ವಿಶ್ಲೇಷಣೆ | ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಹಂಚಿಕೆ ಹೇಗೆ ಮಾಡಲಾಗಿದೆ?

Date:

ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮುನ್ನೋಟವಿರುವ ನೀತಿಯೊಂದರ ಬಾಗಿಲನ್ನು ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1ರಂದು ತೆರೆಯಿತು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಇದ್ದ ಕಾನೂನಿನ ಅಡ್ಡಿಗಳನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೆರವು ಮಾಡಿತು. ಮೀಸಲಾತಿ ವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತು.

ಈ ತೀರ್ಪನ್ನು ಆಧರಿಸಿ ರಾಜ್ಯ ಸರ್ಕಾರಗಳು ಹೊಸ ನೀತಿಗಳನ್ನು ಹೇಗೆ ರೂಪಿಸುತ್ತವೆ ಹಾಗೂ ಕಾನೂನಿನ ದೃಷ್ಟಿಯಿಂದ ಬದಲಾಗಿರುವ ಈ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಹೊಸ ಬಗೆಯ ರಾಜಕಾರಣವನ್ನು ಹೇಗೆ ಕಟ್ಟುತ್ತವೆ ಎಂಬುದನ್ನು ಆಧರಿಸಿ ಹಲವು ಸಂಗತಿಗಳು ತೀರ್ಮಾನವಾಗಲಿವೆ. ಸುಪ್ರೀಂ ನಿರ್ದೇಶನವು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿಗಳು ಹಾಗೂ ರಾಜಕಾರಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ನೆರವಾಗಿದೆ. ಒಳಮೀಸಲಾತಿಗಾಗಿ ಹೋರಾಡುತ್ತಿದ್ದ ಸಮುದಾಯಗಳು ಕೊಂಚ ನಿರಾಳವಾಗಿವೆ.

ಒಳಮೀಸಲಾತಿ: ಕಾನೂನು ಹೋರಾಟ ಏಳುಬೀಳು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪರಿಶಿಷ್ಟ ಜಾತಿಗಳ ಒಳವರ್ಗೀಕರಣಕ್ಕೆ ತಮಗೆ ಇದ್ದ ಮಿತಿಗಳನ್ನು ನಿವಾರಿಸಿಕೊಳ್ಳಲು ರಾಜ್ಯ ಸರ್ಕಾರಗಳು, ಹೋರಾಟಗಾರರು ಇಪ್ಪತ್ತು ವರ್ಷಗಳಿಂದ ನಡೆಸಿದ್ದ ಕಾನೂನು ಸಮರವನ್ನು ಸುಪ್ರೀಂಕೋರ್ಟ್ ತೀರ್ಪು ಕೊನೆಗೊಳಿಸಿತು. ದೇಶದಲ್ಲಿ ಪರಿಶಿಷ್ಟ ಜಾತಿಗಳು ಎಂದು ಪರಿಗಣಿಸಬೇಕಿರುವ ಜಾತಿಗಳ ಪಟ್ಟಿಯನ್ನು ಅಧಿಸೂಚಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವ ಸಂವಿಧಾನದ 341ನೇ ವಿಧಿಯ ವ್ಯಾಖ್ಯಾನವೇ ಇಲ್ಲಿ ಚರ್ಚೆಗೆ ಗುರಿಯಾಗಿತ್ತು. 2004ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು, ಮೀಸಲಾತಿ ವರ್ಗೀಕರಣ ಸರಿಯಲ್ಲ ಎಂದಿತ್ತು. ಇ.ವಿ.ಚಿನ್ನಯ್ಯ ಪ್ರಕರಣದಲ್ಲಿ ಈ ಪೀಠವು ರಾಜ್ಯವೊಂದರ ಭೌಗೋಳಿಕ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳೆಲ್ಲವೂ ಏಕರೂಪಿಯಾಗಿರುತ್ತವೆ, ಅವುಗಳ ಒಳವರ್ಗೀಕರಣಕ್ಕೆ ಅವಕಾಶ ಇಲ್ಲ ಎಂದಿತ್ತು.

ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪು ವಾಸ್ತವಕ್ಕೆ ಅನುಗುಣವಾಗಿರಲಿಲ್ಲ. ಎಸ್‌ಸಿ/ಎಸ್‌ಟಿಯಂತಹ ಸಮುದಾಯಗಳಲ್ಲಿ ಬೇರೆ ಬೇರೆ ಸ್ತರಗಳ, ಬೇರೆ ಬೇರೆ ಸಾಂಪ್ರದಾಯಿಕ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಆ ಕಾರಣಗಳಿಂದಾಗಿಯೇ ಬೇರೆ ಬೇರೆ ಮಟ್ಟಗಳಲ್ಲಿ ಅನಾನುಕೂಲಗಳನ್ನು ಹೊಂದಿರುವ ಗುಂಪುಗಳನ್ನು ಗುರುತಿಸಲು ಅದು ವಿಫಲವಾಗಿತ್ತು. ಆದರೆ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಒಳಮೀಸಲಾತಿಗೆ ಒಪ್ಪಿಗೆ ಸೂಚಿಸಿತು. ಒಳಮೀಸಲಾತಿಗೆ ವಿರುದ್ಧ ಮತ್ತು ಪರವಿದ್ದ ಎರಡು ಪೀಠಗಳು ಐವರು ನ್ಯಾಯಮೂರ್ತಿಗಳನ್ನು ಹೊಂದಿದ್ದರಿಂದ ವಿಸ್ತೃತ ಪೀಠಕ್ಕೆ ವರ್ಗಾಯಿಸಲ್ಪಟ್ಟಿತು.

ಅಂತಿಮವಾಗಿ ಸುಪ್ರೀಂ ಕೋರ್ಟ್‌ ತನ್ನ ಹಿಂದಿನ ತೀರ್ಪನ್ನು ಬದಲಿಸಿದ್ದು ಚಾರಿತ್ರಿಕ ಘಳಿಗೆ. ಒಳವರ್ಗೀಕರಣಕ್ಕೆ ಅವಕಾಶ ಇದೆ, ಅದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿಲ್ಲ ಎಂದಿತು. ಎಸ್‌ಸಿ ಸಮುದಾಯಗಳ ಪರಿಸ್ಥಿತಿಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಆದ ಕಾರಣ, ಒಳವರ್ಗೀಕರಣದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಕೋರ್ಟ್‌ನ ಆದೇಶದ ಅನ್ವಯ ರಾಜ್ಯ ಸರ್ಕಾರಗಳು ಈಗ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಮಾಡುತ್ತಿವೆ. ಮುಖ್ಯವಾಗಿ ಒಳಮೀಸಲಾತಿ ಹೋರಾಟ ತೀವ್ರವಾಗಿದ್ದ ಅವಿಭಜಿತ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಒಳಮೀಸಲಾತಿಯು ರಾಜಕೀಯ ಪಲ್ಲಟಗಳಿಗೂ ಕಾರಣವಾಗುವ ವಿದ್ಯಮಾನವೇ ಸರಿ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 1)

ನಮ್ಮ ಕರ್ನಾಟಕದಲ್ಲಿ ವಿಳಂಬವಾದರೂ ನೆರೆಯ ತೆಲಂಗಾಣ ಮತ್ತು ಆಂಧ್ರದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಆಗಿದೆ. ಕರ್ನಾಟಕದಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಯುತ್ತಿದೆ. ಇದೇ ಜೂನ್ 30ಕ್ಕೆ ಸಮೀಕ್ಷೆ ಮುಗಿಯುತ್ತದೆ. ಕರ್ನಾಟಕವು ನೆರೆಯ ರಾಜ್ಯಗಳಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ.

ಹೇಗಿದೆ ತೆಲಂಗಾಣದ ವರ್ಗೀಕರಣ?

ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಜವಾಬ್ದಾರಿಯನ್ನು ತೆಲಂಗಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಮೀಮ್ ಅಖ್ತರ್ ಅವರಿಗೆ ಇಲ್ಲಿನ ಸರ್ಕಾರ ನೀಡಿತು. ಶಮೀಮ್ ಅಖ್ತರ್ ಏಕಸದಸ್ಯ ಆಯೋಗವು ಜನಸಂಖ್ಯೆ, ಸಾಕ್ಷರತೆ, ಉದ್ಯೋಗ, ಶಿಕ್ಷಣ ಲಭ್ಯತೆ, ಆರ್ಥಿಕ ನೆರವು ಮತ್ತು ರಾಜಕೀಯ ಭಾಗವಹಿಸುವಿಕೆಯಂತಹ ಅಂಶಗಳನ್ನು ಪರಿಗಣಿಸಿ ಒಳಮೀಸಲಾತಿ ಜಾರಿಯ ಶಿಫಾರಸ್ಸನ್ನು ತೆಲಂಗಾಣ ಸರ್ಕಾರಕ್ಕೆ ಸೂಚಿಸಿತು. ಅದರನ್ವಯ ಅಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ.

shameem akthar
ನಿವೃತ್ತ ನ್ಯಾಯಮೂರ್ತಿ ಶಮೀಮ್ ಅಖ್ತರ್

ವರ್ಗೀಕರಣ ವಿವರಗಳು: ತೆಲಂಗಾಣದಲ್ಲಿ ಎಸ್‌ಸಿಗಳನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಈ ಉಪ-ವರ್ಗೀಕರಣವು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಶೇ.15ರಷ್ಟು ಎಸ್‌ಸಿ ಮೀಸಲಾತಿ ಕೋಟಾವನ್ನು ಈ ಕೆಳಗಿನಂತೆ ಹಂಚಿಕೆ ಮಾಡಿದೆ:

ಗುಂಪು ಉಪ-ಜಾತಿಗಳ ಸಂಖ್ಯೆ SC ಜನಸಂಖ್ಯೆಯ ಶೇ. ಮೀಸಲಾತಿ (%) ವರ್ಗ ವಿವರಣೆ 
ಗುಂಪು I   15 3.288% 1% ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರು. 
ಗುಂಪು II 18 62.748% 9% ಮಧ್ಯಮ ಪ್ರಯೋಜನ ಪಡೆದ SC ಸಮುದಾಯಗಳು. 
ಗುಂಪು III 26 33.963% 5% ಗಮನಾರ್ಹವಾಗಿ ಪ್ರಯೋಜನ ಪಡೆದ SC ಸಮುದಾಯಗಳು. 

ತೆಲಂಗಾಣ ಪರಿಶಿಷ್ಟ ಜಾತಿಗಳ(ಮೀಸಲಾತಿ ತರ್ಕಬದ್ಧಗೊಳಿಸುವಿಕೆ) ಮಸೂದೆ– 2025 ತೆಲಂಗಾಣ ವಿಧಾನಸಭೆಯಲ್ಲಿ ಮಾರ್ಚ್ ತಿಂಗಳಲ್ಲಿ ಅಂಗೀಕಾರವಾಯಿತು. ಕಾಯ್ದೆಯ ಅನುಷ್ಠಾನವನ್ನು ಅಧಿಸೂಚಿಸಿದ ಬಳಿಕ, ಎಸ್‌ಸಿ ಒಳಮೀಸಲಾತಿ ಜಾರಿಗೊಳಿಸಿದ ಭಾರತದ ಮೊದಲ ರಾಜ್ಯ ಎಂಬ ಪ್ರಸಂಸೆಗೆ ತೆಲಂಗಾಣ ಸರ್ಕಾರ ಭಾಜನವಾಯಿತು. ಸರ್ಕಾರ ರೂಪಿಸಿದ ಕಾಯ್ದೆಗೆ ರಾಜ್ಯಪಾಲರು ಏಪ್ರಿಲ್ 8ರಂದು ಅಂಕಿತ ಹಾಕಿದ್ದಾರೆ. ಏ.14ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎಸ್‌ಸಿ ಪಟ್ಟಿಯಲ್ಲಿರುವ 60 ಸಮುದಾಯಗಳಲ್ಲಿ ಮಾಲ ಮತ್ತು ಮಾದಿಗ ಪ್ರಮುಖ ಜಾತಿಗಳಾಗಿವೆ. 2011ರ ಜನಗಣತಿಯ ಪ್ರಕಾರ, ತೆಲಂಗಾಣದ 54.32 ಲಕ್ಷ ಎಸ್‌ಸಿ ಜನಸಂಖ್ಯೆಯಲ್ಲಿ, ಮಾದಿಗರು 32.33 ಲಕ್ಷ ಮತ್ತು ಮಾಲರು 15.27 ಲಕ್ಷ ಇದ್ದಾರೆ. ಆಂಧ್ರಪ್ರದೇಶದಲ್ಲಿ, 84.45 ಲಕ್ಷ ಎಸ್‌ಸಿ ಜನಸಂಖ್ಯೆಯಲ್ಲಿ 34.68 ಲಕ್ಷ ಮಾದಿಗರು ಮತ್ತು 40.43 ಲಕ್ಷ ಮಾಲ ಸಮುದಾಯದವರು ಇದ್ದಾರೆ.

ಮಂದಕೃಷ್ಣ ಮಾದಿಗರ ಹೋರಾಟ

ಈ ಹಿಂದೆ ಮಂದ ಎಲಿಯಾ ಎಂದು ಕರೆಯಲ್ಪಡುತ್ತಿದ್ದ ಮಂದಕೃಷ್ಣ ಮಾದಿಗ ಅವರು 1980ರ ದಶಕದ ಆರಂಭದಲ್ಲಿ ವಾರಂಗಲ್ ಉಪನಗರಗಳಲ್ಲಿ ಗ್ರಾಮ ಮಟ್ಟದ ಜಾತಿವಿರೋಧಿ ಕಾರ್ಯಕರ್ತರಾಗಿ ಕೆಲಸ ಪ್ರಾರಂಭಿಸಿದರು. ತದನಂತರ ಮಾದಿಗ ಮೀಸಲಾತಿಯ ಹೋರಾಟದಲ್ಲಿ ಗುರುತಿಸಿಕೊಂಡರು. ಅವಿಭಜಿತ ಆಂಧ್ರ ಪ್ರದೇಶದಲ್ಲಿ ಮಾದಿಗರ ಪರ ದನಿ ಎತ್ತಿದ ಮಂದಕೃಷ್ಣ ಅವರು, ನಂತರದಲ್ಲಿ ಬಿಜೆಪಿ ಜೊತೆಗೆ ಗುರುತಿಸಿಕೊಂಡು ಟೀಕೆಗೂ ಒಳಗಾದರು. ಆದರೆ ಅವರ ಹೋರಾಟವು ಒಳಮೀಸಲಾತಿ ಪ್ರಶ್ನೆಯನ್ನು ಜೀವಂತವಾಗಿ ಇರಿಸಿತ್ತು ಎಂಬುದನ್ನು ಯಾರೂ ಅಲ್ಲಗಳೆಯಲಾರರು.

ಮೀಸಲಾತಿ ಹಂಚಿಕೆಯ ಮತ್ತಷ್ಟು ಸಂಗತಿ

ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳಲ್ಲಿರುವ 59 ಉಪಜಾತಿಗಳನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಲು ಆಯೋಗ ಶಿಫಾರಸು ಮಾಡಿದ್ದು, ಸಾರ್ವಜನಿಕ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಟ್ಟು 15% SC ಕೋಟಾವನ್ನು ಮೂರು ವರ್ಗಗಳಾಗಿ ವಿಂಗಡಿಸಿರುವುದನ್ನು ಸಂಕ್ಷಿಪ್ತವಾಗಿ ಈಗಾಗಲೇ ಚರ್ಚಿಸಿದೆವು.

ತೆಲಂಗಾಣದಲ್ಲಿ ನೇಮಕಾತಿ ಮತ್ತು ಪ್ರವೇಶ ಪ್ರಕ್ರಿಯೆಯು ಒಳಮೀಸಲಾತಿಯ ಆಧಾರದ ಮೇಲೆ ನಡೆಯುತ್ತದೆ. ಗುಂಪು 1ರಲ್ಲಿ ಯಾವುದೇ ಖಾಲಿ ಹುದ್ದೆಗಳು ಭರ್ತಿಯಾಗದಿದ್ದರೆ, ಅವುಗಳನ್ನು ಗುಂಪು 2ರ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಗುಂಪು 2ರಿಂದ ಭರ್ತಿಯಾಗದಿದ್ದರೆ, ಗುಂಪು 3ರ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಎಲ್ಲ ಗುಂಪುಗಳಲ್ಲಿ ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಆ ಖಾಲಿ ಹುದ್ದೆಗಳನ್ನು ಮುಂದುವರೆಸಲಾಗುತ್ತದೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 2)

ಮಧ್ಯಮ ಸವಲತ್ತು ಪಡೆದಿರುವ 17 ಇತರ ಜಾತಿಗಳೊಂದಿಗೆ ಗುಂಪು 2ರಲ್ಲಿ ಮಾದಿಗ ಸಮುದಾಯವನ್ನು ಸೇರಿಸಲಾಗಿದ್ದು, ಇವರಿಗೆ 9% ಮೀಸಲಾತಿ ನೀಡಲಾಗಿದೆ. ಉತ್ತಮ ಸವಲತ್ತುಗಳನ್ನು ಪಡೆದಿರುವುದಾಗಿ ಕಂಡುಬಂದಿರುವ ಮಾಲ ಮತ್ತು ಇತರ 25 ಜಾತಿಗಳು ಗುಂಪು 3ರಲ್ಲಿವೆ. ಇವುಗಳಿಗೆ 5% ಮೀಸಲಾತಿ ಇದೆ. ಉಳಿದ 1% ಮೀಸಲಾತಿಯನ್ನು ಗುಂಪು 1ಕ್ಕೆ ಮೀಸಲಿಡಲಾಗಿದೆ; ಇದರಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ 15 ಜಾತಿಗಳಿವೆ.

ಆಂಧ್ರದಲ್ಲಿ ಒಳಮೀಸಲಾತಿಯ ಮಹತ್ವ

2011ರ ಜನಗಣತಿಯ ಪ್ರಕಾರ ಆಂಧ್ರದಲ್ಲಿನ ಎಸ್‌ಸಿಗಳ ಪೈಕಿ ಮಾದಿಗರು ಸುಮಾರು 48.27% (67.02 ಲಕ್ಷ), ಮಾಲರು ಸುಮಾರು 40.11% (49.43 ಲಕ್ಷ) ಇರುವುದು ಕಂಡುಬಂದಿದೆ. ಆದರೂ ಸರ್ಕಾರಿ ಉದ್ಯೋಗಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದೆ.

ಡೇಟಾ ಆಧಾರ: 1991ರ ಡೇಟಾದಂತೆ, ಆಂಧ್ರಪ್ರದೇಶದ SC ಉದ್ಯೋಗಿಗಳಲ್ಲಿ ಮಾಲರು 69% ಪ್ರಾತಿನಿಧ್ಯ ಹೊಂದಿದ್ದರೆ, ಮಾದಿಗರು ಕೇವಲ 22.7% ಮಾತ್ರ ಹೊಂದಿದ್ದರು. ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಮಾಲರಿಗೆ 54.4% ಮತ್ತು ಮಾದಿಗರಿಗೆ 34.6% ಹುದ್ದೆಗಳು ದೊರೆತಿವೆ. ರಾಜ್ಯ ಸಾರ್ವಜನಿಕ ವಲಯದಲ್ಲಿ ಮಾಲರಿಗೆ 64.5% ಮತ್ತು ಮಾದಿಗರಿಗೆ 32.4% ಉದ್ಯೋಗಗಳು ಸಿಕ್ಕಿವೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಮಾಲರಿಗೆ 43.7% ಮತ್ತು ಮಾದಿಗರಿಗೆ 37.3% ಹುದ್ದೆಗಳು ದೊರೆತಿವೆ. ಈ ಅಸಮಾನತೆಯಿಂದಾಗಿ, ಮಾದಿಗ ಸಮುದಾಯವು ಒಳಮೀಸಲಾತಿಯ ಮೂಲಕ ತಮಗೆ ಸಮಾನ ಅವಕಾಶಗಳನ್ನು ಕೊಡಬೇಕೆಂದು ಒತ್ತಾಯಿಸಿತ್ತು.

ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ

ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ(Scheduled Castes – SC) ಮೀಸಲಾತಿಯನ್ನು ಒಳವಿಭಾಗ ಮಾಡಲು (Sub-categorization) 2025ರಲ್ಲಿ ರಾಜ್ಯ ಸರ್ಕಾರವು ಒಂದು ಆದೇಶವನ್ನು(Ordinance) ಜಾರಿಗೊಳಿಸಿತು. ಈ ಆದೇಶವು 59 ಪರಿಶಿಷ್ಟ ಜಾತಿಗಳನ್ನು ಜನಸಂಖ್ಯೆ, ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆ ಮತ್ತು ಸಾಮಾಜಿಕ ಒಗ್ಗಟ್ಟಿನ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಿದೆ. ಈ ವರ್ಗೀಕರಣವು ಶಿಕ್ಷಣ, ಉದ್ಯೋಗ ಮತ್ತು ಇತರ ಸರ್ಕಾರಿ ಸೌಲಭ್ಯಗಳಲ್ಲಿ ಮೀಸಲಾತಿಯ ಸಮಾನ ಹಂಚಿಕೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.

ವರ್ಗೀಕರಣದ ಕೆಲಸ ಕೈಗೊಳ್ಳಲು ಆಂಧ್ರಪ್ರದೇಶ ಸರ್ಕಾರವು 2024ರಲ್ಲಿ ನಿವೃತ್ತ IAS ಅಧಿಕಾರಿ ರಾಜೀವ್ ರಂಜನ್ ಮಿಶ್ರಾ ಅವರ ನೇತೃತ್ವದಲ್ಲಿ ಒಂದು ಏಕಸದಸ್ಯ ಆಯೋಗವನ್ನು ರಚಿಸಿತು. ಈ ಆಯೋಗವು 13 ಜಿಲ್ಲೆಗಳಿಂದ (ಈಗ 26 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ) ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿ, 2025ರ ಮಾರ್ಚ್ 10ರಂದು ವರದಿಯನ್ನು ಸಲ್ಲಿಸಿತ್ತು. ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಉಪ ವರ್ಗೀಕರಣ ಮಾಡುವ ಸುಗ್ರೀವಾಜ್ಞೆಯ ಪ್ರಸ್ತಾಪವನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಚಿವ ಸಂಪುಟವು ಏಪ್ರಿಲ್ 15ರಂದು ಅನುಮೋದಿಸಿತ್ತು.

rajeev ranjan mishra
ನಿವೃತ್ತ IAS ಅಧಿಕಾರಿ ರಾಜೀವ್ ರಂಜನ್ ಮಿಶ್ರಾ

ಆಂಧ್ರಪ್ರದೇಶದಲ್ಲಿ SCಗಳಿಗಿರುವ ಒಟ್ಟು 15% ಮೀಸಲಾತಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ:

ಗುಂಪು 1: ಅತ್ಯಂತ ಹಿಂದುಳಿದ ಉಪಜಾತಿಗಳು (ರೆಲ್ಲಿ ಉಪಜಾತಿ); 1% ಮೀಸಲಾತಿ.
ಜಾತಿಗಳ ಸಂಖ್ಯೆ: 12 (ಉದಾ: ಬಾವುರಿ, ಚಚಾಟಿ, ಚಂದಾಲ, ದಂಡಾಸಿ, ಡೊಮ್, ಘಾಸಿ, ಗೊಡಗಾಲಿ, ಹತರ್, ಪಾಕಿ, ಪಾಮಿಡಿ, ರೆಲ್ಲಿ, ಸಪ್ರು). SC ಜನಸಂಖ್ಯೆಯಲ್ಲಿ 2.25%ರಷ್ಟು ಈ ಸಮುದಾಯದವರಿದ್ದಾರೆ. ಈ ಗುಂಪಿನ ಜಾತಿಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವು ಎಂದು ಪರಿಗಣಿಸಲಾಗಿದೆ.

ಗುಂಪು 2: ಹಿಂದುಳಿದ ಉಪಜಾತಿಗಳು (ಮಾದಿಗ ಉಪಜಾತಿ); 6.5% ಮೀಸಲಾತಿ.
ಜಾತಿಗಳ ಸಂಖ್ಯೆ: 18 (ಉದಾ: ಆರುಂದತಿಯಾರ್, ಬಿಂದಲ, ಚಮಾರ್, ಚಂಭಾರ್, ದಕ್ಕಲ್, ಧೋರ್, ಗೊಡರಿ, ಗೋಸಂಗಿ, ಜಗ್ಗಲಿ, ಜಂಬುವುಲು, ಕೊಲುಪುಲವಂದಲು, ಮಾದಿಗ, ಮಾದಿಗ ದಾಸು, ಮಾಂಗ್, ಮಾಂಗ್ ಗಾರುಡಿ, ಮಾತಂಗಿ, ಸಮಗಾರ, ಸಿಂಧೊಳ್ಳು). SC ಜನಸಂಖ್ಯೆಯಲ್ಲಿ 41.56%ರಷ್ಟು ಈ ಗುಂಪಿನ ಸಮುದಾಯದವರಿದ್ದಾರೆ. ಈ ಗುಂಪಿನ ಜಾತಿಗಳು ಮಧ್ಯಮ ಮಟ್ಟದ ಹಿಂದುಳಿದಿರುವಿಕೆಯನ್ನು ಹೊಂದಿವೆ.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

ಗುಂಪು 3: ತುಲನಾತ್ಮಕವಾಗಿ ಕಡಿಮೆ ಹಿಂದುಳಿದ ಉಪಜಾತಿಗಳು (ಮಾಲ ಉಪಗುಂಪು); 7.5% ಮೀಸಲಾತಿ. ಜಾತಿಗಳ ಸಂಖ್ಯೆ: 29 (ಉದಾ: ಆದಿ ದ್ರಾವಿಡ, ಅನಮುಕ್, ಅರಯ ಮಾಲ, ಅರ್ವ ಮಾಲ, ಬರಿಕಿ, ಬ್ಯಾಗರ, ಚಲವಾದಿ, ಎಲ್ಲಾಮಲವಾರ್, ಹೊಲೆಯ, ಹೊಲೆಯ ದಾಸರಿ, ಮದಾಸಿ ಕುರುವ, ಮಹಾರ್, ಮಾಲ, ಮಾಲ ದಾಸರಿ, ಮಾಲ ದಾಸು, ಮಾಲ ಹನ್ನೈ, ಮಾಲ ಜಂಗಂ, ಮಾಲ ಮಸ್ತಿ, ಮಾಲ ಸಾಲೆ, ಮಾಲ ಸನ್ಯಾಸಿ, ಮನ್ನೆ, ಮುಂಡಾಲ, ಸಂಬನ್, ಯತಾಲ, ವಲ್ಲುವನ್, ಆದಿ ಆಂಧ್ರ, ಮಸ್ತಿ, ಮಿತಾ ಅಯ್ಯಾಲವರ್, ಪಂಚಮ). SC ಜನಸಂಖ್ಯೆಯಲ್ಲಿ 53.97%ರಷ್ಟು ಮಂದಿ ಇಲ್ಲಿನ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಈ ಗುಂಪಿನ ಜಾತಿಗಳು ತುಲನಾತ್ಮಕವಾಗಿ ಕಡಿಮೆ ಹಿಂದುಳಿದಿವೆ ಎಂದು ಗುರುತಿಸಲಾಗಿದೆ.

200-ಪಾಯಿಂಟ್ ರೋಸ್ಟರ್ ವ್ಯವಸ್ಥೆ: ಈ ವರ್ಗೀಕರಣವನ್ನು ಜಾರಿಗೊಳಿಸಲು 200-ಪಾಯಿಂಟ್ ರೋಸ್ಟರ್ ವ್ಯವಸ್ಥೆಯನ್ನು ಅನುಸರಿಸಲಾಗಿದ್ದು, ಇದು ಎರಡು ಚಕ್ರಗಳಲ್ಲಿ (ಪ್ರತಿಯೊಂದೂ 1 ರಿಂದ 100 ರವರೆಗೆ) ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ 100 ಸರ್ಕಾರಿ ಉದ್ಯೋಗಗಳಿದ್ದರೆ 8 ಮಾಲ ಗುಂಪಿಗೆ, 6 ಮಾದಿಗ ಗುಂಪಿಗೆ, 1 ರೆಲ್ಲಿ ಗುಂಪಿಗೆ ನೀಡಲಾಗುತ್ತದೆ. 200 ಉದ್ಯೋಗಗಳಿದ್ದರೆ 15 ಮಾಲ ಗುಂಪಿಗೆ, 13 ಮಾದಿಗ ಗುಂಪಿಗೆ, 2 ರೆಲ್ಲಿ ಗುಂಪಿಗೆ ನೀಡಲಾಗುತ್ತದೆ.

ಜಿಲ್ಲಾಮಟ್ಟದ ಜಾರಿ: 2026ರಿಂದ ಈ ವರ್ಗೀಕರಣವನ್ನು ಜಿಲ್ಲಾಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುವುದು. ಆದರೆ ಪ್ರಸ್ತುತ ಇದು 2011ರ ಜನಗಣತಿಯ ಆಧಾರದ ಮೇಲೆ ರಾಜ್ಯವನ್ನು ಒಂದೇ ಘಟಕವಾಗಿ ಪರಿಗಣಿಸಿ ಜಾರಿಗೊಳಿಸಲಾಗುತ್ತಿದೆ.

ಕರ್ನಾಟಕದಲ್ಲಿ ಯಾಕಿಷ್ಟು ವಿಳಂಬ?

ನಮ್ಮ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳಿವೆ. 98 ಜಾತಿಗಳ ಸಮೀಕ್ಷೆ ನಡೆಸಲು ಯಾವ ತೊಡಕೂ ಇರುವುದಿಲ್ಲ, ಆದರೆ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸರ್ಟಿಫಿಕೇಟ್ ಪಡೆದಿರುವವರ ಜಾತಿಗಳನ್ನು ಗುರುತಿಸಿ ಸಮೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ಈ ಮೂರೂ ಜಾತಿ ಸರ್ಟಿಫಿಕೇಟ್‌ಗಳ ಮೂಲ ವರ್ಗೀಕರಣಕ್ಕಾಗಿ ರಾಜ್ಯದಲ್ಲಿ ಈಗಾಗಲೇ ಮೇ 5ರಿಂದ ಮಹತ್ವದ ಸಮೀಕ್ಷೆ ನಡೆಯುತ್ತಿದೆ. ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕವಾಗಿರುವ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್‌ ಏಕಸದಸ್ಯ ಆಯೋಗವು ನಾಳೆ (ಜೂನ್ 30) ಸಮೀಕ್ಷೆಯನ್ನು ಕೊನೆಗೊಳಿಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿನ ಸಂಕೀರ್ಣ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ.

WhatsApp Image 2025 06 27 at 17.14.48
ಜಸ್ಟಿಸ್ ಎಚ್‌.ಎನ್.ನಾಗಮೋಹನ ದಾಸ್

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾದಿಗ ಸಮುದಾಯದವರು ಆದಿ ಕರ್ನಾಟಕ ಹೆಸರಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಹೊಲೆಯ ಮತ್ತು ಛಲವಾದಿ ಸಮುದಾಯದವರು ಆದಿ ದ್ರಾವಿಡ ಹೆಸರಲ್ಲಿ ಸರ್ಟಿಫಿಕೇಟ್ ಪಡೆದಿದ್ದಾರೆ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಇದು ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿ ಮಾದಿಗ ಸಮುದಾಯವು ಆದಿ ದ್ರಾವಿಡವಾದರೆ ಹೊಲೆಯ ಮತ್ತು ಛಲವಾದಿ ಸಮುದಾಯದವರು ಆದಿ ಕರ್ನಾಟಕವಾಗಿದ್ದಾರೆ.

ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಹೊಲೆಯ, ಮಾದಿಗ ಸಮುದಾಯಗಳೆರಡೂ ಆದಿ ಕರ್ನಾಟಕ ಹೆಸರಲ್ಲಿ ಮೀಸಲಾತಿ ಪಡೆಯುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೊಗೆರ್ ಜಾತಿಯದವರು ಆದಿ ದ್ರಾವಿಡ ಹೆಸರಿನಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ.

ಕೆಜಿಎಫ್, ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ತಮಿಳು ಮೂಲದ ಪರಯ್ಯ ಜಾತಿಯವರು ಆದಿ ದ್ರಾವಿಡ ಹೆಸರಿನಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದಾರೆ. ಕೆಜಿಎಫ್‌ನ ಆಂಧ್ರ ಕಾಲೊನಿಯ ಆಂಧ್ರ ಮೂಲದ ಮಾದಿಗ ಸಮುದಾಯದವರೂ ಕೂಡ ಆದಿ ದ್ರಾವಿಡ ಜಾತಿ ಪ್ರಮಾಣಪತ್ರ ಹೊಂದಿದ್ದಾರೆ. ಆಂಧ್ರ ಮೂಲದ ಮೂಲ ಜಾತಿಯವರು ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಆದಿ ದ್ರಾವಿಡ ಹೆಸರಿನಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಬೆಂಗಳೂರು ನಗರ ಜಿಲ್ಲೆಯಲ್ಲಿ ನೆಲೆಸಿರುವ 16,331 ಆದಿ ಆಂಧ್ರರು, 3,00,739 ಆದಿ ದ್ರಾವಿಡರು, 4,46,146 ಆದಿ ಕರ್ನಾಟಕ(ಆಧಾರ: 2011 ಜನಗಣತಿ)ದವರು ಮೂಲದಲ್ಲಿ ಯಾವ ಜಾತಿಗಳವರಾಗಿದ್ದಾರೆಂದು ಗುರುತಿಸಿಕೊಳ್ಳಬೇಕಾಗಿದೆ. ಇಲ್ಲಿ ಹೊಲೆಯ, ಛಲವಾದಿ, ಮಾದಿಗ, ಮಾಲ, ಪರಯ್ಯ ಇತ್ಯಾದಿ ಜಾತಿಗಳ ಜನ ನೆಲಸಿದ್ದಾರೆ. ಇನ್ನುಳಿದಂತೆ, ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿನ ಗೊಂದಲವಿಲ್ಲ.

ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಹೆಸರಲ್ಲಿ ಸರ್ಟಿಫಿಕೇಟ್ ಹೊಂದಿರುವವರ ನಡುವೆ ಇಷ್ಟೊಂದು ವೈವಿಧ್ಯತೆ ಮತ್ತು ಭಿನ್ನತೆಗಳಿವೆ. 1956ರಲ್ಲಿ ಕರ್ನಾಟಕ ಏಕೀಕರಣವಾದಾಗ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟ ಪ್ರದೇಶ, ಕೊಡಗು, ಬಾಂಬೆ ಪ್ರೆಸಿಡೆನ್ಸಿ, ಹೈದರಾಬಾದ್ ನಿಜಾಮ ಆಳ್ವಿಕೆಗೆ ಒಳಪಟ್ಟ ಪ್ರದೇಶ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಇವುಗಳನ್ನು ಒಟ್ಟುಗೂಡಿಸಿ ಅಖಂಡ ಕರ್ನಾಟಕ ಉದಯವಾಯಿತು. ಮರಾಠಿ ಭಾಷೆ, ತೆಲುಗು ಭಾಷೆ, ತಮಿಳು ಭಾಷೆ ಮಾತನಾಡುವವರನ್ನು ಬಹುಸಂಖ್ಯಾತ ಕನ್ನಡ ಭಾಷೆ ಮಾತನಾಡುವ ಪ್ರದೇಶ ಹಾಗೂ ಜನರನ್ನು ಒಟ್ಟುಗೂಡಿಸಲಾಯಿತು. ಇದು ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳಲ್ಲಿನ ಭಿನ್ನತೆಗೆ ಕಾರಣವಾಯಿತು. ಈ ಭಿನ್ನತೆಯನ್ನು ನಿವಾರಿಸಿ, ಸರಿಯಾದ ಜಾತಿವಾರು ಅಂಕಿ ಅಂಶಗಳನ್ನು ಕಲೆಹಾಕಿ ಒಳ ಮೀಸಲಾತಿ ಜಾರಿಗೊಳಿಸುವ ಸವಾಲನ್ನು ಸರ್ಕಾರ ಕ್ರಮಬದ್ಧವಾಗಿ ನಿರ್ವಹಿಸಬೇಕಾಗುತ್ತದೆ.

ಕನ್ನಡ ಮಾತನಾಡುವ ಹೊಲೆಯ ಮತ್ತು ಮಾದಿಗ ಜಾತಿಗಳನ್ನು 1921ರ ಜನಗಣತಿಯ ತನಕ ಆಯಾ ಜಾತಿಯ ಹೆಸರುಗಳಲ್ಲಿ ಗಣತಿ ಮಾಡಲಾಗುತ್ತಿತ್ತು. ಈ ಎರಡು ಜಾತಿಗಳು ಭಿನ್ನವಾದ ಸ್ವರೂಪದಲ್ಲಿದ್ದು, ಅವುಗಳನ್ನು ಗುಂಪುಗಳಾಗಿ ಭಾಷೆಯ ಆಧಾರದಲ್ಲಿ ಅಂದಿನ ಮೈಸೂರು ಮಹಾರಾಜರು ಗುರುತಿಸಿದರು. ಅವರು ಹೊರಡಿಸಿರುವ ಆದೇಶದಲ್ಲಿ (ಸಂಖ್ಯೆ ಜಿ.2553-608-ಜಿಎಂ 66-2531 ದಿನಾಂಕ: 23 ಅಕ್ಟೋಬರ್ 1925) ‘ಆದಿ ಕರ್ನಾಟಕ’ ಎಂದು ಹೆಸರಿಸಲಾಯಿತು. ಅದೇ ರೀತಿ ತಮಿಳು ಮಾತನಾಡುವವರನ್ನು ಆದಿ ದ್ರಾವಿಡ ಎಂದೂ, ತೆಲುಗು ಮಾತನಾಡುವವರನ್ನು ಆದಿ ಆಂಧ್ರ ಎಂದು ಹೆಸರಿಸಲಾಗಿದೆ. ಈ ರೀತಿಯ ಬದಲಾವಣೆಯನ್ನು ಮದ್ರಾಸ್ ಸರ್ಕಾರದ ಆದೇಶ ಸಂಖ್ಯೆ: 817, 25ನೇ ಮಾರ್ಚ್ 1922ರಲ್ಲಿಯೂ ಕಾಣಬಹುದು. ಈ ಬದಲಾವಣೆಗಳನ್ನು 1931 ಹಾಗೂ ತದನಂತರ ಜನಗಣತಿಗಳಲ್ಲಿ ನಮೂದಿಸಲಾಗಿದೆ.

ಕನ್ನಡ ಮಾತನಾಡುವ ಹೊಲೆಯ, ಮಾದಿಗ ಎರಡು ಜಾತಿಗಳೂ 1925ರ ಸರ್ಕಾರಿ ಆದೇಶದ ಪ್ರಕಾರ ‘ಆದಿ ಕರ್ನಾಟಕ’ ಜಾತಿ ಸೂಚಕ ಪದಗಳನ್ನು ಅಳವಡಿಸಿಕೊಂಡಿವೆ. ಕೆಲವೆಡೆ ಕನ್ನಡ ಮಾತನಾಡುವ ಹೊಲೆಯ, ಮಾದಿಗ, ಮೊಗೆರ್ ಜಾತಿಗಳು ಮತ್ತು ತಮಿಳು ಮಾತನಾಡುವ ಪರಯ್ಯ ಹಾಗೂ ಮಾಲ ಜಾತಿಯವರು ಆದಿ ದ್ರಾವಿಡ ಜಾತಿ ಸೂಚಕ ಪದವನ್ನು ಆಳವಡಿಸಿಕೊಂಡಿದ್ದಾರೆ. ಈ ಕಾರಣದಿಂದ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳನ್ನು ಒಳಮೀಸಲಾತಿ ವರ್ಗೀಕರಣದಲ್ಲಿ ಯಾವ ಗುಂಪಿನಡಿ ಸೇರಿಸಬೇಕೆಂಬ ಗೊಂದಲ ಮತ್ತು ಜಿಜ್ಞಾಸೆ ಎದುರಾಗಿದೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಹಳಿ ತಪ್ಪಿದ್ದೆಲ್ಲಿ?

ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಎಂಬವು ಜಾತಿಗಳಲ್ಲ; ಕಾನೂನಿನ ಅಡಿಯಲ್ಲಿ ಜಾತಿಗಳ ಗುಂಪಿಗೆ ಸೃಷ್ಟಿಸಿದ ಸೂಚಕ ಪದಗಳು (Attributes of Legal fiction); ಸಂವಿಧಾನದ ಪರಿಚ್ಛೇದ 341(1)ರ ಅಡಿಯಲ್ಲಿ ಜಾತಿ ಎಂದು ಪರಿಗಣಿಸಲ್ಪಟ್ಟ ಪದಗಳು. ಇವುಗಳು ಸುಪ್ರೀಂ ಕೋರ್ಟಿನ ಪ್ರಕಾರ ಅಪ್ರಸ್ತುತವಾಗಿವೆ. ಅವುಗಳ ಅಡಿಯಲ್ಲಿ ಸೇರಿಸಲಾಗಿರುವ ಮೂಲ ಜಾತಿಗಳನ್ನು ಜಾತಿ, ರಕ್ತಸಂಬಂಧ, ಜಾತಿಗಳ ಮದುವೆ ಸಂಬಂಧಗಳು(Endogamy) ಮತ್ತು ಏಕರೂಪ ಲಕ್ಷಣಗಳ ಆಧಾರದ ಮೇಲೆ ಬಲಗೈ ಗುಂಪು, ಎಡಗೈ ಗುಂಪು ಹಾಗೂ ಇತರೆ ಗುಂಪುಗಳಡಿಯಲ್ಲಿ ವಿಂಗಡಿಸಬೇಕಾಗಿರುತ್ತದೆ.

ಮೇಲಿನ ಎಲ್ಲ ಕಾರಣಗಳಿಂದಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಮಾನದಂಡದ ಪ್ರಕಾರ ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿಯಾಗಲಿ ಅಥವಾ ಕಾಂತರಾಜ ಆಯೋಗದ ವರದಿಯಾಗಲಿ, ಒಳಮೀಸಲಾತಿ ವರ್ಗೀಕರಣಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಮರುಸಮೀಕ್ಷೆ ಅಗತ್ಯವಾಗಿತ್ತು. ಸರ್ಕಾರ ನೇಮಿಸಿದ ಜಸ್ಟಿಸ್ ಎಚ್‌.ಎನ್.ನಾಗಮೋಹನ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಒಳಮೀಸಲಾತಿ ವರ್ಗೀಕರಣಕ್ಕೆ ಕಸರತ್ತು ನಡೆಸುತ್ತಿದೆ. ನೆರೆಯ ರಾಜ್ಯಗಳಲ್ಲಿ ಇರದಷ್ಟು ಸಂಕೀರ್ಣತೆ ಕರ್ನಾಟಕದಲ್ಲಿ ಇದೇ ಎಂಬುದು ವಾಸ್ತವ. ಆದರೂ ಮತ್ತಷ್ಟು ವಿಳಂಬ ಮಾಡದೆ ಬಹುಬೇಗ ಒಳಮೀಸಲಾತಿ ಜಾರಿಯಾಗಲಿ ಎಂಬುದಷ್ಟೇ ಎಲ್ಲರ ಆಶಯ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...