ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬದುಕಿನ ಕೊನೆಯ ದಿನದವರೆಗೂ ಬರೆಯುತ್ತಾ ಹೋದ ‘ಬುದ್ಧ ಮತ್ತು ಅವನ ಧಮ್ಮ’ ಗ್ರಂಥವು ಅವರ ಬರಹಗಳಲ್ಲಿಯೇ ಬಹಳ ಮಹತ್ವದ್ದು. ಅವರೇ ಹೇಳುವಂತೆ ಸುಮಾರು ಐದೂವರೆ ವರ್ಷಗಳ ಕಾಲದ ಅಧ್ಯಯನ, ಶೋಧನೆ ಮತ್ತು ಚಿಂತನೆಯ ಫಲ ಈ ಪುಸ್ತಕ.
ಭಾರತೀಯ ಸಮಾಜ ಪ್ರಜಾಸತ್ತಾತ್ಮಕ ಪ್ರಗತಿಯ ಪಥದಲ್ಲಿ ಸಾಗಬೇಕಾದರೆ ಬೌದ್ಧ ತತ್ವವೇ ಸರಿಯಾದ ಮಾರ್ಗ ಎಂದು ಅಂಬೇಡ್ಕರ್ ಅವರಿಗೆ ಅನಿಸಿದ್ದರಿಂದ ಬೌದ್ಧ ಧರ್ಮವನ್ನು ಮರು ವ್ಯಾಖ್ಯಾನಿಸುವ ಮತ್ತು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ತಮ್ಮ ಅನಾರೋಗ್ಯದ ನಡುವೆಯೂ ಮುಂದುವರಿಸುತ್ತಾರೆ. ಮೂವತ್ತೈದು ವರ್ಷಗಳ ಕಾಲ ಧರ್ಮದ ಬಗೆಗೆ ಅಧ್ಯಯನ ಮಾಡಿದ್ದಾಗಿ ಪುಸ್ತಕದ ಪೀಠಿಕೆಯಲ್ಲಿ ಹೇಳುವ ಅಂಬೇಡ್ಕರ್, ‘ವಿಜ್ಞಾನ ತಿಳಿದಿರುವ ಒಬ್ಬ ಆಧುನಿಕ ಮನುಷ್ಯನಿಗೆ ಧರ್ಮವೊಂದು ಬೇಕಾದಲ್ಲಿ ಅವನು ಸ್ವೀಕರಿಸಬಹುದಾದ ಏಕೈಕ ಧರ್ಮವೆಂದರೆ ಬೌದ್ಧಧರ್ಮ’ ಎಂಬ ಖಚಿತ ಅಭಿಪ್ರಾಯಕ್ಕೆ ಬರುತ್ತಾರೆ. ಆದಷ್ಟು ಬೇಗ ಪುಸ್ತಕವನ್ನು ಪ್ರಕಟಿಸಬೇಕೆಂಬ ಅವರ ಎಲ್ಲ ಪ್ರಯತ್ನಗಳೂ ಹಣದ ಕೊರತೆಯಿಂದಾಗಿ ವಿಫಲವಾದವು. 1956ರ ಡಿಸೆಂಬರ್ 5ರ ರಾತ್ರಿ ಪೀಠಿಕೆಯನ್ನು ಕೊನೆಯದಾಗಿ ತಿದ್ದಿ ವಿರಮಿಸಿದ ಅಂಬೇಡ್ಕರ್ ಚಿರನಿದ್ರೆಗೆ ಜಾರಿದರು. ಅವರೇ ಮುಂಬೈನಲ್ಲಿ ಸ್ಥಾಪಿಸಿದ್ದ ಸಿದ್ಧಾರ್ಥ ಕಾಲೇಜು 1957ರಲ್ಲಿ ಆ ಪುಸ್ತಕವನ್ನು ಪ್ರಕಟಿಸಿತು.
ಪ್ರಾಥಮಿಕ ಶಾಲೆಯಲ್ಲಿದ್ದಾಗಲೆ ಅಂಬೇಡ್ಕರ್ ಅವರಿಗೆ ಬುದ್ಧನ ಪರಿಚಯವಾಗುತ್ತದೆ. ಅವರು ನಾಲ್ಕನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದಾಗ ಉಡುಗೊರೆಯಾಗಿ ಸಿಕ್ಕ ಕೃತಿ ಬುದ್ಧನ ಕುರಿತದ್ದಾಗಿರುತ್ತದೆ. ಅಂಬೇಡ್ಕರ್ ಅವರ ತಂದೆಯ ಸ್ನೇಹಿತರಾದ ದಾದ ಕೆಲೂಸ್ಕರ್ ಅವರೇ ಬರೆದಿದ್ದ ಬುದ್ಧನ ಜೀವನ ಕುರಿತ ಪುಸ್ತಕ ಅವರ ಕೈ ಸೇರಿರುತ್ತದೆ. ಅತೀವ ಆಸಕ್ತಿಯಿಂದ ಪುಸ್ತಕ ಓದಿದ ಅಂಬೇಡ್ಕರ್, ‘ನನ್ನ ತಂದೆ ನನಗೇಕೆ ಬೌದ್ಧ ಸಾಹಿತ್ಯವನ್ನು ಪರಿಚಯಿಸಲಿಲ್ಲ’ ಎಂದುಕೊಳ್ಳುತ್ತಾರೆ. ‘ಬ್ರಾಹ್ಮಣರನ್ನು ಮತ್ತು ಕ್ಷತ್ರಿಯರ ಶ್ರೇಷ್ಠತೆಯನ್ನು ನಿರೂಪಿಸುವ ಮತ್ತು ಶೂದ್ರರನ್ನು, ಅಸ್ಪೃಶ್ಯರನ್ನು ಅವಮಾನಿಸುವ ಮಹಾಭಾರತ ಮತ್ತು ರಾಮಾಯಣವನ್ನು ಓದಬೇಕೆಂದು ಏಕೆ ಒತ್ತಾಯಿಸುತ್ತಿದ್ದೀರಿ’ ಎಂಬ ಪ್ರಶ್ನೆಯನ್ನು ಬಾಲಕ ಅಂಬೇಡ್ಕರ್ ತಂದೆಗೆ ಕೇಳುತ್ತಾರೆ. ಆ ಪುರಾಣಗಳಲ್ಲಿನ ಕೆಲವು ಕೆಳ ಸಮುದಾಯದ ಪಾತ್ರಗಳು ಉನ್ನತ ಸ್ಥಾನಕ್ಕೇರಿದ್ದನ್ನು ತಿಳಿದು ನಮ್ಮಲ್ಲಿರುವ ಕೀಳರಿಮೆಯಿಂದ ಹೊರಬರಬಹುದೆಂಬ ಅವರ ತಂದೆಯವರ ಉತ್ತರದಿಂದ ಸಮಾಧಾನವಾಗುವುದಿಲ್ಲ. ಮಹಾಭಾರತದ ಯಾವ ಪಾತ್ರವೂ ಅವರಿಗೆ ಇಷ್ಟವಾಗುವುದಿಲ್ಲ. ವಾಲಿ-ಸುಗ್ರೀವ ಮತ್ತು ಸೂರ್ಪನಕ ಪ್ರಕರಣಗಳಲ್ಲಿ ರಾಮನ ವರ್ತನೆ ಹಾಗೂ ಅವನು ಸೀತೆಯೊಂದಿಗೆ ನಡೆದುಕೊಂಡ ರೀತಿ ಬಾಲಕ ಅಂಬೇಡ್ಕರ್ ಅವರಿಗೆ ಹಿಡಿಸುವುದಿಲ್ಲ. ಬೌದ್ಧ ಧರ್ಮದಲ್ಲಿ ಅವರಿಗೆ ಆಸಕ್ತಿ ಬೆಳೆಯುತ್ತಾ ಹೋದಂತೆ ಹಲವು ಪುಸ್ತಕಗಳನ್ನು ಮತ್ತು ಪಾಳಿ, ಸಂಸ್ಕೃತ ಹಾಗೂ ಟಿಬೆಟನ್ ಮೂಲಗಳ ಪಠ್ಯಗಳನ್ನು ಅಧ್ಯಯನ ಮಾಡುತ್ತಾರೆ. ತಮ್ಮ ಬಳಿ ಇದ್ದ ಪುಸ್ತಕಗಳ ಸಂಗ್ರಹಕ್ಕಾಗಿ ದೊಡ್ಡ ಗ್ರಂಥಾಲಯ ಮತ್ತು ಮನೆಯನ್ನು ಬಾಂಬೆಯ ದಾದರ್ನಲ್ಲಿ 1933ರಲ್ಲಿ ಕಟ್ಟುತ್ತಾರೆ. ಆ ಮನೆಗೆ ‘ರಾಜಗೃಹ’ ಎಂದು ಹೆಸರಿಡುತ್ತಾರೆ. ಬುದ್ಧನ ಬೋಧನೆಗಳು ಮೊದಲು ಸಂಗ್ರಹವಾದದ್ದು ಮತ್ತು ಅವನು ಹಲವು ಬಾರಿ ಉಳಿದುಕೊಂಡಿದ್ದು, ಉಪದೇಶ ನೀಡಿದ್ದು ಮಗಧ ರಾಜ್ಯದ ರಾಜಧಾನಿಯಾಗಿದ್ದ ಈ ಪ್ರಾಚೀನ ನಗರದಲ್ಲಿ (ಅಂದರೆ ರಾಜಗೃಹದಲ್ಲಿ).
ಕೊಲ್ಕತ್ತಾದ ಮಹಾಬೋಧಿ ಸಮಾಜ ಪ್ರಕಟಿಸುತ್ತಿದ್ದ ‘ದಿ ಮಹಾಬೋಧಿ’ ನಿಯತಕಾಲಿಕೆಗೆ 1950ರಲ್ಲಿ ಬರೆದ ‘ಬುದ್ಧ ಮತ್ತು ಅವನ ಧರ್ಮದ ಭವಿಷ್ಯ’ ಎಂಬ ಶೀರ್ಷಿಕೆಯ ಲೇಖನದಲ್ಲಿ, ‘ವೈಜ್ಞಾನಿಕ ಅರಿವಿರುವ ಸಮಾಜ ಒಪ್ಪಿಕೊಳ್ಳಬಹುದಾದ ಒಂದೇ ಧರ್ಮವೆಂದರೆ ಬೌದ್ಧಧರ್ಮವೆಂದೂ, ಇಲ್ಲದಿದ್ದರೆ ಅಂತಹ ಸಮಾಜ ಅವನತಿ ಹೊಂದುತ್ತದೆ ಎಂದೂ ಮತ್ತು ಈ ಆಧುನಿಕ ಜಗತ್ತು ತನ್ನನ್ನು ತಾನು ಪಾರುಮಾಡಿಕೊಳ್ಳಬೇಕಾದರೆ ಬೌದ್ಧಧರ್ಮ ಅಗತ್ಯವೆಂದು’ ಅವರು ವಾದಿಸಿದ್ದರು. ಬೌದ್ಧಧರ್ಮದ ಮೂಲತತ್ವವನ್ನು ತಿಳಿದುಕೊಳ್ಳಬಯಸುವ ವ್ಯಕ್ತಿ ಸಾಗರದಷ್ಟು ವಿಸ್ತಾರವಾದ ಬೌದ್ಧ ಸಾಹಿತ್ಯವನ್ನು ಓದುತ್ತಾನೆಂದು ನಿರೀಕ್ಷಿಸಲು ಸಾಧ್ಯವಿಲ್ಲದಿರುವುದರಿಂದ ಬೈಬಲ್‌ನಂತಹ ಗ್ರಂಥವೊಂದರ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂತಹ ಗ್ರಂಥದಲ್ಲಿ ಬುದ್ಧನ ಸಂಕ್ಷಿಪ್ತ ಜೀವನ, ಚೀನಾದ ಧಮ್ಮಪದ, ಬುದ್ಧನ ಕೆಲವು ಪ್ರಮುಖ ಸಂಭಾಷಣೆಗಳು, ಬೌದ್ಧ ಆಚರಣೆಗಳು, ಹುಟ್ಟು, ದೀಕ್ಷೆ, ವಿವಾಹ, ಸಾವು ಮುಂತಾದ ವಿಷಯಗಳಿರಬೇಕೆಂದು ಹೇಳಿದ್ದರು. ಲೇಖನ ಪ್ರಕಟವಾದ ನಂತರ ಅಂತಹದೊಂದು ಪುಸ್ತಕ ಬರೆಯಬೇಕೆಂಬ ಕೋರಿಕೆಗಳಿಗೆ ಸ್ಪಂದಿಸಿದ ಅಂಬೇಡ್ಕರ್ ಅದರ ರಚನಾ ಕಾರ್ಯವನ್ನು ಆರಂಭಿಸುತ್ತಾರೆ.
ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-1)
ಅಂಬೇಡ್ಕರ್ ಅವರು ಪಾಶ್ಚಿಮಾತ್ಯ ಮತ್ತು ಭಾರತೀಯ ಮೂಲಗಳನ್ನು ಬಳಸುತ್ತಾರೆ. ಭಾರತ, ಬರ್ಮಾ ಮತ್ತು ಸಿಲೋನ್ ದೇಶಗಳಲ್ಲಿದ್ದ ಹಲವು ಬೌದ್ಧ ವಿದ್ವಾಂಸರೊಂದಿಗೆ ಸಂಪರ್ಕ ಬೆಳೆಸಿ ಬೌದ್ಧಧರ್ಮ ಹಾಗೂ ಅದರ ಆಚರಣೆಗೆ ಸಂಬಂಧಿಸಿದ ಅಪಾರ ಸಾಹಿತ್ಯವನ್ನು ಸಂಗ್ರಹಿಸುತ್ತಾರೆ. ಅವರು ಬಹಳ ಇಷ್ಟಪಟ್ಟಿದ್ದು ಪಿ ಲಕ್ಷ್ಮಿ ನರಸು ಅವರ ‘ದಿ ಎಸ್ಸೆನ್ಸ್ ಆಫ್ ಬುದ್ಧಿಸಂ’ ಪುಸ್ತಕವನ್ನು. ಅದರ ಮೂರನೇ ಆವೃತ್ತಿಯನ್ನು 1948ರಲ್ಲಿ ಮರುಪ್ರಕಟಣೆ ಮಾಡುವ ಅಂಬೇಡ್ಕರ್, ನರಸುರವರ ದೃಷ್ಟಿಕೋನವನ್ನು ಮತ್ತು ವಿಷಯ ಮಂಡನೆಯನ್ನು ತಮ್ಮ ಮುನ್ನುಡಿಯಲ್ಲಿ ಪ್ರಶಂಸಿಸುತ್ತಾರೆ. `ಬುದ್ಧ ಮತ್ತು ಅವನ ಧಮ್ಮ’ ಕೂಡ ನರಸುರವರ ಪುಸ್ತಕದ ಮಾದರಿಯಲ್ಲಿದೆ. ಕೆಲವು ಘಟನೆಗಳ ಕಥಾನಕಗಳಲ್ಲಿ ಅಶ್ವಘೋಷನ ಬುದ್ಧಚರಿತದ ಭಾಷೆಯನ್ನು ಎರವಲು ಪಡೆದಿರುವುದಾಗಿ ಹೇಳುತ್ತಾರೆ.
ಸರಳತೆ ಮತ್ತು ಸ್ಪಷ್ಟತೆ ಈ ಪುಸ್ತಕದ ಪ್ರಮುಖ ಲಕ್ಷಣಗಳು. ಪಂಡಿತರಿಗಾಗಿ ಮತ್ತು ಸಾಮಾನ್ಯ ಜನರಿಗೆ ನಿಲುಕದಂತೆ ಬರೆಯಲಾಗಿದ್ದ ಹಿಂದೂ ಧಾರ್ಮಿಕ ಪಠ್ಯಗಳಿಗಿಂತ ಭಿನ್ನವಾಗಿ, ಎಲ್ಲರೂ ಓದಬೇಕೆಂಬ ಉದ್ದೇಶದಿಂದ ರಚಿತವಾದ ಬೈಬಲ್ ಅಂಬೇಡ್ಕರ್ ಅವರಿಗೆ ಮಾದರಿ.

ಪುಸ್ತಕ ಪ್ರಕಟವಾದ ನಂತರ ಸಂಪ್ರದಾಯವಾದಿ ಬೌದ್ಧರಿಂದ ಟೀಕೆಗಳು ಬಂದವು. ಬೌದ್ಧಧರ್ಮದ ತತ್ವ ಮತ್ತು ಅಧ್ಯಾತ್ಮವನ್ನು ಕೇವಲ ಒಂದು ಸಾಮಾಜಿಕ ವ್ಯವಸ್ಥೆಯನ್ನಾಗಿ ನೋಡಲಾಗಿದೆ ಎಂಬ ಆರೋಪ ಮಾಡಲಾಯಿತು. ಬುದ್ಧ ಮತ್ತು ಅವನ ಧಮ್ಮವನ್ನು ಹಿಂದಿ ಭಾಷೆಗೆ ಅನುವಾದಿಸಿರುವ ಹಾಗೂ ಅದರ ಪಾಳಿ ಮೂಲಗಳನ್ನು ಪರಿಶೀಲಿಸಿರುವ ಬೌದ್ಧ ಸನ್ಯಾಸಿ, ಚಿಂತಕ, ಬರಹಗಾರ ಭಾದಂತ್ ಆನಂದ್ ಕೌಸಲ್ಯಾಯನ್, ‘ಅಂಬೇಡ್ಕರ್ ರವರ ಪ್ರಮಾಣಪೂರ್ವಕವಾದ ನಿರೂಪಣೆಯ ನೆಲೆ ಭಿನ್ನವಾಗಿದೆಯೇ ಹೊರತು ಮೂಲ ಬೌದ್ಧ ತತ್ವಗಳನ್ನು ಅವರು ವಿರೂಪಗೊಳಿಸಿಲ್ಲ’ ಎಂದು ಖಚಿತವಾಗಿ ಹೇಳುತ್ತಾರೆ.
ಬುದ್ಧ ಮತ್ತು ಅವನ ಧಮ್ಮದ ಮೂಲ ಆವೃತ್ತಿಯಲ್ಲಿ ಉಲ್ಲೇಖಗಳಾಗಲೀ, ಆಕಾರಾದಿಯಾಗಲೀ ಇರಲಿಲ್ಲ. ಕೆಲವು ಲೇಖಕರು, ‘ಅಂಬೇಡ್ಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕೊನೆಯ ದಿನಗಳಲ್ಲಿ ಪುಸ್ತಕವನ್ನು ಸಿದ್ಧಪಡಿಸಿದ್ದರಿಂದ ಉಲ್ಲೇಖಗಳನ್ನು ಒದಗಿಸಲು ಸಮಯವಿರಲಿಲ್ಲ’ ಎಂದು ಹೇಳಿದರೆ ಇತರರು, ‘ಆ ಪುಸ್ತಕವು ಜನಸಾಮಾನ್ಯರು ಓದಬಹುದಾದ ಬೈಬಲ್ ಮಾದರಿಯಲ್ಲಿ ಬರೆಯಲ್ಪಟ್ಟಿದ್ದರಿಂದ ಉಲ್ಲೇಖಗಳ ಮತ್ತು ಅಡಿಪಟ್ಟಿಗಳ ಭಾರವನ್ನು ಓದುಗರ ಮೇಲೆ ಹೇರಲು ಅಂಬೇಡ್ಕರ್ ಇಚ್ಛಿಸಲಿಲ್ಲ’ ಎಂದು ಹೇಳುತ್ತಾರೆ. ಕೌಸಲ್ಯಯಾನ್ ಅವರು ಪುಸ್ತಕದ ಹಿಂದಿ ಆವೃತ್ತಿಗೆ ಬರೆದ ಮುನ್ನುಡಿಯಲ್ಲಿ ಅಂಬೇಡ್ಕರ್ ಅವರ ಉಲ್ಲೇಖಗಳನ್ನು ನೀಡದಿದ್ದದ್ದು ಉದ್ದೇಶಪೂರ್ವಕವಾಗಿತ್ತೆಂದು ಹೇಳಿದ್ದರೂ ಮೂಲಗಳ ಬಗ್ಗೆ ಕುತೂಹಲವುಳ್ಳ ಓದುಗರಿಗಾಗಿ ಉಲ್ಲೇಖಗಳನ್ನು ನೀಡಿದ್ದರು. ಉಲ್ಲೇಖಗಳ ಸೇರ್ಪಡೆ ಯಾವುದೇ ರೀತಿಯಲ್ಲಿ ಉಪಯುಕ್ತವೂ ಅಲ್ಲ, ಸೂಕ್ತವೂ ಅಲ್ಲ ಎಂಬುದು ಕೆಲವರ ಅಭಿಪ್ರಾಯ. ಆದರೆ ಶೈಕ್ಷಣಿಕ ವಲಯದಲ್ಲಿ ಬೌದ್ಧಧರ್ಮದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಂದ ಬಹಳ ದಿನಗಳ ಕಾಲ ಈ ಪುಸ್ತಕವನ್ನು ಹೊರಗಿಡಲಾಗಿತ್ತೆಂಬುದು ನಿಜ. ಆಕಾಶ್ ಸಿಂಗ್ ರಾಥೋರ್ ಮತ್ತು ಅಜಯ ವರ್ಮರವರು ಸಂಪಾದಿಸಿದ 2011ರ ವಿಮರ್ಶಾ ಆವೃತ್ತಿಯಲ್ಲಿ ಮೂಲಗಳನ್ನು ಸೇರಿಸಲಾಗಿದೆ ಹಾಗೂ ಅಗತ್ಯ ವಿವರಣೆಗಳನ್ನು, ಟಿಪ್ಪಣಿಗಳನ್ನು ನೀಡಲಾಗಿದೆ.
ರಚನೆ ಮತ್ತು ನಿರೂಪಣೆ
ಬಹುತೇಕ ಕಾಲಾನುಕ್ರಮದ ಮಾದರಿಯಲ್ಲಿರುವ ಈ ಪುಸ್ತಕದಲ್ಲಿ ಎಂಟು ಪರ್ವಗಳಿದ್ದು ಅವುಗಳನ್ನು ಖಂಡಗಳು, ವಿಭಾಗಗಳು ಮತ್ತು ಅಧ್ಯಾಯಗಳೆಂದು ಕರೆಯಬಹುದಾದ ಉಪವಿಭಾಗಗಳು ಹಾಗೂ ಸಂಖ್ಯೆಗಳಿರುವ ಪಂಕ್ತಿಗಳು ಇವೆ. ಅವರ ವಿಭಾಗೀಕರಣ ವಿಧಾನ ಓದನ್ನು ಸುಗಮಗೊಳಿಸುತ್ತದೆ ಮತ್ತು ನಿರ್ದಿಷ್ಟ ಉಪದೇಶಗಳ ಪುನರ್ವಾಚನಕ್ಕೆ ಸಹಾಯಕವಾಗಿದೆ. ಒಂದನೇ ಪರ್ವದಲ್ಲಿ ಸಿದ್ಧಾರ್ಥ ಗೌತಮನ ಹುಟ್ಟು, ಜೀವನ, ಜ್ಞಾನೋದಯ ಮತ್ತು ಹಿಂದೂಧರ್ಮಕ್ಕೆ ಭಿನ್ನವಾದ ಧಮ್ಮದ ನಿರೂಪಣೆ ಇದೆ. ಬುದ್ಧ ಒಪ್ಪಿಕೊಂಡದ್ದೇನು, ಬದಲಾಯಿಸಿದ್ದೇನು ಮತ್ತು ತಿರಸ್ಕರಿಸಿದ್ದೇನು ಎಂಬ ಅವಲೋಕನವನ್ನು ನೀಡಲಾಗಿದೆ. ಎರಡನೇ ಪರ್ವದಲ್ಲಿ ಪರಿವ್ರಾಜಕರಿಂದ ಹಿಡಿದು ಅಪರಾಧಿಗಳವರೆಗೆ ನಡೆದ ಮತಾಂತರ ಮತ್ತು ಮತಾಂತರಪೂರ್ವ ಸಂವಾದದ ವಿವರಣೆಗಳಿವೆ. ಶ್ರೇಣೀಕೃತ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿರುವ ಮೇಲ್ವರ್ಗದವರು, ಕೆಳವರ್ಗದವರು, ಮಹಿಳೆಯರು, ದಾರಿತಪ್ಪಿದವರು ಮತ್ತು ಅಪರಾಧಿಗಳ ಮತಪರಿವರ್ತನೆಯನ್ನು ಅಂಬೇಡ್ಕರ್ ಇಲ್ಲಿ ವಿವರಿಸುತ್ತಾರೆ. ಪ್ರಾಯೋಗಿಕ ಕಾರಣಗಳಿಗಾಗಿ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಮೊದಲು ಮನಸ್ಸಿಲ್ಲದಿದ್ದರೂ ಶಿಷ್ಯ ಆನಂದನ ಬೇಡಿಕೆಯನ್ನು ಮನ್ನಿಸಿ ಅವರನ್ನು ಸಂಘಕ್ಕೆ ಷರತ್ತುಗಳೊಂದಿಗೆ ಬರಮಾಡಿಕೊಳ್ಳಲು ಒಪ್ಪುತ್ತಾನೆ. ಬೌದ್ಧ ಧಮ್ಮ ಕೆಳ ಜಾತಿಗಳ ಜನರೂ ಬಿಕ್ಕುಗಳಾಗಲು ಅವಕಾಶ ನೀಡಿತೆಂಬುದನ್ನು ಚಂಡಾಲ ಸಮುದಾಯಕ್ಕೆ ಸೇರಿದ ಪ್ರಕೃತಿಯೆಂಬ ಹೆಣ್ಣುಮಗಳು ಬಿಕ್ಕುನಿಯಾಗುವ ದೃಷ್ಟಾಂತದೊಂದಿಗೆ ವಿವರಿಸುತ್ತಾರೆ.
ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-2)
ಮೂರನೇ ಪರ್ವದಲ್ಲಿ ಧಮ್ಮದಲ್ಲಿ ಬುದ್ಧ ಬೋಧಿಸಿದ್ದೇನು, ಅಲ್ಲಿ ಬುದ್ಧನ ಸ್ಥಾನವೇನು, ಧಮ್ಮದ ವಿವಿಧ ದೃಷ್ಟಿಕೋನಗಳಾವುವು, ಯಾವುದು ಧಮ್ಮ, ಯಾವುದು ಧಮ್ಮವಲ್ಲ ಮತ್ತು ಸುಧಮ್ಮ ಎಂದರೇನು ಎಂಬ ವಿಶ್ಲೇಷಣೆ ಇದೆ. ನಾನು ದೇವಪುತ್ರ ಎಂದು ಹೇಳಿಕೊಳ್ಳುವ ಕ್ರಿಸ್ತ, ನಾನು ದೇವರು ಕಳುಹಿಸಿದ ಪ್ರವಾದಿ ಎಂದು ಹೇಳಿಕೊಳ್ಳುವ ಮೊಹಮದ್ ಮತ್ತು ನಾನೇ ದೇವರು ಎಂದು ಹೇಳಿಕೊಳ್ಳುವ ಕೃಷ್ಣ- ಇವರಿಗಿಂತ ಭಿನ್ನವಾಗಿ ತಾನು ಕೇವಲ ಮನುಷ್ಯನೆಂದೇ ಹೇಳಿಕೊಳ್ಳುವ ಗೌತಮನ ತಾತ್ವಿಕ ವೈಶಿಷ್ಟ್ಯತೆಯನ್ನು ವಿವರಿಸುತ್ತಾರೆ. ನಾಲ್ಕನೆಯ ಪರ್ವದಲ್ಲಿ ಧರ್ಮ ಮತ್ತು ಧಮ್ಮಕ್ಕಿರುವ ವ್ಯತ್ಯಾಸಗಳ ವಿಸ್ತೃತ ಚರ್ಚೆ ಇದೆ. ಹಿಂದೂ ಧರ್ಮ ಮತ್ತು ಬೌದ್ಧಧರ್ಮದಲ್ಲಿ ಬಳಕೆಯಾಗುವ ಒಂದೇ ತೆರನಾದ ಪರಿಭಾಷೆ ಮೂಲಭೂತ ವ್ಯತ್ಯಾಸಗಳನ್ನು ಹೇಗೆ ಮರೆಮಾಚುತ್ತದೆ ಎಂಬುದನ್ನು ಅಂಬೇಡ್ಕರ್ ಪರಿಶೀಲಿಸುತ್ತಾರೆ. ಬುದ್ಧನ ಕಲ್ಪನೆಯ ಧರ್ಮ, ಪುನರ್ಜನ್ಮ, ಕರ್ಮ, ಅಹಿಂಸೆ ಮತ್ತು ಬೌದ್ಧ ಜೀವನಮಾರ್ಗದ ವಿಶ್ಲೇಷಣೆ ಇಲ್ಲಿದೆ.
ಐದನೆಯ ಪರ್ವದಲ್ಲಿ ಸಂಘದ ರಚನೆ, ಯಾವುದೇ ತಾರತಮ್ಯವಿಲ್ಲದೆ ಸಂಘಕ್ಕೆ ಪ್ರವೇಶ ನೀಡುತ್ತಿದ್ದ ಬಗೆ, ಬುದ್ಧನ ಬಿಕ್ಕುವಿನ ಕಲ್ಪನೆ, ಬಿಕ್ಕುವಿನ ಕರ್ತವ್ಯಗಳು, ಪ್ರತಿಜ್ಞೆಗಳು, ಬಿಕ್ಕುಗಳು ಮತ್ತು ಸಾಮಾನ್ಯ ಜನರ ನಡುವಿನ ಸಂಬಂಧದ ವಿವರಣೆಗಳಿವೆ. ಆರನೇ ಪರ್ವವು ಬುದ್ಧನ ಸಮಕಾಲೀನರು, ಅವನಿಗೆ ಉಪಕಾರ ಮಾಡಿದವರು, ಶತ್ರುಗಳು, ಅವನ ತತ್ವದ ವಿರೋಧಿಗಳು, ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗಿನ ಸಂವಾದವನ್ನು ನಡೆಸುವ ಮತ್ತು ಅವರಲ್ಲಿ ವಿವೇಕವನ್ನು ಮೂಡಿಸುವ ವರ್ಣನೆಯನ್ನು ನೀಡುತ್ತದೆ. ಬ್ರಾಹ್ಮಣರ ಪ್ರತಿರೋಧ, ಜೈನರು ಬುದ್ಧನ ಮೇಲೆ ಆರೋಪಗಳನ್ನು ಹೊರಿಸಲು ಮಾಡಿದ ಪ್ರಯತ್ನಗಳು ಮತ್ತು ಮಡಿವಂತಿಕೆಯ ತಿರಸ್ಕಾರವನ್ನು ನಿರೂಪಿಸಲಾಗಿದೆ. ಏಳನೇ ಪರ್ವವು ಬುದ್ಧನ ಜೀವನಚರಿತ್ರೆಗೆ ಹಿಂದಿರುಗುತ್ತದೆ. ಅವನ ಕೊನೆಯ ದಿನಗಳು ಮತ್ತು ಸಾವಿಗೆ ಸಬಂಧಿಸಿದ ವಿಚಾರಗಳು ಇಲ್ಲಿವೆ. ಬುದ್ಧನ ಆಸ್ತಿ ನಮಗೇ ಸಿಗಬೇಕೆಂದು ಹಲವರು ಬಯಸಿದ್ದು ಮತ್ತು ಅದು ಎಂಟು ಭಾಗವಾಗಿ ಹಂಚಿಕೆಯಾಗಿ ವಿವಾದ ಬಗೆಹರಿದ ಬಗೆಯನ್ನು ನಿರೂಪಿಸಲಾಗಿದೆ. ಎಂಟನೇ ಪರ್ವವು ಸಿದ್ಧಾರ್ಥ ಗೌತಮನ ಚರ್ಯೆ, ವ್ಯಕ್ತಿತ್ವ, ನಾಯಕತ್ವದ ಗುಣ, ಮಾನವೀಯತೆ, ಸಹನಶೀಲತೆ, ಸಮಾನತೆಯ ಭಾವ ಮತ್ತು ಇಷ್ಟಾನಿಷ್ಟಗಳ ವಿವರಣೆಗಳಿವೆ. ಬೆನ್ನುಡಿಯಲ್ಲಿ ಜಗತ್ತಿನ ಆಧುನಿಕ ಚಿಂತಕರು, ವಿಜ್ಞಾನಿಗಳು ಬೌದ್ಧ ಧರ್ಮದ ವೈಶಿಷ್ಟ್ಯ ಮತ್ತು ಅದರ ಉದಾರ ತತ್ವಗಳ ಕುರಿತು ನೀಡಿದ ಹೇಳಿಕೆಗಳಿವೆ.
ಚಿಂತಕ, ಸಾಮಾಜಿಕ ಹೋರಾಟಗಾರ ಮತ್ತು ಬರಹಗಾರರಾದ ಆನಂದ್ ತೇಲ್ತುಂಬ್ಡೆಯವರು 2024ರಲ್ಲಿ ಪ್ರಕಟಿಸಿದ `ಐಕನೋಕ್ಲಾಸ್ಟ್: ಎ ರೆಫ್ಲೆಕ್ಟೀವ್ ಬಯೋಗ್ರಫಿ ಆಫ್ ಡಾ. ಬಾಬಾಸಾಹೇಬ್ ಅಂಬೇಡ್ಕರ್’ ಎಂಬ ಶೀರ್ಷಿಕೆಯ ಜೀವನಚರಿತ್ರೆ `ಬುದ್ಧ ಮತ್ತು ಅವನ ಧಮ್ಮ’ದ ವಿಧಾನವನ್ನೇ ಬಳಸುತ್ತದೆ. ಬೌದ್ಧತತ್ವಗಳನ್ನು ಮತ್ತು ಬುದ್ಧನ ಬದುಕನ್ನು ಅಂಬೇಡ್ಕರ್ ವಿಮರ್ಶಿಸುವಂತೆಯೇ ತೇಲ್ತುಂಬ್ಡೆಯವರು ಅಂಬೇಡ್ಕರ್ ಅವರ ಬದುಕು, ಹೋರಾಟ, ಚಿಂತನೆಗಳು ಮತ್ತು ಸಾಧನೆಗಳ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಮಾಡುತ್ತಾರೆ. ಧಮ್ಮದಲ್ಲಿ ಎಂಟು ಪರ್ವಗಳಿರುವ ಹಾಗೆಯೇ ಇಲ್ಲಿಯೂ ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಎಂಟು ಹಂತಗಳಲ್ಲಿ ಚಿತ್ರಿಸಲಾಗಿದೆ. ತೇಲ್ತುಂಬ್ಡೆಯವರು ತಮ್ಮ ಪುಸ್ತಕದ ವಿಧಾನ ಮತ್ತು ರಚನೆಗೆ ‘ಬುದ್ಧ ಮತ್ತು ಅವನ ಧಮ್ಮ’ದ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದು ಆ ಮಹತ್ತರ ಕೃತಿಗೆ ಹಾಗೂ ಅಂಬೇಡ್ಕರ್ ಅವರಿಗೆ ಸಲ್ಲಿಸಿದ ಗೌರವವಾಗಿದೆ.
ನಾಲ್ಕು ಪ್ರಮುಖ ಸಮಸ್ಯೆಗಳು
ದಶಕಗಳ ಕಾಲ ಬೌದ್ಧಧರ್ಮವನ್ನು ಮತ್ತು ಅದರ ಪ್ರಮುಖ ಪಠ್ಯಗಳನ್ನು ಆಳವಾಗಿ ಅಭ್ಯಸಿಸಿದ ಅಂಬೇಡ್ಕರ್ ಅವರಿಗೆ ಅರ್ಥವಾಗಿದ್ದೇನೆಂದರೆ ಬ್ರಾಹ್ಮಣವಾದವನ್ನು ಅವುಗಳಲ್ಲಿ ತುಂಬಿ ವಿರೂಪಗೊಳಿಸಲಾಗಿತ್ತು ಎಂಬುದು. ಬೌದ್ಧಧರ್ಮದ ಮೂಲತತ್ವಗಳು ಮೌಖಿಕವಾಗಿ ಪ್ರಸಾರವಾಗುತ್ತಾ ಹೋದಂತೆ ಮತ್ತು ಇತರ ಭಾಷೆಗಳಿಗೆ ಅನುವಾದಗೊಂಡಹಾಗೆ ಅನೇಕ ವಿರೂಪಗೊಂಡ ವಿಚಾರಗಳು ಅವುಗಳಲ್ಲಿ ಸೇರಿಕೊಂಡಿದ್ದು ಹಲವು ವಿದ್ವಾಂಸರಿಗೆ ಆತಂಕದ ವಿಚಾರವಾಗಿತ್ತು. ತನ್ನ ಜೀವಿತಕಾಲದಲ್ಲೇ ತನ್ನದೇ ಉಪದೇಶಗಳು ತಪ್ಪಾಗಿ ವರದಿಯಾಗಿದ್ದದ್ದು ಬುದ್ಧನ ಗಮನಕ್ಕೆ ಬಂದಿತು. ಅಂತಹ ಕೆಲವು ನಿದರ್ಶನಗಳನ್ನು ಅಂಬೇಡ್ಕರ್ ನೀಡುತ್ತಾರೆ. ಮಾನವ ಕಲ್ಯಾಣಕ್ಕೆ ಸಂಬಂಧಪಡದ ಯಾವುದೂ ಬುದ್ಧನ ಮಾತಾಗಿರಲು ಸಾಧ್ಯವಿಲ್ಲ ಮತ್ತು ಯಾವುದು ವೈಚಾರಿಕವೋ, ತಾರ್ಕಿಕವೋ ಅದು ಮಾತ್ರ ಅವನ ಉಪದೇಶವಾಗಿರುತ್ತದೆ ಎಂಬುದು ಅಂಬೇಡ್ಕರರ ನಿಲುವಾಗಿತ್ತು. ಹಲವು ಶತಮಾನಗಳ ಕಾಲ ಬುದ್ಧನ ತತ್ವಗಳು ರೂಪಾಂತರಗೊಂಡಾಗ ಅಸಮಂಜಸ ವಿಚಾರಗಳು ನುಸುಳಿಕೊಂಡಿದ್ದವು. ಉದಾಹರಣೆಗೆ ಹುಯೆನ್ಝಾಂಗ್ ಚೀನಾದದಿಂದ ಭಾರತಕ್ಕೆ ಬಂದಿದ್ದೇ ಇಲ್ಲಿ ಬೌದ್ಧ ಬರಹಗಳನ್ನು ಮೂಲರೂಪದಲ್ಲಿ ಓದಿಕೊಳ್ಳಲು ಮತ್ತು ಅವುಗಳ ಪ್ರತಿಗಳನ್ನು ಮಾಡಿಕೊಳ್ಳಲು. ಅವನು ಇಪ್ಪತ್ತು ವರ್ಷಗಳ ಕಾಲ ನಳಂದ ವಿಶ್ವವಿದ್ಯಾಲಯದಲ್ಲಿದ್ದು ಬೌದ್ಧ ಬರಹಗಳ ಪ್ರತಿಗಳನ್ನು ತಯಾರಿಸಿ ಚೀನಾಕ್ಕೆ ತೆಗೆದುಕೊಂಡು ಹೋದ. ದ್ವಂದ್ವಗಳಿಂದ ಕೂಡಿದ್ದ ಸಾಂಪ್ರದಾಯಿಕ ವ್ಯಾಖ್ಯಾನಗಳನ್ನು ತಿರಸ್ಕರಿಸಿ ಮಾನವೀಯತೆ ಮತ್ತು ವೈಜ್ಞಾನಿಕ ನೆಲೆಯಿಂದ ತಮ್ಮ ವಾದಗಳನ್ನು ಅಂಬೇಡ್ಕರ್ ಓದುಗರ ಮುಂದಿಡುತ್ತಾರೆ. ಸಮಾನತೆ, ಸ್ವಾತಂತ್ರ‍್ಯ ಮತ್ತು ಭ್ರಾತೃತ್ವದ ಸಂದೇಶವನ್ನು ಪರಿಣಾಮಕಾರಿಯಾಗಿ ಸಂವಹನಿಸಬಲ್ಲ ಬುದ್ಧನ ಜೀವನ ಹಾಗೂ ಆಯ್ದ ಘಟನೆಗಳ ಮೂಲಕ ಬೌದ್ಧಧರ್ಮದ ದರ್ಶನ ನೀಡುತ್ತಾರೆ.
ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)
ಬುದ್ಧನ ಬದುಕು ಮತ್ತು ಬೋಧನೆಗಳು ನಿರೂಪಿತವಾಗಿರುವ ಬಗ್ಗೆ ಪುಸ್ತಕದ ಪೀಠಿಕೆಯಲ್ಲಿ ನಾಲ್ಕು ಸಮಸ್ಯೆಗಳನ್ನು ಅಂಬೇಡ್ಕರ್ ಓದುಗರ ಮುಂದಿಡುತ್ತಾರೆ. ಅವರು ಪರಿಹಾರ ಬಯಸುವ ಈ ಪ್ರಶ್ನೆಗಳೇ ಅವರ ಅನ್ವೇಷಣೆಯ ತಾತ್ವಿಕ ಮಾದರಿಯನ್ನು ಸೂಚಿಸುತ್ತವೆ. ಅತೀಂದ್ರಿಯ ಮತ್ತು ಆಧ್ಯಾತ್ಮಿಕ ನೆಲೆಗಳನ್ನು ಬದಿಗಿಟ್ಟು ನೈತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಬೌದ್ಧ ತತ್ವಸಿದ್ಧಾಂತವನ್ನು ನಿರ್ಮಿಸುವ ಬಗೆ ವಿಶಿಷ್ಟವಾದದ್ದು. ಸಮಸ್ಯೆಗಳನ್ನು ಮಂಡಿಸುವ ವಿಧಾನದಲ್ಲಿಯೇ ಉತ್ತರಗಳು ಏನಿರಬಹುದೆಂಬ ಸೂಚನೆ ದೊರೆಯುತ್ತದೆ.
ಅವರು ಪರಿಹಾರ ಬಯಸುವ ಮೊದಲ ಪ್ರಶ್ನೆ ಎಂದರೆ ಸಿದ್ಧಾರ್ಥ ಪರಿವ್ರಾಜಕ ಆಗಿದ್ದು ಏಕೆ ಎಂಬುದು. ಸಾಂಪ್ರದಾಯಿಕ ಉತ್ತರ ಏನೆಂದರೆ ಸಾವು, ಮುಪ್ಪು ಮತ್ತು ರೋಗವನ್ನು ನೋಡಿದ್ದರಿಂದ ಲೌಕಿಕ ಬದುಕನ್ನು ತ್ಯಜಿಸಿ ಪರಿವ್ರಾಜಕನಾದ ಎಂಬುದು. ಅಂಬೇಡ್ಕರ್ ಅವರ ಪ್ರಕಾರ ಇದು ವಿವೇಚನಾಶೂನ್ಯವಾದ ವಿವರಣೆ. ಏಕೆಂದರೆ ಸಿದ್ಧಾರ್ಥ ಪರಿವ್ರಾಜಕನಾಗಿ ಹೊರಟದ್ದು 29ನೆಯ ವಯಸ್ಸಿನಲ್ಲಿ ಮತ್ತು ದಿನನಿತ್ಯವೂ ಕಾಣಬಹುದಾದ ರೋಗ, ಮುಪ್ಪು, ಸಾವು ‘ಅಲ್ಲಿಯತನಕ ಅವನಿಗೆ ಕಂಡಿರಲಿಲ್ಲ ಎನ್ನುವುದೇ ಅಸಂಗತ ಮತ್ತು ಅರ್ಥವಿಲ್ಲದ್ದು.’ ಆದ್ದರಿಂದ ‘ಬುದ್ಧ ಪರಿವ್ರಾಜಕನಾಗಲು ಬೇರೆ ಕಾರಣಗಳಿರಬಹುದಲ್ಲವೆ’ ಎಂಬುದು ಅವರ ಪ್ರಶ್ನೆ. ಬೌದ್ಧಧರ್ಮದ ಎರಡನೆಯ ಸಮಸ್ಯೆ ನಾಲ್ಕು ಆರ್ಯ ಅಥವಾ ಶ್ರೇಷ್ಠ ಸತ್ಯಗಳಿಗೆ ಸಂಬಂಧಿಸಿದ್ದು. ಬದುಕು ದುಃಖ, ಸಾವು ದುಃಖ, ಪುನರ್ಜನ್ಮ ದುಃಖ ಮತ್ತು ನಂತರ ಎಲ್ಲದರ ಅಂತ್ಯ ಇದೆ ಎಂದು ನಿರಾಶಾ ಸಿದ್ಧಾಂತವನ್ನು ಮುಂದಿಡುವ ಈ ಸತ್ಯಗಳು ಬುದ್ಧನ ಮೂಲ ಬೋಧನೆಗಳ ಭಾಗವಾಗಿದ್ದವೇ ಅಥವಾ ನಂತರದಲ್ಲಿ ಸನ್ಯಾಸಿಗಳು ಸೇರಿಸಿದ್ದೇ ಎಂಬುದು ಅವರ ಪ್ರಶ್ನೆ. ಮೂರನೆಯ ಸಮಸ್ಯೆ ಆತ್ಮ, ಕರ್ಮ ಮತ್ತು ಪುನರ್ಜನ್ಮಕ್ಕೆ ಸಂಬಂಧಿಸಿದ್ದು. ಆತ್ಮದ ಅಸ್ತಿತ್ವವನ್ನು ನಿರಾಕರಿಸುವ ಬುದ್ಧ, ಕರ್ಮ ಮತ್ತು ಪುನರ್ಜನ್ಮವನ್ನು ಒಪ್ಪುತ್ತಾನೆಂದಾದರೆ ಆ ಎರಡು ಶಬ್ದಗಳನ್ನು ಯಾವ ಅರ್ಥದಲ್ಲಿ ಬಳಿಸಿದ ಎಂಬುದು ಅಂಬೇಡ್ಕರ್ ಅವರ ಪ್ರಶ್ನೆ. ನಾಲ್ಕನೆಯ ಸಮಸ್ಯೆ ಬಿಕ್ಕುಗಳಿಗೆ ಸಂಬಂಧಪಟ್ಟಿದ್ದು. ‘ಬೌದ್ಧ ಬಿಕ್ಕುಗಳನ್ನು ಸೃಷ್ಟಿಸುವ ಉದ್ದೇಶ ಪರಿಪೂರ್ಣ ಮನುಷ್ಯನನ್ನು ಸೃಷ್ಟಿಸುವುದಾಗಿತ್ತೆ ಅಥವಾ ಸಮಾಜ ಸೇವಕನನ್ನು ಸೃಷ್ಟಿಸುವುದಾಗಿತ್ತೆ’ ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ಏಕೆಂದರೆ ಅವರ ಪ್ರಕಾರ ಪರಿಪೂರ್ಣ ಮನುಷ್ಯ ಸ್ವಾರ್ಥಸಾಧಕನಾಗಿರುತ್ತಾನೆ ಮತ್ತು ಅವನಿಂದ ಬೌದ್ಧಧರ್ಮ ಪ್ರಚಾರಕ್ಕೆ ಏನೂ ಪ್ರಯೋಜನವಾಗುವುದಿಲ್ಲ.
ಪುಸ್ತಕದಲ್ಲಿ ಈ ನಾಲ್ಕು ಸಮಸ್ಯೆಗಳಿಗೆ ಉತ್ತರಗಳನ್ನು ಅನ್ವೇಷಿಸುತ್ತಾ ಹೋಗುತ್ತಾರೆ ಅಂಬೇಡ್ಕರ್. ಅವರು ಪ್ರಶ್ನೆಗಳನ್ನು ಕೇಳುವ ಬಗೆ ಮತ್ತು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ವಿಧಾನಗಳು ಸಾಮಾಜಿಕ ಸಂಶೋಧಕರಿಗೆ ತಮ್ಮ ಸಂಶೋಧನಾ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿವೆ. ಸಾರ್ವತ್ರಿಕ ಸತ್ಯವೆಂದು ಒಪ್ಪಿತವಾಗಿರುವ ಸಂಗತಿಗಳನ್ನು ವಿವೇಚನೆ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸುವ, ಮರುವಿಶ್ಲೇಷಣೆಗೆ ಒಳಪಡಿಸುವ ಮಾರ್ಗವನ್ನು ಅಂಬೇಡ್ಕರ್ ತೋರಿಸಿದ್ದಾರೆ. ವೇದಗಳು ಅಪೌರುಷೇಯ ಮತ್ತು ಅವುಗಳು ಸಾರ್ವಕಾಲಿಕ ಸತ್ಯವನ್ನು ಹೇಳುವ ಪವಿತ್ರ ಗ್ರಂಥಗಳಾಗಿರುವುದರಿಂದ ಅವುಗಳಲ್ಲಿರುವ ಏನನ್ನೂ ಪ್ರಶ್ನೆ ಮಾಡಬಾರದೆಂಬ ವಾದವನ್ನು ತಿರಸ್ಕರಿಸುವ ಬುದ್ಧನ ತಾತ್ವಿಕ ಚಿಂತನೆಗಳನ್ನು ಅಂಬೇಡ್ಕರ್ ಸರಳವಾಗಿ ನಮ್ಮ ಮುಂದಿಡುತ್ತಾರೆ.
(ಮುಂದುವರಿಯುತ್ತದೆ..)
(ಈದಿನ ಡಾಟ್ ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.




