ವಿಶ್ಲೇಷಣೆ | ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಸಾಗಿಬಂದ ದಾರಿ

Date:

ಅರಸೊತ್ತಿಗೆಯ ಸಂಸ್ಥಾನದ ಹೆಸರು ‘ಮೈಸೂರು’ ಎಂದಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 26 ವರ್ಷ ಕಳೆದ ನಂತರವಷ್ಟೇ ಅದು ತನ್ನ ನಾಮಾಂಕಿತವನ್ನು ಬದಲಾಯಿಸಿ “ಕರ್ನಾಟಕ”ವೆಂದು ಕರೆಸಿಕೊಂಡ ದಿನ ನವೆಂಬರ್ 1, 1973. ಇದರ ಹಿನ್ನೆಲೆಯಲ್ಲಿ ಇದ್ದವರು ಅಂದಿನ ಧೀಮಂತ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು. ಅವರದು ಹಂಪುಗಾಲ. ಅನುಷ್ಠಾನಗೊಂಡ ಜನೋಪಯೋಗಿ ಕಾರ್ಯಗಳು ಹತ್ತು ಹಲವಾರು. ಅವುಗಳನ್ನು ಕರ್ನಾಟಕದ ಜನ ಇಂದಿಗೂ ಸ್ಮರಿಸಿಕೊಂಡು ಅರಸರನ್ನು ಮೆಚ್ಚಿ ಕೊಂಡಾಡುವರು. ‘ಕರ್ನಾಟಕ’ ಉದಯವಾಗಿ 50 ವರ್ಷಗಳೇ ಆಗಿ ಹೋಗಿವೆ. ಈ ಅವಧಿಯಲ್ಲಿ ಕಾವೇರಿ- ಕೃಷ್ಣೆಯರಲ್ಲಿ ಹರಿದ ನೀರೆಷ್ಟೋ ಲೆಕ್ಕವಿಟ್ಟವರಾರು!?

ಎಲ್. ಜಿ. ಹಾವನೂರ್ ಆಯೋಗ

ಈ ಐವತ್ತು ವರ್ಷಗಳ ಕಾಲಾವಧಿಯಲ್ಲಿ, ಒಂದು ಮಿತಿಯಲ್ಲಿ ನಾನಾ ಬಗೆಯ ಪ್ರಗತಿ ಕಂಡ ರಾಜ್ಯ ಕರ್ನಾಟಕ ಎಂಬುದರಲ್ಲಿ ಎರಡು ಮಾತಿಲ್ಲ. ದಿವಂಗತ ಡಿ. ದೇವರಾಜ ಅರಸು ಅವರು ಸಾಮಾಜಿಕ ಬದಲಾವಣೆಗಾಗಿ ಹಪಾಹಪಿಸಿ ಹಮ್ಮಿಕೊಂಡ ಮಹತ್ಕಾರ್ಯವೆಂದರೆ, ಅದು ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕೊಡಬೇಕೆಂಬ ಹಂಬಲ. ಅವರಲ್ಲಿ ಶೋಷಿತ ವರ್ಗಗಳನ್ನು ಕುರಿತು ಇದ್ದ ಅಂತಃಕರಣ- ಹಲವು ಸಮುದಾಯಗಳು ತಮ್ಮ ಜಾತಿ, ವೃತ್ತಿ, ಬದುಕುವ ರೀತಿ ಇವೆಲ್ಲಾ ಅಪಮಾನದ, ಬಚ್ಚಿಟ್ಟುಕೊಂಡೇ ಜೀವ ಸವೆಸುವ ವಿಷಯಗಳಾಗಿರುತ್ತವೆ, ತೀಕ್ಷ್ಣವಾದ ಸಾಮಾಜಿಕ ದೋಷದ ಭಾರದಿಂದಾಗಿ ಅವರಿಗೆ ಆರ್ಥಿಕ ಸ್ವಾವಲಂಬನೆ ಎಂದೆಂದಿಗೂ ಸಾಧ್ಯವಾಗಿರುವುದಿಲ್ಲ ಎಂಬ ಭಾವನೆ ಅರಸರ ಆಂತರ್ಯದಲ್ಲಿ ಅಡಗಿ ಕುಳಿತಿತ್ತು. ರಾಜಕೀಯ ಕ್ಷೇತ್ರದೊಳಗೆ ರಾಜ ಗಾಂಭೀರ್ಯದಲ್ಲಿ ದಾಪುಗಾಲನ್ನಿಡುತ್ತಾ ನಡೆದು ಬಂದ ಅರಸು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಪ್ರಮುಖವಾಗಿ ಕೈಗೆತ್ತಿಕೊಂಡ ಕೆಲಸವೆಂದರೆ ಆಗಸ್ಟ್ 8, 1972 ರಂದು ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದ್ದು. ಅದರ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಲಕ್ಷ್ಮಣ್ ಜಿ. ಹಾವನೂರ್ ಅವರು. ಅಂದಿಗೆ ಪ್ರಸಿದ್ಧ ವಕೀಲರಾಗಿದ್ದು, ಶೋಷಿತ ವರ್ಗಗಳ ಅಭ್ಯುದಯಕ್ಕಾಗಿ ಅನವರತ ಹಂಬಲಿಸುತ್ತಿದ್ದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾವನೂರ್ ಅವರು, ಸ್ವತಃ ಜಾತಿ ವ್ಯವಸ್ಥೆಯ ಕಹಿಯನ್ನು ಅನುಭವಿಸಿದ್ದವರು. ಅವರು ತಾವು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಸಂದರ್ಭದಲ್ಲಿ ಆಡಿರುವ ಈ ಮಾತುಗಳು ಜಾತಿ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. “ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವಂತ ಅವಕಾಶ ಸಂವಿಧಾನದಲ್ಲಿ ಇಲ್ಲ. ಕಥಾಚಿತ್ ಈ ವ್ಯವಸ್ಥೆಯನ್ನು ನಿರ್ಮೂಲ ಮಾಡಿದರೆ ನಮ್ಮ ಸಂವಿಧಾನದ ಪರಿವಿಡಿ ಹಾಗೂ ಇನ್ನಿತರ ಕಾನೂನುಗಳು ಈಗಿರುವುದಕ್ಕಿಂತ ಅರ್ಧ ಭಾಗದಷ್ಟು ಕಡಿಮೆಯಾಗುತ್ತವೆ.”

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಪರಿಣಾಮ ತಳ ಸಮುದಾಯಗಳು ಅನುಭವಿಸುತ್ತಿರುವ ನೋವು, ಯಾತನೆ, ಅಸಮಾನತೆ, ತರತಮ ಭಾವಗಳನ್ನು ನಿರ್ಮೂಲ ಮಾಡುವ ದಿಸೆಯಲ್ಲಿ ನಿವಾರಣಾ ಕ್ರಮಗಳನ್ನು ಸಂವಿಧಾನದಲ್ಲಿ ಬಾಬಾ ಸಾಹೇಬರು ಅಳವಡಿಸಿರುವರು. ಆದರೆ ಜಾತಿ ವ್ಯವಸ್ಥೆಯನ್ನು ಅವುಗಳಿಂದ ಮೂಲೋತ್ಪಾಟನೆ ಮಾಡಲು ಅವಕಾಶವಿಲ್ಲ! ಹಾಗೊಂದು ವೇಳೆ, ಜಾತಿ ವ್ಯವಸ್ಥೆ ನಿರ್ಮೂಲ ಆದಲ್ಲಿ ಅಂತಹ ವ್ಯವಸ್ಥೆಯ ದುಷ್ಪರಿಣಾಮದಿಂದ ಉಂಟಾಗಿರುವ ಅಸಮತೋಲನವನ್ನು ಪರಿಹರಿಸಲು ಈಗಿರುವ ಅರ್ಧದಷ್ಟು ಕಾನೂನುಗಳು ಅಂತ್ಯಗೊಳ್ಳುತ್ತವೆ ಎಂಬುದೇ ಆ ಮಾತುಗಳಲ್ಲಿರುವ ಧ್ವನಿ ಮತ್ತು ಸಾರಾಂಶ. ಅಷ್ಟೇ ಅಲ್ಲದೆ ಅವು ದಾರ್ಶನಿಕ ಸ್ವರೂಪವನ್ನೂ ಪಡೆದುಕೊಂಡಿವೆ.

ಅಷ್ಟಕ್ಕೂ ಶೋಷಿತರನ್ನು ಕೈಹಿಡಿದೆತ್ತಲು ಮೀಸಲಾತಿಯೇ ಏಕೆ ಬೇಕು? ಮೀಸಲಾತಿಯೆಂಬುದು ಶಾಶ್ವತವಲ್ಲ. ಅದೊಂದು ತಾತ್ಕಾಲಿಕ ವ್ಯವಸ್ಥೆ! ಇದು ಭಾರತಕಷ್ಟೇ ಸೀಮಿತವಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಸಿಂಹಳ, ಮಲೇಶಿಯಾ ಮುಂತಾದ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತಿದೆ. ಪ್ರೊಟೆಕ್ಟೀವ್ ಡಿಸ್ಕ್ರಿಮಿನೇಷನ್, ಆಂಟಿ ಡಿಸ್ಕ್ರಿಮಿನೇಷನ್, ಅಫರ್ ಮೇಟಿವ್ ಆಕ್ಷನ್ ಮತ್ತು ಸೋಶಿಯಲ್ ಜಸ್ಟಿಸ್ ಎಂಬವುಗಳೇ ಅವು. ಸಾಮಾಜಿಕ ನ್ಯಾಯವೆಂಬುದಕ್ಕೆ ‘ಸರ್ವರಿಗೂ ಸಮಪಾಲು- ಸಮ ಬಾಳು’ ಎಂಬ ವಿಶಾಲ ಅರ್ಥವಿದೆ. ದೇಶದ ಸಾಮಾಜಿಕ ರೋಗಗ್ರಸ್ತ ಜಾತಿ ವ್ಯವಸ್ಥೆಯಲ್ಲಿ ಅಸಮಾನತೆ, ತಾರತಮ್ಯ ತಾಂಡವವಾಡುತ್ತಿದೆ. ಇದನ್ನು ಕೊಂಚಮಟ್ಟಿಗಾದರೂ ಹೋಗಲಾಡಿಸುವ ಹಿನ್ನೆಲೆಯಲ್ಲಿ ಮೂಡಿ ಬಂದುದೆ ‘ಆದ್ಯತಾ ಉಪಚಾರ ತತ್ವ’. ಈ ತತ್ವದ ಹಿನ್ನೆಲೆಯೇ ‘ಮೀಸಲಾತಿ’. ಮೈಸೂರು ಸಂಸ್ಥಾನದ ಆಳರಸರ ಅವಧಿಯಲ್ಲಿ ಮೀಸಲಾತಿ ಹುಟ್ಟು ಪಡೆದು, ಅದು ಸ್ವಾತಂತ್ರ್ಯ ಬಂದ ನಂತರದಲ್ಲಿಯೂ ರಾಜ್ಯಗಳ ಪುನರ್ವಿಂಗಡಣೆ ಆಗುವವರೆಗೂ ಚಾಲ್ತಿಯಲ್ಲಿತ್ತು. 1959ರ ಸಮಯದಲ್ಲಿ ಶಿಕ್ಷಣ ಪ್ರವೇಶಕ್ಕಾಗಿ ಹೊರಡಿಸಿದ ಎರಡು ಆದೇಶಗಳು ನ್ಯಾಯಾಲಯದಲ್ಲಿ ಅನೂರ್ಜಿತಗೊಂಡವು. ಆನಂತರ ಬಂದುದೆ ಡಾ. ನಾಗನಗೌಡ ಸಮಿತಿ. ಆ ಸಮಿತಿ ವರದಿಯ ಹಿನ್ನೆಲೆಯಲ್ಲಿ ಜಾರಿಗೆ ತಂದ ಮೀಸಲಾತಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಲಾಜಿ vs ಮೈಸೂರು ಪ್ರಕರಣದಲ್ಲಿ ಬಿದ್ದು ಹೋಯಿತು. ಈ ಸಂದರ್ಭದಲ್ಲೇ ಮೀಸಲಾತಿಯ ಕೋಟಾ ಶೇ.50ರ ಮಿತಿ ಮೀರಬಾರದು ಎಂಬ ಕಟ್ಟಾಜ್ಞೆಯನ್ನು ನ್ಯಾಯಾಲಯ ವಿಧಿಸಿತು. ಅದಾದ 10 ವರ್ಷಗಳ ನಂತರವೇ ಎಲ್.ಜಿ. ಹಾವನೂರ್ ಅವರ ಮೊದಲನೇ ಹಿಂದುಳಿದ ವರ್ಗಗಳ ಆಯೋಗ ರಚಿಸಿದ್ದು.

ಇದನ್ನೂ ಓದಿರಿ: ಮುಸ್ಲಿಮರಿಗೆ ಮೀಸಲಾತಿಯಲ್ಲೂ ಅನ್ಯಾಯ, ರಾಜಕೀಯದಲ್ಲೂ ಮೋಸ!

ಸ್ವತಂತ್ರ ಭಾರತದಲ್ಲಿ ಸಂವಿಧಾನ ಅನುಷ್ಠಾನಗೊಂಡ ನಂತರ ಉದ್ಯೋಗದಲ್ಲಿ ಸಾಕಷ್ಟು (adequate) ಪ್ರಾತಿನಿಧ್ಯ [ವಿಧಿ 16(4)] ಪಡೆಯದ ಹಿಂದುಳಿದ ವರ್ಗಗಳನ್ನು ಗುರುತಿಸಲು ಸಾಧ್ಯವಾಗುವ ಪರಿಭಾಷೆ ಎಂಬುದು ಇರಲಿಲ್ಲ. 1951ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ 15(4) ಮತ್ತು 29(2) ಎಂಬೆರಡು ವಿಧಿಗಳನ್ನು ಸೇರ್ಪಡೆ ಮಾಡಲಾಯಿತು. ತಿದ್ದುಪಡಿ ಅನ್ವಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಾಗರಿಕರನ್ನು ‘ಹಿಂದುಳಿದ ವರ್ಗ’ ಎಂದು ಕರೆಯಲಾಯಿತು.

ಹಾವನೂರು ಆಯೋಗ ಹಿಂದುಳಿದ ವರ್ಗಗಳ ನಾಗರಿಕರಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅಂಶಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಆಧರಿಸಿ ಧರ್ಮ ಮತ್ತು ಸಾಮಾಜಿಕ ನ್ಯೂನತೆ, ಆರ್ಥಿಕ ಪರಿಸ್ಥಿತಿ, ಶಿಕ್ಷಣ, ವೃತ್ತಿ, ರಾಜಕೀಯ ಸ್ಥಾನ ಮಾನ, ವಸತಿ, ಕಲೆ- ಸಂಸ್ಕೃತಿ ಇವೇ ಮುಂತಾದ ವಿಷಯಗಳನ್ನು ಒಳಗೊಂಡ ಪ್ರಶ್ನಾವಳಿಗಳನ್ನು ರೂಪಿಸಿ 783 ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಂಘ- ಸಂಸ್ಥೆಗಳಿಂದ ಉತ್ತರಗಳನ್ನು ಅದು ಪಡೆದುಕೊಂಡಿದೆ.

havanur
ಹಿಂದುಳಿದ ವರ್ಗಗಳ ಸಾಮಾಜಿಕ- ಆರ್ಥಿಕ ಏಳಿಗೆಗಾಗಿ ಇಡೀ ದೇಶಕ್ಕೆ ಮಾದರಿಯಾಗುವಂತಹ ವರದಿ ರೂಪಿಸಿದ ಕೀರ್ತಿ ಎಲ್.ಜಿ.ಹಾವನೂರು ಅವರಿಗೆ ಸಲ್ಲುತ್ತದೆ. ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ 1975ರ ನವೆಂಬರ್ 19ರಂದು ಹಾವನೂರು ಅವರು ವರದಿ ಸಲ್ಲಿಸಿದ್ದರು

ಆಯೋಗ ಪ್ರತೀ ತಾಲೂಕಿಗೆ ಕನಿಷ್ಠ ಒಂದರಂತೆ 193 ಗ್ರಾಮಗಳು ಮತ್ತು ನಗರ/ ಪಟ್ಟಣ/ ಪುರಸಭಾ ವ್ಯಾಪ್ತಿಯಲ್ಲಿ 204 ಬ್ಲಾಕ್‌ಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 3,55,000 ಜನಸಂಖ್ಯೆಯನ್ನು ಒಳಗೊಂಡ 63,650 ಕುಟುಂಬಗಳನ್ನು ಸಮೀಕ್ಷೆ ಮಾಡಿದೆ. ಸಮೀಕ್ಷೆಯಲ್ಲಿ 171 ಜಾತಿ, ಬುಡಕಟ್ಟು ಮತ್ತು ಕೋಮುಗಳು ಗುರುತಾಗಿವೆ. ಇಂಥ ಸಮೀಕ್ಷೆಗೆ ಜಾಗತಿಕವಾಗಿ ಗೊತ್ತು ಪಡಿಸಿರುವ ಗರಿಷ್ಠ ಮಿತಿ ಶೇ.1 ರಷ್ಟಿದ್ದರೆ, ಆಯೋಗ ಶೇಕಡ 1.18ರಷ್ಟು ಸಮೀಕ್ಷೆಗೆ ಒಳಪಡಿಸಿರುವುದು ಗಮನಿಸಬೇಕಾದ ಅಂಶ.

ಮುಂದುವರೆದು, ಆಯೋಗ ಲೋಕಸಭೆ, ರಾಜ್ಯಸಭೆ, ವಿಧಾನಸಭೆ/ವಿಧಾನಪರಿಷತ್ ಸದಸ್ಯರು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾಮ ಪಂಚಾಯತ್, ಪುರಸಭೆ/ ನಗರಸಭೆಗಳ ಅಧ್ಯಕ್ಷರು ಮತ್ತು ಸದಸ್ಯರು, ವಕೀಲರು, ವೈದ್ಯರು, ಸಮಾಜ ಸೇವಾ ಕಾರ್ಯಕರ್ತರು ಮಾಜಿ ಮಂತ್ರಿಗಳು, ಮಾಜಿ ಶಾಸಕರುಗಳ ಮಾಹಿತಿಗಳನ್ನು ಸಂಗ್ರಹಿಸಿದೆ. ಹಾಗೆಯೇ ರಾಜ್ಯದಲ್ಲಿ ವ್ಯಾಪಕವಾಗಿ ಆಯೋಗ ಪ್ರವಾಸ ಮಾಡಿ ಜಾತಿ, ಕೋಮುಗಳಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳನ್ನು ಭೇಟಿ ಮಾಡಿ ಅವುಗಳ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳನ್ನು ಅರಿತುಕೊಂಡಿದೆ. ಅದೂ ಅಲ್ಲದೆ, 365 ಗಣ್ಯರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿರುವುದು ವಿಶೇಷ ಮತ್ತು ಅಗತ್ಯವಾಗಿ ಬೇಕಾದ ಅಂಶ ಕೂಡಾ.

ಮಾರ್ಚ್ 31,1972ಕ್ಕೆ ಅನ್ವಯಿಸುವಂತೆ ಸರಿಸುಮಾರು 98 ಇಲಾಖೆ, ಸಂಸ್ಥೆ, ನಿಗಮ- ಮಂಡಳಿಗಳಿಂದ ಸೇವಾ ವಿವರಗಳನ್ನು ಆಯೋಗ ಸಂಗ್ರಹಿಸಿದೆ. ಜಾತಿಗಳ ಶೇಕಡವಾರು ಅಂದಾಜು ಜನಸಂಖ್ಯೆ ಮತ್ತು ಅವು ಹೊಂದಿರುವ ಶೇಕಡವಾರು ಪ್ರಾತಿನಿಧ್ಯವನ್ನು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿ ಜಾತಿ / ಕೋಮುಗಳು ಸಾಕಷ್ಟು ಪ್ರಾತಿನಿಧ್ಯ ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಆಯೋಗ ಖಚಿತ ಪಡಿಸಿಕೊಂಡಿದೆ. ಈ ಅಂಕಗಣಿತ ಕ್ರಮದಿಂದ 89 ಜಾತಿ/ ಕೋಮುಗಳಲ್ಲಿ 21 ಜಾತಿ/ಕೋಮುಗಳು ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಂಡಿವೆ. ಬಂಟ, ಬ್ರಾಹ್ಮಣ, ಕೊಡವ, ಕ್ಷತ್ರಿಯ, ಲಿಂಗಾಯತ, ರಜಫೂತ್, ವೈಶ್ಯ, ಕ್ರೈಸ್ತ, ಜೈನ ಮುಂತಾದವುಗಳೇ ಅವು.

ಮತ್ತೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆಯೋಗ 1972ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಆಗಿರುವ ವಿವರಗಳನ್ನು ಸುಮಾರು 1869 ಪ್ರೌಢಶಾಲೆಗಳಿಂದ ಸಂಗ್ರಹಿಸಿದೆ. ಆ ವರ್ಷ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ರಾಜ್ಯ ಸರಾಸರಿ ಸಂಖ್ಯೆ ಪ್ರತಿಯೊಂದು ಸಾವಿರಕ್ಕೆ 169 ಇರುತ್ತದೆ. ಅದೇ ವರ್ಷದಲ್ಲಿ ಯಾವುದೇ ಜಾತಿ ಮತ್ತು ಕೋಮುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ರಾಜ್ಯ ಸರಾಸರಿಗಿಂತ ಕೆಳಮಟ್ಟದಲ್ಲಿ ಇದ್ದಲ್ಲಿ ಅಂಥಾ ಜಾತಿ/ ಕೋಮುಗಳನ್ನು ‘ಶೈಕ್ಷಣಿಕವಾಗಿ ಹಿಂದುಳಿದ’ವು ಎಂದು ಆಯೋಗ ತೀರ್ಮಾನಿಸಿದೆ. ಈ ಪರೀಕ್ಷಾ ವಿಧಾನದಲ್ಲಿ 18 ಜಾತಿ/ ಕೋಮುಗಳು ರಾಜ್ಯ ಸರಾಸರಿಗಿಂತ ಮೇಲ್ಮಟ್ಟದಲ್ಲಿವೆ ಎಂದು ಆಯೋಗ ಕಂಡುಕೊಂಡಿದೆ. ಅವುಗಳಲ್ಲಿ ಮುಖ್ಯವಾದವು- ಬ್ರಾಹ್ಮಣ, ಬಂಟ, ಕೊಡವ, ಕ್ಷತ್ರಿಯ, ಲಿಂಗಾಯತ, ಮರಾಠಾ ಮೊದಲಿಯಾರ್, ವೈಶ್ಯ, ಕ್ರೈಸ್ತ, ಸಿಖ್ ಮುಂತಾದವು.

ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?

ಎಂ. ಆರ್. ಬಾಲಾಜಿ vs ಮೈಸೂರು ಈ ಪ್ರಕರಣದಲ್ಲಿ ಮೀಸಲಾತಿ ಕೋಟಾ ಮಿತಿಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿರಿಸಿಕೊಂಡು ಹಾವನೂರು ಹೇಳಿರುವ ಮಾತುಗಳು ಹೀಗಿವೆ- “ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮಟ್ಟಿಗೆ ಸಂವಿಧಾನದ ಭಾಷೆ ಸರಳವೂ ಮತ್ತು ಸಂದಿಗ್ಧವೂ ಆಗಿದೆ. ಆದರೆ ಸಂವಿಧಾನದ ಆಶಯಗಳನ್ನು ವ್ಯಾಖ್ಯಾನಿಸುವ ನ್ಯಾಯಾಂಗದ ಭಾಷೆ ತೀರಾ ಸಂದಿಗ್ಧವೂ ತೊಡಕಿನದೂ ಆಗಿದೆ… ಮೀಸಲಾತಿಯ ವ್ಯಾಪ್ತಿಯನ್ನು ಶೇ. 50 ರಷ್ಟಕ್ಕೆ ಮಿತಿಗೊಳಿಸುವುದರಿಂದ ಸಂವಿಧಾನದ ವಿಧಿಗಳಾದ 15(4) ಮತ್ತು 16(4)ರ ಭಾಷೆಯನ್ನು ಮೀರಿ ನ್ಯಾಯಾಂಗ ಮುಂದೆ ಹೋಗಿದೆ; ಹೀಗಾದುದರಿಂದ ‘ಹಿಂದುಳಿದ ವರ್ಗ’ಗಳು ಎಂದು ಗುರುತಿಸುವ ಭಾರಿ ಜನಸಂಖ್ಯೆಯ ಜನಸಮುದಾಯಕ್ಕೆ ತಕ್ಕಂತೆ ಮೀಸಲಾತಿ ಕಲ್ಪಿಸಲು ಸರ್ಕಾರವನ್ನು ತಡೆಗಟ್ಟಿದೆ.” ಹಾವನೂರ್ ಆಯೋಗ ನ್ಯಾಯಾಲಯದ ಆಜ್ಞೆಯನ್ನೂ ಪರಿಪಾಲಿಸಿದೆ ಎಂಬುದೇ ವಿಶೇಷ (ಪ.ಜಾ-15, ಪ. ಪಂ-3, ಹಿಂ. ಕೋ-16, ಹಿಂ. ಜಾ-10, ಹಿಂ ಪಂ-6 =ಒಟ್ಟು – ಶೇ.50).

ಆಯೋಗವು ಮುಸ್ಲಿಂ ಸಮುದಾಯವನ್ನು ಒಟ್ಟಾರೆ ಹಿಂದುಳಿದವರ್ಗವೆಂದು ಪರಿಗಣಿಸಿಲ್ಲ. ಮುಸ್ಲಿಂ ಸಮುದಾಯ ಒಂದು ಧಾರ್ಮಿಕ ಅಲ್ಪಸಂಖ್ಯಾತ ವರ್ಗವಾಗಿರುವುದರಿಂದ ಒಂದು ವಿಶೇಷ ಗುಂಪು ಎಂದು ಪರಿಗಣಿಸಿ ಮೀಸಲಾತಿ ನೀಡಬಹುದು ಎಂದು ಆಯೋಗ ಸರ್ಕಾರಕ್ಕೆ ಸಲಹೆ ಮಾಡಿತ್ತು.

ಆಯೋಗವು ಮೂರು ವರ್ಷಕ್ಕೂ ಹೆಚ್ಚು ಕಾಲ ವ್ಯಯಿಸಿ ಸಮ ಸಮಾಜ ನಿರ್ಮಾಣದ ಕನಸು ಸಾಕಾರವಾಗುವ ದಿಸೆಯಲ್ಲಿ ಚಾರಿತ್ರಿಕ ಮತ್ತು ಅನನ್ಯ ಎನ್ನಬಹುದಾದ ವರದಿಯನ್ನು ಸರ್ಕಾರಕ್ಕೆ ನವೆಂಬರ್ 19, 1975ರಲ್ಲಿ ಸಲ್ಲಿಸಿತು.

ಹಿಂದುಳಿದ ವರ್ಗ ಎಂದು ಪರಿಗಣಿತವಾಗದ ಕೆಲವು ಸಮುದಾಯಗಳು ವರದಿಯನ್ನು ವಿರೋಧಿಸಿ ಹೋರಾಟಕ್ಕಿಳಿದವು. ಅವುಗಳಲ್ಲಿ ಪ್ರಮುಖವಾಗಿ ಲಿಂಗಾಯತ ಸಮುದಾಯವು ಒಂದು. ಆದರೆ ಆ ಹೋರಾಟಕ್ಕೆ ತಾತ್ವಿಕ ನೆಲೆಗಟ್ಟಾಗಲಿ ಅಥವಾ ವಸ್ತುನಿಷ್ಠ ಅಂಶಗಳ ಹಿನ್ನೆಲೆಯಾಗಲಿ ಇರಲಿಲ್ಲ. ಅದು ಕೇವಲ ರಾಜಕೀಯ ಸ್ವರೂಪದ ಆರ್ಭಟವಾಗಿತ್ತಷ್ಟೇ. ಆ ಸಂದರ್ಭದಲ್ಲಿ ವರದಿಯ ಪರ ವಿರೋಧಿಗಳ ನಡುವೆ ಮುಖಾಮುಖಿ ಚರ್ಚೆ ಮಾತ್ರ ನಡೆಯಲಿಲ್ಲ ಎಂಬುದು ಉಲ್ಲೇಖನೀಯ. ಹಾವನೂರು ಅವರು ವರದಿಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಹೇಳಿರುವ ಈ ಕೆಳಗಿನ ಮಾತುಗಳನ್ನು ಗಮನಿಸೋಣ. ಅವು ಮನನೀಯ ಹಾಗೂ ಮಾನವೀಯವೆನಿಸಿವೆ… ಕೆಳ ಜಾತಿಗಳವರಿಗೆ ತಾರತಮ್ಯದಿಂದ ರಕ್ಷಣೆ ನೀಡುವ ಪರಿಹಾರ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಅವರ ಅಭಿವೃದ್ಧಿ ಸಾಧ್ಯವಿಲ್ಲ. ಇಂತಹ ರಕ್ಷಣಾತ್ಮಕ ಪರಿಹಾರ ಸೌಕರ್ಯಗಳ ವಿರುದ್ಧ ನಡೆಯುವ ಪ್ರತಿಭಟನೆಗಳು ಅಸಮತೆಯನ್ನು ಮುಂದುವರೆಸಿಕೊಂಡು ಹೋಗುವ ಮನೋವೃತ್ತಿಗೆ ನಿದರ್ಶನ. ಎಂಥಾದರೂ ಇರಲಿ, ವರದಿ ಮಾತ್ರ ಹೊಸ ದಿಕ್ಕಿನ ಚರ್ಚೆಗೆ ವಸ್ತುವಾಗಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದಂತೂ ನಿಜ. ಸಾಮಾಜಿಕ ಬದ್ಧತೆಗೆ ಒಳಗಾಗಿದ್ದ ಬುದ್ಧಿಜೀವಿಗಳು ವರದಿಯ ಒಳ ತಿರುಳುಗಳನ್ನು ಪರಾಮರ್ಶಿಸಿ ಅದರ ಮಹತ್ವವನ್ನು ಹೆಚ್ಚಿಸಿದರು.

ವರದಿ ಸ್ವೀಕರಿಸಿದ ತಕ್ಷಣದಲ್ಲಿ ಸರ್ಕಾರ ಅದನ್ನು ಅನುಸರಿಸಿ ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗದಿದ್ದರೂ ಶಾಸಕಾಂಗದ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶವಿತ್ತು ಸಮಯ ನೋಡಿ ಫೆಬ್ರವರಿ 22, 1977ರಂದು ಮೀಸಲಾತಿ ಆದೇಶ ಹೊರಡಿಸಿತು. ವರದಿಯಲ್ಲಿ ಸೇರದ ‘ಹಿಂದುಳಿದ ವಿಶೇಷ ಗುಂಪು ‘ ರಚಿಸಿ, ಆ ವಿಶೇಷ ಗುಂಪಿಗೆ ಶೇ.5 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತು.

ಆನಂತರ, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರುತ್ತದೆ (ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ). ನ್ಯಾಯಾಲಯದಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಆಯೋಗ ಅಳವಡಿಸಿರುವ ಮಾನದಂಡಗಳ ಕುರಿತು ವಾದ ಪ್ರತಿವಾದ ನಡೆಯುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಹೊಸ ಆಯೋಗವನ್ನು ರಚಿಸುವುದಾಗಿ ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸುವುದರೊಂದಿಗೆ ಪ್ರಕರಣ ಅಂತ್ಯವಾಯಿತು.

ಹಾವನೂರು ವರದಿ ಮತ್ತು ಸಾರ್ವಜನಿಕ ಅಭಿಪ್ರಾಯ: ರಾಜ್ಯಾದ್ಯಂತ ವರದಿಯಲ್ಲಿ ಸೇರದ ಜಾತಿಗಳು ಮತ್ತು ಸಂಘ-ಸಂಸ್ಥೆಗಳು ವ್ಯಾಪಕವಾಗಿ ವಿರೋಧಿಸಿ ಪ್ರತಿಭಟನೆಗಿಳಿದವು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಜೆ.ಬಿ.ಮಲ್ಲಾರಾಧ್ಯರು ಪತ್ರಿಕಾಗೋಷ್ಠಿ ನಡೆಸಿ, “ರಾಜ್ಯದಲ್ಲಿರುವ ಲಕ್ಷಾಂತರ ಮಂದಿ ವೀರಶೈವರು ಅನಕ್ಷರಸ್ಥರಾಗಿದ್ದು ದಟ್ಟ ದಾರಿದ್ರ್ಯದಿಂದ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ವೀರಶೈವರನ್ನು ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ನಿರ್ಲಕ್ಷಿಸಿದೆ”. ತರಳಬಾಳು ಜಗದ್ಗುರುಗಳು ಹಾವನೂರು ವರದಿ “ರಾಜ್ಯಾಂಗಕ್ಕನುಗುಣವಾಗಿಲ್ಲ” ಎಂದು ಹೇಳಿ, “ಮನುಷ್ಯನು ಮನುಷ್ಯನೇ ಪ್ರಜೆಯೂ ಪ್ರಜೆಯೇ ಅವನಿಗೆ ಜಾತಿ ವಗೈರೆ ಕಾರಣಗಳಿಂದ ಯಾವ ವಿಶಿಷ್ಟತೆಯು ಇರಬೇಕಾಗಿಲ್ಲ” ಎಂದು ಹೇಳಿ ಹಾವನೂರು ವರದಿಯು ವೀರಶೈವರಿಗೆ ಅಷ್ಟೇ ಅಲ್ಲ; ಸರ್ವ ಭಾರತೀಯ ಬೆಳವಣಿಗೆಗೆ, ಭದ್ರತೆಗೆ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. ಶಾಸಕರಾಗಿದ್ದ ಭೀಮಣ್ಣ ಖಂಡ್ರೆ ಅವರು ವರದಿಯನ್ನು ವಿಧಾನ ಸಭಾಂಗಣದಲ್ಲೇ ಸುಡುವ ಕ್ಷುಲ್ಲಕ ಕೆಲಸವನ್ನೂ ಮಾಡಿದರು.

ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?

ಹಾವನೂರು ವರದಿಯನ್ನು ವಿರೋಧಿಸುವುದರ ನಡುವೆಯೂ ಕೆಲವು ಪ್ರಜ್ಞಾವಂತರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಮಾಜಿ ಸಚಿವ ಜಿ.ಬಿ. ಶಂಕರ್ ರಾವ್ ಪ್ರೊ. ಧರ್ಮಲಿಂಗಂ, ಎಂ.ಪಿ. ಪ್ರಕಾಶ್ ಮುಂತಾದವರು ವರದಿಯನ್ನು ಸಮರ್ಥಿಸಿದರು.

ಒಟ್ಟಿನಲ್ಲಿ, ಸಂವಿಧಾನದ ವಿಧಿ 15(4) ಮತ್ತು ವಿಧಿ 16(4)ಕ್ಕೆ ಅನ್ವಯಿಸುವಂತೆ ಮೀಸಲಾತಿ ಕಲ್ಪಿಸಿದ ಅಂದಿನ ಸರ್ಕಾರದ ಧುರಂಧರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡರು. ವರದಿಗೆ ಕಾರಣರಾದ ಹಾವನೂರು ಕರ್ನಾಟಕದ ಮನೆ ಮನೆ ಮಾತಾದರು; ಅವರು ಸಲ್ಲಿಸಿದ ವರದಿ ಬಹುಜನರ ದೃಷ್ಟಿಯಲ್ಲಿ ಹಿಂದುಳಿದ ವರ್ಗಗಳ `ಬೈಬಲ್’ ಎನಿಸಿಕೊಂಡು ಮೆಚ್ಚುಗೆ ಪಡೆಯಿತು.

ಟಿ.ವೆಂಕಟಸ್ವಾಮಿ ಆಯೋಗ: ಕರ್ನಾಟಕ ಸರ್ಕಾರ ಸಲ್ಲಿಸಿದ ಮುಚ್ಚಳಿಕೆ ಅನ್ವಯ, ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಎರಡನೇ ಹಿಂದುಳಿದ ಆಯೋಗವನ್ನು ಟಿ.ವೆಂಕಟಸ್ವಾಮಿಯವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಅಲ್ಲದೆ 14 ಮಂದಿ ಸದಸ್ಯರನ್ನು ಕೂಡ ನೇಮಕ ಮಾಡಲಾಯಿತು.

ಆಯೋಗ ಹಿಂದುಳಿದಿರುವಿಕೆಯನ್ನು ಗುರುತಿಸಲು ಹಾಕಿ ಕೊಳ್ಳಬೇಕಾದ ಮಾನದಂಡಗಳು ಜಾತಿ ಮತ್ತು ಕೋಮುಗಳ ಜನಸಂಖ್ಯೆ, ಅವುಗಳ ಸಾಮಾಜಿಕ ಸ್ಥಿತಿಗಳಾದ ಕಸುಬು, ಶಿಕ್ಷಣ, ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಪ್ರಾತಿನಿಧ್ಯ, ವಸತಿ ಸೌಕರ್ಯ, ಕೌಟುಂಬಿಕ ಕಲ್ಯಾಣ ಕಾರ್ಯಕ್ರಮಗಳ ಅಳವಡಿಕೆ ಮತ್ತು ಕುಡಿತದ ವ್ಯಸನ ಇವುಗಳ ಬಗ್ಗೆ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಪ್ರಶ್ನಾವಳಿಗಳನ್ನು ಆಯೋಗ ಸಿದ್ದಪಡಿಸಿತ್ತು. ರಾಜ್ಯಾದ್ಯಂತ ಸುಮಾರು 714 ಸಂಘ -ಸಂಸ್ಥೆಗಳು ಮತ್ತು 6286 ವಿವಿಧ ವರ್ಗಗಳ ಗಣ್ಯ ವ್ಯಕ್ತಿಗಳಿಗೆ ಪ್ರಶ್ನಾವಳಿಗಳನ್ನು ನೀಡಿ ಅವುಗಳಲ್ಲಿ 425 ಸಂಘ- ಸಂಸ್ಥೆಗಳಿಂದ ಮತ್ತು 261 ವ್ಯಕ್ತಿಗಳಿಂದ, ಆಯೋಗವು ಪ್ರಶ್ನಾವಳಿಗಳಿಗೆ ಉತ್ತರಗಳನ್ನು ಪಡೆದುಕೊಂಡಿದೆ. ಹಾಗೆಯೇ ರಾಜ್ಯ ಸರ್ಕಾರದ ಸುಮಾರು 205 ಇಲಾಖಾ ಮುಖ್ಯಸ್ಥರುಗಳಿಂದ ಉತ್ತರಗಳನ್ನೂ ಸಹ ಪಡೆದುಕೊಂಡಿತ್ತು.

ಆಯೋಗವು ವಿಧಿ 15(4)ರಂತೆ ಪಟ್ಟಿ ಮಾಡಿದ ಜಾತಿಗಳನ್ನು ವಿವಿಧ ಕೋನಗಳಿಂದ ಪರಿಶೀಲಿಸಿ ವಿಧಿ 16(4)ರ ಅನ್ವಯ ಮೀಸಲಾತಿಗಾಗಿ ಶಿಫಾರಸು ಮಾಡಿದೆ, ಹಾಗೆ ಶೇಕಡವಾರು ಮೀಸಲಾತಿಯನ್ನು ಸಹ ಗುಂಪು ‘A’ ಗೆ ಶೇ. 14 ಗುಂಪು ‘B’ ಗೆ ಶೇ 13ರಷ್ಟನ್ನು ಮೀಸಲಾತಿ ಕೋಟಾ ನಿಗದಿ ಮಾಡಿದೆ. ಹಿಂದುಳಿದವರಿಗೂ ಬಡ್ತಿಯಲ್ಲಿ ಮೀಸಲಾತಿ ನೀಡಬೇಕೆಂದು ಆಯೋಗ ಶಿಫಾರಸು ಮಾಡಿದ್ದುದು ವಿಶೇಷ.

ಆಯೋಗ 1986ರ ಮಾರ್ಚ್ ತಿಂಗಳ ಅಂತ್ಯದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ರಾಜ್ಯಾದ್ಯಂತ ವರದಿಯು ಸಂಚಲನ ಉಂಟುಮಾಡಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಮೀಸಲಾತಿ ಪಟ್ಟಿಯಲ್ಲಿ ಸೇರದ ಜಾತಿಗಳೆಲ್ಲವೂ ಪ್ರತಿಭಟನೆಗಿಳಿದವು. ಪ್ರಮುಖ ರಾಜಕೀಯ ನಾಯಕರು ಮತ್ತು ಜಾತಿಗಳ ಸಂಘ- ಸಂಸ್ಥೆಗಳ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಸಂಪುಟದ ತೀರ್ಮಾನ: ಅಕ್ಟೋಬರ್ 7, 1986ರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರ್ಕಾರವು ವೆಂಕಟಸ್ವಾಮಿ ವರದಿಯನ್ನು ತಿರಸ್ಕರಿಸಿ ಹೊಸ ಆಯೋಗವನ್ನು ರಚಿಸಲು ತೀರ್ಮಾನಿಸಿತು. ಹೊಸ ಆಯೋಗ ವರದಿ ಸಲ್ಲಿಸುವವರೆಗೆ ತಾತ್ಕಾಲಿಕ ಮೀಸಲಾತಿ ಪಟ್ಟಿಯನ್ನು ಮೂರು ವರ್ಷಗಳ ಅವಧಿಗೆ, ಹಿಂದುಳಿದ ವರ್ಗಗಳನ್ನು 5 ಗುಂಪುಗಳಾಗಿ ವಿಂಗಡಿಸಿ ಹೊಸ ಆದೇಶವನ್ನು ಹೊರಡಿಸಿತು.

ನ್ಯಾ. ಒ. ಚಿನ್ನಪ್ಪರೆಡ್ಡಿ ಆಯೋಗ: ಸರ್ಕಾರ ಮೂರನೇ ಹಿಂದುಳಿದ ವರ್ಗಗಳ ಆಯೋಗವನ್ನು 1988ರಲ್ಲಿ ರಚಿಸಿತು. ಆಯೋಗದ ಅಧ್ಯಕ್ಷರನ್ನಾಗಿ ನ್ಯಾ ಒ.ಚಿನ್ನಪ್ಪ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಇದು ಏಕವ್ಯಕ್ತಿ ಆಯೋಗ.

chinnappa reddy 1
ಜಸ್ಟಿಸ್ ಚಿನ್ನಪ್ಪ ರೆಡ್ಡಿ

ಆಯೋಗವು ಹಾವನೂರು ಮತ್ತು ವೆಂಕಟಸ್ವಾಮಿ ಆಯೋಗಗಳು ಅನುಸರಿಸಿರುವ ಪದ್ಧತಿಗಳನ್ನು ಅವಲೋಕಿಸಿ ಮಾಹಿತಿಗಳನ್ನು ಪಡೆದುಕೊಂಡಿರುವುದು ವಿಶೇಷ. ಹಾವನೂರು ವರದಿ 1901, 1911, 1921 ಮತ್ತು 1931ರಲ್ಲಿ ನಡೆದ ಜನಗಣತಿಯ ದಶಕಗಳ ಅಂತರದ ಯೋಜಿತ ಜನಸಂಖ್ಯೆಯನ್ನು ಆಧರಿಸಿದ್ದು ಎಂದು ಚಿನ್ನಪ್ಪ ರೆಡ್ಡಿ ಆಯೋಗ ಎತ್ತಿ ತೋರಿಸಿದೆ. ಹಾಗೆಯೇ ಟಿ.ವೆಂಕಟಸ್ವಾಮಿ ಆಯೋಗವು ರಾಜ್ಯಾದ್ಯಂತ ನಡೆಸಿದ ಸಮಗ್ರ ಸಮೀಕ್ಷೆ ಕರಾರುವಾಕ್ಕಾಗಿರುವುದನ್ನೂ ಆಯೋಗ ಪ್ರಶಂಸಿಸಿದೆ.

ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?

ಹಿಂದುಳಿದಿರುವವರನ್ನು ಗುರುತಿಸುವಿಕೆ:

1. ಸಾಮಾಜಿಕ ಅಮಾನ್ಯತೆಯ ಆರ್ಥಿಕ ಮತ್ತು ಸಾಂಸ್ಕೃತಿಕ ದಾರಿದ್ರ್ಯ.

2. ಜಾತಿಯ ಪ್ರಸಕ್ತತೆ.

3. ಜಾತಿ: ಒಂದು ವಸ್ತು ಸ್ಥಿತಿ (ವಾಸ್ತವಿಕತೆ)

4. ಜಾತಿ, ಬಡತನ ಮತ್ತು ಅನಕ್ಷರತೆ.

5. ಜಾತಿ ಅಂತಸ್ತು: ಸಾಮಾನ್ಯ ತತ್ವ.

6. ಮೀಸಲಾತಿಯ ಧ್ಯೇಯ.

7. ಜಾತಿ/ ಕೋಮುಗಳ ಗುರುತಿಸುವಿಕೆ.

ಈ ಮೇಲಿನ ಎಲ್ಲಾ ಅಂಶಗಳ ಮೇಲೆ ಆಯೋಗ ಸೋದಾಹರಣವಾಗಿ ವಿಮರ್ಶೆ ಮಾಡಿದೆ. ಮೀಸಲಾತಿ ಧ್ಯೇಯದ ಬಗ್ಗೆ ಆಯೋಗ ಗಮನಾರ್ಹವಾಗಿ ದಾಖಲಿಸಿದೆ.

ರಾಜ್ಯದ ಯೋಜಿತ ಜಾತಿವಾರು ಜನಸಂಖ್ಯೆ:

ರಾಜ್ಯದ ಯೋಜಿತ ಜನಸಂಖ್ಯೆಯನ್ನು 1988ರಲ್ಲಿ ಇದ್ದಂತೆ 7 ವಿಭಾಗಗಳಾಗಿ ವಿಂಗಡಿಸಿ, ಅವುಗಳ ಶೇಕಡವಾರು ಮಾಹಿತಿಯನ್ನು ಸಹ ನೀಡಿದೆ. 10 ಲಕ್ಷಕ್ಕಿಂತ ಹೆಚ್ಚಿರುವ 11 ಪ್ರಮುಖ ಜಾತಿ/ ಕೋಮುಗಳು 3 ಲಕ್ಷದಿಂದ 10 ಲಕ್ಷದವರೆಗಿನ 9 ಪ್ರಮುಖ ಜಾತಿಗಳು, 1ರಿಂದ 3 ಲಕ್ಷದವರೆಗಿನ 10 ಜಾತಿಗಳು, ಮತ್ತು 1 ಲಕ್ಷಕ್ಕಿಂತ ಕಡಿಮೆ ಇರುವ 37 ಜಾತಿಗಳನ್ನು ಗುರುತಿಸಿದೆ. ಹಾಗೂ 34 ಜಾತಿಗಳ ಜನಸಂಖ್ಯೆ ಸದ್ಯ ದೊರಕದಿರುವುದನ್ನು ಹೇಳಿ, ಜಾತಿ ತಿಳಿಯದಿರುವ ಇತರೆಯವರ ಸಂಖ್ಯೆಯನ್ನು ಸಹ ಆಯೋಗ ವರದಿಯಲ್ಲಿ ಪ್ರಸ್ತುತ ಪಡಿಸಿದೆ. ಆಯೋಗ ಸಂಗ್ರಹಿಸಿರುವ ವಿಷಯಗಳಲ್ಲಿ ಪ್ರಮುಖವಾದುದೆಂದರೆ ಜಾತಿಗಳ ರಾಜಕೀಯ ಪ್ರಾತಿನಿಧ್ಯ ಗಮನಾರ್ಹವಾಗಿದೆ.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಮೂರು ವಿಭಾಗಗಳನ್ನಾಗಿ ಆಯೋಗ ವಿಂಗಡಿಸಿದೆ. ಪ್ರವರ್ಗ- 1 ಮತ್ತು ಪ್ರವರ್ಗ -2, ಇವನ್ನು ಹಿಂದುಳಿದ ಮತ್ತು ಅತಿ ಹಿಂದುಳಿದವುಗಳೆಂದು ಪರಿಗಣಿಸಿ ಅವುಗಳ ಸಂಖ್ಯಾ ಬಲಗಳನ್ನು ಆಧರಿಸಿ ವಿಂಗಡಿಸಿದೆ. ಹಾಗೆಯೇ, ಪ್ರವರ್ಗ- 3ಅನ್ನು ವೃತ್ತಿಪರ ಗುಂಪು ಎಂದು ವಿಂಗಡಿಸಲಾಗಿದೆ. ಪ್ರವರ್ಗ -1ಕ್ಕೆ ಶೇ. 5, ಪ್ರವರ್ಗ- 2ಕ್ಕೆ ಶೇ. 28 ಮತ್ತು ಪ್ರವರ್ಗ- 3ಕ್ಕೆ ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಿ ಆಯೋಗ ಶಿಫಾರಸು ಮಾಡಿದೆ.

ವರದಿ ಮಂಡನೆ: ಏಪ್ರಿಲ್ 7, 1990ರಂದು ಸರ್ಕಾರಕ್ಕೆ ನ್ಯಾ. ಚಿನ್ನಪ್ಪ ರೆಡ್ಡಿ ಅವರು ವರದಿಯನ್ನು ಸಲ್ಲಿಸಿದರು. ವರದಿಯನ್ನು 1990ರ ಜೂನ್‌ನಲ್ಲಿ ವಿಧಾನಸಭೆಯಲ್ಲಿ ಮಂಡಿಸಲಾಯಿತು. 1992ರ ತನಕ ವರದಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತೆ ವಿನಾ ವರದಿಗೆ ಪೂರಕವಾದ ಸರ್ಕಾರ ಯಾವುದೇ ಆದೇಶ ಹೊರಡಿಸಲಿಲ್ಲ. ಅಂದು ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿ ಆಗಿರುತ್ತಾರೆ. ವೀರೇಂದ್ರ ಪಾಟೀಲ್ ಅವರು ಪದಚ್ಯುತಗೊಂಡ ನಂತರ, ಸಾರೆಕೊಪ್ಪ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗುವರು. ಅವರ ಎರಡು ವರ್ಷದ ಕಾಲಾವಧಿಯಲ್ಲಿ ವರದಿಯ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದಿದ್ದುದು ಹಿಂದುಳಿದ ವರ್ಗಗಳ ‘ಚಾಂಪಿಯನ್’ಎಂದು ಕರೆಸಿಕೊಂಡಿದ್ದ ಬಂಗಾರಪ್ಪನವರಿಗೆ ಸಲ್ಲತಕ್ಕ ನಡೆಯಾಗಿರಲಿಲ್ಲ. ಸುಮಾರು ಎರಡು ವರ್ಷದ ಅವಧಿಯಲ್ಲಿ ಅವರೂ ಕೂಡ ಅಧಿಕಾರ ಕಳೆದುಕೊಂಡರು. ಆನಂತರ 1992 ನವಂಬರ್ ತಿಂಗಳಲ್ಲಿ ವೀರಪ್ಪ ಮೊಯ್ಲಿ ಅವರು ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ವರದಿಯ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೆ, 1994ರ ಪ್ರಾರಂಭದ ತಿಂಗಳುಗಳಲ್ಲಿ, ವರದಿ ಅನುಷ್ಠಾನಕ್ಕೆ ಮುಂದಾದರು. ವರದಿಯಲ್ಲಿ ಸೇರದ ಬಲಿಷ್ಠ ಸಮುದಾಯವೊಂದು, ಪ್ರತಿಭಟನೆಗೆ ಮುಂದಾಯಿತು. ಪ್ರತಿಭಟನೆಯ ಕಾವು ತೀವ್ರ ಸ್ವರೂಪದ ಹಂತಕ್ಕೆ ತಲುಪಿತು. ಮುಖ್ಯವಾಗಿ ಆ ಸಮಾಜದ ಮುಖಂಡ ನಟ ಎಂ. ಎಚ್. ಅಂಬರೀಶ್, ಸಮುದಾಯದ ಕುಲಗುರುಗಳು ಮತ್ತು ಪ್ರಮುಖ ರಾಜಕೀಯ ಮುಖಂಡರೊಬ್ಬರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದರ ಮೂಲಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಆ ಜಾತಿ ಮತ್ತು ಅದರ ಉಪಜಾತಿಗಳನ್ನು ಸೇರಿಸಲು ಪ್ರಬಲ ಹಕ್ಕೊತ್ತಾಯ ಮಂಡಿಸಿತು. ಹಾಗೆಯೇ ವರದಿಯಲ್ಲಿ ಸೇರಿರದ ಇನ್ನೂ ಹಲವಾರು ಜಾತಿಗಳು ಪ್ರತಿಭಟನೆಗಿಳಿದವು. ಪ್ರತಿಭಟನೆಗೆ ತಳಮಳಗೊಂಡ ವೀರಪ್ಪಮೊಯ್ಲಿ ಸರ್ಕಾರವು ವರದಿಯನ್ನು ಭಾಗಶಃ ಒಪ್ಪಿಕೊಂಡು ಅದರಲ್ಲಿ ಸೇರಿರದ ಮುಖ್ಯವಾಗಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಒಳಗೊಂಡಂತೆ ಇನ್ನೂ ಕೆಲವು ಜಾತಿಗಳನ್ನು ಸೇರಿಸಿ ಏಪ್ರಿಲ್ 20, 1994ರಂದು ಮೀಸಲಾತಿ ಆದೇಶ ಹೊರಡಿಸಿತು. ಮೀಸಲಾತಿ ಪ್ರಮಾಣವನ್ನು ಶೇ.73ಕ್ಕೆ ಹೆಚ್ಚಿಸಿತು.

veerapap moyli
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ

ನವೆಂಬರ್ 16, 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಕೋಟಾ ಶೇ. 50ರಷ್ಟನ್ನು ಮೀರಬಾರದೆಂದು ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ವಸ್ತುಸ್ಥಿತಿ ಹೀಗಿದ್ದರೂ, ಕಾಯ್ದೆ ತರುವುದರ ಮೂಲಕ ಒಟ್ಟಾರೆ ಮೀಸಲಾತಿಯನ್ನು ಶೇ. 73ಕ್ಕೆ ಹೆಚ್ಚಿಸಿದುದು ಬಲಿಷ್ಠರ ಬೆದರಿಕೆಗೆ ಮಣಿದು ಅರ್ಹ ಹಿಂದುಳಿದವರಿಗೆ ತೀವ್ರ ಅನ್ಯಾಯವೆಸಗಲಾಯಿತು.

ಮೀಸಲಾತಿ ಕೋಟಾ ಶೇ. 50ಕ್ಕಿಂತ ಹೆಚ್ಚು ಮಾಡಿರುವುದನ್ನು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ನ್ಯಾಯಾಲಯ ಮೀಸಲಾತಿ ಕೋಟಾವನ್ನು ಶೇ. 50ಕ್ಕೆ ಇಳಿಸಿ ಅಥವಾ ನ್ಯಾಯಾಲಯದ ವ್ಯತಿರಿಕ್ತ ಆಜ್ಞೆಯನ್ನು ಎದುರಿಸಿ ಎಂದಾಗ, ಅವಸರದಲ್ಲಿ, ಎಲ್ಲಾ ಐದು ಪ್ರವರ್ಗಗಳ ಮೀಸಲಾತಿ ಕೋಟಾವನ್ನು ಶೇ. 50ಕ್ಕೆ ಇಳಿಸಿ, ಮೀಸಲಾತಿಗೆ ಅರ್ಹರು ಮತ್ತು ಅನರ್ಹರನ್ನು ಸಮಾಧಾನಿಸಲು ಕ್ರಮ ಕೈಗೊಂಡು ಸೆಪ್ಟಂಬರ್ 17, 1994ರಂದು ಸರ್ಕಾರ ಮರು ಆದೇಶ ಹೊರಡಿಸಿತು. ಇದರಿಂದಾಗಿ, ಕರ್ನಾಟಕದ ಒಟ್ಟು ನಾಗರಿಕರಲ್ಲಿ ಮೀಸಲಾತಿಗೊಳಪಟ್ಟವರು ಶೇ. 95 ಕ್ಕಿಂತ ಹೆಚ್ಚು. ಸರ್ಕಾರದ ಓಲೈಕೆ ರಾಜಕಾರಣದ ಫಲದಿಂದ ಇಂದಿಗೂ ನ್ಯಾಯೋಚಿತವಾಗಿ ಸಿಗಬೇಕಾದ ಮೀಸಲಾತಿ ಕೋಟಾ ಸಿಗದೇ ನೋವು ಅನುಭವಿಸುತ್ತಿರುವವರು ಮಾತ್ರ ಹಿಂದುಳಿದ ವರ್ಗದವರು. ಸರ್ಕಾರದ ಈ ಘನ ಘೋರ ಅನ್ಯಾಯವನ್ನು ಇಂದಿಗೂ ಯಾವ ಹಿಂದುಳಿದ ವರ್ಗದವರು ಪ್ರಶ್ನಿಸುವ ಗೊಡವೆಗೆ ಹೋಗದಿರುವುದು ಮಾತ್ರ ಅಮಾಯಕತನವೋ ಅಥವಾ ಬಲಿಷ್ಠರ ಭಯವೋ ತಿಳಿಯದು!

ಇದನ್ನೂ ಓದಿರಿ: ಸತ್ಯ ಹೇಳಿ ಸಂಕಟಕ್ಕೆ ಸಿಲುಕಿದ ಮುಸ್ಲಿಮರಿವರು…

ಸರ್ವೋಚ್ಚ ನ್ಯಾಯಾಲಯ ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿರುವ ನಿರ್ದೇಶನದಂತೆ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಾಶ್ವತವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು, ರಚಿಸಿ ಕೊಂಡಿವೆ. ಆದರೆ, ಆಯೋಗದ ರಚನೆಗೆ ಕಾರಣವಾದ ಕಾಯ್ದೆಯಲ್ಲಿ ಹೇಳಲಾಗಿರುವ ಅಂಶಗಳನ್ವಯ ನಡೆದುಕೊಳ್ಳದಿರುವುದು ಕೂಡ ಹಿಂದುಳಿದ ವರ್ಗಗಳಿಗೆ ಬಲವಾದ ಪೆಟ್ಟು ಬಿದ್ದಿದೆ.

ರಾಜಕೀಯ ಮೀಸಲಾತಿ: ಒಕ್ಕೂಟ ಸರ್ಕಾರ, 1993ರಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ತರುವುದರ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುವಂತೆ ಹಿಂದುಳಿದವರಿಗೆ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿತು. ಆ ನಿಮಿತ್ತ ಕರ್ನಾಟಕದಲ್ಲಿಯೂ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುವಂತೆ ಹಿಂದುಳಿದವರಿಗೆ ಮೀಸಲಾತಿ ನೀಡಲಾಯಿತು. ಹೀಗೆ ನೀಡಲಾದ ಮೀಸಲಾತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನೂ ಒಳಗೊಂಡಿದಂತೆ ಒಟ್ಟಾರೆ ಮೀಸಲಾತಿ ಶೇ. 50ರ ಮಿತಿಯನ್ನು ಮೀರಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಕೃಷ್ಣಮೂರ್ತಿ ಎಂಬುವರು ಪ್ರಶ್ನಿಸಿದರು. ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿ, ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸದೇ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗುರುತಿಸಲಾಗಿರುವ ಹಿಂದುಳಿದ ವರ್ಗಗಳನ್ನು ರಾಜಕೀಯವಾಗಿ ಹಿಂದುಳಿದವರೆಂದು ಪರಿಗಣಿಸಿರುವುದು ಸರಿಯಲ್ಲ. ಹಾಗೂ ಮೀಸಲಾತಿ ಕೋಟಾ ಮಿತಿ ಶೇ. 50ರ ಮಿತಿಯನ್ನು ಮೀರತಕ್ಕದ್ದಲ್ಲ ಎಂದು ತೀರ್ಪು ನೀಡಿತು. ಹಿಂದುಳಿದ ವರ್ಗಗಳನ್ನು ಗುರುತಿಸಲು ‘ತ್ರಿವಳಿ ಪರೀಕ್ಷೆ’ (triple test) ಕೈಗೊಂಡು ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಲೂ ಸಹ ಆದೇಶಿಸಿತು.

2010ರಲ್ಲಿ ಅಂದಿನ ರಾಜ್ಯ ಸರ್ಕಾರ, ಒಟ್ಟು ಮೀಸಲಾತಿ ಕೋಟಾವನ್ನೇನೊ ಶೇ. 50 ರಷ್ಟಕ್ಕೆ ಇಳಿಸಿತು. ಆದರೆ ತ್ರಿವಳಿ ಪರೀಕ್ಷೆ ಮಾಡುವುದರ ಮೂಲಕ ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಲು ತ್ರಿವಳಿ ಪರೀಕ್ಷೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಿಲ್ಲ. ದುರ್ದೈವೆಂದರೆ, ರಾಜಕೀಯವಾಗಿ ಬಲಿಷ್ಠವಾಗಿರುವ ಎರಡೂ ಜಾತಿಗಳನ್ನು ರಾಜಕೀಯವಾಗಿ ಹಿಂದುಳಿದವರೆಂದು ಸರ್ಕಾರ ಪರಿಗಣಿಸಿದೆ.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂದರ್ಭದಲ್ಲಿ ತ್ರಿವಳಿ ಪರೀಕ್ಷೆ ಮಾಡಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಈ ಎರಡೂ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯದ ಆದೇಶದಂತೆ ಕರ್ನಾಟಕವು ಕೂಡ ತ್ರಿವಳಿ ಪರೀಕ್ಷೆ ಮಾಡುವ ದಿಸೆಯಲ್ಲಿ ಡಾ. ಭಕ್ತವತ್ಸಲ ಸಮಿತಿಯನ್ನು ರಚಿಸಿತು. ಸಮಿತಿ ಏನೋ ನಿರ್ದಿಷ್ಟ ಅವಧಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಆದರೆ, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಂಡಿಲ್ಲವೆಂದು ಹೇಳಲಾಗಿದೆ. ಸರ್ಕಾರವು ಕೂಡ ಸಮಿತಿಯ ವರದಿಯನ್ನು ಬಹಿರಂಗಗೊಳಿಸಿಲ್ಲ. ಹೀಗಾಗಿ ಪ್ರಜಾಪ್ರಭುತ್ವ ಪ್ರೇಮಿಗಳನ್ನು ಸರ್ಕಾರ ಕತ್ತಲಲ್ಲಿಟ್ಟಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲೂ ಒಂದಲ್ಲ ಒಂದು ನೆಪ ಹೇಳಿಕೊಂಡೇ ಸರ್ಕಾರ ಬರುತ್ತಿದೆ.

ಮಹಾಮಾನವ ಡಾ.ಬಿ.ಆರ್. ಅಂಬೇಡ್ಕರ್ ಅವರ ಉಕ್ತಿಯೊಂದನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಅದು ಸ್ವಯಂ ವೇದ್ಯವಾಗಿದೆ. `ರಾಜಕೀಯ ಶಕ್ತಿಯು ನೀವು ಪ್ರತಿಯೊಂದು ಬೀಗವನ್ನು ತೆರೆಯುವ ಪ್ರಮುಖ ಕೀಲಿಯಾಗಿದೆ.’

ರಾಜ್ಯದ ಹೆಸರು ‘ಕರ್ನಾಟಕ’ವೆಂದು ಬದಲಾದ ಈ ಐವತ್ತು ವರ್ಷಗಳಲ್ಲಿ, ಹಿಂದುಳಿದ ವರ್ಗಗಳಿಗೆ, ಸಂವಿಧಾನದ ಆಶಯದಂತೆ ನಿಜದ ನೆಲೆಯಲ್ಲಿ ಮೀಸಲಾತಿ ದಕ್ಕಿದೆಯೇ? ಎಂಬ ಪ್ರಶ್ನೆ ನಮ್ಮ ಮುಂದೆ ಬಂದಾಗ ಉತ್ತರ `ಇಲ್ಲ’ ಎಂದು ನೊಂದ ಹೃದಯದಿಂದ ಹೇಳಬೇಕಾಗಿದೆ.

(‘ಈದಿನ.ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

KN Lingappa
ಕೆ.ಎನ್. ಲಿಂಗಪ್ಪ
+ posts

ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...