ಇಂದು ಡಿಜಿಟಲ್ ಯುಗ ತನ್ನ ಬಾಹು ಚಾಚಿದಂತೆಲ್ಲಾ ಆರ್ಥಿಕ ಲಾಭದ ಹೊಸ ಮಾರ್ಗಗಳ ಹುಡುಕಾಟದಲ್ಲಿ ಯುವ ಜನತೆ ಮುಳುಗಿದ್ದಾರೆ. ಆನ್‌ಲೈನ್ ಜೂಜಿನ ಉರುಳಿಗೆ ಬಿದ್ದಿದ್ದಾರೆ. ಈ ಜೂಜು ಬೆಟ್ಟಿಂಗ್ ಆ್ಯಪ್‌ಗಳ ರೂಪದಲ್ಲಿ ಯುವ ಜನತೆಯ ಬೆನ್ನು ಹತ್ತಿದೆ. ಕ್ರಿಕೆಟ್ ತಾರೆಯರು, ಸಿನಿಮಾ ನಟರು, ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಬೆಟ್ಟಿಂಗ್ ಆ್ಯಪ್‌ಗಳಿಗೆ ಧ್ವನಿಯಾಗಿ, ಮುಖವಾಡವಾಗಿ ಜನರನ್ನು ಅಕ್ಷರಶಃ ಕುರಿಗಳ ರೀತಿ ಮಾಡಿಬಿಟ್ಟಿದ್ದಾರೆ. ಸಾಮಾಜಿಕ ಜವಾಬ್ದಾರಿ ಹೊರಬೇಕಾದ ಈ ತಾರಾಮಣಿಗಳು, ಸಾಮಾಜಿಕವಾಗಿ ಪ್ರಭಾವಶಾಲಿಗಳಾಗಿ ಪರಿಗಣಿಸಲ್ಪಡುವ ಸೆಲೆಬ್ರಿಟಿಗಳು ತಮ್ಮ ಪ್ರಭಾವವನ್ನು ಯಾವ ರೀತಿ ಬಳಸುತ್ತಿದ್ದಾರೆ ಎಂಬುದರ ಮೇಲೆ ಗಂಭೀರ ಚರ್ಚೆಯ ಅಗತ್ಯವಿದೆ.
ಪ್ರಚಾರ ಮಾಡುವ ಎಲ್ಲವನ್ನೂ ಜನ ನಂಬುವ ಈ ಯುಗದಲ್ಲಿ, ಸೆಲೆಬ್ರಿಟಿಯೊಬ್ಬನ ನಗು, ಲಕ್ಷಾಂತರರ ಹಣವನ್ನು ಹೂಡಿಕೆ ಮಾಡುವಂತೆ ವಶೀಕರಣ ಮಾಡಬಹುದು. ಇದನ್ನು ಖುದ್ದು ಬೆಟ್ಟಿಂಗ್ ಆ್ಯಪ್‌ಗಳ ಜಾಹೀರಾತು ತಂತ್ರಗಳಲ್ಲಿಯೇ ಕಾಣಬಹುದು. “ರಾಣಾ ದಗ್ಗುಬಾಟಿ ಪ್ರಚಾರ ಮಾಡೋ ಆ್ಯಪ್‌ನಲ್ಲಿ ಹಣ ಹಾಕಿದ್ರೆ ತಪ್ಪೇನು?” ಅಥವಾ “ಮಂಚು ಲಕ್ಷ್ಮೀ ಇದರಲ್ಲಿ ಆಟ ಆಡ್ತಾರೆ ಅಂದ್ರೆ, ನಾನ್ಯಾಕೆ ಆಡ್ಬಾರ್ದು?” ಎನ್ನುವ ಮನಸ್ಥಿತಿ ಉದ್ಭವಿಸಲು ಹೆಚ್ಚು ಸಮಯ ಬೇಕಾಗಿಲ್ಲ. ಬೆಟ್ಟಿಂಗ್ ಸಂಸ್ಥೆ ನಡೆಸುವವರಾಗಲೀ, ಅದರ ಓನರ್‌ಗಳಾಗಲೀ ಜನಸಾಮಾನ್ಯರಿಗೆ ಗೊತ್ತೇ ಇರುವುದಿಲ್ಲ. ತಾವು ತೆರೆ ಮೇಲೆ ನೋಡಿ ಖುಷಿ ಪಟ್ಟ, ತಾವು ಅಭಿಮಾನದಿಂದ ಪೂಜಿಸುವ ಸಿನಿಮಾದವರೋ, ಕ್ರಿಕೆಟಿಗರೋ ಅಥವಾ ಸಾಮಾಜಿಕ ಮಾಧ್ಯಮದ ಪ್ರಭಾವಿಗಳ ಮುಖವನ್ನೇ ನೋಡಿ ಬೆಟ್ಟಿಂಗ್‌ಗೆ ಇಳಿದುಬಿಡುತ್ತಾರೆ.
ಆನ್‌ಲೈನ್‌ನಲ್ಲಿನ ಅಕ್ರಮ, ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ನಟಿ ಪ್ರಣೀತಾ ಸುಭಾಷ್, ತೆಲಂಗಾಣದ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಯೂಟ್ಯೂಬರ್‌ಗಳು ಸೇರಿದಂತೆ 29 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಜುಲೈ 10ರಂದು ಪ್ರಕರಣ ದಾಖಲಿಸಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸ್ಥಳೀಯ ಪೊಲೀಸರು ದಾಖಲಿಸಿರುವ ಸುಮಾರು ಐದು ಎಫ್‌ಐಆರ್‌ಗಳನ್ನು ಆಧರಿಸಿ ED ‘ಹಣ ವರ್ಗಾವಣೆ ತಡೆ ಕಾಯ್ದೆ’ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿದೆ. ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗಳಲ್ಲಿ, ಅನಧಿಕೃತ ಜೂಜಾಟಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಆದಾಯ ಗಳಿಸಿದ ಆರೋಪ ಹೊತ್ತಿರುವ ಬೆಟ್ಟಿಂಗ್ ಆ್ಯಪ್‌ಗಳ ಜಾಲವನ್ನೂ ಉಲ್ಲೇಖಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿರಿ: ಮಲ್ಯನಿಂದ ಮಸ್ಕ್‌ವರೆಗೆ; ಶ್ರೀಮಂತರು ಕಟ್ಟಿದ ಪಕ್ಷಗಳು ಏನಾದವು ಬಲ್ಲಿರಾ?
ಇದು ನೆರೆ ರಾಜ್ಯಗಳದ್ದಷ್ಟೇ ಅಲ್ಲ, ರಾಜ್ಯದಲ್ಲೂ ಅದೇ ಕತೆ. ಇತ್ತೀಚಿನ ದಿನಗಳಲ್ಲಿ ಬಹುಮಾನ, ಲಾಟರಿ, ಕ್ಯಾಸಿನೋ ಅಥವಾ ಕ್ರೀಡಾ ಬೆಟ್ಟಿಂಗ್ ಎಂಬ ಹೆಸರಿನಲ್ಲಿ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ತಲೆ ಎತ್ತಿ ನಾನಾ ಮುಖಗಳಲ್ಲಿ—Lotus365, Fair Play, Dafabet, 1xBet ಮುಂತಾದ ಸಂಸ್ಥೆಗಳು ಎಗ್ಗಿಲ್ಲದೆ ತಮ್ಮ ಬ್ಯುಸಿನೆಸ್ ವಿಸ್ತರಿಸಿವೆ. ಆದರೆ ಈ ಕಂಪನಿಗಳ ಗೇಟು ಓಪನಿಂಗ್ ಮಾಡಿದವರು ನಮ್ಮದೇ ಪರಿಚಿತ ಮುಖಗಳು ಎನ್ನುವುದು ವಿಷಾದ! ಕಳೆದ ಎರಡು ವರ್ಷಗಳಲ್ಲಿ ಸುಮಾರು 25ಕ್ಕೂ ಹೆಚ್ಚು Instagram ಹಾಗೂ YouTube ಇನ್‌ಫ್ಲೂಯೆನ್ಸರ್‌ಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಇಂತಹ ಆ್ಯಪ್‌ಗಳ ಜಾಹೀರಾತುಗಳನ್ನು ಮಾಡಿದ ನೂರಕ್ಕೂ ಹೆಚ್ಚು ಉಲ್ಲೇಖಗಳು ದಾಖಲಾಗಿವೆ. ಸಾಲದ್ದಕ್ಕೆ, “ನಾನು ಕೇವಲ ಲಿಂಕ್ ಶೇರ್ ಮಾಡಿದ್ದೇನೆ, ಆ ಆ್ಯಪ್ ಅಸಲಿ ಜೂಜಾಟ ಎನ್ನುವುದು ನನ್ನ ಹೊಣೆಯಲ್ಲ…” ಎನ್ನುವ ಮುಖವಾಡದ ಸಬೂಬುಗಳು ಬೇರೆ!
ಕಾಲೇಜು ವಿದ್ಯಾರ್ಥಿಗಳು, ಹದಿಹರೆಯದ ಬಳಕೆದಾರರು ಈ ಆ್ಯಪ್‌ಗಳಿಂದಾಗಿ ಹಿಡಿತ ತಪ್ಪಿ ಚಟಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗಿನ ಪ್ರಕರಣದಲ್ಲಿ ಒಡಿಶಾದ ವಿದ್ಯಾರ್ಥಿ ₹3 ಲಕ್ಷ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಅದೇ ರೀತಿ ಕಳೆದ ವರ್ಷ ಐಪಿಎಲ್ ವೇಳೆ ಹೈದರಾಬಾದ್‌ನಲ್ಲಿ ನಡೆದ ಘಟನೆ ನೆನಪಿರಬಹುದು. ರಾಹುಲ್ ಎಂಬ ಸರ್ಕಾರಿ ಇಂಜಿನಿಯರ್ ಒಬ್ಬ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿ, ಕೋಟ್ಯಂತರ ರೂ. ಸಾಲಮಾಡಿಕೊಂಡಿದ್ದ. ಆತನ ಚಟದ ಮಟ್ಟ ಎಷ್ಟಿತ್ತೆಂದರೆ ಬರುತ್ತಿದ್ದ ಲಕ್ಷ ಸಂಬಳವೂ ಸಾಲದೆ 15 ಕೋಟಿಯಷ್ಟು ಸಾಲ ಬೇರೆ ಮಾಡಿದ್ದ. ಇದೆಲ್ಲ ಮಾಡಿದ್ದು ಮತ್ತದೇ ಬೆಟ್ಟಿಂಗ್‌ಗೆ. ನಿಷೇಧದ ಹೊರತಾಗಿಯೂ ಕಳೆದ ಒಂದೂವರೆ ವರ್ಷದಲ್ಲಿ ತೆಲಂಗಾಣ ಒಂದರಲ್ಲೇ ಸುಮಾರು 24 ಮಂದಿ ಬೆಟ್ಟಿಂಗ್‌ನಿಂದ ಜೀವ ಕಳೆದುಕೊಂಡಿದ್ದಾರೆ.
2024ರ ವರದಿಯೊಂದರ ಪ್ರಕಾರ ಭಾರತದಲ್ಲಿ ಒಟ್ಟು 11 ಕೋಟಿ ಮಂದಿ ಕನಿಷ್ಠ ಒಂದು ಬಾರಿಯಾದರೂ ಆನ್‌ಲೈನ್ ಬೆಟ್ಟಿಂಗ್/ರಿಯಲ್ ಟೈಮ್ ಮನಿ ಗೇಮಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. 18-30 ವರ್ಷದ ಯುವಕರೇ ಅತಿದೊಡ್ಡ ಬಳಕೆದಾರ ವರ್ಗ. ಅಂದಾಜು ಶೇ. 70ರಷ್ಟು ಯುವಕರು ಈ ಬೆಟ್ಟಿಂಗ್ ಸಾಂಕ್ರಾಮಿಕದೊಳಗೆ ಸಿಲುಕಿದ್ದರು. ಹಣಕಾಸು ನಷ್ಟ, ಆತ್ಮಹತ್ಯೆ ಹಾಗೂ ಸಾಲದ ಹೊರೆಗಳಿಗೆ ಈ ಆ್ಯಪ್‌ಗಳು ಪರೋಕ್ಷ ಕಾರಣವಾಗಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ ಎನ್ನುತ್ತದೆ NCRB ವರದಿ.
2015ರಲ್ಲಿ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಬಗ್ಗೆ ನಿರ್ಣಾಯಕ ತೀರ್ಪೊಂದು ಹೊರಬಿತ್ತು. ಸುಪ್ರೀಂ ಕೋರ್ಟ್ ರಮ್ಮಿ ಆಟವನ್ನು ಕೌಶಲ್ಯ ಆಧಾರಿತವೆಂದು ಘೋಷಿಸಿ, ಅದನ್ನು ಕಾನೂನುಬದ್ಧವನ್ನಾಗಿ ಪರಿಗಣಿಸಿತು. ಈ ತೀರ್ಪು, ಪೋಕರ್ ಮತ್ತು ಫ್ಯಾಂಟಸಿ ಕ್ರೀಡೆಗಳಂತಹ ಆಟಗಳಿಗೆ ಮಾರ್ಗದರ್ಶನದಂತಾಯಿತು. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮುಂತಾದ ರಾಜ್ಯಗಳು ಆನ್‌ಲೈನ್ ರಮ್ಮಿ, ಪೋಕರ್ ಮತ್ತು ಫ್ಯಾಂಟಸಿ ಆಟಗಳನ್ನು ‘ಕೌಶಲ್ಯ ಆಧಾರಿತ’ವೆಂದು ಪರಿಗಣಿಸುತ್ತವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ನೈಜ ಹಣವನ್ನು ಒಳಗೊಂಡ ಯಾವುದೇ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಕಾಯ್ದೆಗಳನ್ನು ತರುತ್ತಿದ್ದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ.
357 ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು GST ಇಂಟೆಲಿಜೆನ್ಸ್ ನಿರ್ಬಂಧಿಸಿದೆ. 2,400 ಬ್ಯಾಂಕ್ ಖಾತೆಗಳು ಮತ್ತು 166 ಮ್ಯೂಲ್ (ನಕಲಿ) ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಸಿಎಸ್‌ಬಿ 108 ಬೆಟ್ಟಿಂಗ್ ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ ಮತ್ತು 133 ಭಾರತೀಯ ಪ್ಲಾಟ್‌ಫಾರ್ಮ್‌ಗಳಿಗೆ ನೋಟಿಸ್ ಕಳುಹಿಸಲಾಗಿದೆ. ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಸಿನಿಮಾ ತಾರೆಯರು, ಯೂಟ್ಯೂಬರ್ಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇಷ್ಟಾದರೂ ಈ ಬೆಟ್ಟಿಂಗ್ ಜ್ವರ ಕಡಿಮೆಯಾಗಿಲ್ಲ.
ರಾಜ್ಯಗಳಿಗೆ ಲಭಿಸಿರುವ ಸ್ವಾಯತ್ತತೆಯ ಹಿನ್ನಲೆಯಲ್ಲಿ, ತಮಿಳುನಾಡಿನಂತಹ ಕೆಲವು ರಾಜ್ಯಗಳು ಆನ್‌ಲೈನ್ ಆಟಗಳನ್ನು ಸಂಪೂರ್ಣ ನಿಷೇಧಿಸಲು ಮುಂದಾದಾಗ, ನ್ಯಾಯಾಲಯಗಳು ಕೌಶಲ್ಯ ಆಧಾರಿತ ಆಟಗಳ ಪರವಾಗಿ ತೀರ್ಪು ನೀಡಿದವು. ಇದರ ಪರಿಣಾಮವಾಗಿ, ಭಾರತದಲ್ಲಿ ಆನ್‌ಲೈನ್ ಗೇಮಿಂಗ್‌ನ ಕಾನೂನು ಸ್ಥಿತಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿದೆ. ಈ ಗೊಂದಲದ ಮಧ್ಯೆ ನಿಜವಾದ ಹಾನಿಗೆ ಒಳಗಾಗುತ್ತಿರುವವರು ಯಾರು ಎನ್ನುವುದನ್ನು ನಾವು ಮರೆಯಬಾರದು – ಅದು ಯುವಕರು, ವಿದ್ಯಾರ್ಥಿಗಳು, ಕಾರ್ಮಿಕ ವರ್ಗ, ಮತ್ತು ತಂತ್ರಜ್ಞಾನವನ್ನು ಸಮಯ ಕಳೆಯುವ ಸಾಧನವಾಗಿ ಬಳಸುತ್ತಿರುವ ಲಕ್ಷಾಂತರ ಮಂದಿ.
ಇದನ್ನೂ ಓದಿರಿ: ವಿಶ್ಲೇಷಣೆ | ತೆಲಂಗಾಣ, ಆಂಧ್ರದಲ್ಲಿ ಒಳಮೀಸಲಾತಿ ಹಂಚಿಕೆ ಹೇಗೆ ಮಾಡಲಾಗಿದೆ?
2023ರ ವೇಳೆಗೆ ಜಾಗತಿಕ ಕ್ರಿಕೆಟ್ ಬೆಟ್ಟಿಂಗ್ ಮಾರುಕಟ್ಟೆ ಗಾತ್ರ 76.5 ಬಿಲಿಯನ್ ಅಮೆರಿನ್ ಡಾಲರ್ ತಲುಪಿತ್ತು ಮತ್ತು 2032ರ ವೇಳೆಗೆ ಇದರ ಗಾತ್ರ 151.2 ಬಿಲಿಯನ್ ಅಮೆರಿಕನ್ ಡಾಲರ್ ಆಗುತ್ತದೆ ಎಂದು ‘ಡೇಟಾ ಇನ್‌ಟೆಲೊ’ ವರದಿ ಹೇಳುತ್ತದೆ. ಇನ್ನೊಂದೆಡೆ ಡಿಜಿಟಲ್ ಇಂಡಿಯಾ ಫೌಂಡೇಶನ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿನ ಠೇವಣಿಗಳು ವರ್ಷಕ್ಕೆ 100 ಬಿಲಿಯನ್ ಡಾಲರ್‌ಗಳನ್ನು ಮೀರುತ್ತಿವೆ. ಅಕ್ಟೋಬರ್ ಮತ್ತು ಡಿಸೆಂಬರ್ 2024ರ ನಡುವೆ ಕೇವಲ ಮೂರು ತಿಂಗಳ ಅವಧಿಯಲ್ಲಿ ಪ್ಯಾರಿಮ್ಯಾಚ್, ಸ್ಟೇಕ್, 1xBet ಮತ್ತು ಬ್ಯಾಟರಿ ಬೆಟ್ ಎಂಬ ನಾಲ್ಕು ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ 1.6 ಬಿಲಿಯನ್ ಪ್ರವೇಶಗಳಾಗಿರುವುದು ಕಂಡು ಬಂದಿದೆ. ಅದೇ ಅವಧಿಯಲ್ಲಿ ಫೇಸ್‌ಬುಕ್, ಟೆಲಿಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಈ ನಾಲ್ಕು ಪ್ಲಾಟ್‌ಫಾರ್ಮ್‌ಗಳಿಗೆ 42.8 ಮಿಲಿಯನ್ ಪ್ರವೇಶಗಳಾಗಿವೆ. ಬೆಟ್ಟಿಂಗ್ ಆ್ಯಪ್‌ಗಳ ಜಾಲ ಎಷ್ಟಿರಬಹುದೆಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ, ಮೊಬೈಲ್ ಇಂಟರ್ನೆಟ್ ತಂತ್ರಜ್ಞಾನ ಪ್ರಗತಿ ಹೊಂದಿ, ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯ ಸಿಕ್ಕ ಮೇಲೆ ಬೆಟ್ಟಿಂಗ್ ಜಾಲಕ್ಕೆ ಬಿದ್ದವರ ಪ್ರಮಾಣವೂ ಹೆಚ್ಚಿತು.
ಇಂದು ಆನ್‌ಲೈನ್ ಜೂಜು ಅಥವಾ ಬೆಟ್ಟಿಂಗ್ ಎಂಬ ಗೀಳು ನಮ್ಮ ತಲೆಮಾರಿಗೆ ತಾನಾಗಿಯೇ ಒದಗಿ ಬಂದಿಲ್ಲ. ಅದು ನಮ್ಮದೇ ನೆಚ್ಚಿನ ಸೆಲೆಬ್ರಿಟಿಗಳ ಮುಖವಾಡ ಧರಿಸಿ ಬಂದಿದೆ! ಈ ಸಾಂಕ್ರಾಮಿಕ ದುರಾಶಯದ ಬೆಳವಣಿಗೆಗೆ ಆರ್ಥಿಕ ಅಸಮತೆ, ಪ್ರಭಾವಿಗಳ ಜವಾಬ್ದಾರಿ ಹೀನತೆ ಮತ್ತು ಸರ್ಕಾರದ ನಿಯಂತ್ರಣ ದೌರ್ಬಲ್ಯವೇ ದೊಡ್ಡ ಕಾರಣ. ಆಟವೋ ಕೌಶಲ್ಯವೋ ಎಂಬ ತರ್ಕಕ್ಕಿಂತ ಮುಂಚೆ, ಈ ಆಟ ಯಾರ ಬದುಕನ್ನು ನಾಶ ಮಾಡುತ್ತಿದೆ ಎಂಬುದನ್ನು ಪರಿಗಣಿಸುವುದು ಹೆಚ್ಚು ಸೂಕ್ತ.





