(ಮುಂದುವರಿದ ಭಾಗ..) ಹಾಗಾದರೆ ಹಿಂದೂ ಮಹಿಳೆಯರ ಅವನತಿಗೆ ನಿಜಕ್ಕೂ ಕಾರಣರಾದವರು ಯಾರು?- ವೈದಿಕ ಪರಂಪರೆಯಲ್ಲಿ ಸನ್ಯಾಸ ಜೀವನಕ್ಕೆ ಮುಕ್ತ ಅವಕಾಶವಿರಲಿಲ್ಲ; ಇದಕ್ಕೆ ಕಠಿಣ ವಿರೋಧವಿತ್ತು. ಶತಮಾನಗಳ ಕಾಲ ಬ್ರಾಹ್ಮಣ್ಯವು ಹಲವಾರು ವಿಧಿನಿಷೇಧಗಳನ್ನು ಹೇರಿ, ಕೆಲವರಿಗೆ ಮಾತ್ರ ಸನ್ಯಾಸತ್ವದ ಅವಕಾಶ ಕಲ್ಪಿಸಿತು. ಅವುಗಳಲ್ಲಿ ಮುಖ್ಯವಾದ ನಿಷೇಧ-ಮಹಿಳೆಯರು ಮತ್ತು ಶೂದ್ರರು ಸನ್ಯಾಸಕ್ಕೆ ಅರ್ಹರಲ್ಲ ಎಂಬ ಪರಿಣಾಮವಾಗಿ ಮಹಿಳೆಯರು ಹಾಗೂ ಶೂದ್ರರು ಜ್ಞಾನವನ್ನು ಪಡೆಯುವ ಹಕ್ಕಿನಿಂದ ಸಂಪೂರ್ಣ ವಂಚಿತರಾಗಿದ್ದರು.
ಬುದ್ಧನು ಇಂತಹ ವೈದಿಕ ಕ್ರೌರ್ಯವನ್ನು ನಾಶಗೊಳಿಸಿದ್ದನು. ಮಹಿಳೆಯರಿಗೂ ಪುರುಷರಂತೆ ಜ್ಞಾನಾರ್ಜನೆಯ ಹಕ್ಕನ್ನು ನೀಡಿದ್ದನು. ಮಾನವ ತನ್ನ ಉನ್ನತಿಯನ್ನು ತಾನೇ ನಿರ್ಧರಿಸಬೇಕು ಎಂದು ಬುದ್ಧ ಪ್ರತಿಪಾದಿಸಿದನು. ‘ಇದು ಭಾರತದಲ್ಲಿ ನಡೆದ ಮೊತ್ತ ಮೊದಲ ಮಹಿಳಾ ಕ್ರಾಂತಿ ಮತ್ತು ಆಕೆಯ ನಿಜವಾದ ವಿಮೋಚನೆ’ ಅನ್ನುತ್ತಾರೆ ಅಂಬೇಡ್ಕರ್.
ಮನುಸ್ಮೃತಿಯಲ್ಲಿ ಮಹಿಳೆಯರ ಜ್ಞಾನದ ಹಕ್ಕಿನ ನಿರಾಕರಣೆ
ಮನು ಬಂದಿದ್ದು ಬುದ್ಧನ ಕಾಲಾನಂತರ. ಹಾಗಾದರೆ ಬುದ್ಧನ ಕಾಲದಲ್ಲಿ ಮಹಿಳೆಗೆ ಇದ್ದ ಸ್ವಾತಂತ್ರ‍್ಯ ಮತ್ತು ಹಕ್ಕುಗಳು ನಶಿಸಲು ಕಾರಣವೇನು? ಬುದ್ಧನ ಬಳಿಕ ಬಂದ ಮನು, ಬೌದ್ಧ ಧರ್ಮದ ಸಮಾನತಾವಾದಿ ದೃಷ್ಟಿಕೋನವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಮಹಿಳೆಯರನ್ನು ಶೋಷಿಸುವ ಸಾಮಾಜಿಕ ಕಟ್ಟಳೆಗಳನ್ನು ಸ್ಥಾಪಿಸಿದವನು. ಅವನು ಮನುಸ್ಮೃತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ-ಮಹಿಳೆಯರಿಗೆ ವೇದ ಅಧ್ಯಯನ ಮಾಡುವ ಹಕ್ಕಿಲ್ಲ. ಮಹಿಳೆಯರಿಗೆ ವೇದ ಮಂತ್ರಗಳನ್ನು ಉಚ್ಚರಿಸುವ ಅವಕಾಶವಿರಲಿಲ್ಲ. ಅವರ ಶವ ಸಂಸ್ಕಾರಗಳನ್ನೂ ವೇದ ಮಂತ್ರಗಳಿಲ್ಲದೆ ನಡೆಸಲಾಗುತ್ತಿತ್ತು. ಈ ಕಾರಣದಿಂದ ಹಿಂದೂ ಧರ್ಮದಲ್ಲಿ ಮಹಿಳೆಯರು ಧಾರ್ಮಿಕ ಜ್ಞಾನವಿಲ್ಲದವರಾಗಿದ್ದರೆ, ಅದಕ್ಕೆ ಬ್ರಾಹ್ಮಣ್ಯವೇ ಮುಖ್ಯ ಕಾರಣ ಎಂಬುದು ಬಾಬಾಸಾಹೇಬರ ನಿಚ್ಚಳ ಪ್ರತಿಪಾದನೆ.
ಅಂಬೇಡ್ಕರ್ ಅಭಿಪ್ರಾಯದಲ್ಲಿ, ಮನುಸ್ಮೃತಿಯು ಭಾರತದ ಮಹಿಳೆಯರಿಗೆ ಬಗೆದ ಬಹುದೊಡ್ಡ ಅವಹೇಳನ ಮತ್ತು ಆಘಾತದ ಮೂಲ. ಮನು ಮಹಿಳೆಯರಿಂದ ಜ್ಞಾನಾರ್ಜನೆಯ ಹಕ್ಕನ್ನು ಕಸಿದುಕೊಂಡ. ಜ್ಞಾನಾರ್ಜನೆ ಎಂಬುದು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕು. ಆದರೆ ಮಹಿಳೆಯರಿಗೆ ಅದನ್ನು ನಿರಾಕರಿಸಿ, ಅವರು ಅಜ್ಞಾನಿಗಳು, ಬುದ್ಧಿಶಕ್ತಿ ಇಲ್ಲದವರು ಎಂದು ಘೋಷಿಸಲಾಗಿತ್ತು. ನಂತರ, ಆಕೆಗೆ ಆಧ್ಯಾತ್ಮಿಕ ಸಾಮರ್ಥ್ಯವಿಲ್ಲ ಎಂಬ ಕಾರಣ ಹೇಳಿ, ಸನ್ಯಾಸ ಜೀವನಕ್ಕೆ ಅವಕಾಶ ನಿರಾಕರಿಸಲಾಯಿತು. ಇದು ಮಹಿಳೆಯರ ವಿರುದ್ಧ ಬೇರೂರಿಸಿದ ಕ್ರೌರ್ಯವಲ್ಲದೆ ಮತ್ತೇನು ಎಂದು ಪ್ರಶ್ನಿಸುತ್ತಾರೆ.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)
ಬಾಬಾಸಾಹೇಬರು ಹೇಳುವಂತೆ, ಪ್ರಾಚೀನ ಕಾಲದ ಅಥರ್ವ ವೇದ ಯುಗದಲ್ಲಿ ಮಹಿಳೆಯರು ಉಪನಯನದ ಹಕ್ಕು ಹೊಂದಿದ್ದರು. ಪಾಣಿನಿ ಮತ್ತು ಪತಂಜಲಿ ಅವರ ಗ್ರಂಥಗಳಲ್ಲಿ ಮಹಿಳೆಯರ ಶಿಕ್ಷಣದ ಉಲ್ಲೇಖಗಳಿವೆ. ಅವರು ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು, ಮೀಮಾಂಸ ಪರಿಣಿತರಾಗಿದ್ದರು, ಮಹಿಳೆಯರು ಶಿಕ್ಷಕಿಯರಾಗಿ ವಿದ್ಯಾರ್ಥಿನಿಯರಿಗೆ ವೇದಗಳನ್ನು ಬೋಧಿಸುತ್ತಿದ್ದರೆಂದು ಪತಂಜಲಿಯ ಮಹಾಭಾಷ್ಯ ತಿಳಿಸುತ್ತದೆ. ಧರ್ಮ-ತತ್ವಶಾಸ್ತ್ರ-ಅಧ್ಯಾತ್ಮ ಕುರಿತ ಸಾರ್ವಜನಿಕ ಸಂವಾದಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದರು. ಜನಕ ಮತ್ತು ಸುಲಭಾ, ಯಾಜ್ಞವಲ್ಕ್ಯ ಮತ್ತು ಗಾರ್ಗಿ, ಯಾಜ್ಞವಲ್ಕ್ಯ ಮತ್ತು ಮೈತ್ರೇಯಿ ಹಾಗೂ ಶಂಕರಾಚಾರ್ಯ ಮತ್ತು ವಿದ್ಯಾಧರಿಯ ನಡುವೆ ನಡೆದ ಸಾರ್ವಜನಿಕ ವಾದಗಳು- ತರ್ಕಗಳು, ಮಹಿಳೆಯು ಶಿಕ್ಷಣದ ಶಿಖರವನ್ನು ಏರಿದ್ದ ಕುರಿತ ಪುರಾವೆಗಳು. ಆದರೆ ಈ ಪ್ರಾಚೀನ ಪ್ರಗತಿಯನ್ನು ಮನು ಧ್ವಂಸಮಾಡಿದ್ದನು.

ಮನುಸ್ಮೃತಿಯ ಕಠೋರ ನಿಯಮಗಳು ಮತ್ತು ಮಹಿಳೆಯರ ಅವನತಿ
ಹಿಂದೂ ಸಮಾಜದಲ್ಲಿ ಮಹಿಳೆಯರು ಶಿಕ್ಷಣ ಪಡೆಯಕೂಡದು, ಧರ್ಮ ಶಾಸ್ತ್ರಗಳನ್ನು ಕಲಿಯಬಾರದು, ತತ್ವಶಾಸ್ತ್ರ ಚರ್ಚೆಗಳಲ್ಲಿ ಪಾಲ್ಗೊಳ್ಳಬಾರದು- ಇವೆಲ್ಲವೂ ಮನುಸ್ಮೃತಿ ವಿಧಿಸಿ ಬೇರೂರಿಸಿದ ನಿಯಮಗಳು. ಮನು ಮಹಿಳೆಯನ್ನು ಈ ಕೆಳಗಿನ ರೀತಿಯಲ್ಲಿ ವ್ಯಾಖ್ಯಾನಿಸಿದ್ದನು:
• “ಮಹಿಳೆಯರು ಮೂರ್ಖ ಪುರುಷರನ್ನಷ್ಟೇ ಅಲ್ಲ, ಜ್ಞಾನಿಯನ್ನು ಕೂಡ ದಿಕ್ಕು ತಪ್ಪಿಸುತ್ತಾರೆ ಮತ್ತು ಕಾಮಕ್ರೋಧದ ಗುಲಾಮರನ್ನಾಗಿಸುತ್ತಾರೆ.”
• “ತಾಯಿಯೊಂದಿಗೆ, ಸೋದರಿಯೊಂದಿಗೆ ಅಥವಾ ಮಗಳೊಂದಿಗೆ ಏಕಾಂತದಲ್ಲಿರಕೂಡದು. ಕಾಮವಾಸನೆಗಳು ಪ್ರಬಲವಾಗಿದ್ದು, ಅವುಗಳನ್ನು ಜಯಿಸುವುದು ಜ್ಞಾನಿಗೆ ಕೂಡ ಸುಲಭವಲ್ಲ. ಮಹಿಳೆಯು ತಂತಾನೇ ಸಂಪೂರ್ಣ ವ್ಯಕ್ತಿಯಲ್ಲ ಸ್ತ್ರೀಯರಿಗೆ ಪುರುಷನು ಸುಂದರನಾಗಿರಬೇಕೆಂದೇನೂ ಇಲ್ಲ, ಯಾವ ವಯಸ್ಸಿನವನಾದರೂ ಪರವಾಗಿಲ್ಲ, ಅವನು ಪುರುಷನಾಗಿದ್ದರೆ ಸಾಕು ಒಪ್ಪಿಸಿಕೊಂಡು ಬಿಡುತ್ತಾರೆ. ಎಷ್ಟೇ ಎಚ್ಚರಿಕೆಯಿಂದ ಕಾವಲು ಕಾದರೂ ಅವರು ತಮ್ಮ ಗಂಡಂದಿರಿಗೆ ನಿಷ್ಠರಾಗಿರುವುದಿಲ್ಲ, ಅತ್ಯಂತ ಶ್ರಮಪಟ್ಟು ಅವರನ್ನು ಕಾವಲು ಕಾಯಬೇಕಾಗುತ್ತದೆ, ಸೃಷ್ಟಿಕರ್ತನು ಅಂತಹ ಗುಣಗಳನ್ನು ಅವರಲ್ಲಿ ತುಂಬಿರುತ್ತಾನೆ. ಅವರು ಅಶುದ್ಧ ಬಯಕೆಗಳು, ಕ್ರೋಧ, ಅಪ್ರಾಮಾಣಿಕತೆ, ದುರ್ಗುಣಗಳನ್ನು ಹೊಂದಿದವರಾಗಿರುತ್ತಾರೆ.”
• “ಅವಳು ಸದಾ ಸರ್ವದಾ ಪುರುಷನ ಅಂಕೆಯಲ್ಲಿರಬೇಕು, ವಿಶೇಷವಾಗಿ ದುಷ್ಟ ಇರಾದೆ ಹೊಂದಿರುತ್ತಾಳೆ, ಎರಡೂ ಮನೆಗಳಿಗೆ ದುಃಖ ಉಂಟು ಮಾಡುತ್ತಾಳೆ.”
• “ಅವಳಿಗೆ ವಿವಾಹವಿಚ್ಛೇದನ ಮಾಡುವ ಹಕ್ಕಿಲ್ಲ.”
• “ಗಂಡ ದುರಾಚಾರಿಯಾಗಿದ್ದರೂ ಹೇಡಿಯಾಗಿದ್ದರೂ ಅವನನ್ನು ದೇವರಂತೆ ಪೂಜಿಸಬೇಕು. ಗಂಡನು ಹೆಂಡತಿಯನ್ನು ತ್ಯಜಿಸಬಹುದು, ಮಾರಾಟ ಮಾಡಬಹುದು.” ಆದರೆ ಪತ್ನಿಗೆ ಯಾವುದೇ ಬಗೆಯ ಸ್ವಾತಂತ್ರ‍್ಯವನ್ನು ಮನು ನೀಡುವುದಿಲ್ಲ. ಬೌದ್ಧ ಕಾಲದಲ್ಲಿ ಸ್ತ್ರೀಗೆ ನೀಡಲಾಗಿದ್ದ ಸ್ವಾತಂತ್ರ‍್ಯವನ್ನು ಕಿತ್ತು ಹಾಕುವುದೇ ಅವನ ಉದ್ದೇಶವಾಗಿತ್ತು.
ಇದನ್ನೂ ಓದಿರಿ: ‘ಶೂದ್ರರು ಯಾರಾಗಿದ್ದರು?’: ಬಾಬಾಸಾಹೇಬರು ಪ್ರತಿಪಾದಿಸಿದ್ದೇನು?
ಇಂತಹ ನಿಯಮಗಳು ಮಹಿಳೆಯರನ್ನು ದಾಸ್ಯ ಸ್ಥಿತಿಗೆ ತಳ್ಳಿದವು. ಅವರಿಗೆ ಸ್ವಾತಂತ್ರ‍್ಯ, ಶಿಕ್ಷಣ, ಆಧ್ಯಾತ್ಮಿಕ ಬೆಳವಣಿಗೆ-ಯಾವುದಕ್ಕೂ ಅವಕಾಶವಿರಲಿಲ್ಲ. ಮನು ಮಹಿಳೆಯನ್ನು ಆಸ್ತಿಯಂತೆ ಪರಿಗಣಿಸಿದ್ದನು. ಮಹಿಳೆಯರು ಸಂಪಾದಿಸಿದ ಸಂಪತ್ತು ಗಂಡನಿಗೆ ಸೇರಬೇಕು ಎಂದು ವಿಧಿಸಿದ್ದನು. ಇದನ್ನು ಅಂಬೇಡ್ಕರ್ “ಮಹಿಳೆಯ ಸಂಪೂರ್ಣ ದಮನ” ಎಂದು ವರ್ಣಿಸುತ್ತಾರೆ.
ಬುದ್ಧನ ಕಾಲದಲ್ಲಿ ಮಹಿಳೆಯರಿಗಿದ್ದ ಸ್ವಾತಂತ್ರ‍್ಯವನ್ನು ಮನು ನಾಶಮಾಡಿದನು. ಬುದ್ಧನ ಕಾಲದಲ್ಲಿ ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದು ಭಿಕ್ಕುಣಿಯಾಗುವುದು ಸಾಧ್ಯವಿತ್ತು. ಆದರೆ ಮನುವಿನ ಪರಂಪರೆಯು ಆ ಅವಕಾಶವನ್ನು ಕಿತ್ತುಕೊಂಡಿತು. ಮಹಿಳೆಯರು ಪುರುಷರ ಸಮಾನರು ಎಂಬ ಬೌದ್ಧ ಧರ್ಮದ ತತ್ವವನ್ನು ನಿರಾಕರಿಸಿ, ಅವರು ಅಜ್ಞಾನಿಗಳು, ದಾಸಿಯರು ಎಂಬ ತತ್ವವನ್ನು ನೆಲೆಗೊಳಿಸಿದ ಅಪಕೀರ್ತಿ ಮನುವಿಗೆ ಸಲ್ಲಬೇಕು. ಇದರಿಂದ ಮಹಿಳೆಯರ ಸ್ಥಿತಿಗತಿಗಳು ಶತಮಾನಗಳಷ್ಟು ಕೆಳಕ್ಕೆ ಕುಸಿದವು. ಪ್ರಾಚೀನ ಕಾಲದಲ್ಲಿ ಮಹಿಳೆಗೆ ದಕ್ಕುತ್ತಿದ್ದ ವಿದ್ಯಾಭ್ಯಾಸ ಮನುವಿನ ಕಾಲದಲ್ಲಿ ಮತ್ತು ತದ ನಂತರ 1947ರ ತನಕ ಮಾಯವಾಯಿತು.
ಮನುಸ್ಮೃತಿ ಮತ್ತು ಮಹಿಳೆಯರ ಅವನತಿ
ಮನುಧರ್ಮಶಾಸ್ತ್ರದಲ್ಲಿ ಮಹಿಳೆಯರ ಕುರಿತು ಹೊಸತಾದ ಅಥವಾ ಆಶ್ಚರ್ಯಕರ ವಿಷಯವಿರಲಿಲ್ಲ. ಇದು ಭಾರತದಲ್ಲಿ ಬ್ರಾಹ್ಮಣ ಧರ್ಮ ಹುಟ್ಟಿದಾಗಲೇ ಮಹಿಳೆಯರ ಮೇಲಿನ ಹಿಂದೂ ಧಾರ್ಮಿಕ ದೃಷ್ಟಿಕೋನವಾಗಿ ಅಸ್ತಿತ್ವದಲ್ಲಿತ್ತು ಎಂಬ ಅನಿಸಿಕೆ ಬಾಬಾಸಾಹೇಬರದ್ದು. ಮನುವಿಗಿಂತ ಮುಂಚೆಯೇ ಈ ನಿಲುವುಗಳು “ಸಾಮಾಜಿಕ ಸಿದ್ಧಾಂತ” ಆಗಿ ನೆಲೆಸಿದ್ದವು. ಆದರೆ, ಮನುವಿನ ಅತ್ಯಂತ ಮಹತ್ವದ ಹಾಗೂ ಅಪಾಯಕಾರಿ ಕೃತ್ಯವೆಂದರೆ, ಈ ಹಿಂದಿನ ಸಾಮಾಜಿಕ ಸಿದ್ಧಾಂತಕ್ಕೆ ಅಧಿಕೃತ ಕಾಯಿದೆ ಕಾನೂನಿನ ರೂಪ ನೀಡಿದ್ದು, ಪ್ರಭುತ್ವವು ಅವುಗಳನ್ನು ಜಾರಿಗೊಳಿಸುವಂತೆ ವಿಧಿಸಿದ್ದು.
ಮನುಸ್ಮೃತಿಯ ರಚನೆಯ ಹಿನ್ನೆಲೆ
ಬೌದ್ಧ ಧರ್ಮದ ಉನ್ನತಿಯಿಂದ ಬ್ರಾಹ್ಮಣ್ಯ ಪೌರಾಣಿಕ ಧರ್ಮದ ಅಡಿಪಾಯವೇ ಅಸ್ಥಿರಗೊಳ್ಳುವ ಸ್ಥಿತಿಯಲ್ಲಿತ್ತು. ಶೂದ್ರರು ಮತ್ತು ಮಹಿಳೆಯರು ವೈದಿಕ ಸಮಾಜದ ಪ್ರಮುಖ ವಿಭಾಗಗಳಾಗಿದ್ದು, ಬೌದ್ಧ ಧರ್ಮದತ್ತ ಆಕರ್ಷಿತರಾಗುತ್ತಿದ್ದರು. ಬೌದ್ಧ ಧರ್ಮವು ಎಲ್ಲ ವರ್ಗದವರಿಗೆ, ಲಿಂಗಭೇದವಿಲ್ಲದೆ, ಜ್ಞಾನಸ್ವಾತಂತ್ರ‍್ಯ ನೀಡಿದ ಪರಿಣಾಮ, ಅನೇಕ ಮಹಿಳೆಯರು ಬ್ರಾಹ್ಮಣ್ಯ ಧಾರ್ಮಿಕ ವ್ಯವಸ್ಥೆಯಿಂದ ಹೊರಬಂದು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದರು. ಈ ಬೆಳವಣಿಗೆಯು ಪುರುಷಪ್ರಧಾನ ಬ್ರಾಹ್ಮಣ್ಯ ಸಮಾಜಕ್ಕೆ ಒಪ್ಪಿತವಿರಲಿಲ್ಲ. ಇದರಿಂದಲೇ, ಮನುವು ಮಹಿಳೆಯರ ಮೇಲೆ ನಿರ್ಬಂಧ ಹೇರಲು ಯೋಜನೆ ರೂಪಿಸಿದನು. ಮಹಿಳೆಯರನ್ನು ಬೌದ್ಧ ಧರ್ಮದಿಂದ ದೂರವಿಡಲು ಮನುಸ್ಮೃತಿಯಲ್ಲಿ ಅವರ ಮೇಲೆ ಅತಿ ಕಠಿಣ ನಿಯಮಗಳನ್ನು ಹೇರಿದ್ದನು.
ಮನು – ಬೌದ್ಧ ಧರ್ಮದ ದೊಡ್ಡ ವಿರೋಧಿ
ಬೌದ್ಧ ಧರ್ಮದಲ್ಲಿ ಮಹಿಳೆಯರಿಗೆ ಸನ್ಯಾಸ ಸ್ವೀಕಾರದ ಅವಕಾಶ ಲಭಿಸಿದ ಬಳಿಕ, ಬಹುಸಂಖ್ಯೆಯ ಮಹಿಳೆಯರು ಬ್ರಾಹ್ಮಣ್ಯ ಧಾರ್ಮಿಕ ಪದ್ಧತಿಯಿಂದ ದೂರ ಸರಿಯಲಾರಂಭಿಸಿದರು. ಇದನ್ನು ತಡೆಯಲು, ಮನು ಹೊಸ ಕಾನೂನುಗಳನ್ನು ರೂಪಿಸಿದನು. ಈ ನಿಟ್ಟಿನಲ್ಲಿ, ಯಾವುದೇ ಬೌದ್ಧ ಸನ್ಯಾಸಿನಿ ಅಥವಾ ಬೌದ್ಧ ಧರ್ಮವನ್ನು ಅನುಸರಿಸಿದ ಮಹಿಳೆಗೆ ಅಂತ್ಯಕ್ರಿಯಾ ವಿಧಿಗಳನ್ನು ನೆರವೇರಿಸಬಾರದು ಎಂಬ ಕಟ್ಟಳೆ ವಿಧಿಸಲಾಯಿತು. ಇದು ಸರಳ ಧಾರ್ಮಿಕ ನಿಯಮವಲ್ಲ; ಬೌದ್ಧ ಧರ್ಮದ ಮೇಲೆ ಪ್ರಬಲ ಪ್ರಹಾರ ನಡೆಸಲು ರೂಪಿಸಿದ ರಾಜಕೀಯ ತಂತ್ರ. ಬ್ರಾಹ್ಮಣ್ಯ ಪರಂಪರೆಯನ್ನು ರಕ್ಷಿಸಲು, ಮಹಿಳೆಯರಿಗೆ ಜ್ಞಾನ, ಸ್ವಾತಂತ್ರ‍್ಯ ಮತ್ತು ಧಾರ್ಮಿಕ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ, ಅವರ ಸ್ಥಿತಿಯನ್ನು ಅತ್ಯಂತ ಕೀಳುಮಟ್ಟಕ್ಕೆ ತಳ್ಳಲಾಯಿತು ಎಂದು ಬಾಬಾಸಾಹೇಬರು ಹೇಳಿದ್ದಾರೆ.
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)
ಬಾಬಾಸಾಹೇಬರ ಅಭಿಪ್ರಾಯದ ಪ್ರಕಾರ, ಭಾರತದಲ್ಲಿ ಮಹಿಳೆಯರ ಅವನತಿಯ ಸಂಪೂರ್ಣ ಜವಾಬ್ದಾರಿಯನ್ನು ಮನುವಿನ ಮೇಲೆಯೇ ಹೊರಿಸಬೇಕು, ಬುದ್ಧನ ಮೇಲೆ ಅಲ್ಲ. ಬುದ್ಧನ ಧರ್ಮಶಾಸ್ತ್ರವು ಮಹಿಳೆಯನ್ನು ಪುರುಷನ ಸಮಾನ ಸ್ಥಿತಿಗೆ ಏರಿಸುವ ಪ್ರಯತ್ನ ಮಾಡಿತು. ಆದರೆ, ಮನುವಿನ ಮನುಸ್ಮೃತಿ ಮಹಿಳೆಯರನ್ನು ಪುನಃ ದಾಸ್ಯ ಸ್ಥಿತಿಗೆ ತಳ್ಳಲು ಪ್ರಯತ್ನಿಸಿದ ಗಾಢ ರಾಜಕೀಯ, ಧಾರ್ಮಿಕ ಶಕ್ತಿಯ ಘಟಕ. ಬುದ್ಧನ ಸಮಯದಲ್ಲಿ ಮಹಿಳೆಯರಿಗೆ ಜ್ಞಾನಾರ್ಜನೆಯ ಮತ್ತು ಆತ್ಮಸಾಕ್ಷಾತ್ಕಾರದ ಸಮಾನ ಹಕ್ಕುಗಳು ಲಭ್ಯವಾಗಿದ್ದವು. ಆದರೆ, ಬೌದ್ಧ ಧರ್ಮದ ವಿರುದ್ಧ ಪ್ರತೀಕಾರವಾಗಿ, ಮನು ಮಹಿಳೆಯರ ಮೇಲೆ ಅನೇಕ ಗಾಢ ಅಸಮಾನ ನಿಯಮಗಳನ್ನು ಹೇರಿದನು.

ನಿಜವಾದ ಕ್ರಾಂತಿ: ಬುದ್ಧನ ಸಂದೇಶ
ಬುದ್ಧನು ತನ್ನ ತತ್ವಶಾಸ್ತ್ರದಲ್ಲಿ ಪುರುಷ-ಮಹಿಳೆ ಭೇದವನ್ನು ತೊಡೆದುಹಾಕಿದನು. ಅವರು ಜ್ಞಾನ ಪಡೆಯಲು ಸಮಾನ ಹಕ್ಕನ್ನು ನೀಡಿದನು. ಈ ಬೆಳವಣಿಗೆಗೆ ಅಂಬೇಡ್ಕರ್ ಬಹು ದೊಡ್ಡ ಪ್ರಾಮುಖ್ಯತೆ ನೀಡುತ್ತಾರೆ. ಹಿಂದೂ ಧರ್ಮ ಮಹಿಳೆಯ ಮೇಲೆಸಗಿದ ಶೋಷಣೆಯ ವಿರುದ್ಧ ಉಗ್ರ ಹೋರಾಟವಾಗಿತ್ತು ಬೌದ್ಧ ಧರ್ಮ ಅನ್ನುತ್ತಾರೆ ಬಾಬಾಸಾಹೇಬ್.
ಭಾರತದ ಮಹಿಳೆಯರ ಶೋಷಣೆಗೆ ಒಬ್ಬನೇ ವ್ಯಕ್ತಿ ಕಾರಣ ಎಂದು ಬಾಬಾಸಾಹೇಬ್ ಬಹು ಸ್ಪಷ್ಟವಾಗಿ ಹೇಳುತ್ತಾರೆ-ಅದುವೇ ಮನು. ಮನುವಿನ ನಿಯಮಗಳು ಮಹಿಳೆಯರನ್ನು ಶತಮಾನಗಳ ಕಾಲ ಶೋಷಿಸಿದವು. ಮಹಿಳೆಯರು ಬೌದ್ಧ ಧರ್ಮದ ಅಂಗಳದಲ್ಲಿ ನಿಜವಾದ ವಿಮೋಚನೆಯನ್ನು ಕಂಡರು. ಮನುಸ್ಮೃತಿ, ಮನು ಸಂಸ್ಕೃತಿ, ಬ್ರಾಹ್ಮಣ್ಯದ ಜಾಡು ನಾಶವಾದಾಗ ಮಾತ್ರ ಮಹಿಳೆಯರು ನಿಜವಾದ ಸ್ವಾತಂತ್ರ‍್ಯವನ್ನು ಮತ್ತೆ ಪಡೆದುಕೊಳ್ಳಬಹುದು ಎಂಬುದು ಬಾಬಾಸಾಹೇಬರ ಸಂದೇಶ.
ಈ ಕೃತಿಯ ವಿಶ್ಲೇಷಣೆಯಿಂದ ಸ್ಪಷ್ಟವಾಗುವ ಅಂಶ ಏನೆಂದರೆ-ಒಂದೊಮ್ಮೆ ಉನ್ನತ ಸ್ಥಾನಮಾನ ಹೊಂದಿದ್ದ ಭಾರತೀಯ ಮಹಿಳೆ, ಮಗದೊಮ್ಮೆ ಗುಲಾಮಗಿರಿಗೆ ಕುಸಿಯಲು ಕಾರಣ ಮನುವಿನ ಧರ್ಮಶಾಸ್ತ್ರ ಮತ್ತು ಅದರ ಆಧಾರಿತ ಬ್ರಾಹ್ಮಣ್ಯದ ನಿಯಮಗಳು. ಬ್ರಾಹ್ಮಣ್ಯ ಆಧಾರಿತ ಧರ್ಮದ ಶಕ್ತಿಯನ್ನು ಬಲಪಡಿಸಲು, ಬೌದ್ಧ ಧರ್ಮದ ಬೆಳವಣಿಗೆಗೆ ತಡೆಯೊಡ್ಡಲು ಮತ್ತು ಮಹಿಳೆಯನ್ನು ಸದಾಕಾಲ ಪುರುಷ ಅಧಿಪತ್ಯದಲ್ಲಿ ಇಡಲು, ಮನು ಮತ್ತು ಅವನ ಅನುಯಾಯಿಗಳು ಪ್ರಬಲವಾಗಿ ಶ್ರಮಿಸಿದರು. ಈ ನಿಟ್ಟಿನಲ್ಲಿ, ಮಹಿಳೆಯ ಜ್ಞಾನ, ಸ್ವಾತಂತ್ರ‍್ಯ, ಆತ್ಮಸಾಕ್ಷಾತ್ಕಾರ ಮತ್ತು ಸನ್ಯಾಸದ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-2)
ಈ ಕೃತಿಯ ಮೂಲಕ ಭಾರತ ದೇಶದ ಭೂತಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಒಗ್ಗೂಡಿಸಿ, ಹಿಂದೂ ಧರ್ಮ, ಮನುಸ್ಮೃತಿ, ವೈದಿಕ ಪರಂಪರೆ, ಬ್ರಾಹ್ಮಣ್ಯ, ಬೌದ್ಧ ಧರ್ಮ ಮತ್ತು ಬುದ್ಧರ ತತ್ವಗಳನ್ನು ವಿಶ್ಲೇಷಿಸಿ, ಮಹಿಳೆಯ ಸ್ಥಾನಮಾನವನ್ನು ಎರಡೂ ಕಾಲಘಟ್ಟಗಳಲ್ಲಿ ಅಧ್ಯಯನ ಮಾಡಿ, ಹಿಂದೂ ಧರ್ಮದಲ್ಲಿ ಮಹಿಳೆಯ ಅವನತಿಗೆ ಮೂಲ ಕಾರಣ ಮನುಸ್ಮೃತಿ ಎಂದು ಡಾ. ಅಂಬೇಡ್ಕರ್ ಸ್ಪಷ್ಟವಾಗಿ ತಿಳಿಸುತ್ತಾರೆ. ಅವರ ಈ ವಿಮರ್ಶೆಯು ಕೇವಲ ಐತಿಹಾಸಿಕ ಪರಿಶೀಲನೆಯಷ್ಟೇ ಅಲ್ಲ, ಇದು ಒಂದು ಕ್ರಾಂತಿಕಾರಿ ತತ್ವಶ್ರದ್ಧೆಯಾಗಿ, ಸಮಾಜದ ನವೋದ್ಧಾರದ ದಾರಿಯನ್ನು ಉದ್ಧರಿಸುವ, ಒತ್ತಿಹೇಳುವ ಘೋಷಣೆಯಾಗಿದೆ.
ಧರ್ಮದ ಹೆಸರಿನಲ್ಲಿ ಶೋಷಣೆ- ಇಂದಿಗೂ ಮುಂದುವರಿದ ಆಟ
ಇದು ಕೇವಲ ಭೂತಕಾಲದ ಘಟನೆ ಮಾತ್ರವಲ್ಲ. ಇಂದಿಗೂ ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಉದಾಹರಣೆಗೆ, “ಲವ್ ಜಿಹಾದ್” ಎಂಬ ಹುಸಿ ಭೀತಿಯ ಸುಳ್ಳು ಹಣೆಪಟ್ಟಿಯ ಮೂಲಕ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ, ಮಹಿಳೆಯರನ್ನು ತಳ್ಳುತ್ತಿದ್ದಾರೆ. ಆಧುನಿಕ ಪಿತೃತ್ವದ ವ್ಯವಸ್ಥೆ, ಧಾರ್ಮಿಕ ಸಂಕೋಲೆಗಳ ಹೆಸರಿನಲ್ಲಿ, ಮಹಿಳೆಯನ್ನು ಪುರುಷ ಪ್ರಧಾನ ಸಂಸ್ಕೃತಿಯ ಅಡಿಯಾಳಾಗಿ ಉಳಿಸಬೇಕು ಎಂಬ ದುರಾಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತಿದೆ. ಇದು ಕೇವಲ ಮನುವಿನ, ಬ್ರಾಹ್ಮಣ್ಯ, ವೈದಿಕ ಶೋಷಣೆಗೆ ಮಾತ್ರ ಸೀಮಿತವಲ್ಲ, ಎಲ್ಲ ಪುರುಷ ಪ್ರಧಾನ ಸಮಾಜಗಳ ಸ್ವಭಾವ ಇದೇ ಆಗಿದೆ. ಮಹಿಳೆಯನ್ನು ಸಮಾನತೆಯಿಂದ ತೊಡೆದುಹಾಕಿ, ಪುರುಷಾಧಿಪತ್ಯವನ್ನು ಶಾಶ್ವತಗೊಳಿಸಲು ಈ ವ್ಯವಸ್ಥೆಗಳು ರೂಪುಗೊಂಡಿವೆ. ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಬರಹದಲ್ಲಿ ಬೌದ್ಧ ಧರ್ಮ, ಬುದ್ಧನ ತತ್ವ, ಮನುಸ್ಮೃತಿಯ ಶೋಷಣಾ ನಿಯಮಗಳು ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿ ಕುರಿತು ಕೂಲಂಕಷವಾಗಿ ವಿಶ್ಲೇಷಿಸುತ್ತಾರೆ. ಮನುವಿನ ಕುತಂತ್ರವನ್ನು ಮುಚ್ಚುಮರೆಯಿಲ್ಲದೆ ಬಯಲಿಗೆಳೆಯುತ್ತಾರೆ. ಬ್ರಾಹ್ಮಣ್ಯ ಧರ್ಮದ ಆಂತರಿಕ ಶೋಷಣಾ ರಹಸ್ಯವನ್ನು ಬಯಲು ಮಾಡುತ್ತಾರೆ. ಅಷ್ಟೇ ಅಲ್ಲದೆ ಇಂತಹ ಮಹಿಳಾ ವಿರೋಧಿ ಮನುಸ್ಮೃತಿಯನ್ನು 1927ರ ಡಿಸೆಂಬರ್ 25ರಂದೇ ಬಾಬಾಸಾಹೇಬರು ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ್ದರು.

ಮಹಿಳೆಯ ಜಾಗೃತಿಯ ಅಗತ್ಯ
ಆದ್ದರಿಂದ, “ಧರ್ಮ, ಸಂಸ್ಕೃತಿ, ಪದ್ಧತಿ, ಶಿಷ್ಟಾಚಾರ” ಎಂಬ ಸುಳ್ಳು ಮುಸುಕು ಹಾಕಿ ಮಹಿಳೆಯ ಶೋಷಣೆ ಮುಂದುವರಿಸುವ ಈ ದುಷ್ಟ ಆಟವನ್ನು ಶೀಘ್ರ ಅರಿತುಕೊಳ್ಳಬೇಕು. ಇದನ್ನು ಅರಿಯುವ ಹೊತ್ತಿಗೆ, ಧರ್ಮದ ಹೆಸರಿನಲ್ಲಿ ಪುರುಷಾಧಿಪತ್ಯವನ್ನು ಮುಂದುವರಿಸುವವರ ರಾಜಕೀಯ ಶಕ್ತಿಯೇ ಕುಸಿಯುತ್ತದೆ. ಮಹಿಳೆಯ ಸ್ವಾತಂತ್ರ‍್ಯ, ಆಕೆಯ ತೀರ್ಮಾನಶಕ್ತಿಗೆ ಮತ್ತು ಬೌದ್ಧಿಕ ಮುಕ್ತಿಗೆ ಗಂಡುಗಲ್ಲು ಹಾಕುವ ಧಾರ್ಮಿಕ ನೀತಿಗಳಿಂದ ಮುಕ್ತವಾಗುವುದು ಅವಶ್ಯಕ. ಇದು ಕೇವಲ ಮಹಿಳೆಯರ ಉದ್ಧಾರವಲ್ಲ, ಒಂದು ಸಮಾಜ ಮತ್ತು ರಾಷ್ಟ್ರದ ಉದ್ಧಾರಕ್ಕೂ ಅತೀ ಅವಶ್ಯ. ಇದುವೇ ಬಾಬಾಸಾಹೇಬರ ಆಶಯ ಕೂಡ.
(ಮುಗಿಯಿತು..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ‘ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.




