ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-2)

Date:

(ಮುಂದುವರಿದ ಭಾಗ..) ಯುದ್ಧ ವಿರೋಧಿ ಸಿದ್ಧಾರ್ಥ ರಾಜ್ಯ ತೊರೆದದ್ದು: ಒಬ್ಬ ರೋಗಿ, ಒಬ್ಬ ವೃದ್ಧ ಮತ್ತು ಒಂದು ಸಾವನ್ನು ನೋಡಿದ್ದರ ಪರಿಣಾಮ ಲೌಖಿಕ ಬದುಕಿನ ಬಗ್ಗೆ ಬೇಸತ್ತ ಸಿದ್ಧಾರ್ಥನು ತಂದೆ ಶುದ್ಧೋದನ, ಪತ್ನಿ ಯಶೋಧರಾ ಸೇರಿದಂತೆ ಯಾರಿಗೂ ಹೇಳದೆ ರಾತೋರಾತ್ರಿ ಕಪಿಲವಸ್ತುವನ್ನು ತೊರೆದು ಹೋದನೆಂಬ ಜನಪ್ರಿಯ ದಂತಕಥೆಗೆ ಭಿನ್ನವಾದ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯ ಐತಿಹಾಸಿಕ ವಿವರಣೆಯನ್ನು ಅಂಬೇಡ್ಕರ್ ನೀಡುತ್ತಾರೆ. ಸಿದ್ಧಾರ್ಥ ಅರಮನೆಯನ್ನು ಬಿಟ್ಟು ಹೊರಟದ್ದು ಹಲವು ವರ್ಷಗಳಿಂದ ಪಡೆದ ತಿಳಿವಳಿಕೆ, ಅನುಭವ, ತಾತ್ವಿಕ ಚಿಂತನೆ ಮತ್ತು ಬದುಕಿನ ವಾಸ್ತವದ ಅರಿವಿನ ಕಾರಣಕ್ಕೆ ಎನ್ನುವ ನಿರೂಪಣೆ ಅಂಬೇಡ್ಕರ್ ಅವರದ್ದು. ಅದು ಹಠಾತ್ತಾದ ಮತ್ತು ಭಾವಾವೇಶಕ್ಕೊಳಗಾಗಿ ತೆಗೆದುಕೊಂಡ ನಿರ್ಧಾರವಲ್ಲ. ಚಿಕ್ಕವನಾಗಿದ್ದಾಗಲೇ ಹಿಂಸೆ, ಸಂಘರ್ಷ, ಅನ್ಯಾಯವನ್ನು ಒಪ್ಪದವನಾಗಿದ್ದ ಸಿದ್ಧಾರ್ಥ ಕರುಣೆ, ಪ್ರೀತಿ, ಸ್ನೇಹ, ಸಂಯಮದಂತಹ ಮೌಲ್ಯಗಳ ಅಗತ್ಯವನ್ನು ತಿಳಿದಿದ್ದನೆಂಬುದಕ್ಕೆ ನಿದರ್ಶನಗಳಿವೆ.

ಗಾಯಗೊಂಡ ಹಕ್ಕಿಗೆ ನೀರು ನೀಡಿ ಅದರ ಶುಶ್ರೂಷೆ ಮಾಡುವ ಸಿದ್ಧಾರ್ಥ, ಹಕ್ಕಿಯು ಅದನ್ನು ಹೊಡೆದುರುಳಿಸಿದವನ ಸ್ವತ್ತು ಎಂಬ ತನ್ನ ಸೋದರ ಸಂಬಂಧಿ ದೇವದತ್ತನ ವಾದವನ್ನು ತಿರಸ್ಕರಿಸುತ್ತಾನೆ. ಆಚರಣೆಯಾಗಿ ನಡೆಸುತ್ತಿದ್ದ ಪ್ರಾಣಿ ಬೇಟೆಯಲ್ಲಿ ಭಾಗವಹಿಸಲು ನಿರಾಕರಿಸುವ ಸಿದ್ಧಾರ್ಥ ಯಾವುದೇ ಜೀವಿಗೆ ಹಿಂಸೆ ಕೊಡುವುದನ್ನು ವಿರೋಧಿಸುತ್ತಾನೆ. ರಾಜ್ಯ ರಕ್ಷಣೆಗಾಗಿ ಯುದ್ಧ ಮಾಡುವುದು ಕ್ಷತ್ರಿಯರ ಕರ್ತವ್ಯ ಎನ್ನುವ ತಾಯಿಗೆ ಎಲ್ಲ ಕ್ಷತ್ರಿಯರೂ ಒಬ್ಬರನ್ನೊಬ್ಬರು ಪ್ರೀತಿಸಿದರೆ ಯಾರನ್ನೂ ಕೊಲ್ಲದೆ ರಾಜ್ಯ ರಕ್ಷಣೆ ಮಾಡಬಹುದಲ್ಲ ಎಂದು ಕೇಳುತ್ತಾನೆ. ಅಂಬೇಡ್ಕರ್ ಬಣ್ಣಿಸುವಂತೆ ಯುವಕ ಸಿದ್ಧಾರ್ಥ ಅವನ ತಂದೆಯ ತೋಟದಲ್ಲಿ ಅರೆಬಟ್ಟೆ ತೊಟ್ಟು ಸುಡು ಬಿಸಿಲಲ್ಲಿ ಕೆಲಸಮಾಡುವ ಕಾರ್ಮಿಕರನ್ನು ನೋಡಿ ಮರುಕಪಡುತ್ತಾನೆ, ಬಡವರನ್ನು ಶೋಷಣೆ ಮಾಡುವ ಹಕ್ಕನ್ನು ಪ್ರಶ್ನಿಸುತ್ತಾನೆ. ‘ಒಳ್ಳೆಯ ವಿಚಾರಗಳ ಕುರಿತು ಧ್ಯಾನ ಮಾಡುವುದರಿಂದ ಸಾರ್ವತ್ರಿಕ ಪ್ರೀತಿ ಬೆಳೆಯುತ್ತದೆ’ ಎನ್ನುತ್ತಾನೆ.

11 20
ಸಿದ್ಧಾರ್ಥ ಮತ್ತು ದೇವದತ್ತನ ನಡುವಿನ ಹಕ್ಕಿ ಪ್ರಸಂಗ (ಸಾಂದರ್ಭಿಕ ಚಿತ್ರ)

ಆಗಿನ ಪದ್ಧತಿಯಂತೆ ಇಪ್ಪತ್ತನೇ ವರ್ಷಕ್ಕೆ ಶಾಕ್ಯ ಸಂಘದ ಸದಸ್ಯನಾಗುವ ಸಿದ್ಧಾರ್ಥನಿಗೆ ಅವನ ತಾತ್ವಿಕ ನಿಲುವುಗಳನ್ನು ಪರೀಕ್ಷೆಗೊಡ್ಡುವ ಸವಾಲೊಂದು ಎದುರಾಗುತ್ತದೆ. ಶಾಕ್ಯ ಮತ್ತು ಅದರ ನೆರೆಯ ರಾಜ್ಯವಾದ ಕೋಲಿಯಾ ನಡುವೆ ಹರಿಯುತ್ತಿದ್ದ ರೋಹಿಣಿ ನದಿಯ ನೀರನ್ನು ಯಾರು ಮೊದಲು ಪಡೆಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಎಂಬ ಬಗ್ಗೆ ಹಲವು ವರ್ಷಗಳಿಂದಲೂ ಘರ್ಷಣೆಗಳು ನಡೆಯುತ್ತಿದ್ದವು. ಶಾಕ್ಯ ರಾಜ್ಯದ ಸೇನಾಧಿಪತಿ ಈ ವ್ಯಾಜ್ಯವನ್ನು ಶಾಶ್ವತವಾಗಿ ಪರಿಹರಿಸಬೇಕೆಂಬ ವಾದ ಮಂಡಿಸಿ, ಯುದ್ಧದ ಹೊರತಾಗಿ ಬೇರೆ ಮಾರ್ಗವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾನೆ. ಸಿದ್ಧಾರ್ಥ ಈ ತೀರ್ಮಾನವನ್ನು ವಿರೋಧಿಸುತ್ತಾನೆ. ಈ ವಿಷಯ ಶಾಕ್ಯ ಸಂಘದ ಸಭೆಯಲ್ಲಿ ಮಂಡಿತವಾಗುತ್ತದೆ. ಶಾಕ್ಯ ಮತ್ತು ಕೋಲಿಯಾ ಎರಡೂ ಕಡೆಗಳಿಂದ ತಪ್ಪುಗಳಾಗಿರುವುದರಿಂದ ಕೋಲಿಯಾರನ್ನು ಸಹೋದರರೆಂದು ಪರಿಗಣಿಸಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬ ಸಲಹೆಯನ್ನು ಸಿದ್ಧಾರ್ಥ ನೀಡುತ್ತಾನೆ. ಎರಡೂ ಕಡೆಯಿಂದ ಐವರು ಪ್ರತಿನಿಧಿಗಳನ್ನು ಕಳುಹಿಸಿ ಮಾತುಕತೆ ನಡೆಸಬೇಕೆಂಬ ಅವನ ತೀರ್ಮಾನವನ್ನು ಸಂಘ ಒಪ್ಪುವುದಿಲ್ಲ. ಸಿದ್ಧಾರ್ಥನನ್ನು ಬಿಟ್ಟು ಉಳಿದವರೆಲ್ಲ ಯುದ್ಧದ ಪರವಾಗಿ ಮತ ಚಲಾಯಿಸುತ್ತಾರೆ. ಸಂಘದ ನಿಯಮಗಳ ಪ್ರಕಾರ ಬಹುಮತದ ನಿರ್ಧಾರವನ್ನು ವಿರೋಧಿಸಿದಕ್ಕೆ ಶಿಕ್ಷೆಯಾಗಿ ಮೂರು ಆಯ್ಕೆಗಳನ್ನು ಸಿದ್ಧಾರ್ಥನಿಗೆ ನೀಡಲಾಗುತ್ತದೆ. ಮೊದಲನೆಯದು ಬಹುಮತದ ನಿರ್ಧಾರಕ್ಕೆ ಮಣಿದು ಯುದ್ಧದಲ್ಲಿ ಪಾಲ್ಗೊಳ್ಳುವುದು. ಎರಡನೆಯದು ಶುದ್ಧೋದನನ ಕುಟುಂಬವನ್ನು ಬಹಿಷ್ಕರಿಸಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳುವುದು. ಮೂರನೆಯದು ಗಡಿಪಾರು ಮಾಡುವುದು. ಆದರೆ ಸಂಘದಿಂದ ಗಡಿಪಾರಾದ ಸುದ್ದಿ ಕೋಸಲ ಸಾಮ್ರಾಜ್ಯಕ್ಕೆ ತಲುಪಿದರೆ ಶಾಕ್ಯ ರಾಜ್ಯ ಸಾಮ್ರಾಟರ ಅವಕೃಪೆಗೆ ಗುರಿಯಾಗಬೇಕಾಗುತ್ತದೆಂಬ ಕಾರಣಕ್ಕೆ ಸಿದ್ಧಾರ್ಥ ಸ್ವಯಿಚ್ಛೆಯಿಂದ ಪರಿವ್ರಾಜಕನಾಗಿ ರಾಜ್ಯದಿಂದ ಹೊರಹೋಗುವ ನಿರ್ಧಾರಕ್ಕೆ ಬರುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಂದೆ ಶುದ್ಧೋದನ ಮತ್ತು ತಾಯಿ ಪ್ರಜಾಪತಿ ಗೌತಮಿ ಇಬ್ಬರೂ ತಾವೂ ರಾಜ್ಯಬಿಟ್ಟು ಸಿದ್ಧಾರ್ಥನೊಟ್ಟಿಗೆ ಹೊರಡುವುದಾಗಿ ಹೇಳುತ್ತಾರೆ. ಅವರ ಇಚ್ಛೆಯನ್ನು ಸಿದ್ಧಾರ್ಥ ಒಪ್ಪದೆ ಅವರು ಕಪಿಲವಸ್ತುವಿನಲ್ಲಿ ಉಳಿಯಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತಾನೆ. ಪತ್ನಿ ಯಶೋಧರಾ ಸಿದ್ಧಾರ್ಥನ ನಿರ್ಧಾರವನ್ನು ಒಪ್ಪುತ್ತಾಳೆ. ವಿದಾಯ ಹೇಳಲು ಕಪಿಲ ವಸ್ತುವಿನ ಜನರೆಲ್ಲ ಸಿದ್ಧಾರ್ಥನ ಹಿಂದೆ ಬರುತ್ತಾರೆ. ತನ್ನ ಹಿಂದೆ ಬರಬಾರದೆಂದೂ, ಅವರಿಗೆ ತನ್ನ ಮೇಲೆ ಗೌರವವಿದ್ದರೆ ಸಹೋದರರಾದ ಕೋಲಿಯಾ ವಿರುದ್ಧ ಯುದ್ಧ ಮಾಡದೆ ರೋಹಿಣಿ ನದಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕೆಂಬ ಸಲಹೆ ನೀಡಿ ಹೊರಡುತ್ತಾನೆ. ಸಿದ್ಧಾರ್ಥ ರಾಜ್ಯ ತೊರೆಯುವುದು ದೊಡ್ಡ ಸಾರ್ವಜನಿಕ ಘಟನೆಯಾಗುತ್ತದೆ.

ಇದನ್ನೂ ಓದಿರಿ: ಬುದ್ಧ ಮತ್ತು ಅವನ ಧಮ್ಮ: ವೈಚಾರಿಕ ಅನ್ವೇಷಣೆಯೊಂದಿಗೆ ಮರುನಿರ್ಮಾಣ (ಭಾಗ-1)

ಮಗಧ ರಾಜ್ಯದ ರಾಜಧಾನಿ ರಾಜಗೃಹದಲ್ಲಿ ಜನರ ಗುಂಪಿನೊಡಗಿದ್ದ ಬುದ್ಧನನ್ನು ಬಿಂಬಿಸಾರ ನೋಡುತ್ತಾನೆ. ಬುದ್ಧನ ಸ್ಥಿತಿಯನ್ನು ನೋಡಿ ಆತಂಕಗೊಂಡ ಬಿಂಬಿಸಾರ, ‘ರಾಜ್ಯದ ಒಂದು ಭಾಗವನ್ನು ಕೊಡುತ್ತೇನೆ, ಸನ್ಯಾಸಿಯಾಗಬೇಡ’ ಎಂದು ವಿನಂತಿಸುತ್ತಾನೆ. ‘ನನ್ನ ಸೈನ್ಯವನ್ನಾದರೂ ಸೇರು’ ಎಂದು ಬಿಂಬಿಸಾರ ಕೇಳುತ್ತಾನೆ. ಅದೆಲ್ಲವನ್ನೂ ನಿರಾಕರಿಸುವ ಬುದ್ಧ ತನ್ನ ದಾರಿಯಲ್ಲಿ ಮುಂದುವರಿಯುವುದಾಗಿ ಹೇಳುತ್ತಾನೆ. ನಂತರ ಐದು ಪರಿವ್ರಾಜಕರು ಭಿಕ್ಷಾಪಾತ್ರೆ ಹಿಡಿದು ನಡೆಯುತ್ತಿದ್ದ ಬುದ್ಧನನ್ನು ಭೇಟಿಯಾಗಿ ರೋಹಿಣಿ ನದಿಯ ವಿವಾದ ಶಾಂತಿಯುತವಾಗಿ ಬಗೆಹರಿದ ಬಗೆಯನ್ನು ವಿವರಿಸುತ್ತಾರೆ. ಕಪಿಲವಸ್ತುವುನಿಂದ ಸಿದ್ಧಾರ್ಥ ನಿರ್ಗಮಿಸಿದ ಮೇಲೆ ಅಲ್ಲಿಯ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರೆಲ್ಲರೂ ಕೋಲಿಯಾ ಜನರು ತಮ್ಮ ಸಹೋದರರೆಂದೂ, ಅವರೊಂದಿಗೆ ಯುದ್ಧ ಕೂಡದೆಂದೂ ಪ್ರತಿಭಟಿಸುತ್ತಾರೆ. ಕೋಲಿಯಾ ಮತ್ತು ಶಾಕ್ಯ ರಾಜ್ಯಗಳೆರಡನ್ನೂ ಪ್ರತಿನಿಧಿಸುವ ಹತ್ತು ಜನರ ಸಮಿತಿಯು ನೀರಿನ ಹಂಚಿಕೆಗೆ ಶಾಶ್ವತ ಸೂತ್ರವನ್ನು ಪ್ರಕಟಿಸುತ್ತದೆ. ‘ಈ ನೀರು ನಮ್ಮದು, ರಕ್ತ ಕೊಟ್ಟೇವು ನೀರು ಬಿಡೆವು’ ಎಂದೆಲ್ಲ ಉಗ್ರವಾಗಿ ಪ್ರತಿಭಟಿಸುವ ಗುಂಪುಗಳು ಇಂತಹ ಪ್ರಾಚೀನ ಒಪ್ಪಂದದಿಂದ ಕಲಿಯುವುದಿದೆ.

10 9
ರೋಹಿಣಿ ನದಿ ವಿವಾದ (ಸಾಂದರ್ಭಿಕ ಚಿತ್ರ)

ರೋಹಿಣಿ ನದಿಯ ನೀರಿನ ವ್ಯಾಜ್ಯ ಯುದ್ಧವಿಲ್ಲದೆ ಅಂತ್ಯಗೊಂಡ ಕಾರಣ ಬುದ್ಧ ಕಪಿಲವಸ್ತುವಿಗೆ ಮರಳಬೇಕೆಂದು ಆ ಐದು ಪರಿವ್ರಾಜಕರು ಹೇಳುತ್ತಾರೆ. ಆದರೆ ಬುದ್ಧನ ದೃಷ್ಟಿ ಆಗಲೇ ಸಮಾಜದಲ್ಲಿನ ಕುಲೀನ-ಮಲಿನ, ಉಚ್ಚ-ನೀಚ, ಮೇಲು-ಕೀಳು ಎಂಬ ಅಸಮಾನತೆಯನ್ನು ತೊಡೆದು ಹಾಕುವ ಕಡೆಗೆ ನೆಟ್ಟಿದ್ದರಿಂದ ತನ್ನ ದಾರಿಯಲ್ಲಿ ಮುಂದುವರಿಯುತ್ತಾನೆ.

ನಿರಾಶಾವಾದದ ತಿರಸ್ಕಾರ

ಬುದ್ಧನ ಬೋಧನೆಗಳ ಸಾರವೆಂದೂ ಮತ್ತು ಅತ್ಯಂತ ಪವಿತ್ರವೆಂದು ತಿಳಿಯಲಾಗಿದ್ದ ನಾಲ್ಕು ಆರ್ಯ ಸತ್ಯಗಳ ಬಗೆಗಿನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಅಂಬೇಡ್ಕರ್ ನಿರಾಕರಿಸುತ್ತಾರೆ. ಮೊದಲ ಸತ್ಯ ಈ ಜಗತ್ತು ದುಃಖದಿಂದ ಕೂಡಿದೆ ಎಂಬುದು. ಎರಡನೆಯದು ಆ ದುಃಖಕ್ಕೆ ಆಸೆಯೇ ಕಾರಣ ಎಂಬುದು. ಮೂರನೆಯದು ದುಃಖವನ್ನು ಕೊನೆಗೊಳಿಸಬಹುದು ಎಂಬುದು. ನಾಲ್ಕನೆಯದು ದುಃಖವನ್ನು ಕೊನೆಗೊಳಿಸಲು ಅಷ್ಟಾಂಗಮಾರ್ಗದಲ್ಲಿ ನಡೆದು ನಿರ್ವಾಣ ಅಥವಾ ಜ್ಞಾನವನ್ನು ಪಡೆಯಬಹುದು ಎಂಬುದು. ಬುದ್ಧನ ಪ್ರಕಾರ ಅತಿಯಾದ ಲೋಲುಪತೆ ಮತ್ತು ಕಠೋರವಾದ ಆತ್ಮನಿಗ್ರಹ ಎರಡೂ ನಿರ್ವಾಣವನ್ನು ಪಡೆಯಲು ಸಹಾಯಕವಾಗುವುದಿಲ್ಲವಾದ್ದರಿಂದ ಅವೆರಡರಿಂದಲೂ ದೂರವಿದ್ದು ಎಂಟು ತತ್ವಗಳ ಅಷ್ಟಾಂಗಮಾರ್ಗವನ್ನು ಅನುಸರಿಸಬೇಕು. ಅದೇ ಮಧ್ಯಮ ಮಾರ್ಗ. ಸರಿಯಾದ ದೃಷ್ಟಿ, ಸರಿಯಾದ ಉದ್ದೇಶ, ಸರಿಯಾದ ಮಾತು, ಸರಿಯಾದ ಕಾರ್ಯ, ಸರಿಯಾದ ಜೀವನೋಪಾಯ, ಸರಿಯಾದ ಪ್ರಯತ್ನ, ಸರಿಯಾದ ಸಾವಧಾನತೆ ಮತ್ತು ಸರಿಯಾದ ಏಕಾಗ್ರತೆ- ಇವೇ ಆ ಎಂಟು ತತ್ವಗಳು. ನಾಲ್ಕನೆಯ ಸತ್ಯವು ಸಂಪೂರ್ಣವಾಗಿ ಲೌಖಿಕ ಮತ್ತು ಸ್ವಾಭಾವಿಕ ವಿದ್ಯಮಾನವಾಗಿರುವುದರಿಂದ ಅಂಬೇಡ್ಕರ್ ಅದನ್ನು ಒಪ್ಪುತ್ತಾರೆ.

ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-1)

ಬೌದ್ಧ ಸಿದ್ಧಾಂತವು ವ್ಯಕ್ತಿಗಳ ನಡುವಿನ ಸಾಮಾಜಿಕ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ಅಂಬೇಡ್ಕರ್ ಅವರ ಪ್ರಕಾರ ದುಃಖವು ಲೌಖಿಕವಾಗಿದ್ದು ಬಡತನ ಕೂಡ ದುಃಖದ ಕಾರಣಗಳಲ್ಲೊಂದು. ಅಂದರೆ ಬಡತನ ಮತ್ತು ಲೌಖಿಕ ದುಃಖ ಮಾನವ-ನಿರ್ಮಿತವೇ ಹೊರತು ನೈಸರ್ಗಿಕ ಕಾರಣಗಳಿಂದ ಸೃಷ್ಟಿಯಾದವುಗಳಲ್ಲ. ಸಾಮಾಜಿಕ ಅನ್ಯಾಯ, ಆರ್ಥಿಕ ಅಸಮಾನತೆ ಮತ್ತು ಮಾನವ ಸಂಘರ್ಷ ದುಃಖಕ್ಕೆ ಕಾರಣವಾಗುತ್ತವೆ. ಸಾಂಪ್ರದಾಯಿಕ ಕಥನದ ಪ್ರಕಾರ, ಬುದ್ಧ ತನ್ನ ಜ್ಞಾನೋದಯದ ನಂತರ ನೀಡಿದ ಮೊದಲ ಉಪದೇಶದಲ್ಲಿ ನಾಲ್ಕು ಸತ್ಯಗಳನ್ನು ಐದು ಪರಿವ್ರಾಜಕರಿಗೆ ಹೇಳಿದ್ದನು. ಆ ಉಪದೇಶದಲ್ಲಿ ಹುಟ್ಟು ದುಃಖ, ಮುಪ್ಪು ದುಃಖ, ಸಾವು ದುಃಖ ಎಂದು ಹೇಳಿದನೆಂದು ವರದಿಯಾಗಿದ್ದರಿಂದ ಅದನ್ನು ಉತ್ಫ್ರೇಕ್ಷಿಸಿ ಮೂಲತತ್ವದಲ್ಲಿ ಇಲ್ಲದ ಆಳವಾದ ನಿರಾಶಾವಾದದ ಬಣ್ಣವನ್ನು ಅವನ ಧಮ್ಮಕ್ಕೆ ಬಳಿಯಲಾಯಿತು ಎಂದು ಅಂಬೇಡ್ಕರ್ ಹೇಳುತ್ತಾರೆ. ನಾಲ್ಕು ಸತ್ಯಗಳೆಂಬುದು ಬುದ್ಧನ ಮರಣಾನಂತರದ ಸುಳ್ಳು ಸೃಷ್ಟಿಯಾಗಿದ್ದರಿಂದ ಅವುಗಳನ್ನು ಕೈಬಿಟ್ಟು ಬೌದ್ಧ ಬಿಕ್ಕುಗಳಿಗೆ ಹೊಸದೊಂದು ಕಾರ್ಯಸೂಚಿಯನ್ನು ನೀಡುತ್ತಾರೆ. ಸಾಂಪ್ರದಾಯಿಕ ಕಥಾನಕವನ್ನು ಬದಿಗಿಟ್ಟು ದುಃಖ ಪರಿಹಾರಕ್ಕಾಗಿ ಬುದ್ಧನ ಬೋಧನೆಯನ್ನು ಶುದ್ಧ ಮಾರ್ಗ, ಸದಾಚರಣ ಮಾರ್ಗ ಮತ್ತು ಶೀಲ ಮಾರ್ಗ ಎಂಬ ಮೂರು ಮಾರ್ಗಗಳ ಮಾದರಿಯಲ್ಲಿ ನಿರೂಪಿಸುತ್ತಾರೆ.

ಬುದ್ಧನ ಕಲ್ಪನೆಯ ಕರ್ಮ ಮತ್ತು ಪುನರ್ಜನ್ಮ

ಬುದ್ಧನ ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತಗಳಿಗೂ ಬ್ರಾಹ್ಮಣರ ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತಗಳಿಗೂ ಇರುವ ಮೂಲಭೂತ ಭಿನ್ನತೆಗಳನ್ನು ಅಂಬೇಡ್ಕರ್ ವಿವರಿಸುತ್ತಾರೆ. ಹಿಂದೂ ಕರ್ಮ ಸಿದ್ಧಾಂತವು ಆತ್ಮದ ಅಸ್ತಿತ್ವದ ಮೇಲೆ ನಿಂತಿದೆ, ಆದರೆ ಬೌದ್ಧ ತತ್ವವು ಆತ್ಮದ ಅಸ್ತಿತ್ವನ್ನು ತಿರಸ್ಕರಿಸುತ್ತದೆ. ಬ್ರಾಹ್ಮಣ ಕರ್ಮ ಸಿದ್ಧಾಂತವು ಕರ್ಮವು ಅನುವಂಶೀಯವಾಗಿದ್ದು ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಆತ್ಮದ ದೇಹಾಂತರದಿಂದ ಸಾಗಿಸಲ್ಪಡುತ್ತದೆ. ಹಿಂದೂ ಕರ್ಮ ಸಿದ್ಧಾಂತವು ಮನುಷ್ಯನೊಬ್ಬ ತನ್ನ ಹಿಂದಿನ ಜನ್ಮದಲ್ಲಿ ಕೆಟ್ಟ ಕರ್ಮ ಮಾಡಿದ್ದರೆ ಬಡವನಾಗಿಯೂ ಒಳ್ಳೆಯ ಕರ್ಮ ಮಾಡಿದ್ದರೆ ಶ್ರೀಮಂತನಾಗಿಯೂ ಹುಟ್ಟುತ್ತಾನೆ ಎಂದು ಹೇಳುತ್ತದೆ. ಬಿತ್ತಿದ್ದನ್ನು ಪಡೆಯಬೇಕೆಂಬ ಬುದ್ಧನ ಕರ್ಮ ಸಿದ್ಧಾಂತವು ಪ್ರಸ್ತುತ ಲೌಖಿಕ ಬದುಕಿಗೆ ಮಾತ್ರ ಅನ್ವಯವಾಗುತ್ತದೆ ಎಂಬುದನ್ನು ಒತ್ತಿ ಹೇಳುವ ಅಂಬೇಡ್ಕರ್, ಅದನ್ನು ಭೂತ ಮತ್ತು ಭವಿಷ್ಯದ ಜೀವನಕ್ಕೆ ಅನ್ವಯಿಸುವುದನ್ನು ತಿರಸ್ಕರಿಸುತ್ತಾರೆ. ‘ಕುರುಣೆಗೆ ಅಪಾರ ಮಹತ್ವ ನೀಡುವ ಬುದ್ಧ ಸಾಂಪ್ರದಾಯಿಕ ಕರ್ಮ ಸಿದ್ಧಾಂತದ ತರ್ಕವನ್ನು ಒಪ್ಪಲು ಸಾಧ್ಯವಿರಲಿಲ್ಲ’ ಎಂದು ಅವರು ವಾದಿಸುತ್ತಾರೆ.

‘ಆತ್ಮದ ಅಸ್ತಿತ್ವವನ್ನು ತಿರಸ್ಕರಿಸುವ ಬೌದ್ಧತತ್ವ ಪುನರ್ಜನ್ಮವನ್ನು ಏಕೆ ಒಪ್ಪುತ್ತದೆ’ ಎಂಬ ಪ್ರಶ್ನೆಯನ್ನೆತ್ತಿದ್ದ ಅಂಬೇಡ್ಕರ್ ಆತ್ಮವಿಲ್ಲದ ಪುನರ್ಜನ್ಮದ ಕಲ್ಪನೆಗೆ ತಮ್ಮದೇ ವಿವರಣೆ ನೀಡುತ್ತಾರೆ. ಮಾನವ ಶರೀರವು ಪೃಥ್ವಿ, ನೀರು, ಅಗ್ನಿ ಮತ್ತು ವಾಯು ಎಂಬ ನಾಲ್ಕು ಅಂಶಗಳಿಂದ ಮಾಡಿದ್ದಾಗಿದೆ ಎಂದು ಬುದ್ಧ ಹೇಳುತ್ತಾನೆ. ಮಾನವ ದೇಹ ಸತ್ತು ಹೋದಾಗ ಈ ನಾಲ್ಕು ಅಂಶಗಳು ಆಕಾಶದಲ್ಲಿ ತೇಲುತ್ತಿರುವ ಅದೇ ತರಹದ ಅಂಶಗಳೊಂದಿಗೆ ಸೇರಿಕೊಂಡು ಒಂದು ಹೊಸ ಹುಟ್ಟಿಗೆ ಕಾರಣವಾಗುತ್ತವೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಬುದ್ಧ ಪುನರ್ಜನ್ಮವೆಂದು ಕರೆದಿದ್ದು ಇದನ್ನೇ. ಈ ಅಂಶಗಳು ಒಂದೇ ದೇಹದಿಂದ ಬಾರದೇ ಬೇರೆ ಬೇರೆ ಮೃತ ದೇಹಗಳಿಂದ ಬಂದವುಗಳಾಗಿರಬಹುದು. ಅಂದರೆ ದೇಹವು ಸಾಯುತ್ತದೆ; ಆದರೆ ಅದರ ಅಂಶಗಳು ಉಳಿದುಕೊಂಡು ಹೊಸ ಹುಟ್ಟುಗಳಿಗೆ ಕಾರಣವಾಗುತ್ತವೆ. ಇದು ಹೊಸ ಹುಟ್ಟಷ್ಟೆ, ಸತ್ತುಹೋದ ವ್ಯಕ್ತಿಯ ಪುನರ್ಜನ್ಮವಲ್ಲ. ಮರುಹುಟ್ಟಿನ ಈ ವ್ಯಾಖ್ಯಾನವು ಯಾವುದೇ ಅತಿಮಾನುಷ ಅಂಶಗಳನ್ನು ಹೊಂದದೆ ಇರುವುದರಿಂದ ವಿಜ್ಞಾನದ ತತ್ವಗಳಿಗೆ ಅನುಗುಣವಾಗಿದೆ. ಶಕ್ತಿಯನ್ನು ಸೃಷ್ಟಿಮಾಡಲಾಗಲೀ ನಾಶಪಡಿಸಲಾಗಲೀ ಸಾಧ್ಯವಿಲ್ಲವೆನ್ನುವ ಮತ್ತು ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಮಾರ್ಪಡಿಸಬಹುದಷ್ಟೆ ಎಂದು ಹೇಳುವ ಭೌತಶಾಸ್ತ್ರ ಹಾಗೂ ರಾಸಾಯಶಾಸ್ತ್ರದ ಶಕ್ತಿ ಸಂರಕ್ಷಣಾ ನಿಯಮಕ್ಕೆ ಈ ವ್ಯಾಖ್ಯಾನವು ಸಮಂಜಸವಾಗಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ.

ಬಿಕ್ಕುಗಳು ಸಮಾಜ ಸೇವಕರು

ಅಂಬೇಡ್ಕರ್ ಅವರ ಪ್ರಕಾರ ಬುದ್ಧನು ಬಿಕ್ಕು ಪರಿಪೂರ್ಣ ಮನುಷ್ಯನಾಗಿರುವುದಕ್ಕಿಂತಲೂ ಸಾಮಾಜಿಕ ಸೇವಕನಾಗಿ ಕೆಲಸಮಾಡಬೇಕೆಂದು ಅಪೇಕ್ಷಿಸುತ್ತಾನೆ. ಬಿಕ್ಕು ಯವುದೇ ಜಾತಿಗೆ ಸೇರಿದವನಲ್ಲ, ತಪಸ್ವಿಯೂ ಅಲ್ಲ ಮತ್ತು ಅವನ ತಪ್ಪು ನಡತೆ ಶಿಕ್ಷಾರ್ಹ. ಆತ ಬುದ್ಧನ ಆದರ್ಶ ಸಮಾಜದ ದೀವಟಿಗೆ ಹಿಡಿದ ಮಾರ್ಗದರ್ಶಕ. ಬಿಕ್ಕು ಪ್ರಜ್ಞಾವಂತನಾಗಿ ಸ್ವ-ಸಂಸ್ಕೃತಿಯನ್ನು ಆಚರಿಸಬೇಕು ಮತ್ತು ಜನರ ಸೇವೆಗಾಗಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಅವರ ಸ್ನೇಹಿತನಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕನಾಗಿ ಕೆಲಸಮಾಡಬೇಕು. ಪರಿಪೂರ್ಣ ಮನುಷ್ಯನಾಗಿರುವ ಬಿಕ್ಕು ತನ್ನಷ್ಟಕ್ಕೆ ತಾನಿದ್ದರೆ ಸ್ವಾರ್ಥಿಯಾಗುತ್ತಾನೆ ಮತ್ತು ಆತ ಬೌದ್ಧ ಧಮ್ಮದ ತತ್ವಗಳನ್ನು ಎಲ್ಲವರ್ಗದ ಜನರಿಗೆ ತಲುಪಿಸುವಲ್ಲಿ ವಿಫಲನಾಗುತ್ತಾನೆ. ಮನುಕುಲದ ಕಷ್ಟಗಳ ಬಗ್ಗೆ ಅನಾದಾರ ತೋರಿದ ಬಿಕ್ಕು ಎಷ್ಟೇ ಪರಿಪೂರ್ಣನಾಗಿದ್ದರೂ ನಿಜವಾದ ಬಿಕ್ಕುವಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ.

18 2

ಬಿಕ್ಕು ಕೇವಲ ಧಮ್ಮದ ಉಪದೇಶಕನಾಗದೆ ಉಪಾಸಕರಿಗೆ ಮತ್ತು ಸಾಮಾನ್ಯ ಜನರಿಗೆ ಉತ್ತಮ ನೈತಿಕ ಚಾರಿತ್ರ್ಯದ ಮಾದರಿಯಾಗಬೇಕು, ಕಠಿಣ ನಿಯಮಗಳನ್ನು ಮತ್ತು ನೈತಿಕ ನಡವಳಿಕೆಯನ್ನು ಪಾಲಿಸಬೇಕು ಎಂದು ಬುದ್ಧ ಬಿಕ್ಕುಗಳಿಗೆ ಕರೆ ನೀಡುತ್ತಾನೆ. ಸಂಘವು ಸಮಾಜಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಕಾರಣಕ್ಕೆ ‘ವಿನಯ’ ಎಂದು ಕರೆಯುವ ಶಿಸ್ತಿನ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಾನೆ. ಅಂಬೇಡ್ಕರ್ ಅವರಿಗೆ ಸಾಮಾನ್ಯ ಜನರೊಂದಿಗಿನ ಬಿಕ್ಕುಗಳ ಸಾಮಾಜಿಕ ಸಂಬಂಧ ಅತ್ಯಂತ ಮಹತ್ವದ್ದಾಗಿ ಕಂಡಿತ್ತು. ಏಕೆಂದರೆ ಬುದ್ಧನ ಸಾಮಾಜಿಕ ಸಂದೇಶವನ್ನು ಪ್ರಚಾರ ಮಾಡುವುದರಲ್ಲಿ ಮತ್ತು ಸಮಾಜವೊಂದನ್ನು ಬಲವಾದ ನೈತಿಕ ಮೌಲ್ಯಗಳ ಆಧಾರದ ಮೇಲೆ ನಿರ್ಮಿಸುವಲ್ಲಿ ಅವರ ಪಾತ್ರ ಹಿರಿದಾಗಿತ್ತು.

ಸಂಪ್ರದಾಯವಾದಿ ‘ಧರ್ಮ’ ಮತ್ತು ವಿವೇಚನಾಶೀಲ ‘ಧಮ್ಮ’

ಪುಸ್ತಕದ ನಾಲ್ಕನೇ ಪರ್ವದಲ್ಲಿ ಧರ್ಮ ಮತ್ತು ಧಮ್ಮದ ನಡುವಿನ ವ್ಯತ್ಯಾಸವನ್ನು ಚರ್ಚಿಸುವ ಸಂದರ್ಭದಲ್ಲಿ ‘ಧರ್ಮ’ ಎಂಬ ಶಬ್ದವನ್ನು ‘ಹಿಂದೂ ಧರ್ಮ’ದ ತತ್ಸಮಾನ ಶಬ್ದವಾಗಿ ಬಳಸುತ್ತಾರೆ. ಬೇರೆಡೆಯಲ್ಲಿ ಆ ಶಬ್ದವನ್ನು ಸಾಮಾನ್ಯವಾಗಿ ‘ಧರ್ಮ’ ಎಂಬ ಅರ್ಥದಲ್ಲಿ ಉಪಯೋಗಿಸುತ್ತಾರೆ. ಧರ್ಮ ಏನನ್ನು ಸೂಚಿಸುತ್ತದೆ ಎಂಬುದನ್ನು ಸರಳವಾಗಿ ಹೀಗೆ ಹೇಳುತ್ತಾರೆ: ‘ದೇವರಲ್ಲಿ ನಂಬಿಕೆ, ಆತ್ಮದಲ್ಲಿ ನಂಬಿಕೆ, ದೇವರ ಆರಾಧನೆ, ಭ್ರಷ್ಟ ಆತ್ಮವನ್ನು ಶುದ್ಧಗೊಳಿಸುವುದು, ಪ್ರಾರ್ಥನೆಗಳು, ಆಚರಣೆಗಳು ಮತ್ತು ಬಲಿಗಳ ಮೂಲಕ ದೇವರನ್ನು ಒಲಿಸಿಕೊಳ್ಳವುದು.’

ಇದನ್ನೂ ಓದಿರಿ: ‘ವೀಸಾಗಾಗಿ ಕಾಯುತ್ತಾ’: ಬಾಬಾಸಾಹೇಬರು ಬಿಚ್ಚಿಟ್ಟ ಭಾರತದ ಅಸಲಿ ಮುಖ (ಭಾಗ-2)

ಬಡವರು ಮತ್ತು ದಮನಿತರು ತಾವು ಎಷ್ಟೇ ಕಷ್ಟದಲ್ಲಿದ್ದರೂ ವೈಯಕ್ತಿಕ ಸಂತೋಷವನ್ನು ಸಾಧಿಸಬಹುದೆಂಬ ನಂಬಿಕೆಯನ್ನು ಹುಟ್ಟುಹಾಕುವ ಹಿಂದೂ ಧರ್ಮಕ್ಕಿಂತಲೂ ಬಡತನ ಮತ್ತು ಅನ್ಯಾಯವನ್ನು ಸೃಷ್ಟಿಸುವ ಸಾಮಾಜಿಕ ಪರಿಸ್ಥಿತಿಗಳನ್ನು ಬದಲು ಮಾಡಬಹುದೆಂಬ ಭರವಸೆಯನ್ನು ನೀಡುವ ಬೌದ್ಧ ಧಮ್ಮ ಹೆಚ್ಚು ಪ್ರಾಮಾಣಿಕವಾದುದು ಎಂದು ಅಂಬೇಡ್ಕರ್ ಹೇಳುತ್ತಾರೆ.

ಬುದ್ಧನ ಧಮ್ಮ ದೇವರು, ಆತ್ಮ ಮತ್ತು ಜೀವದ ಮರಣೋತ್ತರ ಅಸ್ತಿತ್ವವನ್ನು ತಿರಸ್ಕರಿಸುತ್ತದೆ. ಅಲ್ಲದೆ ಶಾಸ್ತ್ರಗಳಿಗೆ, ವ್ರತಾಚರಣೆಗಳಿಗೆ ಗಮನ ನೀಡುವುದಿಲ್ಲ. ಧರ್ಮವು ವೈಯಕ್ತಿಕ ನಂಬಿಕೆಯಾಗಿದ್ದರೆ ಅದಕ್ಕೆ ತದ್ವಿರುದ್ಧವಾದ ಧಮ್ಮವು ಮೂಲಭೂತವಾಗಿ ಸಾಮಾಜಿಕವಾದುದು. ‘ಇಬ್ಬರು ವ್ಯಕ್ತಿಗಳು ಪರಸ್ಪರ ಬದುಕಬೇಕಾದರೆ ಅವರಿಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಅವರು ಧಮ್ಮಕ್ಕೆ ಸ್ಥಾನ ನೀಡಲೇಬೇಕು, ಯಾರೊಬ್ಬರೂ ಅದರಿಂದ ತಪ್ಪಿಸಿಕೊಳ್ಳಲಾಗದು’ ಎಂದು ಅಂಬೇಡ್ಕರ್ ಹೇಳುತ್ತಾರೆ. ‘ಧರ್ಮದ ಉದ್ದೇಶ ಈ ಜಗತ್ತಿನ ಉಗಮವನ್ನು ವಿವರಿಸುವುದಾಗಿದೆ, ಆದರೆ ಸಾಮಾಜಿಕ ಬೋಧನೆಯಾಗಿರುವ ಧಮ್ಮದ ಉದ್ದೇಶ ಜಗತ್ತನ್ನು ಮರುನಿರ್ಮಾಣ ಮಾಡುವುದಾಗಿದೆ.’

ಬೇರೆಯ ಧರ್ಮಗಳು ದೇವರು, ಆತ್ಮ ಮತ್ತು ಮರಣೋತ್ತರ ಜೀವನ ಮುಂತಾದ ಕಲ್ಪನೆಗಳಿಂದ ತುಂಬಿಹೋಗಿದ್ದರೆ, ಬೌದ್ಧ ಧಮ್ಮವು ಪ್ರಜ್ಞೆ, ಕರುಣೆ ಮತ್ತು ಸಮತೆಯ ತತ್ವಗಳನ್ನು ನೀಡಿದೆ ಎಂದು ಅಂಬೇಡ್ಕರ್ ಹೇಳುತ್ತಾರೆ. ನವಯಾನ ಬೌದ್ಧ ಸಿದ್ಧಾಂತವನ್ನು ರೂಪಿಸುವ ಸಂದರ್ಭದಲ್ಲಿ ವೈಚಾರಿಕ, ನೈತಿಕ, ಸಾರ್ವತ್ರಿಕ ಮತ್ತು ಜಾತ್ಯತೀತ ಧರ್ಮವೊಂದು ಬೇಕೆನ್ನುವ ನಿರ್ಧಾರಕ್ಕೆ ಅವರು ಬಂದಿದ್ದರು. ಧಮ್ಮವು ಸಾಮಾಜಿಕ ಅಂತಃಸಾಕ್ಷಿಯ ಮಾರ್ಗದರ್ಶಕ ತತ್ವವಾಗಬಹುದು ಎಂದು ಅವರಿಗನಿಸಿತ್ತು. ಯಾವುದು ಧಮ್ಮವಲ್ಲ ಎಂಬುದನ್ನು ಅಂಬೇಡ್ಕರ್ ವಿವರಿಸುತ್ತಾರೆ: ‘ಅಲೌಖಿಕ ಶಕ್ತಿಯನ್ನು ನಂಬುವುದು ಧಮ್ಮವಲ್ಲ, ದೇವರನ್ನು ನಂಬುವುದು ಧಮ್ಮವಲ್ಲ. ಬ್ರಹ್ಮನೊಂದಿಗೆ ಐಕ್ಯವಾಗುವುದರ ಮೇಲೆ ಅವಲಂಬಿತವಾಗಿರುವ ಧಮ್ಮ ಸುಳ್ಳು ಧಮ್ಮ. ಆತ್ಮದಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ. ಬಲಿ ಕೊಡುವುದರಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ. ಧಮ್ಮದ ಮೇಲೆ ಪುಸ್ತಕಗಳನ್ನು ಓದುವುದು ಧಮ್ಮವಲ್ಲ ಮತ್ತು ಧಮ್ಮದ ಮೇಲಿನ ಗ್ರಂಥಗಳು ಎಂದೂ ಸುಳ್ಳಾಗುವುದಿಲ್ಲ ಎಂದು ನಂಬುವುದು ಧಮ್ಮವಲ್ಲ.’ ಧಮ್ಮವು ಸುಧಮ್ಮವಾಗಬೇಕಾದರೆ ಅದು ಪ್ರಜ್ಞೆ, ಮೈತ್ರಿ ಮತ್ತು ಕರುಣೆಯನ್ನು ಪೋಷಿಸಬೇಕು. ಧಮ್ಮವು ನೈತಿಕತೆಯನ್ನು ತರ್ಕಾತೀತ ನೆಲೆಯಲ್ಲಿ ಗುರುತಿಸುವುದಿಲ್ಲ. ಧಮ್ಮವೆಂದರೆ ಅಂಧಭಕ್ತಿ ಮತ್ತು ಮೌಢ್ಯವನ್ನು ತಿರಸ್ಕರಿಸಿ ಮನುಷ್ಯರ ನಡುವೆ ಪಾರಸ್ಪರಿಕ ಸಂಬಂಧವನ್ನು ನಿಯಂತ್ರಿಸುವ ನೈತಿಕತೆಯಾಗಿದೆ. ಜನರು ಕುರುಡು ಶಿಷ್ಯರಾಗುವುದನ್ನು ಬುದ್ಧ ಇಷ್ಟಪಡಲಿಲ್ಲ ಎಂಬುದನ್ನು ಅಂಬೇಡ್ಕರ್ ಒತ್ತಿ ಹೇಳಲು ಇಚ್ಛೆಪಡುತ್ತಿದ್ದರು ಏಕೆಂದರೆ ಅವರಿಗೆ ಬೇಕಾಗಿದ್ದು ಅನುಯಾಯಿಗಳೇ ಹೊರತು ಆರಾಧಕರಲ್ಲ.

ದೇವರ ಅಸ್ತಿತ್ವದ ನಿರಾಕರಣವನ್ನು ಹಲವು ಬಾರಿ ಚರ್ಚಿಸುತ್ತಾರೆ. ಧಮ್ಮದ ಪ್ರಕಾರ ಈ ಜಗತ್ತು ಬ್ರಹ್ಮನ ಸೃಷ್ಟಿ ಅಲ್ಲ. ಕಾರಣವಿಲ್ಲದೆ ಯಾವುದೂ ಅಸ್ತಿತ್ವದಲ್ಲಿರುವುದಿಲ್ಲ. ಎಲ್ಲದಕ್ಕೂ ಕಾರ್ಯಕಾರಣ ಸಂಬಂಧವಿದೆ. ಯಾವುದೂ ದೇವರ ಸೃಷ್ಟಿಯಲ್ಲ. ‘ದೇವರು ಶೂನ್ಯದಿಂದ ಏನಾದರೊಂದನ್ನು ಸೃಷ್ಟಿಸಿದನೇ ಅಥವಾ ಏನಾದರೊಂದನ್ನು ಮತ್ತೊಂದರಿಂದ ಸೃಷ್ಟಿಸಿದನೇ?’ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ‘ದೇವರು ಒಂದರಿಂದ ಇನ್ನೊಂದನ್ನು ಸೃಷ್ಟಿಸಿದ್ದಾನೆ ಎಂದುಕೊಂಡರೂ ಆ ಒಂದು ಇನ್ನೊಂದನ್ನು ಸೃಷ್ಟಿಸುವ ಮೊದಲೇ ಅಸ್ತಿತ್ವದಲ್ಲಿತ್ತು ಎಂದಾಯಿತು. ಎಲ್ಲ ಮನುಷ್ಯರೂ ಬ್ರಹ್ಮನ ಸೃಷ್ಟಿಯಾಗಿದ್ದರೆ, ಅವನೇ ಅವರ ಕಲ್ಯಾಣವನ್ನು ನೋಡಿಕೊಳ್ಳಬೇಕಾಗಿತ್ತಲ್ಲವೆ? ಈಶ್ವರನೇ ಎಲ್ಲವನ್ನೂ ಸೃಷ್ಟಿ ಮಾಡಿದ ಎಂದ ಮೇಲೆ ಎಲ್ಲ ಕಷ್ಟ ದುಃಖಗಳಿಗೆ ಅವನೇ ಕಾರಣವಲ್ಲವೆ?’ ಎಂದು ಬುದ್ಧ ಕೇಳುತ್ತಾನೆ.

ವೇದಗಳು ಪವಿತ್ರ, ಅಂತಿಮ, ದೋಷಾತೀತ ಅಧಿಕಾರಯುತ ವಾಣಿಗಳೆಂಬ ವಾದವನ್ನು ‘ತೆವಿಜ್ಜಸುತ್ತ’ದಲ್ಲಿ ತಿರಸ್ಕರಿಸುವ ಬುದ್ಧ, ‘ಅವುಗಳು ನೀರಿಲ್ಲದ ಮರಳುಗಾಡುಗಳು, ದಾರಿಯೇ ಇಲ್ಲದ ಗೊಂಡಾರಣ್ಯ ಮತ್ತು ಆತ್ಮನಾಶಕ’ ಎಂದು ಹೇಳುತ್ತಾನೆ. ಆ ವಾದವನ್ನು ಮುಂದುವರೆಸುವ ಅಂಬೇಡ್ಕರ್, ‘ಬೌದ್ಧಿಕ ಮತ್ತು ನೈತಿಕ ದಾಹವಿರುವವರು ಯಾರೇ ಆದರೂ ತಮ್ಮ ದಾಹವನ್ನು ತೀರಿಸಿಕೊಳ್ಳಲು ವೇದಗಳ ಮೊರೆ ಹೋಗಲಾರ’ ಎನ್ನುತ್ತಾರೆ. ವೇದಗಳು ದೋಷಾತೀತ ಎಂದು ನಂಬುವುದು ಧಮ್ಮವಲ್ಲ. ಧಮ್ಮವೆಂದರೆ ಬೇರೊಬ್ಬರು ಹೇಳಿದಂತೆ ನಡೆಯುವುದನ್ನು ಬಿಟ್ಟು ತನ್ನನ್ನೇ ತಾನು ತಿಳಿದುಕೊಳ್ಳುವುದು.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)

ಜನರು ತನ್ನ ಮಾರ್ಗದಲ್ಲಿ ನಡೆಯಬೇಕೆಂದು ಬುದ್ಧ ಹೇಳುತ್ತಾನಾದರೂ ತನ್ನಲ್ಲಿ ನಂಬಿಕೆ ಇಡುವುದನ್ನು ನಿಷೇಧಿಸುತ್ತಾನೆ. ಜನರು ವಿಮರ್ಶಾತ್ಮಕ ಜ್ಞಾನವನ್ನು ಬಳಸಿಕೊಂಡು ಅವರದೇ ಸಾಮರ್ಥ್ಯದಲ್ಲಿ, ವೈಚಾರಿಕತೆಯಲ್ಲಿ ಮತ್ತು ವೈಜ್ಞಾನಿಕ ತರ್ಕದಲ್ಲಿ ನಂಬಿಕೆ ಇಡಬೇಕೆಂದು ಹೇಳುತ್ತಾನೆ. ‘ನಾನು ಮೋಕ್ಷದಾತನಲ್ಲ, ಮಾರ್ಗದಾತ’ ಮಾತ್ರ ಎಂದು ಹೇಳುವ ಬುದ್ಧ ಸ್ವಪ್ರಯತ್ನದಿಂದ ಮತ್ತು ಸ್ವಶಕ್ತಿಯಿಂದ ಮಾತ್ರ ಎಲ್ಲ ಆವೇಶಗಳಿಂದ ಮುಕ್ತವಾಗಿ ನಿಬ್ಬಾಣವನ್ನು ಸಾಧಿಸಬಹುದೆಂದು ಹೇಳುತ್ತಾನೆ. ಅಂಬೇಡ್ಕರ್ ಪ್ರಕಾರ ಬೌದ್ಧ ಧಮ್ಮವು ಧರ್ಮವಲ್ಲ, ಅದಕ್ಕಿಂತಲೂ ಶ್ರೇಷ್ಠವಾದದ್ದು. ಧಮ್ಮದ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಐಕ್ಯಮತ್ಯ, ಭ್ರಾತೃತ್ವ ಮತ್ತು ಕರುಣೆಯ ತತ್ವಗಳು ಹಿಂದೂ ಧರ್ಮದ ಜಾತಿ ಆಧಾರಿತ ಶ್ರೇಣೀಕೃತ ಸಮಾಜದ ಕಟ್ಟುಪಾಡುಗಳಿಗೆ ವಿರುದ್ಧವಾಗಿವೆ. ಅಸಮಾನ ಸಾಮಾಜಿಕ ವ್ಯವಸ್ಥೆಯು ಹಿಂದೂಧರ್ಮದ ತಳಪಾಯವಾಗಿರುವುದರಿಂದ ಬುದ್ಧನ ವೈಚಾರಿಕತೆ ಮಾತ್ರ ಸಮಸಮಾಜದ ನಿರ್ಮಾಣಕ್ಕೆ ಸಹಾಯಕವಾಗಬಲ್ಲದು.

23 3
ಬುದ್ಧ ಮತ್ತು ಬಿಕ್ಕುಗಳು (ಸಾಂದರ್ಭಿಕ ಚಿತ್ರ)

ಸುಧಮ್ಮವನ್ನು ವಿವರಿಸುತ್ತಾ ಅಂಬೇಡ್ಕರ್ ಅವರು ‘ದುಃಖ ಜನರ ನಡುವಿನ ಅಸಮಾನತೆಯ ಫಲವಾಗಿರುವುದರಿಂದ ನ್ಯಾಯಸಮ್ಮತ ನಡೆ ಮಾತ್ರ ದುಃಖವನ್ನು ಹೋಗಲಾಡಿಸಬಹುದು. ಧಮ್ಮವು ಸುಧಮ್ಮವಾಗಬೇಕಾದರೆ ಮನುಷ್ಯ ಮನುಷ್ಯನ ನಡುವಿನ ಎಲ್ಲ ಸಾಮಾಜಿಕ ಬೇಲಿಗಳನ್ನು ಮುರಿದುಹಾಕಬೇಕು ಮತ್ತು ಸಮಾನತೆಯನ್ನು ಬೆಳೆಸಬೇಕು’ ಎಂದು ವಾದಿಸುತ್ತಾರೆ.

ನೈತಿಕತೆಯೇ ದೇವರು

ಸಮಾಜಶಾಸ್ತ್ರಜ್ಞ ಎಮಿಲ್ ಡುರ್ಕೈಮ್ ಹೇಳಿದಂತೆ ಅಂಬೇಡ್ಕರ್ ಕೂಡ ನೈತಿಕ ಸಂಹಿತೆ ಧರ್ಮದ ಅತ್ಯಗತ್ಯ ಅಂಶವೆಂದೂ ಮತ್ತು ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಅದು ಮಾಡುತ್ತದೆ ಎಂದು ವಾದಿಸುತ್ತಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸಲು ಸಮಾಜವೊಂದಕ್ಕೆ ನೈತಿಕ ಬುನಾದಿಯ ಅಗತ್ಯವಿದ್ದು ಅಂತಹ ನೈತಿಕತೆಯನ್ನು ಧರ್ಮ ನೀಡಬಲ್ಲದು ಎಂಬುದು ಅವರ ಸೈದ್ಧಾಂತಿಕ ನಿಲುವಾಗಿತ್ತು. ಧರ್ಮವೆಂಬುದು ಜನಸಮೂಹಗಳ ಅಫೀಮು ಎಂಬ ಕಾರ್ಲ್ ಮಾರ್ಕ್ಸ್‌ ನಿರೂಪಣೆಯನ್ನು ಅಂಬೇಡ್ಕರ್ ಒಪ್ಪಲಿಲ್ಲ. ಮಾನವ ಸಮಾಜದಲ್ಲಿ ಧರ್ಮದ ಪ್ರಗತಿಪರ ಮತ್ತು ರಚನಾತ್ಮಕ ಸಾಧ್ಯತೆಗಳ ಬಗ್ಗೆ ಅವರು ಭರವಸೆ ಹೊಂದಿದ್ದರು.

ಮೂಢನಂಬಿಕೆಯ ಬದಲು ವೈಚಾರಿಕತೆಯಲ್ಲಿ ನಂಬಿಕೆ, ಚಾತುರ್ವರ್ಣ ವ್ಯವಸ್ಥೆಯ ತಿರಸ್ಕಾರ ಮತ್ತು ನೈತಿಕತೆ ಎಂಬುದು ಆತ್ಮ ಹಾಗೂ ಪರಮಾತ್ಮನಿಗೆ ಸಂಬಂಧವಿರದ ಮೂಲಭೂತ ಮಾನವೀಯ ಮೌಲ್ಯ ಎಂದು ಒತ್ತಿ ಹೇಳಿದ ಬೌದ್ಧ ತತ್ವಗಳು ಅಂಬೇಡ್ಕರ್ ಅವರನ್ನು ಆಕರ್ಷಿಸಿದ್ದವು. ಅವರ ಪ್ರಕಾರ ಇತರ ಧರ್ಮಗಳು ನೈತಿಕತೆಯನ್ನು ಉಪದೇಶಿಸುತ್ತವೆ, ಆದರೆ ನೈತಿಕತೆಯೇ ಅವುಗಳ ಮೂಲವಲ್ಲ. ಅದು ಸಂದರ್ಭಕ್ಕೆ ತಕ್ಕಂತೆ ಸೇರಿಸುವ ಮತ್ತು ಕಳಚಿಬಿಡುವ ಸಾಮಾನು ಬಂಡಿ. ಅವರ ಪ್ರಕಾರ ನೈತಿಕತೆಯೇ ಧರ್ಮದ ಬೇರು ಮತ್ತು ತಿರುಳು. ಧಮ್ಮದಲ್ಲಿ ದೇವರಿಲ್ಲದಿದ್ದರೂ ನೈತಿಕತೆಗೆ ದೇವರ ಸ್ಥಾನ ನೀಡಲಾಗಿದೆ. ಈಶ್ವರವಾದಿ ಧರ್ಮಗಳು ನೈತಿಕತೆಯನ್ನು ಕರ್ಮಸಿದ್ಧಾಂತದ ನೆಲೆಯಲ್ಲಿ ಸಮರ್ಥಿಸುತ್ತವೆ. ಅದರ ಪ್ರಕಾರ ಉತ್ತಮ ಅಥವಾ ಕೆಟ್ಟ ಕೆಲಸಗಳು ಸುಖಕರ ಅಥವಾ ಯಾತನಾಮಯ ಪರಿಣಾಮಗಳಿಗೆ ಕಾರಣವಾಗುತ್ತವೆ. ಆದರೆ ಅಂಬೇಡ್ಕರ್ ಅವರು ನೈತಿಕತೆಯನ್ನು ಸಾರ್ವತ್ರಿಕ ತರ್ಕಬದ್ಧವಾದದ ನೆಲೆಯಲ್ಲಿ ಸಮರ್ಥಿಸುತ್ತಾರೆ.

ಜಾತಿ ನಿರ್ಮೂಲನೆ, ಸಾಮಾಜಿಕ ಪುನರ್‌ರಚನೆ, ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನೊಳಗೊಂಡ ಜಾತಿರಹಿತ ಆಧುನಿಕ ಹಾಗೂ ಪ್ರಗತಿಪರ ಸಮಾಜವನ್ನು ಮರುನಿರ್ಮಿಸಲು ಅಂಬೇಡ್ಕರ್ ಅವರು ನಡೆಸಿದ ದಶಕಗಳ ಹೋರಾಟದ ಹಿನ್ನೆಲೆಯಲ್ಲಿ ಅವರ ಬೌದ್ಧಧರ್ಮದ ಅಧ್ಯಯನವನ್ನು ನೋಡಬೇಕಾಗಿದೆ. ಅಂಬೇಡ್ಕರ್ ಅವರ ಆಧುನಿಕ ಧರ್ಮದ ಪರಿಕಲ್ಪನೆಯನ್ನು ಅವರ ಗುರುಗಳಾದ ಜಾನ್ ಡೀವಿಯವರ ‘ಜಾತ್ಯತೀತ ಧರ್ಮ’ದ ಕಲ್ಪನೆಗೆ ಹೋಲಿಸಬಹುದಾಗಿದೆ. ಪ್ರಜಾಸತ್ತೆ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ಧರ್ಮವೊಂದರ ನಿರ್ಮಾಣದ ಅಗತ್ಯವನ್ನು ಮುನ್ನೆಲೆಗೆ ತಂದ ಈ ಇಬ್ಬರು ಚಿಂತಕರ ದಾರಿಗಳು ಮಾತ್ರ ಭಿನ್ನವಾಗಿದ್ದವು. ಜಾನ್ ಡೀವಿಯವರದ್ದು ತನ್ನದೇ ಧಾರ್ಮಿಕ ಪರಿಭಾಷೆ ಮತ್ತು ಸಾಂಸ್ಥಿಕ ಸ್ವರೂಪವಿಲ್ಲದ ನಾಗರಿಕ ಧರ್ಮದ ಕಲ್ಪನೆಯಾಗಿದ್ದರೆ ಅಂಬೇಡ್ಕರ್ ಅವರದ್ದು ಪ್ರಾಚೀನ ಧರ್ಮವೊಂದನ್ನು ತಮ್ಮದೇ ಅನ್ವೇಷಣೆಯ ಮೂಲಕ ವ್ಯಾಖ್ಯಾನಿಸಿ ಅದನ್ನು ಸಾಮಾಜಿಕ ನೈತಿಕತೆಯ ನೆಲೆಯಲ್ಲಿ ಮರುನಿರ್ಮಾಣ ಮಾಡುವ ಯೋಜನೆ. ಹೊಸ ಸಮಾಜವೊಂದರ ನಿರ್ಮಾಣಕ್ಕೆ ಪ್ರಜಾಸತ್ತಾತ್ಮಕ ಗುಣವುಳ್ಳ ಬೌದ್ಧಧರ್ಮವು ನೀಡಿದ ಸಾಮಾಜಿಕ ನೈತಿಕತೆ ಸಾರ್ವತ್ರಿಕವಾದದ್ದು ಎಂಬುದು ಅವರ ನಂಬುಗೆಯಾಗಿತ್ತು. ಬುದ್ಧ ತನ್ನ ಸಂದೇಶ ದೋಷಾತೀತವೆಂದು ಹೇಳಿಕೊಳ್ಳದೆ ಅದನ್ನು ಪರೀಕ್ಷಿಸುವ ಮತ್ತು ಪ್ರಶ್ನಿಸುವ ಸವಾಲನ್ನು ಆಹ್ವಾನಿಸಿದ್ದ. ಬೌದ್ಧಧರ್ಮವು ಒಂದು ಧರ್ಮ ಎನ್ನುವುದಕ್ಕಿಂದಲೂ ಹೆಚ್ಚಾಗಿ ನೈತಿಕತೆ ಮತ್ತು ವೈಜ್ಞಾನಿಕ ನೆಲೆಯ ಮೇಲೆ ನಿಂತ ಸಾಮಾಜಿಕ ತತ್ವವಾಗಿತ್ತು.

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 2)

ಬೌದ್ಧಧರ್ಮವು ದೇಹ, ಮಾತು ಮತ್ತು ಮನಸ್ಸನ್ನು ಶುದ್ಧಗೊಳಿಸುವ ಮತ್ತು ನಿಬ್ಬಾಣವನ್ನು ಪಡೆಯುವ ಒಂದು ಸಾಮಾಜಿಕ ಸಂಸ್ಥೆಯಷ್ಟೇ ಅಲ್ಲದೆ ವೈಯಕ್ತಿಕ ಅಸ್ಮಿತೆಯ ಭಾಗವಾದ ವ್ಯಕ್ತಿಗತ ನೈತಿಕತೆಯೂ ಆಗಿತ್ತು. ಅಂಬೇಡ್ಕರ್ ಅವರ ಅನುಶೋಧವೆಂದರೆ ಬುದ್ಧಧರ್ಮವನ್ನು ಜಾತ್ಯತೀತ ಮತ್ತು ಸಂಪ್ರದಾಯ ವಿರೋಧಿ ಧರ್ಮವನ್ನಾಗಿ ಕಂಡುಕೊಂಡಿದ್ದು. ಬೌದ್ಧಧರ್ಮ ಮಾತ್ರ ಸಾರ್ವತ್ರಿಕ ನೈತಿಕ ನಿಯಮಗಳನ್ನು ಪ್ರತಿಷ್ಠಾಪಿಸಬಲ್ಲದು ಮತ್ತು ಜಗತ್ತಿನ ಮರುನಿರ್ಮಾಣಕ್ಕೆ ಪರಿಹಾರಗಳನ್ನು ನೀಡಬಲ್ಲದು ಎಂಬುದು ಅವರ ನಂಬಿಕೆಯಾಗಿತ್ತು.

ಆಧುನಿಕ ಸಮಾಜದ ಮೌಲ್ಯಗಳನ್ನು ಮಾನವನ ಸಾಮುದಾಯಿಕ ಜೀವನದ ನಿರಂತರ ಹುಡುಕಾಟದೊಂದಿಗೆ ಬೆಸೆಯುವ ಪ್ರಯತ್ನವನ್ನು ಅಂಬೇಡ್ಕರ್ ಮಾಡುತ್ತಾರೆ. ಹಾಗೆಯೇ ಬುದ್ಧನ ದುಃಖ ಮುಕ್ತಿ ಮಾರ್ಗವನ್ನು ಮಾರ್ಕ್ಸ್ ಶೋಷಣಾಮುಕ್ತ ಸಮಾಜದ ಯೋಜನೆಯೊಂದಿಗೆ ಬೆಸೆದು ಜಾತಿ ಮತ್ತು ವರ್ಗ ಅಸಮಾನತೆಗಳನ್ನು ನಿರ್ಮೂಲನೆ ಮಾಡುವ ಮಾರ್ಗಗಳನ್ನು ತೋರಿಸುತ್ತಾರೆ. ಕೆಳಸ್ತರದವರನ್ನು ಸಾಮಾಜಿಕ ದಬ್ಬಾಳಿಕೆಯಿಂದ ಬಿಡುಗಡೆಗೊಳಿಸುವ ಮೂಲಕ ಅಸ್ಪೃಶ್ಯರು ಮತ್ತು ಸವರ್ಣೀಯರ ನಡುವಿನ ಸಾಮಾಜಿಕ ಸಂಘರ್ಷದ ಸಮಸ್ಯೆಯನ್ನು ಪರಿಹರಿಸುವ ಉದ್ದೇಶ ಈ ಪುಸ್ತಕಕ್ಕಿದೆ.

ಅಂಬೇಡ್ಕರ್ ಅವರು ಬೌದ್ಧಧರ್ಮಕ್ಕೆ ನೀಡಿದ ನವವ್ಯಾಖ್ಯಾನ ಮುಕ್ತ ಸಮಾಜದ ಹಾಗೂ ಸ್ವಾಭಿಮಾನಿ ದೇಶದ ಕನಸುಗಳಿಗೆ ಸ್ಫೂರ್ತಿ ನೀಡಬಲ್ಲದು. ಧಾರ್ಮಿಕ ಮತೀಯವಾದ ಮತ್ತು ಮೂಲಭೂತವಾದ ಭಾರತೀಯ ಸಮುದಾಯಗಳ ನಡುವೆ ದ್ವೇಷವನ್ನು ಬೆಳೆಸುತ್ತಿರುವ ಈ ಸಂದರ್ಭದಲ್ಲಿ ಬೌದ್ಧ ತತ್ವಗಳು ಹೆಚ್ಚು ಪ್ರಸ್ತುತವಾಗಿವೆ. ಆಧುನಿಕತೆ, ಸಮಾನತೆ ಮತ್ತು ಧರ್ಮನಿರಪೇಕ್ಷತೆಯ ತತ್ವಗಳ ಆಧಾರದ ಮೇಲೆ ನಾಗರಿಕ ಸಮಾಜವನ್ನು ಕಟ್ಟುವ ಹಾಗೂ ಜಗತ್ತನ್ನು ಮರುನಿರ್ಮಾಣ ಮಾಡುವ ಮಾರ್ಗಗಳನ್ನು ಅಂಬೇಡ್ಕರ್ ಓದುಗರಿಗೆ ತೋರಿಸಿದ್ದಾರೆ. ಬುದ್ಧನ ಜೀವನ ಮತ್ತು ಬೋಧನೆಯನ್ನು ಸಮಗ್ರವಾಗಿ ತಿಳಿದುಕೊಳ್ಳ ಬಯಸುವವರು ಅವಶ್ಯಕವಾಗಿ ಓದಲೇಬೇಕಾದ ಪುಸ್ತಕ ಇದು.

poornanada
ಪ್ರೊ.ಡಿ.ಎಸ್. ಪೂರ್ಣಾನಂದ
+ posts

ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ.ಡಿ.ಎಸ್. ಪೂರ್ಣಾನಂದ
ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...