ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)

Date:

“ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದಲ್ಲಿನ ಮಹಿಳೆಯರು ಸಾಧಿಸಿರುವ ಮುನ್ನಡೆಯ ಮಟ್ಟದಿಂದ ಅಳೆಯಬಹುದು”- ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರರ ಈ ಮಾತು ಭೂತಕಾಲ, ವರ್ತಮಾನ ಮತ್ತು ಭವಿಷ್ಯ ಎಂಬ ತ್ರಿಕಾಲಗಳಿಗೂ ಅನ್ವಯಿಸುತ್ತದೆ.

ಸಾಮಾನ್ಯವಾಗಿ, ನಾವು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ದಲಿತ ಸಮುದಾಯ ಮತ್ತು ಇತರ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾನಾಯಕ ಮತ್ತು ಭಾರತೀಯ ಸಂವಿಧಾನದ ಶಿಲ್ಪಿಯಾಗಿ ಮಾತ್ರ ನೆನಪಿಸಿಕೊಳ್ಳುತ್ತೇವೆ. ಆದರೆ ಅಂಬೇಡ್ಕರ್ ಅವರ ಹೋರಾಟವು ಕೇವಲ ನಿರ್ದಿಷ್ಟ ಸಮುದಾಯವೊಂದಕ್ಕಾಗಿ ಮಾತ್ರವಲ್ಲ, ಇಡೀ ಮಾನವ ಕುಲದ ಹಿತಕ್ಕಾಗಿ ನಡೆದ ಹೋರಾಟವಾಗಿತ್ತು. ಅವರು ಕೇವಲ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ನ್ಯಾಯಕ್ಕಾಗಿ ಹೋರಾಡಿದ ಸಮಾನತಾವಾದಿಯಷ್ಟೇ ಅಲ್ಲ, ಮಹಿಳಾ ಹಕ್ಕುಗಳ ಮತ್ತು ಸ್ವಾತಂತ್ರ‍್ಯದ ಅಸೀಮ ಪ್ರತಿಪಾದಕರೂ ಹೌದು.

ಮಹಿಳೆಯರ ಹಕ್ಕುಗಳ ಪರವಾಗಿ ಕಾನೂನಾತ್ಮಕವಾಗಿ ಅಂಬೇಡ್ಕರ್ ಅವರು ತಳೆದ ದೃಢನಿಶ್ಚಯವು ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಸ್ಪಷ್ಟವಾಗಿ ವ್ಯಕ್ತವಾಗಿದೆ. ಈ ದೃಷ್ಟಿಕೋನದಲ್ಲಿ, ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅರ್ಥೈಸುವುದು ಅತ್ಯಗತ್ಯ. ಅವರ ನೇತೃತ್ವದಲ್ಲಿ ರೂಪುಗೊಂಡ ಹಿಂದೂ ಸಂಹಿತೆ ಮಸೂದೆ, ಭಾರತದಲ್ಲಿ ಮಹಿಳೆಯರನ್ನು ಸಮಾನ ನಾಗರಿಕರೆಂದು ಪರಿಗಣಿಸಿ, ಅವರಿಗೆ ವಿವಾಹ ಹಾಗೂ ಆಸ್ತಿ ಹಕ್ಕುಗಳಲ್ಲಿ ಸಮಾನತೆ ನೀಡುವ ಮಹತ್ವದ ಹೆಜ್ಜೆಯನ್ನು ಇಟ್ಟಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಹಿಂದೂ ಮಹಿಳೆಯ ಉನ್ನತಿ ಮತ್ತು ಪತನ: ಅದಕ್ಕೆ ಯಾರು ಕಾರಣ?’’ (The Rise and Fall of the Hindu Woman. Who was responsible for it?) ಎಂಬ ಬರಹವು 1951ರಲ್ಲಿ ಕೋಲ್ಕತ್ತಾದ ‘ದಿ ಮಹಾಬೋಧಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ಕೃತಿ ಅಂಬೇಡ್ಕರ್ ಅವರ “ಬರಹಗಳು ಮತ್ತು ಭಾಷಣಗಳು” ಎಂಬ ಹದಿನೇಳನೇ ಸಂಪುಟದ ಎರಡನೇ ಭಾಗದಲ್ಲಿ ಲಭ್ಯವಿದೆ. ಇದರ ಮೊದಲ ಆವೃತ್ತಿಯನ್ನು ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಇಲಾಖೆಯಿಂದ 2003ರ ಅಕ್ಟೋಬರ್ 4ರಂದು ಪ್ರಕಟಿಸಲಾಯಿತು.

ಈ ಪ್ರಬಂಧವು ಹಿಂದೂ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ, ಅವರ ಹೀನಾಯ ಸ್ಥಿತಿಗೆ ಕಾರಣರಾದ ಮೂಲಗಳು ಹಾಗೂ ಇದರಿಂದ ಹೊರಬರುವ ಮಾರ್ಗಗಳನ್ನು ಶೋಧಿಸುವ ತತ್ವಚಿಂತನಾತ್ಮಕ ಕೃತಿಯಾಗಿದೆ.

ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)

ಕೃತಿಯ ಹಿನ್ನೆಲೆ: ಮಾರ್ಚ್ 1950ರಲ್ಲಿ ಮಹಾಬೋಧಿ ಜರ್ನಲ್‌ನಲ್ಲಿ ಲಾಮಾ ಗೋವಿಂದ ಅವರ “ಹಿಂದೂ ಧರ್ಮ ಮತ್ತು ಬೌದ್ಧಧರ್ಮದಲ್ಲಿ ಮಹಿಳೆಯರ ಸ್ಥಾನಮಾನ” ಎಂಬ ಲೇಖನ ಪ್ರಕಟವಾಗಿತ್ತು. ಇದು ಜನವರಿ 21, 1950ರ ‘ಈವ್ಸ್ ವೀಕ್ಲಿ’ಯಲ್ಲಿ ಪ್ರಕಟವಾದ ಮತ್ತೊಂದು ಲೇಖನಕ್ಕೆ ಪ್ರತಿಕ್ರಿಯೆ ಆಗಿತ್ತು. ಆ ಲೇಖನದಲ್ಲಿ, ಭಾರತದಲ್ಲಿ ಮಹಿಳೆಯರ ಅವನತಿಗೆ “ಪುರುಷನೇ ಆಗಿದ್ದ ಬುದ್ಧ ಅಥವಾ ಬೌದ್ಧ ಧರ್ಮವೇ ಕಾರಣ” ಎಂಬ ಆರೋಪ ಮಾಡಲಾಗಿತ್ತು. ಲಾಮಾ ಗೋವಿಂದ ಇದನ್ನು ತಳ್ಳಿಹಾಕಿ ಸ್ಪಷ್ಟನೆ ನೀಡಿದ್ದರು. ಡಾ. ಅಂಬೇಡ್ಕರ್ ಅವರು ತಮ್ಮ ಲೇಖನವನ್ನು ಲಾಮಾ ಗೋವಿಂದ ಅವರ ಉಲ್ಲೇಖದೊಂದಿಗೆ ಪ್ರಾರಂಭಿಸಿ, ಮಹಿಳೆಯರ ಪತನಕ್ಕೆ ಬುದ್ಧನನ್ನು ದೂಷಿಸುವವರ ವಿರುದ್ಧ ತೀಕ್ಷ್ಣವಾದ ಪ್ರತಿಕ್ರಿಯೆ ನೀಡುತ್ತಾರೆ. ಇತಿಹಾಸದ ಸತ್ಯವನ್ನು ತೆರೆದಿಡುತ್ತಾರೆ.

Ambedka and bhudda
ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ (ಸಾಂದರ್ಭಿಕ ಚಿತ್ರ)

ಭಾರತದಲ್ಲಿ ಮಹಿಳೆಯರ ಹೀನಾಯ ಸ್ಥಿತಿಗೆ ನಿಜವಾದ ಕಾರಣ ಯಾರು?

ಅಂಬೇಡ್ಕರ್ ಎತ್ತಿರುವ ಮಹತ್ತರವಾದ ಪ್ರಶ್ನೆಗಳು:

• ಭಾರತದಲ್ಲಿ ಮಹಿಳೆಯರು ಒಂದು ಕಾಲದಲ್ಲಿ ಎಲ್ಲ ಧಾರ್ಮಿಕ, ತಾತ್ವಿಕ, ಸಾಮಾಜಿಕ ಹಕ್ಕುಗಳನ್ನು ಹೊಂದಿದ್ದರು. ಆದರೆ ಅವರು ಈ ಹಕ್ಕುಗಳನ್ನು ಕಾಲಕ್ರಮೇಣ ಹೇಗೆ ಕಳೆದುಕೊಂಡರು?

• ಗಾರ್ಗಿ, ಅಪಲ, ಲೋಪಮುದ್ರೆಯಂತಹ ಮಹಾಪಂಡಿತ ಮಹಿಳೆಯರ ಯುಗದಿಂದ ಪುರುಷಾಧಿಪತ್ಯದಿಂದ ಬದಿಗೆ ಒತ್ತಲ್ಪಟ್ಟು ಅಂಧಕಾರದ ಯುಗಕ್ಕೆ ಹೇಗೆ ಪತನವಾಯಿತು?

• ಮಹಿಳೆಯರು ಶಿಕ್ಷಣ, ಸ್ವಾತಂತ್ರ‍್ಯ ಮತ್ತು ಗೌರವದ ಹಕ್ಕನ್ನು ಕಳೆದುಕೊಂಡು ಪುರುಷನ ಗುಲಾಮರಾಗಿ ಬದುಕಲು ಪ್ರಚೋದಿಸಿದ ಶಕ್ತಿಗಳು ಯಾರು?

ಇವೆಲ್ಲಕ್ಕೂ ಅಂಬೇಡ್ಕರ್ ಪುರಾವೆಗಳ ಜೊತೆಗೆ ಅತ್ಯಂತ ತಾಳ್ಮೆಯ ತುಲನಾತ್ಮಕ ವಿಶ್ಲೇಷಣೆ ನೀಡುತ್ತಾರೆ.

ಅಂಬೇಡ್ಕರ್ ಅವರ ಪ್ರಬಂಧದ ಪ್ರಭಾವ

ಈ ಕೃತಿಯು ಹಿಂದೂ ಸಮಾಜದ ಸ್ತ್ರೀಯರ ಪತನದ ಕಥೆಯಷ್ಟೇ ಅಲ್ಲ, ಅವರ ಪುನರುತ್ಥಾನದ ಘೋಷಣೆಯೂ ಹೌದು. ಅಂಬೇಡ್ಕರ್ ಅವರು ಪ್ರಖರ ಸತ್ಯಗಳನ್ನು ಬಹಿರಂಗಪಡಿಸುತ್ತಾರೆ. ಈ ಲೇಖನ ಅಂಬೇಡ್ಕರ್ ಅವರ ನ್ಯಾಯ, ಸಮಾನತೆ, ಮತ್ತು ಮಾನವ ಹಕ್ಕುಗಳ ತತ್ವದ ಪ್ರಬಲ ಪ್ರತಿಬಿಂಬವಾಗಿದೆ.

ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-2)

ಬಾಬಾ ಸಾಹೇಬರ ಈ ಮಹತ್ವದ ಕೃತಿಯು ಮೂರು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದೆ. ಇದರಲ್ಲಿ ಅವರು ಬುದ್ಧನ ವಿರುದ್ಧ ಹೊರಿಸಲಾದ ಆಕ್ಷೇಪಣೆಗಳನ್ನೂ, ಅವನ ಮೇಲೆ ಹೊರಸೂಸಿದ ತಪ್ಪು ಆರೋಪಗಳನ್ನೂ ಕಟುವಾಗಿ ಖಂಡಿಸುತ್ತಾರೆ. ಕೇವಲ ಪ್ರತಿರೋಧವಷ್ಟೇ ಅಲ್ಲ, ಬುದ್ಧನ ಸತ್ಯಸ್ವರೂಪವನ್ನು ಕೂಡ ಆಳವಾಗಿ ಅನಾವರಣಗೊಳಿಸುತ್ತಾರೆ.ಬುದ್ಧ ನಿಜವಾದ ಅರ್ಥದಲ್ಲಿ ಮಹಿಳಾ ಸಮಾನತೆಯ ಧ್ವಜಧಾರಿ, ಅವರ ಮುಕ್ತಿಗಾಗಿ ಅಚಲ ಸಂಕಲ್ಪದಿಂದ ಹೋರಾಟ ಮಾಡಿದ ಮಹಾನ್ ಸಮಾಜ ಸುಧಾರಕ. ಬುದ್ಧನ ಸಿದ್ಧಾಂತ, ಆತನ ನಡವಳಿಕೆ, ಜೀವನ ಶೈಲಿ, ಆಚಾರ, ವ್ಯವಹಾರ- ಈ ಎಲ್ಲವೂ ಮಹಿಳೆಯನ್ನು ಮಾನವೀಯ ಗೌರವದ ಶಿಖರಕ್ಕೆ ಏರಿಸಬೇಕೆಂದು ಆಶಿಸಿದವು. ಬುದ್ಧನ ದೃಷ್ಟಿಕೋನದಲ್ಲಿ ಮಹಿಳೆ ಒಂದು ಅನಗತ್ಯ ಅಸ್ತಿತ್ವವಲ್ಲ, ಬದಲಾಗಿ ಸಮಾಜದ ಪರಿಪೂರ್ಣತೆಯನ್ನು ನಿರ್ಧರಿಸುವ ಅವಿಭಾಜ್ಯ ಶಕ್ತಿಯೆಂದೇ ಪರಿಗಣಿತಳಾಗಿದ್ದಳು.

rise2
ಸಾಂದರ್ಭಿಕ ಚಿತ್ರ

ಬುದ್ಧನಿಗೆ ಮಹಿಳಾ ಸ್ವಾತಂತ್ರ‍್ಯದ ಕನಸು ಇತ್ತು, ಮಹಿಳೆಯೂ ಸನ್ಯಾಸವನ್ನು ಸ್ವೀಕರಿಸಬಹುದೆಂಬ ಸಮಾನತೆಯ ಹಾದಿಯನ್ನು ಆತ ತೆರೆದಿದ್ದ. ಆತನ ಧರ್ಮ ಮಹಿಳೆಯನ್ನು ಪಾತಾಳಕ್ಕಿಳಿಸುವುದಕ್ಕಲ್ಲ, ಬದಲಾಗಿ ಸಮಾನತೆಯಿಂದ ನಡೆಸಿಕೊಳ್ಳುವ ಉದ್ದೇಶ ಹೊಂದಿತ್ತು ಎಂದು ಪ್ರತಿಪಾದಿಸುತ್ತದೆ.

ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-1)

ಬುದ್ಧನ ಮೇಲಿನ ಅಪವಾದಗಳ ಬಗ್ಗೆ ಬಾಬಾಸಾಹೇಬರ ಗಂಭೀರ ವಿಶ್ಲೇಷಣೆ: ಬುದ್ಧನ ಮೇಲೆ ಆರೋಪ ಹೊರಿಸಲು ಅಸ್ತಿತ್ವದಲ್ಲಿದ್ದ ಎರಡು ಪ್ರಮುಖ ಕಾರಣಗಳನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಬರಹದಲ್ಲಿ ತೀಕ್ಷ್ಣ ಪರೀಕ್ಷೆಗೆ ಒಡ್ಡುತ್ತಾರೆ. ಅವರು ತಾತ್ವಿಕ ಆಧಾರಗಳ ಮೂಲಕ ಮತ್ತು ಪುರಾವೆಗಳ ನೆರವಿನಿಂದ ಬುದ್ಧನ ಮಹಿಳಾಪರ ನಿಲುವುಗಳನ್ನು ಮತ್ತಷ್ಟು ಉಜ್ವಲವಾಗಿ ಮಂಡಿಸುತ್ತಾರೆ.

ಮಹಾಪರಿನಿಬ್ಬಾಣ ಸೂತ್ರದ ವಿವಾದ

ಬಾಬಾಸಾಹೇಬರ ಪ್ರಕಾರ ‘ಈವ್ಸ್ ವೀಕ್ಲಿ’ ಪ್ರಬಂಧವು ಬುದ್ಧ ತತ್ವವನ್ನು ತಪ್ಪಾಗಿ ವ್ಯಾಖ್ಯಾನಿಸಿತ್ತು. ಬುದ್ಧನ ಶಿಷ್ಯ ಆನಂದರು, ಮಹಿಳೆಯರ ಬಗ್ಗೆ ಕೇಳಿದ ಪ್ರಶ್ನೆಗೆ ಬುದ್ಧ ನೀಡಿದ ಉತ್ತರವನ್ನು “ಬುದ್ಧನು ಮಹಿಳೆಯರನ್ನು ತಿರಸ್ಕಾರ ಮನೋಭಾವನೆಯಿಂದ ನೋಡಬೇಕೆಂದು ಹೇಳಿರುವನೆಂದು” ಅರ್ಥೈಸಲಾಗಿತ್ತು, ಮಹಾಪರಿನಿಬ್ಬಾಣ ಸೂತ್ರದ ಐದನೇ ಅಧ್ಯಾಯವನ್ನು ಬಳಸಿಕೊಂಡು ಬುದ್ಧನ ಮೇಲೆ ಅಪವಾದ ಮಾಡಲಾಗಿತ್ತು. ಈ ಸೂತ್ರದ ಪ್ರಕಾರ, “ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು” ಎಂದು ಆನಂದರು ಕೇಳಿದಾಗ – ಬುದ್ಧನು “ಮಹಿಳೆಯರ ಬಗ್ಗೆ ನಿರ್ಲಕ್ಷ್ಯ ಮನೋಭಾವವನ್ನು ಹೊಂದಬೇಕು” ಎಂದು ಉತ್ತರಿಸಿದ ಎಂದು ಹೇಳಲಾಗಿದೆ. ಆದರೆ ಈ ಸೂತ್ರ ಬುದ್ಧನ ಮರಣದ ಸುಮಾರು 400 ವರ್ಷಗಳ ಬಳಿಕ ಬರೆಯಲಾದ್ದರಿಂದ, ಇದು ವಾಸ್ತವ ಹೌದೋ ಅಲ್ಲವೋ ಗಂಭೀರ ಪ್ರಶ್ನೆ ಎದ್ದಿತ್ತು.

ಬಾಬಾಸಾಹೇಬರು ಇದರ ಆಳವಿಶ್ಲೇಷಣೆಗೆ ಇಳಿದು, ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ:

• ಆನಂದ ತಾವು ಅಷ್ಟು ಹತ್ತಿರವಿದ್ದ ಬುದ್ಧನಿಗೆ ಮಹಿಳೆಯರ ಕುರಿತು ಇಂತಹ ಪ್ರಶ್ನೆಯನ್ನು ಕೇಳಬಹುದಾ?

• ಆನಂದರ ಇತರ ನಡವಳಿಕೆಗಳನ್ನು ಗಮನಿಸಿದರೆ, ಅವರು ಮಹಿಳೆಯರ ಕುರಿತು ಇಂತಹ ಸಂದೇಹವನ್ನು ಇಟ್ಟುಕೊಳ್ಳುವುದು ಹೇಗೆ ತಾನೇ ಸಾಧ್ಯ?

• ಬುದ್ಧ, ಮಹಿಳೆಯರನ್ನು ಸದಾ ಗೌರವದಿಂದ ನೋಡುತ್ತಿದ್ದವನು. ಹಾಗಿರುವಾಗ, ಅವರ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಬೇಕು ಎಂಬ ಮಾತನ್ನು ಹೇಳಬಹುದೇ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಾಬಾಸಾಹೇಬರು ಪುರಾವೆಗಳತ್ತ ಹೊರಳುತ್ತಾರೆ. ಇತಿಹಾಸದಲ್ಲಿ ಕಂಡುಬರುವ ಆನಂದರ ನಡೆ-ನುಡಿಗಳು ಮತ್ತು ಮಹಿಳೆಯರ ಬೌದ್ಧ ಸಂಘ ಪ್ರವೇಶಕ್ಕೆ ಅವರು ನೀಡಿದ ನೆರವನ್ನು ಗಮನಿಸಿದಾಗ, ಈ ಸಂಭಾಷಣೆ ಎಡವಟ್ಟಾಗಿರಬಹುದು ಎಂಬುದಾಗಿ ತಿಳಿಯಬರುತ್ತದೆ. ಆನಂದರು ಸ್ವತಃ ಭಿಕ್ಷು ಸಂಘಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ಪ್ರಮುಖವಾಗಿ ಹೋರಾಡಿದ ವ್ಯಕ್ತಿ. ಹೀಗಿರುವಾಗ, ಬುದ್ಧನ ಮಾತುಗಳು ಅವರ ಕಾರ್ಯವೈಖರಿಗೆ ವ್ಯತಿರಿಕ್ತ ಎನಿಸುವುದಿಲ್ಲವೇ? ಬುದ್ಧನ ಜೀವನದಲ್ಲಿ ಮಹಿಳೆಯರ ಮಹತ್ತರ ಪಾತ್ರವನ್ನು ಗಮನಿಸಿದರೆ, ಈ ಸೂತ್ರದಲ್ಲಿ ಉಲ್ಲೇಖಿಸಲಾದ ವಾಕ್ಯಗಳು ನಿಜವಾಗಿಯೂ ಬುದ್ಧನ ಮಾತುಗಳೇ ಅಥವಾ ಆನಂತರ ಸೇರಿಸಲಾದ ‘ಪರಿಷ್ಕರಣೆ’ಗಳೇ ಎಂಬ ಗಂಭೀರ ಪ್ರಶ್ನೆ ಏಳುತ್ತದೆ.

ಭಿಕ್ಷುನಿ ಸಂಘದ ಸ್ಥಾಪನೆಯ ವಿವಾದ

ಬುದ್ಧನ ವಿರುದ್ಧದ ಎರಡನೆಯ ಆಕ್ಷೇಪಣೆ-ಭಿಕ್ಷುನಿ ಸಂಘವು ಭಿಕ್ಷು ಸಂಘಕ್ಕೆ ಅಧೀನವಾಗಿ ಇರಬೇಕೆಂದು ನಿರ್ಧರಿಸಲಾಗಿತ್ತು. ಆದುದರಿಂದ ಬುದ್ಧನಿಗೆ ಮಹಿಳೆಯರ ಮೇಲೆ ಸಮಾನತೆಯ ಭಾವನೆ ಇರಲಿಲ್ಲ ಎನ್ನುವುದು. ಬಾಬಾಸಾಹೇಬರು ಬುದ್ಧನ ಈ ನಿರ್ಧಾರವನ್ನು ಒಂದು ಪೂರ್ವಗ್ರಹಪೂರ್ಣ ಗಂಡುಮೇಲಾಧಿಕಾರ ತತ್ವದ ಪರಿಣಾಮವಲ್ಲ, ಬದಲಾಗಿ ಆಗಿನ ಸಾಮಾಜಿಕ ಸ್ಥಿತಿಗೆ ಹೊಂದಿಕೊಳ್ಳುವಂತಹ ನಿರ್ಧಾರ ಎಂದು ವಿವರಿಸುತ್ತಾರೆ. ಬುದ್ಧನು ಯಾವುದೇ ಸಂದರ್ಭದಲ್ಲೂ ಮಹಿಳೆಯರನ್ನು ಪುರುಷರಿಗಿಂತ ಕಡಿಮೆಯಾಗಿ ಪರಿಗಣಿಸಿದ್ದಿಲ್ಲ. ಆದರೆ ಅವರ ಸುರಕ್ಷತೆ ಮತ್ತು ಸಮುದಾಯದ ಸುಸ್ಥಿರತೆಗಾಗಿ, ಭಿಕ್ಷು ಸಂಘಕ್ಕೆ ಅನುಗುಣವಾಗಿ ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾದ ನಿರ್ಧಾರ ಆಗಿತ್ತು ಎಂದು ವಿವರಿಸುತ್ತಾರೆ.

ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-2)

ಬೌದ್ಧ ಪರಂಪರೆಯಲ್ಲಿ ಭಿಕ್ಷುನಿ ಸಂಘದ ಸ್ಥಾಪನೆಯು ನಿಸ್ಸಂದೇಹವಾಗಿ ಕ್ರಾಂತಿಕಾರಿಯೇ. ಬುದ್ಧನ ವಿರುದ್ಧ ಆಕ್ಷೇಪಣೆ ಮಾಡುವವರು, “ಭಿಕ್ಷುನಿ ಸಂಘ ಭಿಕ್ಷು ಸಂಘದ ಅಧೀನದಲ್ಲಿತ್ತು” ಎಂಬುದನ್ನು ಚರ್ಚಿಸುತ್ತಾರೆ. ಆದರೆ ಬಾಬಾಸಾಹೇಬರು ಈ ಆಕ್ಷೇಪಣೆಯನ್ನು ಪರಾಮರ್ಶಿಸಿ, ಆ ಶತಮಾನದಲ್ಲಿ ಮಹಿಳೆಯರಿಗೆ ಸನ್ಯಾಸ ಸ್ವೀಕಾರವೇ ಒಂದು ಅಪೂರ್ವ ಕ್ರಾಂತಿ ಎನ್ನುತ್ತಾರೆ. ಬ್ರಾಹ್ಮಣ್ಯದ ವೈದಿಕ ಸಿದ್ಧಾಂತದಲ್ಲಿ ಮಹಿಳೆಯರಿಗೆ ಜ್ಞಾನ, ವಿದ್ಯಾಭ್ಯಾಸ, ತಪಸ್ಸು, ಮತ್ತು ಸನ್ಯಾಸ ಸ್ವೀಕಾರಕ್ಕೆ ಅವಕಾಶವಿರಲಿಲ್ಲ. ಪುರುಷನ ಆಜ್ಞಾಧೀನಳಾಗಿಯೇ ಇರಬೇಕೆಂಬ ಕಟ್ಟಳೆಯನ್ನು ಸ್ತ್ರೀಯ ಮೇಲೆ ಸಮಾಜ ವಿಧಿಸಿತ್ತು. ಸಮಾಜದ ದೃಷ್ಟಿಯಲ್ಲಿ, ಬುದ್ಧನು ಮಹಿಳೆಯರಿಗೆ ಪರಿವ್ರಾಜ್ಯ (ಸನ್ಯಾಸ) ಸ್ವೀಕರಿಸಲು ಅವಕಾಶ ನೀಡಿದ್ದು ಆ ಕಾಲದ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಬುದ್ಧನು ಸ್ತ್ರೀ ಹಾಗೂ ಪುರುಷನ ನಡುವಿನ ಸಮಾನತೆಯನ್ನು ಕೇವಲ ಬೋಧನೆಗಳಲ್ಲಿ ಮಾತ್ರವಲ್ಲ, ತನ್ನ ಧರ್ಮದ ಪ್ರತಿಯೊಂದು ಶಾಖೆಯಲ್ಲಿಯೂ ಜಾರಿ ಮಾಡಿದ ಮಹಾನ್ ಪರಿವರ್ತಕ. ಮಹಿಳೆಯರ ಅಸ್ತಿತ್ವವನ್ನು ವಿರೋಧಿಸದೆ, ಅವಳನ್ನು ಕೀಳಾಗಿ ನೋಡದೆ, ಆಕೆಯ ಸ್ವಾತಂತ್ರ‍್ಯ ಮತ್ತು ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿದ.

ಬುದ್ಧನು ಮಹಿಳೆಯರನ್ನು ನಿರ್ಲಕ್ಷಿಸಬೇಕು ಎಂಬ ತತ್ವದ ಪ್ರತಿಪಾದಕನೇ?

ಬುದ್ಧನ ತತ್ವ ಮತ್ತು ಜೀವನವನ್ನು ಗಮನಿಸಿದರೆ, ಅವನ ಆದರ್ಶಗಳು ಮಹಿಳೆಯರ ವಿರೋಧಿಯಾಗಿರಲಾರವು. ಆಮ್ರಪಾಲಿ ಮತ್ತು ವಿಶಾಖಳಂತಹ ಶ್ರೇಷ್ಠ ಮಹಿಳೆಯರು ಬುದ್ಧನ ಬಳಿ ಬಂದು ಉಪದೇಶ ಪಡೆಯುತ್ತಿದ್ದರೆಂದೂ, ಅವರು ಭಿಕ್ಷುಗಳಿಗೆ ಭಿಕ್ಷೆ ನೀಡುತ್ತಿದ್ದರೆಂದೂ ಪೀಟಕ ಸಾಹಿತ್ಯದಲ್ಲಿ ಪೂರಕ ಸಾಕ್ಷ್ಯಗಳಿವೆ. ವೈಶಾಲಿಯ ವೇಶ್ಯೆ ಆಮ್ರಪಾಲಿಯ ಊಟದ ಆಹ್ವಾನವನ್ನು ಸ್ವೀಕರಿಸುವ ಮೂಲಕ ಬುದ್ಧನು ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೂ ಗೌರವ ಸಲ್ಲಿಸುತ್ತಿದ್ದನು ಎಂದು ಸ್ಪಷ್ಟವಾಗುವುದು. ಈ ನಿದರ್ಶನಗಳನ್ನು ನೋಡಿದಾಗ ಬುದ್ಧನು ಮಹಿಳೆಯರನ್ನು ನಿರ್ಲಕ್ಷಿಸಬೇಕೆಂದು ಪ್ರತಿಪಾದಿಸಿದನೆಂದು ನಂಬಲು ಅಸಾಧ್ಯ. ಬುದ್ಧ ಬ್ರಹ್ಮಚರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದ್ದನು. ಆದರೆ ಅದನ್ನು ಮಹಿಳೆಯರ ವಿರೋಧವಾಗಿ ಬಳಸಿದ ದಾಖಲೆಗಳಿಲ್ಲ. “ಮಹಿಳೆಯರೊಂದಿಗೆ ಅನಗತ್ಯ ಸಂಪರ್ಕವನ್ನು ಬಿಡಿ” ಎಂಬುದು ಬುದ್ಧನ ಸಲಹೆಯಾಗಿತ್ತು. ಆದರೆ, “ಮಹಿಳೆಯರನ್ನು ಅಪಮಾನಿಸಿ, ಅವರನ್ನು ಕೀಳುದೃಷ್ಟಿಯಿಂದ ನೋಡು” ಎನ್ನುವುದಲ್ಲ ಎಂದು ಬಾಬಾಸಾಹೇಬರು ವಾದಿಸುತ್ತಾರೆ.

bhudda12 1
ಆಮ್ರಪಾಲಿ ಮತ್ತು ಬುದ್ಧ (ಸಾಂದರ್ಭಿಕ ಚಿತ್ರ)

ಸತ್ಯದ ಬೆಳಕು

ಬುದ್ಧನ ಮೇಲೆ ಹೊರಿಸಲಾದ ಅಪವಾದಗಳು ಆತನ ಮೇಲಿನ ಅಸೂಯೆ ಹಾಗೂ ಬೌದ್ಧ ಧರ್ಮದ ಮೇಲಿನ ದ್ವೇಷದಿಂದ ರೂಪುಗೊಂಡ, ಅನವಶ್ಯಕ ‘ಪರಿಷ್ಕರಣೆ’ಗಳ ಪರಿಣಾಮವೆನ್ನುತ್ತಾರೆ ಬಾಬಾಸಾಹೇಬರು. ಬಾಬಾಸಾಹೇಬರು ತಮ್ಮ ಆಳ ಚಿಂತನೆ, ಇತಿಹಾಸ ಮತ್ತು ಪುರಾವೆಗಳ ಬೆಳಕಿನಲ್ಲಿ ಬುದ್ಧನನ್ನು ಈ ಹುಸಿ ಆರೋಪಗಳಿಂದ ಮುಕ್ತಗೊಳಿಸುತ್ತಾರೆ. ಬೌದ್ಧ ತತ್ವಶಾಸ್ತ್ರವನ್ನು ಪರಿಗಣಿಸಿದರೆ, ಬುದ್ಧನು ಮಹಿಳೆಯನ್ನು ಕೀಳಾಗಿ ನೋಡಲು ಸಾಧ್ಯವೇ ಇಲ್ಲ. ಬದಲಿಗೆ, ಆತ ಮಹಿಳೆಯರ ಸಮಾನತೆಗಾಗಿ ಹೋರಾಡಿದ ಪ್ರಥಮ ಮಹಾನ್ ಸುಧಾರಕ ಎಂಬ ತಿರುಳನ್ನು ಬಾಬಾಸಾಹೇಬರು ತಮ್ಮ ಕೃತಿಯಲ್ಲಿ ನಿಚ್ಚಳವಾಗಿ ತೋರುತ್ತಾರೆ.

ಬುದ್ಧನ ಮಹಿಳಾ ಚಿಂತನೆ, ಸಾಂಪ್ರದಾಯಿಕ ಭಾರತೀಯ ದೃಷ್ಟಿಕೋನಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. ಮಹಿಳೆಯರು ಪುರುಷರಿಗಿಂತ ಕೀಳು, ಅವರ ಜನ್ಮವೇ ದೌರ್ಭಾಗ್ಯಕರ ಎಂಬ ಸಂಪ್ರದಾಯವಾದಿ ಭಾವನೆಗಳ ವಿರುದ್ಧ ತೀಕ್ಷ್ಣ ಬದಲಾವಣೆಗಳನ್ನು ತಂದ ಮಹಾನುಭಾವ ಬುದ್ಧ.

ಮಹಿಳೆಯರ ಬಗ್ಗೆ ಬುದ್ಧನ ಕ್ರಾಂತಿಕಾರಿ ನಿಲುವು

ಒಮ್ಮೆ ಶ್ರಾವಸ್ತಿಯಲ್ಲಿ ರಾಜ ಪ್ರಸೇನಜಿತ್ ಬುದ್ಧನನ್ನು ಭೇಟಿಯಲ್ಲಿದ್ದಾಗ, ರಾಜಮನೆತನದ ದೂತನು ಬಂದು, “ರಾಣಿ ಮಲ್ಲಿಕಾ ಹೆಣ್ಣುಮಗುವಿಗೆ ಜನ್ಮನೀಡಿದ್ದಾಳೆ” ಎಂದು ವರದಿ ನೀಡಿದನು. ಈ ಸುದ್ದಿಯನ್ನು ಕೇಳಿ ರಾಜನು ನಿರಾಶನಾದನು. ರಾಜನ ಮುಖದಲ್ಲಿ ಮೂಡಿದ ಭಾವವನ್ನು ಗಮನಿಸಿದ ಬುದ್ಧನು, “ಹೆಣ್ಣು ಮಗುವೂ ಪುರುಷ ಸಂತತಿಯಂತೆ ಅಥವಾ ಅದಕ್ಕಿಂತ ಶ್ರೇಷ್ಠಳಾಗಬಹುದು. ಅವಳು ವಿವೇಕವಂತಳಾಗಿ, ಸದ್ಗುಣಶೀಲಳಾಗಿ ಬೆಳೆಯಬಹುದು. ಅವಳು ಭವಿಷ್ಯದಲ್ಲಿ ಮಹಾ ಕಾರ್ಯಗಳನ್ನು ಮಾಡಬಹುದು; ಪರಾಕ್ರಮಶಾಲಿ ಅರಸಿ ಎನಿಸಬಹುದು” ಎಂದು ಧೈರ್ಯ ನೀಡಿದನು. ಇದು ಭಾರತೀಯ ಸಾಂಪ್ರದಾಯಿಕ ಮನೋಭಾವಕ್ಕೆ ವಿರುದ್ಧವಾದ ಹೇಳಿಕೆಯಷ್ಟೇ ಅಲ್ಲ, ಮಹಿಳೆಯರ ಸಾಮರ್ಥ್ಯವನ್ನು ಶತಶತಮಾನಗಳ ಹಿಂದೆಯೇ ಪುರಸ್ಕರಿಸಿದ ಪರಿವರ್ತನಾಶೀಲ ನಿಲುವು. ಹೆಣ್ಣುಮಗು ಜನಿಸಿದರೆ ವಿಪತ್ತು ಎಂದು ಪರಿಗಣಿಸುತ್ತಿದ್ದ ಕಾಲಘಟ್ಟದಲ್ಲಿ, ಬುದ್ಧನು ಮಹಿಳೆಯರ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದ ಎಂಬುದನ್ನು ಈ ಮಾತುಗಳು ನಿರ್ವಿವಾದವಾಗಿ ಸಾರುತ್ತವೆ. “ಮಹಿಳೆ ಸರ್ವೋಚ್ಚ ಮೌಲ್ಯ ಹೊಂದಿದ್ದಾಳೆ, ಜಗತ್ತಿಗೆ ಬೋಧಿಸತ್ವರಿಗೆ, ಮಹಾ ರಾಜರುಗಳಿಗೆ ಜನ್ಮ ನೀಡುವ ಶಕ್ತಿ ಅವಳಲ್ಲಿಯೇ ಇದೆ” ಎಂದು ಮತ್ತೊಂದು ಸಂದರ್ಭದಲ್ಲಿ ಬುದ್ಧನು ಘೋಷಿಸಿದ್ದಾನೆ.

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-1)

ಮಹಿಳೆಯರ ಶಕ್ತಿಯನ್ನು, ಅವರು ವಹಿಸುವ ಮಹತ್ತರ ಪಾತ್ರವನ್ನು ಹಾಗೂ ಅವರು ಸಮಾನತೆಯ ಹಕ್ಕುದಾರರೆಂಬ ಸತ್ಯವನ್ನು ಇಂತಹ ಮಾತುಗಳು ಪ್ರತಿಪಾದಿಸುತ್ತವೆ. ಹೆಣ್ಣುಮಕ್ಕಳ ಜನನವನ್ನು ಸಂಕಟಕರ ವಿದ್ಯಮಾನವೆಂದು ಕಾಣುತ್ತಿದ್ದ ಪುರುಷಾಧಿಪತ್ಯದ ಸಮಾಜದಲ್ಲಿ, ಬುದ್ಧನು ಮಹಿಳೆಯರ ವ್ಯಕ್ತಿತ್ವವನ್ನೂ, ಅವರ ಧರ್ಮ, ಸಮಾಜ ಮತ್ತು ರಾಜಕೀಯದಲ್ಲಿ ಅವರ ಮಹತ್ತರ ಪಾತ್ರವನ್ನೂ ಪ್ರೋತ್ಸಾಹಿಸಿದ್ದನು. ಬುದ್ಧನ ಈ ಉದಾತ್ತ ನಿಲುವನ್ನು ಅರ್ಥೈಸಿಕೊಳ್ಳದವರು, ಆತನ ಹೆಸರನ್ನು ದುರುಪಯೋಗ ಮಾಡಿಕೊಂಡು ಆತ ಮಹಿಳಾ ವಿರೋಧಿ ಎಂದು ದೋಷಾರೋಪಣೆ ಮಾಡುತ್ತಾರೆ. ಬುದ್ಧನ ವಾಸ್ತವ ವ್ಯಕ್ತಿತ್ವವನ್ನು ಅರಿಯದೆ ಮೂಢರಂತೆ ಮಾತಾಡುತ್ತಾರೆ ಎಂಬುದು ಬಾಬಾಸಾಹೇಬರ ದೃಢ ನಿಲುವು. ಬುದ್ಧನು ಮಹಿಳೆಯರ ಸಮಾನತೆ ಹಾದಿಯ ಪ್ರಥಮ ದೀಪಸ್ತಂಭ ಎಂದು ಪ್ರತಿಪಾದಿಸುತ್ತಾರೆ.

(ಮುಂದುವರಿಯುತ್ತದೆ…)

(‘ಈದಿನ ಡಾಟ್ ಕಾಮ್’ ಹೊರತಂದಿರುವಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 5.26.24 PM
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...