ಆಧುನಿಕ ಭಾರತದ ಚರಿತ್ರೆಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಭಿನ್ನ ತಾತ್ವಿಕ ಸ್ವರೂಪವುಳ್ಳ ಎರಡು ಸಂಘರ್ಷಾತ್ಮಕ ವ್ಯಕ್ತಿತ್ವಗಳು. ಭಾರತದ ಸಾಮಾಜಿಕ ಸಂರಚನೆಯಲ್ಲಿರುವ ಹಲವು ಸಂಕೀರ್ಣ ಬಿಕ್ಕಟ್ಟು, ತೊಡಕು, ವೈರುಧ್ಯಗಳು ಅರ್ಥವಾಗಬೇಕಾದರೆ, ಈ ಎರಡೂ ವ್ಯಕ್ತಿತ್ವಗಳ ನಡುವೆ ನಡೆದಿರುವ ಗಂಭೀರವಾದ ವಾದ-ವಾಗ್ವಾದಗಳನ್ನು ಗಮನಿಸಬೇಕಾಗುತ್ತದೆ. ಭಾರತದ ಸಾಮಾಜಿಕ ಹಾಗೂ ಸೈದ್ಧಾಂತಿಕ ನಿಲುವಿನ ಸಮರ್ಥ ಪ್ರತಿಮೆ-ರೂಪಕಗಳಂತಿರುವ ಗಾಂಧಿ-ಅಂಬೇಡ್ಕರ್ ಮಹತ್ವದ ವ್ಯಕ್ತಿತ್ವವಾದಿ ಸಂಕಥನವಾಗಿದ್ದಾರೆ. ಈ ಎರಡೂ ಮಹಾನ್ ಚೇತನಗಳ ತಾತ್ವಿಕ ನಿಲುವು ಹಾಗೂ ಅವರ ಕಾಲಘಟ್ಟದ ಭಾರತೀಯ ಸಾಮಾಜಿಕ ರಾಜಕೀಯ ಧಾರ್ಮಿಕ ಆರ್ಥಿಕ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ವರ್ತಮಾನದ ಭಾರತ ಎದುರಿಸುತ್ತಿರುವ ಸಮಾಜೋರಾಜಕೀಯ ಬಿಕ್ಕಟ್ಟುಗಳನ್ನು ಮುಖಾಮುಖಿಯಾಗಲು ಬಾಬಾ ಸಾಹೇಬ್ ಅಂಬೇಡ್ಕರ್ 1945ರಲ್ಲಿ ಬರೆದ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?” (What congress & gandhi have done to the untouchables) ಸಮರ್ಥ ಆಕರ ಪಠ್ಯವಾಗಿದೆ.
ಡಾ. ಎ. ಎಂ. ರಾಜಶೇಖರಯ್ಯ ಗುರುತಿಸಿರುವ ಹಾಗೆ: “ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಒಂದು ನೈತಿಕ ಕಳಂಕವೆಂದು ಪರಿಗಣಿಸಿ ಅದನ್ನು ಸರ್ವತ್ರ ಹಿಂದೂಗಳು ಪಶ್ಚಾತ್ತಾಪ, ಮನಃಪರಿವರ್ತನೆ ಮತ್ತು ಪ್ರಾಯಶ್ಚಿತ್ತದ ಮೂಲಕ ನಿವಾರಿಸಬೇಕೆಂದು ಪ್ರತಿಪಾದಿಸಿದರೆ, ಡಾ. ಅಂಬೇಡ್ಕರ್ ಅವರು ಅಸ್ಪೃಶ್ಯರ ಸಮಸ್ಯೆಗಳನ್ನು ಕಾನೂನು ಮತ್ತು ಸಂವಿಧಾನಾತ್ಮಕ ಸಂರಕ್ಷಣೆಗಳ ಮೂಲಕ ನಿವಾರಿಸಬೇಕೆಂದು ವಾದಿಸಿದರು. ಎಂದರೆ ಈ ಸಮಸ್ಯೆಯನ್ನು ಕೇವಲ ಧಾರ್ಮಿಕ ಸಮಸ್ಯೆ ಎಂದು ಪರಿಗಣಿಸದೆ, ಇದು ಒಂದು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಯಾಗಿದ್ದು ಇದನ್ನು ರಾಜಕೀಯ ಸಾಧನಗಳ ಮೂಲಕವೇ ನಿವಾರಿಸಬೇಕು ಎಂಬುದು ಅವರ ತರ್ಕ ಹಾಗೂ ನಿಲುವಾಗಿತ್ತು. ಆದ್ದರಿಂದಲೇ ಅವರು ಈ ಸಮಸ್ಯೆಯನ್ನು ರಾಜಕೀಯ ಚೌಕಟ್ಟಿನಲ್ಲಿ ಚರ್ಚಿಸುವ ಉದ್ದೇಶದಿಂದ ಈ ಗ್ರಂಥವನ್ನು ಪ್ರಕಟಿಸಿದರು” (ಪು-xxi). ಭಾರತೀಯ ವ್ಯಕ್ತಿತ್ವಕ್ಕೆ ಬಹುದೊಡ್ಡ ಕಳಂಕವಾಗಿರುವ, ಶತಮಾನಗಳ ಸಾಮಾಜಿಕ, ಮಾನಸಿಕ ರೋಗವಾಗಿರುವ ‘ಅಸ್ಪೃಶ್ಯತೆ’ಯನ್ನು ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಗ್ರಹಿಸಿರುವ ಕ್ರಮದಲ್ಲಿರುವ ಭಿನ್ನ ಧೋರಣೆಯನ್ನು ಹಾಗೂ ಗಾಂಧೀಜಿಯವರ ದ್ವಂದ್ವ ಹಾಗೂ ಡಾ. ಅಂಬೇಡ್ಕರ್ ಅವರ ಖಚಿತ ನಿಲುವಿನ ಸ್ವರೂಪವೇನು ಎಂಬುದನ್ನು ಈ ಕೃತಿ ಅಧಿಕೃತವಾಗಿ ನಿರೂಪಿಸುತ್ತದೆ. ‘ಅಸ್ಪೃಶ್ಯತೆ’ಯನ್ನು ‘ಧಾರ್ಮಿಕ ಅಥವಾ ಸಾಮಾಜಿಕ ರಾಜಕೀಯ ಸಮಸ್ಯೆ’ಯಾಗಿ ಗ್ರಹಿಸಿದಾಗ ನಮ್ಮ ದೃಷ್ಟಿಕೋನದಲ್ಲಾಗುವ ಪಲ್ಲಟವನ್ನು ಸ್ಪಷ್ಟಪಡಿಸುತ್ತದೆ. ಜೊತೆಗೆ, ಅಸ್ಪೃಶ್ಯತಾ ನಿವಾರಣೆಗೆ ನಾವು ಕ್ರಮಿಸಬೇಕಾಗಿರುವ ಪರಿಣಾಮಕಾರಿಯಾದ ಮಾರ್ಗ ಯಾವುದು ಎಂಬುದನ್ನು ಸೂಚಿಸುತ್ತದೆ. ಸಾಮಾಜಿಕ, ರಾಜಕೀಯವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ಹಲವು ಬಗೆಯ ಸಮಸ್ಯಾತ್ಮಕ ರೂಪಾಂತರಗಳನ್ನು ಪಡೆದುಕೊಳ್ಳಬಲ್ಲ ಅಪಾಯಕಾರಿ ಗುಣ ಅಸ್ಪೃಶ್ಯತೆಯ ರೋಗಕ್ಕಿದೆ ಎಂಬುದನ್ನು ಈ ಕೃತಿಯಲ್ಲಿನ ಡಾ. ಅಂಬೇಡ್ಕರ್ ಅವರ ಚಿಂತನೆ ಮನಗಾಣಿಸುತ್ತದೆ.
1932 ಸೆಪ್ಟಂಬರ್ 24ರಂದು ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ನಡುವೆ ನಡೆದ ‘ಪೂನಾ ಒಪ್ಪಂದ’ದ ತರುವಾಯ, ಬ್ರಿಟಿಷ್ ಸಂಸತ್ತು ಅಂಗೀಕರಿಸಿ ಜಾರಿಗೊಳಿಸಿದ ‘ಭಾರತ ಸರ್ಕಾರ ಕಾಯ್ದೆ 1935’ರ ಪ್ರಕಾರ 1937ರ ಫೆಬ್ರವರಿಯಲ್ಲಿ ಪ್ರಾಂತೀಯ ಶಾಸನ ಸಭೆಗಳಿಗೆ ಚುನಾವಣೆಗಳು ನಡೆದವು. ಪರಿಶಿಷ್ಟ ಜಾತಿಗಳವರಿಗೆ ಕಾಯ್ದಿರಿಸಲಾಗಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಪ್ರತಿನಿಧಿಗಳು ಹಾಗೂ ಡಾ. ಅಂಬೇಡ್ಕರ್ ಅವರ ‘ಸ್ವತಂತ್ರ ಕಾರ್ಮಿಕ ಪಕ್ಷ’ದ ಪರಿಶಿಷ್ಟ ಜಾತಿ ಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣಾ ಫಲಿತಾಂಶ ಪ್ರಕಟವಾದಾಗ, ಕಾಂಗ್ರೆಸ್ ಪಕ್ಷವು ‘ತಮ್ಮ ಪಕ್ಷವೇ ಜಯಶಾಲಿಯಾಗಿದ್ದು, ಕಾಂಗ್ರೆಸ್ಸೇತರ ಅಸ್ಪೃಶ್ಯರ ಅಭ್ಯರ್ಥಿಗಳು ಸೋತಿರುವುದರಿಂದ ಕಾಂಗ್ರೆಸ್ ಪಕ್ಷವೇ ಅಸ್ಪೃಶ್ಯರ ನಿಜವಾದ ಪ್ರತಿನಿಧಿ ಮತ್ತು ರಕ್ಷಕ. ಡಾ. ಅಂಬೇಡ್ಕರ್ ಅವರ ಪಕ್ಷ ದಯನೀಯ ಸೋಲು ಅನುಭವಿಸಿದೆ’ ಎಂದು ಘೋಷಿಸಿತು. ಕಾಂಗ್ರೆಸ್ ಪಕ್ಷದ ಈ ಅಭಿಪ್ರಾಯವನ್ನು ಅಪಪ್ರಚಾರ, ಅಸತ್ಯ ಎಂದು ಖಂಡಿಸಿದ ಡಾ. ಅಂಬೇಡ್ಕರ್, ಚುನಾವಣಾ ಫಲಿತಾಂಶದ ತರುವಾಯದ ಸಮೀಕ್ಷೆಯ ಮೂಲಕ ವಾಸ್ತವಿಕ ಅಂಕಿಅಂಶಗಳ ದಾಖಲೆಯನ್ನು ಆಧರಿಸಿ ಅಧ್ಯಯನ ಮಾಡಿ, ಕಾಂಗ್ರೆಸ್ಗೆ ನೀಡಿದ ಉತ್ತರ ಸ್ವರೂಪದ ಕೃತಿಯೇ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?”. ಬಹಳ ಮುಖ್ಯವಾಗಿ ಡಾ. ಅಂಬೇಡ್ಕರ್ ಅವರು ಈ ಕೃತಿಯಲ್ಲಿ ‘ಕಾಂಗ್ರೆಸ್ ಹಾಗೂ ಗಾಂಧೀಜಿಯವರು ಅಸ್ಪೃಶ್ಯರ ಪ್ರತಿನಿಧಿಯಲ್ಲ’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)
ಡಾ. ಅಂಬೇಡ್ಕರ್ ಈ ಕೃತಿಯ ಮೂಲಕ ಕೇಳಲಾಗಿರುವ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?” ಎಂಬ ಪ್ರಶ್ನೆಯನ್ನು ಕೇವಲ ಅಂದಿನ ‘ಕಾಂಗ್ರೆಸ್, ಗಾಂಧೀಜಿ’ಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೆ, ವರ್ತಮಾನದಲ್ಲಿ ನಿಂತು ಇಂದಿನ ಜಾತಿವಾದಿ-ಕೋಮುವಾದಿ ಸಮಾಜ, ಧರ್ಮ, ರಾಜಕಾರಣಕ್ಕೆ “ಶತಮಾನಗಳಿಂದ ಮನುವಾದಿ ಜಾತಿ ವ್ಯವಸ್ಥೆಯು ಅಸ್ಪೃಶ್ಯ ಸಮುದಾಯಕ್ಕೆ ಮಾಡಿರುವ ದ್ರೋಹ, ವಂಚನೆ, ಕ್ರೌರ್ಯವೇನು?” ಎಂದು ಕೇಳುವಂತೆ ಕೃತಿ ಒತ್ತಾಯಿಸುತ್ತದೆ. ಜೊತೆಗೆ, ಮನುವಾದಿ ಜಾತಿವ್ಯವಸ್ಥೆ ಹಾಗೂ ವ್ಯಕ್ತಿತ್ವಗಳು ಅಸ್ಪೃಶ್ಯ ಸಮುದಾಯಕ್ಕೆ ಮಾಡಿರುವ ದ್ರೋಹ, ವಂಚನೆ, ಕ್ರೌರ್ಯವನ್ನು ಬಯಲಾಗಿಸುತ್ತದೆ.

ಒಟ್ಟು ಹನ್ನೊಂದು ಅಧ್ಯಾಯಗಳನ್ನು ಒಳಗೊಂಡಿರುವ ಪ್ರಸ್ತುತ ಕೃತಿಯು, “ಜಾತಿವಾದಿ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಸಾಮಾಜಿಕ, ರಾಜಕೀಯ, ಆರ್ಥಿಕ, ಧಾರ್ಮಿಕ ನೆಲೆಯಲ್ಲಿನ ವಂಚನೆಯ ನಿಲುವನ್ನು; ನಿಮ್ನವರ್ಗದವರ ಸಾಮಾಜಿಕ ಸುಧಾರಣೆ ಬಗೆಗೆ ಕಾಂಗ್ರೆಸ್ ಪಕ್ಷದವರಲ್ಲಿಯೇ ಇರಬಹುದಾದ ದ್ವಂದ್ವ, ವೈರುಧ್ಯದ ವಿರೋಧಿ ಧೋರಣೆಯನ್ನು; ಕಾಂಗ್ರೆಸ್ ಪಕ್ಷದ ವಿರುದ್ಧ ನಿಮ್ನವರ್ಗಗಳು ಮಂಡಿಸಿದ ಅಸ್ಪೃಶ್ಯರ ಪರವಾದ ಸಾಮಾಜಿಕ ಸುಧಾರಣಾ ಗೊತ್ತುವಳಿಯನ್ನು; ಅಸ್ಪೃಶ್ಯರ ಪ್ರಗತಿಯ ಹೆಸರೇಳಿ ಸಾರ್ವಜನಿಕರ ಹಣ ದೋಚಿದ ಕಾಂಗ್ರೆಸ್ನ ಭ್ರಷ್ಟಾಚಾರವನ್ನು; ಭವಿಷ್ಯ ಭಾರತದ ಸಂವಿಧಾನದಲ್ಲಿ ನಿಮ್ನವರ್ಗಗಳ ಸಂರಕ್ಷಣೆ ಹಾಗೂ ರಾಜಕೀಯ, ಸಾರ್ವಜನಿಕ ಸೇವಾವಲಯದಲ್ಲಿನ ಪ್ರಾತಿನಿಧ್ಯದ ಸ್ವರೂಪ ಹೇಗಿರಬೇಕೆಂಬುದನ್ನು; ಇಂಗ್ಲೆಂಡಿನಲ್ಲಿ ನಡೆದ ಮಹತ್ವದ ಐತಿಹಾಸಿಕ ‘ದುಂಡುಮೇಜಿನ ಸಮ್ಮೇಳನ’ದಲ್ಲಿ ಚರ್ಚಿಸಲ್ಪಟ್ಟ ಸಂಗತಿಗಳನ್ನು; ಭಾರತದ ನಿಮ್ನವರ್ಗಗಳ ನಿಜವಾದ ಪ್ರತಿನಿಧಿ ಡಾ. ಅಂಬೇಡ್ಕರ್ ಅವರೇ ಹೊರತು, ಕಾಂಗ್ರೆಸ್ ಅಥವಾ ಗಾಂಧಿ ಅಲ್ಲ ಎಂಬುದನ್ನು; ಬ್ರಿಟಿಷ್ ಸರ್ಕಾರ ದಲಿತರಿಗೆ ನೀಡಿದ ‘ಪ್ರತ್ಯೇಕ ಮತಕ್ಷೇತ್ರ ಅವಕಾಶ’ವನ್ನು ಖಂಡಿಸಿ ಯರವಾಡ ಜೈಲಿನಲ್ಲಿ ಉಪವಾಸ ಕುಳಿತ ಗಾಂಧೀಜಿ ದಲಿತ ಸಮುದಾಯಕ್ಕೆ ಎಸಗಿದ ವಂಚನೆಯನ್ನು; ‘ಪೂನಾ ಒಪ್ಪಂದ’ದ ಕರಾಳತೆಯನ್ನು; ಅಸ್ಪೃಶ್ಯರಿಗೆ ಸಾರ್ವಜನಿಕ ಬಾವಿ, ದೇವಾಲಯ, ಶಾಲೆ, ರಸ್ತೆ, ಸಂಸ್ಥೆಗಳಿಗೆ ಮುಕ್ತ ಪ್ರವೇಶದ ನಾಟಕವಾಡಿದ ಕಾಂಗ್ರೆಸ್ನ ಹುಸಿ ದಲಿತಪರ ನಿಲುವನ್ನು; ಗಾಂಧೀಜಿ ಸ್ಥಾಪಿಸಿದ ‘ಹರಿಜನ ಸೇವಕ ಸಂಘ’ದ ಒಳರಾಜಕಾರಣವನ್ನು; ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ‍್ಯ ಹಾಗೂ ಅಧಿಕಾರವನ್ನು ಹಸ್ತಾಂತರಿಸುವಾಗ ಅದು ಯಾವುದೋ ಒಂದು ವರ್ಗದ ಪಾಲಾಗದೆ ಎಲ್ಲ ಸಮುದಾಯಗಳಿಗೆ ಹಂಚಿಕೆಯಾಗಲಿ ಎಂಬುದನ್ನು; ಅಸ್ಪೃಶ್ಯರು ಬ್ರಿಟಿಷರ ಕೈಗೊಂಬೆಗಳೂ ಅಲ್ಲ ಹಾಗೂ ಹಿಂದೂಗಳೂ ಅಲ್ಲ ಎಂಬ ಸತ್ಯವನ್ನು; ಗಾಂಧೀಜಿಯವರ ಬಗೆಗೆ ಅಸ್ಪೃಶ್ಯರ ನಿಲುವೇನು?; ‘ಗಾಂಧಿವಾದ’ ಎಂದರೆ ಯಾವುದು? ಅದರ ಬಿಕ್ಕಟ್ಟುಗಳೇನು? ಅದು ಹೇಗೆ ಅರ್ಥಹೀನ ಹಾಗೂ ಅಪ್ರಸ್ತುತ” ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ವಿಮರ್ಶಾತ್ಮಕವಾದ ಜಿಜ್ಞಾಸೆಗೆ ಒಳಪಡಿಸಿದೆ. ಈ ಕೃತಿಯು “ಅಂಬೇಡ್ಕರ್‌ವಾದಿ ಸಿದ್ಧಾಂತ ಹಾಗೂ ತಾತ್ವಿಕ ದೃಷ್ಟಿಕೋನ”ವನ್ನು ಸೈದ್ಧಾಂತಿಕವಾಗಿ ಕಟ್ಟಿಕೊಡುತ್ತದೆ. ಯಾವುದೇ ಸಮಾಜದಲ್ಲಿನ ಸಾಮಾಜಿಕತೆ, ರಾಜಕೀಯತೆ, ಆರ್ಥಿಕತೆ, ಧಾರ್ಮಿಕತೆಯ ನಿಲುವುಗಳನ್ನು ಸಾಮುದಾಯಿಕ ನೆಲೆಯಲ್ಲಿ, ಅಧಿಕೃತ ಆಧಾರಗಳ ಮೂಲಕ ಪ್ರಜ್ಞಾಪೂರ್ವಕವಾಗಿ, ವಸ್ತುನಿಷ್ಠವಾಗಿ, ಪಾರದರ್ಶಕವಾಗಿ ಹಾಗೂ ವಿಮರ್ಶಾತ್ಮಕವಾಗಿ ಹೇಗೆ ಗ್ರಹಿಸಬೇಕೆಂಬ ಖಚಿತ ದೃಷ್ಟಿಕೋನವೊಂದನ್ನು ಡಾ. ಅಂಬೇಡ್ಕರ್ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಕೃತಿಯ ಕೊನೆಯಲ್ಲಿ ನೀಡಲಾಗಿರುವ ಅನುಬಂಧದಲ್ಲಿನ ಹದಿನಾರು ಮಹತ್ವದ ದಾಖಲೆಗಳು ಕೃತಿಯ ಅಧಿಕೃತತೆಯನ್ನು ಸಾಬೀತುಪಡಿಸಿವೆ.
ಸೋಜಿಗದ ಸಂಗತಿಯ ಕಥನ
1917ರಂದು ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ವಾರ್ಷಿಕ ಅಧಿವೇಶನದಲ್ಲಿ ನಿಮ್ನ ವರ್ಗದವರ ಪರವಾಗಿ ಕೈಗೊಳ್ಳಲಾದ ನಿರ್ಣಯ ಕುರಿತ ಚರ್ಚೆಯ ಮೂಲಕ ಕೃತಿ ಆರಂಭವಾಗುತ್ತದೆ. “ನಿಮ್ನ ವರ್ಗದವರ ಮೇಲೆ ರೂಢಿಗತವಾಗಿ ಹೇರಲಾಗಿರುವ ನಿಷೇಧಗಳು ಅತ್ಯಂತ ಆತಂಕಕಾರಿ ಮತ್ತು ದಬ್ಬಾಳಿಕೆಯ ಸ್ವರೂಪದವುಗಳಾಗಿದ್ದು ಅವುಗಳಿಂದ ಈ ವರ್ಗಗಳವರು ಅತ್ಯಂತ ಕಷ್ಟ ಮತ್ತು ಅನಾನುಕೂಲಗಳಿಗೆ ತುತ್ತಾಗಿರುವುದರಿಂದ ಅವುಗಳನ್ನು ನಿವಾರಿಸುವ ಅವಶ್ಯಕತೆ ಮತ್ತು ನ್ಯಾಯಬದ್ಧತೆಯ ಬಗ್ಗೆ ಭಾರತದ ಜನತೆಯನ್ನು ಕಾಂಗ್ರೆಸ್ ಆಗ್ರಹಪಡಿಸುತ್ತದೆ”(ಪು-1) ಎಂಬ ಕಾಂಗ್ರೆಸ್‌ನ ನಿರ್ಣಯವನ್ನು ಡಾ. ಅಂಬೇಡ್ಕರ್ ಅವರು “ಸೋಜಿಗದ ಸಂಗತಿ” ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದವರೆ ಈ ನಿರ್ಣಯಕ್ಕೆ ತದ್ವಿರುದ್ಧ ನಿಲುವುಳ್ಳವರಾಗಿದ್ದರು ಹಾಗೂ ‘ಈ ಗೊತ್ತುವಳಿ ಕಾಂಗ್ರೆಸ್ಸಿನ ಘೋಷಿತ ನೀತಿಗೆ ವಿರುದ್ಧವಾಗಿದೆ”(ಪು-7) ಎಂಬುದನ್ನು ಅಂಬೇಡ್ಕರ್ ಸಾಬೀತುಪಡಿಸುತ್ತಾರೆ. ದಲಿತ ವಿರೋಧಿ ಮನಸ್ಥಿತಿಯುಳ್ಳ ಕಾಂಗ್ರೆಸ್ಸಿಗರಿಂದ, ಕಾಂಗ್ರೆಸ್ ಪಕ್ಷದಿಂದ ದಲಿತ ಪರವಾದ ನಿಲುವನ್ನು ನಿರೀಕ್ಷಿಸಲು ಸಾಧ್ಯವೆ? ಎಂಬ ಮೂಲಭೂತ ಪ್ರಶ್ನೆಯನ್ನು ನಿಷ್ಠುರವಾಗಿ ಕೇಳಿರುವ ಅಂಬೇಡ್ಕರ್, ಕಾಂಗ್ರೆಸ್ಸಿನಲ್ಲಿರುವ ದಲಿತಪರ ಹಾಗೂ ದಲಿತ ವಿರುದ್ಧದ ನಿಲುವಿನ ವ್ಯಕ್ತಿತ್ವಗಳನ್ನು ವಸ್ತುನಿಷ್ಠವಾದ ವಿವೇಚನೆಗೆ ಒಳಪಡಿಸಿದ್ದಾರೆ.
ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಿ ಮಾತನಾಡಿದ ಮದರಾಸಿನ ಜಿ. ಎ. ನಟೇಶನ್ ಅವರು, ಭಾರತಕ್ಕೆ ಸ್ವಯಂ ಆಡಳಿತ ದಕ್ಕಿದ ಮೇಲೆ ಕಾಂಗ್ರೆಸ್ ಪಕ್ಷವು “ಎಲ್ಲ ವಿಧದ ಅಸಮಾನತೆ, ಅನ್ಯಾಯಗಳನ್ನು ನಿವಾರಿಸಿ, ಸಾರ್ವಜನಿಕ ಬಾವಿ ಶಾಲೆಗಳಿಗೆ ನಿಮ್ನವರ್ಗದವರ ಮುಕ್ತ ಪ್ರವೇಶವನ್ನು ನಿಷೇಧಿಸಿರುವ ನಿರ್ಬಂಧಗಳನ್ನು ನಿವಾರಿಸಿ ಮಾನವೀಯತೆಯನ್ನು ಮೇಲೆತ್ತುವ ಕರ್ತವ್ಯ ನಿರ್ವಹಿಸಬೇಕಿದೆ” ಎಂದು ಹೇಳಿದ; ನಿರ್ಣಯವನ್ನು ಅನುಮೋದಿಸಿದ ಮುಂಬಯಿಯ ಶ್ರೀ ಭೂಲಾಭಾಯಿ ದೇಸಾಯಿ ಅವರು, ‘ಅಸ್ಪೃಶ್ಯತೆಯು ಹಿಂದೂ ಧರ್ಮಕ್ಕೆ ಅಂಟಿದ ದೊಡ್ಡ ಜಾಡ್ಯ, ಕಳಂಕ. ನಿಮ್ನವರ್ಗಗಳ ಸಾಮಾಜಿಕ ಅವನತಿಯನ್ನು ತೊಡೆದುಹಾಕದ ಹೊರತು, ಸಮಾನತೆ ಹಾಗೂ ಭ್ರಾತೃತ್ವಕ್ಕೆ ಅರ್ಥವಿಲ್ಲ. ಬ್ರಿಟಿಷ್ ಪ್ರಭುತ್ವವನ್ನು ಪ್ರಶ್ನಿಸಲಿಕ್ಕೆ ಅಥವಾ ಸ್ವಯಂ ಆಡಳಿತಕ್ಕೆ ಆಗ್ರಹಿಸಲು ನಮಗೆ ಯಾವ ನೈತಿಕತೆಯೂ ಇಲ್ಲ’ ಎಂಬ ನಿಲುವಿನ; ಮಲಬಾರ್‌ನ ರಾಮ ಐಯ್ಯರ್ ‘ನಿಮ್ನವರ್ಗಗಳನ್ನು ಸಂಕೋಲೆಗಳಿಂದ ಬಿಡಿಸಿದಾಗ ಮಾತ್ರ ನಮಗೆ ಸ್ವರಾಜ್ಯ ದೊರಕುತ್ತದೆ. ಏಕಕಾಲದಲ್ಲಿ ನಾವು ರಾಜಕೀಯ ಪ್ರಜಾಪ್ರಭುತ್ವವಾದಿ ಹಾಗೂ ಸಾಮಾಜಿಕ ನಿರಂಕುಶವಾದಿಗಳಾಗಿರಲು ಸಾಧ್ಯವಿಲ್ಲ. ರಾಜಕೀಯ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವದಿಂದ ಮಾತ್ರ ಸಮಾನತೆಯ ಏಕೀಕೃತ ಭಾರತ ಸ್ಥಾಪಿಸಲು ಸಾಧ್ಯ. ಬ್ರಾಹ್ಮಣರನ್ನೂ ಒಳಗೊಂಡಂತೆ ಎಲ್ಲ ಉಚ್ಚವರ್ಗದವರೂ ಹಳ್ಳಿಗಳಿಗೆ ಹೋಗಿ ಕೆಳವರ್ಗದವರನ್ನು ಸಂಕೋಲೆಗಳಿಂದ ಬಿಡಿಸಬೇಕಾಗಿದೆ’ ಎಂಬ ಧೋರಣೆಯ; ದೆಹಲಿಯ ಅಸಫ್ ಅಲಿ ಅವರು, ‘ನಿಮ್ನವರ್ಗಗಳವರ ಸಮಸ್ಯೆ ಎಲ್ಲ ಸಮಸ್ಯೆಗಳಿಗಿಂತಲೂ ಅತ್ಯಂತ ಕಠಿಣ ಸಮಸ್ಯೆ. ಅಸ್ಪೃಶ್ಯರು ಶತಮಾನಗಳಿಂದ ಕೀಳು ವೃತ್ತಿಗಳನ್ನು ಮೂಕರಾಗಿ ಪಾಲಿಸಿಕೊಂಡು ಬರುತ್ತಿರುವ ದೌರ್ಭಾಗ್ಯರಾಗಿದ್ದಾರೆ. ಅಸ್ಪೃಶ್ಯರೂ ಮನುಷ್ಯರೆ. ತಮ್ಮನ್ನು ತಾವೇ ಶ್ರೇಷ್ಠರೆಂದು ತಿಳಿದುಕೊಂಡಿರುವವರ ನರನಾಡಿಗಳಲ್ಲಿ ಹರಿಯುತ್ತಿರುವ ಕೆಂಪುರಕ್ತವೇ ಅಸ್ಪೃಶ್ಯರ ಮೈಯಲ್ಲೂ ಹರಿಯುತ್ತಿದೆ. ಅಸ್ಪೃಶ್ಯರನ್ನು ಅವಮಾನಿಸುವ ಮೂಲಕ ಭಾರತದ ಜನತೆ ತಮ್ಮನ್ನು ತಾವೇ ಅವಮಾನಿಸಿಕೊಂಡಿದೆ’ ಎಂಬ ಆತ್ಮಾವಲೋಕನದ ಮಾತನಾಡುತ್ತಾರೆ. ಅಧಿವೇಶನದ ತರುವಾಯ ಕಾಂಗ್ರೆಸ್ ಈ ಬಗೆಯ ಚಿಂತನೆಯ ಹಿನ್ನೆಲೆಯಲ್ಲಿ ದಲಿತಪರವಾಗಿ ಯಾಕೆ ನಡೆದುಕೊಳ್ಳಲಿಲ್ಲ ಎಂಬುದು ಅಂಬೇಡ್ಕರ್ ಅವರ ಮೂಲಭೂತ ಪ್ರಶ್ನೆಯಾಗಿದೆ.

ಇದಕ್ಕೆ ವ್ಯತಿರಿಕ್ತ ಎನ್ನುವ ಹಾಗೆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಆ್ಯನಿ ಬೆಸಂಟರು ಹೇಗೆ ಅಸ್ಪೃಶ್ಯರನ್ನು ಅವಮಾನಿಸುತ್ತ ದ್ವೇಷಿಸುತ್ತಿದ್ದರು ಎಂಬುದನ್ನು ಡಾ. ಅಂಬೇಡ್ಕರ್ ವಿವರಿಸಿದ್ದಾರೆ. 1909ರ ‘ಇಂಡಿಯನ್ ರಿವ್ಯು’ದಲ್ಲಿ ಪ್ರಕಟಿಸಿದ್ದ ‘ನಿಮ್ನವರ್ಗದ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಪ್ರವೇಶ ನೀಡಬೇಕೆ ಬೇಡವೆ’ ಎಂಬ ವಿಷಯದ ಮೇಲೆ ಆ್ಯನಿ ಬೆಸಂಟರು ಬರೆದ ‘ನಿಮ್ನವರ್ಗಗಳ ಉದ್ಧಾರ’ ಎಂಬ ಬರಹದಲ್ಲಿನ ‘ನಿಮ್ನವರ್ಗದವರು ಕೀಳುಮಟ್ಟದ ಅಪರಾಧಿಗಳು, ಕೊಲೆಪಾತಕರು, ವ್ಯಸನಿಗಳು, ಸ್ವಚ್ಛತೆಯ ಕಲ್ಪನೆ ಇಲ್ಲದವರು. ಉಚ್ಚವರ್ಗದ ಮಕ್ಕಳು ಹೋಗುತ್ತಿರುವ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೆ ಪ್ರವೇಶ ದೊರಕಿಸಿಕೊಡುವ ಆತುರದಲ್ಲಿ …ಭವಿಷ್ಯದ ಪ್ರಗತಿಗೆ ಆಪತ್ತು ಎಸಗಿದಂತಾಗುತ್ತದೆ. ಮೊಟ್ಟಮೊದಲು ಈ ನಿಮ್ನವರ್ಗದ ಮಕ್ಕಳಿಗೆ ಸ್ವಚ್ಛತೆ, ಹೊರ ನಡವಳಿಕೆಯಲ್ಲಿ ಸಭ್ಯತೆ ಮತ್ತು ಶಿಕ್ಷಣ, ಧರ್ಮ, ನೀತಿಯ ಪ್ರಥಮ ಪಾಠಗಳನ್ನು ಕಲಿಸುವ ಅವಶ್ಯಕತೆ ಇದೆ. ಸದ್ಯದಲ್ಲಿ ಅವರ ದೇಹವು ಸಾರಾಯಿ ಮತ್ತು ಅಶುದ್ಧ ಆಹಾರದ ದುರ್ವಾಸನೆಯಿಂದ ನಾರುತ್ತಿದೆ. ಈ ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳಿವೆ. ಪ್ರತಿನಿತ್ಯ ಎಚ್ಚರಿಕೆಯಿಂದಿರುವ ತಂದೆತಾಯಿಗಳ ಮಕ್ಕಳನ್ನು ಶಾಲೆಗಳಲ್ಲಿ ಇಂತಹ ಸೋಂಕು ಜಾಡ್ಯಕ್ಕೆ ಗುರಿಮಾಡುವುದು ಸರಿಯೆ? ಈ ನಿರ್ಗತಿಕ ಮಕ್ಕಳ ನಡತೆ ಮತ್ತು ಆಚರಣೆಗಳು ಸುಧಾರಿತ ವಾತಾವರಣಗಳ ಮಕ್ಕಳು ಅನುಕರಿಸುವುದು ಅಪೇಕ್ಷಣೀಯವಲ್ಲ. ಸ್ವಚ್ಛವಾಗಿರುವ ಮಕ್ಕಳನ್ನು ಹಾಗೂ ಕೊಳಕರ ಮಕ್ಕಳನ್ನು ಒಂದೇ ಶಾಲೆಯಲ್ಲಿ ಒಟ್ಟಿಗೆ ಕೂರಿಸುವುದಕ್ಕೆ ಬರುವುದಿಲ್ಲ’ ಎಂಬಂತಹ ಮಾತುಗಳು ಅವರ ದಲಿತ ವಿರೋಧಿ ಅಸಹನೆಯ ನಿಲುವನ್ನು ಸಾಕ್ಷೀಕರಿಸುತ್ತದೆ. ದಲಿತ ವಿರೋಧಿ ನಿಲುವಿರುವವರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವೂ ದಲಿತ ವಿರೋಧಿಯೆ. ಹೀಗಿರುವಾಗ ಕಾಂಗ್ರೆಸ್ನಿಂದ ನಿಮ್ನವರ್ಗದವರು ಏನನ್ನು ನಿರೀಕ್ಷಿಸಲಿಕ್ಕೆ ಸಾಧ್ಯ? ಎಂಬುದು ಡಾ. ಅಂಬೇಡ್ಕರ್ ಅವರ ಪ್ರಶ್ನೆಯಾಗಿದೆ.
ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-2)
‘ಸಾಮಾಜಿಕ ಸುಧಾರಣೆ’ ಬಗೆಗೆ ಪಕ್ಷದೊಳಗೆ ಒಮ್ಮತ ಅಭಿಪ್ರಾಯವನ್ನು ರೂಪಿಸಲಿಕ್ಕೆ ಸಾಧ್ಯವಿಲ್ಲದ, ಸಾಮಾಜಿಕ ಸುಧಾರಣಾ ವಿರೋಧಿ ಬಣಗಳಿಗೆ ತಲೆಬಾಗಿದ ಕಾಂಗ್ರೆಸ್ನಿಂದ ಅಸ್ಪೃಶ್ಯರು ಒಳಿತನ್ನು ಬಯಸಲು ಸಾಧ್ಯವೆ? ಎಂಬುದು ಡಾ. ಅಂಬೇಡ್ಕರ್ ಅವರ ಮತ್ತೊಂದು ತಾತ್ವಿಕ ಪ್ರಶ್ನೆ. 1886ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಎರಡನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಶ್ರೀ ದಾದಾಭಾಯಿ ನವರೋಜಿ ‘ನಾವು ಒಂದು ರಾಜಕೀಯ ಸಂಘವಾಗಿ, ರಾಜಕೀಯ ಆಶೋತ್ತರಗಳನ್ನು ಪ್ರತಿನಿಧಿಸಲು ಇಲ್ಲಿ ಸೇರಿರುತ್ತೇವೆಯೇ ಹೊರತು ಸಾಮಾಜಿಕ ಸುಧಾರಣೆಗಳ ಚರ್ಚೆ ಮಾಡಲಿಕ್ಕಲ್ಲ’ ಎಂದಿದ್ದು; 1887ರಲ್ಲಿ ನಡೆದ ಕಾಂಗ್ರೆಸ್ಸಿನ ಮೂರನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಬದ್ರುದ್ದೀನ್ ತ್ಯಾಬ್ಜಿ ‘ಒಂದು ನಿರ್ದಿಷ್ಟ ಭಾಗ ಅಥವಾ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾದ ಸಾಮಾಜಿಕ ಸುಧಾರಣೆಯ ಚರ್ಚೆಗಳಿಂದ ದೂರವಿರಬೇಕು’ ಎಂದಿದ್ದು; 1892ರಲ್ಲಿ ಕಾಂಗ್ರೆಸ್ಸಿನ ಎಂಟನೆಯ ಅಧಿವೇಶನದಲ್ಲಿ ಶ್ರೀ ಡಬ್ಲ್ಯು. ಸಿ. ಬ್ಯಾನರ್ಜಿ ‘ಸಾಮಾಜಿಕ ವಿಷಯಗಳ ಸಾರ್ವಜನಿಕ ಚರ್ಚೆಯ ವಿರೋಧಿಗಳಲ್ಲಿ ನಾನೊಬ್ಬ. ಆ ವಿಷಯಗಳನ್ನು ಆಯಾ ಸಮುದಾಯಗಳಿಗೆ ಬಿಟ್ಟುಬಿಡಬೇಕು. ಸಾಮಾಜಿಕ ಸುಧಾರಣೆಯನ್ನು ಮಾಡದೇ ರಾಜಕೀಯ ಸುಧಾರಣೆ ಸಾಧ್ಯವಿಲ್ಲ ಎಂದು ಹೇಳುವವರ ಮಾತನ್ನು ಕೇಳಲು ನನಗೆ ತಾಳ್ಮೆ ಇಲ್ಲ’ ಎಂದಿದ್ದು ಹಾಗೂ 1895ರಲ್ಲಿ ಪುಣೆಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸುರೇಂದ್ರನಾಥ ಬ್ಯಾನರ್ಜಿ ‘ನಮ್ಮ ಸಂಸ್ಥೆಯನ್ನು ಈಗಾಗಲೇ ಹಿಂದೂ ಕಾಂಗ್ರೆಸ್ ಎಂದು ಕರೆಯಲಾಗುತ್ತದೆ. ಇದು ಏಕೀಕೃತ ಭಾರತದ ಕಾಂಗ್ರೆಸ್ ಆಗಿದ್ದು ಹಿಂದೂಗಳು, ಮೊಹಮದೀಯರು, ಕ್ರೈಸ್ತರು, ಪಾರ್ಸಿಗಳು, ಸಿಖ್ಖರು ಮತ್ತು ತಮ್ಮ ತಮ್ಮ ಸಾಮಾಜಿಕ ರೂಢಿಗಳನ್ನು ಸುಧಾರಿಸಿಕೊಳ್ಳುವ ಹಾಗೂ ಸುಧಾರಿಸಿಕೊಳ್ಳದ ಎಲ್ಲರ ಪಕ್ಷವಾಗಿದೆ. ನಮ್ಮದು ಒಂದು ರಾಜಕೀಯ ಚಳವಳಿಯೇ ಹೊರತು ಸಾಮಾಜಿಕ ಚಳವಳಿಯಲ್ಲ’ ಎಂದಿದ್ದು ಸಾಮಾಜಿಕ ಸುಧಾರಣಾ ನಿಲುವಿಗೆ ವಿರುದ್ಧವಾದ ಹಾಗೂ ವೈರುಧ್ಯದಿಂದ ಕೂಡಿದ ಕಾಂಗೆಸ್ಸಿಗರ ಧೋರಣೆಯನ್ನು ಸಾಬೀತುಪಡಿಸುತ್ತವೆ. ಹೀಗಿರುವಾಗ ಅಸ್ಪೃಶ್ಯರ ಸಾಮಾಜಿಕ ಸುಧಾರಣೆ ಕುರಿತು ಕಾಂಗ್ರೆಸ್ ಕಾಳಜಿ ವಹಿಸಲು ಸಾಧ್ಯವೆ?” ಎಂದು ಡಾ. ಅಂಬೇಡ್ಕರ್ ಪ್ರಶ್ನಿಸಿದ್ದಾರೆ.
1885ರಲ್ಲಿ ಮುಂಬಯಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದಾಗ, ರಾಜಕೀಯ, ಸಾಮಾಜಿಕ, ಆರ್ಥಿಕ ಸುಧಾರಣೆಗೆ ಹೆಚ್ಚು ಒತ್ತುಕೊಡಲಾಗಿತ್ತು. ಮುಂಬಯಿಯಲ್ಲಿ ಜರುಗಿದ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ದಿವಾನ್ ಬಹಾದ್ದೂರ ಆರ್. ರಂಗನಾಥರಾಯರು, ನ್ಯಾಯಮೂರ್ತಿ ಎಂ. ಜೆ. ರಾನಡೆಯವರು ಸಾಮಾಜಿಕ ಸುಧಾರಣೆ ಕುರಿತು ಭಾಷಣ ಮಾಡಿದ್ದರು. ದಿವಾನ್ ಬಹಾದ್ದೂರ್ ಆರ್. ರಘುನಾಥ್ ರಾವ್, ಮಹದೇವ ಗೋವಿಂದ ರಾನಡೆ, ನರೇಂದ್ರನಾಥ್ ಸೆನ್, ನಾನಕೀನಾಥ್ ಘೋಷಾಲ್ ಪರಸ್ಪರ ಚರ್ಚಿಸಿ ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು “ಭಾರತೀಯ ರಾಷ್ಟ್ರೀಯ ಸಾಮಾಜಿಕ ಸಮ್ಮೇಳನ”(ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೆನ್ಸ್) ಎಂಬ ಸಂಸ್ಥೆಯನ್ನು ಆರಂಭಿಸಬೇಕೆಂದು ನಿರ್ಣಯಿಸಿದರು. 1885ನೇ ಡಿಸೆಂಬರ್ ತಿಂಗಳಲ್ಲಿ ರಾಜಾ ಸರ್ ಟಿ. ಮಾಧವರಾವ್ ಅವರ ಅಧ್ಯಕ್ಷತೆಯಲ್ಲಿ ಮದ್ರಾಸಿನಲ್ಲಿ ಜರುಗಿದ ಮೊದಲ ಸಮ್ಮೇಳನವು ಸಾಮಾಜಿಕ ಸುಧಾರಣಾ ಮೌಲ್ಯವನ್ನು ಎತ್ತಿಹಿಡಿಯಿತು. ಮುಂದೆ ಕಾಂಗ್ರೆಸ್ ಪಕ್ಷದ ವಾರ್ಷಿಕ ಅಧಿವೇಶನ ನಡೆಯುವ ವೇದಿಕೆಯಲ್ಲಿಯೇ ಸಾಮಾಜಿಕ ಸಮ್ಮೇಳನದ ವಾರ್ಷಿಕ ಅಧಿವೇಶಗಳನ್ನು ನಡೆಸಬೇಕೆಂದು ನಿರ್ಣಯಿಸಲಾಯಿತು. ಆದರೆ, ಸಾಮಾಜಿಕ ಸುಧಾರಣೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಬಾಲಗಂಗಾಧರ ತಿಲಕರು ‘ಕಾಂಗ್ರೆಸ್ ಅಧಿವೇಶನದ ಚಪ್ಪರದಲ್ಲಿ ಸಾಮಾಜಿಕ ಸಮ್ಮೇಳನದ ಅಧಿವೇಶನ ನಡೆಸಲು ಅವಕಾಶ ಕೊಟ್ಟಿದ್ದೇ ಆದರೆ ಚಪ್ಪರವನ್ನೇ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದರು’. ಆನಂತರದಲ್ಲಿ ಕಾಂಗ್ರೆಸ್ ಸಾಮಾಜಿಕ ಸುಧಾರಣಾ ವಿಷಯದ ಚರ್ಚೆಯನ್ನೇ ಕೈಬಿಟ್ಟಿತು ಹಾಗೂ ಮುಂದಿನ ಕಾಂಗ್ರೆಸ್ ಅಧಿವೇಶನಗಳಲ್ಲಿ ಯಾವ ಅಧ್ಯಕ್ಷರೂ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ. ಈ ಕಾರಣಕ್ಕಾಗಿಯೇ ಡಾ. ಅಂಬೇಡ್ಕರ್, ಸಾಮಾಜಿಕ ಸುಧಾರಣಾ ವಿಷಯವನ್ನು ಕೇವಲ ಚರ್ಚಿಸುವುದಕ್ಕೂ ಬಯಸದ ಕಾಂಗ್ರೆಸಿಗರು, ಅಸ್ಪೃಶ್ಯರ ಪರವಾದ ನಿಲುವನ್ನು ತಾಳಲು ಸಾಧ್ಯವೆ? ಎಂದು ಪ್ರಶ್ನಿಸುತ್ತ ಇದನ್ನೊಂದು ‘ಸೋಜಿಗದ ಸಂಗತಿ’ ಎಂದು ಕರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಸುಧಾರಣಾ ವಿರೋಧಿ ನಿಲುವನ್ನು ಖಂಡಿಸಿ, ಕಾಂಗ್ರೆಸ್‌ನ ಪ್ರತಿಕೃತಿಯನ್ನು ಸುಟ್ಟುಹಾಕಿದ ನಿಮ್ನವರ್ಗಗಳು, 11ನೇ ನವೆಂಬರ್ 1917ರಲ್ಲಿ ಸರ್ ನಾರಾಯಣ ಚಂದಾವರ್ಕರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಹಾಗೂ ಒಂದು ವಾರದ ತರುವಾಯ ನವೆಂಬರ್ 1917ರಲ್ಲಿ ಬ್ರಾಹ್ಮಣೇತರ ಪಕ್ಷದ ಮುಖಂಡರಾದ ಬಾಪೂಜಿ ನಾಮದೇವ ಬಗಾಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಅಸ್ಪೃಶ್ಯರ ಪರವಾದ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾದ ಸಾಮಾಜಿಕ ಸುಧಾರಣಾ ಗೊತ್ತುವಳಿ’ಗಳನ್ನು(ಪು-14,15,16) ಅಂಗೀಕರಿಸಲಾಯಿತು. ಇದು ಕಾಂಗ್ರೆಸ್ ವಿರುದ್ಧ ದಲಿತರು ಸಾರ್ವಜನಿಕವಾಗಿ ಮಂಡಿಸಿದ ಪ್ರತಿರೋಧವಾಗಿದೆ. ನಿಮ್ನವರ್ಗವು ಅನುಮೋದಿಸಿದ ಗೊತ್ತುವಳಿಗಳಲ್ಲಿ ಪ್ರಮುಖವಾದದ್ದು, ‘ನಿಮ್ನವರ್ಗಗಳು ತಮ್ಮ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ತಮ್ಮ ಪ್ರತಿನಿಧಿಗಳನ್ನು ತಾವೇ ಚುನಾಯಿಸಿ ವಿಧಾನ ಪರಿಷತ್ತಿಗೆ ಕಳುಹಿಸುವ ಹಕ್ಕನ್ನು ನೀಡಬೇಕು’ ಎಂಬುದಾಗಿತ್ತು. ಈ ಗೊತ್ತುವಳಿಯನ್ನೇ ಮುಂದೆ ಡಾ. ಅಂಬೇಡ್ಕರ್ ಇಂಗ್ಲೆಂಡಿನ ದುಂಡುಮೇಜಿನ ಪರಿಷತ್ತಿನಲ್ಲಿ ಹೋರಾಡಿ ದಲಿತರಿಗಾಗಿ ‘ಪ್ರತ್ಯೇಕ ಮತದಾನದ ಹಕ್ಕು’ ಪಡೆದುಕೊಂಡು ಬಂದಿದ್ದು.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)
ಕಾಂಗ್ರೆಸ್ ಪಕ್ಷವು ಸಾಮಾಜಿಕ ಒಳಿತಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿಗಳ ‘ತಿಲಕ್ ಸ್ವರಾಜ್ ನಿಧಿ’ಯನ್ನು ಸ್ಥಾಪಿಸಿತು. 1922ರ ಫೆಬ್ರವರಿಯಲ್ಲಿ ಬಾರ್ಡೋಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನಿಮ್ನವರ್ಗಗಳ ಪ್ರಗತಿಯ ಸಲುವಾಗಿ ಕೆಲವು ಗೊತ್ತುವಳಿಗಳನ್ನು ಅಂಗೀಕರಿಸಲಾಯಿತು. ನಿಮ್ನವರ್ಗಗಳ ಸಾಮಾಜಿಕ ಒಳಿತಿನ ರಚನಾತ್ಮಕ ಕಾರ್ಯಕ್ರಮಗಳಿಗಾಗಿ ಕಾಂಗ್ರೆಸ್ ಪಕ್ಷ ತಿಲಕ್ ಸ್ವರಾಜ್ ನಿಧಿಯಿಂದ ಮೀಸಲಿಟ್ಟ ಹಣ 5 ಲಕ್ಷ. ಆದರೆ ನಂತರದಲ್ಲಿ ದಲಿತರಿಗಾಗಿ ಇಷ್ಟು ಹಣ ಮೀಸಲಿಡುವುದು ವ್ಯರ್ಥವೆಂದು ಭಾವಿಸಿದ ಕಾಂಗ್ರೆಸ್ 5 ಲಕ್ಷದಿಂದ 2 ಲಕ್ಷಕ್ಕೆ ಸೀಮಿತಗೊಳಿಸಿತು. ಇದರಲ್ಲಿ ಅಸ್ಪೃಶ್ಯರಿಗಾಗಿ ಕಾಂಗ್ರೆಸ್ ಖರ್ಚು ಮಾಡಿದ ಹಣ ಕೇವಲ 43,381=00 ರೂ.ಗಳು ಮಾತ್ರ. ತಿಲಕ್ ಸ್ವರಾಜ್ ನಿಧಿಯಿಂದ ಕಾಂಗ್ರೆಸ್ಸಿಗರು ಅವ್ಯವಹಾರವಾಗಿ ದೋಚಿದ ಹಣಕ್ಕಿಂತಲೂ, ಅಸ್ಪೃಶ್ಯರಿಗಾಗಿ ಖರ್ಚು ಮಾಡಿದ ಹಣ ತುಂಬಾ ಕಡಿಮೆ. ‘ಯಂಗ್ ಇಂಡಿಯಾ’ದ 1921ರ ನವೆಂಬರ್ 3ರ ಸಂಚಿಕೆಯಲ್ಲಿ “ಅಸ್ಪೃಶ್ಯತೆಯ ಕಳಂಕ ಅಳಿಸದೆ ಸ್ವರಾಜ್ಯ ಅರ್ಥಹೀನ. ಸ್ವರಾಜ್ಯ ಗಳಿಸುವ ಪ್ರಕ್ರಿಯೆಯಲ್ಲಿ ಅಸ್ಪೃಶ್ಯತಾ ನಿವಾರಣೆ ಅತ್ಯಂತ ಶಕ್ತಿಶಾಲಿ ಅಂಶವೆಂದು ನಾನು ಭಾವಿಸುತ್ತೇನೆ’ ಎಂದು ಬರೆದ ಗಾಂಧೀಜಿಯವರು, ತಿಲಕ್ ಸ್ವರಾಜ್ ನಿಧಿಯ ವಿಚಾರದಲ್ಲಿ ಕಾಂಗ್ರೆಸ್ಸಿಗರು ಎಸಗಿದ ಭ್ರಷ್ಟಾಚಾರವನ್ನೇಕೆ ಪ್ರಶ್ನಿಸಲಿಲ್ಲ? ಅಸ್ಪೃಶ್ಯರ ಪ್ರಗತಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸಿ ಎಂದು ಕಾಂಗ್ರೆಸ್ಗೆ ಯಾಕೆ ಸೂಚಿಸಲಿಲ್ಲ? ಎಂಬುದಾಗಿ ಡಾ. ಅಂಬೇಡ್ಕರ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
(ಮುಂದುವರಿಯುತ್ತದೆ..)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ‘ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಡಾ. ಅಪ್ಪಗೆರೆ ಸೋಮಶೇಖರ್
ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.




