ಲವ್ ಜಿಹಾದ್‌ನಿಂದ ವೋಟ್ ಜಿಹಾದ್‌ವರೆಗಿನ ಪಿತೂರಿ ಕಥನ; ವಾಸ್ತವವೇನು?

Date:

ಭಾರತದಲ್ಲಿ ಅತೀ ಹೆಚ್ಚು ದುರ್ವ್ಯಾಖ್ಯಾನಕ್ಕೊಳಗಾಗುತ್ತಿರುವ ಅರೆಬಿಕ್ ಪದ ‘ಜಿಹಾದ್’. ಜಿಹಾದ್- ಹಾಗೆಂದರೇನು? ಜಿಹಾದ್ ಎಂದರೆ ಸಮರ / ಯುದ್ಧ ಎಂದರ್ಥ. ಅದಕ್ಕೆ ಯಾವುದೇ ವಿಧದ ವಿಪರೀತ ಅರ್ಥವಿರುವುದಿಲ್ಲ. ಆದರೆ ಅದು ಬಹು ವಿಸ್ತಾರ ನೆಲೆಗಟ್ಟುಳ್ಳ ಒಳಿತಿನ ಆಗರ.

ಜಿಹಾದ್‌ನಲ್ಲೇ ಶ್ರೇಷ್ಠ ಜಿಹಾದ್- ಸ್ವಶರೀರದೊಂದಿಗೆ ನಡೆಸುವ ಜಿಹಾದ್. ಹಾಗೆಂದರೆ ಸ್ವಶರೀರವು ಕೆಡುಕಿನತ್ತ ಹೊರಳದಂತೆ ತಡೆಯುವ ಯುದ್ಧ. ಸುಳ್ಳು ಹೇಳದಂತೆ, ಅಕ್ರಮ, ಅನ್ಯಾಯವೆಸಗದಂತೆ, ವ್ಯಭಿಚಾರ ನಡೆಸದಂತೆ, ಶರಾಬು ಕುಡಿಯದಂತೆ ಒಟ್ಟಿನಲ್ಲಿ ಕೆಡುಕಿನ ಯೋಚನೆಗಳಿಂದ ನಮ್ಮ ಮನಸ್ಸನ್ನು ಸದಾ ದೂರವಿಡುವಂತೆ ನಮ್ಮ ಆತ್ಮದೊಂದಿಗೆ ನಾವು ಮಾಡುವ ಯುದ್ಧವೇ ಅತ್ಯಂತ ಶ್ರೇಷ್ಠ ಜಿಹಾದ್.

ಜಿಹಾದ್ ಎಂದರೆ ಇಷ್ಟೇ ಅಲ್ಲ. ಅನ್ಯಾಯದ ವಿರುದ್ಧ ನ್ಯಾಯಯುತವಾದ ಮಾರ್ಗದಲ್ಲಿ ಹೋರಾಡುವುದು ಕೂಡಾ ಜಿಹಾದ್. ಭಾರತದ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ (1857) ಮುಸ್ಲಿಮ್ ಉಲಮಾಗಳು ಭಾರತವನ್ನು ‘ದಾರುಲ್ ಹರ್ಬ್’ ಎಂದು ಘೋಷಿಸಿದರು. ದಾರುಲ್ ಹರ್ಬ್ ಎಂದರೆ ಸಂಘರ್ಷದ ನಾಡು. ಇಸ್ಲಾಮಿಕ್ ಕಾನೂನಿನ್ವಯ ದಾರುಲ್ ಹರ್ಬ್‌ನಲ್ಲಿ ಪ್ರತಿಯೊಬ್ಬ ಮುಸ್ಲಿಮನಿಗೂ ನಾಡಿನ ಶತ್ರುಗಳ ವಿರುದ್ಧ ಹೋರಾಡುವುದು ಕಡ್ಡಾಯ. ಆ ಕಾರಣಕ್ಕಾಗಿ ಅಂದು ಶಾ ಅಬ್ದುಲ್ ಅಝೀಝ್ ದೆಹ್ಲವಿ ಎಂಬ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ಭಾರತದ ನೆಲದಲ್ಲಿ ಜಿಹಾದ್ ಘೋಷಿಸಿದರು. ಅದೇ ಕಾಲದ ಇನ್ನೋರ್ವ ಉಲಮಾ ನೇತಾರ ಮತ್ತು ಉರ್ದು ಕವಿ ಸಯ್ಯದ್ ಅಹ್ಮದ್ ಸ‌ಈದ್ ದುವಾ ಮಜ್ಲಿಸ್‌ಗಳಲ್ಲಿ ಹಾಡುತ್ತಿದ್ದ ದ್ವಿಪದಿಯೊಂದು ಬಹಳ ಪ್ರಸಿದ್ಧವಾಗಿತ್ತು. “ಇಲಾಹೀ ದೇ ಮುಜೆ ಶಹಾದತ್ ನಸೀಬ್/ಯೆ ಅಫ್ಝಲ್‌ಸೆ ಅಫ್ಝಲ್ ಇಬಾದತ್ ನಸೀಬ್”- “ಅಲ್ಲಾಹನೇ ನನಗೆ ಹುತಾತ್ಮತೆಯ ಭಾಗ್ಯ ಕರುಣಿಸು/ ಶ್ರೇಷ್ಠಾತಿ ಶ್ರೇಷ್ಠ ಆರಾಧನೆಯಾದ ಜಿಹಾದ್‌ನ ಭಾಗ್ಯ ಕರುಣಿಸು”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿರಿ: ನಾವು ಹಿಂದೂಗಳಷ್ಟೇ, ಕಾಂಗ್ರೆಸ್-ಬಿಜೆಪಿ ನಂತರದ ಮಾತು; ಮುಸ್ಲಿಂ ಭಯದ ಅಗ್ನಿಕುಂಡವಾದ ‘ಹಿಮಾಚಲ’

ಅದಕ್ಕಿಂತಲೂ ಮುಂಚೆ ಅಂದರೆ ಹದಿನಾರನೇ ಶತಮಾನದ ಮಲಬಾರ್‌ನ ಪ್ರಸಿದ್ಧ ಉಲಮಾ ನಾಯಕರೂ, ತುಹ್ಫುತುಲ್ ಮುಜಾಹಿದೀನ್ ಎಂಬ ಪ್ರಸಿದ್ಧ ಇತಿಹಾಸ ಗ್ರಂಥದ ಕರ್ತೃವೂ ಆದ ಎರಡನೆಯ ಝೈನುದ್ದೀನ್ ಮಕ್ದೂಮಿಯವರು ಪೋರ್ಚುಗೀಸ್ ವಸಾಹತುಶಾಹಿಗಳ ವಿರುದ್ಧ ಜಿಹಾದ್ ಘೋಷಿಸಿದ್ದರು. ಪೋರ್ಚುಗೀಸರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಕುಂಞಾಲಿ ಮರಕ್ಕಾರ್ ಅವರ ಚರಿತ್ರೆ ಮಾಪ್ಲಾ ಕಾವ್ಯಗಳಲ್ಲಿ ಬಹಳ ಜನಪ್ರಿಯವಾದುದು. ನಮ್ಮ ಮೈಸೂರು, ಮಂಡ್ಯ, ಚಾಮರಾಜನಗರದ ಹಳ್ಳಿಗಳಲ್ಲಿ ಟಿಪ್ಪು ಸುಲ್ತಾನರ ಲಾವಣಿಗಳನ್ನು ಹಾಡಲಾಗುತ್ತಿರುವಂತೆಯೇ ಮಲಬಾರ್‌ನ ಗ್ರಾಮೀಣ ಪ್ರದೇಶಗಳಲ್ಲಿ ಕುಂಞಾಲಿ ಮರಕ್ಕಾರರ ಲಾವಣಿಗಳನ್ನು ಜನ ಜಾತಿ- ಮತಗಳಿಗತೀತವಾಗಿ ಹಾಡುತ್ತಾರೆ.

ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಮಲಬಾರ್‌ನ ಪ್ರಸಿದ್ಧ ಉಲಮಾ ನೇತಾರರೂ, ಕವಿಗಳೂ ಆಗಿದ್ದ ವೆಲಿಯಂಗೋಡು ಉಮರ್ ಖಾಝಿಯವರೂ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟವನ್ನು ಜಿಹಾದ್ ಎಂದೇ ಘೋಷಿಸಿದ್ದರು. ಇಸ್ಲಾಮಿನ ಪರಿಕಲ್ಪನೆಯಲ್ಲಿ ಅಕ್ರಮಿಯಾದ ಆಡಳಿತಾಧಿಕಾರಿಯ ಮುಖಕ್ಕೆ ಸತ್ಯವನ್ನು ನುಡಿಯುವುದು, ಸತ್ಯವನ್ನು ಬರೆಯುವುದು ಕೂಡಾ ಜಿಹಾದ್ ಆಗಿದೆ.

ಒಟ್ಟಿನಲ್ಲಿ ಅನ್ಯಾಯ ಅಕ್ರಮದ ವಿರುದ್ಧ ನಾಡಿನ ಕಾನೂನಿನ ವ್ಯಾಪ್ತಿಯಲ್ಲಿ ಮಾಡುವ ಎಲ್ಲ ಹೋರಾಟಗಳೂ ಜಿಹಾದ್ ಆಗಿರುತ್ತದೆ. ಇಲ್ಲಿ ಕಾನೂನಿನನ್ವಯ ಎನ್ನುವುದಕ್ಕೆ ಬಲವಾದ ಕಾರಣವಿದೆ. ಪ್ರವಾದಿ ಮುಹಮ್ಮದ್ (ಸ), ‘ನೀವು ಬದುಕುತ್ತಿರುವ ನೆಲದ ಕಾನೂನನ್ನು ಗೌರವಿಸಿ’ ಎಂದು ಬಹಳ ಸ್ಪಷ್ಟವಾಗಿ ಬೋಧಿಸಿದ್ದಾರೆ. ನೆಲದ ಕಾನೂನನ್ನು ಮುರಿಯುವುದು ಮುಸ್ಲಿಮ್ ಆದವನಿಗೆ ಧಾರ್ಮಿಕ ನೆಲೆಗಟ್ಟಿನಲ್ಲಿ ಮಹಾಪಾಪವಾಗಿದೆ. ಒಟ್ಟಿನಲ್ಲಿ ಜಿಹಾದ್‌ನ ಪರಿಕಲ್ಪನೆ ಕೆಡುಕಿನ ವಿರುದ್ಧ ಹೋರಾಟ.

ಇಂದು ಲವ್ ಜಿಹಾದ್ ಎಂಬ ಹೊಸ ಪದಪುಂಜ ಏನಿದೆಯೋ ಇದು ಭಾರತದ ಉಗ್ರ ಬಲಪಂಥೀಯ ರಾಜಕೀಯ ಗುಂಪುಗಳು ಹುಟ್ಟು ಹಾಕಿರುವಂತಹದ್ದು. ಇಸ್ಲಾಮಿನಲ್ಲಿ ವಿವಾಹಪೂರ್ವವಾಗಿ ಗಂಡು ಹೆಣ್ಣು ಪ್ರೇಮಿಸಲೋ, ಕಾಮಿಸಲೋ ಅವಕಾಶವೇ ಇಲ್ಲ. ಅದನ್ನು ಇಸ್ಲಾಂ ಕೆಡುಕು ಎಂದೇ ಪರಿಗಣಿಸುತ್ತದೆ. ಜಿಹಾದ್ ಕೆಡುಕಿನ ವಿರುದ್ಧದ ಹೋರಾಟವಾದರೆ ಅದರ ಜೊತೆಜೊತೆಗೆ ಕೆಡುಕೂ ಸೇರಿಕೊಳ್ಳುವುದೆಂದರೆ ಅದೊಂದು ದೊಡ್ಡ ವಿರೋಧಾಬಾಸ. ಇಸ್ಲಾಂ ಯಾವತ್ತೂ ಸಂಖ್ಯೆಗೆ ಮಹತ್ವ ಕೊಡುವುದೂ ಇಲ್ಲ.ಯಾವಳಾದರೂ ಹೆಣ್ಣು ಮುಸ್ಲಿಮೇತರ ಗಂಡನ್ನು ಪ್ರೇಮಿಸಿ ಧರ್ಮದಿಂದ ಹೊರ ಹೋಗುವವರೆಗೆ ಕಾದು ಆಕೆಯನ್ನು ಧರ್ಮದ ಪರಿಧಿಯಿಂದ ಹೊರಗಿಡಬೇಕಿಲ್ಲ. ಹೆಣ್ಣಿರಲಿ, ಗಂಡಿರಲಿ ಧರ್ಮ ತೊರೆಯಲೋ ಬೇಡವೋ ಎಂಬ ದ್ವಂದ್ವಕ್ಕೆ ಬಿದ್ದ ಕೂಡಲೇ ಆಕೆ/ಆತ ಧರ್ಮದಿಂದ ಹೊರಹೋಗಿಬಿಟ್ಟಿರುತ್ತಾನೆ. ಒಮ್ಮೆ ಇಸ್ಲಾಂನಿಂದ ಹೊರ ಹೋದವನನ್ನು ಬಲವಂತವಾಗಿ ಘರ್ ವಾಪ್ಸಿ ಮಾಡುವಂತಹ ಪದ್ಧತಿಯೂ ಇಸ್ಲಾಮಿನಲ್ಲಿಲ್ಲ. ಅವರು ಸ್ವಯಂ ಇಚ್ಛೆಯಿಂದ ಮರಳುವುದಾದರೆ ಮಾತ್ರ ಆತನನ್ನು ಧರ್ಮದ ಪರಿಧಿಯೊಳಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ಇಸ್ಲಾಮ್ ಆಗಲು 5+6=11 ಮೂಲಭೂತ ವಿಶ್ವಾಸ ಮತ್ತು ಆ‍ಚರಣಾ ಕರ್ಮಗಳಿವೆ. ಅವುಗಳಲ್ಲಿ ಮೊಟ್ಟ ಮೊದಲನೆಯದು ಶಹಾದತ್ ಕಲಿಮ. ಅದನ್ನು ಕತ್ತಿಯ ತುದಿಯನ್ನು ಕುತ್ತಿಗೆಗಿರಿಸಿ ಒಪ್ಪಿಸಲು ಸಾಧ್ಯವಾಗದು. ಒಬ್ಬ ಮುಸ್ಲಿಮೇತರ ಇಸ್ಲಾಮ್ ಆಗಬೇಕಾದರೆ ಅಲ್ಲಾಹನಲ್ಲದೇ ಅನ್ಯ ಆರಾಧ್ಯನಿಲ್ಲ, ಪ್ರವಾದಿ ಮುಹಮ್ಮದ್ (ಸ) ಅಲ್ಲಾಹನ ಸಂದೇಶವಾಹಕರು ಎಂದು ಮನಪೂರ್ವಕ ಒಪ್ಪಿಕೊಂಡು ಸಂಕಲ್ಪ ಮಾಡಬೇಕು. ಮನದೊಳಗಿನ ವಿಶ್ವಾಸ ಗಟ್ಟಿಯಾದರೆ ಮಾತ್ರ ಒಬ್ಬಾತ ಮುಸ್ಲಿಮ್ ಆಗುತ್ತಾನೆ. ಬಲವಂತದಿಂದ ಮಾಡುವ ಮತಾಂತರದಲ್ಲಿ ವ್ಯಕ್ತಿಯ ಅಂತರಂಗದಲ್ಲೇನಿದೆ ಎಂದು ತಿಳಿಯುವುದೆಂತು?

ಇದನ್ನೂ ಓದಿರಿ: ಉತ್ತರ ಭಾರತ-ದಕ್ಷಿಣ ಭಾರತ: ರಾಜಕೀಯ ಮತ್ತು ಆರ್ಥಿಕ ತಲ್ಲಣಗಳು

ಯಾವನೇ ಒಬ್ಬನ ಬುದ್ಧಿಯು ತನ್ನ ಸ್ಥಿಮಿತ ಕಳಕೊಂಡ ಸಂದರ್ಭದಲ್ಲಿ ಆತನನ್ನು ಇಸ್ಲಾಮಿಗೆ ಸೇರಿಸಲು ಅವಕಾಶವಿಲ್ಲ. ಹಾಗೆ ಮಾಡುವುದು ಇಸ್ಲಾಮೀ ಕರ್ಮಶಾಸ್ತ್ರದನ್ವಯ ಸಿಂಧುವೂ ಅಲ್ಲ. ಇನ್ನು ಖುರ್‌ಆನ್ ಬಹಳ ಸ್ಪಷ್ಟವಾಗಿ “ಧರ್ಮದಲ್ಲಿ ಬಲಾತ್ಕಾರವಿಲ್ಲ” ಎಂದು ಬೋಧಿಸಿದೆ. ಆಮಿಷವೊಡ್ಡಿ ಇಸ್ಲಾಮಿನತ್ತ ಸೆಳೆದರೆ ಅದು ಕೂಡಾ ಬಲಾತ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಇಸ್ಲಾಮನ್ನು ಅರಿತು ಅದರ ತತ್ವಗಳತ್ತ ಆಕರ್ಷಿತನಾಗಿ ಬಂದಾಗ ಮಾತ್ರ ಒಬ್ಬ ಮುಸ್ಲಿಮೇತರ ಮುಸ್ಲಿಂ ಆಗಲು ಸಾಧ್ಯ. ಇವಿಷ್ಟು ವಿಷಯಗಳನ್ನರಿತರೆ ಬಲವಂತದ ಮತಾಂತರ, ಆಮಿಷದ ಮತಾಂತರ, ಪ್ರೇಮದ ಬಲೆಯಲ್ಲಿ ಕೆಡವಿ ಮತಾಂತರ ಎಂಬ ಪೊಳ್ಳು ವಾದದ ಹೂರಣ ಸ್ಪಷ್ಟವಾಗುತ್ತದೆ.

ಮೊಟ್ಟ ಮೊದಲು ಲವ್ ಜಿಹಾದ್ ಎಂಬ ಪದವನ್ನು ವ್ಯವಸ್ಥಿತ ರೂಪದಲ್ಲಿ ಚಾಲನೆಗೆ ತಂದವರು ಇಸ್ಲಾಮಿನ ಮೇಲೆ ಪೂರ್ವಗ್ರಹವುಳ್ಳ ಕೇರಳದ ಕೆಲ ಕ್ರೈಸ್ತರು. ಅದೇ ಕೇರಳದ ಕೆಲ ಕ್ರೈಸ್ತ ಪಾದ್ರಿಗಳು, ‘ಲವ್ ಜಿಹಾದ್ ಎಂಬುವುದು ಇಲ್ಲ, ಇಸ್ಲಾಮಿನಲ್ಲಿ ಅದು ಸಾಧ್ಯವೂ ಇಲ್ಲ’ ಎಂದೂ ಲವ್ ಜಿಹಾದ್ ಎಂಬ ಸುಳ್ಳು ಪ್ರಚಾರಕರ ವಿರುದ್ಧ ಮಾತನಾಡಿದ್ದೂ ಇದೆ. ಕೇರಳ ಹೈ ಕೋರ್ಟ್ ಕೂಡಾ ಸ್ಪಷ್ಟವಾಗಿ ಲವ್ ಜಿಹಾದ್ ಎಂಬಂತಹ ಒಂದು ವಿಚಾರವೇ ಇಲ್ಲ. ಅಂತಹದ್ದು ಕೇರಳದಲ್ಲಿ ನಡೆದೂ ಇಲ್ಲ ಎಂದು ಲವ್ ಜಿಹಾದ್ ಎಂಬ ಪೊಳ್ಳು ವಾದ ಹುಟ್ಟು ಹಾಕಿದವರಿಗೆ ತಪರಾಕಿ ಕೊಟ್ಟಿದೆ ಕೂಡಾ.

ಡಾ.ಹಾದಿಯಾ ಎಂಬ ವೈದ್ಯೆಯೊಬ್ಬಳು ಇಸ್ಲಾಮ್ ಸ್ವೀಕರಿಸಿದ ಸಂದರ್ಭದಲ್ಲಿ ಕೇರಳದ ಹಿಂದುತ್ವವಾದಿಗಳು ಅದನ್ನು ಲವ್ ಜಿಹಾದ್ ಎಂದು ಸಾಬೀತು ಪಡಿಸಲು ಶತ ಪ್ರಯತ್ನ ಮಾಡಿದ್ದರು. ಆದರೆ ಡಾ.ಹಾದಿಯಾ ಮತ್ತಾಕೆಯ ಪರ ವಕೀಲರ ವಾದವನ್ನು ಪುರಸ್ಕರಿಸಿ ಆ ಪ್ರಕರಣವನ್ನು ಸಹಜ ಮತಾಂತರ ಎಂದು ಪರಿಗಣಿಸಿ, ಆಕೆ ತನ್ನಿಷ್ಟದಂತೆ ಬದುಕಲು ಸ್ವತಂತ್ರಳು ಎಂದು ತೀರ್ಪು ನೀಡಿತು.

ಕರ್ನಾಟಕದಲ್ಲಿ ಲವ್ ಜಿಹಾದ್ ಎಂಬ ಹುಯಿಲೆದ್ದಿದ್ದು ಸುಮಾರು ಹದಿಮೂರು ವರ್ಷಗಳ ಹಿಂದೆ. ಸಹಜವಾಗಿಯೇ ಅದಕ್ಕೆ ಕರ್ನಾಟಕ ಹಿಂದುತ್ವದ ಪ್ರಯೋಗಶಾಲೆಯಾದ ದಕ್ಷಿಣ ಕನ್ನಡ ಜಿಲ್ಲೆಯೇ ಆಡುಂಬೊಲವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು ಇಪ್ಪತ್ತು ಹೆಣ್ಮಕ್ಕಳು ಬೇರೆ ಬೇರೆ ಅವಧಿಯಲ್ಲಿ ಕಾಣೆಯಾಗಿದ್ದರು. ಆ ದಿನಗಳಲ್ಲಿ ಪೊಲೀಸರು ಮೊದಮೊದಲು ಕೆಲ ಹೆಣ್ಮಕ್ಕಳು ನಕ್ಸಲ್ ದಳ ಸೇರಿರುವ ಶಂಕೆ ವ್ಯಕ್ತಪಡಿಸಿದರು. ಶೂದ್ರ ಸಮುದಾಯದ ಪ್ರಖರ ಹಿಂದುತ್ವವಾದಿ ವಜ್ರದೇಹಿ ಸ್ವಾಮೀಜಿ, “ಇದು ಖಂಡಿತವಾಗಿಯೂ ಲವ್ ಜಿಹಾದ್. ಮುಸ್ಲಿಮ್ ಯುವಕರು ಹಿಂದೂ ಹೆಣ್ಮಕ್ಕಳನ್ನು ಪ್ರೇಮದ ಬಲೆಗೆ ಕೆಡವಿ ಅವರನ್ನು ಮತಾಂತರ ಮಾಡಿ ಭೋಗಿಸಿ ನಂತರ ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಐ‌ಸಿಸ್‌ಗೆ ರವಾನೆ ಮಾಡುತ್ತಿದ್ದಾರೆ. ಆ ಹೆಣ್ಮಕ್ಕಳಿಗೆ ಸ್ವರ್ಗದ ಆಮಿಷ ತೋರಿಸಿ ಹ್ಯೂಮನ್ ಬಾಂಬರ್ ಮಾಡಲಾಗುತ್ತದೆ” ಎಂಬ ಕಪೋಲ ಕಲ್ಪಿತ ಆರೋಪಗಳನ್ನು ಮುಸ್ಲಿಮರ ಮೇಲೆ ಹೊರಿಸಿ ಇಡೀ ಮುಸ್ಲಿಂ ಸಮುದಾಯವನ್ನೇ ಮುಸ್ಲಿಮೇತರರು ಸಂಶಯದಿಂದ ನೋಡುವಂತೆಯೂ, ಮುಸ್ಲಿಮರನ್ನು ದ್ವೇಷಿಸುವಂತೆಯೂ ಹೇಳಿಕೆ ನೀಡಿದ್ದರು. ಕರ್ನಾಟಕದಲ್ಲಿ ಆ ಮೂಲಕ ಇಸ್ಲಾಮೋಫೋಬಿಯಾಕ್ಕೆ ಚಾಲನೆ ನೀಡಲಾಯಿತು.

ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ವಿವಿಧೆಡೆಯ ಬಸ್ಸು ನಿಲ್ದಾಣಗಳಲ್ಲಿ ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗತೊಡಗಿದವು. ಎಲ್ಲ ಪ್ರಕರಣಗಳಲ್ಲೂ ಸಾವಿಗೀಡಾದ ಯುವತಿಯವರು ಸೈನೈಡ್ ಎಂಬ ಪ್ರಾಣಾಂತಿಕ ವಿಷ ಸೇವನೆಯಿಂದ ಸಾವಿಗೀಡಾದದ್ದೆಂದು ಮರಣೋತ್ತರ ವರದಿಗಳು ಸ್ಪಷ್ಟಪಡಿಸಿದವು. ಆ ಇಪ್ಪತ್ತೂ ಅತ್ಯಾಚಾರ ಮತ್ತು ಕೊಲೆಪ್ರಕರಣಗಳನ್ನು ಎಸಗಿದ್ದು ಮೋಹನ್ ಎಂಬ ಹೆಸರಿನ ಹಿಂದೂವಾಗಿದ್ದ. ಆತ ಸಾಮಾನ್ಯವಾಗಿ ಬಡ ಹಿಂದೂ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡಿ ಪ್ರೇಮದ ಬಲೆಗೆ ಬೀಳಿಸುತ್ತಿದ್ದ. ಅವರನ್ನು ಸಂಭೋಗಿಸಿದ ಬಳಿಕ ರಿಜಿಸ್ಟರ್ ವಿವಾಹವಾಗೋಣ ಎಂದೋ, ಎಲ್ಲಾದರೂ ತಿರುಗಾಡಲು ಹೋಗೋಣ ಎಂದೋ ಹೆಣ್ಮಕ್ಕಳನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿ ಉಪಾಯದಿಂದ ಅವರಲ್ಲಿರುವ ಚಿನ್ನಾಭರಣಗಳನ್ನು ಲಪಟಾಯಿಸಿ ಗರ್ಭ ಛೇದಕ ಮಾತ್ರೆಯೆಂದು ಸೈನೈಡ್ ಮಾತ್ರೆಯನ್ನು ಕೊಟ್ಟು, ಟಾಯ್ಲೆಟ್‌ಗೆ ಹೋಗಿ ನುಂಗುವಂತೆ ಹೇಳುತ್ತಿದ್ದ. ಆ ಮಾತ್ರೆ ನುಂಗಿದ ಕೆಲವೇ ನಿಮಿಷಗಳಲ್ಲಿ ಗರ್ಭ ಛೇದನವಾಗುತ್ತದೆಂದು ನಂಬಿದ ಯುವತಿಯರು ಟಾಯ್ಲೆಟ್‌ಗೆ ಹೋಗುತ್ತಿದ್ದಂತೆಯೇ ತನ್ನಲ್ಲಿರುವ ಯುವತಿಯರ ಚಿನ್ನಾಭರಣಗಳನ್ನೆತ್ತಿಕೊಂಡು ಪರಾರಿಯಾಗುತ್ತಿದ್ದ.ಸೈನೈಡ್ ಮಾತ್ರೆ ನುಂಗಿದ ಮರುಕ್ಷಣವೇ ಯುವತಿಯರು ಟಾಯ್ಲೆಟ್‌ನಲ್ಲೇ ಪ್ರಾಣ ಬಿಡುತ್ತಿದ್ದರು. ಅವರು ಸತ್ತು ಇಪ್ಪತ್ತನಾಲ್ಕು ಗಂಟೆಗಳ ಬಳಿಕ ವಾಸನೆ ಬರುವಾಗಲೇ ಟಾಯ್ಲೆಟ್‌ನಲ್ಲಿ ಯಾರೋ ಸತ್ತು ಬಿದ್ದಿರುವುದು ಬೆಳಕಿಗೆ ಬರುತ್ತಿದ್ದದ್ದು. ಕಳೆದೊಂದು ದಶಕದಿಂದ ಸೈನೈಡ್ ಕಿಲ್ಲರ್ ಮೋಹನ್ ಜೈಲಲ್ಲೇ ಇದ್ದು ವಿಚಾರಣೆ ಎದುರಿಸುತ್ತಿದ್ದಾನೆ. ಒಂದು ವೇಳೆ ಆತ ಸಿಕ್ಕಿಬೀಳದೇ ಇರುತ್ತಿದ್ದಲ್ಲಿ ಲವ್ ಜಿಹಾದ್ ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಯಾವತ್ತೋ ಹೊತ್ತಿ ಉರಿದುಬಿಡುತ್ತಿತ್ತು. ಆ ಪ್ರಕರಣದ ಅಸಲಿಯತ್ತು ಹೊರಬರುವುದರೊಂದಿಗೆ, ಲವ್ ಜಿಹಾದ್ ಹೆಸರಲ್ಲಿ ಕೋಮುವಾದದ ಕೊಯ್ಲು ಮಾಡಲುದ್ದೇಶಿಸಿದ್ದವರು ಇಂಗು ತಿಂದ ಮಂಗನಂತಾಗಿದ್ದರು.

ಕರ್ನಾಟಕದಲ್ಲಿರಲಿ, ಕೇರಳದಲ್ಲಿರಲಿ, ಮತ್ತೆಲ್ಲೇ ಇರಲಿ ಮುಸ್ಲಿಮ್ ಯುವತಿಯರು ಹಿಂದೂ ಯುವಕನನ್ನು ಲವ್ ಮಾಡಿದರೆ ಅವರ ಮದುವೆಗೆ ಹಿಂದುತ್ವವಾದಿ ಸಂಘಟನೆಗಳೇ ಪೌರೋಹಿತ್ಯ ವಹಿಸುತ್ತವೆ. ಅವನ್ನು ದೇಶ ಭಕ್ತಿಯೆಂಬಂತೆ ಪ್ರಚಾರ ಮಾಡಲಾಗುತ್ತದೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗುವುದನ್ನು ಮುಸ್ಲಿಂ ಸಮುದಾಯವೇ ವಿರೋಧಿಸುತ್ತದೆ. ಹಿಂದೂ ಯುವತಿಯರು ಮತಾಂತರವಾದರೂ ಯಾವುದೇ ಮಸೀದಿ ಜಮಾ‌ಅತ್ ಅವರಿಗೆ ನಿಕಾಹ್ ರಿಜಿಸ್ಟರ್ ನೀಡಲು ಮುಂದೆ ಬರುವುದಿಲ್ಲ. ರಿಜಿಸ್ಟರ್ ವಿವಾಹವು ಕಾನೂನು ಪ್ರಕಾರ ಸಿಂಧುವಾದರೂ ಇಸ್ಲಾಮಿನಲ್ಲಿ ಇಸ್ಲಾಮೀ ರೀತಿ ರಿವಾಜಿನ ಪ್ರಕಾರ ನಿಕಾಹ್ ಆಗದೇ ಆ ವಿವಾಹವು ಸಿಂಧುವಾಗುವುದಿಲ್ಲ. ಮುಸ್ಲಿಮರಲ್ಲೊಂದು ಜಮಾ‌ಅತ್ ವ್ಯವಸ್ಥೆ ಪ್ರತೀ ಊರಲ್ಲೂ ಇರುತ್ತವೆ. ಆಯಾ ಜಮಾ‌ಅತಿನ ಮುಸ್ಲಿಮರ ಮದುವೆ, ಮರಣ, ಜನನ ಇವೆಲ್ಲವುಗಳ ದಾಖಲೆ ಜಮಾ‌ಅತ್‌ನಲ್ಲಿರುತ್ತವೆ. ನಿಕಾಹ್ ಮೂಲಕ ವಿವಾಹವಾದ ಪ್ರಕರಣವನ್ನು ಮಾತ್ರ ಜಮಾ‌ಅತ್ ವ್ಯವಸ್ಥೆ ಅಂಗೀಕರಿಸುತ್ತದೆ. ನಿಕಾಹ್ ಹೊರತಾಗಿ ಮದುವೆಯಾದವರನ್ನು ಯಾವುದೇ ಊರಿನ ಜಮಾ‌ಅತ್ ಸ್ವೀಕರಿಸುವುದಿಲ್ಲ. ಅಂತಿದ್ದ ಮೇಲೆ ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಣನ್ನು ಎಗರಿಸಿ ತಂದು ಅವರು ಸಮಾಜದ ಭಾಗವಾಗುವುದಾದರೂ ಎಂತು?

ಪ್ರಸಿದ್ಧ ಚಿಂತಕ ಎಡ್ವರ್ಡ್ ಸೈದ್ ವಾಸ್ತವದಲ್ಲಿ ಭಾರತದ ಹಿಂದುತ್ವವಾದಿಗಳನ್ನುದ್ದೇಶಿಸಿ ಈ ಇಸ್ಲಾಮೋಫೋಬಿಯಾ ಎಂಬ ಪದವನ್ನು ಟಂಕಿಸಿದ್ದಲ್ಲ. ಇಸ್ರೇಲ್ ಮತ್ತು ಅಮೆರಿಕದ ಝಿಯೋನಿಸ್ಟರು ಕೃತಕವಾಗಿ ಸೃಷ್ಟಿಸಿದ ಇಸ್ಲಾಮ್ ಕುರಿತ ಭಯವನ್ನು ಎಡ್ವರ್ಡ್ ಸೈದ್ ಇಸ್ಲಾಮೋಫೋಬಿಯಾ ಎಂದರು. ಮುಸ್ಲಿಮ್ ಸಮುದಾಯವನ್ನು ಮನುಷ್ಯತ್ವದ ಶತ್ರು ಎಂದು ಬಿಂಬಿಸಿ ಇಸ್ರೇಲ್ ಮತ್ತು ಅಮೆರಿಕ ದೇಶಗಳು ತಾನು ಮಧ್ಯಪ್ರಾಚ್ಯದಲ್ಲಿ ನಡೆಸುತ್ತಿರುವ ಅಕ್ರಮ, ಅನಾಚಾರ, ಕಗ್ಗೊಲೆಗಳನ್ನು ಸಮರ್ಥಿಸಬೇಕಿತ್ತು. ಅದಕ್ಕಾಗಿ ಅವರು ಇಸ್ಲಾಮೋಫೋಬಿಯಾವನ್ನು ಹುಟ್ಟು ಹಾಕಿದ್ದರು. ಬಹುಶಃ ಆ ಪದವನ್ನು ಟಂಕಿಸಿದ ಎಡ್ವರ್ಡ್ ಸೈದ್‌ಗೂ ಈ ಇಸ್ಲಾಮೋಫೋಬಿಯಾ ಭಾರತದಲ್ಲಿ ಹೀಗೂ ಬಳಕೆಯಾಗಬಹುದೆಂಬ ಕಲ್ಪನೆಯೂ ಇದ್ದಿರಲಿಕ್ಕಿಲ್ಲ.

ಈಗ ಜಿಹಾದ್ ಜೋಡಿಸಿ ಬಳಕೆಯಾಗುವ ಪದ ಒಂದಲ್ಲ ಎರಡಲ್ಲ. ಮುಸ್ಲಿಮರು ಬಿಜೆಪಿಯನ್ನು ಸೋಲಿಸಲು ಕನ್ಸಾಲಿಡೇಟ್ ಆಗಿ ಒಬ್ಬ ಅಭ್ಯರ್ಥಿಗೆ ಮತ ಚಲಾಯಿಸಿದರೆ ವೋಟ್ ಜಿಹಾದ್, ಮುಸ್ಲಿಮ್ ವಿದ್ಯಾರ್ಥಿಗಳು Rank ಪಡೆದರೆ rank jihad, ಮುಸ್ಲಿಮರು ಹಿಂದೂ ಸ್ನೇಹಿತರೊಂದಿಗೆ ಚಹಾವೋ, ಊಟವೋ ಮಾಡಿದ್ರೆ ಫುಡ್ ಜಿಹಾದ್- ಹೀಗೆ ಹತ್ತಾರು ವಿಧದ ಜಿಹಾದ್‌ಗಳನ್ನು ಹಿಂದುತ್ವವಾದಿಗಳು ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿರಿ: ಸಂವಿಧಾನ ಸುಡುವ ಚಳವಳಿಯನ್ನು ಪೆರಿಯಾರ್ ನಡೆಸಿದ್ದೇಕೆ?

ಈ ಲವ್ ಜಿಹಾದ್, ಫುಡ್ ಜಿಹಾದ್, ವೋಟ್ ಜಿಹಾದ್- ಮತ್ತಿತರ ಜಿಹಾದ್‌ಗಳ ಹಿಂದಿನ ಪ್ರೇರಕ ಶಕ್ತಿ ಇಸ್ಲಾಮೋಫೋಬಿಯಾ. ಇದನ್ನು ವ್ಯವಸ್ಥಿತವಾಗಿ ಕೆ.ಜಿ.ಕ್ಲಾಸ್‌ನಿಂದಲೇ ಹರಡಲಾಗುತ್ತಿದೆ. ಈ ಅನುಭವ ಇತ್ತೀಚಿನ ದಿನಗಳಲ್ಲಿ ಅನೇಕ ಮುಸ್ಲಿಂ ಮಕ್ಕಳಿಗೆ ಆಗುತ್ತಿದೆ. ಕಾನ್ವೆಂಟ್ ಸ್ಕೂಲೊಂದರಲ್ಲಿ ಮೂರನೇ ಕ್ಲಾಸಲ್ಲಿ ಕಲಿಯುತ್ತಿರುವ ನನ್ನ ಮಗಳಿಗೆ ಒಂದಿಬ್ಬರು ಕ್ರೈಸ್ತ ಸಹಪಾಠಿಗಳಿಂದಲೂ ಆಗಿದೆ. ಇನ್ನೊಂದು ಕಾನ್ವೆಂಟ್ ಸ್ಕೂಲಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಸೋದರಳಿಯನಿಗೆ ಆತನ ಹಿಂದೂ ಸಹಪಾಠಿಗಳಿಂದಲೂ ಇಸ್ಲಾಮೋಫೋಬಿಯಾದ ಅನುಭವಗಳಾಗಿವೆ. “ಮುಸ್ಲಿಂ ಮಕ್ಕಳ ಗೆಳೆತನ ಮಾಡಬೇಡಿ, ಮುಸ್ಲಿಂ ಮಕ್ಕಳ ಜೊತೆ ಆಟವಾಡಬೇಡಿ, ಅವರು ಕೆಟ್ಟವರು, ಅವರು ತುಂಬಾ ಡೇಂಜರಸ್‌” ಎಂದೆಲ್ಲ ಮಕ್ಕಳ ತಲೆಗೆ ಸ್ವತಃ ಹೆತ್ತವರೇ ವಿಷ ತುಂಬುತ್ತಾರೆ. ಎಲ್ಲಿಯವರೆಗೆಂದರೆ ಕೆಲ ಹೆತ್ತವರು ತಮ್ಮ ಮಕ್ಕಳನ್ನು ಮುಸ್ಲಿಂ ಮಕ್ಕಳ ಜೊತೆ ಕೂರಿಸಬೇಡಿ ಎಂದು ಅಧ್ಯಾಪಕರುಗಳಿಗೆ ಆದೇಶಿಸಿದ ಪ್ರಕರಣಗಳೂ ನಡೆದಿವೆ.

ನನ್ನ ದಕ್ಷಿಣ ಕನ್ನಡ ಜಿಲ್ಲೆಯದ್ದೇ ಉದಾಹರಣೆ ಕೊಡುತ್ತೇನೆ. ಮುಸ್ಲಿಮರು ತಮ್ಮ ಮಕ್ಕಳನ್ನು ಹಿಂದೂ ಮ್ಯಾನೇಜ್ಮೆಂಟ್ ಸ್ಕೂಲಿಗೂ, ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಸ್ಕೂಲಿಗೂ ಯಾವುದೇ ಹಿಂಜರಿಕೆಯಿಲ್ಲದೆ ಕಳುಹಿಸುತ್ತಾರೆ. ಇದನ್ನು ಮುಸ್ಲಿಮರಿರುವ ಯಾವುದೇ ಊರಿನ ಹಿಂದೂ, ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಸ್ಕೂಲಿಗೆ ಹೋಗಿ ಯಾರು ಬೇಕಾದರೂ ಪರಿಶೀಲಿಸಬಹುದು. ಹಾಗೆಯೇ ಜಿಲ್ಲೆಯ ಮುಸ್ಲಿಂ ಮ್ಯಾನೇಜ್ಮೆಂಟ್ ಸ್ಕೂಲ್‌ಗಳಿಗೆ ಹೋಗಿ ಚೆಕ್ ಮಾಡಿದರೆ ಅಲ್ಲಿ ಶೇ.1ಕ್ಕಿಂತ ಮುಸ್ಲಿಮೇತರ ಮಕ್ಕಳಿರುವುದಿಲ್ಲ. ಮುಸ್ಲಿಂ ಮ್ಯಾನೇಜ್ಮೆಂಟ್ ಸ್ಕೂಲ್‌ಗಳ ಅಧ್ಯಾಪಕರಲ್ಲಿ 70% ಮುಸ್ಲಿಮೇತರರಿರುತ್ತಾರೆ. ಒಂದು ವೇಳೆ ಮುಸ್ಲಿಂ ಮ್ಯಾನೇಜ್ಮೆಂಟ್ ಸ್ಕೂಲ್ ಮುಸ್ಲಿಮೇತರರನ್ನು ಕೆಡಿಸುತ್ತದಾದರೆ ಅಲ್ಲಿ ಹಿಂದೂ, ಕ್ರೈಸ್ತ ಅಧ್ಯಾಪಕರು ಹೇಗೆ ಕೆಲಸ ಮಾಡುತ್ತಾರೆ?

ಕನ್ನಡದ ಪ್ರಸಿದ್ಧ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿ ಆಗಾಗ ಹೇಳುವುದುಂಟು “ಮುಸ್ಲಿಮರೂ ನಿಮ್ಮಂತೆಯೇ  ಮನುಷ್ಯರು. ನಿಮ್ಮಂತೆಯೇ ನೋವು, ನಲಿವು, ಕಷ್ಟ ಸುಖ, ಹಸಿವು ದಾಹ, ಮಕ್ಕಳು ಸಂಸಾರ, ಮದುವೆ ಮುಂಜಿ ಎಲ್ಲವೂ ಇದೆ. ಬೇರೆಲ್ಲ ಮನುಷ್ಯರಿಗಿಂತ ಸ್ಪೆಶಲ್ ಆದದ್ದು ಯಾವುದೂ ಮುಸ್ಲಿಮರಲ್ಲಿಲ್ಲ”.

pajeer
ಇಸ್ಮತ್ ಪಜೀರ್
+ posts

ಮಂಗಳೂರಿನ ಲೇಖಕರಾದ ಇಸ್ಮತ್ ಪಜೀರ್, ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಸರ್ಕಾರದ ನೀತಿಗಳನ್ನು ಖಂಡಿಸಿ ರಾಜೀನಾಮೆ ನೀಡಿದ್ದರು. ಮುಸ್ಲಿಂ ಸಮುದಾಯದ ಕುರಿತು ಬಿತ್ತಲಾಗುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತಿರುವ ಮಹತ್ವದ ಲೇಖಕರಲ್ಲಿ ಇವರೂ ಒಬ್ಬರು.

ಪೋಸ್ಟ್ ಹಂಚಿಕೊಳ್ಳಿ:

ಇಸ್ಮತ್ ಪಜೀರ್
ಇಸ್ಮತ್ ಪಜೀರ್
ಮಂಗಳೂರಿನ ಲೇಖಕರಾದ ಇಸ್ಮತ್ ಪಜೀರ್, ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಸರ್ಕಾರದ ನೀತಿಗಳನ್ನು ಖಂಡಿಸಿ ರಾಜೀನಾಮೆ ನೀಡಿದ್ದರು. ಮುಸ್ಲಿಂ ಸಮುದಾಯದ ಕುರಿತು ಬಿತ್ತಲಾಗುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತಿರುವ ಮಹತ್ವದ ಲೇಖಕರಲ್ಲಿ ಇವರೂ ಒಬ್ಬರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!

ನಿತ್ಯ 2,600ರಿಂದ 3,000 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ...

ಪ್ರೀಮಿಯಂ ಲೇಖನ | ಜಾಗತಿಕ ಆರ್ಥಿಕತೆಯ ಅವಳಿ ಅಸ್ತ್ರಗಳು: ಐಎಂಎಫ್, ವಿಶ್ವಬ್ಯಾಂಕ್‌ನ ಒಳಹೊರಗು

ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನ ಈ ಸಮಗ್ರ ವಿಶ್ಲೇಷಣೆಯು ಜಾಗತಿಕ ಆರ್ಥಿಕತೆಯ ಎರಡು...

ಪ್ರೀಮಿಯಂ ಲೇಖನ | ಅಡಕತ್ತರಿಯಲ್ಲಿ ಸಿಲುಕಲಿರುವ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ

ಬಾಂಗ್ಲಾವು ಒಪ್ಪಂದಕ್ಕೆ ಸಹಿ ಮಾಡುವ ಮೊದಲು 20% ಸುಂಕ ನೀಡಬೇಕಿತ್ತು. ಅವರಿಗಿಂತ...

ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

'Open For Business' ಎಂಬ ಸಂಸ್ಥೆಯ ವರದಿಯ ಪ್ರಕಾರ LGBTQA+ ಹಕ್ಕುಗಳನ್ನು...