(ಮುಂದುವರಿದ ಭಾಗ..) ಬಹು ಮುಖ್ಯವಾಗಿ, ಸ್ವತಂತ್ರ ಭಾರತದಲ್ಲಿ, ಪ್ರಮುಖ ಉತ್ಪದನಾ ವಲಯಗಳಾದ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳನ್ನು ಜಾತೀಯತೆಗೆ ಬಲ ನೀಡದಂತೆ ಹೇಗೆ ಸಂಘಟಿಸಬೇಕು ಎಂಬುದನ್ನು ಅತ್ಯಂತ ವಿನೂತನ ರೀತಿಯಲ್ಲಿ ವಿವರಿಸಿದ್ದಾರೆ. ಈ ಆರ್ಥಿಕ ಚಿಂತನೆಯನ್ನು State Socialism (ಪ್ರಭುತ್ವ ಸಮಾಜವಾದ) ಎಂದು ಕರೆಯಲಾಗಿದೆ. ಈ ತತ್ವದ ಮುಖ್ಯ ಅಂಶಗಳನ್ನು ಕೆಳಗೆ ನೀಡಲಾಗಿದೆ.
1.ಪ್ರಮುಖ ಕೈಗಾರಿಕೆಗಳು (Key Industries) ಸರ್ಕಾರದ ಒಡೆತನದಲ್ಲಿರಬೇಕು. ಅದೇ ರೀತಿಯಾಗಿ, ಮೂಲಭೂತ ಅಥವಾ ಪ್ರಾಥಮಿಕ ಕೈಗಾರಿಕೆಗಳು (Basic Industries) ಸರ್ಕಾರದ ಮಾಲೀಕತ್ವದಲ್ಲಿ ಇರಬೇಕು ಮತ್ತು ಸರ್ಕಾರಿ ನಿಗಮಗಳ ಮೂಲಕ ನಿರ್ವಹಿಸಲ್ಪಡಬೇಕು.
2.ವಿಮೆಯು ಸರ್ಕಾರದ ಏಕಸ್ವಾಮ್ಯದಲ್ಲಿರಬೇಕು. ಪ್ರತಿಯೊಬ್ಬ ವಯಸ್ಕ ಪ್ರಜೆಯೂ ತನ್ನ ಸಂಬಳಕ್ಕೆ ಅನುಗುಣವಾಗಿ ಜೀವ ವಿಮಾ ಪಾಲಿಸಿಯನ್ನು ಪಡೆದುಕೊಳ್ಳಲು ಸರ್ಕಾರವು ಒತ್ತಾಯಿಸಬೇಕು.
3.ಕೃಷಿಯು ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರಬೇಕು. ಕೈಗಾರಿಕೆ, ವಿಮೆ ಮತ್ತು ಭೂಮಿಯ ಒಡೆತನ ಹೊಂದಿರುವ ಖಾಸಗಿಯವರ ಹಾಲಿ ಹಕ್ಕುಗಳನ್ನು ಸರ್ಕಾರವು ವಶಪಡಿಸಿಕೊಳ್ಳಬೇಕು. ಅವರ ಹಕ್ಕುಗಳ ಬೆಲೆಗೆ ಸಮನಾದ ಡಿಬೆಂಚರುಗಳನ್ನು ಪರಿಹಾರವಾಗಿ ಅವರಿಗೆ ನೀಡಬೇಕು. ಆ ಡಿಬೆಂಚರುಗಳನ್ನು ನಗದಾಗಿ ಪರಿವರ್ತಿಸುವ ಅವಧಿಯನ್ನು ಸರ್ಕಾರವೇ ನಿರ್ಧರಿಸಬೇಕು. ಈ ಡಿಬೆಂಚರುಗಳನ್ನು ವರ್ಗಾಯಿಸಬಹುದೇ ಹೊರತು ಸರ್ಕಾರ ವಶಪಡಿಸಿಕೊಂಡ ಭೂಮಿಯನ್ನು ವಾಪಸ್ಸು ಪಡೆಯುವ ಹಕ್ಕು ಯಾರಿಗೂ ಇರುವುದಿಲ್ಲ. ಡಿಬೆಂಚರನ್ನು ನಗದಾಗಿ ಪಡೆಯುವ ತನಕ ಅದರ ಮೇಲೆ ಸರ್ಕಾರ ನಿಗದಿಪಡಿಸಿದ ಬಡ್ಡಿಯನ್ನು ಪಡೆಯಬಹುದು. ಕೃಷಿ ಉದ್ಯಮಕ್ಕಾಗಿ ಸರ್ಕಾರವು ವಶಪಡಿಸಿಕೊಂಡ ಭೂಮಿಯನ್ನು ‘ಫಾರ್ಮ್’ಗಳನ್ನಾಗಿ ನಿಗದಿತ ಅಳತೆಯಲ್ಲಿ ವಿಂಗಡಿಸಬೇಕು. ಈ ಫಾರ್ಮ್ ಜಮೀನನ್ನು ಕುಟುಂಬ ಘಟಕಗಳನ್ನಾಗಿ ಮಾಡಲ್ಪಟ್ಟ ಹಳ್ಳಿಯ ನಿವಾಸಿಗಳಿಗೆ ಬೇಸಾಯ ಮಾಡಲು ಕೆಳಕಂಡ ಷರತ್ತುಗಳ ಮೇಲೆ ಗುತ್ತಿಗೆಗೆ ನೀಡಬೇಕು:
ಅ. ಫಾರ್ಮ್‌ಗಳನ್ನು ಸಾಮೂಹಿಕ ಫಾರ್ಮ್‌ಗಳಾಗಿ ಸಾಗುವಳಿ ಮಾಡಬೇಕು ಮತ್ತು ಸರ್ಕಾರದ ನಿಯಮ ಹಾಗೂ ನಿರ್ದೇಶನಗಳಿಗೆ ಅನುಸಾರ ಸಾಗುವಳಿ ಮಾಡಬೇಕು.
ಆ. ಫಾರ್ಮ್‌ನ ಮೇಲೆ ವಿಧಿಸಲ್ಪಡುವ ಕರ ಅಥವಾ ತೆರಿಗೆಗಳನ್ನು ಚುಕ್ತಾ ಮಾಡಿದ ಮೇಲೆ ಉಳಿಯುವ ಬೆಳೆಯನ್ನು ಮೊದಲೇ ನಿಗದಿಪಡಿಸಿದ ಬಗೆಯಲ್ಲಿ ಹಿಡುವಳಿದಾರರು ತಮ್ಮಲ್ಲಿಯೇ ಹಂಚಿಕೊಳ್ಳಬೇಕು.
ಇ. ವಶ ಪಡಿಸಿಕೊಂಡ ಭೂಮಿಯನ್ನು ಜಾತಿ ಅಥವಾ ಜನಾಂಗದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಹಳ್ಳಿಯಲ್ಲಿನ ಎಲ್ಲ ನಿವಾಸಿಗಳಿಗೂ ಸಮನಾಗಿ ಗುತ್ತಿಗೆ ನೀಡಬೇಕು. ಈ ಹಂಚಿಕಾ ವಿಧಾನದಿಂದಾಗಿ, ಭೂಮಾಲೀಕನಾಗಲೀ, ಭೂಹೀನನಾಗಲೀ ಅಥವಾ ಗುತ್ತಿಗೆದಾರನಾಗಲೀ ಇಲ್ಲದಂತಾಗಬೇಕು.
ಈ. ಸಾಮೂಹಿಕ ಸಾಗುವಳಿಗೆ ಅಗತ್ಯವಾದ ನೀರಿನ ಸೌಲಭ್ಯ, ಬೀಜ, ಗೊಬ್ಬರ, ಜಾನುವಾರುಗಳು, ಬೇಸಾಯ ಸಲಕರಣೆಗಳು, ಇತ್ಯಾದಿಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.
ಉ. ಸರ್ಕಾರವು ಫಾರ್ಮ್‌ನ ಬೆಳೆಯನ್ನು ಲೆವಿಯ ರೂಪದಲ್ಲಿ ಕೆಳಕಂಡಂತೆ ಶುಲ್ಕವಾಗಿ ವಸೂಲು ಮಾಡಬಹುದು:
i. ಭೂಕಂದಾಯಕ್ಕಾಗಿ ಒಂದು ಭಾಗ;
ii. ಡಿಬೆಂಚುದಾರರಿಗೆ ಪಾವತಿ ಮಾಡಲು ಒಂದು ಭಾಗ; ಮತ್ತು
iii. ಸಾಗುವಳಿ ಮಾಡಲು ಒದಗಿಸಿದ ಉತ್ಪಾದನಾ ಸಲಕರಣೆಗಳನ್ನು ಬಳಸಿದ್ದಕ್ಕಾಗಿ ಬಾಡಿಗೆ ಅಥವಾ ಕರ.
ಊ. ಹಿಡುವಳಿಯ ಷರತ್ತುಗಳನ್ನು ಉಲ್ಲಂಘಿಸುವ ಹಿಡುವಳಿದಾರರಿಗೆ ಅಥವಾ ಸರ್ಕಾರವು ಒದಗಿಸಿದ ಸಲಕರಣೆಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಳ್ಳುವ ಹಾಗೂ ಸಾಮೂಹಿಕ ಕೃಷಿ ಕಲ್ಪನೆಯ ವಿರುದ್ಧ ಪೂರ್ವಗ್ರಹಪೀಡಿತರಾಗಿ ನಡೆದುಕೊಳ್ಳುವವರ ವಿರುದ್ಧ ದಂಡ ವಿಧಿಸಬಹುದು.
ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?
ಸಂವಿಧಾನವು ಜಾರಿಯಾದ ಹತ್ತು ವರ್ಷದೊಳಗೆ ಈ ಕಾರ್ಯ ಯೋಜನೆಯು ಕಡ್ಡಾಯವಾಗಿ ಜಾರಿಗೆ ಬರಬೇಕು. ಭಾರತದ ಸಂಯುಕ್ತ ರಾಜ್ಯಗಳ ಒಕ್ಕೂಟದ ಸಂವಿಧಾನದಲ್ಲಿ, ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಎಸ್.ಸಿ. ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಮತ್ತಿತರ ಸಮುದಾಯಗಳಿಗೂ ಜನಸಂಖ್ಯೆವಾರು ಪ್ರಾತಿನಿಧ್ಯ ನೀಡಬೇಕೆಂದು ಬಾಬಾಸಾಹೇಬರು ಪ್ರತಿಪಾದಿಸಿದ್ದಾರೆ. ಪ್ರಮುಖ ಮತ್ತು ಮೂಲಭೂತ ಕೈಗಾರಿಕೆಗಳಲ್ಲದೆ ಇತರ ಉದ್ಯಮಗಳನ್ನು ನಡೆಸಲು ಎಲ್ಲರಿಗೂ ಸಮಾನ ಅವಕಾಶಗಳಿರಬೇಕೆಂದು ಸಹ ಪ್ರತಿಪಾದಿಸಿದ್ದಾರೆ. ಹೊಸ ವ್ಯವಸ್ಥೆಯಲ್ಲೂ ಹಳೆಯ ಮನೋಭಾವವುಳ್ಳ ಜಾತಿವಾದಿಗಳು ನಡೆಸಬಹುದಾದ ಅಸ್ಪೃಶ್ಯತಾ ಆಚರಣೆ, ದೌರ್ಜನ್ಯ, ಹಲ್ಲೆ, ಅತ್ಯಾಚಾರ ಮತ್ತು ಸಾಮಾಜಿಕ ಬಹಿಷ್ಕಾರದಂತಹ ಹೀನ ಕೃತ್ಯಗಳನ್ನು ನಿಗ್ರಹಿಸಲು ಕೆಲವು ಕಠಿಣ ಕ್ರಮಗಳನ್ನು ತಮ್ಮ ಈ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಪ್ರತ್ಯೇಕ ಹಳ್ಳಿಗಳಲ್ಲಿ (Separate Settlements) ನೆಲೆಗೊಂಡು, ಪ್ರತ್ಯೇಕ ಮತದಾನ ಪದ್ಧತಿಯ ಮೂಲಕ ತಮ್ಮ ಸಮಾಜಕ್ಕೆ ನಿಷ್ಠರಾದ ಸಮರ್ಥ ಶಾಸಕರನ್ನೂ ಸಂಸದರನ್ನೂ ಹೊಂದುವುದರಿಂದಾಗಿ, ತಾವು ಪ್ರತಿಪಾದಿಸಿದ ಎಲ್ಲ ಕಾಯಿದೆ ಕಟ್ಟಳೆಗಳೂ ಕಟ್ಟುನಿಟ್ಟಾಗಿ ಜಾರಿಯಾಗುತ್ತದೆ ಎಂಬ ಭರವಸೆ ಬಾಬಾಸಾಹೇಬರಿಗಿತ್ತು. ತಮಗಿರುವ ಸ್ವತಂತ್ರ ರಾಜಕೀಯ ಬಲದಿಂದ ಸಾಮಾಜಿಕ – ಆರ್ಥಿಕ ಸಮಾನತೆಯನ್ನು ಪಡೆಯುವ ಎಸ್.ಸಿ.ಗಳು ಯಾರ ಹಂಗೂ ಇಲ್ಲದ ಸ್ವತಂತ್ರ ಸ್ವಾಭಿಮಾನದ ಬದುಕನ್ನು ಪಡೆಯಬಲ್ಲರು ಎಂಬ ವಿಶ್ವಾಸ ಅವರಿಗಿತ್ತು. ಆದ್ದರಿಂದ, ಮುಕ್ತವಾದ ಸೌಹಾರ್ದಯುತವಾದ ವಾತಾವರಣದಲ್ಲಿ ತಮ್ಮ ಜನರು ತಮ್ಮಲ್ಲಿರುವ ಅದಮ್ಯ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಅಪೂರ್ವ ಕೊಡುಗೆಗಳನ್ನು ನೀಡುತ್ತಾರೆ ಎಂಬ ಆಶಾಭಾವನೆಯನ್ನು ಹೊಂದಿರುತ್ತಾರೆ.
ಕರಡು ಸಮಿತಿಯಲ್ಲಿ ಮಾತ್ರವಲ್ಲದೆ, ರಾಜ್ಯಾಂಗ ಸಭೆಯಲ್ಲೂ ಒಂಟಿಯಾದ ಬಾಬಾಸಾಹೇಬರು, ಎಲ್ಲರ ಒತ್ತಡಕ್ಕೆ ಮಣಿದು, ತಾವು ತಮ್ಮ ಮೊದಲ ಸಂವಿಧಾನದಲ್ಲಿ ಪ್ರತಿಪಾದಿಸಿದ್ದ ಎಸ್.ಸಿ.ಗಳ ಪ್ರತ್ಯೇಕ ನೆಲೆಗಳ ನಿರ್ಮಾಣ, ಪ್ರತ್ಯೇಕ ಚುನಾವಣಾ ಪದ್ಧತಿ ಮತ್ತು ಪ್ರಭುತ್ವ ಸಮಾಜವಾದಿ ಆರ್ಥಿಕ ಚಿಂತನೆಗಳನ್ನು ಕೈಬಿಡಬೇಕಾಯಿತು. ಆದರೆ, ಉದ್ಯೋಗ ಮೀಸಲಾತಿ ನಿಯಮವನ್ನು ಮೂಲಭೂತ ಹಕ್ಕನ್ನಾಗಿಸುವಲ್ಲಿ ಅವರು ಯಶಸ್ವಿಯಾದರು. ಮೇಲ್ಜಾತಿ ಪಕ್ಷಗಳಿಗೆ ಚಮಚಾಗಳನ್ನು ತಯಾರುಮಾಡುವ ಮೀಸಲು ಕ್ಷೇತ್ರಗಳು ಮತ್ತು ಅದೇ ಮೇಲ್ಜಾತಿಗಳಲ್ಲಿ ಭಾರೀ ಬಂಡವಾಳಿಗಾರನ್ನು ಹಾಗೂ ಭಾರೀ ಜಮೀನುದಾರರನ್ನು ಸೃಷ್ಟಿಸುವ ಆರ್ಥಿಕ ವ್ಯವಸ್ಥೆಯ ನಡುವೆಯೂ ಈ ಮೂಲಕ ಒಂದು ಸಣ್ಣ ಆಶಾಭಾವನೆಯು ಹುಟ್ಟಿಕೊಂಡಿತ್ತು. ಬಲು ದೊಡ್ಡ ಹೋರಾಟವನ್ನೇ ಏಕಾಂಗಿಯಾಗಿ ನಡೆಸಿ ಮೂಲಭೂತ ಹಕ್ಕಾಗಿಸಿದ್ದ ಮೀಸಲಾತಿಯನ್ನು ಬಳಸಿ ತನ್ನ ಸಮಾಜದಲ್ಲಿ ಕೆಲವರಾದರೂ ಉನ್ನತ ಶಿಕ್ಷಣ ಮತ್ತು ಉನ್ನತ ಹಾಗೂ ನಿರ್ಣಾಯಕ ಹುದ್ದೆಗಳನ್ನು ಪಡೆದಲ್ಲಿ, ಅವರು ಪ್ರಭಾವಶಾಲಿ ‘ಬುದ್ಧಿಜೀವಿ ವರ್ಗ’ ಆಗಬಹುದೆಂದು ಬಾಬಾಸಾಹೇಬರು ನಿರೀಕ್ಷಿಸುತ್ತಾರೆ. ಈ ವರ್ಗವು ತನ್ನ ಸಮಾಜವನ್ನು ಒಂದು ಜಾಗೃತ ಸಮಾಜವನ್ನಾಗಿ ಪರಿವರ್ತಿಸಿ, ತಮ್ಮ ನಿಷ್ಠರಾದ ಸಮರ್ಥ ನಾಯಕತ್ವವನ್ನು ಬೆಳೆಸಬಹುದು ಎಂದು ನಿರೀಕ್ಷಿಸುತ್ತಾರೆ. ಅಂತಹ ನಾಯಕತ್ವವು, ಸಂವಿಧಾನದ ಆಶಯಗಳನ್ನು (ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ಅಭಿವೃದ್ಧಿ) ಅನುಷ್ಠಾನಕ್ಕೆ ತರಬಹುದು. ಈ ಬುದ್ಧಿಜೀವಿ ವರ್ಗದ ಮುಂದಿರುವ ಸಾಧ್ಯತೆಗಳ ಬಗ್ಗೆ ಆಶಾಭಾವನೆ ಹೊಂದಿದ್ದರಿಂದಲೇ ಅವರು ಮೇಲ್ಜಾತಿಗಳು ಮತ್ತು ಅವರ ಹಿಂಬಾಲಕರೇ ತುಂಬಿದ್ದ ಸಂಸತ್ತಿಗೆ ಎಚ್ಚರಿಕೆಯನ್ನು ಕೊಡುವ ಕೆಚ್ಚನ್ನು ತೋರಿಸುತ್ತಾರೆ. ಆದರೆ, ಮುಂದೆ ಅವರು ಆತಂಕಪಟ್ಟಂತೆ, ಜಾತಿ ವ್ಯವಸ್ಥೆಯೂ ಬದಲಾಗುವುದಿಲ್ಲ ಮತ್ತು ಶೋಷಿತ ವರ್ಗಗಳು ಹಾಲಿ ವ್ಯವಸ್ಥೆಯನ್ನು ಧ್ವಂಸ ಮಾಡುವುದೂ ಇಲ್ಲ. ಏಕೆಂದರೆ, ಶೋಷಿತರ ನಡುವೆ ಹುಟ್ಟಿಬಂದ ಬುದ್ಧಿಜೀವಿ ವರ್ಗವು ತಾವು ಎಸ್.ಸಿ./ಎಸ್.ಟಿ.ಗಳೆಂದು ಗುರುತಿಸಿಕೊಳ್ಳುವುದಕ್ಕೂ ಹಿಂಜರಿದು, ತನ್ನವರಿಂದಲೇ ದೂರವಾಗಿ ಬದುಕುವ ಹೊಣೆಗೇಡಿಗಳಾಗಿ ಬದುಕಲಾರಂಭಿಸುತ್ತಾರೆ. ಹೀಗೆ, ಸಂಯುಕ್ತ ರಾಜ್ಯಗಳ ಭಾರತದ ಸಂವಿಧಾನದಲ್ಲಿ ಆವಿಷ್ಕಾರವಾಗಿದ್ದ, ಪ್ರಭುತ್ವ ಸಮಾಜವಾದವು ಸ್ವತಂತ್ರ ಭಾರತದ ಸಂವಿಧಾನದಲ್ಲಿ ಸ್ಥಾನ ಪಡೆಯದಿದ್ದ ಪ್ರಯುಕ್ತ, ಹಾಲಿ ಸಂವಿಧಾನವು ಜಾತಿವಾದಿಗಳನ್ನು ಕಿಂಚಿತ್ತೂ ಅಲುಗಾಡಿಸದಾಯಿತು. ಶೋಷಿತ ವರ್ಗಗಳು ರಾಜಕೀಯವಾಗಿ ಬಲಾಢ್ಯರಾದರೆ ಮಾತ್ರ ಹಾಲಿ ಸಂವಿಧಾನವನ್ನು ಸಾಮಾಜಿಕ ಪರಿವರ್ತನೆಗೆ ಬಳಸಬಹುದು. ಅಂದರೆ, ಎಸ್. ಸಿ./ಎಸ್.ಟಿ./ ಒ.ಬಿ.ಸಿ/ ಧಾರ್ಮಿಕ ಅಲ್ಪಸಂಖ್ಯಾತರು ಸ್ಪಷ್ಟ ಬಹುಮತ ಪಡೆದು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ರಚಿಸಿದರೆ, ಇದೇ ಸಂವಿಧಾನದ ಆಶಯಗಳನ್ನು (ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ಅಭಿವೃದ್ಧಿ) ಖಂಡಿತವಾಗಿ ಸಾಧಿಸಬಹುದು. ಆದರೆ ಆ ನಿಟ್ಟಿನಲ್ಲಿ ಶ್ರಮಿಸಲಿಚ್ಛಿಸುವ ಶೋಷಿತ ವರ್ಗಗಳ ನಾಯಕರು ತಮ್ಮಲ್ಲೇ ಬೇರು ಬಿಟ್ಟಿರುವ ಜಾತೀಯ ಭಾವನೆಗಳಿಂದ ಮುಕ್ತರಾಗಬೇಕಿದೆ. ಸ್ವಲ್ಪಮಟ್ಟಿಗೆ ಅನುಕೂಲಸ್ಥ ಸಮುದಾಯಗಳು ತಮ್ಮಲ್ಲೇ ಇರುವ ತಮಗಿಂತ ವಂಚಿತರಾದವರಿಗೆ ಆದ್ಯತೆ ಕೊಡಬೇಕಾಗಿದೆ! ನಮ್ಮೊಳಗೇ ಆರಂಭವಾಗದ Diagnostics ಪರಿವರ್ತನೆಯನ್ನು ಹೊರಜಗತ್ತಿನಲ್ಲಿ ಕಾಣಲು ಸಾಧ್ಯವೇ?
ಅಂಬೇಡ್ಕರ್ ಮತ್ತು ಅಂಬೇಡ್ಕರ್ ಕಾಲದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಹಲವಾರು ವಿದ್ವಾಂಸರ ಪ್ರಕಾರ ಅಂಬೇಡ್ಕರ್ ಅವರ ಕ್ರಾಂತಿಕಾರಿ ಎನ್ನಬಹುದಾದ ಚಿಂತನೆಗಳನ್ನು ಈ ಕಿರುಕೃತಿ ಅತ್ಯಂತ ಪ್ರಖರಾಗಿ ದಾಖಲಿಸುತ್ತದೆ. ಇದರಲ್ಲಿ ಗಮನ ಸೆಳೆಯುವ ಎರಡು ಅಂಶಗಳು ಎಂದರೆ, ಮೊದಲನೆಯದ್ದು ಅಂಬೇಡ್ಕರ್ ಅವರು ಅಲ್ಪಸಂಖ್ಯಾತ ವರ್ಗಗಳಿಗೆ ಸಾಂವಿಧಾನಿಕವಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಪ್ರತಿಪಾದನೆ ಮುಂದಿರಿಸಿದ್ದು ಮತ್ತು ಅಂತಹ ಪ್ರಾತಿನಿಧ್ಯ ನೀಡದೆ ಹೋದರೆ ಎದುರಾಗುವ ಅಪಾಯಗಳ ಬಗ್ಗೆ ಎಚ್ಚರಿಸಿದ್ದು. ಎರಡನೆಯದ್ದು ಅಲ್ಪಸಂಖ್ಯಾತ ಮತ್ತು ದಲಿತ ವರ್ಗಗಳನ್ನು ಆರ್ಥಿಕ ಶೋಷಣೆಯಿಂದ ಪಾರುಮಾಡಲು ಅರ್ಥವ್ಯವಸ್ಥೆಯನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎನ್ನುವ ಅವರ ಪ್ರತಿಪಾದನೆ. ಹಾಗಾಗಿ ಅಂಬೇಡ್ಕರ್ ಅವರು ಈ ಕೃತಿಯ ಮೂಲಕ ಏಕಕಾಲಕ್ಕೆ ರಾಜಕೀಯ ಉದಾರವಾದಿ ಚಿಂತಕನಂತೆಯೂ, ಆರ್ಥಿಕವಾಗಿ ಎಡಪಂಥೀಯ ಚಿಂತಕನಂತೆಯೂ ಕಾಣಿಸಿಕೊಳ್ಳುತ್ತಾರೆ.
ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)
ಈ ಕೃತಿಯಲ್ಲಿ ಹೇಳಿದ್ದು ಭಾರತದ ಸಂವಿಧಾನದಲ್ಲಿ ಸೇರದೆ ಹೋದದ್ದು ಒಂದು ದುರಾದೃಷ್ಟ. ಆದರೆ ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಂತೆ ಅಂಬೇಡ್ಕರ್ ಅವರ ಮೂಲ ಚಿಂತನೆಗಳ ಆಳ ಮತ್ತು ಪ್ರಖರತೆ ಎಷ್ಟಿತ್ತು ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಿ ನಿಲ್ಲುತ್ತದೆ.
(ಮುಗಿಯಿತು…)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)




