‘ಭಾರತದಲ್ಲಿ ಜಾತಿಗಳು: ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸ’ (Castes in India: Their Mechanism, Genesis and Development) ಕೃತಿಯು ಅಂಬೇಡ್ಕರ್ ಅವರು ನಡೆಸಿದ ಮಹತ್ವದ ಸಂಶೋಧನೆಗಳಲ್ಲಿ ಒಂದು. ಈ ಪುಸ್ತಕದ ವಸ್ತುವಿನ ವಿವರಣೆ, ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಸಮಕಾಲೀನ ಮಹತ್ವದ ಬಗ್ಗೆ ತಿಳಿಸಿಕೊಡುವ ಉದ್ದೇಶವನ್ನು ಈ ಕಿರು ಲೇಖನ ಹೊಂದಿದೆ.
1916ರ ಮೇ 9ರಂದು ಅಮೆರಿಕದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮಾನವ ಕುಲಶಾಸ್ತ್ರೀಯ ಸಮ್ಮೇಳನದಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿಯ ಭಾಗವಾಗಿ ಈ ಪ್ರೌಢಪ್ರಬಂಧವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಮಂಡಿಸುತ್ತಾರೆ. ಜಾತಿ ವ್ಯವಸ್ಥೆಯ ಕುರಿತು ಅಮೂಲಾಗ್ರವಾಗಿ ಈ ಪ್ರಬಂಧದಲ್ಲಿ ವಿಶ್ಲೇಷಿಸುತ್ತಾರೆ.
ಭಾರತದ ಜಾತಿಗಳು, ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸವನ್ನು ಮಾನವಶಾಸ್ತ್ರೀಯ ದೃಷ್ಟಿಕೋನದಲ್ಲಿ ಪರಿಶೀಲಿಸಿದ್ದಾರೆ. ಭಾರತದ ಜನಸಂಖ್ಯೆಯು ಆರ್ಯ, ದ್ರಾವಿಡ, ಮಂಗೋಲಿಯನ್ನರು ಮತ್ತು ಸಿಥಿಯನ್ನರ ಮಿಶ್ರಣವಾಗಿದೆ. ಕುಲ ಸಂಬಂಧದಲ್ಲಿ ಎಲ್ಲರೂ ವಿಜಾತಿಯವರಾಗಿದ್ದು ಕಲಬೆರಕೆ ಇದೆ. ಆದರೆ ಭಾರತ ಭೂ ಖಂಡದ ಜನರು ಸಾಂಸ್ಕೃತಿಕ ಏಕತೆಯಿಂದ ಒಂದುಗೂಡಿದ್ದಾರೆಯೇ ಎಂದು ಜಾತಿಯ ವಿವಿಧ ಅಧಿಕೃತ ಸಿದ್ಧಾಂತಗಳನ್ನು ಪರಿಶೀಲಿಸುತ್ತಾರೆ.
ಭಿನ್ನಗೋತ್ರ ಮತ್ತು ವಿವಾಹ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ಜಡ ಜಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದನ್ನು ಬಾಬಾ ಸಾಹೇಬರು ತಮ್ಮ ಸಂಶೋಧನೆಯ ಮೂಲಕ ಹೊರಗೆಡುವುತ್ತಾರೆ. ಸಗೋತ್ರ ವಿವಾಹ ಪದ್ಧತಿಯು ಮೇಲುಗೈ ಸಾಧಿಸಿದ್ದನ್ನು ವಿಶ್ಲೇಷಿಸುತ್ತಾರೆ. ಇದರ ಪರಿಣಾಮವಾಗಿ ಸತಿ ಪದ್ಧತಿ, ಕಡ್ಡಾಯ ವಿಧವಾ ಪದ್ಧತಿ ಮತ್ತು ಬಾಲ್ಯ ವಿವಾಹದಂತಹ ರಚನೆಗಳು ಹುಟ್ಟಿದೆಂದು ತಮ್ಮ ಪ್ರಬಂಧದಲ್ಲಿ ಮಂಡಿಸುತ್ತಾರೆ. ಭಾರತದಲ್ಲಿ ಗುಂಪುಗಳ ರಚನೆ ಸ್ವಾಭಾವಿಕ ಪ್ರಕ್ರಿಯೆ. ಆದರೆ ಬಹಿಷ್ಕಾರ ಮತ್ತು ಅನುಕರಣೆಯು ಜಾತಿಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಜಾತಿ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಇದು ಬಹಳ ಮುಖ್ಯವಾದ ಕೃತಿಯಾಗಿದೆ.

ಮಾನವ ನಾಗರಿಕತೆಯ ಒಟ್ಟು ಮೊತ್ತವನ್ನು ತಿಳಿಯಲು ರಾಷ್ಟ್ರೀಯ, ಅಂತರಾಷ್ಟ್ರೀಯ ಭೌತಿಕ ಬದಲಾವಣೆಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಮಾನವ ನಿರ್ಮಿತ ಸಾಮಾಜಿಕ ಏರ್ಪಾಡುಗಳನ್ನು ಯಾರು ಸ್ವೀಕರಿಸುವುದಿಲ್ಲ. `ಜಾತಿ ನಿಗೂಢತೆಯ ಸಿಕ್ಕುಗಳನ್ನು ಬಿಡಿಸಲು ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಮಾನವ ಕುಲಶಾಸ್ತ್ರೀಯ ಅಧ್ಯಯನಕಾರರೇ ಮಾರ್ಗದರ್ಶಿಗಳು’ ಎಂಬ ಅಭಿಪ್ರಾಯ ತಾಳುತ್ತಾರೆ ಅಂಬೇಡ್ಕರ್.
ಇದನ್ನೂ ಓದಿರಿ: ಜಾರಿಯಾಗದೆ ಉಳಿದ ಬಾಬಾಸಾಹೇಬರ ಸಂವಿಧಾನ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ (ಭಾಗ-1)
ಭಾರತದಲ್ಲಿ ಜಾತಿ ಒಂದು ಸ್ಥಳೀಯ ಸಮಸ್ಯೆಯಾಗಿದಾಗ್ಯೂ ಅದು ವ್ಯಾಪಕವಾಗಿ ಕೇಡನ್ನೂ, ಪರಿಣಾಮವನ್ನು ಬೀರಬಲ್ಲದು. ಭಾರತದಲ್ಲಿ ಜಾತಿ ಇರುವವರೆಗೆ ಹಿಂದೂಗಳು ಅಂತರ್ಜಾತಿ ವಿವಾಹವಾಗುವುದಿಲ್ಲ. ಸಾಮಾಜಿಕ ಸಂಬಂಧವನ್ನು ಮಾಡಲಾರರು. `ಒಂದು ವೇಳೆ ಅಂತರಾಷ್ಟ್ರೀಯ ವಲಸೆ ಹೋಗುವುದರಿಂದಲೂ ಜಾತಿಯೊಂದು ಅಂತರಾಷ್ಟ್ರೀಯ ಸಮಸ್ಯೆಯಾಗಿ ಪರಿಣಾಮ ಬೀರಬಹುದು’ ಎನ್ನುತ್ತಾ ಜಾತಿ ವ್ಯವಸ್ಥೆಯ ಉಗಮ, ಕಾರ್ಯವಿಧಾನವನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ.
ಜನಾಂಗೀಯವಾಗಿ ಎಲ್ಲರೂ ವಿಭಿನ್ನ ಸ್ವರೂಪವನ್ನು ಹೊಂದಿದವರು, ಆದರೆ ಸಮಾನತೆಯ ಮಾಪನವೆಂದರೆ ಸಾಂಸ್ಕೃತಿಕ ಒಗ್ಗಟ್ಟು. ಹಾಗಾಗಿ ಸಾಂಸ್ಕೃತಿಕ ಅಖಂಡತೆಯೊಂದಿಗೆ ಹಿಂದೂ ಸಮಾಜವು ಪರಸ್ಪರ ಪ್ರತ್ಯೇಕವಾದ ಒಕ್ಕೂಟವಾಗಿದೆಯೇ ಎಂಬುದನ್ನು ನೋಡಬೇಕಾಗುತ್ತದೆ. ಆದರೆ ಹಿಂದೂ ಸಮಾಜವು ವಿಂಗಡನೆಯಿಂದ ಕೂಡಿದ್ದು ಜಾತಿ ವ್ಯವಸ್ಥೆಯ ಪ್ರಕ್ರಿಯೆಯೇ ಜಾತಿಯ ಬಗ್ಗೆ ವಿವರಣೆಯನ್ನು ನೀಡಬಲ್ಲದು ಎಂಬುದನ್ನು ಬಾಬಾ ಸಾಹೇಬರ ಸಂಶೋಧನೆ ಹೊರಗೆಡವುತ್ತದೆ.
ಪ್ರಮುಖವಾಗಿ ಫ್ರೆಂಚ್ ವಿದ್ವಾಂಸ ಮಿ.ಸೆರ್ನಾಟ್‌ರ ಪ್ರಕಾರ, ‘ಜಾತಿಯು ಒಟ್ಟಾಗಿ ಹಣೆದ ಸಂಸ್ಥೆ ಹಾಗೂ ಸಾಂಸ್ಕೃತಿಕವಾದ ಸಂಘಟನೆ. ದಂಡ ಅಥವಾ ಬಹಿಷ್ಕಾರವನ್ನು ಹಾಕಬಹುದಾದ ಪರಮಾಧಿಕಾರವಿರುವ ಗುಂಪು.’ ಸರ್.ಎಚ್.ರಿಸ್ಲೇಯವರ ಪ್ರಕಾರ, `ಜಾತಿ ಎನ್ನುವುದು ಹಲವು ಕುಟುಂಬಗಳ ಒಕ್ಕೂಟ, ಅದರ ಸದಸ್ಯತ್ವ ಪೂರ್ವಜರಿಂದ ಬಂದಿರುತ್ತದೆ.’ ಡಾ.ಕೇಟ್ಕರ್ ಅವರ ಪ್ರಕಾರ, ‘ಜಾತಿಯ ಸದಸ್ಯತ್ವವನ್ನು ಹುಟ್ಟಿನಿಂದ ಪಡೆದು ಸಾಮಾಜಿಕ ಕಟ್ಟಲೆಗಳಿಂದ ನಿಷೇಧಗಳನ್ನು ಹೇರಲಾಗುತ್ತದೆ’. ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ, ‘ಜಾತಿಯು ಪ್ರತ್ಯೇಕ ಘಟಕ ಹಾಗೂ ಮಡಿಯ ಪರಿಕಲ್ಪನೆಯು ಪೌರೋಹಿತಶಾಹಿ ವಿಧಿವಿಧಾನಗಳಿಂದ ಹುಟ್ಟುತ್ತದೆ. ಮಡಿ-ಮೈಲಿಗೆ ಮತ್ತು ಪುರಾಣ-ಪೌರೋಹಿತ ಜಾತಿಯ ಲಕ್ಷಣವಾಗಿದೆ. ಈ ಹಿನ್ನೆಲೆಯಲ್ಲಿ ಜಾತಿಯು ತನ್ನ ಸುತ್ತ ಬೇಲಿಯನ್ನು ಹಾಕಿಕೊಂಡು ಒಳಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದಿಲ್ಲ.’
ಜಾತಿ ವ್ಯವಸ್ಥೆಯನ್ನು ಬಲ ಮಾಡಲು ಸ್ವಜಾತಿಯ ಕುಲದ ಮದುವೆಯನ್ನು ಜಾರಿಗೆ ತರಲಾಯಿತು. ಅಂತರ್ಜಾತಿಯ ವಿವಾಹವನ್ನು ನಿಷೇಧಿಸಲಾಯಿತು. ಇದು ಜಾತಿ ವಾಸ್ತವವನ್ನು ಕಾಪಾಡಿದಂತೆ ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಪಾದನೆಯಾಗಿದೆ.
ಸ್ವಜಾತಿ ವಿವಾಹಗಳಿದ್ದು, ಖಚಿತ ವಲಯವನ್ನು ಹೊಂದಿರುವ ವಿವಿಧ ಜನಾಂಗಗಳು ಪರಸ್ಪರ ಮಿಳಿತವಾಗಿದ್ದಾರೆ. ಸಾಂಸ್ಕೃತಿಕ ಐಕ್ಯತೆಯನ್ನು ಹೊಂದಿದ್ದಾರೆ. ಇದೊಂದು ಸಮತೆಯ ಅಳತೆಗೋಲೇ ಎಂಬುದನ್ನು ಪರಿಶೀಲಿಸಬೇಕು. ಸ್ವಜಾತಿಯ ವಿವಾಹದ ಸಮಾಜದಲ್ಲಿ ಹತ್ತಿರದ ರಕ್ತ ಸಂಬಂಧದಿಂದ ಮಾತ್ರ ರಚಿತವಾದ ಸಾಂಸ್ಕೃತಿಕ ಅಥವಾ ಬುಡಕಟ್ಟುಗಳಲ್ಲಿ ಕಾಣದಿರುವ ಗುಣಲಕ್ಷಣಗಳು ಜಾತಿಯನ್ನು ಹೊಸ ಸ್ವರೂಪದ ಸಮಸ್ಯೆಯನ್ನಾಗಿಸುತ್ತದೆ. ಭಾರತದಲ್ಲಿ ಜಾತಿ ಎಂದರೆ ಸ್ವಜಾತಿಯ ವಿವಾಹವನ್ನು ಆಚರಿಸುತ್ತಾ ಅಂತರ್ಜಾತಿಯ ವಿವಾಹವನ್ನು ನಿಷೇಧಿಸುತ್ತಾ ಒಂದು ಗುಂಪು ಇನ್ನೊಂದು ಗುಂಪು ಸಮ್ಮಿಳಿತವಾಗದಂತೆ ತಡೆಯುವ ಪ್ರಕ್ರಿಯೆ. ಹೀಗಾಗಿ ಸ್ವಜಾತಿಯ ವಿವಾಹವು ಜಾತಿಗೆ ವಿಶಿಷ್ಟವಾದ ಗುಣಲಕ್ಷಣ ಎನ್ನುವುದು ಅನಿವಾರ್ಯ. ಸ್ವಜಾತಿ ವಿವಾಹವನ್ನು ಹೇಗೆ ಕಾಪಾಡಲಾಗಿದೆ ಎನ್ನುವುದನ್ನು ತೋರಿಸುವುದರಲ್ಲಿ ಯಶಸ್ವಿಯಾದರೆ ಅಲ್ಲಿಗೆ ರಚನಾಕ್ರಮ ಮತ್ತು ಉತ್ಪತ್ತಿಯನ್ನು ವಾಸ್ತವವಾಗಿ ಸಾಧಿಸಿದಂತೆ.
ಇದನ್ನೂ ಓದಿರಿ: ಪಾಕಿಸ್ತಾನ ಅಥವಾ ಭಾರತದ ವಿಭಜನೆ: ಬಾಬಾಸಾಹೇಬರ ಒಳನೋಟ (ಭಾಗ-1)
ಜಾತಿ ಸ್ಫೋಟಕ್ಕೆ ಸ್ವಜಾತಿ ವಿವಾಹವು ಒಂದು ಕೀಲಿ ಕೈಯೆಂದು ನಿರೀಕ್ಷಿಸುವುದು ಅಷ್ಟು ಸುಲಭವಲ್ಲ. ಭಾರತದ ಧರ್ಮವು ಮೂಲಭೂತವಾಗಿ ಪುರಾತನವಾದದ್ದು. ಕಾಲ ಮತ್ತು ನಾಗರಿಕತೆಯಲ್ಲಿ ಪ್ರಗತಿಯಾಗಿದ್ದು ಪ್ರಾಚೀನ ಪದ್ಧತಿಯಲ್ಲಿ ಭಿನ್ನ ಗೋತ್ರ ವಿವಾಹ ಪದ್ಧತಿಯು ಚಾಲ್ತಿಯಲ್ಲಿತ್ತು. ಭಾರತದ ನಿಯಮಗಳಲ್ಲಿ ಭಿನ್ನಗೋತ್ರದ ವಿವಾಹ ನಿಯಮ ಪದ್ಧತಿಯು ಇಂದಿಗೂ ಸ್ಪಷ್ಟವಾದ ಕಟ್ಟಲೆಯಾಗಿದೆ. ಸಪಿಂಡರು ಮದುವೆಯಾಗಬಾರದೆಂದು, ಸಗೋತ್ರ ಮದುವೆ ಕೂಡ ದೈವ ದ್ರೋಹವೆಂದು ಪರಿಗಣಿಸಲಾಗಿದೆ ಎಂಬುದನ್ನು ಗಮನಿಸಬಹುದು.
ಕುಲದೇವತಾರಾಧನೆಯ ಇತರ ಗುಂಪುಗಳು ಕೂಡ ಹೀಗೆ ಇದೆ. ಭಿನ್ನ ಗೋತ್ರ ವಿವಾಹ ನಿಯಮವನ್ನು ಮೀರಿದವರಿಗೆ ಕಠಿಣವಾದ ದಂಡವನ್ನು ವಿಧಿಸಲಾಗುತ್ತದೆ. ಅಂತರ್ಜಾತಿ ವಿವಾಹ ಇದ್ದಲ್ಲಿ ಜಾತಿ ಇರಲು ಸಾಧ್ಯವಿಲ್ಲ ಎಂದು ನಾವು ನೋಡಬಹುದು. ನಿಜಕ್ಕೂ ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಆದರೆ ನಮ್ಮಲ್ಲಿ ಜಾತಿಗಳಿವೆ. ಭಾರತಕ್ಕೆ ಸಂಬಂಧಿಸಿದಂತೆ ಜಾತಿ ಸೃಷ್ಟಿ ಎಂದರೆ ಅಂತರ್ಜಾತಿಯ ವಿವಾಹದ ಮೇಲೆ ಸ್ವಜಾತಿ ವಿವಾಹದ ಮೇಲ್ತಸರದ ಪ್ರಾಬಲ್ಯ ಎಂಬರ್ಥ ಎಂಬುದನ್ನು ಬಾಬಾ ಸಾಹೇಬರು ಸ್ಪಷ್ಟವಾಗಿ ತೆರೆದಿಡುತ್ತಾರೆ.

ಸ್ವಜಾತಿಯ ವಿವಾಹವನ್ನು ಸಂರಕ್ಷಿಸಬೇಕಾದಲ್ಲಿ ತಮ್ಮ ತಮ್ಮ ಜಾತಿಯೊಳಗೆ ಗಂಡು ಮತ್ತು ಹೆಣ್ಣನ್ನು ಸಮಾನ ಸಂಖ್ಯೆಯಲ್ಲಿ ಹೊಂದಿರಬೇಕಾಗುತ್ತದೆ. ಮುಕ್ತವಾದ ಅವಕಾಶದೊಂದಿಗೆ ತಾನೊಂದು ಜಾತಿಯಾಗಿ ಗುರುತಿಸಿಕೊಳ್ಳುವ ಗುಂಪಿನಲ್ಲಿ ಮಹಿಳೆಯರ ಮತ್ತು ಪುರುಷರ ಸಂಖ್ಯೆ ಸಮಸಂಖ್ಯೆಯಾಗಿ ಉಳಿಸಿಕೊಳ್ಳುವುದು ಬಹಳ ಅನಿವಾರ್ಯ. ಸಮಸಂಖ್ಯೆ ಇಲ್ಲದಿದ್ದಲ್ಲಿ ಗುಂಪನ್ನು ಮುರಿದು ಬೇರೊಂದು ಮದುವೆಯಾಗುವ ಸಾಧ್ಯತೆ ಉಂಟಾಗುತ್ತದೆ.
ನಿಸರ್ಗದ ಆಗು ಹೋಗುಗಳಿಗೆ ಬಿಟ್ಟಾಗಲೂ ಲಿಂಗದ ಅನುರೂಪತೆ ಕಾಣುವುದು, ಗಂಡ ಮತ್ತು ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ. ಆದರೆ ಗಂಡ ಸತ್ತು ಹೆಚ್ಚುವರಿಯಾಗಿ ಹೆಂಡತಿ ಉಳಿದರೆ ಮತ್ತು ಹೆಂಡತಿ ಸತ್ತು ಗಂಡು ಹೆಚ್ಚುವರಿಯಾಗಿ ಉಳಿದರೆ ಅವರನ್ನೂ ನಿವಾರಿಸದೇ ಇದ್ದಲ್ಲಿ ಸಮಸ್ಯೆಯಾಗುತ್ತದೆ ಎಂದು ಕಠೋರ ನಿಯಮಗಳನ್ನು ಜಾರಿಗೆ ತರಲಾಯಿತು. ಅಂತರ್ಜಾತಿಯ ವಿವಾಹವಾದಲ್ಲಿ ಸ್ವಜಾತಿಯ ನಿಯಮಕ್ಕೆ ಕಂಟಕವಾಗುತ್ತಾರೆ. ಹೀಗಾಗಿ ಇವರನ್ನೂ ಇವರ ಪಾಡಿಗೆ ಬಿಟ್ಟಲ್ಲಿ ನಿಯಮ ಮೀರುವ, ಜಾತಿಗೆ ಹೊರತಾದ ಸಂತಾನವನ್ನು ಕೊಡುವ ಸಂಭವವಿರುತ್ತದೆ ಎಂದು ಕಠೋರ ಕಟ್ಟಲೆಗಳನ್ನು ಜಾರಿಗೆ ತಂದಿದ್ದನ್ನು ಅಂಬೇಡ್ಕರ್ ಅವರು ಪ್ರಸ್ತಾಪಿಸುತ್ತಾರೆ.
ಈ ಕಾಲ್ಪನಿಕ ಜಾತಿ ಗುಂಪಿನಲ್ಲಿ ಹೆಚ್ಚುವರಿ ಹೆಣ್ಣು ತನ್ನ ಗಂಡ ಸತ್ತ ನಂತರ ಸಮಾಜದ ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾಳೆ. ಉದಾಹರಣೆ ಸ್ವಜಾತಿಯ ನಿಯಮವನ್ನು ಉಳಿಸಲು ಸತಿ ಪದ್ಧತಿಯನ್ನು ಆಚರಣೆ ಮಾಡಬೇಕಾಗಬಹುದು ಅಥವಾ ಕಡ್ಡಾಯ ವಿಧವಾ ಪದ್ಧತಿ ಆಚರಣೆಗೆ ಒಳಗಾಗುವ ಆಕೆ ತಾನು ಲಗ್ನವಾಗುವ ಗಂಡನಲ್ಲದ ಇತರ ಪುರುಷರೊಂದಿಗೆ ಪ್ರೀತಿಯನ್ನು ಹೊಂದಬಾರದು- ಹೀಗೆ ಹೆಣ್ಣನ್ನು ನಿರ್ಬಂಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಹೆಣ್ಣಿಗೆ ಆದರ್ಶ ಶೀಲವಂತಿಕೆ ಎಂಬ ಕಟ್ಟಳೆಯನ್ನು ವಿಧಿಸಲಾಯಿತು. ತಾನು ಮದುವೆಯಾಗುವ ಪುರುಷರನ್ನು ಬಿಟ್ಟು ಬೇರೆ ಯಾವ ಪುರುಷನೊಂದಿಗೆ ಪ್ರೀತಿ ಪೆಡೆಯುವ ಯಾವ ಕನ್ಯೆಯನ್ನು ಪರಿಶುದ್ಧಳೆಂದು ಪರಿಗಣಿಸಲಾಗದು, ಮದುವೆ ಮೊದಲು ಆಕೆ ಯಾರೊಂದಿಗೂ ಅನುರಕ್ತಳಾಗಕೂಡದು; ಹಾಗೆ ಮಾಡಿದರೇ ಅದು ಪಾಪವಾಗಿ ಪರಿಗಣಿಸಲ್ಪಡುತ್ತದೆ ಎಂದು ನಿಯಮ ರೂಪಿಸಲಾಯಿತು. ಜಾತಿ ವ್ಯವಸ್ಥೆಯನ್ನು ಕಠೋರವಾಗಿಸುತ್ತಾ ಹೋದದ್ದು ಹೇಗೆಂದು ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ತೆರೆದಿಡುತ್ತಾರೆ.
ಇದನ್ನೂ ಓದಿರಿ: ಅಸ್ಪೃಶ್ಯರು- ಅವರು ಯಾರಾಗಿದ್ದರು ಮತ್ತು ಅವರು ಅಸ್ಪೃಶ್ಯರಾದದ್ದು ಏಕೆ?
ಜಾತಿ ಸಂಕರವಾಗದಂತೆ ತಡೆಯಲು ಹೆಣ್ಣಿನ ಮೇಲೆ ನಿರ್ಬಂಧಗಳನ್ನು ಮನು ಸಂಹಿತೆಯ ಮೂಲಕ ವಿಧಿಸಲಾಗುತ್ತದೆ. ಹೆಣ್ಣಿನ ಮೇಲೆ ಬಾಲ್ಯವಿವಾಹವನ್ನು ಹೇರಲಾಗುತ್ತದೆ. ಹಾಗೆಯೇ ಪುರುಷನಿಗೂ ಸಂನ್ಯಾಸವನ್ನು ಹೇರಲಾಗುತ್ತದೆ. ಪುರುಷನು ಕಟ್ಟುಕಟ್ಟಳೆಗಳನ್ನು ನಿರ್ವಹಿಸುವ ಹಿನ್ನೆಲೆಯಲ್ಲಿ ಸ್ವಲ್ಪ ಸಡಿಲಿಕೆ ಇದ್ದಾಗಿಯೂ ಅಂತರ್ಜಾತಿಯ ವಿವಾಹವಾಗಿ ಸ್ವಜಾತಿ ನಿಯಮಕ್ಕೆ ಕಂಟಕನಾಗುವನು ಎಂಬ ಭಯವು ಇದ್ದೇ ಇತ್ತು.- ಈ ಎಲ್ಲ ಸಂಗತಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಸಂಶೋಧನೆಯಲ್ಲಿ ಪ್ರಸ್ತಾಪಿಸುತ್ತಾರೆ. ಜಾತಿ ರಚನಾಕ್ರಮ ಮತ್ತು ಉತ್ಪತ್ತಿಯಲ್ಲಿ ಎಷ್ಟೊಂದು ಸಾಂಸ್ಥಿಕ ರೂಪಗಳನ್ನು ಆಚರಣೆಗೆ ತರಲಾಯಿತು ಎಂಬುದನ್ನು ಗಮನಿಸಬಹುದು.
ಇನ್ನೂ ಮುಂದುವರೆದು ಡಾ.ಬಿ.ಆರ್.ಅಂಬೇಡ್ಕರ್ ಅವರು, ಯಾಂತ್ರಿಕವಾಗಿ ಈ ಜಾತಿ ಪದ್ಧತಿಯು ಮಾರ್ಪಾಡಾಗಿದೆ ಎಂಬುದರ ಬಗ್ಗೆ ವಿವರಿಸುತ್ತಾರೆ. ಭಾರತವು ವರ್ಣ ವ್ಯವಸ್ಥೆಯನ್ನು ಹೊಂದಿದ್ದು ನಾಲ್ಕು ವರ್ಣಗಳ ನಡುವಿನ ಸ್ವಜಾತಿಯ ನಿಯಮಗಳು ರೂಪುಗೊಂಡ ಬಗ್ಗೆ ಸ್ವಷ್ಟವಾದ ಮಾಹಿತಿಯನ್ನು ನೀಡುತ್ತಾರೆ. ಬಾಲ್ಯವಿವಾಹ, ವಿಧವಾ ಪದ್ಧತಿ ಹೇರಿಕೆ ಮತ್ತು ಸತಿಪದ್ಧತಿಗಳು ಹೇಗೆ ಅನುಕರಣೆಯಾಗಿ ಇತರ ವರ್ಣಗಳಿಗೆ ವರ್ಗಾಹಿಸಲ್ಪಡುತ್ತದೆ ಮತ್ತು ಬ್ರಾಹ್ಮಣರು ಒಳಗೊಳ್ಳುವಿಕೆಯನ್ನು ನಿಷೇಧಿಸಿದರು ಎಂಬುದನ್ನು ಚರ್ಚಿಸುತ್ತಾರೆ. ಸ್ವಜಾತಿಯ ನಿಯಮಗಳು ಇತರ ವರ್ಣಗಳಿಗೆ ಅನುಕರಣೆಯಾಗಿ ಅವುಗಳು ಜಾತಿಗಳಾಗಿ ಮಾರ್ಪಾಡಾಗುತ್ತದೆ ಎನ್ನುವುದನ್ನು ಬಾಬಾ ಸಾಹೇಬರು ಮಂಡಿಸುತ್ತಾರೆ.
ಹೀಗೆ ಒಂದು ಜಾತಿ ಸ್ವಜಾತಿ ನಿಯಮಕ್ಕೆ ಒಳಪಟ್ಟಾಗ ಪರಿಸ್ಥಿತಿಯ ಒತ್ತಡದಿಂದ ಅನಿವಾರ್ಯವಾಗಿ ಇತರ ಜಾತಿಗಳು ಅದೇ ನಿಯಮಗಳನ್ನು ಪಾಲಿಸುತ್ತವೆ ಎಂದು ತರ್ಕಬದ್ಧವಾಗಿ ಜಾತಿಯ ಪರಿಕಲ್ಪನೆಯನ್ನು ವಿವರಿಸುತ್ತಾರೆ. ಜಾತಿಯ ಸಾಮಾಜಿಕ, ನೈತಿಕ ಮತ್ತು ಧಾರ್ಮಿಕ ಸಂಹಿತೆಯನ್ನು ಗಂಭೀರವಾಗಿ ವಿರೋಧಿಸುವ ಯಾವುದೇ ಹೊಸ ಬದಲಾವಣೆಯನ್ನು ಜಾತಿಯು ಸಹಿಸಲಾರದು. ಒಂದು ಜಾತಿಯಲ್ಲಿ ತನಗೆ ಮಣಿಯಲಾರದ ಸದಸ್ಯರನ್ನು ಹೊರಗೆ ಹಾಕುವ ಸಂಭವಿರುತ್ತದೆ. ಅಂಥವರಿಗೆ ಬೇರೆಯವರ ಜಾತಿಯೊಳಗೆ ಬರಮಾಡಿ ಕೊಳ್ಳುವ ವ್ಯವಸ್ಥೆ ಇಲ್ಲದೆ ಅವರ ಪಾಡಿಗೆ ಬಿಟ್ಟುಬಿಡಬಹುದು. ಅಂದರೆ ಅವರಿಗೆ ಬಹಿಷ್ಕಾರ ಹಾಕಬಹುದು. ಇದರ ಪರಿಣಾಮವಾಗಿ ಇನ್ನೊಂದು ಧರ್ಮದ ಅಥವಾ ಮಿಶ್ರ ಜಾತಿಯಾಗಿ ಮಾರ್ಪಾಡಾಗಬಹುದು ಎನ್ನುವುದನ್ನು ತರ್ಕಬದ್ಧವಾಗಿ ವಿವರಿಸುತ್ತಾರೆ.
ಅಂಬೇಡ್ಕರ್ ಅವರು ಜಾತಿಯ ಮೂಲವನ್ನು ಖಚಿತವಾಗಿ ಶೋಧಿಸಿದ್ದಾರೆ. ಇಂದಿಗೂ ಜಾತಿಯ ಕಠೋರತೆಗಳು ಕಣ್ಣ ಮುಂದೆ ನಡೆಯುತ್ತಿವೆ. ಸ್ವಜಾತಿಯ ವಿವಾಹ ನಿಯಮಗಳು ಇನ್ನೂ ಜಟಿಲವಾಗುತ್ತಿದ್ದು ಮರ್ಯಾದೆಗೇಡು ಹತ್ಯೆಯಂತಹ ಘೋರ ಘಟನೆಗಳು ದಿನನಿತ್ಯ ಸಂಭವಿಸುತ್ತಿರುವುದನ್ನು ಕಾಣಬಹುದು. ಮೇಲ್ಜಾತಿಯ ಹೆಣ್ಣು ಕೆಳಜಾತಿಯ ಗಂಡು ಈ ಜಾತಿ ಸಂಕೋಲೆಯಲ್ಲಿ ಸಿಕ್ಕಿಕೊಂಡು ದಿನನಿತ್ಯ ಪರಿತಪಿಸುವಂತಾಗಿದೆ.
ಇನ್ನೂ ಬುಡಕಟ್ಟುಗಳ ಸಂದರ್ಭದಲ್ಲಿ ಈ ಜಾತಿ ವ್ಯವಸ್ಥೆಯ ಭಾಗವೇ ಆಗಿರದ ಇವರು ಯಾಂತ್ರಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಜಾತಿಯಾಗಿ ಮಾರ್ಪಾಡಾಗಿರುವುದು ಕಾಣಬಹುದು. ಉದಾಹರಣೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊರಗರ ಸಂದರ್ಭದಲ್ಲಿ ವಿವರಿಸುವುದಾದರೆ ಅಜಲು ಪದ್ಧತಿ ಮತ್ತು ಅಸ್ಪೃಶ್ಯತೆಯು ಈ ಜಾತಿ ಪದ್ಧತಿಯಿಂದ ಬಂದ ಬಳುವಳಿಯಾಗಿದೆ. ಮಧ್ಯ ಮತ್ತು ತಳಸ್ತರದ ಜನರು ತಮಗಿಂತ ಕೆಳಗಿನ ಸ್ತರಗಳನ್ನು ಉತ್ಪತ್ತಿ ಮಾಡಿದಂತೆ ಕಾಣುತ್ತದೆ. ಉದಾಹರಣೆ ಒಂದು ಘಟನೆ ಹಂಚಿಕೊಳ್ಳಬೇಕು. ನಾನು ಚಿಕ್ಕವಳಿದ್ದಾಗ ನಮ್ಮೂರಿನ ಅಗಸ (ಮಡಿವಾಳ) ಸಮುದಾಯ ನಮ್ಮ ಅಜ್ಜಿಯನ್ನು ತಮ್ಮ ಅಜಲಿಗೆ ಕರೆದಿದ್ದರು. ನಾನು ಅಜ್ಜಿಯ ಜೊತೆಗೆ ಹೋಗಿದ್ದೆ. ಈ ಅಗಸ ಸಮುದಾಯವು ತನಗಿಂತ ಮೇಲಿನ ಸ್ತರವಾದ ಬ್ರಾಹ್ಮಣ ಸಮುದಾಯಕ್ಕೆ ಅಜಲು ಚಾಕರಿಯವರಾಗಿದ್ದು ಅವರಿಂದ ಪಡೆದ ಮೈನೆರೆದ ಹೆಣ್ಣಿನ ಮುಟ್ಟಿನ ಬಟ್ಟೆಯನ್ನು ನಮ್ಮ ಅಜ್ಜಿಗೆ ವರ್ಗಾಯಿಸಿದರು. ಕೊರಗರಿಗಿಂತ ಕೆಳಗಿನ ಸ್ತರ ನಮ್ಮೂರಿನಲ್ಲಿ ಇಲ್ಲದ ಕಾರಣ ಬಿಟ್ಟಿ ಚಾಕರಿ, ಅಜಲು ಅಂತಿಮವಾಗಿ ಕೊರಗರಿಗೆ ಪುಕ್ಕಟೆಯಾಗಿ ಲಬಿಸುತ್ತಿತ್ತು. ಈ ಒಂದು ಪ್ರಕ್ರಿಯೆಯನ್ನು ಗಮನಿಸಿದಾಗ ಈ ಜಾತಿ ವ್ಯವಸ್ಥೆಯು ಏಣಿ ಶ್ರೇಣಿ ಸ್ತರವನ್ನು ಸಾಂಸ್ಥಿಕವಾಗಿ ಗಟ್ಟಿಗೊಳ್ಳುತ್ತಿರುವುದು ಪ್ರಸ್ತುತ ದಿನದಲ್ಲಿಯೂ ಕಾಣಬಹುದು.
ಇದನ್ನೂ ಓದಿರಿ: ಅರಿವೇ ಅಂಬೇಡ್ಕರ | ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಮಾಡಿರುವುದೇನು?’ (ಭಾಗ-1)
ಜಾತಿಯು ಎಷ್ಟೊಂದು ಸಂಕೀರ್ಣವಾಗಿದೆ ಎಂದರೆ ಸಾರ್ವತ್ರಿಕ ಸಾಮಾಜಿಕ ಸಂಸ್ಥೆಗಳಲ್ಲಿಯೂ ಈ ಜಾತಿ ಪದ್ಧತಿಯ ತನ್ನ ಕಾರ್ಯ ನಿರ್ವಹಿಸುವುದು ಕಾಣಬಹುದು. ಉದಾಹರಣೆಗೆ ಕೆಳಜಾತಿಯಿಂದ ತಯಾರಿಸಲ್ಪಡುವ ಆಹಾರಗಳನ್ನು ನಿರಾಕರಿಸುವ ವಿದ್ಯಾರ್ಥಿಗಳು, ಕೆಳಜಾತಿಯ ಅಂಗಡಿಗಳಿಗೆ ಹೋಗದಿರುವ ಗ್ರಾಹಕರು, ಕೆಳಜಾತಿಯ ವಿವಾಹಗಳನ್ನೂ ನೆರವೆರಿಸಿಕೊಡದ ಪುರೋಹಿತರು ಹೀಗೆ ದಿನನಿತ್ಯ ಹಲವಾರು ಕಥೆಗಳನ್ನು ಈ ಜಾತಿ ವ್ಯವಸ್ಥೆ ಹುಟ್ಟುಹಾಕುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಜಾತಿಗಳನ್ನು ಕೇವಲ ಸಾಮಾಜಿಕವಾಗಿ ಮಾತ್ರ ನೋಡದೆ ಸಂವಿಧಾನದಲ್ಲಿ ಕಾನೂನಿನ ಚೌಕಟ್ಟಿನೊಳಗೆ ಇರಿಸಿದ ಪರಿಣಾಮವಾಗಿ ಇಂದು ಜಾತಿಗಳು ಅದರಲ್ಲಿಯೂ ಕೆಳಸ್ತರದ ಜಾತಿಗಳು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಮತ್ತು ಘನತೆಯಿಂದ ಬದುಕುವ ಭರವಸೆಯನ್ನು ಪಡೆದಿವೆ. ಕೆಳಜಾತಿಯ ಘನತೆ ಮತ್ತು ಸಮನ್ವತೆಗಾಗಿ ಈ ಜಾತಿಗಳು ಪ್ರಸ್ತುತವಾಗುತ್ತವೆ.

ಡಾ ಸಬಿತಾ ಕೊರಗ
ಡಾ.ಸಬಿತಾ ಅವರು ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯವರು. ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆಯಾಗಿದ್ದಾರೆ. ಮಂಗಳೂರು ವಿವಿಯಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ, 'ಇವ್ಯಾಲ್ಯುವೇಶನ್ ಆಫ್ ಪಾಲಿಸಿಸ್ ಆ್ಯಂಡ್ ಪ್ರೋಗ್ರಾಮ್ಸ್ ಆಫ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್ -ಎ ಸಿಚ್ಯುವೇಶನ್ ಅನಾಲಿಸಿಸ್' ಎಂಬ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹೊಸದಿಲ್ಲಿಯ ಜೆಎನ್‌ಯು ಸೇರಿದಂತೆ ರಾಜ್ಯದ ಪ್ರತಿಷ್ಠಿತ ವಿವಿ, ಕಾಲೇಜುಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಸದ್ಯ ಮಂಗಳೂರು ವಿವಿಯಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.




