ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 2)

Date:

(ಮುಂದುವರಿದ ಭಾಗ..) ಕಮ್ಯುನಿಸ್ಟರ ಸಾಧನಗಳು: ಅಂಬೇಡ್ಕರ್ ತಿಳಿಸುವಂತೆ ಸಮಸಮಾಜ ಅಥವಾ ಕಮ್ಯುನಿಸಂ ಸ್ಥಾಪನೆಗೆ ಕಮ್ಯುನಿಸ್ಟರು ಪ್ರತಿಪಾದಿಸಿದ ಸಾಧನಗಳು ಎರಡು: 1. ಹಿಂಸಾಚಾರ 2. ಶ್ರಮಿಕರ ಸರ್ವಾಧಿಕಾರ.

ಅಂಬೇಡ್ಕರ್ ಅವರು ತಿಳಿಸುವಂತೆ ʻಕಮ್ಯುನಿಸಂ ಸ್ಥಾಪಿಸಲು ಇರುವುದು ಇವೆರಡೇ ಸಾಧನಗಳೆಂದು ಕಮ್ಯುನಿಸ್ಟರು ಹೇಳುತ್ತಾರೆ. ಮೊದಲನೆಯದು ಹಿಂಸಾಚಾರ. ಇದನ್ನು ಬಿಟ್ಟರೆ ಪ್ರಸ್ತುತ ವ್ಯವಸ್ಥೆಯನ್ನು ವಿಘಟಿಸಲು ಬೇರಾವುದೂ ಸಾಲದು. ಎರಡನೆಯದು ಶ್ರಮಿಕರ ಸರ್ವಾಧಿಕಾರ. ಇದನ್ನು ಬಿಟ್ಟರೆ ಬೇರಾವುದರಿಂದಲೂ ಹೊಸ ವ್ಯವಸ್ಥೆಯನ್ನು ಮುಂದುವರೆಸಲು ಸಾಧ್ಯವಿಲ್ಲ.ʼ ಹಾಗಾಗಿ ಅಂಬೇಡ್ಕರ್ ಒಂದು ತೀರ್ಮಾನಕ್ಕೆ ಬರುತ್ತಾರೆ. ಅದೇನೆಂದರೆ, ʻಕಾರ್ಲ್ ಮಾರ್ಕ್ಸ್ ಮತ್ತು ಬುದ್ಧನ ನಡುವೆ ಇರುವ ಸಾಮ್ಯಗಳೇನು ಮತ್ತು ವ್ಯತ್ಯಾಸಗಳೇನು ಎಂಬುದು ಈಗ ಸ್ಪಷ್ಟವಾಯಿತು. ಸಾಧನಗಳ ಬಗ್ಗೆ ವ್ಯತ್ಯಾಸಗಳಿವೆ, ಗುರಿ ಇಬ್ಬರದೂ ಒಂದೇ.ʼ ಹೌದು, ಇದನ್ನು ಅಂಬೇಡ್ಕರ್ ಅವರೇ ಹೇಳಿರುವುದು. ಬುದ್ಧಗುರುವಿನ ಧಮ್ಮ ಮತ್ತು ಕಾರ್ಲ್ ಮಾರ್ಕ್ಸ್ ತತ್ವಜ್ಞಾನ ಎರಡರ ಗುರಿ ಒಂದೇ. ಅದು ಸಮತಾವಾದ ಅಥವಾ ಕಮ್ಯುನಿಸಂ. ಆದರೆ ಆ ಗುರಿ ತಲುಪಲು ಇಬ್ಬರೂ ಆರಿಸಿಕೊಂಡ ದಾರಿಗಳು ಬೇರೆ. ಹಾಗಾಗಿ ಇವೆರಡೂ ದಾರಿಗಳಲ್ಲಿ ಯಾವುದು ಉತ್ತಮ ಎಂಬುದನ್ನು ಅಂಬೇಡ್ಕರ್ ಮುಂದೆ ತಿಳಿಸುತ್ತಾರೆ.

ಸಾಧನಗಳ ಮೌಲ್ಯಮಾಪನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬೌದ್ಧವಾದಿ ಹಾಗೂ ಮಾರ್ಕ್ಸ್‌ವಾದಿಗಳ ಮಾರ್ಗಗಳೆರಡರಲ್ಲಿಯೂ ಕೆಲವು ತಪ್ಪುಗಳಿವೆ ಎಂದು ಪ್ರಸ್ತಾಪಿಸುವ ಅಂಬೇಡ್ಕರ್ ಅವರು, ಹಿಂಸಾಚಾರದ ಬಗ್ಗೆ ಬುದ್ಧಗುರು ಜೈನರಷ್ಟು ಅವಾಸ್ತವವಾಗಿರಲಿಲ್ಲ ಎನ್ನುತ್ತಾರೆ. ಬುದ್ಧ ಹಿಂಸಾಚಾರವನ್ನು ವಿರೋಧಿಸಿದ ನಿಜ. ಆದರೆ ಆತ ನ್ಯಾಯದ ಪರವಾಗಿಯೂ ಇದ್ದನು. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದೂ ಹಿಂಸೆಯೇ. ಆದರೆ ಅದು ನ್ಯಾಯ. ಹಾಗಾಗಿ ಬುದ್ಧಗುರು ವೈಶಾಲಿಯ ಸೇನಾಪತಿ ಸಿಂಹನಿಗೆ ನೀಡಿದ ಬೋಧನೆಯನ್ನು ನೆನಪಿಸುತ್ತಾರೆ:

“ನ್ಯಾಯಾಧೀಶ ಶಿಕ್ಷಿಸುವುದು ದೋಷವಲ್ಲ. ಅಪರಾಧಿಯ ತಪ್ಪಿನಿಂದ ಶಿಕ್ಷೆಯುಂಟಾಗುತ್ತದೆ. ಶಿಕ್ಷೆಯನ್ನು ವಿಧಿಸುವ ನ್ಯಾಯಾಧೀಶ ಕಾನೂನನ್ನು ಮಾತ್ರ ಜಾರಿ ಮಾಡುತ್ತಿರುತ್ತಾನೆ. ಹಿಂಸಾಚರಣೆಯಿಂದ ಅವನು ಕಲುಷಿತನಾಗುವುದಿಲ್ಲ. ನ್ಯಾಯ ಮತ್ತು ರಕ್ಷಣೆಗಾಗಿ ಹೋರಾಡುವ ಮನುಷ್ಯನನ್ನು ಹಿಂಸಾವಾದಿಯೆಂದು ದೂಷಿಸಲು ಸಾಧ್ಯವಿಲ್ಲ. ಶಾಂತಿ ರಕ್ಷಣೆಯ ಎಲ್ಲ ಪ್ರಯತ್ನಗಳೂ ವಿಫಲವಾದಾಗ, ಯಾರು ಯುದ್ಧವನ್ನು ಪ್ರಾರಂಭಿಸಿದನೋ ಅವನ ಮೇಲೆ ಹಿಂಸೆಯ ಜವಾಬ್ದಾರಿ ಬೀಳುತ್ತದೆ. ಮನುಷ್ಯ ಎಂದೂ ದುಷ್ಟ ಶಕ್ತಿಗಳಿಗೆ ಶರಣಾಗಬಾರದು. ಯುದ್ಧವಾಗಬಹುದು. ಆದರೆ ಅದು ಸ್ವಾರ್ಥ ಸಾಧನೆಗಾಗಿ ಆಗಬಾರದು….”

ಇದನ್ನೂ ಓದಿರಿ: ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್: ಅಂಬೇಡ್ಕರ್ ಕಣ್ಣೋಟ (ಭಾಗ- 1)

ಹಾಗಾಗಿ ಬುದ್ಧಗುರುವಿನ ಪ್ರಕಾರ ಗುರಿಮುಟ್ಟುವಲ್ಲಿ ಹಿಂಸೆಯು ಏಕೈಕ ಸಾಧನವಾಗಿದ್ದರೆ, ಆ ಬಲಪ್ರಯೋಗದಿಂದ ಆಸ್ತಿವಂತರನ್ನು ಹೊರತುಪಡಿಸುತ್ತಿರಲಿಲ್ಲ. ಕಮ್ಯುನಿಸ್ಟರು ಹಿಂಸೆಯನ್ನು ಪರಿಪೂರ್ಣ ಸತ್ಯವೆಂದು ಹೇಳುತ್ತಾರೆ, ಆದ್ದರಿಂದ ಅವರ ಸಾಧನ ಸರ್ವಸಮ್ಮತವಲ್ಲ ಎಂಬುದು ಅಂಬೇಡ್ಕರ್ ಅವರ ನಿಚ್ಚಳ ಅಭಿಪ್ರಾಯ.

ಸರ್ವಾಧಿಕಾರದ ವಿಚಾರದಲ್ಲಿ ಬುದ್ಧಗುರು ಪ್ರಜಾಸತ್ತಾತ್ಮಕವಾದಿಯಾಗಿದ್ದು, ಎಂದಿಗೂ ಸರ್ವಾಧಿಕಾರವನ್ನು ಸಹಿಸುತ್ತಿರಲಿಲ್ಲ. ಸರ್ವಾಧಿಕಾರವು ಸಂಘರ್ಷವನ್ನು ಕೊನೆಗೊಳಿಸುವುದೇ ಇಲ್ಲ. ಸರ್ವಾಧಿಕಾರದಲ್ಲಿ ಕೇವಲ ಕರ್ತವ್ಯಗಳಿರುತ್ತವೆ. ಆದರೆ ಪ್ರಜಾಪ್ರಭುತ್ವದಲ್ಲಿ ಕರ್ತವ್ಯದ ಜೊತೆಗೆ ಹಕ್ಕುಗಳೂ ಇರುತ್ತವೆ. ಹಾಗಾಗಿ ಇವೆರಡು ವಿಚಾರಗಳಲ್ಲಿ ಮಾರ್ಕ್ಸ್‌ವಾದಿಗಳಿಗಿಂತಲೂ ಬುದ್ಧಗುರುವಿನ ವಿಚಾರಗಳು ಹೆಚ್ಚು ಮೌಲ್ಯಯುತವೆಂದು ತೀರ್ಮಾನಿಸುತ್ತಾರೆ.

ಹಾಗಾದರೆ, ಯಾರ ಸಾಧನಗಳು ಹೆಚ್ಚು ಫಲಕಾರಿ? ಬಲಾಧಾರಿತ ಸರ್ಕಾರ ಮತ್ತು ನೀತಿಯಾಧಾರಿತ ಸರ್ಕಾರ ಇವೆರಡರಲ್ಲಿ ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಅಂಬೇಡ್ಕರ್ ಅವರು ಎಡ್ಮಂಡ್ ಬರ್ಕ್ ಮಾತುಗಳನ್ನು ನೆನಪಿಸಿಕೊಂಡು, ‘ಬಲಪ್ರಯೋಗ ತಾತ್ಕಾಲಿಕವಾದುದು, ಅದನ್ನು ನಿರಂತರವಾಗಿ ಹೇರಲು ಸಾಧ್ಯವಿಲ್ಲ. ಧರ್ಮರಾಜ್ಯದ ಕಾವಲುಗಾರ ತಾನೇ ಆಗುವಂತೆ ಪ್ರತಿಯೊಬ್ಬ ಮನುಷ್ಯನನ್ನೂ ನೈತಿಕವಾಗಿ ತರಬೇತುಗೊಳಿಸಬೇಕೆಂಬುದೇ ಬುದ್ಧನ ಆಸೆಯಾಗಿತ್ತು’ ಎನ್ನುತ್ತಾರೆ. ಅಂದರೆ ಮನುಷ್ಯರು ಮತ್ತು ಮನುಷ್ಯರ ನಡುವಿನ ಮೈತ್ರಿ ಭಾವವು ಅವರನ್ನು ನೈತಿಕವಾಗಿ ಸಮಾನತೆಯೆಡೆಗೆ ಕೊಂಡೊಯ್ಯುವಂತೆ ಮಾಡಬೇಕೆಂಬುದಾಗಿದೆ.

ಕಮ್ಯುನಿಸ್ಟರ ಪ್ರಕಾರ ಶ್ರಮಿಕರ ಸರ್ವಾಧಿಕಾರದಲ್ಲಿ ರಾಜ್ಯ ಶಕ್ತಿಯೇ ಕೊನೆಗೆ ನಶಿಸುತ್ತದೆ ಎಂದು ಹೇಳಲಾಗಿರುವುದು, ವಾಸ್ತವಕ್ಕೆ ಬಹುದೂರದ ಮಾತಾಗಿದ್ದು, ಅದು ಸಾಧ್ಯವಿಲ್ಲ ಬದಲಾಗಿ ಪ್ರಜಾಪ್ರಭುತ್ವ ಸ್ಥಾಪನೆಯಾಗಲೆಂದು ಬಯಸುತ್ತಾರೆ. ನೆನಪಿರಲಿ, ಈ ಪ್ರಜಾಪ್ರಭುತ್ವವು ಕೇವಲ ಸಂಸದೀಯ ಪ್ರಜಾಪ್ರಭುತ್ವವಾಗಿರದೆ ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವವನ್ನು ಒಳಗೊಂಡ ಪರಿಪೂರ್ಣ ಪ್ರಜಾಪ್ರಭುತ್ವದ ಬಗ್ಗೆ ಅಂಬೇಡ್ಕರ್ ಒಲವು ಹೊಂದಿದ್ದಾರೆ. ಅಂಬೇಡ್ಕರ್ ಅವರು ಡಿಸೆಂಬರ್ 22, 1952ರಂದು ಪುಣೆಯ ಜಿಲ್ಲಾ ಕಾನೂನು ಗ್ರಂಥಾಲಯ ಉದ್ಘಾಟಿಸಿ ಮಾಡಿದ ಭಾಷಣ ಈ ದಿಸೆಯಲ್ಲಿ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಈ ಭಾಷಣದಲ್ಲಿ ಅವರು, ಪ್ರಜಾಪ್ರಭುತ್ವವು ಒಂದು ದೇಶದಲ್ಲಿ ನೆಲೆಗೊಳ್ಳಬೇಕೆಂದರೆ ಆ ನೆಲದಲ್ಲಿ ಹಾಗೂ ವ್ಯವಸ್ಥೆಯಲ್ಲಿ ಇರಬೇಕಾದ ಗುಣಗಳ ಬಗ್ಗೆ ತಿಳಿಸುತ್ತಾರೆ. ಅವುಗಳನ್ನು ಪ್ರಜಾಪ್ರಭುತ್ವದ ಯಶಸ್ಸಿಗೆ ಇರಬೇಕಾದ ಪೂರ್ವಭಾವಿ ನಿಯಮಗಳೆಂದು ಕರೆಯುತ್ತಾರೆ. ಅವುಗಳೆಂದರೆ:

1. ಸಮಾಜದಲ್ಲಿ ಕಣ್ಣಿಗೆ ರಾಚುವ ಅಸಮಾನತೆ ಇರಬಾರದು.

2. ವಿರೋಧ ಪಕ್ಷ ಕಡ್ಡಾಯವಾಗಿ ಇರಲೇಬೇಕು.

3. ಕಾನೂನು ಮತ್ತು ಆಡಳಿತದಲ್ಲಿ ಸಮಾನತೆ.

4. ಸಾಂವಿಧಾನಿಕ ನೈತಿಕತೆ ಆಚರಣೆ.

5. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ ಇರಲೇಬಾರದು.

6. ಸಮಾಜದಲ್ಲಿ ನೈತಿಕ ಶಿಸ್ತು ನೆಲೆಗೊಳ್ಳಬೇಕು.

7. ಸಾರ್ವಜನಿಕ ಆತ್ಮಸಾಕ್ಷಿ ಇರಬೇಕು.

ಈ ಲಕ್ಷಣಗಳಿಲ್ಲದ ನೆಲದಲ್ಲಿ ಪ್ರಜಾಪ್ರಭುತ್ವವು ಹೆಸರಿಗೆ ಮಾತ್ರವಿರುತ್ತದೆ ಎಂಬುದೇ ಅವರ ಅಭಿಪ್ರಾಯ. ಇದಷ್ಟು ಮಾತ್ರವಲ್ಲ, ಅಂಬೇಡ್ಕರ್ ಅವರು ಸ್ವತಃ ಕಮ್ಯುನಿಸಂ ಸ್ಥಾಪನೆಗೆ ಇರಬೇಕಾದ ಪೂರ್ವಭಾವಿ ಷರತ್ತುಗಳ ಬಗ್ಗೆಯೂ ಕೃತಿ ಬರೆಯುತ್ತಿದ್ದರು. ಆದರೆ ಅದು ಅಪೂರ್ಣವಾಗಿ ಉಳಿಯಿತು.

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-1)

ಅದೇನೇ ಇರಲಿ, ಬಲಪ್ರಯೋಗವನ್ನು ವಜಾ ಮಾಡಿದರೆ ಆಗ ರಾಜ್ಯವನ್ನು ಉಳಿಸುವ ಏಕೈಕ ಶಕ್ತಿ ಎಂದರೆ ಧರ್ಮ. ಆದರೆ ಕಮ್ಯುನಿಸ್ಟರಿಗೆ ಧರ್ಮ ತಿರಸ್ಕರಣೀಯವಾಗಿದೆ. ಅವರ ಧರ್ಮದ್ವೇಷ ಎಷ್ಟೊಂದು ಆಳವಾಗಿದೆಯೆಂದರೆ ಯಾವ ಧರ್ಮಗಳು ಕಮ್ಯುನಿಸಂಗೆ ಸಹಕಾರಿಯಾಗಿವೆ, ಯಾವುವು ಅಲ್ಲ ಎಂಬುದನ್ನು ಕೂಡ ವಿವೇಚಿಸಲೂ ಅವರಿಗಾಗುವುದಿಲ್ಲ. ಕಮ್ಯುನಿಸ್ಟರು ತಮ್ಮ ಕ್ರೈಸ್ತಮತ ದ್ವೇಷವನ್ನು ಬೌದ್ಧಧರ್ಮಕ್ಕೂ ತಂದುಕೊಂಡು ಅವೆರಡರ ನಡುವಣ ವ್ಯತ್ಯಾಸವನ್ನೂ ಪರಿಶೀಲಿಸಲು ತಾಳ್ಮೆಯಿಲ್ಲದವರಾಗಿದ್ದಾರೆ ಎನ್ನುತ್ತಾ, ಕಮ್ಯುನಿಸ್ಟರು ಕ್ರೈಸ್ತಮತದ ವಿರುದ್ಧ ಮಾಡಿದ ಅಪಾದನೆಗಳನ್ನೇ ಬೌದ್ಧ ಧಮ್ಮದ ವಿರುದ್ಧ ಮಾಡಲಾಗದು ಎನ್ನುತ್ತಾರೆ.

ಬಲವನ್ನು ನಿರ್ಮೂಲನೆ ಮಾಡಿದ ಮೇಲೆ ಕಮ್ಯುನಿಸಂ ಅನ್ನು ಉಳಿಸುವ ಅಂತಿಮ ಒತ್ತಾಸೆಯಾಗಿ ಬೌದ್ಧಧರ್ಮವನ್ನು ಬಳಸಿಕೊಳ್ಳಲು ರಷ್ಯನ್ನರು ಯಾವ ಗಮನವನ್ನೂ ನೀಡುತ್ತಿಲ್ಲ ಎಂಬುದು ಅಂಬೇಡ್ಕರ್ ಅವರ ಬೇಸರವಾಗಿದೆ. ಬೌದ್ಧ ಸಂಘಕ್ಕೆ ಸಂಬಂಧಿಸಿದಂತೆ ಬುದ್ಧನು ಕಮ್ಯುನಿಸಂ ಅನ್ನು ಸರ್ವಾಧಿಕಾರವಿಲ್ಲದೆ ಸ್ಥಾಪಿಸಿದನೆಂಬುದು, ಅದು ಅತ್ಯಂತ ಅಲ್ಪ ಪ್ರಮಾಣದ ಕಮ್ಯುನಿಸಂ ಆಗಿದ್ದಿರಬಹುದು, ಆದರೆ ಅದು ಸರ್ವಾಧಿಕಾರವಿಲ್ಲದ ಕಮ್ಯುನಿಸಂ ಆಗಿತ್ತು ಎಂಬುದು ಅವರ ವಾದ.

ಬುದ್ಧಗುರು ಕಮ್ಯುನಿಸಂ ಸ್ಥಾಪಿಸಲು ಬಳಸಿದ ವಿಧಾನ ಮಾನವರ ಮನಸ್ಸನ್ನು ಬದಲಾಯಿಸುವುದು; ಅವರ ಸ್ವಭಾವವನ್ನು ಬದಲಾಯಿಸುವುದು. ಆದರೆ ಕಮ್ಯುನಿಸ್ಟರು ಸಮಾನತೆಯ ಸ್ಥಾಪನೆಗಾಗಿ ಸಮಾಜದಲ್ಲಿನ ಸೋದರತ್ವ ಅಥವಾ ಸ್ವಾತಂತ್ರ‍್ಯವನ್ನು ಬಲಿಕೊಡುತ್ತಾರೆ. ಸೋದರತ್ವ ಅಥವಾ ಸ್ವಾತಂತ್ರ‍್ಯ ಇಲ್ಲದಿದ್ದರೆ ಸಮಾನತೆಗೆ ಬೆಲೆಯಿಲ್ಲ. ಬುದ್ಧನ ಮಾರ್ಗವನ್ನು ಅನುಸರಿಸುವುದರಿಂದ ಮಾತ್ರ ಈ ಮೂರು ತತ್ವಗಳು ಜೊತೆಜೊತೆಯಾಗಿ ಬಾಳಬಲ್ಲವು. ಕಮ್ಯುನಿಸಂ ಯಾವುದಾದರೂ ಒಂದನ್ನು ಕೊಡುತ್ತದೆ, ಎಲ್ಲವನ್ನೂ ಅಲ್ಲ. ಹೀಗೆಂದು ತಮ್ಮ ವಿಚಾರಗಳನ್ನು ಅಂತ್ಯಗೊಳಿಸುವ ಅಂಬೇಡ್ಕರ್, ʻಬುದ್ಧಗುರು ಬೋಧಿಸಿದ ಮಾರ್ಗದೊಂದಿಗೆ ಕಮ್ಯುನಿಸಂ ಸ್ಥಾಪಿಸುವುದು ಅತ್ಯಂತ ಹೆಚ್ಚು ಫಲಕಾರಿʼ ಎಂದು ವಿವರಿಸುತ್ತಾರೆ.

ಒಟ್ಟಾರೆ, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ ಪ್ರಬಂಧದಲ್ಲಿ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಈ ಕೆಳಗಿನಂತೆ ಸಾರಾಂಶೀಕರಿಸಬಹುದು.

1. ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಗುರಿ ಒಂದೇ ಆಗಿತ್ತು. ಅದು ಸಮಾನತಾವಾದ.

2. ಇದನ್ನು ಸಾಧಿಸಲು ಇಬ್ಬರೂ ಖಾಸಗಿ ಆಸ್ತಿಯ ಸಂಚಯವನ್ನು ನಿಷೇಧಿಸಿದರು.

3. ಖಾಸಗಿ ಆಸ್ತಿಯೇ ಶೋಷಣೆಯ ಮೂಲವಾಗಿದೆ. ಇದು ಸಂಘರ್ಷವನ್ನು ಸೃಷ್ಟಿಸುತ್ತದೆ.

4. ಸಂಘರ್ಷದಲ್ಲಿ ಹಿಂಸೆಯಿಂದ ಕ್ರಾಂತಿ ಆಗುಮಾಡಿ ಶ್ರಮಿಕರ ಸರ್ವಾಧಿಕಾರದಿಂದ ಸಮಾಜವಾದ ಅಥವಾ ಕಮ್ಯುನಿಸಂ ಸ್ಥಾಪಿಸುವುದು ಮಾರ್ಕ್ಸ್‌ವಾದವಾದರೆ, ಮೊದಲು ಶಾಂತಿ ಸಂಧಾನಗಳನ್ನು ನಡೆಸಿ ಶ್ರೀಮಂತರು ಖಾಸಗಿ ಆಸ್ತಿಯನ್ನು ಬಿಟ್ಟುಕೊಡದಿದ್ದಾಗ ಮನವೊಲಿಸುವುದರ ಮೂಲಕ ತಿಳಿಹೇಳಬೇಕು. ಅದಾಗದಿದ್ದರೆ ಹಿಂಸೆಗಿಳಿಯಬಹುದು. ಆದರೆ, ಹಿಂಸೆಗಿಂತಲೂ ಮನಪರಿವರ್ತನೆಯೇ ಹೆಚ್ಚು ಫಲಕಾರಿ ಎಂಬುದು ಬುದ್ಧನ ಮಾರ್ಗ.

5. ಕಮ್ಯುನಿಸ್ಟರು ಕ್ರಾಂತಿಯ ನಂತರವಾದರೂ ಬುದ್ಧನ ಮಾರ್ಗವನ್ನು ಒಪ್ಪಿಕೊಂಡು ಅಳವಡಿಸಿಕೊಂಡು ಪ್ರಜಾಪ್ರಭುತ್ವದೆಡೆಗೆ ಚಲಿಸಬೇಕು.

6. ಹಾಗಾಗಿ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಗುರಿ ಒಂದೇ. ಮಾರ್ಗಗಳು ಬೇರೆ.

ಅಂಬೇಡ್ಕರ್‌ವಾದಿಗಳು ಮತ್ತು ಮಾರ್ಕ್ಸ್‌ವಾದಿಗಳ ಕೈಜೋಡಿಸುವಿಕೆ ಅನಿವಾರ್ಯ

ಅಂಬೇಡ್ಕರ್ ಅವರು ಕಮ್ಯುನಿಸಂ ಅನ್ನು ವಿರೋಧಿಸುತ್ತಿದ್ದರು ಎಂದು ಬಿಂಬಿಸಲಾಗಿದೆ. ಇದಕ್ಕೆ ಕಾರಣ ಅವರ ಕಾಲಘಟ್ಟದಲ್ಲಿ ಭಾರತೀಯ ಕಮ್ಯುನಿಸ್ಟರಲ್ಲಿದ್ದ ಅಸಡ್ಡೆಯಾಗಿತ್ತು. ಜಾತಿಯಾಧಾರಿತ ಹೋರಾಟವು ವರ್ಗಹೋರಾಟವನ್ನು ವಿಭಜಿಸುತ್ತದೆ ಎಂದು ಭಾವಿಸಿದ್ದು ಮಾತ್ರವಲ್ಲ, ಸ್ವತಃ ಕಮ್ಯುನಿಸ್ಟ್ ನಾಯಕರಲ್ಲಿಯೇ ಜಾತೀಯತೆ ಮನೆ ಮಾಡಿದ್ದು ಅಂಬೇಡ್ಕರ್ ಅವರಿಗೆ ಬೇಸರ ಉಂಟುಮಾಡಿದ್ದು ನಿಜವೇ ಆಗಿದೆ. ಆದರೆ ಅಂಬೇಡ್ಕರ್ ಅವರು ಕಮ್ಯುನಿಸ್ಟರ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದರು ಹಾಗೂ ಅವರೊಡನೆ ಅಂತರ ಕಾಯ್ದುಕೊಂಡದ್ದು ನಿಜವಾದರೂ ಅಂಬೇಡ್ಕರ್ ಅವರು ತಮ್ಮ ಮೊದಲ ಗುರು ಬುದ್ಧನೊಂದಿಗೆ ಕಾರ್ಲ್ ಮಾರ್ಕ್ಸ್‌ರನ್ನು ಸಮೀಕರಿಸಿ ಇಬ್ಬರ ನಡುವಿನ ಸಮಾನ ಅಂಶ ಹಾಗೂ ವ್ಯತ್ಯಾಸಗಳನ್ನು ಹುಡುಕಲು ಪ್ರಯತ್ನಿಸಿದ್ದು, ಮಾರ್ಕ್ಸ್‌ವಾದದ ಬಗೆಗೆ ಅವರಿಗಿದ್ದ ಕಾಳಜಿಯನ್ನು ತಿಳಿಸುತ್ತದೆ. ಹಾಗೆಂದು ಅಂಬೇಡ್ಕರ್, ಮಾರ್ಕ್ಸ್‌ವಾದವನ್ನು ಸಂಪೂರ್ಣ ಒಪ್ಪಿಕೊಂಡುಬಿಟ್ಟಿದ್ದರೆಂದು ವಾದಿಸುವುದು ಹಾಸ್ಯಾಸ್ಪದವಾಗುತ್ತದೆ.

ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ? (ಭಾಗ-2)

ಅಂಬೇಡ್ಕರ್ ಅವರನ್ನು ಮಾರ್ಕ್ಸ್‌ವಾದದ ವಿರೋಧಿಯಾಗಿಸುವುದರಲ್ಲಿ ಭಾರತೀಯ ಮಾರ್ಕ್ಸ್‌ವಾದಿಗಳ ಪಾಲು ಹೆಚ್ಚಿದೆಯಾದರೂ ಮಹಾರಾಷ್ಟ್ರದ ಅಂಬೇಡ್ಕರ್‌ವಾದಿಗಳು ಹಿಂದೆ ಬೀಳಲಾರರು. ಅಂಬೇಡ್ಕರ್ ಅವರು, ದುಡಿವ ಸಮುದಾಯಕ್ಕೆ ಶತ್ರುಗಳೆಂದು ಹೇಳಿದ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯ ಜೊತೆ ಬಹಿರಂಗವಾಗಿಯೇ ಕೈಜೋಡಿಸುವ ಅವಕಾಶವಾದಿ ದಲಿತ ನಾಯಕರು, ಜಗತ್ತಿನ ಶ್ರಮಿಕರೆಲ್ಲರೂ ಸಂಘಟಿತರಾಗಿ ವಿಮೋಚನೆ ಪಡೆಯಬೇಕೆಂದು ಸಾರಿದ ಮಾರ್ಕ್ಸ್‌ನನ್ನು ಇಂದಿಗೂ ಶತ್ರುಗಳಂತೆಯೇ ನೋಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಭಾರತೀಯ ಮಾರ್ಕ್ಸ್‌ವಾದಿಗಳು ಅಂಬೇಡ್ಕರ್ ರವರ ಚಿಂತನೆಗಳನ್ನು ಆದ್ಯತೆಯಾಗಿ ಪರಿಗಣಿಸಿ ಬ್ರಾಹ್ಮಣ್ಯದ ವಿರುದ್ಧ ಸಂಘಟಿಸಲು ಹಿಂದುಮುಂದು ನೋಡುತ್ತಿದ್ದಾರೆ. ಅಂಬೇಡ್ಕರ್‌ವಾದ ಮತ್ತು ಮಾರ್ಕ್ಸ್‌ವಾದ ಈ ಇಬ್ಬರ ನಡುವೆ ನಿಜವಾಗಿಯೂ ಸಿಲುಕಿ ನರಳುತ್ತಿದೆ. ಬಹುಮುಖ್ಯವಾಗಿ ಯಾವುದೇ ವಾದವನ್ನು ನಿಂತ ನೀರಾಗಿಸಬಾರದು. ಹಾಗೇನಾದರೂ ಮಾಡಿದರೆ ಆನೆಯನ್ನು ಮುಟ್ಟಿದ ಕುರುಡನಂತೆ ತರಹೇವಾರಿ ವ್ಯಾಖ್ಯಾನವನ್ನು ನೀಡಿ ತಮಗೆ ಬೇಕಾದಂತೆ ವಾದಗಳನ್ನು ತಿರುಚಿಕೊಂಡು ಬಿಡುತ್ತಾರೆ. ಅಂಬೇಡ್ಕರೋತ್ತರ ಭಾರತದ ಮುಂಚೂಣಿ ದಲಿತ ರಾಜಕೀಯ ನಾಯಕರು ಮಾಡಿದ್ದು ಇದೇ ಆಗಿದೆ. ಅವಕಾಶವಾದಿಗಳಂತೂ ನಾ ಮುಂದು ತಾ ಮುಂದು ಎಂದು ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ ನೇತೃತ್ವದ ರಾಜಕೀಯ ಪಕ್ಷಗಳಲ್ಲಿ ಸೇರಿಕೊಂಡು ಅಂಬೇಡ್ಕರ್ ರಥವನ್ನು ಹಿಂದೆ ಎಳೆಯುತ್ತಿದ್ದಾರೆ.

ಆನಂದ್ ತೇಲ್ತುಂಬ್ಡೆ ಅವರು ತಿಳಿಸುವಂತೆ ಅಂಬೇಡ್ಕರ್ ಅವರು ಎಂದಿಗೂ ಮಾರ್ಕ್ಸ್‌ವಾದಿ ಆರ್ಥಿಕತೆಯನ್ನು ಎತ್ತಿ ಹಿಡಿಯಲಿಲ್ಲವಾದರೂ ಅವರು ಕೊನೆಯವರೆಗೂ ಮಾರ್ಕ್ಸ್‌ವಾದಿ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದರು. ಅಂಬೇಡ್ಕರ್ ಪ್ರತಿಪಾದಿಸಿದ ಪ್ರಭುತ್ವ ಸಮಾಜವಾದವು ಬಂಡವಾಳಶಾಹಿಯ ನಿರ್ಮೂಲನೆಯನ್ನು ಬಯಸುತ್ತದೆಯಾದರೂ ಪ್ರಭುತ್ವವನ್ನು ನಿರ್ಮೂಲನೆ ಮಾಡಲು ಬಯಸುವುದಿಲ್ಲ. ಆದರೆ ಮಾರ್ಕ್ಸ್‌ವಾದವು ಸ್ವತಃ ಪ್ರಭುತ್ವವೇ ಬಂಡವಾಳಶಾಹಿಯ ಸೃಷ್ಟಿಯಾಗಿದ್ದು ಅದು ಎಂದಿಗೂ ಬಂಡವಾಳಶಾಹಿಯನ್ನು ನಿರ್ಮೂಲನೆ ಮಾಡುವುದಿಲ್ಲ ಎನ್ನುವುದಾಗಿತ್ತು. ಈ ಗಂಭೀರ ವಿಚಾರವು ಇಂದಿಗೆ ಅತಿ ಹೆಚ್ಚು ಚರ್ಚೆಗೆ ಒಳಪಡಬೇಕಾಗಿದೆ. ಪ್ರಪಂಚದ ಯಾವ ಪ್ರಭುತ್ವವು ಬಂಡವಾಳಶಾಹಿಯ ವಿರುದ್ಧ ಹೋರಾಡುತ್ತಿದೆ ಹಾಗೂ ಬಂಡವಾಳಶಾಹಿಯನ್ನು ನಿರ್ನಾಮ ಮಾಡಲು ಬಯಸುತ್ತಿದೆ ಎಂಬ ತಿಳಿವಳಿಕೆಯು ನಮಗಿಂದು ಉತ್ತರ ನೀಡಬಲ್ಲದು. ಕಮ್ಯುನಿಸ್ಟ್ ರಾ‍‍ಷ್ಟ್ರಗಳೆಂದು ಸೋಗು ಹಾಕಿಕೊಂಡ ರಷ್ಯಾ ಮತ್ತು ಚೀನಾ ದೇಶಗಳಿಂದು ಬಂಡವಾಳಶಾಹಿಯ ತಂಪಿನ ತಾಣಗಳಾಗಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇನ್ನು ಅಮೆರಿಕ ಬಂಡವಾಳಶಾಹಿಯ ಸಾಕು ತಂದೆಯೆಂದೇ ಹೇಳಬಹುದು. ನಮ್ಮ ದೇಶದ ಕಮ್ಯುನಿಸ್ಟ್ ರಾಜ್ಯಗಳಾಗಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರಗಳು ಯಾವ ಪರಿಯಲ್ಲಿ ಬಂಡವಾಳಶಾಹಿಯನ್ನು ಸಲಹುತ್ತಿವೆ ಎಂಬುದೂ ತಿಳಿದಿದೆ. ಅಷ್ಟೇ ಏಕೆ ಸ್ವತಃ ಮಾರ್ಕ್ಸ್ ಬೋಧನೆಗಳಿಂದಲೂ ಇಂದು ನವಉದಾರೀಕರಣದ ದುಷ್ಟತನವನ್ನು ಭೇದಿಸಲು ಅಸಾಧ್ಯವುಂಟಾಗಿದೆ.

ಅದೇನೇ ಇರಲಿ, ಅಂಬೇಡ್ಕರ್ ಅವರಿಗೆ ರಷ್ಯಾ ಕ್ರಾಂತಿಯ ಬಗ್ಗೆ ಒಂದು ರೀತಿಯ ಮೆಚ್ಚುಗೆ ಇತ್ತು. 1922ರಲ್ಲಿ ಜೋಸೆಫ್ ಸ್ಟ್ಯಾಲಿನ್ ಅಧಿಕಾರ ವಹಿಸಿಕೊಂಡಾಗ ಕಮ್ಯುನಿಸ್ಟ್ ರಾಷ್ಟ್ರವೊಂದು ಚಮ್ಮಾರರ ಮಗನನ್ನು ಅಧ್ಯಕ್ಷನನ್ನಾಗಿಸಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಸ್ಟ್ಯಾಲಿನ್ ಸತ್ತಾಗ ಅಂಬೇಡ್ಕರ್ ಅವರು ಉಪವಾಸ ಆಚರಿಸುವ ಮೂಲಕ ದುಃಖ ವ್ಯಕ್ತಪಡಿಸಿದ್ದರು ಎಂದೂ ಹೇಳಲಾಗುತ್ತದೆ. ಹಾಗಾಗಿ ತೇಲ್ತುಂಬ್ಡೆಯವರ ಪ್ರಕಾರ ಅಂಬೇಡ್ಕರ್ ಅವರಿಗೆ ಸ್ಥಳೀಯ ಕಮ್ಯುನಿಸ್ಟರ ಬಗ್ಗೆ ಅಸಮಾಧಾನವಿತ್ತೇ ಹೊರತು ಅಂತಾರಾಷ್ಟ್ರೀಯ ಮಟ್ಟದ ಕಮ್ಯುನಿಸ್ಟರ ಬಗ್ಗೆ ಒಂದು ರೀತಿಯ ಆಸಕ್ತಿ ಇತ್ತು. ಅವರಿಗೆ ಕಮ್ಯುನಿಸಂ ಸಿದ್ಧಾಂತಕ್ಕಿಂತಲೂ ಅದನ್ನು ಜಾರಿಗೊಳಿಸುವ ರೀತಿಯಲ್ಲಿ ತಕರಾರು ಇತ್ತು.

ಬಾಂಬೆಯ ಡಾಂಗೆಯೊಂದಿಗಿನ ಸಂಘರ್ಷವು ಅಂಬೇಡ್ಕರರನ್ನು ಕಮ್ಯುನಿಸ್ಟರಿಂದ ಮತ್ತಷ್ಟು ದೂರ ಸರಿಸಿತು. 1952ರ ಚುನಾವಣೆಯಲ್ಲಿ ಪತ್ರಿಕಾ ಸಂದರ್ಶನ ಒಂದಕ್ಕೆ ಅಂಬೇಡ್ಕರ್ ನೀಡಿದ ಹೇಳಿಕೆ ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ:

ʻಕಮ್ಯುನಿಸ್ಟ್ ಪಕ್ಷವು ಮೂಲಭೂತವಾಗಿ ಡಾಂಗೆ ಮತ್ತು ಇತರೆ ಬ್ರಾಹ್ಮಣರ ಕೈಯಲ್ಲಿದೆ. ಅವರು ಮರಾಠರು ಮತ್ತು ಪರಿಶಿಷ್ಟ ಜಾತಿಗಳ ಮನಸ್ಸು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಮುನ್ನಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ಏಕೆ? ಏಕೆಂದರೆ ಅವರು ಬಹುತೇಕ ಬ್ರಾಹ್ಮಣರ ಒಂದು ಗುಂಪಾಗಿದ್ದಾರೆ. ಭಾರತದ ಕಮ್ಯುನಿಸ್ಟ್ ಚಳವಳಿಯನ್ನು ಇವರಿಗೆ ಒಪ್ಪಿಸಿ ರಷ್ಯನ್ನರು ಬಹುದೊಡ್ಡ ತಪ್ಪೆಸಗಿದ್ದಾರೆ. ರಷ್ಯನ್ನರಿಗೂ ಅಷ್ಟೆ, ಭಾರತದಲ್ಲಿ ಕಮ್ಯುನಿಸಂ ಸ್ಥಾಪನೆಯಾಗುವುದು ಬೇಕಿಲ್ಲ. ಕೇವಲ ಬಾಯಿಬಡಿದುಕೊಳ್ಳುವವರು ಬೇಕಾಗಿದ್ದಾರೆ ಅಥವಾ ಅವರಿಗೆ ಇಲ್ಲಿನ ಪರಿಸ್ಥಿತಿಯೇ ಅರ್ಥವಾಗಿಲ್ಲ?’

ಡಾಂಗೆ ಭಗವದ್ಗೀತೆಯ ಆರಾಧಕರಾಗಿದ್ದರಲ್ಲದೆ, ಚಾತುರ್ವರ್ಣ ಧರ್ಮದ ಪ್ರತಿಪಾದಕರಾಗಿದ್ದರು. ಇಂಥವರನ್ನು ನಾಯಕರನ್ನಾಗಿ ಹೊಂದಿದ್ದ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಅಂಬೇಡ್ಕರ್ ರವರಿಗೆ ಸಕಾರಾತ್ಮಕ ಧೋರಣೆ ಇರಲು ಹೇಗೆ ಸಾಧ್ಯ?

ಇದನ್ನೂ ಓದಿರಿ: ‘ರೂಪಾಯಿಯ ಸಮಸ್ಯೆ’ಯ ಮೂಲಕ್ಕೆ ಬಾಬಾಸಾಹೇಬರ ಮಲಾಮು (ಭಾಗ-2)

ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರ ನಿರ್ಮಾಣವಾಗಲು ಬಿಡಬಾರದು ಎಂದಿದ್ದ ಅಂಬೇಡ್ಕರ್, ಪ್ರಜಾಪ್ರಭುತ್ವದ ಮೂಲಕ ಸಮಸಮಾಜ ಸ್ಥಾಪನೆಯಾಗಬೇಕು ಎಂದು ಬಯಸಿದ್ದರು ಎಂಬುದು ಎಲ್ಲವನ್ನೂ ತಿಳಿಸುತ್ತದೆ.

ಕೊನೆಯದಾಗಿ, ಅಂಬೇಡ್ಕರ್ ಅವರು ಸಮಸಮಾಜ ನಿರ್ಮಾಣಕ್ಕಾಗಿ ಜಾತಿವಿನಾಶ ಮತ್ತು ಪ್ರಭುತ್ವ ಸಮಾಜವಾದವನ್ನು ಬಯಸಿದರು. ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ ದುಡಿಯುವ ವರ್ಗದ ಶತ್ರುಗಳೆಂದು ಕರೆ ಕೊಟ್ಟರು. ಯಾವುದೇ ಬೆಲೆ ತೆತ್ತಾದರೂ ಹಿಂದೂ ರಾಷ್ಟ್ರ ನಿರ್ಮಾಣವಾಗುವುದನ್ನು ತಡೆಯಬೇಕೆಂದರು. ಇಂದಿನ ಕಮ್ಯುನಿಸ್ಟ್ ಪಕ್ಷದ ಪ್ರಜ್ಞಾವಂತರೂ ಜಾತಿವಿನಾಶದ ಕಡೆ ಮುಖ ಮಾಡುತ್ತಿದ್ದಾರೆ. ಬ್ರಾಹ್ಮಣ್ಯದ ಮಜಲುಗಳನ್ನು ಅರಿಯುತ್ತಿದ್ದಾರೆ. ಜಾತಿಪದ್ಧತಿಯ ಕ್ರೌರ್ಯವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ ಅಂಬೇಡ್ಕರ್‌ವಾದಿಗಳು ಬಂಡವಾಳಶಾಹಿಯ ಬಗ್ಗೆ ಇರಿಸಿದ್ದ ಭ್ರಮೆ ಕಳಚಿಬಿದ್ದಿದೆ. ಹೀಗಿರುವಾಗ ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟದಲ್ಲಿ ಅಂಬೇಡ್ಕರ್‌ವಾದಿ ಮತ್ತು ಮಾರ್ಕ್ಸ್‌ವಾದಿ ಶಕ್ತಿ ಒಂದಾಗುವುದು ಇಂದಿನ ತುರ್ತು ಮತ್ತು ಅನಿವಾರ್ಯವಾಗಿದೆ. ಯಾರೇನೇ ಅಂದರೂ ಮುಂದಿನ ದಿನಗಳು ಈ ಇಬ್ಬರು ಮಹನೀಯರ ನಿಜ ಅನುಯಾಯಿಗಳ ಹೋರಾಟವನ್ನು ಕಣ್ತುಂಬಿಕೊಳ್ಳುತ್ತವೆ.

vikas r mourya
ವಿಕಾಸ್‌ ಆರ್‌ ಮೌರ್ಯ
+ posts

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್‌ ಆರ್‌ ಮೌರ್ಯ
ವಿಕಾಸ್‌ ಆರ್‌ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...