ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಬರೆಹ ಮತ್ತು ಭಾಷಣಗಳಲ್ಲಿ ಕಾರ್ಲ್ ಮಾರ್ಕ್ಸ್ ಕುರಿತು ತುಸು ಹೆಚ್ಚೇ ಆಸಕ್ತಿ ಹೊಂದಿದ್ದು ಕಂಡುಬರುತ್ತದೆ. ಭಾರತದ ಕಮ್ಯುನಿಸ್ಟರ ಕುರಿತು ಕಟುವಾಗಿಯೇ ವಿಮರ್ಶಿಸಿರುವ ಅಂಬೇಡ್ಕರ್, ಮಾರ್ಕ್ಸ್ ಸಿದ್ಧಾಂತವನ್ನು ಬಹಳ ಆಸಕ್ತಿಯಿಂದ ಅಭ್ಯಾಸ ಮಾಡಿರುವುದು ಹಾಗೂ ಮಾರ್ಕ್ಸ್‌ವಾದದ ಕುರಿತು ತಮ್ಮ ಚಿಂತನೆಯನ್ನು ಮಂಡಿಸಿರುವುದು ಸಮಾನತೆಯೆಡೆಗಿನ ಪಯಣದಲ್ಲಿ ಅವರಿಗಿದ್ದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಜಾತಿವಿನಾಶ ಕೃತಿಯಲ್ಲಿ, ಜಾತಿಯನ್ನು ನಾಶಗೈಯ್ಯುವ ತಮ್ಮದೇ ದಾರಿಗಳನ್ನು ಇಡೀ ಭಾರತೀಯರಿಗೆ ತಿಳಿಸಿಕೊಡುವ ಅವರು, ‘ನನ್ನ ದಾರಿಯಲ್ಲಿ ಅಲ್ಲದಿದ್ದರೂ ನಿಮ್ಮದೇ ದಾರಿಯಲ್ಲಿ ಜಾತಿವಿನಾಶ ಕೈಗೊಳ್ಳಿ’ ಎಂಬ ಕರೆ ನೀಡುತ್ತಾರೆ. ಇಲ್ಲಿ ಜಾತಿವಿನಾಶ ಮುಖ್ಯವೇ ಹೊರತು ನನ್ನ ವಾದಕ್ಕೇ ಸೀಮಿತಗೊಳ್ಳುವುದು ಮುಖ್ಯವಲ್ಲ ಎಂಬ ಅಂಶವನ್ನು ಒತ್ತಿಹೇಳಿದ್ದಾರೆ. ದುರಾದೃಷ್ಟವಶಾತ್ ಅಂಬೇಡ್ಕರ್ ಅವರು ತೋರಿದ ದಾರಿಯನ್ನು ತುಳಿಯುವುದೇ ದುಸ್ತರವಾಗಿರುವಾಗ ಅವರು ನೀಡಿದ ಪರಿಹಾರವನ್ನು ಒಳಗೊಂಡು ಅಥವಾ ಹೊರತುಪಡಿಸಿ ಜಾತಿವಿನಾಶ ಚಳವಳಿಯ ರಥವನ್ನು ಎಳೆಯುವ ಯಾವ ಚಿಂತನೆಯೂ ಇಲ್ಲಿ ಜೀವತಾಳಲಿಲ್ಲ. ಅದೇನೇ ಇರಲಿ, ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣಕ್ಕಾಗಿ ಸ್ವತಃ ನಡೆದು ತೋರಿದ ಹಾಗೂ ನಡೆಯಲು ಹೇಳಿದ ದಾರಿಗಳಲ್ಲಿ ಮಾರ್ಕ್ಸ್ ಚಿಂತನೆಗಳಿಗೆ ಅವಕಾಶ ಕೊಟ್ಟಿದ್ದರು ಎಂಬುದನ್ನು ನಾವು ನೋಡಬಹುದು. ಅದಕ್ಕೆ ಸಾಕ್ಷಿ ಅವರ ಭಾಷಣ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ (Buddha Or Karl Marx).
ನವೆಂಬರ್ 26, 1956ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ 4ನೇ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣವೇ ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್. ಈ ಭಾಷಣಕ್ಕಿರುವ ಮಹತ್ವವನ್ನು ಅರಿಯಬೇಕಾದರೆ, ಅಕ್ಟೋಬರ್ 14, 1956 ಮತ್ತು ಡಿಸೆಂಬರ್ 6, 1956 ದಿನಾಂಕಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕು. ಏಕೆಂದರೆ ಮೊದಲನೆಯದ್ದು ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕಾರ ಮಾಡಿದ ದಿನವಾದರೆ ಎರಡನೆಯದ್ದು ಅವರು ಪರಿನಿಬ್ಬಾಣವಾದ ದಿನ. ಅಂದರೆ ಅವರು ಬೌದ್ಧ ಧಮ್ಮ ಸ್ವೀಕರಿಸಿದ 41 ದಿನಗಳ ನಂತರ ಹಾಗೂ ಕೊನೆಯುಸಿರೆಳೆಯುವ 10 ದಿನಗಳ ಹಿಂದೆ ಮಾಡಿದ ಭಾಷಣವಿದು. ಅಂದರೆ ಅಂಬೇಡ್ಕರ್ ಅವರಿಗೆ ತಮ್ಮ ಕಡೆಯ ಕಾಲದಲ್ಲಿ ಬುದ್ಧನೊಂದಿಗೆ ಕಾರ್ಲ್ ಮಾರ್ಕ್ಸ್‌ನನ್ನು ಹೋಲಿಸಿ ನೋಡುವ ಅವಶ್ಯಕತೆ ಏರ್ಪಟ್ಟಿದ್ದು ಏಕೆಂಬುದು ಮಹತ್ವದದ ಸಂಗತಿಯಾಗುತ್ತದೆ. ನನ್ನ ಪ್ರಕಾರ ಈ ಭಾಷಣದ ಮೂಲಕ ಅಂಬೇಡ್ಕರ್ ಅವರು, ಕಮ್ಯುನಿಸಂ ಕನಸನ್ನು ಹೊತ್ತು ಸಮಸಮಾಜಕ್ಕೆ ಹಾತೊರೆಯುತ್ತಿರುವ ಮಾರ್ಕ್ಸ್‌ವಾದಿಗಳಿಗೆ ಬುದ್ಧಗುರುವನ್ನು ಅಪ್ಪಿಕೊಳ್ಳಲು ಕರೆ ನೀಡಿದ್ದಾರೆ. ಆ ಮೂಲಕ ಮಾರ್ಕ್ಸ್ ವಾದವು ಸಾಧಿಸಿದ ಅರೆ ಸಮತಾವಾದವನ್ನು ಸಂಪೂರ್ಣಗೊಳಿಸಲು ಕೈಜೋಡಿಸಲು ಕರೆ ನೀಡಿದ್ದಾರೆ. ಈ ಮಾತುಗಳು ಮಾರ್ಕ್ಸ್‌ವಾದಿ ಹಾಗೂ ಅಂಬೇಡ್ಕರ್‌ವಾದಿಗಳಿಗೆ ತುಸು ಆಶ್ಚರ್ಯವನ್ನುಂಟು ಮಾಡಬಹುದು. ಆದರೆ ನಾನಿದನ್ನು ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿದ್ದೇನೆ. ಈ ವಾದವನ್ನು ತಪ್ಪೆಂದು ವಾದಿಸುವವರನ್ನು ಆಲಿಸಲೂ ತಯಾರಿದ್ದೇನೆ ಹಾಗೂ ಪ್ರಾಮಾಣಿಕವಾಗಿ ತಪ್ಪೆಂದು ತೋರಿಸಿಕೊಟ್ಟರೆ ಅದನ್ನು ಒಪ್ಪಿಕೊಳ್ಳಲೂ ಸಿದ್ಧನಿದ್ದೇನೆ.
ಈಗ ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ ಭಾಷಣದಲ್ಲಿ ಅಂಬೇಡ್ಕರ್ ಅವರು ಮಂಡಿಸಿರುವ ವಾದವನ್ನು ಗಮನಿಸೋಣ. ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ ಭಾಷಣದಲ್ಲಿ ʻಪ್ರಾಚೀನನಾದ ಬುದ್ಧಗುರುವನ್ನು ಹಾಗೂ ಆಧುನಿಕನಾದ ಮಾರ್ಕ್ಸ್‌ನನ್ನು ಹೋಲಿಕೆ ಮಾಡುತ್ತಿರುವುದು ತಮಾಷೆಯಾಗಿ ಅಥವಾ ವಿಚಿತ್ರವಾಗಿ ಕಾಣಬಹುದುʼ ಎಂದು ಆರಂಭಿಸುವ ಅಂಬೇಡ್ಕರ್ ಅವರ ಅಂದಿನ ಮಾತುಗಳು ಇಂದಿಗೆ ನಿಜಕ್ಕೂ ಹಾಸ್ಯಾಸ್ಪದವೂ ಅಲ್ಲ, ವಿಚಿತ್ರವೂ ಅಲ್ಲ. ಇಡೀ ಜಗತ್ತು ಬಲಪಂಥೀಯ ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಯ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ. ಹಾಗಾಗಿ ಅಂದು ಅಂಬೇಡ್ಕರ್ ಭಾವಿಸಿದಂತೆ ಮಾರ್ಕ್ಸ್‌ವಾದಿಗಳು ಇಂದು ಬುದ್ಧನನ್ನು ಗೇಲಿ ಮಾಡುವುದಿಲ್ಲವೆಂದೇ ನಂಬಿದ್ದೇನೆ. ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ ಭಾಷಣದಲ್ಲಿ ಅಂಬೇಡ್ಕರ್ ಅವರು ಬುದ್ಧನ ತತ್ವಗಳನ್ನು 25 ಅಂಶಗಳಲ್ಲಿ ಮಂಡಿಸುತ್ತಾರೆ. ಹಾಗೆಯೇ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತವನ್ನು 10 ತತ್ವಗಳಲ್ಲಿ ಮಂಡಿಸುತ್ತಾರೆ. ಅವನ (ಮಾರ್ಕ್ಸ್) ತತ್ವಗಳಲ್ಲಿ ಜೀವಂತವಾಗಿರುವ 4 ಮುಖ್ಯಾಂಶಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ:
1. ತತ್ವಜ್ಞಾನದ ಕೆಲಸ ಪ್ರಪಂಚವನ್ನು ಪುನರ್ರಚಿಸುವುದು, ಪ್ರಪಂಚದ ಮೂಲವನ್ನು ಕುರಿತು ವಿವರಿಸುವುದರಲ್ಲಿ ಕಾಲಹರಣ ಮಾಡುವುದಲ್ಲ.
2. ವರ್ಗ-ವರ್ಗದ ನಡುವೆ ಹಿತಾಸಕ್ತಿಗಳ ಸಂಘರ್ಷವಿದೆ.
3. ಆಸ್ತಿಯ ಖಾಸಗಿ ಒಡೆತನ, ಒಂದು ವರ್ಗಕ್ಕೆ ಅಧಿಕಾರವನ್ನೂ ಇನ್ನೊಂದು ವರ್ಗಕ್ಕೆ ದುಃಖವನ್ನೂ ಶೋಷಣೆಯ ಮೂಲಕ ತರುತ್ತದೆ.
4. ಸಮಾಜದ ಒಳಿತಿಗಾಗಿ ದುಃಖವನ್ನು ನಿರ್ಮೂಲನೆ ಮಾಡಲು ಖಾಸಗಿ ಆಸ್ತಿಯನ್ನು ತೊಡೆದುಹಾಕಬೇಕು.
ಈ ಮೇಲಿನ ಅಂಶಗಳೇ ಇಂದು ಮಾರ್ಕ್ಸ್‌ವಾದದಲ್ಲಿ ಉಳಿದಿರುವ ಒಂದು ಬೆಂಕಿ ಕೆಂಡ. ಅದು ಸಣ್ಣದ್ದಾದರೂ ತುಂಬಾ ಮಹತ್ವದ್ದಾಗಿದೆ ಎನ್ನುವ ಅಂಬೇಡ್ಕರ್ ಈ ಮೂಲಾಂಶಗಳು ಬುದ್ಧಗುರುವಿನಿಂದ ಬೋಧಿಸಲ್ಪಟ್ಟಿದ್ದವೆಯೇ ಎಂದು ಪರಿಶೀಲಿಸುತ್ತಾರೆ.
ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-1)
ಮೊದಲನೆಯ ಅಂಶವಾದ ʻತತ್ವಜ್ಞಾನದ ಕೆಲಸ ಪ್ರಪಂಚವನ್ನು ಪುನರ್ರಚಿಸುವುದು, ಪ್ರಪಂಚದ ಮೂಲವನ್ನು ಕುರಿತು ವಿವರಿಸುವುದರಲ್ಲಿ ಕಾಲಹರಣ ಮಾಡುವುದಲ್ಲʼ ಎಂಬುದನ್ನು ಬುದ್ಧಗುರುವೂ ಬೋಧಿಸಿದ್ದನ್ನು ತಿಳಿಹೇಳುವ ಅವರು ಬುದ್ಧ ಮತ್ತು ಪೊಟ್ಟಪಾದನ ನಡುವೆ ನಡೆವ ಸಂಭಾಷಣೆಯನ್ನು ಪರಿಚಯಿಸುತ್ತಾರೆ.
ಪೊಟ್ಟಪಾದನು, ಈ ಪ್ರಪಂಚ ಶಾಶ್ವತವಲ್ಲವೆ? ಈ ಪ್ರಪಂಚ ಮಿತಿಯುಳ್ಳದ್ದೆ? ಈ ಪ್ರಪಂಚ ಅನಂತವಾದುದೆ? ಆತ್ಮ ದೇಹದ ಹಾಗೆಯೇ ಇದೆಯೇ? ಆತ್ಮವೇ ಬೇರೆ, ದೇಹವೇ ಬೇರೆಯೆ? ಸತ್ಯ ಸಾಕ್ಷಾತ್ಕಾರ ಮಾಡಿಕೊಂಡ ವ್ಯಕ್ತಿ ಸಾವಿನ ನಂತರ ಬದುಕುತ್ತಾನೆಯೆ? ಸಾವಿನ ನಂತರ ಅವನು ಬದುಕುತ್ತಾನೆಯೆ ಅಥವಾ ಬದುಕುವುದಿಲ್ಲವೆ? ಎಂದು ಬುದ್ಧಗುರುವನ್ನು ಪ್ರಶ್ನಿಸಿದಾಗ ಬುದ್ಧ ಪ್ರತಿ ಪ್ರಶ್ನೆಗೂ ಒಂದೇ ಉತ್ತರವನ್ನು ನೀಡುತ್ತಾನೆ. ಅದೇನೆಂದರೆ: “ಪೊಟ್ಟಪಾದನೇ, ಆ ಬಗ್ಗೆ ನಾನು ಯಾವ ಅಭಿಪ್ರಾಯವನ್ನೂ ಕೊಟ್ಟಿಲ್ಲ. (ಏಕೆಂದರೆ) ಈ ಪ್ರಶ್ನೆ ಪ್ರಯೋಜನಕಾರಿಯೆಂದು ನಾನು ಪರಿಗಣಿಸಿಲ್ಲ. ಅದು ಧರ್ಮಕ್ಕೆ ಸಂಬಂಧಿಸಿಲ್ಲ. ಉತ್ತಮ ನಡತೆಯ ಅಂಶಗಳಿಗಾಗಲೀ, ಅಥವಾ ಅನಾಸಕ್ತಿಗಾಗಲೀ, ಅಥವಾ ಕಾಮಭಾವನೆಯ ಶುದ್ಧಿಗಾಗಲೀ, ಅಥವಾ ಹೃದಯ ತುಷ್ಟಿಗಾಗಲೀ, ಅಥವಾ ನಿಜವಾದ ಜ್ಞಾನಕ್ಕಾಗಲೀ, ಅಥವಾ (ಸತ್ಪಥದ ಉನ್ನತ ಸ್ಥಿತಿಗಳ) ಒಳನೋಟಕ್ಕಾಗಲೀ, ಅಥವಾ ನಿರ್ವಾಣಕ್ಕಾಗಲೀ ಅದು ನೆರವಾಗುವುದಿಲ್ಲ. ಆದ್ದರಿಂದ ಆ ಬಗ್ಗೆ ನಾನು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದ್ದರಿಂದ ಈ ಮೂಲಾಂಶದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಚಿಂತನೆ ಒಂದೇ ಆಗಿದೆ” ಎನ್ನುತ್ತಾರೆ ಅಂಬೇಡ್ಕರ್.
ಎರಡನೆಯ ಮೂಲಾಂಶವಾದ ʻವರ್ಗ-ವರ್ಗದ ನಡುವೆ ಹಿತಾಸಕ್ತಿಗಳ ಸಂಘರ್ಷವಿದೆʼ ಎಂಬುದರ ಕುರಿತು ಬುದ್ಧಗುರುವಿನ ಆಲೋಚನೆ ಏನಿತ್ತು ಎಂಬುದನ್ನು ಬುದ್ಧನಿಗೂ ಕೋಸಲದ ಪಸೇನದಿ ಮಹಾರಾಜನಿಗೂ ನಡುವೆ ನಡೆದ ಸಂಭಾಷಣೆಯಿಂದ ಪರಿಚಯಿಸುತ್ತಾರೆ. ಅದರಲ್ಲಿ ಪಸೇನದಿ ಮಹಾರಾಜನು ಬುದ್ಧಗುರುವಿಗೆ ಹೇಳಿದ ಮಾತುಗಳು ಹೀಗಿದ್ದವು: ʻರಾಜರಾಜರ ನಡುವೆ, ಶ್ರೀಮಂತ ಶ್ರೀಮಂತರ ನಡುವೆ, ಬ್ರಾಹ್ಮಣ ಬ್ರಾಹ್ಮಣರ ನಡುವೆ, ಗೃಹಸ್ಥ ಗೃಹಸ್ಥರ ನಡುವೆ, ತಾಯಿ ಮಗನ ನಡುವೆ, ತಂದೆ ಮಗನ ನಡುವೆ, ಸೋದರ ಸೋದರಿಯರ ನಡುವೆ, ಸೋದರಿ ಸೋದರರ ನಡುವೆ, ಒಡನಾಡಿ ಒಡನಾಡಿಗಳ ನಡುವೆ ಸದಾ ಘರ್ಷಣೆಯಿದೆ….” ಈ ಮಾತುಗಳನ್ನು ಬುದ್ಧಗುರು ನಿರಾಕರಿಸುವುದಿಲ್ಲ. ಏಕೆಂದರೆ ಆತನು ಮನೆ ತೊರೆದದ್ದೇ ಸಾಕ್ಯರು ಮತ್ತು ಕೋಲೀಯರ ನಡುವೆ ರೋಹಿಣಿ ನದಿ ನೀರಿಗಾಗಿ ನಡೆದ ಸಂಘರ್ಷದಿಂದಲ್ಲವೇ? ಹಾಗಾಗಿ ‘ವರ್ಗ ಸಂಘರ್ಷದ ಬಗ್ಗೆ ಬುದ್ಧನ ವೈಯಕ್ತಿಕ ಧೋರಣೆ ಏನೆಂದರೆ, ʻಅವನ ಅಷ್ಟಾಂಗ ಮಾರ್ಗ ತತ್ವವು, ವರ್ಗ ಸಂಘರ್ಷ ಇದೆ ಎಂದೂ, ಆ ವರ್ಗ ಸಂಘರ್ಷವೇ ದುಃಖದ ಮೂಲ ಎಂದೂ ಗುರುತಿಸುತ್ತದೆʼ ಎನ್ನುವ ಅಂಬೇಡ್ಕರ್, ಬುದ್ಧಗುರು ಹಾಗೂ ಕಾರ್ಲ್ ಮಾರ್ಕ್ಸ್‌ಗಿರುವ ಹೋಲಿಕೆಯನ್ನು ತಿಳಿಸುತ್ತಾರೆ.
ಮೂರನೆಯ ಮೂಲಾಂಶವಾದ ʻಆಸ್ತಿಯ ಖಾಸಗಿ ಒಡೆತನ ಒಂದು ವರ್ಗಕ್ಕೆ ಅಧಿಕಾರವನ್ನೂ ಇನ್ನೊಂದು ವರ್ಗಕ್ಕೆ ದುಃಖವನ್ನೂ ಶೋಷಣೆಯ ಮೂಲಕ ತರುತ್ತದೆʼ ಎಂಬುದರ ಕುರಿತು ಅದೇ ಪೊಟ್ಟಪಾದನಿಗೆ ಉತ್ತರಿಸಿದ ಬುದ್ಧನ ಮಾತುಗಳನ್ನು ನೆನಪಿಸುತ್ತಾರೆ: ʻದುಃಖದ ಮೂಲವೇನೆಂದು ನಾನು ವಿವರಿಸಿದ್ದೇನೆ. ದುಃಖದ ನಿರ್ಮೂಲನೆ ಹೇಗೆಂದು ನಾನು ವಿವರಿಸಿದ್ದೇನೆ. ದುಃಖವನ್ನು ನಿರ್ಮೂಲನೆ ಮಾಡುವ ವಿಧಾನ ಏನೆಂದು ನಾನು ವಿವರಿಸಿದ್ದೇನೆ.ʼ ಆದ್ದರಿಂದ ಇಲ್ಲಿ ಭಾಷೆ ಭಿನ್ನವಾಗಿದೆ. ಆದರೆ ಅರ್ಥವೊಂದೇ. ದುಃಖವನ್ನು ಶೋಷಣೆಯೆಂದು ಓದಿಕೊಂಡರೆ ಮಾರ್ಕ್ಸ್‌ನಿಂದ ಬುದ್ಧ ದೂರ ಇಲ್ಲ ಎಂಬುದೇ ಅಂಬೇಡ್ಕರ್ ಅವರ ವಾದ. ನಂತರ ಖಾಸಗಿ ಆಸ್ತಿಯ ಕುರಿತು ಬುದ್ಧಗುರುವಿನ ಚಿಂತನೆಯನ್ನು ಬುದ್ಧ ಮತ್ತು ಆನಂದನ ನಡುವಿನ ಸಂಭಾಷಣೆಯಿಂದ ಪರಿಚಯಿಸುತ್ತಾರೆ. ಆನಂದನ ಪ್ರಶ್ನೆಗೆ ಬುದ್ಧ:
“ಸಂಗ್ರಹಣೆಯಿಂದ ದುರಾಸೆ ಉಂಟಾಗುತ್ತದೆಂದು ಹೇಳಿದ್ದೇನೆ. ಈಗ, ಆನಂದ, ಅದು ಯಾವ ರೀತಿ ಉಂಟಾಗುತ್ತದೆಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಯಾರಿಂದಲೂ ಅಥವಾ ಯಾವುದರಿಂದಲೂ, ಎಲ್ಲಿ ಯಾವುದೇ ಬಗೆಯ ಅಥವಾ ವಿಧದ ಸಂಗ್ರಹಣೆ ಇಲ್ಲವೋ ಆಗ, ಸಂಗ್ರಹಣೆಯ ನಿರ್ಮೂಲನೆಯಿಂದಾಗಿ, ಯಾವುದೇ ರೀತಿಯ ಸಂಗ್ರಹಣೆ ಇಲ್ಲದಿರುವುದರಿಂದ ದುರಾಸೆಯು ಯಾವ ರೂಪದಲ್ಲಿ ತಾನೆ ಇದ್ದೀತು?”
“ಇರಲಾರದು, ತಂದೆ.”
“ಆದ್ದರಿಂದ, ಆನಂದ, ಸಂಗ್ರಹಣೆಯೇ ದುರಾಸೆಯ ಮೂಲ. ಮೂಲ ಕಾರಣ, ಮೂಲಾಧಾರ, ಮೂಲೋತ್ಪತ್ತಿಯಾಗಿದೆ.”
ಇದು ಖಾಸಗಿ ಆಸ್ತಿಯ ಒಡೆತನವು ಒಂದು ವರ್ಗಕ್ಕೆ ಅಧಿಕಾರವನ್ನೂ ಹಾಗೂ ಇನ್ನೊಂದು ವರ್ಗಕ್ಕೆ ಶೋಷಣೆಯನ್ನೂ ಉಂಟು ಮಾಡುತ್ತದೆ ಎಂಬುದನ್ನು ಬುದ್ಧ ವಿವರಿಸುವ ಪರಿ ಹಾಗೂ ನಮಗದನ್ನು ಅಂಬೇಡ್ಕರ್ ಅವರು ಸುಲಭವಾಗಿ ಅರ್ಥ ಮಾಡಿಸುವ ವಿಧಾನ.
ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-2)
ನಾಲ್ಕನೆಯ ಮೂಲಾಂಶವಾದ ʻಸಮಾಜದ ಒಳಿತಿಗಾಗಿ ದುಃಖವನ್ನು ನಿರ್ಮೂಲನೆ ಮಾಡಲು ಖಾಸಗಿ ಆಸ್ತಿಯನ್ನು ತೊಡೆದುಹಾಕಬೇಕು? ಎಂಬುದರ ಕುರಿತು ಬುದ್ಧಗುರುವಿನ ನಿಲುವನ್ನು ತಿಳಿಸುವ ಅಂಬೇಡ್ಕರ್, ʻಅದಕ್ಕೆ ಪುರಾವೆಯೇ ಬೇಕಿಲ್ಲ. ಏಕೆಂದರೆ ಬುದ್ಧ ಸ್ಥಾಪಿಸಿದ ಭಿಕ್ಕುಗಳ ಸಂಘಕ್ಕೆ ಖಾಸಗಿ ಆಸ್ತಿಯನ್ನಾಗಿ ಮೂರು ಬಟ್ಟೆಗಳು, ಸೊಂಟಕ್ಕೆ ಉಡಿದಾರ, ಭಿಕ್ಷಾಪಾತ್ರೆ, ಕತ್ರಿ, ಸೂಜಿ ಮತ್ತು ನೀರು ಸೋಸುವ ಬಟ್ಟಲನ್ನು ಹೊರತುಪಡಿಸಿ ಬೇರಾವುದಕ್ಕೂ ಅನುಮತಿ ನೀಡಿರಲಿಲ್ಲ. ಅಧಿಕಾರ ಹೊಂದಿ ಇತರರನ್ನು ಶೋಷಿಸುವ ಖಾಸಗಿ ಆಸ್ತಿಯನ್ನು ಭಿಕ್ಕು ಸಂಘದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಹಾಗಾಗಿ ನಾಲ್ಕನೇ ಮೂಲಾಂಶದಲ್ಲಿಯೂ ಬುದ್ಧಗುರುವಿನ ಬೋಧನೆ ಮಾರ್ಕ್ಸ್ ಬೋಧನೆಗೆ ಹೋಲುತ್ತದೆ ಎನ್ನುತ್ತಾರೆ.
ಹೀಗೆ ಖಾಸಗಿ ಆಸ್ತಿಯನ್ನು ಕೊನೆಗಾಣಿಸಿ, ಶೋಷಣೆಯನ್ನು ನಿರ್ಮೂಲನೆ ಮಾಡುವ ಸಮಸಮಾಜವನ್ನು ಅಥವಾ ಕಮ್ಯುನಿಸಂ ಅನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬುದ್ಧ ಪ್ರತಿಪಾದಿಸಿದ ಸಾಧನಗಳನ್ನು 3 ಭಾಗಗಳಾಗಿ ವಿಂಗಡಿಸಿ ಅಂಬೇಡ್ಕರ್ ನಮಗೆ ತಿಳಿಸುತ್ತಾರೆ.
1. ಪಂಚಶೀಲಗಳ ಆಚರಣೆ
2. ಅರಿಯ ಅಷ್ಟಾಂಗ ಮಾರ್ಗ
3. ನಿರ್ವಾಣ ತತ್ವ
ಈ ಮೂರೂ ಸಾಧನಗಳು ಸಂಕ್ಷಿಪ್ತವಾಗಿ ಪ್ರಜ್ಞೆ, ಕರುಣೆ, ಶೀಲ ಮತ್ತು ಮೈತ್ರಿಯನ್ನು ಸಾರುತ್ತವೆ. ಮನುಷ್ಯರು ಮತ್ತು ಮನುಷ್ಯರ ನಡುವಿನ ಸಂಬಂಧವು ಪರಸ್ಪರ ಸಹಕಾರಿಯಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಪ್ರಜ್ಞಾಪೂರ್ವಕವಾಗಿ ಇತರೆ ವ್ಯಕ್ತಿಗೆ ಹಾನಿಯುಂಟಾಗದ ಹಾಗೆ ಕರುಣೆ ತೋರುವ ಶೀಲವನ್ನು ಪಾಲಿಸಿದರೆ ಮೈತ್ರಿಯು ಮನುಷ್ಯರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಹಾಗೂ ಖಾಸಗಿ ಆಸ್ತಿಯಿಂದ ದೂರವಿರಿಸುತ್ತದೆ. ʻತನ್ನ ಜ್ಞಾನೋದಯದ ಫಲವಾಗಿ ಬಂದ ಬುದ್ಧನ ಈ ಉಪದೇಶವು ಪ್ರಪಂಚದ ದುಃಖ ಮತ್ತು ನೋವನ್ನು ಅಳಿಸಲು ಪ್ರತಿಪಾದಿತವಾಯಿತುʼ ಎನ್ನುವ ಅಂಬೇಡ್ಕರ್, ಈ ಹಂತವು ಸಮಸಮಾಜ ಅಥವಾ ಕಮ್ಯುನಿಸಂ ಸ್ಥಾಪಿಸುತ್ತದೆ ಎಂದು ವಿವರಿಸುತ್ತಾರೆ. ಒಟ್ಟಾರೆ ಸ್ವಯಂ ಇಚ್ಛೆಯಿಂದ ಒಳ್ಳೆಯ ದಾರಿಯನ್ನು (ಖಾಸಗಿ ಆಸ್ತಿ ಹೊಂದದೆ ಶೋಷಣೆ ರಹಿತ ಸಮಾಜದೆಡೆಗೆ) ಅನುಸರಿಸುವಂತೆ ಮನುಷ್ಯನ/ಳ ನೈತಿಕ ಮನೋಭಾವನೆಯನ್ನು ಬದಲಾಯಿಸುವುದರ ಮೂಲಕ ಅವರನ್ನು ಪರಿವರ್ತಿಸಲು ಬುದ್ಧ ಈ ಸಾಧನಗಳನ್ನು ಆರಿಸಿಕೊಂಡನು ಎಂಬುದು ಸ್ಪಷ್ಟವಾಗಿದೆ.
(ಮುಂದುವರಿಯುತ್ತದೆ..)
(ಈದಿನ ಡಾಟ್ ಕಾಮ್ ಹೊರತಂದಿರುವ ‘ಅರಿವೇ ಅಂಬೇಡ್ಕರ- ಬಾಬಾಸಾಹೇಬರ ಮಹತ್ವದ ಕೃತಿಗಳ ಸಾರಸಂಗ್ರಹ’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು




