ವಿಶ್ಲೇಷಣೆ | ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಎದುರಿಸುತ್ತಿರುವ ಸವಾಲುಗಳೇನು?

Date:

ಕರ್ನಾಟಕದಲ್ಲಿಂದು ಉನ್ನತ ಶಿಕ್ಷಣ ಕ್ಷೇತ್ರವು ಬೃಹತ್ತಾಗಿ ಬೆಳೆದು ನಿಂತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಬಹುತೇಕ ಸೂಚ್ಯಂಕಗಳ ಆಧಾರದಲ್ಲಿ ಹೇಳಬಹುದಾದರೆ, ದೇಶದ ಬಹುತೇಕ ರಾಜ್ಯಗಳಿಗಿಂತಲೂ ಕರ್ನಾಟಕವು ಮುಂದಿದೆ, ಅಷ್ಟು ಮಾತ್ರವಲ್ಲ ಇತ್ತೀಚಿನ 2021-2022ರ ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಷನ್ ವರದಿಯ ಪ್ರಕಾರ GER (ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋ) ದೇಶದಲ್ಲಿಯೇ ಅತಿ ಹೆಚ್ಚು ಕಾಲೇಜುಗಳಿರುವ ಮೂರನೇ ರಾಜ್ಯ ನಮ್ಮದು. ಅಲ್ಲದೇ ದೇಶದಲ್ಲಿಯೇ ಅತೀ ಹೆಚ್ಚು ಕಾಲೇಜುಗಳನ್ನು ಹೊಂದಿರುವ ಜಿಲ್ಲೆ ಬೆಂಗಳೂರು ನಗರ. ಅಲ್ಲದೇ, 1000ಕ್ಕೂ ಹೆಚ್ಚು ಕಾಲೇಜುಗಳನ್ನು ಹೊಂದಿರುವ ದೇಶದ ಏಕೈಕ ಜಿಲ್ಲೆಯೂ ಬೆಂಗಳೂರು ನಗರ. ನಮ್ಮ ನಾಡಿನಲ್ಲಿರುವ ಒಟ್ಟು ಕಾಲೇಜುಗಳ ಸಂಖ್ಯೆ 4430. ಅವುಗಳಲ್ಲಿ 17,60,083 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಲ್ಲಿ ದಾಖಲಾಗಿದ್ದಾರೆ. ಅಷ್ಟು ಮಾತ್ರವಲ್ಲದೇ, ಬೇರೆಬೇರೆ ಜಾತಿ ಮತ್ತು ಧರ್ಮ, ಸಮುದಾಯಗಳ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಪಾತದಲ್ಲಿಯೂ ಕರ್ನಾಟಕ ದೇಶದ ಸರಾಸರಿಗಿಂತಲೂ ಕೂಡ ತುಸು ಮುಂದೇ ಇದೆ. ಆದರೂ ಕೂಡ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಹಳ್ಳ ಹಿಡಿದಿದೆ ಎಂಬ ಚರ್ಚೆಗಳೂ ಆಗೀಗ ನಡೆಯುತ್ತಲೇ ಇರುತ್ತವೆ. ಅದಕ್ಕೆ ಇವುಗಳೆಲ್ಲಾ ಅಲ್ಪ ಸಾಧನೆಯೇನಲ್ಲದಿದ್ದರೂ ಇಲ್ಲಿ ಎಲ್ಲವೂ ಸರಿಯಿದೆ ಎನ್ನುವ ಧೋರಣೆಯೂ ಸಲ್ಲ. ಆದರೆ, ಇಂತಹ ಚರ್ಚೆಗಳು ಬಹುಬಾರಿ ವೈಯಕ್ತಿಕ ನೆಲೆಯಲ್ಲಿನ ಆರೋಪ-ಅಭಿಪ್ರಾಯಗಳಾಗಿಯೇ ಉಳಿದು ಬಿಡುತ್ತವೆ.

ಹಾಗಾಗಿ, ಮುಂದಡಿಯಿಡುವುದಕ್ಕೆ ನಮಗೆ ದಕ್ಕಬೇಕಿರುವ ಹೊಳಹುಗಳು ದಕ್ಕದೇ ಒಂದು ರೀತಿಯ ಹತಾಶೆಗಳಿಗೆ ನಮ್ಮನ್ನು ದೂಡಿಬಿಡುತ್ತವೆ. ಆದ್ದರಿಂದ ಇಂತಹ ಹತಾಶೆಗಳ ಸುಳಿಗೆ ಸಿಲುಕದ ರೀತಿಗಳಲ್ಲಿ ಕೆಲವು ಪ್ರಮುಖ ಸೂಚ್ಯಂಕಗಳನ್ನು ಬಳಸಿಕೊಂಡು ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನಡೆದು ಬಂದು ಹಾದಿಯನ್ನು ಸ್ಥೂಲವಾಗಿ ಕಟ್ಟಿಕೊಳ್ಳುತ್ತಲೇ ಮುಂದೇನು ಮಾಡಬೇಕಿದೆ ಎಂಬುದನ್ನು ಹುಡುಕಿಕೊಳ್ಳುವ ಪ್ರಯತ್ನವೇ ಈ ಲೇಖನ.

ಈ ನಿಟ್ಟಿನಲ್ಲಿ, ಯಾವುದೇ ದೇಶ ಇಲ್ಲವೇ ಪ್ರದೇಶದ ಉನ್ನತ ಶಿಕ್ಷಣ ಕ್ಷೇತ್ರದ ಬೆಳವಣಿಗೆಯನ್ನು ನಿರ್ಧರಿಸುವುದರಲ್ಲಿ ಅಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ಆದ್ದರಿಂದ, ನಮ್ಮಲ್ಲಿ ಯಾವ ರೀತಿಯ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಾ ಬಂದಿವೆ ಎಂಬುದನ್ನು ಗಮನಿಸಿದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಗಮನಿಸಿದಂತೆಯೇ ಸರಿ. ಹಾಗಾಗಿ ಕೆಳಗೆ ನೀಡಲಾಗಿರುವ ಕೋಷ್ಟಕವನ್ನೊಮ್ಮೆ ಗಮನಿಸೋಣ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೋಷ್ಟಕ-1: ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಗತಿ (ದಶಕವಾರು)

11 18
Source: Compiled by Author from based on the data available in Karnataka State Higher Education Perspective Plan and All India Survey on Higher Education, 2021-2022

ಇಲ್ಲಿ ನಾವು ಗಮನಿಸಿ ಚರ್ಚಿಸಬೇಕಾದ ಕೆಲವು ಅಂಶಗಳಿವೆ. ಮೊದಲಿಗೆ, ಭಾರತವು ಲಂಡನ್ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಕಾಲೇಜುಗಳಿಗೆ ಮಾನ್ಯತೆ ನೀಡುವ ಮೂಲಕ, ಪದವಿ ಹಂತದ ಶಿಕ್ಷಣವನ್ನು ಕಾಲೇಜುಗಳಲ್ಲಿ ಒದಗಿಸಿ, ಸ್ನಾತಕೋತ್ತರ ಪದವಿಗಾಗಿ ವಿಶ್ವವಿದ್ಯಾಯಗಳಿಗೆ ಪ್ರವೇಶಾತಿ ಕಲ್ಪಿಸುತ್ತದೆ. ಇದರಿಂದ ತನ್ನ ಸಂಶೋಧನೆ ಮತ್ತು ಬೋಧನಾ ಕಾರ್ಯಗಳ ಜೊತೆಜೊತೆಯಲ್ಲಿಯೇ ಕಾಲೇಜುಗಳಿಗೆ ಮಾನ್ಯತೆ ನೀಡುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವ ದೊಡ್ಡ ಜವಾಬ್ದಾರಿಯೂ ಕೂಡ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಹೆಗಲ ಮೇಲಿವೆ. ಅವುಗಳಲ್ಲಿನ ಬೆಳವಣಿಗೆ 1990ರ ದಶಕದವರೆಗೂ ಕುಂಟುತ್ತಲೇ ಸಾಗಿಬಂದರೂ ಕೂಡ, ರಾಷ್ಟ್ರದೆಲ್ಲೆಡೆ ಕೆಲವು ನಿರ್ದಿಷ್ಟ ವಿಷಯಗಳಿಗೆ ಒತ್ತು ನೀಡಿ ಕೆಲಸ ಮಾಡುವ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಬೇಕು ಎಂಬ ಚಿಂತನೆಯ ಪ್ರಭಾವದಲ್ಲಿ 1990ರ ದಶಕದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಕಾಣುತ್ತೇವೆ. ಆದರೆ 2000ರಿಂದ 2010; ಮತ್ತು 2011-2022; ಈ ಎರಡು ದಶಕಗಳಲ್ಲಿ 10 ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಇದಕ್ಕೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಗುರುತಿಸಬಹುದಾಗಿದೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಕೋಮುವಾದಕ್ಕೆ ಬಲಿಯಾಗದ ರಂಗಭೂಮಿ

ಮೊದಲರೆಡು ಕಾರಣಗಳು 2000-2010ರ ದಶಕಕ್ಕೆ ಸಂಬಂಧಿಸಿದರೆ, ಉಳಿದೆರಡು ಕಾರಣಗಳು 2011ರ ಆಚೆಗಿನ ಕಾಲಘಟ್ಟಕ್ಕೆ ಅನ್ವಯಿಸುತ್ತವೆ. ಮೊದಲನೆಯದಾಗಿ, 2000-2010ರ ನಡುವೆ ನಿರ್ದಿಷ್ಟ ವಿಷಯಗಳ ಬಗ್ಗೆ ಕಾರ್ಯ ಕೈಗೊಳ್ಳುವ ವಿಶ್ವವಿದ್ಯಾಲಯಗಳ ಸ್ಥಾಪನೆ ಮುಂದುವರೆಯಿತು. ಜೊತೆಜೊತೆಯಲ್ಲಿ, ನವ-ಉದಾರವಾದಿ ನೆಲೆಯಲ್ಲಿನ ಕಲ್ಯಾಣ ರಾಜ್ಯ ಕಲ್ಪನೆಯನ್ನು ಮುಂದುಮಾಡಲು, ಉನ್ನತ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟ ಅಂದಿನ ಸರ್ಕಾರವು, ತನ್ನ ಈ ನಿಲುವನ್ನು ಜನಸಮುದಾಯಗಳು ವಿರೋಧಿಸಬಹುದೆಂದು ಭಾವಿಸಿ, ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾದರೂ ಕೂಡ ತಳ ಸಮುದಾಯಗಳಿಗೆ ಯಾವ ತೊಂದರೆಯೂ ಇಲ್ಲ ಎಂದು ಅವರುಗಳ ಕಣ್ಣೀರು ಒರೆಸುವ ತಂತ್ರದ ಭಾಗವಾಗಿ ದೇಶದೆಲ್ಲೆಡೆ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿತು. ಅಂತೆಯೇ ಕರ್ನಾಟಕ ರಾಜ್ಯ ಮಟ್ಟದಲ್ಲಿಯೂ ಕೆಲವು ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು. ಮೂರನೆಯದಾಗಿ, 2011-22ರ ನಡುವೆ ಸರ್ಕಾರಿ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿರುವುದು ಒಂದು ಜಿಲ್ಲೆ: ಒಂದು ವಿಶ್ವವಿದ್ಯಾಲಯ ಎಂಬ ಧೋರಣೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕನಿಷ್ಠ ಒಂದು ವಿಶ್ವವಿದ್ಯಾಲಯವಾದರೂ ಸ್ಥಾಪನೆಯಾಗಬೇಕೆಂಬ ಆಶಯದ ಬಗ್ಗೆ ಯಾವುದೇ ತಗಾದೆ ಇರಲಾರದು. ಆದರೆ, ಕಳೆದೆರಡು ದಶಕದಲ್ಲಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆಯೇ ಹೊರತು ಅವುಗಳಿಗೆ ಬೇಕಿರುವಷ್ಟು ಅನುದಾನವನ್ನಾಗಲೀ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನಾಗಲೀ ನೀಡಲಾಗುತ್ತಿಲ್ಲ ಎಂಬುದು ಪತ್ರಿಕೆಗಳಲ್ಲಿ ಪ್ರತಿ ತಿಂಗಳೂ ವರದಿಯಾಗುತ್ತಲೇ ಇದೆ. ಇನ್ನು ಕಡೆಯದಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸಿನಂತೆ ಸ್ವಾಯತ್ತ ಕಾಲೇಜುಗಳನ್ನೆಲ್ಲಾ ಇಂದು ವಿಶ್ವವಿದ್ಯಾಲಯಗಳೆಂದು ಮರುನಾಮಕರಣ ಮಾಡಲಾಗುತ್ತಿದೆ. ಅಂದರೆ, ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬದಲು ಅವೇ ಕಾಲೇಜುಗಳನ್ನು ವಿಶ್ವವಿದ್ಯಾಲಯ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಈ ಕಾರಣಗಳಿಂದಾಗಿ ಮೇಲುನೋಟಕ್ಕೆ ವಿಶ್ವವಿದ್ಯಾಲಯಗಳ ಸಂಖ್ಯೆ ಬೆಳೆಯುತ್ತಿದ್ದರೂ ಇವು ತಮ್ಮ ಸತ್ವವನ್ನೇ ಕಳೆದುಕೊಂಡ ಕಟ್ಟಡಗಳಾಗುತ್ತಿವೆ.

ಇನ್ನು ಕಾಲೇಜುಗಳು ಹೇಗೆ ಬೆಳೆದು ಬಂದಿವೆ ಎಂಬುದನ್ನು ಗಮನಿಸೋಣ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ್ದೇ ಕೂಸು ಎನ್ನಬಹುದಾದ್ದು ಏನಾದರೂ ಇದ್ದರೆ ಅದು ಈ ಸರ್ಕಾರಿ ಅನುದಾನಿತ ಕಾಲೇಜುಗಳೇ ಇರಬೇಕು. 1960ರಿಂದ 1990ರವರೆಗೂ ಏಕಾಏಕಿ ಸರ್ಕಾರಿ ಅನುದಾನಿತ ಕಾಲೇಜುಗಳು ಎಲ್ಲೆಡೆ ಬೆಳೆದವು. ಈ ನೀತಿಯಿಂದಾಗಿ ಕರ್ನಾಟಕದಲ್ಲಿ ಶಿಕ್ಷಣ ಬಹುಬೇಗ ಎಲ್ಲ ಜನವರ್ಗಗಳನ್ನು ತಲುಪಲಿಕ್ಕೆ ಸಾಧ್ಯವಾಯಿತು ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಹತ್ತು ಹಲವು ಸಮಸ್ಯೆಗಳನ್ನು ತಂದೊಡ್ಡಿವೆ ಎಂಬುದೂ ಅಷ್ಟೇ ಸತ್ಯ. ಆದಕಾರಣ, 1985ರಲ್ಲಿಯೇ ಅನುದಾನಿತ ಕಾಲೇಜುಗಳಿಗೆ ತೆರೆ ಎಳೆಯಲಾಯಿತು. ಹಾಗಾಗಿ 1990ರಿಂದ ಇಲ್ಲಿಯವರೆಗೆ ಅವುಗಳ ಸಂಖ್ಯೆ ಹೆಚ್ಚಾಗಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲುಗೊಂಡು, ಅನುದಾನವಿಲ್ಲದಿದ್ದರೆ ಏನಂತೆ, ಸರ್ಕಾರದ ಹಸ್ತಕ್ಷೇಪವಿಲ್ಲದೆ ನಮಗೆ ಹೇಗೆ ಬೇಕೋ ಫೀಸು ತೆಗೆದುಕೊಂಡು ಕಾಲೇಜು ನಡೆಸಬಹುದು ಎಂದು ಹಲವು ಕಾಲೇಜುಗಳು ಅನುದಾನಿತ ಮಾದರಿಯಿಂದ ಹೊರಬರಲು ಪ್ರಯತ್ನಿಸುತ್ತಿರುವುದು, ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂಬುದನ್ನು ನಮ್ಮ ಕಣ್ಣ ಮುಂದಿಡುತ್ತಿದೆ. ಅನುದಾನಿತ ಕಾಲೇಜುಗಳ ಸಂಖ್ಯೆಯಲ್ಲಿ 1990ರ ದಶಕದಲ್ಲಿ ಏರಿಕೆ ಕಂಡು ಬರಲಿಲ್ಲ ಎಂಬುದೇ ಸರ್ಕಾರಿ ಶಾಲೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತೇ ಎಂಬುದನ್ನು ಕರಾರುವಕ್ಕಾಗಿ ಹೇಳುವುದು ಸಾಧ್ಯವಿಲ್ಲವಾದರೂ, ಕರ್ನಾಟಕದಲ್ಲಿ ಸರ್ಕಾರಿ ಕಾಲೇಜುಗಳಿಗಿಂತಲೂ ಮುಂಚೆಯೇ ಅನುದಾನಿತ ಕಾಲೇಜುಗಳು ಉನ್ನತ ಶಿಕ್ಷಣವನ್ನು ಜನರೆಡೆಗೆ ಕೊಂಡೊಯ್ದಿದ್ದವು ಎಂಬುದು ವಾಸ್ತವ. ಅಲ್ಲದೇ, ಅವುಗಳು ಹಿಂದೆ ಸರಿದ ಮೇಲೆಯೇ ಸರ್ಕಾರಿ ಕಾಲೇಜುಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ ಎಂಬುದೂ ನಿಜವೇ ಆಗಿದೆ.

ಇನ್ನುಳಿದಿರುವುದು ಖಾಸಗೀ ವಿಶ್ವವಿದ್ಯಾಲಯಗಳ ವಿಚಾರ. 2022ರ AISHE ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿಂದು 32 ಖಾಸಗಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿದ್ದು ಕಳೆದೆರಡು ದಶಕಗಳಲ್ಲಿಯೇ. ಉನ್ನತ ಶಿಕ್ಷಣ ಕ್ಷೇತ್ರದ ಒಟ್ಟಾರೆ ಖಾಸಗೀಕರಣಕ್ಕೆ ಇದಕ್ಕಿಂತಲೂ ದೊಡ್ಡ ಕೈಗನ್ನಡಿ ಇರಲಿಕ್ಕಿಲ್ಲ. ಇತ್ತೀಚೆಗಷ್ಟೇ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಹಿರಿಯ ಅಧಿಕಾರಿಗಳೊಟ್ಟಿಗೆ ಸರ್ಕಾರಿ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸುತ್ತಿರುವಾಗ, ಅವರು “ಅಲ್ಲಾ ನೀವು ಯಾಕೆ ಬರೀ ಸರ್ಕಾರಿ ವಿಶ್ವವಿದ್ಯಾಲಯಗಳ ಬಗ್ಗೆ ಮಾತಾಡ್ತೀರಿ? ಅವುಗಳ on-campus ದಾಖಲಾತಿ ಎಷ್ಟಿರಬಹುದು? ನಮ್ಮ ಅತಿ ದೊಡ್ಡ ಮೈಸೂರು ವಿಶ್ವವಿದ್ಯಾಲಯವನ್ನೇ ತಗೋಳಿ. ಅಬ್ಬಬ್ಬಾ ಅಂದರೆ 2000 ಅಥವಾ 3000 ಇರಬಹುದು. ಆದರೆ, MAHE ಒಂದೇ ಕ್ಯಾಂಪಸ್ಸಿನಲ್ಲಿ 50000ಕ್ಕೂ ಮೇಲು ದಾಖಲಾತಿ ಇದೆ ಸಾರ್. ಹೀಗೆ, PES, Jain, Christ ಮತ್ತೆ ಇನ್ನೊಂದೆರಡು ತಗೊಂಡ್ರೆ ಒಟ್ಟು ಮೂರು ಲಕ್ಷ ವಿದ್ಯಾರ್ಥಿಗಳಿದ್ದಾರೆ. ನೀವು ಅವರ ಬಗ್ಗೆನೂ ಮಾತಾಡಬೇಕಲ್ವ?” ಎಂದರು. ಇದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇಂದು ಖಾಸಗೀಕರಣದ ಜೊತೆ ಓಲಿಗೋಪೊಲಿ (ಅಲ್ಪಸಂಖ್ಯಾಸ್ವಾಮ್ಯ) ಬೇರೂರಿರುವುದನ್ನ ನಮ್ಮ ಕಣ್ಣಿಗೆ ರಾಚುತ್ತದೆ.

ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

ಈ ಎಲ್ಲಾ ವಿಚಾರಗಳನ್ನು ಮನದಲ್ಲಿರಿಸಿಕೊಂಡು ನಮ್ಮ ಈ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ದಾಖಲಾತಿ ಎಷ್ಟಿದೆ ಎಂಬುದನ್ನು ಗಮನಿಸೋಣ. ಶತಮಾನಗಳ ಕಾಲ ತಳಸಮುದಾಯಗಳಿಗೆ ಶಿಕ್ಷಣ ನಿರಾಕರಿಸಲಾಗಿದ್ದ ದೇಶವೊಂದರಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಅಥವಾ ಅಸಮಾನತೆ ಎಷ್ಟು ಬೇರೂರಿದೆ ಎಂಬುದನ್ನು ನಾವು ಈವರೆಗೆ ಅರ್ಥೈಸಿರುವುದು ಕಾಲೇಜು-ವಿಶ್ವವಿದ್ಯಾಲಯಗಳ ದಾಖಲಾತಿಗಳಲ್ಲಿ ಎಲ್ಲಾ ಜಾತಿ-ಪಂಗಡಗಳ ಪ್ರಮಾಣ ಎಷ್ಟಿದೆ ಎಂಬುದನ್ನು ಆಧರಿಸಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಬೇರೆ ಬೇರೆ ಸಮುದಾಯಗಳ ಹಿನ್ನೆಲೆಯ ಎಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ ಎಂಬುದನ್ನು ಗಮನಿಸೋಣ.

12 11
Source: Compiled by author based on the statistics provided in Human Development Report – 2022

ತಳಸಮುದಾಯಗಳಿಗೆ ಶಿಕ್ಷಣ ನಿರಾಕರಣೆಯಾಗುತ್ತಿದ್ದ ನಮ್ಮ ದೇಶದಲ್ಲಿ ಸಂವಿಧಾನವು ಎಲ್ಲರಿಗೂ ಶಿಕ್ಷಣದ ಬಾಗಿಲನ್ನು ತೆರೆದು 77 ವರ್ಷಗಳು ಸಂದಿವೆ. ಅಲ್ಲದೇ ಸ್ವಾತಂತ್ರಪೂರ್ವದಲ್ಲಿ ತಳ ಸಮುದಾಯಗಳ ಪರ ಕಲ್ಪಿಸಲಾಗಿದ್ದ ಮೀಸಲಾತಿಗೆ ಸಂವಿಧಾನಾತ್ಮಕ ಚೌಕಟ್ಟು ನೀಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ, ಪ್ರಜಾಸತ್ತಾತ್ಮಕ ಜನಪರ ಚಳವಳಿಗಳ ಒತ್ತಡಗಳಿಗೆ ಮಣಿದು ಸರ್ಕಾರಗಳು ಮೀಸಲಾತಿಯನ್ನು ಜಾರಿಗೊಳಿಸುತ್ತಿವೆ. ಅದರ ಅನುಷ್ಠಾನವನ್ನೂ ಚಳವಳಿಗಳು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿ ಒಂದಷ್ಟು ಸುಧಾರಣೆಯನ್ನೂ ಕಂಡಿದ್ದಾಗಿದೆ. 70-80ರ ದಶಕದಲ್ಲಿ ನಡೆದ ಚಳವಳಿಗಳು, 90ರ ದಶಕದಲ್ಲಿ ನಡೆದ ಸಾಕ್ಷರತಾ ಆಂದೋಲನಗಳು ಶಿಕ್ಷಣವು ಎಲ್ಲರಿಗೂ ದಕ್ಕುವಂತೆ ಇಡೀ ವ್ಯವಸ್ಥೆಯನ್ನು ಒಗ್ಗಿಸಿ-ಬಗ್ಗಿಸಿದ ಕಾರಣಕ್ಕೆ ಹಳ್ಳಿ-ಹಳ್ಳಿಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ತಳಸಮುದಾಯಗಳ ಮಕ್ಕಳು ಪ್ರಾಥಮಿಕ ಹಂತದ ಶಿಕ್ಷಣಕ್ಕೆ ತೆರೆದುಕೊಂಡರು. ಅವರಲ್ಲಿ ಬಹುತೇಕರು 10ನೆಯ ತರಗತಿಗೂ ಮುನ್ನವೇ ಶಾಲೆಯಿಂದ ತಳ್ಳಲ್ಪಟ್ಟರಾದರೂ, ಇನ್ನುಳಿದ ಮಕ್ಕಳು ಉನ್ನತ ಶಿಕ್ಷಣಕ್ಕೆ ದಾಖಲಾದರು. ಇಂದು ಶಿಕ್ಷಣ ಹಕ್ಕು ಕಾಯ್ದೆಯಿಂದಾಗಿ, 8ನೆಯ ತರಗತಿಯವರೆಗೆ ಯಾವ ಮಕ್ಕಳನ್ನೂ ಫೇಲುಮಾಡುವಂತಿಲ್ಲವಾದ್ದರಿಂದ 9ನೆಯ ತರಗತಿಯಿಂದ ಪದವಿಪೂರ್ವ ಶಿಕ್ಷಣದ ಎರಡನೆಯ ವರ್ಷದ ಪರೀಕ್ಷೆಯನ್ನು ಮುಗಿಸುವ ಹೊತ್ತಿಗೇ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯಿಂದ ಹೊರದೂಡಲ್ಪಡುತ್ತಿದ್ದಾರೆ. ವ್ಯವಸ್ಥೆಯಲ್ಲಿನ ಈ ಎಲ್ಲ ಸಮಸ್ಯೆಗಳನ್ನು ಮೀರಿಕೊಂಡು ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಾರಣಕ್ಕೆ ಕಳೆದ ಎರಡು ಮೂರು ದಶಕಗಳಲ್ಲಿ ಉನ್ನತ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಮಾತ್ರವೇ ನಮಗೆ 2015-16ರಿಂದ 2019-20ರವರೆಗಿನ ಅವಧಿಯಲ್ಲಿ ಕಂಡುಬಂದ ದಾಖಲಾತಿಗಳನ್ನು ಗಮನಿಸಿದಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಇತರೆ ಹಿಂದುಳಿದ ಸಮುದಾಯಗಳ ಹಿನ್ನೆಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕೆ ಸೇರುತ್ತಿರುವ ಪ್ರಮಾಣ ಒಟ್ಟಾರೆ ಸಮುದಾಯಗಳ ಸಂಖ್ಯೆಗಳಲ್ಲಿ ಕಂಡುಬರುವುದಕ್ಕಿಂತಲೂ ಏಕೆ ಹೆಚ್ಚಿದೆ ಎಂಬುದು ತಿಳಿಯುವುದು. ಅದರಲ್ಲಿಯೂ ಈ ಸಮುದಾಯಗಳ ಮಹಿಳೆಯರ ದಾಖಲಾತಿ ಪ್ರಮಾಣ ಗಂಡಸರಿಗಿಂತ ಹೆಚ್ಚೇ ಇರುವುದು ಆಶಾದಾಯಕ ಎನಿಸಿದೆ. ಆದರೂ ಒಟ್ಟಾರೆಯಾಗಿ ನಾವಿನ್ನೂ ಸವೆಸಬೇಕಿರುವ ಹಾದಿ ಬಹಳಷ್ಟಿದೆ.

ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುತ್ತಿದ್ದಾರೆ ಎಂದ ಮಾತ್ರಕ್ಕೆ ಅಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಗುಣಮಟ್ಟ ನಿರ್ದಿಷ್ಟ ಮಟ್ಟದಲ್ಲಿದೆ ಎಂದಲ್ಲ. ಅದರಲ್ಲಿಯೂ ತಳ ಸಮುದಾಯಗಳ ಮಕ್ಕಳು ಉನ್ನತ ಶಿಕ್ಷಣಕ್ಕೆ ದೊಡ್ಡ ಮಟ್ಟದಲ್ಲಿ ಲಗ್ಗೆಯಿಟ್ಟಿರುವ ಹೊತ್ತಿನಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯ ಎನಿಸುತ್ತದೆ. ಕಾರಣ, ಶಿಕ್ಷಣ ಅತಿಮುಖ್ಯ ಎನಿಸುವುದು ಈ ಸಮುದಾಯಗಳಿಗೇ ಆಗಿದೆ. ಗುಣಮಟ್ಟವನ್ನು ಹತ್ತು-ಹಲವು ವಿಚಾರಗಳು ನಿರ್ಧರಿಸುತ್ತವೆಯಾದರೂ ಅದರಲ್ಲಿ ಅತಿ ಮುಖ್ಯ ಪಾತ್ರವಹಿಸುವುದು ಶಿಕ್ಷಕರೇ ಆಗಿರುವ ಕಾರಣ, ಈ ನೆಲೆಯಲ್ಲಿ ಕರ್ನಾಟಕದ ಸಾಧನೆ ಏನಿದೆ ಎಂಬುದನ್ನು ಗಮನಿಸುವುದು ಮುಖ್ಯವೆನಿಸುತ್ತದೆ. ಇದು ಈ ಸದ್ಯ ನಮ್ಮ ವ್ಯವಸ್ಥೆಯನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ನಿರ್ದಿಷ್ಟವಾಗಿ ಹೇಳುವುದಾದರೆ, PTR ಎಂದೇ ಕರೆಯಲ್ಪಡುವ ಪ್ಯೂಪಿಲ್ ಟೀಚರ್ ರೇಷಿಯೋ ಕಡಿಮೆಯಿದ್ದಷ್ಟೂ ಶಿಕ್ಷಕರು ತಮ್ಮ ಪ್ರತೀ ವಿದ್ಯಾರ್ಥಿಯ ಕಲಿಕೆಗೆ ಹೆಚ್ಚು ಒತ್ತುಕೊಟ್ಟು ಪಾಠಮಾಡಲು ಸಾಧ್ಯವಾಗುವ ಕಾರಣಕ್ಕೆ ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಅದು ಅತ್ಯಂತ ಅವಶ್ಯಕ. ಹಾಗಾಗಿ, ನಮ್ಮ ವ್ಯವಸ್ಥೆಯು ಉತ್ತಮವಾದಂತೆಲ್ಲಾ ಈ PTR ಅನುಪಾತ ಕಡಿಮೆಯಾಗುತ್ತಾ ಸಾಗಬೇಕು. ಆದರೆ ಕರ್ನಾಟಕ ಸರ್ಕಾರದ ಮಾನವಾಭಿವೃದ್ಧಿ ವಿಭಾಗವೇ ಹೊರತಂದಿರುವ ಹ್ಯೂಮನ್ ಡೆವಲಪ್‌ಮೆಂಟ್ ರಿಪೋಟ್-2002ರ ಪ್ರಕಾರ ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿಯೇ ಶಿಕ್ಷಕರ ಸಂಖ್ಯೆಯಲ್ಲಿನ ಕುಸಿತ ಮತ್ತು ವಿದ್ಯಾರ್ಥಿಗಳ ದಾಖಲಾತಿಗಳಲ್ಲಿ ಕಂಡುಬರುತ್ತಿರುವ ಹೆಚ್ಚಳದಿಂದಾಗಿ ಈ PTR ಅನುಪಾತ ಕಳೆದ 5 ವರ್ಷಗಳಲ್ಲಿ ಏರಿಕೆ ಕಾಣುತ್ತಲಿದೆ ಎಂಬುದು ಈ ಕೆಳಗಿನ ಕೋಷ್ಟಕವನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಇಲ್ಲಿಯೂ ಕೂಡ ದೇಶದ ಸರಾಸರಿಗಿಂತಲೂ ಕರ್ನಾಟಕ ಮುಂದಿದೆಯಾದರೂ, ಕರ್ನಾಟಕದಲ್ಲೂPTR ಅನುಪಾತ ಏರುಗತಿಯಲ್ಲಿರುವ ಕಾರಣ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದಂತೂ ನಿಚ್ಚಳ.

13 3

ಈ ಕುಸಿತದ ಆಳ-ಅಗಲವನ್ನು ನಾವು ವಾಸ್ತವ ನೆಲೆಯಲ್ಲಿ ಅರ್ಥೈಸಬೇಕಾದರೆ, ಇನ್ನೂ ಕೆಲವು ವಿಚಾರಗಳನ್ನು ನಾವಿಲ್ಲಿ ಗಮನಿಸಲೇ ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ವಿಶ್ವವಿದ್ಯಾಲಯಗಳನ್ನು ಕಾಡಿರುವ ಅತಿ ಮುಖ್ಯ ಸಮಸ್ಯೆಯೆಂದರೆ ಇದೇ ಇರಬೇಕು. ಜುಲೈ 2023ರಲ್ಲಿ ಡೆಕ್ಕನ್ ಹೆರಾಲ್ಡ್ನಲ್ಲಿ ಪ್ರಕಟವಾದ ವರದಿಯಲ್ಲಿ ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರೇ ಉಲ್ಲೇಖಿಸಲಾಗಿರುವ ಅಂಕಿ-ಅಂಶಗಳನ್ನೇ ಆಧರಿಸಿದರೂ ರಾಜ್ಯದ ವಿವಿಧ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿರುವ 3987 ಹುದ್ದೆಗಳಲ್ಲಿ ಬರೋಬ್ಬರಿ 1846 ಹುದ್ದೆಗಳಿಗೆ ನೇಮಕಾತಿಯೇ ಆಗಿರಲಿಲ್ಲ. ಅಂದರೆ, 100 ಶಿಕ್ಷಕರ ಸ್ಥಾನವಿದ್ದರೆ, ಅದರಲ್ಲಿ 46 ಪ್ರತಿಶತ ಬೋಧಕರ ಹುದ್ದೆಗಳಿಗೆ ನೇಮಕಾತಿಗಳೇ ನಡೆಯದೆ ವಿಶ್ವವಿದ್ಯಾಲಯಗಳನ್ನು ಒಳಗಿಂದಲೇ ಬರಿದು ಮಾಡುತ್ತಿವೆ.

ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

ಇತ್ತೀಚಿಗೆ ಸ್ಥಾಪಿಸಲಾದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಒಂದೇ ಒಂದು ಹುದ್ದೆಗೂ ನೇಮಕಾತಿಗಳು ನಡೆದಿಲ್ಲ. ಹಾಗೆಂದ ಮಾತ್ರಕ್ಕೆ ಇದು ಹೊಸದಾಗಿ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯಗಳ ಸಮಸ್ಯೆ ಮಾತ್ರವಲ್ಲ. ಕರ್ನಾಟಕದ ಮೊಟ್ಟಮೊದಲ ಮತ್ತು ಈ ದೇಶದ ಮೇರು ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿರುವ 460 ಹುದ್ದೆಗಳಲ್ಲಿ ಬರೋಬ್ಬರಿ 407 ಹುದ್ದೆಗಳು ಖಾಲಿಯುಳಿದಿವೆ. ಆದಕಾರಣ ಈ ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಇನ್ನು ಈ ಅತಿಥಿ ಉಪನ್ಯಾಸಕರನ್ನು ಅತ್ಯಲ್ಪ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಅದನ್ನೂ ಸರಿಯಾದ ಸಮಯಕ್ಕೆ ಪಾವತಿಸಲಾಗುತ್ತಿಲ್ಲ. ಆದಕಾರಣ, ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಅತಿಥಿ ಉಪನ್ಯಾಸಕರೆಲ್ಲಾ ಧರಣಿಗೆ ಕೂರುವುದು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ನಿಲ್ಲುವುದು ಪ್ರತಿ ವರ್ಷದ ವಾಡಿಕೆಯಂತಾಗಿಬಿಟ್ಟಿದೆ. ಈ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮೀಸಲಾತಿಯೂ ಅನ್ವಯವಾಗುವುದಿಲ್ಲ. ಆದ್ದರಿಂದ ಶಿಕ್ಷಕರ ಮಟ್ಟದಲ್ಲಿ ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಪ್ರತಿನಿಧಿತ್ವ ಇಲ್ಲವೇ ಇಲ್ಲ ಎಂಬಂತಾಗಿಬಿಟ್ಟಿದೆ, ಇದು ವಾಡಿಕೆಯ ಮಾತಲ್ಲ. ಬದಲಿಗೆ, ಕರ್ನಾಟಕ ಸರ್ಕಾರವೇ ನೀಡಿರುವ ಹ್ಯೂಮನ್ ಡೆವಲಪ್‌ಮೆಂಟ್ ರಿಪೋರ್ಟ್-2022ರಲ್ಲಿ ನೀಡಿರುವ ದತ್ತಾಂಶವೇ ಅದನ್ನು ಸಾರಿ ಹೇಳುತ್ತಿದೆ. ನಮ್ಮ ರಾಜ್ಯದ ಕಾಲೇಜು-ವಿಶ್ವವಿದ್ಯಾಲಯಗಳಲ್ಲಿರುವ ಶಿಕ್ಷಕರ ಸಂಖ್ಯೆ 1,48,368. ಅದರಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಹಿನ್ನೆಲೆಗಳಿಂದ ಬರುತ್ತಿರುವ ಶಿಕ್ಷಕರ ಸಂಖ್ಯೆ ಕೇವಲ 12,559 ಮತ್ತು 3,229 ಮಾತ್ರ. ಇದರಲ್ಲಿ ಮಹಿಳೆಯ ಪ್ರತಿನಿಧಿತ್ವ ಮತ್ತಷ್ಟು ಹೀನಾಯವಾಗಿದೆ. ಎಲ್ಲಾ ಜಾತಿ ಸಮುದಾಯಗಳನ್ನು ಸೇರಿಸಿದರೆ ಸರಿಸುಮಾರು 45 ಪ್ರತಿಶತವಿರುವ ಮಹಿಳಾ ಶಿಕ್ಷಕರ ಪ್ರಾತಿನಿಧ್ಯವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಸುಮಾರು ಶೇಕಡಾ 30ಕ್ಕೆ ಕುಸಿಯುತ್ತದೆ. ಅದರಲ್ಲಿಯೂ ಈ ಶಿಕ್ಷಕರಲ್ಲಿ ಕೆಲವೇ ಕೆಲವು ಮಂದಿ ಮಾತ್ರವೇ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಉಂಟುಮಾಡಬಹುದಾದ ಮೇಲ್‌ಸ್ತರದ ಹುದ್ದೆಗಳಲ್ಲಿರುವ ಸಾಧ್ಯತೆಯನ್ನೂ ನೆನಪಿಸಿಕೊಂಡರೆ, ತನ್ನೊಡಲಲ್ಲಿ ಸಮಾನತೆಯ ಆಶಯಕ್ಕೆ ಕಾವುಕೊಟ್ಟು ಪೋಷಿಸಬೇಕಿದ್ದ ಉನ್ನತ ಶಿಕ್ಷಣ ವ್ಯವಸ್ಥೆಯೇ ಎಷ್ಟು ಶ್ರೇಣೀಕೃತವಾಗಿದೆ ಎಂಬುದನ್ನು ನೆನೆಯುವುದು ಕೂಡ ಕಷ್ಟಸಾಧ್ಯವಾಗಿದೆ.

14 6

ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಒಟ್ಟಿನಲ್ಲಿ ಒಂದು ವಿಚಾರವಂತೂ ಸುಸ್ಪಷ್ಟ. ಕಳೆದ 7 ದಶಕಗಳಲ್ಲಿ ತೀರಾ ಇತ್ತೀಚಿಗಷ್ಟೇ ತಳ ಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆಯಿಟ್ಟಿರುವ ಸಂದರ್ಭದಲ್ಲಿಯೇ ಶಿಕ್ಷಣ ಕ್ಷೇತ್ರವನ್ನು, ಅದರಲ್ಲಿಯೂ ಮುಖ್ಯವಾಗಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ, ಶಿಕ್ಷಣವನ್ನು ದುಬಾರಿಯಾಗಿಸಿ, ಇರುವ ಸರ್ಕಾರಿ ಕಾಲೇಜು-ವಿಶ್ವವಿದ್ಯಾಲಯಗಳಿಗೆ ಶಿಕ್ಷಕರನ್ನೇ ನೇಮಿಸಿಕೊಳ್ಳದೆ ವ್ಯವಸ್ಥೆಯನ್ನು ಒಳಗಿಂದಲೇ ಕೊಲ್ಲುವ ಕೆಲಸಗಳು ನಡೆಯುತ್ತಿವೆ. ಇದರಿಂದಾಗಿ ಅಡಕತ್ತರಿಯಲ್ಲಿ ಸಿಲುಕಿರುವುದು ಈ ತಳ ಸಮುದಾಯಗಳ ವಿದ್ಯಾರ್ಥಿಗಳೇ ಆಗಿದ್ದಾರೆ. ಬೇರೆಲ್ಲಾ ಸಮುದಾಯಗಳು ಈ ಹಿಂದೆ ಭರಿಸುತ್ತಿದ್ದ ವೆಚ್ಚಕ್ಕಿಂತಲೂ ದೊಡ್ಡ ಮೊತ್ತವನ್ನೇ ಭರಿಸಿದರೂ, ಅತ್ಯಂತ ಕಳಪೆ ಗುಣಮಟ್ಟದ ಶಿಕ್ಷಣವನ್ನು ಪಡೆದು ತೃಪ್ತರಾಗಿ, ಕೆಲಸವೂ ಸಿಗದೆ ತ್ರಿಶಂಕು ಸ್ಥಿತಿಗೆ ಇಂದಿನ ತಳಸಮುದಾಯಗಳ ಯುವಕರನ್ನು ದೂಡಲಾಗಿದೆ. ಸಾಲದ್ದಕ್ಕೆ, ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುವುದಕ್ಕೆ ಈ ಸಮುದಾಯಗಳು ಕಾಲೇಜು-ವಿಶ್ವವಿದ್ಯಾಲಯಗಳಿಗೆ ಲಗ್ಗೆಯಿಟ್ಟಿದ್ದೇ ಕಾರಣ ಎಂಬ ಅಪವಾದವನ್ನೂ ಅವರ ಹಣೆಗೆ ಕಟ್ಟಲಾಗುತ್ತಿದೆ. ಮತ್ತೊಂದೆಡೆ, ಉಳ್ಳವರ ಸಮುದಾಯದ ಮಕ್ಕಳು ಇಂದು ಸರ್ಕಾರಿ ವ್ಯವಸ್ಥೆಯಿಂದ ಬಹುದೂರ ನಡೆದು ಖಾಸಗಿ ಕಾಲೇಜು, ವಿಶ್ವವಿದ್ಯಾಲಯಗಳನ್ನು ಆಯ್ದುಕೊಳ್ಳುತ್ತಿದ್ದಾರೆ ಮಾತ್ರವಲ್ಲ, ವಿದೇಶಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಅರಸಿ ಹೊರಟಿದ್ದಾರೆ. ಇದು ಇಂದಿನ ಉನ್ನತ ಶಿಕ್ಷಣ ಕ್ಷೇತ್ರದ ಸುತ್ತಲಿನ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಕಾರಣ.

ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡರೆ ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರದ ಮುಂದಣ ಹಾದಿ ಈ ನಿಟ್ಟಿನಲ್ಲಿರಬೇಕಿದೆ:

ಮೊಟ್ಟಮೊದಲನೆಯದಾಗಿ, ಕರ್ನಾಟಕದ ಎಲ್ಲ ಕಾಲೇಜು-ವಿಶ್ವವಿದ್ಯಾಯಗಳಲ್ಲಿರುವ ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಅಲ್ಲದೇ, ಅತಿಥಿ ಉಪನ್ಯಾಸಕರ ವ್ಯವಸ್ಥೆಯನ್ನು ಮುಂದಿನ ಕೆಲವು ವರ್ಷಗಳಲ್ಲಿಯೇ ರದ್ದುಗೊಳಿಸಿ ಎಲ್ಲಾ ಶಿಕ್ಷಕರಿಗೆ ಸೇವಾ ಭದ್ರತೆಯೊದಗಿಸಬೇಕಿದೆ. ಇಲ್ಲವಾದಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಸಾಧ್ಯವೆನಿಸಲಿದೆ. ಅಲ್ಲದೇ ಭಾರತದ ಮಟ್ಟದಲ್ಲಿ ಮೀಸಲಾತಿಗಳು ಜಾರಿಗೆ ಬರುವುದಕ್ಕೂ ಮೊದಲೇ ಕರ್ನಾಟಕ ಮೀಸಲಾತಿಯನ್ನು ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯದೆಡೆಗೆ ದಿಟ್ಟ ಹೆಜ್ಜೆಯನ್ನಿರಿಸಿರುವುದೇ ನಮ್ಮ ಉನ್ನತ ಶಿಕ್ಷಣವು ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದಲ್ಲಿ ಉನ್ನತ ಸ್ಥಿತಿಯಲ್ಲಿದೆ ಎಂಬುದನ್ನು ಗುರುತಿಸಿ ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಾಗಿ, ಖಾಸಗಿ ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ನಡೆಯುವ ನೇಮಕಾತಿಗಳಿಗೂ ಮೀಸಲಾತಿ ನೀತಿಯನ್ನು ವಿಸ್ತರಿಸಬೇಕಿದೆ. ಇಲ್ಲವಾದಲ್ಲಿ, ದೊಡ್ಡ ಮಟ್ಟದಲ್ಲಿಯೇ ಉನ್ನತ ಶಿಕ್ಷಣ ವ್ಯವಸ್ಥೆಗೆ ಲಗ್ಗೆಯಿಡುತ್ತಿರುವ ತಳ ಸಮುದಾಯಗಳ ಯುವಕ-ಯುವತಿಯರ ಸಾಂಸ್ಕೃತಿಕ ಅಸ್ತಿತ್ವಕ್ಕೇ ಕೊಡಲಿ ಪೆಟ್ಟನ್ನು ಕೊಟ್ಟು ಅವರನ್ನು ವ್ಯವಸ್ಥೆಯೇ ದೂರ ತಳ್ಳಿದಂತಾಗುತ್ತದೆ. ಈಗಾಗಲೇ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ; ತಳ ಸಮುದಾಯಗಳು ವ್ಯವಸ್ಥೆಯನ್ನು ಧಿಕ್ಕರಿಸಿ ನಿಂತರೆ, ಅದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕರ್ನಾಟಕ ಎದುರಿಸುವ ಸಾಧ್ಯತೆಯೇ ಇಲ್ಲ ಎಂಬುದನ್ನು ನಾವು ನೆನಪಿನಲ್ಲಿಡಲೇಬೇಕು. ಇದನ್ನು ಆಗು ಮಾಡುವುದಕ್ಕೆ ಬೇಕಿರುವ ಎಲ್ಲಾ ಹಣ ಸಂಪನ್ಮೂಲಗಳನ್ನು ಸರ್ಕಾರಗಳು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒದಗಿಸಲೇಬೇಕು.

ಎರಡನೆಯದಾಗಿ, ಇಂದು ಡಾಟಾವೇ ಸಾರ್ವಜನಿಕ ನೀತಿಗಳ ಜೀವಾಳವಾಗಿವೆ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ವಾಸ್ತವದಲ್ಲಿ ಇಂದು ದಿನನಿತ್ಯವೂ ಶಿಕ್ಷಣ ಕ್ಷೇತ್ರದಲ್ಲಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಹತ್ತು-ಹಲವು ದತ್ತಾಂಶಗಳನ್ನು ದಿನನಿತ್ಯವೂ ಕಲೆಹಾಕಲಾಗುತ್ತಿದೆ. ಮುಖ್ಯವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ AISHE ಡಾಟಾವನ್ನೂ; ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ SATS ಮತ್ತು UDISE+ ಅನ್ನು ಕಲೆಹಾಕಲಾಗುತ್ತಿದ್ದರೂ ಸರ್ಕಾರಗಳು ಅವನ್ನು ಸಾರ್ವಜನಿಕಗೊಳಿಸುತ್ತಿಲ್ಲ. ಇದರಿಂದಾಗಿ, ಶಿಕ್ಷಣ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಅರಿತು ಅವುಗಳ ನಿವಾರಣೆಗೆ ತಕ್ಕುದಾದ ನೀತಿ-ನಿರೂಪಣೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಎಲ್ಲಾ ದತ್ತಾಂಶಗಳನ್ನು ಈ ಕೂಡಲೇ ಸಾರ್ವಜನಿಕಗೊಳಿಸಬೇಕು.

ಇದನ್ನೂ ಓದಿರಿ: ಪರಿಷ್ಕೃತ ನೀತಿಗಳು ಕೈಗಾರಿಕೆಗೆ ಮಾರಕವಾಗಿದ್ದು ಹೇಗೆ?

ಕೊನೆಯದಾಗಿ, ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರವು ನಡೆದು ಬಂದ ಹಾದಿಗೆ ದೊಡ್ಡ ಪರಂಪರೆಯೇ ಇದೆಯಾದರೂ, ಪ್ರೊ. ಎ.ಸಿ. ದೇವೇಗೌಡರಂತಹ ಶಿಕ್ಷಣಾಧಿಕಾರಿಗಳು, ಎಂ.ಆರ್. ನಾರಾಯಣರಂತಹ ಕೆಲವು ಸಂಶೋಧಕರು ನಡೆಸಿರುವ ಕೆಲವು ಅಧ್ಯಯನಗಳನ್ನು ಹೊರತುಪಡಿಸಿದರೆ, ಕರ್ನಾಟಕವಿನ್ನೂ ತಾನು ಶಿಕ್ಷಣ ಕ್ಷೇತ್ರದಲ್ಲಿ ಸವೆಸಿರುವ ಹಾದಿಯನ್ನು ಸಮಗ್ರವಾಗಿ ಮತ್ತು ಚಿಕಿತ್ಸಕ ದೃಷ್ಟಿಕೋನದಿಂದ ಕಟ್ಟಿಕೊಳ್ಳಲು ಸಾಧ್ಯವೇ ಆಗಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿಲ್ಲ ಎಂಬುದು ವಿಚಿತ್ರವೆನಿಸಿದರೂ ವಾಸ್ತವ. ಈ ನಿಟ್ಟಿನಲ್ಲಿ ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಪರಿಗಣಿಸಿ ಈ ರೀತಿಯ ಒಂದು ವರದಿಯನ್ನು ಹೊರತರಲು ತಜ್ಞರ ಸಮಿತಿಯೊಂದನ್ನು ರಚಿಸಬೇಕು; ಹೆಚ್ಚಿನ ದತ್ತಾಂಶ ಮತ್ತು ದಾಖಲೆಗಳ ಅಲಭ್ಯತೆಯ ವಾಸ್ತವದ ನಡುವೆ ಶಿಕ್ಷಣ ಕ್ಷೇತ್ರದ ವಿಚಾರವಾಗಿ, ಅದರಲ್ಲಿಯೂ ಉನ್ನತ ಶಿಕ್ಷಣ ಕ್ಷೇತ್ರದ ಬಗ್ಗೆ ಐತಿಹಾಸಿಕ ಒಳನೋಟಗಳುಳ್ಳ ಸಮಗ್ರ ಮತ್ತು ಚಿಕಿತ್ಸಕ ನೆಲೆಯಿಂದ ಬರೆಯುವುದು ಕಷ್ಟ ಸಾಧ್ಯ. ಅದರೊಂದಿಗೆ ಪದಗಳ ಮಿತಿಯೂ ಸೇರಿ, ಹತ್ತು-ಹಲವು ಮಹತ್ವದ ಸಂಗತಿಗಳನ್ನು ಚರ್ಚಿಸಲಾಗಿಲ್ಲ ಎಂಬುದಕ್ಕೆ ಕ್ಷಮೆ ಕೋರುತ್ತಲೇ ಲೇಖನವನ್ನು ಕೊನೆಗೊಳಿಸುತ್ತಿದ್ದೇನೆ.

Shashankaa
ಶಶಾಂಕ್ ಎಸ್.ಆರ್.
+ posts

ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಇದಕ್ಕೆ ಮುಂಚೆ ಹೈದರಾಬಾದಿನ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಗಿನಿಂದಲೇ ಚಳವಳಿಗಳ ಜೊತೆಗೆ ಸಕ್ರಿಯವಾಗಿ ಭಾಗಿಯಾಗುತ್ತಾ ಬಂದಿರುವ ಶಶಾಂಕ್ ಶಿಕ್ಷಣ ಹಾಗೂ ಇತರ ಸಂಗತಿಗಳ ಕುರಿತು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಸಾಮಾಜಿಕ ಚಳವಳಿ ಮತ್ತು ಅನುವಾದ ಅವರ ಆಸಕ್ತಿ ಕ್ಷೇತ್ರ. ಈ ಸಧ್ಯ ‘ದಿ ಮಿಸ್-ಎಜುಕೇಶನ್ ಆಫ್ ದಿ ನೀಗ್ರೋ’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಶಾಂಕ್ ಎಸ್.ಆರ್.
ಶಶಾಂಕ್ ಎಸ್.ಆರ್.
ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ. ಇದಕ್ಕೆ ಮುಂಚೆ ಹೈದರಾಬಾದಿನ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಗಿನಿಂದಲೇ ಚಳವಳಿಗಳ ಜೊತೆಗೆ ಸಕ್ರಿಯವಾಗಿ ಭಾಗಿಯಾಗುತ್ತಾ ಬಂದಿರುವ ಶಶಾಂಕ್ ಶಿಕ್ಷಣ ಹಾಗೂ ಇತರ ಸಂಗತಿಗಳ ಕುರಿತು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಸಾಮಾಜಿಕ ಚಳವಳಿ ಮತ್ತು ಅನುವಾದ ಅವರ ಆಸಕ್ತಿ ಕ್ಷೇತ್ರ. ಈ ಸಧ್ಯ ‘ದಿ ಮಿಸ್-ಎಜುಕೇಶನ್ ಆಫ್ ದಿ ನೀಗ್ರೋ’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...