ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಆಳವಾದ ಅಧ್ಯಯನದ ಮೂಲಕ ‘ಭಗವದ್ಗೀತಾವಾದ’ಗಳನ್ನು ಎರಡು ನೆಲೆಯಲ್ಲಿ ಚರ್ಚಿಸಿದ್ದಾರೆ. ಒಂದು: ಭಗವದ್ಗೀತೆ ಹೇಗೆ ಮನುವಾದವನ್ನು ಉಸಿರಾಡುತ್ತದೆ ಮತ್ತು ಪ್ರತಿಗಾಮಿಯಾಗಿದೆ. ಎರಡು: ಭಗವದ್ಗೀತೆ ಬೌದ್ಧಧರ್ಮದ ನಂತರದಲ್ಲಿ ಹುಟ್ಟಿದ್ದೇ ಹೊರತು, ಅದಕ್ಕಿಂತ ಹಿಂದಿನದ್ದಲ್ಲ. ಈ ಎರಡಕ್ಕೂ ಭಗವದ್ಗೀತೆಯಲ್ಲಿನ ಪಠ್ಯಗಳನ್ನೇ ಆಧಾರವಾಗಿ ಇಟ್ಟು ಸತ್ಯದರ್ಶನ ಮಾಡುತ್ತಾರೆ.
‘ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?’ ಎಂಬ ಲೇಖನದಲ್ಲಿ ಈಗಾಗಲೇ ಭಗವದ್ಗೀತೆಯ ಪ್ರತಿಗಾಮಿ ವಿಚಾರಗಳನ್ನು ವಿಸ್ತೃತವಾಗಿ ನೋಡಿದ್ದೇವೆ (ಆಸಕ್ತರು ‘ಇಲ್ಲಿ’ ಓದಬಹುದು). ಅದರ ಮುಂದುವರಿಕೆಯಾಗಿ ಬರೆಯುತ್ತಿರುವ ಈ ಲೇಖನದಲ್ಲಿ ಬಾಬಾಸಾಹೇಬರ ವಿದ್ವತ್‌ಪೂರ್ಣ ಸಂಶೋಧನೆಯ ಎರಡನೇ ನೆಲೆಯನ್ನು ಚರ್ಚಿಸಲಾಗುತ್ತಿದೆ.
ಬೌದ್ಧಧರ್ಮದ ಪೂರ್ವದಲ್ಲೇ ‘ಭಗವದ್ಗೀತೆ’ ರಚನೆಯಾಗಿತ್ತು ಎಂಬ ವಾದವನ್ನು ಬಾಬಾಸಾಹೇಬರು ಮುರಿದು ಹಾಕುತ್ತಾರೆ. ಆ ಕಾಲದ ಮಹಾನ್ ವಿದ್ವಾಂಸರೆನಿಸಿಕೊಂಡವರ ಬರೆಹಗಳಲ್ಲಿನ ಮೊಂಡುವಾದಗಳನ್ನು ಸಾಕ್ಷ್ಯಗಳ ಸಹಿತ ಬಟಾಬಯಲು ಮಾಡುತ್ತಾರೆ. ‘ಭಗವದ್ಗೀತಾ ರಹಸ್ಯ’ ಬರೆದ ಬಾಲಗಂಗಾಧರ ತಿಲಕರ ಸಂಶೋಧನೆಯ ಚಾಣಾಕ್ಷತೆ ಮತ್ತು ಮಿತಿಗಳನ್ನು ನಿಕಷಕ್ಕೆ ಒಡ್ಡುತ್ತಾರೆ.
ಅಂಬೇಡ್ಕರ್ ಅವರು ಬರೆದಿರುವ ‘ಪ್ರಾಚೀನ ಕಾಲದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ (Revolution And Counter-Revolution In Ancient India) ಕೃತಿಯಲ್ಲಿನ ‘ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ: ಕೃಷ್ಣ ಮತ್ತು ಆತನ ಗೀತೆ’ ಎಂಬ ದೀರ್ಘ ಲೇಖನ (ಬಾಬಾಸಾಹೇಬರ ಬರೆಹಗಳು ಮತ್ತು ಭಾಷಣಗಳು, ಸಂಪುಟ 3) ಭಗವದ್ಗೀತೆಯ ಕಾಲಮಾನವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಸಮಕಾಲೀನ ಅಥವಾ ಈ ಹಿಂದೆ ಬಂದಿರುವ ವಿದ್ವಾಂಸರ ಚರ್ಚೆಗಳನ್ನು ಸ್ಥೂಲವಾಗಿ ಅವಲೋಕಿಸಿ, ಅವುಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.
ಇದನ್ನೂ ಓದಿರಿ: ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?
‘ಜೈಮಿನಿಯ ಪೂರ್ವಮೀಮಾಂಸೆ’ ಮತ್ತು ‘ಭಗವದ್ಗೀತೆ’ಯಲ್ಲಿ ಬರುವ ವಿಚಾರಗಳಲ್ಲಿ ವ್ಯತ್ಯಾಸಗಳೇನೂ ಇಲ್ಲ. ಬೌದ್ಧಿಸಂನ ಪ್ರಖರತೆಯಿಂದಾಗಿ ಜೈಮಿನಿಯ ವಿಚಾರಗಳು ಮೂಲೋತ್ಪಾಟನೆಯಾಗುತ್ತಿದ್ದಾಗ, ಅದನ್ನು ತಡೆಯಲೆಂದೇ ‘ಗೀತೆ’ಯನ್ನು ಅಸ್ತ್ರವಾಗಿ ಬಳಸಲಾಯಿತು ಎಂಬ ನಿರ್ಣಯಕ್ಕೆ ಬಾಬಾಸಾಹೇಬರು ಬರುತ್ತಾರೆ.
ಭಗವದ್ಗೀತೆಯು ಬುದ್ಧನ ಕಾಲಕ್ಕಿಂತ ಹಿಂದಿನದ್ದು ಎಂದು ವಾದಿಸುವುದರ ಹಿಂದೆ ಇದ್ದದ್ದು, ಅಕ್ಷರಶಃ ಮೇಲರಿಮೆಯಷ್ಟೇ. ಬುದ್ಧನ ವಿಚಾರಗಳನ್ನು ಭಗವದ್ಗೀತೆ ನಕಲು ಮಾಡಿದೆ ಎಂಬ ಟೀಕೆಗಳನ್ನು ಎದುರಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದು ಇಂಥವರ ವಾದಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿಯೇ ಅಂಬೇಡ್ಕರ್ ಅವರು ಭಗವದ್ಗೀತೆಯಲ್ಲಿನ ಪ್ರತಿಗಾಮಿ ಸಂಗತಿಗಳನ್ನು ಉಲ್ಲೇಖಿಸುತ್ತಲೇ, ಅದರ ಕಾಲದ ಬಗ್ಗೆ ವಿವರಿಸುತ್ತಾರೆ.
“ಭಗವದ್ಗೀತೆಯು ಜೈಮಿನಿಯನ್ನಾಗಲೀ ಪೂರ್ವ ಮೀಮಾಂಸೆಯನ್ನಾಗಲೀ ಹೆಸರಿಸುವುದಿಲ್ಲ ಎನ್ನುವುದು ನಿಜ. ಆದರೆ ಅಧ್ಯಾಯ 3, ಶ್ಲೋಕ 9 ರಿಂದ 18ರಲ್ಲಿ ಭಗವದ್ಗೀತೆಯು ಜೈಮಿನಿ ತನ್ನ ಪೂರ್ವ ಮೀಮಾಂಸೆಯಲ್ಲಿ ಹೇಳುವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತದೆ ಎನ್ನುವುದರಲ್ಲಿ ಅನುಮಾನವಿದೆಯೆ? ಗೀತೆಯ ಪ್ರಾಚೀನತೆಯಲ್ಲಿ ನಂಬಿಕೆಯಿಡುವ ತಿಲಕ್ ಕೂಡ ಪೂರ್ವ ಮೀಮಾಂಸೆಯ ಸಿದ್ಧಾಂತಗಳ ಪರೀಕ್ಷೆಯಲ್ಲಿ ಗೀತೆ ನಿರತವಾಗಿದೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಈ ವಾದವನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಜೈಮಿನಿಯು ಕರ್ಮಯೋಗವನ್ನು ಮಾತ್ರ ಬೋಧಿಸುತ್ತಾನೆ. ಆದರೆ ಭಗವದ್ಗೀತೆ ‘ಅನಾಸಕ್ತಿ ಕರ್ಮ’ವನ್ನು ಬೋಧಿಸುತ್ತದೆ. ಹೀಗೆ ಗೀತೆ ಮೂಲಭೂತವಾಗಿ ಮಾರ್ಪಡಿಸಲಾದ ಒಂದು ಸಿದ್ಧಾಂತವನ್ನು ಬೋಧಿಸುತ್ತದೆ. ಭಗವದ್ಗೀತೆ ಕರ್ಮಯೋಗವನ್ನು ಮಾರ್ಪಡಿಸುವುದಷ್ಟೇ ಅಲ್ಲದೆ ಕೇವಲ ಕರ್ಮಯೋಗ ಪ್ರತಿಪಾದಕರನ್ನು ಸ್ವಲ್ಪ ಉಗ್ರ ಮಾತುಗಳಲ್ಲಿ ಖಂಡಿಸುತ್ತದೆ. ಜೈಮಿನಿಗಿಂತ ಮೊದಲು ಗೀತೆ ಬಂದಿದ್ದರೆ ಭಗವದ್ಗೀತೆಯ ಈ ಖಂಡನೆಯನ್ನು ಜೈಮಿನಿ ಎತ್ತಿಕೊಂಡು ಉತ್ತರಿಸುತ್ತಿದ್ದನೆಂದು ನಿರೀಕ್ಷಿಸಬಹುದು. ಆದರೆ ಭಗವದ್ಗೀತೆಯ ಈ ಅನಾಸಕ್ತಿ ಕರ್ಮಯೋಗದ ಬಗ್ಗೆ ಜೈಮಿನಿಯಲ್ಲಿ ಯಾವುದೇ ಉಲ್ಲೇಖವನ್ನು ನಾವು ಕಾಣುವುದಿಲ್ಲ ಏಕೆ?” ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ.

ಇದನ್ನೂ ಓದಿರಿ: ‘ಭಾರತದ ಪ್ರಜೆಗಳಾದ ನಾವು’- ಸಂವಿಧಾನದಲ್ಲಿ ಅಡಕವಾಗಿದ್ದು ಹೇಗೆ?
ತಿಲಕರಂತೆಯೇ ವಾದ ಮಾಡುವ ಸಂಸ್ಕೃತ ವಿದ್ವಾಂಸ ಕಾಶಿನಾಥ್ ತ್ರಿಂಬಕ್ ತೆಲಾಂಗ್ ಅವರ ವಾದವನ್ನು ವಿಸ್ತೃತವಾಗಿ ಪರಿಶೀಲನೆಗೆ ಒಡ್ಡುತ್ತಾರೆ. ತೆಲಾಂಗ್ ಅವರ ಪ್ರಕಾರ, “ಬ್ರಾಹ್ಮಣ ಧರ್ಮದ ವಿರುದ್ಧ ಬುದ್ಧನ ಪ್ರತಿಭಟನೆಯ ಪ್ರಧಾನಾಂಶಗಳು ವೇದ ಪ್ರಾಮಾಣ್ಯ ಮತ್ತು ಜಾತಿಯ ಭೇದಭಾವನೆಗಳ ನೈಜ ದೃಷ್ಟಿಯ ಮೇಲೆ ನಿಂತಿರುವಂತೆ ಕಾಣುತ್ತವೆ… ಬುದ್ಧ ಹೋದಷ್ಟು ದೂರ ಗೀತೆ ಹೋಗದಿದ್ದರೂ, ಅದು ರಚನೆಯಾದ ಕಾಲದಲ್ಲಿ ಪ್ರಚಲಿತವಿದ್ದ ಅಭಿಪ್ರಾಯಗಳ ವಿರುದ್ಧದ ಪ್ರತಿಭಟನೆಯನ್ನು ಅದು ಒಳಗೊಂಡಿದೆ. ಬೌದ್ಧಧರ್ಮದ ಹಾಗೆ ಗೀತೆ ವೇದಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದಿಲ್ಲ. ಆದರೆ ಅವುಗಳನ್ನು ಮೂಲೆಗಿಡುತ್ತದೆ. ಜಾತಿಯನ್ನು ಗೀತೆ ಬುಡಸಮೇತ ಕಿತ್ತು ಹಾಕುವುದಿಲ್ಲ. ಅದು ಜಾತಿಯನ್ನು ಸಮರ್ಥಿಸಲಾಗದಂತಹ ಆಧಾರದ ಮೇಲೇನೂ ಇಡುವುದಿಲ್ಲ… ಪ್ರಚಲಿತ ಧರ್ಮದ ಕೇಂದ್ರವನ್ನೇ ಅಲುಗಾಡಿಸುವುದರಲ್ಲಿ ನಿರತವಾದ ಆಧ್ಯಾತ್ಮಿಕ ವಿಪ್ಲವವನ್ನು ಜಗತ್ತಿಗೆ ತೋರಿಸುವುದರಲ್ಲಿ ಗೀತೆ ಮತ್ತು ಬೌದ್ಧಧರ್ಮ ಒಂದೇ ತೆರನಾಗಿದ್ದವು. ಗೀತೆ ಬೌದ್ಧಧರ್ಮಕ್ಕಿಂತ ಹಿಂದಿನದು, ಆದರೆ ಕ್ರಾಂತಿಯ ವಿಷಯದಲ್ಲಿ ಬೌದ್ಧಧರ್ಮದಷ್ಟು ಗಂಭೀರವಾಗಿರಲಿಲ್ಲ ಅಥವಾ ಬ್ರಾಹ್ಮಣ ಧರ್ಮಕ್ಕೆ ಬೌದ್ಧಧರ್ಮದಿಂದ ಧಕ್ಕೆ ಉಂಟಾಗಿದ್ದರೂ ಗೀತೆ ಬ್ರಾಹ್ಮಣ ಧರ್ಮವನ್ನು ಎತ್ತಿ ಹಿಡಿಯಲು ಪ್ರಯತ್ನಿಸಿತು..”. ಬೌದ್ಧಧರ್ಮದಿಂದ ಗೀತೆ ಪ್ರಭಾವಿತವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಬಹುತೇಕರಲ್ಲಿ ಮನಸ್ಸಿಲ್ಲದಿರುವುದೇ ಇಂತಹ ವಾದಕ್ಕೆ ಮೂಲ. ಬುದ್ಧನಿಂದ ಏನನ್ನಾದರೂ ಗೀತೆ ಸ್ವೀಕರಿಸಿದೆ ಎಂಬುದನ್ನು ಅಲ್ಲಗಳೆಯುವುದೇ ಇದರ ಉದ್ದೇಶ. ಭಗವದ್ಗೀತೆಯಲ್ಲಿ ಹೋಲಿಕೆ ಬಂದಾಗಲೆಲ್ಲ, ಈ ವಿಚಾರಗಳನ್ನು ಉಪನಿಷತ್ತುಗಳಿಂದ ಗೀತೆ ತೆಗೆದುಕೊಂಡಿದೆ ಎಂಬ ವಾದವನ್ನು ಇಡುತ್ತಾರೆ. ತಿಲಕ್ ಮತ್ತು ಡಾ.ರಾಧಾಕೃಷ್ಣನ್ ಅವರಲ್ಲಿಯೂ ಈ ಧೋರಣೆ ಕಾಣುತ್ತದೆ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.
ಹೀಗೆ ಹಾರಿಕೆಯ ಟೀಕೆ ಮಾಡಿ, ಬಾಬಾಸಾಹೇಬರು ‘ಹಿಟ್ ಅಂಡ್ ರನ್’ ಮಾಡುವವರಲ್ಲ. ಗೀತೆಗೂ ಬೌದ್ಧಿಸಂಗೂ ಇರುವ ಸಾಮ್ಯತೆಯನ್ನು ಮುಂದಿಟ್ಟು, ಬೌದ್ಧಿಸಂ ವಿಚಾರಗಳೇ ಪ್ರಥಮ ಹೇಗೆ ಎಂಬುದನ್ನು ಸಮರ್ಥಿಸುತ್ತಾರೆ. ಬಾಬಾಸಾಹೇಬರ ಮಾತುಗಳು ಹೀಗಿವೆ:
“ಸಾಂಖ್ಯ ತತ್ವದಿಂದ ಭಗವದ್ಗೀತೆ ತುಂಬಿಹೋಗಿದೆ ಎಂದು ಹೇಳುವುದು ನಿಜವಾದರೆ, ಗೀತೆಯು ಬೌದ್ಧಧರ್ಮದ ವಿಚಾರಗಳಿಂದ ತುಂಬಿಹೋಗಿದೆ ಎಂದು ಹೇಳುವುದು ಇನ್ನೂ ಹೆಚ್ಚು ನಿಜವಾಗಿದೆ. ಈ ಎರಡರ ನಡುವಣ ಸಾಮ್ಯತೆ ಕೇವಲ ವಿಚಾರದಲ್ಲಷ್ಟೇ ಅಲ್ಲ ಭಾಷೆಯಲ್ಲಿಯೂ ಇದೆ. ಇದೆಷ್ಟು ನಿಜ ಎಂಬುದನ್ನು ಒಂದೆರಡು ಉದಾಹರಣೆಗಳು ತೋರಿಸುತ್ತವೆ. ಭಗವದ್ಗೀತೆ ಬ್ರಹ್ಮ ನಿರ್ವಾಣವನ್ನು ಚರ್ಚಿಸುತ್ತದೆ. ಬ್ರಹ್ಮ ನಿರ್ವಾಣವನ್ನು ಗಳಿಸಲು ಇವು ಸೋಪಾನಗಳು: (1) ಶ್ರದ್ಧೆ (ಆತ್ಮವಿಶ್ವಾಸ), (ii) ವ್ಯವಸಾಯ (ದೃಢನಿರ್ಧಾರ), (iii) ಸ್ಮೃತಿ (ಗುರಿಯ ಸ್ಮರಣೆ), (iv) ಸಮಾಧಿ (ಗಂಭೀರ ಧ್ಯಾನ) ಮತ್ತು (v) ಪ್ರಜ್ಞೆ (ನೈಜ ಅರಿವು ಅಥವಾ ಅಂತರ್ ನೋಟ). ಈ ನಿರ್ವಾಣ ತತ್ವವನ್ನು ಗೀತೆ ಎಲ್ಲಿಂದ ತೆಗೆದುಕೊಂಡಿತು? ಅದು ಉಪನಿಷತ್ತುಗಳಿಂದಲ್ಲ ಎಂಬುದು ಖಚಿತ. ‘ನಿರ್ವಾಣ’ ಶಬ್ದವನ್ನು ಯಾವ ಉಪನಿಷತ್ತೂ ಕೂಡ ಬಳಸುವುದಿಲ್ಲ. ಈ ಇಡೀ ವಿಚಾರವೇ ವಿಶಿಷ್ಟವಾಗಿ ಬೌದ್ಧಧರ್ಮದ್ದು. ಅದನು ಬೌದ್ಧಧರ್ಮದಿಂದ ತೆಗೆದುಕೊಳ್ಳಲಾಗಿದೆ. ಈ ವಿಷಯದಲ್ಲಿ ಯಾರಿಗಾದರೂ ಏನೇ ಅನುಮಾನವಿದ್ದರೂ ಅವರು ಭಗವದ್ಗೀತೆಯ ಬ್ರಹ್ಮ ನಿರ್ವಾಣದ ಜೊತೆ ಮಹಾಪರಿನಿಬ್ಬಾಣ ಸುತ್ತದಲ್ಲಿ ಪ್ರತಿಪಾದಿಸಿರುವ ಬೌದ್ಧ ಕಲ್ಪನೆಯ ನಿರ್ವಾಣವನ್ನು ಹೋಲಿಸಿ ನೋಡಬಹುದು. ನಿರ್ವಾಣಕ್ಕೆ ಬದಲಾಗಿ ಇಡಿ ಬ್ರಹ್ಮ ನಿರ್ವಾಣ ಕಲ್ಪನೆಯನ್ನು ಗೀತೆ ತೆಗೆದುಕೊಂಡಿದ್ದು, ಅದನ್ನು ಬೌದ್ಧಧರ್ಮದಿಂದ ಹರಣ ಮಾಡಲಾಗಿದೆ ಎಂಬ ವಿಚಾರವನ್ನು ಮರೆ ಮಾಡುವುದಕ್ಕಾಗಿ ಎಂಬ ವಸ್ತು ಸ್ಥಿತಿ ಸಾಬೀತಾಗುತ್ತದಲ್ಲವೆ?”

ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
“ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳಿ. ಅಧ್ಯಾಯ 7 ಶ್ಲೋಕ 13-20ರಲ್ಲಿ ಕೃಷ್ಣನಿಗೆ ಯಾರು ಪ್ರಿಯ ಎಂಬ ಚರ್ಚೆಯಿದೆ. ಜ್ಞಾನಯೋಗಿಯೋ? ಕರ್ಮಯೋಗಿಯೋ? ಅಥವಾ ಭಕ್ತನೋ? ಭಕ್ತಿ ಪ್ರಿಯನೆಂದು ಕೃಷ್ಣ ಹೇಳುತ್ತಾನೆ. ಆದರೆ ಅವನಿಗೆ ಭಕ್ತನ ನೈಜ ಲಕ್ಷಣಗಳಿರಬೇಕು. ನಿಜ ಭಕ್ತನ ಲಕ್ಷಣವೇನು? ಕೃಷ್ಣನ ಪ್ರಕಾರ ಯಾರು ಮೈತ್ರಿ, ಕರುಣೆ, ಮುದಿತಾ ಮತ್ತು ಉಪೇಕ್ಷೆಯನ್ನು ಅನುಷ್ಠಾನ ಮಾಡುತ್ತಾನೋ ಅವನೇ ನಿಜವಾದ ಭಕ್ತ. ಪೂರ್ಣ ಭಕ್ತನ ಈ ಲಕ್ಷಣಗಳನ್ನು ಭಗವದ್ಗೀತೆ ಎಲ್ಲಿಂದ ತೆಗೆದುಕೊಂಡಿತು? ಮತ್ತೆ ಇದಕ್ಕೆ ಮೂಲ ಬೌದ್ಧ ಧರ್ಮ. ಇದಕ್ಕೆ ಆಧಾರ ಬೇಕೆನ್ನುವವರು ಹೃದಯ ಕೃಷಿಗೆ ಅಗತ್ಯವಾದ ಭಾವನೆಗಳನ್ನು ಬುದ್ಧ ಬೋಧಿಸಿರುವ ‘ಮಹಾಪಾದನ ಸುತ್ತ’ ಮತ್ತು ‘ತೇವಿಜ್ಜ ಸುತ್ತ’ಗಳನ್ನು ಹೋಲಿಸಬಹುದು. ಈ ಇಡೀ ಸಿದ್ಧಾಂತವನ್ನು ಪದಶಃ ಬೌದ್ಧ ಧರ್ಮದಿಂದ ಎತ್ತಿಕೊಂಡಿರುವುದು ತೌಲನ ಕ್ರಮದಿಂದ ಗೊತ್ತಾಗುತ್ತದೆ.”
“…ಬುದ್ಧ ಸುತ್ತಗಳ ಮೇಲೆಯೇ ಭಗವದ್ಗೀತೆ ಉದ್ದೇಶಪೂರ್ವಕವಾಗಿ ರೂಪಿತವಾಗಿದೆ. ಬುದ್ಧ ಸುತ್ತಗಳು ಸಂಭಾಷಣೆಗಳಾಗಿವೆ. ಭಗವದ್ಗೀತೆ ಕೂಡ ಹಾಗೆಯೆ ಇದೆ. ಬುದ್ಧನ ಧರ್ಮ, ಸ್ತ್ರೀಯರಿಗೂ ಶೂದ್ರರಿಗೂ ಮೋಕ್ಷವನ್ನು ದಯಪಾಲಿಸಿತು. ಸ್ತ್ರೀಯರಿಗೆ ಮತ್ತು ಶೂದ್ರರಿಗೆ ಮೋಕ್ಷ ಕೊಡಲು ಕೃಷ್ಣ ಕೂಡ ಮುಂದೆ ಬರುತ್ತಾನೆ. ಬೌದ್ಧರು ‘ನಾನು ಬುದ್ಧನಿಗೆ ಶರಣು ಹೋಗುತ್ತೇನೆ. ಧಮ್ಮಕ್ಕೆ ಶರಣು ಹೋಗುತ್ತೇನೆ. ಸಂಘಕ್ಕೆ ಶರಣು ಹೋಗುತ್ತೇನೆ’ ಎಂದು ಹೇಳುತ್ತಾರೆ. ಹಾಗೆ ಕೃಷ್ಣ ಕೂಡ ಹೇಳುತ್ತಾನೆ- ‘ಸರ್ವಧರ್ಮಗಳನ್ನು ಪರಿತ್ಯಾಗ ಮಾಡಿ ನನ್ನೊಬ್ಬನಿಗೇ ಶರಣು ಹೋಗು’. ಬೌದ್ಧಧರ್ಮ ಮತ್ತು ಗೀತೆಗೂ ಇರುವಷ್ಟು ಸಾದೃಶ್ಯ ಬೇರಾವುದಕ್ಕೂ ಇಲ್ಲ”. ಇದು ಬಾಬಾಸಾಹೇಬರು ತಮ್ಮ ಸಂಶೋಧನೆ ಮತ್ತು ಪ್ರಖರ ವಿದ್ವತ್ತಿನ ಮೂಲಕ ತೆರೆದಿಡುವ ಸಂಗತಿಗಳು.
ಬಾಬಾಸಾಹೇಬರಿಗೆ ಮುಖ್ಯವಾಗಿ ದೃಷ್ಟಿ ಹರಿಸಬೇಕೆನಿಸಿದ್ದು ‘ತಿಲಕ’ರ ‘ಭಗವದ್ಗೀತಾವಾದ’ದ ಬಗ್ಗೆ. ತಿಲಕರು ಚಾಣಾಕ್ಷತೆಯಿಂದ ವಾದ ಮಾಡುವುದನ್ನು ಅಂಬೇಡ್ಕರ್ ಗುರುತಿಸುತ್ತಾರೆ. ‘ಹೀನಯಾನ ಮತ್ತು ಮಹಾಯಾನ’ದ ನಡುವಿನ ಭಿನ್ನತೆಗಳನ್ನು ತೋರಿಸಿ, ಆ ಮೂಲಕ ಭಗವದ್ಗೀತೆಯ ಮೇಲರಿಮೆಯನ್ನು ತಿಲಕರು ಪ್ರತಿಪಾದಿಸುತ್ತಾರೆ. “ಬೌದ್ಧಧರ್ಮ ಮತ್ತು ಭಗವದ್ಗೀತೆಗಳಲ್ಲಿ ಸಾಮ್ಯತೆ ಇದ್ದರೆ, ಅದು ಭಗವದ್ಗೀತೆಯಿಂದ ಮಹಾಯಾನಿಗಳು ಎರವಲು ಪಡೆದದ್ದೇ ಕಾರಣ” ಎನ್ನವ ಜೊತೆಗೆ ‘ಮಹಾಭಾರತ’ದ ಕಾಲದಲ್ಲೇ ಸಂಪೂರ್ಣ ಗೀತೆ ರಚನೆಯಾಯಿತು ಎನ್ನುವಲ್ಲಿಗೂ ತಿಲಕರ ವಾದ ಸಾಗುತ್ತದೆ.
ಹೀನಯಾನ ಮತ್ತು ಮಹಾಯಾನ ಪಂಥಗಳ ಭಿನ್ನತೆಯನ್ನು ಮುನ್ನಲೆಗೆ ತಂದು, ಚಾಣಕ್ಷತೆ ಮರೆಯಲೆತ್ನಿಸುವ ತಿಲಕರಿಗೆ ಅಂಬೇಡ್ಕರ್ ಹೀಗೆ ಪ್ರತಿಕ್ರಿಯಿಸುತ್ತಾರೆ: “ಶ್ರೀ ಕಿಮುರ ಹೇಳುವಂತೆ ಮಹಾಯಾನಿ ಎಂದರೆ ಮಹಾಸಾಂಘಿಕ ಎಂದು ಹೆಸರಾದ ಬೌದ್ಧ ಪಂಥದ ಇನ್ನೊಂದು ಹೆಸರಷ್ಟೆ. ಮಹಾಸಾಂಘಿಕರ ಪಂಥ ಈಗ ತಿಳಿದುಕೊಂಡಿರುವುದಕ್ಕಿಂತ ಬಹಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿತ್ತು. ಪರಂಪರೆಯನ್ನು ನಂಬುವುದಾದರೆ ಬುದ್ಧನ ಸಾವಿನ ನಂತರ 236 ವರ್ಷಗಳಾದ ಮೇಲೆ ಬುದ್ದನ ತತ್ವಗಳನ್ನು ನಿಷ್ಕರ್ಷಿಸಲು ಪಾಟಲೀಪುತ್ರದಲ್ಲಿ ನಡೆದ ಅಥವಾ ಬೌದ್ಧ ಮಹಾಸಭೆಯಲ್ಲಿ (ಕ್ರಿ.ಪೂ. 307) ಈ ಪಂಥ ಅಸ್ತಿತ್ವಕ್ಕೆ ಬಂತು. ಅದು ಬೌದ್ಧಧರ್ಮದ ಥೆರವಾಡ ಪಂಥವನ್ನು ವಿರೋಧಿಸಿತು. ಈ ಥೆರವಾಡ ಪಂಥವೇ ಮುಂದೆ ಹೀನಯಾನ (ಅಂದರೆ ಹೀನ ಪಂಥಾವಲಂಬಿಗಳು) ಎಂದು ಕೆಟ್ಟ ಹೆಸರು ಪಡೆಯಿತು. ಮಹಾಯಾನಿಗಳು ಎಂದು ಮುಂದೆ ಕರೆಯಲಾದ ಮಹಾಸಂಘಿಕರು ಅಸ್ತಿತ್ವಕ್ಕೆ ಬಂದಾಗ ಭಗವದ್ಗೀತೆಯ ಹೆಸರು ಕೂಡ ಇರಲಿಲ್ಲ”.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)
ಗೀತೆಯು ಮಹಾಭಾರತದೊಂದಿಗೆ ಒಮ್ಮೆಲೇ ಸಂಪೂರ್ಣವಾಗಿ ರಚನೆಯಾಯಿತು, ವ್ಯಾಸನೇ ಗೀತೆಯ ಕರ್ತೃ ಎಂದು ಪ್ರತಿಪಾದಿಸಲು ತಿಲಕರು ಮೊಂಡುವಾದ ಮಾಡುತ್ತಾರೆ. ಮಹಾಭಾರತದ ಭಾರತದ ವಿಚಾರವಾಗಿ ತೀಕ್ಷ್ಣವಾಗಿ ವಿಮರ್ಶಿಸುವ ಅಂಬೇಡ್ಕರ್, “ತಿಲಕರ ಕಲ್ಪನೆಯನ್ನು ಮಹಾಭಾರತದ ಚರ್ಚೆಗಷ್ಟೇ ಸೀಮಿತಗೊಳಿಸಿದರೆ, ಅದು ಜನಜನಿತವಾಗಿರುವ ಭಾರತೀಯ ಪರಂಪರೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಪರಂಪರೆ ಮಹಾಭಾರತದ ರಚನೆಯನ್ನು ಮೂರು ಹಂತಗಳಾಗಿ ವಿಭಜಿಸುತ್ತದೆ : 1. ಜಯ 2. ಭಾರತ. 3. ಮಹಾಭಾರತ. ಪ್ರತಿಯೊಂದು ಭಾಗವನ್ನು ಬೇರೆ ಬೇರೆ ಲೇಖಕರು ಬರೆದರೆಂದು ಅದು ಹೇಳುತ್ತದೆ. ಈ ಪರಂಪರೆಯ ಪ್ರಕಾರ ಮೊದಲ ಆವೃತ್ತಿಯ ಕರ್ತೃ ವ್ಯಾಸ. ಇದನ್ನು ‘ಜಯ’ ಎಂದು ಕರೆಯುತ್ತಾರೆ. ‘ಭಾರತ’ವೆಂದು ಕರೆಯುವ ಎರಡನೇ ಆವೃತ್ತಿಯ ಕರ್ತೃ ವೈಶಂಪಾಯನ ಎಂದು ಪರಂಪರೆ ಹೇಳುತ್ತದೆ. ‘ಮಹಾಭಾರತ’ದ ಮೂರನೆಯ ಆವೃತ್ತಿಯನ್ನು ‘ಸೌತಿ’ ಬರೆದ ಎನ್ನುತ್ತದೆ” ಎನ್ನುತ್ತಾರೆ. ಮುಂದುವರಿದು, “ಮಹಾಭಾರತದ ರಚನೆಯ ವಿಷಯದಲ್ಲಿ ಗೀತೆಯನ್ನು ಜೋಡಿಸುವ ತಿಲಕರ ಉದ್ದೇಶ ಸ್ಪಷ್ಟವಿದೆ. ಅವರು ಭಾವಿಸುವಂತೆ ಮಹಾಭಾರತದ ಗೊತ್ತಿರುವ ಕಾಲವನ್ನು ಇಟ್ಟುಕೊಂಡು ಗೀತೆಯ ಗೊತ್ತಿಲ್ಲದಿರುವ ಕಾಲವನ್ನು ತೀರ್ಮಾನಿಸುವುದಾಗಿದೆ” ಎಂದು ಅಭಿಪ್ರಾಯಪಡುತ್ತಾರೆ.

“ಮಹಾಭಾರತ ಮತ್ತು ಭಗವದ್ಗೀತೆಗಳ ಅವಿನಾಭಾವ ಸಂಬಂಧವನ್ನು ಸ್ಥಾಪಿಸಲು ತಿಲಕರು ಬಳಸಿರುವ ಆಧಾರವೇ ದುರದೃಷ್ಟವಶಾತ್ ಅವರ ವಾದದ ಅತ್ಯಂತ ದುರ್ಬಲ ಭಾಗವಾಗಿದೆ. ಗೀತೆ ಮಹಾಭಾರತದ ಒಂದು ಭಾಗ. ಇವೆರಡರ ಕರ್ತೃ ವ್ಯಾಸ. ಇದು ತಿಲಕರ ವಾದ. ಇದನ್ನು ಒಪ್ಪಿಕೊಂಡರೆ ಸತ್ಯಕ್ಕೆ ಬದಲಾಗಿ ಮಿಥ್ಯೆಯನ್ನು ಒಪ್ಪಿಕೊಂಡಂತಾಗುತ್ತದೆ. ವ್ಯಾಸ ಎನ್ನುವುದು ಗುರುತಿಸಲು ಸಾಧ್ಯವಾದ ಯಾವುದೋ ಒಬ್ಬ ವ್ಯಕ್ತಿಯ ಹೆಸರೆಂದು ಅದು ಭಾವಿಸುತ್ತದೆ. ಮಹಾಭಾರತದ ಕರ್ತೃವಿನ ಹೆಸರು ವ್ಯಾಸ. ಪುರಾಣಗಳ ಕರ್ತೃ ವ್ಯಾಸ. ಭಗವದ್ಗೀತೆಯ ಕರ್ತೃ ವ್ಯಾಸ ಮತ್ತು ಬ್ರಹ್ಮಸೂತ್ರಗಳ ಕರ್ತೃ ವ್ಯಾಸ ಎಂಬುದರಿಂದ ಇದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಎಲ್ಲ ಕೃತಿಗಳ ಕರ್ತೃ ವ್ಯಾಸ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇವುಗಳಿಗೆ ಅನೇಕ ಶತಮಾನಗಳಷ್ಟು ದೀರ್ಘಕಾಲ ಒಂದಕ್ಕೊಂದು ಅಂತರವಿದೆ. ತಮ್ಮ ಕೃತಿಗಳಿಗೆ ಹೆಚ್ಚಿನ ಅಧಿಕೃತತೆಯನ್ನು ಒದಗಿಸುವುದಕ್ಕಾಗಿ ಸಂಪ್ರದಾಯ ಶರಣ ಲೇಖಕರು ಪೂಜಾರ್ಹ ಹೆಸರುಗಳನ್ನು ಕಾವ್ಯನಾಮಗಳನ್ನಾಗಿ ಇಟ್ಟುಕೊಳ್ಳುವ ಹವ್ಯಾಸದಲ್ಲಿದ್ದದ್ದು ಗೊತ್ತಿರುವ ವಿಚಾರ. ಗೀತೆಯ ಕರ್ತೃ ವ್ಯಾಸನಾದರೆ ಅವನು ಬೇರೊಬ್ಬ ವ್ಯಾಸನಿರಬೇಕು. ಗೀತೆ ಮತ್ತು ಮಹಾಭಾರತದ ರಚನೆ ಏಕಕಾಲಿಕ ಎನ್ನುವ ತಿಲಕರ ವಾದವನ್ನು ವಿರೋಧಿಸುವ ಇನ್ನೊಂದು ವಾದವಿರುವಂತೆ ಕಾಣುತ್ತದೆ. ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ. ಪುರಾಣಗಳೂ ಕೂಡ ಹದಿನೆಂಟು ಇವೆ. ಭಗವದ್ಗೀತೆಯಲ್ಲಿಯೂ ಹದಿನೆಂಟು ಅಧ್ಯಾಯಗಳಿರುವುದೂ ಕುತೂಹಲಕರ. ಈ ಸಾಮ್ಯತೆ ಏಕೆ? ಎಂದು ಪ್ರಶ್ನೆ. ಪ್ರಾಚೀನ ಭಾರತೀಯ ಲೇಖಕರು ಕೆಲವು ಹೆಸರುಗಳು ಮತ್ತು ಕೆಲವು ಸಂಖ್ಯೆಗಳು ಪಾವಿತ್ರ್ಯತೆಯಿಂದ ಕೂಡಿವೆ ಎಂದು ಭಾವಿಸಿದ್ದರು ಎಂಬುದೇ ಉತ್ತರ. ವ್ಯಾಸನ ಹೆಸರು ಮತ್ತು 18ನೇ ಸಂಖ್ಯೆ ಇದಕ್ಕೆ ಉದಾಹರಣೆಗಳು. ಭಗವದ್ಗೀತೆಯ ಅಧ್ಯಾಯಗಳು 18 ಪವಿತ್ರವೆಂದು ಯಾರು ಹೇಳಿದ್ದು? ಮಹಾಭಾರತವೇ? ಗೀತೆಯೇ? ಮಹಾಭಾರತವಾದರೆ, ಗೀತೆ ಮಹಾಭಾರತದ ನಂತರ ರಚಿತವಾಗಿರಬೇಕು. ಗೀತೆಯಾದರೆ, ಮಹಾಭಾರತವು ಗೀತೆಯ ನಂತರ ರಚಿತವಾಗಿರಬೇಕು. ಒಟ್ಟಿನಲ್ಲಿ ಇವೆರಡೂ ಏಕಕಾಲದಲ್ಲಿ ರಚಿತವಾಗಿರಲು ಸಾಧ್ಯವಿಲ್ಲ” ಎಂದು ಕಟುಕುತ್ತಾರೆ.
ಇಷ್ಟಕ್ಕೇ ಸುಮ್ಮನಾಗದ ಬಾಬಾಸಾಹೇಬರು, ಕಾಲಕಾಲಕ್ಕೆ ಭಗವದ್ಗೀತೆಯು ಮಾರ್ಪಾಡು ಕಂಡಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಕೃಷ್ಣನನ್ನು ಪರಮೇಶ್ವರನ ಸ್ಥಾನಕ್ಕೆ ಏರಿಸಿದ ಮೂರನೆಯ ಸೇರ್ಪಡೆ ಮೂಲ ಭಗವದ್ಗೀತೆಗೆ ಗುಪ್ತರ ಸಾಮ್ರಾಜ್ಯದ ಕಾಲದಲ್ಲಿ ನಡೆಯಿತು. ಕಾರಣ ಸ್ಪಷ್ಟವಿದೆ. ಗುಪ್ತರಾಜರ ವಿರೋಧಿಗಳಾದ ಶಕ ರಾಜರು ಮಹಾದೇವನನ್ನು ಅವರ ಮನೆ ದೇವರನ್ನಾಗಿ ಮಾಡಿಕೊಂಡರು. ಬ್ರಾಹ್ಮಣರಿಗೆ ಧರ್ಮ ಯಾವಾಗಲೂ ಒಂದು ವ್ಯಾಪಾರ. ಅವರ ಭಕ್ತಿ ಎಂದೂ ಒಂದೇ ದೇವರಿಗೆ ಸೀಮಿತವಲ್ಲ. ಆದರೆ ಆಳುವ ದೊರೆಗಳನ್ನು ಸಂತೃಪ್ತಗೊಳಿಸಲು ಅವರ ಮನೆದೇವರನ್ನು ಉನ್ನತವೂ ಪ್ರಬಲವೂ ಆದ ಪರಮೇಶ್ವರನ ಸ್ಥಾನಕ್ಕೆ ಏರಿಸಿ ಅವನನ್ನು ಪೂಜಿಸತೊಡಗಿದರು. ಈ ವಿವರಣೆ ಸರಿಯಾಗಿದ್ದರೆ ಮೂಲ ಭಗವದ್ಗೀತೆಗೆ ಈ ಸೇರ್ಪಡೆಯು ಕ್ರಿ.ಶ. 400 ರಿಂದ 464ರಲ್ಲಿ ಆಗಿರಬೇಕು. ಬೌದ್ಧಧರ್ಮಕ್ಕಿಂತ ಭಗವದ್ಗೀತೆ ಹಿಂದಿನದು ಎಂದು ಹೇಳುವ ಪ್ರಯತ್ನ ಸಫಲವಾಗುವುದಿಲ್ಲವೆಂದು ಈ ಎಲ್ಲದರಿಂದ ದೃಢವಾಗುತ್ತದೆ. ಬುದ್ಧ ಮತ್ತು ಅವನ ಕ್ರಾಂತಿಕಾರಿ ಉಪದೇಶದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡವರು ಮನಸೇಚ್ಛೆ ಚಿಂತಿಸುವ ಫಲವೇ ಇದು. ಇತಿಹಾಸ ಅದನ್ನು ಬೆಂಬಲಿಸುವುದಿಲ್ಲ. ತಾತ್ವಿಕ ಮೌಲ್ಯವುಳ್ಳ ಭಗವದ್ಗೀತೆಯ ಭಾಗಗಳಂತೂ ಕಾಲದ ದೃಷ್ಟಿಯಿಂದ ಬುದ್ಧನ ತತ್ವಗಳಿಗೂ ಮತ್ತು ಜೈಮಿನಿ ಮತ್ತು ಬಾದರಾಯಣನ ಸೂತ್ರಗಳಿಗೂ ಅನಂತರ ಬಂದುವೆಂದು ಇತಿಹಾಸ ಅಸಾಧಾರಣವಾಗಿ ಸಾಧಿಸುತ್ತದೆ” ಎಂಬ ನಿರ್ಧಾರಕ್ಕೆ ಬರುತ್ತಾರೆ.
ಬಾಬಾಸಾಹೇಬರು ಬರೆದ ‘ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ’ ಲೇಖನ ಒಂದು ಅಪೂರ್ಣ ಬರೆಹ. ಬಹುಶಃ ಅಂಬೇಡ್ಕರ್ ಅವರು ಈ ಲೇಖನವನ್ನು ಪೂರ್ಣಗೊಳಿಸಿದ್ದಲ್ಲಿ, ಮತ್ತಷ್ಟು ವಿಚಾರಗಳು ನಮಗೆ ಲಭ್ಯವಾಗುತ್ತಿದ್ದವು. ಈ ಲೇಖನವನ್ನು ಒಳಗೊಂಡಿರುವ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿಯೇ ‘ಬ್ರಾಹ್ಮಣ ಸಾಹಿತ್ಯ’ ಎಂಬ ಭಾಗವು ಬರುತ್ತದೆ. ಭಗವದ್ಗೀತೆಯ ಕಾಲದ ಬಗ್ಗೆ ಅಲ್ಲಿಯೂ ಉಲ್ಲೇಖಿಸುತ್ತಾರೆ. ಅಲ್ಲಿ ಡಿ.ಡಿ. ಕೋಸಾಂಬಿಯವರ ವಾದವನ್ನು ಅಂಬೇಡ್ಕರ್ ಒಪ್ಪುತ್ತಾರೆ.
ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?
“ಕೋಸಾಂಬಿಯವರದು ಇನ್ನೊಂದು ದೃಷ್ಟಿಕೋನವಿದ್ದು, ಅದಕ್ಕೆ ನಿಸ್ಸಂದಿಗ್ಧ ಸಾಕ್ಷ್ಯಾಧಾರವಿದೆ. ‘ಗೀತೆ’ಯು ಗುಪ್ತರ ದೊರೆ ಬಾಲಾದಿತ್ಯನ ಕಾಲದಲ್ಲೇ ರಚನೆಯಾಯಿತೆಂದು ಪ್ರೊ. ಕೋಸಾಂಬಿ ವಾದಿಸುತ್ತಾರೆ. ಬಾಲಾದಿತ್ಯನು ಆಂಧ್ರ ವಂಶವನ್ನು… ಇಸವಿಯಲ್ಲಿ ನಿರ್ಮೂಲ ಮಾಡಿದ ಗುಪ್ತ ವಂಶಕ್ಕೆ ಸೇರಿದವರು. ಆತ ಪಟ್ಟಕ್ಕೆ ಬಂದಿದ್ದು ಕ್ರಿ.ಶ. 467ರಲ್ಲಿ. ‘ಗೀತೆ’ ಇಷ್ಟು ಈಚಿನದೆನ್ನಲು ಕೋಸಾಂಬಿಯವರು ಕೊಡುವ ‘ಕಾರಣಗಳು’ ಎರಡು. ಕ್ರಿಸ್ತಶಕ 788ರಲ್ಲಿ ಹುಟ್ಟಿ 820ರಲ್ಲಿ ಮೃತಪಟ್ಟ ಶಂಕರಾಚಾರ್ಯರು ‘ಭಗವದ್ಗೀತೆ’ಗೆ ಭಾಷ್ಯ ಬರೆಯುವ ಮುನ್ನ ಅದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಶಂಕರಾಚಾರ್ಯರಿಗೆ ಕೇವಲ 50 ವರ್ಷಗಳ ಮುಂಚಿನ ಶಾಂತರಕ್ಷಿತನ ‘ತತ್ವ ಸಂಗ್ರಹ’ದಲ್ಲಂತೂ ಗೀತೆಯ ಪ್ರಸ್ತಾಪವಿಲ್ಲ. ಇನ್ನು ಎರಡನೇ ಕಾರಣವೆಂದರೆ ವಸುಬಂಧ ಎಂಬಾತ ‘ವಿಜ್ಞಾನವಾದ’ ಎಂಬ ವಿಚಾರ ಪಂಥವನ್ನು ಹುಟ್ಟಿ ಹಾಕಿದ. ‘ಬ್ರಹ್ಮಸೂತ್ರ ಭಾಷ್ಯ’ದಲ್ಲಿ ಈ ವಿಜ್ಞಾನವಾದದ ವಿಮರ್ಶೆಯಿದೆ. ‘ಗೀತೆ’ಯಲ್ಲಿ ‘ಬ್ರಹ್ಮಸೂತ್ರ’ ಭಾಷ್ಯದ ಪ್ರಸ್ತಾಪವಿದೆ. ಈ ವಸುಬಂಧು ಗುಪ್ತರ ದೊರೆ ಬಾಲಾದಿತ್ಯನ ಕುಲಗುರುವಾಗಿದ್ದ. ಆದ್ದರಿಂದ ‘ಭಗವದ್ಗೀತೆ’ಯು ಬಾಲಾದಿತ್ಯನ ಕಾಲದಲ್ಲಿ ಅಂದರೆ ಕ್ರಿ.ಶ. 467ರ ಸುಮಾರಿಗೆ ರಚಿತವಾಗಿರಬೇಕು ಅಥವಾ ಕೊನೆ ಪಕ್ಷ ಮೂಲ ‘ಗೀತೆ’ಗೆ ಆ ಕಾಲದಲ್ಲಿ ಕೆಲವು ಭಾಗಗಳನ್ನು ಸೇರಿಸಿರಬೇಕು” ಎಂಬ ವೈಜ್ಞಾನಿಕ ದೃಷ್ಟಿಗೆ ಬಾಬಾಸಾಹೇಬರು ಸಹಮತ ವ್ಯಕ್ತಪಡಿಸುತ್ತಾರೆ.
ಹೀಗೆ ಭಗವದ್ಗೀತೆಯನ್ನು ಬಹಳ ಹಿಂದಿನದ್ದು ಎಂಬ ವಾದಗಳನ್ನು ಬಾಬಾಸಾಹೇಬರು ಪುಡಿಪುಡಿ ಮಾಡುತ್ತಾರೆ. ತಿಲಕರು ಸೇರಿದಂತೆ ಹಲವು ಸಂಪ್ರದಾಯವಾದಿಗಳ ದೃಷ್ಟಿಕೋನವು ಅಂಬೇಡ್ಕರರ ತೀಕ್ಷ್ಣ ವಿದ್ವತ್ತಿನ ಮುಂದೆ ಮಂಕಾಗುತ್ತದೆ. ಮೌರ್ಯ ಸಾಮ್ರಾಜ್ಯದ ವಿರುದ್ಧ ಪ್ರತಿಕ್ರಾಂತಿ ಮಾಡಿದ ಪುಷ್ಯಶುಂಗನ ನಂತರದಲ್ಲಿ ರಚನೆಯಾದ ಮನುಸ್ಮೃತಿಯ ಚಹರೆಗಳನ್ನು ಭಗವದ್ಗೀತೆ ಹೊಂದಿತ್ತು. ಆ ಮೂಲಕ ಪ್ರತಿಗಾಮಿ ವಿಚಾರಧಾರೆಗಳಿಗೆ ಧಾರ್ಮಿಕ ಚೌಕಟ್ಟನ್ನು ಒದಗಿಸಲು ಬಳಕೆಯಾಯಿತು. ಜೊತೆಗೆ ಆ ಕಾಲದಲ್ಲಿ ಪ್ರಭಾವಿಸಿದ್ದ ಬುದ್ಧನ ಚಿಂತನೆಗಳನ್ನೂ ಒಳಗೊಂಡು ಮುನ್ನಡೆಯುವ ಅನಿವಾರ್ಯತೆ ಭಗವದ್ಗೀತೆಗೆ ಇತ್ತು. ಈ ಎಲ್ಲ ವಿಚಾರಗಳನ್ನು ಭಗವದ್ಗೀತಾವಾದಿ ಬ್ರಾಹ್ಮಣರು ಅಲ್ಲಗಳೆದು ಮೊಂಡುವಾದ ಮಾಡುತ್ತಾರೆ. ಅಂಥವರಿಗೆ ಬಾಬಾಸಾಹೇಬರ ಸಂಶೋಧನೆಗಳೇ ತಕ್ಕ ಉತ್ತರಗಳಾಗಿವೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




