‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-1)

Date:

ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ‘ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ (The Problem Of The Rupee Its Origin And Its Solution) ಕೃತಿಯು ಭಾರತೀಯ ಆರ್ಥಿಕ ಇತಿಹಾಸ ಮತ್ತು ಹಣಕಾಸು ನೀತಿ ಕ್ಷೇತ್ರದ ಒಂದು ಪ್ರಮುಖ ಪುಸ್ತಕ. ಆದರೆ ಇದು ಕೇವಲ ಅರ್ಥಶಾಸ್ತ್ರದ ಕುರಿತಾದ ಪಠ್ಯವಲ್ಲ, ಇದು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಭಾರತ ಎದುರಿಸಿದ ಸವಾಲುಗಳ ಆಳವಾದ ಅಧ್ಯಯನವೂ ಹೌದು.

ಡಾ. ಅಂಬೇಡ್ಕರ್ ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಈ ಪುಸ್ತಕ ಅವರ ಆಳವಾದ ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಭಾರತದ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೃತಿಯಲ್ಲಿ, ಡಾ. ಅಂಬೇಡ್ಕರ್ ಭಾರತೀಯ ರೂಪಾಯಿಯ ಐತಿಹಾಸಿಕ ವಿಕಾಸ, ಅದರ ಏರಿಳಿತದ ಮೌಲ್ಯ ಮತ್ತು ವಸಾಹತುಶಾಹಿ ಯುಗದಲ್ಲಿ ಅದರ ಪಥವನ್ನು ರೂಪಿಸಿದ ವಿವಿಧ ಆರ್ಥಿಕ ನೀತಿಗಳನ್ನು ಪರಿಶೀಲಿಸುತ್ತಾರೆ.

ಬ್ರಿಟಿಷರು ಆಗಿನ ಭಾರತದ ಹಣಕಾಸು ವ್ಯವಸ್ಥೆಯ ದುರುಪಯೋಗ ಹೇಗೆ ಮಾಡಿಕೊಂಡರು ಎನ್ನುವುದನ್ನು ಮತ್ತು ತಮ್ಮ ಅನುಕೂಲಕ್ಕಾಗಿ ಚಿನ್ನದ ವಿನಿಮಯ ಮಾನದಂಡವನ್ನು ಕೃತಕವಾಗಿ ರೂಪಿಸಿಕೊಂಡಿದ್ದನ್ನು ಟೀಕಿಸುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬ್ರಿಟಿಷರ ಈ ನೀತಿಗಳು ಭಾರತೀಯ ಜನರ ಕಲ್ಯಾಣಕ್ಕಿಂತ ಹೆಚ್ಚಾಗಿ ತಮ್ಮ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳನ್ನು ಪೊರೆಯಲು ವಿನ್ಯಾಸಗೊಳಿಸಲಾಗಿವೆ ಎಂದು ವಾದಿಸುತ್ತಾರೆ. ತಮ್ಮ ತಲಸ್ಪರ್ಶಿ ಸಂಶೋಧನೆ ಮತ್ತು ಕಠಿಣ ವಿಶ್ಲೇಷಣೆಯ ಮೂಲಕ ಡಾ. ಅಂಬೇಡ್ಕರ್ ಅವರು ಈ ಬ್ರಿಟಿಷ್ ನೀತಿಗಳು ಅವಿಭಜಿತ ಭಾರತದ ಬಡತನವನ್ನು ಹೇಗೆ ಹೆಚ್ಚು ಮಾಡಿದವು, ಆರ್ಥಿಕತೆಯನ್ನು ಹೇಗೆ ಅಸ್ಥಿರಗೊಳಿಸಿದವು ಮತ್ತು ವ್ಯವಸ್ಥಿತ ಅಸಮಾನತೆಗಳನ್ನು ಹೇಗೆ ಸೃಷ್ಟಿಸಿದವು ಮತ್ತು ಮುಂದುವರೆಸಿದವು ಎಂಬುದನ್ನು ಎತ್ತಿ ತೋರಿಸುತ್ತಾರೆ.

ಈ ಪುಸ್ತಕದ ವಿಶೇಷ ಆಕರ್ಷಕಣೆ ಅದರ ಅಂತರಶಿಸ್ತೀಯ ವಿಧಾನ. ಇದರಲ್ಲಿ ಡಾ. ಅಂಬೇಡ್ಕರ್ ಕೇವಲ ಆರ್ಥಿಕ ಸಿದ್ಧಾಂತದ ಮೇಲೆ ಕೇಂದ್ರೀಕರಿಸುವುದಿಲ್ಲ; ಅವರು ಅಂದಿನ ಭಾರತದ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳ ಸಂದರ್ಭದಲ್ಲಿ ರೂಪಾಯಿಯ ಸಮಸ್ಯೆಯನ್ನು ನೋಡುತ್ತಾರೆ. ಆರ್ಥಿಕತೆ, ಕರೆನ್ಸಿ, ವ್ಯಾಪಾರ ಮತ್ತು ವಸಾಹತುಶಾಹಿ ಶೋಷಣೆಯ ನಡುವಿನ ಸಂಬಂಧದ ಕುರಿತು ಅಮೂಲ್ಯ ಒಳನೋಟ ನೀಡುತ್ತಾರೆ. ಅವು ಇಂದಿಗೂ ಪ್ರಸ್ತುತವಾಗಿವೆ ಹಾಗೂ ಸಮಕಾಲೀನ ಆರ್ಥಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಾರ್ವಕಾಲಿಕ ಪಾಠಗಳನ್ನು ನೀಡುತ್ತವೆ.

ಅರ್ಥಶಾಸ್ತ್ರದ ಯುವ ವಿದ್ಯಾರ್ಥಿಗಳಾದ ನಮಗೆ ಈ ಪಠ್ಯ ವಿತ್ತೀಯ ನೀತಿಯ ಬಗ್ಗೆ ನಮ್ಮ ತಿಳವಳಿಕೆಯನ್ನು ಆಳಗೊಳಿಸುವುದಲ್ಲದೆ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಮಾಜಿಕ ನ್ಯಾಯಗಳ ಕೂಡುವಿಕೆಯ ಬಗ್ಗೆ ವಿಮರ್ಶಾತ್ಮಕವಾಗಿ ಯೋಚಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಅರ್ಥಶಾಸ್ತ್ರ ಕೇವಲ ಸಂಖ್ಯೆಗಳು ಮತ್ತು ಸಿದ್ಧಾಂತಗಳ ಬಗ್ಗೆ ಮಾತ್ರ ಅಲ್ಲ, ಅದು ನಮ್ಮ ಜನ, ಅವರ ಹೋರಾಟಗಳು ಮತ್ತು ಅವರ ಜೀವನವನ್ನು ರೂಪಿಸುವ ವ್ಯವಸ್ಥೆ ಎಂದು ಈ ಕೃತಿ ನಮಗೆ ನೆನಪಿಸುತ್ತದೆ. ನಿಸ್ಸಂದೇಹವಾಗಿ ಭಾರತದ ಭೂತಕಾಲ ಮತ್ತು ಅದರ ಪ್ರಸ್ತುತ ಆರ್ಥಿಕ ವಾಸ್ತವಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ಇದು ವಿಶಾಲಗೊಳಿಸುತ್ತದೆ, ನಮ್ಮ ಪೂರ್ವಗ್ರಹಗಳನ್ನು ತೊಡೆದು ಹಾಕಿ ಹೊಸ ದಿಕ್ಕಿನತ್ತ ಯೋಚಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.

ಇದನ್ನೂ ಓದಿರಿ: ಅಂಬೇಡ್ಕರ್ ಕನಸಿನ ದಲಿತ ಪತ್ರಿಕೋದ್ಯಮ ನನಸಾಗಲಿಲ್ಲ!

ನಮ್ಮ ಪೂರ್ವಗ್ರಹಗಳು ಕೇವಲ ಪುಸ್ತಕಗಳ ಬಗ್ಗೆ, ವಿವಿಧ ಜ್ಞಾನ ಕ್ಷೇತ್ರಗಳ ಬಗ್ಗೆ, ಸರಕಾರ, ಪಕ್ಷ, ಆಡಳಿತ ವಿಧಾನಗಳ ಬಗ್ಗೆ ಅಷ್ಟೇ ಅಲ್ಲ, ವ್ಯಕ್ತಿಗಳ ಬಗ್ಗೆ ಕೂಡ ಇರಬಹುದು. ಇದರ ಬಗ್ಗೆ ಯೋಚಿಸುವಾಗ, ನನಗೆ ಒಂದು ಘಟನೆ ನೆನಪಾಗುತ್ತದೆ.

ಕೆಲವು ವರ್ಷಗಳ ಹಿಂದೆ ನನ್ನ ಅಣ್ಣನ ಮಗನೊಬ್ಬ ದೆಹಲಿ ಅರ್ಥಶಾಸ್ತ್ರ ಶಾಲೆ ಹಾಗೂ ಮದರಾಸು ಅರ್ಥಶಾಸ್ತ್ರ ಶಾಲೆಗಳಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಸಿದ. ಮುಂಬಯಿಯ ಉಪನಗರದಲ್ಲಿ ಹುಟ್ಟಿ ಬೆಳೆದ ಅವನಿಗೆ ಪರ ಊರಿನ ಪರಿಚಯ ಅಷ್ಟೊಂದು ಇರಲಿಲ್ಲ. ಇದರಿಂದಾಗಿ ದೆಹಲಿಗೆ ಹೋದ ಹೊಸತರಲ್ಲಿ ಸಾಕಷ್ಟು ಸಾಂಸ್ಕೃತಿಕ ಆಘಾತಗಳನ್ನು ಅನುಭವಿಸಿದ. ಅವನ್ನೆಲ್ಲ ಆತ ರಂಜನೀಯ ಕತೆಗಳನ್ನಾಗಿಸಿ ನಮಗೆಲ್ಲ ಹೇಳುತ್ತಿದ್ದ.

ಅದರಲ್ಲಿ ಒಂದು ಹೀಗೆ ಇದೆ – ಅವನ ತರಗತಿ ಇಡೀ ದೇಶದ ಅತಿ ಉತ್ತಮ ಕಾಲೇಜುಗಳ ಬುದ್ಧಿವಂತ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ತುಂಬಿತ್ತು. ಅವರಲ್ಲಿ ಪ್ರತಿಯೊಬ್ಬರಿಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಗೊತ್ತಿತ್ತು. ಅವರು ಸಂವಿಧಾನ ಶಿಲ್ಪಿ ಎನ್ನುವುದು ಗೊತ್ತಿತ್ತು. ಆದರೆ ಅವರಿಗೆ ಇದ್ದ ಇತರ ಕ್ಷೇತ್ರಗಳಲ್ಲಿನ ಅಗಾಧ ಜ್ಞಾನದ ಬಗ್ಗೆ ಗೊತ್ತಿರಲಿಲ್ಲ.

ಇಂತಹ ವಿದ್ಯಾರ್ಥಿಗಳನ್ನು ಹೊಂದಿದ ಕ್ಲಾಸಿನ ಮೊದಲನೇ ದಿವಸ ಒಂದು ರೋಚಕ ಸಂಗತಿ ಘಟಿಸಿತು. ಅವರು ತಮ್ಮ ಪಠ್ಯ ಪುಸ್ತಕ ತೆಗೆದು ನೋಡಿದ ತಕ್ಷಣ, ಅವರಿಗೆ ಕಂಡಿದ್ದು ಮೊದಲನೇ ಪಾಠವೇ – ‘ದಿ ಪ್ರಾಬ್ಲಂ ಆಫ್ ದಿ ರುಪೀ : ಇಟ್ಸ್ ಒರಜಿನ್ಸ್ ಅಂಡ್ ಸೊಲ್ಯೂಷನ್’ – (ರೂಪಾಯಿಯ ಸಮಸ್ಯೆ: ಅದರ ಮೂಲಗಳು ಹಾಗೂ ಪರಿಹಾರಗಳು). ಇದರ ಕರ್ತೃ ಡಾ. ಬಿ.ಆರ್. ಅಂಬೇಡ್ಕರ್. ಇದನ್ನು ನೋಡಿದ ಆ ಹುಡುಗ- ಹುಡುಗಿಯರಿಗೆಲ್ಲ ದಂಗು ಬಡಿಯಿತು.

“ನಾವೆಲ್ಲ ಇಲ್ಲಿಯವರೆಗೆ ಇವರನ್ನು ಕೇವಲ ಒಬ್ಬ ಸಮಾಜ ಶಾಸ್ತ್ರಜ್ಞರು, ಸಂವಿಧಾನ ರಚನಾ ಸಮಿತಿ ಮುಖ್ಯಸ್ಥರು, ದಲಿತರು ಹಾಗೂ ಹಿಂದುಳಿದವರಿಗೆ ಅನುಕೂಲ ಮಾಡಿಕೊಡುವ ನೀತಿ- ನಿಯಮಗಳನ್ನು ರೂಪಿಸಿದವರು, ಮೀಸಲಾತಿಯಂತಹ ಬಹು ವಿವಾದಿತ ನೀತಿ ರೂಪಿಸಿದವರು, ಇತ್ಯಾದಿ ಕೆಲಸ ಮಾಡಿಕೊಂಡು ಇದ್ದವರು ಅಂತ ತಿಳಿದುಕೊಂಡಿದ್ದೆವು. ಈಗ ನೋಡಿದರೆ ಇವರು ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರೀಯ ಪ್ರಬಂಧ ಬರೆದವರು ಅಂತ ನಮ್ಮ ಪ್ರೊಫೆಸರ್‌ಗಳು ಹೇಳುತ್ತಿದ್ದಾರೆ, ಏನಿದು? ಅಂತ ಎಲ್ಲ ಅನ್ನಿಸತೊಡಗಿ, ಅವರು ಹೌಹಾರಿ ಹೋದರು.” ಈ ಕತೆಯನ್ನು ಅವನು ನಮಗೆ ರಸವತ್ತಾಗಿ ಹೇಳಿದ.

ಆದರೆ ಇದು ಕೇವಲ ದೆಹಲಿಯ ಮೇಲ್ಮಟ್ಟದ ಉನ್ನತ ಶಿಕ್ಷಣ ಕಾಲೇಜಿನ ಪರಿಸ್ಥಿತಿ ಮಾತ್ರ ಅಲ್ಲ. ಇದು ಇಡೀ ದೇಶದ ಹಣೆಬರಹ ಅಂತ ನನಗೆ ಅನ್ನಿಸುತ್ತದೆ. ನಾವು ಅನೇಕ ಸಲ ದೊಡ್ಡ ಮನುಷ್ಯರನ್ನ ನಮ್ಮೊಂದಿಗೆ ಸಮೀಕರಿಸಿಕೊಂಡು ನೋಡುತ್ತೇವೆ. ಅವರ ಬುದ್ಧಿಮತ್ತೆ, ಸ್ವಭಾವ, ಕಾರ್ಯಕ್ಷಮತೆ ಎಲ್ಲವೂ ನಮ್ಮಷ್ಟೇ ಇರುತ್ತದೆ, ಅದಕ್ಕಿಂತ ಹೆಚ್ಚು ಇರಲಿಕ್ಕೆ ಸಾಧ್ಯ ಇಲ್ಲ ಎನ್ನುವ ಪೂರ್ವಗ್ರಹ ಬೆಳೆಸಿಕೊಂಡು ಬಿಟ್ಟಿರುತ್ತೇವೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಎಲ್ಲರ ಬಗ್ಗೆ ಇರುವ ನಮ್ಮ ಪೂರ್ವಗ್ರಹ ನಮ್ಮನ್ನು ಹೊಸದನ್ನು ಕಲಿಯದಂತೆ, ನಮ್ಮ ತಪ್ಪು ನಂಬಿಕೆಗಳನ್ನು ಪರಿಶೀಲಿಸದಂತೆ, ವಿಮರ್ಶೆ, ಅವಲೋಕನ ಮಾಡದಂತೆ, ಬದಲಾಯಿಸದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ನಾವು ನಮ್ಮ ಅಳವಿಗೆ ತಕ್ಕಂತೆ, ನಮ್ಮ ಅರಿವಿಗೆ ಮೀರದಂತೆ, ವಿಚಾರ ಮಾಡಿ, ಅದೇ ವಿಚಾರ ಹಂದರದಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟಿರುತ್ತೇವೆ. ಕೆಲವರನ್ನು ಮಹಾನ್ ನಾಯಕ ಅಂತಲೋ, ಸೂಪರ್ ಹೀರೋ ಅಂತಲೋ, ಇನ್ನು ಕೆಲವರನ್ನು ದಡ್ಡ- ದುಷ್ಟ, ವಿಲನ್‌ಗಳು ಅಂತಲೋ ತಿಳಿದುಕೊಂಡು ಒದ್ದಾಡುತ್ತೇವೆ. ಕೆಲವರು ಬುದ್ಧಿವಂತರಾಗಲಿಕ್ಕೆ ಸಾಧ್ಯ ಇಲ್ಲ ಅಂತ ಹಾಗೂ ಇನ್ನು ಕೆಲವರು ದಡ್ಡರಾಗಲಿಕ್ಕೆ ಸಾಧ್ಯ ಇಲ್ಲ ಅಂತ ತಿಳಿದಿರುತ್ತೇವೆ. ಈ ರೋಗಕ್ಕೆ ಹೊರಗಿನಿಂದ ಉಪಾಯ ಇಲ್ಲ. ಆತ್ಮ ನಿರೀಕ್ಷಣೆಯೇ ಔಷಧ.

ಕೌನ್ ಬನೇಗಾ ಕರೋಡ್ ಪತಿ ಎನ್ನುವ ರಿಯಾಲಿಟಿ ಶೋನಲ್ಲಿ 15 ಪ್ರಶ್ನೆಗಳಿಗೆ ಸರಿ ಉತ್ತರ ಹೇಳಿದ ಝಾನ್ಸಿ ಮೂಲದ ಹಿಮಾನಿ ಬುಂದೇಲಾ ಒಂದು ಕೋಟಿ ರೂಪಾಯಿ ಬಹುಮಾನ ಗೆದ್ದರು. ಆದರೆ ‘1923ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಡಾಕ್ಟರೇಟ್‌ಗಾಗಿ ಸಲ್ಲಿಸಿದ ಪ್ರಬಂಧದ ಶೀರ್ಷಿಕೆ ಏನು?’ ಎನ್ನುವ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ, ಬಹುಮಾನದ ಮೊತ್ತವಾದ 7 ಕೋಟಿ ರೂಪಾಯಿ ಗೆಲ್ಲುವ ಅವಕಾಶವನ್ನು ಅವರು ಕಳೆದುಕೊಂಡರು.

ನನ್ನ ಮಟ್ಟಿಗೆ, ಡಾ. ಅಂಬೇಡ್ಕರ್ ಅವರ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುವವರಿಗೆ ಕಡ್ಡಾಯ ಓದು ಎಂದರೆ ‘ರೂಪಾಯಿಯ ಸಮಸ್ಯೆ’ ಎನ್ನುವ ಈ ಪುಸ್ತಕ. ಇದು ಬಹು ಪ್ರಮುಖವಾದದ್ದು, ಆದರೆ ಅಷ್ಟೊಂದು ಜನಪ್ರಿಯವಾಗಿಲ್ಲ. ಭಾರತ ಮತ್ತು ಇತರ ದೇಶಗಳ ನಗದು ನೀತಿಯನ್ನು ವಿಶ್ಲೇಷಿಸುವ ಪ್ರಬಂಧ 1923ರಲ್ಲಿ ಅವರ ಸಂಶೋಧನಾ ಗ್ರಂಥವಾಗಿ ಮುದ್ರಿತವಾಯಿತು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗಳಲ್ಲಿ ಅವರು ಸಂಶೋಧನೆ ನಡೆಸಿ ಪ್ರೌಢ ಪ್ರಬಂಧ ಪಡೆದದ್ದು ಅರ್ಥಶಾಸ್ತ್ರದಲ್ಲಿ. ಭಾರತದಂತಹ ಹೊಸದಾಗಿ ಸ್ವಾತಂತ್ರ‍್ಯ ಪಡೆದ ದೇಶದಲ್ಲಿ ಕಾಗದದ ನೋಟು ಚಲಾವಣೆಯಲ್ಲಿ ಇರಬೇಕೋ, ಅಥವಾ ಚಿನ್ನದ ನಾಣ್ಯ ಇರಬೇಕೋ ಅನ್ನುವ ಸಮಸ್ಯೆಯನ್ನು ಈ ಪುಸ್ತಕ ಚರ್ಚಿಸುತ್ತದೆ. ನಗದು ನಾಣ್ಯ ಅಥವಾ ನೋಟುಗಳ ಮೌಲ್ಯವನ್ನು ನಿರ್ಧಾರ ಮಾಡುವ ಅಧಿಕಾರ ಚುನಾಯಿತ ಸರಕಾರಕ್ಕೆ ಇರದೇ, ಸ್ವಾಯತ್ತ ಸಂಸ್ಥೆಯೊಂದಕ್ಕೆ ಇರಬೇಕು, ಮೌಲ್ಯ ನಿರ್ಧಾರ ವೈಜ್ಞಾನಿಕ ನೀತಿ ನಿಯಮಗಳ ಮೇಲೆ ಆಧಾರಿತವಾಗಿ ಇರಬೇಕು, ರಾಜಕೀಯ ಕಾರಣಗಳಿಂದ ಪ್ರೇರಿತ ಆಗಿರಬಾರದು ಎನ್ನುವ ವಾದವನ್ನು ಮಂಡಿಸುತ್ತದೆ. ಇದೇ ಸಿದ್ಧಾಂತದ ಆಧಾರದ ಮೇಲೆ ಮುಂದೆ ಭಾರತೀಯ ‘ರಿಸರ್ವ್ ಬ್ಯಾಂಕ್’ (ಆರ್‌ಬಿಐ) ಸ್ಥಾಪನೆ ಆಯಿತು.

ಅರ್ಥಶಾಸ್ತ್ರದ ಪಿತಾಮಹ ಅನ್ನಿಸಿಕೊಳ್ಳುವ ಮೆನಯಾರ್ಡ್ ಕೆಯನ್ಸ್ ಅವರು ಬ್ರಿಟಿಷ್ ಭಾರತಕ್ಕೆ ಕಾಗದದ ನೋಟೇ ಸರಿ ಅಂತ ಪ್ರತಿಪಾದಿಸಿದ್ದರು. ಅದನ್ನು ತೀವ್ರವಾಗಿ ಖಂಡಿಸಿದ ಡಾ. ಅಂಬೇಡ್ಕರ್ ಅವರು ಕಾಗದದ ನೋಟಿನ ಬೆಲೆಯನ್ನು ಸರಕಾರ ಕಟ್ಟುತ್ತದೆ. ಆದರೆ ಚಿನ್ನದ ನಾಣ್ಯದ ಬೆಲೆಯನ್ನು ಜನ ಕಟ್ಟುತ್ತಾರೆ. ಆಡಳಿತ ಮಾಡುವವರು ಕಾಗದದ ನೋಟಿನ ಬೆಲೆಯನ್ನು ತಮ್ಮ ಮನಸ್ಸಿಗೆ ಬಂದಂತೆ, ಅವೈಜ್ಞಾನಿಕವಾಗಿ ಹೆಚ್ಚು- ಕಮ್ಮಿ ಮಾಡಬಹುದು. ರಾತ್ರೋರಾತ್ರಿ ಅದರ ಮೌಲ್ಯ ಹೆಚ್ಚು ಮಾಡಬಹುದು, ಅದನ್ನು ಅಪಮಾನ್ಯ ಮಾಡಬಹುದು. ಅದು ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಇರಬಹುದು, ಆದ್ದರಿಂದ ಅದು ಕೂಡದು ಅಂತ ವಾದ ಮಂಡಿಸಿದರು. ಅದಕ್ಕೆ ಸಾಕಷ್ಟು ಮನ್ನಣೆ ದೊರೆಯಿತು.

ಅವರ ಈ ಪುಸ್ತಕದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅರ್ಥಶಾಸ್ತ್ರ ತಜ್ಞ ಜನಾರ್ದನ ದಾಸ್ ಅವರು, ‘ಭಾರತೀಯ ಅರ್ಥಶಾಸ್ತ್ರ ಮೀಮಾಂಸೆಯಲ್ಲಿ ಒಂದು ಮುಖ್ಯವಾದ ತಿರುವು ಮೂಡಿಸಿದ ಪ್ರಬಂಧವಿದು’ ಎಂದು ಬಣ್ಣಿಸುತ್ತಾರೆ. ಇದು ಕೇವಲ ಭಾರತದ ನಗದು ಸಮಸ್ಯೆಯ ಬಗ್ಗೆ ಅಲ್ಲ, ಇಲ್ಲಿನ ಬ್ಯಾಂಕಿಂಗ್ ಮತ್ತು ವ್ಯಾಪಾರಗಳ ಬಗ್ಗೆ ಸಹಿತ ವಿಮರ್ಶಾತ್ಮಕ ಅವಲೋಕನ ನಡೆಸುತ್ತದೆ. ಇದನ್ನು ಪ್ರತಿ ಭಾರತೀಯ ಅರ್ಥಶಾಸ್ತ್ರದ ವಿದ್ಯಾರ್ಥಿ ಓದಬೇಕು ಎಂದು ಶಿಫಾರಸು ಮಾಡುತ್ತಾರೆ.

ಅಲ್ಲದೆ, ಇದರಲ್ಲಿ, ಭಾರತದ ರಾಷ್ಟ್ರೀಯ ಕರೆನ್ಸಿ – ರೂಪಾಯಿಗೆ ಸಂಬಂಧಿಸಿದ ತೊಂದರೆಗಳನ್ನು ವಿವರಿಸಲು ಅಂಬೇಡ್ಕರ್ ಪ್ರಯತ್ನಿಸಿದರು. ಈಸ್ಟ್ ಇಂಡಿಯಾ ಕಂಪನಿ ಮತ್ತು ಬ್ರಿಟಿಷ್ ಸರಕಾರ ತಮ್ಮ ಕಾರ್ಖಾನೆ ಉತ್ಪನ್ನಗಳ ರಫ್ತನ್ನು ಭಾರತಕ್ಕೆ ಹೆಚ್ಚಿಸಲು, ಈ ವ್ಯಾಪಾರದಿಂದ ಹೆಚ್ಚು ಲಾಭ ಗಳಿಸಲು ಭಾರತೀಯ ರೂಪಾಯಿಯ ಮೌಲ್ಯವನ್ನು ಹೆಚ್ಚು ಮಾಡಿ, ಪೌಂಡಿನ ವಿನಿಮಯ ದರವನ್ನು ಕಮ್ಮಿ ಮಾಡಿದರು. ಅದರ ಹಿಂದೆ ದೊಡ್ಡ ಕುತಂತ್ರ ಇದೆ ಎಂದು ಅವರು ವಾದಿಸಿದರು.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’ (ಭಾಗ- 1)

ಅವರು ನಮ್ಮ ದೇಶದ ವ್ಯಾಪಾರ ಮತ್ತು ವ್ಯವಹಾರದ ಗುಣಲಕ್ಷಣಗಳನ್ನು ಪರಿಚಯಿಸುತ್ತಾರೆ. ನಮ್ಮ ದೇಶದಲ್ಲಿ, ಯಾವುದೇ ಉತ್ಪನ್ನದ ವ್ಯಾಪಾರವನ್ನು ಹಣದ ವಿನಿಮಯ ಮತ್ತು ಆ ನಿರ್ದಿಷ್ಟ ಉತ್ಪನ್ನಗಳ ಮೂಲಕ ನಡೆಸಲಾಗುತ್ತಿತ್ತು. ಈ ಹಣದ ವಿನಿಮಯದ ಹಿನ್ನೆಲೆಯಲ್ಲಿ ಒಂದು ವ್ಯಾಪಾರಿ ವರ್ಗ ಸೃಷ್ಟಿಯಾಗಿ, ನಮ್ಮ ಹಣಕಾಸಿನ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿದೆ ಎಂದು ಅಭಿಪ್ರಾಯಪಡುತ್ತಾರೆ.

ಆರ್ಥಿಕ ತಜ್ಞ ಡಬ್ಲ್ಯೂ.ಸಿ. ಮಿಚೆಲ್ ಅವರ ಸೂತ್ರ ಉಲ್ಲೇಖಿಸಿ, ಡಾ. ಅಂಬೇಡ್ಕರ್ ಅವರು ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೆ ಹಣ ಹೇಗೆ ಮುಖ್ಯ ಎನ್ನುವುದನ್ನು ತಿಳಿಸುತ್ತಾರೆ. ಹಣದ ಬಳಕೆಯಿಲ್ಲದೆ, ಯಾವ ವಸ್ತು ಅಥವಾ ಸೇವೆಯ ವಿತರಣೆ ಅಸಾಧ್ಯ ಎನ್ನುವುದರಿಂದ ಮೊದಲ ಅಧ್ಯಾಯ ಆರಂಭಿಸುತ್ತಾರೆ. ಅವರು ಮೊಘಲ್ ಸಾಮ್ರಾಜ್ಯದಲ್ಲಿ ಕರೆನ್ಸಿ ಹೇಗೆ ಇತ್ತು ಎಂಬುದನ್ನು ವಿವರಿಸುತ್ತಾರೆ. ಕಂಪನಿ ಸರಕಾರದಲ್ಲಿ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗೇನೂ ಇಲ್ಲ ಎಂದು ಹೇಳುತ್ತಾರೆ. ಅದಕ್ಕೆ ಹೋಲಿಸಿದರೆ ಮೊಘಲರ ಕಾಲದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿತ್ತು. ಆಗ ಭಾರತೀಯ ನಾಣ್ಯಗಳಿಗೆ ಇಡೀ ಜಗತ್ತಿನ ತುಂಬ ಮಾನ್ಯತೆ ಇತ್ತು ಎನ್ನುವುದನ್ನು ತೋರಿಸಿಕೊಡುತ್ತಾರೆ. ಬ್ರಿಟಿಷರ ಆಡಳಿತ ಮತ್ತು ಆರ್ಥಿಕ ಆಕ್ರಮಣದ ಮೊದಲು, ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ನಿಖರ ಬೆಲೆಯ ಕರೆನ್ಸಿ ಆಗಿದ್ದವು. ಅವಕ್ಕೆ ಸರಕಾರದಿಂದ ನಿಕ್ಕಿ ಮಾಡಲಾದ ಯಾವುದೇ ಸ್ಥಿರ ಅನುಪಾತ ಇರಲಿಲ್ಲ. ಅವು ಸರ್ವಮಾನ್ಯ ವಿನಿಮಯ ಮಾಧ್ಯಮ ಆಗಿದ್ದವು.

(ಮುಂದುವರಿಯುತ್ತದೆ..)

(‘ಈ ದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...