ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-2)

Date:

(ಮುಂದುವರಿದ ಭಾಗ..) ಬ್ರಿಟಿಷ್ ಸರ್ಕಾರವು ಭಾರತದ ಹೊಸ ಸಂವಿಧಾನಕ್ಕೆ ಅಂತಿಮ ರೂಪ ಕೊಡುವ ಸಲುವಾಗಿ ಚರ್ಚಿಸಲು ಭಾರತದ ಪ್ರತಿನಿಧಿಗಳನ್ನು ಲಂಡನ್ನಿನ ‘ದುಂಡು ಮೇಜಿನ ಸಮ್ಮೇಳನ’ಕ್ಕೆ ಆಹ್ವಾನಿಸಿತು. ಈ ಸಮ್ಮೇಳನವನ್ನು ಬ್ರಿಟನ್ನಿನ 5ನೇ ಜಾರ್ಜ್ ದೊರೆ 12ನೇ ನವೆಂಬರ್ 1930ರಂದು ಉದ್ಘಾಟಿಸಿದರು. ಸಮ್ಮೇಳನದಲ್ಲಿ ಅಸ್ಪೃಶ್ಯರ ಪ್ರತಿನಿಧಿಗಳಾಗಿ ಡಾ. ಅಂಬೇಡ್ಕರ್, ದಿವಾನ್ ಬಹದ್ದೂರ್ ಆರ್. ಶ್ರೀನಿವಾಸನ್ ಭಾಗವಹಿಸಿದ್ದರು. ದುಂಡು ಮೇಜಿನ ಸಮ್ಮೇಳನದ ಕಾರ್ಯವನ್ನು ಒಟ್ಟು ಒಂಭತ್ತು ಸಮಿತಿಗಳಿಗೆ ಹಂಚಲಾಗಿತ್ತು. ಅವುಗಳಲ್ಲಿ ‘ಅಲ್ಪಸಂಖ್ಯಾತರ ಸಮಿತಿ’ ಕೂಡ ಒಂದು.

ಕೋಮು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವ ಸಲುವಾಗಿ ರಚಿಸಲಾದ ಈ ಸಮಿತಿಯ ಅಧ್ಯಕ್ಷತೆಯನ್ನು ಬ್ರಿಟನ್ನಿನ ಪ್ರಧಾನಿ ರ್ಯಾಮ್ಸೆ ಮ್ಯಾಕ್ಡೊನಾಲ್ಡ್ ವಹಿಸಿದ್ದರು. ಸ್ವತಂತ್ರ ಭಾರತದಲ್ಲಿ ಹಿಂದೂಗಳ ದಬ್ಬಾಳಿಕೆಯಿಂದ ಅಸ್ಪೃಶ್ಯರನ್ನು ಸಂರಕ್ಷಿಸುವ ಸಲುವಾಗಿ ಡಾ. ಅಂಬೇಡ್ಕರ್ ‘ಅಲ್ಪಸಂಖ್ಯಾತರ ಸಮಿತಿ’ಗೆ “ಸಮಾನ ಪೌರತ್ವ, ಮೂಲಭೂತ ಹಕ್ಕು, ಸಮಾನ ಹಕ್ಕುಗಳ ಮುಕ್ತ ಅನುಭೋಗ, ಪೌರತ್ವ ಉಲ್ಲಂಘಿಸುವ ಅಪರಾಧ, ನಿಮ್ನವರ್ಗಗಳು ಮತ್ತು ಸಾಮಾಜಿಕ ಬಹಿಷ್ಕಾರವನ್ನು ಕಾನೂನಿನನ್ವಯ ಶಿಕ್ಷೆಗೊಳಪಡಿಸಬಹುದಾದ ಅಪರಾಧ ಎಂದು ಘೋಷಿಸುವುದು, ತಾರತಮ್ಯದ ವಿರುದ್ಧ ರಕ್ಷಣೆ, ಶಾಸಕಾಂಗಗಳಲ್ಲಿ ತಕ್ಕ ಪ್ರಾತಿನಿಧ್ಯ, ಸೇವಾವರ್ಗಗಳಲ್ಲಿ ತಕ್ಕ ಪ್ರಾತಿನಿಧ್ಯ, ಪೂರ್ವಗ್ರಹದ ವರ್ತನೆ ಅಥವಾ ಹಿತಾಸಕ್ತಿಯ ಅಲಕ್ಷ್ಯದ ವಿರುದ್ಧ ಪರಿಹಾರ, ವಿಶೇಷಾ ಇಲಾಖಾ ರಕ್ಷಣೆ, ನಿಮ್ನವರ್ಗಗಳು ಮತ್ತು ಮಂತ್ರಿಮಂಡಲ” ಎಂಬ ಷರತ್ತುಗಳನ್ನು ಒಳಗೊಂಡ ಅಸ್ಪೃಶ್ಯರ ರಾಜಕೀಯ ರಕ್ಷಣೋಪಾಯದ ಮನವಿ ಪತ್ರವನ್ನು ಸಲ್ಲಿಸಿದರು.

ಎರಡನೆಯ ದುಂಡು ಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್ ಪ್ರತಿನಿಧಿಯಾಗಿ ಭಾಗವಹಿಸಿದ ಗಾಂಧೀಜಿಯವರು, ನಾನು ನಿಜವಾದ ಅಸ್ಪೃಶ್ಯರ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತ ಅಂಬೇಡ್ಕರ್ ಹಾಗೂ ಅಸ್ಪೃಶ್ಯರ ವಿಚಾರದಲ್ಲಿ ವಂಚನೆಯಿಂದ ನಡೆದುಕೊಂಡ ರೀತಿಯನ್ನು ಇಲ್ಲಿ ಚರ್ಚಿಸಲಾಗಿದೆ. ಬ್ರಿಟಿಷ್ ಸರ್ಕಾರ ಭಾರತಕ್ಕೆ “ಅಧಿಕಾರ ಹಸ್ತಾಂತರ ಮಾಡಲೇಬೇಕಾದ ಪ್ರಸಂಗ ಬಂದರೆ ಅಧಿಕಾರವು ಯಾವುದೇ ಒಂದು ಗುಂಪಿನ-ಮುಸಲ್ಮಾನರೆ ಆಗಲಿ ಅಥವಾ ಹಿಂದೂಗಳೆ ಆಗಲಿ-ಅವರ ಕೆಲವೇ ಜನರ ಕೈಗೆ ಹೋಗದಂತೆ ಜಾಗ್ರತೆ ವಹಿಸಿ, ಅಧಿಕಾರದಲ್ಲಿ ಎಲ್ಲ ಕೋಮಿನವರು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಪಾಲ್ಗೊಳ್ಳುವ ಅವಕಾಶ ಸಿಗಲಿ” ಎಂದು ಹೇಳಿದ ಡಾ. ಅಂಬೇಡ್ಕರ್ ಪ್ರಬಲವಾಗಿ ನಿಮ್ನವರ್ಗಗಳ ರಾಜಕೀಯ ಪ್ರಾತಿನಿಧ್ಯದ ಹಕ್ಕೊತ್ತಾಯವನ್ನು ಮಂಡಿಸಿದರು. ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡಿದರೆ ‘ನನ್ನ ಪ್ರಾಣವನ್ನು ಪಣಕ್ಕೆ ಇಟ್ಟಾದರೂ ಅದನ್ನು ವಿರೋಧಿಸುತ್ತೇನೆ’ ಎಂದು ಹೇಳಿದ ಗಾಂಧೀಜಿಯವರು ಯರವಾಡ ಜೈಲಿನಲ್ಲಿ ಉಪವಾಸ ಕುಳಿತು ಅಸ್ಪೃಶ್ಯರ ಬಿಡುಗಡೆಗಾಗಿ ಡಾ. ಅಂಬೇಡ್ಕರ್ ಹೋರಾಟ ಮಾಡಿ ತಂದ ವಿಶೇಷ ಮತದಾನದ ಹಕ್ಕನ್ನು ವಿರೋಧಿಸಿ, ವಿಶೇಷ ಮತದಾನದ ಹಕ್ಕನ್ನು ಹಿಂಪಡೆಯುವಲ್ಲಿ ‘ಪೂನಾ ಒಪ್ಪಂದ’ದ(24ನೇ ಸೆಪ್ಟೆಂಬರ್ 1932) ಮೂಲಕ ಯಶಸ್ವಿಯಾಗುತ್ತಾರೆ. ಗಾಂಧೀಜಿಯವರ ಈ ಉಪವಾಸ ಸತ್ಯಾಗ್ರಹವನ್ನು “ಅದೊಂದು ಕೀಳು, ಹೊಲಸು ಕ್ರಿಯೆಯಾಗಿತ್ತು. ಅದು ಅಸ್ಪೃಶ್ಯರ ಒಳಿತಿಗಾಗಿರದೆ ಅವರ ಅವನತಿಯ ಉದ್ದೇಶ ಹೊಂದಿತ್ತು” ಎಂಬುದಾಗಿ ಡಾ. ಅಂಬೇಡ್ಕರ್ ಕಟುವಾಗಿ ವಿರೋಧಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
image 4 5
ಎರಡನೇ ದುಂಡುಮೇಜಿನ ಸಭೆಯಲ್ಲಿ ಗಾಂಧೀಜಿ

ಬಹುಶಃ ಪೂನಾ ಒಪ್ಪಂದದ ಮೂಲಕ ಡಾ. ಅಂಬೇಡ್ಕರ್ ಹಾಗೂ ದಲಿತರಿಗೆ ತಾವು ಎಸಗಿದ ವಂಚನೆಯ ಅರಿವಾದ ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷವು ಪಾಪಪ್ರಜ್ಞೆಯಿಂದ ನಾವು ನಿಮ್ಮ ಪರ ಎಂದು ದಲಿತರನ್ನು ನಂಬಿಸಲು ಮಾಡಿದ ಹಗಲು ವೇಷದ ನಾಟಕವನ್ನು ಈ ಕೃತಿ (ಗಾಂಧಿ ಮತ್ತು ಕಾಂಗ್ರೆಸ್‌ ಅಸ್ಪೃಶ್ಯರಿಗೆ ಮಾಡಿದ್ದೇನು?) ಬಯಲಾಗಿಸಿದೆ. 25ನೇ ಸೆಪ್ಟೆಂಬರ್ 1932ರಂದು ಬೊಂಬಾಯಿಯಲ್ಲಿ ನಡೆದ ಸಭೆಯಲ್ಲಿ, ಹಿಂದೂ ಸವರ್ಣೀಯರು ದಲಿತರಿಗೆ ಸಾರ್ವಜನಿಕ ಬಾವಿ, ಶಾಲೆ, ರಸ್ತೆ, ಸಂಸ್ಥೆ, ದೇವಾಲಯಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕೆಂಬ ಗೊತ್ತುವಳಿ ಹೊರಡಿಸುತ್ತಾರೆ. ಇದರಂತೆ ದಲಿತರಿಗೆ ಎಲ್ಲೆಲ್ಲಿ ಮುಕ್ತ ಪ್ರವೇಶವಕಾಶವನ್ನು ಕಲ್ಪಿಸಲಾಯಿತು ಎಂಬುದನ್ನು ಗಾಂಧೀಜಿಯವರು ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ‘ವಾರದಿಂದ ವಾರಕ್ಕೆ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸುತ್ತಾರೆ. ವ್ಯಂಗ್ಯವೆಂದರೆ, ದಲಿತರ ಪ್ರವೇಶಕ್ಕಾಗಿ ತೆರೆದದ್ದು ಹಾಳುಬಿದ್ದ, ನಾಯಿ ಕತ್ತೆಗಳಿಗೆ ಆಶ್ರಯ ನೀಡಿದ್ದ ಕೆಲವು ದೇವಾಲಯಗಳನ್ನು. ಗಾಂಧೀಜಿಯವರ ಹುಟ್ಟೂರಾದ ಗುಜರಾತಿನಲ್ಲಿ ಒಂದು ದೇವಾಲಯವೂ ಅಸ್ಪೃಶ್ಯರಿಗಾಗಿ ತೆರೆಯಲಿಲ್ಲ ಎಂಬುದು ದುರಂತದ ಸಂಗತಿ. ಇದನ್ನರಿತ ಡಾ. ಅಂಬೇಡ್ಕರ್ ‘ನಿಮ್ನವರ್ಗದವರಿಗೆ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಹಂಬಲವಿದೆಯೇ ಹೊರತು, ಪೊಳ್ಳು ದೇವಾಲಯಗಳನ್ನು ಪ್ರವೇಶಿಸುವುದಲ್ಲ. ನಿಮ್ನವರ್ಗದವರಿಗೆ ಬೇಕಾದ ಧರ್ಮ ಎಂದರೆ ಸರಿಸಮಾನತೆಯನ್ನು ಸಮಾಜದಲ್ಲಿ ನೀಡಬಹುದಾದ ಧರ್ಮ. ನಿಮ್ನವರ್ಗದವರು ಅಸಮಾನತೆಯನ್ನು ಎತ್ತಿಹಿಡಿಯುವ ಧರ್ಮವನ್ನು ಸಹಿಸಲಾರರು. ಹಿಂದೂ ಸಮಾಜವು ವರ್ಗ, ಶ್ರೇಣಿಗಳಿಂದ ಕೂಡಿದೆ. ಅಸಮಾನತೆಯೇ ಅದರ ತಳಹದಿ. ಸ್ವಾಭಿಮಾನಕ್ಕೆ ಕಳಂಕಪ್ರಾಯವಾಗಿರುವ ಚಾತುರ್ವರ್ಣ ಪದ್ಧತಿಯಿಂದಲೇ ಅಸಮಾನತೆ, ಜಾತಿ ಪದ್ಧತಿ, ಅಸ್ಪೃಶ್ಯತೆ ತಲೆ ಎತ್ತಿದ್ದು, ಆ ಪದ್ಧತಿಯನ್ನು ಬೇರು ಸಹಿತ ಕಿತ್ತುಬಿಸಾಡಲೇಬೇಕು. ನಿಮ್ನವರ್ಗದವರು ದೇವಾಲಯ ಪ್ರವೇಶವನ್ನು ತಿರಸ್ಕರಿಸುವರಲ್ಲದೆ, ಹಿಂದೂಧರ್ಮವನ್ನೇ ತಿರಸ್ಕರಿಸಿದರೂ ಅಚ್ಚರಿಪಡಬೇಕಾಗಿಲ್ಲ’ ಎಂದು ಕಿಡಿಕಾರುತ್ತಾರೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)

ಅಸ್ಪೃಶ್ಯರನ್ನು ಕರುಣೆಯಿಂದಲೇ ಕೊಲ್ಲುವ ಕಾಂಗ್ರೆಸ್‌ನ ಕುತಂತ್ರದ ಭಾಗವಾಗಿ ಗಾಂಧೀಜಿಯವರ ಯೋಜನೆಯಂತೆ 30ನೇ ಸೆಪ್ಟಂಬರ್ 1932ರಂದು ಬೊಂಬಾಯಿಯ ಕೌಸಜೀ ಜಹಂಗೀರ ಸಭಾಂಗಣದಲ್ಲಿ ಮದನಮೋಹನ ಮಾಳವೀಯರ ಅಧ್ಯಕ್ಷತೆಯಲ್ಲಿ ನಡೆದ ಹಿಂದೂಗಳ ಸಭೆಯಲ್ಲಿ “ಅಖಿಲ ಭಾರತ ಅಸ್ಪೃಶ್ಯತಾ ನಿವಾರಣೆ ಸಂಘ”ವನ್ನು ಸ್ಥಾಪಿಸಲಾಯಿತು. ಈ ಸಂಘದ ಪ್ರಧಾನ ಕಚೇರಿಯನ್ನು ದೆಹಲಿಯ ಬರ್ಲಾ ಭವನದಲ್ಲಿ ಸ್ಥಾಪಿಸಿ, ಜಿ. ಡಿ. ಬರ್ಲಾ ಅದರ ಅಧ್ಯಕ್ಷರಾಗಿ, ಅಮೃತಲಾಲ್ ವಿ. ಠಕ್ಕರ್ ಕಾರ್ಯದರ್ಶಿಯಾಗಿ ನೇಮಕವಾದರು. ಗಾಂಧೀಜಿಯವರು 9ನೇ ಡಿಸೆಂಬರ್ 1932ರಂದು ಈ ಸಂಘದ ಹೆಸರನ್ನು “ಅಸ್ಪೃಶ್ಯರ ಸೇವಾ ಸಂಘ” ಎಂದು ಬದಲಿಸಿದರು. ಈ ಹೆಸರೂ ಸರಿಕಾಣದೆ, ಕೊನೆಗೆ ಗಾಂಧೀಜಿಯವರು “ಹರಿಜನ ಸೇವಕ ಸಂಘ” ಎಂದು ಹೆಸರಿಟ್ಟರು. ಮೊದಲಿಗೆ ಸಂಘಕ್ಕೆ ‘ಅಸ್ಪೃಶ್ಯತಾ ನಿವಾರಣೆ ಸಂಘ’ ಎಂದು ಹೆಸರಿಟ್ಟ ಗಾಂಧೀಜಿಯವರು, ನಂತರದಲ್ಲಿ ಸಂಘದ ಹೆಸರನ್ನು ಬದಲಾಯಿಸುತ್ತ, ‘ಅಸ್ಪೃಶ್ಯತಾ ನಿವಾರಣೆ’ಗೆ ಬದಲಾಗಿ ‘ಅಸ್ಪೃಶ್ಯರ/ಹರಿಜನರ ಸೇವಾ’ ಎಂಬ ಪರಿಭಾಷೆಯನ್ನು ಬಳಸುತ್ತಾರೆ. ಅಸ್ಪೃಶ್ಯತೆಯನ್ನು ನಿವಾರಿಸಬೇಕೆಂಬುದು ಕಾಂಗ್ರೆಸ್‌ನ ಮುಖ್ಯ ಕಾಳಜಿಯಾಗಿರಲಿಲ್ಲ ಎಂಬುದನ್ನು ಇದು ಹೇಳುತ್ತದೆ. ಅಸ್ಪೃಶ್ಯರ ಸೇವೆ ಮಾಡುವುದು ಸಂಘದ ಉದ್ದೇಶವಾಗಿದೆ ಎಂಬುದಾಗಿ ದಲಿತರ ಕಣ್ಣೊರೆಸುವ ನಾಟಕವಾಡುತ್ತಾರೆ. ವಾಸ್ತವದಲ್ಲಿ ದಲಿತರು ಬಯಸಿದ್ದು ‘ಅಸ್ಪೃಶ್ಯತೆಯ ನಿವಾರಣೆಯನ್ನೇ ಹೊರತು, ಸೇವೆಯನ್ನಲ್ಲ ಎಂಬುದು ಸ್ಪಷ್ಟ.

3ನೇ ನವೆಂಬರ್ 1932ರಂದು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಪತ್ರಿಕಾ ಹೇಳಿಕೆ ಮೂಲಕ “ಸಂಘದ ಉದ್ದೇಶ ನಿಮ್ನವರ್ಗದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಸುಧಾರಿಸುವುದಾಗಿದೆ. ಜಾತಿ ನಿರ್ಮೂಲನೆ, ಸಹಭೋಜನ, ಅಂತರಜಾತಿ ವಿವಾಹ ಇದರ ವ್ಯಾಪ್ತಿಗೆ ಬರುವುದಿಲ್ಲ” ಎಂದು ತಮ್ಮ ಜಾತಿವಾದಿ ಧೋರಣೆಯನ್ನು ಖಚಿತಪಡಿಸುತ್ತಾರೆ. ಸಂಘದ ಕಾರ್ಯಚಟುವಟಿಕೆಗಾಗಿ 8 ಲಕ್ಷ ಹಣವನ್ನು ಸಂಗ್ರಹಿಸಲಾಯಿತು. ಆದರೆ ಖರ್ಚು ಮಾಡಿದ ಹಣ ಅರ್ಧಕ್ಕಿಂತಲೂ ಕಡಿಮೆ. ಪರಿಶಿಷ್ಟವರ್ಗಕ್ಕೆ ಸೇರಿದ ಕೆಲವರು ‘ಹರಿಜನ ಸೇವಕ ಸಂಘ’ದ ಆಡಳಿತ ಮಂಡಳಿಯಲ್ಲಿ ನಮಗೂ ಪ್ರಾತಿನಿಧ್ಯ ನೀಡಿ ಎಂದು ಮಾಡಿದ ಮನವಿಯನ್ನು ನಿರಾಕರಿಸಿದ ಗಾಂಧೀಜಿಯವರು ‘ಹರಿಜನ ಸೇವಕ ಸಂಘಕ್ಕಾಗಿ ಬೇಕಾದ ಧನಸಹಾಯವು ಹಿಂದೂಗಳಿಂದಲೇ ಬಂದಿರುವುದರಿಂದ ಅಸ್ಪೃಶ್ಯರಿಗೆ ಕಾರ್ಯಕಾರಿ ಸಮಿತಿಯಲ್ಲಿ ಯಾವ ಅಧಿಕಾರವೂ ಇಲ್ಲ’ ಎನ್ನುತ್ತಾರೆ. ‘ಹರಿಜನ ಸೇವಕ ಸಂಘ’ (ಅಸ್ಪೃಶ್ಯತಾ ನಿವಾರಣಾ ಲೀಗ್)ದ ಕಾರ್ಯದರ್ಶಿಗಳಾದ ಎ. ವಿ. ಠಕ್ಕರ್ ಅವರಿಗೆ ಪತ್ರ ಬರೆದ, ಸಂಘದ ಸದಸ್ಯರಾಗಿದ್ದ ಡಾ. ಅಂಬೇಡ್ಕರ್, ಸಂಘವು ಮಾಡಬೇಕಾಗಿರುವ ಕಾರ್ಯಗಳ ಕುರಿತು ಚರ್ಚಿಸುತ್ತ “ನಾಗರಿಕ ಹಕ್ಕುಗಳನ್ನು ದೊರಕಿಸಲು ಚಳವಳಿ ಮಾಡುವುದು, ನಿಮ್ನವರ್ಗದವರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು, ಸಾಮಾಜಿಕ ಸಂಪರ್ಕದ ಮೂಲಕ ಸವರ್ಣೀಯ ಹಿಂದೂಗಳು ತಮ್ಮ ಮನೆಗಳಲ್ಲಿ ನಿಮ್ನವರ್ಗದವರನ್ನು ಸೇವಕರಂತೆ ನೇಮಿಸಿಕೊಳ್ಳುವುದು, ನಿಮ್ನವರ್ಗಗಳ ವಿಕಾಸಕ್ಕೆ ಮೀಸಲಾದ ಸಂಸ್ಥೆಗಳನ್ನು ಏಜೆನ್ಸಿಗಳನ್ನಾಗಿ ನೇಮಕ ಮಾಡಿಕೊಳ್ಳುವುದು” ಎಂಬ ಸಲಹೆಗಳನ್ನು ನೀಡುತ್ತಾರೆ. ಆದರೆ, ಕಾರ್ಯದರ್ಶಿಗಳಿಂದ ತಮ್ಮ ಪತ್ರಕ್ಕೆ ಯಾವುದೇ ಉತ್ತರ ಬರದೆ ಇದ್ದ ಕಾರಣ ಹಾಗೂ ತಮ್ಮ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ತಾವು ಸಂಘದಲ್ಲಿರುವುದು ವ್ಯರ್ಥವೆಂದು ಭಾವಿಸಿದ ಡಾ. ಅಂಬೇಡ್ಕರ್ ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತ, ‘ಹರಿಜನ ಸೇವಕ ಸಂಘ’ವು ಅಸ್ಪೃಶ್ಯರನ್ನು ಕಾಂಗ್ರೆಸ್ ಪರ ತರಬೇತಿಗೊಳಿಸುವ, ಸ್ವತಂತ್ರದಿಂದ ತಲೆ ಎತ್ತಿ ಬಾಳುವೆ ನಡೆಸದಂತೆ, ಹಿಂದೂ ಸಮಾಜದ ಬಾಲಬಡುಕರಂತೆ ಮಾಡುವ ಉದ್ದೇಶದ ಸಂಘಟನೆಯಾಗಿತ್ತು’ ಎಂಬುದಾಗಿ ಟೀಕಿಸಿದ್ದಾರೆ.

yaravada
ಯರವಾಡ ಜೈಲಿನಲ್ಲಿ ಡಾ.ಅಂಬೇಡ್ಕರ್ ಮತ್ತು ಗಾಂಧಿ (ಸಾಂದರ್ಭಿಕ ಚಿತ್ರ)

1937ರ ಪ್ರಾಂತೀಯ ಚುನಾವಣೆಯ ಫಲಿತಾಂಶದ ಅಂಕಿಅಂಶಗಳನ್ನು ಸಮೀಕ್ಷೆಗೆ ಒಳಪಡಿಸುವ ಮೂಲಕ ಕಾಂಗ್ರೆಸ್ ಪಕ್ಷವು ಹೇಗೆ ಅಸ್ಪೃಶ್ಯರ ಪರವೂ ಅಲ್ಲ, ಪ್ರತಿನಿಧಿಯೂ ಅಲ್ಲ ಎಂಬುದನ್ನು ಚರ್ಚಿಸಲಾಗಿದೆ. ಅಂದಿನ ಪತ್ರಿಕಾ ಮಾಧ್ಯಮವು ಕಾಂಗ್ರೆಸ್, ಗಾಂಧೀಜಿ ಪರವಾಗಿ ವಕಾಲತ್ತು ವಹಿಸುತ್ತ, ದಲಿತರನ್ನು ಹಾಗೂ ಕಾಂಗ್ರೆಸ್ಸೇತರರನ್ನು ಬ್ರಿಟಿಷರ ದಲ್ಲಾಳಿಗಳೆಂದು ಅಪಪ್ರಚಾರ ಮಾಡುವ ಮೂಲಕ ಹೇಗೆ ದ್ರೋಹ ಎಸಗಿದವು ಎಂಬುದನ್ನು ವಿವರಿಸಲಾಗಿದೆ. ಅಸ್ಪೃಶ್ಯರನ್ನು ಹಾಗೂ ಡಾ. ಅಂಬೇಡ್ಕರ್ ಅವರನ್ನು ಬ್ರಿಟಿಷರ ಕೈಗೊಂಬೆಗಳು ಎಂಬ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿದ ಕಾಂಗ್ರೆಸ್‌ನ “ಸ್ವಾತಂತ್ರ‍್ಯ ಹೋರಾಟ” ಆಂದೋಲನವನ್ನು ಕೇವಲ ಹಿಂದೂಗಳಿಂದ ಮಾತ್ರ ನಡೆಸಲಾಗಿದ್ದು, ಅಸ್ಪೃಶ್ಯರು ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಕಾರಣ, ಸ್ವತಂತ್ರ ಭಾರತದಲ್ಲಿ ಹಿಂದೂಗಳ ಪ್ರಾಬಲ್ಯಕ್ಕೆ ಗುರಿಯಾಗಬಹುದೆಂಬ ಅಂಜಿಕೆ. ಹಾಗಾಗಿ ಅಸ್ಪೃಶ್ಯರಿಗೆ ರಕ್ಷಣೆ ನೀಡುವ ಸಂವಿಧಾನ ಬೇಕು. ಇಲ್ಲವಾದಲ್ಲಿ ಇವರು ಹಿಂದೂಗಳ ದಬ್ಬಾಳಿಕೆಗೆ ಗುರಿಯಾಗುತ್ತಾರೆ ಎಂಬ ವಾದವನ್ನು ಡಾ. ಅಂಬೇಡ್ಕರ್ ಮಂಡಿಸುತ್ತಾರೆ.

ಅಸ್ಪೃಶ್ಯರು ಹಿಂದೂ ಜನಾಂಗದ ಅವಿಭಾಜ್ಯ ಅಂಗವೆಂದು ಹೇಳುವ ಕಾಂಗ್ರೆಸ್‌ನ ವಾದವನ್ನು ನಿರಾಕರಿಸುವ ಡಾ. ಅಂಬೇಡ್ಕರ್, ಅಸ್ಪೃಶ್ಯರು ಹಿಂದೂ ಸಮಾಜದ ಪ್ರತ್ಯೇಕ ಅಂಗ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಸ್ಪೃಶ್ಯರನ್ನು ಹಿಂದೂ ಸಮಾಜದ ಅಂಗವೆಂದು ಪರಿಗಣಿಸಲು ಸಾಧ್ಯವಿಲ್ಲ, ಕಾರಣ ಆ ಧರ್ಮದಲ್ಲಿ ಸಹಭೋಜನಕ್ಕೆ, ಅಂತರಜಾತಿ ವಿವಾಹಕ್ಕೆ ಅವಕಾಶವೇ ಇಲ್ಲ. ಹಿಂದೂ ಧರ್ಮವೇ ಬೇರ್ಪಡೆಯನ್ನು ಬೋಧಿಸುತ್ತದೆ. ಜಾತೀಯತೆ, ಅಸ್ಪೃಶ್ಯತೆಗಳೂ ಹಿಂದೂಗಳು ಆಚರಿಸಲೇಬೇಕಾದ ಸಿದ್ಧಾಂತಗಳು. ಹಿಂದುತ್ವ ಮತ್ತು ಸಾಮಾಜಿಕ ಐಕ್ಯತೆಗಳೆರಡೂ ಕೂಡಿರಲು ಸಾಧ್ಯವೇ ಇಲ್ಲ. ಸಾಮಾಜಿಕ ಅನೈಕ್ಯ ಹಿಂದುತ್ವದ ಮತ್ತೊಂದು ಹೆಸರು. ಬ್ರಿಟಿಷರು ಅಸ್ಪೃಶ್ಯರಿಗೆ ಸೈನ್ಯದಲ್ಲಿ ಅವಕಾಶ ಹಾಗೂ ಶಿಕ್ಷಣ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಕಾರಣದಿಂದಾಗಿ ಅವರು ಹಿಂದುತ್ವದಿಂದ ಬಿಡುಗಡೆಗೊಳ್ಳಲು ಸಾಧ್ಯವಾಗಿದ್ದು. ‘ರಾಜಕೀಯ ಅಧಿಕಾರವು ಆಳುವ ವರ್ಗದವರ ಕೈಗೆ ಬೀಳದಂತೆ ತಡೆಯಲು ದೇಶದ ಸಾಮಾಜಿಕ ಸಂಸ್ಥೆಗಳೊಡನೆ ಸಂವಿಧಾನವನ್ನು ಜೋಡಿಸುವುದು ಮೀಸಲಾತಿ ಬೇಡಿಕೆಯ ಮುಖ್ಯೋದ್ದೇಶ’ ಎಂದು ಹೇಳುವ ಡಾ. ಅಂಬೇಡ್ಕರ್, ಜಾತಿ ವ್ಯವಸ್ಥೆಯಲ್ಲಿ ನಿಮ್ನವರ್ಗಗಳಿಗೆ ಮೀಸಲಾತಿ ಹಾಗೂ ಶಾಸಕಾಂಗ, ಆಡಳಿತಾಂಗ, ಸಾರ್ವಜನಿಕ ಸೇವಾವಲಯಗಳಲ್ಲಿ ಪ್ರಾತಿನಿಧ್ಯ ಎಷ್ಟು ಮುಖ್ಯ ಎಂಬುದನ್ನು ವಿಶ್ಲೇಷಿಸಿದ್ದಾರೆ. ಅಸ್ಪೃಶ್ಯತೆ ನೈತಿಕ ಅಪರಾಧವೆಂದು ತಿಳಿಯದ ಹಿಂದೂಗಳಿಗೆ ಆತ್ಮಸಾಕ್ಷಿ ಇರಲು ಸಾಧ್ಯವಿಲ್ಲ ಎಂಬುದಿಲ್ಲಿ ಚರ್ಚೆಗೆ ಒಳಗಾಗಿದೆ.

ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)

‘ಗುಲಾಮರನ್ನಾಗಿಸುವ ಸರ್ವಾಧಿಕಾರಕ್ಕೆ ಸ್ವೇಚ್ಛಾಧಿಕಾರ ನೀಡದಿರಿ’ ಎಂದು ಬ್ರಿಟಿಷರಿಗೆ ಮನವಿ ಮಾಡುವ ಡಾ. ಅಂಬೇಡ್ಕರ್, ರಾಷ್ಟ್ರದ ಸ್ವಾತಂತ್ರ‍್ಯ ಹಾಗೂ ಜನತೆಯ ವಿಮೋಚನೆಯ ನಡುವಿನ ವ್ಯತ್ಯಾಸವನ್ನು ಗ್ರಹಿಸದ ಹೊರತು, ಕಾಂಗ್ರೆಸ್ ಇಂಡಿಯಾದ ಆಳುವ ವರ್ಗದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದೆಯೋ? ಅಥವಾ ಜನತೆಯ ಸ್ವಾತಂತ್ರ್ಯಕ್ಕಾಗಿಯೊ? ಎಂಬ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ಅಸಮಾನತೆಯನ್ನು ತನ್ನ ಅಧಿಕೃತ ಸಿದ್ಧಾಂತವನ್ನಾಗಿಸಿಕೊಂಡಿರುವ ಬ್ರಾಹ್ಮಣವಾದವು ಹೇಗೆ ಆಳುವ ವರ್ಗವನ್ನು ಸೃಷ್ಟಿಸಿ ಅಸ್ಪೃಶ್ಯ ಸಮುದಾಯಗಳನ್ನು ಗುಲಾಮರನ್ನಾಗಿಸಿದೆ ಎಂಬುದನ್ನು ವಿವರಿಸಲಾಗಿದೆ. 1918ರಲ್ಲಿ ಬ್ರಾಹ್ಮಣೇತರರು ಮತ್ತು ಹಿಂದುಳಿದ ವರ್ಗದ ಜನರು ತಮಗೂ ಶಾಸನ ಸಭೆಗಳಲ್ಲಿ ಪ್ರತ್ಯೇಕ ಪ್ರಾತಿನಿಧ್ಯ ಸಿಗಬೇಕೆಂದು ಚಳವಳಿ ಮಾಡುತ್ತಾರೆ. ಆ ಸಂದರ್ಭದಲ್ಲಿ ತಿಲಕ್ ಅವರು ಬ್ರಾಹ್ಮಣೇತರರು ಮತ್ತು ಹಿಂದುಳಿದ ವರ್ಗದ ಜನರನ್ನು ಗಾಣಿಗರು, ತಂಬಾಕನ್ನು ಮಾರುವವರು, ಅಗಸರು ಎಂದು ಕರೆದು ಅವಮಾನಿಸುತ್ತ, ಇಂಥವರಿಗೆ ಶಾಸನ ಸಭೆಗಳಲ್ಲಿ ಕೆಲಸವೆ? ಎಂದು ಹಂಗಿಸುತ್ತಾರೆ. ಇಂತಹ ಧೋರಣೆವುಳ್ಳವರಿಗೆ ಅಧಿಕಾರ ಸಿಕ್ಕರೆ ನಿಮ್ನವರ್ಗಗಳನ್ನು ಹೇಗೆ ನಡೆಸಿಕೊಳ್ಳಬಹುದೆಂದು ಚರ್ಚಿಸಿದ್ದಾರೆ.

‘ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ಅಳಿಸಿಹಾಕಬೇಕೆಂಬ ಅಭಿಪ್ರಾಯ ಹೊಂದಿದ ಗಾಂಧೀಜಿಯವರನ್ನು ಅಸ್ಪೃಶ್ಯರು ಸ್ನೇಹಿತರೆಂದು ನಂಬಲಾರರು. ಅಸ್ಪೃಶ್ಯತೆಯು ಜಾತಿ ವ್ಯವಸ್ಥೆಯ ಫಲಶೃತಿಯಾದ್ದರಿಂದ ಜಾತಿ ವ್ಯವಸ್ಥೆಯನ್ನು ಅಳಿಸಿಹಾಕದೆ ಅಸ್ಪೃಶ್ಯತೆಯ ನಿವಾರಣೆಯಾಗದು ಎಂಬ ಸರಳ ಸತ್ಯವನ್ನು ಗಾಂಧಿ ಅರಿಯುವುದು ಅವಶ್ಯಕ’ ಎಂಬುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.

ಗಾಂಧೀಜಿಯವರ ಬಗೆಗೆ ಅಸ್ಪೃಶ್ಯರ ನಿಲುವೇನು? ಅಸ್ಪೃಶ್ಯರ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರವೇನು? ಎಂಬ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಚರ್ಚಿಸಲಾಗಿದೆ. ಸನಾತನ ವಾತಾವರಣದಲ್ಲಿ ಬೆಳೆದ ಗಾಂಧೀಜಿಯವರು ಅಸ್ಪೃಶ್ಯತೆ ಒಂದು ಕಳಂಕ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿಯೇ ಅರ್ಥಮಾಡಿಕೊಂಡಿದ್ದರು, ಆಗಾಗ ಜಾತಿ ಕಟ್ಟಳೆಗಳನ್ನು ಉಲ್ಲಂಘಿಸುತ್ತಿದ್ದರು. ಆದರೆ, ತರುವಾಯದಲ್ಲಿ ಅಸ್ಪೃಶ್ಯತೆಯ ನಿವಾರಣೆಗಾಗಿ ಗಾಂಧೀಜಿ ಕೈಗೊಂಡ ಕ್ರಮಗಳಾವುವು? ಅಸ್ಪೃಶ್ಯರ ಪರವಾಗಿ ಮಾತನಾಡುತ್ತಿದ್ದ ಗಾಂಧೀಜಿ ಅಸ್ಪೃಶ್ಯತೆಯ ನಿವಾರಣೆಯ ಬಗೆಗೆ ಚಿಂತಿಸಲಿಲ್ಲ ಏಕೆ? ಹಿಂದೂ-ಮುಸ್ಲಿಂ ಸೌಹಾರ್ದತೆಯ ಸಲುವಾಗಿ, ಆಶ್ರಮವಾಸಿಗಳ ಅನೈತಿಕ ಕಾರ್ಯಗಳ ಪ್ರಾಯಶ್ಚಿತ್ತಕ್ಕಾಗಿ ಹಾಗೂ ದಲಿತರಿಗೆ ವಿಶೇಷ ಮತದಾನದ ಹಕ್ಕು(ಕಮ್ಯುನಲ್ ಅವಾರ್ಡ್) ಸಿಗಬಾರದೆಂದು ಹೀಗೆ ಹಲವು ಉದ್ದೇಶಗಳಿಗಾಗಿ 21 ಬಾರಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡ ಗಾಂಧೀಜಿ ಒಮ್ಮೆಯೂ ಅಸ್ಪೃಶ್ಯತೆಯ ನಿವಾರಣೆಯನ್ನು ಒತ್ತಾಯಿಸಿ ಉಪವಾಸ ಕೈಗೊಳ್ಳಲಿಲ್ಲ ಏಕೆ? ಅಸ್ಪೃಶ್ಯರು ರಾಜ್ಯದ ಅಧಿಕಾರ ಅಂತಸ್ತನ್ನು ಪಡೆಯಲೇಬಾರದೆಂಬ ಅಭಿಪ್ರಾಯ ಹೊಂದಿದ್ದ ಗಾಂಧೀಜಿ ಅಸ್ಪೃಶ್ಯರ ಸ್ನೇಹಿತರಾಗಬಹುದೆ? ಕಾಂಗ್ರೆಸ್ ಪಕ್ಷದ ಸದಸ್ಯರು ಅಸ್ಪೃಶ್ಯತೆಯನ್ನು ಆಚರಿಸದಂತೆ ಕಡ್ಡಾಯ ನಿಯಮವನ್ನು ರೂಪಿಸಲಿಲ್ಲ ಏಕೆ? ಗುರುವಾಯೂರು ದೇವಾಲಯಕ್ಕೆ ಅಸ್ಪೃಶ್ಯರ ಪ್ರವೇಶವನ್ನು ಕಲ್ಪಿಸದಿದ್ದರೆ ಆಮರಣಾಂತ ಉಪವಾಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಗಾಂಧೀಜಿ ಉಪವಾಸ ಕೂರಲು ಇಲ್ಲ, ಅಸ್ಪೃಶ್ಯರಿಗಾಗಿ ಗುರುವಾಯೂರು ದೇವಾಲಯದ ಬಾಗಿಲು ತೆರೆಯಲೂ ಇಲ್ಲ. ಇದೊಂದು ವಿಪರ್ಯಾಸದ ಸಂಗತಿಯಾಗಿದ್ದು, ಗಾಂಧೀಜಿಯವರು ಅಸ್ಪೃಶ್ಯರ ಪರವಾಗಿ ಒಮ್ಮೆಯೂ ಉಪವಾಸ ವ್ರತ ಕೈಗೊಳ್ಳಲಿಲ್ಲ ಏಕೆ? ಅಸ್ಪೃಶ್ಯರು 1929ರಲ್ಲಿ ಸಾರ್ವಜನಿಕ ಬಾವಿ, ಮಂದಿರಗಳ ಪ್ರವೇಶಕ್ಕಾಗಿ ಒತ್ತಾಯಿಸಿ ಸತ್ಯಾಗ್ರಹ ಪ್ರಾರಂಭಿಸಿದಾಗ ಅದನ್ನು ಗಾಂಧೀಜಿ ಖಂಡಿಸಿದ್ದೇಕೆ? ಹರಿಜನ ಸೇವಕ ಸಂಘದಿಂದ ಅಸ್ಪೃಶ್ಯರನ್ನು ಗಾಂಧೀಜಿ ದೂರವಿಟ್ಟದ್ದು ಏಕೆ? ಕೇಂದ್ರೀಯ ಪ್ರಾಂತ್ಯದ ಡಾ. ಖರೆ ಅವರ ನೇತೃತ್ವದ ಕಾಂಗ್ರೆಸ್ ಮಂತ್ರಿ ಮಂಡಳಕ್ಕೆ ಪರಿಶಿಷ್ಟ ಜಾತಿಯ ಸದಸ್ಯರಾದ ಅಗ್ನಿಭೋಜ್ ಅವರ ಸೇರ್ಪಡೆಯನ್ನು ಗಾಂಧೀಜಿ ವಿರೋಧಿಸಿದ್ದೇಕೆ? ಎಂಬ ಬಹಳ ಮುಖ್ಯ ಪ್ರಶ್ನೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ಎಲ್ಲ ಕಾರಣಕ್ಕಾಗಿಯೇ ಅಸ್ಪೃಶ್ಯರು ಗಾಂಧೀಜಿಯವರನ್ನು ನಂಬಿಕೆಗೆ ಯೋಗ್ಯರಾದ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ. ‘ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ಅಳಿಸಿಹಾಕಬೇಕೆಂಬ ಅಭಿಪ್ರಾಯ ಹೊಂದಿದ ಗಾಂಧೀಜಿಯವರನ್ನು ಅಸ್ಪೃಶ್ಯರು ಸ್ನೇಹಿತರೆಂದು ನಂಬಲಾರರು. ಅಸ್ಪೃಶ್ಯತೆಯು ಜಾತಿ ವ್ಯವಸ್ಥೆಯ ಫಲಶೃತಿಯಾದ್ದರಿಂದ ಜಾತಿ ವ್ಯವಸ್ಥೆಯನ್ನು ಅಳಿಸಿಹಾಕದೆ ಅಸ್ಪೃಶ್ಯತೆಯ ನಿವಾರಣೆಯಾಗದು ಎಂಬ ಸರಳ ಸತ್ಯವನ್ನು ಗಾಂಧಿ ಅರಿಯುವುದು ಅವಶ್ಯಕ’ ಎಂಬುದು ಡಾ. ಅಂಬೇಡ್ಕರ್ ಅವರ ನಿಲುವಾಗಿತ್ತು.

‘ದಿ ಬಾಂಬೆ ಕ್ರಾನಿಕಲ್’ ಪತ್ರಿಕೆಯು 27ನೇ ಆಗಸ್ಟ್ 1940ರ ಸಂಚಿಕೆಯಲ್ಲಿ ಪ್ರಕಟಿಸಿದಂತೆ, ‘ಗೊಧವಿಯೆಂಬ ಅಹಮದಾಬಾದ್ನಲ್ಲಿನ ಸ್ಥಳದ ಹರಿಜನರು ತಮ್ಮ ಮಕ್ಕಳನ್ನು ಲೋಕಲ್ ಬೋರ್ಡ್ ಶಾಲೆಗೆ ಕಳುಹಿಸಿದ್ದಕ್ಕಾಗಿ ಸವರ್ಣೀಯರಿಂದ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಸುಮಾರು 42 ಹರಿಜನ ಕುಟುಂಬಗಳು ಊರನ್ನು ಬಿಟ್ಟು ತಾಲ್ಲೂಕು ಕೇಂದ್ರವಾದ ಸಾನಂದ ಪಟ್ಟಣಕ್ಕೆ ಗುಳೆ ಹೋದರು’. ‘ಮುಂಬೈ ಪ್ರಾಂತದ ಥಾನೆಯ ಅಸ್ಪೃಶ್ಯರ ನಾಯಕ, ಮುನ್ಸಿಪಾಲಿಟಿಯ ಮಾಜಿ ಉಪಾಧ್ಯಕ್ಷ ಎಂ. ಎಂ. ನಂದಗಾಂವಕರ್ ಅವರಿಗೆ 27ನೇ ಆಗಸ್ಟ್ 1943ರಲ್ಲಿ ಹಿಂದೂಗಳ ಫಲಾಹಾರಮಂದಿರದಲ್ಲಿ ಚಹಾ ನೀಡಲು ನಿರಾಕರಿಸಲಾಯಿತು’. ‘1935ರಲ್ಲಿ ಗುಜರಾತಿನ ಅಹಮದಾಬಾದ್ ಜಿಲ್ಲೆಯ ಕವಿತಾ ಗ್ರಾಮದ ಅಸ್ಪೃಶ್ಯರು ತಮ್ಮ ಮಕ್ಕಳನ್ನು ಆ ಗ್ರಾಮದ ಸಾರ್ವಜನಿಕ ಶಾಲೆಗೆ ಸೇರಿಸಲು ಸವರ್ಣೀಯರನ್ನು ಅನುಮತಿ ಕೇಳುತ್ತಾರೆ. ಇದರಿಂದ ಕೆರಳಿದ ಸವರ್ಣೀಯರು ಅಸ್ಪೃಶ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಾರೆ. ಇದಲ್ಲದೆ, ಅಸ್ಪೃಶ್ಯರು ಕುಡಿಯುವ ಬಾವಿಯ ನೀರಿಗೆ ಸೀಮೆ ಎಣ್ಣೆ ಬೆರೆಸಿ ಅವರಿಗೆ ಕುಡಿಯಲು ನೀರಿಲ್ಲದೆ ಸಂಕಟಪಡುವಂತೆ ಮಾಡುತ್ತಾರೆ. ಈ ಘಟನೆಗಳನ್ನು ಪ್ರಶ್ನಿಸದ ಗಾಂಧೀಜಿ, ಅಸ್ಪೃಶ್ಯರು ಕವಿತಾ ಗ್ರಾಮ ತೊರೆದು ಗುಳೆ ಹೊರಡುವುದು ಸೂಕ್ತವೆಂಬ ಉಚಿತ ಸಲಹೆ ನೀಡುತ್ತಾರೆ. ತಿರುವಾಂಕೂರಿನ ಸಾರ್ವಜನಿಕ ರಸ್ತೆಯನ್ನು ಉಪಯೋಗಿಸಲು ಅಸ್ಪೃಶ್ಯರಿಗೂ ಅವಕಾಶ ನೀಡಬೇಕೆಂದು 1924ರಲ್ಲಿ ವೈಕೊಮ್ ಚಳವಳಿ ನಡೆಯುತ್ತದೆ. ಈ ಚಳವಳಿಯಲ್ಲಿ ಭಾಗವಹಿಸಿದವರಿಗೆ ಸಿಖ್ಖರು ಊಟದ ವ್ಯವಸ್ಥೆ ಮಾಡಿದ ವಿಚಾರ ತಿಳಿದ ಗಾಂಧೀಜಿಯವರು ವಿನಾಕಾರಣ ವಿರೋಧಿಸುತ್ತಾರೆ. ದಲಿತ ವಿರೋಧಿಯಾದ ಗಾಂಧೀಜಿಯವರ ಈ ಬಗೆಯ ನಿಲುವನ್ನು ಮಹಾಭಾರತದಲ್ಲಿ ಬರುವ ‘ರಾಕ್ಷಸಿ ಪೂತನಿ’ ಹಾಗೂ ‘ಭೀಷ್ಮ, ಕಚ’ರು ನೈತಿಕ ಅಧಃಪತನದಿಂದ ಎಸಗಿದ ವಂಚನೆಗೆ ಹೋಲಿಸುತ್ತ, ಆಮೂಲಕ ಗಾಂಧೀಜಿ ದಲಿತರಿಗೆ ಎಸಗಿದ ವಿಶ್ವಾಸ ದ್ರೋಹ ಎಂತಹದ್ದು ಎಂಬುದನ್ನು ವಿಶ್ಲೇಷಿಸಿದ್ದಾರೆ.

‘ಸ್ವರಾಜ್ಯ ಸಿಗದೇ ಹೋದರೂ ಹೋಗಲಿ, ಆದರೆ ಅಸ್ಪೃಶ್ಯರಿಗೆ ಮಾತ್ರ ರಾಜಕೀಯ ಸ್ವಾತಂತ್ರ‍್ಯವನ್ನು ನೀಡಬಾರದೆಂಬ ಅಭಿಪ್ರಾಯ ಗಾಂಧಿಯವರಿಗಿತ್ತು’ ಎಂಬುದನ್ನು ಡಾ.ಅಂಬೇಡ್ಕರ್ ಹಲವು ಸಂದರ್ಭಗಳನ್ನು ಉಲ್ಲೇಖಿಸುವ ಮೂಲಕ ಸಾಬೀತುಪಡಿಸಿದ್ದಾರೆ. ‘ಶ್ರೀಮಾನ್ ಗಾಂಧಿಯವರು ಇಂದಿಗೂ ಅಸ್ಪೃಶ್ಯರ ವಿರುದ್ಧ ಯುದ್ಧದಲ್ಲಿ ತೊಡಗಿದ್ದಾರೆ. ಅವರು ಯಾವುದೇ ಗಳಿಗೆಯಲ್ಲಿ ಅಸ್ಪೃಶ್ಯರನ್ನು ಪೇಚಿಗೆ ಸಿಲುಕಿಸಬಹುದು. ಗಾಂಧಿಯವರನ್ನು ನಂಬಲು ಇನ್ನೂ ಸಮಯ ಬಂದಿಲ್ಲ. ಅಸ್ಪೃಶ್ಯರು ತಮ್ಮನ್ನು ತಾವೇ ಕಾಪಾಡಿಕೊಳ್ಳುವುದು ಉತ್ತಮ. ಅದಕ್ಕಾಗಿ ಶ್ರೀಮಾನ್ ಗಾಂಧಿಯವರ ಬಗ್ಗೆ ಎಚ್ಚರದಿಂದಿರಿ’ ಎಂದು ಡಾ. ಅಂಬೇಡ್ಕರ್ ಅಸ್ಪೃಶ್ಯರನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-2)

‘ಗಾಂಧೀವಾದ ಎಂದರೇನು? ಅದರ ಉದ್ದೇಶವೇನು? ಆರ್ಥಿಕ, ಸಾಮಾಜಿಕ ಸಮಸ್ಯೆಗಳ ಬಗೆಗಿನ ಅದರ ನಿಲುವೇನು? ಎಂಬ ಪ್ರಶ್ನೆಗಳ ಮೂಲಕ, ಗಾಂಧಿವಾದದ ಮಿತಿ, ದೌರ್ಬಲ್ಯವನ್ನು ವಿವೇಚನೆಗೆ ಒಳಪಡಿಸಲಾಗಿದೆ. ಸಾಮಾಜಿಕ ಸಮಸ್ಯೆಯಾದ ಜಾತಿ ವ್ಯವಸ್ಥೆಯನ್ನು ಕುರಿತು ಗಾಂಧೀಜಿಯವರು 1921-22ರಲ್ಲಿ ‘ನವಜೀವನ’ ಎಂಬ ಗುಜರಾತಿ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ:

• “ಹಿಂದೂ ಸಮಾಜವು ಇಂದಿನವರೆಗೂ ಗಟ್ಟಿಯಾಗಿ ನಿಲ್ಲಲು ಕಾರಣ ಅದು ಜಾತಿ ವ್ಯವಸ್ಥೆಯ ಮೇಲೆ ಸ್ಥಾಪಿತವಾಗಿರುವುದರಿಂದ.

• ಸ್ವರಾಜ್ಯದ ಬೀಜಗಳನ್ನು ಜಾತಿ ವ್ಯವಸ್ಥೆಯಲ್ಲಿಯೇ ಕಾಣಬಹುದು.

• ಜಾತಿ ವ್ಯವಸ್ಥೆಯನ್ನು ಸೃಷ್ಟಿಸುವ ಸಮುದಾಯವು ಅನನ್ಯ ಸಂಘಟನಾ ಚಾತುರ್ಯವನ್ನು ಪಡೆದಿರುತ್ತದೆ.

• ಪ್ರಾಥಮಿಕ ಶಿಕ್ಷಣದ ಪ್ರಸಾರಕ್ಕೆ ಜಾತಿ ವ್ಯವಸ್ಥೆ ಸಿದ್ಧ ಸಾಧನವನ್ನು ಹೊಂದಿದೆ.

• ಜಾತಿಗೆ ರಾಜಕೀಯ ಆಧಾರವಿದೆ. ಅದು ನ್ಯಾಯಾಂಗದ ಕೆಲಸವನ್ನು ಮಾಡಬಲ್ಲದು.

• ರಾಷ್ಟ್ರೀಯ ಐಕ್ಯತೆಯನ್ನು ಸ್ಥಾಪಿಸಲು ಸಹಭೋಜನ ಮತ್ತು ಅಂತರ್ಜಾತಿ ವಿವಾಹಗಳು ಅವಶ್ಯಕವಲ್ಲ.

• ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕೆ ಅವಕಾಶವಿಲ್ಲದ ಮಾತ್ರಕ್ಕೆ ಜಾತಿವ್ಯವಸ್ಥೆ ಕೆಟ್ಟದ್ದೆಂದು ಹೇಳಬಾರದು.

• ನಿಯಂತ್ರಣಕ್ಕೆ ಜಾತಿ ಇನ್ನೊಂದು ಹೆಸರು.

• ವಂಶಪರಂಪರೆಯಾಗಿ ಒಂದೇ ಉದ್ಯೋಗಕ್ಕೆ ಜೋತು ಬೀಳುವುದು ಜಾತಿವ್ಯವಸ್ಥೆಯ ಅತಿ ಮುಖ್ಯ ಲಕ್ಷಣ. ಪ್ರತಿದಿವಸ ಒಬ್ಬ ಬ್ರಾಹ್ಮಣ ಶೂದ್ರನಾಗಿಯೂ, ಶೂದ್ರರು ಬ್ರಾಹ್ಮಣನಾಗಿಯೂ ಪರಿವರ್ತನೆಯಾಗತೊಡಗಿದರೆ ಎಲ್ಲೆಲ್ಲೂ ಅರಾಜಕತೆಯುಂಟಾಗುತ್ತದೆ.

• ಜಾತಿ ವ್ಯವಸ್ಥೆಯು ಸಮಾಜದ ಒಂದು ನೈಸರ್ಗಿಕ ವ್ಯವಸ್ಥೆ. ಇಂಡಿಯಾದಲ್ಲಿ ಅದಕ್ಕೆ ಧರ್ಮದ ಕವಚ ನೀಡಲಾಗಿದೆ.

• ಈ ಮೇಲಿನವು ನನ್ನ ಅಭಿಪ್ರಾಯಗಳಾಗಿದ್ದು, ಜಾತಿ ವ್ಯವಸ್ಥೆಯನ್ನು ನಾಶಮಾಡಬೇಕೆನ್ನುವವರನ್ನು ನಾನು ವಿರೋಧಿಸುತ್ತೇನೆ”.

-ಎಂದು ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಗಾಂಧೀಜಿ, 1925ರ ಫೆಬ್ರವರಿ 3ರಂದು ‘ಅಂತರ್ಜಾತಿ ವಿವಾಹಗಳನ್ನು ನಿರ್ಬಂಧಿಸಲಾಗಿದೆ. ಇದು ಏಳ್ಗೆಯನ್ನು ಉತ್ತೇಜಿಸುವ ಅಂಶವಲ್ಲ. ಅದು ಅವನತಿಯ ಮುನ್ಸೂಚಿ’ ಎಂದು ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಾರೆ. ಆದರೆ ಇದೇ ಗಾಂಧೀಜಿಯವರು, ‘ಚಿಕ್ಕ-ಪುಟ್ಟ ಜಾತಿಗಳೂ ಒಂದು ದೊಡ್ಡ ಜಾತಿಯಲ್ಲಿ ಸಂಯೋಜನೆ ಹೊಂದಬೇಕು. ಒಟ್ಟಾರೆಯಾಗಿ ನಾಲ್ಕು ವಿಶಾಲ ಜಾತಿಗಳಷ್ಟೆ ಇರಬೇಕು. ಇದರಿಂದ ನಾವು ಸನಾತನ ವರ್ಣವ್ಯವಸ್ಥೆಯನ್ನು ಪುನರ್ ಸ್ಥಾಪನೆ ಮಾಡಬಹುದು’ ಎಂದು ಹೇಳುತ್ತಾರೆ. ಇಂತಹ ವೈರುಧ್ಯದ ವ್ಯಕ್ತಿತ್ವದವರಾದ ಗಾಂಧೀಜಿಯವರನ್ನು ಡಾ. ಅಂಬೇಡ್ಕರ್, “‘ಹಿಂದ್ ಸ್ವರಾಜ್’ ಕೃತಿ ಬರೆದ ಗಾಂಧಿ ಆಧುನಿಕ ನಾಗರಿಕತೆಯ ವಿರೋಧಿ ಹಾಗೂ ವರ್ಣವ್ಯವಸ್ಥೆಯ ಪ್ರತಿಪಾದಕರು” ಎಂಬುದನ್ನು ಉದಾಹರಣೆ ಸಹಿತ ಸ್ಪಷ್ಟಪಡಿಸಿದ್ದಾರೆ. ಗಾಂಧಿವಾದ ಪ್ರತಿಪಾದಿಸುವ ಸರಳತೆಯನ್ನು ಒಳಿತೆಂದು ಒಪ್ಪಿಕೊಳ್ಳುವ ಡಾ. ಅಂಬೇಡ್ಕರ್, “ಸನಾತನ ಮಾರ್ಗವನ್ನು ಪ್ರತಿಪಾದಿಸುವ ‘ಗಾಂಧಿವಾದದ ತಿರುಳು ಪ್ರಾಣಿಸಮಾನ ಜೀವನ ವಿಧಾನಕ್ಕೆ ಹಿಂತಿರುಗುವುದಾಗಿದೆ. ಇದರ ಅರ್ಥಶಾಸ್ತ್ರವು ಅನೇಕ ನ್ಯೂನತೆಗಳನ್ನು ಹೊಂದಿದೆ. ಇದರಲ್ಲಿ ಜನಸಾಮಾನ್ಯರಿಗೆ ಯಾವ ಭರವಸೆಯೂ ಸಿಗದು. ಇದು ಬಡವ-ಶ್ರೀಮಂತ, ಮೇಲು-ಕೀಳು, ಮಾಲೀಕ-ಸೇವಕ ಎಂಬ ತಾರತಮ್ಯದ ವರ್ಗವ್ಯವಸ್ಥೆಯು ಸಹಜ ಎಂಬುದನ್ನು ಪ್ರತಿಪಾದಿಸುತ್ತದೆ. ಪ್ರಜಾಪ್ರಭುತ್ವವನ್ನು ವಿರೋಧಿಸುವ ಸಮಾಜ ಮಾತ್ರ ಗಾಂಧಿವಾದವನ್ನು ಸ್ವೀಕರಿಸಬಲ್ಲದು” ಎಂಬುದಾಗಿ ಕಟುವಾಗಿ ಟೀಕಿಸಿದ್ದಾರೆ.

ಆಳುವ ವರ್ಗವು ಒತ್ತಾಯಪೂರ್ವಕವಾಗಿ ಶ್ರಮಿಕವರ್ಗದ ಮೇಲೆ ಹೇರಿದ ಜಾತಿವ್ಯವಸ್ಥೆಯು ಇಲ್ಲಿಯವರೆಗೂ ಉಳಿದುಕೊಂಡು ಬಂದಿರುವುದಕ್ಕೆ- ‘1. ಜನಸಮುದಾಯವು ಆಯುಧ ಹೊಂದುವುದನ್ನು ನಿಷೇಧಿಸಿದ್ದು. 2. ಶಿಕ್ಷಣ ಪಡೆಯುವ ಅಧಿಕಾರದಿಂದ ಸಮುದಾಯವನ್ನು ಹೊರಗಿಟ್ಟಿದ್ದು. 3. ಜನಸಮುದಾಯವು ಸಂಪತ್ತು-ಆಸ್ತಿ ಹೊಂದುವುದನ್ನು ನಿಷೇಧಿಸಿದ್ದು’ ಕಾರಣ ಎಂಬುದನ್ನು ಹಾಗೂ ಬೌದ್ಧರು ವಿರೋಧಿಸಿದ ವರ್ಣವ್ಯವಸ್ಥೆಯು ಉಳಿದುಕೊಂಡು ಬರಲು ಭಗವದ್ಗೀತೆ ಕಾರಣವಾಗಿದ್ದನ್ನು ಡಾ. ಅಂಬೇಡ್ಕರ್ ಗುರುತಿಸಿದ್ದಾರೆ. ಗಾಂಧಿವಾದವು ಹಲವು ವಿರೋಧಾಭಾಸಗಳಿಂದ ತುಂಬಿಹೋಗಿದೆ ಎಂದು ಹೇಳುವ ಡಾ. ಅಂಬೇಡ್ಕರ್, ‘ಗಾಂಧಿವಾದವು ಈಗಾಗಲೇ ಅಧಿಕಾರ ಪಡೆದಿರುವ ವ್ಯಕ್ತಿಗಳಿಗೆ ತಾವು ಪಡೆದಿರುವುದನ್ನು ಉಳಿಸಿಕೊಳ್ಳುವ ಸಿದ್ಧಾಂತ ಬೋಧಿಸುತ್ತ, ನಿರ್ಲಕ್ಷಿಸಲ್ಪಟ್ಟ ಉಪೇಕ್ಷಿತರು ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದದ್ದನ್ನು ಪಡೆಯದ ಹಾಗೆ ತಡೆಯುವುದನ್ನು ಎತ್ತಿಹಿಡಿಯುತ್ತದೆ. ಇದು ಶ್ರೀಮಂತರ, ಬಿಡುವು ಹೊಂದಿದ ವರ್ಗದ ಜನರ ಸಿದ್ಧಾಂತವಾಗಿದೆ. ಇದು ಸನಾತನವಾದವಾಗಿದ್ದು, ಕರ್ಮಸಿದ್ಧಾಂತವನ್ನು ನಂಬುತ್ತದೆ’ ಎನ್ನುತ್ತಾರೆ.

“ಸನಾತನ ಮಾರ್ಗವನ್ನು ಪ್ರತಿಪಾದಿಸುವ ‘ಗಾಂಧಿವಾದದ ತಿರುಳು ಪ್ರಾಣಿಸಮಾನ ಜೀವನ ವಿಧಾನಕ್ಕೆ ಹಿಂತಿರುಗುವುದಾಗಿದೆ. ಇದರ ಅರ್ಥಶಾಸ್ತ್ರವು ಅನೇಕ ನ್ಯೂನತೆಗಳನ್ನು ಹೊಂದಿದೆ. ಇದರಲ್ಲಿ ಜನಸಾಮಾನ್ಯರಿಗೆ ಯಾವ ಭರವಸೆಯೂ ಸಿಗದು. ಇದು ಬಡವ-ಶ್ರೀಮಂತ, ಮೇಲು-ಕೀಳು, ಮಾಲೀಕ-ಸೇವಕ ಎಂಬ ತಾರತಮ್ಯದ ವರ್ಗವ್ಯವಸ್ಥೆಯು ಸಹಜ ಎಂಬುದನ್ನು ಪ್ರತಿಪಾದಿಸುತ್ತದೆ. ಪ್ರಜಾಪ್ರಭುತ್ವವನ್ನು ವಿರೋಧಿಸುವ ಸಮಾಜ ಮಾತ್ರ ಗಾಂಧಿವಾದವನ್ನು ಸ್ವೀಕರಿಸಬಲ್ಲದು”
-ಡಾ.ಬಿ.ಆರ್. ಅಂಬೇಡ್ಕರ್

‘ಯಾವುದೇ ಆಸ್ತಿಪಾಸ್ತಿಯ ಪ್ರತಿಫಲವನ್ನು ಅಪೇಕ್ಷಿಸದೆ ಉಚ್ಚಜಾತಿಯ ಸೇವೆಯನ್ನು ಒಂದು ಧಾರ್ಮಿಕ ಆಚರಣೆಯ ಪರಿಯಲ್ಲಿ ಭಕ್ತಿಯಿಂದ ಮಾಡುತ್ತಿರುವ ಶೂದ್ರನಿಗೆ ಸಹಸ್ರ ಪ್ರಣಾಮಗಳು… ದೇವದೇವತೆಗಳು ಆತನ ಮೇಲೆ ಪುಷ್ಪವೃಷ್ಟಿಗರೆಯುವರು. ನನಗೆ ಮೋಕ್ಷ ಬೇಡ, ಪುನರ್ಜನ್ಮವೂ ಬೇಡ. ಪುನರ್ಜನ್ಮವೇ ಇದ್ದರೆ ನಾನೊಬ್ಬ ಅಸ್ಪೃಶ್ಯನಾಗಿ ಹುಟ್ಟಿ ಅವರ ದುಃಖ, ಕಷ್ಟ-ಕೋಟಲೆಗಳನ್ನು ಅನುಭವಿಸಿ ಅಂತಹ ಪರಿಸ್ಥಿತಿಯಿಂದ ಅವರನ್ನು ಮತ್ತು ನನ್ನನ್ನು ಮುಕ್ತಗೊಳಿಸಬಯಸುತ್ತೇನೆ. ಆದುದರಿಂದ ನನ್ನ ಪ್ರಾರ್ಥನೆಯಿಷ್ಟೆ; ನಾನು ಮತ್ತೆ ಜನ್ಮ ಪಡೆಯುವುದೇ ಇದ್ದರೆ ನಾನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನ ಜನ್ಮ ಪಡೆಯದೆ ಅತಿಶೂದ್ರನಾಗಿ ಹುಟ್ಟಬಯಸುತ್ತೇನೆ’ ಎಂದು ಹೇಳುವ ಗಾಂಧಿಯವರದು ಯಥಾಸ್ಥಿತಿವಾದದ ನಿಲುವಾಗಿದೆ ಎಂಬುದನ್ನು ಡಾ. ಅಂಬೇಡ್ಕರ್ ಖಚಿತವಾಗಿ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)

ಒಟ್ಟಾರೆ, ಸ್ವಾತಂತ್ರ‍್ಯ ಪೂರ್ವ ಭಾರತದ ಸಾಮಾಜಿಕ, ರಾಜಕೀಯ ಸ್ವರೂಪವನ್ನು ಹಾಗೂ ಗಾಂಧೀಜಿ, ಕಾಂಗ್ರೆಸ್ ಪಕ್ಷದ ನಿಮ್ನವರ್ಗ ವಿರೋಧಿ ಧೋರಣೆಯನ್ನು ದಲಿತತ್ವದ ನೆಲೆಯಲ್ಲಿ ವಿವೇಚನೆಗೆ ಒಳಪಡಿಸುವ ಡಾ. ಅಂಬೇಡ್ಕರ್ ಅವರ ಈ ಕೃತಿಯು; ಪ್ರಸ್ತುತ ಭಾರತೀಯ ರಾಜಕಾರಣದ ಸಂದರ್ಭದಲ್ಲಿ ದಲಿತರು, ಮನುವಾದಿಗಳ ಒಡೆದು-ಆಳುವ ಜಾತಿವಾದಿ ಕುತಂತ್ರದ ಹುನ್ನಾರಕ್ಕೆ ಬಲಿಯಾಗಿ ಛಿದ್ರವಾಗದೆ, ಪ್ರಬಲ ಸಂಘಟನಾತ್ಮಕ ಸಮುದಾಯವಾಗಿ ತಮ್ಮ ಪ್ರಾತಿನಿಧ್ಯದ ಹಕ್ಕೊತ್ತಾಯವನ್ನು ಹೇಗೆ ಮಂಡಿಸಬೇಕು? ದಲಿತ ಸಮುದಾಯಕ್ಕೆ ‘ರಾಜಕೀಯ ಪ್ರಜ್ಞೆ-ಅರಿವು-ಎಚ್ಚರ’ ಎಷ್ಟು ಮುಖ್ಯ? ಜಾತಿ ಪ್ರಣೀತ ಹಿಂದುತ್ವವಾದಿ ಸಾಮಾಜಿಕ ಹಾಗೂ ಮಾನಸಿಕ ಗುಲಾಮಗಿರಿಯಿಂದ ದಲಿತರು ಯಾಕಾಗಿ ಬಿಡುಗಡೆಗೊಳ್ಳಬೇಕು? ಭಾರತದ ಜಾತಿನಿಷ್ಠ ರಾಜಕೀಯ, ಸಾಮಾಜಿಕ ಧಾರ್ಮಿಕ ಪರಂಪರೆಯಿಂದ ದಲಿತರು ಕಲಿಯಬೇಕಾಗಿರುವ ಪಾಠವೇನು? ಎಂಬುದನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.

ಗಾಂಧೀಜಿ ಸ್ಥಾಪಿಸಿದ ‘ಹರಿಜನ ಸೇವಕ ಸಂಘ’ದ ಒಳರಾಜಕಾರಣವನ್ನು; ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ‍್ಯ ಹಾಗೂ ಅಧಿಕಾರವನ್ನು ಹಸ್ತಾಂತರಿಸುವಾಗ ಅದು ಯಾವುದೋ ಒಂದು ವರ್ಗದ ಪಾಲಾಗದೆ ಎಲ್ಲ ಸಮುದಾಯಗಳಿಗೆ ಹಂಚಿಕೆಯಾಗಲಿ ಎಂಬುದನ್ನು; ಅಸ್ಪೃಶ್ಯರು ಬ್ರಿಟಿಷರ ಕೈಗೊಂಬೆಗಳೂ ಅಲ್ಲ ಹಾಗೂ ಹಿಂದೂಗಳೂ ಅಲ್ಲ ಎಂಬ ಸತ್ಯವನ್ನು; ಗಾಂಧೀಜಿಯವರ ಬಗೆಗೆ ಅಸ್ಪೃಶ್ಯರ ನಿಲುವೇನು?; `ಗಾಂಧಿವಾದ’ ಎಂದರೆ ಯಾವುದು? ಅದರ ಬಿಕ್ಕಟ್ಟುಗಳೇನು? ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ವಿಮರ್ಶಾತ್ಮಕವಾದ ಜಿಜ್ಞಾಸೆಗೆ `ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ ಕೃತಿ ಒಳಪಡಿಸಿದೆ.

(ಮುಗಿಯಿತು)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 07 26 at 17.59.44
ಡಾ. ಅಪ್ಪಗೆರೆ ಸೋಮಶೇಖರ್
+ posts

ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಅಪ್ಪಗೆರೆ ಸೋಮಶೇಖರ್
ಡಾ. ಅಪ್ಪಗೆರೆ ಸೋಮಶೇಖರ್
ಡಾ.ಅಪ್ಪಗೆರೆ ಸೋಮಶೇಖರ್ ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದ ಸೋಮಶೇಖರ್ ಅವರು ಮೈಸೂರು ವಿವಿಯಿಂದ ಕನ್ನಡ ಎಂ.ಎ. ಪದವಿ, 'ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ' ವಿಷಯದ ಸಂಶೋಧನೆಗೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ, ಮೌನ ಮಾತು ಪ್ರತಿಭಟನೆ, ಸುಟ್ಟಾವು ಬೆಳ್ಳಿ ಕಿರಣ, ಸಂಬಂಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ- ಡಾ.ಸಿದ್ದಲಿಂಗಯ್ಯ, ಡಾ.ರಾಜ್‌ಕುಮಾರ್, ಅಂತಃಕರಣ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...