ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?

Date:

“ಭಗವದ್ಗೀತೆ ಧರ್ಮಗ್ರಂಥವೂ ಅಲ್ಲ ದರ್ಶನ ಗ್ರಂಥವೂ ಅಲ್ಲ ಎಂಬುದೇ ನನ್ನ ಉತ್ತರ. ತಾತ್ವಿಕ ನೆಲೆಗಟ್ಟಿನ ಮೇಲೆ ಕೆಲವು ಧಾರ್ಮಿಕ ನಂಬಿಕೆಗಳನ್ನು ಸಮರ್ಥಿಸುವುದೇ ಭಗವದ್ಗೀತೆಯ ಉದ್ದೇಶ. ಈ ಕಾರಣದಿಂದಾಗಿ ಅದನ್ನು ಯಾರಾದರೂ ಧರ್ಮಗ್ರಂಥ ಅಥವಾ ದರ್ಶನಗ್ರಂಥ ಎಂದು ಕರೆಯಲಿಚ್ಛಿಸಿದರೆ ಅವರು ಹಾಗೆಯೇ ಮಾಡಲಿ, ಆದರೆ ಅದು ಮೂಲಭೂತವಾಗಿ ಇದಾವುದೂ ಅಲ್ಲ” ಎನ್ನುತ್ತಾರೆ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ (ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ 3, ಪು.ಸಂ. 380, ‘ಭಗವದ್ಗೀತೆ ಕುರಿತ ಪ್ರಬಂಧಗಳು- ಪ್ರತಿಕ್ರಾಂತಿಯ ತಾತ್ವಿಕ ಸಮರ್ಥನೆ: ಕೃಷ್ಣ ಮತ್ತು ಅವನ ಗೀತೆ).

ಹಿಂದೂ ಧರ್ಮಗ್ರಂಥಗಳೆನಿಸಿ, ಪೂಜ್ಯನೀಯ ಸ್ಥಾನದಲ್ಲಿರುವ ಶಾಸ್ತ್ರ, ಪುರಾಣ, ಸ್ಮೃತಿಗಳ ನಿಜ ಹೂರಣವನ್ನು ಆಳವಾಗಿ ಅಧ್ಯಯನ ಮಾಡಿದ್ದ ಬಾಬಾಸಾಹೇಬರು, ‘ಭಗವದ್ಗೀತೆ’ಯ ಕುರಿತೂ ವಿಸ್ತೃತವಾಗಿ ಚರ್ಚಿಸಿದ್ದರು ಮತ್ತು ಭಗವದ್ಗೀತೆಯಲ್ಲಿನ ಪ್ರತಿಗಾಮಿ ಸಂಗತಿಗಳನ್ನು ತೆರೆದಿಟ್ಟಿದ್ದರು. ಆದರೆ ಇದೇ ಭಗವದ್ಗೀತೆಯು ಬೌದ್ಧವಿಚಾರಧಾರೆಗಳನ್ನು ನಕಲು ಮಾಡಿರುವುದನ್ನೂ ಬಯಲು ಮಾಡಿದ್ದರು. ‘ಬೌದ್ಧಧರ್ಮದ ಉಗಮಕ್ಕಿಂತ ಮೊದಲೇ ಭಗವದ್ಗೀತೆ ರಚನೆಯಾಗಿತ್ತು’ ಎಂದು ವಾದಿಸುವವರ ಟೊಳ್ಳುವಾದಗಳನ್ನೂ ಸಾಕ್ಷ್ಯಾಸಹಿತ ಅಲ್ಲಗಳೆದಿದ್ದರು. ಈವರೆಗೆ ಇರದ ಹೊಸ ತಾತ್ವಿಕ, ಬೌದ್ಧಿಕ, ಆಧ್ಯಾತ್ಮಿಕ ಪರಂಪರೆಯನ್ನು, ಹೊಸ ಪರಿಭಾಷೆಗಳನ್ನು ಬೌದ್ಧಧಮ್ಮ ಹುಟ್ಟುಹಾಕಿತ್ತು. ವೇದ, ಶಾಸ್ತ್ರ, ಪುರಾಣಗಳಲ್ಲಿ ಇರದ ಚಿಂತನೆಗಳು ಭಗವದ್ಗೀತೆಯಲ್ಲಿ ಕಾಣಿಸಿಕೊಂಡಿದ್ದನ್ನೂ ಆ ಮುಂಚಿತವಾಗಿ ಬೌದ್ಧಿಸಂ ಪ್ರವರ್ಧಮಾನಕ್ಕೆ ಬಂದಿದ್ದನ್ನೂ ಅಂಬೇಡ್ಕರ್ ವಿಸ್ತೃತವಾಗಿ ಚರ್ಚಿಸಿದ್ದರು. ಆದರೆ ನಕಲು ಮಾಡಿದ ವಿಚಾರಗಳಿಂದ ಪ್ರಜ್ವಲಿಸುತ್ತಾ, ಮತ್ತೊಂದೆಡೆ ಪ್ರತಿಗಾಮಿ ವಿಚಾರಗಳನ್ನೂ ಪ್ರತಿಷ್ಠಾಪಿಸಲು ಗೀತೆ ಯತ್ನಿಸಿದ್ದನ್ನು ಬಾಬಾಸಾಹೇಬರು ಸ್ಪಷ್ಟವಾಗಿ ಗುರುತಿಸಿದ್ದರು.

Ambedkar 15
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್

“ಪ್ರತಿಕ್ರಾಂತಿಯ ಸಿದ್ದಾಂತಗಳನ್ನು ಸಮರ್ಥಿಸುವ ಅಗತ್ಯ ಭಗವದ್ಗೀತೆಗೆ ಏಕೆ ಬಂತು? ನನ್ನ ದೃಷ್ಟಿಯಲ್ಲಿ ಉತ್ತರ ಬಹಳ ಸ್ಪಷ್ಟವಿದೆ. ಬೌದ್ಧಧರ್ಮದ ಪ್ರಹಾರದಿಂದ ಅವುಗಳನ್ನು ರಕ್ಷಿಸಲು ಭಗವದ್ಗೀತೆ ಅಸ್ತಿತ್ವಕ್ಕೆ ಬಂತು. ಬುದ್ಧ ಬೋಧಿಸಿದ್ದು ಅಹಿಂಸೆ. ಅದನ್ನು ಅವನು ಬೋಧನೆಯಷ್ಟೇ ಮಾಡಲಿಲ್ಲ. ಬ್ರಾಹ್ಮಣರನ್ನು ಬಿಟ್ಟರೆ ಉಳಿದೆಲ್ಲ ಜನರೂ ಅದನ್ನು ಜೀವನ ಮಾರ್ಗವೆಂದು ಅಂಗೀಕರಿಸಿದರು. ಅವರು ಹಿಂಸೆಯ ಬಗ್ಗೆ ಹೇವರಿಕೆ ತಾಳಿದರು. ಬುದ್ಧ ಚಾತುರ್ವರ್ಣದ ವಿರುದ್ಧ ಬೋಧಿಸಿದನು. ಚಾತುರ್ವರ್ಣ ಸಿದ್ಧಾಂತವನ್ನು ಖಂಡಿಸಲು ಕೆಲವು ಅತ್ಯಂತ ಖೇದಕಾರಿ ಹೋಲಿಕೆಗಳನ್ನು ಬಳಸಿದನು. ಚಾತುರ್ವರ್ಣದ ಚೌಕಟ್ಟು ಒಡೆದುಹೋಗಿತ್ತು. ಚಾತುರ್ವರ್ಣ ವ್ಯವಸ್ಥೆ ತಲೆಕೆಳಗಾಗಿತ್ತು. ಶೂದ್ರರು ಮತ್ತು ಸ್ತ್ರೀಯರು ಸನ್ಯಾಸಿಗಳಾಗಿದ್ದರು. ಈ ಸ್ಥಾನವನ್ನು ಪ್ರತಿಕ್ರಾಂತಿ ಅವರಿಗೆ ನಿರಾಕರಿಸಿತ್ತು. ಬುದ್ಧ ಕರ್ಮಕಾಂಡಗಳನ್ನೂ ಯಜ್ಞಗಳನ್ನೂ, ಅವುಗಳು ಹಿಂಸಾಮಯವಾದ್ದರಿಂದ ಖಂಡಿಸಿದ್ದನು. ಫಲಾಪೇಕ್ಷೆಯ ಸ್ವಾರ್ಥ ಲಾಲಸೆ ಅವುಗಳಲ್ಲಿದ್ದುದರಿಂದಲೂ ಅವುಗಳನ್ನು ಖಂಡಿಸಿದನು. ಈ ಖಂಡನೆಗೆ ಪ್ರತಿ ಕ್ರಾಂತಿಕಾರಿಗಳ ಉತ್ತರವಾದರೂ ಏನು? ಇಷ್ಟೆ- ಇವುಗಳು ವೇದ ಸಮ್ಮತವಾಗಿದ್ದವು, ವೇದಗಳು ದೋಷಾತೀತವಾದವು. ಆದ್ದರಿಂದ ಈ ಸಿದ್ಧಾಂತಗಳನ್ನು ಪ್ರಶ್ನಿಸುವಂತಿರಲಿಲ್ಲ” ಎನ್ನುತ್ತಾರೆ ಅಂಬೇಡ್ಕರ್ (ಸಂ. 3, ಪು. 382).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ‘ಭಾರತದ ಪ್ರಜೆಗಳಾದ ನಾವು’- ಸಂವಿಧಾನದಲ್ಲಿ ಅಡಕವಾಗಿದ್ದು ಹೇಗೆ?

ಇಂತಹ ಭಗವದ್ಗೀತೆಯನ್ನು ಇಂದಿಗೂ ಅಗತ್ಯಕ್ಕಿಂತ ಹೆಚ್ಚಿನದಾಗಿ ಪ್ರಚಾರಕ್ಕೆ ತರುವ ಹುನ್ನಾರವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಅಳವಡಿಸುವುದು, ಅದು ಪ್ರತಿಪಾದಿಸುವ ಕರ್ಮಸಿದ್ಧಾಂತವನ್ನು ವೈಭವೀಕರಿಸುವುದು, ಭಗವದ್ಗೀತೆ ಶ್ರೇಷ್ಠ ಗ್ರಂಥವೆಂದು ಪ್ರಚಾರ ಮಾಡುವುದು- ಬಿಜೆಪಿ ಮತ್ತು ಸಂಘಪರಿವಾರದ ಹಳೆಯ ಅಜೆಂಡಾ. ಬ್ರಾಹ್ಮಣವಾದಿ ಆರ್‌ಎಸ್‌ಎಸ್ ಬಯಸುವ ಶ್ರೇಣೀಕರಣವನ್ನು ಚಾಣಾಕ್ಷತೆಯಿಂದ ಪ್ರತಿಪಾದಿಸುವ ‘ಗೀತೆ’ಯು ಅವರಿಗೆ ಇಷ್ಟವಾಗದೆ ಇರುವುದಿಲ್ಲ. ದುರಾದೃಷ್ಟವಶಾತ್ ಶೂದ್ರ ಸಮುದಾಯದ ಹಿನ್ನೆಲೆಯಿಂದ ಬಂದವರು ಭಗವದ್ಗೀತೆಯನ್ನು ವೈಭಕರಿಸುವುದು ಆಘಾತಕಾರಿ. ಬಿಜೆಪಿಯ ಹಂಗಿಗೆ ಬಿದ್ದಿರುವ ಮತ್ತು ಸಂಘಪರಿವಾರವನ್ನು ಮೆಚ್ಚಿಸಬೇಕಾದ ಒತ್ತಡದಲ್ಲಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯಂಥವರು ಈಗ ‘ಭಗವದ್ಗೀತೆ’ಯ ಮೇಲೆ ಪ್ರೀತಿ ಹರಿಸುತ್ತಿರುವುದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ.

“ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು, ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು” ಎಂದು ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.

kumaraswami 2
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಈ ಸಂಬಂಧ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಪತ್ರ ಬರೆದಿರುವ ಅವರು, “ಭಾರತವು ಬಹಳ ಹಿಂದಿನಿಂದಲೂ ಸಂತರು, ಜ್ಞಾನ ಮತ್ತು ಶಾಶ್ವತ ನಾಗರಿಕ ಮೌಲ್ಯಗಳ ನಾಡು. ಸನಾತನ ಧರ್ಮವು ವಸುದೈವ ಕುಟುಂಬ ಎಂಬ ಸಾರ್ವತ್ರಿಕ ಆದರ್ಶವನ್ನು ಎತ್ತಿಹಿಡಿಯುತ್ತದೆ. ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಪರಮ ಜ್ಞಾನವಾಗಿದ್ದು, ಇದು ನಿಷ್ಕಾಮ ಕರ್ಮ ಮತ್ತು ಪ್ರಾಮಾಣಿಕತೆ ಹಾಗೂ ಸಮರ್ಪಣೆಯೊಂದಿಗೆ ಪ್ರತಿಯೊಬ್ಬರ ಕರ್ತವ್ಯವನ್ನು ನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ. ಈ ಮೌಲ್ಯಗಳು ವಿಶೇಷವಾಗಿ ಪ್ರಸ್ತುತ ಜಾಗತಿಕ ಪರಿಸರದಲ್ಲಿ ಅಪಾರ ಪ್ರಸ್ತುತತೆಯನ್ನು ಹೊಂದಿವೆ” ಎಂದಿದ್ದಾರೆ. “ಇತ್ತೀಚೆಗೆ ಪ್ರಧಾನ ಮಂತ್ರಿಯವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಹಿಂದೂ ಧರ್ಮದ ಮೂಲ ತತ್ವಗಳನ್ನು ಎತ್ತಿಹಿಡಿದು ವಸುದೈವ ಕುಟುಂಬ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು. ಆ ಪವಿತ್ರ ಗ್ರಂಥ ಹೊಂದಿರುವ ಕಾಲಾತೀತ ಮೌಲ್ಯಗಳನ್ನು ಪುನರುಚ್ಚರಿಸಿದರು” ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿರಿ: ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?

ಆದರೆ ಭಗವದ್ಗೀತೆ ವಾಸ್ತವದಲ್ಲಿ ಏನನ್ನು ಬೋಧಿಸುತ್ತದೆ? ಅದರ ನಿಜವಾದ ಉದ್ದೇಶವೇನು? ಈ ಕುರಿತು ‘ಹಿಂದೂ ಧರ್ಮದ ತತ್ವಶಾಸ್ತ್ರ’ (Philosophy of Hinduism) ಕೃತಿಯಲ್ಲಿ ಬಾಬಾಸಾಹೇಬರು ಹೀಗೆ ದಾಖಲಿಸುತ್ತಾರೆ:

‘ಭಗವದ್ಗೀತೆ’ ಏನು ಬೋಧಿಸುತ್ತದೆ? ಎಂಬುದರ ಬಗೆಗೂ ಸಂದೇಹಕ್ಕೆ ಆಸ್ಪದವೇ ಇಲ್ಲ. ‘ಭಗವದ್ಗೀತೆ’ಯಲ್ಲಿ ಕೃಷ್ಣನು ನೀಡಿರುವ ಕೆಳಗಿನ ನಾಲ್ಕು ಸ್ಪಷ್ಟ ನಿರ್ಧಾರಗಳ ಮೂಲಕ ಅದರ ಬೋಧನೆಯನ್ನು ಸಂಗ್ರಹಿಸಿಬಿಡಬಹುದಾಗಿದೆ.

1.“ಚಾತುವರ್ಣ್ಯವೆಂದು ಹೆಸರಾಗಿರುವ ಗೊತ್ತುಪಾಡನ್ನು (ಅಂದರೆ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರವೆಂದು ನಾಲ್ಕು ಭಾಗಗಳನ್ನಾಗಿ ವಿಂಗಡಿಸುವುದು) ನಾನೇ ಸೃಷ್ಟಿಸಿದವನು ಮತ್ತು ನಾನೇ ಅವರವರ ಜಾಯಮಾನಕ್ಕನುಗುಣವಾಗಿ ವಿವಿಧ ಕಸುಬುಗಳನ್ನು ಅವರಿಗೆ ವಹಿಸಿದವನು.” (ಗೀತೆ IV. 13)

    (ಚಾತುರ್-ವರ್ಣ್ಯಂ ಮಯಾ ಸೃಷ್ಟಮ್ ಗುಣ-ಕರ್ಮ-ವಿಭಾಗಶಃ
    ತಸ್ಯ ಕರ್ತಾರಮ್ ಅಪಿ ಮಾಮ್ ವಿದ್ಧ್ಯಕರ್ತಾರಮ್ ಅವ್ಯಯಮ್)

    2. “ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಸುಲಭವಾಗಿದ್ದರೂ ತನ್ನದೇ ವರ್ಣದ ಕಸುಬನ್ನು ಅನುಸರಿಸುವುದೇ ಜಾಣತನ. ಸಾಕಷ್ಟು ದಕ್ಷತೆಯಿಂದ ಅದನ್ನು ಒಬ್ಬನು ನಿರ್ವಹಿಸಲಾಗದಿದ್ದರೂ ತನ್ನ ವರ್ಣದ ಕಸುಬೇ ಶ್ರೇಯಸ್ಕರವಾದುದು. ಒಬ್ಬನು ತನ್ನ ವರ್ಣದ ಕಸುಬನ್ನು ಅನುಸರಿಸುವುದರಲ್ಲಿ ಆನಂದವಿದೆ. ಇದರ ಫಲವಾಗಿ ಅವನಿಗೆ ಸಾವು ಸಂಭವಿಸಿದರೂ ಚಿಂತೆಯಿಲ್ಲ. ಆದರೆ ಬೇರೆ ವರ್ಣದವರ ಕಸುಬನ್ನು ಅನುಸರಿಸುವುದು ಮಾತ್ರ ಅಪಾಯಕಾರಿ.” (ಗೀತೆ, III.35)

    (ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವಾನುಷ್ಠಿತಾತ್”)

    3. “ತಮ್ಮ ಕಸುಬುಗಳಿಗೆ ಚೆನ್ನಾಗಿ ಹೊಂದಿಕೊಂಡಿರುವ ಅವಿದ್ಯಾವಂತರ ನಂಬಿಕೆಗಳನ್ನು ವಿದ್ಯಾವಂತರು ಅಭದ್ರಗೊಳಿಸಬಾರದು. ಅವನ ವರ್ಣಕ್ಕನುಸಾರವಾದ ಕಸುಬಿನಲ್ಲಿ ಅವನೇ ಮೊದಲು ತೊಡಗಬೇಕು. ಬಳಿಕ ಇತರರೂ ಅವರವರ ವರ್ಣಾನುಸಾರವಾದ ಕಸುಬನ್ನು ಅಂಗೀಕರಿಸುವಂತೆ ಮಾಡಬೇಕು. ಒಬ್ಬ ವಿದ್ಯಾವಂತನು ತನ್ನ ಉದ್ಯೋಗಕ್ಕೆ ಅಂಟಿಕೊಳ್ಳದೆ ಇರಬಹುದು. ಆದರೆ ಅವಿದ್ಯಾವಂತರೂ ಮಂದಮತಿಗಳೂ ಆದವರು ತಮ್ಮ ಕಸುಬಿಗೆ ಅಂಟಿಕೊಂಡಿರುತ್ತಾರೆ. ವಿದ್ಯಾವಂತರು ಅವರನ್ನು ಕೆಡಿಸಬಾರದು. ಅವರ ಕಸುಬನ್ನು ತ್ಯಜಿಸಿ ಅಡ್ಡಹಾದಿ ಹಿಡಿಯುವಂತೆ ಅವರನ್ನು ಪ್ರೇರೇಪಿಸಬಾರದು.” (3. III, 26, 29)

    (ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್।
    ಜೋಷಯೇತ್ ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್)

    4. “ಅಯ್ಯಾ, ಅರ್ಜುನ! ಕರ್ತವ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಈ ಧರ್ಮ (ಅಂದರೆ ಚಾತುರ್ವಣ್ಯ್ರನುಸಾರಿಯಾದ ಧರ್ಮ) ಅವನತಿ ಹೊಂದಿದಾಗಲೆಲ್ಲ ನಾನೇ ಭೂಮಿಯಲ್ಲಿ ಅವತರಿಸಿ ಈ ಅವನತಿಗೆ ಕಾರಣರಾದವರನ್ನು ಶಿಕ್ಷಿಸಿ, ಮತ್ತೆ ಅದನ್ನು ಸುಸ್ಥಿಗೆ ತರುತ್ತೇನೆ.” (ಗೀತೆ. IV. 8)

    (ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
    ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥) 

    ಹೀಗಿದೆ ‘ಗೀತೆ’ಯ ನಿಲುವು. ‘ಮನುಸ್ಮೃತಿ’ಗೂ ಇದಕ್ಕೂ ಯಾವ ವ್ಯತ್ಯಾಸವಿದೆ? ಮನುವನ್ನು ಅಡಕಗೊಳಿಸಿದ್ದೇ ‘ಗೀತೆ’. ‘ಮನುಸ್ಮೃತಿ’ಯಿಂದ ತಪ್ಪಿಸಿಕೊಂಡು ಹೋಗಿ ‘ಗೀತೆ’ಯಲ್ಲಿ ಆಶ್ರಯ ಪಡೆಯಬಯಸುವವರಿಗೆ ‘ಗೀತೆ’ ಎಂದರೇನು? ಎಂಬುದು ತಿಳಿದಿಲ್ಲ ಅಥವಾ ‘ಗೀತೆ’ಯ ಆತ್ಮವೇ ‘ಮನುಸ್ಮೃತಿ’ಯೊಂದಿಗೆ ರಕ್ತಸಂಬಂಧ ಪಡೆದಿದೆಯೆಂಬುದನ್ನು ತಮ್ಮ ಪರಿಗಣನೆಯಿಂದ ಬಿಟ್ಟುಬರಲು ಸಿದ್ಧರಿಲ್ಲ.

    (ಹಿಂದೂ ಧರ್ಮದ ತತ್ವಶಾಸ್ತ್ರ- ಬಾಬಾಸಾಹೇಬರ ‘ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ, 3., ಪು.ಸಂ. 85. ಟಿಪ್ಪಣಿ: ಮೇಲಿನ ಉದ್ಧರಣೆಯಲ್ಲಿ ‘ಇಟಾಲಿಯನ್‌’ ಶೈಲಿಯಲ್ಲಿರುವುದು ಮಾತ್ರ ಬಾಬಾಸಾಹೇಬರ ಕೃತಿಯಲ್ಲಿರುವ ಪಠ್ಯ. ಶ್ಲೋಕಗಳನ್ನು ಈ ಲೇಖನದ ಬರೆಹಗಾರ ಸೇರಿಸಿದ್ದು.)

    philospopy
    ಹಿಂದೂಧರ್ಮದ ತತ್ವ- ಡಾ. ಬಿ.ಆರ್. ಅಂಬೇಡ್ಕರ್

    ಕರ್ಮಸಿದ್ಧಾಂತವು ವಾಸ್ತವದಲ್ಲಿ ಏನು ಹೇಳುತ್ತದೆ ಎಂಬುದನ್ನು ಬಾಬಾಸಾಹೇಬರು ‘ಗೀತೆ’ಯಿಂದಲೇ ಆಯ್ದು ಉತ್ತರಿಸುತ್ತಿರುವುದನ್ನು ಇಲ್ಲಿ ಕಾಣಬಹುದು. “ಹುಟ್ಟಿನಿಂದ ಕರ್ಮ ನಿರ್ಧಾರವಾಗುವುದಿಲ್ಲ, ಆತ ಅನುಸರಿಸುವ ನಡೆ ಮತ್ತು ನುಡಿಯಿಂದ ನಿರ್ಧಾರವಾಗುತ್ತದೆ. ಆತ ಬ್ರಾಹ್ಮಣನೋ ಕ್ಷತ್ರೀಯನೋ ವೈಶ್ಯನೋ ಶೂದ್ರನೋ ಎಂಬುದು ಆತನ ಕ್ರಿಯೆಗಳಿಂದ ವ್ಯಕ್ತವಾಗುತ್ತದೆ” ಎಂದು ವಾದಿಸುವ ‘ಭಗವದ್ಗೀತಾವಾದಿ’ಗಳೇನೂ ಕಡಿಮೆ ಸಂಖ್ಯೆಯಲ್ಲಿಲ್ಲ. ಅಂಬೇಡ್ಕರ್ ಅವರ ಕಾಲದಲ್ಲೂ ಇದೇ ವಾದವನ್ನು ಅವರ ಸಮಕಾಲೀನರು ಮುಂದಿಟ್ಟಿದ್ದರು. ಆದರೆ ಗೀತೆ ಪ್ರತಿಪಾದಿಸುವ ಕರ್ಮಸಿದ್ಧಾಂತವು ಚಲನಾಶೀಲವಾದದ್ದಲ್ಲ, ಅದೊಂದು ಯಥಾಸ್ಥಿತಿಯ ಪ್ರತಿಪಾದನೆ ಎಂಬುದನ್ನು ‘ಗೀತೆ’ಯಲ್ಲೇ ಬರುವ ಸಮರ್ಥನೆಗಳ ಮೂಲಕ ಬಾಬಾಸಾಹೇಬರು ಪ್ರತಿಕ್ರಿಯಿಸಿದ್ದರು. “ಬೇರೆ ಕಸುಬನ್ನು ಅನುಸರಿಸುವುದಕ್ಕಿಂತ, ನಿನ್ನದೇ ಕಸುಬನ್ನು ಅನುಸರಿಸು, ಅದರಲ್ಲೇ ಮೋಕ್ಷಕಾಣು ಎಂದು ಗೀತಾಚಾರ್ಯ ಬೋಧಿಸುವುದು ಏತಕ್ಕೆ?”- ಈ ಪ್ರಶ್ನೆಯನ್ನು ಎತ್ತುವ ಬಾಬಾಸಾಹೇಬರಿಗೆ ಉತ್ತರಿಸುವ ತಾಕತ್ತು ಅಂದು ಕೂಡ ಯಾರಿಗೂ ಇರಲಿಲ್ಲ, ಇಂದು ಕೂಡ ಯಾರಿಗೂ ಇಲ್ಲ.

    ಇದನ್ನೂ ಓದಿರಿ: ‘ನಾವಲೇಕರ್ ರಾಮಾಯಣ’ ಹೇಳಿದ್ದು ಆರ್‌ಎಸ್‌ಎಸ್ ಕುತಂತ್ರಗಳ ಬಗ್ಗೆ ಅಲ್ಲವೇ?

    ಭಗವದ್ಗೀತೆಯ ಯುದ್ಧಪ್ರೀತಿ ಆತಂಕಕಾರಿಯಾಗಿದೆ. ಅರ್ಜುನನಲ್ಲಿದ್ದ ಯುದ್ಧಭೀತಿಯನ್ನು ಹೋಗಲಾಡಿಸಲು ಕೃಷ್ಣನಾಡುವ ಮಾತುಗಳು ಅಂದಿನ ಅಹಿಂಸಾಧರ್ಮವನ್ನು ಉಲ್ಲಂಘಿಸುವ ಗುರಿಯನ್ನು ಹೊಂದಿರುವಂತೆ ಕಾಣುತ್ತವೆ. ಬೌದ್ಧಧರ್ಮದ ಪ್ರಭಾವವನ್ನು ಇಲ್ಲವಾಗಿಸಲು ಕೊಲೆಯನ್ನು ಸಮರ್ಥಿಸುವ ಕೆಲಸವನ್ನು ಗೀತೆ ಮಾಡುತ್ತದೆ ಎಂಬ ಅಭಿಪ್ರಾಯನ್ನು ಅಂಬೇಡ್ಕರ್ ತಾಳುತ್ತಾರೆ.

    “ಬೌದ್ಧ ಧರ್ಮದ ಉಗ್ರದಾಳಿಯಲ್ಲಿ ಜೈಮಿನಿಯ ಪ್ರತಿಕ್ರಾಂತಿಕಾರಿ ಸಿದ್ಧಾಂತಗಳು ತತ್ತರಿಸತೊಡಗಿದ್ದವು. ಅವುಗಳಿಗೆ ಭಗವದ್ಗೀತೆಯ ಬೆಂಬಲವಿಲ್ಲದಿದ್ದರೆ ಕುಸಿದುಬೀಳುತ್ತಿದ್ದವು ಎಂಬುದರಲ್ಲಿ ಅನುಮಾನವಿಲ್ಲ. ಭಗವದ್ಗೀತೆ ನೀಡಿದ ಪ್ರತಿಕ್ರಾಂತಿಯ ಸಿದ್ಧಾಂತಗಳ ತಾತ್ವಿಕ ಸಮರ್ಥನೆಯನ್ನು ಭೇದಿಸುವುದೇನೂ ಕಷ್ಟವಲ್ಲ. ಕೊಲ್ಲುವುದೇ ಕ್ಷತ್ರಿಯನ ಕರ್ತವ್ಯವೆಂದು ಹೇಳುವ ಭಗವದ್ಗೀತೆಯ ತಾತ್ವಿಕ ಸಮರ್ಥನೆ, ಅತ್ಯಂತ ಕನಿಷ್ಠವಾಗಿ ಹೇಳುವುದಾದರೆ, ಬಾಲಿಶವಾಗಿದೆ. ಕೊಂದರೆ ಕೊಲೆಯಲ್ಲ, ಏಕೆಂದರೆ ಕೊಲೆಯಾಗುವುದು ದೇಹ, ಆತ್ಮವಲ್ಲ ಎಂದು ಹೇಳುವುದು ಎಂದೂ ಕೇಳರಿಯದಂತಹ ಕೊಲೆಯ ಸಮರ್ಥನೆಯಾಗಿದೆ. ಸಿದ್ಧಾಂತಗಳು ಜನರನ್ನು ಭೀತಿಗೊಳಿಸುತ್ತವೆ ಎಂದು ಕೆಲವರು ಹೇಳುವ ಸಿದ್ದಾಂತಗಳಲ್ಲಿ ಇದೂ ಒಂದು. ಕೊಲೆಗಾಗಿ ವಿಚಾರಣೆಯನ್ನು ಎದುರಿಸುತ್ತಿರುವ ಕಕ್ಷಿದಾರನ ಪರವಾಗಿ ಕೃಷ್ಣ ವಕಾಲತ್ತು ವಹಿಸಿ ಭಗವದ್ಗೀತೆಯಲ್ಲಿ ಅವನೇ ಹೇಳಿರುವ ಸಮರ್ಥನೆಯನ್ನು ಮುಂದಿಟ್ಟರೆ ಅವನನ್ನು ಹುಚ್ಚಾಸ್ಪತ್ರೆಗೆ ಕಳುಹಿಸುವುದರಲ್ಲಿ ತಿಲ ಮಾತ್ರವು ಅನುಮಾನವಿಲ್ಲ” ಎಂದು ಕುಟುಕುತ್ತಾರೆ ಅಂಬೇಡ್ಕರ್.

    ಹೀಗೆ ಭಗವದ್ಗೀತೆಯ ಒಂದೊಂದೇ ಪೊಳ್ಳುತನವನ್ನು ಬಯಲಿಗೆಳೆಯುತ್ತಾ ಹೋಗುತ್ತಾರೆ. ಇನ್ನೊಂದೆಡೆ ಭಗವದ್ಗೀತೆಯು ಬುದ್ಧನ ನಂತರದಲ್ಲಿ ರಚನೆಯಾಗಿದ್ದೆಂಬುದನ್ನು ಗೀತೆಯಲ್ಲಿನ ಉಲ್ಲೇಖಗಳ ಮೂಲಕವೇ ಉದಾಹರಿಸಿ ವಾದ ಮಂಡಿಸುತ್ತಾರೆ. ತಿಲಕರಂತಹ ಭಗವದ್ಗೀತಾವಾದಿಗಳು, ಬೌದ್ಧಧರ್ಮದ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಕ್ಕೂ ಮೊದಲೇ ಭಗವದ್ಗೀತೆ ರಚನೆಯಾಗಿತ್ತೆಂದು ಮಂಡಿಸುವ ವಾದಕ್ಕೆ ಅಂಬೇಡ್ಕರ್ ಪಾಟಿ ಸವಾಲು ಹಾಕುತ್ತಾರೆ. ತಮ್ಮ ಸಂಶೋಧನೆಯ ಬಲದಿಂದಲೇ ತಿಲಕರ ಟೊಳ್ಳುವಾದವನ್ನು ಪುಡಿಪುಡಿ ಮಾಡಿದ್ದು ಹೇಗೆಂಬುದನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.

    yathiraj 3
    ಯತಿರಾಜ್‌ ಬ್ಯಾಲಹಳ್ಳಿ
    + posts

    ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

    ಪೋಸ್ಟ್ ಹಂಚಿಕೊಳ್ಳಿ:

    ಯತಿರಾಜ್‌ ಬ್ಯಾಲಹಳ್ಳಿ
    ಯತಿರಾಜ್‌ ಬ್ಯಾಲಹಳ್ಳಿ
    ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

    ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

    ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

    ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

    ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

    ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

    ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

    'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...