(ಮುಂದುವರಿದ ಭಾಗ..) ಜಲಾಶಯ, ನದಿಗಳಿಗೆ ನೀರು ಬರುವುದು ಕಡಿಮೆಯಾಗಿದೆ. ಹವಾಮಾನ ಬದಲಾವಣೆಯ ಕಾರಣದಿಂದ ಬರುವ ಅಕಾಲಿಕ ಮಳೆ, ಮೇಘ ಸ್ಫೋಟಗಳು ಪ್ರವಾಹಗಳಿಗೆ ಕಾರಣವಾಗುತ್ತಿವೆ. ಬೆಂಗಳೂರು ನಗರದಲ್ಲೂ ಪ್ರವಾಹ ಉಂಟಾಗುತ್ತಿರುವುದಕ್ಕೆ ಅಲ್ಲಿನ ಕೆರೆ ಕಾಲುವೆಗಳನ್ನು ಅತಿಕ್ರಮಿಸಿರುವುದೇ ಕಾರಣ. 2001ರಿಂದ 2023ರ ನಡುವೆ 16 ವರ್ಷಗಳಲ್ಲಿ ರಾಜ್ಯವು ಬರಗಾಲವನ್ನು ಕಂಡಿದೆ. ಕೆಲವು ವರ್ಷಗಳಲ್ಲಿ ಅತಿವೃಷ್ಟಿಯಾಗಿ ಪ್ರವಾಹಗಳೂ ಬಂದಿವೆ.
ರಾಜ್ಯದ ನೀರಿನ ಹಂಚಿಕೆ- ಬಳಕೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸರಬರಾಜು ಹಾಗೂ ಬಳಕೆಯಲ್ಲಿ ಬಹಳಷ್ಟು ಅಸಮಾನತೆ ಇದೆ. ಕುಡಿಯುವ ನೀರಿನ ಸರಬರಾಜಿನಲ್ಲಿ, ಹಂಚಿಕೆಯಲ್ಲಿ ಅಸಮಾನತೆ ಇದೆ. ಬೆಂಗಳೂರಿನಲ್ಲಿ ಕೆಲವು ಕಡೆ ಅನುಕೂಲಸ್ಥರು ದಿನವೊಂದಕ್ಕೆ ತಲಾ 340 ಲೀಟರ್‌ಗಿಂತಲೂ ಹೆಚ್ಚು ಬಳಸಿದರೆ ಇನ್ನೊಂದೆಡೆ ಬಡವರ ಮನೆಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ದಿನವೊಂದಕ್ಕೆ ತಲಾ ಲೀಟರ್ 50 ಮಾತ್ರ ಸಿಗುತ್ತದೆ. ರಾಜ್ಯದ ಶೇ. 60ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ 40 ಲೀಟರ್‌ಗೂ ಕಡಿಮೆ ನೀರು ಲಭಿಸುತ್ತದೆ. ಈಗ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದು ಇತ್ತೀಚೆಗೆ ಬಹಳಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಶುದ್ಧೀಕರಣ ಘಟಕಗಳನ್ನು ಹಾಕಲಾಗಿದೆ. ಆದರೆ ಈ ಘಟಕಗಳಿಂದ ಬೇರ್ಪಡುವ ಗಡಸು ನೀರು ಮತ್ತೆ ಭೂಮಿ ಸೇರುತ್ತಿದೆ.
ಕುಡಿಯುವ ನೀರು ಸರಬರಾಜಿನ ದೊಡ್ಡ ಯೋಜನೆಗಳು ವಿವಾದಕ್ಕೊಳಗಾಗಿವೆ. ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರಿನ ಹೆಸರಲ್ಲಿ ಕೆರೆಗಳಿಗೆ ನೀರು ತುಂಬಿಸುವ, ನೇತ್ರಾವತಿ ನದಿಯ ನೀರನ್ನು ಎತ್ತಿ ಪೂರ್ವಕ್ಕೆ ತಿರುಗಿಸಿ ತರುವ ಎತ್ತಿನ ಹೊಳೆ ಯೋಜನೆಯನ್ನು ಶಾಶ್ವತ ನೀರಾವರಿ ಬೇಕೆಂದು ಹೋರಾಟ ಮಾಡಿರುವವರೂ ವಿರೋಧಿಸುವಷ್ಟರ ಮಟ್ಟಿಗೆ ಅವೈಜ್ಞಾನಿಕವಾಗಿದೆ. ಸಾಮಾನ್ಯವಾಗಿ ದೊಡ್ಡ ಯೋಜನೆಗಳನ್ನು ಮಾಡುವಾಗ ಪರಿಸರದ ಮೇಲಿನ ಪರಿಣಾಮ ಮಾಡುವ ಕಾನೂನು ಇದೆ. ಕುಡಿಯುವ ನೀರಿನ ಯೋಜನೆಗಳಿಗೆ ಈ ಕಾನೂನು ಅನ್ವಯ ಆಗಲ್ಲ. ಎತ್ತಿನ ಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಗಳಿಗೆ ತೊಂದರೆ ಇದೆ. ಎತ್ತಿನ ಹೊಳೆ ಯೋಜನೆ ಇರುವ ಪ್ರದೇಶದಲ್ಲೇ ಉದ್ಘಾಟನೆಗೊಂಡ ಗುಂಡ್ಯ ಜಲ ವಿದ್ಯುತ್ ಯೋಜನೆಯನ್ನು ನ್ಯಾಯಾಲಯದ ಆದೇಶದಂತೆ ಕೈಬಿಡಬೇಕಾಯಿತು. ಈಗ ಅದೇ ಪ್ರದೇಶದಲ್ಲಿ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ! ಬೆಂಗಳೂರು ನಗರದ ಕೊಳೆ ನೀರನ್ನು ಭಾಗಶಃ ಶುದ್ಧೀಕರಿಸಿ (ಸೆಕೆಂಡರಿ ಟ್ರೀಟ್‌ಮೆಂಟ್) ಚಿಕ್ಕಬಳ್ಳಾಪುರ, ಕೋಲಾರಕ್ಕೆ ಒಯ್ಯಲಾಗಿದೆ, ಪ್ರದೂಷಣೆಯನ್ನೂ ಮಾಡಲಾಗಿದೆ. ಇದೇ ಮಾದರಿಯ ಯೋಜನೆಗಳನ್ನು ಮಾಡುವ ತಯಾರಿ ನಡೆದಿದೆ.
ಬೆಂಗಳೂರು ನಗರಕ್ಕೆ ಶರಾವತಿ ನೀರು ತರುವ ಯೋಜನೆ ಪ್ರಸ್ತಾಪಕ್ಕೆ ವಿರೋಧ ಇದೆ. ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿ ಬೆಂಗಳೂರಿಗೆ ನೀರು ತರುವ ಉದ್ದೇಶ ಇದೆ. ಇದಕ್ಕೂ ಪರಿಸರವಾದಿಗಳಿಂದ ವಿರೋಧವಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ
1987ರಲ್ಲಿ ನಡೆದ ನೂರು ದಿನಗಳ “ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆ’’ ಕರ್ನಾಟಕದಲ್ಲೂ ಚಾರಿತ್ರಿಕ ಘಟನೆಯಾಯಿತಲ್ಲದೆ, ರಾಜ್ಯದಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಮತ್ತು ಪರಿಸರ ಪರ ಆಕ್ಟಿವಿಸಂ ಆರಂಭವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿತು.
ಇದನ್ನೂ ಓದಿರಿ: ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-1)
ಅರಣ್ಯ, ಜೀವ ವೈವಿಧ್ಯ ಮತ್ತು ನೀರಿನ ಮೂಲಗಳನ್ನು ಉಳಿಸುವ ದೃಷ್ಟಿಕೋನದಿಂದ ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತಿ ಮುಖ್ಯವಾದುದು. ಆದರೆ ನಾವು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕುಯ್ದು ಮೊಟ್ಟೆ ಪಡೆಯುವ ಜಾಯಮಾನದಲ್ಲಿಯೇ ಇದ್ದೇವೆ. ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಬಗ್ಗೆ ಗಾಡ್ಗೀಳ್ ವರದಿ ಮಾತ್ರವಲ್ಲ, ‘ಅಭಿವೃದ್ಧಿʼ ಮತ್ತು `ಪರಿಸರ ಸಂರಕ್ಷಣೆ’ಯನ್ನು ಬ್ಯಾಲೆನ್ಸ್ ಮಾಡಬಯಸುವ ಕಸ್ತೂರಿ ರಂಗನ್ ವರದಿಯೂ ಕೂಡ ನಮ್ಮ ಮುಂದಾಳುಗಳಿಗೆ ಸರಿ ಅನಿಸುತ್ತಿಲ್ಲ. ಹೆಚ್ಚುತ್ತಿರುವ ಘಟ್ಟ ಪ್ರದೇಶದ ಭೂ ಕುಸಿತ ಸ್ವಲ್ಪ ಪಾಠ ಕಲಿಸಿವೆ. ಕೇರಳದ ವಯನಾಡಿನ ಭೂ ಕುಸಿತ ದುರಂತದಿಂದ ಪಾಠ ಕಲಿತು ಒಕ್ಕೂಟ ಸರಕಾರವು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದ್ದು ಕೆಲವು ನಾಗರಿಕ ಸಂಘಟನೆಗಳನ್ನು ಹೊರತು ಪಡಿಸಿದರೆ ಇತರ ಯಾರೂ ಇದನ್ನು ಚರ್ಚೆಗೂ ಎತ್ತಿಕೊಂಡಿಲ್ಲ.
ಗಣಿಗಾರಿಕೆ
ರಾಜ್ಯದ ನೆಲದಲ್ಲಿ ಚಿನ್ನ, ಬೆಳ್ಳಿ, ಕಬ್ಬಿಣ, ಮ್ಯಾಂಗನೀಸ್, ಗ್ರಾನೈಟ್, ಸುಣ್ಣ, ಬಾಕ್ಸೈಟ್, ತಾಮ್ರ ಮುಂತಾದ ಖನಿಜಗಳಿವೆ. ನಮ್ಮ ಮೂಲಭೂತ ಅಗತ್ಯಗಳಿಗೆ ಮತ್ತು ಸೌಕರ್ಯಗಳಿಗೆ ಗಣಿಗಾರಿಕೆ ಮುಖ್ಯವೇ. ಆದರೆ ಎಷ್ಟು ಬೇಕು, ಹೇಗೆ ಮಾಡಬೇಕು, ಅದಕ್ಕೆ ಮಿತಿಯೇ ಇಲ್ಲವೇ? ಸಿಕ್ಕಲ್ಲೆಲ್ಲ ಗಣಿಗಾರಿಕೆ ಮಾಡಬಹುದೇ? ಖನಿಜ ಇರುವುದು, ಗಣಿಗಾರಿಕೆಗಳು ನಡೆಯುವುದು ಘಟ್ಟ, ಬೆಟ್ಟ ಪ್ರದೇಶಗಳಲ್ಲಿಯೇ. ಪರಿಸರ ಸಮತೋಲನಕ್ಕೆ ಬೆಟ್ಟಗುಡ್ಡಗಳೂ ಚೆನ್ನಾಗಿರಬೇಕು. ಗಣಿಗಾರಿಕೆಗಳೆಲ್ಲವೂ ಭೂಮಿಗೆ ಮಾಡುವ ಗಾಯಗಳೇ. ಈ ಗಾಯಗಳನ್ನು ಗುಣಪಡಿಸುವುದು ಕಷ್ಟ.

1976ರಲ್ಲಿ ಕುದುರೆಮುಖ ಐರನ್ ಓರ್ ಲಿಮಿಟೆಡ್ ನಿಂದ ಕಬ್ಬಿಣ ಗಣಿಗಾರಿಕೆ ಆರಂಭವಾಗಿ ಮುಂದೆ ಪರಿಸರ ನಾಶದ ಕಾರಣಕ್ಕೆ ಹೋರಾಟ ನಡೆದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ 2005ರ ಡಿಸೆಂಬರ್‌ನಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲಾಯಿತು. ಯಥೇಚ್ಛ ಲೋಹ ನಿಕ್ಷೇಪಗಳಿರುವ ಬಳ್ಳಾರಿ, ಚಿತ್ರದುರ್ಗ, ತುಮಕೂರುಗಳಲ್ಲಿ ಕಳೆದೆರಡು ದಶಕಗಳಲ್ಲಿ ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದು ಮಾತ್ರವಲ್ಲ, ಇದು ಅತಿರೇಕ, ಅಕ್ರಮ ಮತ್ತು ಗಣಿಕುಳಗಳು ಸರಕಾರಗಳನ್ನೇ ನಿಯಂತ್ರಿಸುವವರೆಗೂ ಹೋಯಿತು. ಪರಿಸರ, ಸ್ಥಳೀಯ ಜನರ ಕೃಷಿ-ಜೀವನೋಪಾಯ, ಆರೋಗ್ಯ ಎಲ್ಲವೂ ಅಪಾಯಕ್ಕೆ ಒಳಗಾಗಿ ಜನಾಂದೋಲನ ನಡೆದು 2012ರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದೊಂದಿಗೆ ಅಕ್ರಮ ಗಣಿಗಾರಿಕೆಗಳನ್ನು ಹತೋಟಿಗೆ ತರಲಾಯಿತು. ರಾಜಕೀಯ ಉದ್ದೇಶಗಳಿದ್ದರೂ ಈ ಆಂದೋಲನದಲ್ಲಿ ರಾಜಕೀಯ ಮುಂದಾಳುಗಳ ಪಾಲನ್ನು ನಿಕೃಷ್ಟವಾಗಿ ನೋಡುವಂತಿಲ್ಲ.
ಗ್ರಾನೈಟ್ ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ ಕೂಡ ಪರಿಸರಕ್ಕೆ ಮಾರಕವಾದ ಚಟುವಟಿಕೆಗಳು. ಕರ್ನಾಟಕ ರಾಜ್ಯದ 2021ರ ಮರಳು ನೀತಿಯು ಮರಳು ಗಣಿಗಾರಿಕೆ, ಸರಬರಾಜು, ಬೆಲೆಗಳ ನಿಯಂತ್ರಣದ ಉದ್ದೇಶ ಹೊಂದಿದೆ. ಇದು ಪರಿಸರದ ಮೇಲಿನ ಪರಿಣಾಮವನ್ನು ಪರಿಗಣಿಸಿದಂತಿಲ್ಲ.
ಕಸ ನಿರ್ವಹಣೆ
ಹಳ್ಳಿ-ನಗರಗಳೆನ್ನದೆ ಎಲ್ಲೆಡೆ ಘನ ಕಸದ ವಿಲೇವಾರಿ ಸಮಸ್ಯೆ ಇದೆ. ಘನತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೆ ಬಿಸಾಕುವುದು ಅಥವಾ ಸುಡುವುದು ಮಣ್ಣು, ನೀರು ಮತ್ತು ಗಾಳಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ ಪ್ರತಿದಿನ 11,000 ಟನ್ ಮುನಿಸಿಪಲ್ ವೇಸ್ಟ್ ಕಸದ ಉತ್ಪಾದನೆಯಾಗುತ್ತಿದೆ (ಇದು ಗ್ರಾಮೀಣ ಪ್ರದೇಶದ ಕಸದ ಪ್ರಮಾಣವನ್ನು ಒಳಗೊಂಡಿಲ್ಲ ಅನಿಸುತ್ತದೆ). ನಗರಗಳ ಘನತ್ಯಾಜ್ಯವನ್ನು ಸೂಕ್ತ ರೀತಿ ನಿರ್ವಹಣೆ ಮಾಡಬೇಕೆಂದು 1996ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಮೊಕದ್ದಮೆ ಹೂಡಿದವರು ಕರ್ನಾಟಕದವರು. ಘನತ್ಯಾಜ್ಯ ನಿರ್ವಹಣೆ ಮಾಡುವಂತೆ ನ್ಯಾಯಾಲಯದ ಆದೇಶ ಪಾಲನೆಗೆ ದಶಕಗಳೇ ಸಾಕಾಗಲಿಲ್ಲ. ಘನತ್ಯಾಜ್ಯ ನಿರ್ವಹಣೆ ನಿಯಮ 2016ರ ಪ್ರಕಾರ ಮನೆ ಮನೆಯಿಂದ ಕಸ ವಿಭಜಿತ ಕಸ ಸಂಗ್ರಹಣೆ ಮಾಡಿ ಹಸಿ ಕಸವನ್ನು ಗೊಬ್ಬರ ಮಾಡಬೇಕು, ಒಣ ಕಸವನ್ನು ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಲೆಕ್ಕ ಪ್ರಕಾರ ಮೂರನೇ ಎರಡು ಭಾಗದಷ್ಟು ಹಸಿ ಕಸವನ್ನು ಮತ್ತು ಅರ್ಧದಷ್ಟು ಒಣ ಕಸವನ್ನು ಈ ರೀತಿ ವಿಲೇವಾರಿ ಮಾಡಲಾಗುತ್ತಿದೆ. ನಿಜ ಏನೆಂದು ಗೊತ್ತಿಲ್ಲ. ಕಸ ನಿರ್ವಹಣೆ ಮಾಡಲೇಬೇಕೆಂದು ನ್ಯಾಯಾಲಯದ ಆದೇಶ ಇರುವುದರಿಂದ, ಕಸವೂ ಸಾಕಷ್ಟು ಉತ್ಪಾದನೆ ಆಗುತ್ತಿರುವುದರಿಂದ ದೊಡ್ಡ ಮೊತ್ತಕ್ಕೆ ಕಸ ವಿಲೇವಾರಿಯ ಗುತ್ತಿಗೆ ಪಡೆಯುವ ವಿಲೇವಾರಿ ಪ್ರಹಸನಗಳನ್ನು ನಡೆಸುವ ‘ಕಸ ಮಾಫಿಯಾ’ ಹುಟ್ಟಿಕೊಂಡಿರುವುದು ಈ ದಶಕದ ಪ್ರಮುಖ ವಿದ್ಯಮಾನ.
ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?
ಕೈಗಾರಿಕೆಗಳು ಮತ್ತು ನಗರೀಕರಣ
ರಾಜ್ಯದಲ್ಲಿ ಕಾರ್ಖಾನೆಗಳೂ ಸಾಕಷ್ಟಿವೆ, ಕಾರ್ಖಾನೆಗಳ ಮಾಲಿನ್ಯವಿರುವ ತಾಣಗಳು, ಅವುಗಳ ವಿರುದ್ಧದ ಹೋರಾಟಗಳೂ ಸಾಕಷ್ಟು ನಡೆದಿವೆ, ನಡೆಯುತ್ತಿವೆ. ಪರಿಸರಸ್ನೇಹಿ ಕೈಗಾರಿಕೆಗಳನ್ನು ಕೆಲವರು ಸ್ಥಾಪಿಸಿದ್ದಾರೆ.

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವು 1970ರಲ್ಲಿ ಸ್ಥಾಪಿಸಲ್ಪಟ್ಟಿದ್ದು ಹಳೆಯ ಮತ್ತು ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿ ಸುಮಾರು 2000 ಸಣ್ಣ ಕೈಗಾರಿಕೆಗಳಿವೆ. ಇಲ್ಲಿನ ಬಹಳಷ್ಟು ಕಾರ್ಖಾನೆಗಳು ಭಾರದ ಲೋಹಗಳನ್ನು, ಇತರ ಮಾಲಿನ್ಯಕಾರಕಗಳನ್ನು ವಾತಾವರಣಕ್ಕೆ ಸೂಸುತ್ತಿವೆ. ಇವು ವೃಷಭಾವತಿ ನದಿಗೆ ಮತ್ತು ಗಾಳಿಗೆ ಸೇರುತ್ತಿವೆ. ಪೀಣ್ಯ ಕೈಗಾರಿಕಾ ಪ್ರದೇಶವು ಅತೀ ಮಾಲಿನ್ಯಗೊಂಡ ಪ್ರದೇಶ (ಕಾಂಪ್ರಹೆನ್ಸಿವ್ ಪೊಲ್ಯೂಷನ್ ಇಂಡೆಕ್ಸ್ 65.11. – 50-70ರ ನಡುವೆ ಇದ್ದರೆ ತೀವ್ರ ಮಾಲಿನ್ಯ ಎಂದು ಅರ್ಥ) ಎಂದು ಗುರುತಿಸಲ್ಪಟ್ಟಿದೆ. ರಾಜ್ಯದ ಭದ್ರಾವತಿ, ಮಂಗಳೂರಿನ ಬೈಕಂಪಾಡಿ, ಬೀದರ್‌ನ ಕೊಲ್ಹಾರ್ ಕೈಗಾರಿಕಾ ಪ್ರದೇಶ, ರಾಯಚೂರಿನ ಕೈಗಾರಿಕಾ ಪ್ರದೇಶಗಳೂ ವಾಯುಮಾಲಿನ್ಯದಲ್ಲಿ ಮುಂದೆ ಇವೆ. ಒಕ್ಕೂಟ ಸರಕಾರವು ವಾಯುಮಾಲಿನ್ಯ ತಡೆಗಟ್ಟಲು ನೀಡಿರುವ ನೆರವು ಬಳಸುವುದರಲ್ಲಿ ರಾಜ್ಯ ಹಿಂದೆ ಇದೆ ಎಂಬುದು ಇತ್ತೀಚಿನ ವರದಿಯೊಂದು ಹೇಳುತ್ತದೆ.
ಹರಿಹರ ಪಾಲಿ ಫೈಬರ್ಸ್ ಮಾಲಿನ್ಯ ವಿರುದ್ಧ ನಡೆಯುತ್ತಾ ಬಂದ ಹೋರಾಟ, 90ರ ದಶಕದಲ್ಲಿ ನಂಜನಗೂಡು ಮ್ಯಾಕ್ಸಿ ಫಾರ್ಮಾ ಅನಿಲ ದುರಂತ-ಹೋರಾಟ, ಬೀದರ್ ಕೈಗಾರಿಕಾ ಪ್ರದೇಶದ ಮಾಲಿನ್ಯದ ವಿರುದ್ಧ ಹೋರಾಟಗಳು ಗಮನಾರ್ಹವಾಗಿದೆ. ಕರ್ನಾಟಕ ಕರಾವಳಿಯಲ್ಲಿ ಕಲ್ಲಿದ್ದಲು ಆಧಾರಿತ ಪರಿಸರ ನಾಶಕ್ಕೆ ಕಾರಣವಾಗುವ ಕೊಜೆಂಟ್ರಿಕ್ಸ್ ವಿದ್ಯುತ್ ಕಾರ್ಖಾನೆಯನ್ನು 1990ರ ದಶಕದಲ್ಲಿ ತಡೆಯಲಾಯಿತು. ಆ ನಂತರ ಅದೇ ಪರಿಸರದಲ್ಲಿ ನಾಗಾರ್ಜುನ ವಿದ್ಯುತ್ ಸ್ಥಾವರ ಬಂದಿದೆ. ಯಾವ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿದರೂ ಪರಿಸರದ ಮೇಲೆ ಪರಿಣಾಮ, ಅಪಾಯ ಇದ್ದೇ ಇದೆ. ತೀವ್ರ ವಿರೋಧದ ನಡುವೆಯೂ ಕೈಗಾ ಅಣು ವಿದ್ಯುತ್ ಸ್ಥಾವರವು 2000ನೇ ಇಸವಿಯಲ್ಲಿ ಕಾರ್ಯಾರಂಭ ಮಾಡಿತು. ಪರಿಸರ ಮಾಲಿನ್ಯ ಮಾಡಬಹುದು ಎಂದು ಅಂದಾಜಿಸಿದ್ದ ಅನೇಕ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಪ್ರಸ್ತಾಪಗಳನ್ನೂ ವಿರೋಧವನ್ನೂ ಕರ್ನಾಟಕ ಕಂಡಿದೆ. ಪರ್ಯಾಯ ಶಕ್ತಿ ಮೂಲಗಳಾದ ಪವನ ವಿದ್ಯುತ್ ಉತ್ಪಾದನೆ, ಸೌರ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಗಣನೀಯ ಸಾಧನೆ ಮಾಡಿದೆ. ಆದರೆ ಇವುಗಳಿಂದ ಕೂಡ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಇದ್ದೇ ಇದೆ ಎಂಬುದು ನಮ್ಮ ಗಮನದಲ್ಲಿ ಇರಬೇಕು. 2002-03ರಲ್ಲಿ ಸಾವಿರ ಭೋಪಾಲಗಳ ಜಾಥಾವು ದೊಡ್ಡಬಳ್ಳಾಪುರದಿಂದ ಆರಂಭವಾಗಿ ಅಲ್ಲಿ ಮಾಲಿನ್ಯ ಮಾಡುತ್ತಿದ್ದ ಗೋಗೋ ಎಕ್ಸ್ಪೋರ್ಟ್ಸ್, ಬೃಂದಾವನ ಪಾಸ್ಪೇಟ್ಸ್ ಮುಂತಾದ ಕಾರ್ಖಾನೆಗಳ ವಿರುದ್ಧ ಯಶಸ್ವಿ ಹೋರಾಟ ನಡೆಯಿತು.
ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಕ್ರಮ ಕೈಗೊಳ್ಳದೆ ತೊಂದರೆ ಆಗುವುದು ಒಂದು ಸಂಗತಿಯಾದರೆ, ಕೈಗಾರಿಕಾ ಪ್ರದೇಶಗಳ ಸ್ಥಾಪನೆಯೇ ಕೃಷಿ ಜಮೀನು, ಸಾಮೂಹಿಕ ಭೂಮಿ, ಅರಣ್ಯಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಬಹಳಷ್ಟು ಕಡೆಯಲ್ಲಿ ಕೈಗಾರಿಕಾ ಪ್ರದೇಶಗಳಿಗಾಗಿ ಭೂಸ್ವಾಧೀನ ಪ್ರಸ್ತಾಪ ಬಂದಾಗಲೆಲ್ಲ ರೈತರು ವಿರೋಧ ಮಾಡಿದ್ದಿದೆ. ಮಂಗಳೂರಿನಲ್ಲಿ ಎಸ್‌ಸಿಝಡ್ ವಿರುದ್ಧ ಹೋರಾಟ ನಡೆದಿದೆ. 2007ರಲ್ಲಿ ಬೆಂಗಳೂರು ಸಮೀಪದ ನಂದಗುಡಿಯಲ್ಲೂ ವಿರೋಧ ವ್ಯಕ್ತವಾಯಿತು. ಯೋಜನೆ ಕೈಬಿಡಲಾಯಿತು. ಇದೀಗ ಅದೇ ಪ್ರದೇಶದಲ್ಲಿ ಟೌನ್ ಶಿಪ್ ಮಾಡಲು 18,500 ಎಕರೆ ಭೂ ಸ್ವಾಧೀನ ಮಾಡುವ ಪ್ರಸ್ತಾಪ ಹಾಗೂ ಅದಕ್ಕೆ ರೈತರ ವಿರೋಧ ಇದೆ. 2011-13ರ ಅವಧಿಯಲ್ಲಿ ಗದಗದಲ್ಲಿ ಕೊರಿಯದ ಸಹಭಾಗಿತ್ವ ಪೋಸ್ಕೋ ಉಕ್ಕಿನ ಕಾರ್ಖಾನೆಗೆ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ಸ್ಥಳೀಯರು ವಿರೋಧಿಸಿದರು. ಕಾರ್ಖಾನೆ ಮಾಡುವ ಉದ್ದೇಶ ಕೈಬಿಡಲಾಯಿತು. ಬೆಂಗಳೂರು ಸಮೀಪ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕಾ ಪ್ರದೇಶದ ಎರಡನೆಯ ಹಂತಕ್ಕೆ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ಅಲ್ಲಿನ ರೈತರು ಕಳೆದ ಎರಡು ವರ್ಷಗಳಿಂದ ಪ್ರತಿನಿತ್ಯ-ನಿರಂತರ ಧರಣಿ ಮೂಲಕ ವಿರೋಧಿಸಿದ್ದಾರೆ. ಬಹಳ ಹಿಂದೆ ಬೆಂಗಳೂರು ಸಮೀಪ ಬರಲಿದ್ದ ಜಪಾನ್ ಟೌನ್‌ಶಿಪ್ ಅನ್ನು ಜನ ತಡೆದಿದ್ದಾರೆ. ಮೈಸೂರಿನಲ್ಲೂ ಪ್ರದೂಷಣೆ ಮಾಡಬಹುದಾದ ಕಾರ್ಖಾನೆ ಬರುವುದನ್ನು ಜನ ತಡೆದಿದ್ದಾರೆ. ನೈಸ್ ರಸ್ತೆಗೆ ವಿರೋಧ ಬಂದು ಇದರಿಂದಾಗಿ ಕಂಪನಿ ಮತ್ತು ಸರಕಾರದ ನಡುವೆ ತಿಕ್ಕಾಟವೂ ಆಯಿತು. ಇಂತಹ ಬಹಳಷ್ಟು ಸಂದರ್ಭಗಳಲ್ಲಿ ಎಷ್ಟೇ ಬೆಲೆ, ಪರಿಹಾರ ಕೊಟ್ಟರೂ ಜಮೀನು ಕೊಡುವುದಿಲ್ಲ ಎಂಬ ರೈತರ ನಿಲುವು ಕೇವಲ ಜೀವನೋಪಾಯದ ಉದ್ದೇಶದಿಂದಷ್ಟೇ ಇರುವುದಿಲ್ಲ, ಪರಿಸರವನ್ನು, ನೆಲವನ್ನು ಅವರು ನೋಡುವ ಕ್ರಮ ಭಿನ್ನವಾಗಿರುವುದು ಕೂಡ ಕಾರಣ ಎಂದು ನಾವು ಗಮನಿಸಬೇಕು.
ಕೃಷಿಯಿಂದಲೂ ಮಾಲಿನ್ಯ
ವಾಣಿಜ್ಯ ಬೆಳೆಗಳಿಂದ, ಏಕಬೆಳೆಗಳಿಂದ ಕೃಷಿಯ ಜೀವ ವೈವಿಧ್ಯತೆ ನಾಶವಾಗಿದೆ. ಹಸಿರುಕ್ರಾಂತಿಯ ನಂತರ ಬದಲಾದ ಕೃಷಿ ಪದ್ಧತಿಯಿಂದಲೇ ಮಣ್ಣಿನ ಫಲವತ್ತತೆ ನಾಶವಾಗಿದೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ನಾಶವಾಗಿ ಮಣ್ಣು ಸತ್ತಿದೆ ಎಂದೇ ಹೇಳಲಾಗುತ್ತಿದೆ. ಅಂತರ್ಜಲದಲ್ಲೂ ನೈಟ್ರೇಟ್ ಅಂಶ ಹೆಚ್ಚಾಗಲು ಕೃಷಿಯಲ್ಲಿ ಬಳಸಿದ ರಾಸಾಯನಿಕ ಗೊಬ್ಬರಗಳೇ ಕಾರಣ. ಹಿಂದೆ ಹಸಿರುಕ್ರಾಂತಿಯ ಪರ ಪ್ರಚಾರ ಮಾಡಿದ ಸರಕಾರಗಳು, ವಿಜ್ಞಾನಿಗಳು ಈಗ ಸಾವಯವ, ನೈಸರ್ಗಿಕ, ಸುಸ್ಥಿರ ಕೃಷಿಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!
ಕರ್ನಾಟಕದಲ್ಲಿ 2007ರಲ್ಲಿ ಸಾವಯವ ಗ್ರಾಮ ಯೋಜನೆ ಜಾರಿಗೆ ಬಂದು ಜಿಲ್ಲೆಗೆ ಒಂದರಂತೆ ಸಂಪೂರ್ಣ ಸಾವಯವ ಕೃಷಿ ಗ್ರಾಮವಾಗಿ ಪರಿವರ್ತನೆ ಮಾಡುವ, ಮುಂದೆ ತಾಲೂಕಿಗೆ ಒಂದು, ನಂತರ ಹೋಬಳಿಗೆ ಒಂದು ಸಾವಯವ ಗ್ರಾಮ ಮಾಡುವ ಪ್ರಯತ್ನ ನಡೆಯಿತು. ಆ ನಂತರ ಕಾರ್ಯಕ್ರಮವು ‘ಕೃಷಿ ಭಾಗ್ಯ ಯೋಜನೆ’ ಆಗಿ ಮುಂದುವರೆಯಿತು. ಸಾವಯವ ಕೃಷಿ ಮಿಷನ್ ಸ್ಥಾಪನೆ, ಸಾವಯವ ಕೃಷಿಗೆ ಪ್ರೋತ್ಸಾಹ, ಇತ್ತೀಚೆಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ಇವೆಲ್ಲ ರಾಜ್ಯ ಸರಕಾರದ ಪ್ರಯತ್ನ. ಸರಕಾರದ ಪ್ರಯತ್ನದಿಂದಲೂ, ಸ್ವಯಂಪ್ರೇರಿತರಾಗಿಯೂ ರಾಜ್ಯದಲ್ಲಿ ಸಾವಿರಾರು ಸಾವಯವ -ನೈಸರ್ಗಿಕ ಕೃಷಿಕರು ತಯಾರಾಗಿದ್ದಾರೆ. ನಿಧಾನವಾಗಿಯಾದರೂ ಪರ್ಯಾಯ ಕೃಷಿಯ ಆಂದೋಲನ ರೂಪು ಪಡೆಯುತ್ತಿದೆ.
ಮುಂದೇನು?
ಪರಿಸರವನ್ನು ಉಳಿಸುವ ದಾರಿಯ ‘ಸುಸ್ಥಿರ ಅಭಿವೃದ್ಧಿ’ಯು ಇದೀಗ ಸರಕಾರವೂ, ನಾಗರಿಕ ಸಂಸ್ಥೆಗಳೂ ಪಠಿಸುತ್ತಿರುವ ಮಂತ್ರವಾಗಿದ್ದರೂ ಅದು ಕೇವಲ ಮಂತ್ರವಾಗಿದೆ. ಕಾರ್ಯರೂಪಕ್ಕೆ ಬರುವುದರಲ್ಲಿ ಬಹಳ ಹಿಂದೆ ಇದೆ. ಇದಲ್ಲದೆ `ಸುಸ್ಥಿರ ಅಭಿವೃದ್ಧಿ’ ಪರಿಕಲ್ಪನೆಯು ಕೂಡ ಕೆಲವು ಆರ್ಥಿಕ ಹಿತಾಸಕ್ತಿಗಳ ಆಸಕ್ತಿಯ ಮಿತಿಯಲ್ಲಿ ಸಿಲುಕಿಕೊಂಡಿದೆ. ಸುಸ್ಥಿರ ಅಭಿವೃದ್ಧಿ ಪರ ಇರುವವರೂ ‘ಒಳಗೊಳ್ಳುವಿಕೆಯನ್ನು’ ಗಮನಿಸುತ್ತಾರೋ ಇಲ್ಲವೋ ನೋಡಬೇಕು. ಇಂದು `ಅಭಿವೃದ್ಧಿ’ಯೇ ಉದ್ದೇಶವಾಗಬೇಕಾಗಿಲ್ಲ. ಜನರು `ಚೆನ್ನಾಗಿರುವುದು’, `ಎಲ್ಲರೂ ಚೆನ್ನಾಗಿರುವುದು’ ಎಲ್ಲರ `ವೆಲ್ ಬೀಯಿಂಗ್’ ಮುಖ್ಯವಾಗಬೇಕಾಗಿದೆ. ಅದಕ್ಕಾಗಿ ಎಂತಹ ಆರ್ಥಿಕ ಚಟುವಟಿಕೆಗಳನ್ನು ಮಾಡಬೇಕು, ಎಷ್ಟು ಮಾಡಬೇಕು, ಯಾವ ಸ್ವರೂಪದ ಆರ್ಥಿಕ ಸಂಬಂಧಗಳಲ್ಲಿ ಮಾಡಬೇಕು, ಪರಿಸರವನ್ನು ಹೇಗೆ ನೋಡಬೇಕು, ಹೇಗೆ ಎಷ್ಟು ಬಳಸಬೇಕು ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಜೀವನ ಗ್ರಹಿಕೆ, ಜೀವನ ಶೈಲಿಯೂ ಬದಲಾಗಬೇಕಾಗಿದೆ.
ಆದುದರಿಂದ ತಕ್ಷಣ ಮತ್ತು ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ಸಮುದಾಯವಾಗಿ ಕರ್ನಾಟಕವು ಮಾಡಲೇಬೇಕಾದ ಕಾರ್ಯಗಳನ್ನು ಹೀಗೆಂದು ಪಟ್ಟಿ ಮಾಡಬಹುದು.
1. ಡೊನೆಲ್ಲಾ ಮೆಡೋಸ್ ಹೇಳುವಂತೆ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಿಸ್ಟಂ ಥಿಂಕಿಂಗ್ ದಾರಿಯಲ್ಲಿ ಪ್ರಯತ್ನಿಸುವೆವು ಎಂದಾದರೆ ನಮ್ಮ ಪರಿಸರ ಮತ್ತು ಜೀವನದಲ್ಲಿ ಆಮೂಲಾಗ್ರ ಬದಲಾವಣೆ (ಪ್ಯಾರಡೈಮ್ ಶಿಫ್ಟ್) ಆಗಬೇಕು. ಅದಕ್ಕಾಗಿ ಪರಿಸರ ಶಿಕ್ಷಣಕ್ಕೆ ಒತ್ತು ಕೊಡಬೇಕು. ಆದರೆ `ಮರಗಿಡ ಬೆಳೆಸಿ’ `ನೀರು ಉಳಿಸಿ’ ಘೋಷಣೆಯನ್ನು ಕಲಿಸುವುದನ್ನು ಮೀರಿ ಆಳವಾದ `ಪರಿಸರ-ಜೀವನಶೈಲಿ-ಅಭಿವೃದ್ಧಿ-ಸಾಮಾಜಿಕ ಸಂರಚನೆ’ ಕುರಿತ ಆಳವಾದ ಅರಿವು ಮೂಡುವಂತಾಗಬೇಕು. ಇಂತಹ ಪರಿಸರ ಶಿಕ್ಷಣ ಔಪಚಾರಿಕ ಶಿಕ್ಷಣದ ಭಾಗವಾಗಿ ಮಾತ್ರವಲ್ಲ ಅದರಿಂದ ಆಚೆ ಇರುವವರಿಗೂ ಪರಿಸರ ಸಾಕ್ಷರತೆಯಾಗಿ ಸಿಗುವಂತಾಗಬೇಕು.
2. ಕೃಷಿ ಮತ್ತು ಆಹಾರ ಸಂಬಂಧಿತ ಉತ್ಪಾದನಾ ವಲಯವನ್ನು ಹಂತ ಹಂತವಾಗಿ ಪರಿಸರ ಸ್ನೇಹಿಯಾಗಿ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸುವಂತೆ, ಜನಾರೋಗ್ಯ ಸ್ನೇಹಿಯಾಗಿ, ರೈತ ಮತ್ತು ದುಡಿಯುವ ಜನರ ಸ್ನೇಹಿಯಾಗಿ ಎಲ್ಲರೂ ಸೂಕ್ತ ಪ್ರತಿಫಲ ದೊರೆಯುವಂತೆ ಬದಲಾವಣೆ ಮಾಡಿಕೊಳ್ಳಬೇಕು.
3. ಜನ ಮೂಲಭೂತ ಅಗತ್ಯಗಳನ್ನೇ ಪ್ರಧಾನವಾಗಿಟ್ಟುಕೊಂಡು ಐಷಾರಾಮದ ಸರಕು ಸೇವೆಗಳಿಗೆ ಆದ್ಯತೆ ಕೊಡದ ಕೈಗಾರಿಕಾ ಉತ್ಪನ್ನ ಮತ್ತು ಪರಿಸರ ಸ್ನೇಹಿಯಾದ, ವಿಕೇಂದ್ರೀಕರಣ ಹಾಗೂ ಸಹಕಾರಿ ಮಾದರಿಯ ಕೈಗಾರಿಕೆಯ ಕಡೆ ಸಾಗಬೇಕು.
ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ
4. ಅಂತರ್ಜಲವೂ ಸೇರಿದಂತೆ ನದಿಗಳು, ನದಿಗಳ ಜಲಾನಯನಗಳನ್ನು ಸಂರಕ್ಷಿಸಲು ಮತ್ತು ಜಲ ಸಂಪನ್ಮೂಲಗಳ ಸಮಗ್ರ ನಿರ್ವಹಣೆಗೆ ಜಲಾನಯನ ಮಟ್ಟದಲ್ಲಿ ಜನರ ಸಹಭಾಗಿತ್ವದ ಸಾಂಸ್ಥಿಕ ವ್ಯವಸ್ಥೆಗಳನ್ನು ಮಾಡಬೇಕು. ಕಸ ನಿರ್ವಹಣೆ, ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಭಾಗೀದಾರರನ್ನಾಗಿ ಮಾಡಬೇಕು.
5. ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲು ಸಮಗ್ರ ನೀತಿ ಮತ್ತು ಯೋಜನೆ ತರಬೇಕು. ಇಲ್ಲಿ ವಾಸಿಸುವ ಜನರನ್ನು ಒಕ್ಕಲೆಬ್ಬಿಸದೆ, ಮಿತಿಮೀರಿದ ಅರಣ್ಯ-ಸಾಮೂಹಿಕ ಭೂಮಿ ಅಕ್ರಮ ಒತ್ತುವರಿ ಮಾಡಿರುವವರನ್ನು ಮಾತ್ರ ಒತ್ತುವರಿ ಬಿಡಿಸಬೇಕು.
6. ಪರಿಸರವನ್ನು ಉಳಿಸಲು ಪರಿಸರ ನೀತಿ, ಪರಿಸರ ಕಾನೂನು ಇದ್ದರೆ ಸಾಲದು. ಜಲ ನೀತಿ, ಕೈಗಾರಿಕಾ ನೀತಿ, ಕೃಷಿ ನೀತಿ, ಶಿಕ್ಷಣ ನೀತಿ ಎಲ್ಲವೂ ಪರಿಸರ ಸಂರಕ್ಷಣೆ ಪರ ಮತ್ತು ಎಲ್ಲ ಜನ ಸಮುದಾಯಗಳ ಹಿತದ ಪರ ಬದಲಾಗಬೇಕು. ಸರಕಾರ-ಸರಕಾರದ ವಿವಿಧ ಇಲಾಖೆಗಳು, ಸರಕಾರ-ಜನ ಸಮುದಾಯಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು.
(ಮುಗಿಯಿತು..)
(‘ಈದಿನ ಡಾಟ್ ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ಜನಾರ್ದನ ಕೆಸರಗದ್ದೆ
‘ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಾಗಳ ನಡುವೆ’ ಎಂಬ ಖ್ಯಾತ ಹಾಡಿನ ರಚನಾಕಾರರಾದ ಜನಾರ್ದನ ಕೆಸರಗದ್ದೆಯವರು ಮೂರು ದಶಕಗಳಿಂದ ಸಾಮಾಜಿಕ ಕಾರ್ಯಕರ್ತರಾಗಿ ನಾಡಿನ ಹಲವು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 'ಸಂವಾದ' ಎಂಬ ಸರಕಾರೇತರ ಸಂಸ್ಥೆಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಜನಾರ್ದನ, ಯುವಜನರನ್ನು ಸಬಲೀಕರಣಗೊಳಿಸುವ ಕಾಯಕದಲ್ಲಿ ನಿರತರಾದವರು. ಕೃಷಿ, ಪರಿಸರ, ಯುವ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತರು. ಸರಕಾರದ ಇಲಾಖೆಗಳಿಗೆ, ಸಂಘ ಸಂಸ್ಥೆಗಳಿಗೆ, ಆಸ್ಪತ್ರೆಗಳ ಸಮಿತಿಗಳಿಗೆ, ವಿವಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡವರು. ಹೊಸ ಕಾಲಕ್ಕೆ ಹೊಸ ಹಾಡುಗಳನ್ನು ಸೃಷ್ಟಿಸಿರುವುದರಲ್ಲಿ ಜನಾರ್ದನ ಅವರ ಹಿರಿಮೆಯಿದೆ.




