“ಧರ್ಮ ಅಪಾಯದಲ್ಲಿದೆ” ಎಂಬುದು ಭಯ ಮತ್ತು ದ್ವೇಷದ ಮೇಲೆ ಕಟ್ಟಿದ ಸುಳ್ಳು. ಭಾರತದ ಧರ್ಮಗಳು ಶತಮಾನಗಳಿಂದ ಸುರಕ್ಷಿತವಾಗಿವೆ.
ಸಂಘಪರಿವಾರ ಹಬ್ಬಿಸುವ ಸುಳ್ಳುಗಳಿಗೆ ಮಿತಿಯೆಂಬುದಿಲ್ಲ. ಈ ದೇಶವನ್ನು 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಸ್ಲಿಂ ದೊರೆಗಳು ಆಳಿದರು. ಆದರೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ನರಾದ ಬ್ರಿಟಿಷರು 200ಕ್ಕೂ ಹೆಚ್ಚು ವರ್ಷ ಆಳಿದರು. ಆದರೆ ಭಾರತವನ್ನು ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ.
ಈಗ ಈ ದೇಶವನ್ನು ಹಿಂದುತ್ವವಾದಿಗಳಿಂದ ಹಿಂದೂ ಹೃದಯ ಸಾಮ್ರಾಟ ಎಂದು ಕರೆಸಿಕೊಳ್ಳುವ ಮೋದಿಯವರು 11 ವರ್ಷದಿಂದ ಆಳುತ್ತಿದ್ದಾರೆ. ಹೀಗಿರುವಾಗ ಮುಸ್ಲಿಂ ರಾಷ್ಟ್ರವಾಗಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಜನರು ಕೇಳಿಕೊಳ್ಳಬೇಕು
ಭಾರತ- ಶತಕೋಟಿ ಕನಸುಗಳ ನಾಡು. ಲೆಕ್ಕವಿರದಷ್ಟು ನಂಬಿಕೆಗಳು, ಆಚಾರ ವಿಚಾರಗಳು, ಸಂಸ್ಕೃತಿಗಳು, ಉಡುಗೆ ತೊಡುಗೆಗಳು, ವೈವಿಧ್ಯಮಯ ಊಟೋಪಚಾರಗಳು ಈ ನೆಲದಲ್ಲಿವೆ. ಇಂತಹ ದೇಶ ಮುಸ್ಲಿಂ ರಾಷ್ಟ್ರವಾಗಬಹುದೇ?
ಇಂತಹ ಪ್ರಶ್ನೆ ಹುಟ್ಟಲೂ ಕಾರಣವಿದೆ. ‘2025ಕ್ಕೆ ಭಾರತ ಮುಸ್ಲಿಂ ರಾಷ್ಟ್ರ, ಶಾಕಿಂಗ್ ರಿಪೋರ್ಟ್ ಬಹಿರಂಗ, ಹಾಗಾದ್ರೆ ಹಿಂದೂಗಳ ಜನಸಂಖ್ಯೆ ಎಷ್ಟು?’ ಎಂಬ ಶೀರ್ಷಿಕೆಯಡಿ 2024ರ ಡಿಸೆಂಬರ್‌ನಲ್ಲಿ ಕನ್ನಡ ದಿನಪತ್ರಿಕೆಯ ಜಾಲತಾಣವೊಂದರಲ್ಲಿ ವರದಿ ಬರೆಯಲಾಗಿತ್ತು. ‘2025ಕ್ಕೆ ಭಾರತ ಮುಸ್ಲಿಂ ರಾಷ್ಟ್ರ’ ಎಂದು ಶೀರ್ಷಿಕೆಯಲ್ಲಿ ಬಳಸಿದ್ದರೂ ಸದರಿ ವಿಡಿಯೊ ವರದಿಗೆ ಬಳಸಿದ ಥಮ್‌ನೈಲ್‌ನಲ್ಲಿ ‘2050ಕ್ಕೆ ಭಾರತ ಮುಸ್ಲಿಂ ರಾಷ್ಟ್ರ’ ಎಂಬ ಸಾಲು ಇತ್ತು.
2027ಕ್ಕೆ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ಎಂದು ಉತ್ತರ ಪ್ರದೇಶದ ಹಿಂದೂ ಯುವವಾಹಿನಿ ಸಂಘಟನೆ ಆರೋಪ ಮಾಡಿದೆ. ಈ ಸಂಘಟನೆಯನ್ನು ಸ್ಥಾಪಿಸಿದವರು ಅಲ್ಲಿನ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಈಗಲೂ ಯೋಗಿಯವರು ಈ ಸಂಘಟನೆಯ ಪೋಷಕರೆಂಬುದು ಗಮನಾರ್ಹ.
“2030ಕ್ಕೆ ಭಾರತ ಇಸ್ಲಾಂ ದೇಶವಾಗುವುದನ್ನು ಯಾರೂ ತಪ್ಪಿಸಲಾಗದೆ..!” ಎಂಬ ಶೀರ್ಷಿಕೆಯುಳ್ಳ, ಶ್ರೀಪಮಾ ಎಂಬುವವರು ಬರೆದಿದ್ದಾರೆಂದು ಬಿಂಬಿಸಿ, ಪತ್ರಿಕಾ ವರದಿಯಂತೆ ಕಾಣುವ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ.
‘ಹಿಂದುಗಳೇ.. ದುಡ್ಡು ಮಾಡುತ್ತೀರಿ, ನಿದ್ದೆ ಮಾಡುತ್ತೀರಿ..’ ಎಂಬ ವ್ಯಂಗ್ಯದಿಂದ ಶುರುವಾಗುವ ಈ ಬರಹದಲ್ಲಿ, “2031ರ ವೇಳೆಗೆ ಹಿಂದೂಗಳ ಜನಸಂಖ್ಯೆ 60.4%ಗೆ ಕುಸಿದರೆ ಮುಸ್ಲಿಂ ಜನಸಂಖ್ಯೆ 38.1%ಗೆ ಏರುವುದಾಗಿಯೂ, 2041ರಲ್ಲಿ ಹಿಂದೂಗಳು 11.2%ಗೆ ಕುಸಿದರೆ, ಮುಸ್ಲಿಮರು 84.5%ಗೆ ಏರಿಕೆಯಾಗುತ್ತಾರೆ ಎಂದೂ ಬರೆಯಲಾಗಿದೆ.

“ನಾವು ತ್ರಿಶೂಲ ಹಿಡಿದು ರಸ್ತೆಗಿಳಿಯದಿದ್ದರೆ ಮುಂದಿನ 5-7 ವರ್ಷಗಳಲ್ಲಿ ಭಾರತವು ಮುಸ್ಲಿಂ ರಾಷ್ಟ್ರವಾಗಲಿದೆ” ಎಂದು ಬಿಜೆಪಿ ಮುಖಂಡ ಜೈ ಭಗವಾನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ‘ಸಿಲಿಕಾನ್ ವ್ಯಾಲಿ ಬೆಂಗಳೂರು’ ಎಂಬ ವಿಸ್ಮಯ!
ಈ ತೆರನಾಗಿ ಮಾತಾಡುವ ನೂರಾರು ಜನರನ್ನು, ವಾಟ್ಸ್ಯಾಪ್ ಮೆಸೇಜ್ ಫಾರ್ವಾಡ್ ಮಾಡಿರುವವರನ್ನು ನೀವು ನೋಡಿರಬಹುದು. ಆದರೆ ನಿಜಕ್ಕೂ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆಯೇ ಎಂದು ಚರ್ಚಿಸಬೇಕಿದೆ.
ಸ್ವಾತಂತ್ರ್ಯ ನಂತರ ನಡೆದ 1951ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆ 36 ಕೋಟಿ.
ಅವರಲ್ಲಿ ಹಿಂದೂಗಳು: 30.36 ಕೋಟಿ – 84.1%
ಮುಸ್ಲಿಮರು: 3.54 ಕೋಟಿ – 9.8%.
2011ರ ಜನಗಣತಿ – ಒಟ್ಟು ಜನಸಂಖ್ಯೆ 121 ಕೋಟಿ
ಹಿಂದೂಗಳು: 96.6 ಕೋಟಿ – 79.8%
ಮುಸ್ಲಿಮರು: 17.2 ಕೋಟಿ – 14.2%
ಪ್ಯೂ ರಿಸರ್ಚ್ ಸೆಂಟರ್, ವಿಶ್ವಸಂಸ್ಥೆ, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ ಥರದ ವಿಶ್ವಾಸಾರ್ಹ ಸಂಸ್ಥೆಗಳ ಪ್ರಕಾರ “2025ಕ್ಕೆ ಭಾರತದ ಒಟ್ಟು ಜನಸಂಖ್ಯೆ – 146 ಕೋಟಿ.”
ಹಿಂದೂಗಳು: 116 ಕೋಟಿ – 78%
ಮುಸ್ಲಿಮರು: 23 ಕೋಟಿ – 16%
2050ಕ್ಕೆ ಅಂದಾಜಿಸುವುದಾದರೆ ನಮ್ಮ ದೇಶದ ಒಟ್ಟು ಜನಸಂಖ್ಯೆ – 167 ಕೋಟಿ
ಹಿಂದೂಗಳು: 128-130 ಕೋಟಿ ಇರಬಹುದು- 77%
ಮುಸ್ಲಿಮರು: 30-31 ಕೋಟಿ ಇರಬಹುದು – 17%
ಹೀಗಿರುವಾಗ ಭಾರತ ಮುಸ್ಲಿಂ ರಾಷ್ಟ್ರವಾಗಲು ಹೇಗೆ ಸಾಧ್ಯ? ನಮ್ಮ ಸಂವಿಧಾನ ಹೇಳಿದಂತೆ ಎಲ್ಲ ಧರ್ಮ-ಜಾತಿ-ವರ್ಣಗಳ ಸೆಕ್ಯುಲರ್ ದೇಶವಾಗಿಯೇ ಭಾರತ ಉಳಿಯುತ್ತದೆ. ಬಹುತ್ವ ಹಾಳಾಗುವುದಿಲ್ಲ. ಎಲ್ಲ ಕಾಲಕ್ಕೂ ಹಿಂದೂಗಳೇ ಬಹುಸಂಖ್ಯಾತರಾಗಿರುವ ದೇಶ ಭಾರತವಾಗಿರುತ್ತದೆ.
ಮುಸ್ಲಿಮರ ಜನಸಂಖ್ಯೆ ಹೆಚ್ಚುವುದಿಲ್ಲ ಎಂಬುದಕ್ಕೆ ಸರ್ಕಾರದ್ದೇ ಅಂಕಿ- ಅಂಶಗಳು ಆಧಾರ ಒದಗಿಸುತ್ತಿವೆ. ಅದರಲ್ಲಿ ಮೊದಲನೆಯದ್ದು ಫಲವತ್ತತೆಯ ದರ (ಫರ್ಟಿಲಿಟಿ ರೇಟ್). 1950ರಲ್ಲಿ ಭಾರತದ ಫಲವತ್ತೆತೆಯ ದರ 6.2 ಇತ್ತು. ಅಂದರೆ ದೇಶದ ಮಹಿಳೆಯರು ಸರಾಸರಿ 6 ಮಕ್ಕಳನ್ನು ಹೆರುತ್ತಿದ್ದರು. ಈಗ ಅದು ಕೇವಲ 2.0ಗೆ ಬಂದು ನಿಂತಿದೆ. ಅಂದರೆ ಸದ್ಯ ಕೇವಲ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಅಷ್ಟೇ. ಅಲ್ಲದೆ ಈ ದರವು ಮತ್ತಷ್ಟು ಕುಸಿಯುವ ಸಂಭವವಿದೆ.
ಧರ್ಮದ ಆಧಾರದಲ್ಲಿ ನೋಡುವುದಾದರೆ ಮುಸ್ಲಿಂ ಮಹಿಳೆಯರ ಫಲವತ್ತತೆಯ ದರ ಹಿಂದೂಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಕುಸಿತ ಕಾಣುತ್ತಿದೆ. ಹಾಗಾಗಿ ಕಳೆದ ಮೂರು ದಶಕಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ದರ ಇಳಿದಿದೆ.
ಇದನ್ನೂ ಓದಿರಿ: ಮೋದಿಯ ಟೀಕಿಸುತ್ತಿದ್ದ ರಾಣೆ, ಮುಸ್ಲಿಂ ದ್ವೇಷಿಯಾಗಿದ್ದು ಹೇಗೆ?
2021ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NHFS-5) ಪ್ರಕಾರ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3ರಿಂದ 1.9ಕ್ಕೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ 4.1ರಿಂದ 2.3ಕ್ಕೆ ಕುಸಿದಿದೆ. ಅಂದರೆ 1992-93 ರಿಂದ 2021ರವರೆಗೆ ಮುಸ್ಲಿಮ್ ಮಹಿಳೆಯರ ಫಲವತ್ತತೆ ದರದಲ್ಲಿ 46.5% ಇಳಿಕೆ ಕಂಡರೆ ಹಿಂದೂಗಳಲ್ಲಿ 41.2% ಇಳಿಕೆಯಾಗಿದೆ ಎಂದು ದತ್ತಾಂಶ ಸೂಚಿಸುತ್ತದೆ. ಅಂದರೆ ಸ್ವಲ್ಪ ಪ್ರಮಾಣದಲ್ಲಿ ಮುಸ್ಲಿಮರಲ್ಲಿ ಹೆಚ್ಚಿನ ಇಳಿಕೆ ಕಂಡಿದೆ. ಇವುಗಳ ಆಧಾರದಲ್ಲಿ 2030ರ ವೇಳೆಗೆ ಎರಡೂ ಧರ್ಮದವರ ಫಲವತ್ತತೆಯ ದರ ಸಮಾನಾಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.
ಜನಸಂಖ್ಯೆ ಬೆಳವಣಿಗೆಗೂ ಧರ್ಮಕ್ಕೂ ಸಂಬಂಧವಿಲ್ಲ
ಈ ಹಿಂದೆ ಮುಸ್ಲಿಮ್ ಜನಸಂಖ್ಯೆ ಸ್ವಲ್ಪ ವೇಗವಾಗಿ ಬೆಳೆಯುತ್ತಿದ್ದುದು ನಿಜ. ಅದಕ್ಕೆ ಕಾರಣ ಆ ಮಹಿಳೆಯರಲ್ಲಿದ್ದ ಅನಕ್ಷರತೆ, ಬಡತನ ಕಾರಣವೇ ಹೊರತು ಧರ್ಮವಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮುದಾಯದಲ್ಲಿಯೂ ಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಿಳಿವಳಿಕೆ ಹೆಚ್ಚಾದಂತೆ ಜನಸಂಖ್ಯಾ ನಿಯಂತ್ರಣ ಸಾಧ್ಯವಾಗುತ್ತಿದೆ.
ಶಿಕ್ಷಣ ಇಲ್ಲದಿದ್ದರೆ ಬೇಗ ಮದುವೆ ಮಾಡಲಾಗುತ್ತದೆ. ಹೆಚ್ಚು ಮಕ್ಕಳಾಗುತ್ತವೆ. ಮುಸ್ಲಿಮ್ ಮಹಿಳೆಯರ ಸಾಕ್ಷರತೆ ಕೇವಲ 68% ಇದ್ದರೆ ಮದುವೆಯ ಸರಾಸರಿ ವಯಸ್ಸು 22 ಇದೆ. ಆದರೆ ಹಿಂದೂ ಮಹಿಳೆಯರ ಸಾಕ್ಷರತೆ 72% ಇದೆ ಮತ್ತು ಮದುವೆಯ ಸರಾಸರಿ ವಯಸ್ಸು 24 ವರ್ಷ ಆಗಿದೆ. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ದರ ಹೆಚ್ಚಿದೆ. ಆದರೆ ಮುಂದೆ ದಿನಗಳಲ್ಲಿ ಈ ಪ್ರಮಾಣ ಕುಸಿಯುವ ಸಾಧ್ಯತೆಯನ್ನು ಅಂಕಿಅಂಶಗಳು ನಿಚ್ಚಳವಾಗಿ ಸೂಚಿಸುತ್ತಿವೆ.

ಉದಾಹರಣೆಗೆ ಲಕ್ಷದ್ವೀಪದಲ್ಲಿ 96% ಮುಸ್ಲಿಮರಿದ್ದಾರೆ. ಅಲ್ಲಿ 87% ಮಹಿಳಾ ಸಾಕ್ಷರತೆ ಇರುವ ಕಾರಣದಿಂದ ಅಲ್ಲಿನ ಮಹಿಳೆಯರ ಫಲವತ್ತತೆಯ ದರ ಕೇವಲ 1.4 ಮಾತ್ರ ಇದೆ. ಜಮ್ಮು ಕಾಶ್ಮೀರದಲ್ಲಿಯೂ ಅಷ್ಟೇ. ಅಂದರೆ ಅಲ್ಲಿನ ಮಹಿಳೆಯರು ಒಂದೂವರೆ ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ. ಅಂದರೆ ನಮ್ಮ ಒಟ್ಟಾರೆ ಭಾರತದ ಮಹಿಳೆಯರ ಸರಾಸರಿ ಫಲವತ್ತತೆಯ ದರ 2.0ಕ್ಕಿಂತಲೂ ಕಡಿಮೆ ಈ ಎರಡು ರಾಜ್ಯಗಳ ಮಹಿಳೆಯರ ಫಲವತ್ತತೆಯ ದರ.
ಆದರೆ ಬಿಹಾರದಲ್ಲಿ ಹಿಂದೂಗಳೇ ಅಧಿಕವಿದ್ದರೂ ಅಲ್ಲಿ ಕೇವಲ 51% ಮಹಿಳಾ ಸಾಕ್ಷರತೆ ಇರುವ ಕಾರಣದಿಂದಾಗಿ ಅಲ್ಲಿನ ಮಹಿಳೆಯರ ಫಲವತ್ತತೆಯ ದರ 3.0ಕ್ಕಿಂತಲೂ ಹೆಚ್ಚಿದೆ. ಅಂದರೆ ಅಲ್ಲಿನ ಹಿಂದೂ ಮಹಿಳೆಯರು ಸರಾಸರಿ 3 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಇದನ್ನೂ ಓದಿರಿ: ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಟ್ರಂಪ್ ಪದತಲಕ್ಕೆ ಜಾರಿದ್ದು ಹೇಗೆ?
ಕೇರಳದಂತಹ ರಾಜ್ಯದಲ್ಲಿ, ಹಿಂದೂಗಳು ಮತ್ತು ಮುಸ್ಲಿಮರಿಬ್ಬರ TFR ಸಮಾನವಾಗಿ ಕಡಿಮೆ (1.5–1.7) ಇದೆ. ಏಕೆಂದರೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಎಲ್ಲರಿಗೂ ಸಿಗುತ್ತಿದೆ. ಹಾಗಾಗಿ ಮಹಿಳೆಯರ ಸಾಕ್ಷರತೆಗೂ ಅವರ ಫಲವತ್ತತೆಯ ದರಕ್ಕೂ ಸಂಬಂಧವಿದೆ ಹೊರತು ಧರ್ಮದ ಜೊತೆಗಲ್ಲ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.
ಶಿಕ್ಷಣ, ಅಭಿವೃದ್ದಿ ಸಾಧಿಸಿರುವಲ್ಲಿ ಫಲವತ್ತತೆ ಕಡಿಮೆ ಇರುತ್ತದೆ. ಬಡತನ, ಅನಕ್ಷರತೆ ಇರುವ ಕಡೆ ಫಲವತ್ತತೆ ಹೆಚ್ಚಿದೆ.
ಭಾರತದ ರಾಜ್ಯಗಳನ್ನೇ ಗಮನಿಸಿ. ಶಿಕ್ಷಣ, ಅಭಿವೃದ್ದಿಯಲ್ಲಿ ಮುಂದಿರುವ ದಕ್ಷಿಣದ ರಾಜ್ಯಗಳು ಮತ್ತು ಜಮ್ಮು ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಶಿಕ್ಷಣ ಮತ್ತು ಅಭಿವೃದ್ದಿಯಲ್ಲಿ ಹಿಂದುಳಿದಿರುವ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ಮುಸ್ಲಿಮರು ಹೆಚ್ಚಿರುವುದರಿಂದ ಜನಸಂಖ್ಯೆ ಹೆಚ್ಚಿದ್ದಾರೆಂದು ವಾದಿಸಲು ಸಾಧ್ಯವೇ ಇಲ್ಲ.
ಗಮನಿಸಬೇಕಾದ ಸಂಗತಿ: ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ತೆರೆದುಕೊಂಡ ನಂತರ ಹಿಂದೂಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಜನಸಂಖ್ಯೆ ನಿಯಂತ್ರಿಸುತ್ತಿದ್ದಾರೆ. ಈ ಪ್ರವೃತ್ತಿ ಮುಂದುವರಿದರೆ ಮುಸ್ಲಿಮರ ಜನಸಂಖ್ಯೆ ಕುಸಿಯಲಿದೆ. ಹಾಗಾಗಿ ಭಾರತ ಎಂದೆಂದಿಗೂ ಮುಸ್ಲಿಂ ರಾಷ್ಟ್ರವಾಗಲು ಸಾಧ್ಯವಿಲ್ಲ. ಆದರೆ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಲು ಫಲವತ್ತತೆಯ ದರ 2.1 ಇರಬೇಕು. ದುರದೃಷ್ಟವಶಾತ್ ಭಾರತದ ಫಲವತ್ತತೆ ದರ 2.0ಗೆ ಇಳಿದುಬಿಟ್ಟಿದೆ. ಚೀನಾ ಈಗಾಗಲೇ ಈ ರೀತಿ ಜನಸಂಖ್ಯೆ ಕುಸಿತದ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ. ಮುದುಕರ ನಾಡಾಗಿ ಪರಿವರ್ತಿತವಾಗಿ ದುಡಿಯುವವರಿಲ್ಲದೆ ಆರ್ಥಿಕತೆ ಕುಸಿಯುವ ಅಪಾಯವಿದೆ. ಹಾಗಾಗಿ ನಾವು ಫಲವತ್ತತೆಯ ದರವನ್ನು ಹೆಚ್ಚಿಸಬೇಕು. ಆದರೆ ಎಷ್ಟು ಮಕ್ಕಳನ್ನು ಹೆರಬೇಕು ಎಂದು ಗಂಡಸರು ಎಂದೆಂದಿಗೂ ಬಿಟ್ಟಿ ಸಲಹೆ ಕೊಡಬಾರದು. ಅದನ್ನು ಮಹಿಳೆಯರು ತೀರ್ಮಾನಿಸಬೇಕು. ಅದಕ್ಕೂ ಮುನ್ನ ಶಿಕ್ಷಣ, ಆರೋಗ್ಯ ಸೌಲಭ್ಯಗಳು ಉಚಿತವಾಗಿ ಸಿಗಬೇಕು; ಉತ್ತಮ ಪರಿಸರ ಮತ್ತು ಉದ್ಯೋಗವಕಾಶಗಳು ಸೃಷ್ಟಿಯಾಗಬೇಕು.
ಮತಾಂತರದ ನಕಲಿ ವಾದ
ಮತಾಂತರದ ಮೂಲಕ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ವಾಸ್ತವ ಬೇರೆಯೇ ಇದೆ. ಮತಾಂತರ ಸಂಭವಿಸಿದರೂ 99% ಹಿಂದೂಗಳು ಹಿಂದೂಗಳಾಗಿಯೇ ಉಳಿದಿದ್ದಾರೆ ಎಂದು ಪ್ಯೂ ರಿಸರ್ಚ್ ಹೇಳುತ್ತದೆ.
ಕ್ರಿ.ಶ. 1700ರ ಸಂದರ್ಭದಲ್ಲಿ ಅತಿ ಹೆಚ್ಚು ಮತಾಂತರಗಳು ಸಂಭವಿಸಿವೆ. ಸುಮಾರು 10%ನಿಂದ 25%ವರೆಗೂ ಮತಾಂತರ ಪ್ರಮಾಣ ಇತ್ತೆಂದು ಅಂದಾಜಿಸಲಾಗಿದೆ. ಜಿಜಿಯಾ ತೆರಿಗೆ ಮತ್ತು ಭೂಮಿ ಸರ್ವೆ ಇದಕ್ಕೆ ಆಧಾರಗಳಾಗಿವೆ ಎಂದು ಸಂಶೋಧಕ ರಿಚರ್ಡ್ ಈಟನ್ ತಿಳಿಸಿದ್ದಾರೆ. ಆದರೆ ಅವು ಹೆಚ್ಚಾಗಿ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಸಂಭವಿಸಿದ ವಿದ್ಯಮಾನವಾಗಿದ್ದವು. ದೇಶ ವಿಭಜನೆಯ ಕಾರಣದಿಂದ ಹೆಚ್ಚಿನ ಜನರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೇರಲ್ಪಟ್ಟರು. ಭಾರತ ಸೆಕ್ಯುಲರ್ ರಾಷ್ಟ್ರವಾಗಿಯೇ ಉಳಿಯಿತು.
ಮತಾಂತರಗಳು ನಡೆದಿವೆ, ಸಣ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಕೆಲವರು ಇಸ್ಲಾಂಗೆ, ಕ್ರಿಶ್ಚಿಯನ್ ಧರ್ಮಕ್ಕೆ, ಬೌದ್ಧಧರ್ಮಕ್ಕೂ ಸೇರುತ್ತಿದ್ದಾರೆ. ಆದರೆ ಇದು ಪ್ರವಾಹೋಪಾದಿಯಲ್ಲಿ ಜರುಗಿಲ್ಲ. ಬದಲಾಗಿ ಸಣ್ಣ ಹನಿಗಳ ರೀತಿ ಮತಾಂತರ ನಡೆಯುತ್ತಿದೆ. ಮತ್ತೊಂದೆಡೆ ಹಿಂದೂ ಧರ್ಮಕ್ಕೂ ಕೆಲವರು ಮತಾಂತರ ಆಗುತ್ತಿದ್ದಾರೆ. 13 ರಾಜ್ಯಗಳಲ್ಲಿನ ಕಾನೂನುಗಳು ಮತಾಂತರಗಳನ್ನು ನಿರ್ಬಂಧಿಸುತ್ತವೆ, ಇದರಿಂದಾಗಿ ದೊಡ್ಡ ಮಟ್ಟದ ಕನ್ವರ್ಷನ್ ಅಸಾಧ್ಯವಾಗಿದೆ.
ಇದನ್ನೂ ಓದಿರಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಮುಂದೇನಾಗಬಹುದು?
ಲವ್ ಜಿಹಾದ್: ಹಿಂದೂ ಯುವತಿಯರನ್ನು ಮುಸ್ಲಿಂ ಪುರುಷರು ವಿವಾಹವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಾರೆಂದು ಹಿಂದುತ್ವವಾದಿಗಳು ಪ್ರತಿಪಾದಿಸುವ ಕಲ್ಪಿತ ಪಿತೂರಿ ಸಿದ್ಧಾಂತವೇ ‘ಲವ್ ಜಿಹಾದ್’. ಇಂತಹ ಆರೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2018ರಲ್ಲಿ ಕೇರಳದಲ್ಲಿ 11 ಅಂತರ ಧಾರ್ಮಿಕ ವಿವಾಹಗಳನ್ನು ತನಿಖೆ ಮಾಡಿತು. 2018ರ ಅಕ್ಟೋಬರ್‌ನಲ್ಲಿ ಎನ್‌ಐಎ ವರದಿ ಸಲ್ಲಿಸಿತು. “ಲವ್ ಜಿಹಾದ್” ಎಂಬ ಯಾವುದೇ ಒತ್ತಾಯದ ಪುರಾವೆ ಸಿಗಲಿಲ್ಲ ಎಂದು ತೀರ್ಮಾನಿಸಿತು. ಈ ಪ್ರಕರಣಗಳಲ್ಲಿ ಯಾವುದೇ ವ್ಯಕ್ತಿಯನ್ನು ಧರ್ಮ ಬದಲಾಯಿಸಲು ಬಲವಂತಪಡಿಸಲಾಗಿಲ್ಲ ಎಂಬುದು ಸ್ಪಷ್ಟವಾಯಿತು. ಹಿಂದಿನ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿಯವರೇ, “ಅಂತಹ ದಾಖಲೆಗಳಿಲ್ಲ” ಎಂದು ಸಂಸತ್ತಿನಲ್ಲಿ ಹೇಳಿದ್ದಾರೆ. ಲವ್ ಜಿಹಾದ್ ಎಂಬುದು ಸಂಪೂರ್ಣ ಕಟ್ಟುಕಥೆಯಷ್ಟೆ.
ಸಂಘಪರಿವಾರ ಹಬ್ಬಿಸುವ ಸುಳ್ಳುಗಳಿಗೆ ಮಿತಿಯೆಂಬುದಿಲ್ಲ. ಈ ದೇಶವನ್ನು 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಸ್ಲಿಂ ದೊರೆಗಳು ಆಳಿದರು. ಆದರೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ನರಾದ ಬ್ರಿಟಿಷರು 200ಕ್ಕೂ ಹೆಚ್ಚು ವರ್ಷ ಆಳಿದರು. ಆದರೆ ಭಾರತವನ್ನು ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ.
ಈಗ ಈ ದೇಶವನ್ನು ಹಿಂದುತ್ವವಾದಿಗಳಿಂದ ಹಿಂದೂ ಹೃದಯ ಸಾಮ್ರಾಟ ಎಂದು ಕರೆಸಿಕೊಳ್ಳುವ ಮೋದಿಯವರು 11 ವರ್ಷದಿಂದ ಆಳುತ್ತಿದ್ದಾರೆ. ಹೀಗಿರುವಾಗ ಮುಸ್ಲಿಂ ರಾಷ್ಟ್ರವಾಗಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಜನರು ಕೇಳಿಕೊಳ್ಳಬೇಕು. ಹಿಂದುತ್ವವಾದಿಗಳಿಗೆ ಅಧಿಕಾರ ಬೇಕು. ಅದಕ್ಕಾಗಿ ಅವರು ಕಲ್ಪಿತ ಶತ್ರುವನ್ನು ಸೃಷ್ಟಿಸುತ್ತಾರೆ. ಅಪಪ್ರಚಾರ ಮಾಡಿ ಭಯ ಹುಟ್ಟಿಸುತ್ತಾರೆ. ನಾವು ನಿಮ್ಮನ್ನು ರಕ್ಷಿಸುತ್ತೇವೆ ಎನ್ನುವ ಮೂಲಕ ನೀವು ಅವರಿಗೆ ಅಧೀನರಾಗಿರುವಂತೆ ಮಾಡುತ್ತಾರೆ. ನಿಮ್ಮ ವೋಟು, ನೋಟು ಪಡೆಯುತ್ತಾರೆ. ಆರಾಮಾಗಿ ಅಧಿಕಾರ ನಡೆಸುತ್ತಾರೆ.
ಇದನ್ನೂ ಓದಿರಿ: ಸತ್ಯ ಹೇಳಿ ಸಂಕಟಕ್ಕೆ ಸಿಲುಕಿದ ಮುಸ್ಲಿಮರಿವರು…
ಈ ಸುಳ್ಳುಗಳ ಹಿಂದೆ ಭಯ, ದ್ವೇಷ ಮತ್ತು ರಾಜಕೀಯ ಲಾಭದ ಉದ್ದೇಶಗಳಿವೆ. ಭಾರತದ ವೈವಿಧ್ಯತೆಯನ್ನು ದುರ್ಬಲಗೊಳಿಸಿ, ಏಕರಾಷ್ಟ್ರ, ಏಕ ಸಂಸ್ಕೃತಿ” ಎಂಬ ವಿಷಯ ಹರಡಲು ಯತ್ನಿಸಲಾಗುತ್ತಿದೆ. ಹಾಗಾಗಿ ಧರ್ಮ ಅಪಾಯದಲ್ಲಿದೆ ಎಂಬುವವರನ್ನು ನಂಬಬಾರದು. ಭಾರತದ ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯ ನೀಡುತ್ತದೆ. ಇದು ಎಲ್ಲ ಧರ್ಮಗಳ ಸುರಕ್ಷತೆಯ ಗ್ಯಾರಂಟಿಯಾಗಿದೆ.
ಸಹಬಾಳ್ವೆ: ಭಾರತದಲ್ಲಿ ಶತಮಾನಗಳಿಂದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಧರ್ಮಗಳು ಒಟ್ಟಿಗೆ ಬೆಳೆದಿವೆ. ಒಂದು ಧರ್ಮ ಇನ್ನೊಂದನ್ನು “ತಿಂದು” ಹಾಕುವ ಸಾಧ್ಯತೆ ಇತಿಹಾಸದಲ್ಲಿ ಸಾಬೀತಾಗಿಲ್ಲ.
“ಧರ್ಮ ಅಪಾಯದಲ್ಲಿದೆ” ಎಂಬುದು ಭಯ ಮತ್ತು ದ್ವೇಷದ ಮೇಲೆ ಕಟ್ಟಿದ ಸುಳ್ಳು. ಭಾರತದ ಧರ್ಮಗಳು ಶತಮಾನಗಳಿಂದ ಸುರಕ್ಷಿತವಾಗಿವೆ.

ಮುತ್ತುರಾಜು
ಪತ್ರಕರ್ತ, ಲೇಖಕ




