ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)

Date:

ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ‘ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ (States and Minorities) ಒಂದು ವಿಶಿಷ್ಟವಾದ ಕೃತಿ. ಎಲ್ಲ ಅಡಕಗಳು, ಕೋಷ್ಟಕಗಳು ಮತ್ತು ವಿವರಣೆಗಳು ಸೇರಿ ಕೇವಲ 79 ಪುಟಗಳ ಈ ಪುಟ್ಟ ಪುಸ್ತಕ ಬಾಬಾ ಸಾಹೇಬರ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿ ನಮ್ಮ ಮುಂದಿರುವ ಇನ್ನೊಂದು ಮಹತ್ವದ ದಾಖಲೆ. ಅಷ್ಟಕ್ಕೂ ಇದನ್ನು ಅವರು ಬರೆದದ್ದು ಒಂದು ಪುಸ್ತಕ ಬರೆಯುವ ಉದ್ದೇಶದಿಂದ ಅಲ್ಲ. ಇದನ್ನು ಅಂಬೇಡ್ಕರ್ ಒಂದು ಕರಪತ್ರ ಅಂತ ಕರೆದಿದ್ದಾರೆ. ವಾಸ್ತವದಲ್ಲಿ ಇದು ಅಂಬೇಡ್ಕರ್ ಸಂವಿಧಾನ ಸಭೆ (Constituent Assembly) ಗೆ ನೀಡಿದ ಒಂದು ಮನವಿ ಅಥವಾ ಬಿನ್ನವತ್ತಳೆ (memorandum). ಇದರ ಹಿನ್ನೆಲೆಯನ್ನು ಪುಸ್ತಕದ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರು ಹೀಗೆ ವಿವರಿಸುತ್ತಾರೆ:

ಸ್ವತಂತ್ರ ಭಾರತಕ್ಕೊಂದು ಸಂವಿಧಾನವನ್ನು ರಚಿಸುವ ಹೊಣೆಯನ್ನು ಸಂವಿಧಾನ ಸಭೆಗೆ ವಹಿಸಿಕೊಡುವುದು ಎಂದು ಖಾತರಿಯಾದ ಮೇಲೆ All India Scheduled Caste Federationನ ಕಾರ್ಯಕಾರಿ ಸಮಿತಿಯವರು ಅವರ ಪರವಾಗಿ ಸಂವಿಧಾನ ರಚನಾ ಸಭೆಗೆ ಸಲ್ಲಿಸಲು ಪರಿಶಿಷ್ಟಜಾತಿಗೆ ಸೇರಿದವರ ಹಕ್ಕುಗಳ ಸಂರಕ್ಷಣೆಯ ಕುರಿತಂತೆ ಒಂದು ಬಿನ್ನವತ್ತಲೆಯನ್ನು ರಚಿಸುವಂತೆ ಕೇಳಿಕೊಂಡರು. ನಾನು ಈ ಕಾರ್ಯವನ್ನು ಬಹಳ ಸಂತೋಷದಿಂದ ಒಪ್ಪಿಕೊಂಡು ನೆರವೇರಿಸಿದೆ. ಆ ಶ್ರಮದ ಫಲವೇ ಈ ಕರಪತ್ರ.

sc 1
ಶೆಡ್ಯೂಲ್ ಕಾಸ್ಟ್ ಫೆಡರೇಷನ್ ಜೊತೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್. (ಸಂಗ್ರಹ ಚಿತ್ರ)

ಈ ಕೃತಿಯ ನಿರೂಪಣೆ ಒಂದು ಪುಸ್ತಕದ ಸಾಮಾನ್ಯ ನಿರೂಪಣೆಯ ರೂಪದಲ್ಲಿ ಇಲ್ಲ. ಬದಲಿಗೆ ಸಂವಿಧಾನದ ನಿರೂಪಣೆ ಯಾವ ರೀತಿ ಇದೆಯೋ ಹಾಗೆಯೇ ಇದೆ. ಅಂದರೆ ಪರಿಶಿಷ್ಟ ಜಾತಿಗೆ ಸೇರಿದ ಜನರ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಮನವಿಪತ್ರ ಸಿದ್ಧಪಡಿಸುವ ಬದಲಿಗೆ ಈ ಅವಕಾಶವನ್ನು ಬಳಸಿಕೊಂಡು ಅಂಬೇಡ್ಕರ್ ಅವರು ಒಂದು ಮಿನಿ ಸಂವಿಧಾನವನ್ನೇ ಬರೆದುಬಿಟ್ಟರು. ಅದರಲ್ಲಿ ಪ್ರಸ್ತಾವನೆಯೂ (Preamble) ಸೇರಿದಂತೆ ಭಾರತದಂತಹ ದೇಶದ ಸಂವಿಧಾನದಲ್ಲಿ ಅತ್ಯಗತ್ಯವಾಗಿ ಏನೇನು ಇರಬೇಕೋ ಅವುಗಳನ್ನೆಲ್ಲ ಸಂಕ್ಷಿಪ್ತವಾಗಿ ಸೇರಿಸಿದ್ದಾರೆ. ಕೃತಿಯ ನಿರೂಪಣೆಯ ಬಗ್ಗೆ ಅಂಬೇಡ್ಕರ್ ಹೀಗೆ ಬರೆದಿದ್ದಾರೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ನನ್ನ ಯೋಚನೆಗಳನ್ನು ಎಂದಿನಂತೆ ಸಹಜವಾದ ನಿರೂಪಣೆಯಲ್ಲಿ ದಾಖಲಿಸುವ ಬದಲಿಗೆ ನಾನು ಈ ಮನವಿಪತ್ರವನ್ನು ಅದರಲ್ಲಿ ಹೇಳಿರುವ ಅಂಶಗಳು ಸಂವಿಧಾನದಲ್ಲಿ ಯಾವ ರೂಪದಲ್ಲಿ ಕಾಣಿಸಿಕೊಳ್ಳಬೇಕೋ ಅದೇ ರೀತಿ ಪರಿಚ್ಛೇದ (Preamble)ಗಳ ರೂಪದಲ್ಲಿ ನೀಡಿದ್ದೇನೆ. ಈ ನಿರೂಪಣಾ ವಿಧಾನ ನಾನು ಏನು ಹೇಳಿದ್ದೇನೋ ಅವೆಲ್ಲವನ್ನು ಸಂಕ್ಷಿಪ್ತವಾಗಿಯೂ, ಸರಳವಾಗಿಯೂ, ಸ್ಪಷ್ಟವಾಗಿಯೂ ಓದುಗರಿಗೆ ದಾಟಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ನಾನು ಭಾವಿಸಿದ್ದೇನೆ.’

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)

ಅಂಬೇಡ್ಕರ್ ಅವರು ಈ ಪುಸ್ತಕವನ್ನು ಅರ್ಥಾತ್ ಮನವಿ ಪತ್ರವನ್ನು ಬರೆಯುತ್ತಾ ಬರೆಯುತ್ತಾ ಹೋದಂತೆ ಅದೊಂದು ಮಿನಿ ಸಂವಿಧಾನವಾಗಿ ರೂಪುಗೊಂಡ ಪ್ರಕ್ರಿಯೆಯೇ ಅದ್ಭುತವಾದದ್ದು. ಈ ಪ್ರಕ್ರಿಯೆ ಅಂಬೇಡ್ಕರ್ ಯೋಚಿಸುವ ರೀತಿಗೆ ಕನ್ನಡಿ ಹಿಡಿಯುತ್ತದೆ. ಅದು ಅಂಬೇಡ್ಕರ್ ಸ್ವಾತಂತ್ರ್ಯ ಭಾರತಕ್ಕೊಂದು ಸಾಂವಿಧಾನಿಕ ಬುನಾದಿ ಹಾಕಿಕೊಡುವ ವಿಚಾರದಲ್ಲಿ ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಅದೆಷ್ಟು ಆಪ್ತರೀತಿಯಲ್ಲಿ ಮತ್ತು ತೀವ್ರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎನ್ನುವುದನ್ನೂ ಸೂಚಿಸುತ್ತದೆ. ಅವರು ಬರೆಯುತ್ತಾರೆ:

“ಭಾರತಕ್ಕೊಂದು ಸಂವಿಧಾನ ರಚಿಸುವ ನಿಟ್ಟಿನಲ್ಲಿ ಸಂವಿಧಾನ ಸಭೆಯ ಮುಂದಿರುವ ಹಲವು ಸವಾಲುಗಳಲ್ಲಿ ಎರಡು ಸವಾಲುಗಳು ಬಹಳ ಪ್ರಮುಖವಾಗಿವೆ. ಅದರಲ್ಲಿ ಮೊದಲನೆಯ ಸವಾಲು ಸ್ವಾತಂತ್ರ್ಯ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವ ಸವಾಲು. ಎರಡನೆಯದ್ದು ಭಾರತ ಒಂದು ಒಕ್ಕೂಟವಾಗುವ ಹಿನ್ನೆಲೆಯಲ್ಲಿ ಈ ದೇಶದಲ್ಲಿರುವ ಅಸಂಖ್ಯ ರಾಜ್ಯಗಳು (ಪ್ರಾಂತ್ಯಗಳು) ಎದುರಿಸುವ ಸಮಸ್ಯೆ. ನಾನು ಪ್ರಾಂತ್ಯಗಳ ಸಮಸ್ಯೆಯನ್ನು ಬಹಳಷ್ಟು ಆಸ್ಥೆಯಿಂದ ಬಹಳ ಕಾಲದಿಂದ ಅಧ್ಯಯನ ಮಾಡುತ್ತಾ ಬಂದಿದ್ದೇನೆ. ಅವುಗಳ ಕುರಿತಂತೆ ನನಗೆ ನನ್ನದೇ ಆದ ಕೆಲವು ಸ್ಪಷ್ಟ ಯೋಚನೆಗಳಿವೆ. ಸಂವಿಧಾನ ಸಭೆಯು ನನ್ನನ್ನು ರಾಜ್ಯಗಳಿಗೆ ಸಂಬಂಧಿಸಿದ ಪರಿಚ್ಛೇದಗಳನ್ನು ನಿರೂಪಿಸುವ ಸಮಿತಿಗೆ ನೇಮಿಸುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಆ ಕೆಲಸಕ್ಕೆ ನನಗಿಂತ ಹೆಚ್ಚು ಸಮರ್ಥರು ಯಾರೋ ದೊರಕಿರಬೇಕು. ‘ನಾನು ಗರ್ಭಗುಡಿ’ (tabernacle)ಯ ಹೊರಗಣವನು ಎನ್ನುವುದೂ ಅದಕ್ಕೆ ಕಾರಣವಿರಬಹುದು. ಆ ಬಗ್ಗೆ ನನಗೇನೂ ಬೇಸರವಿಲ್ಲ. ಒಂದೇ ಒಂದು ವಿಷಾದದ ವಿಚಾರವೆಂದರೆ ಕೆಲವೊಂದು ಮಹತ್ವದ ಯೋಚನೆಗಳನ್ನು ಸಂವಿಧಾನ ಸಭೆಯ ಮುಂದಿಡುವ ಅವಕಾಶವೊಂದರಿಂದ ನಾನು ವಂಚಿತನಾದೆ ಎನ್ನುವುದು. ಹಾಗಾಗಿ ನಾನು ಈಗ ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ. ಈ ಮನವಿಪತ್ರದಲ್ಲಿ ಪರಿಶಿಷ್ಟ ಜಾತಿಯವರ ಹಕ್ಕುಗಳ ಸಂರಕ್ಷಣೆಯ ವಿಚಾರದ ಜತೆಗೆ ಎಲ್ಲ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರವನ್ನೂ, ಅದಕ್ಕಾಗಿ ಸಮಸ್ತ ನಾಗರಿಕರಿಗೆ ಸಿಗಬೇಕಾದ ಹಕ್ಕುಗಳ ವಿಚಾರವನ್ನೂ ಪ್ರಸ್ತಾಪಿಸುತ್ತೇನೆ. ಅದರ ಜತೆಗೆ ರಾಜ್ಯಗಳ ಸಮಸ್ಯೆಯನ್ನು ಸಾಂವಿಧಾನಿಕವಾಗಿ ಹೇಗೆ ನಿಭಾಯಿಸಬೇಕು ಎಂದೂ ಬರೆಯುತ್ತೇನೆ. ಈ ರೀತಿಯಲ್ಲಾದರೂ ನನ್ನ ವಿಚಾರಗಳು ಜನರಿಗೆ ತಲುಪಲಿ. ಅದನ್ನು ಅವುಗಳ ಮಹತ್ವಕ್ಕನುಗುಣವಾಗಿ ಅವರು ಮೌಲ್ಯಮಾಪನ ನಡೆಸಲಿ, ಅವರಿಗೆ ಯಾವ ರೀತಿಯಲ್ಲಿ ಸೂಕ್ತವೆನಿಸುತ್ತದೋ ಆ ರೀತಿಯಲ್ಲಿ ಅವುಗಳನ್ನು ಬಳಸಿಕೊಳ್ಳಲಿ.”

ಈ ಕೃತಿಯನ್ನು ಬರೆಯುವ (ಮೊದಲ ಮುದ್ರಣ 1945) ಹೊತ್ತಿಗೇನೇ ಅಂಬೇಡ್ಕರ್ ಅವರಿಗೆ ಮುಂದೆ ಸಂವಿಧಾನ ಸಭೆ ನಿಭಾಯಿಸಬೇಕಾದ ಕ್ಲಿಷ್ಟಕರ ವಿಚಾರಗಳ ಬಗ್ಗೆ ಸ್ಪಷ್ಟವಾದ ಯೋಚನೆ ಮತ್ತು ನಿಲುವುಗಳಿದ್ದವು. ಜತೆಗೆ ಕೆಲವೊಂದು ಸಮಸ್ಯೆಗಳಿಗೆ ಅವರದ್ದೇ ಆದ ಪರಿಹಾರೋಪಾಯಗಳನ್ನು ಅವರು ಸಿದ್ಧಪಡಿಸಿಕೊಂಡು ತಯಾರಾಗಿದ್ದರು. ಮುಖ್ಯವಾಗಿ ಈ ಕೃತಿಯಲ್ಲಿ, ರಾಜ್ಯಗಳನ್ನು ಸೇರಿಸಿಕೊಂಡು ಹೊಸ ಒಕ್ಕೂಟವಾಗಿ ದೇಶವನ್ನು ಒಂದು ಸಾಂವಿಧಾನಿಕ ರಾಷ್ಟ್ರವನ್ನಾಗಿ ಕಟ್ಟುವ ವಿಚಾರದಲ್ಲಿ ಮತ್ತು ಅಂತಹ ಆಧುನಿಕ ರಾಷ್ಟ್ರ ವ್ಯವಸ್ಥೆಯಲ್ಲಿ ಸಮಸ್ತ ನಾಗರಿಕರಿಗೆ ನೀಡಬೇಕಾದ ಹಕ್ಕುಗಳ ಮತ್ತು ಅವುಗಳ ಸಂರಕ್ಷಣೆಗಾಗಿ ಅಳವಡಿಸಿಕೊಳ್ಳಬೇಕಾದ ಮಾರ್ಗಗಳ ಬಗ್ಗೆ ಅವರು ವಿವರವಾಗಿ ಬರೆದ ಕಾರಣದಿಂದಾಗಿ ಈ ಕೃತಿಗೊಂದು ಸಂವಿಧಾನದ ಸ್ವರೂಪ ಬಂದು ಬಿಟ್ಟಿತು. ಇದರಲ್ಲಿ ಭಾರತವನ್ನು ಅಮೆರಿಕಾದ ಮಾದರಿಯಲ್ಲಿ ಭಾರತದ ಸಂಯುಕ್ತ ಸಂಸ್ಥಾನಗಳು (United States of India) ಎಂದು ಅಂಬೇಡ್ಕರ್ ಕರೆದಿದ್ದರು ಎನ್ನುವುದು ಕೂಡಾ ಮಹತ್ವದ ಅಂಶ. ಒಂದು ಮಿನಿ ಸಂವಿಧಾನವಾಗಿ ಸ್ವರೂಪದಲ್ಲಿ ಸಂಪೂರ್ಣವಾಗಿರಬೇಕು ಎನ್ನುವಂತೆ ಅದಕ್ಕೊಂದು ಪ್ರಸ್ತಾವನೆಯನ್ನೂ (Preamble) ಅಂಬೇಡ್ಕರ್ ಅವರು ಬರೆದು ಸೇರಿಸಿದ್ದಾರೆ. ಹಾಗಾಗಿ ಈ ಕೃತಿಯಲ್ಲಿ ಮೂರು ಪ್ರಮುಖ ವಿಭಾಗಗಳಿವೆ:

1. ‘ಭಾರತದ ಸಂಯುಕ್ತ ಸಂಸ್ಥಾನಗಳ ಸಂವಿಧಾನ ಪ್ರಸ್ತಾವನೆಗೊಂದು ಪ್ರಸ್ತಾವನೆ’ (Proposed Preamble to the Constitution of the United States of India)

2. ಸಂವಿಧಾನದ ಪ್ರಸ್ತಾವಿತ ಪರಿಚ್ಛೇದ 1- ಭಾರತದ ಸಂಸ್ಥಾನಗಳನ್ನು ಭಾರತದ ಸಂಯುಕ್ತ ರಾಷ್ಟ್ರ ವ್ಯವಸ್ಥೆಗೆ ಸೇರಿಸಿಕೊಳ್ಳುವ ಬಗ್ಗೆ (Proposed Article I of the Constitution relating to the admission of Indian States and new territories into the Union)

3. ಸಂವಿಧಾನದ ಪ್ರಸ್ತಾವಿತ ಪರಿಚ್ಛೇದ 2 – ನಾಗರಿಕರ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಸಂರಕ್ಷಣೆ ಮತ್ತು ಪರಿಶಿಷ್ಟ ಜಾತಿಗಳ ಹಿತರಕ್ಷಣೆಯ ಅಂಶಗಳ ಬಗ್ಗೆ (Proposed Article II of the Constitution containing Fundamental Rights for Citizens Provisions for the Protection of Minorities and Safeguards for the Scheduled Castes).

ಇದಾದ ನಂತರ ಒಂದು ವಿಸ್ತೃತವಾದ ಟಿಪ್ಪಣಿ ಮತ್ತು ಮೂರು ಅಡಕಗಳನ್ನು ಈ ಕೃತಿ ಒಳಗೊಂಡಿದೆ.

ಮನವಿಯ ರೂಪದ ಈ ಸಂಕೀರ್ಣ ದಾಖಲೆಯನ್ನು ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ 1947 ಮಾರ್ಚ್ 15ರಂದು ಸಮರ್ಪಿಸುತ್ತಾರೆ. ಅದು ಮುಂದೆ ಸಂವಿಧಾನ ಸಭೆಯ ಮೂಲಭೂತ ಹಕ್ಕುಗಳ ಉಪಸಮಿತಿಯ ಮುಂದೆ ಬರುತ್ತದೆ. ನಂತರ ಅದೇ ವರ್ಷ ಆಗಸ್ಟ್‌ನಲ್ಲಿ ಸ್ವತಃ ಅಂಬೇಡ್ಕರ್ ಅವರೇ ಸಂವಿಧಾನದ ಕರಡು ಸಿದ್ಧತಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ.

ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-2)

ಪಾಳೇಗಾರಿಕೆ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು ಯಥಾವತ್ತಾಗಿ ಉಳಿಸಿಕೊಂಡು, ಜಾತಿ ವಿನಾಶ ಮಾಡುವುದು (ಅದರಲ್ಲೂ, ಎಸ್.ಸಿ./ಎಸ್.ಟಿ.ಗಳಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ದೊರಕಿಸುವುದು) ಅಸಾಧ್ಯ ಎಂಬುದನ್ನು ಬಾಬಾಸಾಹೇಬರು ಮನಗಂಡಿದ್ದರು. ಹಾಗಾಗಿ ಈ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಕ್ರಾಂತಿಕಾರೀ ಎನ್ನಬಹುದಾದ ಕೆಲವು ಕ್ರಮಗಳನ್ನು ಸೂಚಿಸುತ್ತಾರೆ.

ಅಂಬೇಡ್ಕರ್ ಅವರು ಇಲ್ಲಿ States ಎನ್ನುವ ಪದ ಬಳಸಿದ್ದು ರಾಜ್ಯಗಳು ಅಥವಾ ಪ್ರಾಂತ್ಯಗಳು ಎನ್ನುವ ಅರ್ಥದಲ್ಲಿ. ಅದೇ ರೀತಿ minorities ಎನ್ನುವ ಪದವನ್ನು ಬಳಸಿದ್ದು ಕೇವಲ ಧಾರ್ಮಿಕ/ ಭಾಷಾ ಅಲ್ಪಸಂಖ್ಯಾತರನ್ನಷ್ಟೇ ಉದ್ದೇಶಿಸಿ ಅಲ್ಲ. ಅವರ ಪ್ರಕಾರ ಭಾರತದಲ್ಲಿ ನಿಜ ಅರ್ಥದಲ್ಲಿ ಅಲ್ಪಸಂಖ್ಯಾತರು ಅಂತ ಯಾರಾದರೂ ಇದ್ದರೆ ಅದು ಈ ದೇಶದಲ್ಲಿ ಈಗ ಪರಿಶಿಷ್ಟಜಾತಿ ಅಂತ ಯಾರನ್ನು ಕರೆಯಲಾಗುವುದೋ ಅವರು ಮಾತ್ರ. ಅದರಲ್ಲೂ ಯಾರನ್ನು ಹಿಂದೆ ಅಸ್ಪೃಶ್ಯರು ಅಂತ ಪರಿಗಣಿಸಲಾಗಿತ್ತೋ ಅವರು ನಿಜವಾದ ಅಲ್ಪಸಂಖ್ಯಾತರು. ಹಾಗಾಗಿ ಈ ಪುಸ್ತಕದ ಶೀರ್ಷಿಕೆಯ ಮುಂದುವರಿಕೆಯಯಾಗಿ ನೀಡಲಾದ ‘What are Their Rights and How to Secure Them in the Constitution of Free India’ ಎನ್ನುವ ಉಪಶೀರ್ಷಿಕೆಯಲ್ಲಿ ಬರುವ ‘their’ ಎನ್ನುವ ಸರ್ವನಾಮವನ್ನು ಕೂಡ ಬಹಳ ಜಾಗರೂಕತೆಯಿಂದ ಅರ್ಥೈಸಿಕೊಳ್ಳಬೇಕಾಗುತ್ತದೆ. ಇಲ್ಲಿ ‘their’ ಅಥವಾ ‘ಅವರ’ ಎನ್ನುವಾಗ ಪುಸ್ತಕ ಯಾರನ್ನು ಉದ್ದೇಶಿಸುತ್ತದೆ? ಯಾರನ್ನು ಎಂದರೆ ‘ರಾಜ್ಯಗಳನ್ನು, ಪರಿಶಿಷ್ಟ ಜಾತಿಗೆ ಸೇರಿದವರನ್ನು ಮತ್ತು ಇತರ ಬೇರೆ ಬೇರೆ ಆಧಾರಗಳಲ್ಲಿ ಅಲ್ಪಸಂಖ್ಯಾತರು ಅಂತ ಪರಿಗಣಿಸಲಾದವರನ್ನು ಅಂತ ನಾವು ಅರ್ಥೈಸಿಕೊಳ್ಳಬೇಕಾಗುತ್ತದೆ.

ಪರಿಶಿಷ್ಟ ಜಾತಿಗಳನ್ನು ಈ ಪುಸ್ತಕದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಿದ್ದನ್ನು ಕೆಲವರು ಆಕ್ಷೇಪಿಸುತ್ತಾರೆ. ಆಗ ಯಾವ ಸಮುದಾಯವನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಬಹುದು ಎಂಬುದಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ಅವರು ನೀಡುತ್ತಾರೆ. ‘ಜನಸಂಖ್ಯೆಯ ದೃಷ್ಟಿಯಿಂದ ಸಣ್ಣ ಸಣ್ಣ ಧಾರ್ಮಿಕ ಗುಂಪುಗಳಾಗಿರುವವರಿಗಿಂತ, ಸಾಮಾಜಿಕ ತಾರತಮ್ಯ ಮತ್ತು ಶೋಷಣೆಯನ್ನು ಅನುಭವಿಸುತ್ತಿರುವ ಎಸ್. ಸಿ.ಗಳನ್ನು ಅತ್ಯಂತ ಅರ್ಹ ಅಲ್ಪಸಂಖ್ಯಾತರು ಎಂದು ಪರಿಗಣಿಸಬೇಕಾಗುತ್ತದೆ. ಏಕೆಂದರೆ ಎಸ್. ಸಿ.ಗಳಷ್ಟು ತಾರತಮ್ಯ ಮತ್ತು ಶೋಷಣೆಯನ್ನು ಯಾವ ಧಾರ್ಮಿಕ ಅಲ್ಪಸಂಖ್ಯಾತ ವರ್ಗವೂ ಅನುಭವಿಸುತ್ತಿಲ್ಲ. ಆದಕಾರಣ, ಎಸ್.ಸಿ.ಗಳು ವಿಶೇಷವಾದ ಸೌಲಭ್ಯ ಮತ್ತು ರಕ್ಷಾಣೋಪಾಯಗಳಿಗೆ ಅರ್ಹರಾಗಿದ್ದಾರೆ’ ಎನ್ನುವುದು ಪರಿಶಿಷ್ಟ ಜಾತಿಗಳಿಗೆ ಸೇರಿದವರನ್ನು ಅಲ್ಪಸಂಖ್ಯಾತರು ಎಂದು ಕರೆದಿದಕ್ಕೆ ಅಂಬೇಡ್ಕರ್ ಅವರು ನೀಡಿದ ಸಮರ್ಥನೆ ಆಗಿತ್ತು.

ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)

ಎರಡನೆಯದಾಗಿ, ಸೆಪ್ಟೆಂಬರ್ 24, 1932ರಂದು ನಡೆದ ಪುಣೆ ಕರಾರಿನ ಮೂಲಕ ಕಳೆದುಕೊಂಡ ಪ್ರತ್ಯೇಕ ಮತದಾನದ ಮೂಲಕವೇ ಎಸ್.ಸಿ.ಗಳು ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಾರೆ. ಈ ಪದ್ಧತಿಯ ಮೂಲಕ ಮಾತ್ರವೇ ಎಸ್.ಸಿ.ಗಳು ತಮ್ಮ ಪ್ರಾಮಾಣಿಕ, ನಿಷ್ಠಾವಂತ ಮತ್ತು ಸಮರ್ಥ ನಾಯಕರನ್ನು ಚುನಾಯಿಸಲು ಸಾಧ್ಯ ಎಂಬುದನ್ನು ತಮ್ಮ 10 ವರ್ಷಗಳ ಅನುಭವದಲ್ಲಿ ಅರಿತಿರುತ್ತಾರೆ.

ಮೂರನೆಯದಾಗಿ, ಎಲ್ಲಿಯತನಕ ಹಾಲಿ ಇರುವ ಹಳ್ಳಿ ಮತ್ತು ಕೇರಿ ವ್ಯವಸ್ಥೆ ಇರುತ್ತದೋ ಅಲ್ಲಿಯತನಕ ಮೇಲ್ಜಾತಿಗಳ ದಬ್ಬಾಳಿಕೆ ಮತ್ತು ದೌರ್ಜನ್ಯವು ತಪ್ಪುವುದಿಲ್ಲ ಹಾಗೂ ಎಸ್.ಸಿ.ಗಳ ಪರವಾಲಂಬಿಯಾದ ದಯನೀಯ ಬದುಕು ಮತ್ತು ದಾರಿದ್ರ್ಯವೂ ತಪ್ಪುವುದಿಲ್ಲ ಎಂಬುದು ಬಾಬಾಸಾಹೇಬರು ಅನುಭವದಿಂದ ಅರಿತಿರುತ್ತಾರೆ. ಆದಕಾರಣ, ಎಸ್.ಸಿ.ಗಳಿಗೆ ಇತರರಿಂದ ಸ್ವತಂತ್ರವಾದ ಪ್ರತ್ಯೇಕ ಹಳ್ಳಿಗಳ (Separate Settlements) ನಿರ್ಮಾಣಕ್ಕೆ ಒತ್ತಾಯಿಸುತ್ತಾರೆ. ಈ ಉದ್ದೇಶಕ್ಕಾಗಿ, ಪ್ರತ್ಯೇಕ ಆಯೋಗವನ್ನು ರಚಿಸಬೇಕೆಂದು ಹೇಳುತ್ತಾರೆ.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

M Gopinath
ಎಂ. ಗೋಪಿನಾಥ್
+ posts

ಬಹುಜನ ಚಳವಳಿಯಲ್ಲಿ ಗುರುತಿಸಿಕೊಂಡ ಗೋಪಿನಾಥ್ ಅವರು, ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದವರು. 1987ರಲ್ಲಿ ಬೆಂಡಿಗೇರಿ ದಲಿತರಿಗೆ ಮಲ ತಿನ್ನಿಸಿದ ಪ್ರಕರಣ ಖಂಡಿಸಿ, ಕೆಎಸ್‌ಎಫ್‌ಸಿ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾದರು. ಸಮತಾ ಸೈನಿಕ ದಳ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಹಲವಾರು ಪುಸ್ತಕಗಳನ್ನು ಬರೆದಿರುವ ಅವರು, ವಿ. ಟಿ. ರಾಜಶೇಖರರ ಸಂಪಾದಕತ್ವದಲ್ಲಿದ್ದ ಇಂಗ್ಲಿಷ್ ದಲಿತ್ ವಾಯ್ಸ್‌ನಲ್ಲಿ ಎಕ್ಸಿಕ್ಯೂಟಿವ್ ಎಡಿಟರ್ ಆಗಿದ್ದರು. ಇದೇ ವೇಳೆ ಕನ್ನಡ ದಲಿತ್ ವಾಯ್ ಆರಂಭಿಸಿದರು. 'ಅಂಬೇಡ್ಕರ್ ವಾಯ್ಸ್' ಮಾಸಿಕದ ಪ್ರಧಾನ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

Narayan
ಎ. ನಾರಾಯಣ

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಎ.ನಾರಾಯಣ ಅವರು ಪ್ರಖರ ರಾಜಕೀಯ ವಿಶ್ಲೇಷಕರೂ ಹೌದು. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ನಿಯಮಿತವಾಗಿ ಬರೆಯುತ್ತಿರುವ ಅವರು, ತಮ್ಮ ವಿಶಿಷ್ಟ ಒಳನೋಟಗಳಿಂದ ಗಮನ ಸೆಳೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...