡುವಣ ಮಾರಕ ಕಾಳಗದ ಚರಿತ್ರೆಯೇ ಆಗಿದೆ” ಎಂಬುದು ಮೂಡಿದ್ದು. ಈ ಹೇಳಿಕೆಯ ಸಮರ್ಥನೆಗೆ ಅವರು ನೂರಾರು ಸಾಕ್ಷ್ಯಗಳನ್ನು ಒದಗಿಸುತ್ತಾರೆ. ಕಡೆಗೆ ವಿಷಾದಭಾವದಲ್ಲಿ ನಡೆದ ದುರಂತವನ್ನು ಮಂಡಿಸುತ್ತಾರೆ. ಈ ಕುರಿತ ಚರ್ಚೆಯನ್ನು ಅವರದೇ ಬರೆಹದ ಉಲ್ಲೇಖವೊಂದರ ಮೂಲಕ ಮಾಡಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
shunga
ಪುಷ್ಯಮಿತ್ರ ಶುಂಗ

ಇದನ್ನೂ ಓದಿರಿ: ವಿಜಯ ಮಲ್ಯ ಮಾತುಗಳಿಗೆ ಮರುಗುವ ಅಗತ್ಯವಿದೆಯೇ?

“ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಕೋರರ ದಂಡಯಾತ್ರೆಗಳು ಚರಿತ್ರೆಕಾರರ ಅಧ್ಯಯನಕ್ಕೆ ಅರ್ಹವಾಗಿದ್ದರೆ, ಬೌದ್ಧ ಭಾರತದ ಮೇಲೆ ಬ್ರಾಹ್ಮಣ ದಾಳಿಕೋರರ ದಂಡಯಾತ್ರೆಗಳೂ ಅಷ್ಟೇ ಅಧ್ಯಯನಕ್ಕೆ ಯೋಗ್ಯವಾಗಿವೆ. ಬೌದ್ಧ ಭಾರತದ ಬ್ರಾಹ್ಮಣ ದಾಳಿಕೋರರು ಬೌದ್ಧಧರ್ಮವನ್ನು ಅಡಗಿಸಲು ಅನುಸರಿಸಿದ ಮಾರ್ಗವಿಧಾನಗಳು, ಹಿಂದೂ ಧರ್ಮವನ್ನು ಅಡಗಿಸಲು ಮುಸ್ಲಿಂ ದಾಳಿಕೋರರು ಅನುಸರಿಸಿದ ಮಾರ್ಗವಿಧಾನಗಳಿಗಿಂತ ಕಡಿಮೆ ವಿಷಮಯ ಅಥವಾ ಹಿಂಸಾತ್ಮಕವಾದವೇನೂ ಆಗಿರಲಿಲ್ಲ. ಜನರ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜೀವನದ ಮೇಲೆ ಉಂಟಾದ ಶಾಶ್ವತ ಪರಿಣಾಮದ ದೃಷ್ಟಿಯಿಂದ ನೋಡಿದಾಗ, ಬೌದ್ಧ ಭಾರತದ ಮೇಲೆ ನಡೆದ ಬ್ರಾಹ್ಮಣ ದಾಳಿಗಳಿಗೆ ಹೋಲಿಸಿದರೆ, ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಗಳ ಪರಿಣಾಮ ಮೇಲುಮೇಲಿನದೂ ಅಲ್ಪಾಯುಷಿಯಾದದ್ದೂ ಆಗಿದೆ. ಮುಸ್ಲಿಂ ದಾಳಿಕೋರರು ಹಿಂದೂ ಧರ್ಮದ ದೇವಾಲಯಗಳು ಮತ್ತು ಮಠಗಳಂಥ ಬಾಹ್ಯ ಸಂಕೇತಗಳನ್ನಷ್ಟೇ ನಾಶಮಾಡಿದರು. ಅವರು ಹಿಂದೂ ಧರ್ಮದ ಮೂಲೋತ್ಪಾಟನೆಯನ್ನು ಮಾಡಲಿಲ್ಲ. ಜನರ ಆಧ್ಯಾತ್ಮಿಕ ಜೀವನವನ್ನು ಆಳುವ ತತ್ವಗಳು ಅಥವಾ ಸಿದ್ಧಾಂತಗಳನ್ನೂ ಬುಡಮೇಲು ಮಾಡಲಿಲ್ಲ. ಆದರೆ ಬ್ರಾಹ್ಮಣ ದಾಳಿಯ ಪರಿಣಾಮಗಳು, ಒಂದು ಶತಮಾನ ಕಾಲ ಬೌದ್ಧಧರ್ಮವು ಆಧ್ಯಾತ್ಮಿಕ ಜೀವನದ ನಿಜ ಹಾಗೂ ಶಾಶ್ವತ ತತ್ವಗಳೆಂದು ಬೋಧಿಸಿ, ಜನಸ್ತೋಮವು ಒಪ್ಪಿಕೊಂಡು ಜೀವನದ ರೀತಿಯಾಗಿ ಪಾಲಿಸುತ್ತಿದ್ದ ತತ್ವಗಳ, ಆಮೂಲಾಗ್ರ ಬದಲಾವಣೆಯಾಗಿದ್ದವು. ಮುಸ್ಲಿಂ ದಾಳಿಕೋರರು ಸ್ನಾನದ ನೀರನ್ನು ಕೇವಲ ಕಲಕಿದರು. ಅದೂ ಸ್ವಲ್ಪ ಸಮಯ ಮಾತ್ರ. ಆಮೇಲೆ ಈ ಕಲಕುವಿಕೆ ಸಾಕಾಗಿ ರಾಡಿ ತಂತಾನೇ ತಿಳಿಯಾಗಲು ಬಿಟ್ಟುಕೊಟ್ಟರು. ಹಿಂದೂ ಧರ್ಮದ ತತ್ವಗಳನ್ನು ಕೂಸು ಎಂದು ಕರೆಯಬಹುದಾದರೆ, ಅವರು ಕೂಸನ್ನೆಂದೂ ಸ್ನಾನದಿಂದ ತೆಗೆದೆಸೆಯಲಿಲ್ಲ. ಆದರೆ ಬ್ರಾಹ್ಮಣಧರ್ಮ-ಬೌದ್ಧಧರ್ಮಗಳ ಸಂಘರ್ಷವು ಚೊಕ್ಕಟ ಗುಡಿಸುವ ಕಾಯಕವಾಗಿತ್ತು. ಅದು ಬೌದ್ಧಕೂಸನ್ನು ನೀರಿನ ಸಮೇತ ಬರಿದು ಮಾಡಿ, ಅಲ್ಲಿ ತನ್ನ ನೀರು ತುಂಬಿ ತನ್ನ ಕೂಸನ್ನೇ ಇಟ್ಟಿತು. ತನಗೆ ಹೋಲಿಸಿದರೆ ಬೌದ್ಧಧರ್ಮದ ಉದಾತ್ತ ನೆಲೆಯಿಂದ ಹರಿದುಬಂದ ನೀರು ಎಷ್ಟು ಶುಚಿಯಾದ ಪರಿಮಳಭರಿತ ಜಲವೆಂಬುದನ್ನೂ ಬ್ರಾಹ್ಮಣ ಧರ್ಮ ಕಾಣಲಿಲ್ಲ. ಬೌದ್ಧಕೂಸಿಗೆ ಹೋಲಿಸಿದರೆ ತನ್ನ ಕೂಸು ಎಷ್ಟು ಭೀಕರವಾದುದೆಂಬುದನ್ನು ಕಾಣಲು ಬ್ರಾಹ್ಮಣ ಧರ್ಮ ಮನಸ್ಸು ಮಾಡಲಿಲ್ಲ. ತನ್ನ ದಂಡಯಾತ್ರೆಗಳ ಮೂಲಕ ಬ್ರಾಹ್ಮಣ ಧರ್ಮವು ಬೌದ್ಧಧರ್ಮವನ್ನೂ ವಿನಾಶಗೊಳಿಸುವ ರಾಜಕೀಯ ಅಧಿಕಾರ ಪಡೆಯಿತು ಮತ್ತು ಬೌದ್ಧಧರ್ಮವನ್ನು ನಾಶ ಮಾಡಿತು ಕೂಡ. ಇಸ್ಲಾಂಗೆ ಹೀಗೆ ಗುಡಿಸಿ ಸಾರಿಸಲು ಸಾಧ್ಯವಾಗಲಿಲ್ಲ. ಬ್ರಾಹ್ಮಣ ಧರ್ಮಕ್ಕೆ ಸಾಧ್ಯವಾಯಿತು. ಅದು ಒಂದು ಧರ್ಮವಾಗಿ ಬೌದ್ಧತತ್ವವನ್ನು ಓಡಿಸಿ ಆ ಸ್ಥಾನವನ್ನು ತಾನು ಆಕ್ರಮಿಸಿಕೊಂಡಿತು”.

“ಈ ಸತ್ಯಾಂಶಗಳು, ಭಾರತದ ಚರಿತ್ರೆಕಾರನ ಪಾಲಿಗೆ ಮುಸ್ಲಿಂ ದಾಳಿಗಳಿಗಿಂತ, ಬೌದ್ಧಭಾರತದ ಮೇಲೆ ನಡೆದ ಬ್ರಾಹ್ಮಣ ದಾಳಿಯೇ ಹೆಚ್ಚು ಮಹತ್ವದ್ದು ಎಂಬುದನ್ನು ತೋರುತ್ತದೆ. ಇಷ್ಟಾದರೂ ಮೌರ್ಯರು ಕಟ್ಟಿದ ಬೌದ್ಧಭಾರತಕ್ಕೆ ಬಂದೊದಗಿದ ಗತಿಯ ಬಗ್ಗೆ ಚರಿತ್ರೆಕಾರರು ತೀರಾ ಕಡಿಮೆ ಬರೆದಿದ್ದಾರೆ. ಭಾರತದ ರಾಜಕೀಯದಲ್ಲಿ ಸಂಭವಿಸಿದ ಸಂಘರ್ಷಗಳೆಲ್ಲ ಪೂರ್ಣವಾಗಿ ರಾಜಕೀಯಾತ್ಮಕ ಹಾಗೂ ವಂಶೀಯವೆಂದೂ, ಅದಕ್ಕೆ ಯಾವುದೇ ಸಾಮಾಜಿಕ, ಆಧ್ಯಾತ್ಮಿಕ ಮಹತ್ವವಿಲ್ಲವೆಂದೂ ಭಾವಿಸಲಾಗಿದೆ. ಈ ಕಾರಣಕ್ಕಾಗಿಯೇ ಭಾರತೀಯ ಚರಿತ್ರೆ, ಸಂಪೂರ್ಣ ಯಾಂತ್ರಿಕವಾದ ವಂಶಾವಳಿ ಹಾಗೂ ಆಡಳಿತಗಾರರ ದಾಖಲೆಯಾಗಿಬಿಟ್ಟಿದೆ. ಈ ಧೋರಣೆ ಹಾಗೂ ಚರಿತ್ರೆ ರಚನೆಯ ವಿಧಾನವನ್ನು ತಿದ್ದಬೇಕಾದರೆ, ನಿಸ್ಸಂದಿಗ್ಧವಾದ ಎರಡು ಸತ್ಯಾಂಶಗಳನ್ನು ಮೊದಲು ಗುರುತಿಸಬೇಕು”.

“ಮೊದಲನೆಯದಾಗಿ, ಸಾರ್ವತ್ರಿಕ ಭಾರತೀಯ ಸಂಸ್ಕೃತಿ ಎಂಬುದೇ ಇರಲಿಲ್ಲ. ಚಾರಿತ್ರಿಕವಾಗಿ ಬ್ರಾಹ್ಮಣ ಭಾರತ, ಬೌದ್ಧಭಾರತ ಮತ್ತು ಹಿಂದೂಭಾರತವೆಂಬ ಮೂರು ಭಾರತಗಳಿವೆ. ಎರಡನೆಯದಾಗಿ, ಮುಸ್ಲಿಂ ದಾಳಿಗಳ ಮುಂಚಿನ ಭಾರತೀಯ ಚರಿತ್ರೆಯೆಂದರೆ, ಬ್ರಾಹ್ಮಣಧರ್ಮ ಮತ್ತು ಬೌದ್ಧಧರ್ಮಗಳ ನಡುವಣ ಮಾರಕ ಸಂಘರ್ಷ ಚರಿತ್ರೆಯೆಂಬುದನ್ನು ಗುರುತಿಸಬೇಕು. ಈ ಎರಡು ಸತ್ಯಗಳನ್ನು ಕಾಣಲಾರದವನು, ಭಾರತದ ನೈಜ ಇತಿಹಾಸವನ್ನು ಎಂದೆಂದಿಗೂ ಬರೆಯಲಾರ”. (ಕ್ರಾಂತಿ ಮತ್ತು ಪ್ರತಿಕ್ರಾಂತಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂ. 3 294-295)

ಇಲ್ಲಿ ವಿಶ್ಲೇಷಣೆಯಲ್ಲಿ ಚರ್ಚಿಸಬೇಕಾದ ಕೆಲವು ಮಹತ್ವದ ಸಂಗತಿಗಳಿವೆ.

ಅ. ಇಲ್ಲಿ ದಾಳಿಕಾರರನ್ನು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಸಂಪತ್ತಿನ ಆಸೆಗಾಗಿ ರಾಜಕೀಯ ಅಧಿಕಾರಕ್ಕಾಗಿ ಹೊರಗಿನಿಂದ ಬರುವ ಸೈನಿಕದಾಳಿಗಳು ಹಾಗೂ ಧರ್ಮವೊಂದು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಿಳಿದು, ಅದನ್ನು ಜನರ ಜೀವನಕ್ರಮದಿಂದ ಮೂಲೋತ್ಪಾಟನೆ ಮಾಡುವ ದಾಳಿಗಳು. ಜನರ ಆಲೋಚನಾ ಕ್ರಮವನ್ನು ಬದಲಿಸುವ ಸಾಂಸ್ಕೃತಿಕವಾದ ಆಧ್ಯಾತ್ಮಿಕವಾದ ಬದಲಾವಣೆಯೇ ನಿಜವಾದ ಆಳವಾದ ಬದಲಾವಣೆ, (ಇದನ್ನು ಸಾಂಸ್ಕೃತಿಕ ರಾಜಕಾರಣ ಎಂದು ಕರೆಬಹುದು) ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?

ಆ. ಇತಿಹಾಸ ರಚನೆಯ ವಿಧಾನಕ್ಕೆ ಸಂಬಂಧಿಸಿದ ವಿಚಾರ. ನಮಗೆ ಇತಿಹಾಸವನ್ನು ಪ್ರಭುತ್ವಗಳ ಮೂಲಕ ನೋಡುವ ಪದ್ಧತಿಯಿದೆ. ಆದರೆ ಪ್ರಭುತ್ವಗಳು ಆಯಾಕಾಲದ ಕೆಲವು ವರ್ಗಗಳ ಹಿತಾಸಕ್ತಿಯ ಭಾಗವಾದಾಗ ಅಥವಾ ವರ್ಗ ಹಿತಾಸಕ್ತಿಗಳೇ ಪ್ರಭುತ್ವವನ್ನು ಹಿಡಿದಾಗ ಉಂಟಾಗುವ ಪರಿಣಾಮಗಳ ಹಿನ್ನೆಲೆಯಲ್ಲಿ ಇತಿಹಾಸವನ್ನು ನೋಡುವ ವಿಧಾನಗಳು ಕಡಿಮೆಯಿವೆ. ಈ ಹಿನ್ನೆಲೆಯಲ್ಲಿ ಪ್ರಭುತ್ವಗಳನ್ನು ವೈಭವೀಕರಿಸದೆ, ಅವುಗಳ ಅಧಿಕಾರವನ್ನು ಸಮಾಜದ ಯಾವ ವರ್ಗಗಳು ನಿಯಂತ್ರಿಸುತ್ತವೆ ಮತ್ತು ಯಾಕಾಗಿ ನಿಯಂತ್ರಿಸುತ್ತವೆ ಎಂದು ಇಲ್ಲಿ ನೋಡಲಾಗಿರುವುದು.

ಇ. ದೇಶವೊಂದರ ಚರಿತ್ರೆಯನ್ನು ನಿರ್ದಿಷ್ಟವಾದ ಸಿದ್ಧಾಂತ ಅಥವಾ ತತ್ವಗಳ ಹಿನ್ನೆಲೆಯಲ್ಲಿ ನೋಡುವ ಕ್ರಮಗಳಿವೆ. ಆದರೆ ಇಲ್ಲಿ ಭಾರತದ ಇತಿಹಾಸವನ್ನು ಬೌದ್ಧಧರ್ಮ ಮತ್ತು ದರ್ಶನಗಳ ಹಿನ್ನೆಲೆಯಿಂದ ನೋಡಲಾಗಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಹೊಸ ಒಳನೋಟಗಳು ಪ್ರಾಪ್ತವಾಗಿವೆ. ಧಮ್ಮವು ತನಗೆ ತಾನೇ ಒಂದು ದರ್ಶನವೂ ಆಗಿರುವುದರಿಂದ, ದರ್ಶನವೊಂದರ ಹಿನ್ನೆಲೆಯಿಂದ ಇಲ್ಲಿ ನೋಡಲಾಗಿದೆ. ಆದರೆ ದರ್ಶನವು ಜನರ ಬದುಕಿನಲ್ಲಿ ಆಲೋಚನಾ ಕ್ರಮವಾಗಿ ಹೇಗೆ ನೆಲೆಸಿರುತ್ತದೆ ಎಂಬ ಗಾಢ ಅರಿವು ಬಿಟ್ಟುಕೊಡದೆ ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ.

Budda
ಗೌತಮ ಬುದ್ಧ

ಈ. ತರ್ಕಬದ್ಧವಾಗಿ ಪ್ರಮೇಯ (ಥೀಸಿಸ್) ಕಟ್ಟುವ ಕ್ರಮ. ಅಂಬೇಡ್ಕರ್ ಒಬ್ಬ ಸಂಶೋಧಕರೂ ನುರಿತ ವಕೀಲರೂ ಆಗಿದ್ದರು. ಹೀಗಾಗಿ ಇಡೀ ಕೃತಿಯಲ್ಲಿ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಗಳು ಚರಿತ್ರೆಯಲ್ಲಿ ಹೇಗೆ ಅಲೆಗಳಂತೆ ಬಂದುಹೋಗುತ್ತವೆ ಎಂಬ ಪ್ರಮೇಯಕ್ಕೆ ನೂರಾರು ಸಾಕ್ಷ್ಯಾಧಾರಗಳನ್ನು ಇಲ್ಲಿ ಮಂಡಿಸಲಾಗಿದೆ. ಸನಾತನವಾದಿ ಶಕ್ತಿಗಳನ್ನು ಮುಖಾಮುಖಿ ಮಾಡುತ್ತಿದ್ದ ಒತ್ತಡವಿದ್ದುದರಿಂದ, ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಪ್ರಮೇಯ ದುರ್ಬಲವಾಗುತ್ತದೆ ಮತ್ತು ಎದುರಾಳಿಗಳು ಅದನ್ನು ಸುಲಭದಲ್ಲಿ ಅಲ್ಲಗಳೆಯುವ ಸಾಧ್ಯತೆಯಿದೆ ಎಂಬ ಎಚ್ಚರ ಅಂಬೇಡ್ಕರ್ ಅವರಿಗಿತ್ತು. ಇದರಿಂದ ಇಡೀ ಕೃತಿಯಲ್ಲಿ ಬಿಗಿಯಾದ ತರ್ಕದ ಕಟ್ಟಡವೊಂದು ಕಾಣುತ್ತದೆ.

ಉ. ಬಾಬಾ ಸಾಹೇಬರು ಮೂಲತಃ ಒಬ್ಬ ವೈಚಾರಿಕ ಮತ್ತು ಬೌದ್ಧಿಕ ಪ್ರಖರತೆಯ ವ್ಯಕ್ತಿ. ತರ್ಕವೇ ಅವರ ಪ್ರಮುಖ ಅಸ್ತ್ರವಾದರೂ, ಅವರಲ್ಲೊಬ್ಬ ಕವಿಯೂ ಇದ್ದನು. ಈ ಕವಿತನವು ತರ್ಕಬದ್ಧವಾಗಿ ಹೇಳಿದ್ದನ್ನು ಮತ್ತಷ್ಟು ಗಹನಗೊಳಿಸಲು ಮನಸ್ಸಿಗೆ ನಾಟುವಂತೆ ಮಾಡಲು ಅವರು ರೂಪಕಗಳ ನೆರವಿಗೆ ಹೋಗುವಂತೆ ಮಾಡಿದೆ. ಮೇಲ್ಕಾಣಿಸಿದ ಉಲ್ಲೇಖದಲ್ಲಿ ಬರುವ ಕೊಳ ನೀರು ಮಗುವಿನ ರೂಪಕಗಳನ್ನು ನೋಡಬಹುದು. ಇಂತಹ ರೂಪಕಗಳು ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿ ಬೇಕಾದಷ್ಟು ಬರುತ್ತವೆ.

ಊ. ಇಲ್ಲಿ ‘ಮುಸ್ಲಿಂ ದಾಳಿಕೋರ’ ಮತ್ತು ಬ್ರಾಹ್ಮಣಧರ್ಮ ಎಂಬ ಪರಿಭಾಷೆಗಳನ್ನು ಬಳಸುತ್ತಾರೆ. ಈ ಪರಿಭಾಷೆಯನ್ನು ಸಮುದಾಯ ವಾಚಕಗಳಾಗಿ ಓದಿಕೊಳ್ಳುವ ಮತ್ತು ಇದರಿಂದ ಚಾರಿತ್ರಿಕ ಅಪರಾಧವು ಮುಸ್ಲಿಂ ಮತ್ತು ಬ್ರಾಹ್ಮಣ ಸಮುದಾಯಗಳ ಹೆಗಲ ಮೇಲೆ ಹೊರಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಪರಿಭಾಷೆಗಳನ್ನು ಮುಸ್ಲಿಂ ಆಳುವವರ್ಗ ಮತ್ತು ಬ್ರಾಹ್ಮಣ ಪುರೋಹಿತಶಾಹಿಗಳ ಧರ್ಮ ಎಂದು ಗ್ರಹಿಸುವುದು ಉಚಿತ. ಭಾರತದಲ್ಲಿ ‘ಮುಸ್ಲಿಂ’ ಹಿನ್ನೆಲೆಯ ಆಳುವವರ್ಗದ ಕೃತ್ಯಗಳಿಗೆ, ಅದಕ್ಕೆ ಯಾವ ಬಗೆಯ ಸಂಬಂಧವೂ ಇಲ್ಲದ ಸಮುದಾಯಗಳನ್ನು ಗುರಿಮಾಡುವ ಚರಿತ್ರಲೇಖನದ ದೋಷದ ಹಿನ್ನೆಲೆಯಲ್ಲಿ, ಈ ಸರಳವಾದ ಸ್ಪಷ್ಟತೆ ಅಗತ್ಯವಿದೆ. ಯಾಕೆಂದರೆ, ಸ್ವತಃ ಬುದ್ಧನು ತನ್ನ ಕಾಲದ ಅನೇಕ ವಿಮುಕ್ತ ಚಿಂತನೆಯ ಬ್ರಾಹ್ಮಣರಿಂದಲೂ ಕಲಿತಿದ್ದನು ಮತ್ತು ಅವನ ಅವನ ಶಿಷ್ಯರಲ್ಲಿ ಅನೇಕರು ಬ್ರಾಹ್ಮಣರು ಇದ್ದರು. ಸದಾ ಆಕ್ರಮಣಶೀಲವಾಗಿರುವ ಅಧಿಕಾರ ಮತ್ತು ಸಂಪತ್ತಿಗಾಗಿ ಕ್ರೌರ್ಯ ಎಸಗುವ ರಾಜಕೀಯ ಮತ್ತು ಧಾರ್ಮಿಕವಾದ ಆಳುವವರ್ಗಗಳು ಹಾಗೂ ನಿತ್ಯದ ಬದುಕಿಗೆ ಹೋರಾಡುವ ಜನಸಮುದಾಯಗಳು, ಯಾವ ಸಮುದಾಯಗಳಿಗೆ ಸೇರಿದರೂ ಅವುಗಳನ್ನು ಬೇರೆಯಾಗಿ ನೋಡುವ ಅಗತ್ಯವಿದೆ. ಬಾಬಾಸಾಹೇಬರು ಹೇಳುವ ಒಳಗಿನ ದಾಳಿಗಳ ಪ್ರಸ್ತಾಪವು, ಭಾರತದ ಬೌದ್ಧವಿರೋಧಿ ಆಚಾರ್ಯರುಗಳ ದಿಗ್ವಿಜಯ ಬಣ್ಣಿಸುವ ಕೃತಿಗಳನ್ನು ನೋಡಲು ಪ್ರಚೋದಿಸುತ್ತದೆ. ಸಂಪತ್ತಿನ ಬೇಟೆಗಾಗಿ ಬರುತ್ತಿದ್ದ ದಾಳಿಕೋರರ ರಾಜಕೀಯ ರೂಕ್ಷತೆಯನ್ನೂ, ಅದನ್ನು ನ್ಯಾಯಬದ್ಧಗೊಳಿಸಲು ಧರ್ಮಪ್ರಸಾರದ ಮುಖವಾಡ ಹಾಕುವುದನ್ನೂ ತಿಳಿಯಲು ಸೂಚಿಸುತ್ತದೆ.

ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!

ಏ. ಭಾರತಕ್ಕೆ ಹೊರಗಿನಿಂದ ಬಂದ ಮುಸ್ಲಿಂ ಆಳುವವರ್ಗದ ಅರಸರು ಬೌದ್ಧಧರ್ಮದ ಹೊರಚಹರೆಗಳನ್ನು ಮಾತ್ರ ಭಗ್ನಗೊಳಿಸಲು ಸಾಧ್ಯವಾಯಿತೆಂದು ಬಾಬಾಸಾಹೇಬರು ಹೇಳುತ್ತಾರೆ. ಆದರೆ ಮುಸ್ಲಿಂ ದೊರೆಗಳ ರಾಜಕೀಯ ದಾಳಿಗಳು, ತಾವು ಆಕ್ರಮಿಸಿದ ಧರ್ಮವನ್ನೂ ಅದರ ಆಂತರಿಕ ತಿರುಳನ್ನೇ ಬದಲಾಯಿಸಬಲ್ಲವು. ಇದಕ್ಕೆ ಬೌದ್ಧದೇಶವಾಗಿದ್ದ ಆಫಘಾನಿಸ್ತಾನ ಮತ್ತು ಅಗ್ನಿ ಸಂಸ್ಕೃತಿಯ ಜರತುಷ್ಟ್ರ ಧರ್ಮದ ಇರಾನ್ ಸಾಕ್ಷಿಯಾಗಿವೆ.

***

‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯ ಆಶಯವನ್ನು ಮೂರು ಆಯಾಮಗಳಲ್ಲಿ ಗ್ರಹಿಸಬಹುದು. ಅ. ಭಾರತದಲ್ಲಿ ದಮನಿತ ವರ್ಗಗಳು ಹೇಗೆ ತಮ್ಮ ಬಿಡುಗಡೆಗಾಗಿ ಪರ್ಯಾಯಗಳನ್ನು ಕಟ್ಟಿಕೊಳ್ಳುತ್ತ ಬಂದಿವೆ. ಆ. ಅಂತಹ ಪರ್ಯಾಯಗಳನ್ನು ಭಾರತದ ಬ್ರಾಹ್ಮಣವಾದವು ಹೇಗೆ ಭಗ್ನಗೊಳಿಸುತ್ತ ಬಂದಿವೆ. ಇ. ವರ್ತಮಾನದಲ್ಲಿ ನಾವು ಹೇಗೆ ಪರ್ಯಾಯ ಕಟ್ಟಿಕೊಳ್ಳಬೇಕು. ಇವು ಮೂರು ಪ್ರಶ್ನೆಗಳು ಕೂಡ. ಈ ಬಗೆಯ ಪ್ರಶ್ನೆಗಳಿಲ್ಲದೆ ಮಾಡುವ ಯಾವ ಸಾಮಾಜಿಕ ಸಂಶೋಧನೆಯೂ ಅರ್ಥಪೂರ್ಣವಲ್ಲ. ನಮ್ಮ ತಲೆಮಾರಿನ ಓದುಗರಿಗೂ ಸಂಶೋಧಕರಿಗೂ ಕ್ರಾಂತಿ ಮತ್ತು ಪ್ರತಿಕ್ರಾಂತಿಯಂತಹ ಪುಸ್ತಕಗಳು ಕಲಿಸುವ ದೊಡ್ಡ ಪಾಠವೆಂದರೆ, ವಿದ್ವತ್ತಿನ ಶಕ್ತಿಯನ್ನು. ಬಾಬಾಸಾಹೇಬರ ಬಹುಶಿಸ್ತೀಯ ಜ್ಞಾನವು ಎಷ್ಟು ಪ್ರಖರವಾಗಿದೆ ಎನ್ನುವುದಕ್ಕೆ ಅವರು ಯಕ್ಷ, ಅಸುರ, ದೇವ ಗಂಧರ್ವ ಎಂದು ಕರೆಯಲಾಗುವ ಜನರ ಬಗ್ಗೆ ಮಾಡುವ ಚರ್ಚೆಯನ್ನು ಗಮನಿಸಬಹುದು. ಅವರ ಪ್ರಕಾರ ಇವು ಬೇರೆ ಲೋಕದವರಲ್ಲ. ಭಾರತದಲ್ಲೇ ಇದ್ದ ವಿಭಿನ್ನ ಸಮುದಾಯಗಳು. ತಮ್ಮದೇ ಕಾರಣಕ್ಕಾಗಿ ಇವರನ್ನು ವೈದಿಕರು ವಿರೋಧಿಸುತ್ತಿದ್ದರು. ತಮ್ಮ ವಿರೋಧಿಗಳನ್ನು ನಾಶಮಾಡಲು ಅವರನ್ನು ಅನ್ಯೀಕರಿಸುವುದು, ದುಷ್ಟೀಕರಿಸುವುದು ಮೊದಲ ಹಂತಗಳು. ಅದರ ಪ್ರಕಾರವಾಗಿ ಇಲ್ಲಿನ ರಾಕ್ಷಸರು ದುಷ್ಟರಂತೆ ತೋರುವರು. ಇದಕ್ಕಾಗಿ ಬಾಬಾಸಾಹೇಬರು ಅಸುರ ದೈತ್ಯ ಶಬ್ದಗಳ ನಿಷ್ಪತ್ತಿಯಿಂದ ಚರ್ಚೆ ಆರಂಭಿಸುತ್ತಾರೆ. ಅಲ್ಲಿ ಅವರ ಸಂಸ್ಕೃತ ಪಾಂಡಿತ್ಯವೂ ಭಾಷಾವಿಜ್ಞಾನದ ಪ್ರವೇಶವೂ ಕೆಲಸ ಮಾಡಿದೆ. ಇದರಂತೆ, ಸಂಕೇತ, ಪ್ರತಿಮೆ, ಮಿತ್‌ಗಳನ್ನು ವಿಶ್ಲೇಷಿಸುವ ಅವರ ಜಾಣ್ಮೆ. ಗತಕಾಲವನ್ನು ಹಲವು ಶಾಸ್ತ್ರಜ್ಞಾನಗಳ ಮೂಲಕ ಪ್ರವೇಶಿಸಿ, ಮರುಕಟ್ಟುವ ಮತ್ತು ಅದನ್ನು ವರ್ತಮಾನದ ಸಂಗತಿಗಳಿಗೆ ಲಗತ್ತಿಸುವ ವಿಧಾನವು ಅಪೂರ್ವವಾದುದು.

(ಈದಿನ ಡಾಟ್ ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

Rahamat Tarikere
ರಹಮತ್ ತರೀಕೆರೆ
+ posts

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರಹಮತ್ ತರೀಕೆರೆ
ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...