ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಇತ್ತೀಚೆಗೆ ಐಐಟಿ ಮದ್ರಾಸ್ ನಿರ್ದೇಶಕ ಕಾಮಕೋಟಿ ಗಿರಿನಾಥನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ವೈಜ್ಞಾನಿಕ ಹಿನ್ನೆಲೆ ಇರುವ ಅನೇಕ ಸಂಶೋಧಕರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ವೈದ್ಯಕೀಯ ಸಂಘದವರು, “ನಮ್ಮ ಜೊತೆ ಸಂವಾದ ನಡೆಸಲು ನೀವು ಸಿದ್ಧವಿದ್ದೀರಾ?” ಎಂದು ಕಾಮಕೋಟಿ ಅವರಿಗೆ ಸವಾಲೆಸೆದಿದ್ದಾರೆ. ಈ ಎಲ್ಲ ಚರ್ಚೆಗಳಿಗೆ, ಟೀಕೆಗಳಿಗೆ ಇತಿಶ್ರೀ ಹಾಡಬೇಕೆಂದು ಕಾಮಕೋಟಿ ಗಿರಿನಾಥನ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ತಾನು ಹೇಳಿದ ವಿಚಾರಗಳಿಗೆ ವೈಜ್ಞಾನಿಕ ಆಧಾರಗಳಿವೆ ಎನ್ನುತ್ತಾ, ಐದು ರಿಸರ್ಚ್ ಪೇಪರ್ ಹಾಗೂ ಗೋಮೂತ್ರಕ್ಕೆ ಸಂಬಂಧಿಸಿದ ಒಂದು ಪೇಟೆಂಟ್ ಉಲ್ಲೇಖಿಸಿದರು. “ಈ ಸಂಶೋಧನೆಗಳ ಆಧಾರದಲ್ಲೇ ನಾನು ಗೋಮೂತ್ರದ ಬಗ್ಗೆ ಇಂತಹ ಹೇಳಿಕೆ ನೀಡಿದ್ದೇನೆ” ಎಂದು ಸಮರ್ಥಿಸಿಕೊಂಡರು.
ನಿಜಕ್ಕೂ ಗೋಮೂತ್ರದಲ್ಲಿ ಔಷಧೀಯ ಗುಣಗಳು ಇವೆಯೇ? ಪ್ರೊ. ಕಾಮಕೋಟಿ ಗಿರಿನಾಥನ್ ಉಲ್ಲೇಖಿಸಿರುವ ಆಧಾರಗಳು ನಂಬಲಾರ್ಹವೇ? ವಿಜ್ಞಾನದ ಕಣ್ಣೋಟದಲ್ಲೇ ನಾವೀಗ ಪ್ರತಿಕ್ರಿಯಿಸಬೇಕಿದೆ.
ಆದಿ ಕಾಲದಲ್ಲಿ ಮನುಷ್ಯ ಕಾಯಿಲೆಗೆ ತುತ್ತಾಗಿ, ಸಾವನ್ನಪ್ಪುತ್ತಿದ್ದಾಗ ಅಂದಿನ ಜನ ಈ ಕಾಯಿಲೆಗಳಿಗೆ ಔಷಧಗಳನ್ನು ಕಲ್ಲು, ಮಣ್ಣು, ಸಸ್ಯ- ಹೀಗೆ ಎಲ್ಲೆಡೆ ಹುಡುಕಾಡಲು ಶುರು ಮಾಡಿದರು. ಅಷ್ಟೇ ಏಕೆ, ಪ್ರಾಣಿ ಹಾಗೂ ಮನುಷ್ಯನ ಮಲದಲ್ಲೂ ಔಷಧೀಯ ಗುಣಗಳನ್ನು ಹುಡುಕಾಟ ನಡೆಸಿರುವುದು ವಿಕಾಸದ ಹಾದಿಯಲ್ಲಿ ಕಂಡುಬರುತ್ತದೆ. ಹೀಗೆ ಜಗತ್ತಿನಾದ್ಯಂತ ವಿವಿಧ ಭಾಗದಲ್ಲಿ ಹೇಗೆಲ್ಲ ಔಷಧೀಯ ಹುಡುಕಾಟಗಳನ್ನು ಮನುಷ್ಯ ನಡೆಸಿರುವನೆಂದು ವಿವರಿಸುವ ಪುಸ್ತಕವೇ ‘Scatalogic Rites of All Nations’. ಈ ಕೃತಿ 1891ರಲ್ಲೇ ಪ್ರಕಟವಾಗಿತ್ತು. ಮನುಷ್ಯ ಔಷಧಿಗಳನ್ನು ಹುಡುಕಾಡಲು ಶುರು ಮಾಡಿಯೇ ಹಲವು ಸಾವಿರ ವರ್ಷಗಳಾಗಿವೆ. ಮುಖ್ಯ ವಿಚಾರಕ್ಕೆ ಬರುವುದಾದರೆ, ಗೋಮೂತ್ರದಲ್ಲಿ ಅಂತಹ ವಿಶೇಷ ಏನಾದರೂ ಇದೆಯೇ?

ಯೂರಿನ್ ಅಂದರೆ ದೇಹದಲ್ಲಿರುವ ತ್ಯಾಜ್ಯದ ಅಂಶಗಳೆಲ್ಲ ಯೂರಿಯಾ ಆಗಿ ವಿಸರ್ಜನೆ ಆಗುವುದು. ಕುರಿ, ಕೋಳಿ, ಹಸು, ದನ, ಮನುಷ್ಯ- ಹೀಗೆ ಯಾವ ಪ್ರಾಣಿಯ ಯೂರಿನ್‌ನಲ್ಲಾದರೂ ಶೇ.90 ರಿಂದ ಶೇ.95 ರಷ್ಟು ನೀರಿನ ಅಂಶ ಇರುತ್ತದೆ. ಶೇ.2 ರಿಂದ ಶೇ.3 ರಷ್ಟು ಯೂರಿಯಾ ಇರುತ್ತದೆ. ಶೇ.1ರಷ್ಟು ಇತರೆ ಅಂಶಗಳಿರುತ್ತವೆ. ಈ ಯೂರಿನ್‌ನಲ್ಲಿ ಯಾವುದೇ ಮಹಾನ್ Active Components ಅಥವಾ Active Ingrediants ಇರುವುದಿಲ್ಲ. ಅದು ಗೋಮೂತ್ರವಾದರೂ ಅಷ್ಟೇ, ಮನುಷ್ಯನ ಮೂತ್ರವಾದರೂ ಅಷ್ಟೇ. ಹೀಗಾಗಿ ಗೋಮೂತ್ರಕ್ಕೆ ವಿಶೇಷತೆ ಇಲ್ಲ ಎಂಬುದು ಸಾರ್ವಕಾಲಿಕ ಸತ್ಯ.
ಗೋಮೂತ್ರ ಔಷಧಿಯೋ ಇಲ್ಲವೋ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ, ಮೊದಲು ವೈಜ್ಞಾನಿಕ ದೃಷ್ಟಿಕೋನಗಳನ್ನು ಅರಿಯಬೇಕಾಗುತ್ತದೆ. ಬ್ಯಾಕ್ಟೀರಿಯಾಗಳ ಬಗ್ಗೆ ಕೊಂಚವಾದರೂ ತಿಳಿಯಬೇಕಾಗುತ್ತದೆ. ಬ್ಯಾಕ್ಟೀರಿಯಾ, ಫಂಗಸ್ ಇವೆಲ್ಲವೂ ಜೀವಿಗಳೇ.
ಇದನ್ನೂ ಓದಿರಿ: ಜನರ ಜೀವ ಹಿಂಡುತ್ತಿರುವ ಮನೆಹಾಳ ಫೈನಾನ್ಸ್- ಮೈಕ್ರೋ ಫೈನಾನ್ಸ್ ಕಂಪನಿಗಳು
ಒಂದು ಕಲ್ಲನ್ನೇ ಉದಾಹರಣೆಯಾಗಿ ನೋಡಿ. ಆ ಕಲ್ಲನ್ನು ನೀವು ಸೂರ್ಯನ ಬಿಸಿಲಿಗೆ ಇಟ್ಟರೆ, ಆ ಶಾಖಕ್ಕೆ ಕಲ್ಲಿನ ಮೇಲಿರುವ ಬ್ಯಾಕ್ಟೀರಿಯಾಗಳೆಲ್ಲ ಸುಟ್ಟು ಹೋಗುತ್ತವೆ. ಹಾಗೆಂದು ನಾವು ಸೂರ್ಯನ ಶಾಖವನ್ನು Anti Bacterial ಎನ್ನಲು ಸಾಧ್ಯವೇ? ಬ್ಯಾಕ್ಟೀರಿಯಾದಿಂದ, ಬ್ಯಾಕ್ಟೀರಿಯಾವನ್ನು ಕೊಲ್ಲುವ Antibiotics ಮತ್ತು ಅದನ್ನು ಬೆಳೆಸುವ Probiotics ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು.
ಬ್ಯಾಕ್ಟೀರಿಯಾ ಹೆಚ್ಚಾಗಿ ವೃದ್ಧಿಸಲು ಅನುಕೂಲಕರ ಪರಿಸ್ಥಿತಿ (Situation) ಇದ್ದರೆ- ಅದನ್ನು PROBACTERIAL SITUATION ಅಂತಾರೆ. ಬ್ಯಾಕ್ಟೀರಿಯಾ ಸರಿಯಾಗಿ ಬೆಳೆಯುವುದಕ್ಕೆ ಸಾಧ್ಯವಿಲ್ಲದೆ ನಶಿಸಿ ಹೋಗುವ ಪರಿಸ್ಥಿತಿಯನ್ನು ANTIBACTERIAL SITUATION, Antibiotic ಎನ್ನುತ್ತಾರೆ. ವಸ್ತು ಯಾವುದೇ ಆಗಿರಲಿ, ಅದು ಬ್ಯಾಕ್ಟೀರಿಯಾಗಳನ್ನು ಬೆಳೆಸುವುದಕ್ಕೆ ಅಥವಾ ಬೆಳೆಸದೆ ಇರುವುದಕ್ಕೆ- ಎರಡಕ್ಕೂ ಕಾರಣವಾಗಬಹುದು.
ಉದಾಹರಣೆಗೆ- ಒಂದು ಕಬ್ಬಿಣದ ತುಂಡನ್ನು ಹೆಚ್ಚು ಬ್ಯಾಕ್ಟೀರಿಯಾಗಳಿರುವ ಹೊಳೆ ಅಥವಾ ಕರೆಯಲ್ಲಿಟ್ಟರೆ, ಕಬ್ಬಿಣದ ತುಂಬಾ ಬ್ಯಾಕ್ಟೀರಿಯಾಗಳಾಗುತ್ತವೆ. ಈಗ ಅದೇ ಕಬ್ಬಿಣದ ತುಂಡನ್ನು ನಮ್ಮ ಮನೆಯ ಗ್ಯಾಸ್ ಸ್ಟವ್ ಅಥವಾ ಯಾವುದೇ ಬೆಂಕಿಯಲ್ಲಿಟ್ಟರೆ, ಆ ಶಾಖಕ್ಕೆ ಎಲ್ಲ ಬ್ಯಾಕ್ಟೀರಿಯಾಗಳೂ ಸತ್ತು ಹೋಗುತ್ತವೆ. ಹಾಗೆಂದು ನಿಮ್ಮ ಮನೆಯ ಸ್ಟವ್ ಅಥವಾ ಬೆಂಕಿಯನ್ನು Antibiotic ಅನ್ನುತ್ತೀರಾ?
ನಿಮ್ಮ ಕೈ ಅಥವಾ ಕಾಲಿನಲ್ಲಿ ಗಾಯವಾಗಿ ಬ್ಯಾಕ್ಟೀರಿಯಾ Infection ಆಗಿದೆ ಅಂದುಕೊಳ್ಳಿ. ಆಗ Antibiotic ಬೇಕು ಎಂದು ಬೆಂಕಿಗೆ ನಿಮ್ಮ ಅಂಗಾಂಗಳನ್ನು ಇಡಲು ಸಾಧ್ಯವೇ? ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. Antibiotic ಅಂದರೆ ಅದು ಎಲ್ಲ ಬ್ಯಾಕ್ಟೀರಿಯಾಗಳನ್ನೂ ಕೊಂದುಬಿಡುತ್ತೆ ಅಂತಲ್ಲ. ಯಾವುದೋ ಒಂದು ವಸ್ತು ಬ್ಯಾಕ್ಟೀರಿಯಾವನ್ನು ಕೊಂದುಬಿಡುತ್ತದೆ ಎಂದಾಕ್ಷಣ ಅದು ಎಲ್ಲ ಬಗೆಯ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುತ್ತದೆಂದು ಅರ್ಥವಲ್ಲ.
ಉದಾಹರಣೆಗೆ ಅರಿಶಿಣವನ್ನು ANTIBACTERIAL ಎಂದು ಹೇಳುತ್ತಾರೆ. ಆದರೆ, ಅದೇ ಅರಿಶಿಣ, ಟೈಫಾಯ್ಡ್ ಕಾಯಿಲೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳಿಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಟೈಫಾಯ್ಡ್ ಉಂಟು ಮಾಡುವ ಸೂಕ್ಷ್ಮಾಣುಗಳ ಪಾಲಿಗೆ PROBACTERIAL SUBSTANCE ಆಗಿ ಅರಿಶಿಣ ಕೆಲಸ ಮಾಡುತ್ತದೆ. ನಿಂಬೆ ಹಣ್ಣಿನ ಬಗ್ಗೆಯೂ ಹೀಗೆಯೇ ಒಂದು ಮಿಥ್ ಇದೆ. ಸಾಮಾನ್ಯವಾಗಿ ನಿಂಬೆಹಣ್ಣನ್ನು Antibiotic ಎನ್ನುತ್ತಾರೆ. ಅಸಲಿಗೆ ನಿಂಬೆಹಣ್ಣಿನ ರಸವನ್ನು ಒಂದು ಬಾಟಲಿಗೆ ಹಾಕಿ ಮೂರ್ನಾಲ್ಕು ದಿನ ಹಾಗೆಯೇ ಬಿಟ್ಟರೆ ಬ್ಯಾಕ್ಟೀರಿಯಗಳು ಅದರೊಳಗೆ ಉತ್ಪತ್ತಿಯಾಗುತ್ತವೆ!
ಬೇಸಿಗೆಯ ಕಾಲದಲ್ಲಿ ಮೈಮೇಲೆ ಏಳುವ ಗುಳ್ಳೆಗಳನ್ನು ಗಮನಿಸಿ. ಹೀಗೆ ಬರುವ Small pox ಅನ್ನೋ ಕಾಯಿಲೆಗೆ ಹಳ್ಳಿಗಾಡಿನ ಜನ ಬೇರೆಯದ್ದೇ ಹೆಸರು ಇಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ಅದನ್ನು ‘ಅಮ್ಮಾ’ ಎಂದು ಕರೆಯುತ್ತಾರೆ. ‘ಅಮ್ಮಾ’ ಎದ್ದ ಕೂಡಲೇ ಬೇವಿನ ಸೊಪ್ಪನ್ನು ಬಳಸುವುದು ಸಾಮಾನ್ಯ. ಪ್ರಶ್ನಿಸಿದರೆ ಬೇವು Antibiotic ಎನ್ನುತ್ತಾರೆ. ಸತ್ಯವೇನೆಂದರೆ ‘ಅಮ್ಮಾ’ ಎನ್ನುವ ಕಾಯಿಲೆ ಬರುವುದು ವೈರಸ್‌ನಿಂದ. ವೈರಸ್‌ನಿಂದ ಬರುವ ಕಾಯಿಲೆಗೆ Antibiotic ರಿಯಾಕ್ಟ್ ಮಾಡಲು ಸಾಧ್ಯವೆ? Antibiotic, probiotic, Virus ಇವುಗಳು ಹೇಗೆ ಕೆಲಸ ಮಾಡುತ್ತವೆ, ಹೇಗೆ ಹುಟ್ಟುತ್ತವೆ, ಹೇಗೆ ಸಾಯುತ್ತವೆ? ಎಂಬುದು ಬಹುಪಾಲು ಜನರಿಗೆ ತಿಳಿಯದು.

ಜನರಿಗಿರುವ ಮಾಹಿತಿ ಕೊರತೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಹಲವರು, “ಗೋಮೂತ್ರದಲ್ಲಿ Antibiotic ಅಂಶ ಇದೆ, ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಇದರಲ್ಲಿ ಔಷದೀಯ ಗುಣಗಳಿವೆ” ಎಂದು ಪ್ರಚಾರ ಮಾಡುತ್ತಾರೆ. ಅವರ ಮಾತನಾಡುವ ದಾಟಿ ನೋಡಿದರೆ, ಹೇಳುತ್ತಿರುವುದು ಸತ್ಯವೇ ಇರಬಹುದೆಂದು ಜನ ನಂಬಿಬಿಡುತ್ತಾರೆ.
Bacteria, Antibiotic ಬಗ್ಗೆ ನಾವು ಮಾತನಾಡುವಾಗ Antibiotic resistance ಬಗ್ಗೆಯೂ ತಿಳಿದುಕೊಳ್ಳಬೇಕು. ಏನದು resistance? ಈಗ ನಿಮ್ಮ ಬೆರಳಿಗೆ ಪೆಟ್ಟಾಗಿದೆ ಎಂದುಕೊಳ್ಳಿ. ಒಂದೆರಡು ದಿನ ನೀವು ಅದನ್ನು ಸರಿಯಾಗಿ ಗಮನಿಸದಿದ್ದರೆ, ಚಿಕಿತ್ಸೆ ಪಡೆಯದಿದ್ದರೆ, ಅದು condominent ಆಗಿ Bacteria infection ಆಗುತ್ತದೆ. ಆಗ ನೀವು ಆ infection ಶುಚಿ ಮಾಡಬೇಕಾಗುತ್ತದೆ. ಆ ಗಾಯಕ್ಕೆ ನಿತ್ಯವೂ ಒಂದಿಷ್ಟು Antibiotic ಹಾಕಿ ಕ್ಲೀನ್ ಮಾಡುತ್ತಿದ್ದೀರಿ ಅಂದುಕೊಳ್ಳಿ. ದಿನವೂ Antibiotic ಹಾಕಿ ಬ್ಯಾಕ್ಟೀರಿಯಾವನ್ನು ನೀವು ಕ್ಲೀನ್ ಮಾಡುತ್ತಾ ಮಾಡುತ್ತಾ ಹೋದಂತೆ, ಈಗ ನಿಮ್ಮ ಬೆರಳಲ್ಲಿರುವ ಆ ಬ್ಯಾಕ್ಟೀರಿಯಾ ತನ್ನ resistanceನ ವೃದ್ಧಿಪಡಿಸಿಕೊಳ್ಳಲು ಶುರುಮಾಡುತ್ತದೆ. ಅಂದರೆ ಆ ಔಷಧವನ್ನು ಎದುರಿಸುವ ಗುಣ ಸದರಿ ಬ್ಯಾಕ್ಟೀರಿಯಾಕ್ಕೂ ಬಂದುಬಿಡುತ್ತದೆ. ಹೀಗೆ ಬ್ಯಾಕ್ಟೀರಿಯಾ ವಿರುದ್ಧ ನಿರಂತರವಾಗಿ ಒಂದೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಆ ಔಷಧಿಯನ್ನೇ ತಿಂದು ಹೇಗೆ ರಕ್ಷಣೆ ಪಡೆಯುವುದೆಂದು ಆ ಬ್ಯಾಕ್ಟೀರಿಯಾ ಕಲಿತುಬಿಡುತ್ತದೆ. ಬ್ಯಾಕ್ಟೀರಿಯಾವೂ ಪ್ರತಿರೋಧವನ್ನು ಒಡ್ಡುತ್ತದೆ. ಹೀಗೆ ಔಷಧವನ್ನೇ ತಿಂದು ಬದುಕುತ್ತಿರುವ ನೂರಾರು ಬ್ಯಾಕ್ಟೀರಿಯಾಗಳಿವೆ.
ಇದನ್ನೂ ಓದಿರಿ: ಸಾಲ ಯೋಜನೆಗಳಿಂದ ರೈತರನ್ನು ಶೂಲಕ್ಕೇರಿಸಿದ್ದು ಸರ್ಕಾರಗಳಲ್ಲವೇ?
ನೈಟ್ರೋಜನ್ ತಿಂದು ಬೆಳೆಯುವ ಬ್ಯಾಕ್ಟೀರಿಯಾಗಳಿವೆ. ಗಂಧಕವನ್ನು ತಿಂದು ಬೆಳೆಯುವ ಬ್ಯಾಕ್ಟೀರಿಯಾಗಳಿವೆ. Antibiotic ಕೂಡ ಒಂದು ರಸಾಯನಿಕವಲ್ಲವೇ? ಹೀಗಾಗಿ ಅದನ್ನೂ ತಿಂದು ಬೆಳೆಯಲು ಬ್ಯಾಕ್ಟೀರಿಯಾ ಕಲಿಯುತ್ತದೆ.
ಹೀಗಾಗಿಯೇ ನಿಮಗೇನಾದರೂ ಹುಷಾರಿಲ್ಲದಿದ್ದಾಗ ಡಾಕ್ಟರ್‌ಗಳು Antibiotic ಕೊಟ್ಟಿದ್ದಾರೆಂದರೆ ನೀವು ಆ ಕೋರ್ಸ್‌ನ ಸಂಪೂರ್ಣ ಮಾಡಬೇಕು. ಒಂದು ವೇಳೆ ನೀವು ಆ ಕೋರ್ಸ್‌ನ ಸಂಪೂರ್ಣ ಮಾಡದಿದ್ದರೆ, ನಿಮ್ಮ ದೇಹದ ಒಳಗೆ ಬ್ಯಾಕ್ಟೀರಿಯಾ ಜೊತೆಗೆ ಫೈಟ್ ಮಾಡುತ್ತಿರುವ Antibiotic ಸೋಲೊಪ್ಪಿಕೊಳ್ಳಲು ಶುರು ಮಾಡುತ್ತದೆ, ಬ್ಯಾಕ್ಟೀರಿಯಾಗಳು ಮತ್ತಷ್ಟು ಹೆಚ್ಚಾಗುತ್ತವೆ. ಪರಿಣಾಮ ಅವು ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತವೆ.
ಅಸಲಿಗೆ ಮೆಡಿಕಲ್ ಇತಿಹಾಸದಲ್ಲಿ ಹೀಗೆ Antibiotic ವಿರುದ್ಧ resistance ಬೆಳೆಸಿಕೊಂಡ ಬ್ಯಾಕ್ಟೀರಿಯಾಗಳು ಸಾಕಷ್ಟಿವೆ. ಉದಾಹರಣೆಗೆ SEPRAN ಅನ್ನೋ SYRUP ಅನ್ನು 10 ವರ್ಷಗಳ ಹಿಂದೆಯೇ ನಿಲ್ಲಿಸಲಾಯಿತು. ಯಾಕೆಂದರೆ ಬ್ಯಾಕ್ಟೀರಿಯಾಗಳು ಈ syrup ವಿರುದ್ಧ ತಮ್ಮ ಪ್ರತಿರೋಧವನ್ನು ಬೆಳೆಸಿಕೊಂಡಿದ್ದವು. ಅನಿವಾರ್ಯವಾಗಿ ಕಂಪನಿಯು ಆ syrupನ ಕೈಬಿಟ್ಟು ಪರ್ಯಾಯವಾಗಿ ಸಂಪೂರ್ಣ ಹೊಸ Antibiotic ಬಿಡುಗಡೆ ಮಾಡಿತ್ತು.
ವಿಚಾರ ಹೀಗಿರುವಾಗ ನೂರಾರು-ಸಾವಿರಾರು ವರ್ಷಗಳ ಕಾಲ ನೀವು ಗೋಮೂತ್ರವನ್ನು Antibiotic ಎಂದು ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ದೇಹದೊಳಗಿನ ಬ್ಯಾಕ್ಟೀರಿಯ ತನ್ನ resistance ಗುಣವನ್ನು ಹೆಚ್ಚಿಸಿಕೊಂಡಿರುತ್ತದೆ. ಹೀಗಾಗಿ ಗೋಮೂತ್ರ ಒಂದು Antibiotic ಆಗಿರುವುದಕ್ಕೆ ಸಾಧ್ಯವೇ ಇಲ್ಲ.
ಮನುಷ್ಯರಿಗೆ ಹೇಗೆ URINARY INFECTION ಇರುತ್ತದೆಯೋ ಹಾಗೆಯೇ ಎಲ್ಲ ಪ್ರಾಣಿಗಳಿಗೂ ಈ ಸಮಸ್ಯೆ ಇದ್ದೇ ಇರುತ್ತದೆ. ಹಸು-ದನಗಳಿಗೂ ನಾನಾ URINARY INFECTION ಬರುತ್ತವೆ. ಹಸು-ದನಗಳಿಗೆ URINARY INFECTION ಬಂದರೆ E. coli ಎಂಬ ಬ್ಯಾಕ್ಟೀರಿಯಾ ಅದರ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಒಂದು ವೇಳೆ ಇಂತಹ ಬ್ಯಾಕ್ಟೀರಿಯಾ ಪೀಡಿತ ಹಸುವಿನ ಗೋಮೂತ್ರವನ್ನು ನೀವು ಕುಡಿದರೆ ನಿಮಗೂ ಬ್ಯಾಕ್ಟೀರಿಯಾ Infection ಆಗುತ್ತದೆ, ದೇಹದಲ್ಲಿ ಬೇರೆ ಬೇರೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಕೊಂಚ ಯೋಚಿಸಿ ಯೋಚಿಸಿ ನೋಡಿ; ಹಸುವಿನ ದೇಹದೊಳಗೆ ಇರುವ ಈ ಬ್ಯಾಕ್ಟೀರಿಯಾ ವಿರುದ್ಧ ಹಸುವಿನ ದೇಹದಲ್ಲಿಯೇ ಒಂದು Antibiotic ಸೃಷ್ಟಿಯಾಗಿಲ್ಲ ಎನ್ನುವುದಾರೆ, ಅದರ ಮೂತ್ರ ನಿಮ್ಮ ಪಾಲಿಗೆ Antibiotic ಆಗಿ ಕೆಲಸ ಮಾಡಲು ಸಾಧ್ಯವೆ?

ಕಾಮಕೋಟಿಯವರು ಪ್ರಸ್ತಾಪಿಸಿರುವ ಐದು ಸಂಶೋಧನಾ ಪ್ರಬಂಧಗಳನ್ನು ಬಹುತೇಕ ಎಲ್ಲ ರಾಷ್ಟ್ರೀಯ ಮಾಧ್ಯಮಗಳೂ ಪಬ್ಲಿಷ್ ಮಾಡಿವೆ. ಅವುಗಳ ಅಸಲಿ ಕಥೆಯನ್ನು ತಿಳಿಸಬೇಕಿದೆ.
ಮೊದಲ ಪೇಪರ್‌ನ ಶೀರ್ಷಿಕೆ: “Peptide profiling in cow urine reveals molecular signature of physiology-driven pathways and in-silico predicted bioactive properties”
ಇದರಲ್ಲಿ ಏನು ಮಾಡಿದ್ದಾರೆ ಗೊತ್ತೆ? ಗೋಮೂತ್ರವನ್ನು ತೆಗೆದು ಸಂಪೂರ್ಣ Purify ಮಾಡಿ, ಅದರೊಳಗಿರುವ ಮೈಕ್ರೋ ಲೆವೆಲ್ ಪ್ರೋಟೀನ್ ಅಂಶವನ್ನು ಹೊರತೆಗೆದು, ಆ ಪ್ರೋಟೀನ್‌ನಲ್ಲಿ Antibiotic ಇದೆಯಾ? ಎಂದು ಪರೀಕ್ಷೆ ಮಾಡಿದ್ದಾರೆ. ಮೊದಲೇ ಹೇಳಿದಂತೆ ಪ್ರತಿ ವಸ್ತುಗಳಲ್ಲೂ Antibiotic ಅಥವಾ probiotic ಗುಣ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಮನುಷ್ಯನ ಮೂತ್ರದಲ್ಲಿರುವ ಪ್ರೋಟಿನ್‌ನಲ್ಲೂ Antibiotic ಅಂಶ ಇದೆ. ಅಂದರೆ ಪ್ರೋಟೀನ್‌ನಲ್ಲಿರುವ Antibiotic property ಮೈಕ್ರೋ ಲೆವೆಲ್ ಇರುತ್ತದೆ. ಗೋಮೂತ್ರ ಮಾತ್ರವಲ್ಲ ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿಗಳ ಯೂರಿನ್‌ನಲ್ಲಿರುವ ಪ್ರೋಟಿನ್‌ನಲ್ಲೂ ಮೈಕ್ರೋ ಲೆವೆಲ್‌ನ Antibiotic property ಇರುತ್ತದೆ.
ಮನುಷ್ಯನ ಮೂತ್ರದಲ್ಲೂ ಪ್ರೋಟಿನ್ ಇದಿಯಾ?
ನೀವು ಯೂರಿನ್ ಟೆಸ್ಟ್ ರಿಪೋರ್ಟ್‌ನಲ್ಲಿ ಪ್ರೋಟಿನ್ ಪಾಸಿಟಿವ್ – ನೆಗೆಟಿವ್ ಕಾಲಂ ಇರುವುದನ್ನು ಗಮನಿಸಬಹುದು. ಮನುಷ್ಯನ ಯೂರಿನ್‌ನಲ್ಲೂ ಮೈಕ್ರೋ ಲೆವೆಲ್‌ನಲ್ಲಿ ಪ್ರೋಟಿನ್ ಇದ್ದೇ ಇರುತ್ತದೆ. ಮನುಷ್ಯ ಮಾತ್ರವಲ್ಲ ಯಾವುದೇ ಪ್ರಾಣಿಯ ಯೂರಿನ್‌ನಲ್ಲಿರುವ ಪ್ರೋಟಿನ್ ತೆಗೆದುಕೊಂಡು ಅದರಲ್ಲಿ Antibiotic property ಇದೆಯಾ ಎಂದು ಟೆಸ್ಟ್ ಮಾಡಿದರೆ, ಖಂಡಿತ ಅದರೊಳಗೆ ಮೈಕ್ರೋ ಲೆವೆಲ್‌ನಷ್ಟು Antibiotic ಅಂಶ ಇದ್ದೇ ಇರುತ್ತದೆ. ಪ್ರಾಣಿಗಳು ಮಾತ್ರವಲ್ಲ, ಕಲ್ಲು-ಮಣ್ಣು ಸಸ್ಯಗಳು- ಎಲ್ಲದರಲ್ಲೂ ಇರುವ ಪ್ರೋಟಿನ್ ತೆಗೆದು Antibiotic property ಇದೆಯಾ? ಎಂದು ಪರೀಕ್ಷಿಸಿದರೆ, ಅದರಲ್ಲೂ ಮೈಕ್ರೋ ಲೆವೆಲ್‌ನಲ್ಲಿ Antibiotic ಸಿಕ್ಕೇ ಸಿಗುತ್ತದೆ.
ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
ಇಲ್ಲಿ ಉಲ್ಲೇಖಿಸಿರುವ ರಿಸರ್ಚ್ ಪೇಪರ್‌ನಲ್ಲಿ ಅಂತಹದ್ದೊಂದು ಪರೀಕ್ಷೆ ಮಾಡಿದ್ದಾರಷ್ಟೇ. ಮನುಷ್ಯರು ಈ Antibiotic ಅನ್ನು ಗುಳಿಗೆ ರೂಪದಲ್ಲಿ ತೆಗೆದುಕೊಂಡರೆ, ಅದು ದೇಹದಲ್ಲಿ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ಈ ಸದರಿ ಸಂಶೋಧನಾ ಲೇಖನದಲ್ಲಿ ಯಾವುದೇ ಉಲ್ಲೇಖವಿಲ್ಲ. ಮನುಷ್ಯರ ಮೇಲೆ ಟೆಸ್ಟ್ ಮಾಡಿದ ದೃಷ್ಟಾಂತವೂ ಇಲ್ಲ. ಹೀಗಾಗಿ ಗೋಮೂತ್ರ ಕುಡಿದರೆ ದೇಹದಲ್ಲಿ Antibiotic ಉಂಟು ಮಾಡುತ್ತದೆ ಎಂಬುದಕ್ಕೆ ಈ ಪೇಪರ್‌ನಲ್ಲಿ ಸೂಕ್ತ ಆಧಾರವಿಲ್ಲ.
ಎರಡನೇ ರಿಸರ್ಚ್ ಪೇಪರ್: Chemotherapeutic potential of cow urine: A review
ಗೋಮೂತ್ರಕ್ಕೆ Anti bacterial efect ಇದೆ, resistance bacteriaಗಳನ್ನೂ ಇದು ಕೊಲ್ಲುತ್ತದೆ ಎಂದೆಲ್ಲ ಈ ಪೇಪರ್‌ನಲ್ಲಿ ಬರೆಯಲಾಗಿದೆ. ಬಹುಶಃ ಕಾಮಕೋಟಿಯವರು ಈ ಪೇಪರ್ ಓದಿಯೇ ಯಾಮಾರಿರಬಹುದು ಅನಿಸುತ್ತದೆ. ಯಾಕೆಂದರೆ ವಿಜ್ಞಾನದಲ್ಲಿ ಇವನ್ನೆಲ್ಲ ‘ಇನ್ ವಿಟ್ರೋ ಸ್ಟಡೀಸ್’ ಎನ್ನುತ್ತಾರೆ. ಅಂದರೆ ಒಂದು ಪ್ಲೇಟ್‌ನಲ್ಲಿ ಬ್ಯಾಕ್ಟೀರಿಯಾಗಳನ್ನು ಹಾಕಿ ಅದರ ಮೇಲೆ Antibiotic ಹಾಕಿ ಬ್ಯಾಕ್ಟೀರಿಯಾಗಳೆಲ್ಲ ಸಾಯುತ್ತಿರುವೆಯೇ ಎಂದು ಸೂಕ್ಷ್ಮ ದರ್ಶಕದ ಮೂಲಕ ಚೆಕ್ ಮಾಡುತ್ತಾರೆ.
ಇದೇ ತರ ನೀವು ಒಂದು ಪ್ಲೇಟ್‌ನಲ್ಲಿ ಬ್ಯಾಕ್ಟೀರಿಯಾವನ್ನು ಹಾಕಿ ಅದರ ಮೇಲೆ ಗೋಮೂತ್ರ ಹಾಕಿದರೆ ಬ್ಯಾಕ್ಟೀರಿಯಾ ಸಾಯುವುದು ಖಚಿತ. ಯಾಕೆಂದರೆ ಗೋಮೂತ್ರದಲ್ಲೂ ಯೂರಿಯಾ ಸೇರಿದಂತೆ ನಾನಾ ಕೆಮಿಕಲ್ ಇರುವುದರಿಂದ ಬ್ಯಾಕ್ಟೀರಿಯಾಗಳು ಸಾಯಲೇಬೇಕು. ಗೋಮೂತ್ರ ಮಾತ್ರವಲ್ಲ ಮನುಷ್ಯನ ಯೂರಿನ್ ಹಾಕಿದರೂ ಬ್ಯಾಕ್ಟೀರಿಯಾಗಳು ಸತ್ತೇ ಸಾಯುತ್ತವೆ. ಆದರೆ ವಿಜ್ಞಾನದಲ್ಲಿ in vivo studies ಎನ್ನುವ concept ಇದೆ. ಅದರ ಬಗ್ಗೆ ಗೋಮೂತ್ರ ಪ್ರತಿಪಾದಕರು ಮಾತನಾಡುವುದೇ ಇಲ್ಲ.
ಏನದು in vivo studies?
ಈಗ ನೀವು ಒಂದು ಗುಳಿಗೆಯನ್ನು ನುಂಗಿದಾಗ ಅದು ನಿಮ್ಮ ಹೊಟ್ಟೆಯೊಳಗೆ ಹೋಗಿ ಜೀರ್ಣಗೊಂಡು ಆ ಗುಳಿಗೆಯಲ್ಲಿರುವ Antiboitic property ನಿಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆಯೇ ಎಂಬುದು ಇಲ್ಲಿರುವ ಪ್ರಶ್ನೆ. ಈ ಗೋಮೂತ್ರವನ್ನು ಕುಡಿದು ಆ ಮೂತ್ರ ಜೀರ್ಣಗೊಂಡು ರಕ್ತದಲ್ಲಿ ಬೆರೆತು ಅದರಲ್ಲಿರುವ ಯೂರಿಯಾ, ಅಮೋನಿಯಾಗಳು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆಯೇ?- ಖಂಡಿತ ಇಲ್ಲ.
ಈಗ ಒಂದು ಉದಾಹರಣೆಯನ್ನು ಹೇಳುವುದಾದರೆ, ಕೈಗೆ ಸೋಪು ಹಾಕಿ ತೊಳೆದರೆ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಹಾಗೆಂದು ಅದೇ ಸೋಪಿನ ನೀರನ್ನು ಕುಡಿದರೆ ಬ್ಯಾಕ್ಟೀರಿಯಾ ಸಾಯಲ್ಲ, ಬದಲಾಗಿ ನಿಮಗೆ ಡಯೇರಿಯಾ ಬರುತ್ತದೆ ಅಷ್ಟೇ. ಸಂಶೋಧನೆಯೊಳಗೆ in vivo studies, in vitro studies ಎಂಬ ವಿಧಾನಗಳಿರುತ್ತವೆ. ಮುಖ್ಯವಾಗಿ ಯಾವುದೇ ಮೆಡಿಸನ್ in vivo studiesನಲ್ಲಿ ಪಾಸ್ ಆಗದಿದ್ದರೆ ಅದನ್ನು ಮೆಡಿಸನ್ ಎಂದು ಒಪ್ಪಲು ಸಾಧ್ಯವೇ ಇಲ್ಲ. ಈ ಸರಳ ಸತ್ಯ ಓರ್ವ ಐಐಟಿ ಪ್ರೊಫೆಸರ್‌ಗೆ ತಿಳಿಯದೆ ಹೋಯಿತೆ ಎಂಬುದು ನಮ್ಮನ್ನು ಕಾಡಬೇಕಾದ ಪ್ರಶ್ನೆ. ಈ ಎರಡನೇ ರಿಸರ್ಚ್ ಪೇಪರ್ ಕೂಡ ನಂಬಿಕೆ ಅರ್ಹವಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮೂರನೇ ರಿಸರ್ಚ್ ಪೇಪರ್: Review on Gomutra
ಅಸಲಿಗೆ ಇದೊಂದು ರಿಸರ್ಚ್ ಪೇಪರ್ ಅಲ್ಲವೇ ಅಲ್ಲ. ಆ ರಿಸರ್ಚ್‌ನಲ್ಲಿ ಹೀಗೆ ಹೇಳಿದ್ದಾರೆ, ಈ ರಿಸರ್ಚ್‌ನಲ್ಲಿ ಹಾಗೆ ಹೇಳಿದ್ದಾರೆ ಎಂದು ಕೇವಲ ಉಲ್ಲೇಖಗಳನ್ನು ನೀಡುವ ‘Review’ ಪೇಪರ್ ಅಷ್ಟೇ. ಸಿನಿಮಾ ರಿವ್ಯೂ ಮಾಡುತ್ತಾರಲ್ಲ- ಹಾಗೆ. ಹೀಗಾಗಿ ಇದನ್ನೊಂದು ಆಧಾರವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ.
ನಾಲ್ಕನೇ ರಿಸರ್ಚ್ ಪೇಪರ್: Benefits of cow urine-A Review
ಇದೂ ಸಹ ರಿಸರ್ಚ್ ಅಲ್ಲ, ಕೇವಲ ರಿವ್ಯೂ ಪೇಪರ್ ಅಷ್ಟೇ.
ಐದನೇ ಪೇಪರ್: Miraculous Benefits of cow urine- A Review
ಇದೂ ಸಹ ರಿಚರ್ಚ್ ಅಲ್ಲ, ಕೇವಲ ರಿವ್ಯೂ ಅಷ್ಟೇ. ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ಐಐಟಿ ಪ್ರೊಫೆಸರ್ ಕಾಮಕೋಟಿಯವರು ಪತ್ರಿಕಾಗೋಷ್ಠಿಯಲ್ಲಿ ಗೋಮೂತ್ರಕ್ಕೆ ಸಂಬಂಧಿಸಿದ ಒಂದು ಪೇಟೆಂಟ್ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ಪೇಟೆಂಟ್‌ನಲ್ಲಿ US ಅಂತ ಹಾಕಿದೆ ಅಂದಾಕ್ಷಣ ಇದು ವಿದೇಶದಲ್ಲಿ ಅಥವಾ ಅಮೆರಿಕದಲ್ಲಿ ಪಡೆಯಲಾಗಿರುವ ಪೇಟೆಂಟ್ ಖಂಡಿತ ಅಲ್ಲ.
ಈ ಪೇಟೆಂಟ್ ಪಡೆಯಲು ಏನು ಮಾಡಿದ್ದಾರೆ ಗೊತ್ತೆ? ಗೋವಿನ ಯೂರಿನ್ ಪ್ಯೂರಿಫೈ ಮಾಡಿ, ಅದರ ಜೊತೆಗೆ Alcohol ಬೆರೆಸಿ, ಬಿಸಿಲಲ್ಲಿ ಒಣಗಿಸಿ ಅದನ್ನು ಒಂದು ಪೌಡರ್ ರೀತಿ ತಯಾರಿಸಿದ್ದಾರೆ. ಆ ಪೌಡರ್‌ಗೆ ಒಂದು ಪೇಟೆಂಟ್ ತೆಗೆದುಕೊಂಡಿದ್ದಾರೆ ಅಷ್ಟೇ.
ಅಸಲಿಗೆ ನೀವು ಈ ಪೇಟೆಂಟ್ ಜಗತ್ತಿನೊಳಗೆ ಹೋದರೆ, ಇಂತಹ ಲಕ್ಷ ಗಟ್ಟಲೆ ತಲೆಬುಡ ಇಲ್ಲದ ಪೇಟೆಂಟ್‌ಗಳು ನಿಮಗೆ ಸಿಗುತ್ತವೆ. ಇದನ್ನೆಲ್ಲ ಯಾಕೆ ಮಾಡ್ತಾರೆ? ಹೇಗೆ ಮಾಡ್ತಾರೆ? ಅಂತ ಯಾರಿಗೂ ಗೊತ್ತಾಗುವುದಿಲ್ಲ. ನಾವು ಕೂಡ ಏನೋ ಕಂಡು ಹಿಡಿದಿದ್ದೀವಿ ಎಂದು ಬಿಂಬಿಸಿಕೊಳ್ಳಲು ಯಾರ್ಯಾರೋ ಪೇಟೆಂಟ್ ತೆಗೆದುಕೊಳ್ಳುತ್ತಾರೆ. ನೀವು ಕೂಡ ಯಾವುದನ್ನಾದರೂ Alcohol ಜೊತೆ ಬೆರೆಸಿ, ಅದನ್ನು ಪೌಡರ್ ಮಾಡಿ ಪೇಟೆಂಟ್ ತೆಗೆದುಕೊಳ್ಳಬಹುದು, ಬಿಡಿ. ಸದರಿ ಪೇಟೆಂಟ್ ವಿವರಗಳನ್ನು ನೋಡಿರಿ. ಗೋಮೂತ್ರ ಕುಡಿದರೆ ಅದು ದೇಹದ ಒಳಗೆ ಹೋಗಿ ಜೀರ್ಣಗೊಂಡು Antibiotic ಆಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ.
ರಿಸರ್ಚ್ ಪೇಪರ್ ಅಂದಾಕ್ಷಣ ಕುರುಡಾಗಿ ನಂಬಲೇಬೇಕೆಂದು ಇಲ್ಲ. ಯಾವುದೇ ರಿಸರ್ಚ್ ಪೇಪರ್ ಬಂದರೂ ಸಂಪೂರ್ಣವಾಗಿ ಅಧ್ಯಯನ ಮಾಡಬೇಕು. ಇದು ಸಂಶೋಧನಾ ಮಂಡನೆಯೇ ಅಥವಾ ಕೇವಲ ರಿವ್ಯೂ ಮಾಡಿದ ಮಂಡನೆಯೇ ಎಂಬುದನ್ನು ಮೊದಲು ಗಮನಿಸಬೇಕು. ಕೆಲವಕ್ಕೆ ಹೆಚ್ಚಿನ Follow up ಬೇಕಾಗುತ್ತದೆ. ಕೆಲವು ಪೇಪರ್‌ಗಳಲ್ಲಿ ‘ಇದೇ ಅಂತಿಮ ಅಲ್ಲ, Further Reserch Requird’ ಎಂದು ಬರೆದಿರುತ್ತಾರೆ. ಎಷ್ಟೋ ರಿಸರ್ಚ್‌ಗಳು ಸರಿ ಅಂತ ಒಪ್ಪಿ ಹಲವು ವರ್ಷಗಳ ನಂತರ ಇದು ತಪ್ಪಾದ ರಿಸರ್ಚ್ ಎಂದು ನಿರ್ಧರಿಸಿದ್ದುಂಟು. ತಿರುಚಲ್ಪಟ್ಟ ಸಂಶೋಧನಾ ಪ್ರಬಂಧಗಳು ಸಾಕಷ್ಟು ಇವೆ. ಈ ಬಗ್ಗೆ ನಾವು ಜಾಗೃತರಾಗಿರಬೇಕು. ಇತ್ತೀಚಿನ ದಿನಗಳಲ್ಲಿ ರಿಸರ್ಚ್ ಪೇಪರ್‌ಗಳ Quantity ಹೆಚ್ಚಾಗಿದೆ. Quality ಕಡಿಮೆಯಾಗಿರುವುದು ದುರಾದೃಷ್ಟಕರ. ಹೀಗಾಗಿ ನೀವು ಗೂಗಲ್‌ನಲ್ಲಿ ಯಾವುದರ ಬಗ್ಗೆ ಹುಡುಕಿದರೂ ಅದರ ಬಗ್ಗೆ ಒಂದು ಕ್ಷುಲ್ಲಕವಾದ ರಿಸರ್ಚ್ ಪೇಪರ್ ಸಿಕ್ಕೇ ಸಿಗುತ್ತದೆ.
ಇದನ್ನೂ ಓದಿರಿ: ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಚಾತುರ್ವರ್ಣದ ಮರುಸೃಷ್ಟಿ
“ಒಂಟೆ ಯೂರಿನ್‌ನಲ್ಲಿ Antibiotic ಇದೆಯಾ?” ಎಂದು ಗೂಗಲ್ ಮಾಡಿ ನೋಡಿ, ಆ ಬಗ್ಗೆಯೂ ಒಂದು ರಿಸರ್ಚ್ ಪೇಪರ್ ಸಿಗುತ್ತದೆ. ಗೋವನ್ನು ಹೇಗೆ ಒಂದು ಪ್ರದೇಶದಲ್ಲಿ, ಧರ್ಮದಲ್ಲಿ ದೇವರು ಎಂದು ನಂಬಲಾಗುತ್ತಿದೆಯೋ, ಹಾಗೆಯೇ ಒಂಟೆಯನ್ನೂ ಕೆಲವು ಪ್ರದೇಶಗಳಲ್ಲಿ ದೇವರು ಅಂತ ನಂಬಲಾಗುತ್ತದೆ. ಅದರ ಬಗ್ಗೆಯೂ ಸಂಶೋಧನೆ ನಡೆಯುತ್ತದೆ. ಇಷ್ಟೇ ಏಕೆ ಕುರಿ, ಆನೆ, ಆಸ್ಟ್ರೇಲಿಯಾದ ಕಾಂಗರೂ ಸೇರಿದಂತೆ ಯಾವ ದೇಶದಲ್ಲಿ ಯಾವ ಪ್ರಾಣಿಗೆ ಹೆಚ್ಚು ಮಹತ್ವ ಇದೆಯೋ ಆ ಪ್ರಾಣಿಯ ಯೂರಿನ್‌ನಲ್ಲಿ ಔಷಧೀಯ ಗುಣ ಇದೆಯಾ? ಎಂದು ರಿಸರ್ಚ್ ಮಾಡಿರುವುದುಂಟು. ದಂಡಿಯಾಗಿ ಇಂಟರ್‌ನೆಟ್‌ನಲ್ಲಿ ಸಿಗುವ ಇಂತಹ ಪೇಪರ್‌ಗಳನ್ನು ನಿಜವೆಂದು ನೀವು ನಂಬಬೇಕಿಲ್ಲ.
ಐಐಟಿ ಮದ್ರಾಸಿನ ವಿದ್ಯಾರ್ಥಿಯೊಬ್ಬ ಇಂತಹ ತಲೆಬುಡ ಇಲ್ಲದ ಹೇಳಿಕೆ ನೀಡಿದ್ದರೆ ಹೋಗಲಿ ಬಿಡಿ ಅನ್ನಬಹುದಿತ್ತು. ಆದರೆ ಐಐಟಿ ಮದ್ರಾಸ್‌ನ ನಿರ್ದೇಶಕ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ, ಒಂದು ಧರ್ಮದ ಪರ ಇದ್ದೇನೆಂದು ಬಿಂಬಿಸಿಕೊಳ್ಳುವ ಕಾರಣಕ್ಕಾಗಿ ಮೌಢ್ಯವನ್ನು ಬಿತ್ತಬಾರದು. ಯಾವುದೋ ಒಂದು ಜಾಗದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದು ಅರಿವಾದ ಕೂಡಲೇ, ಆತ ಕ್ಷಮೆ ಕೇಳಿದ್ದರೆ ಆ ವಿಚಾರ ಅಲ್ಲೇ ಮುಗಿಯುತ್ತಿತ್ತು. ಆದರೆ, ತನ್ನ ಹೇಳಿಕೆಯನ್ನು ಸಮರ್ಥಸಿಕೊಳ್ಳುವ ನೆಪದಲ್ಲಿ ಹೊರಟರು. ಖೊಟ್ಟಿ ಪೇಪರ್‌ಗಳನ್ನು ಉದಾಹರಣೆಯಾಗಿ ನೀಡಿ ನಗೆಪಾಟಲಿಗೀಡಾದರು. ಆ ಮೂಲಕ ಐಐಟಿ ಮದ್ರಾಸ್‌ನಲ್ಲಿ ನೀಡುತ್ತಿರುವ ಶಿಕ್ಷಣದ ಕ್ವಾಲಿಟಿ ಬಗ್ಗೆ ಸಂಶಯ ಬೆಳೆಸಿಬಿಟ್ಟರು ಕಾಮಕೋಟಿ!
ಓದಿದವರೇ ಹೀಗೆ ತಳಬುಡವಿಲ್ಲದೆ ಮಾತನಾಡಿದರೆ, ಈಗಲೂ ಮೂಲಭೂತ ವೈದ್ಯಕೀಯ ಸೌಲಭ್ಯಗಳೇ ತಲುಪದ ಸಮಾಜದ ಕಟ್ಟ ಕಡೆಯ ಜನರ ನಂಬಿಕೆಗಳು ಹೇಗಿರಬಹುದು? ಆ ಜನಗಳಿಗೆ ಈಗೀಗ ವೈದ್ಯಕೀಯ ಸೌಲಭ್ಯಗಳು ತಲುಪುತ್ತಿವೆ. ಆದರೆ, ಅವರನ್ನು ಮತ್ತೆ ಗೋಮೂತ್ರದ ಕಡೆ ತಿರುಗಿಸುವ ಕೆಲಸವನ್ನಷ್ಟೇ ಕಾಮಕೋಟಿ ಮಾಡುತ್ತಿದ್ದಾರೆ. ಹೀಗಾಗಿ ಸಮಾಜ ಯಾವಾಗಲೂ ಇಂತಹ ಜನಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಅಶೋಕ್ ಎಂ. ಭದ್ರಾವತಿ
ರಾಜಕೀಯ, ಸಾಮಾಜಿಕ, ಇತಿಹಾಸ, ಸಿನಿಮಾ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಒಳಹುಗಳನ್ನು ನೀಡುತ್ತಾ ಬಂದಿರುವ ಪತ್ರಕರ್ತ ಅಶೋಕ್ ಕುಮಾರ್ ಭದ್ರಾವತಿಯವರು ಉತ್ತಮ ವಾಗ್ಮಿಯೂ ಹೌದು




