ಆದಿವಾಸಿಗಳೂ ಇದ್ದಾರೆಂಬ ಅರಿವಿದೆಯೇ? (ಭಾಗ- 2)

Date:

(ಮುಂದುವರಿದ ಭಾಗ..) ಸ್ವಾತಂತ್ರ್ಯಾ ನಂತರ, ಅರಣ್ಯ ಮತ್ತು ಆದಿವಾಸಿಗಳನ್ನು ಜೊತೆಯಲ್ಲೇ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲು ಅನೇಕ ಆಯೋಗಗಳನ್ನು ಭಾರತ ಸರ್ಕಾರ ನೇಮಿಸಿದೆ. ಆದಿವಾಸಿಗಳು ಅರಣ್ಯದ ಜೊತೆ ಹೊಂದಬಹುದಾದ ಸಂಬಂಧ ಮತ್ತು ಈ ಸಂಬಂಧದ ಕುರಿತು ಸರ್ಕಾರ ಈಗಾಗಲೇ ಅಂಗೀಕರಿಸಿರುವ ಅರಣ್ಯ ನೀತಿಯಲ್ಲಿ ಇರಬಹುದಾದ ಅಡೆತಡೆಗಳನ್ನು ಸರಿಪಡಿಸುವ ಕುರಿತು ಅನೇಕ ಸಲಹೆ, ಸೂಚನೆಗಳನ್ನು ಆಯೋಗಗಳು ನೀಡಿವೆ. ಅರಣ್ಯ ಮತ್ತು ಆದಿವಾಸಿಗಳ ನಿತ್ಯದ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಆಯೋಗಗಳು ಮಾಡಿದ ಶಿಫಾರಸ್ಸುಗಳು ನಿಜಕ್ಕೂ ಮಹತ್ವದವುಗಳಾಗಿವೆ. ಆದರೆ ಈ ಆಯೋಗಗಳ ಶಿಫಾರಸುಗಳನ್ನು ಯಾವ ಸರ್ಕಾರಗಳೂ ಜಾರಿಗೆ ತರುವ ಕಾಳಜಿ ತೋರಿಸಲಿಲ್ಲ. ಅರಣ್ಯ ಮತ್ತು ಆದಿವಾಸಿಗಳ ನಡುವಿನ ಪಾರಂಪರಿಕ ಸಂಬಂಧಗಳನ್ನು ಕಾಪಾಡುವುದು, ಅರಣ್ಯದ ಉಪಉತ್ಪನ್ನಗಳ ಮೇಲೆ ಆದಿವಾಸಿಗಳಿಗೆ ಸಂಪೂರ್ಣ ಅಧಿಕಾರ ಹೊಂದಲು ಅವಕಾಶ ಮಾಡಿಕೊಡುವುದು, ಸಂಗ್ರಹಿಸಲ್ಪಟ್ಟ ಅರಣ್ಯದ ಉಪಉತ್ಪನ್ನಗಳಿಂದ ಬಂದ ಆದಾಯವನ್ನು ಆದಿವಾಸಿಗಳ ಮತ್ತು ಅರಣ್ಯಗಳ ಅಭಿವೃದ್ಧಿಗೆ ಉಪಯೋಗಿಸುವುದು ಮತ್ತು ಆದಿವಾಸಿಗಳನ್ನು ಅರಣ್ಯದ ಉಳಿವಿನ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ.

ಆದಿವಾಸಿ ಸಮುದಾಯಗಳಿಗೆ ಮೀಸಲಾತಿ: ಒಳವರ್ಗೀಕರಣದ ಅಗತ್ಯ

ಕರ್ನಾಟಕದಲ್ಲಿನ 50 ಆದಿವಾಸಿ ಸಮುದಾಯಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಕರ್ನಾಟಕದ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 42,48,987 ಇದ್ದರೆ, ವಾಲ್ಮೀಕಿ ನಾಯಕ ಸಮುದಾಯವು 32,96,354 ಜನಸಂಖ್ಯೆ ಹೊಂದಿದೆ. ಉಳಿದ 49 ಸಮುದಾಯಗಳ ಒಟ್ಟಾರೆ ಜನಸಂಖ್ಯೆ 9,52,633. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತರು ಚುನಾವಣಾ ರಾಜಕಾರಣವನ್ನು ನಿಯಂತ್ರಿಸುತ್ತಾರೆ ಮತ್ತು ಸರಕಾರಿ ಸೌಲಭ್ಯಗಳನ್ನು ಹಕ್ಕಿನಿಂದ ಪಡೆಯುತ್ತಾರೆ. ಪರಿಶಿಷ್ಟ ಪಂಗಡಗಳಿಗೆ (ಆದಿವಾಸಿಗಳಿಗೆ) ನೀಡುತ್ತಿರುವ ಸಂವಿಧಾನಬದ್ಧ ಮೀಸಲಾತಿಯಾಗಲಿ, ಅಭಿವೃದ್ಧಿ ಕಾರ್ಯಕ್ರಮಗಳಾಗಲಿ ಬಹುಸಂಖ್ಯಾತ ಸಮುದಾಯಗಳಿಗೆ ಹೆಚ್ಚಾಗಿಯೇ ಹಂಚಿಕೆಯಾಗುತ್ತಿವೆ. ಇದಕ್ಕೆ ಕಾರಣ ಬಲಿಷ್ಠ ಮತ್ತು ಬಹುಸಂಖ್ಯಾತ ಪರಿಶಿಷ್ಟ ಪಂಗಡಗಳ ರಾಜಕೀಯ ಲಾಬಿಯೂ ಕಾರಣ. ಇದನ್ನು ಸರಿದೂಗಿಸಲು ಮೀಸಲಾತಿಯನ್ನು ವರ್ಗೀಕರಿಸುವ ಅಗತ್ಯವಿದೆ. ಒಳಮೀಸಲಾತಿಯಿಂದ ಮಾತ್ರ ಇಂತಹ ಅಲ್ಪಸಂಖ್ಯಾತ ಆದಿವಾಸಿ ಸಮುದಾಯಗಳು ಸರಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆಯಲು ಸಾಧ್ಯವಾಗಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲದೆ, ರಾಜಕೀಯ ಕ್ಷೇತ್ರದಲ್ಲಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂಚಿಕೆ ಮಾಡುವ ಗುರುತರ ಹಂತಗಳಲ್ಲಿ ಒಳಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ವಾಲ್ಮೀಕಿ ನಾಯಕ ಸಮುದಾಯವನ್ನು ಹೊರತುಪಡಿಸಿದಂತೆ ಉಳಿದ ಆದಿವಾಸಿಗಳು ಅತ್ಯಂತ ಅಲ್ಪಸಂಖ್ಯಾತರು. ಇವರು ಚುನಾವಣಾ ರಾಜಕಾರಣದಲ್ಲಿ ಗೆಲುವು ಸಾಧಿಸುವುದು ಕನಸಿನ ಮಾತು. ಇಂದಿಗೂ ಈ ಸಮುದಾಯಗಳ ಯಾವ ವ್ಯಕ್ತಿಯು ವಿಧಾನಸಭೆಯ ಸದಸ್ಯನಾಗಿದ್ದ ಉದಾಹರಣೆಗಳಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳಿಗೆ ಹಲವು ಮೀಸಲು ಕ್ಷೇತ್ರಗಳಿವೆ. ಆ ಮೀಸಲು ಕ್ಷೇತ್ರಗಳ ಹಲವು ಕಡೆ ಅಲ್ಪಸಂಖ್ಯಾತ ಆದಿವಾಸಿ ಸಮುದಾಯಗಳು ವಾಸಿಸುತ್ತಿವೆ. ಆದರೆ ಇವತ್ತಿಗೂ ಈ ಅಲ್ಪಸಂಖ್ಯಾತ ಆದಿವಾಸಿ ಸಮುದಾಯಗಳು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಬಹುಸಂಖ್ಯಾತ ಪರಿಶಿಷ್ಟ ಪಂಗಡಗಳು ಈ ಮೀಸಲು ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿವೆ. ಕಾರಣ ಚುನಾವಣಾ ರಾಜಕಾರಣ ಯಾವತ್ತೂ ಬಹುಸಂಖ್ಯಾತ ಜನರ ಪರವಾಗಿರುತ್ತದೆ. ಪರಿಶಿಷ್ಟ ಪಂಗಡಗಳ 49 ಸಮುದಾಯಗಳು ಅಲ್ಪಸಂಖ್ಯಾತವಾಗಿರುವ ಕಾರಣಕ್ಕಾಗಿ ಅವುಗಳಿಗೆ ರಾಜಕೀಯ ಮೀಸಲಾತಿಯ ಪ್ರಯೋಜನವನ್ನು ಪಡೆಯಲಾಗುತ್ತಿಲ್ಲ. ಈ ರಾಜಕೀಯ ಮೀಸಲಾತಿಯನ್ನು ವಸ್ತುನಿಷ್ಠವಾಗಿ ವರ್ಗೀಕರಿಸುವ ಅಗತ್ಯವಿದೆ. ಆಗ ಮಾತ್ರ ಅಲ್ಪಸಂಖ್ಯಾತ ಆದಿವಾಸಿ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲು ಸಾಧ್ಯವಾಗುತ್ತದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಅನ್ವಯ ಪರಿಶಿಷ್ಟ ಪಂಗಡಗಳ ಮೀಸಲಾತಿಯು ಸಮನಾಗಿ ಹಂಚಿಕೆಯಾಗುವ ಸಲುವಾಗಿ ಒಳಮೀಸಲಾತಿಯನ್ನು ಕಲ್ಪಿಸುವ ಅಗತ್ಯವಿದೆ.

ಅರಣ್ಯವಾಸಿ ಬುಡಕಟ್ಟುಗಳ ಪಾರಂಪರಿಕ ಹಕ್ಕುಗಳ ಕಾಯ್ದೆಯ ಅನುಷ್ಠಾನ ಮತ್ತು ಭೂ ಒಡೆತನದ ಪ್ರಶ್ನೆಗಳು

ಭಾರತದ ಸರ್ವೋಚ್ಚ ನ್ಯಾಯಾಲಯವು ಸಮತಾ ಪ್ರಕರಣದಲ್ಲಿ (1997ರಲ್ಲಿ) ಆದಿವಾಸಿಗಳ ಭೂ ಒಡೆತನದ ಕುರಿತು ಅತ್ಯಂತ ಚಾರಿತ್ರಿಕ ಮತ್ತು ಸುದೀರ್ಘ ತೀರ್ಪೊಂದನ್ನು ನೀಡಿದೆ. `ಭೂಮಿ ಆದಿವಾಸಿಗಳಿಗೆ ಸಹಜವಾಗಿ ದತ್ತವಾದ ಅತ್ಯಂತ ಬೆಲೆಬಾಳುವ ಆಸ್ತಿ, ಅದು ಆದಿವಾಸಿಗಳ ಸ್ಥಿರಾಸ್ತಿ, ಭೂ ಒಡೆತನದಿಂದ ಆದಿವಾಸಿಗಳು ಸಾಮಾಜಿಕ ಘನತೆ, ಸಮಾನತೆ ಮತ್ತು ಆರ್ಥಿಕ ಸಬಲತೆಯನ್ನು ಹೊಂದುತ್ತಿದ್ದಾರೆ. ಈ ಕಾರಣಕ್ಕಾಗಿ ಆದಿವಾಸಿಗಳ ಭೂಮಿಯನ್ನು ಸಂವಿಧಾನ ರಕ್ಷಿಸಬೇಕು’.

ಇದನ್ನೂ ಓದಿರಿ: ಆದಿವಾಸಿಗಳೂ ಇದ್ದಾರೆಂಬ ಅರಿವಿದೆಯೇ? (ಭಾಗ- 1)

ಆದಿವಾಸಿಗಳ ಭೂ ಒಡೆತನವೆನ್ನುವುದು ಅವರ ಅಸ್ತಿತ್ವದ ಪ್ರಶ್ನೆಯೇ ಆಗಿದೆ. ಭೂಮಿ ಮತ್ತು ಅರಣ್ಯ ಅವರ ಪಾರಂಪರಿಕ ಆಯ್ಕೆಗಳು. ಆದರೆ ವರ್ತಮಾನದಲ್ಲಿ ಸರ್ಕಾರಗಳು ಜನತಂತ್ರ ವ್ಯವಸ್ಥೆಯಲ್ಲಿ ಸಹಜವಾಗಿಯೇ ರಕ್ಷಿಸಬೇಕಿದ್ದ ದುರ್ಬಲ ವರ್ಗಗಳ ಹಕ್ಕುಗಳನ್ನು ಧ್ವಂಸ ಮಾಡುತ್ತಿವೆ. ಈ ಮಾನವ ಹಕ್ಕುಗಳ ಮೇಲೆ ದೌರ್ಜನ್ಯ ನಡೆದಾಗೆಲ್ಲ ಸರ್ಕಾರಗಳು `ರಾಷ್ಟ್ರೀಯ ಹಿತಾಸಕ್ತಿ’ ಎಂಬ ಗುರಾಣಿಯನ್ನು ಅಡ್ಡ ಹಿಡಿದುಕೊಳ್ಳುತ್ತವೆ. ಅದರಲ್ಲೂ ಭಾರತದಲ್ಲಿನ ವೈವಿಧ್ಯಮಯ ದಟ್ಟ ಅರಣ್ಯಗಳನ್ನು ಮತ್ತು ಅಲ್ಲಿ ವಾಸ ಮಾಡುವ ಆದಿವಾಸಿಗಳ ಬದುಕನ್ನು ಭಾರತದ ಬೃಹತ್ ಯೋಜನೆಗಳು ನುಂಗಿ ಹಾಕಿವೆ. 1951ರಿಂದ ಈಚೆಗೆ ಭಾರತ ಸರ್ಕಾರದ ಬೃಹತ್ ಯೋಜನೆಗಳಿಂದ ಗಂಭೀರ ತೊಂದರೆಗೀಡಾದ 21.3 ಮಿಲಿಯನ್ ಜನರಲ್ಲಿ 8.54 ಮಿಲಿಯನ್ ಜನ ಆದಿವಾಸಿಗಳು ಸೇರಿದ್ದಾರೆ. ಈ ಎಲ್ಲ ತಪ್ಪುಗಳನ್ನು ಸರಿಪಡಿಸುವ ಸಲುವಾಗಿ 2006ರಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗಾಗಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿ ಮಾಡಲಾಯಿತು. ಕಾಗದದ ಮೇಲೆ ಆದರ್ಶಮಯವಾಗಿರುವ ಈ ಕಾಯ್ದೆಯನ್ನು ಇಲ್ಲಿಯವರೆಗೂ ಜಾರಿ ಮಾಡಲು ಸಾಧ್ಯವಾಗಿಲ್ಲ. ಈ ಕಾಯ್ದೆಯು ಅರಣ್ಯವಾಸಿ ಬುಡಕಟ್ಟು ಸಮುದಾಯಗಳ ಪಾರಂಪರಿಕ ಭೂ ಒಡೆತನವನ್ನು ಮತ್ತು ಅರಣ್ಯಗಳ ಮೇಲಿನ ಅವರ ಸಹಜ ಹಕ್ಕುದಾರಿಕೆಯನ್ನು ರಕ್ಷಿಸುವ ಉದ್ದೇಶಗಳನ್ನು ಹೊಂದಿದೆ. ಆದರೆ ಈ ಕಾಯ್ದೆಯಲ್ಲಿನ ನಿಗೂಢ ಒಗಟುಗಳ ಕಾರಣಕ್ಕಾಗಿ 2022ರವರೆಗೆ ಸಲ್ಲಿಕೆಯಾದ 2,94,292 ಅರ್ಜಿಗಳ ಪೈಕಿ 2,44,481 ಅರ್ಜಿಗಳು ತಿರಸ್ಕೃತವಾಗಿವೆ. ಈ ಕಾಯ್ದೆಯಿಂದ ಆದಿವಾಸಿಗಳಿಗೆ ಸೌಲಭ್ಯಗಳು ಸಿಗಬೇಕಿತ್ತು. ಆದರೆ `ಇತರ ಪಾರಂಪರಿಕ ಅರಣ್ಯವಾಸಿಗಳು’ ಈ ಕಾಯ್ದೆಯಿಂದ ಹೆಚ್ಚು ಅನುಕೂಲಗಳನ್ನು ಪಡೆದಿದ್ದಾರೆ. ಆದರೆ ತಲಾಂತರಗಳಿಂದ ಅರಣ್ಯಗಳ ನಿಜ ವಾರಸುದಾರರಾದ ಆದಿವಾಸಿಗಳಿಗೆ ಈ ಕಾಯ್ದೆಯಿಂದ ಅನುಕೂಲಗಳಾಗಿಲ್ಲ. ಪ್ರಸ್ತುತ ಕಾಯ್ದೆಯನ್ನು ಅರಣ್ಯವಾಸಿ ಬುಡಕಟ್ಟು ಸಮುದಾಯಗಳಿಗೆ ಪ್ರಯೋಜನಕಾರಿಯಾಗುವಂತೆ ಪರಿಷ್ಕರಿಸುವ ಅಗತ್ಯವಿದೆ.

ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸ್ವರೂಪ ಮತ್ತು ಪರಿಹಾರಗಳು

2021ರಲ್ಲಿ ಕೊಡಗಿನ ರಾಣಿಗೇಟ್ ಬಳಿ ಜೇನುಕುರುಬ ಸಮುದಾಯದ ಯುವಕನೊಬ್ಬನ ಮೇಲೆ ಗುಂಡು ಹಾರಿಸಲಾಗಿತ್ತು. ಇದಲ್ಲದೆ ಅವನ ಮೇಲೆ ತೀವ್ರವಾದ ಹಲ್ಲೆಯನ್ನು ನಡೆಸಲಾಗಿತ್ತು. ಈ ಹಲ್ಲೆ ಮತ್ತು ಕೊಲೆ ಪ್ರಯತ್ನವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅದೇ ವರ್ಷ ಉಡುಪಿ ಜಿಲ್ಲೆ ಬ್ರಹ್ಮಾವರ ಬಳಿಯ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಕುಟುಂಬವೊಂದರ ಮೇಲೆ ನಡೆದ ಸಾಮೂಹಿಕ ದೌರ್ಜನ್ಯ ಪ್ರಕರಣವೂ ಸಹ ತಾರ್ಕಿಕ ಅಂತ್ಯವನ್ನು ಕಾಣಲಿಲ್ಲ. ಈ ಕೊರಗ ಸಮುದಾಯದ ಕುಟುಂಬ ಮದುವೆ ಸಂಭ್ರಮದಲ್ಲಿದ್ದಾಗ ಈ ದೌರ್ಜನ್ಯ ನಡೆಯಿತು. ಇಂತಹ ಪ್ರಕರಣಗಳು ಕೇವಲ ನಿತ್ಯದ ವಿದ್ಯಮಾನಗಳಂತೆ ನಡೆದು ಚರಿತ್ರೆಗೆ ಸೇರಿಬಿಡುತ್ತವೆ. ಆದಿವಾಸಿಗಳಂತಹ ನಿರ್ಗತಿಕ ಸಮುದಾಯಗಳ ಮೇಲಾಗುವ ಇಂತಹ ದೌರ್ಜನ್ಯಗಳು ಸಹಜವೆಂದು ಸ್ಥಳೀಯರು ನಿರ್ಲಕ್ಷಿಸಿದಂತೆ ಕಾಣುತ್ತದೆ. ನಾಗರಿಕ ಸಮಾಜವೊಂದು ಇಂತಹ ಕೊಲೆ ಪ್ರಯತ್ನಗಳನ್ನು `ಇದೊಂದು ಸಾಮಾನ್ಯ ಘಟನೆ’ ಎಂದು ನಿರ್ಲಕ್ಷಿಸಿಬಿಟ್ಟರೆ ಅಷ್ಟರಮಟ್ಟಿಗೆ ನಮ್ಮ ಸಂವೇದನೆಗಳು ಸತ್ತು ಹೋಗಿವೆ ಎಂದು ಭಾವಿಸಬೇಕಾಗುತ್ತದೆ.

ಅಮಾಯಕ ಆದಿವಾಸಿ ಯುವಕನ ಮೇಲೆ ಗುಂಡು ಹಾರಿಸಿದ ಕ್ರೌರ್ಯಕ್ಕಿಂತ, ಕೊಲೆ ಪ್ರಯತ್ನವೊಂದನ್ನು ಸಾಮಾನ್ಯ ಘಟನೆ ಎಂದು ಪರಿಗಣಿಸಿಬಿಡುವ ನಾಗರಿಕ ಸಮಾಜದ ಕ್ರೌರ್ಯ ಅತ್ಯಂತ ಹೇಯವಾದದ್ದು. ಹಿಂಸೆಯನ್ನು ಸಾಮಾನ್ಯೀಕರಿಸಿಬಿಡುವ ನಾಗರಿಕ ಸಮಾಜದ ಈ ನಿರ್ಲಿಪ್ತತೆ ಭಯ ಹುಟ್ಟಿಸುತ್ತದೆ. ಸಹಜ ಮಾನವೀಯ ಮೌಲ್ಯಗಳಿಗೆ ನಾಗರಿಕ ಸಮಾಜ ತಿಲಾಂಜಲಿ ಇಟ್ಟಿದೆಯೇ ಎಂಬ ಭಾವನೆಯೂ ಬಲಗೊಳ್ಳುತ್ತಿದೆ. ಕೊಡಗಿನ ಈ ಭಾಗದಲ್ಲಿ ದಲಿತರ ಮೇಲೆ, ಆದಿವಾಸಿಗಳ ಮೇಲೆ ನಡೆಯುವ ದೌರ್ಜನ್ಯಗಳು ನಿತ್ಯ ನಡೆದುಹೋಗುವ ಸರ್ವೇಸಾಧಾರಣ ಸಾಮಾಜಿಕ ಚಟುವಟಿಕೆಗಳಾಗಿಬಿಟ್ಟಿವೆ. ಅದರಲ್ಲೂ ಅಲ್ಲಿನ ಫಣಿ ಯರವ, ಪಂಜರಿ ಯರವ, ಕಾಡುಕುರುಬ ಮತ್ತು ಜೇನುಕುರುಬ ಸಮುದಾಯಗಳು ಈಗಲೂ ಜೀವ ಭಯದಲ್ಲಿಯೇ ಬದುಕುತ್ತಿವೆ.

ನಾಗರಿಕ ಸಮಾಜವನ್ನೂ ಒಳಗೊಂಡಂತೆ, ಅಧಿಕಾರ ಹಿಡಿಯುವ ಯಾವುದೇ ರಾಜಕೀಯ ಪಕ್ಷ ಮತ್ತು ನೌಕರಶಾಹಿಯು ಆದಿವಾಸಿಗಳನ್ನು ಇನ್ನೂ ಅಂತಃಕರಣದಿಂದ ನೋಡುವ ಪ್ರವೃತ್ತಿಯನ್ನೇ ಬೆಳೆಸಿಕೊಂಡಿಲ್ಲ.

ಆದಿವಾಸಿ ಸಮುದಾಯಗಳು ನಮ್ಮದೇ ಸಮಾಜದ ಬೇರುಗಳು ಎಂಬ ಕನಿಷ್ಠ ಪ್ರಜ್ಞೆಯೂ ನಮ್ಮಲ್ಲಿ ಮೂಡಿಲ್ಲ. ಆದಿವಾಸಿಗಳು ಈ ನೆಲದ ಮೂಲ ನಿವಾಸಿಗಳು, ಕಾಡು, ಕಣಿವೆ, ನದಿ, ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸಿಕೊಂಡು ಬಂದ ನಿಸರ್ಗದ ಮಕ್ಕಳು ಎಂಬ ಪ್ರಾಥಮಿಕ ಪಾಠಗಳನ್ನು ಇವರಿಗೆ ಯಾರು ಹೇಳಿಕೊಡಬೇಕು? ನಾಗರಿಕ ಸಮಾಜವು ಇಂತಹ ಸಮುದಾಯಗಳ ಪರವಾದ ನಿಲುವುಗಳನ್ನು ಬೆಳೆಸಿಕೊಳ್ಳಬೇಕು. ಸರಕಾರ ದೌರ್ಜನ್ಯತಡೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ.

ಈಗ ನಾವು ಮಾಡಬೇಕಾದದ್ದೇನು?

ಮಲೆನಾಡು ಮತ್ತು ಕರಾವಳಿ ಬುಡಕಟ್ಟುಗಳು ಸರಕಾರದ ಹಲವು ಅಭಿವೃದ್ಧಿ ಯೋಜನೆಗಳಿಂದ ತೊಂದರೆಗಿಡಾಗಿವೆ. ಉತ್ತರ ಕನ್ನಡದಂಥ ವೈವಿಧ್ಯಮಯ ನಿಸರ್ಗ ಮತ್ತು ಮಾನವ ಸಂಪನ್ಮೂಲಗಳಿರುವ ಜಿಲ್ಲೆಯಲ್ಲಿ ಸರಕಾರ ಹಲವು ಅಣೆಕಟ್ಟುಗಳನ್ನು ಕಟ್ಟಿದೆ. ಕೈಗಾ ಅಣುಸ್ಥಾವರ, ಸೀಬರ್ಡ್ ಮತ್ತು ಕೊಂಕಣ್ ರೈಲ್ವೆಯಂತಹ ಬೃಹತ್ ಯೋಜನೆಗಳು ಇಲ್ಲಿನ ಆದಿವಾಸಿಗಳನ್ನು ಒಕ್ಕಲೆಬ್ಬಿಸಿವೆ. ಕೊಂಕಣ್ ರೈಲ್ವೆಯಂತೂ ಪಶ್ಚಿಮಘಟ್ಟ ಮತ್ತು ಕರಾವಳಿಯ ಮಧ್ಯೆ ಹರಡಿಕೊಂಡಿದ್ದ ಆದಿವಾಸಿಗಳ ಜಮೀನುಗಳನ್ನು ಸೀಳಿಕೊಂಡು ಹೋಗಿದೆ. ಹಳಿ ಹಾಕಲು ನಿರ್ಮಿಸಿದ ದೊಡ್ಡ ಏರಿಯು ಆದಿವಾಸಿಗಳ ಜಮೀನುಗಳನ್ನು ಶಾಶ್ವತವಾಗಿ ನಾಶಮಾಡಿದೆ. ಈ ಏರಿಯ ಎರಡೂ ಬದಿಗಳಲ್ಲಿ ನೀರು ನಿಂತು ಆದಿವಾಸಿಗಳ ಜಮೀನುಗಳು ಹಾಳಾಗಿವೆ. ಒಂದೆಡೆ ಘಟ್ಟದಿಂದ ಹರಿದು ಬರುವ ನೀರು ಸಮುದ್ರ ಸೇರದೆ ಜಮೀನುಗಳಲ್ಲೇ ನಿಲ್ಲುತ್ತದೆ. ಇನ್ನೊಂದೆಡೆ ಸಮುದ್ರದ ಉಪ್ಪು ನೀರು ಚಲಿಸದೆ ಈ ಏರಿಯನ್ನು ಆಶ್ರಯಿಸಿಯೇ ನಿಲ್ಲುತ್ತದೆ. ಈ ಜಮೀನುಗಳಲ್ಲಿ ಸ್ಥಳೀಯ ಬುಡಕಟ್ಟುಗಳು ಏನನ್ನೂ ಬೆಳೆಯಲು ಸಾಧ್ಯವಿಲ್ಲದೆ ಬಂಜರಾಗಿವೆ. ಇಲ್ಲಿ ಜಮೀನು ಕಳೆದುಕೊಂಡ ಆದಿವಾಸಿಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಕೈಗಾ ಅಣುಸ್ಥಾವರ ಮತ್ತು ಸೀಬರ್ಡ್ ನೌಕಾ ನೆಲೆಗಳೂ ಸಹ ಉತ್ತರ ಕನ್ನಡದ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಿವೆ.

ಇದನ್ನೂ ಓದಿರಿ: ‘ಕಲ್ಯಾಣ ಕರ್ನಾಟಕ’ ಕಲ್ಯಾಣವಾಯಿತೆ?

ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ರಾಷ್ಟ್ರೀಯ ಉದ್ಯಾನ ಮತ್ತು ವನ್ಯ ಜೀವಿ ಸಂರಕ್ಷಣಾ ಯೋಜನೆಗಳಿಂದಾಗಿ ಒಕ್ಕಲೆಬ್ಬಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದ ಸ್ಥಳಾಂತರ ಅತ್ಯಂತ ಅಮಾನವೀಯವಾದದ್ದು. ಹುಲಿ ಯೋಜನೆ, ಕಬಿನಿ ಮತ್ತು ತಾರಕ ಅಣೆಕಟ್ಟುಗಳಿಂದ ಒಕ್ಕಲೆದ್ದ ಆದಿವಾಸಿಗಳನ್ನು ಕಾಡಂಚಿನಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಹಠಕ್ಕೆ ಬಿದ್ದು ಕಾಡಲ್ಲಿಯೇ ಉಳಿದ ಆದಿವಾಸಿಗಳನ್ನು ವನ್ಯಜೀವಿ ಸಂರಕ್ಷಕರು ಎಂದು ಹೇಳಿಕೊಳ್ಳುವ ಸರಕಾರಿ ಏಜೆಂಟರು ಹಣದ ಆಮಿಷ ಒಡ್ಡಿ ಕಾಡಿನಿಂದ ಹೊರಹಾಕುತ್ತಿದ್ದಾರೆ. ಹೀಗೆ ಕಾಡಿನಿಂದ ಹೊರಗೆಸೆಯಲ್ಪಟ್ಟ ಆದಿವಾಸಿಗಳು ಆತಂತ್ರರಾಗುತ್ತಾರೆ. ತಮ್ಮ ಮೂಲ ನೆಲೆಗಳ ಶತಮಾನಗಳ ಅವಿನಾಭಾವ ಸಂಬಂಧಗಳು ಇಲ್ಲವಾದ ಕೊರಗಿನಲ್ಲಿ ಇವರು ನರಳುತ್ತಾರೆ. ಅವರ ಭಾವಕೋಶದ ಒಳಗಿದ್ದ ಪರಂಪರೆಯ ತಂತುಗಳು ಒಂದೊಂದೇ ತುಂಡರಿಸಲ್ಪಡುತ್ತವೆ. ಕಾಡಿನ ಜೊತೆಗಿನ ತಮ್ಮ ಸಹಜ ಸಂಬಂಧವನ್ನು ಕಡಿದುಕೊಂಡ ಆದಿವಾಸಿಗಳು ತಮ್ಮ ಸ್ಮೃತಿಗಳನ್ನೇ ಕಳೆದುಕೊಳ್ಳುತ್ತಾರೆ. ಹಾಗೆಂದು ಇವರು ಕಾಡಿನಲ್ಲೇ ಇರಬೇಕು ಎಂದಲ್ಲ. ಕಾಡಿನ ನಿಜ ವಾರಸುದಾರರಾದ ಅವರು ತಾವು ಬದುಕುವ ಪರಿಸರವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಅವರಿಗೆ ಕಲ್ಪಿಸಬೇಕಿದೆ. ಜೊತೆಗೆ ಕಾಡಿನಿಂದ ಹೊರತಂದ ಮೇಲೆ ಆದಿವಾಸಿಗಳನ್ನು ನಡೆಸಿಕೊಳ್ಳುವ ರೀತಿ ಮತ್ತು ಅನುಕೂಲಗಳನ್ನು ಕಲ್ಪಿಸುವ ವಿಧಾನಗಳು ಬದಲಾಗಬೇಕಿದೆ. ಆದರೆ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಒಕ್ಕಲೆದ್ದು ಪುನರ್ವಸತಿ ಪಡೆದು ಬದುಕುತ್ತಿರುವ ಆದಿವಾಸಿಗಳು ನೆಮ್ಮದಿಯಿಂದಿಲ್ಲ. ಕೊಡಗಿನ ಬುಡಕಟ್ಟುಗಳಲ್ಲಿ ಅದರಲ್ಲೂ ಫಣಿಎರವ, ಜೇನುಕುರುಬ ಮತ್ತು ಬೆಟ್ಟಕುರುಬ ಸಮುದಾಯಗಳು ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ಬದುಕುತ್ತಿವೆ. ಕೊಡಗಿನ ಕಾಫಿತೋಟಗಳ ಲೈನ್ ಮನೆಗಳಲ್ಲಿ ಈ ಬುಡಕಟ್ಟುಗಳು ಬಂಧಿಗಳಂತೆ ಬದುಕುತ್ತಿದ್ದಾರೆ. ಹೊರ ಜಗತ್ತಿಗೆ ಈ ಸಮುದಾಯಗಳು ಮುಕ್ತವಾಗಿಲ್ಲ. ಅವರನ್ನು ಸಾಕುವ ಧಣಿಗಳ ಅನುಮತಿ ಇಲ್ಲದೆ ಈ ಬುಡಕಟ್ಟುಗಳ ದರ್ಶನವೂ ನಮಗಾಗುವುದಿಲ್ಲ. ಕರ್ನಾಟಕದ ಯಾವ ಜಿಲ್ಲೆಗಳಲ್ಲೂ ಈ ಬಗೆಯ ಉಸಿರು ಕಟ್ಟುವ ಸನ್ನಿವೇಶ ಸೃಷ್ಟಿಯಾಗಿಲ್ಲ.

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಕುಡಿಯರು ಬೆಟ್ಟಗಳ ತುದಿ ಮತ್ತು ಅಪಾಯಕಾರಿ ಕಣಿವೆಗಳಲ್ಲಿ ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಬದುಕುತ್ತಿದ್ದಾರೆ. ಇನ್ನು ಅರೆಮಲೆನಾಡು ಮತ್ತು ಬಯಲು ಸೀಮೆಗಳ ಬುಡಕಟ್ಟುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಸಲರು, ಇರುಳರು ಮತ್ತು ನಾಯಕ ಸಮುದಾಯದವರು ಹೆಚ್ಚಾಗಿ ಕೃಷಿಕೂಲಿಗಳಾಗಿಯೇ ಬದುಕುತ್ತಿದ್ದಾರೆ. ಮೇದ ಬುಡಕಟ್ಟಿನವರಿಗೆ ತಮ್ಮ ಪಾರಂಪರಿಕ ವೃತ್ತಿಯನ್ನು ಮುಂದುವರೆಸಲಾಗುತ್ತಿಲ್ಲ. ಅವರಿಗೆ ಬೇಕಾಗುವ ಬಿದಿರು ಮತ್ತು ಬೆತ್ತಗಳನ್ನು ಅವರು ಅರಣ್ಯದಿಂದ ಪಡೆಯಲಾಗುತ್ತಿಲ್ಲ. ಅರಣ್ಯದ ಬಿದಿರನ್ನು ಅಲ್ಲಿರುವ ಕಾಗದದ ಕಾರ್ಖಾನೆಗಳಿಗೆ ಬಿಡಿಗಾಸಿಗೆ ಕೊಡುವ ಸರಕಾರ ಮೇದರಿಗೆ ಮಾತ್ರ ಬಿದಿರನ್ನು ಬಳಸಬಾರದೆಂದು ನಿರ್ಬಂಧ ಹಾಕುತ್ತದೆ. ಇನ್ನು ಕೃಷಿಕೂಲಿಗಳಾಗಿ ದುಡಿಯುವ ಮತ್ತು ನಿಶ್ಚಿತ ಆದಾಯದ ಮೂಲಗಳೇ ಇಲ್ಲದ ಬುಡಕಟ್ಟು ಜನರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚು. ಈ ಗುಂಪಿಗೆ ಸೇರಿದ ಜನ ಇನ್ನೂ ಅತಂತ್ರರಾಗಿಯೇ ಬದುಕುತ್ತಿದ್ದಾರೆ. ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ 47.3% ಭಾಗದ ಜನ ಇವರೇ ಆಗಿದ್ದಾರೆ. ಪ್ರಭುತ್ವ ಈ ಜನರ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ. ನಿಶ್ಚಿತ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನು ಈ ಜನರಲ್ಲಿ ಉದ್ದೀಪಿಸುವಂತಾಗಬೇಕಿದೆ.

prabhakara as
ಡಾ. ಎ. ಎಸ್. ಪ್ರಭಾಕರ
+ posts

ಎ.ಎಸ್. ಪ್ರಭಾಕರ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯರಬಳ್ಳಿಯವರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 26 ವರ್ಷಗಳ ಬೋಧನಾ ಅನುಭವ ಹೊಂದಿದ್ದು ಬುಡಕಟ್ಟು ಸಮುದಾಯಗಳ ಅಧ್ಯಯನ ಅವರ ವಿಶೇಷ ಪರಿಣತಿ ಕ್ಷೇತ್ರವಾಗಿದೆ. `ಚಹರೆಗಳೆಂದರೆ ಗಾಯಗಳು ಹೌದು’ ಮತ್ತು ‘ಆದಿವಾಸಿಗಳ ಅಭಿವೃದ್ಧಿ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಎ. ಎಸ್. ಪ್ರಭಾಕರ
ಡಾ. ಎ. ಎಸ್. ಪ್ರಭಾಕರ
ಎ.ಎಸ್. ಪ್ರಭಾಕರ ಅವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯರಬಳ್ಳಿಯವರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 26 ವರ್ಷಗಳ ಬೋಧನಾ ಅನುಭವ ಹೊಂದಿದ್ದು ಬುಡಕಟ್ಟು ಸಮುದಾಯಗಳ ಅಧ್ಯಯನ ಅವರ ವಿಶೇಷ ಪರಿಣತಿ ಕ್ಷೇತ್ರವಾಗಿದೆ. `ಚಹರೆಗಳೆಂದರೆ ಗಾಯಗಳು ಹೌದು’ ಮತ್ತು ‘ಆದಿವಾಸಿಗಳ ಅಭಿವೃದ್ಧಿ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...