‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-2)

Date:

(ಮುಂದುವರಿದ ಭಾಗ..) ಹಿಂದೂ ಚಕ್ರವರ್ತಿಗಳು ಮತ್ತು ಮುಸ್ಲಿಂ ಸುಲ್ತಾನರ ವ್ಯಾಪಾರ ವೈಶಿಷ್ಟ್ಯಗಳಲ್ಲಿ ಕೆಲವು ಹೋಲಿಕೆಗಳು ಇದ್ದವು. ಅವರಿಬ್ಬರೂ ತಮ್ಮ ಸಾಮ್ರಾಜ್ಯದಲ್ಲಿ ಲೋಹದ ನಾಣ್ಯ ಬಳಕೆ ಮಾಡುತ್ತಿದ್ದರು. ಆದರೆ ಮೊಘಲ್ ಸಾಮ್ರಾಜ್ಯದಲ್ಲಿ ಬೆಳ್ಳಿ ನಾಣ್ಯಗಳು ಮುಖ್ಯ ಕರೆನ್ಸಿ ಆಗಿದ್ದರೆ, ಕೆಲವು ದಶಕಗಳ ನಂತರ, ಹಿಂದಿ ಭಾಷಿಕ ಪ್ರದೇಶಗಳಲ್ಲಿ, ಚಿನ್ನದ ನಾಣ್ಯಗಳು ಪ್ರಮುಖವಾಗಿದ್ದವು. ಬೆಳ್ಳಿ ಮೊಹರ್ ಮತ್ತು ಚಿನ್ನದ ರೂಪಾಯಿಗಳ ಗಾತ್ರ, ತೂಕ ಮತ್ತು ಸಂಯೋಜನೆ ಸುಮಾರು ಒಂದೇ ಆಗಿತ್ತು. ಆದರೆ ಮೊಘಲ್ ಆಡಳಿತದ ವೈಫಲ್ಯದಿಂದಾಗಿ ಬೆಳ್ಳಿ ಕರೆನ್ಸಿಯು ಭಾರತೀಯ ಉಪಖಂಡದ ದಕ್ಷಿಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಲಿಲ್ಲ. ಅಂತಹ ಕಡೆಗಳಲ್ಲಿ, ಅವರು ಚಿನ್ನದ ನಾಣ್ಯಗಳನ್ನು ಮುಂದುವರೆಸಿದರು. ತಮ್ಮ ಟಂಕಸಾಲೆಗಳ ದೋಷಯುಕ್ತ ತಂತ್ರಜ್ಞಾನದ ಸಮಸ್ಯೆಗಳನ್ನು ರಿಪೇರಿ ಮಾಡಲು ಮೊಘಲರು ಆರಂಭಿಸಿದರು. ತಮ್ಮ ನಾಣ್ಯಗಳನ್ನು ಒಂದೇ ಘಟಕ ಅಥವಾ ವಿಭಾಗದಿಂದ ಟಂಕಿಸುವ ಮತ್ತು ಅವುಗಳ ಮೇಲೆ ನಿಗಾ ಇಡುವ ಸಾಮಾನ್ಯ ವ್ಯವಸ್ಥೆಯನ್ನು ಪ್ರಾರಂಭಿಸಿದ್ದರು ಎಂದು ಡಾ. ಅಂಬೇಡ್ಕರ್ ತಿಳಿಸುತ್ತಾರೆ. ಆದರೆ ಈ ವ್ಯವಸ್ಥೆಯಿಂದ ಬಡವರು ಮತ್ತು ಅಶಿಕ್ಷಿತರಿಗೆ ತೊಂದರೆ ಇತ್ತು ಎನ್ನುವುದನ್ನೂ ತಿಳಿ ಹೇಳುತ್ತಾರೆ.

ಬ್ರಿಟಿಷ್ ಆಳ್ವಿಕೆಯಲ್ಲಿ ನಮ್ಮ ದೇಶವನ್ನು ಮೂರು ಪ್ರೆಸಿಡೆನ್ಸಿಗಳಾಗಿ ವಿಂಗಡಿಸಲಾಗಿತ್ತು. ಆದ್ದರಿಂದ ಬ್ರಿಟಿಷ್ ಸರ್ಕಾರವು ಪಗೋಡ, ರೂಪಾಯಿ ಮತ್ತು ಮೊಹೂರ್ ನಡುವಿನ ಅಧಿಕೃತ ವಿನಿಮಯ ಅನುಪಾತವನ್ನು ಸ್ಥಾಪಿಸಿತು. ಆ ಮೂಲಕ ಮೊಘಲ್ ಕಾಲದಲ್ಲಿ ಜನಪ್ರಿಯವಾಗಿದ್ದ ಒಂದು ಸಮಾನಾಂತರ ಮಾನದಂಡವನ್ನು ಎರಡು ಮಾನದಂಡವಾಗಿ ಬದಲಾಯಿಸುವ ಗುರಿ ಹೊಂದಿತು. ಆದರೆ ಎಲ್ಲೋ ಅವರ ಪ್ರಯತ್ನ ಭಾಗಶಃ ವ್ಯರ್ಥವಾಯಿತು. ಬಂಗಾಳವು ಈ ಪ್ರಯತ್ನವನ್ನು ಆರಂಭಿಸಿತು. ಆದರೆ ಭಾರತದ ಅನೇಕ ಪ್ರಾಂತೀಯ ಸರ್ಕಾರಗಳು ಇವನ್ನು ಸಂಪೂರ್ಣವಾಗಿ ಕೈಗೊಳ್ಳಲು ಆಗಲಿಲ್ಲ.

ಈ ಭಾಗದಲ್ಲಿ ಚಿನ್ನದ ಕರೆನ್ಸಿಯ ಕಣ್ಮರೆಯ ನಂತರ ಬೆಳ್ಳಿ ಮಾನದಂಡಗಳನ್ನು ಹೇಗೆ ಸ್ಥಾಪಿಸಲಾಯಿತು ಮತ್ತು ಆನಂತರ ಅದನ್ನು ಕಾಗದದ ಕರೆನ್ಸಿಗೆ ಹೇಗೆ ಬದಲಾವಣೆ ಮಾಡಲಾಯಿತು, ಎಂದು ಅವರು ವಿವರಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬ್ರಿಟಿಷ್ ಸರಕಾರ 1870ರಲ್ಲಿ ಕಾಯಿದೆ ನಂ. XXIII ಜಾರಿ ಮಾಡಿತು. ಇದರಿಂದ ಬಹಳ ವ್ಯತ್ಯಾಸ ಏನೂ ಆಗಲಿಲ್ಲ. ಆದರೆ ಅದು ಈ ನೆಲದ ವಿತ್ತೀಯ ಕಾನೂನುಗಳಲ್ಲಿ ಕೆಲವು ಸುಧಾರಣೆಗಳನ್ನು ಮಾಡಲು ಸಹಾಯ ಮಾಡಿತು. ನಾಣ್ಯ ಉತ್ಪಾದನೆಯ ಆವಿಷ್ಕಾರದ ದಿನಗಳಿಂದಲೂ ಸಾಮಾನ್ಯ ಜನರು ಆ ನಾಣ್ಯದ ಮುಖ ಬೆಲೆಯೇ ಅದರ ಬೆಲೆ ಎಂದು ನಂಬಿದ್ದರು. ಆದರೆ ಕೆಲವು ವ್ಯಾಪಾರಸ್ಥರು ಬಂಗಾರ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಳಸಿ ಜನರನ್ನು ಮೋಸ ಮಾಡುತ್ತಿದ್ದರು. ಟಂಕಸಾಲೆಯಿಂದ ಹೊರಬಂದ ನಾಣ್ಯಗಳು ಬೆಲೆಬಾಳುವ ಲೋಹದವಾದ್ದರಿಂದ, ಚಿನ್ನ ಹಾಗೂ ಬೆಳ್ಳಿಯ ಮಾರುಕಟ್ಟೆ ಬೆಲೆ ಹೆಚ್ಚು- ಕಮ್ಮಿ ಆದಂತೆಲ್ಲ, ಆ ನಾಣ್ಯದ ಬೆಲೆ ಹೆಚ್ಚು- ಕಮ್ಮಿ ಆಗುತ್ತಿತ್ತು. ಕೆಲವು ವರ್ತಕರು ಈ ನಾಣ್ಯಗಳನ್ನು ಶೇಖರಿಸಿ ಇಟ್ಟುಕೊಂಡು, ಅಭಾವ ಸೃಷ್ಟಿಸಿ, ಬೆಲೆ ಹೆಚ್ಚಾಗುವಂತೆ ಮಾಡುವುದು, ಹೆಚ್ಚಾದಾಗ, ಮಾರುಕಟ್ಟೆಗೆ ಬಿಡುವುದು, ಇತ್ಯಾದಿ ಕೆಲಸ ಮಾಡುತ್ತಿದ್ದರು. ಈ ಹೊಸ ಕಾನೂನಿನಿಂದ ಇಂತಹ ನಾಣ್ಯಗಳ ಗರಿಷ್ಠ ಹಾಗೂ ಕನಿಷ್ಠ ಬೆಲೆ ನಿರ್ಧಾರವಾಯಿತು.

ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-1)

ಜನರ ವಹಿವಾಟುಗಳಿಗೆ ಅನಿವಾರ್ಯವಾದ ಕರೆನ್ಸಿಯ ಪ್ರಮಾಣ ಇಲ್ಲಿ ಪ್ರಮುಖ ಪ್ರಶ್ನೆ. ಸರಕಾರದ ಅಧಿಕಾರ ಮತ್ತು ಶಕ್ತಿ ಅತಿ ಹೆಚ್ಚು. ಅದು ಟಂಕಸಾಲೆಯನ್ನು ಮುಚ್ಚುವುದರಿಂದ ಹಿಡಿದು ನಾಣ್ಯಗಳ ಮುಖಬೆಲೆ ನಿರ್ಧರಿಸುವುದರವರೆಗೆ ಕ್ರಮಗಳನ್ನು ಕೈಕೊಳ್ಳಬಹುದು. ಆದರೆ ಅರ್ಥವ್ಯವಸ್ಥೆಯಲ್ಲಿನ ಹಣದ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದು ಎನ್ನುವ ಅಭಿಪ್ರಾಯವನ್ನು ಅವರು ಮಂಡಿಸುತ್ತಾರೆ.

ವಿಶ್ವದ ಅನೇಕ ದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚು ಕಮ್ಮಿ ಆದಂತೆ, ಅಲ್ಲಿನ ನಾಣ್ಯಗಳ ಬೆಲೆ ಹೆಚ್ಚು ಕಮ್ಮಿ ಆಗುತ್ತಿತ್ತು. ಕೆಲವೊಮ್ಮೆ, ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳ ಬೆಲೆ ಸರಿ ಸುಮಾರು ಒಂದೇ ಆಗಿರುತ್ತಿತ್ತು. ಇದಕ್ಕೆ ನೈಸರ್ಗಿಕ ಅಥವಾ ಆರ್ಥಿಕ ಕಾರಣಗಳು ಇದ್ದವು. ಆದರೆ ಬ್ರಿಟಿಷರು ಆಳುತ್ತಿದ್ದ ಭಾರತದ ನಾಣ್ಯಗಳ ಬೆಲೆ ಆಳುವವರ ಮನಸ್ಸಿಗೆ ಬಂದಂತೆ ಬದಲಾಗುತ್ತಿತ್ತು. ಪೌಂಡ್ ಸ್ಟೆರ್ಲಿಂಗ್‌ನ ಎದುರು ರೂಪಾಯಿಯ ಬೆಲೆ ಹೆಚ್ಚಿದ್ದರೆ, ಬ್ರಿಟಿಷ್ ಬಟ್ಟೆ ಹಾಗೂ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದವರಿಗೆ ಲಾಭ ಆಗುತ್ತಿತ್ತು. ಭಾರತದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳವವರಿಗೆ ರೂಪಾಯಿಯ ಬೆಲೆ ಕಮ್ಮಿ ಇದ್ದರೆ ನಷ್ಟ ಆಗುತ್ತಿರಲಿಲ್ಲ. ಹೀಗಾಗಿ, ಬ್ರಿಟಿಷ್ ಸರಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಾಯಿಯ ಬೆಲೆಯನ್ನು ಹೆಚ್ಚು- ಕಮ್ಮಿ ಮಾಡಿಕೊಳ್ಳುತ್ತಿತ್ತು. ಈ ರೀತಿಯ ಬದಲಾವಣೆ ಅಸ್ವಾಭಾವಿಕ ಮತ್ತು ಲಾಭಕೋರತನದ್ದು ಎಂದು ಡಾ. ಅಂಬೇಡ್ಕರ್ ಟೀಕಿಸುತ್ತಾರೆ.

“ರುಪಾಯಿ-ಸ್ಟರ್ಲಿಂಗ್ ವಿನಿಮಯವನ್ನು ನಿಯಂತ್ರಿಸುವ ಚಿನ್ನ ಮತ್ತು ಬೆಳ್ಳಿಯ ಸಾಪೇಕ್ಷ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುವ ಕುರುಡು ಶಕ್ತಿಗಳ ಕರುಣೆಯಲ್ಲಿತ್ತು” ಎಂದು ಅವರು ಹೇಳುತ್ತಾರೆ.

ಅವಿಭಜಿತ ಭಾರತಕ್ಕೆ ಸಂಬಂಧಪಟ್ಟ ಹತ್ತು ವರ್ಷಗಳ (1872-1882) ವಾರ್ಷಿಕ ಬಜೆಟ್‌ಗಳನ್ನು ಡಾ. ಅಂಬೇಡ್ಕರ್ ವಿಶ್ಲೇಷಣೆ ಮಾಡುತ್ತಾರೆ. ಬ್ರಿಟಿಷರು ತಮ್ಮ ಲಾಭಕ್ಕಾಗಿ ಭಾರತೀಯರ ಮೇಲೆ ತೆರಿಗೆ ಹೆಚ್ಚಿಸುತ್ತಾ ಹೋಗುವುದನ್ನು ಅವರು ಗಮನಿಸಿದರು. ಇವೆಲ್ಲ ಅವೈಜ್ಞಾನಿಕವಾದದ್ದು ಎಂದು ಹೇಳಿದರು.

ಮಾಳವಾ ಪ್ರದೇಶದಲ್ಲಿ ಓಪಿಯಂ ಬೆಳೆ ಬೆಳೆಸಿ, ಅದನ್ನು ರಫ್ತು ಮಾಡುತ್ತಿದ್ದ ಕೆಲ ಕಂಪನಿಗಳು ಇದ್ದವು. ಅವು ಕಮ್ಮಿ ಕೂಲಿಗೆ ಸಿಕ್ಕುವ ಭಾರತೀಯ ಕೂಲಿ ಆಳುಗಳನ್ನು ಬಳಸಿ, ಲಾಭ ಮಾಡಿಕೊಳ್ಳುತ್ತಿದ್ದವು. ಅವುಗಳಿಗೆ ಅನುಕೂಲ ಆಗುವಂತೆ ಕಂಪನಿ ಸರಕಾರ ತೆರಿಗೆ ಹಚ್ಚು- ಕಮ್ಮಿ ಮಾಡುತ್ತಿತ್ತು. ಇದರಿಂದ ಭಾರತೀಯ ಆರ್ಥಿಕತೆಗೆ ಬೀಳುತ್ತಿದ್ದ ಹೊರೆಗಳನ್ನು ಅವರು ಎತ್ತಿ ತೋರಿಸಿದರು. ಈ ಹೊರೆಗಳು ಎಂದಿಗೂ ನಿಲ್ಲಲಿಲ್ಲ, ಬದಲಿಗೆ ಅದು ದಿನದಿಂದ ದಿನಕ್ಕೆ ಹೆಚ್ಚಿತು ಎಂದು ದತ್ತಾಂಶಗಳಿಂದ ಎತ್ತಿ ತೋರಿಸಿದರು. ಇಲ್ಲಿ ಒಂದು ಸುಸ್ಥಿರ ಆರ್ಥಿಕ ವ್ಯವಸ್ಥೆಯನ್ನು ತಯಾರು ಮಾಡಬೇಕು ಎಂದರೆ ಇಲ್ಲಿನ ಕರೆನ್ಸಿಗೆ ಒಂದು ಸ್ಥಿರವಾದ ಮೌಲ್ಯವನ್ನು ಮೊದಲು ನಿಗದಿ ಪಡಿಸಬೇಕು. ಅದು ಹೊಯ್ದಾಟ ಮಾಡದಂತೆ ನೋಡಿಕೊಳ್ಳಬೇಕು.

ರಾಜಕೀಯ ಕಾರಣಗಳಿಗಾಗಿ, ಸರಕಾರಗಳು ಕಾಲಕಾಲಕ್ಕೆ, ತಮಗೆ ತಿಳಿದಂತೆ, ನಗದಿನ ಬೆಲೆ ಹಾಗೂ ಮೊತ್ತಗಳನ್ನು ನಿರ್ಧಾರ ಮಾಡಬಾರದು. ಈ ರೀತಿಯ ಬದಲಾವಣೆಗಳೆಲ್ಲ ಕೇವಲ ಅರ್ಥ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರಣಗಳಿಗೆ ಮಾತ್ರ ಆಗಬೇಕು ಎಂದು ಅವರು ಗಟ್ಟಿಯಾಗಿ ಪ್ರತಿಪಾದಿಸಿದರು.

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-1)

ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತದ ರೂಪಾಯಿಯ ಮೌಲ್ಯ ಅನೇಕ ಬಾರಿ ಹೆಚ್ಚು ಕಮ್ಮಿ ಆಗಿದೆ. ಇದರಲ್ಲಿ ಅನೇಕ ಬಾರಿ ಅಂತಾರಾಷ್ಟ್ರೀಯ ಏರಿಳಿತಗಳಿಂದಾಗಿ ಆಗಿದೆ. ಆದರೆ ಕೆಲವು ಸಲ, ಆಳುವವರ ಆಣ್ತೆಗೆ ತಕ್ಕಂತೆ ಆಗಿದೆ. ಇವುಗಳ ಹಿಂದೆ ರಾಜಕೀಯ ಕಾರಣಗಳು ಇದ್ದಿದ್ದು ಸ್ಪಷ್ಟ. ಆಳುವವರಿಗೆ ಪ್ರಿಯವಾದ ಕೆಲವೇ ಕೆಲವು ಧನವಂತರಿಗೆ, ಕೆಲ ಕ್ಷೇತ್ರದ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಕುತಂತ್ರದಿಂದಾಗಿ ಅಥವಾ ರಫ್ತು- ಆಮದುಕೋರರಿಗೆ ಲಾಭ ಮಾಡುವ, ನಷ್ಟ ತಪ್ಪಿಸುವ ಕಾರಣಗಳಿಂದಾಗಿ ಆಗಿವೆ. ಈ ನಿರ್ಧಾರಗಳು ಕಾಂಗ್ರೆಸ್- ಜನತಾ ಹಾಗೂ ಬಿಜೆಪಿ ಸರಕಾರಗಳ ಕಾಲದಲ್ಲಿ ತೆಗೆದುಕೊಂಡವು. ಪ್ರತಿ ಬಾರಿ ರೂಪಾಯಿ ಅಪಮೌಲ್ಯ ಆದಾಗ ಕೋಟಿಗಟ್ಟಲೆ ಬಡವರು ಕಂಗಾಲು ಆಗಿ, ಕಣ್ಣೀರು ಹಾಕಿದ್ದು ಇದೆ. ಇವನ್ನು ಎಲ್ಲ ನೋಡಿದಾಗ, ಡಾ. ಅಂಬೇಡ್ಕರ್ ಅವರ ಮುನ್ನೆಚ್ಚರಿಕೆ ನಮಗೆ ನೆನಪಾಗುತ್ತದೆ.

ತಮ್ಮ ಕಾಲದ ಅರ್ಥಶಾಸ್ತ್ರಜ್ಞರು ಹಾಗೂ ಬ್ರಿಟಿಷ್ ಅಧಿಕಾರಿಗಳ ವರದಿಗಳನ್ನು ಓದಿಕೊಂಡು ಡಾ. ಅಂಬೇಡ್ಕರ್ ಅವರು ಹಣಕಾಸು ಸಚಿವ ಸರ್ ಆರ್. ಟೆಂಪುಲ್, ಟಂಕಸಾಲೆ ಅಧಿಕಾರಿ ಜೆ.ಟಿ. ಸ್ಮಿತ್, ಫೌಲರ್ ಕಮಿಟಿ, ಚೇಂಬರ್ಲೇನ್ ಆಯೋಗ ಇತ್ಯಾದಿಗಳ ಶಿಫಾರಸುಗಳನ್ನು ವಿಶ್ಲೇಷಣೆ ಮಾಡುತ್ತಾರೆ. ಮೊದಲಿಗೆ ಚಿನ್ನದಲ್ಲಿ, ನಂತರ ಬೆಳ್ಳಿಯಲ್ಲಿ ಮುದ್ರಿತವಾಗುತ್ತಿದ್ದ ಭಾರತೀಯ ರೂಪಾಯಿ ಕೊನೆಗೆ ಕಾಗದದ ಕರೆನ್ಸಿಗೆ ಇಳಿದು ಬಂದಿದ್ದನ್ನು ದಾಖಲಿಸುತ್ತಾರೆ. ಎ.ಎಂ. ಲಿಂಡಸೆ ಅವರ ವರದಿಯ ಪ್ರಕಾರ ಕಾಗದದ ನೋಟುಗಳ ಚಲಾವಣೆ ಆರಂಭ ಆಯಿತು.

ಲಿಂಡ್ಸೆ ಅವರ ಯೋಜನೆಯ ಪ್ರಕಾರ, ಇಡೀ ಭಾರತೀಯ ಕರೆನ್ಸಿಯನ್ನು ರೂಪಾಯಿ ಕರೆನ್ಸಿಯಾಗಿ ಪರಿವರ್ತಿಸುವುದು ಹೇಗೆ ಎಂಬುದರ ಬಗ್ಗೆ ಅವರು ಒತ್ತಿ ಹೇಳಿದರು. ಸರ್ಕಾರ ಎಲ್ಲ ಸಂದರ್ಭಗಳಲ್ಲಿ ಚಿನ್ನಕ್ಕೆ ಪ್ರತಿಯಾಗಿ ರೂಪಾಯಿಗಳನ್ನು ನೀಡಬೇಕಾಗಿತ್ತು, ಆದರೆ ವಿದೇಶಿ ಹಣ ರವಾನೆಯಲ್ಲಿ ಮಾತ್ರ ರೂಪಾಯಿಗಳಿಗೆ ಚಿನ್ನವನ್ನು ವಿನಿಮಯ ಮಾಡಬೇಕಾಗಿತ್ತು. ಸರಕಾರದ ಡ್ರಾಫ್ಟ್ ಮತ್ತು ಬಾಂಡ್‌ಗಳನ್ನು ಸಾಹಿತ ನಾಗರಿಕರು ಖರೀದಿ ಮಾಡಬಹುದಿತ್ತು. ಸುಮಾರು 1898ರ ನಂತರ ಕ್ರಮೇಣ ಕಾಗದದ ಕರೆನ್ಸಿ ಭಾರತೀಯ ಆರ್ಥಿಕ ಕ್ಷೇತ್ರಕ್ಕೆ ಬಂದಿತು.

ಭಾರತೀಯ ರೂಪಾಯಿಯನ್ನು ಬ್ರಿಟಿಷ್ ಕಂಪನಿಗಳಿಗೆ ಅನುಕೂಲವಾಗುವಂತೆ ಅಪಮೌಲ್ಯ ಮಾಡುತ್ತ ಹೋಗಿದ್ದರಿಂದ 1873ರಿಂದ 1893ವರಗೆ ದೇಶದಲ್ಲಿ ನಗದಿನ ಕೃತಕ ಅಭಾವ- ಹೆಚ್ಚಳ ಉಂಟಾಯಿತು. ಒಂದು ಬಾರಿಯಂತೂ ರೂಪಾಯಿಯ ಅಪಮೌಲ್ಯ ಎಷ್ಟು ಹೆಚ್ಚಾಯಿತು ಎಂದರೆ ಬ್ರಿಟಿಷ್ ಸರಕಾರ ಟಂಕಸಾಲೆಗಳನ್ನು ಮುಚ್ಚಬೇಕಾಯಿತು. ಚಲಾವಣೆಯಲ್ಲಿ ಉಳಿದ ನಾಣ್ಯಗಳ ಬೇಡಿಕೆ ಹಾಗೂ ಪೂರೈಕೆ ಸರಿಹೋದ ಬಳಿಕ ಅವನ್ನು ಮತ್ತೆ ಪ್ರಾರಂಭಿಸಲಾಯಿತು.

ಪುಸ್ತಕದ ಏಳನೇ ಮತ್ತು ಕೊನೆಯ ಅಧ್ಯಾಯಗಳಲ್ಲಿ, ಅಂಬೇಡ್ಕರ್ ಅವರು ಭಾರತದ ಆರ್ಥಿಕತೆಯ ವ್ಯವಸ್ಥೆಯನ್ನು, ಅದರ ಇತಿಹಾಸವನ್ನು ಹಾಗೂ ಭವಿಷ್ಯವನ್ನು ತಿಳಿಹೇಳಲು ಪ್ರಯತ್ನ ಮಾಡುತ್ತಾರೆ. ಇವನ್ನು ನಾವು ಅನುಸರಿಸಿದರೆ, ನಮ್ಮ ಮಾರುಕಟ್ಟೆ, ಉತ್ಪನ್ನಗಳ ಮೌಲ್ಯಗಳನ್ನು ಅರ್ಥೈಸುವುದು ಸುಲಭವಾಗುತ್ತದೆ. ನಿಸ್ಸಂದೇಹವಾಗಿ, ಅಂಬೇಡ್ಕರ್ ಅವರ ಕೃತಿಗಳ ತಿಳಿವಳಿಕೆ ಕೇವಲ ನಮ್ಮ ರಾಷ್ಟ್ರ ಅರ್ಥ ವ್ಯವಸ್ಥೆ ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ವಹಿವಾಟುಗಳ ಅಭಿವೃದ್ಧಿ ಹಾಗೂ ಪ್ರಗತಿಯನ್ನು ತಿಳಿದುಕೊಳ್ಳಲು ಸಹಾಯ ಮಾಡುವವು. ಅವುಗಳನ್ನು ಸಶಕ್ತವಾಗಿ ಮುನ್ನಡೆಸಲು ಅನುಕೂಲ ಮಾಡಿಕೊಡುತ್ತವೆ.

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-2)

ಭಾರತದ ಆರ್ಥಿಕತೆಯನ್ನು ರೂಪಿಸುವಲ್ಲಿ ಬಾಬಾಸಾಹೇಬ್ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಕರೆನ್ಸಿಯಲ್ಲಿ ಅವರ ಚಿತ್ರವನ್ನು ಸೇರಿಸಬೇಕೆಂದು ಅಂಬೇಡ್ಕರ್‌ವಾದಿಗಳು ನಿರಂತರವಾಗಿ ಪ್ರತಿಪಾದಿಸುತ್ತಾ ಇದ್ದಾರೆ. ಅದು ಯಾಕೆಂದರೆ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಪಾಯವನ್ನು ಹಾಕಿದ್ದು ಈ ಪ್ರಬಂಧ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಆರಂಭ ಗೊಂಡಿದ್ದು ಡಾ. ಅಂಬೇಡ್ಕರ್ ಅವರ ಶಿಫಾರಸಿನ ಮೇರೆಗೆ, ಎನ್ನುವುದಕ್ಕಾಗಿ.

ರೂಪಾಯಿಯ ಸಮಸ್ಯೆ ಎನ್ನುವ ಈ ಪ್ರಬಂಧವನ್ನು ಬ್ರಿಟಿಷ್ ಸರಕಾರದ ಭಾರತದ ಕರೆನ್ಸಿ ಹಾಗೂ ಹಣಕಾಸು ಆಯೋಗದ ಸದಸ್ಯರ ಎದುರು ಡಾ. ಅಂಬೇಡ್ಕರ್ 1926ರಲ್ಲಿ ಮಂಡಿಸುತ್ತಾರೆ. ತನ್ನ ಅಭಿಪ್ರಾಯ ಮತ್ತು ತಮ್ಮ ತೀರ್ಮಾನ, ಫೈಸಲಾತಿಗಳ ಹಿನ್ನೆಲೆ ಏನು ಎನ್ನುವ ಪ್ರಶ್ನೆಯನ್ನು ಅವರು ಎತ್ತಿದಾಗ, ತಾವು ಅಭ್ಯಾಸ ಮಾಡಿದ ವಿವಿಧ ಕೃತಿ ಹಾಗೂ ವರದಿಗಳನ್ನು, ಬಜೆಟ್ ದಾಖಲೆಗಳನ್ನು ಅವರು ಆಯೋಗದ ಸದಸ್ಯರಿಗೆ ಸಲ್ಲಿಸಿದರು. ಅವರ ವಾದ ಮಂಡನೆ ಮುಗಿದಾಗ, ಬ್ರಿಟಿಷ್ ಆಯೋಗದ ಸದಸ್ಯರೆಲ್ಲ ಇವರ ಪ್ರಬಂಧವನ್ನು ತುಂಬ ಮೆಚ್ಚಿಕೊಂಡರು. ಪ್ರತಿ ಸದಸ್ಯರು ಅದರ ಪ್ರತಿಗಳನ್ನು ಪಡೆದುಕೊಂಡರು ಎಂದು ಹೇಳಲಾಗುತ್ತದೆ.

ಈ ಆಯೋಗದ ಮುಖ್ಯಸ್ಥರಾಗಿದ್ದ ಹಿಲ್ಟನ್ ಯಂಗ್ ಅವರು ಡಾ. ಅಂಬೇಡ್ಕರ್ ಅವರ ವಾದದ ಆಧಾರದ ಮೇಲೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಪಾಯವನ್ನು ಹಾಕಿದರು. ತನ್ನ ವರದಿಯಲ್ಲಿ ಡಾ. ಅಂಬೇಡ್ಕರ್ ಅವರು ಎತ್ತಿದ ವಿವಿಧ ಆರ್ಥಿಕ ಆಯಾಮಗಳ, ವಿವಿಧ ಸಂಸ್ಥೆಗಳ ಅಗತ್ಯತೆ ಹಾಗೂ ಕಾರ್ಯ ಶೈಲಿಗಳನ್ನು ಪ್ರಸ್ತಾಪಿಸಿತು. ಅವರು ಮಂಡಿಸಿದ ಮಾರ್ಗಸೂಚಿಗಳನ್ನು ತೂಗಿ ನೋಡಿ, ವಿವಿಧ ಶಿಫಾರಸುಗಳನ್ನು ಮಾಡಿತು. ಬ್ರಿಟಿಷ್ ಶಾಸಕಾಂಗ ಸಭೆ 1934ರ RBI ಕಾಯ್ದೆಯ ಹೆಸರಿನಲ್ಲಿ ಶಿಫಾರಸುಗಳನ್ನು ಅಂಗೀಕರಿಸಿತು. ಪರಿಣಾಮವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಏಪ್ರಿಲ್ 1, 1935ರಂದು ಸ್ಥಾಪಿಸಲಾಯಿತು.

ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಭಾರತೀಯ ರೂಪಾಯಿಯ ನಿರಂತರ ಅಪಮೌಲ್ಯೀಕರಣ ಪ್ರಮುಖ ಸಮಸ್ಯೆ ಆಗಿತ್ತು. ಬ್ರಿಟಿಷ್‌ ರಫ್ತುದಾರರಿಗೆ ಅನುಕೂಲವಾಗುವಂತೆ ಮತ್ತು ವಸಾಹತುಶಾಹಿ ಆಡಳಿತದ ವೆಚ್ಚಗಳಿಗೆ ಹಣಕಾಸು ಒದಗಿಸಲು ರೂಪಾಯಿಯ ಮೌಲ್ಯವನ್ನು ಕೃತಕವಾಗಿ ಕಡಿಮೆ ಮಾಡಲಾಯಿತು. ಈ ಅಪಮೌಲ್ಯೀಕರಣವು ಭಾರತೀಯ ಜನರ ಮೇಲೆ ತೀವ್ರ ಆರ್ಥಿಕ ಪರಿಣಾಮಗಳನ್ನು ಬೀರಿತು, ಹಣದುಬ್ಬರ ಮತ್ತು ಜೀವನ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಯಿತು.

ಬ್ರಿಟಿಷರ ಕಾಲದಲ್ಲಿ ಚಿನ್ನದ ವಿನಿಮಯ ಮಾನದಂಡವು ಸ್ಥಿರತೆಯನ್ನು ಹೊಂದಿರಲಿಲ್ಲ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಹಣದುಬ್ಬರದ ಒತ್ತಡಗಳಿಗೆ ಗುರಿಯಾಗುವುದರಿಂದ ಚಿನ್ನದ ವಿನಿಮಯ ಮಾನದಂಡಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು. ಸರಕಾರ ಯಾವುದೇ ಆರ್ಥಿಕ ಬದಲಾವಣೆಗಳನ್ನು ಮಾಡುವಾಗ ಸಾರ್ವಜನಿಕರ ಹಿತರಕ್ಷಣೆಯೇ ಮುಖ್ಯ ಮಾನದಂಡವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಹಿಂದಿನ ಶತಮಾನದ ಸರಕಾರಗಳು ಸರಿಯಾಗಿ ನಗದು ನಿರ್ವಹಣೆ ಮಾಡಲು ಸಾಧ್ಯವಾಗದೇ ಹೋಗಿ, ಕಾಗದದ ನೋಟುಗಳನ್ನು ಬಿಟ್ಟು ಚಿನ್ನ ಹಾಗೂ ಬೆಳ್ಳಿಯ ಮಾನದಂಡಗಳ ಕಡೆ ವಾಲುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಯಾವುದೇ ಒಂದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ “ರೂಪಾಯಿಯ ಸಮಸ್ಯೆ-ಅದರ ಮೂಲ ಮತ್ತು ಅದರ ಪರಿಹಾರಗಳು” ಪ್ರಬಂಧ ಬೀರಿದಷ್ಟು ಪ್ರಬಲ ಪರಿಣಾಮವನ್ನು ಬೇರೆ ಯಾವ ಪ್ರಬಂಧವೂ ಬೀರಲಿಲ್ಲ ಎನ್ನುವುದು ತಿಳಿದವರ ಅಭಿಪ್ರಾಯ. ಒಬ್ಬ ಯುವ ವಿದ್ಯಾರ್ಥಿಯ ಪಿಎಚ್‌ಡಿ ಪ್ರಬಂಧ ಒಂದು ದೇಶದ ಆರ್ಥಿಕ ವ್ಯವಸ್ಥೆಯನ್ನು ಕಟ್ಟಿ ಕೊಡುವಂತಹ ಮಹತ್ತರ ಕೆಲಸವನ್ನು ಮಾಡಿರುವ ಉದಾಹರಣೆಗಳೂ ವಿರಳ.

ಈ ಸಂಶೋಧನಾ ಪ್ರಬಂಧದಲ್ಲಿ ಮಾಡಲಾದ ಮಾರ್ಗಸೂಚಿಗಳ ಆಧಾರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್‌ಅನ್ನು ರಚಿಸಲಾಗಿದೆ ಎಂಬ ಅಂಶ ಡಾ. ಅಂಬೇಡ್ಕರ್ ಅವರ ಅರ್ಥಶಾಸ್ತ್ರಜ್ಞತೆಯ ಕುಶಾಗ್ರಮತಿಯನ್ನು ಸಾಬೀತುಪಡಿಸುತ್ತದೆ.

(ಮುಗಿಯಿತು..)

(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...