ಡಿಸ್ಕವರಿ ಪ್ಲಸ್ ಓಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ‘ಕಲ್ಟ್ ಆಫ್ ಫಿಯರ್ – ಆಸಾರಾಂ ಬಾಪು, ಸೈಂಟ್ ಆರ್ ಸಿನ್ನರ್ – ವಾಟ್ ಇಸ್ ದ ಟ್ರೂತ್?’ (ಭಯದ ಆರಾಧನೆ – ಆಸಾರಾಂ ಬಾಪು, ಸಂತ ಅಥವಾ ಪಾಪಿ: ಸತ್ಯವೇನು?) ಎಂಬ ವೆಬ್‌ಸೀರೀಸ್ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ಮುಖಗಳನ್ನು ಅನಾವರಣ ಮಾಡಿದೆ. ಅತ್ಯಾಚಾರಗಳನ್ನು ನಡೆಸಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಸಾರಾಂ ಜನವರಿ 15ರಂದು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಜೋಧ್‍ಪುರ ಆಶ್ರಮದಲ್ಲಿದ್ದಾನೆ. ಇದೇ ಹೊತ್ತಲ್ಲಿ ಆತನ ಪಾಪಕೃತ್ಯಗಳನ್ನು ಅನಾವರಣಗೊಳಿಸುವ ಚಿತ್ರ ಬಿಡುಗಡೆಯಾಗಿದ್ದು, ಆಸಾರಾಂನ ಅಂಧ ಭಕ್ತರು ಸಿಟ್ಟಿಗೆದ್ದಿದ್ದಾರೆ. ಮಂಬೈನಲ್ಲಿರುವ ‘ಡಿಸ್ಕವರಿ ಪ್ಲಸ್’ ಚಾನೆಲ್ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಉದ್ಯೋಗಿಗಳಿಗೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ. ಭಕ್ತ ಪುಂಡರ ಹಾವಳಿಯಿಂದ ಬೇಸತ್ತ ಡಿಸ್ಕವರಿ ಕಂಪನಿ, ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿದೆ. ಹಲವು ರಾಜ್ಯಗಳಲ್ಲಿರುವ ಡಿಸ್ಕವರಿ ಚಾನೆಲ್ ಕಚೇರಿ ಮತ್ತು ಉದ್ಯೋಗಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿದೆ. ಧರ್ಮದ ಹೆಸರಲ್ಲಿ ಇಷ್ಟು ದಾಂಧಲೆ ಎಬ್ಬಿಸಬಲ್ಲಷ್ಟು ಬಲಿಷ್ಠ ಈ ಆಸಾರಾಂ ಬಾಪು ಮತ್ತು ಆತನ ಭಕ್ತರು. ಆದರೆ ಆತನೊಬ್ಬ ಕ್ರಿಮಿನಲ್. ದೇವರ ಹೆಸರಲ್ಲಿ ಆತ ನಡೆಸಿದ ಅತ್ಯಾಚಾರಗಳು ಬೆಚ್ಚಿಬೀಳಿಸುತ್ತವೆ. ನಿತ್ಯವೂ ಬಾಲಕಿಯರ ಮೇಲೆ ಎರಗುತ್ತಿದ್ದ ಈ ಸ್ವಘೋಷಿತ ದೇವಮಾನವ ಕೊನೆಗೂ ಸಿಕ್ಕಿಬಿದ್ದದ್ದು ಪೊಲೀಸರು ಪ್ರಾಮಾಣಿಕವಾಗಿ ನಡೆಸಿದ ತನಿಖೆಯಿಂದಾಗಿ ಮಾತ್ರ. ಧರ್ಮವನ್ನು ಬಂಡವಾಳ ಮಾಡಿಕೊಂಡು ಸಾಮಾನ್ಯ ಜನರನ್ನು ಶೋಷಿಸುವ ವೇಷಾಧಾರಿಗಳು ಹೆಚ್ಚಾಗುತ್ತಿರುವ ದಿನಮಾನಗಳಲ್ಲಿ ಆಸಾರಾಂ ಬಾಪುವಿನ ನಿಜಮುಖ ಅನಾವರಣ ಮಾಡುವ ವೆಬ್‌ಸೀರೀಸ್ ಬಿಡುಗಡೆಯಾಗಿರುವುದು ಸಕಾಲಿಕವೂ ಹೌದು.
ದೇಶ ವಿದೇಶದಲ್ಲಿ ಸುಮಾರು 400 ಆಶ್ರಮಗಳು, 50 ಗುರುಕುಲಗಳು, 40ಕ್ಕೂ ಹೆಚ್ಚು ರೆಸಿಡೆನ್ಸಿಯಲ್ ಶಾಲೆಗಳ ಒಡೆತನ ಹೊಂದಿರುವ ಆಸಾರಾಂ ಬಾಪು ಆಲಿಯಾಸ್ ಅಸುಮಲ್ ಸಿರುಮಲಾನಿ ಹರ್ಪಲಾನಿಗೆ ಕೋಟ್ಯಂತರ ಭಕ್ತರು ಇಂದಿಗೂ ಇದ್ದಾರೆ. ಭಕ್ತರೆಂದರೆ ಸಾಮಾನ್ಯ ಭಕ್ತರು ಮಾತ್ರವಲ್ಲ. ಹಾಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್- ಹೀಗೆ ದೊಡ್ಡ ರಾಜಕಾರಣಿಗಳೇ ಆಸಾರಾಂ ಪಾದತಲದಲ್ಲಿದ್ದಾರೆ. ಆತನ ವೃತ್ತಾಂತವನ್ನು ಅವಲೋಕಿಸಿದರೆ, ಆಸಾರಾಂ ಎಂತಹ ಸ್ತ್ರೀಪೀಡಿತ ಎಂಬುದಕ್ಕೆ ಕಿರು ಚಿತ್ರಣವಾದರೂ ಸಿಕ್ಕೀತು.

ಆಸಾರಾಂ ಬೆಳೆದದ್ದು ಹೇಗೆ?
ಪಾಕಿಸ್ತಾನಕ್ಕೆ ಸೇರಲ್ಪಟ್ಟ ಬೇರಾನಿ ಗ್ರಾಮದಲ್ಲಿ ಸಿಂಧಿ ಬನಿಯಾ ಸಮುದಾಯದಲ್ಲಿ 1941ರ ಏಪ್ರಿಲ್ 17ರಂದು ಜನಿಸಿದ ಅಸುಮಲ್ ಸಿರುಮಲಾನಿ, ದೇಶ ವಿಭಜನೆಯ ನಂತರ ಗುಜರಾತ್‍ನ ಅಹಮದಾಬಾದ್‌ಗೆ ಕುಟುಂಬದೊಂದಿಗೆ ವಲಸೆ ಬರಬೇಕಾಯಿತು. ಆತನ ತಂದೆ ತೀರಿಕೊಂಡ ನಂತರ ಕುಟುಂಬದ ಜವಾಬ್ದಾರಿ ಆತನ ಮೇಲೆ ಬಿದ್ದಿತ್ತು. ಆ ವೇಳೆ ಅಜ್ಮೀರ್‌ನಲ್ಲಿದ್ದು ರೈಲ್ವೆ ನಿಲ್ದಾಣದಿಂದ ಅಜ್ಮೀರ್ ದರ್ಗಾದವರೆಗೆ ಟಾಂಗಾ ಓಡಿಸುವ ಕೆಲಸ ಮಾಡಿಕೊಂಡಿದ್ದ ಎಂದು ಕೆಲವರು ಅಸುಮಲ್ ಬಗ್ಗೆ ಹೇಳುತ್ತಾರೆ. ಆದರೆ ಆತ ಸಿದ್ದಾಪುರದ ಸಂಬಂಧಿಕರ ಅಂಗಡಿಯಲ್ಲಿ ಟೀ ಮಾರುವ ಕೆಲಸ ಮಾಡುತ್ತಿದ್ದ ಎಂದು ಆತನ ಆತ್ಮಚರಿತ್ರೆ ಹೇಳುತ್ತದೆ.
ಇದನ್ನೂ ಓದಿರಿ: ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!
ನಿಶ್ಚಿತಾರ್ಥವಾದ ಬಳಿಕ ಮದುವೆಗೆ ಒಪ್ಪದೆ ಮನೆ ಬಿಟ್ಟು ಓಡಿ ಹೋದ ಬಾಲಕ ಅಸುಮಲ್, ಬರೂಚ್ ಆಶ್ರಮದಲ್ಲಿ ಪತ್ತೆಯಾಗುತ್ತಾನೆ. ಆತನನ್ನು ಎಳೆದು ತಂದ ಕುಟುಂಬ ಒತ್ತಾಯಪೂರ್ವಕವಾಗಿ ಲಕ್ಷ್ಮಿ ದೇವಿ ಎಂಬವರ ಜೊತೆ ಮದುವೆ ಮಾಡುತ್ತದೆ. ನಂತರ 18 ವರ್ಷ ತುಂಬಿದ್ದಾಗಲೇ 1959ರಲ್ಲಿ ಆತನ ಮೇಲೆ ಕೊಲೆ ಕೇಸ್ ದಾಖಲಾಗಿರುತ್ತದೆ. ನಂತರ ಕೇಸ್ ಖುಲಾಸೆಯಾಗುತ್ತದೆ.
1964ರಲ್ಲಿ ಅಂದರೆ 23ನೇ ವಯಸ್ಸಿನಲ್ಲಿ ಹೆಂಡತಿ ಬಿಟ್ಟು ಸನ್ಯಾಸಿಯಾಗಿದ್ದಾಗಿ ಆಸಾರಾಂ ಆತ್ಮಕತೆ ಹೇಳುತ್ತದೆ. ಕೇದಾರನಾಥ ತಲುಪಿ, ನಂತರ ವೃಂದಾವನಕ್ಕೆ ಹೋಗಿ, ಕಡೆಗೆ ನೈನಿತಾಲ್ ತಲುಪುತ್ತಾನೆ; ಅಲ್ಲಿ ಆತನಿಗೆ ಸಿಕ್ಕಿದ್ದು ಲೀಲಾ ಸಹಾಜಿ ಮಾತೆ ಎಂಬ ಸ್ವಯಂ ಘೋಷಿತ ಧರ್ಮಗುರು. ಲೀಲಾ ಅವರು ಈತನನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಅಲ್ಲದೇ ಅವರು ಹೆಸರು ಬದಲಾಯಿಸಿ, ಶ್ರೀ ಆಸಾರಾಂ ಮಹಾರಾಜ್ ಬಾಪು ಎಂದು ಮರುನಾಮಕರಣ ಮಾಡುತ್ತಾರೆ.
ಕೆಲ ಕಾಲ ಆಶ್ರಮದಲ್ಲಿದ್ದ ಆಸಾರಾಂ ಆನಂತರ 1971ರಲ್ಲಿ ವಾಪಸ್ ಅಹಮದಾಬಾದ್‌ಗೆ ತೆರಳಿ ತನ್ನದೇ ಆದ ‘ಮೋಕ್ಷ ಕುಟೀರ’ ಕಟ್ಟುತ್ತಾನೆ. ಆರ್ಯುವೇದ ಪದ್ಧತಿಯಲ್ಲಿ ಚಿಕಿತ್ಸೆ ಆರಂಭಿಸುತ್ತಾನೆ, ಧರ್ಮದ ಬಗ್ಗೆ ಪ್ರವಚನ ನೀಡುವ ಆಶ್ರಮ ತೆರೆದು ಸ್ವಯಂ ಘೋಷಿತ ಧರ್ಮಗುರು ಆಗುತ್ತಾನೆ. ಅಲ್ಲಿ ಪ್ರತಿದಿನವು ಉಚಿತ ಆಹಾರ ನೀಡುತ್ತಿದ್ದರಿಂದ ಮತ್ತು ಜಾತಿ ತಾರತಮ್ಯ ಇಲ್ಲದೆ ಎಲ್ಲರಿಗೂ ಪ್ರವೇಶ ನೀಡಿದ್ದರಿಂದ ಬಹುಬೇಗನೇ ಪ್ರಸಿದ್ದಿ ಪಡೆಯುತ್ತದೆ. ಅಲ್ಲಿ ಸತ್ಸಂಗ ಶುರು ಮಾಡಿದ ಬಳಿಕ, ಆಶ್ರಮ ದಿನೇದಿನೇ ಬೆಳೆಯುತ್ತದೆ.
80ರ ದಶಕದಲ್ಲಿ ಆಸಾರಾಂ ಬಾಪು ಮುನ್ನಲೆಗೆ ಬರುತ್ತಾನೆ. ಅದೇ ಸಂದರ್ಭದಲ್ಲಿ ಗುಜರಾತ್‍ನಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಬೇರುಬಿಡುತ್ತಿರುತ್ತವೆ. ರಾಮ ಜನ್ಮಭೂಮಿ ಹೋರಾಟ ಶುರುವಾಗಿರುತ್ತದೆ. ಇದರ ಪ್ರಯೋಜನ ಪಡೆದ ಆಸಾರಾಂ ಬಾಪು ದೇಶ ವಿದೇಶಗಳಲ್ಲಿ 400 ಆಶ್ರಮಗಳನ್ನು ತೆರೆಯುತ್ತಾನೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇವರ ಆಶೀರ್ವಾದ ಪಡೆಯಲು ಆಗಮಿಸುತ್ತಾರೆ. ಗುಜರಾತ್‌ನ ಬಿಜೆಪಿ ಸರ್ಕಾರ ಈತನಿಗೆ 14,000 ಸ್ಕೇರ್ ಮೀಟರ್ ಭೂಮಿ ಕೊಡುತ್ತದೆ. 1981-93ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವೂ ಸಹಾಯ ಮಾಡುತ್ತದೆ. ಇವೆಲ್ಲದರಿಂದ ದೊಡ್ಡ ಹೆಸರು, ಖ್ಯಾತಿ, ಹಣ, ಅಧಿಕಾರ, ಆಸ್ತಿ ಆಸಾರಾಂ ಪಾಲಾಗುತ್ತದೆ.
ಹೀಗಿರುವಾಗ 1997ರಲ್ಲಿ 20 ವರ್ಷದ ಯುವತಿ ಆಸಾರಂ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದರು. ಅದು ಕೇವಲ ಗುಜರಾತ್‌ನ ಸ್ಥಳೀಯ ಪತ್ರಿಕೆಯಲ್ಲಿ ಮಾತ್ರ ವರದಿಯಾಗಿತ್ತು. ಆದರೆ ನಂತರದಲ್ಲಿ ಆ ಕೇಸ್ ಏನಾಯಿತೆಂದು ಎಲ್ಲಿಯೂ ಮಾಹಿತಿ ಸಿಗುವುದಿಲ್ಲ. 2008ರವರೆಗೂ ಸತ್ಸಂಗಗಳು, ಧಾರ್ಮಿಕ ಪ್ರವಚನಗಳನ್ನು ಮುಂದುವರಿಸುತ್ತಲೇ ಬಂದ ಆಸಾರಾಂ, ಮೇಲೇರುತ್ತಲೇ ಹೋದನು. ನರೇಂದ್ರ ಮೋದಿಯವರು ಚುನಾವಣೆಯಲ್ಲಿ ಗೆಲ್ಲಲು ಆಸಾರಾಂ ಬಾಪುರವರ ಸಹಾಯ ಪಡೆದಿದ್ದರು. ಆಸಾರಾಂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ಪಡೆದಿದ್ದರು. ಇವೆಲ್ಲವೂ ಆಸಾರಾಂನ ಪ್ರಭಾವವನ್ನು ಸ್ಪಷ್ಟಪಡಿಸುತ್ತವೆ. ಇಷ್ಟೆಲ್ಲ ಅಧಿಕಾರ, ಹಣ, ಖ್ಯಾತಿಯ ಮದ ಏರಿದಾಗ, ಆಸಾರಾಂ ತಪ್ಪುಗಳನ್ನು ಎಸಗುವುದು ಸಾಮಾನ್ಯವಾಗುತ್ತದೆ. ಆದರೆ ಪಾತಕಿಯ ಕೃತ್ಯಗಳು ಇಷ್ಟಕ್ಕೆ ಮುಗಿದು ಹೋಗಲಿಲ್ಲ. ಅವನ ಮಿತಿಮೀರಿದ ಕ್ರೌರ್ಯಕ್ಕೆ ಮತ್ತಷ್ಟು ಬಾಲಜೀವಗಳು ಬಲಿಯಾಗುವಾಗ ಮುಖವಾಡ ಕಳಚಿ ಬೀಳುವ ಕಾಲ ಸನ್ನಿಹಿತವಾಗಿತ್ತು.

ಆಸಾರಾಂ ಪತನ ಆರಂಭ
2008ರಲ್ಲಿ ಪೋಷಕನೊಬ್ಬ ತನ್ನ 8 ವರ್ಷದ ಮಗನನ್ನು ಮತ್ತು ತನ್ನ ಅಣ್ಣನ ಮಗನನ್ನು ಆಸಾರಾಂ ಬಾಪು ನಡೆಸುವ ಗುಜರಾತ್‌ನ ಮೊಟೆರಾ ಆಶ್ರಮದ ಗುರುಕುಲಕ್ಕೆ ಸೇರಿಸುತ್ತಾರೆ. ಆದರೆ ಜುಲೈ 3, 2008ರಲ್ಲಿ ಅವರ ಮಕ್ಕಳು ಆಶ್ರಮದಿಂದ ಕಾಣೆಯಾಗಿರುತ್ತಾರೆ. ಪೋಷಕರು ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುವಷ್ಟರಲ್ಲಿ ಆಶ್ರಮದ ಅಧಿಕಾರಿಗಳಿಬ್ಬರು ಸ್ಟೇಷನ್‌ನಲ್ಲಿರುತ್ತಾರೆ. ಹಾಗಾಗಿ ಪೊಲೀಸರು ದೂರು ದಾಖಲಿಸುವ ಬದಲು ಪೋಷಕರನ್ನು ನಿಂದಿಸಿ ಕಳಿಸುತ್ತಾರೆ.
ಇದನ್ನೂ ಓದಿರಿ: ‘ಕೆಪಿಎಸ್‌ಸಿ’ ಎಂದರೆ ಕರ್ನಾಟಕ ‘ಲೋಪ’ಸೇವಾ ಆಯೋಗವೇ?
ಆಗ ಪೋಷಕರು ಆಸಾರಾಂ ಬಾಪು ಬಳಿ ತೆರಳುತ್ತಾರೆ. “ಮನೆಯಲ್ಲಿ ಧ್ಯಾನ ಮಾಡಿರಿ, 4 ಗಂಟೆಯೊಳಗೆ ಮಕ್ಕಳು ವಾಪಸ್ ಬರುತ್ತಾರೆ” ಎನ್ನುತ್ತಾನೆ ಆಸಾರಾಂ. ಆದರೆ ಮಕ್ಕಳು ಬರುವುದೇ ಇಲ್ಲ. ಅಂತಿಮವಾಗಿ ರಾತ್ರಿ 9 ಗಂಟೆಗೆ ಪೋಷಕರು ಪೊಲೀಸ್ ದೂರನ್ನು ದಾಖಲಿಸಿಯೇ ಬಿಡುತ್ತಾರೆ. ಮಾರನೆಯ ದಿನ ಬೆಳಿಗ್ಗೆ ನದಿ ದಡದಲ್ಲಿ ಆ ಇಬ್ಬರು ಮಕ್ಕಳ ಮೃತ ದೇಹಗಳು ಪತ್ತೆಯಾಗುತ್ತವೆ. ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಆ ದೇಹಗಳಿರುತ್ತವೆ. ಆರಂಭದಲ್ಲಿ ಪೊಲೀಸರು ಯಾವುದೇ ತನಿಖೆ ಮಾಡುವುದೇ ಇಲ್ಲ. ಒತ್ತಡ ಹೆಚ್ಚಾದಾಗ 14 ವರ್ಷದ ಬಾಲಕನೊಬ್ಬನನ್ನು ಬಂಧಿಸುತ್ತಾರೆ. ಗುರುಕುಲದ ನಿಬಂಧನೆಗಳನ್ನು ಒಪ್ಪದೆ, ಗುರುಕುಲ ಮುಚ್ಚಿಸುವುದಕ್ಕಾಗಿ ಆ ಬಾಲಕ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ ಎನ್ನುತ್ತದೆ ಪೊಲೀಸ್ ತನಿಖೆ.
ಆದರೆ ಮೃತ ಬಾಲಕನ ಕುಟುಂಬ ಇದನ್ನು ಒಪ್ಪಿಕೊಳ್ಳುವುದಿಲ್ಲ. ಸಿಬಿಐ ತನಿಖೆಗೆ ಒತ್ತಾಯಿಸುತ್ತಾರೆ. ಆಗಸ್ಟ್ 2008ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಈ ಪ್ರಕರಣದ ತನಿಖೆಗೆ ಒಂದು ಕಮಿಷನ್ ನೇಮಿಸುತ್ತಾರೆ. 2013ರಲ್ಲಿ ಅಂದರೆ 5 ವರ್ಷದ ನಂತರ ಆಯೋಗ ವರದಿ ನೀಡುತ್ತದೆ. ಆಸಾರಾಂಗೆ ಕ್ಲಿನ್ ಚಿಟ್ ಸಿಗುತ್ತದೆ, 14 ವರ್ಷದ ಬಾಲಕನೇ ನಿಜವಾದ ಅಪರಾಧಿ ಎನ್ನುತ್ತದೆ ವರದಿ.
ಬೆಚ್ಚಿ ಬೀಳಿಸಿದ ಅತ್ಯಾಚಾರ ಪ್ರಕರಣ
2013ರ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ. ದೇಶದ ತುಂಬಾ ಸ್ವಾತಂತ್ರ್ಯದ ಸಂಭ್ರಮ. ಆದರೆ ಜೋಧ್‌ಪುರದ ಒಂದು ಕುಟುಂಬ ನೋವಿನ ಕಡಲಲ್ಲಿ ಮುಳುಗಿರುತ್ತದೆ. ಏಕೆಂದರೆ ತಾನು ನಂಬಿದ ಧರ್ಮಗುರು ಆಸಾರಾಂ ಬಾಪು, ಆ ಕುಟುಂಬದ ಪುಟ್ಟ ಬಾಲಕಿಯ ಜೀವನ ನಾಶ ಮಾಡಿರುತ್ತಾನೆ. ಈ ಅತ್ಯಾಚಾರ ಪ್ರಕರಣದ ವಿವರಗಳು ಬೆಚ್ಚಿಬೀಳಿಸುತ್ತವೆ.
ಉತ್ತರ ಪ್ರದೇಶದ ಶಹಜಹಾನ್‌ಪುರ ಮೂಲದ ವ್ಯಕ್ತಿಯೊಬ್ಬರ ಕುಟುಂಬದಲ್ಲಿ ಘಟಿಸಿದ ದುರಂತವದು. ಟ್ರಾವೆಲ್ಸ್ ಬ್ಯುಸಿನೆಸ್ ಕೆಲಸ ಮಾಡುತ್ತಿದ್ದ ಆ ವ್ಯಕ್ತಿಯು, ಆಸಾರಾಂ ಬಾಪುವಿನ ಭಕ್ತರಾಗಿದ್ದರು. ಆಸಾರಾಂ ಹೆಸರಲ್ಲಿ ಒಂದು ಆಶ್ರಮ ಕಟ್ಟಲು ಸಾಲವನ್ನೂ ತೆಗೆದುಕೊಂಡಿದ್ದರು. ಅವರ 16 ವರ್ಷದ ಮಗಳು ರಾಜಸ್ಥಾನದ ಜೋಧ್‌ಪುರ ಬಳಿಯ ಮನಾಯ್ ಎಂಬಲ್ಲಿ ಆಸಾರಾಂ ಬಾಪು ವಸತಿ ನಿಲಯದಲ್ಲಿ ಓದುತ್ತಿದ್ದಳು. ಅಲ್ಲಿ 2013ರ ಆಗಸ್ಟ್ ತಿಂಗಳಿನಲ್ಲಿ ಆ ಬಾಲಕಿ ಅನಾರೋಗ್ಯಕ್ಕೀಡಾದಳು. ವಾರ್ಡನ್ ‘ಶಿಲ್ಪಿ’ ಎಂಬುವವರ ಬಳಿ ಹೇಳಿದಾಗ, ‘ವಿಶ್ರಾಂತಿ ತೆಗೆದುಕೋ, ಸಾಕು. ಡಾಕ್ಟರ್ ಬಳಿ ಹೋಗುವ ಅಗತ್ಯವಿಲ್ಲ’ ಎಂದಿದ್ದರು. ಆ ಬಾಲಕಿಯ ಆರೋಗ್ಯ ಸುಧಾರಿಸದೆ ಇದ್ದಾಗ ಮಾರನೆಯ ದಿನ ಆ ಬಾಲಕಿಯನ್ನು ಆಫೀಸ್‌ಗೆ ಕರೆದು, “ನಿನ್ನ ಒಳಗೆ ಒಂದು ಆತ್ಮ ಹೊಕ್ಕಿದೆ. ಅದನ್ನು ಆಸಾರಾಂ ಬಾಪುರವರು ಮಾತ್ರ ಪರಿಹರಿಸಬಹುದು” ಎನ್ನುತ್ತಾರೆ ವಾರ್ಡನ್.
ಎರಡು ದಿನದ ನಂತರ ಆ ಬಾಲಕಿಯ ಪೋಷಕರು ಜೋದ್‌ಪುರಕ್ಕೆ ತೆರಳಿದರು. ಬಾಪು ಅಲ್ಲಿ 150 ಜನರ ಸತ್ಸಂಗದಲ್ಲಿ ತೊಡಗಿದ್ದರು. ತದನಂತರ ಇವರೊಂದಿಗೆ ಮಾತನಾಡಿ ಆ ಮಗುವಿನ ಕಣ್ಣನ್ನು ನೋಡಿ, “ಅವಳಲ್ಲಿ ಸೈತಾನ ಅಡಗಿದ್ದಾನೆ, ಅದನ್ನು ಹೊರಗೆ ತೆಗೆಯುತ್ತೇನೆ” ಎಂದಿದ್ದನು ಸ್ವಯಂ ಘೋಷಿತ ಧರ್ಮಗುರು. ಗೇಟ್ ಬಳಿ ಧ್ಯಾನ ಮಾಡುತ್ತಿರಿ ಎಂದು ಪೋಷಕರನ್ನು ಹೊರಗೆ ಕಳುಹಿಸಿದ್ದ ಆಸಾರಾಂ, ಆ ಬಾಲಕಿಯನ್ನು ತನ್ನ ಕೋಣೆಗೆ ಕರೆಸಿಕೊಂಡಿದ್ದನು. ರಾತ್ರಿ 10 ಗಂಟೆ ಆಗಿತ್ತು. ಆ ಮಗುವಿಗೆ, “ನೀನು ದೊಡ್ಡವಳಾದ ಮೇಲೆ ಏನಾಗಬೇಕೆಂದು ಬಯಸಿದ್ದೀಯ” ಎಂದು ಕೇಳಿದನು. ಆಕೆ, ಸಿಎ ಆಗಬೇಕೆಂದು ಉತ್ತರಿಸಿದಳು. ಆಗ ಬಾಪು, “ಅಯ್ಯೋ ಸಿಎ ಆಗಿ ಏನು ಪ್ರಯೋಜನ? ನೂರಾರು ಜನ ಸಿಎಗಳು ನನ್ನ ಕಾಲಡಿಯಲ್ಲಿ ಕೂತಿರುತ್ತಾರೆ” ಎಂದು ಹೇಳಿ ಬಾಲಕಿಯನ್ನು ಒಲಿಸಿಕೊಳ್ಳಲು ಯತ್ನಿಸಿದನು.
ಆ ಕರಾಳ ರಾತ್ರಿಯಲ್ಲಿ 16 ವರ್ಷದ ಬಾಲಕಿಗೆ, “ನೀನು ದೇವರನ್ನು ಕೂಡುವ ಸಮಯವಿದು, ಎಷ್ಟೋ ಬಾಲಕಿಯರು ಆಶ್ರಮದಲ್ಲಿದ್ದರೂ ನಾನು ನಿನ್ನನ್ನೇ ಆಯ್ಕೆ ಮಾಡಿದ್ದೀನಿ ಎಂದರೆ ನೀನು ವಿಶೇಷ ಬಾಲಕಿ” ಎಂದೆಲ್ಲಾ ನಂಬಿಸಿ, ಆಸಾರಾಂ ಅತ್ಯಾಚಾರವೆಸಗುತ್ತಾನೆ.
ಆ ಘಟನೆಯು ಬಾಲಕಿಯನ್ನು ಅಸಹಾಯತೆಗೆ, ಖಿನ್ನತೆಗೆ ದೂಡುತ್ತದೆ. ತನ್ನ ಮೇಲೆ ನಡೆದ ದೌರ್ಜನ್ಯವನ್ನು ತಾಯಿಯೊಂದಿಗೆ ಮಗು ಹೇಳಿಕೊಳ್ಳುತ್ತದೆ. ಪೋಷಕರು ಬೆಚ್ಚಿ ಬೀಳುತ್ತಾರೆ. ತಾವು ಯಾರನ್ನು ದೇವರೆಂದು ನಂಬಿದ್ದರೋ ಆತನೇ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿವುದನ್ನು ಅವರು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಅಂತಹ ಕಹಿ ಘಟನೆ ನಡೆದುಬಿಟ್ಟಿರುತ್ತದೆ. ಈ ಕುರಿತು ಆಸಾರಾಂ ಬಾಪು ಜೊತೆ ಮಾತನಾಡಲು ಆಶ್ರಮಕ್ಕೆ ಹೋದಾಗ, “ಗುರೂಜಿ ದೆಹಲಿಗೆ ಹೋಗಿದ್ದಾರೆ” ಎನ್ನುತ್ತಾರೆ ಆಶ್ರಮದ ಸಿಬ್ಬಂದಿ. ಪೋಷಕರನ್ನು ಒಳಗೆ ಬಿಡುವುದೇ ಇಲ್ಲ. ಕೋಪೋದ್ರಿಕ್ತರಾದ ಪೋಷಕರು ಪಕ್ಕದ ಕಮಲಾ ಮಾರ್ಕೆಟ್ ಠಾಣೆಗೆ ತೆರಳಿ ಅಂದು ರಾತ್ರಿಯೇ ಎಫ್‌ಐಆರ್ ದಾಖಲಿಸುತ್ತಾರೆ.
ಆ ಬಾಲಕಿ ಪೊಲೀಸ್ ಹೇಳಿಕೆಯಲ್ಲಿ, “ನಾನು ಯಾವತ್ತೂ ಒಬ್ಬಳೇ ಇರಲಿಲ್ಲ. ಅಲ್ಲದೆ ಬೇರೊಬ್ಬ ಗಂಡಸಿನ ಜೊತೆ ಬಾಗಿಲು ಮುಚ್ಚಿದ ಕೋಣೆಯಲ್ಲಿ ಹಿಂದೆಂದೂ ಇರಲಿಲ್ಲ. ಆದರೆ ಈ ಬಾರಿ ಆಸಾರಾಂ ಅವರೊಂದಿಗಿದ್ದೆ. ಅವರು ನನ್ನ ಗುರು, ಭಗವಾನ್ ಆಗಿದ್ದರಿಂದ ಅವರೊಂದಿಗೆ ಇದ್ದೆ. ಆದರೆ ಅವರು ನನ್ನನ್ನು ಹಿಂಸಿಸಿದರು. ದೇವರು ಹೇಳಿದಂತೆ ಕೇಳಬೇಕು ಎಂದು ಒತ್ತಾಯಪೂರ್ವಕವಾಗಿ ದೌರ್ಜನ್ಯ ಎಸಗಿದರು. ಹೊರಗೆ ಯಾರಿಗಾದರೂ ಹೇಳಿದರೆ ನಿನ್ನ ಕುಟುಂಬ ಮತ್ತು ನಿನ್ನ ಸಹೋದರನ್ನು ಕೊಂದು ಬಿಡುತ್ತೇನೆ ಎಂದು ಬೆದರಿಸಿದರು” ಎಂದು ತನ್ನ ಮೇಲಿನ ದೌರ್ಜನ್ಯವನ್ನು ಬಾಲಕಿ ವಿವರಿಸಿದ್ದಳು.
ಇದನ್ನೂ ಓದಿರಿ: ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು
ಆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಅತ್ಯಾಚಾರ ನಡೆದಿರುವುದು ದೃಢವಾಯಿತು. ಹಾಗಾಗಿ ಪೊಲೀಸರು ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಿದರು. ಇದು ಬಹಿರಂಗವಾಗುತ್ತಿದ್ದಂತೆ ಬಾಪು ಬೆಂಬಲಿಗರು ಗಲಭೆ ಎಬ್ಬಿಸಿದರು. ಸಾವಿರಾರು ಜನರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕೂತರು. ಆಸಾರಾಂ ಬಾಪುವಿನ ಮಗ, “ಆ ಬಾಲಕಿ ಮಾನಸಿಕ ಅಸ್ವಸ್ಥೆ. ಆಕೆ 2.30 ಗಂಟೆ ಸ್ನಾನ ಮಾಡುತ್ತಿದ್ದು, ಅವಳ ಆರೋಗ್ಯ ಸರಿ ಇಲ್ಲ” ಎಂದು ವಾದಿಸಿದ. ಆದರೆ ಜೋದ್‌ಪುರ ಪೊಲೀಸರಿಗೆ ಒಂದೊಂದೇ ಸಾಕ್ಷಿಗಳು ಸಿಗಲಾರಂಭಿಸಿದವು.
ಸಿವಿಲ್ ಡ್ರೆಸ್‌ನಲ್ಲಿ ಹಲವು ಪೊಲೀಸ್ ತಂಡಗಳು ಬಾಪು ಆಶ್ರಮ ಪ್ರವೇಶಿಸಿ ತನಿಖೆ ನಡೆಸಿದವು. ಆದರೆ ಆಸಾರಾಂ ಬಾಪು ತನ್ನ ಮೇಲಿನ ಕೇಸಿನಿಂದ ವಿಚಲಿತನಾದಂತೆ ಕಂಡು ಬರಲಿಲ್ಲ. ಆತ ಎಂದಿನಂತೆ ಸತ್ಸಂಗ ನಡೆಸುತ್ತಿದ್ದ. ಹಲವು ರಾಜ್ಯಗಳನ್ನು ಸುತ್ತುತ್ತಿದ್ದ. ತನಗೆ ಏನು ಆಗುವುದಿಲ್ಲ ಎಂದು ನಂಬಿದ್ದ. ಏಕೆಂದರೆ ಆತನನ್ನು ನಂಬುವ ದೊಡ್ಡ ಅಧಿಕಾರಸ್ಥರೇ ಆತನ ಪಾದದಡಿ ಇದ್ದರು.

ತನಿಖೆಯಲ್ಲಿ ಬಯಲಾದ ಘೋರ ಸಂಗತಿಗಳು ಅನೇಕ. ಆತ ಪ್ರತಿ ರಾತ್ರಿಯೂ ಒಬ್ಬೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಇಡೀ ಆಶ್ರಮದ ತಂಡ ಅದರಲ್ಲಿ ಭಾಗಿಯಾಗಿತ್ತು. ಆಸಾರಾಂಗಾಗಿ ವಾರ್ಡನ್ ಶಿಲ್ಪಿ, ಅಡುಗೆ ಭಟ್ಟ ಪ್ರಕಾಶ್ ಗುರುಕುಲದ ವಸತಿ ನಿಲಯದಲ್ಲಿ ಪ್ರತಿದಿನ ಸುಂದರ ಯುವತಿಯನ್ನು ಹುಡುಕುತ್ತಿದ್ದರು. ದೂರು ಕೊಟ್ಟ ಬಾಲಕಿ ಮೊದಲ ಸಂತ್ರಸ್ತೆಯಲ್ಲ, ಬಹಳಷ್ಟು ಅಪ್ರಾಪ್ತ ಬಾಲಕಿಯರನ್ನು ಈಗಾಗಲೇ ಆಸಾರಾಂ ಲೈಂಗಿಕವಾಗಿ ಶೋಷಿಸಿದ್ದ ಎಂಬುದು ಬಯಲಾಗುತ್ತದೆ. ಆದರೆ ಬಹಳಷ್ಟು ಹೆಣ್ಣು ಮಕ್ಕಳು ಭಯದಿಂದ ದೂರು ಕೊಡಲು ಹಿಂಜರಿದಿದ್ದರು, ಶಾಲೆ ಬಿಟ್ಟು ಮನೆಗೆ ಹೋಗಿಬಿಟ್ಟಿದ್ದರು. ಪೊಲೀಸರು ಅವರ ಮನೆಗೆ ತೆರಳಿದರೂ ಸಂತ್ರಸ್ತ ಬಾಲಕಿಯರು ಮಾತನಾಡಲು ಹಿಂಜರಿದರು. ಆಸಾರಾಂ ಅವರೆಲ್ಲರ ಬ್ರೈನ್ ವಾಶ್ ಮಾಡಿದ್ದ. ತನ್ನೊಂದಿಗೆ ಮಲಗಿದರೆ ಪುಣ್ಯ ಸಿಗುತ್ತದೆ ಎಂದು ನಂಬಿಸಿದ್ದ. ತಾನು ದೇವರಾದ್ದರಿಂದ ನಿನ್ನನ್ನೇ ಆರಿಸಿದ್ದೇನೆ ಎಂದು ಪ್ರತಿ ಬಾಲಕಿಯರ ಬಳಿಯೂ ಹೇಳುತ್ತಿದ್ದ. ದೇವರೊಂದಿಗೆ ಲೈಂಗಿಕ ಕ್ರಿಯೆ ಮಾಡುವುದು ಪುಣ್ಯದ ಕೆಲಸ ಎಂದು ನಂಬಿಸುತ್ತಿದ್ದ. ಯಾರಿಗಾದರೂ ಹುಷಾರು ತಪ್ಪಿದರೆ ಗುಣಪಡಿಸುವ ನೆಪದಲ್ಲಿ ಅತ್ಯಾಚಾರವೆಸಗುತ್ತಿದ್ದ ಎಂಬುದನ್ನು ಪೊಲೀಸರು ಕಂಡುಕೊಂಡರು.
ಕೆಲವರು ಈ ದುಷ್ಕೃತ್ಯಗಳನ್ನು ವಿರೋಧಿಸಿದರೂ ಅವರಿಗೆ ಹಣದ ಆಮಿಷ ಒಡ್ಡಿ, ಬೆದರಿಕೆ ಹಾಕಿ ಪೊಲೀಸ್ ದೂರು ನೀಡದಂತೆ ತಡೆಯಲಾಗಿತ್ತು. ಈ ಎಲ್ಲ ಸಾಕ್ಷಿಗಳ ಆಧಾರದಲ್ಲಿ ಆಸಾರಾಂ ಬಾಪು ಆಗಸ್ಟ್ 23ಕ್ಕೆ ಪೊಲೀಸ್ ಸ್ಟೇಷನ್‌ಗೆ ಬರುವಂತೆ ಪೊಲೀಸರು ನೋಟಿಸ್ ನೀಡಿದರು.
ಆದರೆ ಆಸಾರಾಂ ಬರಲಿಲ್ಲ. ಬಂಧಿಸಲು ಹೋದರೆ ಸಾವಿರಾರು ಜನರಿಂದ ಸುತ್ತುವರಿದಿದ್ದ. ಕೊನೆಗೆ 5 ತಂಡಗಳು ಕಮಾಂಡೋ ಜೊತೆ ಇಂದೋರ್ ಆಶ್ರಮಕ್ಕೆ ಹೋದವು. ಆದರೆ ಆಸಾರಾಂ ತಪ್ಪಿಸಿಕೊಂಡಿದ್ದ. ಎಲ್ಲ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಯಿತು. ಆಸಾರಾಂ ಸಿಗಲಿಲ್ಲ. ಆಗಸ್ಟ್ 30ರಂದು ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ, “ಆತನನ್ನು ಹಿಡಿಯಲು ಆಗುತ್ತಿಲ್ಲ, ತಪ್ಪಿಸಿಕೊಳ್ಳುತ್ತಿದ್ದಾನೆ, ಸುಳಿವು ಸಿಕ್ಕರೆ ತಿಳಿಸಿ” ಎಂದು ಘೋಷಿಸಿದರು. ಅಂದು ಅವರಿಗೊಂದು ಪೋನ್ ಕಾಲ್ ಬರುತ್ತದೆ. ‘ಆಸಾರಾಂ ಬೋಫಾಲ್ ಎರ್ಪೋಟ್‌ನಲ್ಲಿದ್ದಾನೆ’ ಎಂದು ಮಾಹಿತಿ ದೊರೆಯುತ್ತದೆ.
ಪೊಲೀಸರು ಅಲ್ಲಿಗೆ ಹೋದಾಗ, ಅಲ್ಲಿಂದ ತಪ್ಪಿಸಿಕೊಂಡು ಇಂದೋರ್ ಆಶ್ರಮ ತಲುಪಿದ. ಅಲ್ಲಿ ಸಿವಿಲ್ ಡ್ರೆಸ್‌ನಲ್ಲಿ ಪೊಲೀಸರಿದ್ದರೂ ಆತ ಕೇರ್ ಮಾಡಲಿಲ್ಲ. ಆಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಸಾರಾಂ, “ಇದಕ್ಕಿಂತ ದೊಡ್ಡ ಆರೋಪಗಳು ನನ್ನ ಮೇಲಿವೆ. ಏನೂ ಆಗಲಿಲ್ಲ, ಈಗಲೂ ಏನು ಆಗುವುದಿಲ್ಲ. ಇದು ಹಳೆಯ ವೈಷಮ್ಯದಿಂದ ನನ್ನ ಮೇಲೆ ಹೆಣೆದ ರಾಜಕೀಯ ಷಡ್ಯಂತ್ರ. ಇದನ್ನು ಮಾಡಿದವರ ಹೆಸರು ಹೇಳುವುದಿಲ್ಲ. ಎಲ್ಲರಿಗೂ ಆರ್ಶೀವಾದ ಮಾಡುತ್ತೇನೆ” ಎಂದು ದಾಷ್ಟ್ಯ ಮೆರೆದ.
ಪೊಲೀಸರು ಕೊನೆಗೂ ಆಸಾರಾಂ ಬಳಿ ಎದುರಾದಾಗ, “ನಾನು ಯಾರು ಎಂದು ನಿಮಗೆ ಗೊತ್ತೆ?
ನನಗೆ ಎಷ್ಟು ಭಕ್ತರಿದ್ದಾರೆ, ಎಷ್ಟು ಜನರ ರಾಜಕೀಯ ನನ್ನ ಕೈಯಲ್ಲಿದೆ ಗೊತ್ತೆ?” ಎಂದು ಪ್ರಶ್ನಿಸಿದ. ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ. ತನ್ನ ಅನುಯಾಯಿಗಳನ್ನು ಸೇರಿಸಿ ಗಲಭೆಯೆಬ್ಬಿಸಲು ಪ್ರಯತ್ನಿಸಿದ. ಆದರೆ ಪೊಲೀಸರು ಬಂಧಿಸಿದರು. ಕರೆದೊಯ್ಯಲು ಮುಂದಾದರು. ಆತನ ಭಕ್ತರು ಹಿಂದೆಯೇ ಬಂದರು. ಕಾರನ್ನು ಹಿಂಬಾಲಿಸಿದರು. ಪ್ರತಿಭಟನೆ-ಗಲಾಟೆ ನಡೆಸಿದರು. ಆತನನ್ನು ಕರೆದೊಯ್ಯುವ ವಿಮಾನದ ಟಿಕೆಟ್ ಖರೀದಿಸಿ ಅಲ್ಲಿಯೂ ಗದ್ದಲ ಉಂಟು ಮಾಡಿದರು. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, “ನಾನು ತಪ್ಪು ಮಾಡಿದೆ” ಎಂದು ಆಸಾರಾಂ ಒಪ್ಪಿಕೊಂಡ. ಆತನ ಹೇಳಿಕೆಯು ಸಂತ್ರಸ್ತೆ ನೀಡಿದ ಹೇಳಿಕೆಗೆ ತಾಳೆಯಾಯಿತು. ಆತನ ಪೊಟೆನ್ಸಿ ಟೆಸ್ಟ್ ಸಹ ಸಾಬೀತಾಯಿತು. ಆನಂತರ ಕಸ್ಟಡಿಗೆ ಕಳಿಸಲಾಯಿತು.
ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದ್ದರು. ಆದರೆ ಆಸಾರಾಂ ಬೆಂಬಲಿಗರು ಮತ್ತು ರಾಜಕಾರಾಣಿಗಳು ಪೊಲೀಸರ ಮೇಲೆ ಒತ್ತಡ ತಂದರು, ಧಮ್ಕಿ ಹಾಕಿದರು. ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಐಪಿಎಸ್ ಅಧಿಕಾರಿ ಅಜಯ್ ಲಂಬಾ ಮೇಲೆ ಒತ್ತಡ ಹಾಕಿದರು. ಹಣ, ಆಸ್ತಿಯ ಆಮಿಷ ಒಡ್ಡಿದರು. ಆದರೆ ಪೊಲೀಸರು ಗಟ್ಟಿಯಾಗಿ ನಿಂತರು. ತನಿಖೆಗೆ ಜನಬೆಂಬಲವೂ ಸಿಕ್ಕಿತು. ಅಮೃತ್ ಪ್ರಜಾಪತಿ ಎಂಬ ಆರ್ಯುವೇದಿಕ್ ವೈದ್ಯ ಆ ಮೊದಲು ಆಸಾರಾಂ ಬಾಪು ಪರವಾಗಿ ಕೆಲಸ ಮಾಡಿದ್ದರು. ಹೆಚ್ಚು ಕಾಲ ಲೈಂಗಿಕ ಕ್ರಿಯೆ ನಡೆಸಲು ಪ್ರತಿ ದಿನ ಆಸಾರಾಂ ಬಾಪು, ಈ ವೈದ್ಯನಿಂದ ಇನ್ಸುಲಿನ್ ಡೋಸೆಜ್ ತೆಗೆದುಕೊಲ್ಳುತ್ತಿದ್ದ ಎಂಬ ವಿಚಾರ ಬಹಿರಂಗವಾಯಿತು.
ಕೊನೆಗೆ ಜೋಧ್‍ಪುರ ಪೊಲೀಸರು 2016ರಲ್ಲಿ 6,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದರು. ವಿಚಾರಣೆ ಆರಂಭವಾಯಿತು. ಚಿನ್ಮಯಾನಂದ (ಆಸಾರಾಂ ಬೆಂಬಲಿಗ) ಎನ್ನುವವ ನಕಲಿ ಪ್ರಮಾಣ ಪತ್ರ ತಂದು, “ಸಂತ್ರಸ್ತೆ ಅಪ್ರಾಪ್ತೆಯಲ್ಲ, ಹಾಗಾಗಿ ಪೋಕ್ಸೋ ಪ್ರಕರಣ ಹಿಂಪಡೆಯಬೇಕು” ಎಂದು ವಾದಿಸಿದ. ಆದರೆ ಕೋರ್ಟ್ ಅದಕ್ಕೆ ಸೊಪ್ಪು ಹಾಕಲಿಲ್ಲ.
ಇದನ್ನೂ ಓದಿರಿ: ನಾಗಾ ಸಾಧುಗಳು ಬೆತ್ತಲಾಗುವುದೆಂದರೇನು?
ಬಾಪು ಬೆಂಬಲಿಗರು ಅಷ್ಟಕ್ಕೆ ಸುಮ್ಮನಾಗಲಿಲ್ಲ. 7 ಜನ ಸಾಕ್ಷಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದರು. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ವಿಡಿಯೋಗ್ರಾಫರ್ ಮೇಲೆ ಕತ್ತಿಯಿಂದ ಹಲ್ಲೆ, ಮತ್ತೊಬ್ಬ ಸಾಕ್ಷಿಯ ಮೇಲೆ ಆಸಿಡ್ ದಾಳಿ ಇತ್ಯಾದಿ ಬೆದರಿಕೆಗಳು ನಡೆದಿವೆ. ಪೊಲೀಸ್ ವಾಹನಕ್ಕೆ ಬಾಂಬ್ ಹಾಕುವ ಹುನ್ನಾರ ಮಾಡಲಾಗಿತ್ತು. ಅಜಯ್ ಲಾಂಬ ಅವರು ತಮ್ಮ ‘Gunning for the Godman: The True Story Behind Asaram Bapu’s Conviction’ ಪುಸ್ತಕದಲ್ಲಿ ಈ ಬಗ್ಗೆ ವಿವರವಾಗಿ ಬರೆದಿದ್ದಾರೆ. ಇಷ್ಟೆಲ್ಲ ಷಡ್ಯಂತ್ರಗಳ ನಡುವೆಯೂ ಕೋರ್ಟ್, ಪೊಲೀಸರು ಸರಿಯಾಗಿ ತನಿಖೆ ನಡೆಸಿದ ಪರಿಣಾಮ 25 ಏಪ್ರಿಲ್ 2018ರಲ್ಲಿ ಜೋಧ್‍ಪುರ ಕೋರ್ಟ್ ಆಸಾರಾಂಗೆ ಜೀವಾವದಿ ಶಿಕ್ಷೆ ವಿಧಿಸಿದೆ. 2019ರಲ್ಲಿ ಸೂರತ್‌ನ ಇಬ್ಬರು ಬಾಲಕಿಯರು, “ಆಸಾರಾಂ ಬಾಪು ಮತ್ತು ಆತನ ಮಗ ನಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ” ಎಂದು ದೂರು ನೀಡಿದ್ದರು. ಆ ಪ್ರಕರಣದಲ್ಲಿ 2023ರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮನಸ್ಸು ಮಾಡಿದರೆ ಎಂತಹ ಪ್ರಭಾವಿಗೂ ಕಾನೂನಿನ ರುಚಿ ತೋರಿಸಬಹುದು ಎಂಬುದಕ್ಕೆ ಆಸಾರಾಂ ಪ್ರಕರಣ ಇದು ತಾಜಾ ಉದಾಹರಣೆಯಾಗಿದೆ. ನಮ್ಮ ರಾಜ್ಯದಲ್ಲಿನ ಸ್ವಯಂ ಘೋಷಿತ ದೇವಮಾನವರಿಂದ ಅತ್ಯಾಚಾರ-ಕೊಲೆಗೊಳಗಾದವರು ಇದ್ದಾರೆ. ಈ ಕೃತ್ಯಗಳಿಗೆ ಶಿಕ್ಷೆಯಾಗುವುದು ಯಾವಾಗ? ಧರ್ಮಸ್ಥಳದ ಸೌಜನ್ಯ ಎಂಬ ಹೆಣ್ಣು ಮಗಳ ಸಾವಿಗೆ ನ್ಯಾಯ ಸಿಗುವುದೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನಿಜವಾದ ಅಪರಾಧಿಗೆ ಶಿಕ್ಷೆಯಾಗಲಿಲ್ಲ.
ಅಂದಹಾಗೆ, ಯಾವುದೇ ಸ್ವಯಂ ಘೋಷಿತ ದೇವಮಾನವರನ್ನು ಕುರುಡಾಗಿ ನಂಬಬಾರದು ಎಂಬುದಕ್ಕೆ ಆಸಾರಾಂ ಬಾಪು ಅತ್ಯಾಚಾರ ಪ್ರಕರಣಗಳು ದೃಷ್ಟಾಂತವಾಗಿ ನಿಂತಿವೆ. ‘ಕಲ್ಟ್ ಆಫ್ ಫಿಯರ್’ ವೆಬ್ ಸೀರೀಸ್ ಇಂತಹ ಸತ್ಯಗಳ ಕುರಿತು ಮಾತನಾಡುವುದರಿಂದಾಗಿ ಆಸಾರಾಂ ಅಂಧಭಕ್ತರಿಗೆ ಕಣ್ಣುಗಳು ಕೆಂಪಾಗಿವೆ.

ಮುತ್ತುರಾಜು
ಪತ್ರಕರ್ತ, ಲೇಖಕ




