ಉತ್ತರ ಭಾರತ ಮತ್ತು ಈಶಾನ್ಯದ ರಾಜ್ಯಗಳಿಗೆ ಹೋಲಿಸಿದಲ್ಲಿ ಭಾರತದ ಆದಿಮ ಸಮಾಜಗಳಿರುವುದು ದಕ್ಷಿಣ ಭಾರತದಲ್ಲಿ ಎಂಬ ಸಂಗತಿ ಈಚೆಗೆ ಮುಂಚೂಣಿಗೆ ಬರುತ್ತಿದೆ. ಭಾರತದ ಓಡಿಶಾ ರಾಜ್ಯದಲ್ಲಿ 62 ಸಮುದಾಯಗಳನ್ನು ಅನುಸೂಚಿತ ಬುಡಕಟ್ಟುಗಳು (Scheduled Tribes) ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 50 ಸಮುದಾಯಗಳನ್ನು ಅನುಸೂಚಿತ ಬುಡಕಟ್ಟುಗಳು ಎಂದು ಪಟ್ಟಿ ಮಾಡಲಾಗಿದೆ. ಹೀಗಾಗಿ ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ಇನ್ನು ಬಡತನದ ರೇಖೆಗಿಂತ ಕೆಳಗೆ ಬದುಕುತ್ತಿರುವ ಆದಿವಾಸಿಗಳು ಹೆಚ್ಚಿರುವುದು ಉತ್ತರಾಖಂಡ್ ರಾಜ್ಯದಲ್ಲಿ. ಉತ್ತರಾಖಂಡ ರಾಜ್ಯದ ಬುಡಕಟ್ಟು ಸಮುದಾಯಗಳ ಒಟ್ಟು ಜನಸಂಖ್ಯೆಯಲ್ಲಿ ಶೇ 64.4ರಷ್ಟು ಆದಿವಾಸಿಗಳು ಬಡತನದ ರೇಖೆಗಿಂತ ಕೆಳಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಒರಿಸ್ಸಾ ರಾಜ್ಯದಲ್ಲಿ 61.8% ಮತ್ತು ಕರ್ನಾಟಕದಲ್ಲಿ ಶೇ 58.3ರಷ್ಟು ಜನ ಆದಿವಾಸಿಗಳು ಬಡತನ ರೇಖೆಗಿಂತ ಕೆಳಗಡೆ ಇದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ 50 ಬುಡಕಟ್ಟುಗಳನ್ನು ಸರಕಾರ ಪಟ್ಟಿ ಮಾಡಿದ್ದು ಈ ಬುಡಕಟ್ಟುಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ವಾಸಿಸುತ್ತಿವೆ. ಕರಾವಳಿ, ಮಲೆನಾಡು, ಅರೆಮಲೆನಾಡು ಮತ್ತು ವಿಶಾಲ ಬಯಲು ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ. ಬುಡಕಟ್ಟುಗಳು ಆಹಾರ ಸಂಗ್ರಹಣೆ, ಪಶುಪಾಲನೆ, ಕೃಷಿ, ಕೃಷಿಕೂಲಿಗಳಾಗಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 42,48,987. ಇದರಲ್ಲಿ ಆದಿಮ ಬುಡಕಟ್ಟುಗಳೆಂದು (PVTGs) ಪರಿಗಣಿತವಾದ ಜೇನುಕುರುಬ ಮತ್ತು ಕೊರಗರ ಜನಸಂಖ್ಯೆ 50,870. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯವು 32,96,354 ಜನಸಂಖ್ಯೆ ಹೊಂದಿರುವ ಅತಿ ದೊಡ್ಡ ಬುಡಕಟ್ಟು ಸಮುದಾಯವಾಗಿದ್ದರೆ, ವಿಟೋಲಿಯಾ ಸಮುದಾಯವು ಕೇವಲ 23 ಜನರನ್ನು ಹೊಂದಿರುವ ಚಿಕ್ಕ ಬುಡಕಟ್ಟು ಸಮುದಾಯವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳ ಜನಸಂಖ್ಯೆ 6.95%ರಷ್ಟಿದೆ (2001ರ ಜನಸಂಖ್ಯೆಯಲ್ಲಿ ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ 6.6% ಬುಡಕಟ್ಟುಗಳ ಜನಸಂಖ್ಯೆ ದಾಖಲಾಗಿತ್ತು).
ಕಳೆದ ಗಣತಿಗೆ ಹೋಲಿಸಿದರೆ ಆದಿವಾಸಿಗಳ ಜನಸಂಖ್ಯೆಯಲ್ಲಿ ಬೆಳವಣಿಗೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಬುಡಕಟ್ಟುಗಳ ಗರಿಷ್ಠ 19.03% ಜನಸಂಖ್ಯೆ ದಾಖಲಾದರೆ, ಮಂಡ್ಯದಲ್ಲಿ ಅತ್ಯಂತ ಕನಿಷ್ಠ 1.24%ರಷ್ಟು ಬುಡಕಟ್ಟು ಜನಸಂಖ್ಯೆ ದಾಖಲಾಗಿದೆ. ಬುಡಕಟ್ಟುಗಳ ಜನಸಂಖ್ಯೆಯಲ್ಲಿ 1000 ಪುರುಷರು, 990 ಮಹಿಳೆಯರ ಲಿಂಗಾನುಪಾತವಿದೆ. ದೇಶದ ಜನಸಂಖ್ಯೆಯಲ್ಲಿ ಒಟ್ಟಾರೆ 75% ಸಾಕ್ಷರತೆಯ ಪ್ರಮಾಣ ದಾಖಲಾಗಿದೆ. ಬುಡಕಟ್ಟುಗಳಲ್ಲಿ 53.9%ರಷ್ಟು ಸಾಕ್ಷರರಿರುವುದು ಕಂಡುಬರುತ್ತದೆ. ಭಾರತ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಒಟ್ಟು ಜನ 21.9%ರಷ್ಟಿದ್ದಾರೆ. ಆದರೆ ಬುಡಕಟ್ಟು ಜನರಲ್ಲಿ ಸರಿ ಸುಮಾರು ಅರ್ಧದಷ್ಟು ಜನ ಅಂದರೆ 47.3%ರಷ್ಟು ಗ್ರಾಮೀಣ ಭಾಗದಲ್ಲಿ ಮತ್ತು 33.3% ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ. ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ಬದುಕುತ್ತಿರುವ ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಉತ್ತರಖಂಡ ಮತ್ತು ಒರಿಸ್ಸಾ ರಾಜ್ಯಗಳು ಮೊದಲೆರಡು ಸ್ಥಾನಗಳಲ್ಲಿವೆ. ನಂತರದ ಸ್ಥಾನದಲ್ಲಿ ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಡ್, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಿವೆ.
ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಎದುರಿಸುತ್ತಿರುವ ಸವಾಲುಗಳೇನು?
ನಮ್ಮ ದೇಶದ ವಿವಿಧ ಸಮಾಜಗಳ ಮೂಲಬೇರುಗಳಂತಿರುವ ಆದಿವಾಸಿ ಸಮುದಾಯಗಳು ಇಲ್ಲಿನ ಬಹುತ್ವ ಮತ್ತು ಅದರ ಪ್ರಾಚೀನತೆಗೆ ಮಹತ್ವದ ಕೊಡುಗೆಗಳನ್ನು ನೀಡಿವೆ. ಆದಿವಾಸಿಗಳ ಪರಂಪರೆ ಮತ್ತು ತ್ಯಾಗಗಳ ಕುರಿತು ಸಂಭ್ರಮಿಸುವ ಪ್ರಭುತ್ವವು ಅವರ ಅಭಿವೃದ್ಧಿಗೆ ಪ್ರಾಮುಖ್ಯವನ್ನು ನೀಡಿಲ್ಲದಿರುವುದು ಚಾರಿತ್ರಿಕ ಸತ್ಯ. ಆದಿವಾಸಿಗಳನ್ನು ಈ ದೇಶದ ಪ್ರಭುತ್ವ ಹೀನಾಯವಾಗಿ ನಡೆಸಿಕೊಂಡು ಬಂದಿದೆ ಎಂಬುದನ್ನು ಕಂಡುಕೊಳ್ಳಲು ದೊಡ್ಡ ಸಂಶೋಧನೆಯನ್ನು ಮಾಡುವ ಅಗತ್ಯವಿಲ್ಲ. ಆದಿವಾಸಿಗಳ ಕುರಿತು ತೋರಿಕೆಯ ಕಾಳಜಿಗಳನ್ನು ಹೊಂದಿರುವ ಪ್ರಭುತ್ವವು ಅನಾದಿ ಕಾಲದಿಂದ ಈ ಸಮುದಾಯಗಳ ಸಬಲೀಕರಣದ ಮಾತುಗಳನ್ನಾಡುತ್ತಾ ಬಂದಿದೆ.
ಆದಿವಾಸಿಗಳ ಅಭಿವೃದ್ಧಿ ನೀತಿ ಎಂಬುದೊಂದು ಇದೆಯೇ?
ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ನಡೆದ ಆದಿವಾಸಿಗಳ ಅಭಿವೃದ್ಧಿಯ ಕುರಿತ ಚರ್ಚೆಗೆ ಹಲವು ಆಯಾಮಗಳಿವೆ. ವಸಾಹತು ಆಡಳಿತದ ಸಂದರ್ಭದಲ್ಲಿ ಕೆಲವು ಮಿಷಿನರಿಗಳು ಆದಿವಾಸಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಉದಾಹರಣೆಗಳಿವೆಯಾದರೂ, ಕಳೆದ ಶತಮಾನದ ಅರವತ್ತರ ದಶಕದಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು ಅವರು ಆದಿವಾಸಿಗಳ ಸಂಸ್ಕೃತಿ ಮತ್ತು ಅವರ ಅಭಿವೃದ್ಧಿಗೆ ಪಂಚಶೀಲ ತತ್ವಗಳನ್ನೇ ರೂಪಿಸಿದರು. ನೆಹರು ಆದಿವಾಸಿಗಳ ಕುರಿತು ಗಂಭೀರವಾಗಿ ಚಿಂತಿಸಲು ತೊಡಗಿದ್ದು, ಅಂದಿನ ತಮ್ಮ ಸಹವರ್ತಿ ವೆರಿಯರ್ ಎಲ್ವಿನ್‌ರ ಪ್ರಭಾವದಿಂದ. ಎಲ್ವಿನ್ನರ Philosphy for NEFA ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ನೆಹರು ಎಲ್ವಿನ್‌ರ ಕುರಿತು `He is the missionary of my views of tribal affairs’ ಎಂದೇ ಬರೆಯುತ್ತಾರೆ. ನೆಹರು ಮುಂದುವರೆದು, “ಆದಿವಾಸಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾವು ಒತ್ತಾಯದಿಂದ ಅವರ ಮೇಲೆ ಏನನ್ನೂ ಹೇರಕೂಡದು. ಮತ್ತು ವಸ್ತುಸಂಗ್ರಹಾಲಯದ ಸ್ಪೆಸಿಮನ್‌ಗಳ ತರಹ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಬಾರದು. ಅವರ ಅಭಿವೃದ್ಧಿಗೆ ಒಂದು `ಸುವರ್ಣ ಮಧ್ಯಮ ಸೂತ್ರ’ವನ್ನು ಕಂಡುಕೊಳ್ಳಬೇಕು” ಎನ್ನುತ್ತಾರೆ. ಯುರೋಪಿನ ಅಭಿವೃದ್ಧಿಯ ಮಾದರಿಯನ್ನು ಒಪ್ಪಿಕೊಂಡ ನೆಹರುವಿಗೆ ಈ ಅಭಿವೃದ್ಧಿಯ ಜೊತೆಯಲ್ಲಿಯೇ ಬರುವ ಆಧುನಿಕತೆಯ ಕುರಿತು ಸಂದೇಹಗಳಿದ್ದವು. ಆಧುನಿಕತೆ ಬುಡಕಟ್ಟುಗಳ ಬದುಕನ್ನು ನಾಶ ಮಾಡಿಬಿಡುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಆದಿವಾಸಿಗಳ ಜೀವನ ವಿಧಾನ, ಸಂಸ್ಕೃತಿ, ಹಾಡು, ಕುಣಿತ ಮತ್ತು ಅವರ ಪರಂಪರೆಗೆ ಘಾಸಿಯಾಗದಂತೆ ನಾವು ಅಭಿವೃದ್ಧಿ ನೀತಿಯನ್ನು ರೂಪಿಸಬೇಕು ಎಂಬುದು ಅವರ ಇರಾದೆಯಾಗಿತ್ತು. ಇದನ್ನು, ಆದಿವಾಸಿಗಳ ಅಭಿವೃದ್ಧಿಯ ಕುರಿತ ನೆಹರೂ ಎಲ್ವಿನ್ ಪಂಥೀಯ ದೃಷ್ಟಿಕೋನ ಎಂದು ಸರಳವಾಗಿ ಕರೆಯಬಹುದು. ಆದರೆ ನೆಹರು ಎಲ್ವಿನ್ ಚಿಂತನೆಗಳಲ್ಲಿದ್ದ `ಆದಿವಾಸಿಗಳ ಸಂಸೃತಿಯನ್ನು ಉಳಿಸಬೇಕು’ ಎಂಬ ಒಂದು ಸದಾಶಯವನ್ನೇ ತಿರುಚಿದ ಚರ್ಚೆ ನಂತರದಲ್ಲಿ ಅಸ್ತಿತ್ವಕ್ಕೆ ಬಂತು.

ಆದಿವಾಸಿಗಳು ಅಭಿವೃದ್ಧಿ ಬಯಸಿ `ಮುಖ್ಯವಾಹಿನಿ’ಗೆ ಬಂದರೆ ಅವರ ಸಂಸ್ಕೃತಿಯ ಗತಿ ಏನು? ಅವರು ಮುಖ್ಯವಾಹಿನಿಗೆ ಬರಬೇಕೋ ಅಥವಾ ಕಾಡಲ್ಲಿಯೇ ಬದುಕಬೇಕೋ? ಎಂಬ ಚರ್ಚೆ ಶುರುವಾಯಿತು. ಅಂದು ಶುರುವಾದ ಈ ಚರ್ಚೆ ಕಾಲಕಾಲಕ್ಕೆ ಹುಟ್ಟಿರಬಹುದಾದ ಹೊಸ ಕ್ಲೀಷೆಗಳ ಜೊತೆ ಇಂದಿಗೂ ಯಥೇಚ್ಛವಾಗಿ ನಡೆಯುತ್ತಲೇ ಇದೆ. ಆದಿವಾಸಿಗಳು ಎಲ್ಲರಂತೆ ಅಭಿವೃದ್ಧಿಯಾಗಬೇಕು, ಕಾಲದ ಹೊಸ ಅಗತ್ಯಗಳಿಗೆ ಅನುಗುಣವಾಗಿ ಅವರ ಬದುಕಲ್ಲಿ ಹೊಸತನ ಪ್ರಾಪ್ತವಾಗಬೇಕೆಂಬ ಆಶಯಗಳು ಹಿನ್ನೆಲೆಗೆ ಸರಿದಿವೆ ಸ್ವಾತಂತ್ರ್ಯಾ ನಂತರ ಆದಿವಾಸಿ, ಅಲೆಮಾರಿ ಮತ್ತು ಅಸಂಖ್ಯಾತ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಒಂದು `ನೀತಿ’ ಎಂಬುದು ಭಾರತದಲ್ಲಿ ರೂಪುಗೊಳ್ಳಲಿಲ್ಲ. ಆದಿವಾಸಿಗಳ ಕುರಿತು ನೆಹರು ಕನಸಿದ `ಸುವರ್ಣ ಮಧ್ಯಮ ಸೂತ್ರ’ವನ್ನು ಒಳಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಅಸ್ತಿತ್ವಕ್ಕೂ ಬರಲಿಲ್ಲ. ಕರ್ನಾಟಕದಲ್ಲೂ ಆದಿವಾಸಿಗಳನ್ನು ಸಬಲೀಕರಿಸುವ ವಸ್ತುನಿಷ್ಠವಾದ ಒಂದು ಅಭಿವೃದ್ಧಿ ನೀತಿಯನ್ನು ರೂಪಿಸಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಆದಿವಾಸಿಗಳ ಅಭಿವೃದ್ಧಿ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಒಂದು ಕಲ್ಯಾಣ ರಾಜ್ಯ ಹೇಗೆ ಯೋಚಿಸಬೇಕು? ಆದಿವಾಸಿಗಳ ಅಭಿವೃದ್ಧಿಗೆ ನೆಹರು ಕಲ್ಪಿತ `ಸುವರ್ಣ ಮಧ್ಯಮ ಸೂತ್ರ’ ಕಂಡುಕೊಳ್ಳಲು ಸಾಧ್ಯವೇ? ಸಾಧ್ಯವಿದೆ. ನಮ್ಮ ಆದಿಮ ಪರಂಪರೆಯ ಬೇರುಗಳಂತಿರುವ ಬುಡಕಟ್ಟುಗಳನ್ನು ಅರಣ್ಯದ ನಿಜ ವಾರಸುದಾರರೆಂದು ಪರಿಗಣಿಸಬೇಕು, ಇಲ್ಲವೇ ರಕ್ಷಿತ ಅರಣ್ಯದ ಒಡೆತನದಲ್ಲಿ ಅವರು `ಹಕ್ಕುಳ್ಳ’ ಪಾಲುದಾರರಾಗಿರಬೇಕು. ತಾವು ಅರಣ್ಯದಲ್ಲಿರಬೇಕೋ, ಅರಣ್ಯದ ಅಂಚಿನಲ್ಲಿರಬೇಕೋ ಅಥವಾ ಅರಣ್ಯ ತೊರೆದು ಬದುಕಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು. ಏಕೆಂದರೆ ಅರಣ್ಯದ ಜೊತೆಗಿನ ಅನುಸಂಧಾನದಿಂದಾಗಿಯೇ ಅವರ ಭಾಷೆ, ಕಸಬು, ಸಂಸ್ಕೃತಿ ಪರಂಪರೆಗಳು ಅಸ್ತಿತ್ವದಲ್ಲಿವೆ. ಇದರ ಜೊತೆಗೆ ಬುಡಕಟ್ಟುಗಳು `ಮುಖ್ಯವಾಹಿನಿ’ಯ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು. ಇಷ್ಟಾಗಿಯೂ ಆದಿವಾಸಿಗಳಿಗೆ ತಮ್ಮ ಸಂಸ್ಕೃತಿ ಪರಂಪರೆಗಳು ಮುಖ್ಯ ಎಂದೆನ್ನಿಸಿದರೆ ಅವೂ ಉಳಿಯುತ್ತವೆ. ಪಂಡಿತ್ ನೆಹರು ಅವರ ಸುವರ್ಣ ಮಧ್ಯಮ ಸೂತ್ರವೇ ಆದಿವಾಸಿಗಳನ್ನು ಸಬಲೀಕರಿಸುವ ನಿಟ್ಟಿನಲ್ಲಿ ವಸ್ತುನಿಷ್ಠ ಗುರಿಗಳನ್ನು ಹೊಂದಿದೆ. ಮತ್ತು ಸಮಾಜವಾದಿ ಆಶಯಗಳನ್ನು ಹೊಂದಿರುವ ಕಾರಣಕ್ಕಾಗಿ ಈ ಸೂತ್ರವನ್ನು ಕಾಲದ ಅಗತ್ಯಕ್ಕೆ ಅನುಗುಣವಾಗಿ ರೂಪಿಸಿ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ಆದಿವಾಸಿಗಳನ್ನು ಸಬಲೀಕರಿಸಲು ಕೇವಲ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದರೆ ಸಾಲದು, ಬದಲಿಗೆ ಆದಿವಾಸಿಗಳ ಅಭಿವೃದ್ಧಿಗೆ ಒಂದು ಸ್ಪಷ್ಟವಾದ `ಅಭಿವೃದ್ಧಿ ನೀತಿ’ಯನ್ನು ರೂಪಿಸುವ ಅಗತ್ಯವಿದೆ.
ಅರಣ್ಯನೀತಿ, ಸ್ಥಳಾಂತರ ಮತ್ತು ಆದಿವಾಸಿ ಸಮುದಾಯಗಳು
ಆದಿವಾಸಿಗಳ ಅನಭಿವೃದ್ಧಿಗೂ ಮತ್ತು ಭಾರತದ ಅರಣ್ಯ ನೀತಿಗೂ ನೇರ ಸಂಬಂಧವಿದೆ. ಶತಮಾನಗಳ ಕಾಲದ ಈ ಚಾರಿತ್ರಿಕ ಬಿಕ್ಕಟ್ಟನ್ನು ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಯಾವುದೇ ದೇಶದ ಆದಿವಾಸಿಗಳಿಗೂ ಅರಣ್ಯಕ್ಕೂ ಒಂದು ಸಾವಯವ ಸಂಬಂಧ ಇದ್ದೇ ಇರುತ್ತದೆ. ಅದರಲ್ಲೂ ಭಾರತದ ಸಾಮಾಜಿಕ ಸಂದರ್ಭದಲ್ಲಿ ಅರಣ್ಯ ಮತ್ತು ಸಮುದಾಯಗಳ ಸಂಬಂಧ ಅವಿಚ್ಫಿನ್ನವಾದದ್ದು. ಆದಿವಾಸಿಗಳು ಅರಣ್ಯವನ್ನು `ಆಸ್ತಿ’ ಎಂದು ಪರಿಗಣಿಸಲಿಲ್ಲ. ಅರಣ್ಯವು ಅಧ್ಯಾತ್ಮವಾಗಿ, ತಿಳಿವಿನ ಮೂಲವಾಗಿ, ಮನುಷ್ಯನ ಯಾವತ್ತೂ ಸಂಗಾತಿಯಾಗಿ ಅವರ ಬದುಕಲ್ಲಿ ಹಾಸುಹೊಕ್ಕಾಗಿತ್ತು. ಆದರೆ ವಸಾಹತು ಆಡಳಿತದ ಸಂದರ್ಭದಲ್ಲಿ ಮಾನವ ಮತ್ತು ಅರಣ್ಯದ ನಡುವಿನ ಸಂಬಂಧದ ವ್ಯಾಖ್ಯಾನ ಬದಲಾಯಿತು. ಸಮುದಾಯಗಳ ಬದುಕಿನ ಭಾಗವಾಗಿದ್ದ ಅರಣ್ಯವು ಪ್ರಭುತ್ವದ ಬಂಡವಾಳಶಾಹಿಗಳ ಖಾಸಗಿ ಆಸ್ತಿಯಾಗಿ ಬದಲಾಯಿತು. ಸಹಜವಾಗಿಯೇ ಆದಿವಾಸಿಗಳಿಗೆ ಅರಣ್ಯದ ಜೊತೆ ಇದ್ದ ಪಾರಂಪರಿಕ ಸಂಬಂಧಗಳಿಗೆ ಸಂಚಕಾರ ಬಂದೊದಗಿತು. ಅರಣ್ಯಗಳಲ್ಲಿ ಬದುಕುತ್ತಿದ್ದ ಆದಿವಾಸಿಗಳು ವಸಾಹತು ಆಡಳಿತದ ಅರಣ್ಯ ನೀತಿಗಳಿಂದ ಅತಂತ್ರರಾಗಿ ತಮ್ಮ ವಾಸದ ನೆಲೆಗಳಲ್ಲಿಯೇ ಅನ್ಯರಾಗುತ್ತ ಹೋದರು. ಕರ್ನಾಟಕದಲ್ಲಿ ನಾಗರಹೊಳೆ, ಬನ್ನೇರಘಟ್ಟ, ಬಂಡಿಪುರ, ಕುದುರೆಮುಖ ಮತ್ತು ಅಣಶಿ ಎಂಬ ಐದು ರಾಷ್ಟ್ರೀಯ ಉದ್ಯಾನಗಳಿವೆ. ಹಲವು ವನ್ಯಜೀವ ಸಂರಕ್ಷಣಾ ವಲಯಗಳಿವೆ. ಮೈಸೂರು, ಚಾಮರಾಜನಗರ, ಮತ್ತು ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿ ಸಂರಕ್ಷಣಾ ಯೋಜನೆಗಳಿಂದಾಗಿ ಒಕ್ಕಲೆಬ್ಬಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದ ಸ್ಥಳಾಂತರ ಅತ್ಯಂತ ಅಮಾನವೀಯವಾದದ್ದು. ಹುಲಿ ಯೋಜನೆ, ಕಬಿನಿ ಮತ್ತು ತಾರಕ ಅಣೆಕಟ್ಟುಗಳಿಂದ ಒಕ್ಕಲೆದ್ದ ಆದಿವಾಸಿಗಳನ್ನು ಕಾಡಂಚಿನಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಹಠಕ್ಕೆ ಬಿದ್ದು ಕಾಡಲ್ಲಿಯೇ ಉಳಿದ ಆದಿವಾಸಿಗಳನ್ನು ವನ್ಯಜೀವಿ ಸಂರಕ್ಷಕರು ಎಂದು ಹೇಳಿಕೊಳ್ಳುವ ಜನ ಹಣದ ಆಮಿಷ ಒಡ್ಡಿ ಕಾಡಿನಿಂದ ಹೊರಹಾಕುತ್ತಿದ್ದಾರೆ. ಹೀಗೆ ಕಾಡಿನಿಂದ ಹೊರಗೆಸೆಯಲ್ಪಟ್ಟ ಆದಿವಾಸಿಗಳು ಆತಂತ್ರರಾಗುತ್ತಾರೆ. ತಮ್ಮ ಮೂಲ ನೆಲೆಗಳಲ್ಲಿ ಅವರು ಹೊಂದಿದ್ದ ಶತಮಾನಗಳ ಅವಿನಾಭಾವ ಸಂಬಂಧಗಳು ಇಲ್ಲವಾದ ಕೊರಗಿನಲ್ಲಿ ನರಳುತ್ತಿದ್ದಾರೆ. ಅವರ ಭಾವಕೋಶದ ಒಳಗಿದ್ದ ಪರಂಪರೆಯ ತಂತುಗಳು ಒಂದೊಂದೇ ತುಂಡರಿಸಲ್ಪಟ್ಟಿವೆ.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಕೋಮುವಾದಕ್ಕೆ ಬಲಿಯಾಗದ ರಂಗಭೂಮಿ
ಕರ್ನಾಟಕದಲ್ಲಿ ಅರಣ್ಯವು ಕಾಲದಿಂದ ಕಾಲಕ್ಕೆ ಕುಗ್ಗುತ್ತಾ ಬಂದಿದೆ. ಅರಣ್ಯವು ಒಂದು ರೀತಿಯಲ್ಲಿ ಸ್ಥಳೀಯ ಊಳಿಗಮಾನ್ಯ ಸಮುದಾಯಗಳ ಖಾಸಗಿ ಆಸ್ತಿಯಾದಂತಾಗಿದೆ. ಪ್ರಭುತ್ವವು ಅರಣ್ಯವನ್ನು ರಕ್ಷಿಸಬೇಕು ಎಂದು ಹೇಳುತ್ತಲೇ ಇದೆ. ಆದರೆ ಯಾರಿಂದ ಅರಣ್ಯವನ್ನು `ರಕ್ಷಿಸಲಾಗುತ್ತದೆ’ ಎಂಬುದು ಅಗೋಚರ ಸಂಗತಿಯೇ ಆಗಿದೆ. ಅರಣ್ಯ ಯಾರದು? ಯಾರು ಅದನ್ನು ಬಳಸಬೇಕು? ಅರಣ್ಯದಲ್ಲಿ ಯಾರಿರಬೇಕು? ಯಾರಿರಬಾರದು? ಎಂಬೆಲ್ಲ ಚರ್ಚೆಗಳು ಮಾತ್ರ ಒಂದು ವರ್ಗದ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತಿವೆ. ಆದರೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ರಾಷ್ಟ್ರೀಯ ಉದ್ಯಾನಗಳಿಗೆ ಆಧುನಿಕವೆನ್ನಿಸುವ ಸ್ವರೂಪವನ್ನು ಕಲ್ಪಿಸಿತು. ಆದರೂ ಈ ಸಚಿರಕ್ಷಿತ ಅರಣ್ಯಗಳಲ್ಲಿ ಬೃಹತ್ ಆಣೆಕಟ್ಟೆಗಳು ನಿರ್ಮಾಣಗೊಂಡವು, ಗಣಿಗಾರಿಕೆಗೆ ಎಣೆಯಿಲ್ಲದ ಅವಕಾಶಗಳು ಲಭಿಸಿದವು. ಸರಕಾರದ ಬೃಹತ್ ಯೋಜನೆಗಳಿಗಾಗಿ, ಗಣಿಗಾರಿಕೆಗಾಗಿ, ಅಣೆಕಟ್ಟು ನಿರ್ಮಾಣಕ್ಕಾಗಿ ಮತ್ತು ಅಣುಸ್ಥಾವರಗಳನ್ನು ಸ್ಥಾಪಿಸುವ ಸಲುವಾಗಿ ಅರಣ್ಯಗಳನ್ನು ಎಗ್ಗಿಲ್ಲದೆ ನಾಶ ಮಾಡಲಾಯಿತು. ಘೋಷಿತ ರಾಷ್ಟ್ರೀಯ ಉದ್ಯಾನಗಳ ಎದೆ ಬಗಿದು ಈ ಅಭಿವೃದ್ಧಿ ಯೋಜನೆಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಆದರೆ ಅರಣ್ಯದಲ್ಲಿ ಬದುಕುವ, ಅಲ್ಲಿನ ಉಪಉತ್ಪನ್ನಗಳನ್ನು ಸಂಗ್ರಹಿಸುವ ಮತ್ತು ಅದನ್ನು ಮಾರಾಟ ಮಾಡುವ ಆದಿವಾಸಿಗಳ ಪಾರಂಪರಿಕ ಹಕ್ಕುಗಳನ್ನು ರಾಷ್ಟ್ರೀಯ ಉದ್ಯಾನ ಕಾಯ್ದೆ ಕಿತ್ತುಕೊಂಡಿತು. ಜೊತೆಗೆ ಸಂರಕ್ಷಿತ ಅರಣ್ಯಗಳಲ್ಲಿ ಜನವಸತಿಗಳಿರಕೂಡದು ಎಂದು ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಯಿತು. ಸ್ವಾತಂತ್ರ್ಯಾ ನಂತರ ಒಟ್ಟು 8.54 ಮಿಲಿಯನ್ ಆದಿವಾಸಿಗಳನ್ನು ಹೀಗೆ ಒಕ್ಕಲೆಬ್ಬಿಸಲಾಯಿತು. ಇಂತಹ ಸಂದರ್ಭದಲ್ಲಿ ಜಾರಿಗೆ ಬಂದ 2006ರ `ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು’ ಕಾಯ್ದೆ ಆದಿವಾಸಿಗಳಿಗೆ ಉಸಿರಾಡುವಂತೆ ಮಾಡಿತ್ತು. ಈ ಕಾಯ್ದೆ ಆದಿವಾಸಿಗಳ ಬದುಕಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ತರಬಲ್ಲದು ಎಂಬ ಭರವಸೆಯನ್ನೂ ಹುಟ್ಟಿಸಿತ್ತು. ಆದರೆ ಕಾಯ್ದೆಯಲ್ಲಿರುವ ಕೆಲವು ಗೊಂದಲಗಳು ಆದಿವಾಸಿಗಳಲ್ಲಿ ನಿರಾಶೆ ಹುಟ್ಟಿಸಿವೆ. ಅದರಲ್ಲೂ ಸುಪ್ರೀಮ್ ಕೋರ್ಟ್ 2017ರಲ್ಲಿ 11.6 ಲಕ್ಷ ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಬೇಕು ಎಂಬ ತೀರ್ಪು ನೀಡಿದ ಮೇಲೆ ಆದಿವಾಸಿಗಳ ಅಸ್ತಿತ್ವದ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ತಾವು ಬದುಕುವ ಪ್ರಾಂಜಲ ಪರಿಸರವನ್ನು ತಲೆತಲಾಂತರಗಳಿಂದ ರಕ್ಷಿಸಿಕೊಂಡು ಬಂದ ಕಾರಣಕ್ಕೆ ಆದಿವಾಸಿಗಳಿಗೆ ಅರಣ್ಯದ ಮೇಲೆ ಸಹಜ ಹಕ್ಕುಗಳಿವೆ. ಖನಿಜಗಳಿಗಾಗಿ, ಫಲವತ್ತಾದ ಕೃಷಿಭೂಮಿಗಾಗಿ ಅರಣ್ಯವನ್ನು ವಶಪಡಿಸಿಕೊಳ್ಳುವ ಹೊರಗಿನವರ ದಾಳಿಗಳು ನಡೆಯುತ್ತಲೇ ಇವೆ. ಆರ್ಥಿಕ ಉದಾರೀಕರಣದ ನಂತರ ಸಾಮ್ರಾಜ್ಯಶಾಹಿಗಳು ಈ ಆಕ್ರಮಣಗಳನ್ನು ಇನ್ನೂ ತೀವ್ರಗೊಳಿಸಿದ್ದಾರೆ. ಈ ದುರಾಕ್ರಮಣಗಳಲ್ಲಿ ಅರಣ್ಯವಾಸಿ ಆದಿವಾಸಿಗಳು ನೆಲೆ ಕಳೆದುಕೊಳ್ಳುತ್ತಲೇ ಇವೆ. ಆದಿವಾಸಿಗಳ ಇಚ್ಛೆಗೆ ವಿರುದ್ಧವಾಗಿ ವಾಸದ ನೆಲೆಗಳಿಂದ ಅವರನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಆದಿವಾಸಿಗಳು ತಮ್ಮ ನೆಲೆಗಳಲ್ಲಿ ಬದುಕುವ ಸಹಜ ಹಕ್ಕುಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸರಕಾರ ಮತ್ತು ಸಾಮ್ರಾಜ್ಯಶಾಹಿ ರಾಜಕಾರಣ ಈ ಹಕ್ಕುಗಳನ್ನು ನಿರಾಕರಿಸುತ್ತಲೇ ಬಂದಿದೆ. ಜನಾಂಗವೊಂದರ ಜೀವಿಸುವ, ನೆಲೆ ಕಂಡುಕೊಳ್ಳುವ ಸಹಜ ಹಕ್ಕುಗಳನ್ನು ನಿರಾಕರಿಸುವ ಮೂಲಕ ಅದನ್ನು ನಿರ್ಗತಿಕ ಸ್ಥಿತಿಗೆ ತಳ್ಳಲಾಗುತ್ತದೆ. ಇದು ಜನಾಂಗ ನಾಶಕ್ಕೆ ಸಾಮ್ರಾಜ್ಯಶಾಹಿಗಳು ಇಡುವ ಮೊದಲ ಹೆಜ್ಜೆ.
ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?
ತಾನು ಹುಟ್ಟಿದ ನೆಲದಲ್ಲಿಯೇ ಜನಾಂಗವೊಂದನ್ನು ಅನ್ಯವಾಗಿಸುವುದು ಮತ್ತು ಆತ್ಮದ್ವೇಷ ಹುಟ್ಟಿಸುವುದು ಜನಾಂಗ ನಾಶದ ಕಾರ್ಯಾಚರಣೆಯ ಎರಡನೇ ಹಂತ. ಅಮೆರಿಕಾದ ರೆಡ್‌ಇಂಡಿಯನ್‌ರನ್ನು, ಆಸ್ಟ್ರೇಲಿಯಾದ ಬುಡಕಟ್ಟುಗಳನ್ನು, ಲ್ಯಾಟಿನ್ ಅಮೆರಿಕಾದ ಆದಿವಾಸಿಗಳನ್ನು ಸಾಮ್ರಾಜ್ಯಶಾಹಿಗಳು ಹೀಗೆ ಅಕ್ಷರಶಃ ನಾಶ ಮಾಡಿದ್ದಾರೆ. ಆಫ್ರಿಕಾದ ಮೂಲನಿವಾಸಿಗಳನ್ನು ಯುರೋಪಿನ ಧನದಾಹಿ ದೇಶಗಳು ನಡೆಸಿಕೊಂಡ ರೀತಿ ಚರಿತ್ರೆಯ ಪುಟಗಳಲ್ಲಿ ಇನ್ನೂ ನಿಗಿನಿಗಿಸುತ್ತಿದೆ. ಭಾರತದ ದಂಡಕಾರಣ್ಯದ ಆದಿವಾಸಿಗಳನ್ನು ವಸಾಹತು ಆಡಳಿತ ನಡೆಸಿಕೊಂಡ ರೀತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಸ್ವಾತಂತ್ರ್ಯ ಬಂದ ಮೇಲೂ ಈ ಸ್ಥಿತಿ ಬದಲಾಗಿಲ್ಲ. ಛತ್ತೀಸಗಡ್, ಒರಿಸ್ಸಾದ ನಿಯಾಮಗಿರಿ ಮತ್ತು ಕಂದಮಾಲ್‌ಗಳಲ್ಲಿ ಆದಿವಾಸಿಗಳು ಕಾನ್ಸಂಟ್ರೇಷನ್ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಕರ್ನಾಟಕದ ಕುದುರೆಮುಖ, ನಾಗರಹೊಳೆ ಮತ್ತು ಬಂಡೀಪುರ ಅರಣ್ಯಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಛತ್ತೀಸಗಡ್, ಒರಿಸ್ಸಾ ರಾಜ್ಯಗಳ ಷೆಡ್ಯೂಲ್ಡ್ ಏರಿಯಾಗಳಲ್ಲಿ ಆದಿವಾಸಿಗಳ ಸ್ವಯಂ ಆಡಳಿತ ಜಾರಿಯಲ್ಲಿದ್ದರೂ ಅದನ್ನು ಬದಿಗೆ ಸರಿಸಲಾಗಿದೆ. ಈ ರಾಜ್ಯಗಳಲ್ಲಿ ಖನಿಜಗಳನ್ನು ಕೊಳ್ಳೆಹೊಡೆಯಲು ಬಂದಿರುವ ಬಹುರಾಷ್ಟ್ರೀಯ ಕಂಪನಿಗಳ ಹಿತವೇ ಸರಕಾರಗಳಿಗೆ ಮುಖ್ಯವಾದಂತಿದೆ.
(ಮುಂದುವರಿಯುತ್ತದೆ…)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ.. ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಎ. ಎಸ್. ಪ್ರಭಾಕರ
ಎ.ಎಸ್. ಪ್ರಭಾಕರ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯರಬಳ್ಳಿಯವರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 26 ವರ್ಷಗಳ ಬೋಧನಾ ಅನುಭವ ಹೊಂದಿದ್ದು ಬುಡಕಟ್ಟು ಸಮುದಾಯಗಳ ಅಧ್ಯಯನ ಅವರ ವಿಶೇಷ ಪರಿಣತಿ ಕ್ಷೇತ್ರವಾಗಿದೆ. `ಚಹರೆಗಳೆಂದರೆ ಗಾಯಗಳು ಹೌದು’ ಮತ್ತು ‘ಆದಿವಾಸಿಗಳ ಅಭಿವೃದ್ಧಿ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.




