ಡಾ. ಅಂಬೇಡ್ಕರ್ ಅವರ 50 ವರ್ಷದ ಪ್ರಭಾವ ಬದಲಾವಣೆಗಳ ಕುರಿತು ಚಿಂತಿಸುವುದು ಎಂದರೆ; ದಲಿತ ಚಳವಳಿಯ 50 ವರ್ಷಗಳ ಸಿಂಹಾವಲೋಕನ ಮಾಡುವುದು ಎಂದರ್ಥ. ಅಂಬೇಡ್ಕರ್ ಚಿಂತನೆ ಇಲ್ಲದೆ ದಲಿತ ಚಳವಳಿ ಇಲ್ಲ. ಸಾಹಿತ್ಯಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಯಾವುದೇ ನೆಲೆಯಿಂದ ನಾವು ನೋಡಿದರೂ ಚಳವಳಿಯನ್ನು ಹೊರತಾಗಿಸಿ ನೋಡಲು ಸಾಧ್ಯವಿಲ್ಲ.
1. ದಲಿತ ಚಳವಳಿಯ ಹುಟ್ಟು ಮತ್ತು ಅಂಬೇಡ್ಕರ್
1973 ಮೈಸೂರಿನ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿ. ಬಸವಲಿಂಗಪ್ಪನವರು “ಕನ್ನಡ ಸಾಹಿತ್ಯದಲ್ಲಿ ಏನಿದೆ? ಎಲ್ಲವೂ ಬೂಸಾ” ಎಂದು ಹೇಳಿದ ಪ್ರಕರಣ ನಾಡಿನಾದ್ಯಂತ ಬಿಸಿ ಏರಿಸಿತು. ಈ ಕಾರಣದಿಂದಾಗಿಯೇ ಬಸವಲಿಂಗಪ್ಪನವರು ತಮ್ಮ ಮಂತ್ರಿ ಸ್ಥಾನ ತೊರೆಯಬೇಕಾಯಿತು. ಇದರಿಂದ ದಲಿತ – ದಲಿತೇತರಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿತು. ಅದು ಇಂದು ಚರಿತ್ರೆಯ ಭಾಗವಾಗಿದೆ.
ಇದೇ ಸಂದರ್ಭದಲ್ಲಿ ಕಾಣಿಸಿಕೊಂಡದ್ದು, ಶಿವಮೊಗ್ಗದ ಭದ್ರಾವತಿಯ ‘ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್’ ವ್ಯವಸ್ಥಾಪಕ ಮಂಡಳಿಯು ಅಲ್ಲಿಯ ನೌಕರರಿಗೆ ಚಹ ವಿತರಿಸುವಲ್ಲಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದ ಕಾರಣಕ್ಕೆ ವಿವಾದ ಭುಗಿಲೆದ್ದು, 1974ರಲ್ಲಿ ಎನ್. ಗಿರಿಯಪ್ಪ ಮತ್ತು ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಹುಟ್ಟಿಕೊಳ್ಳಲು ಕಾರಣವಾಯಿತು. ಮುಂದೆ ಇದೇ “ಕರ್ನಾಟಕ ದಲಿತ ಸಂಘರ್ಷ ಸಮಿತಿ” ಆಗಿ ರೂಪುಗೊಂಡಿತು. ದಸಂಸ ಮಾಡಿದ ದೊಡ್ಡ ಕಾರ್ಯವೆಂದರೆ; ರಾಜ್ಯದಾದ್ಯಂತ ಶಾಖೆಗಳನ್ನು ತೆರೆಯುವುದರೊಂದಿಗೆ ಅಂಬೇಡ್ಕರ್ ಚಿಂತನೆಗಳ ಕುರಿತು ಕಾರ್ಯಕರ್ತರಿಗೆ ಶಿಬಿರಗಳನ್ನು ನಡೆಸಿ ಮಾರ್ಗದರ್ಶನ ನೀಡಲಾಗುತ್ತಿತ್ತು. ಕಾರ್ಯಕರ್ತರು ಗ್ರಾಮೀಣ ಸ್ಥಳಗಳಿಗೆ ಹೋಗಿ ಸಮಸ್ಯೆಗಳ ಕುರಿತು ಅರಿವು ನೀಡಿ, ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ ಹಾಗೂ ಶೋಷಣೆಯ ಪ್ರಕರಣಗಳು, ದಲಿತ ಪ್ರಜ್ಞೆಯಿಂದಾಗಿ ಸವರ್ಣೀಯರ ಮತ್ತು ಭೂ ಮಾಲೀಕರ ವಿರೋಧಿ ಅಲೆ ಏಳುವಂತಾಗಿತ್ತು. ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನವು ಈ ಸಂದರ್ಭದಲ್ಲಿ (1974) ಹೊರಬಂದಿತು. ಇಂಥವೆಲ್ಲ ಪ್ರಕರಣಗಳು, ದಲಿತ ಚಳವಳಿಯಾಗಿ ರೂಪಧಾರಣೆ ಮಾಡಿದ್ದು ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿರಿ: ಶೂದ್ರ ಧರ್ಮ, ವೈದಿಕ ಧರ್ಮ ಒಂದೇ ಅಲ್ಲ!
ನವೋದಯದ ಸ್ವಾತಂತ್ರ್ಯ ಹೋರಾಟದ ನಂತರ ಕರ್ನಾಟಕದಲ್ಲಿ ತಲೆ ಎತ್ತಿ ನಿಂತ ಅಂಬೇಡ್ಕರ್ ಚಿಂತನೆಯ ಎರಡನೇ ಘಟ್ಟದ ನಡೆ ಇದಾಗಿದೆ. ನವೋದಯದ ಸಂದರ್ಭದಲ್ಲಿಯೇ ‘ಭಾರತೀಯ ಭೀಮ ಸೇನಾ’ ಸಂಘಟನೆಯು ಕರ್ನಾಟಕದಲ್ಲಿ ತಲೆಯೆತ್ತಿ ನಿಂತು ಕೆಲಸ ಮಾಡುತ್ತಿತ್ತು. ಆ ಸಂಘಟನೆಯ ಪ್ರತ್ಯುತ್ಪನ್ನದ ಪ್ರತೀಕವಾಗಿ ಕಾಣುವ ವ್ಯಕ್ತಿತ್ವವೇ ಮಲ್ಲಿಕಾರ್ಜುನ ಖರ್ಗೆ ಅವರು. ಈ ಸಂಸ್ಥೆಯ ಅಧ್ಯಕ್ಷರು ಬಿ. ಶಾಮಸುಂದರ್. ಇವರು ಅಂಬೇಡ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ತತ್ವಗಳನ್ನು ಸಾಕಾರಗೊಳಿಸಲು ಹೆಣಗಿದವರು. ಅಂಬೇಡ್ಕರ್ ಅವರು ಕಾಲವಾದ ಅನಂತರ ಮಹಾರಾಷ್ಟ್ರದಲ್ಲಿ ಮೊದಲು ‘ದಲಿತ ಪ್ಯಾಂಥರ್ಸ್’ ಆರಂಭವಾದರೆ, ಅನಂತರದಲ್ಲಿ ‘ದಲಿತ ಸಂಘರ್ಷ ಸಮಿತಿ’ ಕರ್ನಾಟಕದಲ್ಲಿ ತಲೆಯೆತ್ತಿತು. ಮೊದಲ ತಲೆಮಾರಿನ ದಲಿತ ಅಕ್ಷರಸ್ಥರು ಮತ್ತು ಪ್ರಜ್ಞಾವಂತರು ಸೇರಿ ಕಟ್ಟಿದ, ದಲಿತ ಚಳವಳಿಯ ಪ್ರಬುದ್ಧ ಘಟ್ಟ ಇದಾಗಿದೆ. ಇವರ ಹೋರಾಟ ಅನ್ಯರಾಜ್ಯಗಳಿಗೂ ಪ್ರೇರಕ ಶಕ್ತಿಯಾಗಿ ದೇಶವ್ಯಾಪಿ ಬೆಳೆಯುವಂತಾಯಿತು. ಕರ್ನಾಟಕದಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳು ಸೇರಿ ಮಾಡಲಿಕ್ಕಾಗದಿರುವ ಕೆಲಸವನ್ನು ದಲಿತ ಸಂಘರ್ಷ ಸಮಿತಿ ಬುಡಮಟ್ಟದಲ್ಲಿ ಮಾಡಿ ತೋರಿಸಿದೆ. ತಾನೇ ಒಂದು ವಿಶ್ವವಿದ್ಯಾನಿಲಯದಂತೆ ದುಡಿದಿದೆ. ರಾಜಕೀಯ ವ್ಯವಸ್ಥೆಗೂ ಸಿಂಹ ಸ್ವಪ್ನವಾಗಿ ಕಾರ್ಯನಿರ್ವಹಿಸಿದೆ. ಇದು ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಜೊತೆಗೆ ಸಹೋದರತ್ವ ಭಾವ ಹೊಂದಿತ್ತು. ಚಳವಳಿಯ ಸಂದರ್ಭದಲ್ಲಿ ಮರಾಠಿಯ ದಲಿತ ಲೇಖಕರು, ಹೋರಾಟಗಾರರು ಚಳವಳಿಯ ಜೊತೆಗೆ ಒಂದಾಗಿದ್ದರು. ದಯಾ ಪವಾರ್, ಅರುಣ್ ಕಾಂಬಳೆ, ನಾರಾಯಣ ಸುರ್ವೆ ಮುಂತಾದವರು ಈ ಸಂದರ್ಭದಲ್ಲಿ ನೆನಪಾಗುತ್ತಾರೆ.
2. 70 ದಶಕದಲ್ಲಿಯ ಅಂಬೇಡ್ಕರ್ ಕುರಿತ ವಿದ್ಯಮಾನಗಳ ಸ್ವರೂಪ
70ರ ದಶಕದ ದಲಿತ ಚಳವಳಿಯ ಆರಂಭದಲ್ಲಿ ಅಂಬೇಡ್ಕರ್ ಚಿಂತನೆಯ ಪ್ರಭಾವ ಅಷ್ಟಾಗಿ ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ; ದಲಿತ ಚಿಂತಕರ, ಲೇಖಕರ ಸಮೂಹ ಕಡಿಮೆ ಇತ್ತು. ಅಂಬೇಡ್ಕರ್ ಚಿಂತನೆಯ ಸಾಹಿತ್ಯದ ಲಭ್ಯತೆಯೂ ಅಷ್ಟಾಗಿ ಇರಲಿಲ್ಲ. ಧನಂಜಯ್ ಕೀರ್ ಅವರ ಆಂಗ್ಲ ಕೃತಿಯೇ ಮುಖ್ಯ ಕೈಪಿಡಿಯಾಗಿ ಕೆಲಸ ಮಾಡುತ್ತಿತ್ತು. ಅನಂತರದಲ್ಲಿ ಇದೇ ಕೃತಿಯನ್ನು ಆಧರಿಸಿ ಪ್ರೊ. ಇನಾಂದಾರ್, ಪ್ರೊ. ದೇಜಗೌ ಅವರು ಡಾ.ಅಂಬೇಡ್ಕರ್ ಕುರಿತ ವ್ಯಕ್ತಿತ್ವ ಪರಿಚಯದ ಕೃತಿಗಳನ್ನು ಪಠ್ಯಕೇಂದ್ರಿತ ನೆಲೆಯಿಂದ ಹೊರತಂದಿದ್ದರು. ಇವೆಲ್ಲಕ್ಕಿಂತಲೂ ಮಹತ್ವದ್ದಾದ ಸಂಗತಿ ಎಂದರೆ, ಭಾರತೀಯ ಮಟ್ಟದಲ್ಲಿ ಅಂಬೇಡ್ಕರ್ ಅವರನ್ನು ಗ್ರಹಿಸಿದ್ದು, ಜಾತಿಯ ನೆಲೆಯಿಂದ ಮಾತ್ರ. ಅಂಬೇಡ್ಕರ್ ಎಂದರೆ ಮಹಾರ ಜನಾಂಗದ ನಾಯಕ ಎಂದಷ್ಟೇ ಅರ್ಥೈಸಲಾಗುತ್ತಿತ್ತು. ಅದರಾಚೆಗೆ ಅಂಬೇಡ್ಕರ್ ಅವರನ್ನು ಗ್ರಹಿಸಿದ್ದೇ ಇರಲಿಲ್ಲ. ಇದಕ್ಕೆ ಪ್ರಮಾಣವೆನ್ನುವಂತೆ ಈ ಕೆಳಗಿನ ಮೂರು ದಾಖಲೆಗಳು ಸಾಕೆನಿಸುತ್ತವೆ.
ಇದನ್ನೂ ಓದಿರಿ: ಆರ್‌ಬಿಐ ಸ್ಥಾಪನೆ; ಅಂಬೇಡ್ಕರ್ ಮಹತ್ವದ ಪಾತ್ರ ಅಳಿಸಿ ಹೋಯಿತೇಕೆ?
1). 100 great Indians through the Ages: By: H N Verma and Amrit Verma great Indian publishers New Delhi. 1975. 2). The Hindu speaks. 100 Editorial coverage a dynamic country. 3). Builders of modern India. Ed by: R A Diwakar. ವಾರ್ತಾ ಮತ್ತು ಪ್ರಸಾರ ಇಲಾಖೆ ಭಾರತ ಸರ್ಕಾರ. ರಾಷ್ಟ್ರದ ಪ್ರತಿನಿಧಿತ್ವವನ್ನು ವಹಿಸಲು ಮುಂದಾದ ಈ ಮೂರು ಸಂಸ್ಥೆಗಳು ಪರಿಚಯಿಸುವ ವ್ಯಕ್ತಿಗಳ ಪಟ್ಟಿಯಲ್ಲಿ ಅಧಿಕೃತವಾಗಿ ಅಂಬೇಡ್ಕರ್ ಅವರ ಹೆಸರು ದಾಖಲಾಗುವುದಿಲ್ಲ. ಅವರನ್ನು ಒಬ್ಬ ರಾಷ್ಟ್ರೀಯ ನಾಯಕ ಎಂದು ಪರಿಗಣಿಸಿಯೇ ಇಲ್ಲ, ಎನ್ನುವುದು ಇದರ ಮೇಲಿಂದ ಸ್ಪಷ್ಟವಾಗುತ್ತದೆ.
ಮೊದಲ ಕೃತಿಯಲ್ಲಿ ರಾಷ್ಟ್ರದ 100 ಪ್ರಧಾನ ವ್ಯಕ್ತಿತ್ವಗಳನ್ನು ಪರಿಚಯಿಸುವ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರಿಲ್ಲ. ಶಿವನಿಂದ ಆರಂಭಿಸಿ ಗಾಂಧಿ, ಠಾಕೂರ್, ತಿಲಕ್, ಅರವಿಂದರು, ನೆಹರೂ ಇವರೆಲ್ಲರ ಹೆಸರುಗಳು ಬಂದರೂ ಅಂಬೇಡ್ಕರ್ ಹೆಸರು ಬರುವುದಿಲ್ಲ. ಲೇಖಕರ ಸ್ನೇಹಿತರು ಬರೆಯಲು ಸೂಚಿಸಿದ, ಆದರೆ ಸ್ಥಳ ಅಭಾವದಿಂದ ಬರೆಯಲಾಗದ ಹಲವಾರು ಹೆಸರುಗಳ ಪಟ್ಟಿ ಇದ್ದು, ಇಲ್ಲಿಯೂ ಅಂಬೇಡ್ಕರ್ ಅವರ ಹೆಸರು ಕಂಡುಬರುವುದಿಲ್ಲ! ಎರಡನೆಯದು; ಪ್ರಸಿದ್ಧ ಆಂಗ್ಲ ಪತ್ರಿಕೆ ‘ದ ಹಿಂದೂ’ ಪ್ರಕಟಿಸಿದ ಕೃತಿ. ರಾಷ್ಟ್ರೀಯ ಆಂದೋಲನದ ಹಿನ್ನೆಲೆಯಲ್ಲಿ ಸಂಪಾದಕೀಯದಲ್ಲಿ ಬರೆದ ಮಹತ್ವದ ನೂರು ಲೇಖನಗಳನ್ನು ಆಯ್ದು ಪ್ರಕಟಿಸಲಾಗಿದೆ. ರಾಷ್ಟ್ರೀಯ ನಾಯಕರು ದಿವಂಗತರಾದ ಸಂದರ್ಭದಲ್ಲಿ ಬರೆದ ಮತ್ತು ರಾಷ್ಟ್ರೀಯ ಮಹತ್ವದ ಪ್ರಕರಣಗಳ ಕುರಿತಾದ ಸಂಪಾದಕೀಯಗಳು ಇದರಲ್ಲಿವೆ. ಇದರಲ್ಲಿಯೂ ಅಂಬೇಡ್ಕರ್ ಹೆಸರಿಲ್ಲ. 1932ರಲ್ಲಿ ನಡೆದ ‘The Puna pact’ ಕುರಿತ ಲೇಖನವಿದ್ದು, ಗಾಂಧೀಜಿಯವರು ಆಮರಣಾಂತ ಉಪವಾಸ ಕೈಗೊಂಡು, ನಿಲ್ಲಿಸಿದ ಸಂದರ್ಭದಲ್ಲಿ ಸಂಭ್ರಮದಿಂದ ಬರೆಯಲಾದ ಸಂಪಾದಕೀಯವಿದು, ಇದರಲ್ಲಿಯೂ ಅಂಬೇಡ್ಕರ್ ಹೆಸರು ದಾಖಲಾಗುವುದಿಲ್ಲ. ಈ ಎಲ್ಲ ಸಂದರ್ಭ ಸನ್ನಿವೇಶಗಳು ಅಂಬೇಡ್ಕರ್ ಅವರನ್ನು ರಾಷ್ಟ್ರೀಯ ನಾಯಕರೆಂದು ಒಪ್ಪಿಕೊಳ್ಳದೆ, ಅಸ್ಪೃಶ್ಯತೆಯ ಮನೋಭಾವದಿಂದ ಅವರನ್ನ ದೂರವಿಟ್ಟದ್ದು ಇವೆಲ್ಲ ಸ್ಪಷ್ಟಪಡಿಸುತ್ತವೆ. ಇದು 70ರ ದಶಕದ ಆದರ್ಶದ ಸ್ಪೃಶ್ಯರ ಭಾರತವಾಗಿದೆ. ಎಸ್ ರಾಜಶೇಖರ್ ಅವರು ಈ ಕುರಿತು ಚರ್ಚಿಸಿದ್ದಾರೆ.
3. ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಚಿಂತನೆಯ ಮುಖಾಮುಖಿ
ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ‘ದಲಿತ ಗೋಷ್ಠಿಯನ್ನು’ ಹಮ್ಮಿಕೊಳ್ಳಬೇಕು ಎಂಬ ಬೇಡಿಕೆಯನ್ನು ಇಟ್ಟಾಗ, ಅಧ್ಯಕ್ಷರು ಅದನ್ನು ನಿರಾಕರಿಸಿದ ಪರಿಣಾಮವಾಗಿ ‘ಬಂಡಾಯ ಸಂಘಟನೆ’ ರೂಪುಗೊಳ್ಳುವಂತಾಯಿತು. ಈ ಬಂಡಾಯ ಸಂಘಟನೆ ಮೂಲತ: ದಲಿತರದ್ದೇ ಮನೆಯಾಗಿತ್ತು. ಪ್ರಗತಿಪರ ಚಿಂತಕರು ಅಷ್ಟೇ ಪ್ರಾಮಾಣಿಕತೆಯಿಂದ ಆರಂಭದಲ್ಲಿ ಸಹಯೋಗದೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ‘ಬಂಡಾಯ ಎನ್ನುವದೊಂದು ದೊಡ್ಡ ವರ್ತುಲ. ಅದರಲ್ಲಿ ದಲಿತ, ಮಹಿಳೆ, ಇಸ್ಲಾಂ ಇವೆಲ್ಲ ಒಳಭಾಗಗಳು’ ಎನ್ನುವ ಆಲೋಚನಾ ಕ್ರಮ ಜಾರಿಯಾದಾಗ, ದಲಿತರು ಸಿಡಿದು ಹೊರಬರುವಂತಾಯಿತು. ಇದಕ್ಕೂ ಮುನ್ನವೇ “ದಲಿತ ಲೇಖಕ ಕಲಾವಿದರ ಬರಹಗಾರರ ಒಕ್ಕೂಟ” ಪ್ರತ್ಯೇಕ ಸಮ್ಮೇಳನಗಳನ್ನೂ ಆರಂಭಿಸಿತ್ತು. ದಲಿತರ ಮನೆಯನ್ನೇ “ಪ್ರಗತಿಪರರ ಮನೆ” ಎಂಬಂತೆ ಬಿಂಬಿಸಿದ್ದರ ಪರಿಣಾಮದಿಂದಾಗಿ ‘ದಲಿತ – ಬಂಡಾಯ ಚಳವಳಿ’ ಎಂಬ ಸಂಯುಕ್ತ ಹೆಸರಿನಲ್ಲಿ ಕರೆಯುವ ವಾಡಿಕೆ ಚಾಲ್ತಿಯಲ್ಲಿ ಬಂದದ್ದು ಪಳೆಯುಳಿಕೆ. ಇದಕ್ಕೆಲ್ಲ ಮುಖ್ಯ ಕಾರಣ ತಾತ್ವಿಕವಾದ ಭಿನ್ನಾಭಿಪ್ರಾಯಗಳಾಗಿವೆ.
ಈ ಸಂದರ್ಭದಲ್ಲಿ ಸಮಾಜವಾದಿ ಸಭಾ, ಲೋಹಿಯಾ ಮಂಚ್, ಸಿಪಿಐ, ಸಿಪಿಎಂ ಇಂಥ ಸಂಘಟನೆಗಳು ಸಕ್ರಿಯವಾಗಿದ್ದವು. ಮಾರ್ಕ್ಸ್‌ವಾದಿ ಚಿಂತಕರ ಪಡೆ ಹೆಚ್ಚು ಸುಸಂಘಟಿತವಾಗಿದ್ದು, ಮಾರ್ಕ್ಸ್‌ವಾದಕ್ಕೆ ಸಂಬಂಧಿಸಿದ ಪುಸ್ತಕಗಳು ಪುಕ್ಕಟೆಯಾಗಿ ಹಂಚುವ ಒಂದು ಪದ್ಧತಿಯು ಬಳಕೆಯಲ್ಲಿತ್ತು. ಹೀಗಾಗಿ ಆ ಚಿಂತನೆಯ ಓದು, ತೀಕ್ಷ್ಣ ಪಸರಿಸುವಿಕೆಗೆ ಕಾರಣವಾಗಿತ್ತು. ನಾವೆಲ್ಲಾ ಆ ಸಂದರ್ಭದಲ್ಲಿ ಅಂಬೇಡ್ಕರ್ ಹೆಸರನ್ನು ಹೇಳುತ್ತಿದ್ದರೂ, ಅಧಿಕೃತವಾಗಿ ಕಾರ್ಲ್ ಮಾರ್ಕ್ಸ್ ಚಿಂತನೆಯ ಓದು ಹಾಗೂ ಚರ್ಚೆಯೇ ಪ್ರಧಾನವಾಗಿತ್ತು. ದಲಿತರು ಆ ವಿಚಾರಗಳಿಂದ ತಪ್ಪಿಸಿಕೊಳ್ಳುವ ಸ್ವರೂಪ ಇರಲಿಲ್ಲ. ಈ ಕಾರಣದಿಂದಾಗಿಯೇ ಡಾ. ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹಾಗೂ ಅರವಿಂದ ಮಾಲಗತ್ತಿ ಅವರ ಆರಂಭಿಕ ಕೃತಿಗಳಲ್ಲಿ ಅಂಬೇಡ್ಕರ್ ಪ್ರಭಾವಕ್ಕಿಂತ ಹೆಚ್ಚಾಗಿ ಕಾರ್ಲ್ ಮಾರ್ಕ್ಸ್ ಚಿಂತನೆಯೇ ಹರಿದಾಡುವುದನ್ನು ಕಾಣುತ್ತೇವೆ. “ಕಾಲ್ ಮಾರ್ಕ್ಸ್‌ನಿಂದ ಜಡ್ಜ್‌ಮೆಂಟ್ ಕೊಡುಸ್ತೀನಿ” ಎನ್ನುವ ಧ್ವನಿಯಾಗಲಿ, ‘ಕುಡುಗೋಲಿನ ಪ್ರತಿಮೆ’ ಆಗಲಿ ಹೆಚ್ಚು ಕಾಣುತ್ತವೆ.
ಇದನ್ನೂ ಓದಿರಿ: ಗಂಗೆಯ ಒಡಲಿಗೆ ‘ವಿಷ’ದ ಸಂಕಟ; ವೈಜ್ಞಾನಿಕ ಸತ್ಯಗಳಿಗೆ ಬೆನ್ನು ತಿರುಗಿಸಲಾದೀತೆ?
ಮಹಾರಾಷ್ಟ್ರ ಸರ್ಕಾರ ಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ಅಂಬೇಡ್ಕರ್ ಕೃತಿಗಳನ್ನು ಸಮಗ್ರವಾಗಿ ಹೊರತಂದಿತು. ಆಗಲೇ ಭಾರತಕ್ಕೆ ಅಂಬೇಡ್ಕರ್ ಅವರ ಚಿಂತನೆಯ ‘ದಿವ್ಯ ದರ್ಶನ’ವಾದದ್ದು, ಹಾಗೂ ಕಾರ್ಲ್ ಮಾರ್ಕ್ಸ್‌ನಿಂದ ಹೊರತಾಗಿ ನೋಡಲು ಆಗ ನಮಗೆ ಸಾಧ್ಯವಾದದ್ದು. ಇದಲ್ಲದೆ ಮಾರ್ಕ್ಸ್‌ವಾದಿ ಚಿಂತನಾಕ್ರಮದೊಂದಿಗೆ, ಅಂಬೇಡ್ಕರ್ ವಾದೀ ಚಿಂತನಾ ಕ್ರಮ ಜೊತೆಗೂಡಿ ಹೋಗಲು ಸಾಧ್ಯವೇ? ಎನ್ನುವ ಪ್ರಶ್ನೆ ಬಲವಾಗಿ ಕಾಡಿದ್ದು, ಚರ್ಚೆಗೆ ಒಳಗಾದದ್ದು, ಇವೆಲ್ಲ ಅವಿಸ್ಮರಣೀಯ ಸಮುದ್ರ ಮಂಥನದ ಸಂದರ್ಭಗಳು.
ವರ್ಗ ಪರಿಕಲ್ಪನೆಗೂ, ಜಾತಿ ಪರಿಕಲ್ಪನೆಗೂ ಸ್ಪಷ್ಟವಾದ ಭಿನ್ನತೆಗಳಿವೆ. ವರ್ಗ ಹೋರಾಟದ ಚಿಂತನಾಕ್ರಮ, ಜಾತಿ ಹೋರಾಟದ ಚಿಂತನಾ ಕ್ರಮಕ್ಕೆ ಒಗ್ಗುತ್ತದೆಯೆ? ಈ ಎರಡೂ ನಾವೆಗಳಲ್ಲಿ ಕಾಲಿಟ್ಟು ಚಳವಳಿ ನಡೆಸಲು ಸಾಧ್ಯವೇ? ಭಾರತದಲ್ಲಿ ಪ್ರತಿಯೊಂದು ಜಾತಿಯೂ ಒಂದೊಂದು ವರ್ಗದಂತೆ ವರ್ತಿಸುತ್ತವೆ. ಮತ್ತು ಅವುಗಳಿಗೆ ಅವುಗಳದ್ದೇ ಆದ ವಿಧಿ ನಿಷೇಧಗಳಿದ್ದು, ತನ್ನದೇ ಆದ ಸಂರಚನೆಯನ್ನು ಹೊಂದಿವೆ. ಹೀಗಿರುವಾಗ ವರ್ಗ ಹೋರಾಟದ ಪರಿಕಲ್ಪನೆ ಜಾತಿ ಹೋರಾಟದ ಪರಿಕಲ್ಪನೆಗಿಂತ ಭಿನ್ನವಾಗಿದೆ ಎನ್ನುವ ವಾದಗಳು ನಮ್ಮ ಮುಂದಿದ್ದವು. ‘ಭಾರತೀಯರ ಕಸಿಯ ಅಂಗಿ ಧೋತಿಯ ವ್ಯಕ್ತಿಗೆ, ಕಾರ್ಲ್‌ಮಾರ್ಕ್ಸ್‌ರ ಬೂಟು ಮತ್ತು ಹ್ಯಾಟು ತೊಡಿಸಿದರೆ ಅದು ಹೇಗೆ ತಾಳೆಯಾಗುವುದಿಲ್ಲವೋ ಹಾಗೆ ಈ ನೆಲಕ್ಕೆ ಕಾರ್ಲ್‌ಮಾರ್ಕ್ಸ್‌ರ ಚಿಂತನೆಯು ಯಥಾಸ್ಥಿತಿಯಲ್ಲಿ ಎಲ್ಲವೂ ಅನ್ವಯಿಸಲಾಗದು’ ಎನ್ನುವುದಾಗಿತ್ತು. ಹೀಗಾಗಿ ದಲಿತರಿಗೆ ಇಂಥ ವಿಚಾರಗಳು ಎಷ್ಟರಮಟ್ಟಿಗೆ ಒಗ್ಗುತ್ತವೆ? ಎಂಬ ಪ್ರಶ್ನೆಗಳು ತೇಲಿದ್ದವು.
ಈ ಎಲ್ಲ ವೈಚಾರಿಕ ಸಂಘರ್ಷ, ಒಂದು ಹೊಸ ಮಾರ್ಗವನ್ನು ಕಟ್ಟಿಕೊಳ್ಳಲು ಪರೋಕ್ಷವಾಗಿ ಚಳವಳಿಯು ಸಹಕರಿಸಿತು. ನಾವು ಸಮಾನ ಮನಸ್ಕರಾಗಿರುವುದರಿಂದ ಮತ್ತು ನಮ್ಮ ಆಶಯ, ಉದ್ದೇಶ ಒಂದೇ ಆಗಿರುವುದರಿಂದ, ಒಟ್ಟಿಗೆ ಹೋಗುವುದು ಅನಿವಾರ್ಯ. ಹೀಗಾಗಿ ‘ಜಾತಿ ಸಂಘರ್ಷದಿಂದ ವರ್ಗ ಸಂಘರ್ಷದ ಕಡೆಗೆ ನಮ್ಮ ಪಯಣ’ ಕಾರ್ಲ್ ಮಾರ್ಕ್ಸ್ ಚಿಂತಕರೊಂದಿಗೆ ಗಾಂಧೀಜಿ, ಲೋಹಿಯಾ ಚಿಂತಕರೂ ಈ ಸಮೂಹದಲ್ಲಿ ಇರುವುದರಿಂದ ‘ಅನಂತತೆಯಲ್ಲೂ ಏಕತೆ’ ‘ಭಿನ್ನತೆಯಲ್ಲಿಯೂ ಏಕತೆ’ ಎನ್ನುವ ‘ಸೂತ್ರ ಬದ್ಧ ವಿಚಾರ’ ಹೊರ ಬರುವುದಕ್ಕೆ ಕಾರಣವಾದವು.
ಜಾತಿ ಸಮಸ್ಯೆ ಮತ್ತು ಅದರ ಪರಿಹಾರಗಳು ಅಂಬೇಡ್ಕರ್ ಅವರ ತಾತ್ವಿಕತೆಯ ಮಡಿಲಿಂದ ದೇಸಿ ಉತ್ತರಗಳಾಗಿ ಹುಟ್ಟಿದವುಗಳಾಗಿದ್ದವು. ದಲಿತರಿಗೆ ಅವು ಹೆಚ್ಚು ಸಶಕ್ತ ಎನಿಸತೊಡಗಿದ್ದವು. ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಚಿಂತನೆಯ ಮುಖಾಮುಖಿಯೊಂದಿಗೆ, ಈ ಸಾಂಸ್ಕೃತಿಕ ಸಂದರ್ಭದಲ್ಲಿ ಒಟ್ಟಾಗಿ ಹೋಗುವುದು ತೀರಾ ಅನಿವಾರ್ಯವಾಗಿತ್ತು. ಅದಕ್ಕೆ ಕಾರಣಗಳು ಹಲವಾರು ಇದ್ದರೂ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಈ ಸಹಭಾಗಿತ್ವ ಅಗತ್ಯವಾಗಿತ್ತು. ‘ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ – ಚಪ್ಪಾಳೆಗೆ ಕನಿಷ್ಠ ಎರಡು ಕೈಗಳಾದರೂ ಬೇಕು’. ಇಂಥ ಎಲ್ಲಾ ಕಾರಣದಿಂದ ದಲಿತರು, ಪ್ರಗತಿಪರರು, ಮಹಿಳೆಯರು, ಮುಸ್ಲಿಂ ಲೇಖಕರು ಎಲ್ಲರೂ ತಮ್ಮ ತಮ್ಮ ಸಮಸ್ಯೆಯಿಂದ ಪಾರಾಗಲು, ಒಟ್ಟಿಗೆ ಬದ್ಧರಾಗಿ ನಡೆದ ಕಾಲ ಅದು. ದಲಿತ ಬಂಡಾಯ ಸಂಘಟನೆ ಮತ್ತು ಅಂಬೇಡ್ಕರ್ ಚಿಂತನೆಯ ‘ದಲಿತ ಸಂಘರ್ಷ ಸಮಿತಿ’ಯ (ದಸಂಸ) ಇರುವಿಕೆಯೊಂದಿಗೆ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಅದು ತಾಳೆಯಾಗದೆ ಇದ್ದಾಗ ಸಿಡಿದು ಬೇರೆಯಾದದ್ದೂ ಇದೆ. ಒಟ್ಟಾಗಿ ಸಾಗಿದ್ದರ ಕಾರಣದಿಂದಾಗಿಯೇ ದಲಿತ ಸಂಘರ್ಷ ಸಮಿತಿಯು ‘ಭೂ ಹೋರಾಟ’ದ ಸಂದರ್ಭದಲ್ಲಿ ದಕ್ಕಿದ ಭೂಮಿಯನ್ನು ದಲಿತರು ಮತ್ತು ದಲಿತೇತರರಿಬ್ಬರಿಗೂ ಹಂಚಿಕೆ ಮಾಡಿರುವಂತಹ ಸಂದರ್ಭಗಳನ್ನು ಸ್ಮರಿಸಿಕೊಳ್ಳಬಹುದು.
‘ದಲಿತ’ ಅನ್ನುವ ಪದಕ್ಕೆ ಇರುವ ವ್ಯಾಖ್ಯಾನಗಳು ಕಾಲದಿಂದ ಕಾಲಕ್ಕೆ ಭಿನ್ನವಾಗುತ್ತಾ ಹೋಗಿವೆ. ಅಂತೆಯೇ ಹೋರಾಟದ ಸ್ವರೂಪದಲ್ಲಿಯೂ ಕೂಡ ಬದಲಾವಣೆಯಾಗುತ್ತಾ ಹೋಗಿವೆ. ದಲಿತರೊಂದಿಗೆ ಪ್ರಗತಿಪರರ ಒಡನಾಟ ಬಲಿಷ್ಠವಾಗಿದ್ದಾಗ ಸಾಕಷ್ಟು ದೂರ ಕ್ರಮಿಸಲಾಗಿದೆ. ಭಿನ್ನಾಭಿಪ್ರಾಯಗಳು ಬಂದಾಗ ದಾರಿಗಳು ಬೇರೆಯಾಗಿವೆ. ಸಾಹಿತ್ಯ ಚಳವಳಿಗೂ ಮತ್ತು ಸಾಮಾಜಿಕ ಹೋರಾಟದ ಚಳವಳಿಗೂ ಇದು ಸಮಾನಾಂತರವಾಗಿಯೇ ಅನ್ವಯವಾಗುತ್ತದೆ.
ಇದನ್ನೂ ಓದಿರಿ: ಕರ್ನಾಟಕ 50 | ಎಡಪಂಥೀಯರು ಅಂಬೇಡ್ಕರರಿಂದ ದೂರಾದರೆಂಬುದು ಸುಳ್ಳು- ಜಿ.ಆರ್
ಈ ದಲಿತ ಬಂಡಾಯ ಚಳವಳಿಯ ಸಂದರ್ಭ ಒಂದು ರೀತಿಯಲ್ಲಿ ಹುಲಿ ಮತ್ತು ಆನೆಯ ಸ್ನೇಹದಂತಿತ್ತು. ಹುಲಿ ಆನೆಗಾಗಿ ಸಸ್ಯಾಹಾರಿಯಾಗಲು ಸಿದ್ಧವಾದರೆ, ಆನೆ ಹುಲಿಯ ಸ್ನೇಹಕ್ಕಾಗಿ ಮಾಂಸಾಹಾರಿಯಾಗಲು ಸಿದ್ಧವಾಗಿದ್ದ ಕಾಲವದು. ಇದರ ಅನಂತರದಲ್ಲಿ ಆನೆ ಮತ್ತು ಹುಲಿಗಳ ನಡುವೆ ಸಂದೇಹಗಳು ಎದ್ದಾಗ, ಈ ಹುಲಿ ಹಿಂದಿನಿಂದ ಯಾವಾಗ ದಾಳಿ ಮಾಡುವುದೊ, ಎಂಬ ಆತಂಕ ಆನೆಗೆ ಕಾಡಿದರೆ; ಈ ಆನೆ ತನ್ನ ಸೊಂಡಿಲಿಂದ ಯಾವಾಗ ಎತ್ತಿ ನೆಲಕ್ಕೆ ಬಡಿಯುವುದೊ ಎಂಬ ಆತಂಕ ಹುಲಿಗೂ ಕಾಡಿದ್ದ ಸ್ಥಿತಿ ಅದು. ಈ ಆಂತರಿಕ ಕಾದಾಟಗಳೇ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಪ್ರತ್ಯೇಕ ಅಸ್ತಿತ್ವವನ್ನು ತಂದುಕೊಟ್ಟವು. ‘ದಲಿತ ಸಾಹಿತ್ಯ ಪರಿಷತ್ತು’ ಬೆಳೆಯಲು ಇವು ಪರೋಕ್ಷವಾಗಿ ಕಾರಣವಾಗಿವೆ. ಡಾ. ಅಂಬೇಡ್ಕರ್, ಕಾಲ್ ಮಾರ್ಕ್ಸ್, ಲೋಹಿಯಾರ ಚಿಂತನೆಗಳ ತಾತ್ವಿಕ ನಡೆಗೂ ದಸಂಸದ ಸಾಮಾಜಿಕ ಸಂಘಟನೆಯ ಪ್ರಾಯೋಗಿಕ ನಡೆಗೂ ವ್ಯತ್ಯಾಸಗಳು ಒಡೆದು ಕಾಣುತ್ತಿದ್ದವು. ಹೀಗಾಗಿ ‘ಸಾಮಾಜಿಕ ಹೋರಾಟಗಾರರು ಸಾಹಿತಿಗಳನ್ನು ಸಾಮಾಜಿಕ ಹೋರಾಟದಿಂದ ಹೊರಗಿಡಬೇಕು’ ಎನ್ನುವ ವಾದವೂ ಎದ್ದು ನಿಂತಿತ್ತು. ಈ ಸಂದರ್ಭದಲ್ಲಿ “ಸಮುದಾಯ ಸಂಘಟನೆ” ದಲಿತರೊಂದಿಗೆ ಬೆರೆತು ಕಾರ್ಯ ನಿರ್ವಹಿಸಿದೆ. ಆದರೀಗ ಅದು ದಲಿತರದ್ದೇ ಪ್ರತ್ಯೇಕ ಶಾಖೆಯನ್ನು ಹೊಂದಿದ್ದು ಹೆಚ್ಚು ಕ್ರಿಯಾಶೀಲವಾಗಿದೆ.
4. ಅಂಬೇಡ್ಕರ್‌ವಾದಿ ದಲಿತರು ಮತ್ತು ರೈತ ಸಂಘಟನೆ
ಆರಂಭದಲ್ಲಿ ದಲಿತ ಮತ್ತು ರೈತ ಸಂಘಟನೆಗಳು ಹೋರಾಟದಲ್ಲಿ ಪರಸ್ಪರ ಭಾಗಿಯಾಗಿ ಕೆಲ ಹೆಜ್ಜೆಗಳನ್ನು ಕ್ರಮಿಸಿ ಶ್ರೇಯಸ್ಸನ್ನು ಪಡೆದಿವೆ. ಹೀಗಾಗಿ ಒಂದಕ್ಕೊಂದು ಪರಸ್ಪರ ಋಣಿಯಾಗಿವೆ. ಭಿನ್ನಾಭಿಪ್ರಾಯಗಳೊಂದಿಗೆಯೂ ಬೆಳೆದಿವೆ. ಭಿನ್ನಾಭಿಪ್ರಾಯ ದಸಂಸದ ಒಡೆಯುವಿಕೆಯಿಂದ ಕೆಲವರು ಕಳಚಿಕೊಂಡರೆ ಇನ್ನು ಕೆಲವರು ಜೊತೆಗೆ ಸಾಗಿದ್ದಾರೆ. ದಲಿತರು ಪ್ರಧಾನವಾಗಿ ಭೂ ರಹಿತರು. ಭೂ ಮಾಲೀಕರ ಭೂಮಿಯಲ್ಲಿ ಕೂಲಿ ಮಾಡುವವರು. ಹೀಗಾಗಿ ರೈತರೊಂದಿಗಿನ ದಲಿತರ ಬೆಸುಗೆ ಬಿಗಿತನದಿಂದ ಕೂಡಿರಲಿಲ್ಲ.
‘ಭೂಮಾಲೀಕರು ದಲಿತರನ್ನು ಸಮಾನ ದೃಷ್ಟಿಕೋನದಿಂದ ನೋಡದ ಲೋಪಗಳು ಇಲ್ಲಿವೆ’ ಎಂದು ಬಿ. ಕೃಷ್ಣಪ್ಪನವರೇ ವೇದಿಕೆಗಳ ಮೇಲೆ ಹೇಳಿದ್ದೂ ಇದೆ, ಬರೆದದ್ದೂ ಇದೆ. ಹೀಗಾಗಿ ಈ ಸಂಬಂಧ ದಲಿತ ಮತ್ತು ಪ್ರಗತಿಪರ ನಡುವಿನ ಭಿನ್ನಾಭಿಪ್ರಾಯದ ಸಂಗತಿಗಳು ಭಿನ್ನವಾಗಿದ್ದರೂ, ಸಮಸ್ಯೆಗಳಲ್ಲಿ ಮೂಲಭೂತವಾದ ವ್ಯತ್ಯಾಸವೇನಿರಲಿಲ್ಲ. ಒಂದು ತಾತ್ವಿಕ ಚಿಂತನೆಯ ರೂಪ; ಮತ್ತೊಂದು ಸಾಮಾಜಿಕ ಸಂಘರ್ಷದ ಚಿಂತನೆಯ ರೂಪ. ದಸಂಸದ ಸಂಪರ್ಕದಿಂದಾಗಿ ರೈತ ಸಂಘಟನೆಯಲ್ಲಿ ಅಂಬೇಡ್ಕರ್ ಚಿಂತನೆಯು ಅದರ ಉನ್ನತೀಕರಣಕ್ಕೆ ಕಾರಣವಾಗಿದ್ದರೂ ಮೂಲಭೂತ ನೆಲೆಯಲ್ಲಿ ಬದಲಾವಣೆ ಗೌಣ. ದಲಿತ ಸಂಘರ್ಷ ಸಮಿತಿ ಭೂ ಹೋರಾಟಕ್ಕೆ ಸಂಬಂಧಿಸಿದಂತೆ ಎತ್ತಿಕೊಂಡ ಪ್ರಕರಣಗಳು ಗಂಭೀರವಾಗಿದ್ದಾಗಲೂ, ಹೋರಾಟಕ್ಕೆ ಎತ್ತಿಕೊಳ್ಳುವ ಸಂಗತಿಗಳು, ಭೂ ಮಾಲೀಕರ ಮನನೋಯಿಸದಂತೆ ಇರುವ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೋದುದ್ದರ ಕುರಿತು ಚರ್ಚಿಸಿದ ಹೆಜ್ಜೆಗಳಿವೆ.
5. ಡಾ. ಅಂಬೇಡ್ಕರ್ ಮತ್ತು ಬಿಎಸ್ಪಿ ಚಿಂತನೆ
ದಸಂಸದಿಂದ ಸಿಡಿದು ಬಂದ ಒಂದು ಬಣ, 2000 ವರ್ಷಕ್ಕಾಗಲೆ ಬಿಎಸ್ಪಿಯಾಗಿ ತನ್ನ ನೆಲೆಯನ್ನು ಕರ್ನಾಟಕದಲ್ಲಿ ಸಾಕಷ್ಟು ಗಟ್ಟಿಯಾಗಿ ಕಂಡುಕೊಂಡಿತ್ತು. ಇವರು ದಲಿತ ಸಂಘರ್ಷ ಸಮಿತಿಯ ತಾತ್ವಿಕತೆಯ ಮೇಲೆ ಹರಿಹಾಯಿದದ್ದು ವಿಶೇಷವಾಗಿತ್ತು. ‘ಗಾಂಧಿ, ಲೋಹಿಯಾ, ಮಾರ್ಕ್ಸ್ ಚಿಂತನೆಯೊಂದಿಗೆ, ಅಂಬೇಡ್ಕರ್ ಚಿಂತನೆ ಇಟ್ಟು ಹೆಜ್ಜೆ ಹಾಕಿದ್ದೇ ತಪ್ಪು’ ಎಂದು ವಾದಿಸುತ್ತಾ ‘ಕೇವಲ ಅಂಬೇಡ್ಕರ್ ಚಿಂತನೆಯೊಂದೇ ದಲಿತರನ್ನು ಸಮಸ್ಯೆಯಿಂದ ಪಾರು ಮಾಡಬಲ್ಲದು ಮತ್ತು ದಲಿತರನ್ನು ಆಳುವ ವರ್ಗವನ್ನಾಗಿ ರೂಪಿಸಬಲ್ಲದು’ ಎಂದು ನಂಬಿದವರಾಗಿದ್ದರು. ಇದು ಅಂಬೇಡ್ಕರ್ ಚಿಂತನೆಯ ಒಂದು ಭಾಗವೂ ಆಗಿತ್ತು.
ದಲಿತ ಸಂಘರ್ಷ ಸಮಿತಿಯು ‘ರಾಜಕೀಯದಿಂದ ಹೊರಗಿದ್ದು, ಒತ್ತಡಗಳನ್ನು ಹೇರುವುದರ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಸೂಕ್ತ’ ಎನ್ನುವ ಪರೋಕ್ಷವಾದ ರಾಜಕೀಯದ ಸಂಬಂಧಗಳ ನಡೆಯನ್ನು ನೆಚ್ಚಿತು. ಈ ಧೋರಣೆಯ ನಡೆ ಚರ್ಚಾಸ್ಪದವಾದುದು. ಹೀಗಾಗಿ ಕರ್ನಾಟಕದಲ್ಲಿ ಬಿಎಸ್ಪಿ/ ಬಿವಿಎಸ್ ಬೆಳೆಯಲು ಆಸ್ಪದವಾಯಿತು.
ಇದನ್ನೂ ಓದಿರಿ: ಜಿಗಿದು ನಲಿವ ಕಿಶೋರಾವಸ್ಥೆ ಅದೆಂತಹ ಅಪಾಯಕ್ಕೆ ಸಿಲುಕಿದೆ ಬಲ್ಲಿರಾ?
ಒಂದು ಹಂತದಲ್ಲಿ ದಸಂಸದ ನಾಯಕರಾಗಿದ್ದ ದೇವನೂರ ಮಹಾದೇವ ಅವರು ರೈತ ಸಂಘದೊಂದಿಗೆ ಮೊದಲಿಂದಲೂ ಸಂಬಂಧವನ್ನು ಸಾಧಿಸಿದವರು. ಅನಂತರದಲ್ಲಿ ಸರ್ವೋದಯ ಪಕ್ಷಕ್ಕೆ ನಾಯಕರಾದರು. ಇದು ದಸಂಸಕ್ಕೆ ‘ಉಂಬ ತಟ್ಟೆಗಾಗಿ ಬಡಿದಾಡುವ ಕಾಲ’ಕ್ಕೆ ರಾಜಕೀಯಕ್ಕೆ ಮುಖ ಮಾಡಿದಂತಾಗಿತ್ತು. ಬಿಎಸ್‌ಪಿಯೂ ಕೂಡಾ ಈಗ ಕರ್ನಾಟಕದಲ್ಲಿ ಬೆಳೆದ ನಾಯಕರನ್ನು ಕಳೆದುಕೊಳ್ಳುವಂತಾಗಿ ಕರಗುತ್ತಿದೆ. ಅದೇನೇ ಇದ್ದರೂ ಸರ್ವೋದಯವಾಗಲಿ, ಬಿಎಸ್ಪಿ ಆಗಲಿ ರಾಜಕೀಯ ಬೆಳವಣಿಗೆಯ ದೃಷ್ಟಿಯಿಂದ ಆಮೆ ನಡಿಗೆಯ ಸ್ವರೂಪದ್ದಾಗಿವೆ. ದಲಿತ ನಾಯಕರು ಪಕ್ಷ ರಾಜಕಾರಣಗಳ ನಡುವೆ ಹರಿದು ಹಂಚಿ ಹೋಗಿದ್ದರಿಂದ ದಲಿತ ರಾಜಕಾರಣಕ್ಕೆ ನೆಲೆ ಇಲ್ಲದಂತಾಗಿದೆ. ಹಾಗೂ ಒಡಂಬಡಿಕೆಯ ರಾಜಕೀಯ ನಾಯಕರನ್ನು ಸೃಷ್ಟಿಸಿದಂತಾಗಿದೆ.
ಕರ್ನಾಟಕದಲ್ಲಿ ದಸಂಸ ರೂಪಗೊಂಡ ನಂತರ ಉತ್ತರ ಪ್ರದೇಶದಲ್ಲಿ ದಲಿತ ಸಂಘಟನೆ ಕಾಣಿಸಿಕೊಂಡರೂ, ಅದು ರಾಜ್ಯದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಅದರ ಹಿರಿಯಣ್ಣನಂತಿದ್ದ ಕರ್ನಾಟಕವು ದಲಿತ ಸಂಘಟನೆಗಳ ರಾಜಕೀಯದ ಅಸ್ಪಷ್ಟ ನಿಲುವುಗಳಿಂದಾಗಿ ಆ ಮಟ್ಟಕ್ಕೆ ಏರಲಾಗಲಿಲ್ಲ. ಅಪವಾದಗಳು ಏನೇ ಇದ್ದರೂ ‘ಕರ್ನಾಟಕಕ್ಕೊಬ್ಬ ಕಾನ್ಸಿರಾಮ್ ಆಗಲಿ, ಅಕ್ಕ ಮಾಯಾವತಿ ಆಗಲಿ ಕಾಣಲಾಗಲಿಲ್ಲ’ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾದುದಾಗಿದೆ. ಬಹುಜನ ಸಮಾಜ ಪಕ್ಷ (ಬಿವಿಎಸ್)ವು ರಾಷ್ಟ್ರಮಟ್ಟದಲ್ಲಿ ಕಾನ್ಸಿರಾಂ ಅವರ ನಡೆಯು ಇನ್ನೊಂದು ರೀತಿಯಲ್ಲಿ ಬೆಳವಣಿಗೆಯಾಗುತ್ತಾ ಬಂತು. ಡಿಎಸ್ 4, ಬಾಂಮ್ಸೆಪ್, ಬಿವಿಎಸ್ ಸಂಘಟನೆಯ ಬೆಳವಣಿಗೆಯ ಹಾದಿ ರಾಜಕೀಯವೇ ಕೇಂದ್ರ ಆಗಿತ್ತು. ಇದರ ಪರಿಣಾಮ ಕರ್ನಾಟಕದ ಮೇಲಾಯಿತು.
(ಮುಂದುವರಿಯುತ್ತದೆ…)
(ಈದಿನ.ಕಾಮ್ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಪ್ರೊ. ಅರವಿಂದ ಮಾಲಗತ್ತಿ
ಕನ್ನಡ ಸಾಹಿತ್ಯದಲ್ಲಿ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವರು ಪ್ರೊ.ಅರವಿಂದ ಮಾಲಗತ್ತಿ. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಹೆಸರು ಮಾಡಿದವರು. ಮೂಕನಿಗೆ ಬಾಯಿ ಬಂದಾಗ, ಕಪ್ಪು ಕಾವ್ಯ, ಮೂರನೇ ಕಣ್ಣು, ನಾದ ನಿನಾದ, ಸಿಲಿಕಾನ್ ಸಿಟಿ ಮತ್ತು ಕೋಗಿಲೆ, ಮುಗಿಯದ ಕಥೆಗಳು, ಮಸ್ತಕಾಭಿಷೇಕ, ಸಮುದ್ರದೊಳಗಣ ಉಪ್ಪು ಮೊದಲಾದ ಕೃತಿ ರಚಿಸಿದ್ದಾರೆ. ಅವರ ಆತ್ಮಕತೆ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಸಾಹಿತ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.




