1956ರ ಏಕೀಕೃತ ಕರ್ನಾಟಕದ ರಚನೆಯನ್ನು ಹೊರಗಿಟ್ಟರೆ, ರಾಜ್ಯಕ್ಕೆ ಕ್ರೈಸ್ತರ ಕೊಡುಗೆ ಮತ್ತು ಅಲ್ಲಿ ಅವರ ಸ್ಥಿತಿಗತಿಯ ಬಗ್ಗೆ ಬರೆಯುವುದೇ ಸಾಧ್ಯವಿಲ್ಲ (ಹಿಂದೆ ಮೈಸೂರು ಎಂದು ಹೆಸರಿದ್ದ ರಾಜ್ಯಕ್ಕೆ ದೇವರಾಜ ಅರಸ್ ಸರಕಾರ 1973ರ ನವೆಂಬರ್ 1ರಂದು “ಕರ್ನಾಟಕ” ಎಂದು ಹೆಸರಿಟ್ಟು 50 ವರ್ಷಗಳಾಗಿವೆ). ಯಾಕೆಂದರೆ, ಕ್ರೈಸ್ತರು ಗಣನೀಯ ಸಂಖ್ಯೆಯಲ್ಲಿ ಇರುವ ಉತ್ತರ ಕನ್ನಡ ಮತ್ತು ಧಾರವಾಡ ಪ್ರದೇಶಗಳು ಮುಂಬಯಿ ಪ್ರಾಂತ್ಯ (ಹಿಂದೆ ಬಾಂಬೆ ಪ್ರೆಸಿಡೆನ್ಸಿ)ಕ್ಕೆ ಸೇರಿದ್ದರೆ, ರಾಜ್ಯದ ಬಹುತೇಕ ಕ್ರೈಸ್ತರು ವಾಸಿಸುವ ಮಂಗಳೂರು, ಉಡುಪಿಗಳನ್ನು ಒಳಗೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಕೆನರಾ ಪ್ರದೇಶ ಮದ್ರಾಸ್ ಪ್ರಾಂತ್ಯ (ಮದ್ರಾಸ್ ಪ್ರೆಸಿಡೆನ್ಸಿ)ಕ್ಕೆ ಸೇರಿದ್ದವು. ಹೀಗಿದ್ದರೂ, ರಾಜ್ಯಕ್ಕೆ ಕ್ರೈಸ್ತರ ಕೊಡುಗೆ ಮತ್ತು ಇಲ್ಲಿ ಅವರ ಸ್ಥಿತಿಗತಿಗಳನ್ನು ಅವರ ಇತಿಹಾಸದೊಂದಿಗೆ ತಳಕುಹಾಕದೇ ಬರೆಯುವುದು ಕೂಡಾ ಸಾಧ್ಯವಿಲ್ಲ. ಯಾಕೆಂದರೆ, ಆ ಇತಿಹಾಸದ ಭದ್ರ ಬುನಾದಿಯ ಮೇಲೆಯೇ, ಈ ಐವತ್ತು ವರ್ಷಗಳಲ್ಲಿ ತುಲನಾತ್ಮಕವಾಗಿ ಬಹಳಷ್ಟು ಉತ್ತಮವಾಗಿರುವ ಕ್ರೈಸ್ತರ ಅಭಿವೃದ್ಧಿ ಮತ್ತು ಜೀವನ ಮಟ್ಟ ನಿಂತಿರುವುದು. ಹಾಗಾಗಿ ಇವೆಲ್ಲವನ್ನೂ ಬೇರೆಬೇರೆಯಾಗಿ ನೋಡದೇ ಇತಿಹಾಸವನ್ನು ಚುಟುಕಾಗಿ ತಿಳಿದುಕೊಂಡು, ಉಳಿದ ವಿಷಯಗಳನ್ನು ಅದಕ್ಕೆ ತಳಕು ಹಾಕೋಣ.
ಬಹುತೇಕ ಜನರು ತಪ್ಪು ತಿಳಿದುಕೊಂಡಿರುವಂತೆ, ಕ್ರೈಸ್ತರು ಭಾರತಕ್ಕೆ ಕಾಲಿರಿಸಿದುದು ವಾಸ್ಕೋ ಡ ಗಾಮ ಭಾರತಕ್ಕೆ ಬಂದ ನಂತರ ಎಂಬುದು ನಿಜವಲ್ಲ. ಐರೋಪ್ಯರು ಕಾನ್ಸ್‌ಟೆಂಟಿನೋಪಲ್ (ಈಗಿನ ಇಸ್ತಾಂಬುಲ್) ಮೂಲಕ ಹಿಂದೆಯೂ ವ್ಯಾಪಾರಕ್ಕೆಂದು ಭಾರತಕ್ಕೆ ಬರುತ್ತಿದ್ದರು; ವಾಸ್ಕೋ ಡ ಗಾಮ ಸಮುದ್ರ ಮಾರ್ಗ ಕಂಡುಹಿಡಿದ ಅಷ್ಟೇ ಎಂಬುದನ್ನು ನಾವು ಮರೆಯಬಾರದು. ಆದರೆ, ಸಂತ ಥಾಮಸ್ ಅಥವಾ ಅವರ ಶಿಷ್ಯಂದಿರು ಕ್ರಿ.ಶ. 52ರಲ್ಲೇ ಕೇರಳದ ಕೊಚ್ಚಿಗೆ ಬಂದಿದ್ದರು. ಕೊಚ್ಚಿ ಕ್ರಿಶ್ಚಿಯನ್ ಎಂದು ಕರೆಯಲಾಗುವ ಥಾಮಸೈಟ್ ಕ್ರೈಸ್ತರೇ ಮೊದಲ ಭಾರತೀಯ ಕ್ರೈಸ್ತರು ಎನ್ನಬಹುದು. ಇದಿಲ್ಲಿ ಮುಖ್ಯವಾಗುವುದು ಏಕೆಂದರೆ, ಕಾಲಕ್ರಮೇಣ ಇವರು ಈಗಿನ ಕರ್ನಾಟಕದ ದಕ್ಷಿಣ ಭಾಗಕ್ಕೆ ಬಂದು ಅರೆಅರಣ್ಯ ಪ್ರದೇಶಗಳಲ್ಲಿ ನೆಲೆಯೂರಿರುವುದು. 1521ರಲ್ಲಿಯೇ ಫ್ರಾನ್ಸೀಸಿಯನ್ ಮಿಷನರಿಗಳು ಮಂಗಳೂರಿಗೆ ಬಂದಿದ್ದರು.
ಕರ್ನಾಟಕದ ಕ್ರೈಸ್ತರು ಎಂದರೆ ಯಾರ್ಯಾರು? ಅವರನ್ನು ಮೂರು ರೀತಿಗಳಲ್ಲಿ ಗುರುತಿಸಲು ಸಾಧ್ಯವಿದೆ: ಕೇರಳದಿಂದ ಬಂದವರು ಮತ್ತು ಅವರ ಪ್ರಭಾವದಿಂದ ಮತಾಂತರಗೊಂಡವರು, ಗೋವಾದಿಂದ ಬಂದ ಕ್ಯಾಥೋಲಿಕರು ಮತ್ತು ಜರ್ಮನ್, ಇಟಾಲಿಯನ್, ಬ್ರಿಟಿಷ್ ಇತ್ಯಾದಿ ದೇಶಗಳಿಂದ ಬಂದ ಬೇರೆಬೇರೆ ಮಿಷನರಿಗಳಿಂದ ಮತಾಂತರ ಹೊಂದಿದವರು. ಮೊದಲನೆಯ ಮತ್ತು ಮೂರನೇ ಗುಂಪಿನ ಕ್ರೈಸ್ತರು ರಾಜ್ಯಾದ್ಯಂತ ಚದುರಿದಂತೆ ಅಲ್ಲಿಷ್ಟು, ಇಲ್ಲಿಷ್ಟು ಎಂದು ಇದ್ದರೆ, ಎರಡನೇ ಗುಂಪಿನ ರೋಮನ್ ಕ್ಯಾಥೋಲಿಕ್ ಪಂಗಡದವರು ಮಾತ್ರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆಲೆಯಾಗಿದ್ದಾರೆ.
ಕ್ರೈಸ್ತರಲ್ಲಿ ಧಾರ್ಮಿಕ ಆಡಳಿತವು ಚರ್ಚ್‌ಗಳು ಮತ್ತು ಅವುಗಳನ್ನು ಒಳಗೊಂಡ ಧರ್ಮಪ್ರಾಂತ್ಯಗಳ (Diocese) ಮೂಲಕ ನಡೆಯುತ್ತದೆ. ಒಂದು ಚರ್ಚಿನಲ್ಲಿ ವಸತಿ ಪ್ರದೇಶಗಳನ್ನು ಆಧರಿಸಿ ವರಾಡೋ (ವಠಾರ)ಗಳು ಮತ್ತು ವರಾಡೋ ಕಮಿಟಿಗಳು ಇರುತ್ತವೆ. ಸಮುದಾಯದ ಎಲ್ಲಾ ಸಮಸ್ಯೆಗಳನ್ನೂ ಅವು ಸ್ಥಳೀಯವಾಗಿ ಚರ್ಚಿಸುತ್ತವೆ. ರಾಜ್ಯದ ಕ್ಯಾಥೋಲಿಕರು ಮುಖ್ಯವಾಗಿ ಇರುವುದು ಮಂಗಳೂರು, ಉಡುಪಿ ಮತ್ತು ಬೆಂಗಳೂರಿನಲ್ಲಿ. ಮುಖ್ಯಸ್ಥರಾದ ಬಿಷಪ್ ಇರುವುದು ಮಂಗಳೂರಿನಲ್ಲಿ.
ಇದನ್ನೂ ಓದಿರಿ: ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-1)
ಪ್ರೊಟೆಸ್ಟೆಂಟರಲ್ಲಿ ಕೂಡಾ ಇದೇ ರೀತಿಯ ವ್ಯವಸ್ಥೆಯಿದೆ. ಕರಾವಳಿಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯ ಮುಖ್ಯವಾದುದು. ಪ್ರೊಟೆಸ್ಟೆಂಟರು ಮತ್ತಿತರ ಹಲವಾರು ಪಂಗಡಗಳು ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ)ದ ಅಡಿಯಲ್ಲಿ ಇದ್ದಾರೆ. ಪ್ರೊಟೆಸ್ಟೆಂಟರು ಬಹುತೇಕ ಮತಾಂತರಗೊಂಡ ಸ್ಥಳೀಯರು. ಕೆಲವರು ತಮ್ಮ ಹಿಂದಿನ ಕುಲನಾಮಗಳನ್ನು ಉಳಿಸಿಕೊಂಡಿರುವುದರಿಂದ ಇದು ಸ್ಪಷ್ಟವಾಗುತ್ತದೆ. ಕೆಲವು ಉದಾಹರಣೆಗಳೆಂದರೆ, ಕಾಮತ್, ಆಳ್ವ, ಕರ್ಕಡ, ಪ್ರಭು, ಶೇಟ್, ಸನಿಲ್…ಇತ್ಯಾದಿ. ಇವರ ಸಂಖ್ಯೆ 2011ರ ಜನಗಣತಿಯ ಪ್ರಕಾರ 60,434. ಕರಾವಳಿಯ ಕ್ಯಾಥೋಲಿಕರಿಗೆ ಕೊಂಕಣಿ ಮನೆಭಾಷೆಯಾದರೆ, ರಾಜ್ಯದ ಪ್ರೊಟೆಸ್ಟೆಂಟರು ತುಳು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಇತ್ಯಾದಿ ಭಾಷೆಗಳನ್ನು ಮನೆಯಲ್ಲಿ ಮಾತನಾಡುತ್ತಾರೆ. ಕರಾವಳಿಯ ಪ್ರೊಟೆಸ್ಟೆಂಟರ ಹಿಂದೆ ಪ್ರಖ್ಯಾತ ಬಾಸೆಲ್ ಮಿಷನ್‌ನ ಪಾತ್ರವಿದೆ. ಅವರು 1834ರಲ್ಲಿ ಮಂಗಳೂರಿಗೆ ಬಂದಿದ್ದರು. ಇದು ಕರಾವಳಿಗೆ, ಶಿಕ್ಷಣ ಕ್ಷೇತ್ರಕ್ಕೆ, ತುಳು ಕನ್ನಡ ಭಾಷೆಗಳಿಗೆ, ಒಟ್ಟಿನಲ್ಲಿ ಧರ್ಮಾತೀತವಾಗಿ ಸಮಾಜಕ್ಕೆ, ಆ ಮೂಲಕ ರಾಜ್ಯಕ್ಕೆ ನೀಡಿದ ಕೊಡುಗೆ, ಮಾಡಿದ ಸೇವೆಗಳನ್ನು ಮುಂದೆ ಸಾಂದರ್ಭಿಕವಾಗಿ ನೆನಪಿಸೋಣ.
ಕರಾವಳಿಯಲ್ಲಿ 1700ರಲ್ಲಿ ಕ್ರೈಸ್ತರ ಜನಸಂಖ್ಯೆ 30,000 ಇತ್ತೆಂದು ದಾಖಲೆಗಳು ಹೇಳುತ್ತವೆ. ಕರ್ನಾಟಕದಲ್ಲಿ 2001ರ ಜನಗಣತಿ ಪ್ರಕಾರ 10,09,164 (ಒಟ್ಟು ಜನ ಸಂಖ್ಯೆಯ 1.91 ಶೇಕಡಾ) ಕ್ಯಾಥೋಲಿಕ್ ಕ್ರೈಸ್ತರು ಇದ್ದರೆ, 2011ರಲ್ಲಿ ಅದು 11,42,647 (1.8 ಶೇಕಡಾ) ಆಗಿತ್ತು. 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯನ್ನು ಕೇಂದ್ರ ಸರಕಾರ ಇನ್ನೂ ನಡೆಸದಿರುವುದರಿಂದ ನಿಖರ ಸಂಖ್ಯೆ ಹೇಳುವುದು ಕಷ್ಪ.
ಐವತ್ತು, ಅರವತ್ತು ವರ್ಷಗಳ ಹಿಂದೆ ಕ್ರೈಸ್ತರ ಜೀವನ ಪರಿಸ್ಥಿತಿ ಹೇಗಿತ್ತು ಎಂದು ಅರ್ಥವಾಗಬೇಕಾದರೆ, ಮೊದಲಿಗೆ ಎರಡು ವಿಷಯಗಳನ್ನು ತಿಳಿದುಕೊಳ್ಳಬೇಕು. ಕರಾವಳಿಯ ಕ್ರೈಸ್ತರು ಆರಂಭಿಕವಾಗಿ ನಗರ, ಪಟ್ಟಣಗಳಿಂದ ದೂರವಿದ್ದು, ಸ್ಥಳೀಯ ಸಾಮಾನ್ಯ ಬಡ ರೈತಾಪಿ ಶೂದ್ರರ ಜೀವನ ಹೇಗಿತ್ತೋ, ಹಾಗೆಯೇ ಇದ್ದರು. ಅವರು ಅಸ್ಪೃಶ್ಯರಾಗಿರಲಿಲ್ಲ. ಜೊತೆಗೆ ಅವರು ಅಸ್ಪೃಶ್ಯತೆ ಆಚರಿಸದೇ ಇದ್ದುದರಿಂದ, ಹಲವು ಅಸ್ಪಶ್ಯರು ಆ ಧರ್ಮಕ್ಕೆ ಮತಾಂತರ ಹೊಂದಿ, ಕ್ರಮೇಣ ಅಸ್ಪೃಶ್ಯತೆಯ ಸಂಕೋಲೆಯಿಂದ ಕಳಚಿಕೊಂಡರು. ಆದರೆ, ಉಳಿದ ಕಡೆಗಳ, ಅಂದರೆ, ಸ್ಥಳೀಯ, ಮತಾಂತರಗೊಂಡ ಕ್ರೈಸ್ತರ ಕುರಿತು ಇದೇ ಮಾತು ಹೇಳುವಂತಿರಲಿಲ್ಲ ಮತ್ತು ಹೇಳುವಂತೆಯೂ ಇಲ್ಲ. ಅವರು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ತಮ್ಮ ಸಮಕಾಲೀನ ಇತರ ದಲಿತ, ಶೂದ್ರರ ಮಟ್ಟದಲ್ಲಿಯೇ ಬೆಳೆದುಕೊಂಡು ಬಂದಿದ್ದಾರೆ ಹಾಗೂ ಅದೇ ಸವಾಲುಗಳನ್ನು ಎದುರಿಸಿಕೊಂಡು ಬಂದಿದ್ದಾರೆ.
ಕರಾವಳಿಗರ ಈ ಉದ್ಯಮಶೀಲತೆಗೆ ಅಡಿಪಾಯ ಹಾಕಿದವರೇ ಕ್ರೈಸ್ತ ಮಿಷನರಿಗಳು. ಅವರು ಧರ್ಮ, ಲಿಂಗ ಭೇದವಿಲ್ಲದೇ ಕ್ರೈಸ್ತರಿಗೂ ಶೂದ್ರ, ದಲಿತರಿಗೂ ಕೌಶಲ ತರಬೇತಿ ನೀಡಿದರು. ಮಂಗಳೂರಿನ ಮಾರ್ಗನ್‌ಗೇಟ್ ಎಂಬಲ್ಲಿ 1860ರಲ್ಲಿಯೇ ಹೆಂಚಿನ ಕಾರ್ಖಾನೆ ಸ್ಥಾಪಿಸಿದರು. “ಮಂಗಳೂರು ಹೆಂಚು” ಎಂದು ಖ್ಯಾತವಾದ ಇದರ ಕಾರ್ಖಾನೆಗಳು ನೇತ್ರಾವತಿ, ಗುರುಪುರ ನದಿಯ ಮುಖಜಭೂಮಿಗಳಲ್ಲಿ ಒಂದೊಂದಾಗಿ ಸ್ಥಾಪನೆಯಾದವು. ನಂತರ ಇಲ್ಲಿ ಧಾರಾಳವಾಗಿ ಬೆಳೆಯುತ್ತಿದ್ದ ಗೇರುಬೀಜದ ಸಂಸ್ಕರಣಾ ಕಾರ್ಖಾನೆಗಳು ಆರಂಭವಾದವು. ಇಂದು ಈ ಉದ್ದಿಮೆಗಳು ಕೊನೆಯುಸಿರು ಎಳೆಯುತ್ತಿವೆಯಾದರೂ, ಐವತ್ತು ವರ್ಷಗಳಲ್ಲಿ ಕರಾವಳಿಯ ಆರ್ಥಿಕ ಅಭಿವೃದ್ಧಿ ಸುಮ್ಮನೇ ಆಗಿಲ್ಲ. ಅದರ ಹಿಂದೆ ಈ ಮಹತ್ತರ ಕೊಡುಗೆಗಳಿವೆ. ಈ ಐವತ್ತು ವರ್ಷಗಳಲ್ಲಿ ಕ್ರೈಸ್ತರು ಆರ್ಥಿಕವಾಗಿ ಉಳಿದವರಿಗಿಂತ ಗಮನಾರ್ಹವಾಗಿ ಅಭಿವೃದ್ಧಿ ಹೊಂದಿದ್ದು, ವೈಯಕ್ತಿಕ ದುಶ್ಚಟಗಳ ಕಾರಣ ಹೊರತಾಗಿ, ಅತೀವ ಬಡತನದಲ್ಲಿ, ಹಸಿವಿನಿಂದ ನರಳುವ ಒಬ್ಬನೇ ಒಬ್ಬ ಕ್ರೈಸ್ತ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ.

ಕ್ರೈಸ್ತರು ಅಸಾಧಾರಣ ನಿಷ್ಠೆ ತೋರಿಸಿದ, ಸೇವೆ ಸಲ್ಲಿಸಿದ ಇನ್ನೊಂದು ಕ್ಷೇತ್ರವೆಂದರೆ, ಆರೋಗ್ಯ. ಆಯುರ್ವೇದ ಪಂಡಿತರು ಮತ್ತು ನಾಟಿ ವೈದ್ಯರನ್ನೇ ಅವಲಂಬಿಸಿದ್ದ ಕರಾವಳಿಯ ಜನರಿಗೆ ಆ ಕಾಲಕ್ಕೆ ಆಧುನಿಕ ಎನಿಸುವ ಆಸ್ಪತ್ರೆಗಳನ್ನು, ಗ್ರಾಮೀಣ ಔಷಧಾಲಯಗಳನ್ನು (Dispensery) ಮೊದಲ ಬಾರಿ ಸ್ಥಾಪಿಸಿದ್ದೂ ಕ್ರೈಸ್ತರೇ! 1848ರಲ್ಲಿ ಕರ್ನಾಟಕದ ಮೊದಲ ಆಸ್ಪತ್ರೆ, ‘ವೆನ್ಲಾಕ್’ ಆಸ್ಪತ್ರೆ ಸ್ಥಾಪನೆಯಾಯಿತು. ಅದೇ ವರ್ಷ ರಾಜ್ಯದ ಮೊದಲ ಮಹಿಳಾ ಆಸ್ಪತ್ರೆ, ‘ಲೇಡಿ ಗೋಷನ್’ ಸ್ಥಾಪನೆಯಾಯಿತು. ಇದೀಗ ಇವೆರಡು ಸರಕಾರಿ ಜಿಲ್ಲಾಸ್ಪತ್ರೆಗಳಾಗಿವೆ. ಫಾದರ್ ಮುಲ್ಲರ್ ಅವರು 1880ರಲ್ಲಿ ಸ್ಥಾಪಿಸಿದ ಆಸ್ಪತ್ರೆ ಇಂದು ಅಸಾಧಾರಣ ಬೆಳವಣಿಗೆ ಕಂಡು ವೈದ್ಯಕೀಯ ಶಿಕ್ಷಣ ಸಹಿತ ಹಲವು ಸೇವೆಗಳನ್ನು ನೀಡುತ್ತಿದೆ. ಮಾನಸಿಕ ಅಸ್ವಸ್ಥರಿಗೆ ಈ ಭಾಗದಲ್ಲಿ ಇರುವ ದೊಡ್ಡ, ಬಹುಶಃ ಏಕೈಕ ಆಸ್ಪತ್ರೆ ಎಂದರೆ ಜನರ ಬಾಯಲ್ಲಿ ನಲಿದಾಡುವ “ಕಂಕನಾಡಿ” ಆಸ್ಪತ್ರೆ. (ದಕ್ಷಿಣ ಭಾಗದಲ್ಲಿ ಈಗಲೂ ಹುಚ್ಚು ವರ್ತನೆ ತೋರುವವರಿಗೆ ನಿನ್ನನ್ನು ಕಂಕನಾಡಿಗೆ ಸೇರಿಸಬೇಕು ಎನ್ನುತ್ತಾರೆ- ನಿಮ್ಹಾನ್ಸ್‌ಗೆ ಸೇರಿಸಬೇಕು ಎನ್ನುವಂತೆ. ಕ್ರೈಸ್ತರು ಎದುರಿಸುತ್ತಿರುವ ಕೋಮುವಾದದ ಸಮಸ್ಯೆಗೆ ಒಂದು ಉದಾಹರಣೆ ಇಲ್ಲಿಯೇ ನೀಡುತ್ತೇನೆ. ಫಾದರ್ ಮುಲ್ಲರ್ ಅವರು ವಾಸಿಸಿ, ಕ್ಲಿನಿಕ್ ನಡೆಸುತ್ತಿದ್ದ ಊರನ್ನು ಮುಲ್ಲರ್ ಕಾಡು ಎನ್ನಲಾಗುತ್ತಿತ್ತು. ಅದನ್ನು ಈಗ ಕೋಮುರೋಗಿಗಳು ಮುಲ್ಲಕಾಡು, ಅಂದರೆ, ಮುಳ್ಳಿನ ಕಾಡು ಎಂದು ಪ್ರಚಾರ ಮಾಡುತ್ತಿದ್ದಾರೆ. ಅವರನ್ನು “ಕಂಕನಾಡಿ”ಗೆ ಸೇರಿಸಬೇಕು!) ಹಾಗೆ ನೋಡಿದರೆ ಕರ್ನಾಟಕದಲ್ಲಿ ವಿಕ್ಟೋರಿಯಾ ಸೇರಿದಂತೆ ಹಲವಾರು ಆಸ್ಪತ್ರೆಗಳನ್ನು ಕ್ರೈಸ್ತರೇ ಬಹಳ ಹಿಂದೆ ಸ್ಥಾಪಿಸಿದ್ದಾರೆ. ಈ ಐದಾರು ದಶಕಗಳಲ್ಲಿಯೂ ದುಬಾರಿ ಖಾಸಗಿ ಆಸ್ಪತ್ರೆಗಳ ನಡುವೆ ಬಡವರಿಗೆ ಆಶ್ರಯವಾಗಿದ್ದದ್ದು, ಈಗಲೂ ಇರುವುದು ಇವೇ ಆಸ್ಪತ್ರೆಗಳು. ಇಂದು ಕ್ರೈಸ್ತರು ನಡೆಸುವ ಹಲವಾರು ಆಸ್ಪತ್ರೆ ಮತ್ತು ವೈದ್ಯಕೀಯ, ನರ್ಸಿಂಗ್ ಕಾಲೇಜುಗಳು ಎಲ್ಲೆಡೆ ಇವೆ.
ಇದನ್ನೂ ಓದಿರಿ: ಘಟಾನುಘಟಿ ರಾಜಕಾರಣಿಗಳ ಜೈಲಿಗಟ್ಟಿದ ಸಮರ ಸೇನಾನಿ ‘ಎಸ್.ಆರ್. ಹಿರೇಮಠ’ (ಭಾಗ-2)
ಇಲ್ಲಿ ಒಂದು ವಿಷಯವನ್ನು ನೆನಪಿಸಬೇಕು. ಐವತ್ತು ವರ್ಷಗಳ ಹಿಂದೆ ನರ್ಸ್ ಎಂದರೆ, ತಾತ್ಸಾರದ ಸಂಕುಚಿತ ಮನೋಭಾವವಿತ್ತು. ಹೆಚ್ಚಿನವರು ಹೆಣ್ಣುಮಕ್ಕಳನ್ನು ನರ್ಸ್ ಮಾಡಲು ಇಷ್ಟಪಡುತ್ತಿರಲಿಲ್ಲ. ಆ ಕಾಲದಲ್ಲಿಯೂ, ಈಗಲೂ ಇದನ್ನು ಪವಿತ್ರ ಸೇವೆಯೆಂದು ಸ್ವೀಕರಿಸಿ, ಇಂದು ಮೇಲ್ಜಾತಿಯವರನ್ನು ಬಿಟ್ಟು ಉಳಿದವರು ಈ ಕ್ಷೇತ್ರದಲ್ಲಿ ಇರುವುದಕ್ಕೆ ಪ್ರೇರಣೆ ಕ್ರೈಸ್ತ ಮಹಿಳೆಯರೇ!
ಇವೆಲ್ಲಕ್ಕೂ ಕಾರಣವಾದ ಮೂರು ಕ್ಷೇತ್ರಗಳನ್ನು ಗುರುತಿಸಬೇಕು. ಅವೆಂದರೆ- ಶಿಕ್ಷಣ, ಮಾಧ್ಯಮ ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿ. ಕರ್ನಾಟಕದಲ್ಲಿ 1827ರಲ್ಲಿಯೇ ಬೆಂಗಳೂರಿನಲ್ಲಿ ಕ್ಯಾಂಪ್‌ಬೆಲ್ ಕನ್ನಡ ವಸತಿ ಶಾಲೆ ಸ್ಥಾಪನೆಯಾಯಿತು. 1835ರ ನಂತರ ಕ್ರೈಸ್ತರು ಮಂಗಳೂರು, ಉಡುಪಿ, ಕುಂದಾಪುರ, ಬೆಂಗಳೂರು, ರಾಮನಗರ, ತುಮಕೂರು, ಗುಬ್ಬಿ, ಧಾರವಾಡ ಮುಂತಾದ ಪ್ರದೇಶಗಳಲ್ಲಿ ಶಾಲೆ, ಕಾಲೇಜುಗಳನ್ನು ಕಟ್ಟಲು ಆರಂಭಿಸಿದರು. ಕರಾವಳಿಯಲ್ಲಿ ದಲಿತರಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ, ಮೇಲ್ಜಾತಿಯ ತಮ್ಮ ಜನರ ಭಾರೀ ವಿರೋಧದ ನಡುವೆಯೂ ಶಾಲೆ ತೆರೆದ ಕುದ್ಮುಲ್ ರಂಗರಾವ್ ಅವರನ್ನು ಬಿಟ್ಟರೆ, ಉಳಿದವರು ಇಂತಹ ಗೋಜಿಗೇ ಹೋಗಿರಲಿಲ್ಲ.
ಕ್ರೈಸ್ತರ ದೊಡ್ಡ ಸಾಧನೆ ಎಂದರೆ- ಉಳಿದವರು ಸ್ಪರ್ಧೆಗೆಂದಾದರೂ ಶಾಲೆಗಳು, ಆಸ್ಪತ್ರೆಗಳನ್ನು ತೆರೆಯುವಂತೆ ಪ್ರೇರೇಪಿಸಿದ್ದು. ಉದಾಹರಣೆಗೆ ಗೌಡ ಸಾರಸ್ವತ ಆಡಳಿತದ ಕೆನರಾ ಶಿಕ್ಷಣ ಸಂಸ್ಥೆಗಳು. ಇನ್ನೊಂದು: ನಾನು ಕಲಿತ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆಯು 2024ರ ಸೆಪ್ಟೆಂಬರ್‌ನಲ್ಲಿ ಶತಮಾನೋತ್ಸವ ಆಚರಿಸಿತು. ಇದಕ್ಕೆ ಪ್ರೇರಣೆ ಎಂದರೆ 1921ರಲ್ಲಿ ಬಾಸೆಲ್ ಮಿಷನ್‌ನವರು ಪೇಟೆಯಲ್ಲಿ ಶಾಲೆ ಆರಂಭಿಸಿದ್ದು. 1923ರ ನೇತ್ರಾವತಿ ನೆರೆಯಲ್ಲಿ ಎಲ್ಲವೂ ಸರ್ವನಾಶವಾದಾಗ, ಈ ಶಾಲೆಯೂ ಕೊಚ್ಚಿಕೊಂಡು ಹೋಯಿತು. ಇದರ ಪ್ರೇರಣೆಯಿಂದಲೇ ಗೌಡ ಸಾರಸ್ವತರು ಈ ಶಾಲೆ ಆರಂಭಿಸಿದ್ದು. ಇನ್ನು ಸಾಹಿತ್ಯ ಪ್ರಕಟಣೆ, ಪುಸ್ತಕ ಪ್ರಕಾಶನ, ಮುದ್ರಣ ಮಾಧ್ಯಮ ಕ್ಷೇತ್ರಕ್ಕೂ ಕ್ರೈಸ್ತರೇ ಅಡಿಪಾಯ ಹಾಕಿದರು. ಬಾಸೆಲ್ ಮಿಶನ್‌ನವರು 1841ರಲ್ಲಿಯೇ ಮಂಗಳೂರಿನ ಬಲ್ಮಠದಲ್ಲಿ ಮೊತ್ತ ಮೊದಲ ಮುದ್ರಣಾಲಯ ಸ್ಥಾಪಿಸಿದ್ದು, ಜೈಮಿನಿ ಭಾರತ, ಶಬ್ದಮಣಿ ದರ್ಪಣದಂತಹ ಗ್ರಂಥಗಳು, ಕೀರ್ತನಾ ಪುಸ್ತಕಗಳನ್ನು ಪ್ರಕಟಿಸಿದ್ದು, ಹರ್ಮನ್ ಮೋಂಗ್ಲಿಂಗ್ ಅವರು ಕನ್ನಡದ ಮೊತ್ತ ಮೊದಲ ಪತ್ರಿಕೆ “ಮಂಗಳೂರ ಸಮಾಚಾರ” ಹೊರತಂದದ್ದು, ರೆವರೆಂಡ್ ಕಿಟ್ಟೆಲ್ ಅವರು ಕನ್ನಡ ಮತ್ತು ತುಳು ಶಬ್ದಕೋಶಗಳನ್ನು ರಚಿಸಿದ್ದು, ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ಇಲ್ಲಿ ದಾಖಲಿಸಬೇಕು.

ಕೊಂಕಣಿಯು ಇಲ್ಲಿನ ಕ್ರೈಸ್ತರ ಮಾತೃಭಾಷೆಯಾದರೂ, ಎಲ್ಲರೂ ಕನ್ನಡ ಬಲ್ಲರು ಮತ್ತು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ. ಕನ್ನಡದಲ್ಲಿ ಸಾಹಿತ್ಯ ರಚನೆಯನ್ನೂ ಮಾಡುತ್ತಿದ್ದಾರೆ. ನಾಡೋಜ ನಾ. ಡಿಸೋಜ ಅವರ ಹೆಸರನ್ನು ನೆನಪಿಸಬೇಕಾಗಿಲ್ಲ! ಕನ್ನಡ ಲಿಪಿಯಲ್ಲಿ ಬರೆಯಲಾದ ಮೊದಲ ಕೊಂಕಣಿ ಪುಸ್ತಕವೆಂದರೆ, “ಶಂಬರ್ ಕಂತಿಗೊ” (ನೂರು ಕೀರ್ತನೆಗಳು) ಎಂಬ ಪುಸ್ತಕ. ಕನ್ನಡ ಲಿಪಿಯ ಮೊದಲ ಕೊಂಕಣಿ ಪತ್ರಿಕೆಯಾದ “ದಿರ್ಬೆ”ಯನ್ನು 1912ರಲ್ಲಿಯೇ ಲೂಯಿಸ್ ಮಸ್ಕರೇಞಸ್ ಮತ್ತು ಸರ್ದಾರ್ ಲೂಯಿಸ್ ಕಣ್ಣಪ್ಪ ಅವರು ಸ್ಥಾಪಿಸಿದ್ದರು ಎಂದರೆ, ನಿಮಗೆ ಆಶ್ಚರ್ಯವಾಗಬಹುದು. 1938ರಲ್ಲಿ ಸ್ಥಾಪನೆಯಾದ “ರಾಕ್ಣೋ” ಬಿಷಪ್ಸ್ ಹೌಸ್‌ನಿಂದ ಈಗಲೂ ಪ್ರಕಟಣೆಯನ್ನು ಮುಂದುವರಿಸಿದೆ. ಕಳೆದ ಐದು ದಶಕಗಳಲ್ಲಿ ಹಲವು ಕೊಂಕಣಿ ಪತ್ರಿಕೆಗಳು (ಮಾಸಿಕಗಳು) ಕ್ರೈಸ್ತರಿಂದ ಪ್ರಕಟವಾಗುತ್ತಿವೆ (ಕೊಂಕಣಿಯನ್ನೇ ಮಾತನಾಡುವ ಗೌಡ ಸಾರಸ್ವತರಿಂದ ಅಲ್ಲ!). ಕವಿ ವಿಲ್ಸನ್ ಕಟೀಲ್ ಮತ್ತು ಕೊಂಕಣಿ ಲೇಖಕ ಹೆನ್ರಿ ಮೆಂಡೋನ್ಸಾ ಸಂಪಾದಕತ್ವದ “ಆರ್ಸೊ” ಎಂಬ ಅತ್ಯುತ್ತಮ ಗುಣಮಟ್ಟದ ಮಾಸಿಕ ಹೆಸರಿಸುವಂತದ್ದು. ಇದರ ಕೊನೆಯ ಮೂರು ಪುಟಗಳು “ಕನ್ನಡಿ” (ಆರ್ಸೊ) ಕನ್ನಡಕ್ಕೆ ಮೀಸಲಾಗಿರುವುದು ಭಾಷಾ ಬಾಂಧವ್ಯದ ಸಂಕೇತವಾಗಿದೆ.
ಇದನ್ನೂ ಓದಿರಿ: ಕೋಮುಗಲಭೆಗಳಿಗೆ ಹರಿದ ‘ಒಬಿಸಿ’ಗಳ ನೆತ್ತರು; ಕರ್ನಾಟಕ ಕಂಡ ರಕ್ತ ಚರಿತ್ರೆ ಬಲ್ಲಿರಾ?
“ರಾಕ್ಣೋ” ಪತ್ರಿಕೆಯ ಸಂಪಾದಕರಾಗಿದ್ದ ಸ್ಯಾಮ್ಯುಯೆಲ್ ಸಿಕ್ವೇರಾ ನೇತೃತ್ವದಲ್ಲಿ “ಜನವಾಹಿನಿ” ಎಂಬ ಕನ್ನಡದ ಮೊತ್ತ ಮೊದಲ “ಬಣ್ಣದ ದೈನಿಕ” ಪ್ರಕಟವಾಯಿತು. ನಾನು, ಪತ್ರಕರ್ತರಾದ ಎ.ಎನ್.ಎಂ ಇಸ್ಮಾಯಿಲ್, ವಿಲ್ಫ್ರೆಡ್ ಡಿಸೋಜಾ ಮುಂತಾದವರು ಪತ್ರಿಕಾರಂಗದಲ್ಲಿ ಹೆಚ್ಚಿನ ಅನುಭವ ಪಡೆದದ್ದು ಅಲ್ಲಿಯೇ. “ವಾರ್ತಾ ಭಾರತಿ” ಸುದ್ದಿ ಸಂಪಾದಕ ಬಿ.ಎಂ ಬಶೀರ್, ಮುಖ್ಯ ವರದಿಗಾರ್ತಿ ಸತ್ಯ, ಆಂದೋಲನದ ಲೋಕೇಶ್ ಕಾಯರ್ಗ ಸೇರಿದಂತೆ ಇಲ್ಲಿ ಹೆಸರಿಸಲು ಸಾಧ್ಯವಿಲ್ಲದಷ್ಟು ಮಂದಿ ಇಲ್ಲಿದ್ದವರು ಈಗ ಬೇರೆಬೇರೆ ಪತ್ರಿಕೆಗಳಲ್ಲಿ ಇದ್ದಾರೆ. ಕ್ರೈಸ್ತರ ಕಳೆದ ಐದು ದಶಕಗಳ ನಿಲುವನ್ನು ಸೂಚಿಸುವಂತಹ ಮಾತೊಂದನ್ನು ನಮಗೆ ಹೇಳಲಾಗಿತ್ತು: “ಎಲ್ಲಾ ಧರ್ಮಗಳು ಮನೆಯಲ್ಲಿ. ಇಲ್ಲಿ ಭಾರತದ ಸಂವಿಧಾನವೇ ಆಧಾರ.” ಇಂದು ಕೊಂಕಣಿ ಪುಸ್ತಕ ಪ್ರಕಾಶನವೂ ಹುಲುಸಾಗಿ ನಡೆಯುತ್ತಿದ್ದು, ಇದರ ಹಿಂದಿರುವವರು ಕ್ರೈಸ್ತರು; ಕೊಂಕಣಿಗರಾದ ಗೌಡಸಾರಸ್ವತರಲ್ಲ. “ಜನವಾಹಿನಿ”ಯಲ್ಲಿ ಸೈದ್ಧಾಂತಿಕ ಮಾರ್ಗದರ್ಶಕರಾಗಿದ್ದ ಡಾ. ವಿಲ್ಯಂ ದ ಸಿಲ್ವಾ ಅವರ ನೇತೃತ್ವದಲ್ಲಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಬರೆಯುವ ಕುರಿತು ಒಂದು ಅಭಿಯಾನವೇ ನಡೆದಿತ್ತು. ಅದಕ್ಕಾಗಿ ಅವರು ಒಂದು ಪದಕೋಶವನ್ನೂ ತಂದಿದ್ದರು. ದೃಶ್ಯ ಮಾಧ್ಯಮದಲ್ಲಿ ವಾಲ್ಟರ್ ನಂದಳಿಕೆ ಸಾರಥ್ಯದಲ್ಲಿ ನಡೆಯುತ್ತಿರುವ “ದೈಜಿ ವಲ್ಡ್” ಚಾನೆಲ್ ಅತ್ಯಂತ ಜನಪ್ರಿಯವಾಗಿದ್ದು, ಇಲ್ಲಿ ಬರುವ ತುಳು ಹಾಸ್ಯ, ತುಳು ಯಕ್ಷ ಹಾಸ್ಯ ಕಾರ್ಯಕ್ರಮಗಳು ಮನೆಮಾತು. ಇದೊಂದು ಕೊಂಕಣಿ ಮಾತನಾಡುವ ಕ್ರೈಸ್ತರ ಚಾನೆಲ್ ಎಂಬ ಭಾವನೆ ಯಾರಿಗೂ ಬರುವುದಿಲ್ಲ. ಆದರೂ, ಜ್ಯೋತಿಷಿಗಳನ್ನು ಅವಮಾನಿಸಿದರು ಎಂದು ಚಾನೆಲ್ ಮತ್ತು ಪ್ರಸಿದ್ಧ ಹಾಸ್ಯ ನಟ ಅರವಿಂದ ಬೋಳಾರ ಅವರ ಮೇಲೆ ಮುಗಿಬಿದ್ದಿದ್ದ ಹಿಂದುತ್ವವಾದಿ ಕಾರ್ಯಕರ್ತರು, ಜನಸಾಮಾನ್ಯರ ಸಿಟ್ಟು ಕಂಡು ತೆಪ್ಪಗೆ ಹಿಂದೆ ಸರಿದಿದ್ದರು ಎಂಬುದನ್ನು ಇಲ್ಲಿ ನೆನಪಿಸಬೇಕು.
(ಮುಂದುವರಿಯುತ್ತದೆ…)
(‘ಈದಿನ ಡಾಟ್ ಕಾಮ್’ ಹೊರತಂದಿರುವ ‘ನಮ್ಮ ಕರ್ನಾಟಕ- ನಡೆದ 50 ಹೆಜ್ಜೆ… ಮುಂದಿನ ದಿಕ್ಕು’ ವಿಶೇಷ ಸಂಚಿಕೆಯಿಂದ ಆಯ್ದ ಲೇಖನ)

ನಿಖಿಲ್ ಕೋಲ್ಪೆ
ದಕ್ಷಿಣ ಕನ್ನಡದ ಬಂಟ್ವಾಳದವರಾದ ನಿಖಿಲ್ ಕೋಲ್ಪೆಯವರು ಅಪಾರ ಅನುಭವ ಹೊಂದಿರುವ ಹಿರಿಯ ಪತ್ರಕರ್ತರು. 80ರ ದಶಕದಲ್ಲಿ ಮುಂಬೈನಲ್ಲಿ ಹಲವು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ನಂತರ ದಕ್ಷಿಣ ಕನ್ನಡದ ಪ್ರಜ್ಞಾವಂತ ಪತ್ರಿಕೆಗಳಾದ ಮುಂಗಾರು ಮತ್ತು ಜನವಾಹಿನಿ ಪತ್ರಿಕೆಗಳಲ್ಲಿ ದುಡಿದವರು. ಇಂದಿಗೂ ವಾರ್ತಾಭಾರತಿ, ನ್ಯಾಯಪಥ ಸೇರಿದಂತೆ ಹಲವು ಪತ್ರಿಕೆಗಳಿಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಾ, ಅನುವಾದ ಮಾಡುವ ವೃತ್ತಿಯನ್ನೂ ಮುಂದುವರಿಸಿದ್ದಾರೆ.




