ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-1)

Date:

ಮನುಷ್ಯರ ಹಸ್ತಕ್ಷೇಪದಿಂದಾಗಿ ಹೆಚ್ಚಿನ ಪ್ರಮಾಣದ ಪರಿಸರ ನಾಶ ಆರಂಭವಾಗಿದ್ದು ಕೈಗಾರಿಕೀಕರಣ ಮತ್ತು ಹಸಿರು ಕ್ರಾಂತಿಗಳ ನಂತರವೇ. ಇಂದು ರಸ್ತೆ, ಹೆದ್ದಾರಿ, ಹೊಸ ರೈಲು ಮಾರ್ಗ, ವಿಮಾನ ನಿಲ್ದಾಣ, ನಗರೀಕರಣ-ಟೌನ್‌ಶಿಪ್‌ಗಳು ಇತ್ಯಾದಿ ಮೂಲಭೂತ ಸೌಕರ್ಯಗಳ ನಿರ್ಮಾಣದಿಂದ ಕೂಡ ಪರಿಸರ ನಾಶ ಆಗುತ್ತಿದೆ. ಪರಿಸರ ನಾಶ ಆಗುತ್ತಿದೆ, ಅದನ್ನು ಸಂರಕ್ಷಿಸಬೇಕು ಎಂಬ ಪ್ರಜ್ಞೆ ಮೂಡಿದ್ದು ಕಳೆದ ಐವತ್ತು-ಅರವತ್ತು ವರ್ಷಗಳಲ್ಲಷ್ಟೇ. ‘ಸೈಲೆಂಟ್ ಸ್ಪ್ರಿಂಗ್ಸ್ʼ ಕೃತಿ 1962ರಲ್ಲಿ ಬಂತಾದರೂ ‘ಲಿಮಿಟ್ ಟು ಗ್ರೋತ್ʼ, ‘ಸ್ಮಾಲ್ ಈಸ್ ಬ್ಯೂಟಿಫುಲ್ʼ, ‘ದ ಎಂಡ್ ಆಫ್ ನೇಚರ್ʼ, ‘ದ ಸಿಕ್ತ್‌ಸ್ ಎಕ್ಸ್‌ಸ್ಟಿನ್ಶನ್ʼ, ‘ದ ಅನ್‌ಇನ್‌ಹ್ಯಾಬಿಟೇಬಲ್ ಅರ್ಥ್ʼ, ‘ಆನ್ ಇನ್‌ಕನ್‌ವೀನಿಯಂಟ್ ಟ್ರುಥ್ʼ ಅಂತಹ ಪರಿಸರ ಚಿಂತನೆಗೆ ಹಚ್ಚುವ ಸಂಶೋಧನೆ-ಬರಹಗಳು ಬಂದಿದ್ದು ಕಳೆದ ಈ ಐವತ್ತು ವರ್ಷಗಳಲ್ಲಿ.

ನಮ್ಮ ರಾಜ್ಯ ‘ಕರ್ನಾಟಕʼವಾಗಿ ಐವತ್ತು ವರ್ಷಗಳು ತುಂಬಿದ ಈ ಕಾಲಘಟ್ಟದಲ್ಲಿ ಕರ್ನಾಟಕದ ಪರಿಸರ ಹೇಗಿದೆ, ಪರಿಸರದ ಸಮಸ್ಯೆಗಳೇನು? ರಕ್ಷಣೆಯ ನಿಟ್ಟಿನಲ್ಲಿ ರಾಜ್ಯದಲ್ಲಿ ಮಾಡಿದ್ದು ಏನು, ಮಾಡಲು ಆಗದೇ ಇದ್ದಿದ್ದು ಏನು, ಮಾಡಬೇಕಾದುದು ಏನು ಎಂದು ನೋಡುವುದು ಹವಾಮಾನ ಬದಲಾವಣೆಯ ದುರಂತ ನಿಚ್ಚಳವಾಗಿ ಕಾಣುತ್ತಿರುವ ಈ ಸಂದರ್ಭದಲ್ಲಿ ಅನಿವಾರ್ಯ.

ಪರಿಸರದ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚೆ ಬರುವಾಗಲೆಲ್ಲ “ಪರಿಸರವೋ ಅಭಿವೃದ್ಧಿಯೋ’’ ಎಂದು ಪರಿಸರ ಮತ್ತು ಅಭಿವೃದ್ಧಿಯನ್ನು ವಿರುದ್ಧ ದಿಕ್ಕಿನಲ್ಲಿ ಇಟ್ಟು ನೋಡಲಾಗುತ್ತಿದೆ. ಇದನ್ನು ಸ್ಪಷ್ಟಪಡಿಸಿಕೊಳ್ಳದಿದ್ದರೆ, ಸರಿಪಡಿಸಿಕೊಳ್ಳದಿದ್ದರೆ ಪರಿಸರಪರ ಪ್ರತಿಪಾದನೆಯ ಬರವಣಿಗೆ ಮತ್ತು ಓದಿಗೆ ಪೂರ್ವಗ್ರಹ ಅಂಟಿಕೊಳ್ಳಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಾನ್ ಮಾರ್ಟಿನೆಜ್ ಆಲೈರ್ ಅವರು ಹೇಳುವಂತೆ ನಮ್ಮಲ್ಲಿ ಮೂರು ಮುಖ್ಯವಾದ ಪರಿಸರ ಚಿಂತನ-ಚಳವಳಿ ಧಾರೆಗಳಿವೆ. ಒಂದು “ಪರಿಸರದಲ್ಲಿ ನಾವು ಹಸ್ತಕ್ಷೇಪ ಮಾಡಲೇಬಾರದು’’ ಅನ್ನುವ ರೀತಿಯ ‘ಕಲ್ಟ್ ಆಫ್ ವೈಲ್ಡರ್‌ನೆಸ್’ ಧಾರೆ. ಎರಡನೆಯದು “ನಮ್ಮ ಸುಖ ಸೌಕರ್ಯಗಳನ್ನು ಕಮ್ಮಿ ಮಾಡಿಕೊಳ್ಳದೆ ಕಡಿಮೆ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚು ಸಮರ್ಪಕವಾಗಿ ಬಳಸಿಕೊಳ್ಳೋಣ’’ ಅನ್ನುವ ‘ಗಾಸ್ಪೆಲ್ ಆಫ್ ಇಕೋ ಎಫಿಶಿಯನ್ಸಿʼ ಧಾರೆ. ಮೂರನೆಯದು ಪರಿಸರವನ್ನೇ ನಂಬಿ ಬದುಕು ನಡೆಸುವ, ಅಭಿವೃದ್ಧಿ ಹೆಸರಲ್ಲಿ ಪರಿಸರ ಮತ್ತು ಬದುಕು ಎರಡನ್ನೂ ನಾಶ ಮಾಡುವುದರ ವಿರುದ್ಧ ನಿಲ್ಲುವ ಜನ-ಸಮುದಾಯಗಳ ‘ಬಡವರ ಪರಿಸರವಾದʼದ ಧಾರೆ. ಪರಿಸರವಾದ-ಪರಿಸರ ಚಳವಳಿಯು ಮಧ್ಯಮ ವರ್ಗದ -ಶ್ರೀಮಂತರ, ಮೇಲ್‌ಸ್ತರದ ಜನರ ಸಾಂಸ್ಕೃತಿಕ ರಾಜಕಾರಣವಾಗಿಯೇ ಇದೆ. ಈಗ ಪರಿಸರವಾದವನ್ನು ಮತ್ತು ಪರಿಸರ ಚಳವಳಿಯನ್ನು ಕಪ್ಪುಜನರ ನೆಲೆಯಿಂದ, ಸ್ತ್ರೀವಾದದ ನೆಲೆಯಿಂದ, ಭಾರತದ ಸಂದರ್ಭದಲ್ಲಿ ತಳಸ್ತರದ ಜಾತಿ ಸಮುದಾಯಗಳ – ಸಾಮಾಜಿಕ ನ್ಯಾಯದ ನೆಲೆಯಿಂದ ನೋಡುವ ಕ್ರಮವೂ ಇದೆ.

ನಮ್ಮ ಜೀವನ ಶೈಲಿ, ಸರಕು ಸೇವೆಗಳನ್ನು ಉತ್ಪಾದಿಸುವ, ಬಳಸುವ ಪ್ರಮಾಣ ಮತ್ತು ಕ್ರಮಗಳೇ ಪರಿಸರ ನಾಶಕ್ಕೆ ಕಾರಣ. ಒಂದಷ್ಟು ಹೆಚ್ಚಿದ ಜನಸಂಖ್ಯೆಗೆ ಮೂಲಭೂತ ಅಗತ್ಯಗಳನ್ನು ಪೂರೈಸಲು ನೈಸರ್ಗಿಕ ಸಂಪನ್ಮೂಲ ನಾಶ ಆಗಿದೆಯಾದರೂ ಹೆಚ್ಚಿನ ಪರಿಸರ ನಾಶ ಆಗಿದ್ದು, ಆಗುತ್ತಿರುವುದು ಅತಿಯಾಸೆ, ಭೋಗದ ಜೀವನ ಶೈಲಿಗಾಗಿ. ಜೀವನ ಶೈಲಿಯೂ ನಮ್ಮದೇ ಆಯ್ಕೆ ಏನೂ ಅಲ್ಲ, ಉತ್ಪಾದಕರು-ಬಂಡವಾಳ ಹೂಡಿರುವವರು-ಮಾರಾಟಗಾರರಿಂದ ಉದ್ದೀಪನಗೊಂಡ ನಮ್ಮವೇ ಸುಖದಾಸೆಗಳ ಅವತಾರ ನಾವು.

ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?

ಪರಿಸರ ನಾಶಕ್ಕೆ ಕಾರಣಗಳನ್ನು ಹುಡುಕುವಾಗ ಮೊದಲು ಬೆಟ್ಟು ಮಾಡಿ ತೋರಿಸುವುದು ಕಾರ್ಖಾನೆಗಳನ್ನು, ಕಾಡು ಕಡಿಯುವುದನ್ನು, ಪ್ಲಾಸ್ಟಿಕ್ ಬಳಸುವುದನ್ನು. ಆದರೆ ಇದು ಅಷ್ಟು ಸರಳವಾಗಿಲ್ಲ. ನಮ್ಮ ಜೀವನ ದೃಷ್ಟಿಕೋನ, ಜೀವನ ಶೈಲಿ, ಉತ್ಪಾದನಾ ವಿಧಾನ, ಸಾಮಾಜಿಕ ಆರ್ಥಿಕ ಸಂರಚನೆಯೊಂದಿಗೆ ತಳಕುಹಾಕಿಕೊಂಡು ಸಂಕೀರ್ಣವಾಗಿದೆ.

ಅರಣ್ಯ-ಹುಲ್ಲುಗಾವಲುಗಳು ಮತ್ತು ಜೀವ ವೈವಿಧ್ಯ ಸಂರಕ್ಷಣೆ

ಕರ್ನಾಟಕದಲ್ಲಿ 1960ರ ದಶಕದಲ್ಲಿ ಸುಮಾರು 35,21,000 ಹೆಕ್ಟೇರು ಅರಣ್ಯವಿತ್ತು. ಇದು ಕರ್ನಾಟಕ ಭೂಭಾಗದ ಶೇ. 23 ಭಾಗ. 1970ರ ಅಂಕಿಅಂಶಗಳ ಪ್ರಕಾರ ಆಗ ಕಾರ್ಖಾನೆಯ ಕಚ್ಚಾ ವಸ್ತುಗಳಿಗೆ, ಸೌದೆ, ಇದ್ದಿಲುಗಳಿಗಾಗಿ ಪ್ರತಿವರ್ಷ ಸುಮಾರು ಒಂದು ಲಕ್ಷ ಹೆಕ್ಟೇರ್ ಅರಣ್ಯ ನಾಶ ಆಗುತ್ತಿತ್ತು. ಕರ್ನಾಟಕದ ಅರಣ್ಯ ಪ್ರಮಾಣ 1985ರ ವೇಳೆಗೆ ಶೇ. 19.5 ರಷ್ಟಾಯಿತು. ಆ ನಂತರ ಕಾಡಿನ ಪ್ರಮಾಣ ಮತ್ತಷ್ಟೂ ಕಡಿಮೆಯಾಯಿತು. ಇದೀಗ ಒಂದಿಷ್ಟು ಅರಣ್ಯ ವೃದ್ಧಿಯಾಗಿ ಶೇ. 19-20ರ ಆಸುಪಾಸಿನಲ್ಲಿದೆ. ಅರಣ್ಯ ವೃದ್ಧಿಸುವ ಉದ್ದೇಶದಿಂದ ಸಾಮಾಜಿಕ ಅರಣ್ಯ ಕಾರ್ಯಕ್ರಮವು 1983ರಲ್ಲಿ ಆರಂಭವಾಯಿತು. ಇದರಡಿ ಖಾಸಗಿ ಜಮೀನಿನಲ್ಲಿ, ಸಾಮೂಹಿಕ ಭೂಮಿಗಳಲ್ಲಿ ಅರಣ್ಯ ಬೆಳೆಸಲು ಪ್ರೋತ್ಸಾಹಿಸಲಾಯಿತು. ಉದ್ದೇಶವೇನೋ ಒಳ್ಳೆಯದಾಗಿತ್ತು. ಆದರೆ ಸಾಮಾಜಿಕ ಅರಣ್ಯದ ಹೆಸರಲ್ಲಿ ಬೆಳೆಸಿದ್ದು ನೀಲಗಿರಿ ಅಕೇಶಿಯಾದಂಥ ಮರಗಳನ್ನು. ಇವು ಪರಿಸರಕ್ಕೆ ಪೂರಕವಲ್ಲ. ಕೇವಲ ಒಂದು ಜಾತಿಯ ಮರಗಳನ್ನು ಬೆಳೆಸಿದರೆ ಮರ ಬೆಳೆಸಿದಂತಾಯಿತೇ ಹೊರತು ಕಾಡು ಬೆಳೆಸಿದಂತಾಗಲಿಲ್ಲ. 1980ರ ಅವಧಿಯಲ್ಲಿ ಕರ್ನಾಟಕದ ಆರು ಜಿಲ್ಲೆಗಳ ಅರಣ್ಯ, ಗುಂಡುತೋಪು, ಗೋಮಾಳ ಭೂಮಿಯಲ್ಲಿ ಖಾಸಗಿ ಕಂಪನಿಯ ಜೊತೆಗೆ ಕೈಜೋಡಿಸಿ ನೀಲಗಿರಿ ಕಾಡು ಬೆಳೆಸುವ ಸರಕಾರದ ಪ್ರಯತ್ನವೊಂದು ನಡೆಯಿತು. ಅದರ ಉದ್ದೇಶ ರೇಯಾನ್ ಬಟ್ಟೆ ಕಾರ್ಖಾನೆಗೆ ಕಚ್ಚಾವಸ್ತು ಒದಗಿಸುವುದು. ಇದರ ವಿರುದ್ದ ಕಿತ್ತುಕೋ ಹಚ್ಚಿಕೋ (ನೀಲಗಿರಿ ಕಿತ್ತು ಸ್ಥಳೀಯ ಜಾತಿಯ ಗಿಡ ಹಚ್ಚುವುದು) ಚಳವಳಿ ನಡೆದು ಜನರು ಗೆದ್ದಿದ್ದು ಒಂದು ಐತಿಹಾಸಿಕ ಘಟನೆಯಾಗಿದೆ. 70-80ರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗುವ ಹಲವು ಅಣೆಕಟ್ಟೆಗಳನ್ನು ಕಟ್ಟುವ ಯೋಜನೆಗಳು ಬಂದವು. ಇದನ್ನು ವಿರೋಧಿಸಿ ಹೋರಾಟಗಳು ನಡೆದವು. ಹೋರಾಟಗಳು ಸೋತವು. ಆದರೆ ನಾಡಿನಲ್ಲಿ ಪರಿಸರದ ಅರಿವು ಮೂಡಿತು ಎನ್ನಬಹುದು. ರಾಜ್ಯದಲ್ಲಿ ಅರಣ್ಯ ಇಲಾಖೆಯು ಸ್ಥಳೀಯ ಸಮುದಾಯಗಳ ಜೊತೆಗೂಡಿ ಜಂಟಿ ಅರಣ್ಯ ಯೋಜನೆಯ ಅಡಿ ಅರಣ್ಯ ಬೆಳೆಸುವ, ಜನರೂ ಅರಣ್ಯ ನಿರ್ವಹಣೆಯಲ್ಲಿ ಪಾಲುದಾರರಾಗುವ ಯೋಜನೆ 90ರ ದಶಕದಲ್ಲಿ ಸುದ್ದಿ ಮಾಡಿತಾದರೂ ಅದೇನೂ ಅಷ್ಟೊಂದು ಫಲಕಾರಿ ಆಗಲಿಲ್ಲ, ವಿಸ್ತರಿಸಿಕೊಳ್ಳಲಿಲ್ಲ.

kaiga

ಅರಣ್ಯ ಮತ್ತು ಜೀವವೈವಿಧ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳ ಘೋಷಣೆ ಬಹಳ ಮುಖ್ಯ. ಭಾರತದ 106 ರಾಷ್ಟ್ರೀಯ ಉದ್ಯಾನಗಳ ಪೈಕಿ ಪ್ರಮುಖ ನಾಲ್ಕು ಕರ್ನಾಟಕದಲ್ಲಿವೆ. 1973ರಲ್ಲಿ ಬಂಡೀಪುರ, 1974ರಲ್ಲಿ ಬನ್ನೇರುಘಟ್ಟ, 1987ರಲ್ಲಿ ಕುದುರೆಮುಖ, 1988ರಲ್ಲಿ ನಾಗರಹೊಳೆ ನ್ಯಾಷನಲ್ ಪಾರ್ಕ್ ಘೋಷಣೆಯಾಯಿತು. ಉತ್ತರ ಕನ್ನಡದ ಅನ್ಶಿ ರಾಷ್ಟ್ರೀಯ ಉದ್ಯಾನವನ್ನು ಇನ್ನಷ್ಟು ಪ್ರದೇಶಕ್ಕೆ ವಿಸ್ತರಣೆಗೊಳಿಸಿ ಕಾಳಿ ಟೈಗರ್ ರಿಸರ್ವ್ ಮಾಡಲಾಯಿತು. ರಾಜ್ಯದ 19 ತಾಣಗಳನ್ನು ವನ್ಯಜೀವಿ ಅಭಯಾರಣ್ಯಗಳಾಗಿ ಘೋಷಿಸಲಾಗಿದೆ. ಹೆಚ್ಚಿನ ಅರಣ್ಯಗಳನ್ನು ರಕ್ಷಿತಾರಣ್ಯಗಳಾಗಿ ಕಾಪಾಡಲಾಗಿದೆ. ಹಲವು ಪಕ್ಷಿಧಾಮಗಳನ್ನು ಘೋಷಿಸಲಾಗಿದೆ.

ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಕರ್ನಾಟಕ ಒಂದು ಹೆಜ್ಜೆ ಮುಂದೆ ಇದೆ, ಎರಡು ಹೆಜ್ಜೆ ಹಿಂದೆ ಇದೆ. ಭಾರತದ ಒಟ್ಟು ಆನೆಗಳ ಪೈಕಿ ಶೇಕಡಾ 25 ಕರ್ನಾಟಕದಲ್ಲಿಯೇ ಇವೆ. ಕರ್ನಾಟಕದಲ್ಲಿ ಆನೆಗಳ ಸಂಖ್ಯೆಯು ಹೆಚ್ಚುತ್ತಿದ್ದು 2013ರ ಗಣತಿಯಂತೆ 6395 ಆನೆಗಳಿವೆಯಂತೆ.

ಹುಲಿಗಳ ಸಂಖ್ಯೆಯೂ ಹೆಚ್ಚಾಗಿದೆ. ಭಾರತದಲ್ಲಿ ಹುಲಿ ಯೋಜನೆ (ಟೈಗರ್ ಪ್ರಾಜೆಕ್ಟ್) ಶುರು ಆಗಿದ್ದು 1972ರಲ್ಲಿ. ಇದರಲ್ಲಿ ಕರ್ನಾಟಕವೂ ಸಕಾರಾತ್ಮಕವಾಗಿ ಭಾಗಿ ಆಯಿತು.

ಆದರೆ ಇದೇ ಸಮಯದಲ್ಲಿ ವನ್ಯಜೀವಿ – ಮನುಷ್ಯರ ಸಂಘರ್ಷ ಹೆಚ್ಚಾಗಿದೆ. 2018 ಮತ್ತು 2023ರ ನಡುವೆ ಕರ್ನಾಟಕದಲ್ಲಿ 148 ಜನ ಆನೆಗಳ ದಾಳಿಗೆ ಬಲಿಯಾಗಿದ್ದಾರೆ. ಆನೆಗಳು ಹೊಲಕ್ಕೆ, ಊರಿಗೆ ನುಗ್ಗದಂತೆ ಕಣಿವೆ ತೋಡಬಹುದು, ವಿದ್ಯುತ್ ಬೇಲಿ ಹಾಕಬಹುದು ಅಥವಾ ಇದೀಗ ಬೆಂಗಳೂರು – ಕನಕಪುರ ರಸ್ತೆಯಲ್ಲಿ ನಿರ್ಮಿಸಿರುವಂತೆ ಆನೆ ರಸ್ತೆ ದಾಟಲು ಮೇಲ್ ಸೇತುವೆ ನಿರ್ಮಿಸಬಹುದು. ಆದರೆ ಆನೆಗಳು ಚಲಿಸುವ ಕಾರಿಡಾರ್ ನಾಶ ಆಗಿರುವುದರಿಂದ ಅವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ವಿದ್ಯುತ್ ಸ್ಪರ್ಶ ಮುಂತಾದ ಘಟನೆಗಳಲ್ಲಿ ಆನೆಗಳ ಸಾವೂ ಹೆಚ್ಚಾಗುತ್ತಿದೆ. ಅರಣ್ಯ -ವನ್ಯಜೀವಿ ಸಂರಕ್ಷಣೆಗಾಗಿ ಕಾಡೊಳಗಿನ ಆದಿವಾಸಿಗಳು, ಹಳ್ಳಿಗಳನ್ನು ಎತ್ತಂಗಡಿ ಮಾಡುವ ಪ್ರಯತ್ನಗಳಿಗೆ ಬಹಳ ಪ್ರತಿರೋಧ ಕರ್ನಾಟಕದಲ್ಲಿ ನಡೆದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ, ನಾಗರಹೊಳೆ ಭಾಗದಲ್ಲಿ ಹೋರಾಟಗಳೇ ನಡೆದವು. ಇದೀಗ ಮಲೆನಾಡಿನ ಜನರು ಆನೆಗಳ ಹಾವಳಿ (ಹಾವಳಿ!) ಮತ್ತು ಇತರ ಕಷ್ಟಗಳಿಂದ ಬೇಸತ್ತು ಸೂಕ್ತ ಪರಿಹಾರ ಕೊಟ್ಟರೆ ಆನೆಗಳಿಗಾಗಿಯೇ ತಮ್ಮ ಜಮೀನು ಬಿಟ್ಟು ಕೊಡಲು ಮುಂದಾಗಿರುವುದು ಹೊಸ ವಿದ್ಯಮಾನ.

ಇದನ್ನೂ ಓದಿರಿ: ಅಮೆರಿಕ, ಫ್ರಾನ್ಸ್‌ಗೂ ಸಡ್ಡು ಹೊಡೆಯುತ್ತಿರುವ ಇಬ್ರಾಹಿಂ ಥೋರೆ!

ಹುಲ್ಲುಗಾವಲುಗಳು, ಕುರುಚಲು ಕಾಡುಗಳು ಕೂಡ ಅರಣ್ಯಗಳೇ. ಇಲ್ಲಿಯೂ ಜೀವ ವೈವಿಧ್ಯವನ್ನು ಪೋಷಿಸುವ ಪರಿಸರ ವ್ಯವಸ್ಥೆ ಇದೆ. ಆದರೆ ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ದನ-ಕುರಿಗಾಹಿಗಳ ಜೀವನೋಪಾಯ ದಾರಿಯಾಗಿದ್ದ ಹುಲ್ಲುಗಾವಲು, ಗೋಮಾಳಗಳನ್ನು ಬೇರೇನಾದರೂ `ಅಭಿವೃದ್ಧಿ’ ಯೋಜನೆಗೆ ಬಳಸಬಹುದಾದ ವೇಸ್ಟ್ ಲ್ಯಾಂಡ್ ಎಂದು ಪರಿಗಣಿಸಲಾಯಿತು. ಬಹಳಷ್ಟು ದೊಡ್ಡ ಯೋಜನೆಗಳಿಗೆ ಇವುಗಳನ್ನು ಬಲಿ ಕೊಡಲಾಯಿತು. ವಿಜಯನಗರ ಅರಸರ ಕಾಲದಿಂದ ಮೈಸೂರು ರಾಜರು, ಹೈದರ್, ಟಿಪ್ಪು ಕಾಲದವರೆಗೂ ಪಶು ಸಂಗೋಪನೆಗೆಂದೇ ಅಮೃತ ಮಹಲ್ ಕಾವಲ್ ಎಂಬ ಹೆಸರಲ್ಲಿ ಅನೇಕ ಹುಲ್ಲುಗಾವಲುಗಳನ್ನು ರಕ್ಷಿಸಿಕೊಂಡು ಬರಲಾಗಿತ್ತು. 1947ಹೊತ್ತಿಗೆ ಕರ್ನಾಟಕದಲ್ಲಿ ಸುಮಾರು 1,60,000 ಹೆಕ್ಟೇರ್ ಇದ್ದ ಹುಲ್ಲುಗಾವಲು ಈಗ ಸುಮಾರು 12,000 ಹೆಕ್ಟೇರ್‌ಗೆ ಇಳಿದಿದೆ.

ಕಳೆದ 450 ವರ್ಷಗಳಿಂದ ಕಾಪಾಡಿಕೊಂಡು ಬಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ 5800 ಹೆಕ್ಟೇರ್ ವಿಸ್ತಾರದ ಅಮೃತ ಮಹಲ್ ಕಾವಲ್‌ನ 4000 ಹೆಕ್ಟೇರ್‌ನಷ್ಟು ಹುಲ್ಲುಗಾವಲು ಈ ಹತ್ತು ವರ್ಷಗಳಲ್ಲಿ ‘ವಿಜ್ಞಾನ ನಗರಿ’ ಆಗಿದೆ. ನಗರೀಕರಣದ ಒತ್ತಡದ ನಡುವೆಯೂ, ಕೆಲವು ‘ಅಭಿವೃದ್ಧಿ’ಪರ ಮುಂದಾಳುಗಳ ವಿರೋಧದ ನಡುವೆಯೂ ಪರಿಸರ ಪರ ಇರುವವರ ಆಗ್ರಹಕ್ಕೆ ಮಣಿದು ಬೆಂಗಳೂರು ನಗರದ ಸಮೀಪದ ಹೆಸರಘಟ್ಟ ಕೆರೆ, ಹುಲ್ಲುಗಾವಲು, ಸುತ್ತಲಿನ ಕಾಡು ಸೇರಿದಂತೆ ಸುಮಾರು 5000 ಎಕರೆ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಕರ್ನಾಟಕ ಸರಕಾರವು ಇತ್ತೀಚೆಗಷ್ಟೇ ಘೋಷಿಸಿದ್ದು ಸಾಧನೆಯೇ.

ಜಲ ಸಂಪನ್ಮೂಲಗಳ ಸಂರಕ್ಷಣೆ

ನೀರು ಅಪಾಯದಲ್ಲಿರುವ ಸಂಪನ್ಮೂಲ. ನಿಸರ್ಗದಲ್ಲಿ ನೀರು ಕಡಿಮೆ ಆಗುವುದಿಲ್ಲ. ನಮಗೆ ಬೇಕಾದ ಸ್ಥಳದಲ್ಲಿ, ಬೇಕಾದ ಸಮಯದಲ್ಲಿ ಬೇಕಾದ ಸ್ವರೂಪದಲ್ಲಿ ಸಿಗುವುದಿಲ್ಲ ಅನ್ನುವುದು ಸಮಸ್ಯೆ. ಹಾಗೆ ಸಿಗದಂತೆ ಸಮಸ್ಯೆ ತಂದುಕೊಂಡಿದ್ದೇವೆ. ಜಲಚಕ್ರದಲ್ಲಿ ನಮ್ಮ ಹಸ್ತಕ್ಷೇಪ ಸರಿಪಡಿಸಲಾಗದಷ್ಟು ಅತಿರೇಕಕ್ಕೆ ಹೋಗಿದೆ. ನೀರಿನ ಮೂಲ ಮಳೆಯೇ. ನಮ್ಮ ಭೂ ಬಳಕೆ ಕ್ರಮ ಬದಲಾದುದರಿಂದ, ಅಂತರ್ಜಲ ಅತಿ ಬಳಕೆ ಮಾಡಿರುವುದರಿಂದ ಎಷ್ಟೇ ಮಳೆಯಾದರೂ ಮಳೆ ನೀರು, ಒರೆತದ ನೀರು ಉಂಟಾಗುವುದಿಲ್ಲ. ಕೆರೆ, ನದಿಗಳು, ಅಣೆಕಟ್ಟುಗಳು ತುಂಬುತ್ತಿಲ್ಲ. ನಾವು ನೀರು ಬಳಸುವ ಕ್ರಮ, ಕೃಷಿ-ಬೆಳೆ ಪದ್ಧತಿ ಎಲ್ಲವೂ ಜಲ ಸ್ನೇಹಿಯಾಗಿ ಬದಲಾಗಬೇಕು. ಈವರೆಗಿನ ರಾಜ್ಯದ ಜಲನೀತಿಯು ದೊಡ್ಡ ನೀರಾವರಿ ಯೋಜನೆಗಳ ಪರ, ನೀರನ್ನು ಹೆಚ್ಚು ಪೋಲು ಮಾಡುವುದರ ಪರವೇ ಇತ್ತು (ಡಿಮಾಂಡ್ ಸೈಡ್ ಮ್ಯಾನೇಜ್‌ಮೆಂಟ್ ಇಲ್ಲವೇ ಇಲ್ಲ). 2019ರಲ್ಲಿ ಕರ್ನಾಟಕ ಸರಕಾರವೇ ಜ್ಞಾನ ಆಯೋಗದ ಅಡಿಯಲ್ಲಿ ನೇಮಿಸಿದ ಜಲನೀತಿ ರೂಪಿಸುವ ತಜ್ಞರ ಸಮಿತಿಯು ನೀರಿನ ಸಂರಕ್ಷಣೆ-ಸದ್ಬಳಕೆ-ಹಂಚಿಕೆ-ಜನರ ಭಾಗವಹಿಸುವಿಕೆ ಎಲ್ಲವನ್ನೂ ವಿಶ್ಲೇಷಿಸಿ ಹೊಸ ಸಾಧ್ಯತೆಗಳನ್ನು ಮುಂದಕ್ಕೆ ಇಟ್ಟ ಕರಡು ನೀತಿಯನ್ನು ಅನುಮೋದಿಸಲು ಅಧಿಕಾರಿಗಳು, ಜನ ನಾಯಕರು ಹಿಂದೇಟು ಹಾಕಿದರು. ಹಳೆಯ ಜಲ ನೀತಿಯನ್ನೇ ಸ್ವಲ್ಪ ಮಾರ್ಪಡಿಸಿ ಜಾರಿಗೆ ತಂದಿದ್ದು ದುರಂತದ ಸಂಗತಿ.

ಈಗಿನ ಲೆಕ್ಕಾಚಾರದ ಪ್ರಕಾರ ಕರ್ನಾಟಕದ ಮೂರನೇ ಒಂದು ಭಾಗ ಭೂ ಪ್ರದೇಶ ಅಂತರ್ಜಲ ಅತಿ ಬಳಕೆಯ ವರ್ಗದಲ್ಲಿ ಇದ್ದು ಇದು ಸಾಮಾಜಿಕ ಆರ್ಥಿಕ ಉದ್ವಿಗ್ನತೆಗೆ ಕಾರಣವಾಗಲಿದೆ. ಭಾರತದಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕವೇ ಎರಡನೆಯ ಮರುಭೂಮಿ. ಕರ್ನಾಟಕದ ಬಯಲುಸೀಮೆ ಮರುಭೂಮೀಕರಣಗೊಳ್ಳುತ್ತಿದೆ. ನದಿಗಳ ಮಾಲಿನ್ಯದಲ್ಲಿ ನಾವು ಮುಂದೆ ಇದ್ದೇವೆ. ನೀರಿನ ಗುಣ ಮಟ್ಟವನ್ನು ಪರೀಕ್ಷಿಸಲಾಗುತ್ತಿರುವ ರಾಜ್ಯದ 17 ನದಿಗಳ ಪೈಕಿ 13 ನದಿಗಳ ನೀರು ಕಲುಷಿತಗೊಂಡಿವೆ. ರಾಜ್ಯದ ಹದಿನೆಂಟು ಜಿಲ್ಲೆಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚು ಇರುವುದು ಪತ್ತೆಯಾಗಿದೆ.

ಬೆಂಗಳೂರಿಗೆ ನೀರು ಸರಬರಾಜು ಮಾಡುತ್ತಿದ್ದ ಅರ್ಕಾವತಿ ನದಿಯ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಲು ಕಾರಣಗಳನ್ನು ಸಂಶೋಧಿಸುವ, 2000 ಇಸವಿಯಲ್ಲಿ ನಡೆದ ಇಸ್ರೋ ಅಧ್ಯಯನದ ಆಧಾರದ ಮೇಲೆ ಜಲಾನಯನದ ಸಂರಕ್ಷಣೆಗೆ 2003ರಲ್ಲಿ ಕರ್ನಾಟಕ ಸರಕಾರ ಹೊರಡಿಸಿದ ಅಧಿಸೂಚನೆ ಅನುಷ್ಠಾನವಾಗಲಿಲ್ಲ. 2014-15ರ ಅವಧಿಯಲ್ಲಿ ವಿಷಯ ನ್ಯಾಯಾಲಯದ ಮೆಟ್ಟಿಲೇರಿ ನದಿಯ ಸಂರಕ್ಷಣೆಗೆ ಸರಕಾರದ ನಿಲುವನ್ನು ಮತ್ತೊಮ್ಮೆ ಕೇಳಿದಾಗ ಅಧಿಸೂಚನೆಯನ್ನೇ ದುರ್ಬಲಗೊಳಿಸಲಾಯಿತು.

2012-14ರ ಅವಧಿಯಲ್ಲಿ ಕರ್ನಾಟಕ ಸರಕಾರ ಅರ್ಕಾವತಿ ನದಿ ಪುನಶ್ಚೇತನದ ಪ್ರಯತ್ನ ಮಾಡಿತಾದರೂ ಅರ್ಧಕ್ಕೆ ಕೈ ಬಿಟ್ಟಿತು. ದಶಕದ ಹಿಂದೆ ದಕ್ಷಿಣ ಪಿನಾಕಿನಿ ನದಿಯ ಪುನಶ್ಚೇತನಕ್ಕೆ ರಾಜ್ಯ ಸರಕಾರದ ಬಜೆಟ್‌ನಲ್ಲಿ ಕೆಲವು ಕೋಟಿಗಳನ್ನು ಘೋಷಿಸಿತು. ಆಮೇಲೆ ಏನೂ ಸುದ್ದಿ ಇಲ್ಲ.

ರಾಜ್ಯ ಕೆರೆಗಳನ್ನು ಜನರ ಸಹಭಾಗಿತ್ವದಲ್ಲಿ ಸಂರಕ್ಷಣೆ ಮಾಡುವ ಜಲ ಸಂವರ್ಧನ ಯೋಜನೆಯನ್ನು ಸರಕಾರವು 80-90ರ ದಶಕದಲ್ಲಿ ಕೈಗೆತ್ತಿಕೊಂಡು ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಹೊಸ ಭರವಸೆ ಮೂಡಿಸಿತು. ಆದರೆ ಜನ ಸಹಭಾಗಿತ್ವದ ಯೋಜನೆಗಳು ಕೆಲವು ಹಿತಾಸಕ್ತಿಗಳಿಗೆ ಇಷ್ಟವಾಗುವುದಿಲ್ಲ. ಈ ಯೋಜನೆಗಳು ಮುಂದುವರೆಯಲಿಲ್ಲ. 2006ರಲ್ಲಿ ಒಕ್ಕೂಟ ಸರಕಾರದ `ವ್ಯವಸಾಯ ಸಂಬಂಧಿತ ಜಲಕಾಯಗಳ ದುರಸ್ತಿ, ಸಂರಕ್ಷಣೆ ಮತ್ತು ಪುನರುಜ್ಜೀವನ’ ಮಾಡುವ ಯೋಜನೆಯಡಿ ರಾಜ್ಯದ ಎರಡು ಜಿಲ್ಲೆಗಳ ಕೆರೆಗಳ ಪುನಶ್ಚೇತನ ಕಾರ್ಯಕ್ರಮ ಸರಿಯಾಗಿ ಅನುಷ್ಠಾನವಾಗಲಿಲ್ಲ. ಇಲ್ಲೂ ಜನ ಸಹಭಾಗಿತ್ವಕ್ಕಾಗಿ ನೀರು ಬಳಕೆದಾರರ ಸಂಘಗಳು ಕಡತಗಳಲ್ಲಿ ಮಾತ್ರ ರಚನೆಯಾದವು. ರಾಜ್ಯದ ಹಲವು ಕಡೆಗಳಲ್ಲಿ ಕೆರೆಗಳನ್ನು ಬಸ್ ನಿಲ್ದಾಣಗಳನ್ನಾಗಿ, ಕಸ ಹಾಕುವ ಜಾಗವನ್ನಾಗಿ ಪರಿವರ್ತಿಸಲಾಗಿದೆ. ಕೆರೆಗಳನ್ನು ಉಳಿಸಲು ಹೋರಾಟಗಳೂ ಸಾಕಷ್ಟು ಕಡೆ ನಡೆದಿವೆ. ರಾಜ್ಯದಲ್ಲಿ 2014ರಲ್ಲಿ `ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ’ ಮಾಡಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಸಾಧನೆ. ಆದರೆ ಪ್ರಾಧಿಕಾರದಂತಹ ಸಂರಚನೆಗಳು ಪ್ರಜಾಸತ್ತಾತ್ಮಕವಲ್ಲ ಮತ್ತು ಜನರನ್ನು ಒಳಗೊಳಿಸುವುದಿಲ್ಲ.

ಇದನ್ನೂ ಓದಿರಿ: ವಿಶ್ಲೇಷಣೆ | ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಎದುರಿಸುತ್ತಿರುವ ಸವಾಲುಗಳೇನು?

ಕರ್ನಾಟಕದ ಅನೇಕ ಕಡೆ ಸ್ಥಳೀಯ ಪರಿಸರ ಉಳಿಸುವ, ಅರಣ್ಯೀಕರಣ ಮಾಡುವ, ಜಲ ಸಂಪನ್ಮೂಲ ಸಂರಕ್ಷಣೆ ಮಾಡುವ ಕೆಲಸಗಳನ್ನು ಸರಕಾರಕ್ಕಿಂತ ಎಚ್ಚೆತ್ತ ಜನ ಸಮೂಹ ಸ್ವಯಂಪ್ರೇರಿತವಾಗಿ ಮಾಡಿರುವ ಕೆಲಸಗಳೇ ಸ್ವಲ್ಪ ಹೆಚ್ಚು ಅನ್ನಬಹುದು. ಇದಕ್ಕೆ ನೂರಾರು ಉದಾಹರಣೆಗಳಿವೆ. ಬೆಂಗಳೂರು ನಗರದಲ್ಲೂ ಕೆರೆಗಳ ಸಂರಕ್ಷಣೆ ಸಮಿತಿಗಳು, ಅವುಗಳ ಒಕ್ಕೂಟ ಸಕ್ರಿಯವಾಗಿದೆ.

ಇನ್ನು ಅಣೆಕಟ್ಟು-ನೀರಾವರಿ ವಿಚಾರ. ಕರ್ನಾಟಕದ ಪ್ರಮುಖ ದೊಡ್ಡ ಅಣೆಕಟ್ಟುಗಳಾದ ಕೃಷ್ಣರಾಜಸಾಗರ (1931), ತುಂಗಭದ್ರಾ ಜಲಾಶಯ (1953), ಲಿಂಗನಮಕ್ಕಿ (1960) ಬಹು ಹಿಂದೆಯೇ ಕಟ್ಟಿರುವುದಾದರೂ ಶೇಖರಣಾ ಸಾಮರ್ಥ್ಯದಲ್ಲಿ ರಾಜ್ಯದ ಅತಿ ದೊಡ್ಡದಾದ ಆಲಮಟ್ಟಿ ಅಣೆಕಟ್ಟು (1999), ಸೂಪಾ ಅಣೆಕಟ್ಟು ಮತ್ತು ಹಲವು ಮಧ್ಯಮ, ಸಣ್ಣ ಗಾತ್ರದ ಅಣೆಕಟ್ಟುಗಳನ್ನು ಈ ಐದು ದಶಕಗಳಲ್ಲಿ ಕಟ್ಟಲಾಗಿದೆ. ತುಂಗಭದ್ರಾ ಜಲಾಶಯವೂ ಸೇರಿದಂತೆ ಜಲಾಶಯಗಳಲ್ಲಿ ತುಂಬಿಕೊಂಡ ಹೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ಅಣೆಕಟ್ಟೆಗಳ ಶೇಖರಣಾ ಸಾಮರ್ಥ್ಯ ಕಡಿಮೆಯಾಗಿದೆ. ಹೂಳು ಎತ್ತುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ. ಅಣೆಕಟ್ಟುಗಳು ಉಂಟು ಮಾಡುವ ಅನುಕೂಲದಷ್ಟೇ ಅನಾನುಕೂಲಗಳಿವೆ, ಇವು ನದಿಯ ಪರಿಸರ ವ್ಯವಸ್ಥೆಯನ್ನು ಮತ್ತೆ ಸರಿಪಡಿಸಲಾಗದಷ್ಟು ಹಾಳು ಮಾಡುತ್ತವೆ, ನೀರಾವರಿಯಿಂದ ಕೃಷಿಯಲ್ಲಾಗುವ ಬದಲಾವಣೆಗಳು ಜೀವ ವೈವಿಧ್ಯತೆ-ಬೆಳೆ ವೈವಿಧ್ಯತೆಯ ನಾಶ, ಮಣ್ಣಿನ ಫಲವತ್ತತೆಯ ನಾಶ, ಆಹಾರ ವೈವಿಧ್ಯ ನಾಶ ಆಗಿದೆ. ಕೆಲವು ಮುಂದುವರೆದ ದೇಶಗಳಲ್ಲಿ ದೊಡ್ಡ ಅಣೆಕಟ್ಟೆಗಳನ್ನು ಒಡೆದು

ಹಾಕುವ (ಡಿ ಕಮಿಷನಿಂಗ್) ಕಾರ್ಯ ಕೂಡ ಶುರು ಆಗಿದೆ. ನಾವು ಇನ್ನೂ ದೊಡ್ಡ ಅಣೆಕಟ್ಟುಗಳನ್ನು ಕಟ್ಟಬೇಕು ಎಂಬ ಗುಂಗಲ್ಲೇ ಇದ್ದೇವೆ.

(ಮುಂದುವರಿಯುತ್ತದೆ..)

(‘ಈದಿನ ಡಾಟ್ ಕಾಮ್’ ಹೊರ ತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

kesaragadde
ಜನಾರ್ದನ ಕೆಸರಗದ್ದೆ
+ posts

‘ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಾಗಳ ನಡುವೆ’ ಎಂಬ ಖ್ಯಾತ ಹಾಡಿನ ರಚನಾಕಾರರಾದ ಜನಾರ್ದನ ಕೆಸರಗದ್ದೆಯವರು ಮೂರು ದಶಕಗಳಿಂದ ಸಾಮಾಜಿಕ ಕಾರ್ಯಕರ್ತರಾಗಿ ನಾಡಿನ ಹಲವು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 'ಸಂವಾದ' ಎಂಬ ಸರಕಾರೇತರ ಸಂಸ್ಥೆಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಜನಾರ್ದನ, ಯುವಜನರನ್ನು ಸಬಲೀಕರಣಗೊಳಿಸುವ ಕಾಯಕದಲ್ಲಿ ನಿರತರಾದವರು. ಕೃಷಿ, ಪರಿಸರ, ಯುವ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತರು. ಸರಕಾರದ ಇಲಾಖೆಗಳಿಗೆ, ಸಂಘ ಸಂಸ್ಥೆಗಳಿಗೆ, ಆಸ್ಪತ್ರೆಗಳ ಸಮಿತಿಗಳಿಗೆ, ವಿವಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡವರು. ಹೊಸ ಕಾಲಕ್ಕೆ ಹೊಸ ಹಾಡುಗಳನ್ನು ಸೃಷ್ಟಿಸಿರುವುದರಲ್ಲಿ ಜನಾರ್ದನ ಅವರ ಹಿರಿಮೆಯಿದೆ.

ಪೋಸ್ಟ್ ಹಂಚಿಕೊಳ್ಳಿ:

ಜನಾರ್ದನ ಕೆಸರಗದ್ದೆ
ಜನಾರ್ದನ ಕೆಸರಗದ್ದೆ
‘ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಾಗಳ ನಡುವೆ’ ಎಂಬ ಖ್ಯಾತ ಹಾಡಿನ ರಚನಾಕಾರರಾದ ಜನಾರ್ದನ ಕೆಸರಗದ್ದೆಯವರು ಮೂರು ದಶಕಗಳಿಂದ ಸಾಮಾಜಿಕ ಕಾರ್ಯಕರ್ತರಾಗಿ ನಾಡಿನ ಹಲವು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 'ಸಂವಾದ' ಎಂಬ ಸರಕಾರೇತರ ಸಂಸ್ಥೆಯಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡುತ್ತಿರುವ ಜನಾರ್ದನ, ಯುವಜನರನ್ನು ಸಬಲೀಕರಣಗೊಳಿಸುವ ಕಾಯಕದಲ್ಲಿ ನಿರತರಾದವರು. ಕೃಷಿ, ಪರಿಸರ, ಯುವ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣತರು. ಸರಕಾರದ ಇಲಾಖೆಗಳಿಗೆ, ಸಂಘ ಸಂಸ್ಥೆಗಳಿಗೆ, ಆಸ್ಪತ್ರೆಗಳ ಸಮಿತಿಗಳಿಗೆ, ವಿವಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗಿ ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡವರು. ಹೊಸ ಕಾಲಕ್ಕೆ ಹೊಸ ಹಾಡುಗಳನ್ನು ಸೃಷ್ಟಿಸಿರುವುದರಲ್ಲಿ ಜನಾರ್ದನ ಅವರ ಹಿರಿಮೆಯಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...